ಕಥೆ ಕಡೆಗೆ ಬಂದು ನಿಲ್ಲುವುದು ಹಲವಾರು ಸಂದೇಶಗಳೊಡನೆ. ಬಿಲ್ಬಿಯನ್ನು ನಾವೆಲ್ಲಾ ಕಡೆಗಣಿಸಿದ್ದೀವಿ, ಈ ಪ್ರಾಣಿ ಮತ್ತು ನಾವು ಜೊತೆಗಾರರು, ಅದರ ಮನೆಯನ್ನು, ವಾಸಸ್ಥಳವನ್ನು ನಾವು ಸಂರಕ್ಷಿಸಬೇಕು. ಬಿಲ್ಬಿಯ ಬಗ್ಗೆ ಹೆಚ್ಚು ಜನರಲ್ಲಿ ಅರಿವು ಮೂಡಿಸಬೇಕು. ಅದರ ಸಂತತಿಯನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲಾ ಈ ಈ ತರನಾದ ಕ್ರಮಗಳನ್ನು ಕೈಗೊಳ್ಳಬೇಕು. ಇದೆಲ್ಲವನ್ನೂ ಮಕ್ಕಳ–ಸ್ನೇಹಿ ಭಾಷೆಯಲ್ಲಿ ಮೃದುವಾಗಿ, ಜಾಗರೂಕತೆಯಿಂದ ಹೇಳುತ್ತಾರೆ.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ.
ಈಸ್ಟರ್ ಬನ್ನಿಗೂ (Easter Bunny) ಮತ್ತು ಬಿಲ್ಬಿಗೂ (Bilby) ಯಾವೂರ ಸಂಬಂಧ?! ಖಂಡಿತವಾಗ್ಲೂ ಸಂಬಂಧ ಇದೆ ಅನ್ನೋ ಮಾತು ಜಾಸ್ತಿ ಜಾಸ್ತಿ ಕೇಳಿಬರುತ್ತಿದೆ. ಹಾಗಾಗಿ ಅದರ ಕತೆಯನ್ನ ‘ನೋಡಲು’ ಸ್ಥಳೀಯ ಪರಿಸರ ಶಿಕ್ಷಣ ಕೇಂದ್ರವೊಂದಕ್ಕೆ ಹೋಗಿದ್ದೆ. ಅಂದಹಾಗೆ ಈಸ್ಟರ್ ಬನ್ನಿ ಮತ್ತು ಬಿಲ್ಬಿ ನಡುವಿನ ಒಗಟಿನ ಕತೆ ಹೇಳಲು ಮತ್ತು ಕೇಳಲು ಪ್ರಶಸ್ತವಾದ ಸಮಯವೆಂದರೆ ಇಲ್ಲಿನ ಶಾಲಾ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ಒಂದನೇ ಟರ್ಮ್ ಮುಗಿದು ಈಸ್ಟರ್ ರಜೆ ಶುರುವಾಗುವ ಮುನ್ನ. ಅಂದರೆ ಮಾರ್ಚ್ ತಿಂಗಳ ಕಡೆದಿನಗಳು ಇಲ್ಲವೇ ಏಪ್ರಿಲ್ ಆರಂಭ. ಎಷ್ಟಾದರೂ ಈ ಕತೆಯ ಒಬ್ಬ ನಾಯಕ/ನಾಯಕಿ ಈಸ್ಟರ್ ಮೊಲ ಅಲ್ಲವೇ! ಇದೇ ಸಮಯಕ್ಕಾಗಿ ನಾನು ಕಾದಿದ್ದೆ.
ಆ ಪರಿಸರ ಶಿಕ್ಷಣ ಕೇಂದ್ರದಲ್ಲಿ ಈ ಕತೆಯನ್ನ ಹಲವಾರು ವರ್ಷಗಳಿಂದ ಹೇಳುತ್ತಾ ಬಂದಿದ್ದಾರೆ. ಹಣಸೌಲಭ್ಯ ಸಿಕ್ಕಿದ ನಂತರ ಕತೆಯನ್ನು ‘ನೋಡಲೂ’ ಕೂಡ ಅನುವು ಮಾಡಿ ಪರಿಕರಗಳನ್ನು ಹೊಂದಿಸಿಕೊಂಡು ನಾಟಕದ ಸೆಟ್ ತರಹ ಅಗತ್ಯವಾದ ಸನ್ನಿವೇಶವನ್ನು ಒದಗಿಸಿದ್ದಾರೆ. ಅಲ್ಲಿನ ಮುಖ್ಯಸ್ಥರು ಅದರ ಕುರಿತು ಹೆಮ್ಮೆಯಿಂದ ಹೇಳಿಕೊಂಡರು. ಕತೆಯನ್ನು ನೋಡಲು ಪ್ರತಿವಾರವೂ ಒಂದಲ್ಲಾ ಒಂದು ಶಾಲೆಯ ಮಕ್ಕಳು ಬರುತ್ತಾರೆ, ನಮ್ಮ ಬಿಲ್ಬಿಯನ್ನ ಅವರಿಗೆ ತೋರಿಸುವುದು ನಮ್ಮ ಕೇಂದ್ರದ ಮುಖ್ಯ ಆಕರ್ಷಣೆ, ಎಂದರು. ಶಾಲಾ ಮಕ್ಕಳು ಬರುವ ದಿನಗಳಲ್ಲಿ ಬೇರೆಯವರು ಬಂದು ನೋಡಲು ಅನುಮತಿ ಇಲ್ಲ. ಪ್ರತಿ ಶುಕ್ರವಾರ ಬೆಳಗ್ಗೆ ಸಾರ್ವಜನಿಕರಿಗೆಂದು (ಮಕ್ಕಳಿಗೆ ಮಾತ್ರ ಮೀಸಲು) ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಹಾಗಾಗಿ ನಾನು ಹೋದ ಸಂದರ್ಭದಲ್ಲಿ ಎರಡರಿಂದ ಐದು ವರ್ಷ ವಯಸ್ಸಿನ ಪುಟ್ಟಮಕ್ಕಳು ಬಂದು ಭಾಗವಹಿಸಿದ್ದರು. ಓಹೋ ಕೇಳಬೇಕೇ, ಇನ್ನೂ ವಿಶೇಷ ಕಳೆ ಕಟ್ಟಿತ್ತು.
ಅಂದ ಹಾಗೆ ಬಿಲ್ಬಿ ಅನ್ನೋ ಪದ ಮತ್ತು ಹೆಸರು ಬಂದಿರುವುದು ಅಬರಿಜಿನಲ್ ಭಾಷೆಯಿಂದ. ನಮ್ಮ ರಾಣಿರಾಜ್ಯದ (Queensland) ನೆರೆಹೊರೆಯವರಾದ ನ್ಯೂ ಸೌತ್ ವೇಲ್ಸ್ ನಲ್ಲಿರುವ Yuwaalaraay ಎಂಬ ಜನಸಮುದಾಯದ ಭಾಷೆ ಅದು. ಅವರ ಪದದ ಅರ್ಥ ಉದ್ದನೆ ಕಿವಿಯ ಇಲಿ. ಇದು ಬಿಲ್ಬಿಗೆ ಚೆನ್ನಾಗಿ ಹೊಂದುತ್ತದೆ. ಆಸ್ಟ್ರೇಲಿಯಾದ ಇತರೆ ಕೆಲ ಪ್ರದೇಶಗಳಲ್ಲಿ ಬಿಲ್ಬಿಗೆ ಬೇರೆ ಬೇರೆ ಹೆಸರುಗಳಿವೆ.
ಬಿಲ್ಬಿಗೂ, ಮೊಲಕ್ಕೂ ಹೋಲಿಕೆ ಕಡಿಮೆ ಅಂತೆನ್ನಿಸುತ್ತದೆ. ಆದರೆ ಅವರಿಬ್ಬರ ಮಧ್ಯೆ ಹುಲುಮಾನವರು ತಂದಿಟ್ಟ ಗಲಾಟೆಯಂತೂ ಬಹಳ ದೊಡ್ಡದು. ಈಸ್ಟರ್ ಬನ್ನಿ ಎಂದರೆ ಮೊಲ. ಈಸ್ಟರ್ ಹಬ್ಬದ ಆಚರಣೆಯಲ್ಲಿ ಮೊಲಕ್ಕೆ ಅದೇನೋ ಬಹಳ ವಿಶಿಷ್ಟ ಸ್ಥಾನಮಾನವಿದೆ. ಇರಲಿ, ಕತೆಯ ಕೇಂದ್ರಬಿಂದು ಬಿಲ್ಬಿ ಆದ್ದರಿಂದ ಈಸ್ಟರ್ ಕತೆ ಇಲ್ಲಿ ಬೇಡ. ಬಿಲ್ಬಿ ಎನ್ನುವುದು ಎಲ್ಲೋ ಅಲ್ಪಸ್ವಲ್ಪ ಮೊಲದಂತೆ ಕಾಣುವ ಆಸ್ಟ್ರೇಲಿಯಾ ದೇಶದ ಹೆಗ್ಗಣದಂಥ ಪ್ರಾಣಿ. ಈ ದೇಶದ ಮರಳುಗಾಡಿನ ಸ್ವಾಭಾವಿಕ ಪರಿಸರದಲ್ಲಿ ಆನಂದದಿಂದ ನಲಿಯುತ್ತಾ ನೆಗೆಯುತ್ತಾ ಬದುಕಿದ್ದ Marsupial ಜಾತಿಗೆ ಸೇರಿದ ಈ ಹೆಗ್ಗಣಕ್ಕೆ ಇರುವ ಉದ್ದನೆ ದೊಡ್ಡ ಕಿವಿಗಳು ಮೊಲದ ಕಿವಿಗಳನ್ನು ಹೋಲುವುದರಿಂದ ಇದನ್ನು ಮೊಲದ ವಂಶಕ್ಕೆ ಸೇರಿದ ಪ್ರಾಣಿಯೆಂದು ಹೆಚ್ಚಿನ ಜನರು ನಂಬುತ್ತಾರೆ. ಬಿಲ್ಬಿ ಮತ್ತು ಮೊಲದ ಕತೆಯ ಮರ್ಮ ಇರುವುದು ಈ ನಂಬಿಕೆಯಲ್ಲೇ! ಆ ಹೆಚ್ಚಿನ ಜನರೆಂದರೆ ಯಾರು, ಯಾರ್ಯಾರು ಹಾಗೆ ನಂಬಿದರು, ನಂಬುತ್ತಾ ಬಂದಿದ್ದಾರೆ ಮತ್ತು ಯಾತಕ್ಕೆ ಅನ್ನೋ ವಿವರಗಳಲ್ಲಿ ಮೊಲದ ಗೆಲುವು, ಬಿಲ್ಬಿಯ ಪತನ ಅಡಗಿದೆ.
ಅದ್ಯಾಕೆ ಬ್ರಿಟಿಷರು ತಮ್ಮ ಮೊಲವನ್ನು ಈ ಬಿಲ್ಬಿಗೆ ಜೋಡಿಸಿ ಬಿಲ್ಬಿಯ ಸ್ವಂತಿಕೆ ಇರಲಿ, ಇಡೀ ಅದರ ಅಸ್ಮಿತೆಯ ಸರ್ವನಾಶ ಮಾಡಿದರು?! ಪರಿಣಾಮವೇನಾಯ್ತು? ವಲಸೆಗಾರರ, settler ಜನರೇ ತುಂಬಿರುವ ಈ ದೇಶದ ಮಕ್ಕಳ ಮನಸ್ಸಿನ ಕದವನ್ನು ಇಂದಿಗೂ ಪಾಪದ ಬಿಲ್ಬಿ ತಟ್ಟುತ್ತಲೇ ಇದೆಯೇನೋ.
ಆ ನಂಬಿಕೆ ಎಷ್ಟು ಆಳವಾಗಿದೆ ಅಂದರೆ ಬಿಲ್ಬಿ ಚಿತ್ರವನ್ನು ತೋರಿದರಂತೂ ಮಕ್ಕಳು ಆ ಊ ಎನ್ನುತ್ತಾ ರಾಗವೆಳೆಯುತ್ತಾರೆ. ಕತ್ತು ಹೊರಳಿಸುತ್ತಾ, ಅದನ್ನು ಇದನ್ನು ಅಳೆದೂ ಸುರಿದೂ ನೋಡುತ್ತಾರೆ. ಪಕ್ಕದಲ್ಲಿ ಕೂತಿರುವ ಅಮ್ಮನನ್ನು ಕೇಳುತ್ತಾರೆ. ಕಟ್ಟಕಡೆಗೆ ಅದು ಮೊಲವೇ ಸೈ ಎಂದು ತೀರ್ಪು ಕೊಡುತ್ತಾರೆ. ಮೊಲವಲ್ಲ ಮಗು, ಅದು ನಮ್ಮ ಬಿಲ್ಬಿ ಅಂದರೆ ಮುಖ ಸೊಟ್ಟ ಮಾಡಿ, ಥೂ ಪೆದ್ದೇ ಅನ್ನೋ ಥರ ನಮ್ಮ ಮುಖವನ್ನ ದಿಟ್ಟಿಸಿ ನೋಡಿ ಅವರ ಬೆಳ್ಳನೆ, ಮೃದುವಾದ ಮುದ್ದು Bunny Rabbit ಮಾಯಾಲೋಕವನ್ನೇ ಅಪ್ಪಿಕೊಳ್ಳುತ್ತಾರೆ. Bilby ಅವರ ಲೋಕಕ್ಕೆ ಎಂಟ್ರಿ ಕೊಡಲು, ಕತೆಯ ಮತ್ತೊಬ್ಬ ನಾಯಕ/ನಾಯಕಿಯಾಗಲು, ಮುಖ್ಯ ಪಾತ್ರದಲ್ಲಿ ರಾರಾಜಿಸಲು ಸಾಕಷ್ಟು ಕಸರತ್ತು ಮಾಡಬೇಕು.
ಅಂಥಾ ಕಸರತ್ತನ್ನು ಆ ಪರಿಸರ ಶಿಕ್ಷಣ ಕೇಂದ್ರ ವರ್ಷದಿಂದ ವರ್ಷಕ್ಕೆ ಮಾಡುತ್ತಾ ಬಂದಿದೆ.
ಮಾಡಲೇಬೇಕು, ಏಕೆಂದರೆ ಉದ್ದ ಬಾಲದ, ಉದ್ದನೆ ಚೂಪು ಮೂಗಿನ ಆಸ್ಟ್ರೇಲಿಯನ್ ಬಿಲ್ಬಿ ಅಳಿವಿನ ಅಂಚಿನಲ್ಲಿದೆ. ಅದರ ಸಂತತಿ, ವಾಸಸ್ಥಾನ ಉಳಿಯಬೇಕೆಂದರೆ ಮುದ್ದು ಬಿಳಿ ಮೊಲವನ್ನು ಇಷ್ಟಪಡುವ ಈ ಪುಟ್ಟ ಮಕ್ಕಳು ಕಂದು ಮೈಬಣ್ಣದ ಬಿಲ್ಬಿಯನ್ನೂ ಕೂಡ ಮೆಚ್ಚಿಕೊಳ್ಳಬೇಕು, ‘ನಮ್ಮ ಬಿಲ್ಬಿ’ ಅನ್ನಬೇಕು. ಆದರೆ ನಿಜಾರ್ಥದಲ್ಲಿ ಬಿಲ್ಬಿ ಸಂಖ್ಯೆ ಬಹಳ ಕಡಿಮೆ ಇರುವುದರಿಂದ ಅವನ್ನು ಅಪ್ಪಿಕೊಳ್ಳುವಂತಿಲ್ಲವಲ್ಲ!! ಬಿಲ್ಬಿಯನ್ನ ನೋಡಬೇಕೆಂದರೆ ಇಲ್ಲಿನವರು ಕೋತಿ, ಆನೆ, ಹುಲಿ, ಘೇ೦ಡಾಮೃಗಗಳನ್ನು ನೋಡಲು ಮೃಗಾಲಯಗಳಿಗೆ ಹೋಗುತ್ತೀವಲ್ಲ ಹಾಗೆ ಹೋಗಿ ಅವನ್ನು ಸರಳುಗಳ ಹಿಂದೆ ನೋಡಬೇಕು. ದುಃಖದ ವಿಷಯವೆಂದರೆ ಬಿಲ್ಬಿಯ ತವರು ಮನೆ ಇಲ್ಲೇ ಇದೆ, ಆಸ್ಟ್ರೇಲಿಯಾದಲ್ಲೇ! ಬಿಲ್ಬಿಯ ಬೇರು, ನೀರು ಎಲ್ಲವೂ ಇಲ್ಲೇ ಇದೆ. ಆದರೆ ಬಿಲ್ಬಿ ಕಳೆದುಹೋಗಿದೆ.
ಯಾಕಪ್ಪಾ ಹೀಗಾಯ್ತು ಎಂದು ಕೇಳಿದರೆ ನಮ್ಮೆದುರು ಈ ಹಿಂದಿನ ಎರಡು ಶತಮಾನಗಳ ಕಗ್ಗಂಟು, ಮರಿಗಂಟುಗಳು ಬಿಚ್ಚಿಕೊಳ್ಳುತ್ತವೆ. ಗಂಟುಗಳನ್ನು ಹಿಡಿದು ಜಗ್ಗಿದರೆ ಒಂದು ಮುಖ್ಯ ಕವಲು ಇಂಗ್ಲಿಷರತ್ತ ಹರಿಯುತ್ತದೆ. ಅವರು ಬಂದು ಆಸ್ಟ್ರೇಲಿಯಾವನ್ನು ಆಕ್ರಮಿಸಿ ತಳವೂರಿ ತಮ್ಮ ಜೀವನವನ್ನು ಸ್ಥಾಪಿಸಿಕೊಳ್ಳುವ ಮತ್ತು ವ್ಯಾಪಿಸಿಕೊಳ್ಳುವ ಹಂತಗಳಲ್ಲಿ ಇಲ್ಲಿನ ಸ್ವಾಭಾವಿಕ, ನಿಸರ್ಗ ಜೀವಿಗಳಿಗೆ ಸಾಕಷ್ಟು ತೊಂದರೆಯನ್ನು ಕೊಟ್ಟರು. ಹಾಗಾಗಿ ಸಸ್ಯ, ಮರಗಿಡಗಳ ಸಂಪತ್ತು ಹಲವಾರು ಬದಲಾವಣೆಗಳಿಗೆ ಬಲಿಯಾಯ್ತು. ಹಲವಾರು ಪ್ರದೇಶಗಳಲ್ಲಿ ನೈಸರ್ಗಿಕ ಚಹರೆಗಳೇ ಬದಲಾದವು. ಪರಿಣಾಮವೆಂದರೆ ಪ್ರಾಕೃತಿಕ ಅಸಮತೋಲನ. ಕೆಲ ಪ್ರಾಣಿಗಳು, ಮರಗಿಡಗಳು ಸಂತೋಷದಿಂದ ಬದುಕಿ, ಬೆಳೆದವು. ಸ್ಥಳೀಯ ಪರಿಸರಕ್ಕೆ ಬಹು ಸೂಕ್ಮವಾಗಿ ಒಗ್ಗಿಕೊಂಡು ಪಳಗಿದ್ದ ಬಿಲ್ಬಿಯಂಥ ಪ್ರಾಣಿಗಳು ತಮ್ಮ ಉಳಿವಿಗಾಗಿ ಹೆಣಗಾಡಿದವು. ತಮ್ಮ ಸೂಕ್ಷ್ಮಪರಿಸರದಲ್ಲಿ ಆದ ಬದಲಾವಣೆಗಳಿಂದ ಕಂಗೆಟ್ಟ ಬಿಲ್ಬಿಯ ಒಂದು ವಿಶಿಷ್ಟ ವರ್ಗದ ಸಹೋದರ, ಕಿರು ಪ್ರಭೇದಕ್ಕೆ ಸೇರಿದ ಲೆಸ್ಸರ್ ಬಿಲ್ಬಿ ಸಂತತಿ ಕೇವಲ ಎಪ್ಪತ್ತು ವರ್ಷಗಳ ಹಿಂದೆ ಸಂಪೂರ್ಣವಾಗಿ ನಶಿಸೆಹೋಯ್ತು. ಈಗ ಉಳಿದಿರುವುದು ಗ್ರೇಟರ್ ಬಿಲ್ಬಿ. ಇದರ ಉಳಿವಿಗಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.
ಬಿಲ್ಬಿ ಮತ್ತು ಮೊಲದ ಕತೆಯ ಮರ್ಮ ಇರುವುದು ಈ ನಂಬಿಕೆಯಲ್ಲೇ! ಆ ಹೆಚ್ಚಿನ ಜನರೆಂದರೆ ಯಾರು, ಯಾರ್ಯಾರು ಹಾಗೆ ನಂಬಿದರು, ನಂಬುತ್ತಾ ಬಂದಿದ್ದಾರೆ ಮತ್ತು ಯಾತಕ್ಕೆ ಅನ್ನೋ ವಿವರಗಳಲ್ಲಿ ಮೊಲದ ಗೆಲುವು, ಬಿಲ್ಬಿಯ ಪತನ ಅಡಗಿದೆ.
ದೇಶಿಯ ಮಟ್ಟದಲ್ಲಿ ಬಿಲ್ಬಿ ಸಂರಕ್ಷಣೆ ಯೋಜನೆ, ಅವು ಇರುವ ಸ್ವಾಭಾವಿಕ ವಾಸಸ್ಥಳಗಳನ್ನು ಕೂಲಂಕುಷವಾಗಿ ಗುರ್ತಿಸಿ, ಅವನ್ನು ಮುತುವರ್ಜಿಯಿಂದ ಕಾಪಾಡುವುದು, ಬಿಲ್ಬಿ ಮೊದಲಿದ್ದ ಪ್ರದೇಶಗಳಲ್ಲಿ ಅವನ್ನು ಹಂತಹಂತವಾಗಿ ಮರು-ಪರಿಚಯಿಸುವುದು, ಅವುಗಳ ಕುರಿತು ಜನರಿಗೆ ಹೇಳುವುದು, ಈ ಮುಂತಾದವು ನಡೆಯುತ್ತಿವೆ.
ಪರಿಸರ ಕೇಂದ್ರಕ್ಕೆ ಬಂದ ಮಕ್ಕಳು ಕೇಳುವ, ನೋಡುವ ಬಿಲ್ಬಿ ಕಥೆಗೆ ಮತ್ತೆ ಬರೋಣ. ಬಿಲ್ಬಿ ಕಳೆದುಹೋಗಿದೆ. ಏನು ಮಾಡಬೇಕು? ಪುಟಾಣಿಮರಿ ಬಿಲ್ಬಿ ತನ್ನ ತಾಯಿಯ ಬೆನ್ನು/ಹೊಟ್ಟೆಚೀಲದಿಂದ ಹೊರಬಿದ್ದು ಹೇಗೆ ಕಾಣೆಯಾಗಿದೆ, ತನ್ನ ಕೂಸನ್ನು ತಾಯಿ ಬಿಲ್ಬಿ ಹುಡುಕುತ್ತಿರುವ ಪರಿ, ಗೋಳು, ಅವಳ ಮನೆಯನ್ನು ನರಿ ಮತ್ತಿತರ ಪ್ರಾಣಿಗಳು ಆಕ್ರಮಿಸಿಕೊಂಡು ಅವಳನ್ನು ಸಾಯಿಸಲು ಬರುವುದು ಇವಲ್ಲೆವೂ ಪರಿಸರ ಕೇಂದ್ರದಲ್ಲಿ ಹಾಕಿರುವ ಸೆಟ್ ನಲ್ಲಿ ದೃಶ್ಯ-ಕಥಾನಕವಾಗಿ ಹೇಳುತ್ತಾ ಹೋಗುತ್ತಾರೆ. ಕಥೆ ಕಡೆಗೆ ಬಂದು ನಿಲ್ಲುವುದು ಹಲವಾರು ಸಂದೇಶಗಳೊಡನೆ. ಬಿಲ್ಬಿಯನ್ನು ನಾವೆಲ್ಲಾ ಕಡೆಗಣಿಸಿದ್ದೀವಿ, ಈ ಪ್ರಾಣಿ ಮತ್ತು ನಾವು ಜೊತೆಗಾರರು, ಅದರ ಮನೆಯನ್ನು, ವಾಸಸ್ಥಳವನ್ನು ನಾವು ಸಂರಕ್ಷಿಸಬೇಕು. ಬಿಲ್ಬಿಯ ಬಗ್ಗೆ ಹೆಚ್ಚು ಜನರಲ್ಲಿ ಅರಿವು ಮೂಡಿಸಬೇಕು. ಅದರ ಸಂತತಿಯನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲಾ ಈ ಈ ತರನಾದ ಕ್ರಮಗಳನ್ನು ಕೈಗೊಳ್ಳಬೇಕು. ಇದೆಲ್ಲವನ್ನೂ ಮಕ್ಕಳ-ಸ್ನೇಹಿ ಭಾಷೆಯಲ್ಲಿ ಮೃದುವಾಗಿ, ಜಾಗರೂಕತೆಯಿಂದ ಹೇಳುತ್ತಾರೆ.
ಕತೆ ಕೇಳುತ್ತಾ, ಸಾಫ್ಟ್ ಟಾಯ್ ಬಿಲ್ಬಿ ಮರಿಗಳನ್ನು ತಬ್ಬಿಕೊಂಡು ಒಂದಿಬ್ಬರು ಮಕ್ಕಳು ಗೊಳೋ ಎಂದು ಅಳಲಾರಂಭಿಸಿದಾಗ ಕತೆಯ ಪರಿಣಾಮದ ಆಳ ನಮಗೆ ಅರ್ಥವಾಗುತ್ತದೆ. ಇನ್ನೊಂದಿಬ್ಬರು ಮಕ್ಕಳು ತಾವು ಹಿಡಿದುಕೊಂಡಿದ್ದ ಮರಿ ಬಿಲ್ಬಿ ಮೃದು ಬೊಂಬೆಗಳನ್ನು ವಾಪಸ್ ಕೊಡಲು ಒಪ್ಪದೇ ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವನ್ನು ತಾವು ಸಾಕುವುದಾಗಿ ಹೇಳಿದರು. ಆಗಲೂ ಕೂಡ ಕತೆ ಹೇಳುವವರು ಮೊಲವನ್ನು ಸಾಕುವಂತೆ ಬಿಲ್ಬಿಯನ್ನು ಸಾಕಲು ಬರುವುದಿಲ್ಲ, ಅದರ ಪರಿಸರವನ್ನು ನಾವು ಕಾಪಾಡಬೇಕು ಎನ್ನುವ ಮಾತನ್ನು ಹಲವಾರು ಬಗೆಯಲ್ಲಿ ಹೇಳಿದರು.
ಅಂದ ಹಾಗೆ, ಇಂಗ್ಲಿಷರು ಆಸ್ಟ್ರೇಲಿಯಾಕ್ಕೆ ಮೊಲವನ್ನು ತಂದು, ಅದರ ಸಂಖ್ಯೆ ಯದ್ವಾತದ್ವಾ ಬೆಳೆದು ಮೊಲವೊಂದು ಪಿಡುಗು ಎಂದು ಘೋಷಿಸುವಂತಾಯಿತು. ಹಾಗಾಗಿ ಮೊಲವನ್ನು ಮನೆಯಲ್ಲಿ ಸಾಕಬೇಕು, ಅದನ್ನು pet ಎಂದು ಇಟ್ಟುಕೊಳ್ಳಲು ಸರ್ಕಾರದ ಅನುಮತಿ ಪಡೆಯಬೇಕು.
ಈಸ್ಟರ್ ಬನ್ನಿ ಆಸ್ಟ್ರೇಲಿಯಾದಲ್ಲಿ ಹೆಸರುವಾಸಿಯಾಗಿದ್ದು ಒಬ್ಬ ವಲಸೆಗಾರನಾಗಿ ಅಥವಾ Settler ಆಗಿ ಅನ್ನೋಣವಂತೆ. ಬಿಳಿಯ ಆಂಗ್ಲರೊಂದಿಗೆ ಬಿಳಿ ಮೊಲ ದೂರದೇಶದಿಂದ ಬಂದು ಆಸ್ಟ್ರೇಲಿಯಾವನ್ನು ತನ್ನ ಸ್ವಂತ ನಾಡಾಗಿಸಿಕೊಂಡದ್ದು ಸ್ವಲ್ಪ ಕುತೂಹಲ ಹುಟ್ಟಿಸುತ್ತದೆ. ಜರುಗಿಹೋದ ಕರಾಳ ಚರಿತ್ರೆಗೆ, ಈಗ ಕಣ್ಣೆದುರೇ ನಡೆಯುತ್ತಿರುವ ವಿದ್ಯಮಾನಗಳಿಗೆ ಒಂದು ರೀತಿಯ ಸಂಕೇತವೇನೋ ಅಂದೆನಿಸುತ್ತದೆ.
ಬಿಲ್ಬಿ ಮತ್ತು ಬನ್ನಿ ರಾಬಿಟ್ ಇಬ್ಬರೂ ಮೂಕಸಾಕ್ಷಿಗಳೇನೋ ಎಂಬಂತೆ ಭಾಸವಾಗುತ್ತದೆ. ಆ ದಿನ ಕಥೆಯನ್ನು ನೋಡಲು ಬಂದ ಸುಮಾರು ಇಪ್ಪತ್ತು ಪುಟ್ಟಮಕ್ಕಳ ತಾಯಂದಿರ ಬಳಿ ನಾನು ಹಾಗೆ ಲೋಕಾಭಿರಾಮವಾಗಿ ಮಾತನಾಡಿದಾಗ ತಿಳಿದುಬಂದದ್ದು ಅವರಲ್ಲಿ ಅರ್ಧಕ್ಕರ್ಧ ಮಂದಿ ಸ್ವತಃ ತಾವೇ ಹೊರದೇಶಗಳಿಂದ ಬಂದು ಇಲ್ಲಿ ನೆಲೆಸಿದವರು. ಅದರಲ್ಲೂ ಹೆಚ್ಚಿನವರು ಬಿಳಿಯ ಬ್ರಿಟಿಷರು – ಬಿಳಿಯ ಬನ್ನಿ ರಾಬಿಟ್ ಲೋಕದವರು. ಆಸ್ಟ್ರೇಲಿಯಾದ ಪರಿಸರ ವಿಷಯಗಳ ಬಗ್ಗೆ ತಮ್ಮ ಮಕ್ಕಳಿಗೆ ತಿಳುವಳಿಕೆ ಮೂಡಬೇಕು ಎಂಬ ಆಸಕ್ತಿಯಿಂದ ಅವರೆಲ್ಲಾ ಬಂದಿದ್ದರು. ಅವರು ತಮ್ಮ ಪುಟಾಣಿಗಳಿಗೆ ರಾಬಿಟ್ ಅಲ್ಲ, ಇದು ಬಿಲ್ಬಿ ಎಂದು ಪರಿಪರಿಯಾಗಿ ಹೇಳುತ್ತಾ ಮನವರಿಕೆ ಮಾಡಿಸಲು ಪ್ರಯತ್ನಿಸುತ್ತಿದ್ದ ಸನ್ನಿವೇಶ ಬಹಳಾ ಆಸಕ್ತಿ ಹುಟ್ಟಿಸುತ್ತಿತ್ತು. ಅವರಲ್ಲಿ ಯಾರೊಬ್ಬರಿಗೂ ಆ ದಿನದವರೆಗೂ ಬಿಲ್ಬಿ ಅಂದರೆ ಏನು ಅಂತ ತಿಳಿದಿರಲಿಲ್ಲವಂತೆ. ಇನ್ನೂ ವಿರೋಧಾಭಾಸವೆಂದರೆ ಕತೆ ಹೇಳಿದವರೂ ಕೂಡ ಕೆಲ ವರ್ಷಗಳ ಹಿಂದೆ ಬ್ರಿಟನ್ನಿನಿಂದ ಬಂದು ಇಲ್ಲಿ ನೆಲೆಸಿದವರು!! ಹೋದ ಶತಮಾನದಲ್ಲಿದ್ದ ಪರಿಸ್ಥಿತಿ ಈಗ ತಿರುಗಾಮುರುಗಾ ಆಗಿದೆ ಅನ್ನಿಸಿ ಚೋದ್ಯವೆನಿಸಿತು.
ಇತ್ತೀಚೆಗೆ ಆಂಗ್ಲ ಸಂಸ್ಕೃತಿಯ ಕೊಡುಗೆಯಾದ ಈಸ್ಟರ್ ಬನ್ನಿಯ ಪ್ರಭಾ(ಹಾ)ವಳಿಯನ್ನು ಕಡಿಮೆಗೊಳಿಸಿ ಆಸ್ಟ್ರೇಲಿಯನ್ ಬಿಲ್ಬಿಯನ್ನು ಹೀರೋ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಹಬ್ಬದ ಸಂದರ್ಭದಲ್ಲಿ ಚಾಕಲೇಟ್ಗಳು ಭರ್ಜರಿಯಾಗಿ ಮಾರಾಟವಾಗುವುದರಿಂದ ವ್ಯಾಪಾರವನ್ನು, ದೇಶದ ಆರ್ಥಿಕತೆಯನ್ನು ಸಂರಕ್ಷಿಸಬೇಕಲ್ಲ. ಹಾಗಾಗಿ ‘ಈಸ್ಟರ್’ ಪದವನ್ನು ಕೈಬಿಡದೆ ಬಿಲ್ಬಿ ಚಾಕಲೇಟ್ ತಯಾರು ಮಾಡಿ ಅದಕ್ಕೆ ಪ್ರಚಾರ ಕೊಡುವ ಪ್ರಯತ್ನ ನಡೆಯುತ್ತಿದೆ. ಈಸ್ಟರ್ ಬಿಲ್ಬಿ ಚಾಕಲೇಟ್ ಮಾರಾಟದಿಂದ ಬರುವ ಹಣದ ಸ್ವಲ್ಪ ಭಾಗವನ್ನು ಬಿಲ್ಬಿ ಸಂರಕ್ಷಣೆಗೆಂದು ತೆಗೆದಿಡುತ್ತಾರೆ ಅನ್ನುವ ಅಂಶವನ್ನು ಒತ್ತಿಒತ್ತಿ ಹೇಳುತ್ತಾರೆ. ಆ ದಿನ ಪರಿಸರ ಕೇಂದ್ರದಲ್ಲಿ ಅಂತಹ ಎರಡು ದೊಡ್ಡ ಈಸ್ಟರ್ ಬಿಲ್ಬಿ ಚಾಕಲೇಟ್ ಬಾಕ್ಸ್ ಗಳನ್ನ ಪ್ರದರ್ಶನಕ್ಕೆಂದು ಇಟ್ಟಿದ್ದರು. ಅದನ್ನು ನೋಡಿದ ಒಂದು ಮಗು ಆ ಈಸ್ಟರ್ ಬನ್ನಿ ಚಾಕಲೇಟ್ ಬಾಕ್ಸ್ ತನಗೆ ಬೇಕೇ ಬೇಕು ಎಂದು ಹಠ ಹಿಡಿದೇಬಿಟ್ಟಿತು. ತಾಯಿಗೆ ಮುಜುಗರವಾಗಿ ಅದು ಈಸ್ಟರ್ ಬನ್ನಿ ಅಲ್ಲ, ಅದು ಬಿಲ್ಬಿ, ಅದನ್ನು ತಿನ್ನಲು ಬರುವುದಿಲ್ಲ ಯಾಕೆಂದರೆ ಅವು ನಶಿಸಿಹೋಗುತ್ತಿವೆ, ಅವನ್ನು ನಾವು ರಕ್ಷಿಸಬೇಕು, ಅಂದಳು. ಮಧ್ಯಾಹ್ನದ ಲಂಚ್ ಸಮಯ ಹತ್ತಿರವಾಗುತ್ತಿತ್ತು. ಮಗು ಹಸಿದಿತ್ತು. ತನ್ನ ಯಾವತ್ತಿನ ಅಭ್ಯಾಸದಂತೆ ಮುದ್ದು ಮೊಲದ ಚಾಕಲೇಟ್ ತಿನ್ನುವ ಆಸೆಯಿಟ್ಟುಕೊಂಡಿದ್ದ ಆ ಮಗುವಿಗೆ ಮೈಯೆಲ್ಲಾ ಅದುರಿ ಹೋಗುವಷ್ಟು ಕೋಪ ಬಂದು ಕಿರುಚಿಕೊಂಡು ‘ಐ ಹೇಟ್ ಬಿಲ್ಬಿ’ ಎಂದುಬಿಟ್ಟಿತು. ಅಲ್ಲಿದ್ದ ಅರ್ಧ ಮಂದಿ ಬ್ರಿಟಿಷ್ ಅಮ್ಮಂದಿರು ಅಯ್ಯಯ್ಯೋ ಅಂದರೆ (ಸದ್ಯ, ಯಾರೂ ಮೈ ಪರಚಿಕೊಳ್ಳಲಿಲ್ಲ) ಇನ್ನರ್ಧ ಮಂದಿ ಆಸ್ಟ್ರೇಲಿಯನ್ನರು ‘ಬಿಲ್ಬಿ ಈಸ್ ಬ್ಯೂಟಿಫುಲ್’, ಅಂದರು.
ಈ ಕೆಂಪು ನೆಲದ ಕೆಂಚನೆ ಬಣ್ಣದ ಬಿಲ್ಬಿ ಎಂಬ ಹೆಗ್ಗಣಕ್ಕೂ ದೂರದೂರಿನಿಂದ ಬಂದು ನೆಲೆಸಿದ ಬಿಳಿ ಮೃದು ಬನ್ನಿ ಮೊಲಕ್ಕೂ ಇರುವ ಸಂಬಂಧದಲ್ಲಿ ಇನ್ನೂ ಗಲಾಟೆ ನಡೀತಾನೆ ಇದೆ ಅನ್ನೋ ವಿಷಯ ಈ ಭಾರತೀಯ ವಲಸೆಗಾರ ಬುದ್ಧಿಗೆ ಇನ್ನಷ್ಟು ಮನದಟ್ಟಾಯಿತು ಎನ್ನಲೇ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.