ರಾಜಲಕ್ಷ್ಮಿ ಎನ್. ರಾವ್ ಅವರನ್ನು ಅವರ ಕತೆಗಳ ಮೂಲಕ ಪರಿಚಯ ಮಾಡಿಕೊಂಡು ಸುಮಾರು ಮೂವತ್ತು ವರುಷಗಳ ಮೇಲಾಯಿತು. ನನ್ನ ಅಧ್ಯಯನ ಮತ್ತು ವೆಂಕಟಲಕ್ಷ್ಮಿಯವರ ಸಂದರ್ಶನದ ಒಟ್ಟು‌ ಮೊತ್ತವಾಗಿ ನಾನು ಕಂಡುಕೊಂಡ ಕತೆಗಾರ್ತಿ ರಾಜಲಕ್ಷ್ಮಿಯವರು ಬೆರಗು ಹುಟ್ಟಿಸಿದರು. ಸುಮಾರು ಹತ್ತು ಹನ್ನೆರೆಡು ವರ್ಷಗಳ ಹಿಂದೆ ಸನ್ಯಾಸಿನಿಯಾದ ಅವರನ್ನು ನಾನು ಅವರ ಆಶ್ರಮದಲ್ಲಿ ಭೇಟಿಯಾದಾಗ ಆ ಬೆರಗು ಬೆಳಕಾಗಿ ನನ್ನ ಮುಂದೆ ನಿಂತಿತ್ತು. ಆ ಬೆಳಕು ಈಗ ವಿಸ್ಮಯವಾಗಿದೆ.
ಕಥೆಗಾರ್ತಿ ರಾಜಲಕ್ಷ್ಮಿ ಎನ್. ರಾವ್ ಅವರ ಭೇಟಿಯ ನೆನಪುಗಳು ಹಾಗೂ ಅವರ ಕೃತಿಗಳ ಕುರಿತು ಗಿರಿಜಾ ಶಾಸ್ತ್ರಿ ಬರೆಯುವ ಸರಣಿ “ಆ ಕಾಲದ ರಾಜಲಕ್ಷ್ಮಿ” ಪ್ರತಿ ಶುಕ್ರವಾರದಂದು ನಿಮ್ಮ ಕೆಂಡಸಂಪಿಗೆಯಲ್ಲಿ

ರಾಜಲಕ್ಷ್ಮಿ ಎನ್ ರಾವ್ ಅವರನ್ನು ಅವರ ಕತೆಗಳ ಮೂಲಕ ಪರಿಚಯ ಮಾಡಿಕೊಂಡು ಸುಮಾರು ಮೂವತ್ತು ವರುಷಗಳ ಮೇಲಾಯಿತು. ನನ್ನ‌ ಪಿಎಚ್.ಡಿ ಅಧ್ಯಯನ ‘ಕನ್ನಡ ಕತೆಗಳ ಸ್ತ್ರೀವಾದಿ ಅಧ್ಯಯನ’ ಕ್ಕೆಂದು ಅವರ ಒಂದೇ ಒಂದು ಕಥಾಸಂಕಲನ ‘ಸಂಗಮ’ ವನ್ನು‌ ಓದಿದ್ದೆ. ಆಮೇಲೆ ಅವರನ್ನು ಇನ್ನೂ ಹತ್ತಿರದಿಂದ ನೋಡಲು ಸಾಧ್ಯವಾದದ್ದು ಬಿ.ಎಸ್. ವೆಂಕಟಲಕ್ಷ್ಮಿಯವರ ಸಂದರ್ಶನದ ಮೂಲಕ (ಲೇಖಕಿಯರ ನೆಲೆ-ಬೆಲೆ). ನನ್ನ ಅಧ್ಯಯನ ಮತ್ತು ವೆಂಕಟಲಕ್ಷ್ಮಿಯವರ ಸಂದರ್ಶನದ ಒಟ್ಟು‌ ಮೊತ್ತವಾಗಿ ನಾನು ಕಂಡುಕೊಂಡ ಕತೆಗಾರ್ತಿ ರಾಜಲಕ್ಷ್ಮಿಯವರು ಬೆರಗು ಹುಟ್ಟಿಸಿದರು. ಸುಮಾರು ಹತ್ತು ಹನ್ನೆರೆಡು ವರ್ಷಗಳ ಹಿಂದೆ ಸನ್ಯಾಸಿನಿಯಾದ ಅವರನ್ನು ನಾನು ಅವರ ಆಶ್ರಮದಲ್ಲಿ ಭೇಟಿಯಾದಾಗ ಆ ಬೆರಗು ಬೆಳಕಾಗಿ ನನ್ನ ಮುಂದೆ ನಿಂತಿತ್ತು. ಆ ಬೆಳಕು ಈಗ ವಿಸ್ಮಯವಾಗಿದೆ. ವಿಸ್ಮಯ ಯಾಕೆಂದರೆ ಜನವಿದೂರ ಅಜ್ಞಾತರಾಗಿ ಇರಬಯಸುವ ಸನ್ಯಾಸಿಗಳು ಸಾಮಾನ್ಯವಾಗಿ ಹಿಮಾಲಯದ ಬೆಟ್ಟಗುಡ್ಡಗಳಲ್ಲಿ ಸಂಚರಿಸುತ್ತಾರೆ ಎಂದು ಕೇಳಿದ್ದೇನೆ. ಆದರೆ ರಾಜಲಕ್ಷ್ಮಿಯವರು ಹಿಮಾಲಯದ ಉತ್ತರ ಕಾಶಿಯಿಂದ ಮೈಸೂರಿನ ಶಹರಕ್ಕೆ ಬಂದರು. ಅಕ್ಷರಶಃ ಸಂತೆಯೊಳಗೆ ಮನೆಮಾಡಿದರು. ಅಲ್ಲಿ ಅವರನ್ನು ಎರಡು ಬಾರಿ ಭೇಟಿಯಾದ ಅನುಭವವನ್ನು ಇಲ್ಲಿ ಬರೆದುಕೊಂಡಿದ್ದೇನೆ. ಆದರೆ ಅದು ಅವರ ಅಜ್ಞಾತವಾಸಕ್ಕೆ ಭಂಗತಂದುದರಿಂದ ಅವರಿಗೆ ಮುಜುಗರವಾಗಿದ್ದು ಆನಂತರ ತಿಳಿಯಿತು.

ಅಭಿವ್ಯಕ್ತಿಗೆ ಇಂದು ಎಲ್ಲಿಲ್ಲದ ಅವಸರ, ಮೇಲಾಟ. ಸನ್ಯಾಸ, ಅಧ್ಯಾತ್ಮ‌ ಸಾಧನೆಗಳಂತೂ ಇಂದು ನಿಜವಾಗಿ ಒಂದು ಸಂತೆಮಾಳವಾಗಿದೆ. ರಾಜಲಕ್ಷ್ಮಿಯವರು ಅಭಿವ್ಯಕ್ತಿಯನ್ನು ತೊರೆದು ಅಧ್ಯಾತ್ಮದ ಮೊರೆಹೊಕ್ಕರು. ರಾಜಲಕ್ಷ್ಮಿಯವರು ಯಾವುದೇ ಪ್ರಚಾರ, ಪ್ರಕಾಶನದಿಂದ ದೂರವಾಗಿದ್ದಾರೆ. ಯಾರಾದರೂ ಭೇಟಿಯಾಗಲು ಕೇಳಿದರೆ “ಅವಳು ಹೋಗಿಬಿಟ್ಟಳು ಎಂದು ಹೇಳಿಬಿಡಿ” ಎಂದು ಹೇಳಿದ್ದರು. ನಿಜವಾಗಿ ಸಂತೆಯೊಳಗೆ ಸಂತರು ಇರಬೇಕಾದ ರೀತಿಗೆ ಅವರು ಮಾದರಿಯಾಗಿದ್ದಾರೆ. ಜನಸಂಪರ್ಕವನ್ನು ತಪ್ಪಿಸಿಕೊಳ್ಳುವ ಸಲುವಾಗಿಯೇ ಈಗ ಅವರು ಮೈಸೂರು ಆಶ್ರಮವನ್ನು ತೊರೆದು ಹೋಗಿದ್ದಾರಂತೆ.

ಇಂದು ಆಶ್ರಮಗಳು, ಸನ್ಯಾಸಿಗಳು ಅನೇಕ ಹಗರಣಗಳಿಗೆ ಸಿಲುಕಿ ಸುದ್ದಿಮಾಡುತ್ತಿರುವ ಈ ಕಾಲದಲ್ಲಿಯೇ, ಯಾರ ಸುದ್ದಿಗೂ ಸಿಗಬಾರದು ಎಂದು ಸಂತೆಯಲ್ಲೇ ಮೌನವಾಗಿ, ಏಕಾಂತವಾಗಿ ಕುಳಿತಿದ್ದಾರೆ. ಸಂತೆಯಿಂದ ದೂರ ಉಳಿದು ಹಿಮಾಲಯದಲ್ಲಿ ಮೌನ ಸಾಧನೆ ಮಾಡುವುದು ಕಷ್ಟದ ಮಾತಲ್ಲ. ಆದರೆ ಸಂತೆಯ ಸದ್ದಿನೊಳಗೇ ಕುಳಿತು ಮೌನ ಆಚರಣೆ ಅಷ್ಟು ಸುಲಭವಲ್ಲ. ಇಂತಹ ಸಂತೆಮಾಳದಲ್ಲಿಯೇ ರಾಜಲಕ್ಷ್ಮಿಯವರಂತಹ ಒಬ್ಬ ಸಂತರು ಮೌನವಾಗಿ ಕುಳಿತಿದ್ದಾರೆ ಎನ್ನುವುದೇ ಒಂದು ವಿಸ್ಮಯ.

ಹನ್ನೆರೆಡು ವರ್ಷಗಳ ಹಿಂದೆ ಇಂತಹ‌ ವಿಸ್ಮಯಕ್ಕೆ‌ ಕಾರಣವಾದ ಅವರೊಂದಿಗೆ ಕಳೆದ ಆ ಕ್ಷಣಗಳು ನನ್ನಂಥವಳಿಗೆ ದೊರಕಿದ್ದು ಇನ್ನೂ ಒಂದು ದೊಡ್ಡ ವಿಸ್ಮಯವೇ.
ವಿಸ್ಮಯಕ್ಕೆ ವಿಸ್ಮಯವೇ ಉತ್ತರ.

*****

ರಾಜಲಕ್ಷ್ಮಿಯವರ ಬದುಕು ಬರಹದ ಅನನ್ಯತೆ

ರಾಜಲಕ್ಷ್ಮಿ ಎನ್. ರಾವ್. ಅವರ ಬದುಕು ಮತ್ತು ಬರಹ ಇವೆರೆಡನ್ನೂ ಒಟ್ಟಿಗೇ ಇಟ್ಟು ನೋಡಿದಾಗ ಅವರ ಸಾಹಿತ್ಯದ ಸ್ವರೂಪ ಬಹುಶಃ ಸ್ವಲ್ಪಮಟ್ಟಿಗೆ ಓದುಗರ ಪಾಲಿಗೆ ದಕ್ಕಬಹುದು. ಅವರು ಬರೆದ ಕಥೆಗಳೂ ಕಡಿಮೆಯೇ! ಹಾಗೆಯೇ ಅವರ ಬಗ್ಗೆ ಸಿಗುವ ಮಾಹಿತಿಗಳೂ! ಅವರು ಲೌಕಿಕಕ್ಕೆ ಅಂಟಿಕೊಂಡ ದಿನಗಳೂ ಕೂಡ ಅತ್ಯಲ್ಪ. ಬಿ.ಎಸ್. ವೆಂಕಟಲಕ್ಷ್ಮಿಯವರು ರಾಜಲಕ್ಷ್ಮಿಯವರನ್ನೇನಾದರೂ ಸಂದರ್ಶನ ಮಾಡದೇ ಹೋಗಿದ್ದರೆ ಬಹುಶಃ ಅವರ ಪರಿಚಯ ಕೂಡ ಅಪೂರ್ಣವಾಗಿಯೇ ಉಳಿದುಬಿಡುತ್ತಿತ್ತೋ ಏನೋ. ಆದುದರಿಂದ ರಾಜಲಕ್ಷ್ಮಿಯವರ ಬಗೆಗೆ ಬರೆಯುವ ಮುನ್ನ ಖಂಡಿತವಾಗಿಯೂ ಬಿ.ಎಸ್. ವೆಂಕಟಲಕ್ಷ್ಮಿಯವರನ್ನೂ ಸ್ಮರಿಸಬೇಕು. ವಿಜಯಾದಬ್ಬೆ, ಚಿ.ನ. ಮಂಗಳ, ವೆಂಕಟಲಕ್ಷ್ಮಿ ಮುಂತಾದವರು ಕನ್ನಡ ಸಾಹಿತ್ಯ ಮರೆಯಲಾರದ, ಮರೆಯಬಾರದ ಕೆಲವು ಲೇಖಕಿಯರನ್ನು ಹೀಗೆ ಓದುಗರಿಗೆ ಪರಿಚಯ ಮಾಡಿಕೊಟ್ಟಿರುವುದು ಒಂದು ಸಾಧನೆಯೇ ಆಗಿದೆ.

ಬಿ.ಎಂ.ಶ್ರೀ. ಯವರ ಮೊಮ್ಮಗಳಾದ ರಾಜಲಕ್ಷ್ಮಿ (1934) ಅವರೇ ಹೇಳಿಕೊಂಡಂತೆ (ಬಿ.ಎಸ್. ವೆಂಕಟಲಕ್ಷ್ಮಿ ಲೇಖಕಿಯರ ನೆಲೆಬೆಲೆ. 1990) ಅಜ್ಜನ ಪ್ರೀತಿಯ ಆಸರೆಯಲ್ಲಿ ಸಾಹಿತಿಗಳ ಪರಿಸರದಲ್ಲಿ ಬೆಳೆದವರು. ನಲವತ್ತು ಐವತ್ತರ ದಶಕಗಳ ಸಾಮಾಜಿಕ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ರಾಜಲಕ್ಷ್ಮಿ ಬೆಳೆದ ರೀತಿಯನ್ನು ನೋಡಿದರೆ, ತಮ್ಮ ಸಮಕಾಲೀನರಿಗಿಂತ ಅವರು ಒಂದು ಅರ್ಧಶತಮಾನವಾದರೂ ಮುಂದಿದ್ದರು ಎನಿಸುತ್ತದೆ. ಯಾವುದೇ ನಿರ್ಭಂದಗಳಿಲ್ಲದ ತಾತನ ಮನೆಯ ಬದುಕು; ಜೊತೆಗೆ ಅಡಿಗರಂತಹ ಸಾಹಿತ್ಯಕ ಗುರು; ರಾಮಚಂದ್ರಶರ್ಮ; ಸದಾಶಿವ; ನಿರಂಜನ; ರಾಘವ ಮುಂತಾದ ‘ಹುಡುಗ ಪಾಳ್ಯದ ಸಾಹಿತ್ಯಕ ಸಹವಾಸ’ ಈ ಎಲ್ಲವೂ ರಾಜಲಕ್ಷ್ಮಿಯವರ ಸಾಹಿತ್ಯವನ್ನು ಪ್ರಭಾವಿಸಿದ ಅಂಶಗಳಾಗಿದ್ದವು. “ಅವರ ಮಧ್ಯೆ (ಸದಾಶಿವ, ರಾಮಚಂದ್ರಶರ್ಮ, ರಾಘವ) ಇರೋದು ಒಂದು ರೀತಿಯ ಮಜಾ ಎನಿಸುತ್ತಿತ್ತು. ಮೈಸೂರು ಪಬ್ಲಿಕ್ ಲೈಬ್ರರೀಲಿ ಗಂಟೆಗಟ್ಟಲೆ ಕೂತ್ಕೋತಾ ಇದ್ದೆವು” (ಅದೇ ಪು. 148) ಎನ್ನುವ ರಾಜಲಕ್ಷ್ಮಿ ‘ಗಂಡುಬೀರಿ’ ಎನ್ನಬಹುದಾದ ಹುಡುಗರ ಗುಂಪಿನಲ್ಲಿದ್ದ ಏಕೈಕ ಹುಡುಗಿ. ಆಗಿನ ಕಾಲಕ್ಕೆ ಬಂದ ಎಲ್ಲಾ ಕನ್ನಡ ಹಾಗೂ ಇಂಗ್ಲಿಷ್ ಪುಸ್ತಕಗಳನ್ನು ಓದಿಕೊಂಡಿದ್ದರು.

ರಾಜಲಕ್ಷ್ಮಿಯವರ ಬದಿಗೆ ಅದೇ ಸರಿ ಸುಮಾರು ವಯಸ್ಸಿನ ನಮ್ಮ ತಾಯಂದಿರನ್ನು ಇಟ್ಟು ನೋಡಿದಾಗ ರಾಜಲಕ್ಷ್ಮಿ ತಮ್ಮ ಕಾಲದ ಇತರ ಮಹಿಳೆಯರಿಗಿಂತ ಎಷ್ಟು ಭಿನ್ನವಾಗಿದ್ದರು, ಎಂತಹ ಸ್ವತಂತ್ರ ಆಲೋಚನೆಗಳನ್ನು ಉಳ್ಳವರಾಗಿದ್ದರು ಎಂಬುದು ತಿಳಿದು ಬರುತ್ತದೆ. ಮನೆಯ ಹೊಸ್ತಿಲು ದಾರಂದಗಳನ್ನೇ ಕಾಣದೆ, ಅಡುಗೆ ಮನೆ, ಹೆಚ್ಚೆಂದರೆ ಕತ್ತಲ ನಡು ಮನೆಗೆ ಹೆದರಿ ಹೆಜ್ಜೆ ಇಡುತ್ತಿದ್ದ ನನ್ನ ಅಮ್ಮನಂತಹವರ ತಾರುಣ್ಯಾವಸ್ಥೆಯಲ್ಲಿಯೇ, ರಾಜಲಕ್ಷ್ಮಿಯವರ ತಾರುಣ್ಯವೂ ಸಂಭವಿಸಿದ್ದು. ಅಂತಹ ಕಾಲದಲ್ಲಿಯೇ ಅವರು ಓ. ಹೆನ್ರಿಯವರಿಂದ ತೀವ್ರವಾಗಿ ಪ್ರಭಾವಿತರಾದದ್ದನ್ನು ಹೇಳಿಕೊಳ್ಳುತ್ತಾರೆ. ಪಂಜಾಬಿನಲ್ಲಿ ಬಿ.ಎ. ಮುಗಿಸಿ, ಮೈಸೂರಿನಲ್ಲಿ ಇಂಗ್ಲಿಷ್ ಎಂ.ಎ. ಮಾಡಲು ಬಂದುದಾಗಿ ಅವರು ತಮ್ಮ ಸಂದರ್ಶನದಲ್ಲಿ ತಿಳಿಸಿದ್ದಾರೆ. ಡೆಕ್ಕೆನ್ ಹೆರಾಲ್ಡ್‌ ಮತ್ತು ಇಲ್ಲಸ್ಟ್ರೇಟೆಡ್ ವೀಕ್ಲಿ ಪತ್ರಿಕೆಗಳಲ್ಲಿ ಅವರ ಕತೆ ಕವಿತೆಗಳು ಪ್ರಕಟವಾಗುತ್ತಿದ್ದುದನ್ನು ಅವರೇ ಹೇಳಿಕೊಂಡಿದ್ದಾರೆ.

ರಾಜಲಕ್ಷ್ಮಿಯವರ ಕತೆ ಕೇಳುತ್ತಿದ್ದರೆ ನನಗೆ ಒಳಗೆಲ್ಲೋ ಅಕ್ಕಮಹಾದೇವಿ ನುಡಿದಂತಾಗುತ್ತದೆ. ತನಗೇನು ಬೇಕು ಎಂಬುದರ ಬಗ್ಗೆ ಸ್ಪಷ್ಟವಾದ ಕಲ್ಪನೆ, ಸಿದ್ಧಮಾದರಿಗಳಿಂದ ಸಿಡಿದು ಹೋಗುವ ಧೈರ್ಯ, ಆಧುನಿಕ ಮನಸ್ಸು, ಒಂದು ರೀತಿಯಲ್ಲಿ ಪಿತೃಪ್ರಧಾನತೆಯ ಅಹಂಕಾರಗಳಿಗೆ ಸವಾಲು ಹಾಕಿದ ಕೆಲವೇ ಮಹಿಳೆಯರಲ್ಲಿ ರಾಜಲಕ್ಷ್ಮಿಯವರೂ ಒಬ್ಬರು. ಅವರ ತಂದೆ ತಾಯಿಯವರು ಅವರು ಒಲ್ಲದ ಶ್ರೀಮಂತ ವಿಜ್ಞಾನಿಯೊಟ್ಟಿಗೆ ವಿವಾಹ ನಡೆಸಲು ಆಗ್ರಹಪಡಿಸಿದಾಗ “ನನ್ನಪ್ಪನನ್ನು ಕಾಡಿದೆ, ಬೇಡಿದೆ, ಅವನ Tastes ಹಾಗೂ ನನ್ನದು ಬೇರೆ ಅಂತ ಹೇಳಿದೆ. ನಮ್ಮಪ್ಪ ಕೊನೆಗೆ ಅಂದರು ‘ಈಗ ಮಾಡಿಕೋ ನೋಡೋಣ, ನಿಂಗೆ ಅಷ್ಟು ಅವನ ಜೊತೆ ಇರೋಕ್ಕೆ ಸಾಧ್ಯ ಇಲ್ಲಾಂದ್ರೆ. ಡೈವೋರ್ಸ್ ಮಾಡೋವಂತೆ’ ಈ ಒಂದು ವಾಕ್ಯ ನನ್ನ ತಲೇಲಿ ಭದ್ರವಾಗಿ ಕೂತು ಬಿಡ್ತು” (ಪು 151)

ಒಂದು ಸಾಂಸ್ಥಿಕವಾದ ನಿಷ್ಠುರ ಕಟ್ಟುಪಾಡುಗಳನ್ನು ಇಷ್ಟು ಸರಳವಾಗಿ ಬಗೆಹರಿಸಿಕೊಂಡ ಅಪ್ಪ, ಮಗಳ ಬಗ್ಗೆ ವಿಸ್ಮಯವಾಗದೇ ಹೋಗದು. ಇದಕ್ಕೆ ಬೆಂಬಲವಾಗಿದ್ದುದು ಬಹುಶಃ ಅವರ ಶಿಕ್ಷಣ. ಅವರದು ಇಂಗ್ಲಿಷ್ ಸಾಹಿತ್ಯಕ್ಕೆ ತೆರೆದುಕೊಂಡ ಅತ್ಯಂತ ಆಧುನಿಕ ಮನಸ್ಸು. ಡಬ್ಬಲ್ ಕಾಟ್ ಕಂಡರೇನೇ ಬಹಳ ಮುಜುಗರ ಪಟ್ಟುಕೊಳ್ಳುತ್ತಿದ್ದ ರಾಜಲಕ್ಷ್ಮಿ ಹೇಳುತ್ತಾರೆ “ನನ್ನ ಗಂಡನ ಜೊತೆ ಮೂರು ನಾಲ್ಕು ದಿನಗಳು ಮಾತ್ರ ಮಲಗಿರಬಹುದಷ್ಟೇ, then I started experiencing nightmares. Nightmare of being pursued, tortured, raped (ಪು. 151) ತಮ್ಮ ಪೂರ್ವಾಶ್ರಮದ ಘಟನೆಗಳನ್ನು ಹೇಳುವ ಹೊತ್ತಿಗೆ ರಾಜಲಕ್ಷ್ಮಿಯವರಾಗಲೇ ಅಧ್ಯಾತ್ಮದ ಹಾದಿಯಲ್ಲಿ ಅನೇಕ ಸಿದ್ಧಿಗಳನ್ನು ಪಡೆದ ಮೈತ್ರೇಯಿಯಾಗಿಬಿಟ್ಟಿದ್ದರು. ತಮ್ಮ ಬದುಕಿನ ಖಾಸಗಿ ಸಂಗತಿಗಳ ಬಗ್ಗೆ ಇಷ್ಟೊಂದು ನಿರ್ಭಡೆಯಿಂದ, ನಿರ್ವಿಕಾರದಿಂದ ಹೇಳಿಕೊಳ್ಳಲು ಸಾಧ್ಯವಾದುದಕ್ಕೆ ಅವರು ಗಳಿಸಿಕೊಂಡ ಆತ್ಮಶಕ್ತಿಯೂ ಕಾರಣವಾಗಿದ್ದಿರಬಹುದು. ಬಾಣಂತಿಯಾಗಿದ್ದ ರಾಜಲಕ್ಷ್ಮಿಯವರನ್ನು “ಸೆಕ್ಷುಅಲ್ ಹ್ಯಾಪಿನೆಸ್ ನಿನಗೆ ಇದೆಯಾ” ಎಂದು ಅವರ ದೊಡ್ಡಮ್ಮ ಕೇಳಿದಾಗ “ಇಲ್ಲ” ಎಂದರಂತೆ “ಹಾಗಾದರೆ ಹಿಂದಿರುಗಿ ಪ್ರಯೋಜನವಿಲ್ಲ” ಎಂದ ಅವರ ದೊಡ್ಡಮ್ಮನ ಅಭಿಪ್ರಾಯವನ್ನು ರಾಜಲಕ್ಷ್ಮಿ ಹೇಳಿಕೊಳ್ಳುತ್ತಾರೆ. ಐವತ್ತರ ದಶಕದಲ್ಲಿ ಕನ್ನಡದ ಸಂದರ್ಭದಲ್ಲಿ ಮನಬಿಚ್ಚಿ ಮಾತನಾಡುವ ಇಂತಹ ಕೌಟುಂಬಿಕ ಪರಿಸರವಿದ್ದುದರ ಕಲ್ಪನೆಯೇ ಅಚ್ಚರಿ ಮೂಡಿಸುತ್ತದೆ.

ರಾಜಲಕ್ಷ್ಮಿಯವರು ಯಾವುದೇ ಪ್ರಚಾರ, ಪ್ರಕಾಶನದಿಂದ ದೂರವಾಗಿದ್ದಾರೆ. ಯಾರಾದರೂ ಭೇಟಿಯಾಗಲು ಕೇಳಿದರೆ “ಅವಳು ಹೋಗಿಬಿಟ್ಟಳು ಎಂದು ಹೇಳಿಬಿಡಿ” ಎಂದು ಹೇಳಿದ್ದರು. ನಿಜವಾಗಿ ಸಂತೆಯೊಳಗೆ ಸಂತರು ಇರಬೇಕಾದ ರೀತಿಗೆ ಅವರು ಮಾದರಿಯಾಗಿದ್ದಾರೆ. ಜನಸಂಪರ್ಕವನ್ನು ತಪ್ಪಿಸಿಕೊಳ್ಳುವ ಸಲುವಾಗಿಯೇ ಈಗ ಅವರು ಮೈಸೂರು ಆಶ್ರಮವನ್ನು ತೊರೆದು ಹೋಗಿದ್ದಾರಂತೆ.

ಸ್ತ್ರೀಗೆ ಪುರುಷನೊಡನೆ ಸಂಬಂಧವೆಂಬುದು ನಾಗಮಂಡಲದಲ್ಲಿನ (ಗಿರೀಶ್ ಕಾರ್ನಾಡ್) ಹಗಲು ರಾತ್ರಿಗಳಲ್ಲಿ ವೇಷ ಬದಲಿಸಿ ಬರುವ ಪುರುಷ ಪಾತ್ರಗಳಂತೆ ಕಡೆಗೂ ಅರ್ಥವಾಗದೇ ಎಲ್ಲವೂ ಮೊಗುಮ್ಮಾಗಿ ಕತ್ತಲೆಯಲ್ಲೇ ಕಳೆದು ಹೋಗುತ್ತಿದ್ದ ಸಾಮಾಜಿಕ ಸಂದರ್ಭವೊಂದರಲ್ಲಿ, ರಾಜಲಕ್ಷ್ಮಿಯವರಿಗೆ ಅವರ ದೊಡ್ಡಮ್ಮ ಕೇಳಿದ ಪ್ರಶ್ನೆ ಹಾಗೂ ಅದಕ್ಕೆ ಆ ಮಗಳು ಅವರಿಗೆ ಕೊಟ್ಟ ಉತ್ತರ ಈ ಎಲ್ಲವೂ ರಾಜಲಕ್ಷ್ಮಿ ಅನುಭವಿಸಿದ ಸ್ವಾತಂತ್ರ್ಯದ ಕ್ಷಣಗಳನ್ನು ವ್ಯಕ್ತಪಡಿಸುತ್ತದೆ. ರಾಜಲಕ್ಷ್ಮಿಯವರಂತಹ ಸ್ವತಂತ್ರ ಹಾಗೂ ಸೂಕ್ಷ್ಮ ದೃಷ್ಟಿಕೋನವೇ ಅವರ ಕತೆಗಳನ್ನು ರೂಪಿಸಿದವು ಎಂಬುದರ ಅರಿವಾಗುತ್ತದೆ. ಮಗುವನ್ನೂ, ಗಂಡನನ್ನೂ ತ್ಯಜಿಸಿ ಅಧ್ಯಾತ್ಮದ ಅಭಿಲಾಷೆಯಿಂದ ಅಂದು ರಾಜಲಕ್ಷ್ಮಿ ತೆರಳದೇ ಇದ್ದಿದ್ದರೆ ಕನ್ನಡ ಸಾಹಿತ್ಯಕ್ಕೆ ಇನ್ನೊಬ್ಬ ಅಕ್ಕಮಹಾದೇವಿ ದೊರಕುತ್ತಿದ್ದಳೇನೋ. ಇಪ್ಪತ್ತು ವರುಷಕ್ಕೇ ತಮ್ಮ ಪ್ರತಿಭೆಯನ್ನು ಒರಸಿಹಾಕಿ ತಮ್ಮ ಇಂಗ್ಲಿಷ್ ಹಾಗೂ ಕನ್ನಡ ಸಾಹಿತ್ಯದ ಜ್ಞಾನವನ್ನೆಲ್ಲ ಗಂಟುಮೂಟೆಕಟ್ಟಿ ಎಸೆದು “Now, I just have no thoughts about my stories” ಎಂದು ನಿರ್ವಿಕಾರವಾಗಿ ರಾಜಲಕ್ಷ್ಮಿ ಹೊರಟು ಹೋದದ್ದಂತೂ ಕನ್ನಡ ಸಾಹಿತ್ಯಕ್ಕೆ ಅಪಾರ ನಷ್ಟವನ್ನುಂಟು ಮಾಡಿತು.

ಅಧ್ಯಾತ್ಮದ ಹಸಿವು ರಾಜಲಕ್ಷ್ಮಿಯವರಲ್ಲಿ ಬಹುಶಃ ಬಾಲ್ಯದಿಂದಲೇ ಸುಪ್ತವಾಗಿ ಇದ್ದಿರಬಹುದು. ಬ್ರಹ್ಮಚರ್ಯದಲ್ಲಿ ಬದುಕುತ್ತಿದ್ದ ಅಜ್ಜನ ಮನೆಯ ವಾತಾವರಣ ಬಾಲಕಿಯ ಮೇಲೆ ಸಹಜವಾಗಿಯೇ ಪ್ರಭಾವ ಬೀರಿದ್ದಿರಬಹುದು. ಅಲ್ಲಿನ ಸಾಹಿತ್ಯಕ ವಾತಾವರಣವೋ, ಗಂಡು ಹುಡುಗರ ನುಡುವೆ ಅವರ ಒಡನಾಟವೋ ಒಟ್ಟಿನಲ್ಲಿ ಕಾರಣವಾಗಿ ಅವರ ತಾಯಿ ತಂದೆಯರು ಅವರನ್ನು ಬಲವಂತವಾಗಿ ಅಜ್ಜನ ಮನೆಯನ್ನು ತೊರೆಯುವಂತೆ ಮಾಡಿದ್ದಿರಬಹುದು. ಆದರೆ ಅಜ್ಜನ ಮನೆಯಲ್ಲಿ ರೂಪುಗೊಂಡ ಅವರ ಸ್ವತಂತ್ರ ವ್ಯಕ್ತಿತ್ವವೇ ಅವರ ಬದುಕು ಹಾಗೂ ಬರಹಗಳಲ್ಲಿ ಪ್ರತಿಫಲನಗೊಂಡಿತು ಎಂಬುದಂತೂ ಸ್ಪಷ್ಟವಾಗುತ್ತದೆ.

ರಾಜಲಕ್ಷ್ಮಿಯವರು ಕತೆಗಳನ್ನು ಬರೆದ ಕಾಲ ನವೋದಯದ ಭರತ ಇಳಿದು ಕನ್ನಡ ಸಾಹಿತ್ಯ ನವ್ಯಧ್ವನಿಗೆ ಸಜ್ಜಾಗುತ್ತಿದ್ದ ಕಾಲ. ಹೆಣ್ಣು ಮತ್ತು ಗಂಡಿನ ಆಂತರಿಕ ಮತ್ತು ಬಾಹ್ಯ ವ್ಯಕ್ತಿತ್ವಗಳು ಬೇರ ಬೇರೆ ಎಂಬ ಸರಳವಾದ ಗ್ರಹಿಕೆಯನ್ನು ಬಿಟ್ಟುಕೊಟ್ಟು ಅವು ಪರಸ್ಪರ ಪ್ರಭಾವಿಸುತ್ತವೆ ಎನ್ನುವ ಸಮಗ್ರವಾದ, ಸಂಕೀರ್ಣ ದೃಷ್ಟಿಕೋನದ ಫಲವಾಗಿ ಕತೆಗಳು ಹುಟ್ಟಿಕೊಳ್ಳುತ್ತಿದ್ದ ಕಾಲ. ಆ ಕಾಲದಲ್ಲಿ ಬರೆಯಲು ಆರಂಭಿಸಿದ ರಾಜಲಕ್ಷ್ಮಿ, ಅದು ಉಚ್ಛ್ರಾಯ ಸ್ಥಿತಿಗೆ ತಲಪುವ ಮುನ್ನವೇ ಓದಿಗೆ, ಲೇಖನಿಗೆ ವಿದಾಯ ಹೇಳಿಬಿಟ್ಟರು. ಕೆಲವೇ ಕತೆಗಳುಳ್ಳ ‘ಸಂಗಮ’ ಅವರ ಏಕೈಕ ಕಥಾಸಂಕಲನ. ಇದು ಹೊಸರೀತಿಯ ಕತೆಗಳಿಗೆ ಬುನಾದಿಯನ್ನು ಹಾಕಿದ ನವ್ಯ ಕಥಾ ಸಾಹಿತ್ಯದಲ್ಲಿನ ಮೊದಲ ಮಹಿಳಾ ಕೃತಿಯೂ ಹೌದು. ಇವರ ಜೊತೆಗೆ ಸಮರ್ಥವಾಗಿ ನಡೆದ ಲೇಖಕಿಯರು ಇಲ್ಲವೇ ಇಲ್ಲವೆನ್ನುವಷ್ಟು ವಿರಳ. ಹೀಗಾಗಿ ರಾಜಲಕ್ಷ್ಮಿಯವರದ್ದು ರಾಜರಸ್ತೆ.

ಪ್ರಥಮಬಾರಿಗೆ ಕನ್ನಡ ಕಥಾ ಸಾಹಿತ್ಯದಲ್ಲಿ ಮಹಿಳೆ ತನ್ನ ಅನೇಕ ಸಾಧ್ಯತೆಗಳೊಂದಿಗೆ, ಸಂವೇದನೆಗಳೊಂದಿಗೆ ಪ್ರಕಟವಾದದ್ದು ಇಲ್ಲಿಯೇ. ಅವರ ಕತೆಗಳಲ್ಲಿ ಮಹಿಳೆಯರ ವಿಭಿನ್ನ ಆಂತರಿಕ ತೊಳಲಾಟಗಳು, ಅವರ ವ್ಯಕ್ತಿತ್ವಕ್ಕೆ ಕವಿದಿರುವ ವಿಭಿನ್ನ ಸಂಕೋಲೆಗಳು, ಹೆಣ್ಣು ಇರುವ ಮತ್ತು ಅವಳನ್ನು ಕಾಣಿಸುವುದರ ನಡುವಿನ ಅಗಾಧ ಅಂತರ ಇವೆರಡನ್ನೂ ಒಪ್ಪಿಕೊಳ್ಳುವ ಅಥವ ನಿರಾಕರಿಸುವ ಹಂತದಲ್ಲಿ ಅವಳು ಅನುಭವಿಸುವ ಸಂಘರ್ಷಗಳು, ಸ್ಥಾಪಿತ ಸಾಮಾಜಿಕ ಮೌಲ್ಯಗಳನ್ನು ಪ್ರಶ್ನಿಸುವ ಹಾಗೂ ಅವುಗಳಿಂದ ಸಿಡಿದು ಹೋಗುವ ಪ್ರಯತ್ನಗಳು ಈ ಎಲ್ಲವೂ ‘ಸಂಗಮ’ ದ ಕತೆಗಳಲ್ಲಿ ಬಹಳ ಸೂಕ್ಷ್ಮವಾಗಿ ವ್ಯಕ್ತವಾಗಿದೆ. ರಾಜಲಕ್ಷ್ಮಿಯವರ ಕತೆಗಳ ಇನ್ನೊಂದು ವಿಶೇಷವೆಂದರೆ ಸ್ತ್ರೀ ದೃಷ್ಟಿಯಿಂದ ಪುರುಷ ಲೋಕವನ್ನು ಪ್ರವೇಶಿಸಿ, ಅಲ್ಲಿನ ದ್ವಂದ್ವಗಳನ್ನು, ಕಾತುರ, ಖಿನ್ನತೆಗಳನ್ನು ಕಟ್ಟಿಕೊಡುವುದು (ಉದಾಹರಣೆಗೆ ‘ಅವೇ ಮರಿಯಾ’, ‘ಆಗಸ್ಟ್ ಹದಿನೈದು’ ಮುಂತಾದವು)

ಈ ಸಂಕಲನದ ಹೆಚ್ಚಿನ ಕತೆಗಳು ಸ್ತ್ರೀ-ಪುರುಷರ ನಡುವಿನ ಸಂಬಂಧದ ಸುತ್ತ ಹೆಣೆದಿರುವ ಕತೆಗಳು. ಇವುಗಳಲ್ಲಿ ಕೆಲವು ಆತ್ಮ ಸಂಬಂಧದ ಸೆಳೆತಕ್ಕೆ ಒಳಗಾದವುಗಳು, ಕೆಲವು ಕತೆಗಳಲ್ಲಿ ಈ ಅನನ್ಯ ಸಂಬಂಧವೆಂಬುದು ವಿವಾಹ ಪೂರ್ವದ ನೆನಪಾದರೆ ಇನ್ನೂ ಕೆಲವು ವಿವಾಹ ಬಾಹಿರ ಸಂಬಂಧವನ್ನು ಅಪೇಕ್ಷಿಸುವಂತಹವು. ಒಟ್ಟಿನಲ್ಲಿ ಈ ಕತೆಗಳೆಲ್ಲವೂ ವಿವಾಹದ ಸಾಂಸ್ಥಿಕ ನಂಬಿಕೆಗಳು ಹಾಗೂ ಪ್ರೇಮ ಇವೆರೆಡರ ನಡುವಿನ ಸಂಘರ್ಷಕ್ಕೆ ಸಿಲುಕಿ ಹೋರಾಡುತ್ತಲೇ, ಮಾನವ ಕಟ್ಟಿಕೊಂಡಿರುವ ಸಾಂಸ್ಥಿಕ ಹುಸಿತನಗಳನ್ನು, ಗಾಢಪ್ರೇಮದ ಸಹಜತೆಯನ್ನೂ ಬಯಲುಮಾಡುತ್ತವೆ. ಇಲ್ಲಿನ ಎಲ್ಲ ಸಂದರ್ಭಗಳೂ ಸ್ಥಾಪಿತ ಮೌಲ್ಯಗಳ ಜೊತೆಗೆ ಮುಖಾಮುಖಿಯಾಗುತ್ತಲೇ ಹೋಗುತ್ತವೆ.

ಇದನ್ನು ಹೇಳಲು ಲೇಖಕಿ ತಮ್ಮ ಕತೆಗಳಲ್ಲಿ ಸಾಮಾನ್ಯವಾಗಿ ಒಂದು ಸೂತ್ರರೂಪಿಯಾದ ವಿನ್ಯಾಸವನ್ನು ಬಳಸಿಕೊಂಡಿರುವುದು ವಿಶೇಷವಾಗಿದೆ. ಕತೆಯ ಪ್ರಾರಂಭದಲ್ಲಿ ಭ್ರಮೆಗೆ ಒಳಗಾದ ಸ್ಥಿಯಲ್ಲಿರುವ ಪಾತ್ರಗಳು, ನಿಜದ ಕಡೆಗೆ (ಭ್ರಮೆ ಹರಿಯುವಲ್ಲಿಗೆ) ಸಾಗುವುದು ಇಲ್ಲಿನ ಕತೆಗಳ ಒಂದು ಇತ್ಯಾತ್ಮಕ ನೆಲೆಯಾಗಿದೆ. ಉದಾಹರಣೆಗೆ ಹೇಳುವುದಾದರೆ ‘ಅವೇ ಮರಿಯಾ’, ‘ವೈಶಾಖ ಶುಕ್ಲ ಪೂರ್ಣಿಮಾ’ ‘ಶಾಂತಿ’ ‘ನನಗೊಂದು ಬಿಳಿ ಗುಲಾಬಿ’, ‘ಕಲ್ಯಾಣಿ’, ‘ಇಲ್ಲ ಇಲ್ಲ’ ಈ ಎಲ್ಲ ಕತೆಗಳಲ್ಲಿನ ನಾಯಕ ನಾಯಕಿಯರು ಪ್ರಾರಂಭದ ಹಂತದಲ್ಲಿ ಪ್ರೇಮದ ಸೆಳೆತಕ್ಕೆ ಸಿಲುಕಿದವರು ಅಥವಾ ಅದರ ಬಗ್ಗೆ ತಮ್ಮದೇ ಆದ ಪೂವ್ರಗ್ರಹವನ್ನು ಇಟ್ಟುಕೊಂಡವರು. ‘ಅವೇ ಮರಿಯಾ’ ದ ಟೋನಿ, ಹೆಣ್ಣು ಗಂಡಿನ ಪ್ರೇಮವೆಂಬುದು ಸಂಸಾರ ತಾಪತ್ರಯಗಳಿಗೆ, ಸಾಲಗಳಿಗೆ, ತಿಪ್ಪೆಯ ಮಕ್ಕಳಿಗೆ, ಜಗಳಕ್ಕೆ, ಸಾವಿಗೆ ಸೋತ ಮುಖಕ್ಕೆ, ವಯಸ್ಸಾಗುವ ಮೊದಲೇ ಮುದಿತನ ಆವರಿಸಲಿಕ್ಕೆ ಕಾರಣವೆಂದು ನಂಬಿದ್ದವನು. ತನ್ನ ನಂಬಿಕೆ ಹಾಗೂ ವಯೋಸಹಜವಾದ ಹೆಣ್ಣಿನ ಬಯಕೆ ಇವೆರೆಡರ ಸಂಘರ್ಷವೊಂದಕ್ಕೆ ಸಿಲುಕಿದವನು. ಆದರೆ ಚರ್ಚೊಂದರಲ್ಲಿ ಅವನಿಗೆ ನಿಜವಾದ ಪ್ರೇಮದ ಸಾಕ್ಷಾತ್ಕಾರವಾಗುತ್ತದೆ. ಅಲ್ಲಿ ಅವನಿಗೆ ಆವೇಶಗಳಿರುವುದಿಲ್ಲ. ಯೌವನದ ಉತ್ಕಟಾವಸ್ಥೆಯ ಆತುರವಿರುವುದಿಲ್ಲ. ಭ್ರಮೆ ಹರಿದ ನಿರಾಳತೆ ಹಾಗೂ ಸ್ಫುಟ ಚಿತ್ರವಿರುತ್ತದೆ. ಇಂತಹ ಹದಗೊಂಡ ಸ್ಥಿತಿಯಲ್ಲಿಯೇ ಅವನ ತನ್ನ ಪ್ರೇಮಿ ಬಳಿಗೆ ಓಡುತ್ತಾನೆ. ಹಾಗೆ ಓಡುವುದರಲ್ಲಿ ಪ್ರೇಮದ ಅಗಾಧ ಸ್ವರೂಪ ಕಂಡುಕೊಂಡ ಹೊಸ ಅರಿವಿನ ಎಚ್ಚರವಿರುತ್ತದೆ.

‘ವೈಶಾಖ ಶುದ್ಧ ಪೂರ್ಣಿಮೆ’ ಯಲ್ಲಿ ಕೂಡ ಇಂತಹುದೇ ಆಶಯವಿದೆ. ಇಲ್ಲಿ ಟೋನಿಗೆ ಬದಲಾಗಿ ವಿಜಯ ಎನ್ನುವ ನಾಯಕಿ ಇದ್ದಾಳೆ. ಕತೆಯ ಪ್ರಾರಂಭದಲ್ಲಿಯೇ ಅವಳು ಪ್ರೀತಿಸಿದವನ ಕೊಲೆಯಾಗಿದೆ. ಭೂತ ಮತ್ತು ಭವಿಷ್ಯತ್ತುಗಳ ನಡುವೆ ಅವಳ ವರ್ತಮಾನ ತೂಗುಯ್ಯಾಲೆಯಾಗಿದೆ. ಕತೆಯುದ್ದಕ್ಕೂ ವ್ಯಕ್ತವಾಗುವುದು ಈ ಡೋಲಾಯಮಾನಸ್ಥಿತಿಯೇ. ಕತೆಯ ಕೊನೆಗೆ ಅವಳು ಪ್ರೇಮಿಯ ನೆನಪಿನ ತೆಕ್ಕೆಯಿಂದ ಬಿಡಿಸಿಕೊಳ್ಳುವ ಪ್ರಯತ್ನಮಾಡುತ್ತಾಳೆ. ಇದು ಅವನ ಮೇಲಿನ ಒಲವಿನ ಮಾಗಿದ ಸ್ಥಿತಿಯ ಪ್ರತೀಕವಾಗಿದೆ. ಅಂತಹ ಒಲವಿಗೆ ಮರಣವಿಲ್ಲ ಎನ್ನುವ ನಿಜಸ್ಥಿತಿಯ ಅರಿವು ಅವಳಿಗಾಗುತ್ತದೆ. ಟೋನಿಯ ಪಾಲಿಗೆ ಚರ್ಚ್ ಹಾಗೂ ವಿಜಯಳ ಪಾಲಿಗೆ ಬುದ್ಧನ ವಿಗ್ರಹ ಈ ಎರಡೂ ಅವರವರ ಜ್ಞಾನವನ್ನೂ ಪ್ರೇಮದ ಪರಿಕಲ್ಪನೆಯನ್ನೂ ವಿಸ್ತರಿಸುವ ಸಾಧನಗಳಾಗಿ ಬಂದಿವೆ. ಈ ಇಬ್ಬರೂ ಪ್ರಕೃತಿಗೆ ಸಹಜವಾಗಿ ಮಣಿಯುತ್ತಾರೆ. ಹೀಗೆ ಅವರು ಪ್ರಕೃತಿಯ ಭಾಗವಾಗಿ ಹೋಗುವುದು ಅವರ ದೌರ್ಬಲ್ಯವಾಗುವುದಿಲ್ಲ. ಬದಲಾಗಿ ನೈಸರ್ಗಿಕತೆಯನ್ನು ಒಪ್ಪಿಕೊಳ್ಳುವ ಪಕ್ವ ಸ್ಥಿತಿಯೇ ಆಗಿದೆ.

‘ನನಗೊಂದು ಬಿಳಿ ಗುಲಾಬಿ’ ಎನ್ನುವ ಕತೆಯಲ್ಲಿ ಕೂಡ ಆದರ್ಶ ಮತ್ತು ವಾಸ್ತವಗಳ ನಡುವೆ ಸಂಘರ್ಷವಿದೆ. ತ್ರಿಕೋನ ಪ್ರೇಮದ ಈ ಕತೆಯಲ್ಲಿ ನಾಯಕಿ ತನ್ನನ್ನು ಪ್ರೀತಿಸುವ ಹಾಗೂ ತಾನು ಪ್ರೀತಿಸುವ ಎರಡು ಗಂಡುಗಳ ನಡುವಿನ ಸೆಳೆತಕ್ಕೆ ಸಿಲುಕಿದ್ದಾಳೆ. ಕತೆಯ ಉದ್ದಕ್ಕೂ ತನ್ನನ್ನು ಮರೆತ ತನಗೆ ಎಟುಕದ ಪ್ರೇಮಿಯ ಬಗ್ಗೆ ಹಳಹಳಿಸುವ, ಅಲವರಿಯುವ ನಾಯಕಿ ಕತೆಯ ಕೊನೆಗೆ ಆ ಭ್ರಮೆಯಿಂದ ಹೊರ ಬಂದು ವಾಸ್ತವಕ್ಕೆ ಮರಳಿ ತನ್ನನ್ನು ಪ್ರೀತಿಸಿದವನನ್ನು ಮದುವೆಯಾಗಲು ನಿರ್ಧರಿಸುತ್ತಾಳೆ.

‘ಸಂಗಮ’ ಎನ್ನುವ ಕತೆಯಲ್ಲಿ ಪತಿಯ ಸಂಶಯಕ್ಕೆ ಒಳಗಾದ ಪತ್ನಿಯಿದ್ದಾಳೆ. ಕತೆಯ ಪೂರ್ತಿ ಸಂಶಯದ ರೋಗದಲ್ಲೇ ನರಳುವ ಕಥಾನಾಯಕನ ಒದ್ದಾಟವಿದೆ. ಕತೆಯ ಕೊನೆಗೆ ನಾಯಕ ತನ್ನ ಸಂಶಯದ ರೋಗವನ್ನು ನಿವಾರಿಸಲೋಸುಗ ತನ್ನ ಹೆಂಡತಿಯನ್ನು ಪ್ರಶ್ನಿಸಿದಾಗ, ತರುಣಾವಸ್ಥೆಯಲ್ಲಿ ಕಟ್ಟಿಕೊಂಡ ಮೋಹದ ಮಂಟಪ ಕುಸಿದು, ಪ್ರೊಫೆಸರನೊಬ್ಬನ ಆಕರ್ಷಣೆಗೆ ಒಳಗಾಗಿದ್ದ ಅವಳು ಎಂದೋ ಅದರಿಂದ ಸಂಪೂರ್ಣ ವಿಮುಕ್ತಳಾದಳೆಂದು ಹೇಳಿದಾಗ, ನಾಯಕ ಕೂಡ ಅಷ್ಟೇ ಸಹಜವಾಗಿ ಅದನ್ನು ಒಪ್ಪಕೊಳ್ಳುತ್ತಾನೆ. ಅನ್ಯ ಸಂಬಂಧದ ಬಗೆಗೆ ನಾಯಕನಿಗಾಗಲೀ, ನಾಯಕಿಗಾಗಲೀ ಅಪರಾಧೀ ಮನೋಭಾವವಿಲ್ಲ.

‘ಫೀಡ್ರಾ’ ಕತೆ ತೆರೆದುಕೊಳ್ಳುವುದು ವಿಷಮ ದಾಂಪತ್ಯದ ಸನ್ನಿವೇಶದಲ್ಲಿ. ವಯಸ್ಸಾದ ಗಂಡನನ್ನು ಕಟ್ಟಿಕೊಂಡ ಪಾರ್ವತಿ ಯುವತಿ, ಮಲಮಗನೆಡೆಗೆ ಆಕರ್ಷಿತಳಾಗುತ್ತಾಳೆ. ಈ ಆಕರ್ಷಣೆಯ ಸ್ವರೂಪವನ್ನು ಅದರೊಳಗೆ ಸಿಕ್ಕಿದ ಅವಳ ಹೊಯ್ದಾಟವನ್ನು ಒಂದು ಸುರಕ್ಷಿತವಾದ ಕನಸೂ ಅಲ್ಲದ, ಎಚ್ಚರವೂ ಅಲ್ಲದ ಸ್ಥಿತಿಯ ಸನ್ನಿವೇಶವನ್ನು ನಿರ್ಮಾಣಮಾಡುವುದರ ಮೂಲಕ ಲೇಖಕಿ ಅವಳನ್ನು ಸಮರ್ಥಿಸುತ್ತಾರೆ. ಒಂದು ರೀತಿಯಲ್ಲಿ ವಾಸ್ತವವನ್ನು ನೇರವಾಗಿ ಒಪ್ಪಿಕೊಳ್ಳಲು ನಾಯಕಿ ಸಿದ್ಧಳಿಲ್ಲದಾಗ ಅರ್ಥಾತ್ ಸಮಾಜ ಸಿದ್ಧವಿಲ್ಲದೇ ಹೋದಾಗ ಅವಳನ್ನು ಸ್ವಸಂರಕ್ಷಣ ತಂತ್ರದ ಮರೆಯಲ್ಲಿ ಲೇಖಕಿ ಅಡಗಿಸಿಡುತ್ತಾರೆ. ಇದು ಮಹಿಳೆಯರ ಸಾಹಿತ್ಯಕ ಅಭಿವ್ಯಕ್ತಿಗಳಿಗಿರುವ ಸಾಮಾಜಿಕ ಅಡ್ಡಿ ಆತಂಕಗಳನ್ನು ಬಯಲಾಗಿಸುತ್ತದೆ. ಮಹಿಳೆಯರು ತಮ್ಮನ್ನು ತಾವು ಅಭಿವ್ಯಕ್ತಿಗೊಳಿಸಲು ಇಂತಹ ಅಡಗುತಾಣಗಳನ್ನು ಕಂಡುಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ.

‘ಯಶಸ್ವಿ ಕತೆಗಾರ್ತಿ’ಯಲ್ಲಿ ಇದು ಒಳ್ಳೆಯ ತಂತ್ರವಾಗಿಯೂ ಬಳಕೆಯಾಗುತ್ತದೆ. ‘ಫೀಡ್ರಾ’ ಕತೆಯಲ್ಲಿ ಕೂಡ ಮಲತಾಯಿ ಹಾಗೂ ಮಲಮಗನ ಸಂಬಂಧ ಹಾದರವೆನಿಸಿಕೊಳ್ಳದೇ, ಮಾನವೀಯ ನೆಲೆಯಲ್ಲಿ ಅರ್ಥೈಸಿಕೊಳ್ಳುವ ಸಂಬಂಧದ ಒಂದು ಸ್ವರೂಪವಾಗುತ್ತದೆ.

ಮೇಲಿನ ಎಲ್ಲಾ ಕತೆಗಳಿಗಿಂತ ‘ಕಲ್ಯಾಣಿ’ ಎನ್ನುವ ಕತೆ ವಿಶಿಷ್ಟವಾಗುವುದು ಅದು ಬಳಸಿಕೊಳ್ಳುವ ಪ್ರತಿಫಲನ ತಂತ್ರದಿಂದಾಗಿ (reflection technique) ಕಲ್ಯಾಣಿ ಈ ಕತೆಯ ನಾಯಕಿ. ಸೂಕ್ಷ್ಮ ಮನಸ್ಸಿನ ಸ್ವತಂತ್ರ ಮನೋಭಾವದ ಆಧುನಿಕ ಹೆಣ್ಣು. ಇಲ್ಲಿ ಬರುವ ನಾಯಕರಲ್ಲಿ ಒಬ್ಬನಾದ ಕಲಾವಿದ ಮಾಧವ ಲೌಕಿಕ ಯಶಸ್ಸಿನ ಕ್ಷಣಿಕ ಅಸ್ತಿತ್ವವನ್ನು ಅರಿತವನು. ಅವನಿಗೆ ಹೆಣ್ಣಿನ ಬಗೆಗೆ ಯಾವುದೇ ಗುರುತರವಾದ ಅಭಿಮಾನ, ಅದ್ಭುತ ಭ್ರಾಂತಿಗಳಿಲ್ಲ. ಹಣದ ಬಗ್ಗೆ ಆರಾಧನಾ ಭಾವವನ್ನು ಬೆಳಸಿಕೊಂಡ ಶ್ರೀಮಂತ ಯುವಕ ಕೇಶವ ಈ ಕತೆಯ ಇನ್ನೊಬ್ಬ ನಾಯಕ. ಅವನಿಗೆ ತನ್ನ ಸ್ವಾಮಿತ್ವದಲ್ಲಿರುವ ಹೆಂಡತಿ ಮಕ್ಕಳ ಬಗ್ಗೆ ತೀವ್ರ ಅಭಿಮಾನ ಮತ್ತು ವಾತ್ಸಲ್ಯ. ಸ್ತ್ರೀಯ ಬಗ್ಗೆ ಒಲವು ಗೌರವ ಆರಾಧನೆಯನ್ನು ಬೆಳೆಸಿಕೊಂಡಿರುವ ಗೋಪಾಲ ಇಲ್ಲಿಯ ಮತ್ತೊಬ್ಬ ನಾಯಕ. ಅವನಿಗೆ ನ್ಯೂನತೆಯಿಲ್ಲದ ಸ್ತ್ರೀಯತ್ವದ ಬಗ್ಗೆ ಅನೇಕ ಕನಸು ಕಲ್ಪನೆಗಳಿವೆ. ಈ ಮೂವರ ವ್ಯಕ್ತಿತ್ವಗಳು ಕಲ್ಯಾಣಿಯ ವ್ಯಕ್ತಿತ್ವದ ಮೂಲಕ, ಕಲ್ಯಾಣಿಯ ವ್ಯಕ್ತಿತ್ವವು ಈ ಮೂವರು ಗೆಳೆಯರ ವ್ಯಕ್ತಿತ್ವಗಳ ಮೂಲಕ ಅನಾವರಣಗೊಳ್ಳುತ್ತದೆ. ಕಲ್ಯಾಣಿಯ ವ್ಯಕ್ತಿತ್ವವು ಈ ಮೂವರಲ್ಲಿ ಪ್ರತಿಫಲನಗೊಳ್ಳುವುದಕ್ಕೂ, ಈ ಮೂವರ ವ್ಯಕ್ತಿತ್ವವು ಕಲ್ಯಾಣಿಯ ಮೂಲಕ ಪ್ರತಿಫಲನಗೊಳ್ಳುವುದಕ್ಕೂ ಇರುವ ಅಂತರವು ಇಲ್ಲಿ ಸೂಕ್ಷ್ಮವಾಗಿ ದಾಖಲಾಗಿದೆ. ಈ ಮೂವರು ವ್ಯಕ್ತಿಗಳ ನಡುವಿನಲ್ಲಿ ಕಲ್ಯಾಣಿ ತನ್ನ ವ್ಯಕ್ತಿತ್ವದ ಮೂರು ಅಪೂರ್ಣ ಅಂಶಗಳನ್ನು ಕಾಣುತ್ತಾಳೆ. ಅಂತೆಯೇ ಅವಳು ಅವರಲ್ಲಿ ಯಾರನ್ನೂ ಆರಿಸುವುದಿಲ್ಲ. ಇಲ್ಲಿ ತನ್ನ ವ್ಯಕ್ತಿತ್ವದ ಸ್ಪಷ್ಟ ಅರಿವು ಇರುವ ಹೆಣ್ಣು ಅದನ್ನು ಆ ಯುವಕರ ವ್ಯಕ್ತಿತ್ವಗಳಲ್ಲಿ ಅರಸುವುದರ ಮೂಲಕ ಅವರಲ್ಲಿರುವ ಕೊರತೆಗಳನ್ನು ಮನಗಾಣುತ್ತಾಳೆ. ಈ ದೃಷ್ಟಿಯಿಂದ ಇದೊಂದು ವಿಶಿಷ್ಟವಾದ ಕತೆ.

ರಾಜಲಕ್ಷ್ಮಿಯವರ ಕತೆಗಳ ವಿಶೇಷತೆ ಇರುವುದು ಅವರು ನಿರ್ಮಾಣ ಮಾಡು ಕಥಾ ಸನ್ನಿವೇಶಗಳಲ್ಲಿ. ಬ್ರಾಹ್ಮಣ ನೆಲೆಯಿಂದ ಬಂದಂತಹ ರಾಜಲಕ್ಷ್ಮಿಯವರು ವಿಭಿನ್ನವಾದ ಆಧುನಿಕ ಧೋರಣೆಗಳಿಗೆ ತೆರೆದುಕೊಂಡಿದ್ದವರು. ಹೀಗಾಗಿಯೇ ಭಿನ್ನ ಭಿನ್ನ ನೆಲೆಗಳಿಂದ ಬಂದಂತಹ ವಾತಾವರಣವನ್ನು ತಮ್ಮ ಕತೆಗಳಲ್ಲಿ ಸೃಷ್ಟಿಸುತ್ತಾರೆ. ಒಂದು ಕಡೆ ಕಮ್ಯುನಿಸಂ ಕುರಿತಾದ ಕಾಳಜಿ (ಇಲ್ಲ ಇಲ್ಲ) ಇನ್ನೊಂದು ಕಡೆ ಗ್ರೀಕ್ ನಾಟಕದ ಪ್ರಭಾವ (ಫೀಡ್ರಾ, ಅವೇ ಮರಿಯಾ) ಮತ್ತು ಕ್ರೈಸ್ತ ಹಾಗೂ ಬುದ್ಧರ ಉದಾರವಾದೀ ದರ್ಶನ ಇವು ಇವರ ಕತೆಗಳ ಸನ್ನಿವೇಶ ನಿರ್ಮಾಣಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದು ಅವರ ಕತೆಗಳ ಅನನ್ಯತೆಗೂ ಸಾಕ್ಷಿಯಾಗಿದೆ. ಉದಾಹರಣೆಗೆ ‘ಅವೇ ಮರಿಯಾ’ ಕತೆಯಲ್ಲಿ, ಟೋನಿಯ ಬದುಕಿನಲ್ಲಿ ಉಂಟಾಗುವ ಮಹತ್ತರ ಮಾರ್ಪಾಡಿಗೆ ಕಾರಣವಾಗುವುದು ಚರ್ಚ್‌ವೊಂದರ ವಾತಾವರಣ. “ಮೇಳದವರು ಕಡೆಯದಾಗಿ ಕ್ರೀಡೋವನ್ನು ಹಾಡಲಾರಂಭಿಸಿದರು. ಮೊಲ್ಲೆದಳ ಮೃದುಮಾಡಿದ ಮೈಮನಗಳನ್ನು ಸವರಿತು. ನವಿಲುಗರಿಯ ಬೀಸಣಿಗೆಯ ಗಾಳಿ. ದೇವತೆಗಳ ರೆಕ್ಕೆ ಸ್ಪರ್ಶ, ಮೇಳದ ಕಡೆಯ ಸಾಲನ್ನು ಒಂದು ಕಂಠದಿಂದ ಹಾಡಿತು. ಅಮೆನ್.. ಅಮೆನ್..! ತಗ್ಗು ದನಿಯಲ್ಲಿ ತೇಲಿ ಬಂತು ವಿಶ್ವಾಸ ತುಂಬಿದ ಆಶೀರ್ವಾದ, ತಲೆ ತಡವಿತು ಕೈ. ಇನಿಯಳ ಬೆಂಕಿ ಸ್ಪರ್ಶವಲ್ಲ. ಶಾಂತಿ ಲೇಪಿಸಿದ, ಶಾಂತಿಲೇಪಿಸುವ ವೃದ್ಧ ತಾಯಿಯದು, ತಂದೆಯದು, ಅಜ್ಜಿಯದು, ಅಜ್ಜನದು. ದೀರ್ಘ ಬಯಕೆ ಬಸಿಯುವ ಕೈಯಲ್ಲ…. ಆದರೆ ಈ ಶಾಂತ, ದೀರ್ಘ ಪ್ರೇಮದಲ್ಲಿ ಬಿರುಕಿಲ್ಲ. ತಡೆಯಿಲ್ಲ, ಮಧ್ಯವಯಸ್ಸಿನ ಪ್ರೇಮ…. ಥೀಸಿಯಸ್, ಹಿಪೊಲೈಟಾರ ನಿಶ್ಚಿತ ಪ್ರೇಮ…. ಅಸ್ಥಿರತೆ ಇಲ್ಲ ಸಂದೇಶ ಸಂಶಯಗಳಿಲ್ಲ. ನಿಸ್ಸಂದೇಹವಾದ ನಂಬಿಕೆ ಇದೆ, ಶ್ರದ್ಧೆಯಿದೆ, ಶಾಂತಿಯಿದೆ” (ಪು 27) ಚರ್ಚಿನ ಪ್ರಾರ್ಥನಾ ಮಂದಿರದೊಳಗಿನ ಈ ಸನ್ನಿವೇಶವು ಟೋನಿಯ ಮನಸ್ಸನ್ನು ಪ್ರತಿಫಲಿಸುತ್ತದೆ. “ದುಃಖಕ್ಕೆ, ಕಷ್ಟಕ್ಕೆ, ಪ್ರೇಂದ ಸಾವಿಗೆ ಕಾರಣ ಕಾಲ ಎಂದುಕೊಂಡಿದ್ದೆನಲ್ಲ? ಎಂತಹ ಮೂರ್ಖ ನಾನು” ಎನ್ನುವ ಟೋನಿಯ ಅಂದಿನ ಸ್ಫೋಟಕ್ಕೆ ಕಾರಣವಾಗುವ ಈ ಸನ್ನಿವೇಶ ಮರಿಯಾಳ ಬಗೆಗಿನ ಅವನ ಮೋಹ ಅದಮ್ಯ ಪ್ರೇಮವಾಗಿ, ಸಾವಿಲ್ಲದ ಸಂದೇಹಗಳಿಲ್ಲದ ಪ್ರೇಮವಾಗಿ ವಿಸ್ತೃತಗೊಂಡಿದ್ದನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುತ್ತದೆ.

ಸನ್ನಿವೇಶ ನಿರ್ಮಾಣ ಮಾಡುವಲ್ಲಿ ಇರುವ ರಾಜಲಕ್ಷ್ಮಿಯವರ ಪ್ರತಿಭೆಯನ್ನು ಇನ್ನೊಂದು ಉದಾಹರಣೆಯ ಮೂಲಕ ವಿವರಿಸುವುದಾದರೆ ಅದು ‘ವೈಶಾಖ ಶುದ್ಧ ಪೂರ್ಣಿಮೆ’ ಕತೆಯಲ್ಲಿ ಬರುವ ಸಾಲುಗಳು “ಬೆಳದಿಂಗಳು ಬುದ್ಧನಿಗೆ ಪ್ರಭಾವಳಿ ಹೆಣೆದಿತ್ತು. ಶುಭ್ರವಸ್ತ್ರವನ್ನು ತೊಡಿಸಿತ್ತು. ಕಿಟಕಿಯಿಂದ ಕೋಣೆಯೊಳಗೆ ಓಡಿಬಂದ ಚಂದ್ರಕಿರಣಗಳು ಗಾಜಿನ ತೆರೆಯನ್ನೂ ತೂರಿ ಪ್ರತಿಮೆಯ ಒಳ ಸೇರಿದವು.. ಬುದ್ಧ ಬೆಳದಿಂಗಳ ಮಾತಿನಲ್ಲಿ ನುಡಿದ; ಒಲವು ಮರಣ ಹೊಂದಿದಾಗ ಅಥವಾ ನಮ್ಮ ಪಾಲಿಗೆ ಇಲ್ಲವಾದಾಗ ಸುಂದರ ಪ್ರತಿಮೆ ಚೂರು ಚೂರಾಯಿತು ಎಂದು ತಿಳಿಯುತ್ತೇವೆ. ಸ್ವಲ್ಪಕಾಲ ಕಳೆದನಂತರ ನಿಜ ಸ್ಥಿತಿಯ ಅರಿವಾಗುತ್ತದೆ. ಪ್ರತಿಮೆ ಒಡೆಲಿಲ್ಲ; ಒಂದು ಚೂರು ಮಾತ್ರ ಮಾಯವಾಗಿದೆಯಷ್ಟೇ (ಪು. 42,43) ಈ ಕತೆಯ ಕೊನೆಯಲ್ಲಿ ಬರುವ ಮೇಲಿನ ಸಾಲುಗಳೂ ಅಷ್ಟೇ, ನಾಯಕಿಗೆ ಸತ್ಯದ ಸ್ವರೂಪವನ್ನು ತೆರೆದು ತೋರಿಸುವ ಸಾಲುಗಳು. ಭ್ರಮೆಯಲ್ಲಿದ್ದ ಅವಳ ಮನಸ್ಸು ಮಾಗಿದ ಸ್ಥಿತಿಯನ್ನೂ, ಪರಿವರ್ತನೆಗೊಳ್ಳುತ್ತಿರುವ ಹಂತವನ್ನೂ ಬಹಳ ಸಮರ್ಥವಾಗಿ ಬುದ್ಧ ಹಾಗೂ ಬೆಳದಿಂಗಳ ಚಿತ್ರ ಕಟ್ಟಿಕೊಡುತ್ತದೆ. ಅದುವರೆಗೂ ಅಮಾವಾಸ್ಯೆಯ ಕತ್ತಲಿನಲ್ಲಿ ಕಳೆದಿದ್ದ ಅವಳ ಬದುಕಿನಲ್ಲಿ ಚಂದ್ರೋದಯವಾದುದನ್ನು ಸಾಂಕೇತಿಕವಾಗಿ ಈ ಸಾಲುಗಳು ಧ್ವನಿಸುತ್ತವೆ. ನಿಸರ್ಗದ ಅನುಭವವೊಂದು ಅವಳಲ್ಲಿ ಹೊಸ ಅರಿವನ್ನು ಹುಟ್ಟಿಸಿದೆ. ಅದರಿಂದ ಜಾಗೃತಳಾದ ಅವಳು ಹಿಂದೆ ನೋಡದಂತೆ ತನ್ನ ಭವಿಷ್ಯದ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುತ್ತಾಳೆ.

ಒಟ್ಟಿನಲ್ಲಿ ರಾಜಲಕ್ಷ್ಮಿಯವರ ಪ್ರಮುಖ ಪಾತ್ರಗಳು ಸಿದ್ಧಮಾದರಿಗಳ ಪ್ರಕರಗಳಾಗದೇ ಸಮಾಜದ ಸ್ವೀಕೃತ ಮೌಲ್ಯಗಳನ್ನು ಪ್ರಶ್ನಿಸುವ ಅದಕ್ಕೆ ಮುಖಾಮುಖಿಯಾಗುವ ವಿಶಿಷ್ಟ ಪಾತ್ರಗಳಾಗುತ್ತವೆ. ಇಲ್ಲಿ ಭ್ರಮೆ ಮತ್ತು ವಾಸ್ತವಗಳ, ವ್ಯಕ್ತಿಗತ ನಂಬಿಕೆ ಹಾಗೂ ಸಾಮಾಜಿಕ ನಂಬಿಕೆಗಳ ನಡುವೆ ತಿಕ್ಕಾಟವಿದೆ. ಈ ತಿಕ್ಕಾಟಗಳು, ಸಂಘರ್ಷಗಳು ಬದುಕಿಗೆ ಸಹಜವಾದದ್ದು, ಬಯಸಿದ್ದನ್ನು ಪಡೆಯಲು ನಡೆಸುವ ಪ್ರಾಮಾಣಿಕ ಪ್ರಯತ್ನಗಳ ಪ್ರತೀಕಗಳಾಗಿವೆ. ಇವು ಇಂತಹ ಸಂಘರ್ಷಗಳನ್ನು ಮೀರಿ ವಾಸ್ತವಿಕತೆಯತ್ತ ಹೊರಳಿಕೊಳ್ಳುತ್ತವೆ. ಇಲ್ಲಿ ಮದುವೆ, ಪ್ರೇಮ ಕಾಮಗಳು ವೈಭವೀಕರಣಗೊಳ್ಳದೇ, ಅತಿರೇಕಕ್ಕೆ ಹೋಗದೇ ಪ್ರಕೃತಿಗೆ ಸಹಜವಾಗಿ ಮಣಿಯುತ್ತವೆ. ಈ ಕತೆಗಳು ಪ್ರೇಮದ ವಿವಿಧ ಮಗ್ಗಲುಗಳನ್ನು ಪರಿಚಯಿಸಿದರೂ ಈ ಕತೆಗಳ ಒಳಪ್ರವಾಹದಲ್ಲಿ ಹರಿಯುವ ಧ್ವನಿಯೊಂದಿದೆ. ಅದೆಂದರೆ ಇಲ್ಲಿನ ಎಲ್ಲಾ ಸಂಬಂಧಗಳು ಕೊನೆಗೆ ಅನಿರ್ಭಂಧಿತ ಪ್ರೇಮದ ಸ್ವರೂಪದಲ್ಲಿ ತಮ್ಮ ಬದುಕಿನ ಅರ್ಥವನ್ನು ಕಂಡುಕೊಳ್ಳಲು ಪ್ರಯತ್ನಪಡುತ್ತವೆ. ಮದುವೆ, ಗಂಡು ಹೆಣ್ಣುಗಳ ಸಂಬಂಧ ಈ ಯಾವುದೂ ಆತ್ಯಂತಿಕವಾದುದಲ್ಲ. ಅದರೊಡನೆ ಇರುವ ಅಗಾಧ ಪ್ರೇಮ ಮಾತ್ರ ಆತ್ಯಂತಿಕವಾದುದು ಎನ್ನುವ ಧ್ವನಿ ಈ ಕತೆಗಳ ಆಳದಲ್ಲಿ ಪ್ರವಹಿಸುತ್ತಿರುವಂತೆ ಭಾಸವಾಗುತ್ತದೆ.

ಈ ಕತೆಗಳು ವ್ಯಕ್ತಿ ಕೇಂದ್ರಿತವಾದದ್ದು. ಇವರ ಕತೆಗಳಲ್ಲಿ ನವೋದಯ ಮತ್ತು ನವ್ಯ ಈ ಎರಡರ ಸಮನ್ವಯ ದೃಷ್ಟಿಕೋನವನ್ನು ಕಾಣಬಹುದು. ಈ ಕತೆಗಳಲ್ಲಿನ ಪಾತ್ರಗಳ ಸಂಘರ್ಷಾತ್ಮಕ ಬದುಕು, ಕತೆಗಳ ಬಂಧ, ಪ್ರತಿಮೆಗಳಿಂದ ಕೂಡಿದ ಕಾವ್ಯಾತ್ಮಕ ಭಾಷೆ, ವಾತಾವರಣ ನಿರ್ಮಾಣ ಇವು ನಿಸ್ಸಂಶಯವಾಗಿ ನವ್ಯರಿಗೆ ಹತ್ತಿರವಾಗಿದೆ. ಆದರೆ ನವ್ಯರಂತೆ ಇಲ್ಲಿ ಹತಾಶೆ, ಅನಾಥ ಪ್ರಜ್ಞೆ, ಹಳಹಳಿಕೆಗಳಿಲ್ಲ. ಇಲ್ಲಿನ ಪಾತ್ರಗಳು ನವೋದಯದವರಂತೆ ನಿಸರ್ಗದ ಮಡಿಲಲ್ಲಿ ತಮ್ಮನ್ನು ಅನಾವರಣಗೊಳಿಸುತ್ತವೆ. ಆದರೆ ಇಲ್ಲಿ ಕೇವಲ ನಿಸರ್ಗಕ್ಕಾಗಿ ನಿಸರ್ಗ ಬರದೇ ಅದು ಆಯಾ ಪಾತ್ರಗಳ ಮನೋಪಾತಳಿಯನ್ನು ಪ್ರತಿಫಲಿಸುವ ಸಾಧನವಾಗಿ ಬರುತ್ತವೆ. ಇಲ್ಲಿನ ಕತೆಗಳು ಇತ್ಯಾತ್ಮಕವಾದ ನೆಲೆಗೆ ತಲುಪುತ್ತವೆ. ಆದರೆ ಈ ಆಶಾವಾದಿ ನೆಲೆ ಭೋಳೇತನದಿಂದ ಬಂದುದಲ್ಲ. ಪರಸ್ಪರ ವಿರುದ್ಧ ಮೌಲ್ಯಗಳೊಡನೆ ಸೆಣಸಾಡಿ, ಸಂಘರ್ಷದ ನಂತರ ವಾಸ್ತವಿಕತೆಗೆ ಹೊರಳಿಕೊಳ್ಳುವ ಈ ಕತೆಗಳು ಆರೋಗ್ಯಪೂರ್ಣ ದೃಷ್ಟಿಯನ್ನುಳ್ಳವುಳಾಗಿವೆ.

ವೆಂಕಟಲಕ್ಷ್ಮಿ ತಮ್ಮ ಪುಸ್ತಕದಲ್ಲಿ ಬರೆಯುತ್ತಾರೆ, “ಮುಪ್ಪಾಗದಿದ್ದರೂ ಮುಪ್ಪಿನ ಮುಸುಕು, ದೇಹದಲ್ಲಿ ಇನ್ನೂ ಧಾರ್ಢ್ಯವಿದ್ದರೂ ನಿಲಿಪ್ತ ಮನೋಭಾವ, ವಿರಾಗಿಣಿಯಂತೆ ಉಡುಗೆ ತೊಡುಗೆ, ಬಿಳಿ ಸೀರೆ, ಬಿಳಿ ಕುಪ್ಪಸ, ಬೋಳು ಹಣೆ, ಬೋಳು ಕೈ, ಜೀವಂತಿಕೆಯನ್ನು ಹೊಮ್ಮಿಸುವ ಸಂಗಮದ ಕರ್ತೃ ಈಕೆಯೇ ಎಂದು ವಿಸ್ಮಯ ಹುಟ್ಟಿಸುವಂತಹ ನಡವಳಿಕೆ” (ನೆಲೆಬೆಲೆ 147). ರಾಜಲಕ್ಷ್ಮಿ ಸೃಷ್ಟಿಸಿದ ಪಾತ್ರಗಳೆಲ್ಲ, ಬದುಕಿಗೆ, ಜೀವಂತಿಕೆಗೆ ಹೊರಳಿಕೊಂಡವು, ನಿಸರ್ಗಕ್ಕೆ ಮಣಿದವು. ಈ ಬದುಕನ್ನು, ಲೌಕಿಕವನ್ನು ಪ್ರೀತಿಸಿದವು. ವಿಪರ್ಯಾಸವೆಂದರೆ ರಾಜಲಕ್ಷ್ಮಿಯವರು ಮಾತ್ರ ಈ ಬದುಕನ್ನು ಪ್ರೀತಿಸಲಿಲ್ಲ. ತಾವು ಪ್ರೀತಿಸಿದ ಕತೆಗಳನ್ನು ಪೋಷಿಸದೇ ಒಣಗಿಸಿಬಿಟ್ಟರು.

ರಾಜಲಕ್ಷ್ಮಿಯವರು ಒಂದಾನೊಂದು ಕಾಲದಲ್ಲಿ ಇಂದು ನಾವು ವಾಸಿಸುತ್ತಿರುವ ಈ ಕಲ್ಯಾಣ ಶಹರದಲ್ಲಿಯೇ (ಮಹಾರಾಷ್ಟ್ರ) ಇದ್ದರು ಎಂಬುದನ್ನು ನೆನೆದಾಗ ಮೈ ಜುಮ್ಮೆನ್ನುತ್ತದೆ. ‘ಅವೇ ಮರಿಯಾ’ ದಂತಹ ಉತ್ತಮ ಕತೆಯನ್ನು ಬರೆಯಲು ಇದೇ ಕಲ್ಯಾಣ್ ಶಹರದಲ್ಲಿರುವ ಚರ್ಚಿನಿಂದ ಈಸ್ಟರ್ ಹಬ್ಬದ ಸಮಯದಲ್ಲಿ ತೇಲಿ ಬರುತ್ತಿದ್ದ ಸಂಗೀತವೇ ಪ್ರೇರಣೆಯಾದದ್ದು ಎಂಬುದನ್ನು ಓದಿದಾಗಲಂತೂ ರಾಜಲಕ್ಷ್ಮಿಯವರು ಇಲ್ಲೆಲ್ಲೋ ಅವರು ಓಡಾಡಿರಬಹುದಾದಂತಹ ಜಾಗಗಳನ್ನು ಕಲ್ಪಿಸಿಕೊಳ್ಳುತ್ತ ಈ ಶಹರದ ಜನಜಾತ್ರೆಯಲ್ಲಿ ನಾನು ಕಳೆದು ಹೋಗುತ್ತೇನೆ.