ಭಜನೆ ಬಗ್ಗೆ ಯಾಕಿಷ್ಟು ಬೇಸರವಾಗಿದ್ವಿ ಅಂದ್ರೆ ಅರ್ಧ ಘಂಟೆಗೆ ಮುಗಿದಿದ್ರೆ ಏನೂ ಅನಿಸ್ತಾ ಇರಲಿಲ್ಲ. ಕೆಲವೊಮ್ಮೆ ಮುಕ್ಕಾಲು ಘಂಟೆಯಾದ್ರೂ ಮುಗೀತ ಇರಲಿಲ್ಲ. ಆಗ ‘ಓದೋಕೆ ಸಮಯ ಸಾಲೋಲ್ಲ’ ಎಂಬ ಭಾವನೆ ನಮ್ಮಲ್ಲಿ ಮೂಡಿತ್ತು. “ಹೊರಗಿನಿಂದ ಶಾಲೆಗೆ ಬರುವವರು ಈ ಸಮಯದಲ್ಲಿ ಓದ್ತಾ ಇರ್ತಾರೆ, ನಾವು ಮಾತ್ರ ಭಜನೆ ಮಾಡ್ತೀವಿ” ಎಂದು ನಮ್ಮ ಸೀನಿಯರ್ ಹುಡುಗರು ಹೇಳಿದ್ದರಿಂದ ಭಜನೆ ಅಂದ್ರೆ ಮೂಗು ಮುರಿಯಂತಾಗುತ್ತಿತ್ತು. ಆದರೆ ಶಾಲೆಯ ಟಾಪರ್ಸ್ ಮಾತ್ರ ಹಾಸ್ಟೆಲ್ ಹುಡುಗ, ಹುಡುಗಿಯರಾಗುತ್ತಿದ್ದುದೇ ವಿಶೇಷವಾಗಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹದಿನೇಳನೆಯ ಕಂತು ನಿಮ್ಮ ಓದಿಗೆ

ಈ ಹಿಂದೆ ಹೇಳಿದಂತೆ ನಮಗೆ ಹಾಸ್ಟೆಲ್ಲಿನ‌ ವೇಳಾಪಟ್ಟಿಯಲ್ಲಿ‌ ಸಂಜೆ ಆರರಿಂದ ಆರೂವರೆಯವರೆಗೂ ಭಜನೆ ಮಾಡಿಸಲಾಗುತ್ತಿತ್ತು. ಮೊದಲಿಗೆ ‘ಓಂಕಾರೋಪಾಸನೆ’ ನಂತರ ಭಕ್ತಿಗೀತೆಗಳನ್ನು ಹೇಳಿಕೊಡಲಾಗುತ್ತಿತ್ತು. ನಮ್ಮ ಆಶ್ರಮದ ಸ್ವಾಮೀಜಿಗಳಾದ ಶ್ರೀ ರಾಘವೇಂದ್ರ ಸ್ವಾಮೀಜಿಗಳು ಬರೆದರೆನ್ನಲಾದ ಭಕ್ತಿಗೀತೆಗಳನ್ನು ಹೇಳಿಕೊಡಲಾಗುತ್ತಿತ್ತು. ಇದಕ್ಕೆಂದೇ ಒಂದು ಭಕ್ತಿಗೀತೆಯ ಪುಸ್ತಕವನ್ನು ದಾಖಲಾತಿ ಸಮಯದಲ್ಲೇ ಕೊಡುತ್ತಿದ್ದರು. ಸಾಮಾನ್ಯವಾಗಿ ಭಜನೆಯಲ್ಲಿ ಅದರಲ್ಲಿರುವ ಹಾಡುಗಳನ್ನೇ ಹೇಳಿಕೊಡುತ್ತಿದ್ದರು. ಇದು ‘ವ್ಯಾಸ ಪೀಠ’ ಎಂಬಲ್ಲಿ ನಡೆಯುತ್ತಿತ್ತು. ಇದು ಗ್ರಾಮದೇವತೆ ಬನಶಂಕರಿ ದೇಗುಲದ ಪಕ್ಕದಲ್ಲಿತ್ತು. ಇದಕ್ಕೆ ಹೊಂದಿಕೊಂಡಂತೆ ವ್ಯಾಯಾಮ ಶಾಲೆ, ಉಗ್ರಾಣ, ಹಾಸ್ಟೆಲ್ಲಿನ ಭೋಜ‌ನಾಲಯ ಇತ್ತು. ವ್ಯಾಸಪೀಠದ ಒಳಗೆ ಕುಳಿತಿದ್ದಾಗ ಭಕ್ತಿ ಭಾವ ನಮ್ಮಲ್ಲಿ ಮೂಡುತ್ತಿತ್ತು. ನನಗೆ ಅಲ್ಲೇ ಇದ್ದ ‘ದೇವರಿದ್ದಾನೆ ಎಚ್ಚರಿಕೆ’ ಎಂಬ ಫಲಕವು ನನ್ನಲ್ಲಿ ದೇವರ ಇರುವಿಕೆಯ ಬಗ್ಗೆ ನಂಬಿಕೆಯನ್ನು ಹೆಚ್ಚಿಸಲು ಕಾರಣವಾಗಿತ್ತು. ಬಹುಷಃ ನಮ್ಮ ಸ್ವಾಮೀಜಿಯವರು ಬರೆದ ಭಕ್ತಿಗೀತೆಗಳ‌ ಕ್ಯಾಸೆಟ್ಟನ್ನು ಯಾರೂ ಮಾಡಿಲ್ಲ ಎನಿಸುತ್ತೆ. ತುಂಬಾ ಸುಂದರವಾದ ಭಕ್ತಿ ಗೀತೆಗಳವು. ನಮ್ಮ ದೈವ ಪ್ರಜ್ಞೆಯನ್ನು ಬೆಳೆಸಲು , ಹೆಚ್ಚಿಸಲು, ಮನಸ್ಸಿನ‌ ನೆಮ್ಮದಿ ವೃದ್ಧಿಸಲು ಸಹಕಾರಿಯಾಗಿತ್ತು ಈ ಭಜನೆ ವ್ಯವಸ್ಥೆ. ಆದರೆ ನಮಗೆ ಇದು ಆ ವಯಸ್ಸಿನಲ್ಲಿ‌ ತಿಳಿಯಬೇಕಲ್ಲ? ಇದಕ್ಕೆ ನಾವು ಭಜನೆಯನ್ನು ಮಾಡುವುದು ಸುಮ್ನೆ ಸಮಯ ವ್ಯರ್ಥ ಮಾಡುವ ಕೆಲಸ ಎಂದುಕೊಂಡಿದ್ದೆವು. ಅಲ್ಲದೇ ಭಜನೆಯನ್ನು ತಪ್ಪಿಸಲು ಯಾವುದಾದರೂ ಒಂದು ನೆಪವನ್ನು ಹುಡುಕುತ್ತಿದ್ದೆವು.

ವಾರ್ಡನ್ ಈ ಸಮಯದಲ್ಲಿ ಯಾವುದಾದರೂ ಒಂದು‌ ಕೆಲಸ ಹೇಳಿದರೆ ಸಾಕು ಇದನ್ನೇ ಕಾರಣವಾಗಿರಿಸಿಕೊಂಡು‌ ಭಜನೆಗೆ ಚಕ್ಕರ್ ಹಾಕುತ್ತಿದ್ದೆವು. ಹತ್ತನೇ ತರಗತಿಯ ಮಕ್ಕಳಿಗೆ ಬೇರೆ ಬೇರೆ ಬ್ಯಾಚಿನಂತೆ ಆಶ್ರಮದ ಕಸದ ತೊಟ್ಟಿಗಳನ್ನು ಕ್ಲೀನ್ ಮಾಡುವ ಕೆಲಸ ಇರುತ್ತಿತ್ತು. ಆಗ ಆ ಬ್ಯಾಚಿನ‌ವರಿಗೆ ಭಜನೆ ಇರುತ್ತಿರಲಿಲ್ಲ. ನಮಗೆ ಅವರನ್ನು ನೋಡಿದರೆ ನಮಗೂ ಯಾವಾಗ ತೊಟ್ಟಿ‌ ಕ್ಲೀನ್ ಮಾಡುವ ಅವಕಾಶ ಸಿಗುತ್ತೋ ಅಂತಾ ಕಾಯ್ಕೊಂಡು‌ ಇರುತ್ತಿದ್ದೆವು. ಈ ನೆವದಲ್ಲಾದರೂ ಭಜನೆ ತಪ್ಪಿಸಿಕೊಳ್ಳಬಹುದು ಅಂತಾ!!

ಭಜನೆ ಬಗ್ಗೆ ಯಾಕಿಷ್ಟು ಬೇಸರವಾಗಿದ್ವಿ ಅಂದ್ರೆ ಅರ್ಧ ಘಂಟೆಗೆ ಮುಗಿದಿದ್ರೆ ಏನೂ ಅನಿಸ್ತಾ ಇರಲಿಲ್ಲ. ಕೆಲವೊಮ್ಮೆ ಮುಕ್ಕಾಲು ಘಂಟೆಯಾದ್ರೂ ಮುಗೀತ ಇರಲಿಲ್ಲ. ಆಗ ‘ಓದೋಕೆ ಸಮಯ ಸಾಲೋಲ್ಲ’ ಎಂಬ ಭಾವನೆ ನಮ್ಮಲ್ಲಿ ಮೂಡಿತ್ತು. “ಹೊರಗಿನಿಂದ ಶಾಲೆಗೆ ಬರುವವರು ಈ ಸಮಯದಲ್ಲಿ ಓದ್ತಾ ಇರ್ತಾರೆ, ನಾವು ಮಾತ್ರ ಭಜನೆ ಮಾಡ್ತೀವಿ” ಎಂದು ನಮ್ಮ ಸೀನಿಯರ್ ಹುಡುಗರು ಹೇಳಿದ್ದರಿಂದ ಭಜನೆ ಅಂದ್ರೆ ಮೂಗು ಮುರಿಯಂತಾಗುತ್ತಿತ್ತು. ಆದರೆ ಶಾಲೆಯ ಟಾಪರ್ಸ್ ಮಾತ್ರ ಹಾಸ್ಟೆಲ್ ಹುಡುಗ, ಹುಡುಗಿಯರಾಗುತ್ತಿದ್ದುದೇ ವಿಶೇಷವಾಗಿತ್ತು. ಕೆಲ‌ ಸೀನಿಯರ್ ಹುಡುಗರು‌ ಬಿಳಿ ಹಾಳೆಗಳನ್ನು ಕತ್ತರಿಸಿ ಚಿಕ್ಕ ನೋಟ್ ಬುಕ್‌ಗಳನ್ನಾಗಿಸಿಕೊಂಡು‌ ಅದರಲ್ಲಿ ಮುಖ್ಯಾಂಶಗಳನ್ನು ಬರೆದುಕೊಂಡು ಬಚ್ಚಿಟ್ಟುಕೊಂಡು ಭಜನೆ ಮಾಡುವಾಗ ಹಿಂದೆ ಕುಳಿತುಕೊಂಡು ಓದುತ್ತಿದ್ದರು! ಇದರ ಬಗ್ಗೆ ವಾರ್ಡನ್‌ಗೆ ಗೊತ್ತಾದರೂ ಅವರು ಸುಮ್ಮನಿರುತ್ತಿದ್ದರು. ಭಜನೆ ಮುಗಿದ ನಂತರ ನಮ್ಮಲ್ಲಿ ಹಲವರು ಬನಶಂಕರಿ ದೇಗುಲಕ್ಕೆ ಹೋಗಿ‌ ನಂತರ ಸ್ಟಡಿ ಪಿರಿಯಡ್‌ಗೆ ಹೋಗ್ತಿದ್ವಿ.

ನಮ್ಮ ಶಾಲೆಯಲ್ಲಿ‌ ಗಂಡು‌ಮಕ್ಕಳಿಗೆ ಮಾತ್ರ ಎನ್.ಸಿ.ಸಿ ಇತ್ತು. ಇದು ಪ್ರೌಢಶಾಲೆಯಲ್ಲಿ ಎರಡು ವರ್ಷ ಮಾತ್ರ. ನಂತರ ‘ಎ’ ಸರ್ಟಿಫಿಕೇಟ್ಟಿಗೆ ಪರೀಕ್ಷೆ ಮಾಡಿ ಪಾಸಾದರೆ ಸರ್ಟಿಫಿಕೇಟ್ ಕೊಡುತ್ತಿದ್ದರು. ಅದು‌ ಮುಂದೆ ಸಹಾಯ ಆಗ್ತಿತ್ತಂತೆ. ನಮಗೆ ಇದ್ಯಾವುದರ ಬಗ್ಗೆ ಗೊತ್ತಿರಲಿಲ್ಲ. ಜಸ್ಟ್ ಎನ್.ಸಿ.ಸಿ. ಸೇರಬೇಕು. ಬಟ್ಟೆ, ಶೂ, ಸಾಕ್ಸ್, ಟೋಪಿ ಕೊಡ್ತಾರೆ. ಮುಖ್ಯವಾಗಿ ತಿನ್ನೋಕೆ ಗ್ಲೂಕೋಸ್‌ ಬಿಸ್ಕತ್ತಿನ ಪ್ಯಾಕ್ ಕೊಡ್ತಾರೆ. ಇದರ ಜೊತೆ ತಿನ್ನೋಕೆ ತಿಂಡಿ ಕೊಡ್ತಾರೆ ಅನ್ನೋದು ಮುಖ್ಯವಾಗಿತ್ತು! ಇದೆಲ್ಲಕ್ಕಿಂತ ಮುಖ್ಯವಾಗಿ ‘ಅಂದು ಭಜನೆಗೆ ಹೋಗುವಂತಿರಲಿಲ್ಲ’ ಅನ್ನೋದೆ ನಮಗೆ ಎನ್.ಸಿ.ಸಿ. ಸೇರೋಕೆ ತುಂಬಾ ಆಸೆಯನ್ನು‌ ಬೆಳೆಸಿತ್ತು. ಇದಕ್ಕೆಂದೇ ಎನ್.ಸಿ.ಸಿ. ಸೇರಿಸಿಕೊಳ್ಳೋ ದಿನವನ್ನು ಚಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿರುತ್ತಿದ್ದೆವು. ಆ ದಿನ ಒಮ್ಮೆ ಬಂದಾಯ್ತು.

ಮಿಲಿಟರಿ ಸೇರೋಕೆ ಬಯಸಿರುವ ವ್ಯಕ್ತಿಗಳು ಯಾವ ರೀತಿಯಾಗಿ ತಾಲೀಮು ನಡೆಸಿಕೊಂಡು ಬಂದಿರುತ್ತಾರೋ ಅದೇ ರೀತಿ ಎನ್.ಸಿ.ಸಿ ಸೇರೋಕೆ ನಾವು ಹಿಂದಿನ ದಿನ ಹಾಸ್ಟೆಲ್ಲಿನಲ್ಲಿ ತುಂಬಾ ತಯಾರಿ ಮಾಡಿಕೊಂಡಿದ್ದೆವು. ಇದಕ್ಕಾಗಿ ಈಗಾಗಲೇ ಎನ್.ಸಿ.ಸಿ‌ ಸೇರಿರುವವರನ್ನು ಆಯ್ಕೆ ಬಗ್ಗೆ ಕೇಳಿ ತಿಳಿದುಕೊಂಡಿದ್ದೆವು. ಹಿಂದಿನ‌ ದಿನ ನಡೆಯುವಾಗಲೆಲ್ಲಾ ಮಾರ್ಚ್ ಫಾಸ್ಟ್ ಮಾಡುತ್ತಾ ಹೋಗುತ್ತಿದ್ದೆವು. ಶಾಲೆಯಲ್ಲಿ‌ ಎನ್.ಸಿ.ಸಿ ಸೇರೋಕೆ ಬಯಸಿದವರೆಲ್ಲಾ ಶನಿವಾರ ಮಧ್ಯಾಹ್ನ ಶಾಲಾ ಗ್ರೌಂಡಿನಲ್ಲಿ ಸೇರಿದೆವು. ಆಗ ನಮಗೆ ಎನ್.ಸಿ.ಸಿ ಮೇಷ್ಟ್ರು ಆಗಿ ನಮ್ಮ ಶಾಲೆಯ ಎ.ವಿ.ಸರ್ (ಎ.ವೆಂಕಟೇಶ್) ಇದ್ದರು. ಅವರು ನಮಗೆ ಲೈನಿನಲ್ಲಿ ನಿಲ್ಲಲು ಹೇಳಿದರು. ನಾವು ನಿಂತ ತಕ್ಷಣ ಒಬ್ಬಬ್ಬರನ್ನೇ ಆಯ್ಕೆ ಮಾಡುತ್ತ ಬಂದರು. ಆಗ ನಾನು ರಿಜೆಕ್ಟ್ ಆದೆ. ಕಾರಣ ನಾನು ಬೇರೆಯವರಿಗೆ ಹೋಲಿಸಿದರೆ ಅಷ್ಟು ಎತ್ತರ ಇರಲಿಲ್ಲ. ಅವತ್ತು ನಂಗೆ ಎಷ್ಟು ಬೇಜಾರು ಆಯ್ತು ಅಂದ್ರೆ ಮೊದಲ ಬಾರಿಗೆ ನಾನು ಈ ರೀತಿ ರಿಜೆಕ್ಟ್ ಆಗಿದ್ದೆ. ಇದಕ್ಕಿಂತ ಮುಖ್ಯವಾಗಿ ಒಂದರಿಂದ ನನ್ನ ಜೊತೆ ಓದಿದ್ದ ಪ್ರದೀಪ್ ಎತ್ತರವಾಗಿದ್ದ ಕಾರಣ ಆಯ್ಕೆ ಆಗಿದ್ದ. ಆಗ ನನಗೆ ಇನ್ನೂ ಫೀಲಿಂಗ್ ಜಾಸ್ತಿ ಆಗಿತ್ತು! ಮನುಷ್ಯನ ಗುಣ ಇದೇ ರೀತಿ ತಾನೇ? ತನ್ನ ಜೊತೆಯಲ್ಲಿರುವವರು ಚೂರು ಬೆಳೆದರೆ ಸಾಕು ಹೊಟ್ಟೆ ಉರಿಸಿಕೊಂಡು ಸಾಯ್ತೀವಿ. ಇದಕ್ಕೆ ಡಿವಿಜಿ ಯವರು “ಹೊಟ್ಟೆ ತುಂಬಿದ ತೋಳ ಮಲಗೀತು, ನೀಂ ಪರರ ದಿಟ್ಟಿಸುತ ಕರುಬುವೆಯ” ಎಂದಿರುವುದು. ‘ಗಾಯದ ಮೇಲೆ ಉಪ್ಪು ಸುರಿದಂತೆ’ ಆಗ ತುಂಬಾ ಕುಳ್ಳಗಿದ್ದ ನಮ್ಮದೇ ತರಗತಿಯ ಮನೋಜನನ್ನು ಆಯ್ಕೆ ಮಾಡಿಕೊಂಡಿದ್ದು. ನನಗೆ “ಇವನನ್ನು ಏಕೆ ಆಯ್ಕೆ ಮಾಡಿಕೊಂಡರು? ರೂಲ್ಸ್ ಎಂದರೆ ಎಲ್ಲರಿಗೂ ಒಂದೇ ಇರಬೇಕಲ್ವ? ಒಬ್ಬರಿಗೊಂದು ಮತ್ತೊಬ್ಬರಿಗೊಂದು ಯಾಕೆ ಹೀಗೆ ಭೇದ ಭಾವ ಮಾಡ್ತಾರೆ? ಶಿಕ್ಷಕರಾಗಿ ಈ ರೀತಿ ಮಾಡೋದು ಸರೀನಾ?” ಎಂದು ಮನಸ್ಸಲ್ಲಿ ಅಂದುಕೊಂಡೆ ಬಿಟ್ರೆ ಮೇಷ್ಟ್ರಿಗೆ ಕೇಳೋ ಧೈರ್ಯ ಸಾಕಾಗಲಿಲ್ಲ!

ಕಾಲಾನಂತರ ತಿಳೀತು ಅವನು ದಾವಣಗೆರೆಯಿಂದ ಬಂದು ಸೇರಿದವನು. ಮೊದಲಿನಿಂದಲೂ ಇಂಗ್ಲೀಷ್ ಮೀಡಿಯಂನಲ್ಲಿ ಓದಿದ್ದವನಾದ್ದರಿಂದ ಇಂಗ್ಲೀಷಿನಲ್ಲಿ ಚೆನ್ನಾಗಿ ಮಾತಾಡ್ತಿದ್ದ. ಚೆನ್ನಾಗಿ ಓದುತ್ತಾನೆ ಎಂಬ ಕಾರಣದಿಂದ ಅವನನ್ನು ಸೇರಿಸಿಕೊಂಡಿದ್ದರು! ಸಾಮಾನ್ಯವಾಗಿ ಮೇಷ್ಟ್ರಿಗೆ ಚೆನ್ನಾಗಿ ಓದೋವ್ರನ್ನ ಕಂಡರೆ ಪ್ರೀತಿ ಜಾಸ್ತಿ. ಅವರಿಗೆ ಕೆಲವೊಮ್ಮೆ ಮೃದು ಧೋರಣೆ ತಾಳ್ತಾರೆ. ಅಂದಿನಿಂದ ನಾನು ಎನ್.ಸಿ.ಸಿ‌ ಆಸೆ ಬಿಟ್ಟೆ. ಆದರೆ ಬೆಂಗಳೂರಿನಿಂದ ಬಂದಿದ್ದ ಪ್ರಶಾಂತ ಮಾತ್ರ ಹಾಸ್ಟೆಲ್‌ನಲ್ಲಿ ಕುಳಿತು ಅತ್ತುಬಿಟ್ಟಿದ್ದ! ಪಾಪ‌ ಅವನು ಎನ್.ಸಿ.ಸಿ ಸೇರಲೇಬೇಕೆಂದು ಪ್ರತಿನಿತ್ಯ ಹಾಸ್ಟೆಲ್ ಕಾರಿಡಾರಿನಲ್ಲಿ ಮಾರ್ಚ್ ಫಾಸ್ಟ್ ಮಾಡ್ತಿದ್ದ.

ಶನಿವಾರ ಮಧ್ಯಾಹ್ನ ಬಂತೆಂದರೆ ಸಾಕು ಎನ್.ಸಿ.ಸಿ ಟೀಂ ನ ಮಾರ್ಚ್ ಫಾಸ್ಟ್ ನೋಡೋಕೆ ಚೆಂದ ಎನಿಸುತ್ತಿತ್ತು. ಈ ಕಡೆ ಬ್ಯಾಂಡ್ ಸೆಟ್ ಪ್ರಾಕ್ಟೀಸ್ ಮಾಡೋವ್ರ ಟೀಂ, ಆ ಕಡೆ ಲೆಫ್ಟ್ ರೈಟ್ ಲೆಫ್ಟ್ ರೈಟ್ ಎಂಬ ಕಮ್ಯಾಂಡಿಗೆ ಹೋಗುತ್ತಿದ್ದ ಮಿಲಿಟರಿ ತಂಡವೆಂಬಂತೆ ಕಾಣುತ್ತಿದ್ದ ಆ ನೋಟ ನನಗೆ ಮತ್ತೆ ಮತ್ತೆ ಫೀಲಿಂಗ್ ತರಿಸ್ತಾ ಇತ್ತು. ಅಲ್ಲದೇ ಎನ್‌.ಸಿ.ಸಿ ಸೇರಿದ ಹುಡುಗರು ಶುಕ್ರವಾರ ರಾತ್ರಿ ಚೆರ್ರಿ ಪಾಲಿಶ್ ಡಬ್ಬಿ, ಬ್ರೆಶ್ ತೆಗೆದುಕೊಂಡು ಶೂ, ಬೆಲ್ಟ್ ಗಳನ್ನು ಹೊಳೆಯುವಂತೆ ಉಜ್ಜುತ್ತಿದ್ದರು. ಶನಿವಾರ ಸಂಜೆ ನಾವು ಭಜನೆಗೆ ಹೊರಡುವ ಸಮಯದಲ್ಲಿ ಎನ್.ಸಿ.ಸಿ. ಯವರಿಗೆ ಕೊಡುತ್ತಿದ್ದ ತಿಂಡಿಯ ಪರಿಮಳ ನಮ್ಮ ಮೂಗಿಗೆ ತಾಗಿ ಅದು ನಮ್ಮ ಬಾಯಲ್ಲಿ ನೀರೂರಿಸುವಂತೆ ಮಾಡುತ್ತಿತ್ತು. ಸಂಜೆ ಅವರು ತಂದು ತೋರಿಸುತ್ತಿದ್ದ ಗ್ಲೂಕೋಸ್‌ ಬಿಸ್ಕತ್ತಿನ ಪ್ಯಾಕು ನನ್ನಲ್ಲಿ ಎ‌ನ್.ಸಿ.ಸಿ ಸೇರುವ ಉತ್ಕಟ ಇಚ್ಛೆಯನ್ನು ಬೆಳೆಸಿತ್ತು. ಆದರೆ ಆಯ್ಕೆಯಾಗದೇ ಆ ಆಸೆಗೆ ಎಳ್ಳು ನೀರು ಬಿಟ್ಟುಕೊಳ್ಳಬೇಕಾಯ್ತು.

ಇನ್ನು ಎನ್.ಸಿ.ಸಿ ಸೇರಿದವರಿಗೆ ಮೊದಲನೇ ವರ್ಷ, ಎರಡನೇ ವರ್ಷದ ತಂಡಗಳೆರಡಕ್ಕೂ ಒಬ್ಬ ಲೀಡರ್ ಇರುತ್ತಿದ್ದ. ಆ ಲೀಡರಿಗೆ ಸಿ.ಎಸ್.ಎಂ ಎಂದು ಕರೆಯುತ್ತಿದ್ದರು. ನಂತರ ಸಾರ್ಜೆಂಟ್, ನಂತರದಲ್ಲಿ ಕ್ರಮವಾಗಿ ಸಿ.ಪಿ.ಎಲ್, ಎಲ್‌.ಸಿ.ಎಲ್ ಆಗುತ್ತಿದ್ದರು. ಇಲ್ಲಿ ಸಿ.ಎಸ್.ಎಂ ಆದವರಿಗೆ ವಿಶೇಷ ಗೌರವವಿರುತ್ತಿತ್ತು. ನಮ್ಮ ಕ್ಲಾಸ್ ಮೇಟ್ ‘ಕಿಶನ್’ ಸಿ.ಎಸ್.ಎಂ ಆಗಿ ಫುಲ್ ಮಿಂಚುತ್ತಿದ್ದ. ಇವರೂ ಕೂಡ ಎನ್.ಸಿ.ಸಿ ಸೇರಿಸಿಕೊಳ್ಳಲು ಮೇಷ್ಟ್ರಿಗೆ ಪ್ರಭಾವ ಬೀರುತ್ತಿದ್ದರು. ರಾಷ್ಟ್ರೀಯ ಹಬ್ಬಗಳಂದು ಈ ತಂಡದವರ ಮಾರ್ಚ್ ಫಾಸ್ಟ್ ನೋಡೋದಕ್ಕೆ ತುಂಬಾ ಖುಷಿಯಾಗುತ್ತಿತ್ತು.

ನಮ್ಮ ರೂಮಲ್ಲಿದ್ದ ಎನ್.ಸಿ.ಸಿ ಸೇರಿದ್ದ ಪ್ರದೀಪ ತನಗೆ ಕೊಟ್ಟ ಬಿಸ್ಕತ್ತಿನ ಪ್ಯಾಕೇಟುಗಳನ್ನು ತಿನ್ನದೇ ಹಾಗೆ ಇಟ್ಟುಕೊಂಡು ಅದನ್ನು ತನ್ನ ಊರಿಗೆ ಹೋಗುವಾಗ ತೆಗೆದುಕೊಂಡು ಹೋಗುತ್ತಿದ್ದ. ‘ದ್ರಾಕ್ಷಿ ಸಿಗದಿದ್ದಕ್ಕೆ ನರಿ ದ್ರಾಕ್ಷಿ ಹಣ್ಣನ್ನು ಹುಳಿ’ ಎಂಬಂತೆ ನಾನೂ ಕೂಡ “ಎನ್.ಸಿ.ಸಿ ಸೇರಿದರೆ ಪ್ರತಿ ಶನಿವಾರ ಮಧ್ಯಾಹ್ನದ ಸಮಯ ವ್ಯರ್ಥವಾಗುತ್ತೆ, ಓದೋಕೆ ಆಗೋಲ್ಲ” ಎಂದು ಮನದಲ್ಲಿ ಭಾವಿಸಿಕೊಂಡು ಅದರ ಬಗ್ಗೆ ಆಸೆ ಬಿಟ್ಟು ಓದಿನತ್ತ ಗಮನಹರಿಸಿದೆ. ನಾನು ನನ್ನ ಕ್ಲಾಸ್ ಮೇಟ್‌ಗಿಂತ ನನ್ನ ಸೀನಿಯರ್ ಹುಡುಗರ ಜೊತೆ ಹೆಚ್ಚು ಇರುತ್ತಿದ್ದೆ. ಅದರಲ್ಲೂ ರ್ಯಾಂಕ್ ಸ್ಟೂಡೆಂಟ್ಸ್ ಜೊತೆ ಇರುತ್ತಿದ್ದೆ. ಆಗ ನನಗೆ ಹೆಚ್ಚು ಕ್ಲೋಸ್ ಆಗಿದ್ದು ಎಸ್ಸೆಸ್ಸೆಲ್ಸಿ ಓದುತ್ತಿದ್ದ ಚಂದ್ರಶೇಖರಯ್ಯ ಎಂಬುವವರ ಜೊತೆ ಜಾಸ್ತಿ ಇರುತ್ತಿದ್ದೆ. ಅವರೂ ಸಹ ನನ್ನಂತೆ ಕನ್ನಡ ಮೀಡಿಯಂ ಓದಿ ಹೈಸ್ಕೂಲಿಗೆ ಇಂಗ್ಲೀಷ್ ಮೀಡಿಯಂ ಸೇರಿ ಮೊದಲ ರ್ಯಾಂಕ್ ಬರುತ್ತಿದ್ದರು. ಇವರ ಜೊತೆ ನಾನು ಸೇರಿ ತುಂಬಾ ಹಾರ್ಡ್ ವರ್ಕ್ ಮಾಡಿ ಉತ್ತಮ ಅಂಕಗಳನ್ನು ಪಡೆಯೋಕೆ ಶುರು ಮಾಡಿದೆ. ಮಧ್ಯವಾರ್ಷಿಕ ಪರೀಕ್ಷೆಯಲ್ಲಿ ಎವಿ ಮೇಷ್ಟ್ರು ರಿಜಿಸ್ಟರ್ ನಂಬರ್ 3 ಯಾರು ಎಂದು ಕ್ಲಾಸಲ್ಲಿ ಕೇಳಿದರು. ಆಗ ನನ್ನ ಎದೆ ಒಂದೇ ಸಲ ದಸಕ್ ಎಂದಿತು. ಕಾರಣವಿಷ್ಟೇ “ನಾನೇನು ತಪ್ಪು ಮಾಡಿದ್ದೇನಪ್ಪ? ಮೊದಲೇ ಎವಿ ಮೇಷ್ಟ್ರು ತುಂಬಾ ಹೊಡೀತಾರೆ. ನನಗೆ ಏನು ಕಾದಿದಿಯೋ? ಎಂದು ಹೆದರುತ್ತ ನಾನೇ ಸರ್” ಎಂದು ನಿಂತುಕೊಂಡೆ. ಅವರು ‘ವೆರಿಗುಡ್ ಗಣಿತದಲ್ಲಿ ಒಳ್ಳೇ ಅಂಕ ಪಡೆದಿದ್ದೀಯ’ ಎಂದರು. ಅವತ್ತಿನಿಂದ ಅವರು ನನಗೆ ಕ್ಲೋಸ್ ಆಗಿ ಒಂದು ದಿನ ನನ್ನನ್ನು ಅವರ ಎನ್.ಸಿ.ಸಿ ರೂಮಿಗೆ ಕರೆದು ‘ಯಾಕೆ ನೀನು ಎನ್.ಸಿ.ಸಿ ಸೇರಲಿಲ್ಲ?’ ಎಂದು ಕೇಳಿದರು. ನಾನು ಆಗ ‘ಇಲ್ಲ ಸಾರ್ ನಾನ್ ರಿಜೆಕ್ಟ್ ಆದೆ’ ಎಂದೆ. ಅದಕ್ಕವರು ‘ಈಗ ಸೇರಿಸಿಕೊಳ್ಳಲು ಸೇರಿದವರ ಸಂಖ್ಯೆ ಈಗಾಗಲೇ ಆಗಿದೆ. ಮುಂದಿನ ವರ್ಷ ನಿನ್ನನ್ನು ಖಂಡಿತಾ ಸೇರಿಸಿಕೊಳ್ಳುವೆ’ ಎಂದಾಗ ನಾನು ತುಂಬಾ ಖುಷಿಯಾಗಿದ್ದೆ.

ನಾವು ಯಾವಾಗ್ಲೂ ಇಷ್ಟೇ. ಬಯಸಿದ ಒಂದು ವಸ್ತು, ಆಸೆಪಟ್ಟದ್ದು ಸಿಗದಿದ್ದರೆ ತುಂಬಾ ಕೊರಗುತ್ತೇವೆ. ಕೆಲವು ಸಲ ಡಿಪ್ರೆಶನ್‌ಗೆ ಒಳಗಾಗ್ತೇವೆ. ಇನ್ನೂ ಕೆಲವೊಮ್ಮೆ ಅದರ ಬಗ್ಗೆ ಆಸೆಯನ್ನು ಬಿಡುತ್ತೇವೆ. ಈ ರೀತಿ ಮಾಡಿದರೆ ಏನೂ ಲಾಭವಿಲ್ಲ. ‘ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು’ ಎಂದು ಮತ್ತೆ ಮತ್ತೆ ಪ್ರಯತ್ನಿಸಿ ಅದನ್ನು ಪಡೆಯಲು ಪ್ರಯತ್ನಿಸಬೇಕು. ಒಂದೊಮ್ಮೆ ಸಿಗದಿದ್ದರೆ ಪ್ರಯತ್ನಿಸುವ ವಿಧಾನ ಬದಲಿಸಿಕೊಂಡು ಮತ್ತೆ ಪ್ರಯತ್ನಿಸಬೇಕು. ಒಂದೊಮ್ಮೆ ಸಿಗದಿದ್ದರೆ ತೀರಾ ತಲೆ ಕೆಡಿಸಿಕೊಳ್ಳಬಾರದು. ಇದರಿಂದ ನಮ್ಮ ಆರೋಗ್ಯ ಹಾಳು ಅಷ್ಟೇ. ಕೆಲವು ಸಲ ‘ನಮ್ಮ ಹಣೆಬರಹದಲ್ಲಿ ಸಿಗಬೇಕು ಅಂತಿದ್ರೆ ಯಾರೂ ಇದನ್ನು ತಪ್ಪಿಸೋಕೆ ಆಗೋಲ್ಲ’ ಎಂಬ ರಕ್ಷಣಾತ್ಮಕ ತಂತ್ರ ಅನುಸರಿಸಿಕೊಂಡು ನಮಗೆ ನಾವೇ ಸಮಾಧಾನ ಮಾಡಿಕೊಳ್ಳಬೇಕು. ನಾನೂ ಸಹ ಕೆಲವು ಸಲ ಆಸೆಪಟ್ಟದ್ದು ಸಿಗದೇ ಹೋದಾಗ ಈ ತಂತ್ರವನ್ನು ಅನುಸರಿಸಿ ಸಮಾಧಾನ‌ಪಟ್ಟುಕೊಂಡಿದ್ದಿದೆ. ಎನ್.ಸಿ.ಸಿ ವಿಷಯದಲ್ಲಿ ಹೀಗೇ ಮಾಡಿಕೊಂಡು ಒಂಬತ್ತನೇ ತರಗತಿಯಲ್ಲಿ ಎನ್‌.ಸಿ.ಸಿ ಸೇರಿ ಭಜನೆ ತಪ್ಪಿಸಿಕೊಳ್ಳುವ, ತಿಂಡಿ ಬಿಸ್ಕತ್ತಿನ ನನ್ನ ಆಸೆಯನ್ನು ಈಡೇರಿಸಿಕೊಂಡಿದ್ದೆ.

ಭಜನೆ ಹೋಗೋಕೆ ಮನದಲ್ಲಿ ಗೊಣಗುತ್ತಿದ್ದ ನನಗೆ ಇಂದು ಈ ರೀತಿಯಾಗಿ ಭಜನೆ, ಯೋಗ, ಧ್ಯಾನ, ಸೂರ್ಯ ನಮಸ್ಕಾರ ಮಾಡಲು ನನ್ನ ಮಕ್ಕಳಿಗೆ ಕಲಿಸಲು ಆಸಕ್ತಿ ಇದೆ. ಆದರೆ ಆಗ ಇದ್ದ ಅತ್ಯಂತ ಕಡಿಮೆ ಖರ್ಚಿನಲ್ಲಿ ಮಲ್ಲಾಡಿಹಳ್ಳಿಯ ಆಶ್ರಮದ ರೀತಿ ಕ್ರಮಬದ್ಧವಾಗಿ ಎಲ್ಲವನ್ನೂ ಕೊಟ್ಟು ಮಕ್ಕಳ ಸರ್ವಾಂಗೀಣ ವಿಕಾಸ ಮಾಡುವ ಶಿಕ್ಷಣ ಸಂಸ್ಥೆಗಳನ್ನು ಈಗ ದುರ್ಬೀನು ಹಾಕಿ ಹುಡುಕುವ ಸ್ಥಿತಿ ಇದೆ. ಯೂಟ್ಯೂಬ್, ಕೋಚಿಂಗ್ ಕ್ಲಾಸಸ್‌ನಲ್ಲಿ ಇವು ಸಿಗುತ್ತವಾದರೂ ಶಾಲೆಯಲ್ಲಿ ಮಾಡಿಸಿದ್ರೆ ತುಂಬಾ ಉತ್ತಮ ಎಂದು ಹೇಳಬಯಸುತ್ತೇನೆ. ಈ ವಿಷಯದಲ್ಲಿ ನಾನು ಧನ್ಯ.