ಶಾಂತಣ್ಣ ಹೊಸದುರ್ಗದ ಕಡೆಯವನು. ಮರಾಠಿ ಅವನ ಮಾತು. ಉರ್ದು, ತೆಲಗು, ಲಂಬಾಣಿ. ಹಾಗು ನಮ್ಮೂರಲ್ಲಿ ಡಬ್ಬಗಳ ಮಾರಿ ಜೀವಿಸುವ ಜನರ ಒಂಥರದ ವಿಚಿತ್ರ ಭಾಷೆಯನ್ನೂ ಅವನೂ ಮಾತಾಡುತ್ತಿದ್ದ. ಗಾದೆ ಮಾತು, ಒಗಟುಗಳ ಖನಿ ಅವನು. ಅವನಿಗೆ ನಾಲ್ಕಾರು ಗಂಡು ಮಕ್ಕಳೂ, ಒಬ್ಬಳು ಮಗಳೂ ಇದ್ದಳೆಂಬುದು ನೆನೆಪು. ಹೆಂಡತಿಯೊಂದಿಗೆ ಯಾವುದೋ ಮಾತಿಗೆ ಜಗಳವಾಡಿಕೊಂಡು ‘ ಇನ್ನ ನನ್ನ ಜೀವ ಇರಗಂಟ ಈ ಮನೆಯೊಳಗೆ ಕಾಲಿಡಲ್ಲ’ ಅಂತ ಪ್ರತಿಜ್ಞೆ ಮಾಡಿ ಮನೆ ಬಿಟ್ಟಿದ್ದ.
ಕನ್ನಡ ಮೇಷ್ಟ್ರು ಕಲೀಮ್ ಉಲ್ಲಾ ಬರೆದ ಒಂದು ಅಪೂರ್ವ ವ್ಯಕ್ತಿಚಿತ್ರ.
ನಮ್ಮ ಕುಲುಮೆಯಲ್ಲಿ ಕೆಲಸ ಮಾಡುವ ಅಜ್ಜನೊಬ್ಬನಿದ್ದ. ವಯಸ್ಸಿನಲ್ಲಿ ನಮ್ಮ ತಂದೆಗಿಂತ ಬಹಳ ಹಿರಿಯ ಮನುಷ್ಯ. ಅವನಿಗೆ ನಾವೆಲ್ಲಾ ಶಾಂತಣ್ಣ ಎಂದು ಕರೆಯುತ್ತಿದ್ದೆವು. ಅವನು ಬಹಳ ವರ್ಷಗಳಿಂದ ನಮ್ಮ ತಂದೆಯ ಕುಲುಮೆಯಲ್ಲಿ ಕೂತು ಕೆಲಸ ಮಾಡುತ್ತಿದ್ದ. ಕೂತು ಕೆಲಸ ಮಾಡುವುದೆಂದರೆ: ಉರಿಯುವ ಒಲೆಯ ಮುಂದೆ ಕೂತು ಕಬ್ಬಿಣವನ್ನು ಹದವಾಗಿ ಕಾಯಿಸುವ ಕಾಯಕ. ಅದು ಸಾಮಾನ್ಯವಾಗಿ ಎಲ್ಲರ ಕೈಯಲ್ಲೂ ಮಾಡಲಾಗದ, ಬಲು ನಾಜೂಕಿನ ಕೆಲಸ.
ತುಂಡಾದ ಕಬ್ಬಿಣವ ಬೆಸುಗೆ ಮಾಡುವುದು. ಚೂಪಾಗಿ ಉಜ್ಜಿದ ಕೊಡಲಿ, ಕತ್ತಿಗಳ ಬಾಯಿಗೆ ಟೆಂಪರ್ ಕೊಡುವುದು. ಕಬ್ಬಿಣ ಕರಗಿ ಹಾಳಾಗದಂತೆ ಆಗಾಗ, ಚೆಕ್ ಮಾಡುವುದು ಇತ್ಯಾದಿ ಕರ್ತವ್ಯವಿದು. ಇದರಲ್ಲಿ ಒಂದಿಷ್ಟು ಯಾಮಾರಿದರೂ ಭಾರಿ ಲುಕ್ಸಾನೇ ಆಗುವುದು. ಹೀಗಾಗಿ ಅವನೇ ಕುಲುಮೆಯ ಕ್ಯಾಪ್ಟನ್. ಉಳಿದವರೆಲ್ಲರೂ, ಅವನು ಹೇಳಿದಂತೆ ಚಮ್ಮಟಿಗೆಯಲ್ಲಿ ಕಾದ ಕಬ್ಬಿಣಕ್ಕೆ ಬಡಿಯುವವರಷ್ಟೆ. ಅವನು ಹೇಳುವ ಎಲ್ಲಾ ಮಾತುಗಳು ಆಗ ಆಜ್ಞೆಗಳಿದ್ದಂತೆ. ಅವುಗಳನ್ನು ದುಸರಾ ಮಾತಿಲ್ಲದೆ ಎಲ್ಲರೂ ಪಾಲಿಸಬೇಕು. ತಿದಿ ಒತ್ತುವವನಿಂದ ಹಿಡಿದು, ಹೊಟ್ಟು ಕಲಿಸುವವನ ತನಕ ಎಲ್ಲರಿಗೂ ಅವನೇ ಬಾಸ್. ಇಷ್ಟು ಮುಖ್ಯ ಮನುಷ್ಯ ಇವನು. ಇಂತಾಗಿ ಇವನ ಸಂಬಳವೂ, ಗೌರವವೂ ಇತರೆ, ಎಲ್ಲರಿಗಿಂತಲೂ ಹೆಚ್ಚು.
ಆದರಿವನ, ಜೀವನ ಸ್ವಭಾವಗಳು ಮಾತ್ರ ಬಹಳ ವಿಚಿತ್ರವಾಗಿದ್ದವು. ಹುಟ್ಟಾ ಕಡ್ಡಿ ಕ್ಯಾತನಾದ ಈತ ಜೀವನದಲ್ಲಿ ಯಾವತ್ತೂ ಒಳ ಚಡ್ಡಿ ತೊಡುತ್ತಿರಲಿಲ್ಲ. ಕೇಳಿದ್ದಕ್ಕೆ ‘ಬೆಂಕಿ ಮುಂದೆ ಗಾಳಿ ಆಡಬಾರದೇನೋ ಮಂಗ. ಬಂದ್ ಕೂತ್ ಕೆಲ್ಸ ಮಾಡ್ ನೋಡ್ ಎಲ್ಲ ಗೊತ್ತಾಗುತ್ತೆ’ ಅಂತ ಸವಾಲೆಸೆಯುತ್ತಿದ್ದ. ಹಾಗೇ ಇವನು ಪ್ಯಾಂಟ್ ಇಕ್ಕಲಿಲ್ಲ. ಅದೆಂಥ ಸುಡು ಬಿಸಿಲಿರಲಿ ಬಿಸಿ ನೀರು ಬಿಟ್ಟು , ತಣ್ಣೀರನ್ನು ಯಾವತ್ತೂ ಕುಡಿಯಲಿಲ್ಲ.(ಹೆಂಡವೊಂದನ್ನು ಮಾತ್ರ ಕಾಯಿಸಿ ಕುಡಿಯುತ್ತಿರಲಿಲ್ಲ.)
ಯಾವ ಬೆಳಿಗ್ಗೆಯೂ ಎದ್ದು ಅವನು ಹಲ್ಲು ಉಜ್ಜಿದ್ದು ಒಬ್ಬರೂ ನೋಡಲಿಲ್ಲ. ಮೊದಲಿಗೆ ಹೆಂಡ ಅದು ನಿಂತಾದ ಮೇಲೆ ಶರಾಪನ್ನ ಕೊನೆಯ ತನಕ ಹೀರಿದ್ದೇ ಹೀರಿದ್ದು. ಯಾವತ್ತೂ ಭಾರಿ ಕಾಯಿಲೆಗೆ ಬೀಳಲಿಲ್ಲ. ಡಾಕ್ಟರ ಮುಖವ ಕೊನೆಗೂ ನೋಡಲೇ ಇಲ್ಲ. ಜೀವನದಲ್ಲಿ ಸರಿಯಾಗಿ ಸ್ನಾನವನ್ನೂ ಮಾಡಲಿಲ್ಲ. ಇಷ್ಟೆಲ್ಲಾ ಅಶಿಸ್ತುಗಳಿದ್ದರೂ ಆತ ಬದುಕಿದ್ದು ಮಾತ್ರ ನಮ್ಮಪ್ಪನಿಗಿಂತ ಜಾಸ್ತಿ ವರ್ಷ. ದಿನಕ್ಕೆ ಹತ್ತು ಪ್ಯಾಕಿಗಿಂತಲೂ ಅಧಿಕ ಬರ್ಕಲಿ ಸಿಗರೇಟು ಸೇದುತ್ತಿದ್ದ. ಅತ್ತ ಕುಲುಮೆ, ಒಲೆ ಉರಿಯುತ್ತಿದ್ದರೆ, ಇತ್ತ ಇವನ ಬಾಯಿ, ಮೂಗುಗಳೂ ಧಗಧಗಿಸುತ್ತಿದ್ದವು. ಅಂತಾ ಎಡಬಿಡದ ಚೈನ್ ಸ್ಮೋಕರ್ ಆತ.
ವರ್ಷಕ್ಕೆರಡು ಸಾರಿ ಊದು ಬತ್ತಿ ಹಚ್ಚಿ ಕುಲುಮೆ ಒಲೆಯ ಪೂಜಿಸೋನು. ಆಯುಧ ಪೂಜೆಯ ದಿನ ಸ್ನಾನ ಮಾಡಿ ಹೊಸ ಪಂಚೆ ಜುಬ್ಬ ಇಕ್ಕಿಕೊಂಡು ಒಂದು ಹುಂಜವ ಅವನೇ ಕೈಯಾರೆ ಕೊಯ್ದು ಅದರ ರಕ್ತವ ಒಲೆಯ ಮೇಲೆ ಚಿಮ್ಮಿಸಿ, ಆ ದಿನ ತಾನೇ ಅಡಿಗೆ ಮಾಡಿಕೊಂಡು ತಿನ್ನೋನು. ಅವನೇ ಕೊಯ್ದುಕೊಂಡ ಕೋಳಿಯಾದ್ದರಿಂದ ಅದನ್ನು ತಿನ್ನಲು ನಮಗೂ ಕೊಡುತ್ತಿರಲಿಲ್ಲ. ಉಳಿದಂತೆ ಯಾವ ದಿನವೂ ಅವನು ಅಡಿಗೆ ಮಾಡಿದ ವ್ಯಕ್ತಿಯೇ ಅಲ್ಲ.
ಸುಡುವ ಒಲೆಮುಂದೆ ದಿನಗಟ್ಟಲೇ ಅಲ್ಲಾಡದೆ ಕೂತು ದುಡಿಯುತ್ತಿದ್ದ. ವರ್ಷಗಟ್ಟಲೆ ಉರಿಗೆ ತಾಗಿದ ಅವನ ಮೈಯೊಳಗಿನ ರಕ್ತ ಯಾವತ್ತೋ, ಕರಗಿ ಆವಿಯಾಗಿ ಹೋಗಿತ್ತು. ಮೈಯ ಮೂಳೆಗಳು ಲೆಕ್ಕಹಾಕಬಹುದಿತ್ತು. ನರಗಳು ಗೋಣಿ ತಾಟಿನ ದಾರಗಳಂತೆ ಬರಿಗಣ್ಣಿಗೆ ಕುಕ್ಕುವಷ್ಟು ಮೇಲೆದ್ದು ಬಂದಿದ್ದವು. ರಟ್ಟೆಗಳು ಪುರಲೆಗಳಂತೆ ಒಣಗಿದ್ದವು. ಆದರೆ, ಅವನಿಗಿದ್ದ ಶಕ್ತಿ ಮಾತ್ರ ರಾಕ್ಷಸ ತೂಕದ್ದು. ಪೈಲ್ವಾನರನ್ನೂ ನಾಚಿಸುವಂತೆ ರೂಪುಗೊಂಡಿತ್ತು. ಅರವತ್ತು, ಎಪ್ಪತ್ತು ಕೆಜಿಗಳಷ್ಟು ಭಾರದ ಕಾದ ಕಬ್ಬಿಣವ ಅನಾಮತ್ತಾಗಿ ಎತ್ತಿ ಅವ ಅಡಗಲ್ಲಿನ ಮೇಲೆ ಎತ್ತಿಡುತಲಿದ್ದ. ಅಂಥ ಅಗಾಧ ಶಕ್ತಿ ಅವನಿಗಿತ್ತು. ಕುಡ, ಕತ್ತಿ, ಅರವಳ್ಳಿ, ಅಡಿಕೆ ಕತ್ತಿ, ಮ್ಯಾದಾರ ಕತ್ತಿ, ತುಂಡು ಕೆತ್ತುವ ಕೊಡಲಿಗಳ ಬಾಯಿಯನ್ನು ಇವನಷ್ಟು ಹದವಾಗಿ ಹಣಿಯುವವರು ಇಡೀ ತರೀಕೆರೆ ತಾಲೂಕಿನಲ್ಲೇ ಯಾವ ಕಸುಬುದಾರನೂ ಇರಲಿಲ್ಲ. ಅಂತ ಪರಿಪಕ್ವ ಕೆಲಸದವನಾತ. ಹಳ್ಳಿ ಕಡೆಯ ರೈತರು ಕಾದಾದರೂ, ಸರಿಯೇ ಇವನ ಹತ್ತಿರವೇ ತಮ್ಮ ಹತ್ಯಾರಗಳನ್ನು ಹಣಿಸಿಕೊಂಡು ಹೋಗುತ್ತಿದ್ದರು. “ಸಾಂತಣ್ಣ ಕತ್ತಿ ಬಾಯಿಗೆ ಕಾವಿಕ್ಕಿದರೆ ಏಸೋರ್ಸ ಆದ್ರೂ ಜುಮ್ ಅನ್ನಲ್ಲ” ಅಂತಿದ್ರು.
ನಾವೆಲ್ಲಾ ಅವನ ಕಣ್ಮುಂದೆ ಹುಟ್ಟಿದ ಮಕ್ಕಳಾದ್ದರಿಂದ ನಮಗೆ ಆಗಾಗ ಹಿಡಿದು ಹೊಡಿಯುವಷ್ಟು ಸಲುಗೆಯನ್ನೂ ನಮ್ಮಪ್ಪ ಅವನಿಗೆ ಕೊಟ್ಟಿದ್ದರು. ಅವನು ಕುಲುಮೆಯ ಕೆಲಸದ ಆಳು, ನಾವು ಸೌಕಾರರ ಮಕ್ಕಳು ಎಂಬ ಜಂಭ ನಮಗೆ. ‘ಶಾಂತಣ್ಣ ಹೊಡೀತಾನಪ್ಪ’ ಎಂದು ಅಪ್ಪನಿಗೆ, ಅವನ ಮೇಲೆ ಕಂಪ್ಲೇಂಟ್ ಹೇಳಿದರೆ, ಅಪ್ಪ ನಮಗೇ ತಿರುಗಿ ಜೋರು ಮಾಡುತ್ತಿದ್ದರು. ‘ಅವನು ನಮ್ಮ ಕುಲುಮೇಲಿ ಇರೋವತ್ತಿಗೇ, ನೀವೆಲ್ಲಾ ಬದುಕಿರೋದು. ಅವನಿಲ್ಲದಿದ್ರೆ ನೀವೆಲ್ಲಾ ಉಪವಾಸ ಸಾಯ್ತಿದ್ರಿ. ಅವನು ನಮ್ಮ ಮನೆ ಚಿರಾಗ್ ಕಂಡೆ’ ಎಂದು ಬೈಯೋರು.
ಅವನನ್ನ, ಬೇರೆಯವರು ದೂಷಣೆ ಮಾಡೋದನ್ನ ಅಪ್ಪ ಅಷ್ಟಾಗಿ ಇಷ್ಟಪಡುತ್ತಿರಲಿಲ್ಲ. ಆದರೆ, ತಾವು ಆಗಾಗ, ಪಕ್ಕಾ ಹಲ್ಕಾ ಮಾತುಗಳನ್ನೇ ಪೋಣಿಸಿ ಉಗಿಯುತ್ತಿದ್ದರು. ಅವನೆಂಥವನು ಅವನೂ ಅಷ್ಟೇ, ರಾತ್ರಿ ಸಖತ್ತಾಗಿ ಕುಡಿದು ಬಂದು ಅಮ್ಮನಿಗೆ ಅಪ್ಪನ ವಿರುದ್ಧ ಚಾಡಿ ಹೇಳಿ, ತಾನೂ ಒಂದಿಷ್ಟು ಏಕವಚನದಲ್ಲೇ ಅಪ್ಪನಿಗೆ ಬೈದು ‘ನಾಳೆಯಿಂದ ನಾನು ಕೆಲಸಕ್ಕೆ ಬರಲ್ಲ ಹೋಗ್’ ಎಂದು ಹೋಗುತ್ತಿದ್ದ. ಮತ್ತೆ ಬೆಳಿಗ್ಗೆ ಆರು ಗಂಟೆಗೆ ಕೆಲಸಕ್ಕೆ ಹಾಜರ್. ಹೀಗೇ ಕೆಲಸ ಬಿಟ್ಟು ಹೋಗುತ್ತೀನಂತ ಯಾವಾಗಲೂ ಹೆದರಿಸುತ್ತಿದ್ದ ಶಾಂತಣ್ಣ, ನಮ್ಮ ಮನೆ ಬಿಟ್ಟು ಮಾತ್ರ ಯಾವತ್ತೂ ಹೋಗಲೇ ಇಲ್ಲ.
ಒಂಥರ ನಮ್ಮನ್ನೆಲ್ಲಾ ಉಪತಂದೆಯಂತೆ ಸಾಕಿದವನು ಅವನೇನೆ. ಎಷ್ಟೋ ಸಲ ನಮಗೆ ಬೇಕಾದ ಫೀಜು, ಪುಸ್ತಕಕ್ಕೆ ಅಪ್ಪ ಸಕಾಲದಲ್ಲಿ ದುಡ್ಡು ಕೊಡದಿದ್ದಾಗ ಅವನೇ ಕರೆದು ಕೊಡುತ್ತಿದ್ದ. ತಿಂಡಿ ತಿನ್ನಿಸುತ್ತಿದ್ದ. ಅಷ್ಟೇ ಮುದ್ದಿಸುತ್ತಿದ್ದ. ಹೀಗೆಲ್ಲ ಆಗುತ್ತಿದ್ದದ್ದು ಸಂಜೆ ಮೇಲೆ. ಅದೂ ಹೆಂಡ ಬಿಗಿಯಾದಾಗ. ಸತ್ತ ನಮ್ಮ ತಾಯಿಯ ನೆನೆದು ಅಳುತ್ತಿದ್ದ. ‘ಆ ತಾಯಿ ನನಗೆ ಕಷ್ಟಕಾಲದಲ್ಲಿ ಅನ್ನ ಹಾಕಿದ ದೇವತೆ. ಅವಳ ಮೊಖ ನೋಡಿ ನಾನು ನಿಮ್ಮ ಮನೇಲಿ ಇದ್ದೀನಿ. ಇಲ್ಲದಿರ ನಿಮ್ಮಪ್ಪ ನನಗ್ಯಾವ ಲೆಕ್ಕ’ ಅಂತ ನಮ್ಮಪ್ಪನ ಶಾಂತಣ್ಣ ಜರೀತಿದ್ದ. ಅಪ್ಪ ನಾಲ್ಕು ಜನ ಗಿರಾಕಿಗಳಿದ್ದಾಗ ಶಾಂತಣ್ಣನಿಗೆ ಏನಾದರೂ ಬೈದರೆ ಅವನು ಮಕ್ಕಳಂತೆ ಸಿಟ್ಟಾಗಿ ಬಿಡೋನು. ಆದರೂ ಎಲ್ಲರೆದುರಿಗೆ ಅಪ್ಪನಿಗೇನೂ ದುಸುರಾ ಮಾತಾಡುತ್ತಿರಲಿಲ್ಲ. ಆದರೆ ಅವತ್ತಿನ ರಾತ್ರಿ ಯಾಥಾ ಪ್ರಕಾರ ಅಪ್ಪನಿಗೆ ಸರಿಯಾಗಿ ಗ್ರಾಚಾರ ಬಿಡಿಸದೇ ಬಿಡುತ್ತಿರಲಿಲ್ಲ. ಅಪ್ಪ ಕೂಡ ಅಷ್ಟೇ. ಅವನೇನೇ ಅಂದರೂ ಮನಸ್ಸಿಗೇ ತೆಗೆದುಕೊಳ್ಳುತ್ತಿರಲಿಲ್ಲ. ಅವನ ಹಾರಾಟ ಎಲ್ಲಾ ಮುಗಿದ ಮೇಲೆ ‘ಈಗ ಬಾ ಮುಚ್ಕೊಂಡು ಮುದ್ದೆ ತಿನ್ನನ’ ಅಂತ ಊಟಕ್ಕೆ ಕರೆಯೋರು. ಹೀಗೆ ಕರೆದೆಂದರೆ, ಅದು ಜಗಳದ ವಂದನಾರ್ಪಣೆ ಎಂದೇ ಅರ್ಥ. ‘ಏನು ಬ್ಯಾಡ’ ಎನ್ನುತ್ತಲೇ ಅವನೂ ಊಟ ಮುಗಿಸೋನು. ಮತ್ತೆ ಯಥಾ ಪ್ರಕಾರ ಹೊಸ ಬೆಳಗು, ಹೊಸ ಜೀವನ.
ಶಾಂತಣ್ಣ ಹೊಸದುರ್ಗದ ಕಡೆಯವನು. ಮರಾಠಿ ಅವನ ಮಾತು. ಉರ್ದು, ತೆಲಗು, ಲಂಬಾಣಿ. ಹಾಗು ನಮ್ಮೂರಲ್ಲಿ ಡಬ್ಬಗಳ ಮಾರಿ ಜೀವಿಸುವ ಜನರ ಒಂಥರದ ವಿಚಿತ್ರ ಭಾಷೆಯನ್ನೂ ಅವನೂ ಮಾತಾಡುತ್ತಿದ್ದ. ಗಾದೆ ಮಾತು, ಒಗಟುಗಳ ಖನಿ ಅವನು. ಅವನಿಗೆ ನಾಲ್ಕಾರು ಗಂಡು ಮಕ್ಕಳೂ, ಒಬ್ಬಳು ಮಗಳೂ ಇದ್ದಳೆಂಬುದು ನೆನೆಪು. ಹೆಂಡತಿಯೊಂದಿಗೆ ಯಾವುದೋ ಮಾತಿಗೆ ಜಗಳವಾಡಿಕೊಂಡು ‘ಇನ್ನ ನನ್ನ ಜೀವ ಇರಗಂಟ ಈ ಮನೆಯೊಳಗೆ ಕಾಲಿಡಲ್ಲ’ ಅಂತ ಪ್ರತಿಜ್ಞೆ ಮಾಡಿ ಮನೆ ಬಿಟ್ಟವನು ನಲವತ್ತು ವರ್ಷವಾದರೂ ಅತ್ತ ಕಡೆ ತಲೆ ಹಾಕಲಿಲ್ಲ. ಹೆಂಡತಿ ಸತ್ತಾಗ ಮನೆ ಮುಂದೆ ಇಟ್ಟಿದ್ದ ಹೆಣವನಷ್ಟೇ ನೋಡಿ, ತಟ್ಟಂತ ವಾಪಸ್ಸು ಬಂದನೇ ಹೊರತೂ, ಮತ್ತೆ ಅವನ ಮನೆಯೊಳಗೂ, ಅವ ಅಪ್ಪಿ-ತಪ್ಪಿಯೂ ಕಾಲಿಡಲಿಲ್ಲ.
ಇದಾದ ಮೇಲೆ, ಅವನ ನೋಡಿ ಮಾತಾಡಿಸಲು ಅಷ್ಟೊತ್ತಿಗಾಗಲೇ ಸಾಕಷ್ಟು ಸ್ಥಿತಿವಂತರಾದ ಮಕ್ಕಳು ಆಗಾಗ, ಬಂದು ಹೋಗುತ್ತಿದ್ದರು. ಅವರಿಗೂ ಅಷ್ಟೇ. ಬೇಕಾಬಿಟ್ಟಿಯಾಗಿ ಕಾಟಾಚಾರದಲ್ಲಿ ಮಾತಾಡಿಸುತ್ತಿದ್ದ. ನಮಗೆ ತೋರಿಸುವಷ್ಟೂ ಪ್ರೀತಿಯ ಒಂದಂಶವನ್ನೂ ಅವರಿಗೆ ಸಲ್ಲಿಸುತ್ತಿರಲಿಲ್ಲ. ಬೇಕಂತಲೇ ಅವರೆದುರು ನಮ್ಮ ಅಪ್ಪಿ ಹಿಡಿದು ಬಲವಂತವಾಗಿ ಮದ್ದಾಡುತ್ತಿದ್ದ. ಅವರು ಹೊಟ್ಟೆ ಉರಿಸಿಕೊಂಡು ಹೋಗುತ್ತಿದ್ದರು. ಹೀಗೆ ಮಾಡುವದರಿಂದ ಯಾವ ರೀತಿಯ ಸುಖ ಅವನಿಗೆ ಸಿಗುತ್ತಿತ್ತೋ ನಾ ಕಾಣೆ. ಒಟ್ಟಾರೆ, ಅಂಥ ವಿಚಿತ್ರ ಮನುಷ್ಯನವನು.
ಎಂದೋ ಹೆಂಡತಿ ಆಡಿದ ಒಂದೇ ಮಾತನ್ನು ಕೊನೆಯ ತನಕವೂ ಕ್ಷಮಿಸದ ಆತ, ಆ ಕಾರಣಕ್ಕೆ ತನ್ನ ಕರುಳಿನ ಕುಡಿಗಳನ್ನೇ ಜೀವನ ಪರ್ಯಂತ ದೂರವಿಟ್ಟ. ನಮ್ಮ ಏಳಿಗೆಗಾಗಿ ಜೀವನ ಪರ್ಯಂತ ದೊಡ್ಡ ಜವಾಬ್ದಾರಿಯಿಂದ ನಡೆದುಕೊಂಡ. ಅವನ ದುಡಿಮೆಯನ್ನೇ ಮತ್ತೆ ನಮಗೇ ತಿನ್ನಿಸಿದ. ಒಂದು ದಿನವೂ ಸುಮ್ಮನಿರದೆ, ದಿನಾ ಬಾಯಿಗೆ ಬಂದ ಹಾಗೆ ಬೈಯುತ್ತಿದ್ದ ನನ್ನಪ್ಪನ ಸಹವಾಸವ ಯಾವತ್ತೂ ಬಿಡಲಿಲ್ಲ. ಸಾಯೋ ತನಕ ಉಡದಂತೆ ಗಟ್ಟಿಯಾಗಿ ತಬ್ಬಿ ಹಿಡಿದ.
ಶಾಂತಣ್ಣ ಹಾಸಿಗೆ ಹಿಡಿದಾಗ ಮಕ್ಕಳು ಬಂದರು. ‘ವಯಸ್ಸಾಗಿದೆ, ಅವ್ವನೂ ಇಲ್ಲ. ಈಗಾದ್ರೂ ಮನೀಗೆ ಬಾ ಹೋಗಾನ. ನಮ್ ಹೊಟ್ಟೆ ಉರಿಸಬ್ಯಾಡ. ನಿನ್ನ ಚೆನ್ನಾಗಿ ನೋಡ್ಕತೀವಿ ಕೊನೆಗಾಲದಲ್ಲಾದರೂ ನಮ್ಮ ಜೊತೆಗಿರು” ಅಂದರು. “ಲೇ ನನ್ನ ಪ್ರಾಣ ಈ ಮನ್ಯಾಗೆ ಕಣೋ ಭಾಂಛತ್” ಎಂದು ಗಟ್ಟಿಯಾಗಿ ನೆಲ ಕುಟ್ಟಿದವನು, ಕೊನೆಗೂ ನಮ್ಮ ಮನೆಯಲ್ಲೇ ಪ್ರಾಣ ಬಿಟ್ಟ.
ಇವತ್ತಿನ ನನ್ನ ಸುಖದ ಬದುಕಿನಲ್ಲಿ ಅವನ ಬೆವರಿನ ಉಸಿರಾಟವಿದೆ. ಅನ್ನ ಕಲಿಸುವಾಗ ಅವನ ಮುಖ ನನ್ನ ತಟ್ಟೆಯಲ್ಲಿ ಮೂಡುತ್ತದೆ. ಅವನಿಲ್ಲದಿರುತ್ತಿದ್ದರೆ.. ಇವತ್ತು ನಾನೂ ಹೀಗಿರುತ್ತಿರಲಿಲ್ಲ.
(ಒಳ ಚಿತ್ರಗಳು-ಲೇಖಕರವು)
ಶಿವಮೊಗ್ಗೆಯಲ್ಲಿ ಕನ್ನಡದ ಮೇಷ್ಟ್ರು. ಮೂಲತಃ ತರೀಕೆರೆಯವರು. ಉತ್ತಮ ಛಾಯಾಗ್ರಾಹಕರೂ ಕೂಡ. ‘ಕ್ಲಾಸ್ ಟೀಚರ್’ಇವರ ಖ್ಯಾತ ಕೃತಿ.