ಇಲ್ಲಿಂದ ಹಿರಿಯರು ಪೋಸ್ಟ್ ಮಾಡಿದ ಅಂಚೆ 2022ರ ಕ್ರಿಸ್ಮಸ್ ಹೊತ್ತಿಗೆ ಮಕ್ಕಳನ್ನು ತಲುಪುತ್ತೆ. ಆ ರೀತಿಯ ವ್ಯವಸ್ಥೆ ಇದೆ. ಎಲ್ಲ ಸ್ಟ್ಯಾಂಪ್ ಮೇಲೂ ಸಾಂಟಾ ಕ್ಲಾಸ್ ಇರುತ್ತಾನೆ. ನಾವು ಸಹ ಪೋಸ್ಟ್ ಕಾರ್ಡ್ ಪಡೆದು ನಮ್ಮ ಮನೆಗಳಿಗೆ ಪೋಸ್ಟ್ ಮಾಡಿದೆವು. ಇಲ್ಲಿಯ ಮತ್ತೊಂದು ವಿಶೇಷ ಎಂದರೆ ಪ್ರಪಂಚದಾದ್ಯಂತ ಮಕ್ಕಳು ಸಾಂಟಾ ಕ್ಲಾಸಿಗೆ ಕಳಿಸುವ ಅರಿಕೆಯ ಪತ್ರಗಳು ಇಲ್ಲಿ ಬಂದು ತಲುಪುತ್ತವೆ. ವರ್ಷಕ್ಕೆ ಸುಮಾರು ಐವತ್ತು ಲಕ್ಷ ಪತ್ರಗಳು! ಹಾಗಾಗಿ ರೊವಿನೇಮಿಯ ಸಾಂಟಾ ಕ್ಲಾಸ್ ವಿಲೇಜ್ ಕ್ರಿಸ್ಮಸ್ ತಾತನ ಅಧಿಕೃತ ಸ್ಥಳವಾಗಿದೆ.
‘ದೂರದ ಹಸಿರು’ ಸರಣಿಯಲ್ಲಿ ಲಾಪ್ಲ್ಯಾಂಡ್‌ ಪ್ರವಾಸದ ಖುಷಿಯನ್ನು ಹಂಚಿಕೊಂಡಿದ್ದಾರೆ ಗುರುದತ್‌ ಅಮೃತಾಪುರ

 

ಹಿಂದಿನ ಸಂಚಿಕೆಯಲ್ಲಿ ಲ್ಯಾಪ್ಲ್ಯಾಂಡ್ ಪ್ರವಾಸದಲ್ಲಿ ಉಡುಗೆ ತೊಡುಗೆ ಹೇಗಿರುತ್ತೆ, ಅಷ್ಟೊಂದು ಬಟ್ಟೆ ಪೇರಿಸಿಕೊಂಡು ಓಡಾಡಿದ ರೀತಿಯನ್ನು ವಿವರಿಸಿದ್ದೆ. (ಲ್ಯಾಪ್ಲ್ಯಾಂಡ್ ಕನಸು ನನಸಾದ ಕ್ಷಣಗಳ ಸುತ್ತ) ಜೊತೆಗೆ ಸೂರ್ಯನೇ ಉದಯಿಸದ ನಾಡು ಹಾಗೂ ಆರ್ಕ್ಟಿಕ್ ವೃತ್ತದ ಬಗ್ಗೆ ವಿಸ್ತೃತವಾಗಿ ಬರೆದಿದ್ದೆ. ಈ ಸಂಚಿಕೆಯಲ್ಲಿ ಲ್ಯಾಪ್ಲ್ಯಾಂಡಿನ ಪ್ರವಾಸಿ ತಾಣದ ಪರಿಚಯವನ್ನು ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ಪ್ರವಾಸದ ನಾಲ್ಕನೆಯ ದಿನ, ಹೆಲ್ಸಿಂಕಿಯಿಂದ ಸುಮಾರು ಹನ್ನೆರಡು ಘಂಟೆ ಪ್ರಯಾಣದ ನಂತರ ತಲುಪಿದ್ದು ರೊವಿನೇಮಿ ಎಂಬ ಲ್ಯಾಪ್ಲ್ಯಾಂಡಿನ ಚಳಿಗಾಲದ ರಾಜಧಾನಿಗೆ. ಇಲ್ಲಿ ತಿಂಡಿ ತಿನ್ನಲು ಹಾಗೂ ಆಹಾರ ಪದಾರ್ಥಗಳನ್ನು ಖರೀದಿಸಲು ಸಮಯವಿತ್ತು. ಮುಂದೆ ಮುಂದೆ ಸಾಗುತ್ತಿದ್ದಂತೆ ಎಲ್ಲವೂ ದುಬಾರಿ.

ಲ್ಯಾಪ್ಲ್ಯಾಂಡಿನ ಅತಿ ದೊಡ್ಡ ನಗರ ರೊವಿನೇಮಿ. ಇಲ್ಲಿನ ಜನಸಂಖ್ಯೆ ಸುಮಾರು ಅರವತ್ತು ಸಾವಿರದ ಆಸುಪಾಸು. ನಮ್ಮ ಬೆಂಗಳೂರಿನ ಜಯನಗರ ಒಂದರಲ್ಲೇ ಇದಕ್ಕಿಂತಲೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಲ್ಯಾಪ್ಲ್ಯಾಂಡಿನ ಮೂಲ ಭಾಷೆ “ಸಾಮಿ”. ಫಿನ್ಲ್ಯಾಂಡಿನಲ್ಲಿ ಇದೊಂದು ನಶಿಸಿಹೋಗುತ್ತಿರುವ ಭಾಷೆ. ಎಲ್ಲರೂ ಫಿನ್ನಿಷ್ ಮಾತನಾಡುವುದರಿಂದ ಹಾಗಾಗಿದೆಯಂತೆ. ಲ್ಯಾಪ್ಲ್ಯಾಂಡಿನ ಸುಮಾರು ಎರಡು ಲಕ್ಷ ಜನಸಂಖ್ಯೆಗೆ ಸಾಮಿ ಮಾತನಾಡುವವರು ಉಳಿದಿರುವುದು ಕೇವಲ 1500 ಜನ. 1991ರಲ್ಲಿ ಫಿನ್ಲ್ಯಾಂಡ್ ಸರ್ಕಾರ ಎಚ್ಚೆತ್ತು, ಈ ಭಾಗದಲ್ಲಿ ವಾಸವಿರುವ ಜನರಿಗೆ ಸಾಮಿಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸಿತು. ಸಾಮಿ ಉಪಯೋಗಿಸುವ ಜನ ಕೆಲವರೇ ಇದ್ದರೂ, ಎಲ್ಲ ಸರ್ಕಾರಿ ಸೇವೆಗಳನ್ನು ಸಾಮಿ ಭಾಷೆಯಲ್ಲಿ ಪಡೆಯಬಹುದು!

ಸಾಂಟಾ ಕ್ಲಾಸ್ ವಿಲೇಜ್

ಪ್ರಪಂಚದ ಎಲ್ಲರಿಗೂ ಕ್ರಿಸ್ಮಸ್ ಹಬ್ಬದಲ್ಲಿ ಬರುವ ಬಿಳಿಯ ಗಡ್ಡದ ತಾತ ಚಿರಪರಿಚಿತ. ಹಿಮಾಚ್ಛಾದಿತ ಪ್ರದೇಶದಿಂದ ಕೆಂಪು ಕೋಟು, ಕೆಂಪು ಟೋಪಿ ತೊಟ್ಟು ಹಿಮಸಾರಂಗಗಳ ಗಾಡಿಯಲ್ಲಿ ಉಡುಗೊರೆಗಳನ್ನು ಹೊತ್ತು ತಂದು ಮಕ್ಕಳಿಗೆ ಹಂಚುವ ಈ ತಾತನ ನಿಜವಾದ ಹೆಸರು “ಸಂತ ನಿಕೋಲಾಸ್”. ಸಮಯ ಕಳೆದ ಹಾಗೆ ಅದು “ಸಾಂಟಾ ಕ್ಲಾಸ್” ಆಗಿದೆ. ಆಯಾ ಪ್ರದೇಶಕ್ಕೆ ತಕ್ಕಂತೆ ಅನೇಕ ಸಂತ ನಿಕೋಲಾಸ್ ಅವತಾರಗಳು ಪಶ್ಚಿಮ ರಾಷ್ಟ್ರಗಳಲ್ಲಿವೆ. ಇತಿಹಾಸಕಾರರ ಪ್ರಕಾರ ಮೂಲ ಸಂತ ನಿಕೋಲಾಸ್ ನಾಲ್ಕನೇ ಶತಮಾನದ ರೋಮನ್ ಸಾಮ್ರಾಜ್ಯದ (ಈಗಿನ ಟರ್ಕಿ ಭಾಗವಾಗಿರುವ) ಲೈಸಿಯ ಭಾಗದವರಂತೆ. ಆದರೆ ಅತ್ಯಂತ ಆಕರ್ಷಣೀಯ ಹಾಗೂ ಜನಪ್ರಿಯಗೊಂಡಿದ್ದು ಮಾತ್ರ ನಾವು ನೀವು ನೆನಪಿಸಿಕೊಳ್ಳುವ ಕ್ರಿಸ್ಮಸ್ ತಾತ – ಸಾಂಟಾ ಕ್ಲಾಸ್. ಅಮೆರಿಕಾದ ಮಾರುಕಟ್ಟೆಯ ತಂತ್ರದ ಭಾಗವಾಗಿ ಹೇಗೆ ಕೋಕಾ ಕೋಲಾ, ಪೆಪ್ಸಿ, ಮೆಕ್ ಡೊನಾಲ್ಡ್ಸ್, ಬರ್ಗರ್ ಕಿಂಗ್ ಇತ್ಯಾದಿಗಳು ಜಗತ್ ಪ್ರಸಿದ್ಧಿ ಹೊಂದಿದವೋ, ಅದೇ ಅಮೇರಿಕನ್ ಮಾರುಕಟ್ಟೆಯ ಫಲವಾಗಿ ಕ್ರಿಸ್ಮಸ್ ಸಾಂಟಾ ಕ್ಲಾಸ್ ಕೂಡ ಪ್ರಪಂಚದ ಉದ್ದಗಲಕ್ಕೂ ಪರಿಚಯವಾದ.

ಲ್ಯಾಪ್ಲ್ಯಾಂಡ್ ಪ್ರದೇಶದ ಪ್ರಮುಖ ನಗರವಾದ ರೊವಿನೇಮಿಯದಲ್ಲಿ “ಸಾಂಟಾ ಕ್ಲಾಸ್ ವಿಲೇಜ್” ಎನ್ನುವ ಒಂದು ಹಳ್ಳಿಯನ್ನು ಕಟ್ಟಿದ್ದಾರೆ. ಕ್ರಿಸ್ಮಸ್ ಸಮಯದಲ್ಲಿ ಮಾತ್ರ ಆಗಸದಲ್ಲಿ ಹಾರಿ ತನ್ನ ಸಾರಂಗದ ಗಾಡಿಯಲ್ಲಿ ತನ್ನೂರಿಗೆ ಬಂದು ಗುಟ್ಟಾಗಿ ಉಡುಗೊರೆ ಇಟ್ಟು ಹೋಗುವ ಸಾಂಟಾ ಕ್ಲಾಸ್ ಎಲ್ಲೋ ಉತ್ತರ ಧ್ರುವದ ಕಡೆಯಿಂದ ಬರುವನೆಂದು ನಂಬಿಕೆ. ಆ ಕಾರಣದಿಂದ ಆರ್ಕ್ಟಿಕ್ ವೃತ್ತ ಪ್ರಾರಂಭವಾಗುವ ಪ್ರದೇಶದಲ್ಲಿ ಈ ಹಳ್ಳಿಯನ್ನು ಕಟ್ಟಿದ್ದಾರೆ.

(ಸಾಂಟಾ ಕ್ಲಾಸ್ ಮನೆಯ ಎದುರು)

ನಾವು ಭೇಟಿ ನೀಡಿದ್ದು ಡಿಸೆಂಬರ್ 26. ಕ್ರಿಸ್ಮಸ್ ಹಬ್ಬದ ಮಾರನೆಯ ದಿನವಾದ್ದರಿಂದ ಹಬ್ಬದ ಬೆಡಗು ಇನ್ನೂ ಎಲ್ಲೆಡೆ ಕಾಣುತಿತ್ತು. ಅಂದು ಅಲ್ಲಿನ ಉಷ್ಣಾಂಶ -19 ಡಿಗ್ರಿ ಸೆಲ್ಸಿಯಸ್!! ಕೊರೆಯುವ ಚಳಿ. ನಮ್ಮನ್ನು ಸ್ವಾಗತಿಸಲೆಂದೇ ಹಿಮದ ಹೊದಿಕೆ ಹೊದಿಸಿದ್ದಾರೆನ್ನುವಷ್ಟು ಸುಂದರವಾಗಿ ಅಲಂಕಾರಗೊಂಡ ಕಟ್ಟಡಗಳು. ಆ ಕೊರೆಯುವ ಚಳಿಯಲ್ಲಿಯೂ ಪ್ರವಾಸಿಗರ ಸಂಖ್ಯೆ ಸ್ವಲ್ಪ ಹೆಚ್ಚಿತ್ತು. ಎಲ್ಲೆಲ್ಲೂ ಉತ್ಸಾಹದಿಂದ ಕುಣಿದು ಕುಪ್ಪಳಿಸುತ್ತಿದ್ದ ಮಕ್ಕಳು. ಆರ್ಕ್ಟಿಕ್ ಸರ್ಕಲ್ಲಿನ ಗುರುತಿಗಾಗಿ ಕಂಬಗಳನ್ನು ನೆಟ್ಟಿದ್ದಾರೆ. ಅಲ್ಲಿ ಒಂದು ಸಿಸಿಟಿವಿ ಕ್ಯಾಮರಾ ಇದೆ. ಯೂಟ್ಯೂಬಿನಲ್ಲಿ ಯಾವಾಗಲೂ ನೇರ ಪ್ರಸಾರವಿರುತ್ತದೆ. ಅಲ್ಲಿ ನಿಂತು ತಮ್ಮವರಿಗೆ ಹಲೋ ಹೇಳಿದರೆ, ಪ್ರಪಂಚದ ಯಾವ ಭಾಗದಿಂದ ಬೇಕಾದರೂ ನೇರ ಪ್ರಸಾರದಲ್ಲಿ ನೋಡಬಹುದು. ಇಲ್ಲಿನ ಇನ್ನೊಂದು ಆಸಕ್ತಿಕರ ವಿಷಯ ಎಂದರೆ ಇಲ್ಲೊಂದು ಉಷ್ಣಮಾಪಕವಿದೆ. ಅದರ ಮುಂದೆ ಒಂದು ಫೋಟೋ ಎಲ್ಲ ಪ್ರವಾಸಿಗರ ಆಲ್ಬಮ್ ಅನ್ನೂ ಸೇರುತ್ತದೆ. ನಾವು ತೆಗೆಸಿಕೊಂಡ ಹಾಗೆ.

(ಅಲ್ಲಿರುವ ಉಷ್ಣಮಾಪಕದ ಎದುರು ಒಂದು ಫೋಟೋ)

ಇಲ್ಲಿನ ಪ್ರಮುಖ ಆಕರ್ಷಣೆ “ಸಾಂಟಾ ಕ್ಲಾಸ್”! ಹೌದು, ಇಲ್ಲಿ ಸಾಂಟಾ ಕ್ಲಾಸ್‌ನನ್ನು ಭೇಟಿ ಮಾಡಬಹುದು. ಎಲ್ಲಾ ಮಕ್ಕಳ ಕನಸು ನನಸಾಗುವ ಸಮಯವಲ್ಲವೆ! ಹಾಗಾಗಿ ಇಲ್ಲಿ ಎಲ್ಲಿಲ್ಲದ ಜನಸಂದಣಿ. ಬೆಳಗ್ಗೆ ಸುಮಾರು ಹತ್ತು ಘಂಟೆಗೆ ಹೋದರೆ ಮಧ್ಯಾಹ್ನ ಒಂದೂವರೆಗೆ ಬರುವುದಕ್ಕೆ ಹೇಳಿ ಒಂದು ಟೋಕನ್ ಕೊಟ್ಟು ಕಳಿಸಿದರು. ಆಮೇಲೆ ಮಧ್ಯಾಹ್ನ ಬಂದರೆ ಮತ್ತೆ ಸರತಿಯ ಸಾಲು. ಸಾಲಿನಲ್ಲಿ ನಿಂತಿದ್ದ ಮಕ್ಕಳಿಗೆ ಎಲ್ಲಿಲ್ಲದ ಕುತೂಹಲ. ತನ್ನ ಕನಸುಗಳನ್ನೆಲ್ಲ ಪೂರೈಸುವ ಕಾಲ್ಪನಿಕ ತಾತನನ್ನು ಭೇಟಿ ಮಾಡುವ ಸಮಯವೆಂದರೆ ಸಾಮಾನ್ಯವೇ? ಪುಟ್ಟ ಪುಟ್ಟ ಕನಸುಗಳ ಪೊಟ್ಟಣಗಳು ಕಾತುರತೆಯಿಂದ ಕಾಯುತ್ತಿದ್ದುದನ್ನು ಗಮನಿಸಿದೆ. ಮತ್ತೊಂದು ಘಂಟೆ ನಿಂತ ಮೇಲೆ ಸಾಂಟಾ ಕ್ಲಾಸ್ ಭೇಟಿಯ ಅವಕಾಶ ದೊರೆಯಿತು. ಥೇಟ್ ಹಾಲಿವುಡ್ ಸಿನೆಮಾದಲ್ಲಿ ಬರುವ ಸಾಂಟಾ ಕ್ಲಾಸ್! ಕೆಂಪು ಬಣ್ಣದ ನಿಲುವಂಗಿ, ಕೆಂಪು ಟೋಪಿ, ಉದ್ದನೆಯ ಬಿಳಿಯ ಗಡ್ಡ, ಹೊಟ್ಟೆ ಬಿಟ್ಟಿರುವ ತಾತ. ನಮ್ಮನ್ನು ಕಂಡ ಕೂಡಲೇ ಕ್ರಿಸ್ಮಸ್ ತಾತ ಕೂತಲ್ಲಿಯೇ ಕೈ ಮುಗಿದು “ನಮಸ್ತೆ. ನೀವು ಭಾರತೀಯರು ಎಂದು ಭಾವಿಸಿದ್ದೇನೆ, ಹೇಗಿದ್ದೀರಿ?” ಎಂದೆಲ್ಲ ಉಭಯ ಕುಶಲೋಪರಿ ವಿಚಾರಿಸಿದ ಪರಿ ವಿಶೇಷವೆನಿಸಿತು. ಆಮೇಲೆ ಪಕ್ಕದಲ್ಲಿ ಕುಳಿತು ಫೋಟೋ ತೆಗೆಸಿಕೊಂಡಿದ್ದಾಯ್ತು. ಎಲ್ಲ ಸೇರಿ ಸುಮಾರು ಹತ್ತಿಪ್ಪತ್ತು ಸೆಕೆಂಡುಗಳ ಮುಖಾಮುಖಿ.

ಅಮೆರಿಕಾದ ಮಾರುಕಟ್ಟೆಯ ತಂತ್ರದ ಭಾಗವಾಗಿ ಹೇಗೆ ಕೋಕಾ ಕೋಲಾ, ಪೆಪ್ಸಿ, ಮೆಕ್ ಡೊನಾಲ್ಡ್ಸ್, ಬರ್ಗರ್ ಕಿಂಗ್ ಇತ್ಯಾದಿಗಳು ಜಗತ್ ಪ್ರಸಿದ್ಧಿ ಹೊಂದಿದವೋ, ಅದೇ ಅಮೇರಿಕನ್ ಮಾರುಕಟ್ಟೆಯ ಫಲವಾಗಿ ಕ್ರಿಸ್ಮಸ್ ಸಾಂಟಾ ಕ್ಲಾಸ್ ಕೂಡ ಪ್ರಪಂಚದ ಉದ್ದಗಲಕ್ಕೂ ಪರಿಚಯವಾದ.

ಪ್ರಪಂಚದೆಲ್ಲೆಡೆ ಆದ ಕೊರೋನಾ ಸಮಯದ ಬದಲಾವಣೆಗಳನ್ನು ಇಲ್ಲಿಯೂ ಕಾಣಬಹುದು. ಕೊರೋನಾ ಪೂರ್ವಕಾಲದಲ್ಲಿ ಕ್ರಿಸ್ಮಸ್ ತಾತ ಕುಳಿತಿರುವ ಕುರ್ಚಿಯ ಮೇಲೆ ಪಕ್ಕದಲ್ಲಿಯೇ ಕುಳಿತು, ಚಿಕ್ಕ ಮಕ್ಕಳಾದರೆ ಅವರ ತೊಡೆ ಮೇಲೆ ಕುಳಿತು ಫೋಟೋ ತೆಗೆಸಬಹುದಿತ್ತು. ಸರತಿ ಸಾಲಿನಲ್ಲಿ ಕಾಯುವಾಗ ಈ ರೀತಿಯ ಹಲವಾರು ಫೋಟೋಗಳನ್ನು ಗೋಡೆಯ ಮೇಲೆ ನೇತು ಹಾಕಿದ್ದರು. ಆದರೆ ಈಗ ಹಾಗಿಲ್ಲ. ಕ್ರಿಸ್ಮಸ್ ತಾತ ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡು, ಒಂದು ಗಾಜಿನ ಗೋಡೆಯ ಸಹಾಯದಿಂದ ಸಂಪೂರ್ಣ ಕೊರೋನಾ ನಿಯಮಗಳನ್ನು ಪಾಲಿಸುತ್ತಿದ್ದಾನೆ. ನಮ್ಮ ಫೋಟೋದಲ್ಲಿ ನೀವು ಇದನ್ನು ಗಮನಿಸಬಹುದು.

ಅಲ್ಲಿ ನಮ್ಮ ಮೊಬೈಲ್ ಅಥವಾ ಸ್ವಂತ ಕ್ಯಾಮರಾ ಉಪಯೋಗಿಸುವುದು ನಿಷಿದ್ಧ! ಆದ್ದರಿಂದ ತೆಗೆಸಿಕೊಂಡ ಫೋಟೋ ಬೇಕೆಂದರೆ ದುಡ್ಡು ಕೊಡಲೇಬೇಕು. ಪ್ರಿಂಟಿಗೆ ಒಂದು ದರ, ಡೌನ್ಲೋಡ್ ಮಾಡಲು ಒಂದು ದರ ಹೀಗೆ ನಾನಾ ಪ್ಯಾಕೇಜ್ ಇವೆ. ನಾನು ನನ್ನ ಹೆಂಡತಿಗೆ ಅಂದೆ “ಇಷ್ಟೊಂದು ದುಡ್ಡು ಬರುತ್ತೆ ಅಂದ್ರೆ ನಾವ್ಯಾಕೆ ನಮ್ಮ ಬೆಂಗಳೂರಿನಲ್ಲಿ ಒಂದು ಸಾಂಟಾ ಕ್ಲಾಸ್ ಫ್ರಾಂಚೈಸಿ ತೆಗೆಯಬಾರದು? ಸುಮ್ಮನೆ ಕೂತು ಫೋಟೋ ತೆಗೆಸಿಕೊಳ್ಳುವುದಕ್ಕೆ ಇಷ್ಟು ಜನವೆ?”. ಅದಕ್ಕೆ ನನ್ನ ಹೆಂಡತಿ ” ಜನ ಮರುಳೋ, ಜಾತ್ರೆ ಮರುಳೋ. ಆದ್ರೂ ನಾವೇನು ಮತ್ತೆ ಮತ್ತೆ ಬರಲ್ಲ. ಒಂದು ಸಲ ಇಷ್ಟು ದೂರ ಬಂದಿದ್ದೀವಿ…” ಅದು-ಇದು ಎಲ್ಲ ಹೇಳಿ ಕೊನೆಗೆ “ನೋಡು, ಏನ್ ಮಾಡ್ತಿಯಾ ಅಂತ. ಬೇಕಿದ್ರೆ ತೊಗೊಳೋಣ” ಅಂದಳು. ಡೌನ್ಲೋಡ್ ಮಾಡಲು ನಲವತ್ತೈದು ಯೂರೋ ತೆತ್ತಿದ್ದೂ ಆಯಿತು. ಇದೊಂದು ದೊಡ್ಡ “ಬ್ಲೇಡ್” ಜಾಗ ಅನ್ನಿಸಿತು. ಜಗತ್ತಿಗೆಲ್ಲಾ ಉಚಿತ ಉಡುಗೊರೆ ಕೊಡುವ ಸಾಂಟಾ ಕ್ಲಾಸಿಗೆ ಇಲ್ಲಿ ನಾವು ದುಡ್ಡು ಕೊಟ್ಟು ಭೇಟಿಯಾಗುವ ಪರಿಸ್ಥಿತಿ! ಆದರೆ ಬಂದಿದ್ದ ಮಕ್ಕಳಿಗೆ ಮಾತ್ರ ಇದು “ಜೀವನದ ಅವಿಸ್ಮರಣೀಯ ಕ್ಷಣ”!!!

(ಸಾಂಟಾ ಕ್ಲಾಸ್ ಜೊತೆಗೆ ಒಂದು ಕ್ಷಣ)

ಟೋಕನ್ ಸಿಕ್ಕ ಮೇಲೆ ಮಧ್ಯಾಹ್ನದವರೆಗೂ ಸಮಯವಿತ್ತು. ಹೊರಗೆ ಬಂದು ಫೋಟೋ ತೆಗೆಯುವಾಗ ನೆನಪಾಗಿದ್ದು ನನ್ನ ಎರಡನೇ ಗ್ಲೌಸ್ ಬಸ್ಸಿನಲ್ಲಿ ಮರೆತುಬಂದಿದ್ದೆ ಎಂದು. ಬಸ್ ಮತ್ತೆ ನಮ್ಮನ್ನು ಹೊತ್ತೊಯ್ಯಲು ಬರುವುದು ಸಂಜೆ. ಅಲ್ಲಿಯವರೆಗೂ ಉತ್ಸಾಹ ಅಪಾರವಾಗಿದ್ದರೂ ಈ ವಾತಾವರಣಕ್ಕೆ ದೇಹ ತಡೆಯಬೇಕಲ್ಲ! ಕೈ ಮರಗಟ್ಟಿ ಹೋಗುತಿತ್ತು. ಬೇರೆ ವಿಧಿಯಿಲ್ಲದೇ ಅಲ್ಲಿಯ ಅಂಗಡಿಯಲ್ಲಿ ಮತ್ತೊಂದು ಗ್ಲೌಸ್ ತೆಗೆದುಕೊಂಡೆ. ಆಮೇಲೆ ಆರಾಮವಾಗಿ ಫೋಟೋಗ್ರಫಿ ನಡೆಯಿತು.

ಇಲ್ಲಿನ ಮುಂದಿನ ವಿಶೇಷ ಸಾಂಟಾ ಕ್ಲಾಸ್ ಪೋಸ್ಟ್ ಆಫೀಸ್! ಸಾಂಟಾ ಕ್ಲಾಸ್ ಇರುವ ಹಲವಾರು ಪೋಸ್ಟ್ ಕಾರ್ಡ್‌ಗಳು ಸಿಗುತ್ತವೆ. ಅದನ್ನು ನಾವು ಇಲ್ಲಿಂದ ನಮ್ಮೂರಿಗೆ ಕಳಿಸಬಹುದು. ಇಲ್ಲಿ ಎರಡು ಅಂಚೆ ಪೆಟ್ಟಿಗೆಗಳಿವೆ. ಮೊದಲನೆಯದು ಸಾಮಾನ್ಯ ಅಂಚೆ. ಎರಡನೆಯದು “ಕ್ರಿಸ್ಮಸ್ ಅಂಚೆ”. ಬಹುತೇಕ ಪೋಷಕರು ತಮ್ಮ ಮಕ್ಕಳಿಗೆ ಕ್ರಿಸ್ಮಸ್ ಅಂಚೆಯಲ್ಲಿ ಪೋಸ್ಟ್ ಮಾಡುತ್ತಿದುದು ಕಂಡುಬಂತು. ಅಂದರೆ ಅವರು ಪೋಸ್ಟ್ ಮಾಡಿದ ಅಂಚೆ 2022ರ ಕ್ರಿಸ್ಮಸ್ ಹೊತ್ತಿಗೆ ಮಕ್ಕಳನ್ನು ತಲುಪುತ್ತೆ. ಆ ರೀತಿಯ ವ್ಯವಸ್ಥೆ ಇದೆ. ಎಲ್ಲ ಸ್ಟ್ಯಾಂಪ್ ಮೇಲೂ ಸಾಂಟಾ ಕ್ಲಾಸ್ ಇರುತ್ತಾನೆ. ನಾವು ಸಹ ಪೋಸ್ಟ್ ಕಾರ್ಡ್ ಪಡೆದು ನಮ್ಮ ಮನೆಗಳಿಗೆ ಪೋಸ್ಟ್ ಮಾಡಿದೆವು. ಇಲ್ಲಿಯ ಮತ್ತೊಂದು ವಿಶೇಷ ಎಂದರೆ ಪ್ರಪಂಚದಾದ್ಯಂತ ಮಕ್ಕಳು ಸಾಂಟಾ ಕ್ಲಾಸಿಗೆ ಕಳಿಸುವ ಅರಿಕೆಯ ಪತ್ರಗಳು ಇಲ್ಲಿ ಬಂದು ತಲುಪುತ್ತವೆ. ವರ್ಷಕ್ಕೆ ಸುಮಾರು ಐವತ್ತು ಲಕ್ಷ ಪತ್ರಗಳು! ಹಾಗಾಗಿ ರೊವಿನೇಮಿಯ ಸಾಂಟಾ ಕ್ಲಾಸ್ ವಿಲೇಜ್ ಕ್ರಿಸ್ಮಸ್ ತಾತನ ಅಧಿಕೃತ ಸ್ಥಳವಾಗಿದೆ.

(ದೈತ್ಯಾಕಾರದ ಸ್ನೋ ಮ್ಯಾನ್)

ಹಲವಾರು ಬೇರೆಯ ಆಕರ್ಷಣೆಗಳೂ ಇಲ್ಲಿವೆ. ಮಕ್ಕಳಿಗಂತೂ ಸ್ವರ್ಗ! ಹಿಮಸಾರಂಗಗಳ ಸಫಾರಿ ಮತ್ತು ಹಸ್ಕಿ ನಾಯಿಗಳ ಸಫಾರಿ ಮಕ್ಕಳ ಮನಸೂರೆಗೊಳ್ಳುತ್ತವೆ. ಉಳಿದುಕೊಳ್ಳುವ ವ್ಯವಸ್ಥೆ ಕೂಡ ಇದೆ. ರೊವಿನೇಮಿ ವಿಮಾನ ನಿಲ್ದಾಣದಿಂದ ಕೇವಲ ಎರಡು ಕಿಲೋಮೀಟರು! ಲ್ಯಾಪ್ಲ್ಯಾಂಡ್ ಪ್ರವಾಸದಲ್ಲಿ ಸಾಂಟಾ ಕ್ಲಾಸ್ ವಿಲೇಜ್ ಭೇಟಿ ನೀಡುವುದು ಕಡ್ಡಾಯ. ನನಗಂತೂ ವಯಕ್ತಿಕವಾಗಿ ಇದು ತೀರಾ ಟೂರಿಸ್ಟಿಕ್ ಜಾಗ ಎನ್ನಿಸಿತು. ಎಲ್ಲವೂ ಅಗತ್ಯಕ್ಕಿಂತ ಬಹಳ ದುಬಾರಿ, ಜನಜಂಗುಳಿ. ಆದರೆ ಮಕ್ಕಳಿಗೆ ಮರೆಯಲಾಗದ ಅನುಭವ, ನೆನಪಿನ ಬುತ್ತಿ ಕಟ್ಟಿಕೊಡುವುದು ಖಚಿತ!

ಮತ್ತೆ ನಾಲ್ಕು ಘಂಟೆಗಳ ಬಸ್ ಪ್ರಯಾಣದಲ್ಲಿ ನಮ್ಮ ಪ್ರವಾಸದ ಕೇಂದ್ರ ಸ್ಥಳವಾದ ಸಾರಿಸೆಲ್ಕಾ ತಲುಪಿದೆವು. ನಮ್ಮ ಗೈಡ್ ಮೈಕಿನಲ್ಲಿ ಹೇಳಿದ “ಈಗ ಬಸ್ಸು ಊರಿನ ಒಂದು ಸುತ್ತು ಹಾಕಿ ಬರುತ್ತದೆ. ಎಲ್ಲೆಲ್ಲಿ ಏನೇನಿದೆ ಅಂತ ವಿವರಿಸುತ್ತೇನೆ…” ಎಂದು ಊರಿನ ಸೂಪರ್ ಮಾರ್ಕೆಟ್, ಹೋಟೆಲ್ಗಳು ಇತ್ಯಾದಿ ತೋರಿಸಿ ವಾಪಸ್ ಬಂದರೆ ನಾವು ಕ್ರಮಿಸಿದ್ದುದು ಸುಮಾರು ಎರಡು ಕಿಲೋಮೀಟರು! ಅದೊಂದು ಸಣ್ಣ ಹಳ್ಳಿ. ಎಲ್ಲಿ ಕಣ್ಣು ಹಾಯಿಸಿದರೂ ಹಿಮ. ಕೊನೆಗೆ ನಮ್ಮ ಕಾಟೇಜ್ ಹತ್ತಿರ ನಿಲ್ಲಿಸಿದಾಗ, ಲಗೇಜ್ ತೆಗೆದುಕೊಂಡು ಹೊರೆಟೆವು. ನಮ್ಮೊಂದಿಗೆ ಕಾಟೇಜ್ ನಲ್ಲಿ ಇಬ್ಬರು ಜಪಾನಿಯರು ಸೇರಿಕೊಂಡರು. ಒಬ್ಬನ ಹೆಸರು ಔಝೋರ, ಇನ್ನೊಬ್ಬಳ ಹೆಸರು ಯೂರಿಯಾ. ಕಾಟೇಜ್ ನಲ್ಲಿ ಅಡುಗೆ ಮನೆಯಿಂದ ಹಿಡಿದು ಯಾವಾಗಲೂ ಬರುವ ಬಿಸಿ ನೀರು, ಹೀಟರ್ ಸೇರಿದಂತೆ ಎಲ್ಲ ವ್ಯವಸ್ಥೆಗಳು ಇದ್ದವು. ತಲುಪಿದ ಮೇಲೆ ಆವತ್ತು ನನ್ನದೇ ನಳಪಾಕ. ಬಿಸಿ ಬಿಸಿ ಪಲಾವ್ ಮಾಡಿದ್ದೆ. ಪಲಾವಿಗೆ ನಮ್ಮವರು ಯಾವ ಪ್ರತಿಕ್ರಿಯೆಯನ್ನು ಕೊಡದಿದ್ದರೂ ಜಪಾನಿಯರ ಹತ್ತಿರ ಭೇಷ್ ಅನ್ನಿಸಿಕೊಂಡೆ ಎನ್ನುವುದೊಂದೇ ನನಗೆ ಸಮಾಧಾನಕರ ವಿಷಯ.

ಹಿಮಸಾರಂಗಗಳ ಬಗೆಗೆ ಕುತೂಹಲಕಾರಿ ಮಾಹಿತಿ ಹಾಗೂ ಹಸ್ಕಿ ಸಫಾರಿ ಮುಂದಿನ ಸಂಚಿಕೆಯಲ್ಲಿ!

(ಮುಂದುವರೆಯುವುದು)
(ಫೋಟೋಗಳು: ಲೇಖಕರವು)