ನಮ್ಮಲ್ಲಿನ್ನೂ ಮಾನವೀಯ ಸಂಬಂಧಗಳಿಗೆ ಬಹಳಷ್ಟು ಮೌಲ್ಯವಿದೆ, ಅರ್ಥವಿದೆ. ಯಾವುದೋ ಒಂದು ಅಪನಂಬಿಕೆ, ತಪ್ಪುಕಲ್ಪನೆ, ಅಪಾರ್ಥ ಎಲ್ಲವನ್ನು ಮುರಿದು ಹಾಕಬಾರದು. ಸಂಬಂಧಗಳೇನು ಪಟಕ್ಕನೇ ಕತ್ತರಿಸುವಷ್ಟು ತೆಳುವಾಗಿರುತ್ತವೆಯೇ? ತಾಳ್ಮೆಯಿಂದ ಕುಳಿತು ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಯುದ್ಧಗಳೆ ನಿಂತಿರುವ ಉದಾಹರಣೆಗಳು ಕಣ್ಣಮುಂದಿವೆ. ಸಣ್ಣ ಪುಟ್ಟ ತಪ್ಪುಗಳಿಗೆ, ಜಗಳಗಳಿಗೆ, ಮುನಿಸುಗಳಿಗೆ ಮತ್ಯಾವುದೋ ಉದ್ದೇಶಪೂರ್ವಕವಲ್ಲದ ಮಾತಿಗೆ ಸಂಬಂಧಗಳು ಮುರಿದು ಬೀಳುತ್ತವೆ ಎಂದರೆ ಸಂಬಂಧಗಳಿಗೆ ಬೆಲೆ ಏನು?
ಇಸ್ಮಾಯಿಲ್ ತಳಕಲ್ ಬರೆಯುವ ʻತಳಕಲ್ ಡೈರಿʼಯಲ್ಲಿ ಹೊಸ ಬರಹ
ಕಾಲೇಜು ಓದುವಾಗ ಜೇಬು ಖಾಲಿ ಇರುತ್ತಿದ್ದರೂ ಮನಸ್ಸಿನಲ್ಲಿ ಕನಸುಗಳಿಗೆ ಎದೆಯಲ್ಲಿ ಉತ್ಸಾಹಗಳಿಗೇನೂ ಕೊರತೆ ಇರುತ್ತಿರಲಿಲ್ಲ. ಏನೂ ಇಲ್ಲದಿದ್ದರೂ ಒಣ ಧಿಮಾಕು ಮಾಡಿಕೊಂಡು ಪುಂಡ ಪೋಕರಿಗಳ ಹಾಗೆ ತಿರುಗಾಡುತ್ತ ಬದುಕಿನ ಬಗೆಗೆ ಯಾವುದೇ ನಿರ್ದಿಷ್ಟ ಗುರಿಗಳನ್ನಿಟ್ಟುಕೊಳ್ಳದೇ ಗೆಳೆಯರೊಂದಿಗೆ ಹರಟುತ್ತಲೇ ದಿನಗಳು ಒಂದೊಂದೆ ಖಾಲಿಯಾಗತೊಡಗಿದ ಅರಿವು ಇರುತ್ತಿರಲಿಲ್ಲ. ಆ ದಿನಗಳಲ್ಲಿ ಏನನ್ನೂ ಗಂಭೀರವಾಗಿ ಪರಿಗಣಿಸುವಷ್ಟು ಮನಸ್ಸು ಪ್ರಬುದ್ಧವಾಗಿರಲಿಲ್ಲವಾದರು ಗೆಳೆತನ ತುಂಬಾ ಗಟ್ಟಿಯಾಗಿರುತ್ತಿತ್ತು. ಬೇರೆ ಯಾವ ಸಂಬಂಧಗಳಿಗಿರದಷ್ಟು ಮಹತ್ವ, ಪ್ರಾಮುಖ್ಯತೆಯನ್ನ ಸ್ನೇಹಕ್ಕೆ ಕೊಡುತ್ತೇವೆ. ಸ್ನೇಹಿತರಿಗೆ ಏಣೇ ಸಮಸ್ಯೆಗಳು ಬಂದರೂ ತಕ್ಷಣಕ್ಕೆ ನೆರವಿಗೆ ಬರುವವರೆ ಗೆಳೆಯರು. ಸೋತಾಗ, ನೋವಿನಲ್ಲಿದ್ದಾಗ ಸಂತೈಸಲು ಗೆಳೆಯರ ಕೈಗಳೇ ಮುಂದೆ ಬರುತ್ತವೆ. ಒಬ್ಬ ಗೆಳೆಯ ಗೆದ್ದಾಗ ಇನ್ನೊಬ್ಬ ಗೆಳೆಯ ಪಡುವಷ್ಟು ಸಂತೋಷ, ಸಂಭ್ರಮ ಬೇರೆ ಯಾರೂ ಪಡಲಾರರು. ಗೆಳೆಯನ ಅಳುವಿಗೆ ಕಣ್ಣೀರುದರಿಸಿ, ನಗುವಿಗೆ ಆನಂದಭಾಷ್ಪ ಹರಿಸುವವರು ಹೆಚ್ಚಾಗಿ ಸ್ನೇಹಿತರೇ ಆಗಿರುತ್ತಾರೆ. ಒಂದು ವೇಳೆ ಇಂತಹ ಗೆಳೆತನದಲ್ಲಿ ಒಂದು ಸಣ್ಣ ಅಪನಂಬಿಕೆ ಉಂಟಾದರೆ?
ಒಂದು ದಿನ ಕಾಲೇಜಿಗೆ ಹೋದಾಗ ಮಹಾಂತೇಶ ತರಗತಿಗಳಿಗೆ ಬಾರದೆ ಮಕ ಈಟ ಮಾಡ್ಕೊಂಡು ಕಾಲೇಜಿನ ಕ್ಯಾಂಟೀನ್ನಿನೊಳಗೆ ಇಡಿ ದಿನ ಕುಳಿತಿದ್ದ. “ಹಿಂಗ್ಯಾಕ ಕುಂತೀಲೇ ಹನುಮಪ್ಪನ ಮುಸುಡಿ ಮಾಡ್ಕೊಂಡು” ಅಂತ ಕೇಳಿದರೆ ಏನೊಂದೂ ಹೇಳದೆ ಸೈಕಲ್ ಹತ್ತಿ ಮನೆಗೆ ಹೋಗಿಬಿಟ್ಟ. ಎಂದೂ ಹೀಗೆ ವರ್ತಿಸದಿದ್ದ ಅವನು ಅಂದು ಬೇಸರದಲ್ಲಿದ್ದಂತೆ ಕಂಡಿದ್ದರಿಂದ ಅವನ ಮನೆಗೆ ಹೋಗಿ ಕೇಳಿದರೆ ಮತ್ತೆ ಮೌನವಾಗಿಯೇ ಇದ್ದ. “ಏನಾಯ್ತು ಬೊಗಳಲೆ” ಅಂತ ಜೋರು ಮಾಡಿದಾಗಲೇ ಅವನ ಗೆಳತಿಯೊಬ್ಬಳು ಅವನ ಮೇಲೆ ಮುನಿಸಿಕೊಂಡಿರುವುದು ತಿಳಿಯಿತು. ಮಹಾಂತೇಶ ಸಾಹಿತ್ಯದ ಒಂಚೂರು ಆಸಕ್ತಿ ಇದ್ದ ಹುಡುಗ. ಆಗೊಂದು ಈಗೊಂದು ಕವಿತೆಗಳನ್ನು ಬರೆದು ಎಲ್ಲರೆದುರಿಗೆ ಓದುತ್ತಿದ್ದ. ಯಾವಾಗಲಾದರೊಮ್ಮೆ ಅವನ ಕವಿತೆಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದರೆ ನಮಗೊಂತರ ಖುಷಿ. ಗೆಳೆಯನ ಹೆಸರನ್ನು ಪತ್ರಿಕೆಯಲ್ಲಿ ನೋಡಿ ಸಂಭ್ರಮ ಪಡುತ್ತಿದ್ದ ನಾವು ಅವನಿಂದ ಪಾರ್ಟಿ ತೆಗೆದುಕೊಳ್ಳದೇ ಸುಮ್ಮನೆ ಬಿಡುತ್ತಿರಲಿಲ್ಲ. ಪಾರ್ಟಿ ಎಂದರೆ ಕ್ಯಾಂಟೀನಿನಲ್ಲಿ ಮಿರ್ಚಿ ಬಜಿ ತಿನ್ನುವುದೇ ಆಗಿನ ದಿನಗಳಲ್ಲಿ ನಮಗೆ ದೊಡ್ಡ ಪಾರ್ಟಿಯಾಗಿರುತ್ತಿತ್ತು. ಬಸ್ ಪಾಸೊಂದನ್ನು ಬಿಟ್ಟು ಒಂದು ರೂಪಾಯಿಯೂ ನಮ್ಮ ಜೇಬಿನಲ್ಲಿ ಇರುತ್ತಿರಲಿಲ್ಲವಾದ್ದರಿಂದ ಕ್ಯಾಂಟೀನಿನಲ್ಲಿ ಬಜಿ ತಿನ್ನುವುದೆಂದರೆ ಇನ್ನಿಲ್ಲದ ಹಿಗ್ಗು.
ಮಹಾಂತೇಶನಿಗೊಬ್ಬಳು ಗೆಳತಿ ಇದ್ದಳು, ಶಾರದಾ. ಗೆಳತಿ ಎಂದರೆ ಗೆಳತಿಯಷ್ಟೆ, ನಾವೆಲ್ಲ ಅವನಿಗೆ ಗೆಳಯರಿದ್ದ ಹಾಗೆ. ಪ್ರತಿಯೊಂದಕ್ಕೂ ಒಬ್ಬರಿಗೊಬ್ಬರು ಆಗುತ್ತಿದ್ದ ಅವರು ಒಳ್ಳೆಯ ಸ್ನೇಹಿತರಾಗಿದ್ದರು. ಒಂದು ದಿನ ಅದೇನಾಯಿತೋ ಶಾರದಾ ಮಹಾಂತೇಶನೊಂದಿಗೆ ಮಾತನಾಡುವುದನ್ನು ಬಿಟ್ಟುಬಿಟ್ಟಳು. ಕಂಡರೂ ಕಾಣದ ಹಾಗೆ, ನೋಡಿದರೂ ನೋಡದ ಹಾಗೆ ಹೋಗುತ್ತಿದ್ದವಳನ್ನು ಮಹಾಂತೇಶ ತಡೆದು ಕೇಳಿದರೆ ಒಂದೇ ಸಮನೇ ಅವನನ್ನು ಬಯ್ಯತೊಡಗಿದ್ದಳು. “ನೀ ಇಂತಾವ ಅಂತ ತಿಳ್ಕೊಂಡಿರಲಿಲ್ಲ, ನನ್ನ ಜೀವನದಾಗ ಇದೊಂದು ಕಪ್ಪುಚಿಕ್ಕೆ ಆಗಿಬಿಟ್ತು” ಅಂತ ದುಃಖಿಸತೊಡಗಿದ್ದಳು. “ಯಾಕ, ಅಂತಹದ್ದೇನಾಯ್ತು? ನಾ ಏನ್ಮಾಡ್ದೆ?” ಅಂತ ಕೇಳಿದರೆ ನಡೆದದ್ದನ್ನು ಹೇಳಿದಳು. ಮಹಾಂತೇಶನ ಗೆಳೆಯನೊಬ್ಬ ಶಾರದಾಳಿಗೆ ಪ್ರೇಮ ನಿವೇದನೆ ಮಾಡಿದ್ದನಂತೆ. ಅದೂ ಒಂದು ಕವಿತೆಯ ಮೂಲಕ. ಆ ಗೆಳೆಯನಿಗೆ ಕವಿತೆ ಏನೂ ಬರೆಯಲು ಬರುತ್ತಿರಲಿಲ್ಲವಾದ್ದರಿಂದ ಮಹಾಂತೇಶನೇ ತನ್ನ ಗೆಳೆಯನಿಗೆ ಕವಿತೆ ಬರೆದುಕೊಟ್ಟಿರಬಹುದೆಂದು ಊಹಿಸಿದ ಆಕೆ ಆ ಗೆಳೆಯನಿಗೆ ಮುಖಕ್ಕೆ ಉಗಿದು ಮಹಾಂತೇಶನ ಮೇಲೆ ಸಿಟ್ಟು ಮಾಡಿಕೊಂಡಿದ್ದಳು. ಪ್ರೀತಿ ಪ್ರೇಮದ ಉಸಾಬರಿಗೆ ಹೋಗದ ಶಾರದಾ, ತನ್ನ ಬಗ್ಗೆ ಗೊತ್ತಿದ್ದೂ ಇವನು ಕವಿತೆ ಬರೆದುಕೊಟ್ಟಾನಲ್ಲಾ, ಇವನೆಂತ ಗೆಳೆಯ ಎಂದುಕೊಂಡು ಕೋಪಗೊಂಡಿದ್ದಳು. ಈ ವಿಷಯ ಮಹಾಂತೇಶನಿಗೆ ಗೊತ್ತಾಗಿ ತಾನು ಆ ಕವಿತೆ ಬರೆದಿಲ್ಲ, ಅವನು ನಿನ್ನನ್ನು ಪ್ರೀತಿಸುವ ವಿಷಯ ನನಗೆ ಗೊತ್ತೇ ಇಲ್ಲ ಎಂದು ಪರಿಪರಿಯಾಗಿ ಎಷ್ಟು ಕೇಳಿಕೊಂಡರೂ ಇವನ ಮಾತನ್ನು ನಂಬದ ಅವಳು ಮಾತು ಬಿಟ್ಟು ಗೆಳೆತನವನ್ನೂ ಮುರಿದುಕೊಂಡಳು. ನಿಜಕ್ಕೂ ಆ ಕವಿತೆಯನ್ನು ಮಹಾಂತೇಶ ಬರೆದಿರಲಿಲ್ಲ. ಆ ಗೆಳೆಯ ಬೇರೆ ಯಾರಿಂದಲೋ ಬರೆಯಿಸಿಕೊಂಡು ಬಂದು ಶಾರದಾಳಿಗೆ ನೀಡಿದ್ದ. ಅವಳೋ ಏನು ಹೇಳಿದರೂ ನಂಬದ ಸ್ಥಿತಿಯಲ್ಲಿರಲಿಲ್ಲ. ದುಡುಕಿ ಗೆಳೆತನವನ್ನೆ ಮುರಿದುಕೊಂಡಿದ್ದಳು. ಇವನು ತಾನು ಮಾಡದ ತಪ್ಪಿಗೆ ಗೆಳತಿಯನ್ನು ಕಳೆದುಕೊಂಡು ಖಿನ್ನನಾಗಿದ್ದ. ಅವಳು ದೂರಾದಳು ಎನ್ನುವ ನೋವಿಗಿಂತ ತನ್ನ ಮಾತನ್ನು ನಂಬದೆ ಬರಿ ಒಂದು ಅಪಾರ್ಥಕ್ಕೆ ಸಂಬಂಧವನ್ನೆ ಕಳೆದುಕೊಂಡಿದ್ದು ಅವನಿಗೆ ಇನ್ನಿಲ್ಲದಂತೆ ಕಾಡುತ್ತಿತ್ತು. ಒಂದು ಕವಿತೆಯಿಂದ ಪಾರ್ಟಿ ಮಾಡುತ್ತಿದ್ದ ನಾವು ಈಗ ಅದೇ ಕವಿತೆ ಒಂದು ಗೆಳೆತನ ಮುರಿದ್ದಿದ್ದಕ್ಕೆ ಮರುಗುವಂತಾಗಿತ್ತು.
ನಮ್ಮಲ್ಲಿನ್ನೂ ಮಾನವೀಯ ಸಂಬಂಧಗಳಿಗೆ ಬಹಳಷ್ಟು ಮೌಲ್ಯವಿದೆ, ಅರ್ಥವಿದೆ. ಯಾವುದೋ ಒಂದು ಅಪನಂಬಿಕೆ, ತಪ್ಪುಕಲ್ಪನೆ, ಅಪಾರ್ಥ ಎಲ್ಲವನ್ನು ಮುರಿದು ಹಾಕಬಾರದು. ಸಂಬಂಧಗಳೇನು ಪಟಕ್ಕನೇ ಕತ್ತರಿಸುವಷ್ಟು ತೆಳುವಾಗಿರುತ್ತವೆಯೇ? ತಾಳ್ಮೆಯಿಂದ ಕುಳಿತು ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಯುದ್ಧಗಳೆ ನಿಂತಿರುವ ಉದಾಹರಣೆಗಳು ಕಣ್ಣಮುಂದಿವೆ. ಸಣ್ಣ ಪುಟ್ಟ ತಪ್ಪುಗಳಿಗೆ, ಜಗಳಗಳಿಗೆ, ಮುನಿಸುಗಳಿಗೆ ಮತ್ಯಾವುದೋ ಉದ್ದೇಶಪೂರ್ವಕವಲ್ಲದ ಮಾತಿಗೆ ಸಂಬಂಧಗಳು ಮುರಿದು ಬೀಳುತ್ತವೆ ಎಂದರೆ ಸಂಬಂಧಗಳಿಗೆ ಬೆಲೆ ಏನು?
ಗೆಳೆಯನ ಹೆಸರನ್ನು ಪತ್ರಿಕೆಯಲ್ಲಿ ನೋಡಿ ಸಂಭ್ರಮ ಪಡುತ್ತಿದ್ದ ನಾವು ಅವನಿಂದ ಪಾರ್ಟಿ ತೆಗೆದುಕೊಳ್ಳದೇ ಸುಮ್ಮನೆ ಬಿಡುತ್ತಿರಲಿಲ್ಲ. ಪಾರ್ಟಿ ಎಂದರೆ ಕ್ಯಾಂಟೀನಿನಲ್ಲಿ ಮಿರ್ಚಿ ಬಜಿ ತಿನ್ನುವುದೇ ಆಗಿನ ದಿನಗಳಲ್ಲಿ ನಮಗೆ ದೊಡ್ಡ ಪಾರ್ಟಿಯಾಗಿರುತ್ತಿತ್ತು. ಬಸ್ ಪಾಸೊಂದನ್ನು ಬಿಟ್ಟು ಒಂದು ರೂಪಾಯಿಯೂ ನಮ್ಮ ಜೇಬಿನಲ್ಲಿ ಇರುತ್ತಿರಲಿಲ್ಲವಾದ್ದರಿಂದ ಕ್ಯಾಂಟೀನಿನಲ್ಲಿ ಬಜಿ ತಿನ್ನುವುದೆಂದರೆ ಇನ್ನಿಲ್ಲದ ಹಿಗ್ಗು.
ಇಂತಹದ್ದೆ ಇನ್ನೊಂದು ಘಟನೆ ನಡೆದಿತ್ತು. ನನ್ನ ಇನ್ನೊಬ್ಬ ಗೆಳೆಯ ಲೋಕಿಗೆ ಬಸು ಎನ್ನುವವನೊಬ್ಬ ಏನೋ ಒಂದು ಮಾತು ಅಂದಿದ್ದನಂತೆ. ಮೊದಲೆ ಸೂಕ್ಷ್ಮ ಮನಸ್ಸಿನ ಲೋಕಿ ಬಸುವಿನ ಮಾತಿಗೆ ನೊಂದುಕೊಂಡು ‘ಅವನು ನನ್ನ ಬಗ್ಗೆ ಹೀಗೆಲ್ಲಾ ಯೋಚಿಸುತ್ತಿದ್ದಾನೆಯೇ’ ಎಂದು ಯೋಚಿಸಿ ಅವನೊಂದಿಗೆ ಮಾತೆ ಬಿಟ್ಟುಬಿಟ್ಟ. “ನಾನು ಹೇಳಿದ್ದು ಹಂಗಲ್ಲಲೇ, ಬೇರೆ ಏನೋ ಹೇಳಲು ಹೋಗಿ ಬಾಯಿ ತಪ್ಪಿ ನಿನಗೆ ಘಾಸಿಯಾಗುವಂತಹ ಮಾತು ಅಂದುಬಿಟ್ಟೆ. ಬೇಜಾರಾಗಬೇಡ ಸಾರಿ” ಎಂದು ಅದೆಷ್ಟು ಕ್ಷಮೆ ಕೇಳಿದರೂ ಸಮಾಧಾನವಾಗದ ಲೋಕಿ ಅವನಿಂದ ಅಂತರ ಕಾಯ್ದುಕೊಳ್ಳತೊಡಗಿದ್ದ. ಅಂದು ಕಾಯ್ದುಕೊಂಡ ಅಂತರ ಈಗಲೂ ದೊಡ್ಡದಾಗಿಯೇ ಇದೆ. ನನಗೆ ತಿಳಿದಿರುವಂತೆ ಬಸು ಯಾರ ಬಗ್ಗೆಯೂ ಕೇವಲವಾಗಿ ಯೋಚಿಸುವವನೂ ಅಲ್ಲ, ಮಾತನಾಡುವುದೂ ಇಲ್ಲ. ಅವನು ಲೋಕಿಗೆ ಅಂದಿದ್ದ ಆ ಮಾತು ತಪ್ಪಿದ್ದರೂ ಉದ್ದೇಶಪೂರ್ವಕವಾಗಿಲ್ಲವೆನ್ನುವುದು ನಂತರ ಬಸುನನ್ನು ವಿಚಾರಿಸಿದಾಗ ತಿಳಿಯಿತು. ಆದರೆ ದೋಸ್ತಿ ಎನ್ನುವುದು ಎಲ್ಲವನ್ನೂ ಮೀರಿದ್ದು. ಅಲ್ಲಿ ಜಗಳವಿರುತ್ತದೆ, ಬಯ್ಯುತ್ತೇವೆ, ಪೊಸೆಸಿವ್‌ನೆಸ್ ಕೆಲಸ ಮಾಡುತ್ತದೆ, ಮುನಿಸಿಕೊಳ್ಳುತ್ತೇವೆ, ಕೋಪದಲ್ಲಿ ಏನೋ ಅಂದುಬಿಡುತ್ತೇವೆ. ಆದರೆ ಇವೆಲ್ಲವು ಕ್ಷಣಿಕ. ಲೆಕ್ಕಕ್ಕೆ ಬರುವುದಿಲ್ಲ. ಸಿಟ್ಟಿನಲ್ಲಿ, ಫ್ರಸ್ಟೇಷನ್ನಿನಲ್ಲಿ ಏನೋ ಅಂದ ಮಾತು ನೋಯಿಸಬಹುದು. ಆದರೆ ಅವರು ಅಂದ ಆ ಮಾತನ್ನೆ ಗಟ್ಟಯಾಗಿ ಹಿಡಿದುಕೊಂಡರೆ ಸಂಬಂಧಗಳನ್ನು ದೂರ ಮಾಡಬೇಕಾಗುತ್ತದೆ. ಸಂಬಂಧಗಳೇ ಮುಖ್ಯವಾದರೆ ಇವು ಯಾವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬಾರದು.
ನಿಜ, ಸಂಬಂಧಗಳು ನಂಬಿಕೆಗಳ ಮೇಲೆ, ಪರಸ್ಪರ ಗೌರವ ಕೊಡುವುದರ ಮೇಲೆ ನಿಂತಿರುತ್ತವೆ. ನಿಜವಾದ ಸ್ನೇಹದ ನಡುವೆ ಒಂದು ನಿಷ್ಕಲ್ಮಶ, ಪ್ರಾಮಾಣಿಕ ಬಂಧವೇರ್ಪಟ್ಟಿರುತ್ತದೆ. ಅಲ್ಲೊಂದಿಷ್ಟು ಸೂಕ್ಷ್ಮತೆಗಳಿರುತ್ತವೆ. ನಾಜೂಕುತನವಿರುತ್ತದೆ. ಯಾವಾಗ ಇವೆಲ್ಲವುಗಳಿಗೆ ಧಕ್ಕೆ ಬರುವುದೋ ಆ ಸಂಬಂಧ ಬಿರುಕು ಬಿಡಲು ಪ್ರಾರಂಭಿಸುತ್ತದೆ. ಒಬ್ಬರಿಗೊಬ್ಬರು ಹೆಗಲ ಮೇಲೆ ಕೈಹಾಕಿಕೊಂಡು ಊರು ಸುತ್ತುತ್ತಾ ತಿರುಗಾಡುತ್ತಿದ್ದವರು ತಣ್ಣಗೆ ಕುಳಿತು ಒಂದು ಚಹಾ ಕುಡಿಯಲಾರದ ಸ್ಥಿತಿಗೆ ತಲುಪಿಬಿಡುತ್ತಾರೆ. ಹಾಗಿದ್ದರೆ ಯಾವುದೋ ಒಂದು ವಿಷಯ ಅಷ್ಟೂ ದಿನದ ಗೆಳೆತನವನ್ನೋ, ಸಂಬಂದವನ್ನೋ ಹಾಳು ಮಾಡಿಬಿಡಬಹುದೇ? ಶಾರದಾಳಿಗೆ ಯಾವನೋ ಒಬ್ಬ ಬಂದು ಪ್ರೇಮ ನಿವೇದನೆ ಮಾಡಿದ್ದರಿಂದ ನೋವಾಗಿರಬಹುದು. ಆ ಕವಿತೆ ಬರೆದುಕೊಟ್ಟಿದ್ದು ಮಹಾಂತೇಶನೇ ಇರಬಹುದೆಂದು ತಕ್ಷಣಕ್ಕೆ ಅನಿಸಿರಬಹುದು. ಆದರೆ ಅವಳು ಬಂದು ಸಮಾಧಾನದಿಂದ ಕುಳಿತು ಕೇಳಿದ್ದರೆ? ಅಥವಾ ತಾನು ಅದನ್ನು ಬರೆದಿಲ್ಲವೆನ್ನುವ ಅವನ ಮಾತನ್ನು ನಂಬಿದ್ದರೆ? ಕೊನೆಪಕ್ಷ ಆ ವ್ಯಕ್ತಿ ಎಂತಹವನು ಎನ್ನುವದರ ಕಲ್ಪನೆಯಾದರೂ ಇರುತ್ತಿದ್ದರೆ? ಒಂದು ನಿಷ್ಕಲ್ಮಶ ಗೆಳೆತನ ಉಳಿಯುತ್ತಿತ್ತು. ಅಂದು ವಿಮುಖರಾದವರು ಇಂದು ಗೊತ್ತೆ ಇಲ್ಲವೆನ್ನುವಂತೆ ಬಹಳ ದೂರವೇ ಹೋಗಿದ್ದಾರೆ. ಒಂದು ಪ್ರಮಾಣಿಕವಾದ ಸಂಬಂಧ ಒಂದು ಅಪಾರ್ಥಕ್ಕೆ ಎಂದೋ ಕೊಲೆಯಾಗಿತ್ತು.
ದುಡುಕಿನ, ಅವಸರದ ನಿರ್ಧಾರಗಳು ಯಾವತ್ತೂ ಒಳಿತನ್ನು ಮಾಡಲಾರವು. ಬಸು ಏನೋ ಅಂದನೆಂದು ಅವನ ಸ್ನೇಹವನ್ನೇ ತುಂಡರಿಸಿಕೊಂಡು ಹೋಗಿಬಿಟ್ಟರೆ ಲೋಕಿ ಏನು ಸಾಧಿಸಿದಂತಾಯಿತು? ಮತ್ಯಾರೋ ಗೆಳೆಯರು ಮತ್ತೇನೋ ಅಂದರೆಂದು ಅವರಿಂದಲೂ ದೂರವಾಗುವನೇ? ಹಾಗೆ ಎಲ್ಲರಿಂದಲೂ ದೂರವಾಗುತ್ತಲೇ ಹೋದರೆ ಕೊನೆಗೆ ಒಬ್ಬಂಟಿಗನಾಗಿಯೇ ಉಳಿಯಬೇಕಾಗುತ್ತದೆ. ನಿಜ ಹೇಳಬೇಕೆಂದರೆ ನೇರವಾಗಿ ಮಾತನಾಡುವವರೆ ಎದೆಯಲ್ಲಿ ಏನೂ ಮುಚ್ಚುಮರೆ ಇಟ್ಟುಕೊಂಡಿರುವುದಿಲ್ಲ. ಇದ್ದಿದ್ದನ್ನು ಇದ್ದ ಹಾಗೆಯೇ ಹೇಳುತ್ತಾರೆ. ನೇರವಾಗಿ ಏನೋ ಹೇಳಿದ, ನೇರವಾಗಿ ಹೇಳಿ ನನ್ನ ಮನಸ್ಸು ನೋಯಿಸಿದ ಎಂದು ಎಲ್ಲವನ್ನೂ ಮುರಿದು ಹೋಗಿಬಿಟ್ಟರೆ ಸ್ನೇಹಕ್ಕೆ ಎಲ್ಲಿ ಬೆಲೆ? ನಾವು ನಮ್ಮ ಸುತ್ತಮುತ್ತಲೂ ಕಾಣುವಂತೆ ಒಂದೆರೆಡು ಛಲೋ ಮಾತನಾಡುವವರಿಗೆ ಜಾಸ್ತಿ ಮನ್ನಣೆ ಕೊಡುತ್ತೇವೆ. ನೇರವಾಗಿ ಮಾತನಾಡುವವರನ್ನು ದೂರವೇ ಇಟ್ಟಿರುತ್ತೇವೆ. ಆದರೆ ನೇರವಾಗಿ ಮಾತನಾಡುವವನ ಗುಣ ಎಂತಹದ್ದು, ಅವನ ಮನಸ್ಸು ಏನು? ತಮ್ಮ ಬಗ್ಗೆ ಅವನ ಕಾಳಜಿ, ಅಭಿಪ್ರಾಯಗಳೇನು ಎನ್ನುವುದನ್ನು ಗಮನದಲ್ಲಿಟ್ಟುಕೊಂಡರೆ ಯಾರೂ ಯಾರಿಂದಲೂ ದೂರವಾಗುವುದಿಲ್ಲ. ಯಾವ ಸ್ನೇಹ, ಸಂಬಂಧಗಳೂ ಸುಮ್ಮ ಸುಮ್ಮನೆ ಮುರಿದು ಬೀಳುವುದಿಲ್ಲ.
ನಿಜ, ಸಂಬಂಧಗಳು ಕೆಡದ ಹಾಗೆ ಕಾಪಾಡಿಕೊಳ್ಳುವುದು ಎಲ್ಲರದ್ದೂ ಧರ್ಮ. ಅಪನಂಬಿಕೆ, ಅಪಾರ್ಥ, ತಪ್ಪುಕಲ್ಪನೆಗಳಾಗದಂತೆ ಎಚ್ಚರವಹಿಸುವುದು ಪ್ರತಿಯೊಬ್ಬರ ಕರ್ತವ್ಯ. ಏನು ಅಂದರೂ ಅನಿಸಿಕೊಳ್ಳುತ್ತಾರೆಂದು ಪದೆ ಪದೆ ಮನಸು ನೋಯಿಸಲೂ ಬಾರದು. ಪ್ರತಿ ಬಾರಿ ಯಾವುದೋ ಒಂದು ಮಾತು ಅಂದು ಅಂದು ಮನಸ್ಸು ನೋಯಿಸಿದಾಗಲೂ ಬೇಸತ್ತು ಸಂಬಂಧಗಳು ಮುರಿದು ಬೀಳುತ್ತವೆ. ಹಾಗೆ ಮುರಿಯದೇ ಅವುಗಳಿಗೆ ಬೇರೆ ದಾರಿಯೂ ಇರುವುದಿಲ್ಲ. ಆದರೆ ಕಟ್ಟುವುದು ಕೆಡವುದಕ್ಕಿಂತಲೂ ಸಾವಿರಪಟ್ಟು ಕಷ್ಟದಾಯಕ. ಒಂದು ಬಾರಿ ಮುರಿದರೆ ಮುರಿದು ಹೋಯಿತು. ಮುರಿಯುವ ಮೊದಲು ಅರಿಯಬೇಕಾಗಿರುವುದು ಮುಖ್ಯ. ಆದರೆ ಉದ್ದೇಶಪೂರ್ವಕವಲ್ಲದ ಒಂದು ಮಾತೂ, ಒಂದು ತಪ್ಪು ಕಲ್ಪನೆಯೂ ಎಲ್ಲವನ್ನೂ ಕೊಲ್ಲಬಹುದು.
ಇಸ್ಮಾಯಿಲ್ ತಳಕಲ್ ಕೊಪ್ಪಳ ಜಿಲ್ಲೆಯ ಗೊಂಡಬಾಳ ಎಂಬ ಗ್ರಾಮದಲ್ಲಿ ಜನಿಸಿದರು. ಪ್ರಸ್ತುತ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಖನಗಾಂವ್ ಗ್ರಾಮದಲ್ಲಿ ಸರ್ಕಾರಿ ಆದರ್ಶವಿದ್ಯಾಲಯ(ಆರ್‍ಎಮ್‍ಎಸ್‍ಎ) ಶಾಲೆಯಲ್ಲಿ ಕನ್ನಡ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಜಾವಾಣಿಯ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ (2020) ಸೇರಿದಂತೆ ಇವರ ಕಥೆಗಳು ಹಲವೆಡೆ ಪ್ರಕಟವಾಗಿ, ಬಹುಮಾನ ಪಡೆದುಕೊಂಡಿವೆ. “ಬೆತ್ತಲೆ ಸಂತ” ಇವರ ಪ್ರಕಟಿತ ಮೊದಲ ಕಥಾ ಸಂಕಲನ. ಈ ಕಥಾ ಸಂಕಲನಕ್ಕೆ 2021ರ ಪ್ರತಿಷ್ಟಿತ “ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಬಹುಮಾನ” ಬಂದಿದೆ. ಸಂಗೀತ ಕೇಳುವುದು, ಅಡುಗೆ ಮಾಡುವುದು ಇವರ ಆಸಕ್ತಿಯ ವಿಷಯಗಳು.
ಸ್ನೇಹದ ಮೌಲ್ಯವನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಚೆನ್ನಾಗಿದೆ ಸರ್
ನಿಜ ಸರ್ . ಓದುವ ದಿನಗಳಲ್ಲಿ ನಾವು ಗೆಳೆತನಕ್ಕೆ ಕೊಟ್ಟಷ್ಟು ಮಹತ್ವ ಬೇರಾವ ಸಂಬಂಧಗಳಿಗೂ ಕೊಡಲ್ಲ. ಆದರೆ ಸ್ನೇಹಿತರು ಕಾಲಕ್ಕೆ ತಕ್ಕಂತೆ ಹೆಚ್ಚುತ್ತಲೂ ಬದಲಾಗುತ್ತಲೂ ಇರುತ್ತಾರೆ. ಕೊನೆಯವರೆಗೆ ಉಳಿಯೋ ಸ್ನೇಹಿತರು ತುಂಬಾನೆ ಕಡಿಮೆ…..ಉತ್ತಮ ಬರಹ ಸರ್.