ಉತ್ತರ ಕೊರಿಯಾದಲ್ಲಿ ಕಲೆ, ಸಂಸ್ಕೃತಿ ಇವೆಲ್ಲವೂ ಕೂಡಾ ಬೆಳವಣಿಗೆ ಕಾಣುತ್ತಿರುವುದು ರಾಷ್ಟ್ರೀಯತೆಯ ಹೆಸರಿನಲ್ಲಿ. ಎಲ್ಲಾ ರೀತಿಯ ಕಲಾಕೃತಿಗಳ, ಪ್ರದರ್ಶನ ಕಲೆಗಳ ಅಂತಿಮ ಉದ್ದೇಶ ರಾಷ್ಟ್ರದ ಪ್ರಗತಿ ಮತ್ತು ರಾಷ್ಟ್ರಕ್ಕೆ ಸಾಂಸ್ಕೃತಿಕ ಅಸ್ಮಿತೆಯನ್ನು ಒದಗಿಸಿಕೊಡುವುದು ಎಂಬ ಭಾವನೆಯನ್ನು ಬಲವಾಗಿ ರೂಪಿಸಲಾಗುತ್ತಿದೆ. ಉತ್ತರ ಕೊರಿಯಾದ ಪ್ರಮುಖ ಶಿಲ್ಪಕಲಾಕೃತಿಗಳು ಯಾವುವು ಎಂದು ಗಮನಹರಿಸಿದಾಗ ಕಿಮ್ ಇಲ್ ಸುಂಗ್ ಅವರ ಪ್ರತಿಮೆಗಳು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತವೆ. ಈ ಕಿಮ್ ಇಲ್ ಸುಂಗ್ ಅವರು ಈಗಿನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಅಜ್ಜ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಉತ್ತರ ಕೊರಿಯಾದ ಸ್ಥಿತಿ-ಗತಿಗಳ ಕುರಿತ ಬರಹ ನಿಮ್ಮ ಓದಿಗೆ

ಪ್ರಪಂಚ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದುವರಿಯುತ್ತಿದೆ. ಹಿಂದಿನ ಕಾಲದ ಕಟ್ಟುಪಾಡುಗಳನ್ನು ಕಳಚಿಕೊಂಡು, ಎಲ್ಲಾ ಬಗೆಯ ಸಂಕೋಲೆಗಳಿಂದ ಮುಕ್ತವಾಗಿ ನವಸಮಾಜವನ್ನು ರೂಪಿಸುವುದರ ಕಡೆಗೆ ಚಲಿಸುತ್ತಿದೆ. ವಾಸ್ತವವಾಗಿ ಮನುಷ್ಯ ಸಮಾಜದ ಗತಿ ಇರಬೇಕಾದದ್ದೇ ಹೀಗೆ. ಕತ್ತಲಿನಿಂದ ಬೆಳಕಿನ ಕಡೆಗಿನ ಚಲನೆಯಾಗಿದ್ದರೆ ಮಾತ್ರ ವ್ಯಕ್ತಿಗೆ ಮತ್ತು ಸಮಾಜಕ್ಕೆ ಒಳಿತು. ಆದರೆ ಕೆಲವು ಸ್ವಾರ್ಥಪರ ವ್ಯಕ್ತಿಗಳು ಮಾನವ ಸಮಾಜವನ್ನು ಕತ್ತಲಿನಿಂದ ಕಗ್ಗತ್ತಲಿಗೆ ತಳ್ಳುವ ಪ್ರಯತ್ನ ನಡೆಸುತ್ತಿರುತ್ತಾರೆ. ಅಂತಹ ಮನೋಪ್ರವೃತ್ತಿಯು ಹುಟ್ಟುಹಾಕಿದ ಭೀಕರತೆಗಳಲ್ಲಿ ಸರ್ವಾಧಿಕಾರಿ ಆಳ್ವಿಕೆ ಎನ್ನುವುದೂ ಒಂದು. ಆಧುನಿಕ ಕಾಲಘಟ್ಟದಲ್ಲಿ ಇಂತಹ ಸರ್ವಾಧಿಕಾರ ಧೋರಣೆಯ ಬಹುತೇಕ ಆಡಳಿತಗಾರರು ದುರಂತವನ್ನು ಕಂಡಿದ್ದಾರೆ. ಆದರೆ ಸಂಪೂರ್ಣವಾಗಿ ನಶಿಸಿಹೋಗಿಲ್ಲ. ವಿವಿಧ ರೂಪಗಳಲ್ಲಿ ಸರ್ವಾಧಿಕಾರ ಎನ್ನುವುದು ಮರುಹುಟ್ಟು ಪಡೆಯುತ್ತಲೇ ಇದೆ. ಇನ್ನೂ ಸರ್ವಾಧಿಕಾರದ ಬೀಭತ್ಸ ಪರಂಪರೆಯನ್ನು ಹಾಗೆಯೇ ಉಳಿಸಿಕೊಂಡಿರುವ ದೇಶವಾಗಿ ಉತ್ತರ ಕೊರಿಯಾವನ್ನು ಗುರುತಿಸಬಹುದು.

ಉತ್ತರ ಕೊರಿಯಾ ಎಂಬ ರಾಷ್ಟ್ರ ಉದಯವಾದಾಗಿನಿಂದಲೂ ಸಹ ಅದನ್ನು ಒಂದೇ ಕುಟುಂಬ ಆಳುತ್ತಿದೆ. ದೇಶವು ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ ಎಂಬ ಅಧಿಕೃತ ಹೆಸರನ್ನು ಹೊಂದಿದೆ. ಹೆಸರಿನಲ್ಲಿರುವ ಡೆಮಾಕ್ರಟಿಕ್, ಅಂದರೆ ಪ್ರಜಾಸತ್ತಾತ್ಮಕ ಎನ್ನುವ ಪರಿಕಲ್ಪನೆ ಇದುವರೆಗಿನ ಆಡಳಿತದಲ್ಲೆಲ್ಲೂ ಕಂಡುಬಂದಿಲ್ಲ. ಮೊದಲ ಅಧ್ಯಕ್ಷ ಕಿಮ್ ಇಲ್ ಸುಂಗ್ ಅವರು ಮಹಾನ್ ನಾಯಕ ಎಂಬ ಬಿರುದು ಗಳಿಸಿದರೆ, ಅವರ ಮಗ ಕಿಮ್ ಜಾಂಗ್ ಇಲ್ ಆತ್ಮೀಯ ನಾಯಕ ಎಂಬ ಬಿರುದಿಗೆ ಪಾತ್ರರಾದರು. ಮೊಮ್ಮಗ ಕಿಮ್ ಜಾಂಗ್ ಉನ್ ಇವರಿಬ್ಬರನ್ನೂ ಮೀರಿನಿಂತವರಂತೆ ಸರ್ವೋಚ್ಚ ನಾಯಕ ಎಂಬ ಬಿರುದನ್ನು ಅಧಿಕಾರಕ್ಕೆ ಬಂದ ಕ್ಷಣದಲ್ಲೇ ತಲೆಮೇಲೆ ಹೊತ್ತುನಿಂತರು. ಆದರೆ ಈ ಬಿರುದುಗಳಿಗೆ ಸರಿಯಾಗಿ ಈ ಮೂವರೂ ಆಳ್ವಿಕೆ ನಡೆಸಲಿಲ್ಲ ಎನ್ನುವುದು ವಾಸ್ತವ. ಉತ್ತರ ಕೊರಿಯಾದ ಕ್ಯಾಲೆಂಡರ್ ಸಹ ಕಿಮ್ ರಾಜವಂಶದ ಆರಾಧನೆಯ ಆಧಾರದಲ್ಲಿಯೇ ರಚಿತವಾಗಿದೆ. ಉತ್ತರ ಕೊರಿಯಾ ತನ್ನದೇ ಆದ ಪ್ರತ್ಯೇಕ ಕ್ಯಾಲೆಂಡರ್ ಹೊಂದಿದೆ. ಪ್ರಪಂಚದ ಬಹುತೇಕ ರಾಷ್ಟ್ರಗಳು ಏಸುಕ್ರಿಸ್ತನ ಜನನವನ್ನು ಆಧರಿಸಿ ಕಾಲಗಣನೆ ನಡೆಸುವ ಕ್ಯಾಲೆಂಡರ್ ಹೊಂದಿವೆ. ಆದರೆ ಉತ್ತರ ಕೊರಿಯಾದ ಕ್ಯಾಲೆಂಡರ್ ರೂಪುಗೊಂಡಿರುವುದು ಅಲ್ಲಿಯ ಪ್ರಥಮ ಅಧ್ಯಕ್ಷ ಕಿಮ್ ಇಲ್ ಸುಂಗ್ ಅವರ ಜನ್ಮದಿನವನ್ನು ಆಧರಿಸಿಕೊಂಡು. ಈ ಕ್ಯಾಲೆಂಡರಿನ ಮೊದಲ ವರ್ಷ ಆರಂಭ ಆಗಿರುವುದು 1912ರಲ್ಲಿ. ಇದು ಕಿಮ್ ಇಲ್ ಸುಂಗ್ ಅವರು ಹುಟ್ಟಿದ ವರ್ಷ. ಉತ್ತರ ಕೊರಿಯಾದಲ್ಲಿ ಎಲ್ಲರಿಗೂ ಇಂಟರ್ನೆಟ್ ಬಳಸುವ ಅವಕಾಶವಿಲ್ಲ. ಒಂದೆರಡು ಸಾವಿರ ಗಣ್ಯರಿಗೆ ಮಾತ್ರವೇ ಇಂಟರ್‌ನೆಟ್ ಸೇವೆ ಪಡೆಯಲು ಅವಕಾಶವಿದೆ. ಹೀಗೆ ಸೇವೆ ಪಡೆಯುವವರು ಯಾರು ಎನ್ನುವುದನ್ನು ನಿರ್ಧರಿಸುವುದೂ ಸಹ ಸರ್ಕಾರವೇ. ಅಧ್ಯಯನ ನಡೆಸುವ ಕೆಲವರಿಗೆ ಇಂಟ್ರಾನೆಟ್ ಬಳಕೆಗೆ ಅವಕಾಶವಿದೆ. ಇಂಟ್ರಾನೆಟ್ ಎಂದರೆ ದೇಶದೊಳಗೆ ಮಾತ್ರ ಇರುವ ನೆಟ್‌ವರ್ಕ್. ಇದರಲ್ಲಿ ಕೆಲವು ವೆಬ್‌ಸೈಟ್‌ಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಹೀಗೆ ಇಂಟರ್‌ನೆಟ್ ಮತ್ತು ಇಂಟ್ರಾನೆಟ್ ಸೇವೆ ಪಡೆಯುವವರು ಉನ್ನತ ಹುದ್ದೆಯಲ್ಲಿರುತ್ತಾರೆ. ಬೇರೆ ದೇಶಗಳ ಬಗ್ಗೆ ತಿಳಿದುಕೊಂಡ ನಂತರ ಅವರು ಉತ್ತರ ಕೊರಿಯಾದಿಂದ ಪಲಾಯನ ಮಾಡಿದರೆ ಎಂಬ ದೂರಾಲೋಚನೆಯಿಂದ ಅತ್ಯಧಿಕ ಸಂಬಳ ಮತ್ತು ಸೌಲಭ್ಯಗಳನ್ನು ಅವರಿಗೆ ನೀಡಲಾಗಿರುತ್ತದೆ.

ಮೊದಲಿನಿಂದಲೂ ಮಿಲಿಟರಿ ವ್ಯವಸ್ಥೆಗೆ ಅತಿಯಾದ ಪ್ರಾಮುಖ್ಯತೆಯನ್ನು ಕೊಡುತ್ತಲೇ ಬಂದಿದೆ ಉತ್ತರ ಕೊರಿಯಾ. ಸೋಗುನ್ ಹೆಸರಿನ ಮಿಲಿಟರಿ ನೀತಿಯನ್ನು ಈ ದೇಶ ಪಾಲಿಸುತ್ತಿದೆ. ವಿಶ್ವದ ನಾಲ್ಕನೇ ಅತೀ ದೊಡ್ಡ ಸೈನ್ಯ ಉತ್ತರ ಕೊರಿಯಾದ್ದಾಗಿದೆ. ಸುಮಾರು 1.21 ಮಿಲಿಯನ್ ಸೈನಿಕರು ಈ ಸೈನ್ಯದಲ್ಲಿದ್ದಾರೆ. ಅಂದರೆ, ದೇಶದ ಒಟ್ಟು ಜನಸಂಖ್ಯೆಯಲ್ಲಿ 4.7 ಶೇಕಡಾ ಜನರು ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಲವಂತವಾಗಿ ನಾಗರಿಕರನ್ನು ಸೇನೆಗೆ ಸೇರಿಸುವ ಪ್ರವೃತ್ತಿಯೂ ಇದೆ. ಪುರುಷರಿಗೆ ಮಿಲಿಟರಿ ಸೇವೆಯು ಕಡ್ಡಾಯವಾಗಿದೆ. ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕರು ಅಲ್ಲಿನ ಜನರ ಮೇಲೆ ಬೇರೆ ಬೇರೆ ನಿರ್ಬಂಧಗಳನ್ನು ಹೇರಿದ್ದಾರೆ. ಆದರೆ ಅವರು ಯಾವುದೇ ಬಗೆಯ ನಿಯಂತ್ರಣಗಳಿಗೂ ಒಳಗಾಗದೆ ಅದ್ಧೂರಿ ಜೀವನವನ್ನು ನಡೆಸುತ್ತಿದ್ದಾರೆ. ಹಿಂದಿನ ಸರ್ವಾಧಿಕಾರಿ ಕಿಮ್ ಜಾಂಗ್ ಇಲ್ ಅವರಿಗೆ ಐಷಾರಾಮಿ ವಸ್ತುಗಳ ಮೇಲೆ ಅತಿಯಾದ ವ್ಯಾಮೋಹವಿತ್ತು. ಇದಕ್ಕಾಗಿಯೇ ಪ್ರತೀ ವರ್ಷ 300 ಮಿಲಿಯನ್ ಡಾಲರ್ ಖರ್ಚು ಮಾಡುತ್ತಿದ್ದರು. ಈಗಿನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಜೀವನಶೈಲಿ ಇನ್ನಷ್ಟು ಅದ್ಧೂರಿಯಾಗಿದೆ. ಐಷಾರಾಮಿ ವಸ್ತುಗಳನ್ನು ಕೊಂಡುಕೊಳ್ಳಲು ಇವರು ವ್ಯಯಿಸುವ ಹಣ ವರ್ಷಕ್ಕೆ 600 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚು.

1948ರಲ್ಲಿ ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ ಸ್ಥಾಪನೆಯಾಯಿತು. ಈ ಸಂದರ್ಭದಲ್ಲಿ ಕಿಮ್ ಇಲ್ ಸುಂಗ್ ಉತ್ತರ ಕೊರಿಯಾದ ಮೊದಲ ಪ್ರಧಾನ ಮಂತ್ರಿಯಾದರು. 1949ರಲ್ಲಿ ಅವರು ಕೊರಿಯನ್ ವರ್ಕರ್ಸ್ ಪಾರ್ಟಿಯ ಅಧ್ಯಕ್ಷರಾದರು. ಪ್ರಧಾನಮಂತ್ರಿ ಹುದ್ದೆ ಅಧ್ಯಕ್ಷ ಹುದ್ದೆಯಾಗಿ ಬದಲಾಯಿತು. 1994ರಲ್ಲಿ ಅವರು ಮರಣ ಹೊಂದುವವರೆಗೂ ಪಕ್ಷ ಮತ್ತು ದೇಶ ಸಂಪೂರ್ಣವಾಗಿ ಅವರ ಹಿಡಿತದಲ್ಲಿತ್ತು. ನಲುವತ್ತಾರು ವರ್ಷಗಳ ಸುದೀರ್ಘ ಅವಧಿಯಲ್ಲಿ ದೇಶ ಹಲವು ಸಮಸ್ಯೆಗಳನ್ನು ಎದುರಿಸಿತು. ಈ ಸಂದರ್ಭದಲ್ಲಿ ಕಿಮ್ ಇಲ್ ಸುಂಗ್ ನೇತೃತ್ವದ ಸರ್ಕಾರ ಜನರ ಪರವಾಗಿರದೆ ಅವರನ್ನು ಮತ್ತಷ್ಟು ಶೋಷಿಸುವ ಪ್ರವೃತ್ತಿಯನ್ನು ತೋರಿತು. ತಾನು ಅಧಿಕಾರದಲ್ಲಿದ್ದಾಗಲೇ ತನ್ನ ಮಗ ಕಿಮ್ ಜಾಂಗ್ ಇಲ್ ಅವರಿಗೆ ಆಡಳಿತಾತ್ಮಕ ಹುದ್ದೆಗಳನ್ನು ಒದಗಿಸಿಕೊಟ್ಟ ಕಿಮ್ ಇಲ್ ಸುಂಗ್ ಆ ಮೂಲಕ ತನ್ನ ಮಗನೇ ತನ್ನ ನಂತರ ಉತ್ತರ ಕೊರಿಯಾದ ಅಧ್ಯಕ್ಷನಾಗುವಂತೆ ನೋಡಿಕೊಂಡರು. ಆದರೂ ಸಹ ಅವರ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳಲಿಲ್ಲ. ಇದಕ್ಕೆ ಪ್ರಮುಖ ಕಾರಣ, ವ್ಯಕ್ತಿ ಆರಾಧನೆಯ ಮೂಲಕ ಅವರೊಬ್ಬ ಅಪ್ರತಿಮ ನಾಯಕ ಎಂಬ ಭಾವನೆ ಕೊರಿಯಾದ ಜನರಲ್ಲಿ ಬೇರೂರುವಂತೆ ಮಾಡಲಾಗಿತ್ತು.

ಈಗ ಅಧಿಕಾರದಲ್ಲಿರುವ ಕಿಮ್ ಜಾಂಗ್ ಉನ್ ಅವರು ತಾನೊಬ್ಬ ಸಮರ್ಥ ಉತ್ತರಾಧಿಕಾರಿ ಎನ್ನುವುದನ್ನು ನಿರೂಪಿಸಿಕೊಂಡದ್ದೇ ತನ್ನ ಆಕ್ರಮಣಕಾರಿ ಮನೋಧರ್ಮದ ಮೂಲಕ. 2009ರ ವೇಳೆಗೆ ಕ್ಷಿಪಣಿ ಉಡ್ಡಯನ ಮತ್ತು ಪರಮಾಣು ಪರೀಕ್ಷೆ ನಡೆಸುವ ಮೂಲಕ ತಂದೆ ಕಿಮ್ ಜಾಂಗ್ ಇಲ್ ಬಳಿಕ ತಾನೇ ಪಟ್ಟಕ್ಕೇರಲು ಅರ್ಹ ಎನ್ನುವುದನ್ನು ಸಾಬೀತುಪಡಿಸಿಕೊಂಡಿದ್ದ ವಿಚಿತ್ರ ವ್ಯಕ್ತಿ ಕಿಮ್ ಜಾಂಗ್ ಉನ್. 2011ರಲ್ಲಿ ಕಿಮ್ ಜಾಂಗ್ ಇಲ್ ಅವರ ಮರಣದ ನಂತರ ಕಿಮ್ ಜಾಂಗ್ ಉನ್ ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಎನಿಸಿಕೊಂಡ. ಅಧಿಕಾರಕ್ಕೇರಿದ ಹೊಸದರಲ್ಲಿ ಕಿಮ್ ಜಾಂಗ್ ಉನ್ ಆಡಳಿತಾಧಿಕಾರಿಗಳ ಜೊತೆಗೆ ಸ್ನೇಹಮಯವಾಗಿಯೇ ವರ್ತಿಸತೊಡಗಿದ್ದರು. ಹಿಂದಿನ ಇಬ್ಬರು ಅಧ್ಯಕ್ಷರಿಗಿಂತ ಆಡಳಿತ ಭಿನ್ನವಾಗಿರುತ್ತದೆ. ದೇಶ ಪ್ರಗತಿ ಸಾಧಿಸುತ್ತದೆ ಎಂಬ ಭರವಸೆ ಉತ್ತರ ಕೊರಿಯಾ ಜನರಲ್ಲಿ ಮೂಡಿತ್ತು. ಆದರೆ ಕಿಮ್ ಜಾಂಗ್ ಉನ್ ಗಮನ ಕೊಟ್ಟದ್ದು ತನ್ನ ಸಿಂಹಾಸನ ಗಟ್ಟಿ ಮಾಡುವುದರ ಕಡೆಗೆ. ತನ್ನ ತಂದೆಯ ಕೈಕೆಳಗೆ ದುಡಿದು ಪ್ರಭಾವಶಾಲಿಯಾಗಿದ್ದವರಿಂದ ಅಧಿಕಾರವನ್ನು ಕಿತ್ತುಕೊಂಡು, ಹೊಸಬರಿಗೆ ಜವಾಬ್ದಾರಿ ನೀಡಿದ. ಯಾರು ತನ್ನ ನಡೆಯನ್ನು ಪ್ರಶ್ನಿಸುತ್ತಾರೋ ಅವರನ್ನು ಗಲ್ಲಿಗೇರಿಸಿದ. ಉತ್ತರ ಕೊರಿಯಾದ ಜನರ ತೀರಾ ಖಾಸಗಿ ವಿಚಾರಗಳ ಕುರಿತ ನಿರ್ಧಾರಗಳನ್ನೂ ಸಹ ಸರ್ಕಾರವೇ ತೆಗೆದುಕೊಳ್ಳತೊಡಗಿತು. ಮಿಲಿಟರಿ ಅಧಿಕಾರವನ್ನು ಸಂಪೂರ್ಣವಾಗಿ ತನ್ನ ಕೈಗೆ ತೆಗೆದುಕೊಂಡ ಕಿಮ್ ಜಾಂಗ್ ಉನ್.

ಉತ್ತರ ಕೊರಿಯಾದ ಯುದ್ಧದಾಹವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಮೇರಿಕಾ ಪ್ರಯತ್ನ ತೀವ್ರಗೊಳಿಸಿದ್ದು ಕಿಮ್ ಜಾಂಗ್ ಉನ್ ಅವರ ಅವಧಿಯಲ್ಲಿ. 2012ರ ಫೆಬ್ರವರಿಯಲ್ಲಿ ಎರಡು ದೇಶಗಳ ಮಧ್ಯೆ ಈ ಬಗೆಯ ಮಾತುಕತೆ ನಡೆಯಿತು. ಇದಾಗಿ ಎರಡು ತಿಂಗಳು ಕಳೆಯುವ ಮೊದಲೇ ಮಾತುಕತೆಯಲ್ಲಾದ ನಿರ್ಣಯವನ್ನು ಉಲ್ಲಂಘಿಸಿ ಉತ್ತರ ಕೊರಿಯಾ ರಾಕೆಟ್ ಉಡಾವಣೆಯ ಪರೀಕ್ಷೆ ನಡೆಸಿತು. ಇದು ಉತ್ತರ ಕೊರಿಯಾದ ವಿಧ್ವಂಸಕ ನಡೆಯಾಗಿತ್ತು. ಇದೊಂದು ಉದಾಹರಣೆ ಮಾತ್ರ. ಈ ಬಗೆಯ ಅನೇಕ ನಂಬಿಕೆದ್ರೋಹದ ಕೃತ್ಯಗಳನ್ನು ಎಸಗುತ್ತಲೇ ಇದೆ ಉತ್ತರ ಕೊರಿಯಾ. ಬೇರೆ ರಾಷ್ಟ್ರಗಳ ವಿರೋಧದ ಹೊರತಾಗಿಯೂ 2016ರಲ್ಲಿ ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿದ್ದಾನೆ ಕಿಮ್ ಜಾಂಗ್ ಉನ್. ಈ ಬಗೆಯ ಕೃತ್ಯಗಳನ್ನು ನಡೆಸದಂತೆ ಕಿಮ್ ಜಾಂಗ್ ಉನ್ ಮನವೊಲಿಸುವಂತೆ ಅಂತಾರಾಷ್ಟ್ರೀಯ ನಾಯಕರು ಚೀನಾವನ್ನು ಕೇಳಿಕೊಂಡಿದ್ದರು. ಇದೇ ಸಮಯದಲ್ಲಿ ಕಿಮ್ ಜಾಂಗ್ ಉನ್‌ನಿಂದ ಬೆದರಿಕೆಗೊಳಗಾಗಿದ್ದ ಅವನ ಮಲ ಸಹೋದರ ಚೀನಾದ ರಕ್ಷಣೆಯಲ್ಲಿದ್ದ. ಇವನನ್ನು ಕಿಮ್ ಜಾಂಗ್ ಉನ್ ಸೂಚನೆಯಂತೆ ಕುತಂತ್ರದಿಂದ ಕೊಲ್ಲಿಸಲಾಯಿತು. ಇದು ಚೀನಾವನ್ನು ಕೆರಳಿಸಿದ್ದರಿಂದಾಗಿ ಸಾಂಪ್ರದಾಯಿಕ ಮಿತ್ರರಾಷ್ಟ್ರಗಳು ಈಗ ಬೇರೆ ಬೇರೆಯಾಗಿವೆ. 2017ರಲ್ಲಿ ಮತ್ತೆ ಕ್ಷಿಪಣಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ ತನ್ನ ಕ್ಷಿಪಣಿ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ಅದರ ಬಳಿಯಿರುವ ಖಂಡಾಂತರ ಕ್ಷಿಪಣಿಗಳ ಶಕ್ತಿ ಬೆರಗು ಮೂಡಿಸುವಂತಿದೆ. ಈ ಕ್ಷಿಪಣಿಗಳ ಅಂದಾಜು ವ್ಯಾಪ್ತಿ ಎಂಟು ಸಾವಿರ ಕಿಲೋಮೀಟರ್‌ಗಳು. ಅಷ್ಟು ದೂರಕ್ಕೆ ಅಪ್ಪಳಿಸಿ ಶತ್ರುಗಳೆನಿಸಿಕೊಂಡವರನ್ನು ನಾಶಮಾಡುವ ಸಾಮರ್ಥ್ಯ ಈ ಕ್ಷಿಪಣಿಗಳಿಗಿದೆ.

 

ಜೂಚೆ ಎನ್ನುವ ವಿಶಿಷ್ಟ ರಾಜ್ಯ ಸಿದ್ಧಾಂತವನ್ನು ಅಳವಡಿಸಿಕೊಂಡಿದೆ ಉತ್ತರ ಕೊರಿಯಾ. ಸ್ವಾವಲಂಬನೆ ಎನ್ನುವುದು ಜೂಚೆ ಪದದ ಅರ್ಥ. ಕಿಮ್ ಉಲ್ ಸುಂಗ್ ಮತ್ತು ಅವರ ಉತ್ತರಾಧಿಕಾರಿಗಳು ಯಾವ ರೀತಿಯಲ್ಲಿ ಆಳ್ವಿಕೆ ನಡೆಸಿದರೂ ಅದು ಅಲ್ಲಿಯ ಜನರ ಪಾಲಿಗೆ ನ್ಯಾಯಸಮ್ಮತವಾಗಿ ತೋರುತ್ತಿರುವುದು ಜೂಚೆ ರಾಜ್ಯಧರ್ಮದ ಪಾಲನೆಯಿಂದ. ಈ ಸಿದ್ಧಾಂತವನ್ನು ರೂಪಿಸಿದ್ದು ಉತ್ತರ ಕೊರಿಯಾದ ಮೊದಲ ಅಧ್ಯಕ್ಷ ಕಿಮ್ ಇಲ್ ಸುಂಗ್. ಜಪಾನ್ ಆಕ್ರಮಣದ ನಂತರದ ವರ್ಷಗಳಲ್ಲಿ ಉತ್ತರ ಕೊರಿಯಾವು ಉಳಿದ ರಾಷ್ಟ್ರಗಳಿಂದ ಪ್ರತ್ಯೇಕವಾದಾಗ ಅವರು ರೂಪಿಸಿದ ಸಿದ್ಧಾಂತ ಇದಾಗಿದೆ. ಬೇರೆ ಯಾವ ರಾಷ್ಟ್ರಗಳ ಅವಲಂಬನೆಗೂ ಒಳಗಾಗದೆ ಸ್ವಾತಂತ್ರ್ಯ, ಸ್ವಾವಲಂಬನೆ ಮತ್ತು ಸ್ವ-ರಕ್ಷಣೆಯಿಂದ ಬದುಕುವ ಜೀವನಶೈಲಿಯನ್ನು ಈ ಸಿದ್ಧಾಂತ ತಿಳಿಸಿಕೊಡುತ್ತದೆ. ಸಿದ್ಧಾಂತ, ಆರ್ಥಿಕತೆ, ಮಿಲಿಟರಿ ಈ ಮೂರು ವಿಚಾರಗಳಲ್ಲಿಯೂ ಸ್ವಾತಂತ್ರ್ಯವನ್ನು ಹೊಂದಿರಬೇಕು ಎನ್ನುವ ಬಲವಾದ ಪ್ರತಿಪಾದನೆ ಜೂಚೆ ಸಿದ್ಧಾಂತದಲ್ಲಿದೆ. ಈ ಮೂಲಕ ಉಗ್ರ ರಾಷ್ಟ್ರೀಯತೆಯನ್ನು ಪೋಷಿಸುವ ಸಿದ್ಧಾಂತ ಕಿಮ್ ರಾಜವಂಶಕ್ಕೆ ಜನರು ಯಾವತ್ತೂ ನಿಷ್ಠರಾಗಿರಬೇಕೆಂದು ಸೂಚಿಸುತ್ತದೆ. ಹೊರಗಿನ ಜಗತ್ತು ಕೊರಿಯಾದ ಸಂಸ್ಕೃತಿಗೆ ವಿರುದ್ಧವಾಗಿದೆ. ದಕ್ಷಿಣ ಕೊರಿಯಾ ಇಂತಹ ಭ್ರಷ್ಟ ರಾಷ್ಟ್ರಗಳ ಕೈಗೊಂಬೆಯಾಗಿದೆ. ಉತ್ತರ ಕೊರಿಯಾದ ಸ್ವಾತಂತ್ರ್ಯವನ್ನು ರಕ್ಷಿಸುವ ಸಾಮರ್ಥ್ಯ ಇದ್ದರೆ ಅದು ಕಿಮ್ ರಾಜವಂಶಕ್ಕೆ ಮಾತ್ರ ಮೊದಲಾದ ಕಲ್ಪನೆಗಳನ್ನು ಹುಟ್ಟುಹಾಕಿ ಜನರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗಿದೆ.

ಉತ್ತರ ಕೊರಿಯಾದ ಆಕ್ರಮಣಕಾರಿ ಧೋರಣೆಗಳಿಂದಾಗಿ ಅದರ ಅಂತಾರಾಷ್ಟ್ರೀಯ ಸಂಬಂಧಗಳು ಹದಗೆಟ್ಟಿದೆ. ಪ್ರಪಂಚದ ಉಳಿದ ದೇಶಗಳು ಉತ್ತರ ಕೊರಿಯಾವನ್ನು ಪ್ರತ್ಯೇಕವಾಗಿರಿಸಿವೆ. ದೇಶದೊಳಗೆ ಮತ್ತು ಹೊರಗೆ ಮುಕ್ತವಾಗಿ ಓಡಾಡುವ ಸ್ವಾತಂತ್ರ್ಯ ಅಲ್ಲಿನ ಜನರಿಗಿಲ್ಲ. ಪ್ರಪಂಚದ ಎಲ್ಲಾ ದೇಶಗಳ ಜನರು ವೀಸಾವನ್ನು ಪಡೆದೇ ಉತ್ತರ ಕೊರಿಯಾಕ್ಕೆ ತೆರಳಬೇಕಾಗುತ್ತದೆ. ಆದರೆ ಎರಡು ದೇಶಗಳಿಗೆ ಮಾತ್ರ ಈ ನಿಯಮದಿಂದ ವಿನಾಯಿತಿ ಇದೆ. ಮಲೇಷಿಯಾ ಮತ್ತು ಸಿಂಗಾಪುರದ ನಾಗರಿಕರಾಗಿರುವವರು ವೀಸಾ ನೀಡಬೇಕೆಂದು ಉತ್ತರ ಕೊರಿಯಾ ಸರ್ಕಾರವನ್ನು ಮನವಿ ಮಾಡಿಕೊಳ್ಳಬೇಕಿಲ್ಲ. ಉತ್ತರ ಕೊರಿಯಾ ಸ್ವಲ್ಪಮಟ್ಟಿಗಾದರೂ ರಾಜತಾಂತ್ರಿಕ ಸಂಬಂಧವನ್ನು ಬೆಳೆಸಿದ್ದು ಚೀನಾ ಮತ್ತು ಸೋವಿಯತ್ ಒಕ್ಕೂಟಗಳ ಜೊತೆಗೆ ಮಾತ್ರ. ಅಮೇರಿಕಾದ ವಿರುದ್ಧ ಹಲ್ಲು ಮಸೆಯುತ್ತಲೇ ಬಂದಿದೆ. 1990ರ ದಶಕದಲ್ಲಿ ಸೋವಿಯತ್ ಒಕ್ಕೂಟಗಳಲ್ಲಿ ಕಮ್ಯೂನಿಷ್ಟ್ ಸಿದ್ಧಾಂತ ತಳಕಚ್ಚಿದ ನಂತರ ಚೀನಾ ಮಾತ್ರ ಉತ್ತರ ಕೊರಿಯಾದ ಪಾಲಿಗೆ ಮಿತ್ರರಾಷ್ಟ್ರವಾಗಿ ಉಳಿದುಕೊಂಡಿತು. ಆದರೆ ಯಾವಾಗ ಚೀನಾ ದಕ್ಷಿಣ ಕೊರಿಯಾ ಕಡೆಗೆ ಸ್ನೇಹಹಸ್ತ ಚಾಚಿತೋ ಆಗ ಉತ್ತರ ಕೊರಿಯಾ ಚೀನಾದ ಜೊತೆಗಿನ ಸೌಹಾರ್ದಯುತ ಸಂಬಂಧವನ್ನು ತ್ಯಜಿಸಿದೆ.

ಕಿಮ್ ಜಾಂಗ್ ಇಲ್ ಅವರ ಆಡಳಿತಾವಧಿಯಲ್ಲಿ ಬೇರೆ ರಾಷ್ಟ್ರಗಳ ಜೊತೆಗೆ ಸಂಬಂಧವನ್ನು ಉತ್ತಮಪಡಿಸುವ ಪ್ರಯತ್ನ ನಡೆದಿದೆ. ಆ ರಾಷ್ಟ್ರಗಳು ಉತ್ತರ ಕೊರಿಯಾದಿಂದ ಕೆಲವು ವಿಚಾರಗಳನ್ನು ಅಪೇಕ್ಷಿಸಿದ್ದವು. ಮಾನವ ಹಕ್ಕುಗಳ ಪಾಲನೆ, ಶಾಂತಿಯನ್ನು ಕಾಯ್ದುಕೊಳ್ಳುವುದು ಮೊದಲಾದವು ಪ್ರಮುಖ ಅಪೇಕ್ಷೆಗಳಾಗಿದ್ದವು. ಉತ್ತರ ಕೊರಿಯಾ ಈ ನೆಲೆಯಲ್ಲಿ ಒಳ್ಳೆಯ ಪ್ರತಿಕ್ರಿಯೆ ಕೊಟ್ಟಿಲ್ಲ. ಇದರಿಂದಾಗಿ ಅಂತಾರಾಷ್ಟ್ರೀಯ ಸಂಬಂಧ ವೃದ್ಧಿಗೊಳ್ಳಲಿಲ್ಲ. ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳ ಮಧ್ಯೆ ಸಂಬಂಧ ಹದಗೆಡುವ ಅನೇಕ ವಿದ್ಯಮಾನಗಳು ನಡೆದಿವೆ. ಒಂದು ರಾಷ್ಟ್ರವೆಂಬ ಗೌರವದ ಚೌಕಟ್ಟಿನಿಂದ ಹೊರಬಂದು, ಲಜ್ಜೆಗೇಡಿತನ ತೋರಿದೆ ಉತ್ತರ ಕೊರಿಯಾ. ಉತ್ತರ ಕೊರಿಯಾ ಪರಮಾಣು ಶಸ್ತ್ರಾಸ್ತ್ರಗಳ ವಿಚಾರದಲ್ಲಿ ತೋರುತ್ತಲೇ ಇರುವ ಅತಿಯಾದ ಉತ್ಸುಕತೆಯಿಂದಾಗಿ ದಕ್ಷಿಣ ಕೊರಿಯಾ ಪ್ರತ್ಯೇಕವಾಗಿದೆ. ದಕ್ಷಿಣ ಕೊರಿಯಾ ಶಾಂತಿಯುತವಾಗಿ ವರ್ತಿಸಿದರೂ ಸಹ ಉತ್ತರ ಕೊರಿಯಾದ ಆಕ್ರಮಣಶೀಲತೆಯನ್ನು ಬಿಡುತ್ತಿಲ್ಲ. 2010ರಲ್ಲಿ ಉತ್ತರ ಮತ್ತು ದಕ್ಷಿಣ ಕೊರಿಯಾದ ಜನರು ಗಡಿಗಳ ಮಿತಿಯನ್ನು ಲೆಕ್ಕಿಸದೆ ಒಬ್ಬರನ್ನೊಬ್ಬರು ಭೇಟಿ ಮಾಡಿದರು. ಈ ಪುನರ್ಮಿಲನವು ಎಲ್ಲರಲ್ಲಿಯೂ ಹೊಸ ಭರವಸೆಯನ್ನು ಮೂಡಿಸಿತು. ಎರಡೂ ದೇಶಗಳು ಇನ್ನುಮುಂದೆ ಜೊತೆಜೊತೆಗೆ ಸಾಗುತ್ತವೆ ಎಂಬ ನಂಬಿಕೆ ರೂಪುಗೊಂಡಿತು. ಆದರೆ ಇದಾಗಿ ಒಂದು ತಿಂಗಳಲ್ಲಿಯೇ ದಕ್ಷಿಣ ಕೊರಿಯಾ ಸೈನಿಕರ ಮಿಲಿಟರಿ ವ್ಯಾಯಾಮ ನಡೆಯುತ್ತಿದ್ದಾಗ ಉತ್ತರ ಕೊರಿಯಾ ಫಿರಂಗಿ ಶೆಲ್‌ಗಳನ್ನು ಬಳಸಿ ಬಹುದೊಡ್ಡ ಸ್ಫೋಟ ನಡೆಸಿತು. ಈ ಸ್ಫೋಟದಿಂದಾಗಿ ಮಿಲಿಟರಿ ನೆಲೆಗಳು ಮತ್ತು ನಾಗರಿಕರ ಮನೆಗಳು ಹಾನಿಗೊಳಗಾದವು. ಅಪಾರ ಸಾವುನೋವುಗಳು ಸಂಭವಿಸಿದವು.

ಉತ್ತರ ಕೊರಿಯಾದಲ್ಲಿ ಮಾಧ್ಯಮಗಳಿಗೆ ಸ್ವಾತಂತ್ರ್ಯವಿಲ್ಲ. ಮಾಧ್ಯಮಗಳು ಅಲ್ಲಿನ ಸರ್ವಾಧಿಕಾರಿ ಸರ್ಕಾರದ ಕಪಿಮುಷ್ಠಿಯಲ್ಲಿದೆ. ಪತ್ರಿಕೆಗಳಲ್ಲಿ ಕೊರಿಯನ್ ವರ್ಕರ್ಸ್ ಪಾರ್ಟಿ ಮೂಲಕ ಪ್ರಕಟಗೊಳ್ಳುವ ಎರಡು ಪತ್ರಿಕೆಗಳು ಮತ್ತು ಸರ್ಕಾರದ ಮೂಲಕ ಪ್ರಕಟಗೊಳ್ಳುವ ಒಂದು ಪತ್ರಿಕೆಯದ್ದೇ ಪ್ರಾಬಲ್ಯ. ಈ ಕೊರಿಯನ್ ವರ್ಕರ್ಸ್ ಪಾರ್ಟಿ ಎನ್ನುವುದು ಈಗ ಆಡಳಿತ ನಡೆಸುತ್ತಿರುವ ಕಿಮ್ ಜಾಂಗ್ ಉನ್ ಅವರ ಪಕ್ಷವಾಗಿದೆ. ಕೊರಿಯನ್ ಸೆಂಟ್ರಲ್ ನ್ಯೂಸ್ ಏಜಿನ್ಸಿಯು ಎಲ್ಲಾ ಪತ್ರಿಕೆಗಳ ಮೇಲೂ ಕಟ್ಟುನಿಟ್ಟಾದ ನಿರ್ಬಂಧ ಹೇರಿದೆ. ಆಡಳಿತ ವಿರೋಧಿಯಾದ ಸುದ್ದಿಗಳನ್ನು ಸೆನ್ಸಾರ್ ಮಾಡಲಾಗುತ್ತದೆ. ಸರ್ಕಾರವನ್ನು ಟೀಕಿಸಿ ಯಾವುದೇ ಪತ್ರಿಕೆಗಳು ಬರೆಯುವಂತಿಲ್ಲ. ಉತ್ತರ ಕೊರಿಯಾದ ಹಳ್ಳಿ ಹಳ್ಳಿಗಳಲ್ಲಿಯೂ ರೇಡಿಯೋ ಮತ್ತು ದೂರದರ್ಶನ ಪ್ರಸರಣವಿದೆ. ಸರ್ಕಾರ ತನ್ನ ಸಿದ್ಧಾಂತಗಳನ್ನು ಹೇರುವ ಸಾಧನಗಳಾಗಿ ರೇಡಿಯೋ ಮತ್ತು ದೂರದರ್ಶನಗಳನ್ನು ಬಳಸಿಕೊಳ್ಳುತ್ತಿದೆ. ತುರ್ತು ಪರಿಸ್ಥಿತಿ ಜಾರಿಗೊಂಡಾಗ ಉಳಿದ ದೇಶಗಳ ಮಾಧ್ಯಮಗಳು ಯಾವ ರೀತಿಯ ಸ್ಥಿತಿಯನ್ನು ಎದುರಿಸುತ್ತವೆಯೋ ಆ ಮಾದರಿಯ ಪರಿಸ್ಥಿತಿಯನ್ನು ಉತ್ತರ ಕೊರಿಯಾದ ಪತ್ರಿಕೆ, ರೇಡಿಯೋ, ದೂರದರ್ಶನ ವಾಹಿನಿಗಳು ದಿನದಿನವೂ ಅನುಭವಿಸುತ್ತಿವೆ. ಉತ್ತರ ಕೊರಿಯಾದಲ್ಲಿ ಕೇವಲ ನಾಲ್ಕು ದೂರದರ್ಶನ ವಾಹಿನಿಗಳಿದ್ದು, ಇವುಗಳೆಲ್ಲವೂ ಸರ್ಕಾರದ ನಿಯಂತ್ರಣದಲ್ಲಿವೆ. ಮಾಧ್ಯಮಗಳು ಸರ್ಕಾರದ ಹಿಡಿತದಲ್ಲಿಯೇ ಇದ್ದಮೇಲೆ ಅವುಗಳ ಉಪಯೋಗವಾದರೂ ಏನು ಎಂಬ ಪ್ರಶ್ನೆ ಮೂಡುತ್ತದೆ.

ಬೌದ್ಧಧರ್ಮ, ಶಾಮನಿಸಂ, ದಾವೋಯಿಸಂ ಮತ್ತು ಕನ್ಫ್ಯೂಷಿಯನಿಸಂ ಧರ್ಮಗಳು ಉತ್ತರ ಕೊರಿಯಾದ ಸಂಸ್ಕೃತಿಯಲ್ಲಿ ಒಟ್ಟಾಗಿ ಬೆರೆತುಕೊಂಡಿವೆ. ಚೀನಾದ ಸಂಸ್ಕೃತಿಯು ಕೊರಿಯನ್ ಸಂಸ್ಕೃತಿಯನ್ನು ಪ್ರಭಾವಿಸಿದೆ. ಆದರೆ ಸಂಪೂರ್ಣವಾಗಿ ಮಾರ್ಪಡಿಸಿಲ್ಲ. ಕೊರಿಯನ್ನರು ತಮ್ಮ ಸಾಂಸ್ಕೃತಿಕ ಚಹರೆಗಳನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಅವರ ಭಾಷೆ ಮತ್ತು ಆಚರಣೆಗಳು ಮೂಲ ಸ್ವರೂಪದಲ್ಲಿಯೇ ಇದೆ. ಕೊರಿಯಾ ಸಂಸ್ಕೃತಿಯು ಒಳ್ಳೆಯ ರೀತಿಯ ಬೆಳವಣಿಗೆಯನ್ನು ಕಂಡಿದೆಯೇ ಹೊರತು ಯಾವ ರೀತಿಯಲ್ಲಿಯೂ ನಶಿಸುವ ಹಂತವನ್ನು ತಲುಪಿಲ್ಲ. ಹತ್ತೊಂಬತ್ತನೇ ಶತಮಾನದ ಕೊನೆಗೆ ಪಾಶ್ಚಿಮಾತ್ಯ ಸಂಸ್ಕೃತಿಯ ಗಾಳಿ ಬಲವಾಗಿ ಬೀಸಿದರೂ ಸಹ ಉತ್ತರ ಕೊರಿಯಾದ ಸಾಂಸ್ಕೃತಿಕ ಪರಂಪರೆಯ ಬೇರುಗಳನ್ನು ಅಲುಗಾಡಿಸಿಲ್ಲ. ಇವೆರಡೂ ಸಂಸ್ಕೃತಿಗಳು ಸೌಹಾರ್ದಯುತವಾಗಿ ಬೆರೆತಿವೆ. ಸಂಘರ್ಷವಿಲ್ಲದೆಯೇ ಪಾಶ್ಚಿಮಾತ್ಯ ಸಂಸ್ಕೃತಿಯು ಉತ್ತರ ಕೊರಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

ಕೊರಿಯಾದ ಸಂಸ್ಕೃತಿ ಬಹುದೊಡ್ಡ ಸ್ಥಿತ್ಯಂತರಕ್ಕೆ ಒಳಗಾದದ್ದು ಎರಡನೇ ಮಹಾಯುದ್ಧದ ಬಳಿಕ. ಸೋವಿಯತ್ ಆಕ್ರಮಣಕ್ಕೆ ಸಿಲುಕಿದ ಕೊರಿಯಾ ತನ್ನ ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯನ್ನು ಕಳೆದುಕೊಳ್ಳಬೇಕಾಯಿತು. ಕನ್ಫ್ಯೂಷಿಯನ್ ತತ್ತ್ವಶಾಸ್ತ್ರ ನಿರ್ಲಕ್ಷ್ಯಕ್ಕೆ ಒಳಗಾಯಿತು. ಹಳೆಯ ವಂಶಾವಳಿಯ ದಾಖಲೆಗಳು ಬೆಂಕಿಗೆ ಆಹುತಿಯಾದವು. ಆಡಳಿತ ವ್ಯವಸ್ಥೆಯು ಯಾವುದನ್ನು ಮೌಲ್ಯ ಎನ್ನುತ್ತದೋ ಅದನ್ನು ಜನರು ಒಪ್ಪಿಕೊಳ್ಳಬೇಕಾಯಿತು. ಖಾಸಗಿ ಜೀವನಕ್ಕೆ ಮಹತ್ವವೇ ಇಲ್ಲದಂತಾಯಿತು. ವೈಯಕ್ತಿಕ ಸ್ವಾತಂತ್ರ್ಯವೂ ಸಹ ಪ್ರಾಮುಖ್ಯತೆ ಕಳೆದುಕೊಂಡಿತು. ಕೊರಿಯಾ ಯುದ್ಧದ ನಂತರ ಉತ್ತರ ಕೊರಿಯಾದ ಜನರ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ದೇಶ ಪ್ರಗತಿಯನ್ನು ಸಾಧಿಸಬೇಕು ಎಂಬ ಆದರ್ಶವನ್ನು ಮುಂದಿಟ್ಟುಕೊಂಡು ಜನರನ್ನು ಕಠಿಣ ಪರಿಶ್ರಮದ ದುಡಿಮೆಗೆ ಈಡು ಮಾಡಲಾಯಿತು.

ಉತ್ತರ ಕೊರಿಯಾದಲ್ಲಿ ಕಲೆ, ಸಂಸ್ಕೃತಿ ಇವೆಲ್ಲವೂ ಕೂಡಾ ಬೆಳವಣಿಗೆ ಕಾಣುತ್ತಿರುವುದು ರಾಷ್ಟ್ರೀಯತೆಯ ಹೆಸರಿನಲ್ಲಿ. ಎಲ್ಲಾ ರೀತಿಯ ಕಲಾಕೃತಿಗಳ, ಪ್ರದರ್ಶನ ಕಲೆಗಳ ಅಂತಿಮ ಉದ್ದೇಶ ರಾಷ್ಟ್ರದ ಪ್ರಗತಿ ಮತ್ತು ರಾಷ್ಟ್ರಕ್ಕೆ ಸಾಂಸ್ಕೃತಿಕ ಅಸ್ಮಿತೆಯನ್ನು ಒದಗಿಸಿಕೊಡುವುದು ಎಂಬ ಭಾವನೆಯನ್ನು ಬಲವಾಗಿ ರೂಪಿಸಲಾಗುತ್ತಿದೆ. ಉತ್ತರ ಕೊರಿಯಾದ ಪ್ರಮುಖ ಶಿಲ್ಪಕಲಾಕೃತಿಗಳು ಯಾವುವು ಎಂದು ಗಮನಹರಿಸಿದಾಗ ಕಿಮ್ ಇಲ್ ಸುಂಗ್ ಅವರ ಪ್ರತಿಮೆಗಳು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತವೆ. ಈ ಕಿಮ್ ಇಲ್ ಸುಂಗ್ ಅವರು ಈಗಿನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಅಜ್ಜ. ಕೊರಿಯಾ ಕ್ರಾಂತಿಯನ್ನು ಸ್ಮರಿಸುವ ನೆಪದಲ್ಲಿ ಅವರ ಪ್ರತಿಮೆಗಳನ್ನು ನಿರ್ಮಿಸಲಾಗಿದೆ. ವ್ಯಕ್ತಿನಿಷ್ಠ ವಿಚಾರಗಳು ಆದರ್ಶಗಳ, ಸಿದ್ಧಾಂತಗಳ ಸಹಾಯದಿಂದ ವಸ್ತುನಿಷ್ಠವೆನಿಸುವ ಮಾದರಿ ಯಾವುದು ಎನ್ನುವುದಕ್ಕೆ ಸುಂಗ್ ಅವರ ಪ್ರತಿಮೆ ನಿರ್ಮಾಣ ಉತ್ತಮ ಉದಾಹರಣೆಯಾಗಿದೆ. ಉತ್ತರ ಕೊರಿಯಾದ ಸಂಸ್ಕೃತಿಯು ಕಮ್ಯುನಿಷ್ಟ್ ಸಿದ್ಧಾಂತವನ್ನು ಆಧರಿಸಿದೆ. ಇಲ್ಲಿಯ ಕಲಾವಿದರು ಮತ್ತು ಸಾಹಿತಿಗಳು ರಾಷ್ಟ್ರೀಯತೆ ಮತ್ತು ವರ್ಗ ಪ್ರಜ್ಞೆಯನ್ನು ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇವರೆಲ್ಲರೂ ಕೂಡಾ ಸರ್ಕಾರಿ ಕಲಾ ಸಂಸ್ಥೆಗಳ ನಿಯಂತ್ರಣದಲ್ಲಿದ್ದಾರೆ.

ಪಿಯಾಂಗ್ಯಾಂಗ್ ಪ್ರದೇಶದಲ್ಲಿರುವ ನೃತ್ಯ ಮತ್ತು ಸಂಗೀತ ವಿಶ್ವವಿದ್ಯಾನಿಲಯವು ಕಲಾ ಶಿಕ್ಷಣವನ್ನು ಒದಗಿಸುತ್ತಿದೆ. ವಸ್ತುಸಂಗ್ರಹಾಲಯಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ಕೊಡುತ್ತಿದ್ದು, ಈ ಮೂಲಕ ರಾಷ್ಟ್ರದ ಸಾಂಸ್ಕೃತಿಕ ಪರಂಪರೆಯ ಬಗೆಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಉತ್ತರ ಕೊರಿಯಾದಲ್ಲಿ ಆರ್ಟ್ ಸ್ಟುಡಿಯೋ ಇರುವುದು ಒಂದೇ ಒಂದು. ಪಯೋಂಗ್ಯಾಂಗ್‌ನಲ್ಲಿರುವ ಮನ್ಸುಡೇ ಆರ್ಟ್ ಸ್ಟುಡಿಯೋ ವಿಶ್ವದ ಅತೀ ದೊಡ್ಡ ಆರ್ಟ್ ಸ್ಟುಡಿಯೋಗಳಲ್ಲಿ ಒಂದಾಗಿದೆ. ಇಲ್ಲಿ ದೇಶದ ಅತ್ಯುತ್ತಮ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗಿರುತ್ತದೆ. ದೇಶದ ನಾಯಕರ ಕಲಾಕೃತಿಗಳನ್ನು ಮತ್ತು ಶ್ರೇಷ್ಠ ಸ್ಮಾರಕಗಳನ್ನು ಇಲ್ಲಿ ಕಾಣಬಹುದು. ಉತ್ತರ ಕೊರಿಯಾದ ಪ್ಯೊಂಗ್ಯಾಂಗ್‌ನಲ್ಲಿರುವ ಕ್ರೀಡಾಂಗಣವು ಪ್ರಪಂಚದಲ್ಲಿಯೇ ಅತೀ ಹೆಚ್ಚು ಆಸನ ಸಾಮರ್ಥ್ಯವಿರುವ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕ್ರೀಡಾಂಗಣದಲ್ಲಿ ಏಕಕಾಲಕ್ಕೆ ಒಂದೂವರೆ ಲಕ್ಷ ಜನರು ಕುಳಿತುಕೊಂಡು ಪಂದ್ಯಗಳನ್ನು ವೀಕ್ಷಿಸಬಹುದು. ವರ್ಷಕ್ಕೊಮ್ಮೆ ಅದ್ಧೂರಿಯಾಗಿ ನಡೆಯುವ ಮಾಸ್ ಗೇಮ್ಸ್ ಸಂದರ್ಭದಲ್ಲಿ ಈ ಕ್ರೀಡಾಂಗಣವನ್ನೇ ಹೆಚ್ಚು ಬಳಸಲಾಗುತ್ತದೆ. ಉತ್ತರ ಕೊರಿಯಾ ಸರ್ವಾಧಿಕಾರಿ ಮಾದರಿಯ ಆಡಳಿತ ವ್ಯವಸ್ಥೆಯನ್ನು ಹೊಂದಿದ್ದರೂ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದೆ. ಅಂಕಿಅಂಶಗಳನ್ನು ಆಧರಿಸಿಕೊಂಡು ಹೇಳುವುದಾದರೆ ಇಲ್ಲಿನ ನೂರಕ್ಕೆ ನೂರರಷ್ಟು ಜನರು ಶಿಕ್ಷಿತರಾಗಿದ್ದಾರೆ. ರಾಷ್ಟ್ರದ ಎಲ್ಲರೂ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಹಂತದವರೆಗೂ ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಲು ಅವಕಾಶವಿದೆ.

ಉತ್ತರ ಕೊರಿಯಾದಲ್ಲಿ ಆಡಳಿತ ನಡೆಸುತ್ತಿರುವ ಕಿಮ್ ರಾಜವಂಶದವರ ನೀತಿಗಳಿಂದಾಗಿ ಅದು ಯುದ್ಧದ ದೇಶವಾಗಿಯೇ ಗುರುತಿಸಿಕೊಂಡಿದೆ. ಆದರೆ ಅಲ್ಲಿ ನಿಸರ್ಗಪ್ರಿಯರನ್ನು ಆಕರ್ಷಿಸಬಲ್ಲ ಪ್ರಕೃತಿ ಸೌಂದರ್ಯದ ತಾಣಗಳಿವೆ. ಆದರೆ ಯುದ್ಧ, ಸಂಘರ್ಷವನ್ನೇ ಬದುಕಾಗಿಸಿಕೊಂಡ ಅಲ್ಲಿನ ನಾಯಕರು ಇಂತಹ ಸೊಗಸಿಗೆ ಹೊಸ ರೂಪು ಕೊಡುವ ಪ್ರವಾಸೋದ್ಯಮದ ಬಗ್ಗೆ ಯೋಚನೆಯನ್ನೇ ಮಾಡುತ್ತಿಲ್ಲ. ಇನ್ನು ಮುಂದಾದರೂ ಅಂತಹ ಪ್ರಯತ್ನಗಳು ನಡೆಯಬೇಕಿದೆ. ಉತ್ತರ ಕೊರಿಯಾದ ಬಂದೂಕಿನ ಬಾಯಿಯಲ್ಲಿ ಪ್ರೀತಿಯನ್ನು ಬೆಸೆಯುವ ಕೆಂಗುಲಾಬಿ ಹೂವು ಅರಳಿ ನಿಲ್ಲಬೇಕಿದೆ.