ಈ ನಡುವೆ ಪಾತ್ಲಿಂಗಪ್ಪ ಹಾಗೂ ಚಿತ್ಲಿಂಗ ಮತ್ಮತ್ತೆ ಭೇಟಿಯಾಗುತ್ತಿದ್ದದ್ದು ತಿಳಿದು ಮಗಳು ಕುದ್ದು ಹೋಗಿ ವರ್ಷದ ಹಿಂದೆ ಅಪ್ಪನಿಗೆ ಲಾಯರ್‌ ನೋಟೀಸ್‌ ಕಳಿಸಿದ್ದಳು. ಇದು ಪಾತ್ಲಿಂಗಪ್ಪನನ್ನು ಕುಗ್ಗಿಸಿತ್ತು. ತನ್ನದೆಲ್ಲವನ್ನೂ ಕಿತ್ತುಕೊಂಡು ಬೀದಿಗೆ ತಳ್ಳುವ ಹುನ್ನಾರದಂತೆ ಕಂಡಿತ್ತು. ಹಂಗಾಗಿ ಅದು ಆ ವಿಚಾರದಲ್ಲಿ ಅವನನ್ನು ಮತ್ತಷ್ಟು ಬಿಗಿಯಾಗುವಂತೆ ಮಾಡಿತ್ತು. ಅದರೊಟ್ಟಿಗೆ ಅವನೊಳಗೆ ತಾನು ತಮ್ಮನ ಮಗನಿಗೆ ಮಾಡಿದ್ದ ಅನ್ಯಾಯದ ಪಾಪಪ್ರಜ್ಞೆ ಬೆಳೆಯತೊಡಗಿತ್ತು. ಅದು ತಮ್ಮನ ಮಗನಿಗೆ ಹೊಲವನ್ನು ತಿರುಗಿ ಬರೆದುಕೊಡುವಂತೆ ಮಾಡಿತ್ತು.
ಎಸ್. ಗಂಗಾಧರಯ್ಯ ಬರೆದ ಈ ಭಾನುವಾರದ ಕಥೆ “ಸೋಲು” ನಿಮ್ಮ ಓದಿಗೆ

ಅವರಿಬ್ಬರೂ ಜೋಪಾನವಾಗಿ ಒಂದೊಂದೇ ಮೆಟ್ಟಿಲುಗಳನ್ನಿಳಿದು ಮೆಲ್ಲಗೆ ನಡೆದು ಮುಳುಗುವ ಸೂರ್ಯನತ್ತ ಬೆನ್ನು ಹಾಕಿ ಕೂರುವ ಕಲ್ಲಿನಲ್ಲಿ ಕೂತರು. ಅವರೆದುರಿಗೆ ʻಮುಸ್ಸಂಜೆ ವೃದ್ಧಾಶ್ರಮʼವಿತ್ತು. ಬೇಸಿಗೆಯ ಬಿರು ಬೇಸಿಗೆಯ ಧಗೆಯನ್ನು ಅಲ್ಲಿದ್ದ ಹಸಿರು ಕೊಂಚ ತಂಪಾಗಿಸಿತ್ತು. ಅಲ್ಲಿ ಹಲವು ಬಗೆಯ ಹಣ್ಣಿನ ಗಿಡಗಳಿದ್ದವು. ಅವುಗಳೊಂದಿಗೆ ಕೆಲ ತೆಂಗಿನ ಮರಗಳೂ ಅಡಕೆಯ ಮರಗಳೂ ಇದ್ದವು. ಅವೆಲ್ಲವಕ್ಕೂ ಕುಳಿ ಮಾಡಿ ನೀರು ಬಿಡಲಾಗಿತ್ತು. ಕೋಳಿಮೊಟ್ಟೆಯಾಕಾರದಲ್ಲಿದ್ದ ʻಮುಸ್ಸಂಜೆʼಯ ಮುಂಭಾಗದ ಅಂಗಳದಲ್ಲೊಂದು ಸಂಪಿಗೆಯ ಮರವಿತ್ತು. ಅದು ನೆಲದಲ್ಲೇ ಛತ್ರಿಯಂತೆ ಹರವಿಕೊಂಡಿತ್ತು. ವೃದ್ಧಾಶ್ರಮದ ಸುತ್ತಲೂ ಆಳೆತ್ತರದ ಸುತ್ತುಗೋಡೆಯಿತ್ತು.

ʻಯಾಕೋ ಪಾತ ಒಳ್ಳೆ ಆಕಾಶಾನೇ ಕಳುಚ್ಕಂಡು ತಲೆ ಮೇಲೆ ಬೀಳ್ತಾಯ್ತೆ ಅನ್ನೋನಂಗೆ ಯಾಪ್‌ ಮಾರೆ ಹಾಕ್ಕೆಂಡು ಕೂತುದೀಯಾ, ಅದ್ಯಾಕೆ ಕಳ್ದೋಗಿದ್ನೇ ಕೆದಿಕ್ಕೆಂಡ್‌ ಯಣುಗ್ತೀಯೋ ಕಾಣಪ್ಪ,ʼ ಒಂಚೂರು ತಮಾಷೆಯ ದನಿಯಲ್ಲಿ ಅಂದ ಬೆಟ್ಟಪ್ಪ.

ʻಸುರ್ಕಾಣಕಲ್ಲಪ್ಪ ಈ ನೆಲದ್‌ ಮ್ಯಾಗ್ಲಿಂದ ಆದಷ್ಟು ಬೇಗ ಸರ್ಕಣಾಕೆ,ʼ ಅಂದ ಪಾತ್ಲಿಂಗಪ್ಪ ಸಣ್ಣದೊಂದು ನಿಟ್ಟುಸಿರು ಬಿಡುತ್ತಾ.

ʻನಿಂದೊಳ್ಳೆ ಕತೆಯಾಯ್ತಪ್ಪ. ನಿಂಗೆ ಸಾಕಾಗಾಗಂಟ ಇಲ್ಲಿ ಇರ್ತೀನಿ ಅಂದ್ರೂ ಇಟ್ಕಣಾಕೆ ಈ ಭೂಮ್ತಾಯೀನೂ ತಯಾರಿಲ್ಲ ತಗೋ. ಹಂಗೇಯಾ ನಿನ್ನ ಯಾವ ಮೋಹಾನೂ ನಿನ್‌ ಕೂಡಾ ಬರಾಕಿಲ್ಲ ತಿಳ್ಕೋ! ಇನ್ನು ಇರೋವಷ್ಟು ಚಣ ಎಲ್ಲಾದ್ನೂ ಮರ್ತು ಇದ್ದುಬಿಡ್ಬೇಕು, ಒಂದಿಸ ಕಂತೆ ವಗ್ದು ನಡ್ಯೋದು ಇರಾದೇ ಅಲ್ವಾ,ʼ ಅಂದ ಬೆಟ್ಟಪ್ಪನ ದನಿಯಲ್ಲಿದ್ದ ವಿಷಾದದ ಛಾಯೆ ಅವನ ಮುಖದಲ್ಲೂ ಆಡತೊಡಗಿತ್ತು.

ಬೆಟ್ಟಪ್ಪನ ಮಾತುಗಳನ್ನು ಕೇಳುತ್ತಲೇ ಪಾತ್ಲಿಂಗಪ್ಪನ ಕಂಗಳು ತುಂಬಿಕೊಂಡವು. ಅವನ ಅಂಥ ಸ್ಥಿತಿಯನ್ನು ಕಂಡು,
ʻಲೋ ಪಾತ ತಿರ್ಗಾ ಹೋಗೋಗಿ ಅಲ್ಗೇ ನಿಂತ್ಕಂತೀಯಲ್ಲೋ?ʼ ಅಂದ ಬೆಟ್ಟಪ್ಪ ಪಾತ್ಲಿಂಗಪ್ಪನನ್ನೇ ದಿಟ್ಟಿಸಿದ. ಆ ಚಣದವರೆಗೂ ಅವನ ದಿರಿಸನ್ನೂ ಸರಿಯಾಗಿ ಗಮನಿಸದಿರದಿದ್ದ ಬೆಟ್ಟಪ್ಪ ಅಚ್ಚರಿಯಿಂದ, ʻಲೋ ಫಾತ, ಅದ್ಸರಿ ಇವತ್ತ ಯಾಕಿಷ್ಟು ಡಿಕಾವಾಗಿದೀಯಾ ಅಂತ ವಸಿ ಹೇಳ್ತೀಯಾ?ʼ ಅಂದ. ಎಂದಿನಂತೆ ಒಂದು ಮಾಮೂಲಿ ಪಂಚೆ, ಎಂಥದೋ ಒಂದು ಜುಬ್ಬ, ಹೆಗಲ ಮೇಲೊಂದು ಟವೆಲ್ಲನ್ನು ಹಾಕಿಕೊಂಡಿರುತ್ತಿದ್ದ ಪಾತ್ಲಿಂಗಪ್ಪ, ಅವತ್ತು ನೀಟಾಗಿ ಇಸ್ತ್ರಿ ಮಾಡಿದ್ದ ಬಿಳಿ ಪೈಜಾಮ, ಬಿಳಿ ಅಂಗಿಯ ಜೊತೆಗೆ ಹೆಗಲ ಮೇಲೊಂದು ಶಾಲು ಹಾಕಿಕೊಂಡಿದ್ದ. ಕಾಲಲ್ಲಿ ಹೊಸಾ ಚಪ್ಪಲಿಗಳಿದ್ದವು.

ಬೆಟ್ಟಪ್ಪನ ಮಾತಿಗೆ, ʻಯಾಕೂ ಇಲ್ಲ ಸುಮ್ಕೆಯಾ ಹಾಕ್ಕಬೇಕೂ ಅನುಸ್ತು ಹಾಕ್ಕಂಡೆ,ʼ ಅಂದ ಪಾತ್ಲಿಂಗಪ್ಪ. ʻಅಲೆಲೆ ನಂಗೇ ಬುಲ್ಡೆ ಬಿಡ್ತೀಯಾ? ಯಾಕೆ ಅಂತ ಹೇಳು,ʼ ʻಅಯ್ಯೋ ಇದೊಳ್ಳೆ ಘನಂಧಾರಿ ವಿಷ್ಯ ಅನ್ನೋನಂಗೆ ಆಡ್ತೀಯಲ್ಲ, ನನ್ನ ತಮ್ಮನ ಮಗ ಚಿತ್ಲಿಂಗ ಬತ್ತಾವ್ನೆ,ʼ ಅಂದ. ʻಅದೇ ಆರಕ್ಕೆ ಮೂರರಂಗೆ ಹೊಲ ಬರುಸ್ಕಂಡಿದ್ಯಲ್ಲ ಅವ್ನಾ?ʼ ʻಹೂಂ ಅವ್ನೆಯಾ,ʼ ಅಂದ ಪಾತ್ಲಿಂಗಪ್ಪ. ʻಹಂಗಾರೆ…ʼ ಅಂದ ಬೆಟ್ಟಪ್ಪ. ʻಹಂಗಾರೇನೂ ಇಲ್ಲ ಎಂಥದ್ದೂ ಇಲ್ಲ. ಅವುನ್‌ ಜತ್ಯಾಗೇ ಇವತ್ತ ಊರಿಗೆ ಹೋಗ್ತಿದೀನಿ ಒಂದು ದಿನುದ್‌ ಮಟ್ಗೆ. ನಾಡಿದ್ದು ಅವ್ನೇ ಕರ್ಕಂಡ್‌ ಬಂದು ಬಿಟ್ಟೋಗ್ತಾನೆ,ʼ ಅಂದ ಪಾತ್ಲಿಂಗಪ್ಪ. ಆಗವನ ಮುಖದೊಳಗೆ ನಿರುಮ್ಮಳ ಭಾವವೊಂದು ಆಡುತ್ತಿರುವಂತೆ ಕಂಡಿತು.

ಇಬ್ಬರ ನಡುವೆ ಒಂದಷ್ಟು ಹೊತ್ತು ಮೌನ. ಸಂಜೆಗತ್ತಲು ಇಳುಕೊಳ್ಳತೊಡಗಿತು. ಆಶ್ರಮದ ಗೋಡೆಯಾಚೆ ವಾಹನಗಳ ಸದ್ದು ಕಿವಿ ಕಚ್ಚುತ್ತಿತ್ತು. ಅವರು ಕೂತಿದ್ದ ಕಲ್ಲಿನ ಬೇಂಚಿನ ದೀಪವೂ ಸೇರಿದಂತೆ ಆಶ್ರಮದೊಳಗಿನ ದೀಪಗಳು ಒಂದೊಂದಾಗಿ ಬೆಳಗ ಹತ್ತಿದವು. ಆಗ ಅವರಿಬ್ಬರೂ ಬೆಳಕಿನಲ್ಲಿ ರಂಗದ ಮೇಲಿನ ಪಾತ್ರಗಳಂತೆ ಗೋಚರಿಸತೊಡಗಿದರು. ಮೆಲ್ಲಗೆ ತೀಡುತ್ತಿದ್ದ ಕುಳಿರ್ಗಾಳಿ ಕೊಂಚ ಬಿರುವಿಗಿಟ್ಟುಕೊಂಡಿತು. ಇಡೀ ಆಶ್ರಮದಲ್ಲಿ ಬೆಟ್ಟಪ್ಪನೇ ಪಾತ್ಲಿಂಗಪ್ಪನಿಗೆ ಕಷ್ಟ ಸುಖ ತೋಡಿಕೊಳ್ಳಲು ಇದ್ದ ಏಕೈಕ ವ್ಯಕ್ತಿಯಾಗಿದ್ದ. ಅಂಥ ಗೆಳೆಯನಿಂದಲೂ ಗುಟ್ಟಾಗಿಟ್ಟಿದ್ದ ಸಂಗತಿಯನ್ನು ಇದ್ದಕ್ಕಿದ್ದಂತೆ ಯಾಕೋ ಹೇಳಿಕೊಳ್ಳಬೇಕೆನಿಸಿತು. ಹಂಗಾಗಿ, ʻನಿನ್ನತ್ರ ಏನು ಮುಚ್ಚು ಮರೆ…ʼ ಅಂತ ಪಾತ್ಲಿಂಗಪ್ಪ ಬೆಟ್ಟಪ್ಪನನ್ನು ಮಾತಿಗೆಳೆದ. ಪಾತ್ಲಿಂಗಪ್ಪ ಏನನ್ನೋ ಹೇಳಿಕೊಳ್ಳುವ ತುಡಿತದಲ್ಲಿದ್ದಾನೆಂಬುದನ್ನು ಮನಗಂಡ ಬೆಟ್ಟಪ್ಪ ಅವನತ್ತ ನೋಡಿದ. ʻಅದೇ ನನ್ನ ತಮ್ಮನ ಮಗನ ಹತ್ರ ಬರಿಸ್ಕಂಡಿದ್ನಲ್ಲಾ ಹೊಲಾನಾ ಅದುನ್ನ ತಿರುಗ್ಸಿ ಬರ್ಕೊಡನಾ ಅಂತಿದೀನಿ, ನನ್ನ ಮಗ್ಳು ನನ್‌ ಮ್ಯಾಲೆ ಕೇಸ್‌ ಹಾಕವ್ಳೆ… ನಡುದ್ರೆ ಸವ್ದು ಹೋಗ್ತಾಳೆ ಅನ್ನೋ ಹಂಗೆ ಸಾಕಿದ್ವಿ… ಈಗ ನೋಡಿದ್ರೆ ಅವ್ಳೇ…ʼ ಪಾತ್ಲಿಂಗಪ್ಪ ಗದ್ಗದಿತನಾದ. ಮೆಲ್ಲಗೆ ಅವನ ಭುಜ ಸವರಿದ ಬೆಟ್ಟಪ್ಪ, ʻಅದ್ಕೇ ಕಣಪ್ಪ ತಿಳ್ದೋರು ಹೇಳಾದೂ ನಮ್‌ ಮಕ್ಳು ಮಾತ್ರ ನಮ್ ಮಕ್ಳಲ್ಲ ಅಂತಾವಾ. ಮಕ್ಳಿಗಾಗಿ ದುಡಿತೀವಿ, ಮಕ್ಳಿಗಾಗಿ ಬದುಕ್ತೀವಿ, ಕಡ್ಗೆ ಮಕ್ಳಿಂದ್ಲೇ ನೋವನುಭವುಸ್ತೀವಿ, ಇದು ಲೋಕಾರೂಢಿ. ಹಂಗಾಗಿ ಮೋಹ ಹೆಚ್ಚಿದಂಗೆಲ್ಲಾ ನೋವೂ ಹೆಚ್ತಾ ಹೋಗುತ್ತೆ. ಅಷ್ಟುಕ್ಕೂವೆ ಅವುಂದ ಅವುನ್ಗೆ ತಿರುಗ್ಸಿ ಕೊಡಾಕೆ ಯಾಕಿಷ್ಟು ಯೋಚ್ನೆ ಮಾಡ್ತಿದೀಯಾ? ಇಲ್ಲಿ ನೀನು ಆತ್ಮಸಾಕ್ಷಿ ಹೇಳ್ದಂಗೆ ಕೇಳ್ಬೇಕು ಕಣೋ ಪಾತ. ʻಆತ್ಮಸಾಕ್ಷಿನೇ ದೊಡ್ಡ ನ್ಯಾಯಾಲಯʼ ಅಂತ ಗಾಂಧಿ ಅಷ್ಟಲ್ದೇ ಹೇಳಿದಾರಾ. ʻಭೂದಾನʼ ಚಳವಳಿಯ ಕಾಲ್ದಾಗೆ ಸಾವಿರಾರು ಎಕರೆ ಭೂಮೀನ ದಾನ ಮಾಡೋ ಹಂಗೆ ಮಾಡಿದ್ರಲ್ಲ ಗಾಂಧಿ, ಭಾವೆ ಹುಟ್ಟಿದ ನಾಡು ಕಣೋ ಇದು,ʼ ಅಂದ ಬೆಟ್ಟಪ್ಪ. ಬೆಟ್ಟಪ್ಪನ ಮಾತುಗಳು ಪಾತ್ಲಿಂಗಪ್ಪನಿಗೆ ಆಧ್ಯಾತ್ಮದ ಮಾತುಗಳಂತೆ ಕೇಳಿದವು. ಅವು ಪೂರಾ ಅರ್ಥವಾಗದಿದ್ದರೂ ತಾನೀಗ ಮಾಡಹೊರಟಿರೋದು ಅಂಥ ಕೆಲಸವನ್ನೇ ಅನ್ನುವ ನಿರಾಳ ಭಾವವೊಂದು ಪಾತ್ಲಿಂಗಪ್ಪನ ಮುಖದಲ್ಲಾಡುತ್ತಿತ್ತು.

*****

ಬೆಟ್ಟಪ್ಪ ಸಿಗದೇ ಹೋಗಿದ್ದರೆ ತಾನು ಮತ್ತಷ್ಟು ಅಲ್ಪ ಜೀವಿಯಾಗಿಬಿಡುತ್ತಿದ್ದೆ ಅಂತ ಪಾತ್ಲಿಂಗಪ್ಪನಿಗೆ ಅದೆಷ್ಟೋ ಸಾರ್ತಿ ಅನಿಸಿತ್ತು. ಬೆಟ್ಟಪ್ಪ ಸದಾ ಯಾವುದಾದರೊಂದು ಪುಸ್ತಕದ ಸಂಗದಲ್ಲಿರುತ್ತಿದ್ದದ್ದು ಮೊದಮೊದಲಿಗೆ ಪಾತ್ಲಿಂಗಪ್ಪನಿಗೆ ವಿಚಿತ್ರ ಅನಿಸುತ್ತಿತ್ತು. ಬೆಟ್ಟಪ್ಪನ ಮಂಚದ ಪಕ್ಕದ ಪುಟ್ಟ ಬೆಂಚಿನ ಮೇಲೆ ಕೈಯ್ಯಳತೆಯ ದೂರದಲ್ಲಿ ಒಂದಷ್ಟು ಪುಸ್ತಕಗಳಿರುತ್ತಿದ್ದವು. ಯಾವೊತ್ತೂ ಒಂದೇ ಒಂದು ಪುಸ್ತಕವನ್ನೂ ಓದಿರದಿರದಿದ್ದ ಪಾತ್ಲಿಂಗಪ್ಪನೂ ಆಗೊಮ್ಮೆ ಈಗೊಮ್ಮೆ ಸಣ್ಣಪುಟ್ಟ ಪುಸ್ತಕಗಳನ್ನು ಹಿಡಿದು ತಿರುವಾಕುತ್ತಿದ್ದ. ಆದರೆ ಒಂದಷ್ಟು ಪುಟಗಳನ್ನು ತಿರುವಿ ಹಾಕುತ್ತಿದ್ದಂತೆ ಅದು ಹಂಗೇ ಮಂಕಾಗಿ ಬಿಡುತ್ತಿತ್ತು. ಇದನ್ನು ಗಮನಿಸಿದ್ದ ಬೆಟ್ಟಪ್ಪ ಗಾಂಧೀಜಿಯವರ ʻಸತ್ಯಾನ್ವೇಷಣೆʼಯನ್ನು ಕೊಟ್ಟು, ʻಒಂದೇ ಸಾರ್ತಿ ಓದಾಕೆ ಹೋಗ್ಬೇಡ, ಯಾವಾಗ ಓದ್ಬೇಕು ಅನ್ಸುತ್ತೋ ಆಗ ಎರಡೆರಡೇ ಪುಟಗಳನ್ನು ತಿರುವಾಕು,ʼ ಅಂತ ಹೇಳಿದ್ದ. ಹಿಂಗೆ ಆಗೊಮ್ಮೆ ಈಗೊಮ್ಮೆ ಕಣ್ಣಾಡಿಸುತ್ತಾ ಪಾತ್ಲಿಂಗಪ್ಪ ತನ್ನ ಜೀವಮಾನದಲ್ಲಿ ಮೊದಲಿಗೆ ಪೂರಾಂದರೆ ಪೂರಾ ಓದಿದ ಪುಸ್ತಕ ಅದಾಗಿತ್ತು. ಹಂಗಾಗಿ ಅವನು ಓದಿನ ಲಯಕ್ಕೆ ಮೆಲ್ಲಗೆ ಕುದುರಿಕೊಳ್ಳತೊಡಗಿದ್ದ.

ಇಬ್ಬರೂ ಎಂಭತ್ತರ ಹತ್ತಿರವಿದ್ದರು. ಇಬ್ಬರನ್ನೂ ಬದುಕಿನ ಅನಿವಾರ್ಯತೆ ಅಲ್ಲಿಗೆ ತಂದು ನಿಲಾಕಿತ್ತು. ಓದುವ ಕಾಲಕ್ಕೆ ಸಹಪಾಠಿಗಳಾಗಿದ್ದ ಇವರು ವೃದ್ಧಾಶ್ರಮದಲ್ಲೂ ಸರೀಕರಾಗಿದ್ದರು. ಪಾತ್ಲಿಂಗಪ್ಪ ಕಂದಾಯ ಇಲಾಖೆಯಲ್ಲಿ ಬೆಟ್ಟಪ್ಪ ಸಣ್ಣ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದರು. ಬೆಟ್ಟಪ್ಪ ಸರ್ಕಾರಿ ಕೆಲಸದಲ್ಲಿ ಇರುವ ತನಕ ಕೈ ಸ್ವಚ್ಛ ಇಟ್ಟುಕೊಂಡಿದ್ದವನು. ಇದ್ದುದರಲ್ಲೇ ಸಂಸಾರವನ್ನು ನಿಭಾಯಿಸುತ್ತಾ ಮಕ್ಕಳಿಬ್ಬರನ್ನೂ ಚೆನ್ನಾಗಿ ಓದಿಸಿದ್ದ. ನಂತರ ಮಗ ಮತ್ತು ಮಗಳು ಇಬ್ಬರೂ ವಿದೇಶಗಳಲ್ಲಿ ನೆಲೆಸಿದ್ದರು. ಹೆಂಡತಿ ಇರುವವರೆಗೂ ಅವರ ಆ ವಿದೇಸೀ ನೆಲೆ ಬೆಟ್ಟಪ್ಪನಿಗೆ ಏನೇನೂ ಅನಿಸಿರಲಿಲ್ಲ. ಹೆಂಡತಿ ಅಕಸ್ಮಾತ್ತಾಗಿ ತೀರಿಕೊಂಡು ಬಿಟ್ಟಿದ್ದಳು. ಆ ನಂತರ ಮಕ್ಕಳು ಅಲ್ಲಿಗೇ ಬರುವಂತೆ ಕೇಳಿಕೊಂಡಿದ್ದರು. ಆದರೆ ಬೆಟ್ಟಪ್ಪ ಅಲ್ಲಿಗೆ ಹೋಗಲು ಒಪ್ಪದೆ ಸುಮಾರು ವರ್ಷ ಒಬ್ಬನೇ ಬದುಕು ಸಾಗಿಸಿದ್ದ. ಅಪ್ಪ ಮೆತ್ತಾಗಾಗತೊಡಗಿದ್ದಾನೆ ಅನಿಸುತ್ತಿದ್ದಂತೆ ಮಕ್ಕಳು ವೃದ್ಧಾಶ್ರಮಕ್ಕೆ ಸೇರಿಸಿಹೋಗಿದ್ದರು. ಹಂಗಾಗಿ ಸುಮಾರು ಹತ್ತು ವರ್ಷಗಳಿಂದಲೂ ಬೆಟ್ಟಪ್ಪ ಆ ವೃದ್ಧಾಶ್ರಮದಲ್ಲಿದ್ದ. ವಾರಕ್ಕೊಮ್ಮೆ ಮಕ್ಕಳು, ಮೊಮ್ಮಕ್ಕಳೊಂದಿಗೆ ಫೋನಿನಲ್ಲಿ ಮಾತನಾಡಿಕೊಳ್ಳುತ್ತಾ, ವರುಷಕ್ಕೊಮ್ಮೆ ಅವರ ಬರುವಿಕೆಗಾಗಿ ಕಾಯುತ್ತಾ ದಿನ ದೂಡುತ್ತಿದ್ದ.

ಪಾತ್ಲಿಂಗಪ್ಪನಿಗೆ ಇದ್ದದ್ದು ಒಬ್ಬಳೇ ಮಗಳು. ಪಾತ್ಲಿಂಗಪ್ಪನಿಗೆ ಹಳ್ಳಿಯಲ್ಲಿ ಕೈ ತುಂಬಾ ಜಮೀನಿತ್ತು. ಆದರೂ ತಾನಿದ್ದ ಕಂದಾಯ ಇಲಾಖೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಮಾಯಿ ಮಾಡಿಕೊಂಡಿದ್ದ. ಪಾತ್ಲಿಂಗಪ್ಪನ ಹೆಂಡತಿ ಪುಟ್ಟತಾಯಮ್ಮನೂ ಸರ್ಕಾರಿ ಕೆಲಸವೊಂದರಲ್ಲಿದ್ದಳು. ಇದ್ದೊಬ್ಬ ಮಗಳ ಡಿಗ್ರಿ ಮುಗಿಯುತ್ತಲೇ ಕೆಲಸದಲ್ಲಿದ್ದ ಹುಡುಗನನ್ನು ಹುಡುಕಿ ಮದುವೆ ಮಾಡಿದ್ದರು. ಅವಳಿಗೂ ಮೂವರು ಮಕ್ಕಳು ಹುಟ್ಟಿ, ಆ ಮೂರು ಮಕ್ಕಳಿಗಾಗಿ ಪಾತ್ಲಿಂಗಪ್ಪ ಮತ್ತವನ ಹೆಂಡತಿ ತಮ್ಮ ನಿವೃತ್ತಿಯಿಂದ ಬಂದ ಹಣವನ್ನೆಲ್ಲಾ ಒಗ್ಗೂಡಿಸಿ ಆ ಮೊಮ್ಮಕ್ಕಳ ಹೆಸರಿನಲ್ಲಿ ಡೆಪಾಸಿಟ್‌ ಮಾಡಿದ್ದರು.

ಹಿಂಗಿರುವಾಗ ಸುಮಾರು ಹತ್ತು ವರ್ಷದ ಹಿಂದೆ ಪುಟ್ಟತಾಯಮ್ಮ ಇದ್ದಕ್ಕಿದ್ದಂತೆ ಖಾಯಿಲೆ ಬಿದ್ದುಬಿಟ್ಟಿದ್ದಳು. ಆಗ ಕೆಲ ತಿಂಗಳುಗಳ ಕಾಲ ನಗರದಲ್ಲಿದ್ದ ಮಗಳ ಮನೆಗೆ ಹೋಗಿ ಇರಬೇಕಾದಂಥ ಪರಿಸ್ಥಿತಿ ಬಂದೊದಗಿತ್ತು. ಆ ಹೊತ್ತಲ್ಲಿ ಒಂದು ದಿನ ಪುಟ್ಟತಾಯಮ್ಮ ಮಗಳ ಮನೆಯಲ್ಲಿ ನೇಣಿಗೆ ಶರಣಾಗಿಬಿಟ್ಟಿದ್ದಳು. ಆಗ ದಿಢೀರನೇ ಒಬ್ಬಂಟಿಯಾಗಿಬಿಟ್ಟಿದ್ದ ಪಾತ್ಲಿಂಗಪ್ಪನೂ ಅನಿವಾರ್ಯವಾಗಿ ಮಗಳ ಮನೆಗೆ ಹೋಗಬೇಕಾಗಿ ಬಂದಿತ್ತು. ಹಿಂಗೆ ಒಂದೆರಡು ವರ್ಷಗಳು ಉರುಳುವ ಹೊತ್ತಿಗೆ ಮಗಳು ಮತ್ತು ಅಳಿಯ ಒಂದಾಗಿ ಪಟ್ಟಣದಲ್ಲಿ ಪಾತ್ಲಿಂಗಪ್ಪನ ಹೆಸರಿನಲ್ಲಿದ್ದ ಮನೆ ಮತ್ತು ಸೈಟುಗಳನ್ನು ಬರೆದುಕೊಡುವಂತೆ ಪೀಠಿಕೆ ಹಾಕಿದ್ದರು. ಇದು ಪಾತ್ಲಿಂಗಪ್ಪನೊಳಗೆ ಹತ್ತು ಹಲವು ಅನುಮಾನಗಳನ್ನು ಹುಟ್ಟಾಕಿತ್ತು. ಆದರೂ ಎಂದಿದ್ದರೂ ಇದೆಲ್ಲಾ ಅವಳಿಗೇ ತಾನೆ ಸೇರಬೇಕಾದ್ದು ಅಂತ ತನ್ನನ್ನು ತಾನೇ ಸಂತೈಸಿಕೊಂಡು ಊರಿನಲ್ಲಿರುವ ಆಸ್ತಿ ಮತ್ತು ಒಂದು ಮನೆಯನ್ನು ಬಿಟ್ಟು ಮಿಕ್ಕಿದ್ದನ್ನೆಲ್ಲಾ ಬರೆದುಕೊಟ್ಟಿದ್ದ.

ಅದಾಗಿ ಒಂದೆರಡು ವರ್ಷಗಳಿಗೆ ಅಳಿಯ ಮತ್ತು ಮಗಳ ಕಣ್ಣು ಹಳ್ಳಿಯ ಆಸ್ತಿಯತ್ತ ಹೊರಳಿತ್ತು. ಹಂಗಾಗಿ ಅಲ್ಲಿರುವ ಆಸ್ತಿ ಮತ್ತು ಮನೆಯನ್ನೂ ಬರೆದುಕೊಡುವಂತೆ ಕೇಳಿದ್ದರು. ಇದರಿಂದ ಪಾತ್ಲಿಂಗಪ್ಪ ನಿಜಕ್ಕೂ ಕುಗ್ಗಿಹೋಗಿದ್ದ. ಅಷ್ಟಕ್ಕೂ ತನ್ನ ಹೆಸರಲ್ಲಿ ಇದ್ದರೇನು ಅವರ ಹೆಸರಲ್ಲಿ ಇದ್ದರೇನು ಎರಡೂ ಒಂದೇ ತಾನೇ ಅಂದುಕೊಂಡು ಅದೇ ಮಾತನ್ನ ಅವರಿಬ್ಬರಿಗೂ ರವಾನಿಸಿದ್ದ. ʻನಿಂಗೆ ಒಂದು ತಿಳುದ್ರೆ ಇನ್ನೊಂದು ತಿಳ್ಯಲ್ಲ,ʼ ಅನ್ನುವ ನೆಪವೊಡ್ಡಿ ಮಗಳು ಅಪ್ಪನನ್ನು ಪುಸಲಾಯಿಸಿದ್ದಳು. ಆಗಲೂ ಪಾತ್ಲಿಂಗಪ್ಪನ ಮನಸು ಕರಗಿರಲಿಲ್ಲ. ಬದಲಿಗೆ ಇದ್ದಬದ್ದದನ್ನೆಲ್ಲಾ ಕಿತ್ತುಕೊಂಡು ಬೀದಿಗೆ ತಳ್ಳಿಬಿಟ್ಟರೆ ಗತಿಯೇನು ಅನ್ನುವ ಭಯ ಮತ್ತು ಅನುಮಾನಕ್ಕೊಳಗಾಗಿದ್ದ.

ಪಾತ್ಲಿಂಗಪ್ಪನ ಮಗಳ ಅಂಥ ಅವಸರಕ್ಕೊಂದು ಕಾರಣವಿತ್ತು. ಅದರ ಹಿಂದೆ ನಾಲ್ಕು ಎಕರೆ ಹೊಲದ ಗುಟ್ಟಿತ್ತು. ಪಾತ್ಲಿಂಗಪ್ಪ ಕೇವಲ ತಾನು ಕೆಲಸ ಮಾಡುತ್ತಿದ್ದ ಇಲಾಖೆಯಲ್ಲಷ್ಟೇ ದುರಾಸೆಯ ಮನುಷ್ಯನಾಗಿರಲಿಲ್ಲ. ಜೊತೆಗೆ ಅಲ್ಲಿನ ಕಮಾಯನ್ನೆಲ್ಲಾ ಹಳ್ಳಿಯಲ್ಲಿ ಯಾರೂ ಜಮೀನು ಮಾರುತ್ತಾರೆಂದರೂ ಬಿಡದೆ ಕೊಳ್ಳಲೂ ಬಳಸುತ್ತಿದ್ದ. ಹಂಗೆ ತನ್ನ ಸ್ವಂತ ತಮ್ಮನ ಮಗ ಚಿತ್ಲಿಂಗನಿಂದ ಸಸ್ತಾ ಅಂದರೆ ಸಸ್ತಾಕ್ಕೆ ಹೊಡೆದುಕೊಂಡಿದ್ದ ಹೊಲವೇ ಆ ನಾಲ್ಕು ಎಕರೆ ಹೊಲವಾಗಿತ್ತು. ಚಿತ್ಲಿಂಗನ ಅಪ್ಪ ಅಪಘಾತವೊಂದರಲ್ಲಿ ಸಾವು ಬದುಕಿನ ನಡುವೆ ಸೆಣಸಾಡುತ್ತಿರುವಂಥ ಹೊತ್ತಲ್ಲಿ ಅವನಿಗೆ ಕಾಸು ಕೊಟ್ಟಂಗೆ ಮಾಡಿ ಆರಕ್ಕೆ ಮೂರರಂಗೆ ಆ ಹೊಲವನ್ನು ಬರೆಸಿಕೊಂಡುಬಿಟ್ಟಿದ್ದ. ಹಂಗೆ ಬರೆಸಿಕೊಳ್ಳುವಾಗ ಗಂಡ ಹೆಂಡಿರಿಬ್ಬರೂ, ʻಅಯ್ಯೋ ಇರೋಳು ಒಬ್ಳು ಮಗ್ಳು ನಮಗ್ಯಾಕಪ್ಪ ಜಮೀನು, ಹಂಗಂತ ನಾವೀಗ ತಗಳಲ್ಲ ಅಂದ್ರೆ ಯಾವನೋ ಮೂರನೆಯವ್ನು ಬಂದು ವಕ್ಕರಿಸ್ಕಂಡುಬಿಡ್ತಾನೆ. ಹಂಗಾಗಿ ಮನಸು ಮಾಡ್ಬೇಕಾಗಿ ಬಂದೈತೆ,ʼ ಅಂತ ನಾಟಕದ ಮಾತುಗಳನ್ನಾಡಿದ್ದರು. ಸಾಲದ್ದಕ್ಕೆ ಅವನು ಹೆಂಗಿದ್ದರೂ ಮತ್ತೆ ಕೊಳ್ಳಲು ಬರಲ್ಲ ಅನ್ನುವ ಅಗಾಧ ನಂಬಿಕೆಯಿಂದ, ʻನಿಂಗೆ ಯಾವಾಗ ದುಡ್ಡು ಒದಗುತ್ತೋ ಆಗ ಬಂದು ನಮ್ಮ ಹೊಲಾನಾ ನಮ್ಗೆ ಬಿಟ್ಕೊಡು ಅಂತ ಕೇಳು, ಆ ಚಣದಲ್ಲೇ ನಿಂಗೆ ತಿರುಗ್ಸಿ ಬರ್ಕೊಟ್ಟು ಬಿಡ್ತೀವಿ,ʼ ಅಂತಲೂ ಮಾತುಕೊಟ್ಟಿದ್ದರು.

ಅಲ್ಲಿಗೆ ಎರಡು ವರ್ಷಕ್ಕೆ ಆ ಹೊಲದ ಪಕ್ಕವೇ ನಾಲೆಯೊಂದು ಹೋಗಿತ್ತು. ಹಂಗಾಗಿ ಅದಕ್ಕೆ ಚಿನ್ನದ ಬೆಲೆ ಬಂದು ಅದನ್ನು ಒಳಗೊಳಗೇ ಮಾರಾಟಕ್ಕಿಟ್ಟುಬಿಟ್ಟಿದ್ದ ಪಾತ್ಲಿಂಗಪ್ಪ. ಆ ಸುದ್ದಿ ಕಿವಿಗೆ ಬೀಳುತ್ತಲೇ ಚಿತ್ಲಿಂಗ ದೊಡ್ಡಪ್ಪನನ್ನು ಕಂಡು ಹೊಲವನ್ನು ಬರೆದುಕೊಡುವಂತೆ ಕೇಳಿದ್ದ. ಆಗಿನ್ನೂ ಪುಟ್ಟತಾಯಮ್ಮ ಬದುಕಿದ್ದಳು.

ಹಿಂಗೆ ಇದ್ದಕ್ಕಿದ್ದಂತೆ ಕೇಳಿದ್ದರಿಂದ ಬೆಚ್ಚಿ ಬಿದ್ದಿದ್ದ ಪಾತ್ಲಿಂಗಪ್ಪ, ʻಅಯ್ಯೋ ಅದೆಂಗಾದಾತು?ʼ ಅಂತ ದಬಾಯಿಸಿದ್ದ. ʻನನ್ನತ್ರ ಬರ್ಸಿಕೊಳ್ವಾಗ ನೀನು ಏನು ಅಂದಿದ್ದೆ ಅಂತ ವಸಿ ನೆನಪಿಸ್ಕೋ,ʼ ಅಂದಿದ್ದ ಚಿತ್ಲಿಂಗ. ʻನಾನೇನು ಅಂದಿರಲಿಲ್ಲಪ್ಪ, ನಿಂಗೆ ಕಾಸು ಎಣ್ಸಿದ್ದೆ ನೀನು ಹೊಲ ಬರ್ಕೊಟ್ಟಿದ್ದೆ ಅಷ್ಟೇಯಾ,ʼ ʻನಿಂದೂ ಒಂದು ನಾಲ್ಗೇನಾ? ನೀನಾದ್ರೂ ಹೇಳು ದೊಡ್ಡವ್ವ,ʼ ಅಂತ ಪುಟ್ಟ ತಾಯಮ್ಮನತ್ತ ನೋಡಿದ್ದ. ʻಅದೇನೇನ್‌ ಮಾತಾಡಿಕೊಂಡಿದ್ರೋ ನೀವು ಗಂಡುಸ್ರು ನಂಗೇನೂ ಗೊತ್ತಿಲ್ಲಪ್ಪ, ನೀನುಂಟು ನಿನ್ನ ದೊಡ್ಡಪ್ಪ ಉಂಟು,ʼ ಅಂತ ಜಾರಿಕೊಂಡಿದ್ದಳು ಅವಳು.
ಹಿಂಗೆಲ್ಲಾ ಇದ್ದುದರಿಂದ ಹಾಗೂ ಅದು ಸ್ವಯಾರ್ಜಿತ ಆಸ್ತಿಯಾದುದರಿಂದ ಯಾವುದಾರೂ ಮರುಳಿಗೆ ಬಿದ್ದು ಅಪ್ಪ ಅದನ್ನು ಬರೆದುಕೊಟ್ಟುಬಿಟ್ಟರೆ ಅನ್ನುವ ಅನುಮಾನ ಮಗಳು ಮತ್ತು ಅಳಿಯನೊಳಗೆ ದಿನಕಳೆದಂತೆ ಬೆಳೆಯತೊಡಗಿತ್ತು. ಹಂಗಾಗಿ ಅದನ್ನೆಲ್ಲಾ ತಮ್ಮ ಹೆಸರಿಗೆ ಮಾಡಿಕೊಂಡು ಬಿಡುವ ದುರಾಲೋಚನೆಗೆ ಬಿದ್ದಿದ್ದರು.

ಯಾವಾಗ ತನ್ನ ಅಪ್ಪ ಯಾವುದನ್ನೂ ಕಿವಿಗಾಕಿಕೊಳ್ಳದೆ ಇರತೊಡಗಿದನೋ ಮಗಳು ಅಸಹನೆಯಿಂದ ಕುದಿಯತೊಡಗಿದ್ದಳು. ಅದು ಅವಳಿಗೆ ಯಾವುದೋ ಒಳಮರ್ಮದಂತೆ ಕಂಡಿತ್ತು. ಇಂಥ ಆಲೋಚನೆ ಹೆಚ್ಚಾಗುತ್ತಾ ಆಗತ್ತಾ ಮನೆಯಲ್ಲಿ ಪಾತ್ಲಿಂಗಪ್ಪನನ್ನು ಕಡೆಗಣಿಸತೊಡಗಿದರು. ಅದು ಬರಬರುತ್ತಾ ಜಾಸ್ತಿ ಆಗತೊಡಗಿತ್ತು. ಇದು ಪಾತ್ಲಿಂಗಪ್ಪನನ್ನು ಕೆರಳಿಸಿತ್ತು. ಅಳಿಯ ಮತ್ತು ಮಗಳ ಮೇಲೆ ರೇಗಾಡತೊಡಗಿದ್ದ. ಒಂದು ದಿನ, ʻಇದು ನಮ್ಮನೆ, ನಾವು ಹೇಳ್ದಂಗೆ ಕೇಳ್ಕಂಡು ಇರೋ ಹಂಗಿದ್ರೆ ಇರಬಹ್ದು ಇಲ್ಲಾಂದ್ರೆ ನಿನ್‌ ದಾರಿ ನೀನು ನೋಡ್ಕೋ,ʼ ಅಂತ ಖುದ್ದು ಮಗಳೇ ಪಾತ್ಲಿಂಗಪ್ಪನ ಮುಖಕ್ಕೆ ಹೊಡೆದಂತೆ ಅಂದಿದ್ದಳು. ಎಲ್ಲಿ ಹೋಗಬೇಕು ಏನು ಮಾಡಬೇಕು ಅನ್ನುವ ಗೊಂದಲಕ್ಕೊಳಗಾಗಿ ದಿಕೆಟ್ಟಿದ್ದ. ಕಡೆಗೊಂದು ದಿನ ಸೀದಾ ವೃದ್ಧಾಶ್ರಮದ ಬಾಗಿಲು ತಟ್ಟಿದ್ದ. ಅದಾಗಿ ಆರು ವರ್ಷಗಳ ಮೇಲಾಗಿತ್ತು. ಮತ್ತೆ ಮಗಳ ಮನೆಯತ್ತ ಹೋಗಲು ಅವನಿಗೆ ಸ್ವಾಭಿಮಾನ ಅಡ್ಡ ಬಂದಿತ್ತು. ತಿರುಗಿ ಹಳ್ಳಿಗೇ ಹೋಗಿ ಬಿಡೋಣ ಅಂದರೆ, ಅಲ್ಲಿ ಕೂಡಾ ಮುಖ ಕೆಡಿಸಿಕೊಂಡಿದ್ದರಿಂದ ಆ ಯೋಚನೆಯನ್ನು ತಾನೇ ಬರ್ಕಾಸ್ತು ಮಾಡಿಕೊಂಡಿದ್ದ. ಅಪ್ಪ ಅಲ್ಲಿದ್ದದ್ದನ್ನು ಪತ್ತೆ ಮಾಡಿದ್ದ ಮಗಳು ಸಮಾರು ಸಾರ್ತಿ ಅಲ್ಲಿಗೂ ಹೋಗಿ ರಂಪ ಮಾಡಿದ್ದಳು.

ಈ ನಡುವೆ ಪಾತ್ಲಿಂಗಪ್ಪ ಹಾಗೂ ಚಿತ್ಲಿಂಗ ಮತ್ಮತ್ತೆ ಭೇಟಿಯಾಗುತ್ತಿದ್ದದ್ದು ತಿಳಿದು ಮಗಳು ಕುದ್ದು ಹೋಗಿ ವರ್ಷದ ಹಿಂದೆ ಅಪ್ಪನಿಗೆ ಲಾಯರ್‌ ನೋಟೀಸ್‌ ಕಳಿಸಿದ್ದಳು. ಇದು ಪಾತ್ಲಿಂಗಪ್ಪನನ್ನು ಕುಗ್ಗಿಸಿತ್ತು. ತನ್ನದೆಲ್ಲವನ್ನೂ ಕಿತ್ತುಕೊಂಡು ಬೀದಿಗೆ ತಳ್ಳುವ ಹುನ್ನಾರದಂತೆ ಕಂಡಿತ್ತು. ಹಂಗಾಗಿ ಅದು ಆ ವಿಚಾರದಲ್ಲಿ ಅವನನ್ನು ಮತ್ತಷ್ಟು ಬಿಗಿಯಾಗುವಂತೆ ಮಾಡಿತ್ತು. ಅದರೊಟ್ಟಿಗೆ ಅವನೊಳಗೆ ತಾನು ತಮ್ಮನ ಮಗನಿಗೆ ಮಾಡಿದ್ದ ಅನ್ಯಾಯದ ಪಾಪಪ್ರಜ್ಞೆ ಬೆಳೆಯತೊಡಗಿತ್ತು. ಅದು ತಮ್ಮನ ಮಗನಿಗೆ ಹೊಲವನ್ನು ತಿರುಗಿ ಬರೆದುಕೊಡುವಂತೆ ಮಾಡಿತ್ತು.

*****

ಕೆಲ ತಿಂಗಳ ಕೆಳಗೆ ಪಾತ್ಲಿಂಗಪ್ಪನೇ ತಮ್ಮನ ಮಗ ಚಿತ್ಲಿಂಗನಿಗೆ ಫೋನ್‌ ಮಾಡಿ ಮಾತಾಡಿದ್ದ. ಜೊತೆಗೆ ಆಶ್ರಮಕ್ಕೆ ಬಂದು ತನ್ನನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದ. ಹಂಗೆ ಭೇಟಿಯಾದಾಗ ದೊಡ್ಡಪ್ಪನ ಸಧ್ಯದ ಸ್ಥಿತಿಯನ್ನು ಕಂಡು ಚಿತ್ಲಿಂಗನ ಕರುಳು ಚುರುಕ್‌ ಅಂದಿತ್ತು. ಅದಾದ ಮೇಲೆ ಇಬ್ಬರ ನಡುವೆ ಆಗಾಗ ಫೋನಿನಲ್ಲಿ ಮಾತುಕತೆಯಾಗುತ್ತಿತ್ತು. ಅತ್ತ ನಗರಕ್ಕೆ ಹೋದಾಗ ಕೆಲವೊಮ್ಮೆ ಚಿತ್ಲಿಂಗ ದೊಡ್ಡಪ್ಪನನ್ನು ಕಂಡು ಬರುತ್ತಿದ್ದ. ಊರಿಗೆ ಬರುವಂತೆ ಕರೆಯುತ್ತಿದ್ದ. ʻಅಯ್ಯೋ ಏನುಲ್ಲ ಎಂತುಲ್ಲಾ ಈಗ್ಲೇ ಈನಾಡಿ ರಾಮಾಯಣ ಆಗಿ ಕೂತೈತೆ, ಇನ್ನ ನಿಂಜೊತೇಲಿ ಬಂದ್ರೆ ಆಟೇಯಾ,ʼ ಅಂತ ಮೇಲ್ನೋಟಕ್ಕೆ ಅನ್ನುತ್ತಿದ್ದರೂ ಪಾತ್ಲಿಂಗಪ್ಪನೊಳಗೆ ಊರಿಗೆ ಹೋಗುವ ಆಸೆ ಕಾಡುತ್ತಿತ್ತು. ಅಂತ ಅವನ ತವಕದ ಹಿಂದೆ ಹೆಂಡತಿ ಪುಟ್ಟತಾಯಮ್ಮನ ಸಮಾಧಿಯನ್ನು ನೋಡುವ ತುಡಿತವಿತ್ತು.

ಈ ನಡುವೆ ಮಗಳು ಹಠ ಹೆಚ್ಚಾಗತೊಡಗಿತ್ತು. ʻನಿಂಗಿನ್ನೂ ಏನಾಗ್ಬೇಕಾಗೈತೆ? ಯಾವಾಗ ಅಂದ್ರೆ ಆವಾಗ ಗೊಟುಕ್‌ ಅಂತೀಯಾ ಅಂತಾದ್ರಾಗೆ ಯಾವ ವೈಭೋಗಾನಾ ಸುರ್ಕಣಾಕೆ ಆಸ್ತಿ ಆಸ್ತಿ ಅಂತ ಸಾಯ್ತೀಯಾ?ʼ ಅಂತ ಅನ್ನತೊಡಗಿದ್ದಳು. ಮಗಳು ತನ್ನ ಸಾವನ್ನೇ ಎದುರು ನೋಡುತ್ತಿದ್ದಾಳೆ ಅನ್ನಿಸಿ ಪಾತ್ಲಿಂಗಪ್ಪನಿಗೆ ಎದೆ ಭಾರವಾಗುತ್ತಿತ್ತು. ಅವಳಿಗೂ ಗೊತ್ತಿತ್ತು. ಕೋರ್ಟಿಗೆ ಹೋದ ಕೇಸು ತೀರ್ಮಾನ ಆಗಾಕೆ ಹತ್ತಾರು ವರ್ಷಗಳೇ ಹಿಡಿಯುತ್ತವೆ. ಅಷ್ಟರಲ್ಲಿ ಅಪ್ಪನಿಗೂ ಏನಾದರೂ ಆಗಿಬಿಡಬಹುದು ಇಲ್ಲವೇ ಅಪ್ಪನೇ ಖುದ್ದು ತಮ್ಮನ ಮಗನಿಗೆ ಬರೆದುಕೊಟ್ಟು ಬಿಡಬಹುದು ಅಂತ. ಮಗಳ ಇಂಥ ವರಾತ ಅತಿಯಾದಂತೆಲ್ಲಾ ಪಾತ್ನಿಂಗಪ್ಪನಿಗೆ ಯಾಕೋ ಚಿತ್ಲಿಂಗನ ಕಡೆಗೆ ಮನಸು ವಾಲತೊಡಗಿತ್ತು. ʻಅಷ್ಟೆಲ್ಲಾ ಅನ್ಯಾಯ ಮಾಡಿದ್ರೂ ನನ್ನ ನೋಡಾಕೆ ಬಂದಾಗ ಒಂದಿಸಾನಾದ್ರೂ ಹೊಲಾನಾ ಬರ್ಕೊಡು ಅಂತ ಕೇಳಿಲ್ಲ, ಮಕ ತಿರ್ಗುಸ್ಕಂಡು ಹೋಗ್ಲಿಲ್ಲ, ಬಾಯ್ತುಂಬ ದೊಡ್ಡಪ್ಪ ಅಂತಾನೇ ಕರೀತಾನೆ,ʼ ಅಂತ ಅಂದುಕೊಳ್ಳುತ್ತಿದ್ದ. ಅದು ಅವನೊಳಗೆ ಆಡತೊಡಗಿದಂತೆಲ್ಲಾ ʻನಾನು ಯಾರ್ಗೋಸ್ಕರ ಈಟೆಲ್ಲಾ ಮಾಡಿದ್ನೋ ಅವ್ಳೇ ಈಗ …ʼ ಅಂತ ಅಂದುಕೊಳ್ಳುತ್ತಾ ಸಂಕಟಕ್ಕೊಳಗಾಗುತ್ತಿದ್ದ. ತಮ್ಮನ ಮಗನ ಬಗ್ಗೆ ʻಸಧ್ಯಕ್ಕೆ ಕಾಸಿಲ್ಲ ಅಂದ್ರೆ ಆದಾಗ ಕೊಡ್ಲಿ, ಮಕ್ಕಳೊಂದಿಗ,ʼ ಅನ್ನುವಷ್ಟು ಧಾರಾಳತನಕ್ಕೂ ತಯಾರಾಗಿದ್ದ.

ಕಳೆದ ವಾರ ಇದನ್ನೆಲ್ಲಾ ಚಿತ್ಲಿಂಗನಿಗೆ ತಿಳಿಸಿದ್ದ. ಒಂದು ದಿನದ ಮಟ್ಟಿಗೆ ಕರೆದುಕೊಂಡು ಹೋದರೆ ಬರೆದುಕೊಡುವುದಾಗಿಯೂ ಆದರಿದು ಯಾರೊಬ್ಬರ ಕಿವಿಗೂ ಬೀಳದಂತೆ ಗುಟ್ಟಾಗಿಡುವಂತೆಯೂ ಹೇಳಿದ್ದ. ದೊಡ್ಡಪ್ಪನ ಹಂಗನ್ನುತಿದ್ದಂತೆ ಚಿತ್ಲಿಂಗ ಸಬ್‌ ರಿಜಿಸ್ಟ್ರಾರ್‌ ಆಫೀಸಿಗೆ ಎಡತಾಕಿ ದಿನವನ್ನು ಗೊತ್ತು ಮಾಡಿಕೊಂಡಿದ್ದ. ಅದರಂತೆ ಹಿಂದಿನ ದಿನ ರಾತ್ರಿ ಬಂದು ಕರೆದುಕೊಂಡು ಬರುವುದಾಗಿ ಪಾತ್ನಿಂಗಪ್ಪನಿಗೂ ತಿಳಿಸಿದ್ದ. ಆ ಕಾರಣಕ್ಕಾಗಿಯೇ ಪಾತ್ಲಿಂಗಪ್ಪ ಅಷ್ಟು ಡಿಕಾವಾಗಿ ಬೆಟ್ಟಪ್ಪನೊಂದಿಗೆ ಕೂತು ಚಿತ್ಲಿಂಗನ ದಾರಿ ಕಾಯುತ್ತಾ ಕೂತಿದ್ದ.

ಬೆಟ್ಟಪ್ಪ ಗಾಂಧೀಜಿಯವರ ʻಸತ್ಯಾನ್ವೇಷಣೆʼಯನ್ನು ಕೊಟ್ಟು, ʻಒಂದೇ ಸಾರ್ತಿ ಓದಾಕೆ ಹೋಗ್ಬೇಡ, ಯಾವಾಗ ಓದ್ಬೇಕು ಅನ್ಸುತ್ತೋ ಆಗ ಎರಡೆರಡೇ ಪುಟಗಳನ್ನು ತಿರುವಾಕು,ʼ ಅಂತ ಹೇಳಿದ್ದ. ಹಿಂಗೆ ಆಗೊಮ್ಮೆ ಈಗೊಮ್ಮೆ ಕಣ್ಣಾಡಿಸುತ್ತಾ ಪಾತ್ಲಿಂಗಪ್ಪ ತನ್ನ ಜೀವಮಾನದಲ್ಲಿ ಮೊದಲಿಗೆ ಪೂರಾಂದರೆ ಪೂರಾ ಓದಿದ ಪುಸ್ತಕ ಅದಾಗಿತ್ತು.

ಅವರಿಬ್ಬರೂ ಊರು ತಲುಪುವ ಹೊತ್ತಿಗೆ ಊಟದ ಹೊತ್ತು ಮೀರಿತ್ತು. ನಡುಮನೆಗೆ ಕಾಲಿಡುತ್ತಿದ್ದಂತೆ ಎದುರು ಗೋಡೆಗೆ ನೇತಾಕಿದ್ದ ಸಹೋದರ ಸಿದ್ವೀರನ ಪಟವನ್ನು ನೋಡುತ್ತಲೇ ಪಾತ್ಲಿಂಗಪ್ಪ ಸಂಕಟಕ್ಕೊಳಗಾಗಿದ್ದ. ತನಗಿಂತ ಮೂರು ವರ್ಷ ಚಿಕ್ಕವನಾಗಿದ್ದ, ಕಲ್ಲು ಗುಂಡಿನಂತಿದ್ದ ತಮ್ಮ ಸಿದ್ವೀರನಿಗೆ ಅಪಘಾತವಾಗಿ ವಾರಗಟ್ಟಲೆ ಆಸ್ಪತ್ರೆಯಲ್ಲಿ ಮಲಗಿದ್ದಂಥ ಹೊತ್ತಲ್ಲಿ ಕೂಡಾ ಹೊಲ ಬರೆಸಿಕೊಂಡು ಚಿತ್ಲಿಂಗನಿಗೆ ಕಾಸು ಕೊಟ್ಟಿದ್ದು, ಮತ್ತೆ ಬರೆದುಕೊಡುವಂತೆ ಕೇಳಿದಾಗ ಮಾತಿಗೆ ತಪ್ಪಿದ್ದು, ಆ ಚಣ ಪಾತ್ಲಿಂಗಪ್ಪನನ್ನು ಮತ್ತೂ ಸಣ್ಣವನನ್ನಾಗಿಸಿತ್ತು.

ಇರುಳೆಲ್ಲಾ ಅರೆ ನಿದ್ದೆ ಅರೆ ಎಚ್ಚರದಲ್ಲಿ ಕಳೆದಿದ್ದ ಪಾತ್ಲಿಂಗಪ್ಪ ಅಚ್ಚಗಾಗುತ್ತಲೇ ಎದ್ದು ತನ್ನ ತೋಟದತ್ತ ಹೊರಟ. ಆಟೊತ್ತಿಗಾಗಲೇ ಎದ್ದು ಇದ್ದೊಂದು ಕರೇವಿನ ಸೀಮೆಹಸುವನ್ನು ಕೊಟ್ಟಿಗೆಯಿಂದ ಆಚೆಯ ವಪ್ಪಾರಿಗೆ ಕಟ್ಟುತ್ತಿದ್ದ ಚಿತ್ಲಿಂಗ, ʻದೊಡ್ಡಪ್ಪ ಬೇಗ ಬಂದುಬಿಡು,ʼ ಅಂದಿದ್ದ. ಚಿತ್ಲಿಂಗನಿಗೆ ದೊಡ್ಡಪ್ಪ ಅತ್ತ ಹೋಗುತ್ತಿರುವುದು ಇಷ್ಟವಿರಲಿಲ್ಲ. ಏಕೆಂದರೆ ಅಲ್ಲಿ ಯಾರ ಕಣ್ಣಿಗಾದರೂ ಬಿದ್ದು, ಅದನ್ನ ಅವರು ಮಗಳ ಕಿವಿಗೇನಾದರೂ ಹಾಕಿದ್ರೆ ಕೆಲಸ ಕೆಡುತ್ತೆ ಅನ್ನುವ ಆತಂಕವಿತ್ತು. ಅದನ್ನು ಗ್ರಹಿಸಿದ ಪಾತ್ಲಿಂಗಪ್ಪ, ʻಈಟೊತ್ಗೆಯಾ ಅದ್ಯಾರು ಎದ್ದಿರ್ತಾರೆ ಬಿಡು,ʼ ಅಂದ.

ಮಗಳು ಮತ್ತು ಅಳಿಯನ ಸುಪರ್ಧಿಗೆ ಹೋದ ಮೇಲೆ ತೋಟವನ್ನು ಅದೇ ಊರಿನವನೊಬ್ಬರಿಗೆ ಕೋರಿಗೆ ಕೊಟ್ಟಿದ್ದರು. ಅದರ ಆಬದ್ದಿನ ಬಗ್ಗೆಯಾಗಲಿ, ಅದನ್ನು ನಿಗಾ ಮಾಡುತ್ತಿರುವುದರ ಬಗ್ಗೆಯಾಗಲಿ ಅವರು ತಲೆಕೆಡಿಸಿಕೊಂಡಿರಲಿಲ್ಲ. ಪಕ್ಕದ ಕೆರೆಗೆ ನಾಲೆಯ ನೀರು ಬಂದ ಮೇಲೆ ತೋಟದ ಬೆಲೆ ಯದ್ವಾತದ್ವಾ ಜಾಸ್ತಿಯಾಗಿಬಿಟ್ಟಿತ್ತು. ಅವರ ಗಮನ ತೋಟಕ್ಕಿಂತಲೂ ಆ ನೆಲಕ್ಕಿರುವ ಕಿಮ್ಮತ್ತಿನ ಕಡೆಗಷ್ಟೇ ಇತ್ತು.

ವೃದ್ಧಾಶ್ರಮ ಸೇರಿದ ಮೇಲೆ ಪಾತ್ಲಿಂಗಪ್ಪ ಹಳ್ಳಿಗೆ ಕಾಲಿಟ್ಟಿರಲಿಲ್ಲ. ಕಣ್ಣುಗಳು ತಕ್ಕ ಮಟ್ಟಿಗಿದ್ದರೂ ಕಿವಿಗಳು ಕೈಕೊಟ್ಟಿದ್ದವು. ಹಂಗಾಗಿ ಒಬ್ಬೊಬ್ಬನೇ ಓಡಾಡುವ ಕಾಲ ಮುಗಿದು ಹೋಗಿತ್ತು. ಊರಲ್ಲಿದ್ದ ಗೆಳೆಯರಾಗಲೇ ಪರಲೋಕವಾಸಿಯಾಗಿದ್ದರು. ಇನ್ನು ಇದ್ದೊಬ್ಬ ತಮ್ಮನ ಮನೆಯಲ್ಲೂ ಮುಖ ಕೆಡಿಸಿಕೊಂಡಿದ್ದ.

ತೋಟದೆಡೆಗೆ ಅವನು ಇಡುತ್ತಿದ್ದ ಒಂದೊಂದು ಹೆಜ್ಜೆಯೂ ಹೆಂಡತಿ ಪುಟ್ಟತಾಯಮ್ಮನ ನೆನಪುಗಳನ್ನು ಹೆಚ್ಚಿಸುತ್ತಿತ್ತು. ಅವುಗಳ ಭಾರಕ್ಕೆ ಪಾತ್ಲಿಂಗಪ್ಪ ತತ್ತರಿಸಿಹೋದ. ಹೆಂಡತಿ ಕೈಯ್ಯಾರೆ ಕೊಂದುಕೊಳ್ಳುವಂಥವಳಲ್ಲ. ಇಲ್ಲಿ ಏನೋ ನಡೆದಿದೆ ಅನ್ನುವ ಪಾತ್ಲಿಂಗಪ್ಪನ ಎಂದಿನ ಅನುಮಾನ ಮತ್ತೆ ಎದ್ದಾಡತೊಡಗಿತು.

ತೋಟ ಇನ್ನೇನು ಹತ್ತಿರ ಬಂತು ಅನ್ನುವ ಹೊತ್ತಿಗೆ ಚೆನ್ನಾಗಿಯೇ ಬೆಳಕಾಯಿತು. ಪಾತ್ಲಿಂಗಪ್ಪ ತನ್ನ ತೋಟದತ್ತ ತಿರುಗಿದ್ದ ಕಾಲ್ದಾರಿಯ ತಿರುವಿನಲ್ಲಿ ನಿಂತು ತೋಟವನ್ನೊಮ್ಮೆ ದಿಟ್ಟಿಸಿದ. ಅಲ್ಲಿನ ನೋಟ ಅವನಿಗೆ ಎದೆಗಾಕಿ ತಿವಿದಂಗಾಯ್ತು. ಹೊಳೆ ಬಾಗಿಲೇ ಇರಲಿಲ್ಲ. ಬೇಲಿ ಪೂರಾ ತಾತಾತೂತವಾಗಿತ್ತು. ತೋಟಾಂಥ ತೋಟವೆಲ್ಲಾ ಹಾಳು ಸುರಿಯುತ್ತಿತ್ತು. ಬೇಲಿಯ ತಡಿಯಲ್ಲಿಸುತ್ತಲೂ ಹಾಕಿದ್ದ, ಇಡೀ ತೋಟಕ್ಕೇ ಒಂಥರಾ ಕಳೆ ಕೊಟ್ಟಿದ್ದ ನೂರಾರು ತೇಗದ ಮರಗಳು ಮಂಗಮಾಯವಾಗಿದ್ದವು. ಒಂದೆರಡು ಹಲಸಿನ ಮರ ಮತ್ತು ಮಾವಿನ ಮರಗಳನ್ನು ಬಿಟ್ಟರೆ ಮತ್ಯಾವ ಹಣ್ಣಿನ ಮರಗಳೂ ಕಾಣಲಿಲ್ಲ. ಇದ್ದ ತೆಂಗಿನ ಮರಗಳೂ ಆಗಲೋ ಈಗಲೋ ಬಿದ್ದೋಗುವಂತಿದ್ದವು.

ಹೊಳೆಬಾಗಿಲನ್ನು ತಲುಪಿದ ಪಾತ್ಲಿಂಗಪ್ಪ, ʻಇದನ್ನ ನೋಡಾಕೇಂತಾನೇ ನಾನಿನ್ನೂ ಬದುಕಿದೀನಾ ದೇವರೇ,ʼ ಅಂದ ತುಸು ಜೋರಾಗಿ. ಪಾತ್ಲಿಂಗಪ್ಪನಿಗೆ ತೋಟದ ಬಗೆಗಿನ ವ್ಯಾಮೋಹ ಯಾವತ್ತೋ ಕರಗಿ ಹೋಗಿಬಿಟ್ಟಿತ್ತು. ಒಂದು ಪಕ್ಷ ಹೆಂಡತಿಯ ಸಮಾಧಿ ಅಲ್ಲಿರದೇ ಹೋಗಿದ್ದರೆ ಅವನು ಅತ್ತ ಹೋಗುವ ಮನಸ್ಸೂ ಮಾಡುತ್ತಿರಲಿಲ್ಲ. ಹೊಳೆಬಾಗಿಲನ್ನು ದಾಟಿದ ಪಾತ್ಲಿಂಗಪ್ಪ ಅದರಿಂದ ಕೊಂಚ ದೂರದಲ್ಲಿದ್ದ ಹಲಸಿನ ಮರದತ್ತ ನೋಡಿದ. ಅದರ ಕೊಂಬೆಯೊಂದು ಜೋಕಾಲಿಯೋಪಾದಿಯಲ್ಲಿ ನೆಲ ಮುಟ್ಟುವಂತಿತ್ತು. ಮಗಳು ಚಿಕ್ಕವಳಿದ್ದಾಗ ಅದರ ಮೇಲೆ ಕೂರಿಸಿ ತೂಗುತಿದ್ದದ್ದು ನೆನಪಾಯ್ತು. ಒಂದೆರಡು ಚಣ ನಿಂತಲ್ಲೇ ನಿಂತು ನಂತರ ಹೆಂಡತಿಯ ಸಮಾಧಿಯತ್ತ ಹೋದ.

ತೋಟದ ನಡೂ ಮಧ್ಯೆ ಬೀಸಾಗಿದ್ದ ಬದುವಿನ ನಡುವೆ ಗ್ರಾನೈಟ್‌ ಕಲ್ಲುಗಳಿಂದ ಕಟ್ಟಿಸಿದ್ದ ಹೆಂಡತಿಯ ಸಮಾಧಿಯ ಸುತ್ತಲೂ ಥರಾವರಿ ಗಿಡಗಳು ಬೆಳಕಂಡು ಇಡೀ ಸಮಾಧಿಯನ್ನು ಒಂಚೂರೂ ಕಾಣದಂತೆ ಕವುಕಂಡಿದ್ದವು. ಅವು ವರ್ಷಗಳಿಂದ ಯಾವೊಂದು ನರಪಿಳ್ಳೆಯೂ ಅತ್ತ ಸುಳಿಯದಿರುವುದನ್ನು ಸಾರಿ ಹೇಳುತ್ತಿದ್ದವು. ಬದುಕಿರುವವರೆಗೂ ತೋಟವನ್ನು ಹಸಿರಿನ ತಾಣವಾಗಿಸಿದ್ದ ಹೆಂಡತಿಯ ಸಮಾಧಿಯೇ ಅನಾಥವಾಗಿತ್ತು. ʻಅಯ್ಯೋ ಪುಟ್ತಾಯಿ,ʼ ಅಂತ ದುಃಖಿಸುತ್ತಾ ಗಿಡಗಂಟೆಗಳನ್ನು ಅರುಗು ಮಾಡಿಕೊಂಡು ಸಮಾಧಿಯ ಎದುರು ಹೋಗಿ ನಿಂತ. ಸಮಾಧಿಯ ಮುಂಭಾಗದಲ್ಲಿ ಇಕ್ಕೆಲಗಳಲ್ಲೂ ಇದ್ದ ಗೇಣಗಲದ ದೀಪದ ಗೂಡುಗಳಲ್ಲಿ ಹೆಗ್ಗಡಜಗಳು ಗೂಡು ಕಟ್ಟಿಕೊಂಡಿದ್ದವು. ಸಮಾಧಿಗೆ ಅಂಟಿಕೊಂಡಂತಿದ್ದ ಜಾಲಿ ಗಿಡವೊಂದರ ಮುಳ್ಳುಗಳಲ್ಲಿ ಹಾವೊಂದರ ಪೊರೆ ಸಿಕ್ಕಾಕಿಕೊಂಡಿತ್ತು. ಅದರಿಂದ ಕೊಂಚ ಅತತ ಕಡ್ಡಿಜೇನಿನ ಖಾಲಿ ವುಟ್ಟಿಯಿತ್ತು. ಚುರುಕಾಗತೊಡಗಿದ್ದ ಬೆಳಗಿನ ಬಿಸಿಲಿನಲ್ಲಿ ಅದು ಸಣ್ಣಗೆ ಬೆಳಗುತ್ತಿತ್ತು.

ಅದೆಷ್ಟೋ ಹೊತ್ತು ಸಮಾಧಿಯನ್ನೇ ಕಣ್ತುಂಬಿಕೊಂಡು ನಿಂತುಬಿಟ್ಟ ಪಾತ್ಲಿಂಗಪ್ಪನಿಗೆ ಇದ್ದಕ್ಕಿದ್ದಂತೆ ಎದೆಯಲ್ಲಿ ಏನೋ ಕಳಿಕ್‌ ಅಂದಂಗಾಯ್ತು. ಹಿಂದೆಯೇ ತಲೆ ಸುತ್ತು ಬಂದಂತಾಯ್ತು. ಮುಮ್ಮಖವಾಗಿ ಸಮಾಧಿಯತ್ತ ಬಾಗಿದವನೇ ಕೈಗಳೆರಡನ್ನೂ ಊರಿಕೊಂಡು ಸಮಾಧಿಯ ಕಟ್ಟೆಯ ಮೇಲೆ ಕುಸಿದ. ನಂತರ ಅವನ ಮೈ ಮೆಲ್ಲಗೆ ಸಮಾಧಿಯತ್ತ ವಾಲಿತು. ಅದೇ ಹೊತ್ತಿಗೆ ಚಿತ್ಲಿಂಗನ ಕೂಗು ತೋಟದಗಲಕೂ ಸುತ್ತುಯ್ಯ ಹತ್ತಿತು.