ನಾವೂ ಚಿಕ್ಕವರಿರುವಾಗ ಸನಿ ಸನಿವಾರ ಈರಾಪುರಕ್ಕೆ ಕಾಯಮ್ಮಾಗಿ ಹೋಗ್ತಿದ್ವಿ. ಅಲ್ಲಿ ಅಕ್ಕ ಪಕ್ಕದ ಬೀದಿಗ್ಳಾಗೆ ಸನಿ ಮಾತ್ಮ ಮತ್ತೀಗ ಈರಬದ್ರಸೋಮಿ ಗುಡೀಗ್ಳೂ ಅವ್ವೆ. ಈರಬದ್ರನ ಗುಡೀನಾಗೇ ಸಾಮಿಗೆ ಪಂಚಲೋಹುದ್ದು ಕಣ್ಣು ಮೀಸೆ ಮೆತ್ತಿತ್ತು. ಅದ್ನ ನೋಡ್ತಿದ್ದಂಗೇ ಬೋ ಕ್ವಾಪ್ವಾಗವ್ನೆ ಅಂತ ಅನ್ನುಸ್ತಿತ್ತು. ಮುಂದ್ಕಿರಾ ಜಾಗ್ದಾಗೆ ಲಿಂಗಧೀರರ ಬಟ್ಟೆ ಬೊಂಬೇನೂ ಇಕ್ಕಿದ್ರು. ಕಣ್ ಅಳ್ಳಿಸಿಕಂಡು ನೋಡ್ತಿದ್ವು. ಪರಿಸೇನಾಗೆ ಅವ್ರ ಕುಣ್ತ ಕಂಡು ನಮ್ಗೆ ತೇಟು ಬೊಂಬೇನೇ ನೋಡ್ದಂಗಾಗಿ, ಅದೇ ಏನಾರಾ ಎದ್ದು ಬಂದೈತೋ ಏನೋ ಅಂಬಂಗಾಗ್ತಿತ್ತು. ಆದ್ರೆ ಅದು ಆಳೆತ್ರುಕ್ಕಿತ್ತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಊರ ಹಬ್ಬ-ಜಾತ್ರೆಗಳ ಕುರಿತ ಬರಹ ನಿಮ್ಮ ಓದಿಗೆ
ನಮ್ಮೂರ್ನಾಗೆ ಮಾರಮ್ಮನ ಪರಿಸೇಗೆ ದೆಕ್ಲೂ ವರ್ಸುಕ್ಕೊಂದು ಆಟ ಅಂಬ್ತ ಯಾತುರ್ದೂ ನೇಮ ಮಡಿಕ್ಕಂಡಿಲ್ಲ. ಮನ್ಸು ಬಂದಂಗೆ ಮಾಡ್ತಾರೆ. ಮದ್ಲೆಲ್ಲಾ ಊರಾಗೆ ಕಾಯಿಲೆ ಕಸಾಲೆ ಆದಾಗ ಊರ ಮಾರಮ್ಮುಂಗೆ ಹರಕೆ ಹೊತ್ಕಂಡಿ ಪರಿಸೇ ಮಾಡೋರು. ಇತ್ತಿತ್ಲಾಗೆ ಸ್ಯಾನೆ ವರ್ಸ ಮಾರಮ್ಮುನ್ ಸುದ್ದೀಗೇ ಹೋಗಾಕಿಲ್ಲ. ಇದ್ಕೂ ಸುತ ಸ್ಯಾನೆ ಕಾಸು ಬೇಕಾಗ್ತೈತೆ. ಊರು ಕಾಪಾಡಾ ತಾಯಿದು ಪರಿಸೆ ಅಂದ್ ಮ್ಯಾಗೇ ಅದ್ರಾಗೆ ವೈಬೋಗ್ವೂ ಇರ್ಲಿಕ್ಕೇ ಬ್ಯಾಕಲ್ವೇ ? ಅದ್ಕೇಯಾ ಆಟು ವರ್ಸುಕ್ಕೊಂದು ಆಟ ಮಾಡ್ತಾರೆ. ಮನ್ ಮನ್ನೆ ಒಂದಾರು ತಿಂಗ್ಳು ಮುಂಚಿತ್ವಾಗಿ ಮಾರಮ್ಮನ ಪರಿಸೇಯಾ ಬೋ ವೈಬೋಗ್ವಾಗಿ ಮಾಡಿದ್ರು. ಹನ್ನೆಲ್ಡು ವರ್ಸ ಆದ್ ಮ್ಯಾಕೆ ಮಾಡಿದ್ದು. ಬೋ ಘನವಾಗಿ ಹಬ್ಬ ಮಾಡೀ ಊರೂರೇ ಸುಸ್ತಾಯ್ತು. ಯಾಪಾರಸ್ತರೂ ಸಂದೀನಾಗೆ ಸೆಂದಾಗಿ ಬೇಳೆ ಬೇಯುಸ್ಕಂಡ್ರು. ಸಿಕ್ಕುದೋರ್ಗೆ ಸೀರುಂಡೆ ಅಂತಾವಾ ಬಾಚ್ಕಣಾರು ಬಾಚ್ಕಂಡ್ರು. ತಲೆ ಮ್ಯಾಗೆ ತಣ್ಣೀರು ಬಟ್ಟೇಯಾ ಬಡುವ್ರು, ಕೂಲಿ ಮಾಡಾರು ಹಾಕ್ಕಂಡ್ರು.
ಜಾತ್ರೇಗೆ ಮುಂದ್ಲ ಆಚಾರ
ಮಾರಮ್ಮುನ್ ಜಾತ್ರೆ ಮುಂದು ನಮ್ಮೂರ್ನಾಗೆ ಮಾದಿಗ್ರ ಹಟ್ಟೀನಾಗೆ ಒಂದು ವಿಸೇಸ್ವಾದ ಆಚಾರ ಮಾಡ್ಲೇ ಬೇಕು. ಆಮ್ಯಾಕೆ ತಾಯಿ ಆಶೀರ್ವಾದ ಕೊಟ್ಟೌಳೆ ಅಂಬ್ತಾವ ಊರಿನ್ ಜನ ಮುಂದ್ಕೋಕ್ತಾರೆ.
ಇಡೀ ಹಟ್ಟಿ ಜನ ಕೂಡ್ಕಂಡು ಒಂದು ಮೂರು ಸೇರು ಅಕ್ಕಿ ಇಕ್ಕಿ ಅನ್ನ ಬೇಯುಸ್ತಾರೆ. ಅದ್ರಾಗೆ ಒಂದು ಬೊಂಬೆ ಮಾಡ್ತಾರೆ. ಅದು ಕಾಳಮ್ಮ ದ್ಯಾವ್ರು. ಕಾಳಮ್ಮನ ಗುಡೀ ತಾವ ಅದ್ನ ತಕೋ ವೋಗಿ ಪೂಜೆ ಮಾಡಿ ಆರತಿ ಬೆಳಗ್ತಾರೆ. ದ್ಯಾವ್ರ ಮುಂದು ಒಂದು ಕುರಿ ಹೊಡೀತಾರೆ(ಬಲಿ). ಅದ್ನ ಪರ್ಸಾದ ಅಂತ ಎಲ್ರೂ ತಕಂಡೋಗಿ ಅಡ್ಗೆ ಮಾಡ್ಕಂಡು ಉಣ್ತಾರೆ. ತಿಂದಾದ ಮ್ಯಾಗೆ ಉಳ್ದಿರಾ ಚೂರು ಪಾರು ಮೂಳೆ, ಉಂಡಿರಾ ಎಲೆಗಳು ಎಲ್ಲಾನೂವೆ ಒಂದು ಹಳೇ ಮರ(ಮೊರ) ತಕಂಡು ಹಾಕ್ತಾರೆ. ಮನ್ಯಾಗ್ಳ ಕಸ ಉಡುಗಿ, ಅದ್ನೂ ಹಳೇ ಮರದಾಗೆ ಎತ್ತಾಕ್ತಾರೆ. ಆಮ್ಯಾಲೆ ಒಂದು ಕಣ್ಣಿನ ರೆಪ್ಪೆ ಕಿತ್ತು ಅದ್ರಾಗೆ ಹಾಕ್ತಾರೆ. ಉಗುರು ಕತ್ತುರ್ಸಿ ಹಾಕ್ತಾರೆ. ಎಲ್ಲಾನೂವೆ ಹಾಕಿರಾ ಹಳೆ ಮರಾ ತಕಂಡು ಊರಾಚೇನಾಗಿರಾ ಗುಡಿ ತಾವ ಹೋಗಿ ಅಲ್ಲಿ ಬಿಸಾಕಿ ಹಿಂದುಕ್ ತಿರ್ಗಿ ನೋಡ್ದಂಗೆ ಮನೀಗೆ ಬರ್ತಾರೆ. ಇಲ್ಗೆ ಒಂದು ಆಚಾರ ಮುಗೀತು.
ಊರ್ನಾಗಿರಾ ಮಾರಮ್ಮುಂಗೆ
ಆಮ್ಯಾಕೆ ಊರ್ನಾಗಿರಾ ಮಾರಮ್ಮುಂಗೆ ಪರಿಸೇ ಸುರು ಆಗ್ತೈತೆ. ಮದ್ಲು ಊರಿನ ಜನಾ ಎಲ್ಲಾ ಸೇರ್ಕಂಡು ಮಾದಿಗುರ್ಗೆ ಕೋಣ ಕೊಡುಸ್ಬೇಕು. ಆ ಕೋಣ್ವ ಮೊದ್ಲು ಮಾರಮ್ಮನ ಮುಂದೆ ಹೊಡೀಬೇಕು. ಆಮ್ಯಾಕೆ ಅದ್ನ ಅವ್ರು ಹಟ್ಟೀಗೆ ತಕಂಡೋಗಿ ಅಡ್ಗೆ ಮಾಡ್ಕಂತಾರೆ. ಆಮ್ಯಾಕೇನೇ ಬ್ಯಾರೆ ಜನುಗುಳ್ ಬಲಿ ಸುರು.
ಮನೆಗೊಂದು ಬಲಿ ಕೊಡ್ಲೇ ಬೇಕು. ಅವುರವ್ರ ಸಕ್ತಿಗೆ ತಕ್ನಂಗೆ ಕುರೀ ಮರೀನೋ ಮೇಕೇ ಮರೀನೋ, ಕೋಳಿ ಪಿಳ್ಳೆನೋ ಯಾವ್ದಾನಾ ಒಂದು ಬಲಿ ಕೊಡ್ತಾರೆ.
ಅದೇನ್ ಆಟು ಸಲೀಸಾಗಿರಾ ಆಚಾರ ಅಲ್ಲ. ತಮಟೆ ಬಾರ್ಸೋರು, ಅರೆ ಹೊಡ್ಯೋರ್ನ ಕರುಸ್ತಾರೆ. ಒಂದು ತಮಟೆ, ಒಂದು ಅರೆ ಎಲ್ಲಾರ ಮನೇ ತಾವಾನೂ ಹೋಗಿ, ಅವುರ್ನ ಕರ್ಕಂಡು ಬರ್ಬೇಕು. ಮದುಲ್ಗೆ ಹತ್ತು ಜನ ಊರಿನ್ ಗೌಡ್ರು ಮನೇ ತಾವ್ಕೆ ಹೋಗ್ತಾರೆ. ಎಲ್ಲಾರ್ನೂ ಒಟ್ಗೇ ಕರ್ಕಂಡು ಬರಾಂಗಿಲ್ಲ. ಒಬ್ಬೊಬ್ಬುರ್ನೇ ತಮಟೇ ಮ್ಯಾಳದಾಗೆ ಕರ್ಕಂಡು ಬರ್ಬೇಕು. ಅವುರ್ ಮನೇ ಗೌಡ್ತೀರು ದೀಪಾ(ಆರತಿ) ತಕಂಡು ಬತ್ತಾರೆ. ಅವುರ್ನ ಊರಿನ್ ಮುಂದೆ ಹಾಕಿರಾ ಪೆಂಡಾಲ್ ತಾವ್ಕೆ ಕರ್ಕಂಡು ಹೋಗಿ ಬುಟ್ಟು, ಇನ್ನೊಂದು ಮನೇ ತಾವ್ಕೆ ಹೋಗ್ತಾರೆ. ಮದ್ಲು ನಮ್ಮೂರಿನ್ ಮೇನ್ ಗೌಡ್ರು, ಕೆಂಪಾಪುರುದ್ ಗೌಡ್ರು, ಹಟ್ಟಿ ಗೌಡ್ರು( ಕುರುಬರ ಗೌಡ್ರು) ಇಂಗೇಯಾ ಹತ್ತು ಜನ ಗೌಡ್ರು ಮನೇ ತಾವ ಈ ಮ್ಯಾಳದೋರು ಹೋಗೀ ಹೋಗೀ ಕರ್ಕಂಡು ಬರ್ತಾರೆ. ಒನ್ನೊಂದು ಮನ್ಯೂ ಒನ್ನೊಂದು ದಿಕ್ಕು ದೆಸೇನಾಗೈತೆ. ಮ್ಯಾಗ್ಲ ಬಸ್ಟಾಂಡಿನಾಗೆ ಒಂದಿದ್ರೆ, ಕೆಳುಗ್ಲ ಬಸ್ಟಾಂಡಿನಾಗೆ ಒಂದು, ಕೆಂಪಾಪುರ್ದಾಗೆ ಒಂದು.
ಸಿವ್ನೇ ಏಟೊತ್ತಾಗ್ಬೇಕು. ಎಲ್ಲಾರ್ನೂ ಕಲೆ ಹಾಕ್ಕಂಡು ಕರ್ಕೋ ಹೋಗಂಗಿಲ್ಲ. ಅಯ್ಯಾ ಪಕ್ಕುದ್ ಮನೇ ತಾವ್ ಬಂದೈತೆ, ಒಟ್ಗೇ ಹೋಗಾಣಿ ಅನ್ನಂಗಿಲ್ಲ. ಪಾಪ ಮದ್ಲು ದೀಪ ತಕಂಡೋಗಿರಾ ಹೆಣ್ಣುಮಕ್ಕಳು ಸುಸ್ತೋ ಸುಸ್ತು. ಇನ್ನಾ ಮನಿಗುಳ್ ತಾವ ಕಾಯ್ಕಂಡಿರಾ ಹೆಣ್ಣುಮಕ್ಕಳೂ ಸುಸ್ತು. ಒಬ್ಬೊಬ್ಬುರ್ನೂ ಪೆಂಡಾಲ್ ಗಂಟ ಬುಟ್ಟಿ ಬರ್ತಾರೆ. ಬೆಳ್ಗಾನಾ ಸುರು ಆದ್ರೆ ಈ ಮೆರೋಣಿಗೆ ಮುಗ್ಯಾ ಹೊತ್ಗೆ ಸಂಜೀಕೆ ಆಗ್ತೈತೆ. ಎಲ್ರೂ ಪೆಂಡಾಲ್ ನಾಗೆ ಒಟ್ಟುಗೂಡಿದ ಮ್ಯಾಗೆ ಎಲ್ರೂ ಒಟ್ಗೇ ಸೇರ್ಕಂಡು ಗುಡೀ ತಾವ್ ಹೋಗ್ತಾರೆ. ಅಲ್ಲಿ ಆರತಿ ಬೆಳಗ್ತಾರೆ. ಮದ್ಲು ಸತ್ಯಮ್ಮನ ಗುಡೀ ತಾವ್ ಹೋಗ್ಬೇಕು. ಅಲ್ಲಿ ಮದ್ಲು ಕೋಣ ಕಡ್ದು ಆಮ್ಯಾಗೆ ಬ್ಯಾರೆ ಬಲಿ ಕೊಟ್ಟು ಆರತಿ ಬೆಳುಗ್ಬೇಕು. ಆಮ್ಯಾಕೆ ಮಾರಮ್ಮುನ್ ಗುಡೀ ತಾವ ಹೋಗ್ಬೇಕು. ಅಲ್ಲಿ ಮದ್ಲು ಕೋಣ ಕಡ್ದು, ಬ್ಯಾರೆ ಬಲಿ ಸುರು ಆಗ್ಬೇಕು. ಮನೆಗೊಂದು ಬಲಿ ಕಡ್ದು, ಮನೇಗೆ ಬರ್ತಾರೆ. ಈಸೆಲ್ಲಾ ಆಗೋ ಹೊತ್ಗೆ ಬೆಳಗಿನ ಜಾವ ಆಗೋಗಿರ್ತೈತೆ. ಸೂರ್ಯ ಹುಟ್ಟಾಕೆ ಮುಂಚೆ ಈಸೆಲ್ಲಾ ಮುಗೀಬೇಕು. ರಾತ್ರೆಲ್ಲಾ ಕುಂತು ನಿಂತು ಸುಸ್ತಾಗಿರಾ ಹೆಂಗುಸ್ರು, ಮನೀಗ್ ಬಂದು ಅಡ್ಗೆ ಬೇಸಾಕ್ಬೇಕು. ಅವುರ್ ಕತೇ ಮಾರಮ್ಮುಂಗೇ ಗೊತ್ತು. ಸಕ್ತಿ ದ್ಯಾವತೇಗೆ ಸಾಂತಿ ಮಾಡಿ ಅವ್ರೂ ಸಕ್ತಿ ತಕಾಬೇಕಷ್ಟೇ. ಯಾಸೆಟ್ಗೆ ಅತ್ಲಾಗೆ ಹೋಗ್ಲಿ ಅಂತಾವ ಮನೇಗೊಂದು ಹೆಂಗ್ಸು ದೀಪ ತಕಂಡು ಬರ್ಲಿ ಅಂತ ರೂಲೀಸ್ ಮಾಡವ್ರೆ. ಬ್ಯಾರೆಯೋರು ಮನೇಯಾಗೆ ಬಂದಿರಾ ನಂಟ್ರು ಪಂಟ್ರಿಗೆ ಸೀ ಅಡುಗೆ, ಪಾಯಸ ಬೇಸಾಕ್ಕಂಡು ಮಕ್ಳು ಮರೀನ ಮೇಸ್ಕಂಡು ಇರ್ತಾರೆ. ಹಿರೇಕ್ರು ಅದೇ ದೀಪುದ್ ಹಿಂದ್ಲ ಹೋಗಿರೋರು ವಾಪ್ಸು ಬಂದ ಮ್ಯಾಗೆ ಮೇನ್ ಕೆಲ್ಸ ಸುರು ಆಗ್ತೈತೆ. ಬಾಡೂಟದ ಗಮಲು ಇಡೀ ಊರ್ನಾಗೆ ಹರಡಿಕಂಡಿರ್ತೈತೆ.
ಮನೇ ತಾವ ನಂಟ್ರು ಇಷ್ಟ್ರು ಬಂದು ಸೇರ್ಕಂಡಿರ್ತಾರೆ. ಬೀಗ್ರು, ಮನತನದೋರು, ಅಕ್ಕ ತಂಗೀರು ಅವ್ರೂ ಇವ್ರೂ ಸೇರ್ಕಂಡು ಮನೆ ಗಿಜಗಿಜಾಂತಿರ್ತೈತೆ. ಒನ್ನೊಂದು ಕಿತ ಒಂದು ಕುರೀ ಸಾಲಾಕಿಲ್ಲ. ಊರ ಹಬ್ಬುಕ್ಕೆ ಮನೆ ಮಂದೀಗೇಲ್ಲಾ ಹೊಸ ಬಟ್ಟೆ ಬೇಕು. ಅಪ್ರೂಪುಕ್ಕೆ ಬಂದಿರಾ ನಂಟ್ರುಗೂ ಸೀರೆ ಪಂಚೆ ಕೊಡ್ಬೇಕು.
ಸಾಲಾ ಮಾಡಿ ಗಡಿಗೇ ತುಪ್ಪ ನೆಕ್ಕಿದಂಗೆ
ಮನ್ನೇ ಮಾಡಿದ ಪರಿಸೇನಾಗೆ ಸಾಲಾ ಸೋಲಾ ಮಾಡ್ಕಂಡು ಇನ್ನಾ ಸುದಾರುಸ್ಕಂತಾ ಅವ್ರೆ. ನಮ್ ಅಶ್ವತ್ತಪ್ಪ ಅಕ್ಕೋ ನನ್ನಂತಾವ್ರಿಗೇ ಎಂಬತ್ತು ಸಾವುರ್ದ ಗಂಟ ಆಯ್ತು. ಇನ್ನಾ ಬಡುವ್ರು ಗತೀ ಯೋಳಾಕೇ ಬ್ಯಾಡ. ಇನ್ನ ಇರೋರ್ ಯಾಪಾಟಿ ಕಾಸು ಹಾಕಿರ್ಬೋದು ಅಂತ ಎಲ್ಡೂ ಯೋಳ್ದ. ಅವುನ್ ಕಿಂತ ಕಮ್ಮಿ ಇರೋರ್ ಇಚಾರುಕ್ಕೆ ಬ್ಯಾಸ್ರಾನೂ ಮಾಡ್ಕಂಡ. ಜೋರಾಗಿರೋರ್ ಇಚಾರುಕ್ಕೆ ಕುಸೀನೂ ಪಟ್ಕಂಡ. ಸಾಲಾ ಮಾಡಿ ಯಾಕಪ್ಪಾ ಮಾಡ್ದೆ ಅಂದ್ರೆ, ಅಕ್ಕೋ ಹನ್ನೆಲ್ಡು ವರ್ಸ ಆದ್ ಮ್ಯಾಗೆ ಊರೊಟ್ಟಿಗಿನ್ ಹಬ್ಬ ಮಾಡ್ತಿದಿವಿ. ವಸಿ ಕೈಬಿಚ್ಚಿ ಸೆಂದಾಗಿ ಮಾಡುದ್ರೇ ಅಲ್ವೇ ಮಾರಮ್ಮುಂಗೆ ಕುಸಿ ಆಗಿ ಒಳ್ಳೇದು ಮಾಡಾದು ಅಂತಾನೆ.
ಅಲ್ಲ ಕನಪ್ಪ ಸಾಲಾ ಕೋಡೋರಾನಾ ಯಂಗೆ ಕೊಟ್ಟಾರು ಅಂತ ಕ್ಯೋಳಿದ್ಕೆ, ನಮ್ಮ ನಾಯಕ್ರ ಹಟ್ಟಿ ಹಿರೀಕ ಸನ್ನಿಂಗಪ್ಪ( ಚಿಕ್ಕ ಲಿಂಗಪ್ಪ ತೆಲುಗ್ನಾಗೆ ಅಂಗೆ ಬದ್ಲಾಗೌವ್ನೆ) ಅಮ್ಮಯ್ಯ, ನಮ್ಮೂರ್ನಾಗೆ ಇವಾಗ ಸ್ತ್ರೀ ಸಕ್ತಿ ಸಂಗುಗ್ಳು ಅವ್ವೆ. ಅಲ್ಲೇನ್ ಮಾಡ್ತಾರೆ ಈ ಬಡ್ಡಿಮಕ್ಳು ಹೆಣ್ಣುಮಕ್ಕಳ್ನ ಪುಸ್ಲಾಯ್ಸಿ ಸಾಲ ಕೊಡ್ತೀವಿ ಅಮ್ತ ಆಸೆ ತೋರುಸ್ತಾರೆ. ಅವ್ರು ಪಾಪದೋರು ಹಿಂದ್ ಮುಂದೆ ನೋಡೀರೂ, ಮನ್ಯಾಗಿರಾ ಗಂಡುಸ್ರು ಬುಟ್ಟಾರೇ. ಅವುರ್ ಕಿವೀನಾಗೂ ಸಾಲುದ್ ಇಸ್ಯಾ ಊದಿರ್ತಾರೆ. ಯೇ ತಕಳ್ರಮ್ಮೀ ಮಕ್ಳಿಗೆ ಹೊಸ ಬಟ್ಟೆ ತರಾಮಿ. ನೀವೂ ಹೊಸ ಸ್ಯಾಲೆ(ಸೀರೆ) ತಕಳೀವ್ರಿ. ನಾವೂ ತಕಂತೀವಿ. ನಂಟ್ರಿಗೆ ಬಾಡೂಟ ಹಾಕ್ಬ್ಯಾಡ್ವೆ ಅಂಬ್ತ ಪ್ರಾಣ ತಿಂದು ಸಾಲ ತಕಂಡವ್ರೆ. ಎಡ್ಡು ಮುಂಡೆಮಕ್ಳು. ಪಾಪಾ ಸಾಲ ತೀರ್ಸಾಕೆ ಆ ಹೆಣ್ಣುಮಕ್ಕಳು ಕೂಲಿ ನಾಲಿ ಮಾಡಿ ಬದುಕು(ಕೆಲ್ಸ) ಮಾಡ್ಬೇಕು. ಇವ್ರೇನೋ ಇಸ್ಕಂಡು ಮಜಾ ಮಾಡಿ ಸುಮ್ಕಾಗ್ತಾರೆ. ಕೊಟ್ಟೋನೇನು ಕೋಡಂಗೀನೆ? ಅವ್ನು ಹೆಣ್ಣುಮಕ್ಕಳ ಬೆನ್ನಿಗೆ ಬೀಳ್ತಾನೆ. ಅವ್ರು ಮರ್ಯಾದೆಗಂಜ್ಕಂಡು ಸಾಲ ತೀರುಸ್ತಾರೆ ಅಂಬ್ತ ಅನುಭವುದ್ ಮಾತು ಯೋಳ್ದ.
ಅಶ್ವತ್ಥಪ್ಪ ಯೋಳ್ತಿದ್ದ, ಈ ಕಿತ ಬಟ್ಟೆ ಅಂಗ್ಡೀನೋರ್ಗೆ ಏಟು ವ್ಯಾಪಾರ ಆಯ್ತಕ್ಕ. ನಮ್ಮೂರ್ನಾಗಿರಾ ಅಂಗ್ಡೀಗ್ಳಾಗೆ ಹಳೇ ಸ್ಟಾಕು ಎಲ್ಲಾ ಖಾಲಿ ಮಾಡ್ಕಂಡ್ರು. ವ್ಯಾನ್ ಮ್ಯಾಲೆ ಬಟ್ಟೆ ಮಾರಾಕೆ ಬರೋರೇನು, ಆಟೋನಾಗೆ ಬರೋರೇನು, ಕೊನೇಗೇ ಸೈಕಲ್ನಾಗೆ ಬಟ್ಟೆ ಮಾರಾಕೆ ಬರೋರೇನು. ಎಲ್ಲಾರ್ಗೂ ಯಾಪಾರ ಸಕತ್ತಾಗಿ ಆಯ್ತಕ್ಕೋ. ಎಲ್ರೂ ಬದುಕೋದ್ರು. ಊರಿನ್ ಬಡುವ್ರು ಮಾತ್ರ ಸಾಲದಾಗೆ ಸಿಗಾಕ್ಕಂಡು ಮೆತ್ತಗಾದ್ರು ಅಂತ ಪೇಚಾಡ್ಕಂಡ.

ಈರಭದ್ರಸೋಮಿ ಪರಿಸೆ
ವರ್ಸೊರ್ಸ್ಲೂ ಅಲ್ಲ ಐದೊರ್ಸುಕ್ಕೆ ಒಂದು ದಪ ಈರಾಪುರದ(ವೀರಾಪುರ) ಈರಬದ್ರಸೋಮಿ(ವೀರಭದ್ರಸ್ವಾಮಿ) ಗುಡೀನಾಗೆ ಹೂವಿನ್ ತೇರು ಆಗ್ತೈತೆ. ಕಾರ್ತೀಕದಾಗೆ ದ್ಯಾವ್ರುನ್ನ ಹುವ್ವಿನ ಅಲಂಕಾರದ ತೇರಿನಾಗೆ ಕುಂಡ್ರಿಸಿ ಎಳೀತಾರೆ. ಬಿಳೇ ಹುವ್ವ ಅಂದ್ರೆ ಮಲ್ಗೆ, ಕಾಕ್ಡ, ಸುಗಂಧರೋಜ(ಸುಗಂಧರಾಜ) ಹೊಲ್ದು ಜೋಡುಸ್ತಾರೆ. ಆಮ್ಯಾಕೆ ಹಳ್ದೀ ಹುವ್ವ, ಕೆಂಪು ಹುವ್ವ ಎಲ್ಲಾ ಸುತ್ತೂರ ಜೋಡುಸ್ತಾರೆ. ತೇರಿನಾಗೆ ದ್ಯಾವ್ರುನ್ನಾ ಕುಂಡ್ರಿಸಿರಾ(ಕೂರಿಸಿರುವ) ಸೀಟಿನ್ ಮ್ಯಾಗಿರಾ ಬಟ್ಟೆ ದೆಕ್ಲೂ ಕಾಣ್ದಂಗೆ ಹುವ್ವಿನಾಗೇ ಮುಚ್ಚುತಾರೆ. ಸುತ್ತೂರ್ಲೂ ಬಣ್ಣ ಬಣ್ಣದ ಹುವ್ವ ಮುಸುಕ್ಕಂಡಿರ್ತೈತೆ. ಬ್ಯಾರೇ ಊರ್ನಿಂದ ಈ ಅಲಂಕಾರ ಮಾಡೋದ್ರಾಗೆ ಪೇಮಸ್ಸಾಗಿರೋರ್ನ ಕರುಸ್ತಾರೆ. ತೇರು ಎಳ್ಯಾವಾಗ ಅಕ್ಕಪಕ್ಕದಾಗೆ ಲಿಂಗಧೀರರು ಕುಣ್ಕಂತಾ ಬರ್ತಾರೆ. ಒಳ್ಳೆ ದಪ್ಪಕಿರಾ ಮೀಸೆ ಇಕ್ಕಂಡಿರ್ತಾರೆ. ವೀರಗಾಸೆ ಕಟ್ಟಿ, ನೆಷ್ಟಿ(ಹಣೆ) ಮ್ಯಾಗೆ ಈಟ್ ದಪ್ಪಕೆ ಇಭೂತಿ ಪಟ್ಟೆ ಬಳ್ಕಂಡು, ಬಿಳೇ ಕೂದ್ಲು ಸೊಂಟದಗಂಟಾ ಇಳೇ ಬಿಟ್ಕಂಡು, ಕಿರೀಟ ಏರುಸ್ಕಂಡು, ಕೈಯಾಗೆ ಉದ್ದುಕಿರಾ ಕತ್ತಿ ತಕಂಡು ತಿರುಗಿಸ್ಕಂತಾ, ಥಕತೈ ಅಂತ ಕುಣ್ಕಂಡು ಬತ್ತಾರೆ.
ನಾವೂ ಚಿಕ್ಕವರಿರುವಾಗ ಸನಿ ಸನಿವಾರ ಈರಾಪುರಕ್ಕೆ ಕಾಯಮ್ಮಾಗಿ ಹೋಗ್ತಿದ್ವಿ. ಅಲ್ಲಿ ಅಕ್ಕ ಪಕ್ಕದ ಬೀದಿಗ್ಳಾಗೆ ಸನಿ ಮಾತ್ಮ ಮತ್ತೀಗ ಈರಬದ್ರಸೋಮಿ ಗುಡೀಗ್ಳೂ ಅವ್ವೆ. ಈರಬದ್ರನ ಗುಡೀನಾಗೇ ಸಾಮಿಗೆ ಪಂಚಲೋಹುದ್ದು ಕಣ್ಣು ಮೀಸೆ ಮೆತ್ತಿತ್ತು. ಅದ್ನ ನೋಡ್ತಿದ್ದಂಗೇ ಬೋ ಕ್ವಾಪ್ವಾಗವ್ನೆ ಅಂತ ಅನ್ನುಸ್ತಿತ್ತು. ಮುಂದ್ಕಿರಾ ಜಾಗ್ದಾಗೆ ಲಿಂಗಧೀರರ ಬಟ್ಟೆ ಬೊಂಬೇನೂ ಇಕ್ಕಿದ್ರು. ಕಣ್ ಅಳ್ಳಿಸಿಕಂಡು ನೋಡ್ತಿದ್ವು. ಪರಿಸೇನಾಗೆ ಅವ್ರ ಕುಣ್ತ ಕಂಡು ನಮ್ಗೆ ತೇಟು ಬೊಂಬೇನೇ ನೋಡ್ದಂಗಾಗಿ, ಅದೇ ಏನಾರಾ ಎದ್ದು ಬಂದೈತೋ ಏನೋ ಅಂಬಂಗಾಗ್ತಿತ್ತು. ಆದ್ರೆ ಅದು ಆಳೆತ್ರುಕ್ಕಿತ್ತು.
ವಿಮಡಗಾನಹಳ್ಳಿ ಆಂಜನೇಯನ ಪರಿಸೆ
ಇದ್ವರ್ಗೂ ಯೋಳಿದ್ ಪರಿಸೇಗ್ಳು ನಮ್ಮೂರಿನ ನಾಯಕರು ಮಾದಿಗರು ಕುರುಬರು ಎಲ್ಲಾರದೂ ಸುತ. ಬ್ಯಾರೆ ಜನ ಮಾರಮ್ಮುಂಗೆ ಬಲಿ ಕೊಡ್ದಿದ್ರೂ ಸೀ ಅಡುಗೆ ಮಾಡ್ತಾರೆ.
ಈ ಬ್ರಾಂಬ್ರು ಶೆಟ್ಟರು ಇವುರು ವರ್ಸೊರ್ಸ್ಲೂ ಹೋಗ್ತಿದ್ ಪರಿಸೇಗ್ಳು ಅವ್ವೆ. ಬ್ಯಾರೆ ಜನ ಇಲ್ಲಿಗೆ ಆಟು ನಡ್ಕಣಾಕಿಲ್ಲ. ವಿಮಡಗಾನಹಳ್ಳಿ ನಮ್ಮೂರ್ಗೆ ಒಂದು ಮೂರು ಕಿಲೋಮೀಟ್ರು ದೂರ್ದಾಗೈತೆ. ಜಯಮಂಗಲಿ ತೊರೇ ಪಕ್ಕದಾಗಾಸಿ ಹೋಗ್ಬೇಕು. ಆಂಜನೇಯನ ಪರಿಸೆ ವೈಶಾಖದಾಗೆ ಮಾಡ್ತಾರೆ. ನಮ್ ತಾತುನ್ ಕಾಲದಾಗೆ ಹಿಂದ್ಲ ದಿಸ ರಾತ್ರೇನೆ ಹೋಗಿ ಅಲ್ಲಿ ಮನಿಕ್ಕಂಡಿದ್ದು ಮಾರನೇ ದಿನ ತೇರು ಮುಗುಸ್ಕಂಡು ಅಲ್ಲೇ ಇದ್ದು ತಿರುಗ್ಲ ದಿನ ಊರಿಗ್ ಬತ್ತಿದ್ರು. ನಾಕೂರುಗ್ಳ ಶೆಟ್ರು ಸೇರ್ಕಂಡು ಅಲ್ಲಿ ಅಡುಗೆ ಮಾಡ್ಸಿ ಸಮಾರಾಧನೆ ಮಾಡ್ತಿದ್ರು. ಬ್ರಾಂಬ್ರು ಬ್ಯಾರೆ ಮಾಡ್ಕಂತಿದ್ರು. ಮೊದುಲ್ನೇ ದಿನ ರಾತ್ರಿ ಮೀಟಿಂಗ್ ಕಲೆತು ಮಾತಾಡ್ತಿದ್ರು. ತೇರಿನ ದಿನ ಸಮಾರಾಧನೆ ಮುಗೀತಿತ್ತು. ಅವತ್ತು ರಾತ್ರೆ ತಿರ್ಗಾ ಲೆಕ್ಕಾಚಾರ ಮಾಡ್ಕಂಡು ವಾಪ್ಸು ಊರ್ಗೆ ಬೆಳಗ್ಗೆದ್ದು ಬತ್ತಿದ್ರು. ಎಲ್ಲಾರೂ ಕೂಡಿ ಚಂದಾ ವಸೂಲು ಮಾಡಿ, ಮುಗುದ್ ಮ್ಯಾಕೆ ಲೆಕ್ಕಾಚಾರ ಮಾಡಿ ಉಳಿದಿದ್ನ ಯಾರ್ಗಾನಾ ಬೇಕಾದೋರ್ಗೆ ಸಾಲ ಕೊಡ್ತಿದ್ರು. ವ್ಯಾಪಾರಸ್ಥರು ಸಾಲ ತಕಂಡು ಮುಂದ್ಲೊರ್ಸದ ಹೊತ್ಗೆ ಅಸಲು ಬಡ್ಡಿ ಕೂಡ್ಸಿ ಕೊಡ್ತಿದ್ರು. ಅದ್ರಾಗೇ ಸಮಾರಾಧನೆ ಮುಗೀತಿತ್ತು. ಉಳಿದಿದ್ನ ತಿರ್ಗಾ ಅಂಗೇ ಸಾಲಾ ಕೊಡೋ ರೂಡಿ ಬಂತು. ಆಮ್ಯಾಕಾಮೇಕೆ ಚಂದಾ ಎತ್ತೋದ್ನೇ ಬುಟ್ರು. ಅದೇ ದುಡ್ಡು ಅಂಗೇ ಬೆಳ್ಕೋ ಹೋಯ್ತಿತ್ತು. ನಮ್ಮಪ್ಪುನ್ ಕಾಲುಕ್ಕೆ ಮೂರು ದಿನುದ್ ಪ್ರಯಾಣ ಒಂದೇ ದಿನುಕ್ ಬಂತು. ಅವತ್ತೇ ಬೆಳುಗ್ಗೆ ಹೋಗಿ ಸಂಜೀಕೆ ವಾಪ್ಸು.
ಎತ್ತಿನಗಾಡಿ ಲಗ್ಗೆತ್ತಿದ್ದು
ವಿಮಡಗಾನಹಳ್ಳಿ ನೆಪ್ಪಾತ್ಲೂ ನಂಗೆ ಈ ವಿಸ್ಯ ಮರೀಲಿಕ್ಕೇ ಆಗವಲ್ದು. ಒಂದು ಕಿತ ಇಂಗೇ ಪರಿಸೇಗೆ ಎಲ್ರೂ ಹೊಂಟು ನಿಂತಿದ್ವಿ. ನಮ್ಮಪ್ಪ ಎತ್ತಿನಗಾಡಿ ಕಟ್ಸಿದ್ರು. ಸರೇ ನಾನೂ ಹೊಸ ಲಂಗ ಇಕ್ಕಂಡು ಹೊಂಟೆ. ಗಾಡೀನಾಗೆ ತಳುಕ್ಕೆ ಮೆತ್ತಕಿರಾ ಹುಲ್ಲು ಹಾಸಿ ಅದ್ರ ಮ್ಯಾಗೆ ಗೋಣೀಚೀಲ ಹಾಸಿದ್ರು. ಅದ್ರ ಮ್ಯಾಗೆ ಹಳೇ ಬೆರ್ಸೀಟು ಹಾಸಿದ್ರು. ಸ್ಯಾನೆ ಜನ ಸೇರ್ಕಂಡ್ರು. ಆಟೊಂದು ಜನ ಕುಂತೇಟ್ಗೆ ಪಾಪ ಭಾರುಕ್ಕೆ ಒಂದು ಎತ್ತು ನೊಗ ಕಳುಚ್ಕಂಡು ನಿಂತ್ಕಂತು. ಗಾಡಿ ಲಗ್ಗೆ ಎತ್ಕಂತು (ಉಲ್ಡಿಕೊಂತು)ನಾವೂ ಎತ್ಲಾಗೆ ಅತ್ಲಾಗೆ ಬಿದ್ವಿ. ಆಮ್ಯಾಕೆ ವಸಿ ಜನ್ವ ಇಳ್ಸಿ ಗಾಡಿ ಹೊಂಡ್ಸಿದ್ರು. ನಂಗೇ ಗಾಡಿಯಾಗೆ ತಿರ್ಗಾ ಹತ್ಕಣಾಕೇ ಭಯ. ಅಳ್ತಾ ಕುಂತೆ ನಾನ್ ಬರಾಕಿಲ್ಲ ಅಂತ. ಸಣ್ಣ ಹುಡ್ಗಿ ಬುಟ್ಟು ಹೋಗಾಕಿಲ್ಲ. ಮಂಡಿಗೆ ಬಿದ್ದಿದ್ದ (ಹಠ ಮಾಡ್ತಿದ್ದ) ನನ್ನ ಬಲವಂತ ಮಾಡಿ ಆಳುಗ್ಳು ಎತ್ತಿ ಗಾಡೀ ಒಳ್ಗೆ ಹಾಕಿದ್ರು. ಹೊಳ್ಳಾಡೋಕೂ ಜಾಗ್ವಿರಲಿಲ್ಲ. ಅಂಗೇ ಅತ್ಕಂಡು ನಿದ್ದೆ ಮಾಡ್ಬುಟ್ಟೆ. ಅವತ್ನಿಂದ ಎತ್ತಿನಗಾಡಿ ಅಂದೇಟ್ಗೇ ದಿಗಿಲಾಗ್ತಿತ್ತು.
ಗುಟ್ಟೆ ಆಂಜನೇಯನ ಪರಿಸೆ
ನಮ್ಮೂರ್ಗೆ ಒಂದು ಎಂಟು ಕಿಲೊಮೀಟ್ರು ಆಗ್ತಿತ್ತು. ಕಾರ್ತೀಕದಾಗೆ ನಡೀತೈತೆ. ತೇರಿನ ಮುಂದೆ ಫಾಗು ಸುಡೋದು ಮಾಡ್ತಿದ್ರು. ಅಗಸರ ಬಟ್ಟೆ ತಕಂಡು(ಮಡಿ ಬಟ್ಟೆ, ಹೊಸ ಪಂಚೆ), ಎಣ್ಣೆ ತುಪ್ಪ ಎರಡ್ರಾಗೂ ಅದ್ದಿ, ಕೋಲಿಗೆ ಸುತ್ತಿ, ದ್ಯಾವ್ರ ಮುಂದೆ ಸುಡ್ತಿದ್ರು. ಅದ್ಕೆ ಫಾಗು ಸುಡೋದು ಅಂತಿದ್ರು. ನಮ್ ತಾತುನ ಕಾಲ್ದಾಗೆ ನಡ್ಕಂಡು ಹೋಗ್ತಿದ್ರು. ಆಮ್ಯಾಕೆ ಅಪ್ಪ ಗಾಡಿ ಕಟ್ಸೋರು. ಟಿಲ್ಲರ್ ಬಂದ ಮ್ಯಾಗೆ ಅದ್ರಾಗೂ ಹೋಗ್ತಿದ್ವಿ.
ಚೈತ್ರ ಶುದ್ಧ ಪೌರ್ಣೋಮಿ ದಿವ್ಸ ಪರಿಸೇ ನಡೀತೈತೆ. ವಿಮಡಗಾನಹಳ್ಳಿ, ಕೊಂಡವಾಡಿ, ಚಿಕ್ಕಮಾಲೂರು, ವೀರನಾಗೇನಹಳ್ಳಿ ಜನ ಇಲ್ಲಿ ಸೇರ್ತಿದ್ರು. ವೀರನಾಗೇನಹಳ್ಳಿ ಭೀಮಯ್ಯ ಶೆಟ್ರಿಗೆ ಐದಾರು ಹೆಣ್ಣುಮಕ್ಕಳು ಇದ್ರು. ವರ್ಸೊರ್ಸ್ಲೂ ಆ ಅಕ್ಕತಂಗೀರು ದ್ಯಾವ್ರಿಗೇ ತಂಬಿಟ್ಟಿನ ಆರತಿ ತಕಂಡು ಬರಾರು. ಅವ್ರು ಹಾಡು ಯೋಳೋವಾಗ ಬ್ಯಾರೆಯೋರೂ ಜತ್ಯಾಗೆ ದನಿ ಕೂಡ್ಸೋರು.
ಈ ಪರಿಸೇಗ್ಳು ನಾವ್ ಚಿಕ್ಕೋರಿರುವಾಗ ಹೋಗ್ತಿದ್ದವು. ಇನ್ನಾ ಷಷ್ಠಿನಾಗೆ ತೆರಿಯೂರಿನ ಸುಬ್ಬರಾಯನ(ಸುಬ್ರಹ್ಮಣ್ಯ) ಜಾತ್ರೇಗೂ ಹೋಗ್ತಿದ್ದ ನೆಪ್ಪೈತೆ.

ನಮ್ಮೂರಿನ ಸುತ್ತಾಮುತ್ತಾ ನಡಿಯಾ ಪರಿಸೇಗ್ಳು ಇವೆಲ್ಲಾ. ಬ್ಯಾರೆ ಬ್ಯಾರೆ ಜಾತಿಯೋರ್ದು ಆಚಾರ ಇಚಾರ ಬ್ಯಾರೆ ಇತ್ತು. ಅವುರವ್ರ ಮನೆತನುದ್ ಸಂಪ್ರದಾಯಕ್ಕೆ ತಕ್ಕಂಗೆ ನಡ್ಕಣಾರು. ಜಾತೀ ಬದ್ಲಾದಂಗೆ ದ್ಯಾವ್ರೂ ಬದ್ಲಾಗ್ತಿತ್ತು. ಆಚಾರಗೋಳೂ ಬದ್ಲೇಯಾ. ಆದ್ರೂ ಸುತ ಊರ್ನಾಗೆ ಒಬ್ರಿಗೊಬ್ರು ಸೆಂದಾಕೇ ಇದ್ವಿ. ಅದೆಚ್ಚು ಇದ್ ಕಡ್ಮೆ ಅಮ್ತ ಯೋನೂ ಇರ್ಲಿಲ್ಲ. ಎಲ್ಲಾರ್ ದ್ಯಾವ್ರೂ ಎಲ್ಲಾರ್ಗೂ ದ್ಯಾವ್ರೇ ಆಗಿತ್ತು. ತೊಟ್ಟು ಎದ್ರೆ(ಅಮ್ಮ ಆದ್ರೆ) ಯಾರೇ ಆದ್ರೂ ಮಾರಮ್ಮುಂಗೆ ಮಸ್ರನ್ನ ಇಕ್ಕಿ ಮೊಕ್ಕಂಡು(ಕೈಮುಗುದು) ಬರಾರು. ಆವಾಗೀವಾಗ ಸತ್ಯಮ್ಮುಂಗೂ ಹೋಗಾರು. ಕದಿರಪ್ಪನ ಪರಿಸೆಗೂ ಸೇರಾರು. ಬಾಬಯ್ಯನ ಹಬ್ದಾಗೂ ಕುಣಿಯಾರು.

ಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು.
