Advertisement
ಈ ಜಗ ಸೋಜಿಗ….: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಈ ಜಗ ಸೋಜಿಗ….: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಊರ ಚಾವಡಿಯಲ್ಲೊಂದು ಕೊಳ. ಕೊಳದ ಸನಿಹ ಗಡಿ ಹಾಕಿದಂತೆ ಹರಿವ ಚಂದ್ರಾನದಿ ಮತ್ತು ಕೊಳಲ ರಾಗ ತೆಗೆಯುವ ಸೀಸು ಜಲಧಾರೆ. ಸದಾ ಪ್ರಶಾಂತ ಸನ್ನಿಧಿ. ಅದರ ಸೌಂದರ್ಯಕ್ಕೆ ಮರಳಾಗದೇ ಮರಳಿದವರಿಲ್ಲ. ಗಂಟೆಗೆ ಸಾವಿರ ಸಾವಿರ ಕ್ಯೂಸೆಕ್ಸ್‌ ನೀರನ್ನ ಧರೆಗಿಳಿಸುವ ಭಗೀರಥ, ಸೀಸು ಜಲಧಾರೆ. ೨೪ ಗಂಟೆಯೂ ಬೇಸರಿಸದೆ ಬಸವಳಿಯದೇ ಸುರಿವ ಜಲಧಾರೆ ಎಂದು ಬತ್ತುವುದೆಂದು ಹೋಟೆಲ್‌ ಮಾಲಿಕನಲ್ಲಿ ಕೇಳಿದೆ. ಇಲ್ಲಿಯವರೆಗೆ ಬತ್ತಿದ್ದೇ ಇಲ್ಲವೆಂದ! ಹಿಮ ಟೋಪಿಗಳನ್ನು ಕರಗಿಸುತ್ತಲೇ ಇರುತ್ತದೆ.  ಮತ್ತೆ ಮತ್ತೆ ನೀರುಣಿಸುವ ಚಂದ್ರಾ ನದಿಯ ಹಿಮಗಡ್ಡೆಗಳು!
ಶ್ರೀಧರ್‌
ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ “ಸೀಸು” ಎಂಬ ಊರಿನಲ್ಲಿ ಅಲೆದಾಡಿದ ನೆನಪುಗಳು

ಸಾಮಾನ್ಯವಾಗಿ ಮನಾಲಿ ಹೆಸರು ಕೇಳದವರಿಲ್ಲ. ಅಲ್ಲಿಗೆ ಹೋಗದವರೂ ಮನಾಲಿಯ ಕುರಿತು ತಿಳಿದುಕೊಂಡಿರುತ್ತಾರೆ. ಆದರೆ ಈ ಅಪರೂಪದ ಹಳ್ಳಿ ಮನಾಲಿಯ ಸನಿಹದಲಿ ಯಾರ ಅರಿವಿಗೂ ಬರದೇ ನಿಶ್ಚಿಂತವಾಗಿದೆ. ಕರಡಿಯಮ್ಮನ ಮರಿಯಂತೆ. ಪಹರೆ ಕಾಯುವ ಹಿಮ ಬೆಟ್ಟಗಳು, ನದಿಗಳ ಪದತಲದಲಿ ನಿಶ್ಚಿಂತವಾಗಿ ಪವಡಿಸಿದೆ. ಹೊಸ ಕಾಲದ ವ್ಯಾಧಿಗಳಾವುವೂ ಕಾಲಿಡದ ಪುಣ್ಯ ಭೂಮಿ!

ಮನಾಲಿಯ ಕಿರೀಟದಂತಿರುವ ಊರು ಸೀಸು. ಅಟಲ್‌ ಟನಲ್‌ ದಾಟಿ ಎಡಕ್ಕೆ ಹೊರಳಿ ೫ ಹಾಡಿನ ದೂರದಲ್ಲಿದೆ ಸೀಸು ಎಂಬ ವಿಚಿತ್ರ ಹೆಸರಿನ ಪುಟಾಣಿ ಹಳ್ಳಿ. ಬಲಕ್ಕೆ ಹೊರಳಿದರೆ ಕೊಕ್ಸರ್‌ ಎಂಬ ಮತ್ತೊಂದು ಪುಟಾಣಿ ಹಳ್ಳಿ ಬೆಟ್ಟಗಳ ಬುಡದಲ್ಲಿ ತಣ್ಣಗೆ ಪವಡಿಸಿತ್ತು. ನೂರಾರು ಹಿಮ ಝರಿಗಳು ಹೊದಿಕೆ ಹೊದಿಸಿ ಕಾಪಿಟ್ಟ ಹಳ್ಳಿ. ಮತ್ತೆರಡು ಹಾಡಿನ ದೂರಕ್ಕೆ ಹಿಮವಾಟವಾಡುವ ಜಾಗ. ಇನ್ನೂ ಸ್ವಲ್ಪ ದೂರಕ್ಕೆ ಹಿಮ ಹೊದ್ದ ರೋತಾಂಗ್‌ನ ಸುಳಿ ರಸ್ತೆ. ರಸ್ತೆ ಗುಂಟ ಬಿಡಿಸಲಾಗದ ಕಗ್ಗಂಟ್ಟು ಹಿಮ. ಹಿಮಪಾತದ ದಿನಗಳಲ್ಲಿ ರೋತಾಂಗ್‌ ಪಾಸ್‌ ಮುಚ್ಚುತ್ತದೆ. ಅಟಲ್‌ ಟನಲ್‌ ತೆರೆದಿರುತ್ತದೆ ಅಷ್ಟೇ. ಚಳಿಯ ಹೆದ್ದರೆಗಳು ಹೆದ್ದಾರಿ ತುಂಬಾ. ಅದ್ಯಾವುದೋ ಮಾಯಕದಲ್ಲಿ ಪ್ರತ್ಯಕ್ಷವಾದ ಚಿಕ್ಕ ರೆಸ್ಟೋರೆಂಟ್.‌ ಅಲ್ಲೇ ಉಂಡು ತೂರುವಗಾಳಿಗೆ ಬೆಟ್ಟವ ಮಾತಾಡಿಸಿ ಹೊರಟೆವು.

ನಾಲ್ಕು ದಿಕ್ಕುಗಳಿಂದಲೂ ಹಿಮದ ಹೊದಿಕೆ ಹೊದ್ದ ಬೆಟ್ಟ ಸಾಲು.  ಸೂರ್ಯ ಕಿರಣಕೆ ಏಳುವ ಮಂಜು. ಕೆಂಪಿನಿಂದ ಹಳದಿಯಾಗುವ ಎಲ್ಲೆಲ್ಲೂ ಹಿಮದ ಚಾದರ. ನೆನಪುಗಳಿಗೆ ಪುನರ್ಜನ್ಮ ಕೊಡುವಂತಹ ವಿಪರೀತ ಚಳಿ!  ಬಯಕೆ ಕೆಂಡದ ಮೇಲಿಂದ ಬೀಸುವ ಸುಟ್ಟ ಕುಳಿರ್ಗಾಳಿ. ಒಣ ಮರುಭೂಮಿಯ ತಣ್ಣನೆಯ ಹವೆ. ಅಲ್ಲಲ್ಲಿ ಕಾಣ ಸಿಗುವ ವಿಶಿಷ್ಟ ಮೊಲ. ಕರಿ ಮಣ್ಣ ಗದ್ದೆಗಳಲ್ಲಿ ಎಲ್ಲೆಲ್ಲೂ ಚಿಗುರುವ ಹೂಕೋಸಿನ ಚಿಗುರು. ವಿಶಿಷ್ಟ ಜೀವ ಜಾಲದ ಸೆರಗು. ಊರಿಗೆ ಶಾಲು ಹೊದಿಸಿದಂತೆ ಹರಿವ ಚಂದ್ರಾ ನದಿ! ಚಳಿಗೆ ಬೇಗ ಮಲಗೋ ಬಾನ ಚಂದ್ರ!!

ಊರ ಚಾವಡಿಯಲ್ಲಿ

ಊರ ಚಾವಡಿಯಲ್ಲೊಂದು ಕೊಳ. ಕೊಳದ ಸನಿಹ ಗಡಿ ಹಾಕಿದಂತೆ ಹರಿವ ಚಂದ್ರಾನದಿ ಮತ್ತು ಕೊಳಲ ರಾಗ ತೆಗೆಯುವ ಸೀಸು ಜಲಧಾರೆ. ಸದಾ ಪ್ರಶಾಂತ ಸನ್ನಿಧಿ. ಅದರ ಸೌಂದರ್ಯಕ್ಕೆ ಮರಳಾಗದೇ ಮರಳಿದವರಿಲ್ಲ. ಗಂಟೆಗೆ ಸಾವಿರ ಸಾವಿರ ಕ್ಯೂಸೆಕ್ಸ್‌ ನೀರನ್ನ ಧರೆಗಿಳಿಸುವ ಭಗೀರಥ, ಸೀಸು ಜಲಧಾರೆ. ೨೪ ಗಂಟೆಯೂ ಬೇಸರಿಸದೆ ಬಸವಳಿಯದೇ ಸುರಿವ ಜಲಧಾರೆ ಎಂದು ಬತ್ತುವುದೆಂದು ಹೋಟೆಲ್‌ ಮಾಲಿಕನಲ್ಲಿ ಕೇಳಿದೆ. ಇಲ್ಲಿಯವರೆಗೆ ಬತ್ತಿದ್ದೇ ಇಲ್ಲವೆಂದ! ಹಿಮ ಟೋಪಿಗಳನ್ನು ಕರಗಿಸುತ್ತಲೇ ಇರುತ್ತದೆ.  ಮತ್ತೆ ಮತ್ತೆ ನೀರುಣಿಸುವ ಚಂದ್ರಾ ನದಿಯ ಹಿಮಗಡ್ಡೆಗಳು! ಹಿಮದ ದಿನಗಳಲ್ಲಿ ಜಲಪಾತವೇ ಮರುಗಟ್ಟಿ ಕಂಬವಾಗುತ್ತದೆ. ಹಿಮಕಂಬ! ಗಡಿಯಾಚೆಗೂ ತನ್ನ ಕರುಣೆಯ ಕೈಚಾಚುತ್ತಾಳೆ. ಚಂದ್ರಾ ಸಿಂಧೂವಿನೊಂದಿಗೆ ಒಪ್ಪಿನ ಒಪ್ಪಂದವಗೈದು ಹರಿಯುತ್ತಲೇ ಪಾಕಿಸ್ತಾನ ಸೇರುತ್ತಾಳೆ. ಚಂದ್ರಾ ನದಿಯ ಒಂದು ಭಾಗ ಈ ಜಲಧಾರೆ. ಇಲ್ಲೇ ನದಿಗುಂಟ ರಿವರ್‌ ಕ್ರಾಸಿಂಗ್‌ ಮಾಡಿಸಲಾಗುತ್ತದೆ. ಉದುರುವ ಹುಡಿ ಮಣ್ಣಿಗೆ ಹುಗಿದ ಕಂಬಗಳು ನೀರಲಿ ತೇಲುವ ಹುನ್ನಾರದಲ್ಲಿದ್ದಂತೆ ಭಾಸ. ಮಹಾ ಮಳೆಗೆ ಕೊಚ್ಚಿ ಹೋದ ಹಳೆಯ ಸೇತುವೆಯ ಕುರುಹುಗಳಿನ್ನೂ ಅಲ್ಲೇ ಜೀವಂತ.


ಸೀಸುವಿನ ಮುಂಬೆಳಗು

ಮುಂಜಾವಿನ ಇಬ್ಬನಿಗೆ ತೊಯ್ದ ನೆಲ. ಸೂರ್ಯ ರಶ್ಮಿಗೆ ಎದ್ದ ಹಿಮದಾವಿ ಸವಿಯಲು ನೀವೊಮ್ಮೆ ಇಲ್ಲಿಗೆ ಬರಬೇಕು. ಪುಡಿಗೆಲಸ, ಪುಡಿಗಾಸು ಬರ್ಫದ ಹೊದಿಕೆ ಜಾರಿದಾಗಲೇ ಭರ್ತಿಯಾಗುವ ಬಟ್ಟಲು, ಬೆಳೆ ಎಲ್ಲಾ. ಒಂದು ತುಂಬಲು ಇನ್ನೊಂದು ಕರಗಲೇ ಬೇಕು. ಅತಿಥಿ ದೇವೋ ಭವ. ಕಲ್ಲುಗಳ ಗುಡ್ಡದಲ್ಲೂ ಅರಳುವ ಹಿಮ ಪ್ರೇಮ. ಆಕಾಶಕ್ಕೆ ಏಣಿ ಹಚ್ಚುವ ಅವಕಾಶವಿಲ್ಲದ ಸೀಮಿತ ಬದುಕಿನ ಓಣಿ. ಹೂಕೋಸು ಅರಳಲು ಬೇಡುವ ಹಿಮ ಕರುಣೆ. ಆಲುವಿಲ್ಲಿ ಭಾಲು!!

ಸಣ್ಣ ಶಾಲೆ, ಪುಟಾಣಿ ಮ್ಯೂಜಿಯಂ, ಸಣ್ಣ ಔಷಧಾಲಯ ಇವಿಷ್ಟೇ ಸೌಲಭ್ಯಗಳು. ಮರಳಾಗದೇ ಮರಳುವುದು ಹೇಗೆ? ಬದುಕಿಡಿ ಅನುಭವಿಸುವ ಖಾಲಿತನವನ್ನು ಇಲ್ಲಿ ತುಂಬಿಕೊಳ್ಳಬಲ್ಲಿರಿ. ಮನದ ಬೇಗುದಿಯನು ಬೆಟ್ಟಕ್ಕೆ ವರ್ಗಾಯಿಸಿ ನಿರುಮ್ಮಳವಾಗಬಹುದು.

ಮನದ ಆಗಸದಲ್ಲಿ ತುಂಬಿಕೊಂಡ ಅಪೂರ್ವ ಸೀಸು ಎಂಬ ಪುಟಾಣಿ ಹಳ್ಳಿಯಲ್ಲಿನ ಎರಡು ಹಗಲು ಮತ್ತು ಎರಡು ರಾತ್ರಿಗಳ ನೆನಪು ಸಣ್ಣ ಕಿಡಿ ಹೊತ್ತಿ ಹೊರಬಂದಿದೆ. ನನ್ನ ಕಾಡುತಲಿದೆ ಎಂದೂ ಬಾರದ ಗೆಳತಿಯ ನೆನಪಿನಂತೆ. ತಂಗಾಳಿಗೆ ತೆಗೆದ ಕಿಟಕಿಯಂತೆ. ನೀನಿಲ್ಲದ ಖಾಲಿ ದಿನಗಳ ಸಂಪುಟದ ಸಣ್ಣ ಪುಟದಂತೆ. ಕುದುರೆಯ ಕರಪುಟದಂತೆ ಆಧುನಿಕತೆಗೆ ಪುಟ ತೆರೆದುಕೊಂಡವರಿಗೆ ಅಪ್ಪಟ ದೇಸಿ ಸಂಪುಟ. ಬೆಟ್ಟದ ಬೆರಗಿಗೆ ಪಸುರೊಡೆದ ಪುಟಾಣಿ ಹೂಕೋಸಿನಂತಹ ಹಳ್ಳಿ. ಆರು ತಿಂಗಳು ಕೆಲಸ ಆರು ತಿಂಗಳು ಸೂಟಿ!!

ಎಲ್ಲೆಲ್ಲಿಂದಲೋ ಬರುವ ಎಚ್‌ ಎಸ್‌ ಆರ್‌ ಟಿ ಸಿ ಬಸ್ಸುಗಳು ಅಪರಿಚತರಂತೆ ಹಾದು ಹೋಗುತ್ತವೆ. ಕೆಲವೊಮ್ಮೆ ಪರಿಚಿತರೂ ಅಪರಿಚಿತರಂತೆ! ಗೊತ್ತಿದ್ದೂ ಗೊತ್ತಿಲ್ಲದಂತೆ ಹಾದು ಹೋಗುವರು.  ಹರಿದ್ವಾರದ ಬಯಲಿನಿಂದ ಬೆಟ್ಟಕ್ಕೆ ಬರುವ ಎಚ್‌ ಎಸ್‌ ಆರ್‌ ಟಿ ಸಿ ಬಸ್ಸುಗಳಂತೆ. ನಿರುದ್ವಿಗ್ನ ನೀರವ ರಾತ್ರಿಗಳನ್ನು ಕಳೆಯುವ ಪಾಪದ ಚಾಲಕರು. ಇಲ್ಲಿ ಬಂದಿಳಿದಿದ್ದೇ ಸುಳ್ಳು ಎಂಬಂತೆ ಬೆಳಗಿನ ಚಳಿಗೆ ಎದ್ದು ಜಿಪ್ಸಾ ಮತ್ತು ಕಿಲಾಂಗ ಎಂಬ ಸ್ವರ್ಗಕ್ಕೆ ಹೊರಟು ಬಿಡುತ್ತಾರೆ. ಅವರ ಕೈ ಚೀಲದ ಗಾತ್ರವು ನಮ್ಮನ್ನು ಅಚ್ಚರಿಗೆ ತಳ್ಳುತ್ತವೆ!  ಅವರಿಗೆ ಈ ಲೋಕವೇ ಅಪರಿಚಿತ. ನಿರುದ್ವಿಗ್ನ! ರಸ್ತೆ ಮಾತ್ರ ಪರಿಚಿತ. ಏನೋ ಕಳೆದುಕೊಂಡು ಅರಸುವವರಂತೆ ಅಪರಿಚಿತ, ಅನೂಹ್ಯವಾಗಿ ಎಕ್ಸಲೇಟರ್‌ ಅದುಮುತ್ತಲೇ ಇರುತ್ತಾರೆ. ಮತ್ತೆ ಮತ್ತೆ ಈ ದಾರಿಗಳಲ್ಲಿ ಪಯಣಿಸಲು ಮನಸ್ಸು ಬಯಸುತ್ತಲೇ ಇರುತ್ತದೆ. ಯಾವುದೇ ಹೋಲಿಕೆಗೆ ನಿಲುಕದ ನಿರುದ್ವಿಗ್ನ ಹಳ್ಳಿ ಜಿಪ್ಸಾ. ಇಲ್ಲಿ ಬದುಕುವುದೇ ಇವರ ಸೌಭಾಗ್ಯ! ಎಲ್ಲವಿದ್ದು ಏನೋ ಕಳಕೊಂಡವರಂತೆ ಬದುಕುವ ನಾವು ಸೇಬಿನ ರಾಶಿಯ ಈರುಳ್ಳಿಯಂತೆ!

ಏಕಾಂತವೇ ಪರಮ ಸೌಭಾಗ್ಯ. ಹಿಮದ ದೀವಟಿಗೆಯಲಿ ಸೂರ್ಯ ಅಪ್ಪಟ ಕೆಂಡ. ಮಂಜಿನಲಿ ನೆನೆದ ಮನೆಗಳು ಸೂರ್ಯ ಬಂದಾಗ ನೆಟಿಗೆ ಮುರಿಯುತ್ತವೆ. ನಿಧಾನಕ್ಕೆ ಏಳುತ್ತವೆ. ಗದ್ದೆ ಬಯಲುಗಳಲಿ ಅಲೆವ ಜನ ಮಂಜಿಗೆ ಮುಖ ಒಡ್ಡಿ ಸೂರ್ಯ ಮಾಮನಿಗೆ ಶುಭೋದಯ ಹೇಳುತ್ತಾ ತಮ್ಮ ತಮ್ಮ ಕೆಲಸಕ್ಕೆ ತೆರಳುತ್ತಾರೆ. ತುಂಬಾ ಮಂಜು ಬೀಳುವಾಗ ಆಕಾಶಕ್ಕೆ ಮುಖ ಮಾಡಿ ನಕ್ಷತ್ರಗಳ ಎಣಿಸುತ್ತಾರೆ. ಕೇವಲ ಗಾಳಿ ಮಾತನಾಡುತ್ತದೆ. ಮನುಷ್ಯ ಮಾತು ಮರೆಯುತ್ತಾನೆ. ಕಾಫಿ ಕಪ್ಪಿನ ಸಾಂಗತ್ಯದೊಂದಿಗೆ ಸುಖಿಸುವ ಸಖನಂತೆ ಸೀಸು ಸದಾ ಶಾಂತವಾಗಿ ನಮ್ಮನ್ನು ಮತ್ತೆ ಮತ್ತೆ ಬರುವಂತೆ ವಿನಂತಿಸುತ್ತದೆ.

ಸೀಸು ಎಂಬ ಆಪ್ತ ಸಖಿ

ಇಲ್ಲಿನ ತಣ್ಣಗಿನ ಹಳದಿ ಬೆಳಕಿನಲ್ಲಿ ತಿಂಗಳುಗಟ್ಟಲೆ ಮಿಂದೇಳಬೇಕು. ಅಪರಿಚಿತ ಬಸ್ಸುಗಳಲ್ಲಿ ಸುಮ್ಮನೆ ಪಯಣಿಸಬೇಕು ಎಂದು ನಿಮಗನಿಸದೇ ಇದ್ದರೆ ಕೇಳಿ. ಜನಪದದ ಗುಂಗಿನೊಳಗೆ ಪದವಾಗಿ, ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಬೆರೆಯಬೇಕು. ನೀವೆಂದು ಬರುವಿರೆಂದು ನಿಮಗಾಗಿ ಕಾಯುತ್ತಲೇ ಇದೆ ಸೀಸು.

ಮಾತು ಮರೆತಂತ ಸುಖಭಾವ. ಅರ್ಧ ಬರೆದ ಕವನದಂತೆ. ಗಂಧರ್ವನ ಕನಸಿನಂತೆ ಎಲ್ಲವೂ ಇಲ್ಲಿ ಶಾಂತ. ಒನಕೆಯಂತೆ ಗಂಟೆಗೆ ಕೆಲವು ಕ್ಯೂಸೆಕ್‌ ನೀರನ್ನು ಬೇಜಾರಿಲ್ಲದೆ ಬೆಟ್ಟದಿಂದ ಭೂಮಿಗಿಳಿಸುವ ಭಗೀರಥನಂತೆ ಸದಾ ಸೀಸು ಜಲಧಾರೆ ಸುರಿಯುತ್ತಲೇ ಇರುವುದ ನೋಡುತ್ತಾ ಊರ ಜಗಲಿಯಿಂದ ಹೊರಬಿದ್ದೆ. ಮನಸ್ಸು ಇಲ್ಲಿನ ಗಾಳಿಗೆ ಪುಳಕಗೊಳ್ಳುತಲಿತ್ತು. ನಿನ್ನ ಕಣ್‌ ಬೆಳಕಿನ ಸಂತಸವನ್ನು ನನ್ನೊಡಲಿನಲ್ಲಿ ನಾ  ಮತ್ತೆ ತುಂಬಿಕೊಳ್ಳಲು ಒಂಟಿಯಾಗಿ ಇಲ್ಲಿಗೆ ಮತ್ತೆ ಬರಬೇಕು. ಹಿಮ ಚಾದರವ ಹೊದ್ದು ಮಲಗಬೇಕು ಎಂಬ ಬಯಕೆಯೊಂದಿಗೆ ಸೀಸುವಿಗೆ ಹಿಮದ ಕೈ ಬೀಸಿದೆ.

About The Author

ಶ್ರೀಧರ್‌ ಎಸ್.‌ ಸಿದ್ದಾಪುರ

ಶ್ರೀಧರ್‌ ಎಸ್.‌ ಸಿದ್ದಾಪುರ ವೃತ್ತಿಯಲ್ಲಿ ಶಿಕ್ಷಕರು. ತಿರುಗಾಟ, ಅನ್ವೇಷಣೆ ಒಂದು ಹುಚ್ಚು. ಬರಹ, ಓದು ಅಚ್ಚುಮೆಚ್ಚು. ಹಕ್ಕಿ, ಜೇಡಗಳಲ್ಲಿ ವಿಶೇಷ ಆಸಕ್ತಿ.  “ಅಲೆಮಾರಿಯ ಅಂತರಂಗ” ಇಪ್ಪತ್ತು ವರ್ಷದ ಅಲೆದಾಟ, ಅನುಭವಗಳ ಪ್ರವಾಸ ಕಥನ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ