ಕಾನ್‍ಫೆರೆನ್ಸ್ ರೂಮಿನ ಪಳ ಪಳಾ ಹೊಳೆಯುತ್ತಿದ್ದ ಮೇಜಿನಮೇಲೆ ಫ್ಲವರ್ ಪಾಟೂ ಮಿನರಲ್ ವಾಟರ್ ಬಾಟಲುಗಳೂ ಬಂದು ನಿಂತವು. ಗಾಜಿನ ಬಾಗಿಲುಗಳ ಮೂಲಕ ನೋಡಿದರೆ, ಮಂಜು ಮುಸುಕಿದ ಪರ್ವತ ಶ್ರೇಣಿಗಳಲ್ಲಿ ಎಳೆಬಿಸಿಲು ಸ್ಪಷ್ಟಗೊಳ್ಳುತ್ತಿರುವುದು, ಮಸುಕಾಗುತ್ತಿರುವುದು ಕಾಣಬಹುದು. ಆಕಾಶದಲ್ಲಿ ಮಳೆಯ ಸೂಚನೆಗಳು ಗೋಚರಿಸುತ್ತಿದ್ದವು. ಅವರು ಕಂಪನಿಯ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಾ ವಾದವಿವಾದಗಳನ್ನು ಮುಂದಿಡುತ್ತಿದ್ದರು. ಆಗ ಅವರ ಮನಸ್ಸುಗಳಲ್ಲಿ ಸ್ಕಾಚ್ ಮತ್ತು ಯಾಕ್ ಮಾಂಸಗಳು ಸುಳಿದಾಡುತ್ತಿದ್ದವು.
ಕೆ. ಪ್ರಭಾಕರನ್‌ ಅನುವಾದಿಸಿದ ಮಲಯಾಳಂನ ಪ್ರಸಿದ್ಧ ಲೇಖಕ ಎಂ. ಮುಕುಂದನ್ ಅವರ ಕತೆ “ಎಂ.ಜಿ.” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

 

ಆಫೀಸಿಗೆ ಸಂಬಂಧಿಸಿದಂತೆ ಹೆಚ್ಚು ದೂರವಿಲ್ಲದ ಪ್ರಯಾಣಗಳಿಗಾಗಿ ಮಾತ್ರ ಉಪಯೋಗಿಸುವ ಸಣ್ಣ ಸೂಟ್‍ಕೇಸ್ ಅಲಮಾರದ ಮೇಲಿಂದ ಹಾಸಿಗೆಯ ಮೇಲೆ ಇಳಿಯಿತು. ಅಕ್ಷರದ ಬೀಗದಲ್ಲಿ ಮೂರು ಸಾಲುಗಳಾಗಿ ಸಂಖ್ಯೆಗಳು ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸಿತು. ಸಂಖ್ಯೆಗಳ ಸ್ಥಿರವಾದ ಹೊಂದಾಣಿಕೆ ಸೇರಿಕೊಂಡಾಗ ಬೀಗದೊಳಗಿನಿಂದ ಕ್ಲಿಕ್ ಎನ್ನುವ ಶಬ್ದ ಹೊರಕ್ಕೆ ಕೇಳಿಸಿತು. ಬೀಗದ ಎರಡೂ ಕಡೆ ಜಿ.ಎಂ. ಎನ್ನುವ ಎರಡಕ್ಷರಗಳನ್ನು ನೋಡಬಹುದು. ಅದು ಜನರಲ್ ಮೇನೆಜರ್ ಎನ್ನುವ ಹುದ್ದೆಯ ಸಂಕ್ಷಿಪ್ತ ರೂಪವಲ್ಲ. ಬದಲಿಗೆ, ಗಂಗಾಧರ ಮಾರಾರ್ ಎನ್ನುವ ಅವರ ಹೆಸರಿನ ಸಂಕ್ಷಿಪ್ತವಷ್ಟೆ. ಸಂಕ್ಷಿಪ್ತ ಹೆಸರಿನ ಸಮೀಪವಿರುವ ಚೌಕಾಕಾರದ ಮೇಲೆ ಹೆಬ್ಬೆರಳಿನಿಂದ ಅಮುಕಿದಾಗ ಪೆಟ್ಟಿಗೆಯ ಮೇಲ್‌ಭಾಗ ನಿಗೂಢವಾದ ನಿಯಂತ್ರಣದಿಂದ ಮುಕ್ತಗೊಂಡಿತು. ಅದೇ ಹೆಬ್ಬೆರಳಿನಿಂದ ಮೆಲಕ್ಕೊಮ್ಮೆ ತಟ್ಟಿದಾಗ ಪೆಟ್ಟಿಗೆ ತೆರೆದುಕೊಂಡಿತು. ಅದರ ಬೂದು ಬಣ್ಣದ ಒಳಭಾಗಕ್ಕೆ ಕ್ಷೌರ ಸಾಮಾಗ್ರಿಗಳಿಗಿರುವ ಸಣ್ಣ ವಾಸನೆ ಇತ್ತು.

ಬಣ್ಣ ಮಾಸಿದ ಅಲಮಾರದ ಬಾಗಿಲು ಈಗ ತೆರೆಯಲ್ಪಟ್ಟಿತು. ಡ್ರೈಕ್ಲೀನ್ ಮಾಡಿಸಿಕೊಂಡು ಬಂದ ಬಟ್ಟೆಗಳು ಜಾಗರೂಕತೆಯಿಂದ ಪೆಟ್ಟಿಗೆಯೊಳಗಡೆಗೆ ಸಂಚರಿಸಿತು. ಮಾರ್ಬಲ್ ಅಳವಡಿಸಿದ್ದ ಬಾತ್ ರೂಮಿನ ಗೋಡೆಗೆ ಜೋಡಿಸಲಾದ ವೃತ್ತಾಕಾರದ ಮುಖ ಕನ್ನಡಿಯ ಮುಂಭಾಗದ ಶೆಲ್ಫಿನಿಂದ ರೇಸರು, ಸೋಪು, ಕತ್ತರಿ, ಡೆಟ್ಟಾಲು ಮುಂತಾದವುಗಳು, ಒದ್ದೆಯಿಂದ ಮಾಸಿಹೋದ ಬಾಗಿಲು ದಾಟಿ ಬೆಡ್‌ರೂಮಿಗೆ ಪ್ರವೇಶಿಸಿ, ಪೆಟ್ಟಿಯೊಳಗೆ ಗಟ್ಟಿಯಾಗಿ ಕುಳಿತವು. ಬಾಲ್ಕನಿಯ ಹ್ಯಾಂಡ್‌ರೈಲಿಗೆ ಹಾಕಿದ್ದ ಟರ್ಕಿಶ್ ಸ್ನಾನದ ಟವಲು ನಾಲ್ಕಾಗಿ ಮಡಿಚಿಕೊಂಡು ಹಿಂತಿರುಗಿ ಹಾಲ್ ಮೂಲಕ ನಡೆದು ಬೆಡ್‌ರೂಮನ್ನು ಪ್ರವೇಶಿಸಿತು. ಪೆಟ್ಟಿಗೆಯ ಒಳಗೆಬಂದು ಮಡಚಿಟ್ಟ ಬಟ್ಟೆಗಳ ಮೇಲೆ ಬಿದ್ದುಕೊಂಡಿತು.

“ಇನ್ಯಾವುದನ್ನೂ ಮರೆತಿಲ್ಲವಲ್ಲ…?”

“ಇಲ್ಲ…”

“ಬಿ.ಪಿ. ಮಾತ್ರೆ…?”

“ಅಯ್ಯೋ ದೇವರೇ… ಯಾವಾಗಲೂ ನಾನದನ್ನು ಮರೆತುಬಿಡ್ತಿನಿ…”

ಹಾಸಿಗೆಯ ಪಕ್ಕದಲ್ಲಿರುವ ಸಣ್ಣ ಟೀಪಾಯಿಯಿಂದ ಮಾತ್ರೆಗಳ ಪೆಟ್ಟಿಯೊಳಗಿನ ಸೈಡ್ ಕಿಸೆಗೆ ರವಾನೆಯಾಯಿತು.

“ನಾನು ಹೇಳಿದ್ದು ನೆನಪಿಟ್ಟುಕೊಳ್ಳಬೇಕು…”

“ಏನೂ…?”

“ಕುಡೀ ಬಾರದೂಂತ…”

“ಅದು… ನಾನು ದೇವರ ಮೇಲೆ ಆಣೆ ಹಾಕಿದ್ದಲ್ಲವಾ…? ಆದರೂ ನಿನಗೆ ನಂಬಿಕೆ ಬರ್ತಿಲ್ವಾ…? ನಾನೀಗ ಏನುತಾನೆ ಮಾಡಲಿ…? ನನ್ನ ಮೇಲೆ ಸ್ವಲ್ಪನೂ ನಂಬಿಕೆ ಇಲ್ಲದ ಹಾಗೆ ಆಯ್ತಲ್ಲ…”

“ಇಲ್ಲಿರುವಾಗ ಹೀಗೆ ಮಾತಾಡ್ತಿರಾ…ಅಲ್ಲಿಗೆ ಹೋದ ಮೇಲೆ ಎಲ್ಲಾ ಮರ್ತುಬಿಡ್ತಿರಾ.. ನಾನೂ ಮಗಳೂ… ಯಾವುದರ ಬಗ್ಗೆಯೂ ನಿಮಗೆ ನೆನಪೇ ಇರೋದಿಲ್ಲ. ಅದೇ ಅಲ್ವಾ ವಾಡಿಕೆ…?”

“ನಿನ್ನ ತಲೆ ಮೇಲೆ ಕೈಯಿಟ್ಟು ಪ್ರಮಾಣ ಮಾಡ್ತಿನಿ. ಒಂದು ಹನಿ ಸಹ ಕುಡಿಯೋದಿಲ್ಲ…”

“ಪ್ರಮಾಣ ಮಾಡೋದೇನು ಬೇಡ. ಕುಡೀದೆ ಇದ್ರೆ ಅಷ್ಟೇ ಸಾಕು. ಬಿ.ಪಿ. ಇರೋ ಜನ ನೀವು, ಅಷ್ಟು ನೆನಪಿದ್ರೆ ಸಾಕು…”

ಪಡಸಾಲೆಯ ಕೊನೆಯಲ್ಲಿ ಪಾಲಿಷ್ ಮಾಡಿಟ್ಟ ಶೂಗಳು ಬಾತ್‌ರೂಮಿನ ಮುಂದಿನಿಂದ, ಈ ಮೊದಲು ರೇಸರು, ಕತ್ತರಿ ಮುಂತಾದವು ಸಂಚರಿಸಿದ್ದ ಅದೇ ಹಾದಿಯಲ್ಲಿ ಬಂದು ಬೆಡ್‌ರೂಮಿನಲ್ಲಿರುವ ಅವರ ಕಾಲುಗಳ ಮುಂದೆ ಬಂದು ನಿಂತವು. ಮೊದಲು ಬಲಗಾಲು ನಂತರ ಎಡಗಾಲು ಶೂವಿನೊಳಗೆ ಸೇರಿಕೊಂಡವು.

ಹೊರಗಡೆ ಮನೆಯ ಮುಂದೆ ಕಂಪನಿಯ ಎ.ಸಿ. ಕಾರು ಬಂದು ನಿಂತಿತು.

ತೆರೆದುಕೊಂಡಿದ್ದ ಪೆಟ್ಟಿಗೆ ಮುಚ್ಚಿಕೊಂಡಿತು. ಮೂರು ಸಾಲುಗಳ ಸಂಖ್ಯೆಯು ಕೆಳಕ್ಕೆ ಜಾರಿದವು. ಬೀಗ ಹಾಕಿದ ಪೆಟ್ಟಿಗೆ ಹಾಸಿಗೆಯ ಮೇಲಿಂದ ಎದ್ದು ಬಾಲ್ಕನಿಗೆ ಸಾಗಿತು. ನಂತರ ಅದು ಮೆಟ್ಟಿಲಿಳಿದು ಗೇಟನ್ನು ದಾಟಿ ಕಾರಿನ ಬಾಯಿ ತೆರೆದುಕೊಂಡಿದ್ದ ಡಿಕ್ಕಿಯೊಳಗಡೆ ಅಪ್ರತ್ಯಕ್ಷವಾಯಿತು.

“ಹಾಗಾದರೆ…ಬರಲೇ…?”

“ಎರಡು ದಿನಗಳೊಳಗೆ ಬರ್ಬೇಕು. ಇಲ್ಲಿ ನಾನೂ ಮಗಳೂ ಮಾತ್ರ ಇರೋದು…”

“ನನಗೆ ಒಂದಿವ್ಸದ ಕೆಲ್ಸ ಮಾತ್ರ ಇರೋದಲ್ಲಿ…”

“ಅಲ್ಲಿಗೆ ಹೋದ ತಕ್ಷಣ ಎಲ್ಲಾ ಮರ್ತು ಬಿಡ್ತಿರಾ. ನನ್ನ್ ಮಗ ಇದ್ದಿದ್ದರೆ…”
ಕಣ್ಣುಗಳಲ್ಲಿ ಉಪ್ಪುರಸ ಮಿಶ್ರಗೊಂಡಿತು.

“ಛೇ…ಇದೇನಿದು…? ಮಕ್ಕಳ ತರ್ಹಾ…”

ಹೆಂಡತಿಯ ಕಣ್ಣುಗಳ ಉಪ್ಪುರಸ ಅವರ ಮುಖಕ್ಕೂ ನರೆತ ಮೀಸೆಗೂ ಹರಡಿತು.

“ಅಯ್ಯೋ ಗೋಪಾಲ ನಾಯರ್ ನೋಡ್ತಾ ಇದ್ದಾರೆ…”

“ನೋಡಲಿ…”

ಮತ್ತೆ ಅವರು ತಮ್ಮ ಹೆಂಡತಿಗೆ ಚುಂಬಿಸಿದರು. ಒಂದು ಬೆಕ್ಕು ಅದರ ಯಜಮಾನನ ದೇಹಕ್ಕೆ ಮುಖವನ್ನು ಒರೆಸುತ್ತಿರುವಂಥ ಕೆಲಸದಂತೆ ಇತ್ತದು. ಮದುವೆಯಾಗಿ ಒಂದು ಕಾಲು ಶತಮಾನ ಕಳೆದರೂ ಈಗಲೂ ತನ್ನ ಹೆಂಡತಿಗೆ ಇಷ್ಟವಾಗುವಂತೆ ಅಂದವಾಗಿ ಚುಂಬಿಸಲು ಅವರಿಗಿನ್ನೂ ಗೊತ್ತಿಲ್ಲ.

ಕಾರಿನ ಹಿಂದಿನ ಡೋರು ತೆರೆದುಕೊಂಡು ಮತ್ತೆ ಮುಚ್ಚಿಕೊಂಡಿತು.

“ಯಾಕೆ ಗೋಪಾಲ ನಾಯರ್ರೇ…. ಈ ಎ.ಸಿ.ಕಾರು…? ನಾವು ಹಿಮಾಲಯಕ್ಕೆ ತಾನೇ ನಾವು ಪ್ರಯಾಣ ಮಾಡುತ್ತಿರೋದು…?”

ಗೋಪಾಲ ನಾಯರ್ರ ಬಾಯಿ ಎರಡೂ ಕಡೆ ಎಳೆಯಲ್ಪಟ್ಟಾಗ, ಹೊಗೆ ಸೊಪ್ಪಿನ ಕರೆ ಹಿಡಿದುಕೊಂಡಿದ್ದ ಹಲ್ಲುಗಳು ಹೊರಗಡೆಗೆ ಗೋಚರಿಸಿದವು. ಆ ಕೃತ್ಯವನ್ನೇ ನಾವು ನಗು ಎಂದು ಕರೆಯೋದು. ಜಿ.ಎಂ.ಗೆ ಅಂದವಾಗಿ ಹೇಗೆ ಚುಂಬಿಸುವುದಕ್ಕೆ ಗೊತ್ತಿಲ್ಲವೋ ಹಾಗೆಯೇ ಗೋಪಾಲ ನಾಯರ್‍ಗೆ ಚೆಂದವಾಗಿ ನಗುವುದಕ್ಕೂ ಬರುವುದಿಲ್ಲ. ನಗುವುದಕ್ಕಾಗಿ ಅವರು ನಡೆಸುವ ಪ್ರತಿಯೊಂದು ಪ್ರಯತ್ನವೂ ಹೊಗೆಸೊಪ್ಪಿನ ಕರೆಯ ದೃಶ್ಯದಲ್ಲಿ ವಿಫಲಗೊಳ್ಳುವುದೇ ವಾಡಿಕೆ. ಅವರ ನಗು ಎನ್ನುವುದು ಅಹಿತಕರವಾದ ಕೆಲವು ಚೇಷ್ಟೆಗಳು ಮಾತ್ರವಾಗಿ ಭಾವಿಸಲಾಗುತ್ತಿತ್ತು.

ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು ಬಲಗೈ ಸೀಟಿನ ಮೇಲ್ಭಾಗ ಚಾಚಿಕೊಂಡು ಎಡಗೈ ಮಡಿಲಿನಲ್ಲಿಟ್ಟು ಬಲಕಾಲು ಎಡಕಾಲಿನ ಮೇಲೆ ಏರಿಸಿಟ್ಟು ಅವರು ಕಂಪನಿಯ ಬಗ್ಗೆ ಆಲೋಚಿಸತೊಡಗಿದರು. ಹಿಮಾಲಯದ ರಾಣಿಕೇತ್‌ನಿಂದ ಐವತ್ತು ಕಿಲೋಮೀಟರ್ ದೂರವಿರುವ ಕಂಪನಿ ಗೆಸ್ಟ್ ಹೌಸಿನಲ್ಲೇ ಮೀಟಿಂಗ್ ಇರೋದು. ಮಂಜು ಮುಸುಕಿದ ಪರ್ವತಗಳ ನಡುವಿನ ಕಂದಕಗಳಲ್ಲಿ ದೇವದಾರು, ಗಾಂಜಾ ದಪ್ಪವಾಗಿ ಬೆಳೆದು ನಿಂತಿವೆ.

“ಗೋಪಾಲ ನಾಯರ್ರೇ, ಅದನ್ನು ಮರೆತಿಲ್ಲವಲ್ಲ…?”

“ಅಯ್ಯೋ, ಮರೆಯೋದಾ…? ಸೀಟಿನ ಅಡಿಯಲ್ಲೇ ಇದೆ…”

ಗೋಪಾಲ ನಾಯರ್ ಕಂಪನಿಯ ಡ್ರೈವರ್ ಮಾತ್ರವಲ್ಲ, ಅವರ ನಂಬಿಕಸ್ಥ ಸ್ನೇಹಿತನೂ ಅವರ ಬೇಕು ಬೇಡಗಳನ್ನು ನೋಡಿಕೊಳ್ಳುವವನೂ ಹೌದು.
ಕೈ ಸೀಟಿನ ಕೆಳಗಡೆಗೆ ಚಾಚಿದಾಗ, ಗೋಪಾಲ ನಾಯರ್‌ನ ಪ್ರಸ್ತಾವನೆಯನ್ನು ಸ್ಥಿರೀಕರಿಸಿಕೊಂಡು ಬಾಟಲಿಗಳು ಬೆರಳಿಗೆ ತಡೆದವು. ನಾಯರ್ ಒಬ್ಬ ಬಹಳ ಚುರುಕಾದ ವ್ಯಕ್ತಿ. ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಎಲ್ಲವನ್ನೂ ತಿಳಿದುಕೊಂಡು ಮಾಡುತ್ತಾನೆ.

“ಏನು… ಯಾವಾಗ ಮಾಡೋಣ ಗೋಪಾಲ ನಾಯರ್ರೇ…? ಕನಕಳ ತಲೆ ಮೇಲೆ ಕೈಯಿಟ್ಟು ಪ್ರಮಾಣ ಮಾಡಿದ್ದೇನೆ…ಕುಡಿಯೋದಿಲ್ಲಾಂತ… ಆದರೂ ಇದೀಗ…”

ಗೋಪಾಲ ನಾಯರ್ ಬಾಯಿಯನ್ನು ಮತ್ತೆ ಯಾರೋ ಇಲಾಸ್ಟಿಕ್‌ನಂತೆ ಎರಡೂ ಕಡೆಗೆ ಹಿಡಿದೆಳೆದರು, ಆಗ ಬಾಯಿ ಮತ್ತೆ ಹಿಂದಿನಂತಾಯಿತು.
ನಗರವನ್ನು ದಾಟಿ ಕಾರು ಹೈವೇ ಪ್ರವೇಶಿಸಿದಾಗ ಸೀಟಿನ ಮೇಲಿನ ಭಾಗದಲ್ಲಿ ಚಾಚಿಟ್ಟಿದ್ದ ಬಲಗೈ ಅಲ್ಲಿಂದ ಬಿಡಿಸಿಕೊಂಡು ಮಡಿಲಿಗೆ ಬಂದು ಬಿತ್ತು. ಈಗ ಎರಡೂ ಕೈಗಳು ಮಡಿಲಿನಲ್ಲಿದ್ದಾವೆ. ಸ್ವಲ್ಪ ಹೊತ್ತು ಅವರು ಎರಡೂ ಕೈಗಳನ್ನು ತಮ್ಮ ಮಡಿಲಿನಲ್ಲಿ ಜಾಗ್ರತೆಯಾಗಿಟ್ಟುಕೊಂಡರು. ಆ ನಂತರ ಶರೀರವು ಸ್ವಲ್ಪ ಮುಂದಕ್ಕೆ ಬಾಗಿದಾಗ, ಬಲಗೈ ಸೀಟಿನಡಿಗೆ ಚಲಿಸಿತು. ಆಗ ಆ ಕೈ ಸೀಟಿನ ಕೆಳಗಿನಿಂದ ಕಾಗದದಲ್ಲಿ ಸುತ್ತಿಟ್ಟಿದ್ದ ಒಂದು ಬಾಟಲಿಯೊಂದಿಗೆ ಹೊರಗೆ ಬಂದು ಮಡಿಲಲ್ಲಿ ಮಲಗಿತು.

“ಹೌದು…ನಿಜಕ್ಕೂ ಸ್ಕಾಚ್ಚೇ ಇದು… ಐಸೂ ಸೋಡ ಬ್ಯಾಗಲ್ಲಿದೆ…”

ಗೋಪಾಲನಾಯರ್ ಹೇಳಿದ. ಜಿ.ಎಂ. ಬಾಟಲಿಯ ಕಾರ್ಕನ್ನು ಬಿಚ್ಚಿ ಒಮ್ಮೆ ಮೂಸಿ ನೋಡಿದರು.

“ಅಸಲಿ ಮಾಲು. ಕಲಬೆರಕೆಯ ಅಂಶ ಏನೂ ಇದ್ದ ಹಾಗೆ ಕಾಣುತ್ತಿಲ್ಲ…”
ಗ್ಲಾಸು ಹಲವಾರು ಸಲ ಮುಖದ ಎದುರಿನಿಂದ ಮೇಲೆ ಕೆಳಗೆ ಚಲಿಸಿತು.

“ಗೋಪಾಲ ನಾಯರ್‍ಗೆ ರುಚಿ ನೋಡಬೇಕೆನ್ನುವ ತವಕವಿರಬೇಕಲ್ವೇ…? ಆದರೆ, ಡ್ರೈವಿಂಗ್ ಮಾಡುವಾಗ ಬೇಡ. ಮೊದಲಿಗೆ ಅಲ್ಲಿ ತಲುಪೋಣ… ನಂತರ ಸಾಕಲ್ವೇ…ಏನೂ…?”
ಗೋಪಾಲ ನಾಯರ್ ತಲೆ ಒಮ್ಮೆ ಎಡಕ್ಕೂ ಬಲಕ್ಕೂ ಅಲುಗಾಡಿತು.

ಎರಡು ಲಾರ್ಜ್ ಒಳಗಡೆ ಹೋಗುತ್ತಿದ್ದಂತೆ ಕಣ್ಣುಗಳನ್ನು ಯಾರೋ ಬಲವಂತವಾಗಿ ಹಿಡಿದು ಗಟ್ಟಿಯಾಗಿ ಮುಚ್ಚಿದರು. ನಡುವೆ ಒಮ್ಮೆ ಎಚ್ಚರಗೊಂಡು ನೋಡುವಾಗ ಮೊರಾದಾಬಾದ್ ತಲುಪಿಯಾಗಿತ್ತು. ಕತ್ತಿ, ಕುಡುಗೋಲು ಮತ್ತು ಅದೇ ತರಹವಿರುವ ಉಳಿದ ಉಪಕರಣಗಳಿಗೆ ಪ್ರಸಿದ್ಧವಾದ ಸ್ಥಳವದು. ಮತ್ತೆ ಕಣ್ಣುಗಳ ಬಾಗಿಲುಗಳು ಮುಚ್ಚಿಕೊಂಡು ಚಿಲಕ ಹಾಕಿಕೊಂಡವು.

ದಾರಿಯಲ್ಲಿ ಕೆಲವು ಕಡೆಗಳಲ್ಲಿ ಗೋಪಾಲ ನಾಯರ್ ಕಾರನ್ನು ನಿಲ್ಲಿಸುವ ಮತ್ತು ಕೆಳಗೆ ಇಳಿದು ಹೋಗುವ ಕೆಲಸ ಮಾಡ್ತಾನೇ ಇದ್ದ. ಚಹಾ ಕುಡಿಯುವುದಕ್ಕೋ ಮೂತ್ರ ವಿಸರ್ಜನೆಗೋ ಆ ರೀತಿ ಇಳಿದು ಹೋಗುತ್ತಿದ್ದ. ಊಟಕ್ಕೆ ಸಮಯವಾಗುತ್ತಿದ್ದಂತೆ ಗಾಡಿ ಡೆಹರಾಡೂನ್ ತಲುಪಿತು. ಅಲ್ಲಿಯೂ ಒಂದು ಲಾರ್ಜ್ ಒಳಸೇರಿತು. ನಂತರ ಕಣ್ಣುಗಳನ್ನು ತೆರೆಯುವಷ್ಟರಲ್ಲಿ ಭೂಮಿಯ ಅತ್ಯಂತ ಎತ್ತರಕ್ಕೆ ಮಂಜುಕವಿದ ಪರ್ವತ ಶ್ರೇಣಿಗಳ ಮೂಲಕ ಕಾರು ಚಲಿಸುತ್ತಾ ರಾಣಿಕೇತ್ ತಲುಪಿಬಿಟ್ಟಿದೆ.

ಮತ್ತೆ ಅವರು ತಮ್ಮ ಹೆಂಡತಿಗೆ ಚುಂಬಿಸಿದರು. ಒಂದು ಬೆಕ್ಕು ಅದರ ಯಜಮಾನನ ದೇಹಕ್ಕೆ ಮುಖವನ್ನು ಒರೆಸುತ್ತಿರುವಂಥ ಕೆಲಸದಂತೆ ಇತ್ತದು. ಮದುವೆಯಾಗಿ ಒಂದು ಕಾಲು ಶತಮಾನ ಕಳೆದರೂ ಈಗಲೂ ತನ್ನ ಹೆಂಡತಿಗೆ ಇಷ್ಟವಾಗುವಂತೆ ಅಂದವಾಗಿ ಚುಂಬಿಸಲು ಅವರಿಗಿನ್ನೂ ಗೊತ್ತಿಲ್ಲ.

ಗೆಸ್ಟ್ ಹೌಸಿನ ಬಾಗಿಲುಗಳು ಅಗಲವಾಗಿ ತೆರೆದವು. ಗೆಸ್ಟ್ ಹೌಸಿನ ಮೇನೆಜರ್ ಓಡಿ ಬಂದ, ರೋದಿಸುತ್ತಿದ್ದ ಶೂಗಳೊಂದಿಗೆ ಮೇನೆಜರನ ಜೊತೆಗೆ ನಡೆದರು. ಸೂಟ್ ಕೇಸೂ ಏರ್ ಬ್ಯಾಗೂ ಹಿಂಬಾಲಿಸಿದವು.

“ಕಾಲೇಕರ್ ಸಾಹೇಬರು ವಿಚಾರಿಸಿದ್ದರು…”

“ಅವರ್ಯಾವಾಗ ಬಂದ್ರು…”

“ಎರಡು ಗಂಟೆಗೇ ಬಂದುಬಿಟ್ಟಿದ್ದರು…”
ಕಾಲೇಕರ್ ಹಿಂದಿನ ದಿನವೇ ಬಂದು ಅಲ್ಮೋರಾದಲ್ಲಿ ಕ್ಯಾಂಪ್ ಮಾಡಿದ್ದರು.

“ಬೇರೆ ಯಾರೆಲ್ಲಾ ಬಂದಿದ್ದಾರೆ…?”

“ಅಗ್ನಿಹೋತ್ರಿ ಸಾಹೇಬರೂ ಬಂದು ತಲುಪಿದ್ದಾರೆ…”
ವಿಶಾಲವಾದ ಕೋಣೆಯ ಗಾಜಿನ ಕಿಟಕಿಗಳ ಕರ್ಟನ್‌ನನ್ನು ಒಂದು ಬದಿಗೆ ಸರಿಸಿದಾಗ, ನೇರ ಎದುರು ಹಿಮಾಲಯದ ಶಿಖರಗಳು. ಮಂಜು ಮುಚ್ಚಿದ ಶಿಖರಗಳಲ್ಲಿ ಮುಸ್ಸಂಜೆಯ ಪ್ರತಿಬಿಂಬಗಳು.

“ವೆಲ್‌ಕಂ ಮೈ ಫ್ರೆಂಡ್…”
ಕಾಲೇಕಾರರ ದಪ್ಪ ಕೈಗಳು ಉದ್ದಗೊಂಡು ಆಲಿಂಗನದಲ್ಲಿ ಅವರನ್ನು ಗಟ್ಟಿಯಾಗಿ ಹಿಡಿದು ಅಡಗಿಸಿದರು. ಕಾಲೇಕಾರರ ಕೈಗಳಿಗೆ ಅವರ ಉಳಿದ ಅವಯವಗಳೊಂದಿಗೆ ಹೊಂದಾಣಿಕೆಯಿರಲಿಲ್ಲ. ಅಸಾಧಾರಣವಾಗಿ ದಪ್ಪವಿರುವ ಆ ಕೈಗಳು ಅವರದ್ದಲ್ಲ. ಮತ್ಯಾರದ್ದೋ ಎನ್ನುವ ಮಟ್ಟದಲ್ಲಿ ಅವರು ನಡೆದುಕೊಳ್ಳೋದು.

“ಎಷ್ಟು ಪೆಗ್ಗಾಯಿತು ಜಿ.ಎಂ…?”

“ಎರಡು ಸ್ಮಾಲ್…”

“ಕಳ್ಳಾ…”

“ತಮ್ಮದೋ…?

“ಎರಡು ಸ್ಮಾಲ್…”

ಕಾಲೇಕಾರರ ಗಟ್ಟಿ ನಗು ಪ್ರತಿಧ್ವನಿಸಿದಂತಾಯಿತು. ಒಂದು ಮಿಥಿಕಲ್ ಪಕ್ಷಿಯ ರೆಕ್ಕೆಗಳಂತೆ ಅವರ ಕೈಗಳು ಎರಡೂ ಕಡೆಗೂ ಬಿದ್ದುಕೊಂಡು ನೇತಾಡಿದವು.

ಬೆಂಕಿ ಹಾಕಿ ಬಿಸಿ ಮಾಡಿದ ಕೋಣೆಯಲ್ಲಿ ಕುಳಿತು ಅವರು ಸ್ವಾಚ್ಚ್ ಸೇವಿಸತೊಡಗಿದರು. ಗೆಸ್ಟ್ ಹೌಸಿನ ಕಿಚನ್ನಿಂದ ಯಾಕ್‌ನ (ಚಮರಿಮೃಗ) ಮಾಂಸ ಬೇಯುವುದರ ಪರಿಮಳ ಮೂಗಿಗೆ ಬಡಿಯುತ್ತಿತ್ತು. ವೃತ್ತಾಕಾರದ ಬೆತ್ತದ ಮೇಜಿನ ಮೇಲೆ ತುಂಬಿಕೊಂಡ ಗ್ಲಾಸುಗಳು ಮೇಲಕ್ಕೇಳುತ್ತಿದ್ದು ಸ್ವಲ್ಪ ಹೊತ್ತು ಗಾಳಿಯಲ್ಲಿದ್ದುಕೊಂಡ ನಂತರ ಮತ್ತೆ ಮೇಜಿನ ಮೇಲೆ ಇಳಿಯುತ್ತಿದ್ದವು. ಪ್ರತಿಸಲ ಹೀಗೆ ಸಂಭವಿಸುತ್ತಿರುವಾಗ ಗ್ಲಾಸುಗಳಲ್ಲಿದ್ದ ವ್ಹಿಸ್ಕಿಯ ಮಟ್ಟ ಕುಸಿಯುತ್ತಿತ್ತು.

“ನಿನ್ನ ಮಗನ ವಿಚಾರ ಏನಾಯ್ತು…?”
ಅಗ್ನಿಹೋತ್ರಿ ಕೇಳಿದರು. ಜಿ.ಎಂ. ಮುಖ ಸ್ವಲ್ಪ ಬಾಡಿತು.

“ಅವನ ಬಗ್ಗೆ ಯಾವುದೇ ಸುದ್ದಿ ಇಲ್ಲ…”

“ಈಗಲೂ ಪ್ರಯಾಣದಲ್ಲೇ ಇದ್ದಾನಾ…?”

“ಹೌದು…”

“ಐದು ವರ್ಷದಿಂದಲೂ ಪ್ರಯಾಣವೇನಾ! ನಿನ್ನ ಮಗ ನಿಜಕ್ಕೂ ಒಳ್ಳೆಯ ರಸಿಕನೇ…”

ಯಾತಕ್ಕೆ ಈ ಅಗ್ನಿಹೋತ್ರಿ ಅವರ ಮಗನ ಕುರಿತು ಸುಮ್ಮನೆ ನೆನಪಿಸಿದ್ದು…? ಉಲ್ಲನ್ ಸಾಕ್ಸ್ ಹಾಕಿಕೊಂಡ ಕಾಲುಗಳು ಕುರ್ಚಿಯ ಕೆಳಗೆ ಅಸ್ವಸ್ಥಗೊಂಡು ಚಲಿಸಿದವು.

“ಜಿ.ಎಂ.ನ ಮಗನಿಗೆ ಆದದ್ದಾದರೂ ಏನು…?”
ಕಾಲೇಕರ್‍ಗೆ ವಿಷಯ ಗೊತ್ತಿರಲಿಲ್ಲ.

“ಅದೊಂದು ತುಂಬಾ ಕುತೂಹಲಕರವಾದ ಕಥೆ. ಇಂಡೀಡ್ ಅ್ಯನ್ ಇಂಟರೆಸ್ಟಿಂಗ್ ಸ್ಟೋರಿ…”

ಕಾಲೇಕಾರರ ಹಣೆಯ ಕೆಳಗೆ ಮೂಗಿನ ಎರಡೂ ಕಡೆ ಇರುವ ಆ ಎರಡು ಅವಯವಗಳು ಅಗ್ನಿಹೋತ್ರಿಯ ಮುಖಕ್ಕೆ ರಾಚಿತು. ನಂತರ ಜಿ.ಎಂ.ನ ಅದೇ ಅವಯವಗಳೊಂದಿಗೆ ಅವು ಸಂಧಿಸಿದವು. ಅವರ ಮುಂದಿದ್ದ ತುಂಬಿದ ಗ್ಲಾಸು, ಬಾಯಿಯೊಳಕ್ಕೆ ಹಾರಿ ಅದರಲ್ಲಿದ್ದ ಅಷ್ಟೂ ದ್ರವವನ್ನು ಒಂದೇ ಏಟಿಗೆ ಕಿರುನಾಲಿಗೆಯೊಳಕ್ಕೆ ನೇರವಾಗಿ ಸುರಿದುಕೊಂಡು ಮತ್ತೆ ಮೇಜಿನ ಮೇಲೆ ಬಂದು ಏನೂ ಗೊತ್ತಿಲ್ಲದಂತೆ ನಿಶ್ಚಲವಾಗಿ ನಿಂತಿತು.

“ಕಾಲೇಜಿನಲ್ಲಿ ಕಲಿಯುವಾಗ ಜಿ.ಎಂ.ನ ಮಗ ಯಾರಿಗೂ ಹೇಳದೆ ಮನೆಬಿಟ್ಟು ಹೋಗಿದ್ದ. ಇದೀಗ ಐದು ವರ್ಷಗಳೇ ಕಳೆದು ಹೋದವು ಜಿ.ಎಂ. ತಮ್ಮ ಮಗನನ್ನು ನೋಡಿ…”

“ಸ್ಟ್ರೇಂಜ್ ಸ್ಟೋರಿ…”

ಕಾಲೇಕಾರರ ಮುಂದೆ ಪ್ಲೇಟಿನಲ್ಲಿದ್ದ ಯಾಕಿನ್ ಮಾಂಸದ ಒಂದು ತುಂಡು ಅವರ ಬಾಯಿಯ ಒಳಕ್ಕೆ ಪ್ರವೇಶ ಪಡೆದುಕೊಂಡಿತು. ಅದಕ್ಕಾಗಿ ಕಾದುಕೊಂಡಿದ್ದ ಬಾಯಿ ಗಡಿಬಿಡಿಯಿಂದ ಅದನ್ನು ಸ್ವೀಕರಿಸಿದ ನಾಲಿಗೆಯು ಅದನ್ನು ಹಲ್ಲುಗಳ ನಡುವೆ ನಿಲ್ಲಿಸಿತು. ಹಲ್ಲುಗಳ ಸಾಲುಗಳು ಕೆಳಗಡೆಗೂ ಮೇಲ್ಗಡೆಗೂ ನಿರಂತರವಾಗಿ ಚಲಿಸಿ, ಮಾಂಸದ ತುಂಡನ್ನು ನಜ್ಜುಗುಜ್ಜು ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿತು. ಅವರ ಕುತ್ತಿಗೆಯ ನರನಾಡಿಗಳು, ಮುಖದ ಅದೃಶ್ಯವಾಗಿರುವ ತೆಳ್ಳಗಿನ ನರಗಳು ಆ ಪ್ರಕ್ರಿಯೆಯಲ್ಲಿ ಭಾಗವಹಿಸಿದವು. ಬಲಿಗೊಳಗಾದ ವಸ್ತುವನ್ನು ಹಲ್ಲುಗಳ ನಡುವೆ ನೆಟ್ಟಗೆ ನಿಲ್ಲಿಸಲು ನಾಲಿಗೆ ಕಠಿಣವಾಗಿ ಶ್ರಮಪಟ್ಟಿತು. ಮಾಂಸದ ತುಂಡು ಅಗತ್ಯಕ್ಕೆ ತಕ್ಕ ರೀತಿಯಲ್ಲಿ ಜಜ್ಜಿ ಒಂದು ಹದಕ್ಕೆ ಬಂದಾಗ, ನಾಲಿಗೆ ಅದನ್ನು ಒಂದು ರೂಪಕ್ಕೊಳಪಡಿಸಿ, ಬಾಯಿಯೊಂದಿಗೆ ಸಂಪರ್ಕವಿರುವ ಎಲ್ಲಾ ನರನಾಡಿಗಳನ್ನು ಸಂಯೋಜಿಸಿಕೊಂಡಂಥ ಅತಿ ಚತುರತೆಯನ್ನು ಪ್ರದರ್ಶಿಸುತ್ತಾ, ಅದನ್ನು ಗಂಟಲಿನ ಇಳಿಜಾರಿನ ಮೂಲಕ ಉದರದೊಳಕ್ಕೆ ನೂಕಲ್ಪಟ್ಟಿತು.

ಮಧ್ಯರಾತ್ರಿಯಾಗುತ್ತಿದ್ದಂತೆ ದೇವದಾರುಗಳನ್ನು, ಮಂಜುಗಳನ್ನು ಪ್ರಕಾಶಿಸುವಂತೆ ಮಾಡುತ್ತಾ ಒಂದು ಕಾರು ಗೆಸ್ಟ್ ಹೌಸಿನ ಮುಂದೆ ಬಂದು ನಿಂತಿತು. ರೈನಾ ಮತ್ತು ರಘುವಂಶಿ ಕಾರಿನಿಂದಿಳಿದು ಬಂದರು. ಅವರ ಎರಡೂ ಕಾಲುಗಳಿಗೇನೋ ಸಮಸ್ಯೆಯಿರುವಂತೆ ಕಾಣುತ್ತಿತ್ತು.

“ಇನ್ನು ನೀವು ಬೆಳಿಗ್ಗೆ ಬರಬಹುದು ಎಂದಂದುಕೊಂಡಿದ್ದೆವು…”

ಕಾಲೇಕಾರರ ಭಯಂಕರವಾದ ಕೈಗಳು ಅವರನ್ನು ತಬ್ಬಿಕೊಳ್ಳುವುದಕ್ಕಾಗಿ ಚಾಚಿಕೊಂಡವು. ಆದರೆ, ಈ ಬಗ್ಗೆ ಬಂದವರಿಬ್ಬರೂ ಮುಂಜಾಗರೂಕತೆಯನ್ನು ವಹಿಸಿದ್ದರಿಂದ, ಅವರು ಬಹಳ ಚಾಕಚಕ್ಯತೆಯಿಂದ ಕಾಲೇಕಾರರ ಹಿಡಿತದಿಂದ ತಪ್ಪಿಸಿಕೊಂಡರು.

“ನಾವು ಮೇಜರ್ ಕೋಲಿನ್‌ರನ್ನು ಒಮ್ಮೆ ಸಂದರ್ಶಿಸಿ ಬಂದೆವು…”
ಕಂಪನಿಯ ಮೀಟಿಂಗಿಗೆ ಬರುವಾಗಲೆಲ್ಲ ರೈನಾ ಕುಮಯೂನ್ ರೆಜಿಮೆಂಟಿನ ತನ್ನ ಗೆಳೆಯ ಕೋಲಿನ್‌ರನ್ನು ಸಂದರ್ಶಿಸುವುದು ಒಂದು ವಾಡಿಕೆಯಾಗಿತ್ತು.

ಕಾನ್‍ಫೆರೆನ್ಸ್ ರೂಮಿನ ಪಳ ಪಳಾ ಹೊಳೆಯುತ್ತಿದ್ದ ಮೇಜಿನಮೇಲೆ ಫ್ಲವರ್ ಪಾಟೂ ಮಿನರಲ್ ವಾಟರ್ ಬಾಟಲುಗಳೂ ಬಂದು ನಿಂತವು. ಗಾಜಿನ ಬಾಗಿಲುಗಳ ಮೂಲಕ ನೋಡಿದರೆ, ಮಂಜು ಮುಸುಕಿದ ಪರ್ವತ ಶ್ರೇಣಿಗಳಲ್ಲಿ ಎಳೆಬಿಸಿಲು ಸ್ಪಷ್ಟಗೊಳ್ಳುತ್ತಿರುವುದು, ಮಸುಕಾಗುತ್ತಿರುವುದು ಕಾಣಬಹುದು. ಆಕಾಶದಲ್ಲಿ ಮಳೆಯ ಸೂಚನೆಗಳು ಗೋಚರಿಸುತ್ತಿದ್ದವು. ಅವರು ಕಂಪನಿಯ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಾ ವಾದವಿವಾದಗಳನ್ನು ಮುಂದಿಡುತ್ತಿದ್ದರು. ಆಗ ಅವರ ಮನಸ್ಸುಗಳಲ್ಲಿ ಸ್ಕಾಚ್ ಮತ್ತು ಯಾಕ್ ಮಾಂಸಗಳು ಸುಳಿದಾಡುತ್ತಿದ್ದವು.

ಸಾಯಂಕಾಲ ಒಂದು ಕಾಕ್‍ಟೈಲ್ ಪಾರ್ಟಿಯಿತ್ತು. ಅದರಲ್ಲಿ ಭಾಗವಹಿಸಲು ಮುಸೂರಿಯಿಂದ ಕೆಲವು ಅತಿಥಿಗಳು ಬಂದು ಸೇರಿಕೊಂಡಿದ್ದರು.

“ನಾನು ಬೆಳಿಗ್ಗೆ ಹೊರಡುತ್ತೇನೆ…”

“ಜಿ.ಎಂ. ಅವಸರ ಮಾಡುವುದು ಬೇಡ. ನಾವು ಜಾಗೇಶ್ವರದವರೆಗೆ ಒಮ್ಮೆ ಹೋಗಿಬರೋಣ. ನಾನು ಒಬ್ಬ ವ್ಯಕ್ತಿಯನ್ನು ಪರಿಚಯ ಮಾಡಿಕೊಡ್ತೇನೆ…”

“ಅದ್ಯಾರೂ…?”

“ಬೋಧಿಸತ್ವ… ಕೇಳಿದಿರಾ…?”

“ಇಲ್ಲ…”

ಜಿ.ಎಂ.ರಿಗೆ ತಿಳಿದಿದೆ. ಅಗ್ನಿಹೋತ್ರಿ ಸುಳ್ಳಾಡುತ್ತಿದ್ದಾರೆಂದು. ಜಾಗೇಶ್ವರದಲ್ಲಿ ಈಗ ಆಲೂಗೆಡ್ಡೆ ಕೀಳುವ ಸಮಯ. ಅದಕ್ಕಾಗಿ ಪಹಾಡಿಹೆಣ್ಣುಗಳು ಗುಂಪು ಗುಂಪಾಗಿ ಕಣಿವೆಯೇರಿ ಬರುತ್ತಾರೆ.

ಜಾಗೇಶ್ವರದಲ್ಲಿ ದೇವದಾರುಗಳ ಮತ್ತು ಹಿಮಾಲಯದ ಪರ್ವತ ಶ್ರೇಣಿಗಳ ಮೇಲೆ ಮಂಜು ಬಿದ್ದು ಪ್ರಕಾಶಿಸುತ್ತಿವೆ.

ಷವರ್‌ನಿಂದ ಬಿಸಿನೀರು ಅವರ ನಗ್ನ ಶರೀರದ ಮೇಲೆ ವರ್ಷಿಸಿದವು. ಟರ್ಕಿಷ್ ಟವಲ್ ಅವರ ಒದ್ದೆಯಾದ ಶರೀರವನ್ನು ಒರೆಸಿ ಒಣಗಿಸಿತು. ತಮ್ಮ ಎದೆಯ ಮೇಲಿನ ರೋಮಗಳು ನರೆತಿರುವುದನ್ನು ಮತ್ತು ತಮ್ಮ ಹೊಟ್ಟೆ ಹೀಗೆ ಬೀಗಿಕೊಂಡಿರುವುದನ್ನು ನೋಡುತ್ತಿರುವುದು ಮೊದಲ ಸಲವಲ್ಲವಾದರೂ ಅದು ಅವರಿಗೆ ಮನವರಿಕೆಯಾಯಿತು. ಅವರು ಒಂದು ಬಿಳಿಯ ಷರ್ಟೂ ಪ್ಯಾಂಟೂ ಅದರ ಮೇಲೊಂದು ಉಣ್ಣೆಯ ಸ್ವೆಟರನ್ನೂ ಧರಿಸಿ ಹೊರಡಲು ಸಿದ್ದವಾಗಿ ನಿಂತರು. ಚಪ್ಪಲಿಗಳು ಗಡಿಬಿಡಿಗೊಂಡು ಅವರ ಕಾಲುಗಳಲ್ಲಿ ಸೇರಿ ಅಂಟಿಕೊಂಡವು.

“ಇನ್ನೂ ಸುಮಾರು ದೂರ ನಡೆಯಬೇಕಾ…?”

“ಇಲ್ಲಪ್ಪ…ಒಂದರ್ಧ ಕಿಲೋಮೀಟರಷ್ಟೆ…” ಅಗ್ನಿಹೋತ್ರಿ ದೇವದಾರುಗಳು ಬೆಳೆದು ಮುಚ್ಚಿಹೋದ ಒಂದು ಕಣಿವೆಯತ್ತ ಬೆರಳು ಮಾಡಿ ತೋರಿಸಿದರು.

“ಅದೋ… ಅಲ್ಲೇ ಬೋಧಿಸತ್ವರ ಗುಹೆ…”

ಹತ್ತಿ, ಇಳಿದು ದಾಟಿದ ನಂತರದ ಆ ಪ್ರಯಾಣ ಒಂದು ಗಂಟೆಯಷ್ಟು ಉದ್ದವಾಗಿತ್ತು. ಜಿ.ಎಂ. ಏದುಸಿರು ಬಿಡುತ್ತಾ ನಡೆಯುತ್ತಿದ್ದರು. ಒಬ್ಬ ಬಿ.ಪಿ.ರೋಗಿಯಾದ ತಮಗೆ ಇಷ್ಟೆಲ್ಲ ಕಷ್ಟಪಡಬಾರದೆಂದು ಅವರಿಗೆ ಗೊತ್ತಿತ್ತು.

ಗುಹೆಯೊಳಗೆ ಹಗಲಿನಲ್ಲೂ ಕತ್ತಲೆಯೇ. ಅದರಲ್ಲಿ ಜನವಸತಿಯಿರುವ ಯಾವ ಸೂಚನೆಯು ಕಾಣಿಸಲಿಲ್ಲ.

“ಮಗನ ಬಗ್ಗೆ ವಿವರಗಳನ್ನು ಸರಿಯಾಗಿ ಕೇಳಿ ತಿಳಿದುಕೊಳ್ಳಬೇಕು…”
ಅಗ್ನಿಹೋತ್ರಿ ನೆನಪಿಸಿದರು.

ಕಣಿವೆಯ ಗಾಳಿಗೆ ದೇವದಾರುಗಳು ಓಲಾಡಿದವು.

ಗುಹೆಯ ಮುಂದೆ ಅವರು ಕಾದು ನಿಂತರು. ಕೆಲವು ನಿಮಿಷಗಳು ಕಳೆಯುತ್ತಿದ್ದಂತೆ ಒಳಗಿನ ಕತ್ತಲೆ ಸಣ್ಣದಾಗಿ ಕುಲುಕಾಡಿತು. ಗುಹಾಮುಖದ ಬೆಳಕಿನಲ್ಲಿ ಸ್ವಷ್ಪಗೊಂಡಂಥ ಮುಖ ಒಬ್ಬ ಯುವಕನದ್ದಾಗಿತ್ತು. ಗಡ್ಡವೂ ತಲೆಕೂದಲೂ ಬೆಳೆದು ಇಳಿಬಿದ್ದಿದ್ದವು.

ಓಹ್…ದೇವರೇ…

ಬೋಧಿಸತ್ವನ ಮತ್ತು ಜಿ.ಎಂ.ರವರ ಕಣ್ಣುಗಳು ಸಂಧಿಸಿದವು. ಬೋಧಿಸತ್ವನ ಅಗಾಧವೂ ಶಾಂತವೂ ಆದ ನೋಟದಲ್ಲಿ ಹಿಂದಿನ ಯಾವುದೇ ಅರಿವಿನ ಒಂದು ನೆರಳು ಸಹ ಕಾಣಲಿಲ್ಲ. ದೊಡ್ಡ ಅರಿವುಗಳ ಮುಂದೆ ಈ ಸಣ್ಣ ಅರಿವಿಗೆ ಯಾವ ಪ್ರಸ್ತುತತೆ…?

ಅಗ್ನಿಹೋತ್ರಿ ಕೈಮುಗಿದು ನಿಂತು ಏನೋ ಗುಣಗುಣಿಸುತ್ತಿದ್ದರು.
“ಕೈಮುಗಿ ಜಿ.ಎಂ…”

ಜಿ.ಎಂ.ರವರ ಕೈಗಳು ತಮ್ಮರಿವಿಗೆ ಬಾರದಂತೆ ಮುಗಿದವು. ಕೈಮುಗಿದು ನಿಂತಿರುವ ಅವರ ಕೈಗಳು ಆಲದೆಲೆಗಳಂತೆ ನಡುಗುತ್ತಾ ಇದ್ದವು.