ಕ್ಲಿಯೋಳ ಪ್ರಿಯಕರ ಮಾರ್ಷಿಯಲ್ ಆರ್ಟ್ಸ್ ಪ್ರವೀಣ. ಕ್ಲಿಯೋಳ ಎದುರು, ಬಹುಶಃ ಅನಗತ್ಯವಾಗಿ, ನಗ್ನನಾಗಿ ಅದರ ವೈಖರಿಯನ್ನು ಪ್ರದರ್ಶಿಸುತ್ತಾನೆ. ಕ್ಲಿಯೋ ತನ್ನ ಪ್ರಿಯಕರನ ಜೊತೆ ಇದ್ದಾಗಲೂ ಹೆಚ್ಚು ಉನ್ಮಾದಕರ ಭಾವ ಪ್ರಕಟಿಸುವುದಿಲ್ಲ. ನಸುನಗೆಯಲ್ಲಿಯೇ ವರ್ತಿಸುತ್ತಾಳೆ. ಅವಳದು ಚೌಕು ಎನ್ನಬಹುದಾದ ಮುಖದ ಆಕಾರ. ಕಂದು ಬಣ್ಣದ ಅವಳ ಮುಖದಲ್ಲಿ ಎದ್ದು ಕಾಣುವುದು ಕಣ್ಣು ಮಾತ್ರ. ಅದರ ಸೂಕ್ಷ್ಮವಾದ ಚಲನೆಯೇ ಭಾವ ಪ್ರಕಟಣೆಗೆ ಬೆಂಬಲ. ಯಾವಾಗಲೂ ಸಾಮಾನ್ಯವೆನಿಸುವ ಮುಖಭಾವ.
ಎ. ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ನಲ್ಲಿ ಮೆಕ್ಸಿಕೋದ ʻರೋಮಾʼ ಸಿನಿಮಾದ ವಿಶ್ಲೇಷಣೆ
ಲ್ಯಾಟಿನ್ ಅಮೆರಿಕನ್ ದೇಶಗಳಲ್ಲಿ ಒಂದಾದ ಮೆಕ್ಸಿಕೋನಲ್ಲಿ 1960ರ ದಶಕದ ಪ್ರಾಮುಖ್ಯತೆ ಪಡೆದಿದೆ. ಇದಕ್ಕೆ ಮುಖ್ಯ ಕಾರಣ ಪ್ರಪಂಚದ ಅತ್ಯಂತ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬನಾದ ಬುನಿನ್ ತನ್ನ `ದ ಅಬ್ ಸ್ಕ್ಯೂರ್ ಆಬ್ಜೆಕ್ಟ್ ಆಫ್ ಡೆಸೈರ್’ ಮತ್ತು `ದ ಡಿಸ್‌ಕ್ರೀಟ್ ಚಾರ್ಮ್ ಆಫ್ ಬೂರ್ಜ್ವಾ’ ಎಂಬ ಎರಡು ಚಿತ್ರಗಳನ್ನು ಪ್ರಸ್ತುತಪಡಿಸಿದ. ಅನಂತರ 1990ರ ತನಕ ಗಮನಾರ್ಹವಾದ ಸಿನಿಮಾ ಚಟುವಟಿಕೆ ಕಂಡುಬರುವುದಿಲ್ಲ. ಅನಂತರವಷ್ಟೆ ನಿಯೋ ಮೆಕ್ಸಿಕನ್ ಸಿನೆಮಾ ಎಂಬ ಸರ್ಕಾರದ ಅಧೀನದ ಸಂಸ್ಥೆ ಅಸ್ತಿತ್ವಕ್ಕೆ ಬಂದ ಮೇಲೆ ಚಲನಚಿತ್ರರಂಗ ಪ್ರಗತಿ ಗಳಿಸಲು ಸಾಧ್ಯವಾಗಿದೆ. ಅನೇಕ ಬಗೆಯ ಸವಾಲುಗಳ ನಡುವೆ ಅದು ಇಂದಿಗೂ ಕೂಡ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡು ಬಂದಿದೆ.
ಮೆಕ್ಸಿಕೋ ದೇಶದಲ್ಲಿ ಸಿನಿಪೋಲಿಸ್ ಎಂಬ ಚಲನಚಿತ್ರ ಕೊಂಡಿಗಳನ್ನು ಹೊಂದಿದ ಸಂಸ್ಥೆಯೊಂದಿದೆ. ಅದು ಇಡೀ ಪ್ರಪಂಚದಲ್ಲಿ ಆ ರೀತಿ ವ್ಯವಸ್ಥೆಗೊಳಿಸುವ ಸಂಸ್ಥೆಗಳಲ್ಲಿ ನಾಲ್ಕನೆಯ ಸ್ಥಾನವನ್ನು ಹೊಂದಿದೆ. ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ ʻಪ್ಯಾನ್ ಲೇಬೆರಿಂತ್ʼಚಿತ್ರದ ಅಲ್ಫಾನ್ಸೋ ಕುರಾನ್, ʻಅಮರೋಸ್ ಪೆರೋಸ್ʼ ಚಿತ್ರದ ಅಲ್ಫಾನ್ಸೋ ಗೊನ್ಸಾಲಿಸ್ ಇನಾರಿತು ಮುಂತಾದ ನಿರ್ದೇಶಕರ ಸಿನಿಮಾಗಳೂ ಈ ಸಂಸ್ಥೆಯ ನೆರವನ್ನು ಪಡೆದಿವೆ. ಇತ್ತೀಚಿನ ವರ್ಷಗಳಲ್ಲಿ ಎಣಿಸುವುದಕ್ಕೇ ಸಾಕಷ್ಟು ಸಮಯ ತೆಗೆದುಕೊಳ್ಳುವ ಪ್ರಶಸ್ತಿ ಹಾಗೂ ನಾಮನಿರ್ದೇಶನಗಳನ್ನು ಹೊಂದಿದ ಚಿತ್ರ ಅಲ್ಫಾನ್ಸೋ ಕುರಾನ್ ನಿರ್ದೇಶಿತ ಚಿತ್ರ ʻರೋಮಾʼ.
ಚಿತ್ರ ತೆರೆದುಕೊಳ್ಳುತ್ತಿದ್ದಂತೆ ಉದ್ದಾನುದ್ದ ಹೊರಾಂಗಣದಲ್ಲಿ ನೀರು ಚೆಲ್ಲುವ ಕೈ. ಅದರ ಜೊತೆಗೇ ಕಸಬರಿಕೆಯಿಂದ ಅದನ್ನು ಆಡಿಸುತ್ತ ಅಲ್ಲಲ್ಲಿ ಇರುವ ಕಸವನ್ನು ನೀರಿನೊಂದಿಗೆ ನೂಕುವ ಕ್ರಿಯೆ. ಈಗ ಅಲ್ಲಿ ಹರಡಿದ ತಿಳಿ ನೀರಿನಲ್ಲಿ ಮೇಲಿನ ನೀಲಿಯಾಕಾಶದ ಪ್ರತಿಫಲನ. ಮತ್ತಲ್ಲಿ ಆಕಾಶದಲ್ಲಿ ಚಲಿಸುವ ವಿಮಾನ. ಭೂಮಿ ಮತ್ತು ಆಕಾಶಗಳನ್ನು ಒಟ್ಟಿಗೆ ತರುವುದರ ಜೊತೆ ಚಲನ ಕ್ರಿಯೆ. ಇವೆಲ್ಲವೂ ಒಗ್ಗೂಡಿ ಭೂಮಿಯ ಮೇಲೆ ಹಲವು ನೋವುಗಳ ನಡುವೆ ಮುಂದೆ ಎಲ್ಲವನ್ನು ನಿಭಾಯಿಸಿಕೊಂಡು, ಎಲ್ಲರೊಂದಿಗೆ ಮುಂದೆ ಸಾಗುವ ಹಂಬಲವನ್ನು ಪ್ರಕಟಿಸುವಂತೆ ತೋರುತ್ತದೆ. ನಂತರ ನೀರು ನೂಕುವ ಕ್ಲಿಯೋ ಕಾಣಿಸಿಕೊಳ್ಳುತ್ತಾಳೆ. ಅವಳು ಅಂಗಳದಂಚಿನಲ್ಲಿ ಇರುವ ಗೇಟಿನ ತನಕ ಮಾಡುವ ಕೆಲಸದಲ್ಲಿ ತನ್ಮಯಳಾಗಿರುತ್ತಾಳೆ.
ಈ ದೃಶ್ಯದ ಅವಧಿ ಸಾಕಷ್ಟು ದೀರ್ಘ ಎನ್ನುವುದು ಇಡೀ ಚಿತ್ರದ ಆಶಯಕ್ಕೆ ಅಗತ್ಯ ಭೂಮಿಕೆಯನ್ನು ನಿರ್ಮಿಸುತ್ತದೆ. ಮೆಕ್ಸಿಕೋದಲ್ಲಿ ಎಪ್ಪತ್ತರ ದಶಕ ಪ್ರಾರಂಭದಲ್ಲಿದ್ದ ರಾಜಕೀಯ ತಲ್ಲಣ, ಅದರ ಫಲವಾಗಿ ಉಂಟಾಗುತ್ತಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ಇತ್ಯಾದಿ ಹೋರಾಟಗಳ ನಡುವೆ ಮಧ್ಯಮ ವರ್ಗದ ಸಂಸಾರವೊಂದರ ಮೇಲೆ ಅದು ಬೀರಿದ ಪರಿಣಾಮವನ್ನು ತೆರೆದಿಡುವ ಹಂಬಲ ನಿರ್ದೇಶಕ ಅಲ್ ಫಾನ್ಸೋ ಕುರಾನ್ ಗೆ ಇದೆಯೆಂದು ಕಾಣುತ್ತದೆ. ಇಷ್ಟಲ್ಲದೆ ಅವನೇ ಹೇಳಿರುವ ಹಾಗೆ ಸ್ವಂತ ಅನುಭವದ ಅಂಶಗಳಿರದೆ ತಾನು ಚಿತ್ರವನ್ನೇ ತಯಾರಿಸುವುದಿಲ್ಲ ಎನ್ನುವುದನ್ನು ಈ ಚಿತ್ರಕ್ಕೂ ಅನ್ವಯಿಸಬೇಕಾಗುತ್ತದೆ.
ʻರೋಮಾʼ ಚಿತ್ರದ ಹೆಗ್ಗಳಿಕೆ ಇರುವುದು ಅದರ ಚಿತ್ರದುದ್ದಕ್ಕೂ ಇರುವ ಸಿನಿಮಾ ಭಾಷೆಯ ವೈಭವ. ಅದು ಪ್ರಕಟವಾಗುವುದು ಅತ್ಯಂತ ಸಹಜವೆನಿಸುವ ಬಗೆಯಲ್ಲಿ. ತೀರ ಸಾಮಾನ್ಯವಾದದ್ದಕ್ಕೂ ಸೃಷ್ಟಿ ಕ್ರಿಯೆಯ ಮಿಂಚು ಹಂಚುವ ರೂಪದಲ್ಲಿ. ಪ್ರಮುಖವಾಗಿ ಇದು ಕಾಣಿಸಿಕೊಳ್ಳುವುದು ಚಿತ್ರದ ಪರಿಸರವನ್ನು ಒಳಗೊಂಡ ದೃಶ್ಯ ವಿನ್ಯಾಸ, ಪಾತ್ರಗಳ ಅಭಿನಯ ಹಾಗೂ ವರ್ತನೆ. ಇವೆಲ್ಲಕ್ಕೆ ಅಡಿಪಾಯವೆನಿಸುವ ಹಾಗೆ ಛಾಯಾಗ್ರಹಣ ಮತ್ತು ಆಯಾ ಚಿತ್ರಕಥೆ ಅಪೇಕ್ಷಿಸುವ ಚಿತ್ರಿಕೆಗಳಿಗೆ ಪೂರಕವಾದ ಹಿನ್ನೆಲೆ ಸಂಗೀತದಲ್ಲಿ. ಈ ಎಲ್ಲದರಲ್ಲೂ ಭೇಷ್ ಎನ್ನಿಸುವಂತಿರುವುದೇ ಚಿತ್ರ ಉತ್ತುಂಗಕ್ಕೇರಲು ಸಾಧ್ಯವಾಗಿದ್ದು. ಚಿತ್ರಿಕೆಗಳಲ್ಲಿ ಪ್ಯಾನ್ ಮತ್ತು ಟ್ರಾಕ್ ಛಾಯಾಗ್ರಹಣ ಇಡೀ ಚಿತ್ರದುದ್ದಕ್ಕೂ ಆಕ್ರಮಿಸಿಕೊಳ್ಳುವುದರ ಜೊತೆಗೆ ನಮ್ಮನ್ನೂ ಆವರಿಸುತ್ತವೆ. ಪ್ರತಿ ದೃಶ್ಯದ ಸಣ್ಣಪುಟ್ಟ ವಸ್ತು, ವಿಷಯಗಳನ್ನು ನಮ್ಮ ಗಮನ ಅವುಗಳ ಮೇಲೆ ಕೇಂದ್ರೀಕರಿಸುವಂತೆ ಮಾಡುವ ಆ ಚಿತ್ರಿಕೆಗಳ ಉದೇಶ ಸಫಲವಾಗುತ್ತದೆ. ದೃಶ್ಯದಲ್ಲಿನ ವಸ್ತು, ವಿಷಯ, ವರ್ತನೆಗಳು ನಿಕೃಷ್ಟ ಎನಿಸಿದರೂ ತನ್ನ ಕರ್ತವ್ಯವನ್ನು ಚಾಚೂ ತಪ್ಪದೆ ನಿರ್ವಹಿಸುವ ಅವುಗಳ ಆಶಯ ಮೆಚ್ಚುವಂಥಾದ್ದು. ಚಿತ್ರೀಕರಣದ ಶೈಲಿಯ ಬಗ್ಗೆ ಆಸಕ್ತಿ ಹೊಂದಲು ಪ್ರೇರಣೆಯಾಗಲು ನೆರವಿಗೆ ಬಂದ ಉಪಕರಣ ಅಂದರೆ ಕ್ಯಾಮೆರಾ ಯಾವುದೆಂಬ ಕುತೂಹಲ ಶಮನವಾಗುವುದು ಅದು ಅಲೆಕ್ಸಾ 65 ಡಿಜಿಟಲ್ ಎಂದು ತಿಳಿದಾಗ.
ಚಿತ್ರದಲ್ಲಿ ನಾಟಕೀಯ ಎನಿಸುವ ಹಾಗೂ ಭಾವೋದ್ವೇಗ ಎನಿಸುವ ದೃಶ್ಯಗಳು ಬಹಳ ಕಡಿಮೆ. ಸಾಮಾನ್ಯ ಘಟನೆಗಳಲ್ಲಿಯೇ ಪಾತ್ರಗಳ ನಡುವಿನ ಸಂಬಂಧದ ಅಂಶವನ್ನು ಪಾತ್ರಗಳ ವರ್ತನೆ, ಹಾಗೂ ಯುಕ್ತ ಅಭಿನಯದಿಂದ ಪೂರ್ಣವಾಗಿ ಗ್ರಹಿಸುವಂತೆ ನಿರ್ದೇಶಕ ಮಾಡುತ್ತಾನೆ. ಇಷ್ಟಾಗಿಯೂ ಚಿತ್ರದಲ್ಲಿ ಅತ್ಯಂತ ಅವಶ್ಯವೆನಿಸುವ ಸ್ಥಳಗಳಲ್ಲಿ ಮಾತ್ರ ಅತಿಸಮೀಪದ ಚಿತ್ರಿಕೆಗಳಿವೆ. ಉಳಿದಂತೆ ಒಂದಕ್ಕಿಂತ ಹೆಚ್ಚು ಪಾತ್ರಗಳಿರುವ ಚಿತ್ರಿಕೆಗಳಲ್ಲಿ ಮಾತಿಗಿಂತ ಹೆಚ್ಚಾಗಿ ಚಲನೆ ಹಾಗೂ ವರ್ತನೆಗಳಿಗೆ ಪ್ರಾಧಾನ್ಯ ಕೊಡಲಾಗಿದೆ.
ʻರೋಮಾʼ ಮಧ್ಯಮ ವರ್ಗದ ಸಂಸಾರವೊಂದರ ಚಿತ್ರಣವನ್ನು ತೆರೆದಿಡುತ್ತದೆ. ಸಾಕಷ್ಟು ದೊಡ್ಡದು ಎನ್ನಬಹುದಾದ ಗಂಡ-ಹೆಂಡತಿ ಮಕ್ಕಳು ಇರುವ ಮನೆಯಲ್ಲಿ ಮನೆಗೆಲಸದವಳಾಗಿ ಕ್ಲಿಯೋ(ಎಲಿಜ್ಟೋ ಅಪಾರಿಕೊ) ಕಾಣಿಸಿಕೊಳ್ಳುತ್ತಾಳೆ. ಮನೆಯಾತ ಕೆಲಸದ ನಿಮಿತ್ತ ಊರಿನಿಂದ ಬೇರೆ ಕಡೆಯಲ್ಲಿಯೇ ಹೆಚ್ಚಿಗೆ ಇರುತ್ತಾನೆ. ಮನೆಯಲ್ಲಿ ಒಡತಿ ಸ್ರಾ ಸೋಫಿಯಾ (ಮೆರೀನಾ ಡೆ ತವಿರಾ) ಮತ್ತು ನಾಲ್ಕು ಮಕ್ಕಳು. ಆ ಮಕ್ಕಳ ದೈನಂದಿನ ಅಗತ್ಯಗಳನ್ನು ಪೂರೈಸುವ ಕೆಲಸ ಕ್ಲಿಯೋಳದ್ದು. ಉಳಿದಂತೆ ಮನೆಗೆ ಸಂಬಂಧಿಸಿದಂತೆ ಕೆಲಸಗಳನ್ನು ನಿಭಾಯಿಸುತ್ತಾಳೆ. ಕೆಲಸ ಮಾಡುವ ಮನೆಯಲ್ಲಿಯೇ ವಾಸಿಸುವ ಕ್ಲಿಯೋ ಎಲ್ಲ ಕೆಲಸಗಳನ್ನು ಅತ್ಯಂತ ನಿಷ್ಠೆಯಿಂದ, ಸಮರ್ಥವಾಗಿ ನಿರ್ವಹಿಸುತ್ತಾಳೆ.
ಮಕ್ಕಳನ್ನು ಬೆಳಿಗ್ಗೆ ಎಬ್ಬಿಸುವುದು, ಸ್ಕೂಲಿಗೆ ಹೋಗಲು ಸಿದ್ಧಪಡಿಸುವುದು ಮತ್ತು ಸ್ಕೂಲಿಗೆ ಬಿಡುವುದು ಮುಂತಾದವನ್ನು ತ್ವರಿತವಾಗಿ ಪೂರೈಸುತ್ತಾಳೆ. ಎಲ್ಲ ಕೆಲಸಗಳನ್ನು ಕಾಲಕ್ಕೆ ಅನುಸಾರವಾಗಿ ಸಂಪೂರ್ಣ ಲಕ್ಷ್ಯಕೊಟ್ಟು ಮಾಡುವ ಅವಳು ಮಕ್ಕಳನ್ನು ತುಂಬು ಹೃದಯದಿಂದ ಪ್ರೀತಿಸುತ್ತಾಳೆ ಮತ್ತು ಮಕ್ಕಳು ಕೂಡ ಅದನ್ನು ಪ್ರತಿಫಲಿಸುತ್ತವೆ. ಇದು ಪರಸ್ಪರ ವರ್ತನೆಯಿಂದ ಮನದಟ್ಟಾಗುತ್ತದೆ. ಮನೆಯೊಡತಿ ಸೋಫಿಯಾಗೆ ಕ್ಲಿಯೋಳ ಮೇಲೆ ಇನ್ನಿಲ್ಲದಷ್ಟು ಮಮತೆ. ಚಿತ್ರದ ಕಥನ ಸ್ವರೂಪದಲ್ಲಿ ಹೀಗೆ ಸಿದ್ಧಗೊಂಡ ಮನೆಯ ವಾತಾವರಣದಲ್ಲಿ ತಿರುವುಗಳು ಪ್ರವೇಶ ಪಡೆಯುತ್ತವೆ.
ಮೆಕ್ಸಿಕೋದಲ್ಲಿ ಎಪ್ಪತ್ತರ ದಶಕ ಪ್ರಾರಂಭದಲ್ಲಿದ್ದ ರಾಜಕೀಯ ತಲ್ಲಣ, ಅದರ ಫಲವಾಗಿ ಉಂಟಾಗುತ್ತಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ಇತ್ಯಾದಿ ಹೋರಾಟಗಳ ನಡುವೆ ಮಧ್ಯಮ ವರ್ಗದ ಸಂಸಾರವೊಂದರ ಮೇಲೆ ಅದು ಬೀರಿದ ಪರಿಣಾಮವನ್ನು ತೆರೆದಿಡುವ ಹಂಬಲ ನಿರ್ದೇಶಕ ಅಲ್ ಫಾನ್ಸೋ ಕುರಾನ್ ಗೆ ಇದೆಯೆಂದು ಕಾಣುತ್ತದೆ.
ಮನೆಯಲ್ಲಿ ಕ್ಲಿಯೋಗೆ ಅಡೆಲಾ ಸಹಕೆಲಸದವಳು. ಕ್ಲಿಯೋ ಅದೊಂದು ದಿನ ಅಡೆಲಾಳ ಜೊತೆ ಸಿನಿಮಾಗೆ ಹೋಗುತ್ತಾಳೆ. ಅಲ್ಲಿ ಅವಳ ಸ್ನೇಹಿತ ಫರ್ಮಿನ್‌ನ ಪರಿಚಯವಾಗುತ್ತದೆ. ನಿರೀಕ್ಷಿಸಬಹುದಾದಂತೆ ಪರಿಚಯ ಬೇಗನೆ ಪ್ರೇಮಕ್ಕೆ ತಿರುಗುತ್ತದೆ. ಅದಕ್ಕೆ ತದ್ವಿರುದ್ಧವಾಗಿ ಮನೆಯಾತ ಊರಿನಲ್ಲಿ ಬಹಳ ದಿನ ಇರುವುದಿಲ್ಲ ಎನ್ನುವ ಸೂಚನೆ ಕೊಟ್ಟು ಹೆಂಡತಿ ಮಕ್ಕಳಿಂದ ದೂರವಾಗುತ್ತಾನೆ. ಅವನಿಗೆ ದೂರದೂರಿನ ಪ್ರೇಯಸಿಯ ಆಕರ್ಷಣೆ ಸೆಳೆಯುತ್ತದೆ.
ಅದೊಂದು ದೃಶ್ಯದಲ್ಲಿ ಕ್ಲಿಯೋ ಮನೆಯೊಡತಿ ಸೋಫಿಯಾಳ ಸುಮಾರು ನಾಲ್ಕೈದು ವರ್ಷದ ಹೆಣ್ಣು ಮಗು ಮನೆಯ ತಾರಸಿಯಲ್ಲಿ ಕೆಲಸ ಮಾಡುತ್ತಿರುವ ಕ್ಲಿಯೋಳ ಬಳಿ ಬರುತ್ತದೆ. ಅನಂತರದ ಚಿತ್ರಿಕೆಯಲ್ಲಿ ಅಲ್ಲಿಯೇ ಇರುವ ಕಲ್ಲು ಬೆಂಚಿನ ಮೇಲೆ, ಮಗು ಕಾಲುಗಳನ್ನು ಇಳಿ ಬಿಟ್ಟು, ಆಕಾಶದ ಕಡೆ ನೋಡುತ್ತ ಮಲಗಿರುವುದು ಕ್ಲಿಯೋಗೆ ಕಾಣುತ್ತದೆ. ಅವಳೂ ಕೂಡ ಆ ಮಗುವಿನಂತೆಯೇ ಮಗುವಿನ ತಲೆಗೆ ತನ್ನ ತಲೆ ತಾಗುವ ಹಾಗೆ ಮಲಗಿ ಆಕಾಶವನ್ನು ದಿಟ್ಟಿಸುತ್ತಾಳೆ. ಹೀಗೆ ಮಾಡುವುದರಿಂದ ಕ್ಲಿಯೋ ಕೂಡ ಮಗುವಿನಂತೆಯೇ ಇರುವಳೆಂಬ ಭಾವವನ್ನು ನಮಗೆ ಸೂಚಿಸುವುದು ಮೆಚ್ಚುಗೆಯಾತ್ತದೆ.
ಇನ್ನೊಂದು ಪರಿಣಾಮ ಬೀರುವ ದೃಶ್ಯವೆಂದರೆ ಅವಳು ಸುಮಾರು ನಲವತ್ತು-ಐವತ್ತು ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗುವುದು. ಇಲ್ಲಿಯೂ ನಿರ್ದೇಶಕನಿಗೆ ಬಡವಳಾದರೂ ಅವಳ ಮಾನಸಿಕ ನಿಲುವು ಉನ್ನತ ಮಟ್ಟದ್ದು ಎಂದು ಸೂಚಿಸುತ್ತಾನೆ.
ಕ್ಲಿಯೋಳ ಪ್ರಿಯಕರ ಮಾರ್ಷಿಯಲ್ ಆರ್ಟ್ಸ್ ಪ್ರವೀಣ. ಕ್ಲಿಯೋಳ ಎದುರು, ಬಹುಶಃ ಅನಗತ್ಯವಾಗಿ, ನಗ್ನನಾಗಿ ಅದರ ವೈಖರಿಯನ್ನು ಪ್ರದರ್ಶಿಸುತ್ತಾನೆ. ಕ್ಲಿಯೋ ತನ್ನ ಪ್ರಿಯಕರನ ಜೊತೆ ಇದ್ದಾಗಲೂ ಹೆಚ್ಚು ಉನ್ಮಾದಕರ ಭಾವ ಪ್ರಕಟಿಸುವುದಿಲ್ಲ. ನಸುನಗೆಯಲ್ಲಿಯೇ ವರ್ತಿಸುತ್ತಾಳೆ. ಅವಳದು ಚೌಕು ಎನ್ನಬಹುದಾದ ಮುಖದ ಆಕಾರ. ಕಂದು ಬಣ್ಣದ ಅವಳ ಮುಖದಲ್ಲಿ ಎದ್ದು ಕಾಣುವುದು ಕಣ್ಣು ಮಾತ್ರ. ಅದರ ಸೂಕ್ಷ್ಮವಾದ ಚಲನೆಯೇ ಭಾವ ಪ್ರಕಟಣೆಗೆ ಬೆಂಬಲ. ಯಾವಾಗಲೂ ಸಾಮಾನ್ಯವೆನಿಸುವ ಮುಖಭಾವ. ಅವಳು ಭಾವವನ್ನು ಪ್ರಕಟಿಸುವುದಕ್ಕಿಂತ ನಿಯಂತ್ರಿಸಿಕೊಳ್ಳುವುದೇ ಹೆಚ್ಚು. ತನ್ನ ಪ್ರಿಯಕರನೊಂದಿಗೆ ಕಳೆದ ಸಮಯದ ಫಲವಾಗಿ ಅವಳು ಗರ್ಭಿಣಿಯಾಗಿರುವುದನ್ನು ಅವನಿಗೆ ತಿಳಿಸುತ್ತಾಳೆ. ಆದರೆ ಅವನಿಂದ ಯಾವ ಬಗೆಯ ಸಂತೋಷವಾಗಲಿ, ಜವಾಬ್ದಾರಿಯುತ ವರ್ತನೆ ಅಥವಾ ನಡುವಳಿಕೆ ಆಗಲಿ ಕಂಡುಬರುವುದಿಲ್ಲ. ಮುಖದ ಸ್ನಾಯುಗಳಲ್ಲಿ ಅವುಗಳ ಸೂಚನೆ ಕಂಡುಬರುವುದಿಲ್ಲ. ಒಟ್ಟಾರೆಯಾಗಿ ನಿರ್ಭಾವ. ಅಷ್ಟಲ್ಲದೆ ಅವನು ಊರಿನಿಂದ ಬೇರೆಡೆ ಹೋಗಿ ಪೋಲೀಸ್ ವೃತ್ತಿಯಲ್ಲಿ ಸೇರಿಕೊಂಡಿರುತ್ತಾನೆ.
ನಾನು ಗರ್ಭಿಣಿಯಾಗುವುದನ್ನು ಮನೆಯೊಡತಿ ಸೋಫಿಯಾಗೆ ತಿಳಿಸಿದಾಗ ಅವಳು ವರ್ತಿಸುವ ರೀತಿಯಲ್ಲಿಯೇ ಕ್ಲಿಯೋ ಬಗ್ಗೆ ಅವಳಿಗಿರುವ ಪ್ರೀತಿಯನ್ನು ದೃಢಪಡಿಸುತ್ತದೆ. ಕ್ಲಿಯೋ ತನ್ನ ಪ್ರಿಯಕರನನ್ನು ಹುಡುಕಿಕೊಂಡು ಅವನಿದ್ದಲ್ಲಿಗೆ ಹೋಗುತ್ತಾಳೆ. ಆಗೊಂದು ವಿಸ್ತಾರವಾದ ದೂರ ಚಿತ್ರಿಕೆ ನಮ್ಮೆದುರು. ನೂರಾರು ಪೋಲೀಸರು ಕವಾಯಿತು ಮಾಡುವವರ ನಡುವೆ ಅವನಿರುತ್ತಾನೆ. ಅವಳು ಕಷ್ಟಪಟ್ಟು ಭೇಟಿಯಾದರೂ ಅವನು ಅವಳನ್ನು ಸಂಪೂರ್ಣ ಅಲಕ್ಷಿಸಿ ಹೊರಡುತ್ತಾನೆ. ಕ್ಲಿಯೋಗೆ ಈಗ ನಿರೀಕ್ಷೆ ಇರುವುದು ಗರ್ಭದಲ್ಲಿರುವ ಮಗುವಿನ ಕ್ಷೇಮದ ವಿಷಯವಷ್ಟೇ. ಒಡತಿ ಅವಳನ್ನು ಡಾಕ್ಟರಲ್ಲಿಗೆ ಕರೆದುಕೊಂಡು ಹೋಗುತ್ತಾಳೆ.
ಮೆಕ್ಸಿಕೋ ನಗರದಲ್ಲಿ ಈ ನಡುವೆ ಪ್ರಭುತ್ವ ಮತ್ತು ವಿದ್ಯಾರ್ಥಿಗಳ ನಡುವೆ ಕಾಟ ಹೆಚ್ಚಾಗಿರುತ್ತದೆ ಅವರನ್ನು ನಿಯಂತ್ರಿಸಲು ಬರುವ ಪೊಲೀಸರ ಪೈಕಿ ಕ್ಲಿಯೋಳ ಪ್ರಿಯಕರ ಕೂಡ ಇರುವುದು ಅವಳಿಗೆ ಸೋಜಿಗವೆನಿಸುತ್ತದೆ. ಎಲ್ಲ ಬಗೆಯ ಒತ್ತಡಗಳಿಗೆ ಒಳಗಾದ ಅವಳು ಹೆರಿಗೆಯ ಯಾತನೆಗೆ ಒಳಗಾಗುತ್ತಾಳೆ. ತನ್ನ ಜೀವನದಲ್ಲಿ ಎದುರಾಗುತ್ತಿರುವ ಸಂಕಟವನ್ನು ಕೂಡ ಇದು ಪ್ರಕಟಿಸುತ್ತದೆ. ಕ್ಲಿಯೋಗೆ ಹೆರಿಗೆ ಮಾಡಿಸುವ ದೃಶ್ಯ ಸಾಕಷ್ಟು ವಿವರಗಳಿಂದ ಕೂಡಿದೆ. ಒಬ್ಬ ಸಾಮಾನ್ಯ ಹೆಣ್ಣು ಮಗಳು ಈ ಸಂದರ್ಭಕ್ಕೆ ಒಳಗಾದಾಗ ಅವಳ ಜವಾಬ್ದಾರಿಯನ್ನು ಹೊತ್ತ ಡಾಕ್ಟರರು ವರ್ತಿಸುವ ರೀತಿಯ ಬಗ್ಗೆ ಮೆಚ್ಚುಗೆಯಾಗುತ್ತದೆ. ಅವರು ತಮ್ಮ ಕಾರ್ಯವನ್ನು ಸಂಬಂಧಪಟ್ಟವರಿಗೆ ವಹಿಸುತ್ತಾರೆ. ಸಾಕಷ್ಟು ಅವಧಿಯ ಈ ಮಿಡ್ ಶಾಟ್ ದೃಶ್ಯ ನಮ್ಮನ್ನು ಕುತೂಹಲದಂಚಿಗೆ ನಿಲ್ಲಿಸುತ್ತದೆ. ಆದರೂ ಕ್ಲಿಯೋ ಮಗು ಗರ್ಭದಲ್ಲಿಯೇ ಸತ್ತಿರುತ್ತದೆ. ವಿಷಯ ತಿಳಿದ ಅವಳು ಆಗಲೂ ಉದ್ವಿಗ್ನಳಾಗುವುದಿಲ್ಲ. ಈ ದೃಶ್ಯದಲ್ಲಿ ಕ್ಲಿಯೋ ಮುನ್ನೆಲೆಯಲ್ಲಿ ಸತ್ತ ಮಗು ಅದೇ ಮಟ್ಟದಲ್ಲಿ ಹಿನ್ನೆಲೆಯಲ್ಲಿ ಇರುತ್ತದೆ. ಇದು ಆಗಿನ ಪರಿಸ್ಥಿತಿಯಲ್ಲಿ ಮಗುವಿನ ರೀತಿಯಲ್ಲಿಯೇ ಅವಳೂ ಇರುತ್ತಾಳೆ ಎನ್ನುವುದನ್ನು ಬಿಂಬಿಸುತ್ತದೆ. ಎಷ್ಟೇ ಕೆಟ್ಟದಾದರೂ ವಾಸ್ತವವನ್ನು ಸ್ವೀಕರಿಸದೆ ಅವಳಿಗೆ ಬೇರೆ ಆಯ್ಕೆ ಇರುವುದಿಲ್ಲ.
ಮನೆಯಾತ ಇನ್ನು ಬರುವುದಿಲ್ಲವೆಂದು ಸಾವಧಾನದಿಂದಲೇ ಸೋಫಿಯಾ ಕ್ಲಿಯೋಗೆ ತಿಳಿಸುತ್ತಾಳೆ. ಜೊತೆಗೆ ಅವನಿಗೊಬ್ಬ ಪ್ರೇಯಸಿ ಇದ್ದಾಳೆ ಎಂಬ ಸಂಗತಿಯನ್ನು ಕೂಡ. ಈ ಘಟನೆಗೆ ಮೊದಲು ಮನೆಯಲ್ಲಿದ್ದ ಗ್ಯಾಲಕ್ಸಿ ಕಾರನ್ನು ತುಂಬ ಜಾಗರೂಕತೆಯಿಂದ ಮುಂಬಾಗಿಲಿಂದ ಒಳಗೆ ತರುತ್ತಿದ್ದ ಸೋಫಿಯಾ ಈಗ ಮನಬಂದಂತೆ ಅತ್ತಿತ್ತ ಓಡಿಸಿ ಅದನ್ನು ವಿರೂಪಗೊಳಿಸಿ ತನ್ನ ಗಂಡನ ಬಗ್ಗೆ ಉಂಟಾದ ವಿಘಟಿತ ಪ್ರೇಮವನ್ನು ಪ್ರಕಟಿಸುತ್ತಾಳೆ. ಆ ಕಾರನ್ನು ಮಾರಿ ಬೇರೆಯದನ್ನು ತೆಗೆದುಕೊಳ್ಳುವುದರ ಮೂಲಕ ಹೊಸ ಜೀವನದ ಪ್ರವೇಶವನ್ನು ಪ್ರಕಟಿಸುತ್ತಾಳೆ.
ಆ ನಂತರ ಮನೆಯವರೆಲ್ಲರೂ ವಿಹಾರಾರ್ಥವಾಗಿ ಸಮುದ್ರಕ್ಕೆ ಹೋಗುತ್ತಾರೆ. ಈಜು ಬರದ ಕ್ಲಿಯೋ ಕೂಡ ಅವರಲ್ಲೊಬ್ಬಳು. ಸಮುದ್ರದಂಚಿನಲ್ಲಿ ಓಡಾಡುವಾಗ ಪ್ರಾರಂಭದಲ್ಲಿ ಅವರೊಂದಿಗಿದ್ದ ಸೋಫಿಯೋ ಸ್ವಲ್ಪ ದೂರವಾಗುತ್ತಾಳೆ. ಈ ದೃಶ್ಯದಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕು ಸೋಫಿಯಾಳ ಮಗುವೊಂದು ಮುಳುಗುವ ಹಂತಕ್ಕೆ ಬಂದಿರುತ್ತದೆ. ಕ್ಲಿಯೋ ಸ್ವಂತ ಹಿತವನ್ನು ಮರೆತು ಧೈರ್ಯವಹಿಸಿ, ಅದರತ್ತ ಧಾವಿಸಿ ಮಗುವನ್ನು ರಕ್ಷಿಸುತ್ತಾಳೆ. ಆಕಸ್ಮಿಕವಾಗಿ ಸಂಭವಿಸುವ ಈ ಘಟನೆಯ ನಿರೂಪಣೆ ಸಾಕಷ್ಟು ವಿಸ್ತಾರವಾಗಿದೆ. ಛಾಯಾಗ್ರಹಣದ ಮೇಲ್ಮಟ್ಟವನ್ನು ಅಲ್ಲಿ ಮತ್ತೆ ಸ್ಥಾಪಿಸಲಾಗುತ್ತದೆ. ಇದರಿಂದ ಸಂಸಾರದೊಡನೆ ತಾನು ಸಂಪೂರ್ಣವಾಗಿ ಹೊಂದಿಕೊಂಡು ಹೋಗಿದ್ದೇನೆ ಎನ್ನುವುದನ್ನು ಮತ್ತಷ್ಟು ಧೃಡಪಡಿಸತ್ತಾಳೆ. ಮಗುವನ್ನು ಕಳೆದುಕೊಂಡ ತಾನು ಇನ್ನೇನು ಸಾಯಲಿರುವ ಮಗುವನ್ನು ಕಾಪಾಡಿದೆ ಎನ್ನುವುದನ್ನು ಕಿಂಚಿತ್ ಅಹಂಕಾರವಿಲ್ಲದೆ ಕೇವಲ ಮನುಷ್ಯಳೊಬ್ಬಳು ವರ್ತಿಸುವ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾಳೆ. ಸೋಫಿಯಾಳಂತೂ ಭಾವಪರವಶಗೊಳ್ಳುತ್ತಾಳೆ. ಸಂಸಾರದಲ್ಲಿ ಕ್ಲಿಯೋ ಬೆರೆತು ಹೋಗಿದ್ದಾಳೆ ಎನ್ನುವುದನ್ನು ಪ್ರಕಟಿಸುತ್ತಾಳೆ. ಮಕ್ಕಳ ಜೊತೆ ಅವಳನ್ನೂ ತಬ್ಬಿಕೊಳ್ಳುತ್ತಾಳೆ.
ಚಿತ್ರ ಎಲ್ಲ ಅಂಶಗಳಲ್ಲಿ ಶ್ರೇಷ್ಠ ಮಟ್ಟದಲ್ಲಿದ್ದು ಅದಕ್ಕೆ ದೊರೆತ ಎಲ್ಲ ಬಗೆಯ ಮನ್ನಣೆ ಪೂರ್ಣವಾಗಿ ನ್ಯಾಯಯುತ ಎನ್ನುವುದು ನಮ್ಮ ಮನದಲ್ಲಿ ಮೂಡುತ್ತದೆ.
ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು.