ಭೈರಪ್ಪನವರ ಎರಡನೆಯ ಸಾಧ್ಯತೆಯ ಕಾದಂಬರಿಗಳಲ್ಲಿ ವೈಚಾರಿಕತೆ ಬಹುಮುಖಿಯಾಗಿದೆ. ಅದರ ಕೇಂದ್ರವನ್ನು ಕೃತಿಯ ಸಂರಚನೆ ಹಿಡಿದಿಡುತ್ತದೆ. ಇಲ್ಲಿನ ಓದು ಕೂಡ ಬಹುಮುಖಿಯಾಗ ಬೇಕಾಗಿದ್ದು. ‘ತಂತುʼ ಕಾದಂಬರಿಯನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಇದು ತುರ್ತು ಪರಿಸ್ಥಿತಿಯ ರಾಜಕೀಯ ಕಥನ ಎನ್ನುವುದು ನಿಜ. ಅದರ ಜೊತೆಗೆ ಕೌಟಂಬಿಕ ಪ್ರಶ್ನೆಗಳಿವೆ. ತಾಯಿ-ಮಗನ ಸಂಬಂಧದ ಪರಿಶೀಲನೆ ಇದೆ. ದಾಂಪತ್ಯದಾಚೆಗೆ ಸೆಳೆಯುವ ಸಂಬಂಧವಿದೆ. ಸಂಗೀತದ ನೆಲೆ ಕೂಡ ಇದೆ. ಇದನ್ನು ಗಹನತೆಯ ಜೊತೆಗೆ ಅಲ್ಲಲ್ಲಿ ಕಾಣುವ ಜನಪ್ರಿಯ ವಿವರಗಳ ಜೊತೆಗೇ ಗ್ರಹಿಸಿಕೊಳ್ಳಬೇಕು. ಒಟ್ಟಾಗಿ ಇವು ಗಾಢವಾದ ಚಿಂತನೆಯ ಅನುಭವ ನೀಡುತ್ತದೆ ಎನ್ನುವುದು ಮುಖ್ಯ.
ಎಸ್.ಎಲ್. ಭೈರಪ್ಪನವರ ಕಾದಂಬರಿಗಳ ಕುರಿತು ಎನ್.ಎಸ್. ಶ್ರೀಧರಮೂರ್ತಿ ಬರಹ
ಎಸ್.ಎಲ್. ಭೈರಪ್ಪನವರು ಅಗಾಧ ಜನಪ್ರಿಯತೆಯನ್ನು ಪಡೆದ ಕಾದಂಬರಿಕಾರರು, ಅವರ ಕಾದಂಬರಿಗಳು ಕನ್ನಡದಲ್ಲಿ ಮಾತ್ರವಲ್ಲ ಅನುವಾದಗೊಂಡ ಭಾಷೆಗಳಲ್ಲಿಯೂ ಕೂಡ ಅಪಾರ ಜನಪ್ರಿಯತೆಯನ್ನು ಪಡೆದಿವೆ. ಅವರು ಕಾದಂಬರಿಗಳಿಗೆ ಮಾಡಿಕೊಳ್ಳುತ್ತಿದ್ದ ಸಿದ್ಧತೆ ಮತ್ತು ಅದನ್ನು ರೂಪಿಸುವಲ್ಲಿ ತೋರಿಸುತ್ತಿದ್ದ ಶ‍್ರದ್ಧೆ ಎರಡೂ ಕೂಡ ಮಹತ್ವದ ಸಂಗತಿಗಳಾಗಿವೆ. ನವ್ಯದ ಸಂದರ್ಭದಲ್ಲಿ ಬರೆಯಲು ಆರಂಭಿಸಿದ ಭೈರಪ್ಪನವರು ಈ ಮಾರ್ಗಕ್ಕಿಂತಲೂ ಭಿನ್ನವಾಗಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಿದವರು. ಸಂರಚನೆಯಲ್ಲಿ ಹೊಸತನ ತಂದರು. ತಂತ್ರದಲ್ಲಿಯೂ ಹೊಸ ಮಾದರಿ ತುಳಿದರು. ಬಹಳ ಮುಖ್ಯವಾಗಿ ನವ್ಯರು ತರುತ್ತಿದ್ದ ಪಾಶ್ಚಾತ್ಯ ಪ್ರಣೀತ ಚಿಂತನೆಗಳನ್ನು ನೇರವಾಗಿ ವಿರೋಧಿಸಿದರು. ಈ ಎಲ್ಲಾ ಹಿನ್ನೆಲೆಯಲ್ಲಿ ಅವರ ಕಾದಂಬರಿಗಳ ರಾಚನೀಕತೆ ಕುತೂಹಲಕರ ಸಂಗತಿಯಾಗಿದೆ. ಅವರ ಕೃತಿಗಳ ಸಂವಿಧಾನವನ್ನು ಎರಡು ನೆಲೆಯಲ್ಲಿ ವಿಂಗಡಿಸಿ ಕೊಳ್ಳಬಹುದು. ವೈಚಾರಿಕತೆಯನ್ನು ರೂಪಿಸಿಕೊಂಡು ತಾತ್ವಿಕತೆಯನ್ನು ಕೇಂದ್ರವಾಗಿಸುವುದು ಒಂದು ನೆಲೆಯಾದರೆ, ಅದನ್ನು ಭಾವುಕ ಕಥನದ ಮೂಲಕ ಸಂವಹನಗೊಳಿಸುವುದು ಇನ್ನೊಂದು ನೆಲೆ. ಇದು ಅವರ ಕೃತಿಗಳಿಗೆ ಜನಪ್ರಿಯತೆ ಮತ್ತು ರಂಜನೀಯತೆ ಎರಡನ್ನೂ ತಂದು ಕೊಟ್ಟಿದೆ. ವೈಚಾರಿಕತೆ ಮತ್ತು ಭಾವುಕತೆ ನಡುವೆ ಅವರ ಕೆಲವು ಕಾದಂಬರಿಗಳಲ್ಲಿ ನೇರ ಸಂಬಂಧವಿದ್ದರೆ ಇನ್ನು ಕೆಲವು ಕೃತಿಗಳಲ್ಲಿ ವಿಲೋಮ ಸಂಬಂಧವಿದೆ.
ನೇರ ಸಂಬಂಧದ ಕೃತಿಗಳಿಗೆ ಬಂದರೆ ‘ಆವರಣʼದಲ್ಲಿ ವೈಚಾರಿಕತೆಯ ನೆಲೆ ಸ್ಪಷ್ಟವಾಗಿದ್ದು ಕಥನದ ರಾಚನಿಕತೆ ರೂಪುಗೊಂಡಿರುವುದು ಅದರ ಸಂವಹನಕ್ಕೆ ಇದೇ ಮಾತನ್ನು ‘ಕವಲುʼ ಕಾದಂಬರಿಗೂ ಅನ್ವಯಿಸಬಹುದು. ‘ದಾಟುʼ ಕಾದಂಬರಿಗೆ ಬಂದರೆ ಜಾತಿ ಪದ್ಧತಿಯನ್ನು ವಿರೋಧಿಸುವ ವೈಚಾರಿಕತೆ ತೀವ್ರವಾಗಿದೆ. ಕೃತಿಯ ಕೊನೆಯಲ್ಲಿ ಬರುವ ಡೈನಾಮೆಟ್ ಸಿಡಿತದಿಂದ ಊರೇ ಮುಳುಗುವ ಚಿತ್ರಣ ವೈಚಾರಿಕ ರೂಪಕ ಕೂಡ ಆಗುತ್ತದೆ ‘ಯಾನʼ ಕಾದಂಬರಿಯಲ್ಲಿ ಬಾಹ್ಯ ಮತ್ತು ಅಂತರಿಕ ಯಾನಗಳು ಒಟ್ಟಿಗೆ ಸಂಭವಿಸುತ್ತಾ ಕೊನೆಯಲ್ಲಿ ಅಂತರಿಕ ಯಾನಕ್ಕೇ ಮಹತ್ವ ಸಿಕ್ಕುತ್ತದೆ. ಇಲ್ಲಿನ ಅಂತ್ಯ ಕೂಡ ಕೃತಿಯ ಆಶಯವನ್ನು ರೂಪಕಾತ್ಮಕವಾಗಿ ಹಿಡಿದಿಡುತ್ತದೆ. ‘ಸಾಕ್ಷಿʼಯಲ್ಲಿ ಕಾಮದ ವಿವಿಧ ಮುಖಗಳನ್ನು ವೈಚಾರಿಕವಾಗಿ ಹಿಡಿದಿಡುವ ಪ್ರಯತ್ನವಿದೆ. ಇಲ್ಲಿ ನಿಜ ಯಾವುದು ಎನ್ನುವುದೇ ಅತ್ಯಂತಿಕ ಪ್ರಶ್ನೆಯಾಗಿ ಸಾಗುತ್ತದೆ. ‘ಸಾರ್ಥʼ ಕಾದಂಬರಿಯನ್ನು ಧರ್ಮದ ತಾತ್ವಿಕತೆ ಮತ್ತು ಕ್ರಿಯಾಶೀಲತೆಗೆ ಸಂಬಂಧಿಸಿದ ಪ್ರಶ್ನೆ. ಇಲ್ಲಿನ ಚಾರಿತ್ರಿಕ ಪ್ರಶ್ನೆಗಳು ಕಾದಂಬರಿಯ ಸ್ವರೂಪದ ಗಹನತೆಯನ್ನು ಚದುರುವಂತೆ ಮಾಡುತ್ತವೆ. ‘ಮತದಾನʼ ರಾಜಕೀಯದ ಪ್ರಶ್ನೆಯನ್ನು ಹೊಂದಿದ್ದರೂ ಅಲ್ಲಿ ಕೌಟಂಬಿಕ ಬಿಕ್ಕಟ್ಟುಗಳು ಮುಖ್ಯವಾಗಿವೆ. ಇಲ್ಲಿನ ವೈಚಾರಿಕತೆ ಕೂಡ ಇದಕ್ಕೇ ಒತ್ತು ನೀಡಿದೆ ಎನ್ನಬಹುದು. ಭೈರಪ್ಪನವರ ಈ ಮಾದರಿ ಕಾದಂಬರಿಗಳಲ್ಲಿ ವೈಚಾರಿಕತೆ ಸ್ಪಷ್ಟವಾಗಿದೆ. ಅದನ್ನು ಹೊಂದಿಕೊಂಡೇ ಭಾವುಕತೆ ಬಂದಿರುವುದರಿಂದ ಅಲ್ಲಿನ ಜನಪ್ರಿಯ ನೆಲೆಗಳನ್ನು ಗುರುತಿಸುವುದು ಸುಲಭ. ಇಲ್ಲಿ ಭೈರಪ್ಪನವರು ಜನಪ್ರಿಯ ಕಾದಂಬರಿಕಾರರ ಮಾದರಿಗೆ ಹತ್ತಿರವಾಗಿ ನಿಲ್ಲುತ್ತಾರೆ.
ಭೈರಪ್ಪನವರ ಎರಡನೆಯ ಸಾಧ್ಯತೆಯ ಕಾದಂಬರಿಗಳಲ್ಲಿ ವೈಚಾರಿಕತೆ ಬಹುಮುಖಿಯಾಗಿದೆ. ಅದರ ಕೇಂದ್ರವನ್ನು ಕೃತಿಯ ಸಂರಚನೆ ಹಿಡಿದಿಡುತ್ತದೆ. ಇಲ್ಲಿನ ಓದು ಕೂಡ ಬಹುಮುಖಿಯಾಗ ಬೇಕಾಗಿದ್ದು. ‘ತಂತುʼ ಕಾದಂಬರಿಯನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಇದು ತುರ್ತು ಪರಿಸ್ಥಿತಿಯ ರಾಜಕೀಯ ಕಥನ ಎನ್ನುವುದು ನಿಜ. ಅದರ ಜೊತೆಗೆ ಕೌಟಂಬಿಕ ಪ್ರಶ್ನೆಗಳಿವೆ. ತಾಯಿ-ಮಗನ ಸಂಬಂಧದ ಪರಿಶೀಲನೆ ಇದೆ. ದಾಂಪತ್ಯದಾಚೆಗೆ ಸೆಳೆಯುವ ಸಂಬಂಧವಿದೆ. ಸಂಗೀತದ ನೆಲೆ ಕೂಡ ಇದೆ. ಇದನ್ನು ಗಹನತೆಯ ಜೊತೆಗೆ ಅಲ್ಲಲ್ಲಿ ಕಾಣುವ ಜನಪ್ರಿಯ ವಿವರಗಳ ಜೊತೆಗೇ ಗ್ರಹಿಸಿಕೊಳ್ಳಬೇಕು. ಒಟ್ಟಾಗಿ ಇವು ಗಾಢವಾದ ಚಿಂತನೆಯ ಅನುಭವ ನೀಡುತ್ತದೆ ಎನ್ನುವುದು ಮುಖ್ಯ. ‘ಪರ್ವʼ ಮಹಾಭಾರತದ ವೈಭವದ ವಲಯವನ್ನು ಬಿಟ್ಟು ಮಾನವೀಯ ನೆಲೆಯಲ್ಲಿ ಕಥನವನ್ನು ಅರಸುವ ಪ್ರಯತ್ನ ‘ನೆಲೆʼ ಮತ್ತು ‘ಸಾಕ್ಷಿʼಗಳಲ್ಲಿ ಕಾಮದ ಕುರಿತ ಚರ್ಚೆ ಮುಖ್ಯವಾಗಿದ್ದರೂ ಅದು ಗಹನತೆಯನ್ನು ಪಡೆಯುವುದು ‘ಪರ್ವʼದಲ್ಲಿಯೇ. ಶಲ್ಯನ ಮೊಮ್ಮಗಳ ಋತುಚಕ್ರದ ವೈಫಲ್ಯದಿಂದ ಆರಂಭವಾಗುವ ಕಥನ ಸೈನಿಕರ ಬಲಾತ್ಕಾರದಿಂದ ಗರ್ಭಿಣಿಯರಾಗುವ ಸ್ತ್ರೀಯರ ಆಕ್ರಂದನದಲ್ಲಿ ಕೊನೆಗೊಳ್ಳುತ್ತದೆ. ಇಲ್ಲಿ ವಿವಿಧ ಮಾದರಿಯ ಕಾಮದ ಪ್ರಶ್ನೆಗಳು ಚರ್ಚಿತವಾಗಿದೆ. ಹೆಣ್ಣು ತನ್ನ ಹಿಡಿತಕ್ಕೆ ಸಿಕ್ಕ ಬೇಕೆಂದು ಬಯಸುವ ಅರ್ಜುನ, ತಾನು ಹೆಣ್ಣಿನ ಹಿಡಿತಕ್ಕೆ ಸಿಗಬೇಕೆಂದು ಬಯಸುವ ಭೀಮ ಪುರುಷ ಕಾಮದ ಎರಡು ಮುಖಗಳಾಗಿದ್ದಾರೆ. ಪಾಂಡು ವಿಫಲ ಕಾಮವನ್ನು ಸಂಕೇತಿಸುತ್ತಾನೆ. ಕುಂತಿ ಕಾಮದ ಪ್ರಚಂಡ ಪ್ರವಾಹದ ಸಂಕೇತವಾಗುತ್ತಾಳೆ. ದ್ರೌಪದಿಗೆ ಅದು ಜಿಜ್ಞಾಸೆಯ ಪ್ರಶ್ನೆ. ಕುಲೀನ ಸ್ತ್ರೀಯರ ಕಾಮದಲ್ಲಿ ಸ್ತರಗಳಿದ್ದರೆ ದಾಸಿಯರಲ್ಲಿ ಅದು ಸಮರ್ಪಣಾ ಭಾವ. ಗಂಧರ್ವ ಕನ್ಯೆಯರಿಗೆ ಅದು ಕುಲಾಚಾರ. ಇದರ ನಡುವೆ ಶ್ರೀಕೃಷ್ಣ ನರಕಾಸುರನ ಪತ್ನಿಯರನ್ನು ಸ್ವೀಕರಿಸುವ ಕ್ರಮ ಕಾದಂಬರಿ ಪ್ರತಿಪಾದಿಸುವ ಆದರ್ಶವಾಗಿದೆ ಭೈರಪ್ಪನವರ ಕೊನೆಯ ಕಾದಂಬರಿ ‘ಉತ್ತರಾಕಾಂಡʼ ಕೂಡ ಹೆಣ್ಣಿನ ನೋವನ್ನು ಹಿಡಿಯವುವ ಪ್ರಯತ್ನ ಮಾಡಿದ್ದರೂ ಅದರ ಸಂವಿಧಾನ ‘ಪರ್ವʼದಷ್ಟು ಗಟ್ಟಿಯಾಗಿಲ್ಲ. ‘ಪರ್ವʼದ ಆಧುನಿಕ ಸಾಧ್ಯತೆಯಂತೆ ಭಾಸವಾಗುವ ‘ಅಂಚುʼವಿನ ಅಮೃತಾ ‘ಪರ್ವʼದ ಸ್ತ್ರೀ ಪಾತ್ರಗಳು ನಿಲ್ಲಿಸಿದಲ್ಲಿನಿಂದ ಕಥನವನ್ನು ಮುಂದುವರೆಸುತ್ತಾಳೆ. ಅವಳ ಮನೋಪಲ್ಲಟವೇ ಕಾದಂಬರಿಯ ವೈಚಾರಿಕತೆ. ಇಡೀ ಕಾದಂಬರಿಯಲ್ಲಿ ಸಾವು ಮತ್ತು ಹುಟ್ಟು ಎರಡರ ನಡುವಿನ ವೈಚಾರಿಕ ಪ್ರಶ್ನೆಗಳು ಮತ್ತೆ ಮತ್ತೆ ಚರ್ಚಿತವಾಗಿದೆ. ‘ನಿರಾಕರಣʼ ಕೂಡ ಇಂತಹ ಸಾಧ್ಯತೆಯನ್ನು ತೀವ್ರವಾಗಿ ಹಿಡಿದಿರುವ ಕಾದಂಬರಿ. ಅಲ್ಲಿನ ವಸ್ತು ಬಹುಮುಖಿ ನೆಲೆಯಲ್ಲಿ ಇಲ್ಲದೇ ಹೋದರೂ ಗಹನತೆ ತೀವ್ರವಾಗಿದೆ.
ನಿಜಕ್ಕೂ ತೊಡಕಿರುವುದು ಭೈರಪ್ಪನವರ ಮೂರನೆಯ ಮಾದರಿ ಕಾದಂಬರಿಗಳಲ್ಲಿ. ಇಲ್ಲಿ ವೈಚಾರಿಕತೆ ಒಂದು ದಿಕ್ಕಿನಲ್ಲಿದ್ದರೆ ಅದರ ಸಂರಚನೆಯಲ್ಲಿ ಇನ್ನೊಂದು ಧ್ವನಿ ಕಾಣುತ್ತದೆ. ‘ವಂಶವೃಕ್ಷʼದ ವೈಚಾರಿಕ ನೆಲೆ ಸನಾತನ ಧರ್ಮದ ಹಿರಿಮೆಯನ್ನು ನಂಬುವುದು. ತಾವು ಯಾವುದನ್ನು ವಂಶದ ಗೌರವ ಎಂದು ಕರೆದು ತಿಳಿದುಕೊಂಡಿದ್ದರೋ ಆ ವಂಶಕ್ಕೆ ತಾವು ಸೇರಿದವರೇ ಅಲ್ಲ ಎಂದು ತಿಳಿಯುವುದರೊಂದಿಗೆ ಈ ವೈಚಾರಿಕತೆ ಕುಸಿಯುತ್ತದೆ. ಆದರೆ ಸಂರಚನೆ ಗಮನಿಸಿ ಶೋತ್ರಿಗಳ ವ್ಯಕ್ತಿತ್ವ ಇಲ್ಲಿ ಗಂಭೀರ್ಯತೆಯಿಂದ ಚಿತ್ರಿತವಾಗಿದೆ. ವಿದ್ವತ್‌ನಿಂದ ತುಂಬಿ ತುಳುಕುವ ಅವರ ವ್ಯಕ್ತಿತ್ವವೇ ಕಾದಂಬರಿಯಲ್ಲಿ ಮತ್ತೆ ಮತ್ತೆ ಕಾಣುತ್ತದೆ. ಪತ್ನಿಯೇ ಶಯ್ಯಾಗೃಹಕ್ಕೆ ಕಳುಹಿಸಿದ ತರುಣಿಯನ್ನೂ ಅವರು ಮುಟ್ಟದೆ ಅಪಾರ ಸಂಯಮಿಯಾಗಿ ಚಿತ್ರಿತವಾಗುತ್ತಾರೆ. ಇಲ್ಲಿ ತಾಯಿ ಮತ್ತು ಮಗನನ್ನು ಅಗಲಿಸಿದ್ದು ಕ್ರೌರ್ಯ ಎನ್ನಿಸಿಕೊಳ್ಳುವುದೇ ಇಲ್ಲ. ಇದಕ್ಕೆ ವಿರುದ್ಧವಾಗಿ ಮರುಮದುವೆಯಾದ ಕಾತ್ಯಾಯಿನಿ ಅಕಾರಣವಾಗಿ ಗರ್ಭಪಾತದ ಶಿಕ್ಷೆಗೆ ಒಳಗಾಗುತ್ತಾಳೆ. ಇಲ್ಲಿ ಓದುಗರ ಮನಸ್ಸಿನಲ್ಲಿ ಉಳಿದುಕೊಳ್ಳುವ ವೈಚಾರಿಕತೆ ಯಾವುದು ಎನ್ನುವುದು ಮುಖ್ಯವಾದ ಪ್ರಶ್ನೆ. ‘ನಾಯಿ ನೆರಳುʼ ಕಾದಂಬರಿಯಲ್ಲಿ ಪುನರ್ಜನ್ಮದ ಸಮರ್ಥನೆಯ ಚಿತ್ರಣಗಳು ಬರುತ್ತವೆ. ಹಾಗೆ ವಿಶ್ವನಾಥನ ಪತನದ ಚಿತ್ರಣಗಳೂ ಬರುತ್ತವೆ. ಸಂನ್ಯಾಸಿ ರೂಪದಲ್ಲಿ ವಿಶ್ವನಾಥ ಮಗುವಿನ ಪೋಷಣೆಗೆ ಅಗತ್ಯವಾದ ದ್ರವ್ಯ ನೀಡುವ ಚಿತ್ರಣವೂ ಬರುತ್ತದೆ. ಇಲ್ಲಿನ ವೈಚಾರಿಕತೆ ಯಾವುದು ಎನ್ನುವುದೇ ಸ್ಪಷ್ಟವಾಗುವುದಿಲ್ಲ. (ಗಿರೀಶ್ ಕಾಸರವಳ್ಳಿಯವರು ಚಲನಚಿತ್ರವಾಗಿಸುವಾಗ ಇದನ್ನು ನಿವಾರಿಸಿಕೊಂಡ ಬಗೆ ಕುತೂಹಕರವಾಗಿದೆ.) ‘ಗೃಹಭಂಗʼ ದ ನಾಯಕಿ ನಂಜಮ್ಮ ಬದುಕಿನ ಸವಾಲನ್ನು ಎದುರಿಸುವ ರೀತಿ ಕೃತಿಯ ಜೀವಾಳ. ಇಲ್ಲಿ ಕುಟುಂಬದ ಅವಸಾನದಾಚೆಗೆ ಇನ್ನೂ ಏನೋ ಇದೆ ಎಂಬ ಭಾವವನ್ನು ಕೃತಿಯ ಸ್ವರೂಪ ನೀಡುತ್ತದೆ. ‘ಗ್ರಹಣʼ ವೈಜ್ಞಾನಿಕತೆಯ ಚಿತ್ರಣ ನೀಡುತ್ತಲೇ ಪರಂಪರೆಯನ್ನೂ ಜೊತೆಗೆ ನಿಲ್ಲಿಸುತ್ತದೆ ಇಂತಹ ಕಡೆ ಸ್ಪಷ್ಟವಾಗಿ ದ್ವಂದ್ವವಿದೆ. ‘ತಬ್ಬಲಿಯು ನೀನಾದೆ ಮಗನೆʼ ಗೋವಿನ ಹಾಡಿನ ವೈಚಾರಿಕೆಯನ್ನು ಹಿಡಿದು ‘ಅಸ್ವಿತ್ವʼ ದ ಪ್ರಶ್ನೆಯವರೆಗೂ ಚಾಚಿಕೊಂಡಿದೆ. ಇಲ್ಲಿನ ಸಂಸ್ಕೃತಿಯ ಸಂಘರ್ಷದ ಪ್ರಶ್ನೆ ಸರಳೀರಣಗೊಂಡಿದೆ. ‘ಜಲಪಾತʼ ಸಂಗೀತದ ಹಿನ್ನೆಲೆಯಲ್ಲಿಯೇ ಬಂದ ಕೃತಿ ಅಲ್ಲಿ ವಸುಂಧರಾ ಪ್ರಧಾನ ನೆಲೆಯಲ್ಲಿ ಇದ್ದಾಳೆ. ‘ಮಂದ್ರʼದಲ್ಲಿ ಸಂಗೀತ ಇನ್ನಷ್ಟು ಬಹುಮುಖಿಯಾಗಿ ಪ್ರವಹಿಸಿದೆ. ಇಲ್ಲಿ ಮೋಹನ ಲಾಲ್ ಸಂಗೀತ ಕಲಿಕೆ ಪ್ರಧಾನವಾಗಿದೆ. ಇಲ್ಲಿ ಮೋಹನ್ ಲಾಲ್ ಜೀವನದಲ್ಲಿ ಬರುವ ರಮಾಕುಮಾರಿ, ಲೋರೆನ್ ಸ್ಮಿತ್ ಏನನ್ನು ಸೂಚಿಸುತ್ತದೆ. ಅಹಿರ್ ಭೈರವ್ ಯಾವುದಕ್ಕೆ ಸಂಕೇತವಾಗುತ್ತದೆ. ಮೋಹನ್ ಲಾಲ್ ಏಕಕಾಲಕ್ಕೆ ನಾಯಕನೂ ಖಳ ನಾಯಕನೂ ಆದರೆ ಕೃತಿ ಸಾಧಿಸುವುದೇನು ಇಂತಹ ಪ್ರಶ್ನೆಗಳು ಕಾಡುತ್ತವೆ. ಇಂತಹ ಕಡೆ ತಾವು ಪ್ರತಿಪಾದಿಸಿದ್ದನ್ನು ಅಮುಖ್ಯವಾಗಿಸುವ ಕುಶಲತೆಯನ್ನು ಭೈರಪ್ಪನವರು ತೋರಿಸುತ್ತಾರೆ.

ಭೈರಪ್ಪನವರ ಕಾದಂಬರಿಗಳನ್ನು ಹೀಗೆ ಮೂರು ನೆಲೆಗಳಲ್ಲಿ ವಿಶ್ಲೇಷಿಸಬಹುದು. ಮೊದಲ ನೆಲೆಯಲ್ಲಿ ವೈಚಾರಿಕತೆ ಮತ್ತು ಸಂರಚನೆಯ ನಡುವೆ ಬಿಕ್ಕಟ್ಟಿಲ್ಲ. ಇದನ್ನು ಭೈರಪ್ಪನವರ ಚಿಂತನಾಕ್ರಮ ಎಂದೂ ಕೂಡ ಗುರುತಿಸಬಹುದು. ಇವುಗಳ ಓದು ಮತ್ತು ಗ್ರಹಿಕೆ ಎರಡೂ ಸರಳವಾಗಿದೆ ಇದನ್ನು ಜನಪ್ರಿಯ ಮಾದರಿ ಎಂದೂ ಕೂಡ ಕರೆಯಬಹುದು. ಎರಡನೇ ವರ್ಗದ ಕಾದಂಬರಿಗಳಲ್ಲಿ ವೈಚಾರಿಕತೆ ಬಹುಮುಖಿಯಾಗಿದೆ. ಇದನ್ನು ಪರಂಪರೆಯಾಗಿ ನೋಡಿದರೆ ಅವುಗಳಲ್ಲಿನ ಸಾವಯವ ಬಂಧ ಗಮನ ಸೆಳೆಯುವಂತಿದೆ. ಇವು ಕನ್ನಡ ಕಾದಂಬರಿ ಪ್ರಪಂಚಕ್ಕೆ ಗಟ್ಟಿಯಾದ ಕೊಡುಗೆಗಳಾಗಿವೆ. ಸಮಸ್ಯೆ ಇರುವುದು ಮೂರನೆಯ ಹಂತದ ಕೃತಿಗಳಲ್ಲಿ ಇಲ್ಲಿ ಘೋಷಿತ ಆಶಯ ಮತ್ತು ಸಂರಚನೆಯ ನಡುವೆ ಬಿಕ್ಕಟ್ಟಿದೆ. ಇವು ಕೃತಿಯ ಓದಿನ ಸ್ವರೂಪದ ಭಿನ್ನತೆಗೆ ಕಾರಣವಾಗುತ್ತದೆ. ಮತ್ತೆ ಈ ಭಿನ್ನತೆ ಕೃತಿಕಾರರ ಆಶಯ ಕೂಡ ಆಗಿರುವುದು ನಿಜವಾದ ಸಮಸ್ಯೆ. ಈ ಸಮೀಕರಣದ ಮಾದರಿಗಳು ಭೈರಪ್ಪನವರ ಕಾದಂಬರಿಗಳ ಒಟ್ಟು ಸ್ವರೂಪವನ್ನು ಹಿಡಿಯಲಾರವು ಎನ್ನುವ ಎಚ್ಚರಿಕೆ ನನಗಿದೆ. ಅವರ ಕಾದಂಬರಿಗಳ ಶಿಖರವನ್ನು ಏರಲು ಇದೊಂದು ಪ್ರಯತ್ನ ಅಷ್ಟೇ.. ಜನಪ್ರಿಯತೆ ಮತ್ತು ವೈಚಾರಿಕತೆ ಎರಡನ್ನೂ ಅವರು ಸರಿದೂಗಿಸಿದ ಕ್ರಮದ ಬಗ್ಗೆ ಇದೊಂದು ವಿಶ್ಲೇಷಣೆ ಕೂಡ ಹೌದು.

ಪತ್ರಕರ್ತ, ಅಂಕಣಕಾರ ಹಾಗೂ ಲೇಖಕ. ಮಲ್ಲಿಗೆ ಮಾಸ ಪತ್ರಿಕೆ, ಮಂಗಳ ಹಾಗೂ ವಿಜಯವಾಣಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ಕುರಿತ ಬರವಣಿಗೆಗಳು ಇವರ ವಿಶೇಷ.


ವೈಚಾರಿಕತೆ ಮತ್ತು ಜನಪ್ರಿಯತೆಗಳನ್ನು ಸರಿದೂಗಿಸುವಲ್ಲಿನ ಅವರ ಕೃತಿ ಕ್ರಿಯಾತ್ಮಕವು ಓದುಗನ ಮಾರುಹೋಗುವಿಕೆಯಲ್ಲಿ ಯಶಸ್ಸಿನ ಫಲವಾಗಿದೆ.
ಅತ್ಯುತ್ತಮ ವಿಮರ್ಶೆ. ವಂದನೆಗಳು.