ನಾನಾಗ ಎಷ್ಟು ಪರಿಚಿತ ಆಗಿದ್ದೆ ಎಂದರೆ… ಯಾವತ್ತೂ ಅತ್ತು ಅತ್ತೂ; ಕಣ್ಣೀರ ಬರೆ ಇಳಿದು ಇಳಿದು ಉಳಿದು ಮಚ್ಚೆಯಂತೆ ಕೆನ್ನೆ ಮೇಲೆ ಬರೆಯ ಗುರುತು ಇರುತ್ತಿತ್ತು. ನಾವಾಗ ಮುಖ ತೊಳೆವುದೆಲ್ಲಿತ್ತು. ಕಣ್ಣೀರೇ ಅಂಟಿರುತ್ತಿದ್ದವು. ನನ್ನ ತಾಯ ಸಂಗಡವೇ ನನಗೆ ಸಿಗುತ್ತಿರಲಿಲ್ಲ. ಸದಾ ಯಾವತ್ತೂ ಕಸಮುಸುರೆಯ ಕೆಲಸದ ಜೀತದವಳಂತಿದ್ದಳು. ನನ್ನ್ ತಮ್ಮನ ಅವರು ದತ್ತು ತೆಗೆದುಕೊಂಡು ಹೋದ ನಂತರ ಮತ್ತೂ ಮೆತ್ತಗಾಗಿ ಬಿಟ್ಟಿದ್ದಳು.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶʼ ಸರಣಿಯ ಹತ್ತನೆಯ ಕಂತು.

ತಮ್ಮನ ದತ್ತು ದಿನದ ಹಬ್ಬ ಮುಗಿದಿತ್ತು. ತಾಯಿ ಒಣಗಿದ್ದಳು. ಅಪ್ಪ ಬೀಗುತಿದ್ದ. ದತ್ತು ಪಡೆದ ಸುಖದಲ್ಲಿ ದೊಡ್ಡಣ್ಣ ಹಲವರಿಗೆ ಗರಿಗರಿಯಾದ ಹೊಸ ನೋಟುಗಳ ಕಟ್ಟು ಬಿಚ್ಚಿ ಕೊಡುತ್ತಿದ್ದ. ತಮ್ಮನ ಐಭೋಗವೇ  ಐಭೋಗ. ಇದು ನಿಜವೇ ಎನಿಸುತಿತ್ತು. ತಾತನಿಗೆ ಏನೊ ಹೆಮ್ಮೆ. ಸಿಂಗರಿಸಿದ್ದ ಕುದುರೆ ಗಾಡಿ ಹೊರಡಲು ಸಜ್ಜಾಗಿತ್ತು. ಮಗನ ಕಳಿಸಿಕೊಡಲು ಇವಳಿಗೆ ಇಷ್ಟ ಇಲ್ಲ ಎಂದು ಎಲ್ಲರಿಗು ಗೊತ್ತಿತ್ತು. ಬೀದಿಯವರೆಲ್ಲ ಬೀಳ್ಕೊಟ್ಟರು. ತಮ್ಮ ರಾಜರ ಮಗನಂತೆ ಕಾಣುತಿದ್ದ. ತಾಯಿ ವಿಪರೀತ ಅಳುತ್ತಿದ್ದಳು. ‘ಕಳ್ಳ ಕಿತ್ತುಕೊಡುವಾಗ ನೋವಾಗದೇ ಇರುತ್ತದೆಯೇ’ ಎಂದು ಮಡಕೂಸಮ್ಮ ಸಮಾಧಾನದ ಮಾತಾಡುತ್ತಿದ್ದಳು. ಇಡೀ ಊರಾದ ಊರಿಗೆಲ್ಲ ಅವಳೆ ಹೆರಿಗೆ ಮಾಡಿಸುವವಳು. ಅವಳಿಗೆ ದೊಡ್ಡ ಸ್ಥಾನ ಇತ್ತು. ತಮ್ಮನ ಹೆರಿಗೆ ವೇಳೆ ನನ್ನ ತಾಯಿ ಸಾವು ಬದುಕಿನಲ್ಲಿ ನರಳಾಡಿ ಸಾವ ಗೆದ್ದಿದ್ದಳಂತೆ! ಅಷ್ಟು ಕಷ್ಟದ ಹೆರಿಗೆ. ಮಡಕೂಸಮ್ಮ ಅಸಾಮಾನ್ಯ ಹೆರಿಗೆ ಹೆಂಗಸು. ಬಚಾವು ಮಾಡಿ ತಾಯಿ ಮಗು ಇಬ್ಬರನ್ನೂ ಉಳಿಸಿದ್ದಳು.

ಹೆರಿಗೆ ಬೇನೆಯ ಕಂಡು ಹೆರಿಗೆ ಮಾಡಿಸಿದವರಿಗೆ ಹೊಕ್ಕುಳುಬಳ್ಳಿಯ ಕತ್ತರಿಸಿ ರಕ್ತ ಸಿಕ್ತ ಮೈಯ ತೊಳೆದು ಮೊರದಲ್ಲಿ ಮಲಗಿಸಿದ್ದವರಿಗೆ ನಿಜವಾಗಿಯೂ ತಾಯ್ತನದ ದರ್ಶನವಾಗಿರುತ್ತಿತ್ತು, ಅಹಾ! ಆ ಸುಖಾ ನೋವೂ ನಿರಾಳತೆಯೂ ತಾಯ್ತನದ ದರ್ಶನವಾಗಿರುತ್ತದೆ. ಅಹಾ! ಆ ಸುಖಾ ನೋವೂ ನಿರಾಳತೆ, ಧನ್ಯತೆ ಗಂಡಸರ ಶಬ್ದಕೋಶಗಳಲ್ಲಿ ಇಲ್ಲಾ. ಜೀವದಿಂದ ಜೀವ! ಹುಟ್ಟಿ ಬರುವ ವಿಸ್ಮಯ ನಮ್ಮ ಅಳತೆಗೆ ಮೀರಿದ್ದು! ಇನ್ನಷ್ಟು ಗಳಿಗೆ ಬಿಟ್ಟಿದ್ದರೆ ಹೊಟ್ಟೆಯಲ್ಲೆ ಮಗು ಸತ್ತು ಹೋಗುತ್ತಿತ್ತು. ತಾಯಿ ಜೀವ ಗಂಟಲಿಗೆ ಬಂದು ಬಿಕ್ಕುತ್ತಿತ್ತು. ಮಡಕೂಸಮ್ಮ ಅದಕ್ಕೆ ದೊಡ್ಡವಳು. ನಾಚಿಕೆಯೇ, ಮಾನ ಮರ್ಯಾದೆಯೇ, ಮುಚ್ಚು ಮರೆಯೇ; ಬರಿದೇ ಬೆತ್ತಲೆ ಬಹಿರಂಗದ ಬಯಲು ಹೆರಿಗೆ ಹೆಂಗಸವಳು. ಅವಳ ಮುಂದೆ ಅಂಗಾಂಗ ಮರೆಯೇ! ಪ್ರತಿಯೊಬ್ಬ ಹೆಣ್ಣಿನ ಮರ್ಮಾಂಗಗಳ ಕಂಡಿದ್ದಳು ಅವಳು. ಅಹಾ! ಎಷ್ಟು ಚೆಲುವು ಎನ್ನಲೇ… ಆ ಹೆಣ್ಣು ಮಕ್ಕಳ ಗುಪ್ತಾಂಗಗಳ ಸಂರಕ್ಷಕಿಯೇ ಅವಳಾಗಿದ್ದಳು. ಎಲ್ಲ ಗಾಯಗಳಿಗೂ ಮದ್ದು ಮಾಡಿ ತಂದು ಹಚ್ಚಿ ತೊಳೆದು ಜತನ ಮಾಡುತ್ತಿದ್ದುದು ಊರಿಗೆಲ್ಲ ಅವಳೊಬ್ಬಳೇ! ತರಾವೆರಿ ಯೋನಿಗಳು! ಯಕಶ್ಚಿತ್ ಗಂಡಸರ ಸಂಭೋಗ ಕ್ರಿಯೆಗಳಿಗೆ ಅರ್ಥವಿದೆಯೇ ಸುಖವಿದೆಯೇ…… ಧನ್ಯತೆ ಇದೆಯೇ.. ಮಡಕೂಸಮ್ಮನಿಗೆ ಅದರಿಂದಲೇ ಗಂಡಸರ ಗಂಡಸ್ತನದ ಬಗ್ಗೆ ತಿರಸ್ಕಾರ. ಆ ನೋವೂ… ತಿಂಗತಿಂಗಳ ಮಾಸು ಬಸರು ಗರ್ಭದ ಕಸವೆಲ್ಲ ಸೋರಿ ಹೋಗುವುದು ಸೂಯಾಸ್ತವೇ ಚಂದ್ರಾಸ್ತವೇ… ಬರಿದೆ ಗಂಡಸರ ವ್ಯರ್ಥ ದುರಂಕಾರದ ಬಗ್ಗೆ ದವೇ…? ಬಾಗಿಲು ಮುಚ್ಚಿಕೊಂಡ ಗರ್ಭ ಬಾಗಿಲು ತೆರೆದಾಗ ಮಾನವ ದನಿ! ಕಾಮದನಿ. ಹೆಣ್ಣೊ ಗಂಡೊ ನಿರಾಳ ಹೆರಿಗೆಯ ನಿಟ್ಟುಸಿರ ದುಃಖಳಿಕೆ… ಎದೆಗೆ ಬಾಯೂಸುವ ಬಯಕೆ. ನೊಂದ ಅರೆಗಳಿಗೆಯಲ್ಲೇ ಎದೆಯ ಬಾರ ಇಳಿವುದು ಹಸಿಗೂಸಿನ ಬಾಯಿಂದ! ಇದರಿಂದಲೇ ದೇವರೇ ನೀನಿರಬಹುದು ಎಂಬ ಅನುಮಾನ! ಮಡಕೂಸಮ್ಮ ಹೆರಿಗೆ ಕೈ ಕೊಟ್ಟಾಗ ವಿಧಿಯಮ್ಮನಿಗೆ ಶಾಪ ಹಾಕುತಿದ್ದಳು.

ಎಷ್ಟೋ ಕಷ್ಟದ ಹೆರಿಗೆಯಲ್ಲಿ ತಾಯಿ ಸತ್ತು ಮಗು ಬದುಕಿದ್ದನ್ನು ಕಂಡಿದ್ದಳು. ಅಂತಹ ತಬ್ಬಲಿ ಕೂಸುಗಳ ತಾನೇ ಜೋಪಾನ ಮಾಡುತ್ತಿದ್ದಳು. ಅಂತಹ ಮಕ್ಕಳು ಸುತ್ತೇಳು ಹಳ್ಳಿಗಳಲ್ಲಿ ಅವಳಿಗೆ ಎಷ್ಟೋ… ಲೆಕ್ಕ ಗೊತ್ತಿಲ್ಲ. ಅವಳೇ ಮರೆತಿದ್ದಳು. ಎಂದಾದರೂ ಬಂದು ಅವ್ವಾ ಎಂದು ಮಾತಾಡಿಸಿ ಹೋಗುತ್ತಿದ್ದರು. ಎಂತಹ ದುರ್ದೈವ! ಅವಳಿಗೆ ಒಂದೇ ಒಂದಾದರೂ ಹೆಣ್ಣು ಮಗುವಾದರೂ ಹುಟ್ಟಿರಲಿಲ್ಲ. ಬಂಜೆ ಎನ್ನುತಿದ್ದರು. ಆದರೆ ಊರ ಒಂದು ತಲೆಮಾರಿನ ಹೆರಿಗೆಯನ್ನೇ ಅವಳು ಮಾಡಿಸಿದ್ದಳು. ಹೆತ್ತವರಷ್ಟೇ ಮುಖ್ಯ ಹೆರಿಗೆ ಮಾಡಿಸಿದವರು ಎಂದು ಯಾರಿಗೆ ತಾನೆ ನೆನಪಿದೆ. ನನ್ನ ತಮ್ಮನೂ, ನಾನೂ ಅವಳ ಕೈಯಾರೆ ಹುಟ್ಟಿದವರು. ನನ್ನ ಪುಣ್ಯ ಅದು. ಆ ಮಡಕೂಸಮ್ಮನೋ… ಎಲ್ಲಾದರು ಕಂಡರೆ ನನ್ನ ಸೆಳೆದು ಎದೆಗೊತ್ತಿ ಸೆರಗಿಂದ ಕಣ್ಣ ಪಿಸರೆಯ ಒರೆಸಿ ಗೊಣ್ಣೆ ಮೂಗ ಉಗುಳಿಂದಲೊ, ನೀರಿನಿಂದಲೊ ತೊಳೆದು ‘ಶಾಲೆಯ ಬಿಡಬ್ಯಾಡ; ನಾಕೇ ನಾಕು ಅಕ್ಷರವ ಕಲಿತಿಕೊ; ಲೋಕವನ್ನೇ ಆಳಬಹುದು’ ಎಂದು ಎಲೆ ಅಡಿಕೆಯ ಬಾಯಲ್ಲಿ ರಸ ತುಂಬಿಕೊಂಡು ಆಕೆ ಹಾರೈಸುವಾಗ ಅಳು ಬಂದುಬಿಡುತ್ತಿತ್ತು.

ನಾನಾಗ ಎಷ್ಟು ಪರಿಚಿತ ಆಗಿದ್ದೆ ಎಂದರೆ… ಯಾವತ್ತೂ ಅತ್ತು ಅತ್ತೂ; ಕಣ್ಣೀರ ಬರೆ ಇಳಿದು ಉಳಿದು ಉಳಿದು ಮಚ್ಚೆಯಂತೆ ಕೆನ್ನೆ ಮೇಲೆ ಬರೆಯ ಗುರುತು ಇರುತ್ತಿತ್ತು. ನಾವಾಗ ಮುಖ ತೊಳೆವುದೆಲ್ಲಿತ್ತು. ಕಣ್ಣೀರೇ ಅಂಟಿರುತ್ತಿದ್ದವು. ನನ್ನ ತಾಯ ಸಂಗಡವೇ ನನಗೆ ಸಿಗುತ್ತಿರಲಿಲ್ಲ. ಸದಾ ಯಾವತ್ತೂ ಕಸಮುಸುರೆಯ ಕೆಲಸದ ಜೀತದವಳಂತಿದ್ದಳು. ನನ್ನ್ ತಮ್ಮನ ಅವರು ದತ್ತು ತೆಗೆದುಕೊಂಡು ಹೋದ ನಂತರ ಮತ್ತೂ ಮೆತ್ತಗಾಗಿ ಬಿಟ್ಟಿದ್ದಳು. ನನ್ ಮಗನ ದತ್ತು ವಿಚಾರದಲ್ಲಿ ನೀನು ಉಪೇಕ್ಷೆ ಮಾಡಿ ನನ್ನಣ್ಣನಿಗೆ ಅಪಮಾನ ಮಾಡಿದೆ ಎಂದು ಅಪ್ಪ ಬಲವಾಗಿ ತಾಯಿಗೆ ಬಡಿದಿದ್ದ. ಆ ಏಟುಗಳಿಗಿಂತಲೂ ನೋವಾಗಿದ್ದ ಸಂಗತಿ ಅವಳಿಗೆ ಬೇರೆ ಇತ್ತು.

ಹಿತ್ತಲ ಹೊಂಗೆ ಮರದ ಕೆಳಗೆ ಕೂತಿದ್ದೆವು. ಬೇಸಿಗೆಯ ಕಾಲ. ಹೂ ಬಟ್ಟು ಝೇಂಕರಿಸುತ್ತಿತ್ತು. ಮಡಕೂಸಮ್ಮ ಬಂದಳು. ಇವಳೇ ಸಾಯಬೇಕಿದ್ದವನ ಉಳಿಸಿ ಹೆರಿಗೆ ಮಾಡಿಸಿದವಳು ಎಂದು ಅವಳಿಗೆ ದೊಡ್ಡಣ್ಣ; ನನ್ನ ತಂದೆಯ ಅಣ್ಣ ಮೂಗು ಬೊಟ್ಟು ಉಡುಗೊರೆಯಾಗಿ ನೀಡಿದ್ದ.

‘ಇದಾ ನನಗೆ ಕೊಟ್ಟವರೆ ನೋಡಮ್ಮಿ… ಮೂಗು ಬೊಟ್ಟು ತೊಡುವ ವಯಸ್ಸೆ ನನ್ನದೂ… ಮುದುಕಿಗೇಕೆ ಬೇಕಿದೂ… ಹೆತ್ತವಳು ನೀನು;
ತಕೊ ಹಾಕ್ಕೋ… ನಿನಗಿನ್ನೂ ಪ್ರಾಯವಿದೆ. ನಿನ್ನ ಸಣ್ಣ ಮೂಗಿಗೆ ಈ
ನತ್ತಿನ ಬೊಟ್ಟು ಚೆಂದಾಗಿದೇ… ತಕೊ ಮಗಳೇ’
ತಾಯಿ ಸೌಮ್ಯವಾಗಿ ನಿರಾಕರಿಸಿದ್ದಳು. ಮಗನನ್ನೇ ಕಿತ್ತುಕೊಂಡವರ ಮೂಗು ಬೊಟ್ಟಿನಿಂದ ನನಗೇನು ಸುಖಾ! ಎಂದು ತಾಯಿ ಮಾತಾಡದೆಯೂ ಅರ್ಥವ ಮುಟ್ಟಿಸಿದ್ದಳು.

‘ಗೊತ್ತಾಯ್ತದೆ ಮಗಾ! ಅವತ್ತು ಹೆರಿಗೆ ಆಗುವಾಗ ನೀನೇ ಸಾಯಬೇಕಿತ್ತು ಅಂಗಿತ್ತು ಅವತ್ತಿನ ಸ್ಥಿತಿ. ದೇವರ ದಯದಿಂದ ನೀನೂ ಉಳಿದೆ. ಯಾರ ಮಗ ಅಂತಾರೇ… ನಿನ್ನ ಹೆಸರೇಳದೇ ಬಿಡಲು ಸಾಧ್ಯವೇ…… ನಿನ್ನ ರಕ್ತ ನಿನ್ನದೇ ನಿನ್ನ ಮಗ ಯಾವತ್ತೂ ನಿನ್ನವನೇ… ಗಂಡ ಬೇರೆ ಆಗಬಹುದೂ… ಮಗ ಮಗನೇ ತಾನೇ… ಬೇರೆ ತಾಯ ಹೆಸರ ಹೇಳುವರೇ ಯಾರಾದರೂ…… ತಾಯಿಗೆ ಹುಟ್ಟಿದ ಮಗ ನಿನ್ನ ಮಗಾ… ಅಳಬ್ಯಾಡ ಸುಮ್ಮನಿರೂ.… ಗೊತ್ತಿಲ್ಲದ ಕಂದ. ಅಂದ ಚೆಂದ ಕಣ್ಕಟ್ಟಿಗೆ ಮರುಳಾಗಿ ಮಕ್ಕಳು ಯಾರದೊ ಕೈಗೊಂಬೆ ಆಗಿಬಿಡುತ್ತವೆ! ಆಗಲಿ ಹೋಗಲಿ ಬರಲಿ ಬರದಿರಲಿ ಹೋಗಲಿ ಬಿಡೂ… ಈ ನರಕಕ್ಕಿಂತ ಎಲ್ಲಿಯಾದರೂ ಸುಖವಾಗಿರಲಿ ಬಿಡೂ… ನನ್ನ ಮಗ ನನ್ನ ಮಗನೇ ಅಲ್ಲಾ ಎಂದು ಎದೆಗೆ ಕಲ್ಲು ಹಾಕಿಕೊ… ಹಾಗೇ ಮಾಡಿದ್ದಳು ತಾಯಿ. ತಡವಾಗಿ ಅವಳ ತವರು ಮನೆಗೆ ವಿಷಯ ಗೊತ್ತಾಗಿತ್ತು. ಅಜ್ಜಿ ಮಕ್ಕಳ ಕರೆತಂದು ಜಗಳ ಮಾಡಿಸಿದ್ದಳು. ಅಪ್ಪ ಸೊಪ್ಪು ಹಾಕಿರಲಿಲ್ಲ. ನಾಯಿಗಳು ಬೊಗಳಿ ತೆಗಳುತ್ತವೆ ಎಂದುಕೊಂಡಿದ್ದ. ಅವನಿಗೆ ಹುಟ್ಟಿಸಿದ ಜೀವದ ಬೆಲೆಯೇ ಗೊತ್ತಿರಲಿಲ್ಲ. ಬಾಳೆ ಹಣ್ಣ ತಿಂದು ಸಿಪ್ಪೆ ಬಿಸಾಡಿದಂತೆ ತನ್ನ ಮಗನ ಅಣ್ಣನ ಪಾಲಿಗೆ ದತ್ತುಕೊಟ್ಟು ಮಾರಿಬಿಟ್ಟಿದ್ದ. ಅದರಿಂದ ಅವನಿಗೆ ಹಲವು ಲಾಭಗಳಿದ್ದವು. ಗಂಡಸರದು ಎಷ್ಟೊಂದು ಸರ್ವಾಧಿಕಾರಿ ಲೋಕ!

ಹೊತ್ತಾಗಿತ್ತು. ಮಡಕೂಸಮ್ಮ ನಡೆದಳು. ತಾಯ ತೊಡೆ ಮೇಲೆ ತಲೆ ಇಟ್ಟು ತಂಪು ಹೊಂಗೆ ನೆರಳಲ್ಲಿ ನನಗೆ ನಿದ್ದೆ ಬಂದು ಬಿಟ್ಟಿತ್ತು. ಏನೇನೋ ದೂರ ದೂರದ ದೊಡ್ಡ ವಿಷಯಗಳು. ಅರೆಗೊರಕೆಯಲ್ಲೇ ಹೂಂ ಎಂದು ಕೇಳಿಸಿಕೊಂಡಿದ್ದೆ. ಅರ್ಥವಾಗಲಿಲ್ಲ. ಬೆಳೆವ ಮುನ್ನವೇ ಸತ್ತು ಹೋಗುವ ವ್ಯರ್ಥ ಅರ್ಥಗಳ ತಾಯಂದಿರು ಮಕ್ಕಳಿಗೆ ಹೇಳುವುದಿಲ್ಲಾ… ಹೇಳಿದರೂ ಈಗ ಅದರಿಂದ ಏನು ಪ್ರಯೋಜನ ಎಂಬುದು ಅವರಿಗೆ ಗೊತ್ತು. ಮಕ್ಕಳಿಗೆ ಎಷ್ಟು ಮಾತ್ರ ತಿಳಿಯುತ್ತದೆ. ತಾಯಿ ಎಬ್ಬಿಸಿದ್ದಳು.

ಎಷ್ಟೊಂದು ಸುಖ ತಾಯ ತೊಡೆ ಮೇಲೆ ತಲೆ ಇಟ್ಟು ನಿದ್ರಿಸಿದ ಸುಖ! ಏನೊ ಕಮ್ಮನೆ ಕರುಳು ಬಳ್ಳಿಯ ತಾಯ ಘಮಲು! ದೇವರಿಗೆ ಹಚ್ಚಿಟ್ಟ ಘಮಲಿಗೂ ಅಂತಹ ಸವಿಯಿಲ್ಲಾ… ಧೂಪದೀಪಗಳಿಗೂ ಅಂತಹ ಸೆಳೆತ ವಿಲ್ಲಾ… ತಾಯಿ ತಾಯೇ! ತಾಯ ತಾಳಿ ತಾಳಿ ಹಡೆದವಳ ಋಣ ಬಾರಕ್ಕೆ ಭೂಮಿ ತೂಕವಂತೇ! ಯಾರೊ ಹೇಳಿದ್ದರು. ಅಷ್ಟು ತೂಕವ ನಾವು ಹೊತ್ತುಕೊಳ್ಳಬೇಕು ನೋಡೂ… ಎನ್ನುತ್ತಿದ್ದಳು ಮಡಕೂಸಮ್ಮ. ಆಕೆ ‘ಬರ್ತೀನಿ’ ಎಂದು ಹೊರಟು ಹೋದಳು. ತಾತನ ಹೋಟೇಲಿಗೆ ಈಗವಳು ಸಲೀಸಾಗಿ ಹೋಗುತ್ತಿರಲಿಲ್ಲ. ಮುನಿಸಿಕೊಂಡಿದ್ದಳು.

ಕಾರಣವಿತ್ತು ಅದೊಂದು ಪ್ರಸಂಗ. ಅವಳ ಸಮಸ್ಯೆ ಅದೊಂದೇ, ಜೋರಾಗಿ ಯಾರೇ ಇದ್ದರೂ ನಾಚಿಕೆ ಇಲ್ಲದೆ ಬುರ್ ಎಂದು ಹೂಸಿ ಬಿಡುವುದು. ಯಾರಾದರೂ ಹಂಗಿಸಿದರೆ ಅವಳೊಂದು ಪ್ರಸಿದ್ಧ ಗಾದೆ ಹೇಳುತ್ತಿದ್ದಳು. ಭಾಗಶಃ ಅದು ಅವಳಿಂದಲೇ ಹಟ್ಟಿತೇನೋ! ‘ಊಸು ತಡೆದವನು ಎಡ್ಡ; ಉಚ್ಚೆ ಹಿಡಿದವನು ಹುಚ್ಚಾ;” ಅವಳ ಈ ಗಾದೆ ಎಲ್ಲರಿಗೂ ಗೊತ್ತಿತ್ತು. ಅವುಗಳಿಗೆ ವಿಮೋಚನೆ ಕೊಡದೆ ತಮಗೆ ಬಿಡುಗಡೆ ಇಲ್ಲ ಎಂಬ ವೇದಾಂತ ಅವಳಿಗೆ ಗೊತ್ತಿತ್ತು. ಹೂಸ ಹಿಡಿಯೋಕೆ ಹೋಗಿ ಮಂಡಿ ಮುರಕೊಂಡರು ಎಂಬ ಗಾದೆಯ ಅವಳ ಸಾಂದರ್ಭಿಕ ಅರ್ಥವೇ ಬೇರೆ ಇತ್ತು. ಹೆಂಗಸರ ಹೂಸಿನ ಮರ್ಮ ಹಿಡಿಯಬಾರದು ಎನ್ನುತ್ತಿದ್ದಳು. ಮರ್ಮಕ್ಕೆ ಕೈ ಹಾಕಿದೆಯೋ ಗ್ಯಾರಂಟಿ ಮಂಡಿಮುರಿದುಕೊಳ್ಳುವೆ ಎಂದು ಪ್ರಾಯದವರಿಗೆ ಹೇಳುತ್ತಿದ್ದಳು. ಅವೆಲ್ಲ ಗೊತ್ತಾಗುತ್ತಿರಲಿಲ್ಲ. ಹೂಸಿಗೂ ಮಂಡಿಗೂ ಏನು ಸಂಬಂಧ ಎಂದು ಕೇಳಿದರೆ; ನೀನು ಬೆಳೆದು ಮುಪ್ಪಾಗಿ ಸುಟ್ಟ ಬದನೆಕಾಯಂತಾಗು; ಆಗ ತಿಳಿಯುತ್ತದೆ ಎನ್ನುತ್ತಿದ್ದಳು.

‘ಥೂ; ಕೆಟ್ಟ ಹೆಂಗಸವಳು! ಅವಳ ಜೊತೆ ಅವನ್ನೆಲ್ಲ ಕೆದಕಿದರೆ ಮಾನ ಮರ್ಯಾದೆಯ ತೆಗೆದುಬಿಡುತ್ತಾಳೆ’ ಎನ್ನುತ್ತಿದ್ದರು. ನನಗೆ ಮಾನ ಮರ್ಯಾದೆಯೇ ಗೊತ್ತಿರಲಿಲ್ಲ. ‘ಹೋದರೆ ಹೋಗಲಿ ಎನ್ನುತ್ತಿದ್ದೆ’ ನಿನ್ನ ಹರಕು ಚಡ್ಡಿಯ ಕಿತ್ತು ಬಿಸಾಡುತ್ತಾಳೆ’ ಎನ್ನುತ್ತಿದ್ದರು. ಆಗಲಿ! ಏನಂತೆ! ಇನ್ನೊಂದು ಚಡ್ಡಿ ಹಾಕಿಕೊಳ್ಳುವೆ’ ಎನ್ನುತಿದ್ದೆ. ನಗುತ್ತಿದ್ದರು ಹೆಂಗಸರು. ‘ಮಾನ ಹರಾಜಾಗುತ್ತದೆ’ ಎನ್ನುತ್ತಿದ್ದರು. ಪೋರಿಯರು. ‘ಆಗಲಿ! ನೋಡಲಿ! ಕೈಯಲ್ಲಿ ಮುಚ್ಚಿಕೊಳ್ಳುವೆ’ ಎನ್ನುತ್ತಿದ್ದೆ. ‘ಮಾನಗೆಟ್ಟವನೇ’ ಎನ್ನುತ್ತಿದ್ದರು. ಅದೆಲ್ಲ ಬಾಲ್ಯಕಾಲ ಸರಸ! ಎಷ್ಟೊಂದು ಸುಖವಿತ್ತು ಹಿತವಿತ್ತು ಮುಗ್ಧತೆಯ ಝೆಂಕಾರವಿತ್ತು! ತಾಯಿ ನನ್ನ ಅತ್ತ ಹೋಗೆಂದು ಕಳಿಸಿದಳು. ಮೈನೀರ ಇಳಿಸಿದಳು. ಹಿಂದೆ ನಿಂತು ನೋಡಿದ್ದೆ. ಅದೆಲ್ಲ ದೈವತ್ವ! ಮೂತ್ರ ಜಲ ಮಣ್ಣಲ್ಲಿ ಇಂಗಿತ್ತು. ಭೂಮಿ ತಾಯಿಗೆ ಭೇದವೇ! ಮಳೆ ನೀರೂ ಒಂದೇ; ಬೆವರ ಹನಿಯೂ ಒಂದೇ… ಕಂಬನಿಯ ಹನಿಯೂ ಅಷ್ಟೇ… ನೀರು ನೀರೇ ಧಾರೆ ಧಾರೆಯೂ ಅದೇ… ಮುಗಿಲ ಮಾರುತವೂ ಜಲ ಸಾಗರದ ತುಂತುರು ಮಳೆಯೇ… ಆರ್ಭಟಿಸಿ ಬೋರೆಂದು ಧುಮ್ಮಿಕ್ಕುವ ಜಲಪಾತದ ಹೊಳೆಯ ಕಣ್ಣೀರೂ ಒಂದೇ… ಬೇರೆ ಬೇರೆ ಎಂದು ಭಾವಿಸಿದರೆ ಅದವರ ಪರ ಅನುಭಾವ… ನನ್ನ ತಾಯಿ ಸದಾ ಒಂದು ದುಃಖದ ಚಿಲುಮೆಯಂತಿದ್ದಳು. ಅದರ ಮರುಭೂಮಿ ಸಾರದಲ್ಲೇ ನಾನು ಬೆಳೆದವನು.

ಹಿಂತಿರುಗಿ ಬಂದಳು ಮಡಕೂಸಮ್ಮ, ‘ಏನವ್ವಾ; ಏನು ಮರೆತೇ’ ಎಂದಳು ತಾಯಿ, ‘ಏನಿಲ್ಲವ್ವಾ; ಯಾಕೊ ಹೇಳಬೇಕೆನಿಸಿತೂ… ಇವನ ತಬ್ಬಲಿ ಮಾಡಬ್ಯಾಡ;ʼ ಎಂದಷ್ಟೇ ಹೇಳಿ ಉತ್ತರಕ್ಕೂ ಕಾಯದೆ ಹೊರಟು ಹೋಗಿದ್ದಳು. ‘ಅವಳು ಏನೆಂದಳು ಅಕ್ಕಾ… ತಬ್ಬಲಿ ಅಂದರೆ ಏನಕ್ಕಾ… ಯಾಕವಳೂ ಹಾಗೆ ಹೇಳಿ ಹೋದಳು’ ಎಂದು ಅಮಾಯಕವಾಗಿ ಕೇಳಿದ್ದೆ. ತಾಯಿ ಉತ್ತರಿಸಲಿಲ್ಲ. ಅವಳು ಯಾವತ್ತೂ ಯಾರ ಜೊತೆ ಮಾತಾಡುತ್ತಿರಲಿಲ್ಲ. ಆದರೆ ಅವಳ ಬಾಲ್ಯದ ಗೆಳತಿ ಒಬ್ಬಳು ತವರೂರಲ್ಲಿ ಇದ್ದಳು. ಅವಳ ಜೊತೆ ಮಾತ್ರ ತಾಯಿ ಬಾಯ್ತುಂಬಾ ನಗಾಡುತಿದ್ದಳು. ಅವಳ ಪುಟ್ಟ ಪುಟ್ಟ ಚೆಂದದ ಹಲ್ಲುಗಳ ಗಂಟಲಾಳದ ತುದಿಯಿಂದ ನೋಡಿ; ನನಗೆ ನಗು ಬರದಿದ್ದರೂ ನಗುತಿದ್ದೆ. ತಾಯಿ ಹರುಷಕ್ಕೆ ಮಿಡಿದು ಹೆತ್ತವರಿಗೆ ಹೆಗ್ಗಣ ಮುತ್ತಲ್ಲಾ! ಹೆಗ್ಗಣಗಳಿಗೆ ತಾಯಂದಿರು ದೇವಲೋಕದವರು. ನಾನು ಯಾವತ್ತೂ ತಾಯಿಗೆ ಅಂಟಿಕೊಂಡಿರುತ್ತಿದ್ದೆ. ಐದು ವರ್ಷ ಕಳೆದ ನಂತರ ಹಾಲು ಬಿಡಿಸಿದ್ದರಂತೆ. ಹಾಗಾಗಿಯೇ ನನ್ನ ತಾಯಿ ಸತ್ತು ಬೂದಿಯಾಗಿ ಎಷ್ಟೂ ವರ್ಷಗಳಾಗಿದ್ದರೂ ಅವಳ ಉಸಿರು ನನ್ನ ಉಸಿರಲ್ಲಿ ಉಳಿದುಕೊಂಡಿದೆ. ಯಾರಾದರೂ ಉಸಿರ ಸುಡಬಲ್ಲರೇ! ಕೊಂದು ತುಂಡರಿಸಬಲ್ಲರೇ! ಯಾರಕೈಗಾದರೂ ಜೀವ ಸಿಗಬಲ್ಲದೇ; ಅದನಾರಾದರೂ ಬಂಧಿಸಬಲ್ಲರೇ! ಇಲ್ಲ ಇಲ್ಲ. ನನ್ನ ತಾಯ ಜೀವ ನನ್ನಲ್ಲೇ ಇದೆ ಎಂದೇ ನನ್ನ ಗಾಢವಾದ ವಿಶ್ವಾಸ. ಇಲ್ಲದಿದ್ದರೆ ನಾನು ಯಾವತ್ತೋ ಮಣ್ಣಾಗಿಬಿಡಬೇಕಿತ್ತು. ಎಲ್ಲೆಲ್ಲಿಗೋ ಹೋದೆ. ಹಿಂದೆ ಬಂದೆ. ಮಡಕೂಸಮ್ಮನ ಪ್ರಸಂಗವ ಹೇಳಲೇಬೇಕು. ಅದು ರಂಜನೆ ಅಲ್ಲಾ… ತಮಾಷೆ ಅಲ್ಲಾ… ಅದು ಬೇರೆ ಏನೋ… ಶಬ್ದಗಳಿಲ್ಲ.

ಮಡಕೂಸಮ್ಮ ಪ್ರಖ್ಯಾತ ಹೂಸುಗಾರಳು. ಈಗಲೇ ಹೂಸು ಎಂದರೆ ಆಕ್ಷಣವೇ ಪುರುಕ್ ಎಂದು ಬಿಡುತ್ತಿದ್ದಳು. ಅವಳು ತನ್ನ ಹಿಂಬದಿಯ ಸಂಕುಚಿತ ಹಾಗು ಸುಖುಚಿತಗಳ ಅದು ಹೇಗೊ ಹೊಂದಿಸಿಕೊಂಡಿದ್ದಳು. ನಿಯಂತ್ರಣದಲ್ಲಿದ್ದವು. ಪ್ರತಿಭಟಿಸುವ ಗಳಿಗೆ ಬಂದಾಗ ಗಂಡಸರ ಮುಖಕ್ಕೇ ಹೂಸಿದಂತೆ ಜೋರು ಸದ್ದು ಮಾಡಿ ಕುಂಡಿ ಎತ್ತಿ ಹೂಸುತ್ತಿದ್ದಳು. ಎದೆಗಾತಿ. ಅಯ್ಯೋ! ಆದರೆ ಅವಳಿಗೆ ಅಂತಹ ಉಬ್ಬಿದ ಮೊಲೆಗಳೇ ಇರಲಿಲ್ಲಾ. ಇಳೀಜಾರು ಎದೆ. ಮಕ್ಕಳೇ ಆಗಿರಲಿಲ್ಲಾ… ಯಾವ ಗಂಡಸರನ್ನೂ ತೊಡೆ ತಟ್ಟಿ ಕರೆವ ಗಂಡೆಂಗಸು. ಅವಳ ಸಹವಾಸ ಬೇಡಪ್ಪಾ… ದಮ್ಮಿಲ್ಲದವನು ಎಂದು ಪ್ರಚಾರ ಮಾಡಿಬಿಡುವಳು ಎಂದು ಯಾರೂ ಅವಳ ಬಯಸುತ್ತಿರಲಿಲ್ಲ. ಅವಳ ಕಟ್ಟಿಕೊಂಡಿದ್ದ ಹೊಟ್ಟೆದುಬ್ಬಯ್ಯ ಏಗಿ ಏಗಿ ಸುಸ್ತಾಗಿ; ಇನ್ನು ನನ್ನಿಂದ ಆಗದವ್ವಾ ಉರುಣ್ಣೀ ಉಚ್ಚವ್ವಾ ಮಾರವ್ವಾ ಎಂದು ಗ್ರಾಮದೇವಗಳಿಗೆ ಕೈ ಮುಗಿದು ಚಡ್ಡಿಯ ಲಾಡಿಯ ಯಾವತ್ತೂ ರಾತ್ರಿ ಬಿಗಿಯಾಗಿ ಕಟ್ಟಿಕೊಳ್ಳುತ್ತಿದ್ದ.

ಮೋಹಕ್ಕೆ ಮುಪ್ಪಾದವರ ದುಃಖ ಆ ಮುಪ್ಪಿಗರಿಗೇ ಗೊತ್ತು! ಪ್ರಾಯಕ್ಕೆ ಬಂದ ತುಡುಗು ಹುಡುಗರ ಕಾಮನೆಯ ಕಷ್ಟ ಅವರಿಗೇ ಗೊತ್ತು! ವ್ಯತ್ಯಾಸ ಏನು ದೇವರೇ! ಹೇಳು? ನೀನೇ ಅರ್ಥಮಾಡಿಕೊ ಅದು ನಿನ್ನ ವಿಧಿ ಎನ್ನುತ್ತೀಯೆ. ನ್ಯಾಯವೇ ಇದೂ! ಅಪ್ಪ ಅಮ್ಮರ ಕೇಳಲೇ… ಅವರಾಗಲೇ ಮಣ್ಣಲ್ಲಿ ಮಣ್ಣಾಗಿದ್ದಾರಲ್ಲಾ… ನಿನ್ನ ಕರ್ಮಫಲಾ… ಗೊತ್ತಿಲ್ಲ ದೇವರೇ…ಯಾರ ಕರೆಯಲಿ ಈ ನೀರವ ರಾತ್ರಿಯಲ್ಲಿ ಸಾಕ್ಷಿಗಾಗಿ ಪರಪುರುಷರ! ಎಚ್ಚರವಾಯಿತು. ಏನೋ ಅವೇಳೆಯ ಅಸಮಯ ಕನಸು! ಸಂಬಂಧವಿಲ್ಲದ ನಾಳಿನ ಭಯ! ಎಷ್ಟು ಕನಸುಗಳ ಕಸದ ಬುಟ್ಟಿಗೆ ನನ್ನ ಮನಸ್ಸು ಬಿಸಾಡಿದೆಯೋ; ನನಗೇ ಗೊತ್ತಿಲ್ಲ. ಮಡಕೂಸಮ್ಮ ಊರ ಹೆರಿಗೆ ದೇವತೆ ನಿಜಾ… ಅವಳನ್ನು ತಮಾಷೆಗೆ ತಂದುಕೊಂಡೆ. ಬಹಳ ದಿನಗಳಿಂದ ಸೊಂಟ ನೋವೆಂದು ಬಳಲುತ್ತಿದ್ದಳು. ಅಮಾಯಕ ಮುದುಕಿ. ಆದರೆ ಗಂಡಸರ ಮುಂದೆ ದರ್ಬಾರ್ ಹೆಂಗಸು. ಕಾಲಮೇಲೆ ಕಾಲಹಾಕಿಕೊಳ್ಳುತ್ತಿದ್ದಳು. ಅನಿಯಂತ್ರಿತ ಹೂಸುಗಳ ತಡೆಹಡಿಯಲು ಆದರೂ ಬಿಡುತ್ತಿದ್ದಳು. ಅಂತಹ ಹೂಸುಗಾತಿಗೆ ಏನಾಯಿತೋ ಏನೋ! ಎಲ್ಲ ಹೂಸುಗಳು ಗಂಟುಹಾಕಿಕೊಂಡವು ತಿಪ್ಪೆಗೇ ಹೋಗಲಿಲ್ಲ. ಮೂರು ನಾಲ್ಕು ದಿನವಾಯಿತು. ಅಂತದಕ್ಕೆಲ್ಲ ನನ್ನ ತಾತನೇ ಹಿರಿ ವೈದ್ಯ. ಹಳೆಯ ಜಾಯಮಾನದ ವಿದ್ಯೆ. ಸರಿಯೊ ತಪ್ಪೋ… ಪ್ರಯೋಗವೇ ಮದ್ದು. ಆದರಾಯಿತು ಹೋದರಾಯಿತು! ಅಂತಹ ಊರಾದ ಊರುಗಳಿಗೆಲ್ಲ ಹೆರಿಗೆ ವೈದ್ಯಳಾಗಿದ್ದ ಅವಳಿಗೆ ಈಗ ಹೂಸುಗಳೇ ಹೊರಡುತ್ತಿರಲಿಲ್ಲ. ಬಂದಾಗಿತ್ತು ಅವಳ ಹಿಂಬದಿ. ಮುಲುಕಿ ಮುಲುಕಿ ಹೂಸುಗಳ ಕೆಳ ಹೊಟ್ಟೆಯಿಂದ ನೂಕಿದರೂ ಬರುತ್ತಿರಲಿಲ್ಲ, ‘ಅಣ್ಣಾ ಇಂಗಾಗದೆ ಏನಣ್ಣಾ’ ಎಂದು ಕೇಳಿದ್ದಳು ತುಂಬಿದ ಮುಂಜಾವಿನ ಹೋಟೇಲಲ್ಲಿ. ತಾತ ಏನೊ ಹೇಳಿದ… “ಹೋಗಣ್ಣೋ… ಅದೆಂಗಾದದೂ” ಎಂದಳು. ಈರುಳ್ಳಿ ಸುಂಟಿ ತಿನ್ನಮ್ಮೀ ಎಂದಿದ್ದ. ಅದಾಗದು ಎಂದಿದ್ದಳು.

ಎಷ್ಟೋ ಕಷ್ಟದ ಹೆರಿಗೆಯಲ್ಲಿ ತಾಯಿ ಸತ್ತು ಮಗು ಬದುಕಿದ್ದನ್ನು ಕಂಡಿದ್ದಳು. ಅಂತಹ ತಬ್ಬಲಿ ಕೂಸುಗಳ ತಾನೇ ಜೋಪಾನ ಮಾಡುತ್ತಿದ್ದಳು. ಅಂತಹ ಮಕ್ಕಳು ಸುತ್ತೇಳು ಹಳ್ಳಿಗಳಲ್ಲಿ ಅವಳಿಗೆ ಎಷ್ಟೋ… ಲೆಕ್ಕ ಗೊತ್ತಿಲ್ಲ. ಅವಳೇ ಮರೆತಿದ್ದಳು. ಎಂದಾದರೂ ಬಂದು ಅವ್ವಾ ಎಂದು ಮಾತಾಡಿಸಿ ಹೋಗುತ್ತಿದ್ದರು. ಎಂತಹ ದುರ್ದೈವ! ಅವಳಿಗೆ ಒಂದೇ ಒಂದಾದರೂ ಹೆಣ್ಣು ಮಗುವಾದರೂ ಹುಟ್ಟಿರಲಿಲ್ಲ. ಬಂಜೆ ಎನ್ನುತಿದ್ದರು.

ತಂದೆಗೆ ಏನೊ ಹೊಸ ಐಡಿಯಾ ಮೂಡಿತು. ಅದಾಗಲೇ ಹಿಂದೆ ಪ್ರಯೋಗಿಸಿ ಯಶಸ್ವಿಯಾಗಿದ್ದ. ಅದನ್ನೇ ಇವಳಿಗೂ ಮಾಡಿದರೆ; ಜೀವಮಾನ ಪೂರ್ತಿ ನೋವು ನಿವಾರಣೆ ಆಗಿ ನನ್ನ ನೆನಸುವಳು ಎಂದು ನಾನು ಸಹಕರಿಸುವೆ ಎಂದಿದ್ದ. ಸೈ ಎಂದಿದ್ದಳು ಮಡಕೂಸಿ. ಆ ವಿದ್ಯುತ್  ಚಿಕಿತ್ಸೆಯ ವಿಚಾರವೇ ಯಾರಿಗೂ ಗೊತ್ತಿರಲಿಲ್ಲ. ನನ್ನ ತಂದೆಯೇ ಅದನ್ನೊಂದು ವಿನೋದ ಚಿಕಿತ್ಸೆಯಾಗಿ ಕಂಡುಕೊಂಡಿದ್ದ. ಅತ್ತ ಮುಂಜಾವಿನ ದೇವರ ಗುಡಿಯ ಕಣಗಿಲೆಯ ಕಂಪು. ಅತ್ತ ಹಿತ್ತಲಲ್ಲಿ ಅರಳಿರುವ ಮಲ್ಲಿಗೆ ಹೂವುಗಳ ಘಮಲು… ಒಂದೇ ಎರಡೇ; ಮುಂಜಾವಿನ ಸವಿ. ತಂಗಾಳಿ ಓಕುಳೀ ಆಡುವಂತೆ ಚಳಿಯ ಮುಂಗೋಳಿಗೇ ಚೆಲ್ಲಾಡುತ್ತಿತ್ತು. ಬಂದಳು ಮಡಕೂಸಮ್ಮ. ‘ಲೇ ಮೊಗ ಅರ್ಜೆಂಟಾಗಿ ಬಿಸಿ ಬಿಸಿ ಟೀಯ ತಕಬಾಲಾ’ ಎಂದಳು. ಹಬೆಯ ಹೊಗೆಯ ಚಹಾವ ದೊಡ್ಡಗ್ಲಾಸಿಗೆ ಬಿಟ್ಟುಕೊಂಡು ಹೋಗಿ ಕೊಟ್ಟಿದ್ದೆ. ‘ಏನ್ ಮಡಕೂಸೀ ವತಾರೆಲೇ ಅವತಾರ ತೆಗೆದಿದ್ದೀಯಲ್ಲಾ ಏನಾಯ್ತು’ ಎಂದ ಅಪ್ಪ… ‘ಲೇ ಗುಲಾಮಾ ನಿನ್‌ಕೈಲಾಗ್ದು ಸುಮ್ನಿರ್ಲಾ’ ಎಂದು ಅಬ್ಬರಿಸಿದಳು. ಜನಕ್ಕೆ ಅಚ್ಚರಿ ಎನಿಸಿತ್ತು. ಯಾಕಿವತ್ತು ಇವಳಿಗೆ ಏನಾಯ್ತು ಎಂದು ಕುರುಡಿ ತಾತ ಸಂತೈಸಲು ಮುಂದಾದ ‘ಲೇ ತಿಕಾ ಮುಚ್ಕೊಂಡು ಅತ್ತಾಗೋಲಾ’ ಎಂದು ರೇಗಿದ್ದಳು. ಅದೇನಾದರು ಇದ್ದರೆ ಹೇಳು ಎಂಗಾದರೂ ಬಗೆಹರಿಸುವ ಎಂದ. ಹಿಂದೆ ಕುರುಡಿಗೆ ಆಗಿದ್ದ ಅಪ್ಪನ ಕರೆಂಟ್ ಚಿಕಿತ್ಸೆ ಅವಳಿಗೆ ಗೊತ್ತಿತ್ತು. ‘ಅದೇ ಕಲಾ; ವೂಸು ಬತ್ತಿಲ್ಲಾ… ಗಂಟಾಕಂದು ವೊಟ್ಟೆ ವೊಳಗೇ ಗುದ್ದಾಡ್ತ ಅವೇ… ಯೆಂಗೆ ಮುಕ್ಕುದ್ರೂ ಯೀಚ್ಕೆ ಬತ್ತಿಲ್ಲಾ; ನನ್ ತಿಕವಾ ನಾನೇ ತೀವ್ಕೋ ವಂಗಾಗದೇ, ಹಳ್ಳೆಣೆ ಕುಡುದ್ರೂ ಏನೂ ಆಗ್ಲಿಲ್ಲಾ’ ಎಂದು ಹತಾಶೆಯಲ್ಲಿ ಚಹಾದ ಗ್ಲಾಸ್ ಹಿಡಿಯಲಾಗದೆ ಚಲ್ಲಿಕೊಂಡಳು.

ಅಪ್ಪನಿಗೆ ಅವಳು ಅತ್ತೆ ಸಂಬಂಧ. ‘ಮೊದ್ಲೆ ಯೇಳಿದ್ರೆ ಇಷ್ಟೊತ್ಗೆಲ್ಲಾ ಸರಿ ಮಾಡ್ತಿದ್ನಲ್ಲಾ… ಕುರುಡಿಗೆ ಮಾಡಿದ್ದೆ ವಾಯ ಹಿಡ್ಕಂದದೆ ಅಂದಿದ್ದಾ… ಕ್ಷಣ ಮಾತ್ರದಲ್ಲಿ ನಿವಾರಣೆ ಆಗಿತ್ತು’ ಎಂದ. ಇಷ್ಟು ತಡ ಮಾಡ್ಕ ಬಂದಿದ್ದಿಯಲ್ಲಾ! ಆ ನಿನ್ನೂಸ ಕಡಿಸುದು ಕತ್ತೆ ಬಾಲ ಅಲ್ಲಾಡಿದಂತೆ ಅಷ್ಟೇ… ಈಗ್ಲೇ ಮಾಡ್ತೀನಿ; ಸಿದ್ದವೇ’ ಎಂದ ಅಪ್ಪ. ನನಗೆ ಕುರುಡಿ ತಾತನಿಗಾಗಿದ್ದ ಅನುಭವ ಚೆನ್ನಾಗಿ ಗೊತ್ತಿತ್ತು. ಆತ ಅಕ್ಕಿ ಹಿಡಿವ ಕೆಲಸದಿಂದ ತಪ್ಪಿಸಿಕೊಳ್ಳಲು ಸೊಂಟದ ಬಾದೆಯ ಯಾವತ್ತೂ ಹೇಳುತ್ತಿದ್ದ. ಆಗ ಅಪ್ಪ ಅವನಿಗೆ ಸಕತ್ ಕರೆಂಟ್ ಚಿಕಿತ್ಸೆ ಕೊಟ್ಟಿದ್ದ. ಎಷ್ಟೇ ಆಗಲಿ ಆತ ಆಧುನಿಕ ಮೈಸೂರು ಕಂಡಿದ್ದ. ವಿದ್ಯುತ್ ವಿದ್ಯೆ ತಿಳಿದಿದ್ದ. ಅಕ್ಕಿ ಹಿಡಿಯುತ್ತಿದ್ದ ಒನಕೆಯಿಂದ ಅವನಿಗೆ ಎಂಡದ ದೇವತೆಗಳಾಗಲೇ ಕರೆಯುತ್ತಿದ್ದವು. ವೈರ್ ಎಳೆದು ಅಳವಡಿಸಿ ಸ್ವಿಚ್ಚಿಗೆ ಹಾಕಿದ. ಅದೇನೂ ಗೊತ್ತಿರಲಿಲ್ಲ ನಮಗೆ. ಇದೇನು ಚಿಕಿತ್ಸೆ ಎಂದು ಮನೆಯವರೆಲ್ಲ ನೋಡುತ್ತಿದ್ದೆವು. ಅವನೊಂದು ದೊಗಳೆ ಚಡ್ಡಿಹಾಕಿದ್ದ. ಸಡಿಲಿಸಿ ವೈರನ್ನು ಅವನ ತಿಕದ ಸಂದಿಗೆ ಅಪ್ಪ ಸಿಕ್ಕಿಸಿದ್ದ. ಎಲ್ಲರ ಅತ್ತ ಕಳಿಸಿದ್ದ. ಇದೇನೊ ಎಂದಿದ್ದ ಕುರುಡಿ. ನಿನ್ನ ಒಳ್ಳೆಯದಕ್ಕೇ… ನೀನು ಸತ್ತರೂ ಮುಂದೆ ನಡನೋವಾಗದು ಎಂದಿದ್ದ. ಅಹಾ! ಸರಿ ಸರಿ ಪುಣ್ಯಾತ್ಮಾ ಮಾಡಪ್ಪ ಎಂದಿದ್ದ. ಸ್ವಿಚ್ ಹಾಕ್ಲಾ ಎಂದ ಅಪ್ಪ. ಎಂತಹ ಶಾಕ್ ಆಗಿತ್ತು ಎಂದರೆ ಅವನು ಸಾಯವ ತನಕ ಅದನ್ನು ವಿವರಿಸುವ ಭಾಷೆಯೇ ಬಂದಿರಲಿಲ್ಲ.

ಆದರೆ ಮಡಕೂಸಿಗೆ ಇದು ಶ್ರೇಷ್ಠ ಚಿಕಿತ್ಸೆ ಎಂದು ಅವನ ಮಾತುಗಳಲ್ಲೇ ಹೇಳುತ್ತಿದ್ದ. ತನಗಾದದ್ದು ಬೇರೆಯವರಿಗೆ ಹೇಗಾಗಬಹುದು ಎಂಬುದು ಸತ್ಯಶೀಲ ಪರಿಶೀಲನೆ ಆಗಿತ್ತೇನೋ… ಮುಂದಾಗಿ ಅವಳ ಸೊಂಟವ ಸಡಿಲ ಮಾಡಿ ಅವನೇ ವೈರ್ ಹಾಕಿದ್ದೇ ಲೇಬಿಡ್ಲಾ.. ತಿಕಾ ಯಾಕ ಮಕೀಯೇ ಎಂದಿದ್ದಳು. ಅದಂಗೆನೇ, ಸುಮ್ನಿರೂ ಮುಟ್ಟಿದ್ರೆ ಏನಾಯ್ತು… ಲಿಗವಾಯ್ತು ಆಸೆ. ವೈರನ್ನು ಎಳೆದು ತಂದು ಅವಳ ಹಿಂಬದಿಯ ಸಂದಿಗೆ ಅಂದರೆ ಕುಂಡಿಗಳ ನಡುವೆ ಇಡಬೇಕಿತ್ತು. ಲಘು ವಿದ್ಯುತ್ ಚಿಕಿತ್ಸೆ ಅಷ್ಟೇ… ಕೈ ಹಾಕಿದ್ದ ಸಂದಿಗೆ ಡರ್ ಎಂದು ಊಸಿದಳು. ಅಯ್ಯೋ ವಾಸನೆಯೊ ವಾಸನೇ ಮುದಿ ರತಿಯ ಊಸು ಅವನ ಕೈ ವಾಸು ಅಂಟಿಕೊಂಡಿತ್ತು. ಚಹಾ ಹೀರು ತಿದ್ದವರೆಲ್ಲ ಮೂಗು ಮುಚ್ಚಿಕೊಂಡರು.

ತಾತ ಬಂದು ಅಸಭ್ಯ ಇದು! ತರವಲ್ಲ ಹೆಂಗಸಿಗೆ, ಊರ ಮಕ್ಕಳಿಗೆಲ್ಲ ಹೆರಿಗೆ ಮಾಡಿಸುವ ನೀನು ಊಸುಗಳ ಬಿಟ್ಟುಕೊಳ್ಳಲಾರೆ ಎಂದರೆ ಏನಿದು ನಿನ್ನ ಕರ್ಮ? ಎಂದು ರೇಗಿದ್ದ. ಜನ ನಗಾಡಲಿಲ್ಲ. ತುಂಬಿದ ಹೋಟೆಲು ಮುಂಜಾವಿನ ಚಹಾದ ಸವಿಗೆ ಎದ್ದು ಬಂದಿದ್ದವರು ಗಪ್ಪಾದರು. ನೋಡಿಬಿಡುವ ಅದೇನು ಚಿಕಿತ್ಸೆ ಎಂದು ಕುತೂಹಲದಲ್ಲಿ ಬಿಸಿ ಚಹವ ಸೊರಗುಟ್ಟುತ್ತಿದ್ದರು. ಎಲ್ಲ ರೆಡಿ ಆಗಿತ್ತು. ಒಂದು ಉದ್ದ ವೈರು. ಸಿಕ್ಕಿಸಲು ಒಂದು ಹೋಲ್ಡರ್. ಒಂದು ಹಳೆಯ ಕರಗಟ್ಟಿದ ಸ್ವಿಚ್ಚು. ತಾತ ಮಡಕೂಸಿಯ ಕುಂಡಿಗೆ ವೈರ ಸಿಗಸಿದ್ದ ಆ ಜಾಗದಲ್ಲೇ ಜನ ನೋಡುತ್ತಿದ್ದರು. ‘ಆಕ್ಲಾ ಸುಚ್ಚಾ’ ಎಂದ ಅಪ್ಪ. ಆನ್ ಮಾಡಿದೆ ಅಷ್ಟೇ… ಢಮರ್ ಎಂದು ಮಡಕೂಸಮ್ಮನ ಹೂಸುಗಳು ಕಡೆದುಕೊಂಡವು. ಶಾಕ್‍ಗೆ ಎಗರಿ ಅತ್ತ ಬಾಗಿಲಿಗೆ ಬಡಿಸಿಕೊಂಡು ಬಿದ್ದಿದ್ದಳು. ಮಲ ಮೂತ್ರಗಳ ಒಟ್ಟೊಟ್ಟಿಗೇ ಅಷ್ಟು ದಿನದ್ದನ್ನೆಲ್ಲ ವಿಸರ್ಜಿಸಿಕೊಂಡಿದ್ಧಳು. ಗಂಡೆಂಗಸು ಕುರುಡಿ ನಗುನಗುತ್ತಾ ಕೈ ಹಿಡಿದು ಎದ್ದು ಕೂರಿಸಲು ಮುಂದೆ ಹೋದವನು ಅವಳ ವಿಸರ್ಜನೆಯ ವಾಸನೆಗೆ ಹಿಂದೆ ಸರಿದಿದ್ದ. ಮಡಕೂಸಿ ಉಗ್ರವಾಗಿದ್ದಳು. ಏನು ಮಾಡುವಂತಿರಲಿಲ್ಲಾ.. ಸೀರೆ ಸಹಿತ ತೊಡೆ ತಿಕಗಳ ಕೊಕ್ಕರಿಸಿಕೊಂಡು ಹಿತ್ತಿಲತ್ತ ಕಾಲು ಕೊಕ್ಕರಿಕೊಂಡು ನಡೆದಳು ಅವಳ ಇಡೀ ಪಜೀತಿ ವಾಸನೆಯಿಂದ ಎಲ್ಲಾರಿಗೂ ಗೊತ್ತಾಗಿತ್ತು. ಇನ್ನು ಅವಳಿಗೆ ಜೀವ ಮಾನದಲ್ಲಿ ಎಂದಾದರೂ ಹೂಸು ಕಟ್ಟಿಕೊಂಡರೆ ಕೇಳೀ.. ಮೀಸೆ ಬೋಳಿಸಿಕೊಂಡು ಬಿಡುವೆ ಎಂದಿದ್ದ. ಅವನಿಗೆ ಮೀಸೆ ಇವೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಅವನ ಕರಿಯ ಮುಸುಡಿಗೆ ಮೀಸೆಯ ಅಗತ್ಯವೇ ಇರಲಿಲ್ಲಾ. ಅವನ ಬಣ್ಣಕ್ಕೆ ಮೀಸೆ ಇವೆ ಎಂಬುದೇ ಕಾಣುತ್ತಿರಲಲಿಲ್ಲಾ. ಒಟ್ಟಿನಲ್ಲಿ ಅವನಿಗೆ ಬಹಳ ಆನಂದವಾಗಿತ್ತು… ನನಗಾದ ನೋವು ಅವಳಿಗೂ ಆಯಿತೆಂದು ತಾತ ಬಂದು ಅಬ್ಬರಿಸಿ ತೋರಿದ… ‘ಹೇತ್ಕಂಡವಳೆ ಎತ್ತಾಕೊ’ ಎಂದಿದ್ದ. ಮೀರುವಂತಿರಲಿಲ್ಲಾ. ಎತ್ತಾಕಿದ. ಸಧ್ಯ; ನನ್ನ ಕೈಗೆ ಏನು ಅಂಟಿಕೊಳ್ಳಲಿಲ್ಲಾ; ಯಾವ ನಾಯಿ ಜನ್ಮದ ಶಾಪವೊ… ಹೊಲಸಾಗಲಿಲ್ಲ ದೇವರ ದಯದಿಂದ! ಅದಕ್ಕೂ ಆ ಕುರುಡಿಗೆ ದೇವರು ಬೇಕೇ! ಕೈ ಮುಟ್ಟಿ ಮುಟ್ಟಿ ಮೂಸಿಕೊಂಡು ತಿಂಗಳಾನುಗಟ್ಟಲೇ ಸೊರಗಿ ಹೋಗಿದ್ದ.

ಅವನಿಗೊಂದು ವ್ಯಸನ ಖಾಯಿಲೆ ಆಗಿಬಿಟ್ಟಿತ್ತು. ಸುಮ್ಮನೇ ಆಗಾಗ ಬೆರಳುಗಳ ಮೂಗಿಗಿಡಿದು ಮೂಸಿ ಮೂಸಿ ಇಸ್ಸೀ ಎನ್ನುತ್ತಿದ್ದ. ವಾಸನೆಯ ರೋಗ ಹಿಡಿದಿತ್ತು ಅವನಿಗೆ. ಅವಳು ಹೋಟಿಲಿಗೆ ಬಂದಳು ಎಂದರೆ ಕಣ್ಮರೆಯಾಗುತ್ತಿದ್ದ. ಇನ್ನವಳು ಊಸು ಬಿಟ್ಟರೆ ನನ್ನುಸಿರು ಯಮನ ಪಾಲೇ ಎಂದು ಭೀತನಾಗಿದ್ದ. ಆ ಅಂತಹ ಕುರುಡಿಯೋ ನನ್ನತ್ತೆಯರ ತಂದೆ. ಅವರೂ ಅತಿ ಸುಂದರಾಂಗನೆಯರು. ಅವರ ಎದೆಗೆ ಒತ್ತೊತ್ತಿ ಹಾಲು ಕುಡಿದಂತೆ ಬೆಳೆದಿದ್ದೆನಲ್ಲನೇ! ಆ ಚೆಲುವೆಯರಿಗೆ ಆ ಕುರೂಪಿ ತಂದೆ. ಅವನಿಗೆ ಮಡಕೂಸಿಯ ಮೇಲೆ ಏನೊ ಮೋಹ! ಕೂಡಿ ಬಂದಿರಲಿಲ್ಲ. ಇಚ್ಚೆ ಪಟ್ಟವರ ಅಲ್ಲೆ ಉಚ್ಚೆ ಉಯ್ದು ಕರೆದುಕೊಳ್ಳುತ್ತಿದ್ದವಳು ಅವಳು ಎಂದರೆ ಅಷ್ಟು ಕುಲಟೆ ಅಲ್ಲಾ ಅವಳು! ಅಷ್ಟು ನಿಷ್ಟೆ ಹಸಿದವರಿಗೆ ನೀರುಣಿಸಲು ಹಾಲುಣಿಸಲು. ಊಸಮ್ಮ ಎನ್ನುತ್ತಿದ್ದರು ಈ ಕಾಲದ ಮಕ್ಕಳು. ಅವರಿಗೂ ಅವಳೇ ಹೆರಿಗೆ ಮಾಡಿಸಿದ್ದೋ!. ಇಷ್ಟೆಲ್ಲ ಯೋನಿಗಳ ಕಂಡೇ! ಹೆರಿಗೆ ಮಾಡಿಸಿ ಜೀವ ಉಳಿಸಿದೆ. ನನ್ನ ಯೋನಿಯೊಂದು ಬಂಜೆಯಾಯಿತೇ ಎಂದು ಮಡಕೂಸಮ್ಮ ಎಂದೂ ನೊಂದವಳಲ್ಲಾ… ಎಲ್ಲ ಯೋನಿಗಳು ನನ್ನ ಮಕ್ಕಳ ಯೋನಿಗಳೇ ಎಂದು ಭಾವಿಸಿ ನೀವಿಸಿ ತೊಡೆಯಗಲಿಸಿ ಸೊಂಟವ ಅತ್ತಿತ್ತ ಇಸಿದೂ… ಹೊಟ್ಟೆಯ ನೀವಿ ನೀವಿ ಕಿಬ್ಬೊಟ್ಟೆಗೆ ಕೂಸ ತಲೆಯ ತಿರುವಿ ತಳ್ಳಿ; ಅಹಾ ಬಂತು ಬಂತು ಮಗುವೇ ಜೀವ ಬಂತು ಮುಕ್ಕರಿಸು ಎಂದು ಸಂತೈಸಿ ಹೆರಿಗೆ ಮಾಡಿಸುವುದು ಸುಮ್ಮನೆ ಸುಲಭದ ಕೆಲಸವೇ…

ವಿವರಿಸಲಾರೆ ಇನ್ನು ಮುಂದೆ; ನಾನೇನು ಹೆರಿಗೆ ಮಾಡಿಸುವ ತಾಯೇ… ಮಡಕೂಸಮ್ಮ ಸುತ್ತೇಳು ಊರಿಗೆಲ್ಲ ಚಿರಪರಿಚಿತ ಹೆಂಗಸು. ಹೂಸುವುದವಳ ಧರ್ಮಕರ್ಮ. ಹೂಸದೆ ಯಾರು ತಾನೆ ಬದುಕುವರು ಎನ್ನುತ್ತಿದ್ದಳು. ನಮ್ಮ ಇನ್ನೊಬ್ಬ ತಾತನ ಉಪಪತ್ನಿ ಮಡಕೂಸಿ ಎಂದಿದ್ದೆ. ಮುಟ್ಟಿ ಮುರಿದು ಮುದ್ದರಿಸಿ ಮಲಗಿರಲಿಲ್ಲ ಆ ತಾತ. ಹೆಂಗಾದವು ಮಕ್ಕಳು. ಅದೇನೊ ಗೊತ್ತಿಲ್ಲಾ. ಊರಾದ ಊರು ಕೇರಿಯ ಶಾಲೆಯ ಎಲ್ಲ ಮಕ್ಕಳೂ ಅವಳಿಂದಲೇ ಹೆರಿಗೆ ಆಗಿದ್ದರು.

ಜಯ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೇ…
ಸರ್ವಜನಾಂಗದ ಶಾಂತಿಯ ತೋಟ…
ಎಂದು ನಾವು ಹಾಡಬೇಕಿದ್ದುದ್ದು ಆ ಅನಾಥ ಮಡಕೂಸಮ್ಮನಿಗೆ. ಸುಮ್ಮನೆ ಆ ಕಾಲದ ಅಮೇರಿಕನ್ ಕೇರ್ ಫುಡ್ ಅನ್ನು ಬಡ ಹಸಿದ ದೇಶಗಳಿಗೆ ಸಿರಿವಂತರು ಕಳಿಸುತ್ತಿದ್ದರು. ಎಂತಹ ಸಾಮ್ರಾಜ್ಯಶಾಹಿ ದೇಶದ ಗೋಧಿಯ ತಿಂದ ಮಕ್ಕಳು ನಾವು! ಹಸಿವಿಗೆ ವಿಷವೇನು ಅಮೃತವೇನು ಎಂದು ಹೇಗೆ ತಾನೆ ಗೊತ್ತು! ಸತ್ತೇ ಹೋದರಲ್ಲಾ ಎಷ್ಟೊ ಜನ ಬರಗಾಲದಲ್ಲಿ ವಿಷ ತಿಂದೂ!

ಸಧ್ಯ ಸಾಯಲಿಲ್ಲ ಈ ದೇಶದಲ್ಲಿ ಇಷ್ಟೆಲ್ಲ ಹೇಯ ವಿಷವಿದ್ದರೂ
ಕೆಲವರಾದರೂ ತಡೆದರು ಧೀಮಂತರು ಬಂದರು
ತಡೆ ತಡೆದು ಸುಧಾರಿಸಿದರು ಒಂದಿಷ್ಟಾದರೂ
ತೋರಿದರು ಎಂಜಲು ಸೇವೆಯನ್ನಾದರೂ
ಬೆತ್ತಲೆ ಪೂಜೆಯನ್ನಾದರೂ
ರುಂಡ ಚೆಂಡಾಡಿದರೂ ನಮ್ಮಳತೆಗೆ ತಕ್ಕಂತಿರಿ ಎಂದು
ಪಾಪಿ ಪಾಪಿಯೇ ದೇವ ದೇವನೇ ಎಂದರು!
ಎಂದಾದರೂ ಮಿಸುಕಾಡಿದ್ದೀವೆಯೇ. ಕೊಸರಾಡಿದ್ದೀವೆಯೇ ಎಂಜಲು ಮೀಸಲಾತಿಗೆ! ಅರೇ; ಹೇಗೆ ಬಂತು ಈಗಲೇ ಈ ಮಾತು… ಕ್ಷಮಿಸಿ ಕ್ಷಮಿಸಿ; ಬೊಗಳಬಾರದಂತೆ ನಾಯಿ ಮರೀ ಬಲಿವ ಮುನ್ನ. ಬೊಗಳಿದರೆ ಗೊತ್ತಲ್ಲಾ ಈ ದೇಶದಗಲ ದನಿ ಎಲ್ಲಾ ಎಷ್ಟು ಅಡಗುವುದೆಂದು! ಏನೊ ಕಥೆ ಹೇಳುತ್ತಿದ್ದೆ. ಅಡ್ಡಿ ಇಲ್ಲ ಅದಕೆ ಮಡಕೂಸಮ್ಮ ಒಂದು ದಿನ ಶಾಲೆಯ ಅರಳಿ ಮರದ ಕಟ್ಟೆಯಲ್ಲಿ ಕಸಗುಡಿಸಿ ಕೂತಿದ್ದಳು. ಕರೆದಳು, ಏನೆಂದೆ. ಲೆಕ್ಕದ ಮಗ್ಗಿ ತರಗತಿ ಕಷ್ಟ ಉಚ್ಚೆ ಉಯ್ಯುವೆ ಎಂದು ಹೊರ ಬಂದಿದ್ದೆ.

‘ನಿಮ್ಮವ್ವನ ಸಂಕಟ ನಿನಗೆ ಗೊತ್ತಿಲ್ಲವೇನೊ’
‘ಇಲ್ಲ ಅವಳಿಗೇನು ಕಷ್ಟ’
‘ಮುಂದೆ ತಿಳಿತದೆ ಹೋಗೂ… ನೆಟ್ಟಗೆ ನಾಕಕ್ಷರ ಕಲಿತಿಕೊ’
ಈ ಮುದುಕಿಯ ಮಾತೇ ಹೀಗೆ. ಯಾವತ್ತೂ ಅಪಶಕುನದ ಹೆಂಗಸು. ಕುರುಡಿ ತಾತ ಇವಳಿಗೆ ಸರಿಮಾಡಿಸಿದ್ದಾ ಎಂದು ಶಾಲೆಗೆ ಹೋಗಿದ್ದೆ.

ಯಾವ ಲೆಕ್ಕ ತಾನೆ ತಿಳಿಯುತ್ತವೆ. ಆ ವಯಸ್ಸಿಗೆ! ಬರ್ಬರ ಹಿಂಸೆಗೆ!
ಅಂಕೆ ಸಂಖ್ಯೆಗಳ ಬರೆದು ಏನೇನೊ ಗೀರುಹಾಗಿ ಇದರ ಉತ್ತರ ಹೇಳು ಎಂದಿದ್ದ ಮಾಸ್ತರು ಕುಪಿತಗೊಂಡು. ಉಡಾಫೆಯಲ್ಲಿ ಬಡಬಡಿಸಿ ಹೇಳಿದ್ದೆ. ಅವತ್ತು; ಅವನ ಕೈಗೆ ನಾಗರ ಹಾವು ಕಚ್ಚಾ. ಎಷ್ಟು ಹೊಡೆದಿದ್ದ ಎಂದರೆ ಉಚ್ಚೆ ಉಯ್ದುಕೊಂಡಿದ್ದೆ. ಶಾಶ್ವತವಾಗಿ ಶಾಲೆಯ ಬಿಟ್ಟು ಬಿಡಲು ನಿರ್ಧರಿಸಿದ್ದೆ. ಅಯ್ಯೋ ಈ ನರಕಕ್ಕೆ ಶಾಲೆ ಯಾಕೆ ಬೇಕು ಎನಿಸಿತ್ತು. ಎಲ್ಲಿಯಾದರೂ ಮರೆಯಾಗಿ ದೂರದಲ್ಲಿ ಜೀತ ಮಾಡಿ ಬದುಕಬೇಕು ಎಂಬ ತೀವ್ರತೆ ಒತ್ತುತ್ತಿತ್ತು. ಎಲ್ಲಿ ಹೋಗಲಿ! ಯಾರೂ ಗೊತ್ತಿಲ್ಲ. ಮಾರಿಕೊಳ್ಳಲೆ ನನ್ನ ನಾನೇ ಎಲ್ಲಿ ಯಾರಿಗೆ ಹೇಗೆ! ಆ ದಿನ ಅಜ್ಜಿಯ ಸಂತೆಯಲ್ಲಿ ಎಷ್ಟೊಂದು ಗಿರಾಕಿಗಳ ಕೂಗಿಕರೆದು ವ್ಯಾಪರ ಕುದುರಿಸಿದ್ದೇ! ಅವನಾವನೊ ಕುರಿವ್ಯಾನಿನ ಸಾಬಿ ಬಾರೊ ಎಂದು ಕರೆದಿದ್ದನಲ್ಲಾ… ‘ವೊಂಟೋಗಬೇಕಿತ್ತು’ ಕುರಿಗಳ ಜೊತೆ ಕುರಿಯಾಗಿ’ ಎಂಬ ದುಃಖ ಬಂತು. ತಡೆದುಕೊಂಡೆ ಎಲ್ಲದಕ್ಕೂ ಅಳಬಾರದೂ ಎಂದು ಅವರು ಹೇಳಿದ್ದರಲ್ಲಾ… ಯಾರವರು? ಮತ್ತೇ ಕಾಣಲಿಲ್ಲ ಸಿಗಲಿಲ್ಲ ಮನದಲ್ಲಿ ಸದಾ ಎದುರಾಗುವ ಮನುಷ್ಯ. ಅವನಾರೊ! ಗೊತ್ತಿಲ್ಲಾ… ಆ ಒಳ್ಳೆಯ ಮುದುಕ ಎಷ್ಟೊಂದು ಅಂದ ಚೆಂದ ಮಾತಾಡಿದ್ದ! ನಾನು ಸತ್ತರೂ ಅವನು ಸಾಯದಿರಲಿ, ನನ್ನಂತಹ ತಬ್ಬಲಿಗಳಿಗೆ ಬೆಳೆದು ಹಬ್ಬಿದ ಬಳ್ಳಿಯಂತೆ. ಬೆಳೆದಿರಲಿ ಇಷ್ಟಾದರೂ ಒಂದು ಬೊಗಸೆಯಷ್ಟಾದರೂ ಸತ್ಯ ಉಳಿದಿರಲಿ ಯಾವತ್ತಿಗೂ.

ಅದಕ್ಕೆ ನೀನು ಹೆಣ್ಣು… ಬಡಪಾಯಿ ಹೆಂಡತಿ ಅಲ್ಲಾ… ನಿನ್ನ ಶಕ್ತಿಯೇ ನಿನಗೆ ಗೊತ್ತಿಲ್ಲ ಎಂದೆನ್ನುವ ಅಹಂಕಾರ ನನ್ನದಲ್ಲಾ… ಹಡೆದವಳು ನೀನೇ ಹೊಕ್ಕುಳ ಕೊಟ್ಟವಳು ನೀನೇ… ಎಷ್ಟು ವಿಕೋಪ ಅನಾಚಾರ ನೋಡೂ… ನಿನ್ನ ನೆನಪೇ ಆಗದು ಕೃತಜ್ಞತೆಯ ದೇವರ ಮುಂದೆ.

ದೇವರ ಮಹಾತ್ಮೆಯೇ ಗೊತ್ತಿಲ್ಲ. ನಿನ್ನ ಭಕ್ತಿಗೆ ಮೆಚ್ಚಿ ಕೈಮುಗಿದಿರುವೆ; ದೇವರಿದ್ದಾನೊ ಇಲ್ಲವೊ ಕಾಣೇ… ನೀನಂತೂ ಸದಾ ಇದ್ದೀಯಲ್ಲಾ ಇನ್ನೇನು ಬೇಕು ನನಗೆ! ಅದೇ ಒಣ ರೊಟ್ಟಿ ಮುದ್ದೆ ಚಟ್ನಿ ಪುಡಿ; ಒಂದುಪ್ಪಿನಕಾಯಿ; ಇದ್ದರೆ ಒಂದಿಷ್ಟು ಮೊಸರು, ಪುಂಡೆ ಪಲ್ಲೇ… ಇನ್ನೇನ್ ಸುಖ ಸಂಪತ್ತು ಉಂಡು ತಿಂದು ಮಲಗಲು ಒಂದು ಲೋಟ ಗಂಗೆ ಸಾಕಲ್ಲವೇ ಕೇಳಿರುವೆನೇನೊ ನಾನು ಅದು ಮಾಡು ಇದು ಮಾಡು ರುಚಿ ಸವಿಯ ಮಾಡೆಂದು ಎಂದಾದರೂ ಕೇಳಿರುವೆನೇನೊ ದೇವರಾಣೆಗೂ. ನೀನು ತಟ್ಟೆಗೆ ಇಟ್ಟಿದ್ದೇ ಪವಿತ್ರ. ಅಕ್ಕ ಪಕ್ಕ ಏನೊ ಇಟ್ಟೆ ಕರಿದ ಪದಾರ್ಥ! ತಿನ್ನುವೆನೇ ನಾನು ಉಪ್ಪಿನ ಕಾಯನ್ನಾದರೂ; ಮುಟ್ಟಲಾರೆ ಎಲ್ಲ ಪಥ್ಯದ ಬದುಕು. ತಿನ್ನಿಸಬೇಡ! ತಿನ್ನಿ ತಿನ್ನಿ ಕರುಂ ಕರುಂ ಎಂದೂ… ಒತ್ತಾಯಿಸದಿರೂ; ನಿನ್ನ ಮುದ್ದು ನಡತೆ ತಿಳಿಯದೇ ನನಗೇ… ಗೊತ್ತಲ್ಲವೇ ನನ್ನಾರೋಗ್ಯನಿನಗೆ! ವ್ಯರ್ಥ ಮನುಷ್ಯ ಎನ್ನದಿರು! ಸಮರ್ಥ! ಆದರವರಿಗೇ ಮಿತಿ ಮತಿಯ ಕೊಳಕು ಹುಳುಕು… ಥೂ ನಾನೇನು ಮಾಡಲಿ ಎಂದು ಬಿಸಾಡದಿರು! ಲೋಕವೇ ಒಂದು ಕಾಲಕ್ಕೆ ಬಿಸಾಡಲ್ಪಡುತ್ತದೆ. ಆಗ ನನಗೆ ನಿನಗೆ ಸಂಬಂಧವೇ! ಹೆಣ ಹೆಣಗಳು ಅಂಟಿಕೊಂಡು ಕೊಳೆವಾಗ ಅವುಗಳಿಗೆ ಸಂಸಾರದ ದುಃಖವೇ… ಹೇಯೇ ದುಷ್ಟಾ… ಇಂತಾ ಮಾತುಗಳ ಯಾಕೆ ಆಡುವೆ. ತಪ್ಪಾಯ್ತು; ಬಾಯಿಗೆ ಬಂದು ಬಿಟ್ಟಿತೂ; ತಪ್ಪಾಯ್ತು. ಕೊಂಚವಾದರೂ ಬರಲಿಲ್ಲ ನಿಮಗೇಕೆ ಮಾನವದ್ವೇಷಿಗಳೇ… ದುಸ್ವಪ್ನಗಳ ಜೋಳಿಗೆಯವನು ನಾನು. ಬಾಲಕ ನಾನಿನ್ನೂ; ಆಗಲೇ ಎಷ್ಟೊಂದು ಮುದುಕಾ!