“ಶತಮಾನಗಳಿಂದ ನಾವು ಹುಡುಗಿಯರಿಗೆ ಹೇಗೆ ಶೋಷಣೆಯನ್ನು “ನಿಭಾಯಿಸಬೇಕು” ಎಂಬ ಶಿಕ್ಷಣ ಕೊಡುತ್ತೇವೆಯೇ ಹೊರತು ಹೇಗೆ ತಿರುಗಿ ಬೀಳಬೇಕೆಂದು ಕಲಿಸುವುದೇ ಇಲ್ಲ. ಹಾಲಿವುಡ್ ನಲ್ಲಿ ಹುಟ್ಟಿಕೊಂಡ ಈ ಹ್ಯಾಶ್ ಟ್ಯಾಗ್ ಇಂದು ಹಲವು ಬಗೆಯ ಶೋಷಣೆಯ ವಿರುದ್ಧದ ಹ್ಯಾಶ್ ಟ್ಯಾಗ್ ಆಗಿ ರೂಪಾಂತರಗೊಳ್ಳುತ್ತಿದೆ. ಇದು ಆರಂಭವಾದಾಗಿನಿಂದ ಹಾಲಿವುಡ್ಡಿನ ಘಟಾನುಘಟಿಗಳಲ್ಲದೆ ಹಲವು ಉದ್ದಿಮೆಯ ಹಿರಿತಲೆಗಳು ಉರುಳಿವೆ. ಅವರೆಲ್ಲರ ಖಾಲಿಯಾದ ಸ್ಥಾನವನ್ನು ತುಂಬಿದವರಲ್ಲಿ ಅರ್ಧಕ್ಕೂ ಹೆಚ್ಚಿನವರು ಹೆಂಗಸರು.”
ವೈಶಾಲಿ ಹೆಗಡೆ ಅಂಕಣ
ಈ # ಮೀಟೂ (MeToo) ಚಳುವಳಿ ಅಂತರ್ಜಾಲದಲಿ ಆರಂಭವಾದಾಗಿನಿಂದ ಜಗತ್ತಿನಾದ್ಯಂತ ದಮನಿತ ಹೆಂಗಸರಿಗೆ ಹೊಸದೊಂದು ಧ್ವನಿ ನೀಡಿದೆ. ಸಹನೆಯ ಕಟ್ಟುಮೀರಿ ಪ್ರತಿಭಟನೆಯ ಮಾರ್ಗವಾಗಿ ಹುಟ್ಟಿಕೊಂಡ ಈ ಭಾರತದಲ್ಲಂತೂ ಹಲವು ಕೊಚ್ಚೆಗಳನ್ನೇ ಕದಡಿದೆ. ಆದರೆ ಅದೀಗ ಅಷ್ಟೇ ವೇಗದಲ್ಲಿ ತನ್ನ ತೀಕ್ಷ್ಣತೆಯನ್ನು ಕಳೆದುಕೊಳ್ಳುತ್ತಿವೆಯೇ?
ಈ ಚಳವಳಿಯ ದುರುಪಯೋಗ ಅಲ್ಲಲ್ಲಿ ಆಗಿಲ್ಲವೆಂತಲ್ಲ. ಆದರೆ ಈ ಚಳುವಳಿ ಹುಟ್ಟುಹಾಕಿದ ಹೊಸದೊಂದು ಆತ್ಮವಿಶ್ವಾಸವನ್ನು ಖಂಡಿತ ಅಲ್ಲಗಳೆಯುವಂತಿಲ್ಲ. ಇದನ್ನೊಂದು ಹಗುರ ತಮಾಷೆಯ ಸರಕಾಗಿಸಿಕೊಂಡ ಹಲವು ಆನ್ಲೈನ್ ಶೂರರಿದ್ದಾರೆ. ಬಹುಷ ಅವರ್ಯಾರೂ ಹುಡುಗಿಯಾಗಿ ಪಬ್ಲಿಕ್ ಬಸ್ಸಿನಲ್ಲಿ ಅಡ್ಡಾಡಿದವರಲ್ಲ. ಇನ್ನು ಕೆಲವರು, ಶೋಷಣೆ ಕಿರುಕುಳಕ್ಕೆ ಒಳಗಾದವರು ಹಲವಾರು ವರ್ಷಗಳ ಮೇಲೆ ಬಾಯ್ಬಿಟ್ಟು ಸಂಕಟ ತೋಡಿಕೊಂಡಾಗ, ಇದು ಸುಳ್ಳು, ಸತ್ಯವಾಗಿದ್ದಲ್ಲಿ ಆಗ್ಲೇ ಹೇಳಿಕೊಳ್ಳಬೇಕಿತ್ತು, ಪ್ರತಿರೋಧಿಸಬೇಕಿತ್ತು ಎನ್ನುವ ಅಸಹ್ಯ ಮೊಂಡು ವಾದ ಮಂಡಿಸಿದವರನ್ನು ನೋಡಿದ್ದೇನೆ. ಒಂದು ಪುರುಷಪ್ರಧಾನ ವ್ಯವಸ್ಥೆಯಲ್ಲಿ ಶೋಷಣೆಗೊಳಗಾದ ಹೆಣ್ಣು ಯಾಕೆ ಬಾಯ್ಬಿಡುವುದಿಲ್ಲ ಎನ್ನುವುದಕ್ಕೆ ಆ ಘಟನೆಯ ಪರಿಸ್ಥಿತಿಯೊಂದೇ ಕಾರಣವಾಗಿರುವುದಿಲ್ಲ. ಅಲ್ಲಿ ಒಂದು ಸಂಪೂರ್ಣ ಸಮಾಜದ ಜವಾಬ್ದಾರಿಯಿದೆ. ನಾವು ಇಲ್ಲಿಯವರೆಗೂ ಹೆಂಗಸರನ್ನು ಬೆಳೆಸಿದ ರೀತಿ, ನಡೆಸಿಕೊಳ್ಳುವ ರೀತಿ, ಎಲ್ಲದಕ್ಕೂ ಅವಳನ್ನೇ ಜವಾಬ್ದಾರಳನ್ನಾಗಿಸುವ ರೀತಿ, ಎಲ್ಲ ಅನಿವಾರ್ಯತೆಗಳ ನಡುವೆ ಆಕೆ ಬದುಕಿ ತೋರಿಸಬೇಕಾದ ರೀತಿ, ಹಲವು ಬಗೆಯ ಒತ್ತಡಗಳ ನಡುವೆಲ್ಲೋ ಕಳೆದುಹೋಗುವ ಘನತೆಗೆ ಬಾಯಿ ಮುಚ್ಚಿಕೊಂಡು ಬದುಕುವ ರೀತಿ ಎಲ್ಲ ಬದಲಾಗಬೇಕಿದೆ. ಆಗಲೇ ಶೋಷಣೆಯನ್ನು ತಕ್ಷಣದಲ್ಲಿ ಪ್ರತಿರೋಧಿಸುವ ಸ್ಥಿತಿ ಬರಲು ಸಾಧ್ಯ. ಅಂತೂ ಈಗಲಾದರೂ ಶೋಷಿತ ಮನಸ್ಸಿಗೊಂದು ಬಿಡುಗಡೆಯ ಧ್ವನಿ ಸಿಕ್ಕಿತು ಎಂದುಕೊಳ್ಳುವಷ್ಟರಲ್ಲಿ ಭಾರತದಲ್ಲಿ ಎಲ್ಲೆಡೆಯೂ ಆ ಧ್ವನಿಯ ಅವಹೇಳನ ಮಾಡುವ, ಹೊಂಚಿ ಹೊಸಕಿ ಹಾಕುವ ಪ್ರಯತ್ನಗಳೇ ಕಾಣುತ್ತಿವೆ.
ಭಾರತದಲ್ಲಿ ಕಳೆದ ವರ್ಷ ಭರದಿಂದ ಹೊರಬಂದ ಹಲವರ ಹುಳುಕು ಬರೀ ಸಿನಿಮಾರಂಗಕ್ಕೆ ಸೀಮಿತವಾಗಿ ಉಳಿದುಹೋಯಿತು. ಕೊಳೆತು ನಾರುತ್ತಿರುವ ರಾಜಕೀಯದವರನ್ನು ತಾಕಲೂ ಇಲ್ಲ. ಮಠಮಾನ್ಯಗಳ ಬಾಗಿಲುತಟ್ಟಿ ಹಾಗೆಯೇ ಹೊರಬಿದ್ದು ಹೋಯಿತು. ಕಳ್ಳಸ್ವಾಮಿಗಳ ದಂಡೇ ತುಂಬಿರುವ ನೆಲದಲ್ಲಿ ಅಂಥವರ ವಿರುದ್ಧ ಹೊರಡುವ ದನಿಗಳನ್ನು ಹಾಸ್ಯ ಮಾಡಿ ನಗುವ ಹೊಸ ಉಡಾಫೆಯೊಂದು ಚಾಲ್ತಿಯಲ್ಲಿದೆ. ಬಿಲ್ಲಿಯನ್ ಗಟ್ಟಲೆ ಜನರಿರುವ ದೇಶಕ್ಕೆ ದಿನಕ್ಕೊಬ್ಬ ಹೊಸ ಸ್ವಾಮಿ, ಹೊಸ ಮಠ ಹುಟ್ಟಿದರೆ ಅದಕ್ಕೆ ತಲೆಬಗ್ಗಿಸಿ ಹೋಗುವ ಭಕ್ತರಿಗೆ ಬರವಿಲ್ಲ. ನಮ್ಮ ಪುರುಷಪ್ರಧಾನ ವ್ಯವಸ್ಥೆಯಲ್ಲಿರುವವರು ಅರ್ಧ ಬಿಲಿಯನ್ ಗಿಂತ ಹೆಚ್ಚಿನವರು ಹೆಂಗಸರು, ಆದರೂ ಮೀ ಟೂ ಭಾರತದ ಹಲವು ಸ್ತರಗಳ ಲೈಂಗಿಕ ಶೋಷಣೆಯ ಮೇಲ್ಪದರವನ್ನು ಕೂಡ ಕೆರೆದಿಲ್ಲ!
ಜಾಗತಿಕವಾಗಿ ವೇಗ ವೃದ್ಧಿಸಿಕೊಳ್ಳುತ್ತಿರುವ ಈ ಜಾಗೃತಿಯನ್ನು ಭಾರತಮಾತ್ರ ಹತ್ತಿಕ್ಕಲು ಹಾತೊರೆಯುತ್ತಿದೆ. ನಮ್ಮ ಸಮಾಜ ಇನ್ನೂ ಪುರುಷ ಪ್ರಧಾನ ವ್ಯವಸ್ಥೆಯಿಂದ ಹೊರಬರುವಷ್ಟು ಪ್ರಬುದ್ಧವಾಗಿಲ್ಲವೇ? ೧೯೯೨ರಲ್ಲಿಯೇ ಭಾರತದಲ್ಲಿ ಮೀಟೂ ಆರಂಭಿಸಿದ, ರಾಜಸ್ಥಾನದ ಭನವಾರಿ ದೇವಿಗೆ ಈ ಮೀಟೂ ಎಲ್ಲ ಆಗ ಗೊತ್ತಿರಲಿಲ್ಲ. ಸಮಾಜ ಕಾರ್ಯಕರ್ತೆಯಾಗಿ ಚಿಕ್ಕ ಮಕ್ಕಳ ಮದುವೆಗಳನ್ನು ಪ್ರತಿರೋಧಿಸಿದ ಪರಿಣಾಮವಾಗಿ ಗ್ಯಾಂಗ್ ರೇಪ್ ಗೆ ಒಳಗಾದಳು ಭನವಾರಿ. ಅನಕ್ಷರಸ್ಥೆ, ಹಿಂದುಳಿದ ವರ್ಗದ ಭನವಾರಿ ಛಲಬಿಡದೆ ಹೋರಾಡಿದಳು. ಸುಪ್ರೀಂ ಕೋರ್ಟ್ ಮೆಟ್ಟಿಲ ತನಕ ದನಿತಗ್ಗಿಸದೆ ಹತ್ತಿದಳು. ಭನವಾರಿ ಭಾರತದ ಮೊಟ್ಟಮೊದಲ ಮೀ ಟೂ ರೂವಾರಿ. ಆಕೆಯ ಹೋರಾಟಕ್ಕೆ ಇನ್ನೂ ಜಯ ಸಿಕ್ಕಿಲ್ಲ. ಆಕೆಯ ತಪ್ಪಿತಸ್ಥರಿಗೆ ಇನ್ನೂ ಶಿಕ್ಷೆಯಾಗಿಲ್ಲ. ಆದರೆ ಅನಕ್ಷರಸ್ಥೆ ಭನವಾರಿ ಇಂದು ಸುಪ್ರೀಂ ಕೋರ್ಟ್ ನಿಗದಿಸಿರುವ “ವರ್ಕ್ ಪ್ಲೇಸ್ ಗೈಡ್ ಲೈನ್ಸ್” ಗಳಿಗೆ ಕಾರಣಕರ್ತಳು. ಆದರೂ ನಮ್ಮಲ್ಲಿ ಹೊಸ ಹೊಸ ಭನವಾರಿಗಳು ಶೋಷಣೆಗೊಳ್ಳುತ್ತಲೇ ಇರುತ್ತಾರೆ. ಮೀ ಟೂ ಎಂದವರನ್ನು ಸಂಶಯಿಸುತ್ತಲೇ ಇರುತ್ತಾರೆ.
ಇಂಥದ್ದೊಂದು ಧ್ವನಿ ಹುಟ್ಟಿರುವ ಕಾರಣಕ್ಕಾಗಿಯೇ ಇಂದು ಶತಮಾನಗಳ ಶೋಷಣೆಯನ್ನು ಎದುರಿಸಿ ಹೊಸ ಧ್ವನಿಗಳು ಹುಟ್ಟುತ್ತಿವೆ. ಈಗಷ್ಟೇ ಜಾಗತಿಕ ಮಹಿಳಾ ದಿನಕ್ಕೆ ಕೆಲ ದಿನಗಳ ಮುಂಚೆ, ವ್ಯಾಟಿಕನ್ ಚರ್ಚಿನ ನನ್ ಒಬ್ಬರು ಹೃದಯವಿದ್ರಾವಕ ಮಾಹಿತಿಗಳನ್ನು ಹೊರನೀಡಿ #ನನ್ಸ್ ಟೂ (NunsToo) ಎಂಬ ಚಳವಳಿ ಆರಂಭಿಸಿದ್ದಾರೆ.
ಪುರುಷಪ್ರಧಾನ ಚರ್ಚುಗಳ ವ್ಯವಸ್ಥೆ ಹೇಗೆ ವರ್ಷಾನುಗಟ್ಟಲೆ ನನ್ ಗಳ ಶೋಷಣೆಗೆ ಕಾರಣವಾಗಿದೆ ಎಂದು ವಿವರವಾಗಿ ಬರೆದುಕೊಂಡಿದ್ದಾರೆ. ಹೇಗೆ ಚರ್ಚುಗಳಲ್ಲಿ ಜಗತ್ತಿನಾದ್ಯಂತ ಪಾದರಿಗಳಿಂದ ನನ್ ಗಳ ರೇಪ್ ನಡೆಯುತ್ತದೆ, ಒಂದು ಪೈಸೆ ಕೂಡ ದುಡ್ಡಿರದ ನನ್ ಗಳು ಬಸಿರಾಗಿಬಿಟ್ಟರೆ, ಪಾದರಿಗಳೇ ಅಬಾರ್ಷನ್ ಮಾಡಿಸುವ ವ್ಯವಸ್ಥೆ ವ್ಯಾಟಿಕನ್ ಚರ್ಚಿನ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿ ಹೋಗಿದೆ. ಅಕಸ್ಮಾತ್ ಮಗುವನ್ನು ಕಳಕೊಳ್ಳಲು ಇಚ್ಛಿಸದ ನನ್ ಗಳನ್ನು ಇಡೀ ವ್ಯವಸ್ಥೆ ಬಹಿಷ್ಕರಿಸುತ್ತದೆ, ಅಂಥವರನ್ನು ಸಮಾಜ ಕೂಡ ಸ್ವೀಕರಿಸದೆ ನನ್ ಗಳನ್ನೇ ತಪ್ಪಿತಸ್ಥರೆಂಬಂತೆ ಕಾಣುತ್ತದೆ.
ಊರ ಹೊರಗೆಲ್ಲೋ ಒಬ್ಬಳೇ ಮಗುವನ್ನು ಬೆಳೆಸಿದ ಹಲವಾರು ನನ್ ಗಳ ಉದಾಹರಣೆಯನ್ನು ನೀಡಿ, ಸಿಸ್ಟರ್ ಕ್ಯಾಥರೀನ್ ಆಬಿನ್ ವಿವರವಾದ ಲೇಖನ ಬರೆದಿದ್ದಾರೆ. ಅಂತೂ ಈ ಮೀ ಟೂ ಚಳವಳಿ, ನಿಶ್ಶಬ್ದ ವ್ಯಾಟಿಕನ್ ಗೋಡೆಗಳಿಗೆ ಬಡಿದು ಕೇಳುವ ನನ್ ಗಳ #ನನ್ಸ್ ಟೂ ಗೆ ದನಿಯಾಗಿದೆ. ಆದರೆ ನಾವೆಲ್ಲಾ ಕೇಳಿಸಿಕೊಳ್ಳುತ್ತಿದ್ದೇವೆಯೇ?
ಆರು ವರ್ಷಗಳ ಹಿಂದೆ ಸೌತ್ ಕೊರಿಯಾದ ಹೈಸ್ಕೂಲೊಂದರಲ್ಲಿ ಉಪಾಧ್ಯಾಯರೊಬ್ಬರು ಹುಡುಗಿಯರನ್ನು ಅಸಭ್ಯವಾಗಿ ಮುಟ್ಟುತ್ತಾರೆಂದು ಹಲವು ಹುಡುಗಿಯರು ತಕರಾರೆಬ್ಬಿಸಿದರು. ಅವರ ದೂರು ಶಾಲಾ ಮುಖ್ಯಸ್ಥರ ಕಿವಿಯಮೇಲೆ ಬಿದ್ದು ಜಾರಿ ಹೋಯಿತು. ಹುಡುಗಿಯರು ಎದೆಗೆ ಅಡ್ಡಲಾಗಿ ಪುಸ್ತಕ ಹಿಡಿದು ಅಡ್ಡಾಡಿದರು. ಸ್ಕರ್ಟಿನ ಕೆಳಗೆ ಉದ್ದನೆಯ ಪ್ಯಾಂಟ್ ಧರಿಸಲಾರಂಭಿಸಿದರು. ಈ ವಿವರಣೆ ತೀರಾ ನಮ್ಮ ನಿಮ್ಮ ಅನುಭವದಂತೆಯೇ ಇದೆ ಅಲ್ಲವೇ?
ಒಂದು ಪುರುಷಪ್ರಧಾನ ವ್ಯವಸ್ಥೆಯಲ್ಲಿ ಶೋಷಣೆಗೊಳಗಾದ ಹೆಣ್ಣು ಯಾಕೆ ಬಾಯ್ಬಿಡುವುದಿಲ್ಲ ಎನ್ನುವುದಕ್ಕೆ ಆ ಘಟನೆಯ ಪರಿಸ್ಥಿತಿಯೊಂದೇ ಕಾರಣವಾಗಿರುವುದಿಲ್ಲ. ಅಲ್ಲಿ ಒಂದು ಸಂಪೂರ್ಣ ಸಮಾಜದ ಜವಾಬ್ದಾರಿಯಿದೆ.
ಮೀಟೂ ಚಳವಳಿಯ ಕಾವು ಏರಿದ ಈ ಹೊತ್ತಲ್ಲಿ, ತಮ್ಮ ಪರಿಸ್ಥಿತಿಯಿಂದ ರೋಸಿಹೋಗಿರುವ ಹುಡುಗಿಯೊಬ್ಬಳು ಧೈರ್ಯವಹಿಸಿ ಶಾಲೆಯ ಹುಳುಕುಗಳನೆಲ್ಲ ಬಿಚ್ಚಿಟ್ಟು #ಸ್ಕೂಲ್ ಮೀ ಟೂ ಎಂಬ ಚಳವಳಿ ಆರಂಭಿಸಿದಳು. ಅದು ತಕ್ಷಣವೇ ಸಂಬಂಧಿಸಿದವರ ಗಮನ ಸೆಳೆದು ಸೌತ್ ಕೊರಿಯಾದ ಇತರ ಶಾಲೆಗಳಲ್ಲಿ ನಡೆಯುವ ಲೈಂಗಿಕ ಕಿರುಕುಳಗಳನೆಲ್ಲ ಬಯಲಿಗೆಳೆಯುತ್ತ ಬಂತು. ಆದರೆ ಸಾವಿರ ಸಾವಿರ ಶಾಲೆಗಳ ಹುಡುಗಿಯರು ಇಂದಿಗೂ ಎದೆಗೆ ಅಡ್ಡಲಾಗಿ ಪುಸ್ತಕ ಹಿಡಿದೇ ಅಡ್ಡಾಡುತ್ತಾರೆ.
ಈ ಮೀಟೂ ಚಳುವಳಿ ಅಂತರ್ಜಾಲದಲ್ಲಿ ಮರುಜನ್ಮ ಪಡೆದು ಒಂದೂವರೆ ವರ್ಷದ ಮೇಲಾಯಿತು. ಆದರೆ ಇದು ಹುಟ್ಟಿದ್ದು ಸುಮಾರು ಹನ್ನೆರಡು ವರ್ಷಗಳ ಹಿಂದೆ. ತರಾನ ಬರ್ಕ್ ಎಂಬ ಕಪ್ಪು ಮಹಿಳೆ, ಮಹಿಳೆಯರ ಶೋಷಣೆಯ ವಿರುದ್ಧದ ಕ್ರಾಂತಿಯಾಗಿ, ವುಮನ್ ಎಂಪಾವೆರ್ ಮೆಂಟ್ ಸಾಧನವಾಗಿ ಆರಂಭಿಸಿದ ಆಂದೋಲನ. ಆದರೆ ಅದು ಅಂತರ್ಜಾಲದಲ್ಲಿ ಆಸ್ಫೋಟಗೊಂಡು ಬೆಳೆದಿದ್ದು ಇತ್ತೀಚಿಗೆ. ಎಲ್ಲರೂ ಒಂದು ಕ್ಷಣಿಕ ಕೂಗು ಎಂದುಕೊಂಡಿದ್ದ ಆರ್ತನಾದದ ಸದ್ದು ಹಲವರ ಕೂಗಿನೊಂದಿಗೆ ಗಟ್ಟಿಗೊಂಡು ಈಗ ಸಮಾಜವನ್ನು ಎಬ್ಬಿಸುತ್ತ ಸಾಗಿದೆ.
ಹೆಂಗಸರಿಗೆ ಧ್ವನಿ ಇರಲು ಸಾಧ್ಯವೇ ಇರದ ಸೌದಿ ಅರೇಬಿಯಾದಂತಲ್ಲಿ ಕೂಡ ಅಂತರ್ಜಾಲದಲ್ಲಿ ಮೀ ಟೂ ಕಾರಣದಿಂದ ಸಂಕಟ ತೋಡಿಕೊಂಡ ಹೆಂಗಸರಿದ್ದಾರೆ. ಪಾಕಿಸ್ತಾನದ ಸಬಿಕಾ ಖಾನ್ ಹೇಗೆ ತಾನು ಕಾಬಾದ ಸುತ್ತ ಪ್ರದಕ್ಷಿಣೆ ಹಾಕುವಾಗ ಒಂದಲ್ಲ, ಎರಡಲ್ಲ ಮೂರುಬಾರಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಬಣ್ಣಿಸಿದ್ದಾಳೆ. ಆಕೆಯ ಮಾತಿನಿಂದ ಪ್ರೇರಿತರಾಗಿ ಹಲವು ಹೆಂಗಸರು ಮೆಕ್ಕಾನಂಥ ಪವಿತ್ರ ಸ್ಥಳ, ದೇವರ ಸನ್ನಿಧಿಯಲ್ಲಿ ನಡೆಯುವ ಲೈಂಗಿಕ ಕಿರುಕುಳದ ಬಗ್ಗೆ ದನಿಯೆತ್ತಿದ್ದಾರೆ.
ಅಮೆರಿಕಾ, ಚೀನಾಗಳ ಕೆಲವು ಬೌದ್ಧ ಭಿಕ್ಕುಗಳ ವಿರುದ್ಧ ಅಲ್ಲಲ್ಲಿ ದೂರುಗಳು ತಲೆದೋರುತ್ತಿವೆ. ಹೇಗೆ ಮೊನಾಸ್ಟರಿಗೆ ಬರುವ ಭಕ್ತಾದಿಗಳನ್ನು ಬೌದ್ಧ ಭಿಕ್ಕುಗಳು ಲೈಂಗಿಕವಾಗಿ ತಡವುತ್ತಾರೆಂಬುದನ್ನು ಹಲವರು ಹೊರಗೆಡವುತ್ತಿದ್ದಾರೆ. ಮೊನಾಸ್ಟರಿಯಲ್ಲಿರುವ ಸನ್ಯಾಸಿನಿಯರನ್ನು ಲೈಂಗಿಕವಾಗಿ ಒತ್ತಾಯಿಸುವ ಬಗ್ಗೆ ಹಲವು ಪುರಾವೆಗಳು ಹೊರಬರುತ್ತಿವೆ. ಮೊದಲಾದರೆ ಇಂಥ ಶಕ್ತಿಯುತ ಅದರಲ್ಲೂ ಧಾರ್ಮಿಕ ಮುಖಂಡರ ವಿರುದ್ಧ ಎತ್ತಿದ ತಲೆಗಳ ಲೆಕ್ಕವೂ ಇರುತ್ತಿರಲಿಲ್ಲ. ಇಂದು ತಲೆಯೆತ್ತುವ ಧೈರ್ಯವಾದರೂ ಹೆಂಗಸರಲ್ಲಿ ಬಂದಿರುವುದು ಜಾಗತಿಕವಾಗಿ ತಾವೆಲ್ಲ ಒಂದೇ, ತಮಗೆಲ್ಲ ಒಗ್ಗಟ್ಟಾದ ದನಿಯೊಂದಿದೆ ಎಂಬ ಭರವಸೆಯಿಂದಾಗಿ. ಒಂದು ಲೆಕ್ಕದಲ್ಲಿ ಅಂತರ್ಜಾಲದ ಶಕ್ತಿಯದು. ಯಾಕೆಂದರೆ ಹೆಣ್ಣಿನ ಶೋಷಣೆಗೆ ದೇಶ, ಜಾತಿ, ಧರ್ಮಗಳ ಗಡಿಯಿಲ್ಲ.
ಶತಮಾನಗಳಿಂದ ನಾವು ಹುಡುಗಿಯರಿಗೆ ಹೇಗೆ ಶೋಷಣೆಯನ್ನು “ನಿಭಾಯಿಸಬೇಕು” ಎಂಬ ಶಿಕ್ಷಣ ಕೊಡುತ್ತೇವೆಯೇ ಹೊರತು ಹೇಗೆ ತಿರುಗಿ ಬೀಳಬೇಕೆಂದು ಕಲಿಸುವುದೇ ಇಲ್ಲ. ಹಾಲಿವುಡ್ ನಲ್ಲಿ ಹುಟ್ಟಿಕೊಂಡ ಈ ಹ್ಯಾಶ್ ಟ್ಯಾಗ್ ಇಂದು ಹಲವು ಬಗೆಯ ಶೋಷಣೆಯ ವಿರುದ್ಧದ ಹ್ಯಾಶ್ ಟ್ಯಾಗ್ ಆಗಿ ರೂಪಾಂತರಗೊಳ್ಳುತ್ತಿದೆ. ಇದು ಆರಂಭವಾದಾಗಿನಿಂದ ಹಾಲಿವುಡ್ಡಿನ ಘಟಾನುಘಟಿಗಳಲ್ಲದೆ ಹಲವು ಉದ್ದಿಮೆಯ ಹಿರಿತಲೆಗಳು ಉರುಳಿವೆ. ಅವರೆಲ್ಲರ ಖಾಲಿಯಾದ ಸ್ಥಾನವನ್ನು ತುಂಬಿದವರಲ್ಲಿ ಅರ್ಧಕ್ಕೂ ಹೆಚ್ಚಿನವರು ಹೆಂಗಸರು. ಯಾರೂ ಅಲುಗಾಡಿಸಲಾರದ ಕುಳಗಳೆಂದು ಖ್ಯಾತಿಯಾಗಿದ್ದವರ ಕುರ್ಚಿ ಕೂಡ ಕುಂಟುಮುರಿದು ಬಿದ್ದಿದೆ. ಅಂದರೆ ಪುರುಷಪ್ರಧಾನ ವ್ಯವಸ್ಥೆಯ ಅಡಿಮೇಲು ಮಾಡಿದ ಧ್ವನಿ ಇದು. ಇದಲ್ಲವೇ ಸಾರ್ಥಕತೆ?
ಆದರೆ ಭಾರತದಂಥ ಪುರುಷಪ್ರಧಾನ ವ್ಯವಸ್ಥೆಯ ಬಿಗಿಮುಷ್ಠಿಯ ದೇಶದಲ್ಲಿಈ ದನಿಯ ಬಾಯಿಕಟ್ಟಿ ಹೋಗದೇ, ವ್ಯವಸ್ಥೆಯ ಪುರುಜ್ಜೀವನವಾದೀತೇ?
ವೈಶಾಲಿ ಹೆಗಡೆ
ಊರು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ. ಅಮೆರಿಕಾದ ಬಾಸ್ಟನ್ ಸಮೀಪ ಈಗ ಕಟ್ಟಿಕೊಂಡ ಸೂರು. ತಂತ್ರಜ್ಞಾನದ ಉದ್ದಿಮೆಯಲ್ಲಿ ಕೆಲಸ. ದೇಶ ಸುತ್ತುವುದು, ಬೆಟ್ಟ ಹತ್ತುವುದು, ಓಡುವುದು, ಓದು, ಸಾಹಸ ಎಂಬ ಹಲವು ಹವ್ಯಾಸ. ‘ಒದ್ದೆ ಹಿಮ.. ಉಪ್ಪುಗಾಳಿ’ ಇವರ ಪ್ರಬಂಧ ಸಂಕಲನ. “ಪ್ರೀತಿ ಪ್ರಣಯ ಪುಕಾರು” ನೂತನ ಕಥಾ ಸಂಕಲನ.