ನಮ್ಮ ದೇಶವನ್ನು ನೋಡಲು ಸರಿಯಾಗಿ ಒಂದು ಜನ್ಮ ಸಾಕಾಗಲ್ಲ. ಅಲೆದಾಡಲು ಇನ್ನೂ ಅದೆಷ್ಟು ಜನ್ಮಗಳು ಬೇಕೋ. ಅದರಲ್ಲೂ ಈ ಮಧ್ಯಪ್ರದೇಶ ರಾಜ್ಯವನ್ನು ನೋಡಲು ಅರ್ಧ ಜನ್ಮವೇ ಬೇಕೇನೋ. ಪ್ರಸ್ತುತ ನಾನು ಗ್ವಾಲಿಯರ್‌ನಿಂದ ೨೫ ಕಿ. ಮೀ ದೂರದಲ್ಲಿರುವ ಮೊರೇನಾ ಅನ್ನೋ ಜಿಲ್ಲೆಗೆ ಸೇರಿದ ಬಟೇಶ್ವರ ಗುಡಿಗಳು ಜೀವ ತಳೆದ ಕಥೆಯ ಬಗ್ಗೆ ಹೇಳಬೇಕು.  ಇವು ೮ ರಿಂದ ೧೦ ನೇ ಶತಮಾನದಲ್ಲಿ ನಿರ್ಮಾಣ ಆಗಿರಬಹುದು ಎನ್ನುತ್ತಾರೆ ಪುರಾತತ್ವಜ್ಞರು. ಆದರೆ ಇದು ಬೆಳಕಿಗೆ ಬಂದಿದ್ದು ೨೦೦೫ ರಿಂದ ಈಚೆಗೆ. ಅಲ್ಲೀ ತನಕ ಏನಾಗಿತ್ತು? ಯಾಕೆ ಯಾರೂ ಇಲ್ಲಿರುವ ವಿಗ್ರಹಗಳನ್ನು ಕಳುವು ಮಾಡಲಿಲ್ಲ? ಅವುಗಳನ್ನು ಚಂಬಲ್‌ ನ ಡಕಾಯಿತರು  ಪರೋಕ್ಷವಾಗಿ ಕಾಯುತ್ತಿದ್ದರು ಎಂದು ಬರೆಯುತ್ತಾರೆ ಗಿರಿಜಾ ರೈಕ್ವ.  ದೇವಸನ್ನಿಧಿ ಅಂಕಣದಲ್ಲಿ ಅವರ ಹೊಸ ಬರಹ ಇಲ್ಲಿದೆ. 

ಮಧ್ಯಪ್ರದೇಶ ನನ್ನ ನೆಚ್ಚಿನ ರಾಜ್ಯ. ಅಲ್ಲಿನ ಇತಿಹಾಸ, ದೇವಾಲಯಗಳು, ಹರಡಿದ ಸಸ್ಯಸಂಪತ್ತು, ಪ್ರಾಣಿಸಂಪತ್ತು, ಪಾರಂಪರಿಕ ತಾಣಗಳು ಮತ್ತೆ ಮತ್ತೆ ಅಲ್ಲಿಗೆ ಕರೆಯುತ್ತವೆ. ಎಷ್ಟು ತಿರುಗಿದರೂ ಮುಗಿಯದ ಅಗಾಧವಾದ ಪುರಾತತ್ವ ಸ್ಥಳಗಳು, ಹೋದಲ್ಲೆಲ್ಲಾ ಕಥೆಗಳು. ಅಬ್ಬಾ! ಅದರ ವಿಸ್ತಾರಕ್ಕೆ ತಕ್ಕ ವೈವಿಧ್ಯಮಯ ಸಂಸ್ಕೃತಿ, ದೇಶದ ಅಕ್ಷರಶಃ ಮಧ್ಯದಲ್ಲಿರುವ ಮಧ್ಯಪ್ರದೇಶದ್ದು. ಯೋಗಿನಿಯರ ಹುಚ್ಚು ಹತ್ತಿಸಿಕೊಂಡು ನಾನು ಮಧ್ಯಪ್ರದೇಶದ ಒಳ ಭಾಗದಲ್ಲೆಲ್ಲಾ ಓಡಾಡಿದ್ದೇನೆ. ಮತ್ತೆ ಮತ್ತೆ ಹೋಗಲು ದೊಡ್ಡ ಪಟ್ಟಿ ಮಾಡಿದ್ದೇನೆ. ಬಹುಶಃ ಒಂದು ಜನ್ಮವೇ ಬೇಕು ಅದನ್ನು ನೋಡಲು, ಸವಿಯಲು. ಒಂದಂತೂ ನನಗೆ ಖಚಿತವಾಗಿದೆ. ನಮ್ಮ ದೇಶವನ್ನು ನೋಡಲು ಸರಿಯಾಗಿ ಒಂದು ಜನ್ಮ ಸಾಕಾಗಲ್ಲ. ಅಲೆದಾಡಲು ಇನ್ನೂ ಅದೆಷ್ಟು ಜನ್ಮಗಳು ಬೇಕೋ!!

ಗ್ವಾಲಿಯರ್‌ನಿಂದ ಮೊರೇನಾ ಕಡೆಗೆ ಓಲಾದ ಕ್ಯಾಬ್‌ ಒಂದರಲ್ಲಿ ಹೊರಟಾಗ ಸೂರ್ಯ ನೆತ್ತಿಯ ಮೇಲಿದ್ದ. ನಾನೇ ಕರಗಿ ಹೋಗುತ್ತೀನೇನೋ ಅನ್ನುವಷ್ಟು ಸೆಖೆ ಹೊರಗೆ. ಇಲ್ಲೆಲ್ಲಾ ಓಡಾಡಲು ಚಳಿಗಾಲ ಸೂಕ್ತ. ಬೇಸಿಗೆಯಲ್ಲಿ ಹೋದರಂತೂ ಬಿಸಿಲು ನಮ್ಮನ್ನೇ ಹಪ್ಪಳದ ತರಹ ಸುಟ್ಟು ಹಾಕೇ ಬಿಡುತ್ತೇನೋ.

ಮೊರೇನಾದ ಯೋಗಿನಿ ದೇವಾಲಯಕ್ಕೆ ಹೋಗುವುದು ನನ್ನ ಮೊದಲ ಆದ್ಯತೆ ಆಗಿತ್ತು. ಸಮಯ ಉಳಿದರೆ ಮತ್ತೇನಾದರೂ ಅಂದುಕೊಂಡು ಡ್ರೈವರ್‌ಗೆ ಹೇಳಿದರೆ ಅವನಿಗೆ ಆ ಜಾಗ ಗೊತ್ತೇ ಇರಲಿಲ್ಲ. ಹಾಗಾಗಿ ಮ್ಯಾಪ್‌ ಹಾಕಿಕೊಂಡು ಹೊರಟೆ. ದಾರಿಯಲ್ಲಿ ‘ಬಟೇಶ್ವರಕ್ಕೆ ದಾರಿ’ ಅಂತ ಒಂದು ಬೋರ್ಡ್‌ ಇತ್ತು. ನನ್ನ ಆದ್ಯತೆ ಯೋಗಿನೀ ದೇವಾಲಯ ಆಗಿದ್ದುದರಿಂದ ಬರುವಾಗ ಹೋಗೋಣ ಅಂತ ಮುಂದೆ ಹೋದೆ. ಅಲ್ಲಿಯೇ ಅರ್ಧ ದಿನಕ್ಕೂ ಹೆಚ್ಚು ಹೊತ್ತು ಕಳೆದಿದ್ದರಿಂದ ವಾಪಾಸ್‌ ಬರುವಾಗ ನಾಲ್ಕರ ಹೊತ್ತು.

ಅಷ್ಟು ಹೊತ್ತಿಗೆ ನನಗೆ ಹೊಳೆಯಿತು, ‘ಇದು ಮಧ್ಯಪ್ರದೇಶದ ಬಟೇಶ್ವರ ಅಲ್ವ! ‘ ಅಂತ. ಹಿಂದೆ ಅದರ ಬಗ್ಗೆ ಓದಿದ್ದೆ. ನಾನು ಪ್ಲ್ಯಾನ್‌ ಮಾಡಿ ಬರದಿದ್ದರೂ ದಾರಿಯಲ್ಲೇ ಸಿಗುವಾಗ ಅದನ್ನು ಬಿಟ್ಟು ಹೋಗುವುದುಂಟೆ? ಇದೇ ಹೆಸರಿನ ಮತ್ತೊಂದು ದೇವಾಲಯ ಉತ್ತರಭಾರತದಲ್ಲೂ ಒಂದಿದೆ. ಇದು ಅದಲ್ಲ. ಮಧ್ಯಪ್ರದೇಶದ ಚಂಬಲ್‌ ಕಣಿವೆಯಲ್ಲಿ ಅಡಗಿ ಕೂತ ದೇವಾಲಯಗಳ ಈ ಗುಚ್ಛ ಸಂಜೆಯ ಇಳಿಬಿಸಿಲಿನಲ್ಲಿ ದಿವ್ಯವಾಗಿ ಕಾಣುತ್ತಿತ್ತು. ವಾರದ ದಿನವಾಗಿದ್ದರಿಂದನೋ ಏನೋ ಬೇರೆ ಯಾವ ಜನರೂ ಇರಲಿಲ್ಲ. ಸುತ್ತಲಿನ ಹಸಿರಿನ ನಡುವೆ ೨೫ ಎಕರೆ ಜಾಗದಲ್ಲಿ ಮಿರುಗುತ್ತಿದ್ದ ದೇವಾಲಯ ಸಮುಚ್ಛಯಕ್ಕೆ ೧೩೦೦ ವರ್ಷಗಳ ಇತಿಹಾಸ.

ಮಧ್ಯಪ್ರದೇಶದ ಚಂಬಲ್‌ ಕಣಿವೆಯಲ್ಲಿ ಅಡಗಿ ಕೂತ ದೇವಾಲಯಗಳ ಈ ಗುಚ್ಛ ಸಂಜೆಯ ಇಳಿಬಿಸಿಲಿನಲ್ಲಿ ದಿವ್ಯವಾಗಿ ಕಾಣುತ್ತಿತ್ತು. ವಾರದ ದಿನವಾಗಿದ್ದರಿಂದನೋ ಏನೋ ಬೇರೆ ಯಾವ ಜನರೂ ಇರಲಿಲ್ಲ. ಸುತ್ತಲಿನ ಹಸಿರಿನ ನಡುವೆ ೨೫ ಎಕರೆ ಜಾಗದಲ್ಲಿ ಮಿರುಗುತ್ತಿದ್ದ ದೇವಾಲಯ ಸಮುಚ್ಛಯಕ್ಕೆ ೧೩೦೦ ವರ್ಷಗಳ ಇತಿಹಾಸ.

೮೦ ಪುಟ್ಟ ಪುಟ್ಟ ಗುಡಿಗಳ ಸಂಕೀರ್ಣ ಅದು. ಅಲ್ಲೊಂದು ಸಣ್ಣ ಕೊಳ. ಜೊತೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಇನ್ನೂ ಅನೇಕ ಅವಶೇಷಗಳು ಆ ಅಂಗಳದ ತುಂಬಾ. ದೇಗುಲದ ಶಿಖರದ ಮೇಲಿರಬೇಕಾಗಿದ್ದ ಅಮಲಕಗಳು ಒಂದೆರಡು ಹರಡಿ ಬಿದ್ದಿದ್ದವು. ಅಲ್ಲಿ ಇನ್ನೂ ಕೆಲಸ ನಡೆಯುತ್ತಿದೆ ಅಂತ ಗೊತ್ತಾಗುತ್ತದೆ. ಪುರಾತತ್ವ ಇಲಾಖೆಯಿಂದ ನೇಮಿತವಾಗಿದ್ದ ಒಬ್ಬರು ಅಲ್ಲಿದ್ದರು. ಅವರು ವಿಶೇಷ ಆಸಕ್ತಿಯಿಂದ ಅದರ ಬಗ್ಗೆ ಹೇಳತೊಡಗಿದರು.

ಗ್ವಾಲಿಯರ್‌ನಿಂದ ೨೫ ಕಿ. ಮೀ ದೂರದಲ್ಲಿರುವ ಮೊರೇನಾ ಅನ್ನೋ ಜಿಲ್ಲೆಗೆ ಸೇರಿದ ಬಟೇಶ್ವರ ಗುಡಿಗಳು ಜೀವ ತಳೆದ ಕಥೆ ರೋಚಕವಾಗಿದೆ. ಇವು ೮ ರಿಂದ ೧೦ ನೇ ಶತಮಾನದಲ್ಲಿ ನಿರ್ಮಾಣ ಆಗಿರಬಹುದು ಎನ್ನುತ್ತಾರೆ ಪುರಾತತ್ವಜ್ಞರು. ಆದರೆ ಇದು ಬೆಳಕಿಗೆ ಬಂದಿದ್ದು ೨೦೦೫ ರಿಂದ ಈಚೆಗೆ. ಅಲ್ಲೀ ತನಕ ಏನಾಗಿತ್ತು? ಯಾಕೆ ಯಾರೂ ಇಲ್ಲಿರುವ ವಿಗ್ರಹಗಳನ್ನು ಕಳುವು ಮಾಡಲಿಲ್ಲ? ಅದೂ ಕುರುಚಲು ಕಾಡಿನ ನಡುವೆ ಇರುವ ಇದನ್ನು ಯಾರಾದರೂ ಎತ್ತಿಕೊಂಡು ಹೋಗುವ ಸಾಧ್ಯತೆಗಳಿರುವಾಗ ಹೇಗೆ ಬಚಾವಾದವು? ನಿಧಿ ಕಾಯೋಕೆ ಹಾವುಗಳಿದ್ದ ಹಾಗೆ ಇದನ್ನು ಕಾದಿದ್ದು ಯಾರು?

ಅವರೇ ಚಂಬಲ್‌ನ ಡಕಾಯಿತರು.

ಅವರಿಂದಲೇ ಈ ಎಲ್ಲ ವಿಗ್ರಹಗಳು ಇಷ್ಟು ವರ್ಷ ಬಚಾವಾಗಿ ಬಂದಿವೆ. ಹಾಗಂತ ಅವರೇನೂ ಇದನ್ನು ಕಾಯುತ್ತಾ ಕೂತಿರಲಿಲ್ಲ. ಆದರೆ ಚಂಬಲ್‌ನ ಡಕಾಯಿತರ ಸ್ವಗೃಹವಾದ ಇಲ್ಲಿಗೆ ಬರೋಕೆ ಯಾರಿಗೆ ಧೈರ್ಯ ಇದ್ದೀತು. ಹಾಗೇ ತಣ್ಣಗೆ ಕುಳಿತಿತ್ತು ದೇವಾಲಯ ಗುಚ್ಛ.

ಒಂದು ಕಾಲದಲ್ಲಿ ಗುರ್ಜರ ಪ್ರತಿಹಾರರು ನಿರ್ಮಿಸಿದ ಬಟೇಶ್ವರ ಆಮೇಲೆ ಯಾಕೆ ಹಾಳಾಯಿತು ಅಂತ ಯಾರಿಗೂ ಗೊತ್ತಿಲ್ಲ. ಬಹುಶಃ ಭೂಕಂಪದಿಂದ ನೆಲಕಚ್ಚಿರಬೇಕೆಂಬುದು ಒಂದು ವಾದ. ಪುರಾತತ್ವ ಇಲಾಖೆಯ ಕೆ.ಕೆ. ಮಹಮ್ಮದ್‌ ಒಮ್ಮೆ ಅಲ್ಲಿಗೆ ಹೋದಾಗ ಅವರಿಗೆ ಕಂಡಿದ್ದು ದೇಗುಲಗಳ ಅವಶೇಷ ಮತ್ತು ಅಲ್ಲೊಂದು ಇಲ್ಲೊಂದು ಹಾಳಾಗಿದ್ದ ಸಣ್ಣ  ಗುಡಿಗಳು. ಅವರಿಗೆ ಈ ದೇವಾಲಯವನ್ನು ಸರಿಪಡಿಸಬೇಕೆಂಬ, ಪುನರ್ನಿಮಾಣ ಮಾಡಬೇಕೆಂಬ ತೀವ್ರವಾದ ತುಡಿತವುಂಟಾಯಿತು. ಆದರೆ ಆ ಕೆಲಸ ಅಷ್ಟು ಸುಲಭವಾಗಿರಲಿಲ್ಲ. ಹೇಳಿಕೇಳಿ ಚಂಬಲ್‌ ಡಕಾಯಿತರ ಜಾಗ ಅದು. ಆ ಕಾಲಕ್ಕೆ ಡಕಾಯಿತರ ನಾಯಕ ಸರ್ದಾರ ನಿರ್ಭಲ್‌ ಗುಜ್ಜರ ತುಂಬಾ ಪ್ರಬಲವಾಗಿದ್ದ ಕಾಲ. ಅವರು ಪ್ರಾಣವನ್ನೇ ತೆಗೆಯುವಂತಹ ಜನ. ಅವರ ಸಹಾಯವಿಲ್ಲದೆ ದೇವಾಲಯದ ಜೀರ್ಣೋದ್ಧಾರ ಅಸಾಧ್ಯದ ಕೆಲಸವಾಗಿತ್ತು. ಕೆ.ಕೆ. ಮಹಮ್ಮದ್‌ ಅವರು ಅವರನ್ನು ಅನುನಯಿಸಿ ಅವಾಲ ಸಹಾಯ ಕೇಳಿದ್ದೇ ಅಂದು ಸಾಹಸದ ಕಥೆ. ನಿಮ್ಮ ಪೂರ್ವಜರು ಕಟ್ಟಿದ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಲು ನಿಮ್ಮ ಸಹಾಯ ಬೇಕು ಅಂತ ಡಕಾಯಿತನ ಮನ ಓಲೈಸಿ ಅವರ ಸಹಾಯದಿಂದ ಕೆಲಸ ಶುರು ಮಾಡಿದರು. ಸುಮಾರು ಇನ್ನೂರು ದೇವಾಲಯಗಳಿದ್ದ ಈ ಜಾಗದಲ್ಲೀಗ ೮೦ ದೇವಾಲಯಗಳು ಮೇಲೆದ್ದಿವೆ.

ಒಂದೊಂದು ಕಲ್ಲಿನ ತುಂಡುಗಳನ್ನು ಅಧ್ಯಯನ ಮಾಡಿ, ಅವನ್ನು ಅಂಟಿಸಿ, ಸಂಖ್ಯೆಗಳನ್ನು ಹಾಕಿ ಅದರಂತೆ ಜೋಡಿಸಿ ಒಂದೊಂದೇ ದೇಗುಲವನ್ನು ಮೇಲೆಬ್ಬಿಸಿದ್ದು ಸುಲಭದ ಮಾತಲ್ಲ. ಅದನ್ನು ಮೇಲೆ ತರಲು ೪-೫ ವರ್ಷ ಬೇಕಾಯಿತು. ಇನ್ನೂ ಕೆಲಸ ನಡೆಯುತ್ತಿದೆ. ಉಳಿದಿದ್ದ ಒಂದೆರಡು ದೇಗುಲಗಳು ಅದರ ವಾಸ್ತುಶಿಲ್ಪವನ್ನು ಅರಿಯಲು ಸಹಾಯ ಮಾಡಿತು. ಉಳಿದಂತೆ ತಜ್ಞರು ಮಾನಸಾರ, ಮಯಮತ ದಂತಹ ಪ್ರಾಚೀನ ವಾಸ್ತುಶಿಲ್ಪ ಗ್ರಂಥಗಳ ಸಹಾಯದಿಂದ ಅದಕ್ಕೊಂದು ರೂಪ ಕೊಡಲು ಸಾಧ್ಯವಾಯಿತು. ಕೆ.ಕೆ. ಮಹಮ್ಮದ್‌ ಹೇಳುವಂತೆ ಪುಣ್ಯಕ್ಕೆ ಎಲ್ಲವೂ ಯಾರೂ ಮುಟ್ಟದೆ ಅಲ್ಲಿಯೇ ಬಿದ್ದಿದ್ದರಿಂದ ಜೋಡಿಸುವುದು ತುಸು ಸುಲಭವಾಯಿತು.

ಆಮೇಲೆ ಕೆಲವು ವರ್ಷಗಳಲ್ಲಿ ಡಕಾಯಿತರು ಒಬ್ಬೊಬ್ಬರಾಗಿ ಪೋಲೀಸರ ಗುಂಡುಗಳಿಗೆ ಬಲಿಯಾಗಿ ಹೊರಟಂತೆ ಅಲ್ಲಿಯವರೆಗೆ ಸುಮ್ಮನಿದ್ದ ಗಣಿ ಮಾಫಿಯ, ದೇವಾಲಯದ ಜೀರ್ಣೋದ್ಧಾರಕ್ಕೆ ಅನೇಕ ಅಡೆತಡೆಗಳನ್ನು ತಂದಿಟ್ಟಿತು.  ನಿಲ್ಲಿಸಿದ್ದ ದೇಗುಲಗಳನ್ನು ಅವರ ಸ್ಫೋಟಕಗಳು ಮತ್ತೆ ನೆಲಸಮ ಮಾಡುತ್ತಿದ್ದವು. ಮೊದಲೇ ಸೂಕ್ಷ್ಮವಾಗಿದ್ದ ಕಲ್ಲುಗಳು ಪುಡಿಪುಡಿಯಾಗುತ್ತಿದ್ದವು. ಡಕಾಯಿತರು ನೇರವಾಗಿ ಬಂದು ದಾಳಿ ಮಾಡುವವರು. ಆದರೆ ಇವರುಗಳೋ, ಅಧಿಕಾರಿಗಳ ಹಿಂದೆ ನಿಂತು ಎಲ್ಲ ‍ಧ್ವಂಸ ಕಾರ್ಯ ಮಾಡುತ್ತಿದ್ದುದರಿಂದ ಇನ್ನೂ ಕಷ್ಟವಾಗಿತ್ತು. ಅದನ್ನೆಲ್ಲಾ ಮೀರಿ ಕೆಲಸವನ್ನು ಮುಂದುವರೆಸಿಕೊಂಡು ಹೋದ ಕೆ.ಕೆ. ಮಹಮ್ಮದ್‌ ಅಪರೂಪದ ವ್ಯಕ್ತಿ. ನಾನು ಮಧ್ಯಪ್ರದೇಶದಲ್ಲಿ ಓಡಾಡಿದ ಅನೇಕ ದೇವಾಲಯಗಳ ಪುರಾತತ್ವ ಇಲಾಖೆಯ ಸಿಬ್ಬಂದಿಗಳು ಅವರ ಬಗ್ಗೆ ಪ್ರೀತಿಯಿಂದ ಮಾತನಾಡುವುದನ್ನು ಕಂಡಿದ್ದೇನೆ.

ಅಲ್ಲಿದ್ದ ಉಸ್ತುವಾರಿ ನೋಡಿಕೊಳ್ಳುವ ವ್ಯಕ್ತಿ ತನ್ನ ಕೋಣೆಯಿಂದ ಹಳೆಯ ಚಿತ್ರಗಳನ್ನು ತಂದು ತೋರಿಸಿದ. ʻಹೇಗಿದ್ದ ಜಾಗವನ್ನು ನೋಡಿ ನಮ್ಮ ಮಹಮ್ಮದ್‌ ಸರ್‌ ಹೇಗೆ ಮಾಡಿದರುʼ ಅಂತ. ಅವನು ಹೇಳುವಾಗ ಅವನ ಮುಖದಲ್ಲಿ ಧನ್ಯತೆ, ಹೆಮ್ಮೆ ಎರಡೂ. ಅಲ್ಲಿ ಒಬ್ಬರು ಸ್ವಾಮಿಗಳೂ ಇದ್ದಾರಂತೆ. ನಾನು ಹೋದಾಗ ಹೊರಗೆ ಹೋಗಿದ್ದರು. ಸ್ವಲ್ಪ ಹೊತ್ತಿಗೆ ಊರಿನ ಕೆಲವು ಜನ ಬಂದು ಮಾತನಾಡುತ್ತಾ ಕೂತರು. ಮಾತಿಗೆಳೆದರೆ ಅವರೂ ಮಹಮ್ಮದರ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು. ನಾನು ದಕ್ಷಿಣಭಾರತದವಳು ಅಂತ ಗೊತ್ತಾದ ಮೇಲೆ “ನಿಮ್ಮ ರಾಮೇಶ್ವರಕ್ಕೂ ಕೂಡ ಇಲ್ಲಿಂದಲೇ ಶಿವಲಿಂಗ ತೆಗೆದುಕೊಂಡು ಹೋಗಿದ್ದು. ಹಾಗಾಗಿಯೇ ಪ್ರತಿ ಶಿವರಾತ್ರಿಗೆ ಅಲ್ಲಿಂದ ಇಲ್ಲಿಗೆ ಮನಿಆರ್ಡರ್‌ ಬರುತ್ತೆ” ಅಂದರು. ರಾಮೇಶ್ವರಕ್ಕೂ ಬಟೇಶ್ವರಕ್ಕೂ ನಂಟು ನೋಡಿ. ಎಲ್ಲಿಂದ ಎಲ್ಲಿಗೇ ಹೋಗಲಿ ಹೇಗೆ ಹೇಗೋ ಸಂಬಂಧಗಳು ತಳುಕು ಹಾಕಿಕೊಂಡಿರುತ್ತೆ. ಮನುಷ್ಯ ಮನುಷ್ಯರ ನಡುವಿನಂತೆ ದೇವ ದೇವರುಗಳ ನಡುವೆಯೂ… ಅದಕ್ಕೇ ನನಗೆ ನಮ್ಮ ದೇಶದಲ್ಲಿ ಓಡಾಡೋದು ಅಂದರೆ ಇಷ್ಟ.

ಬಟೇಶ್ವರದಲ್ಲಿ ಶಿವ, ವಿಷ್ಣುವಿನ ಜೊತೆ ದೇವಿಯ ದೇಗುಲಗಳೂ ಇವೆ. ಆದರೆ ಶಿವನೇ ಅಲ್ಲಿ ಮುಖ್ಯ ದೇವರು. ಹೇಗೆ ನಾವೆಲ್ಲಾ ಏನೇ ಕೆಲಸ ಮಾಡೋಕೂ ಮುನ್ನ ದೇವರ ಪೂಜೆ ಮಾಡಿ ಶುರು ಮಾಡುತ್ತೇವೋ ಹಾಗೇ ಚಂಬಲ್‌ನ ಡಕಾಯಿತರ ತಂಡ ಕೂಡ ಅವರ ದರೋಡೆಗೂ ಮುನ್ನ ಹನುಮಂತನನ್ನು ಪೂಜಿಸಿಯೇ ಹೊರಡುತ್ತಿದ್ದರಂತೆ. ಜೊತೆಗೆ ತಂದ ಲೂಟಿಯಲ್ಲಿ ದೇವರಿಗೂ ಒಂದು ಭಾಗ. ಇಲ್ಲ ಅಂದರೆ ಕೆಲಸ ಕೆಡುತ್ತೆ, ಸಾವು ಖಚಿತ ಅನ್ನುವ ನಂಬಿಕೆ. ಅವರು ಪೂಜಿಸುತ್ತಿದ್ದ ಹನುಮಂತನ ವಿಗ್ರಹ ಈಗಲೂ ಹಾಗೇ ಇದೆ. ಅದಕ್ಕೆ ಚೆನ್ನಾಗಿ ಸಿಂಧೂರವನ್ನು ಮೆತ್ತಿದ್ದಾರೆ. ಅವನು ಇಲ್ಲಿನ ಎಲ್ಲಾ ನಾಟಕಕ್ಕೂ ಸಾಕ್ಷಿಯಾಗಿ ನಿಂತಿದ್ದಾನೆ. ಕಳ್ಳರಿಗೂ ನಂಬಿಕೆ ಶ್ರದ್ಧೆಗಳೇ ಆಧಾರ. ಇವತ್ತು ಬಟೇಶ್ವರ ನಾವೆಲ್ಲಾ ಹೋಗಿ ನೋಡುವ ಜಾಗವಾಗಿರುವುದರ ಹಿಂದೆ ಡಕಾಯಿತರ ಸಹಾಯವಲ್ಲದ ಸಹಾಯವೂ ಇದೆ.

ಅಷ್ಟೊಂದು ಒತ್ತೊತ್ತಾಗಿರುವ ದೇಗುಲಗಳು ನೋಡಲು ಒಂದೇ ತರಹ ಕಂಡರೂ ಅವುಗಳ ಕೆತ್ತನೆಯನ್ನು ಗಮನಿಸಿದರೆ ವ್ಯತ್ಯಾಸಗಳನ್ನು ಗುರುತಿಸಬಹುದು. ಕೆಲವು ಸಮತಟ್ಟಾದ ಸೂರನ್ನು ಹೊಂದಿದ್ದರೆ ಇನ್ನು ಕೆಲವು ಔತ್ತರೇಯ ಶೈಲಿಯ ವಿಮಾನಗಳನ್ನು ಹೊಂದಿವೆ. ಬೇರೆ ಬೇರೆ ಕಾಲಘಟ್ಟದಲ್ಲಿ ಕಟ್ಟಿರುವುದು ಎನ್ನುವುದು ಅವುಗಳ ಶೈಲಿಯನ್ನು ನೋಡಿದರೆ ತಿಳಿಯುತ್ತದೆ.

ಇಡೀ ಸಮುಚ್ಛಯ ನೋಡಲು ನಮ್ಮ ಪಟ್ಟದಕಲ್ಲು ಹಾಗೂ ಉತ್ತರಖಂಡದ ಜಾಗೇಶ್ವರವನ್ನು ನೆನಪಿಸುತ್ತದೆ. ಸಪ್ತಮಾತೃಕೆಯರ, ಗಣೇಶನ, ಶಿವ ಪಾರ್ವತಿ ಕಲ್ಯಾಣದ ಕಥೆ ಹೇಳುವ ಅನೇಕ ಉಬ್ಬು ಶಿಲ್ಪಗಳನ್ನು ಗೋಡೆಗಳ ಮೇಲೆ ನೋಡಬಹುದು. ಒಂದು ದೇಗುಲದಲ್ಲಿ ಪೂಜೆ ನಡೆಯುತ್ತಿತ್ತು ಅನ್ನಿಸತ್ತೆ. ದೀಪ ಉರೀತಿತ್ತು, ಹೂವುಗಳು ಲಿಂಗದ ಮೇಲಿದ್ದವು. ದೇವರಿಗೆ ಕೈ ಮುಗಿದು ಬಂದು ಹೊರಗೆ ಕಲ್ಯಾಣಿಯ ಬಳಿ ಕುಳಿತಂತೆ ಶತಮಾನಗಳ ಇತಿಹಾಸ ಪುಟಗಳಂತೆ ತೋರಿದವು ಪುಟ್ಟ ಪುಟ್ಟ ದೇಗುಲಗಳು.

ಗ್ವಾಲಿಯರ್‌ನಿಂದ ಬಟೇಶ್ವರಕ್ಕೆ ೩೦ ಕಿ. ಮೀ. ಮತ್ತು ಮೊರೇನಾದಿಂದ ೨೫ ಕಿ. ಮೀ. ಮೊರೇನಾದಲ್ಲಿ ರೈಲ್ವೇ ಸ್ಟೇಷನ್‌ ಇದೆ. ಗ್ವಾಲಿಯರ್‌ನಲ್ಲಿ ವಿಮಾನ ನಿಲ್ದಾಣವಿದೆ. ಗ್ವಾಲಿಯರ್‌ನಿಂದ ಹೊರಟರೆ ಒಂದು ದಿನದಲ್ಲಿ ಮಿತೋಲಿ, ಬಟೇಶ್ವರ್‌ ನೋಡಬಹುದು. ಜೊತೆಗೆ ಅದರ ಪಕ್ಕದಲ್ಲೇ ಇರುವ ಪದಾವಲಿಯನ್ನು ಕೂಡ ನೋಡಬಹುದು. ಪದಾವಲಿಯಲ್ಲಿ ಅದ್ಭುತ ಕೆತ್ತನೆಗಳ ದೇವಾಲಯದ ಅವಶೇಷಗಳಿವೆ. ರಾಮಾಯಣ, ಮಹಾಭಾರತದ ಕೆತ್ತನೆಗಳಿರುವ ಅದರ ಭುವನೇಶ್ವರಿ ತುಂಬಾ ಸುಂದರವಾಗಿದೆ. ಅಂದ ಹಾಗೆ ಈಗ ಅಲ್ಲಿ ಡಕಾಯಿತರ ಕಾಟ ಇಲ್ಲ. ತುಂಬಾ ಸೇಫ್‌ ಆಗಿ ಹೋಗಿಬರಬಹುದು. ಗ್ವಾಲಿಯರ್‌ನ ಕೋಟೆ, ಅಲ್ಲಿನ ಮ್ಯೂಸಿಯಂಗಳು ನೋಡಲೇಬೇಕಾದ ಜಾಗಗಳು.