ವಿಶ್ವನಾಥರ ಅದೃಷ್ಟವೆಂದರೆ, ಪಲ್ಲಟಗಳು, ಪರಿವರ್ತನೆ ಜರುಗುತ್ತಿದ್ದ ಕಾಲದಲ್ಲಿ ಎಲ್ಲವನ್ನೂ ಬಿಡುಗಣ್ಣಿನಿಂದ ನೋಡುವಂತ ವಯಸ್ಸಿನಲ್ಲಿ ಅವರಿದ್ದುದು. ಮುಂಬೈನಲ್ಲಿ ಸಂಶೋಧನಾ ವೃತ್ತಿ, ನಂತರ ಅಮೆರಿಕಾದಲ್ಲಿ ವೃತ್ತಿ, ಸಂಶೋಧನೆಗಳಿಂದಾಗಿ ಮೂಡಿದ ವಿಶಾಲ ಜೀವನ ದೃಷ್ಟಿ, ಇವುಗಳ ಹಿನ್ನೆಲೆಯಲ್ಲಿ ಸುಮಾರು ೫೦-೬೦ ವರ್ಷಗಳ ನಂತರ ಒಂದು ರೀತಿಯ ‘ಮಾನಸಿಕ ದೂರ’ದಿಂದ ಈ ಕತೆ ಬರೆದಿದ್ದು, ತಂದೆ-ತಾಯಿ-ಪತ್ರಿಕೆಗಳ ಬಗ್ಗೆ ಮಾತ್ರವಲ್ಲ, ಸೋದರ ಬ್ರಹ್ಮಾನಂದ, ಕುಟುಂಬಕ್ಕೆ ಆಪ್ತರಾಗಿದ್ದವರ ವ್ಯಕ್ತಿ-ಕುಟುಂಬದ ಚಿತ್ರಗಳನ್ನು ಕೂಡ ಪ್ರಸ್ತುತಪಡಿಸಿದ್ದಾರೆ. ಪಾಲಹಳ್ಳಿ ವಿಶ್ವನಾಥ್ ಅವರ ‘ಹೀಗೊಂದು ಕುಟುಂಬದ ಕಥೆ’ ಪುಸ್ತಕಕ್ಕೆ ಕೆ.ಸತ್ಯನಾರಾಯಣ್ ಬರೆದ ಮುನ್ನುಡಿ ಇಲ್ಲಿದೆ.
ಪಿ. ಆರ್. ವಿಶ್ವನಾಥರು ಈ ಕೃತಿಯನ್ನು ಒಂದು ಕುಟುಂಬದ ಕಥೆಯೆಂದು ಕರೆದಿದ್ದರೂ, ಮುಖ್ಯವಾಗಿ ಈ ಕತೆ ತಾಯಿನಾಡು ಪಿ. ಆರ್. ರಾಮಯ್ಯನರದು ಎಂದು ಸೂಚಿಸಿದ್ದರೂ ಇಲ್ಲಿ ಹಲವು ಕತೆಗಳಿವೆ. ನಿಜ, ತಾಯಿನಾಡು ರಾಮಯ್ಯನವರು ಈ ಕೃತಿಯ ಮುಖ್ಯಭಾಗವನ್ನು ಆಕ್ರಮಿಸಿದ್ದಾರೆ. ಆದರೆ ಅವರ ತಾಯಿನಾಡುವಿನ ಕತೆಗೆ ಪರಿಪ್ರೇಕ್ಷ್ಯವಾಗಿ, ಸ್ವಾತಂತ್ರ್ಯ ಚಳುವಳಿಯ ಕತೆ, ಗಾಂಧಿ-ಮಾಲವೀಯ ವ್ಯಕ್ತಿತ್ವದ ಪ್ರಭಾವ, ಮೈಸೂರಿನ ಮಹಾರಾಜರಿಗೆ, ಮಿರ್ಜಾ ಇಸ್ಮಾಯಿಲ್‌ರಿಗೆ ಮತ್ತು ಬಹುಪಾಲು ಮೈಸೂರು ದಿವಾನರುಗಳಿಗೆ ಬ್ರಿಟಿಷರನ್ನು ಕುರಿತು ಒಳಗೊಳಗೇ ಇದ್ದ ಭಯ, ಗೌರವ, ಹಾಗಾಗಿ ಹಳೆ ಮೈಸೂರು ಭಾಗದಲ್ಲಿ ಸ್ವಾತಂತ್ರ್ಯ ಚಳುವಳಿಯ ಕಾವು ನಿಧಾನವಾಗಿ ಜಾಗೃತವಾದದ್ದು, ಪ್ರಗತಿಪರ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದ್ದ ಮೈಸೂರು ಸಂಸ್ಥಾನದ ಆಡಳಿತವೇ (ರಾಜಮನೆತನ + ದಿವಾನರು) ಮಾಧ್ಯಮದ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಜಾಪ್ರತಿನಿಧಿಗಳ ಸ್ವಾತಂತ್ರ್ಯ, ಇಂತಹ ಸಂಗತಿಗಳನ್ನು ಕುರಿತು ತಳೆಯುತ್ತಿದ್ದ ದಮನಕಾರಿ ನಿಲುವು, ಇದರ ವಿವರಗಳ, ನೋಟಗಳ ವಸ್ತುನಿಷ್ಠ ಮಂಡನೆ ಕೂಡ ಇಲ್ಲಿದೆ. ಹಾಗೆಯೇ, ರಾಮಯ್ಯನವರ ಕುಟುಂಬ ಜೀವನದ ವಿವರಗಳು, ಬೆಂಗಳೂರಿನ ಬಸವನಗುಡಿಯಲ್ಲಿ ರೂಪುಗೊಳ್ಳುತ್ತಿದ್ದ ಮಧ್ಯಮವರ್ಗದ ಬ್ರಾಹ್ಮಣ ಕುಟುಂಬಗಳ ಜೀವನ ಶೈಲಿ, ವಿದ್ಯಾವಂತ, ಸುಸಂಸ್ಕೃತ ಕುಟುಂಬಗಳಲ್ಲೂ ಹೆಂಗಸರು ಅನುಭವಿಸುತ್ತಿದ್ದ ಪಡಿಪಾಟಲುಗಳು, ಗಂಡಸರ ಅಸೂಕ್ಷ್ಮತೆ, ಇಂತಹ ಹಿನ್ನೆಲೆಯಲ್ಲೂ ಅರಳಿದ ಜಯಲಕ್ಷ್ಮಮ್ಮನವರ ವ್ಯಕ್ತಿತ್ವ, ಈ ಬಗ್ಗೆ ಕೂಡ ನೋಟಗಳು ಸಿಗುತ್ತವೆ.
ವಿಶ್ವನಾಥರ ಅದೃಷ್ಟವೆಂದರೆ, ಪಲ್ಲಟಗಳು, ಪರಿವರ್ತನೆ ಜರುಗುತ್ತಿದ್ದ ಕಾಲದಲ್ಲಿ ಎಲ್ಲವನ್ನೂ ಬಿಡುಗಣ್ಣಿನಿಂದ ನೋಡುವಂತ ವಯಸ್ಸಿನಲ್ಲಿ ಅವರಿದ್ದುದು. ಮುಂಬೈನಲ್ಲಿ ಸಂಶೋಧಕನ ವೃತ್ತಿ, ನಂತರ ಅಮೆರಿಕಾದಲ್ಲಿ ವೃತ್ತಿ, ಸಂಶೋಧನೆಗಳಿಂದಾಗಿ ಮೂಡಿದ ವಿಶಾಲ ಜೀವನ ದೃಷ್ಟಿ, ಇವುಗಳ ಹಿನ್ನೆಲೆಯಲ್ಲಿ ಸುಮಾರು ೫೦-೬೦ ವರ್ಷಗಳ ನಂತರ ಒಂದು ರೀತಿಯ “ಮಾನಸಿಕ ದೂರ”ದಿಂದ ಈ ಕತೆ ಬರೆಯುತ್ತಿರುವುದು, ತಂದೆ-ತಾಯಿ-ಪತ್ರಿಕೆಗಳ ಬಗ್ಗೆ ಮಾತ್ರವಲ್ಲ, ಸೋದರ ಬ್ರಹ್ಮಾನಂದ, ಕುಟುಂಬಕ್ಕೆ ಆಪ್ತರಾಗಿದ್ದವರ ವ್ಯಕ್ತಿ-ಕುಟುಂಬದ ಚಿತ್ರಗಳನ್ನು ಕೊಡುವುದನ್ನು ಕೂಡ ಪುಸ್ತಕ ರಚನೆಯ ಒಂದು ಉದ್ದೇಶವನ್ನಾಗಿ ವಿಶ್ವನಾಥರು ಇಟ್ಟುಕೊಂಡಿದ್ದಾರೆ.
ಹಲವು ಕತೆಗಳನ್ನು ಅಡಕಗೊಳಿಸಿಕೊಂಡಿರುವ ಈ ಕೃತಿ ಸಂಪನ್ಮೂಲವಾಗಿ ಬಳಸಿಕೊಂಡಿರುವ ಬರವಣಿಗೆ, ದಾಖಲೆಗಳಲ್ಲೂ ಒಂದು ವಿಶಿಷ್ಟತೆಯಿದೆ. ಈ ವಿಶಿಷ್ಟತೆಯೆ ಈ ಕೃತಿಯನ್ನು ಕನ್ನಡದಲ್ಲಿ ಈಗ ಪುಂಖಾನುಪುಂಖವಾಗಿ ಬರುತ್ತಿರುವ ಜೀವನ ಚರಿತ್ರೆ, ಆತ್ಮಚರಿತ್ರೆಗಳಿಗಿಂತ ಭಿನ್ನವಾಗಿಸಿದೆ. ನಂಜನಗೂಡಿನ ಹಿನ್ನೆಲೆಯ ವಿಜ್ಞಾನಿ ಪ್ರೊ. ಬಿ. ವಿ. ಶ್ರೀಕಂಠನ್ ಬಗ್ಗೆ ಒಂದು ಪ್ರಬುದ್ಧ ಜೀವನ ಚರಿತ್ರೆಯನ್ನು ಈಚೆಗೆ ವಿಶ್ವನಾಥರು ಪ್ರಕಟಿಸಿದರು. ಬರವಣಿಗೆಯ ರೀತಿ, ವಿಜ್ಞಾನಿಯ ವೃತ್ತಿ ಜೀವನದ ಬಗ್ಗೆ ಕೊಡುವ ವಿವರಗಳು, ವೈಜ್ಞಾನಿಕ ಸಂಗತಿಗಳನ್ನು ಸಾಮಾನ್ಯ ಓದುಗರಿಗೆ ಕೂಡ ಅರ್ಥವಾಗುವ ಹಾಗೆ ವಿವರಿಸುವ ನುಡಿಗಟ್ಟು, ಇವುಗಳಿಂದಾಗಿ ಆ ಜೀವನ ಚರಿತ್ರೆ ವಿಶಿಷ್ಟವಾಗಿತ್ತು. ಕನ್ನಡದಲ್ಲಿ ವಿಜ್ಞಾನ ಬರವಣಿಗೆಯನ್ನು ಪಾಂಡಿತ್ಯಪೂರ್ಣವಾಗಿಯೂ, ಸೂಕ್ತ ಕನ್ನಡ ನುಡಿಗಟ್ಟಿನಲ್ಲಿಯೂ ಬರೆಯಬಲ್ಲ ವಿಶ್ವನಾಥರು ಒಬ್ಬ ಕನ್ನಡಿಗ ವಿಜ್ಞಾನಿಯ ಜೀವನ ಚರಿತ್ರೆಯನ್ನು ಕನ್ನಡದಲ್ಲಿ ಮೊದಲು ಬರೆಯಬೇಕಾಗಿತ್ತೆಂದು ನನಗೆ ತುಂಬಾ ಆಸೆಯಾಗಿತ್ತು. ಇರಲಿ, ಅದು ಬೇರೆಯದೇ ಸಂಗತಿ.
ಈ ಕೃತಿಯಲ್ಲಿ ವಿಶ್ವನಾಥರು ಪತ್ರಗಳನ್ನು, ದಿನಚರಿಯ ಭಾಗಗಳನ್ನು, ನಾಯಕರ ಸಾರ್ವಜನಿಕ ಭಾಷಣಗಳ ಉಲ್ಲೇಖಗಳನ್ನು, ವೃತ್ತ ಪತ್ರಿಕೆ, ಸರ್ಕಾರದ ವರದಿಗಳ ಆಯ್ದ ಭಾಗಗಳನ್ನು, ಭಾವಚಿತ್ರಗಳನ್ನು ಬಳಸಿಕೊಂಡಿದ್ದಾರೆ. ಕುಟುಂಬದಲ್ಲಿ ನಾಲ್ಕು ಗೋಡೆಯ ಒಳಗಡೆ ನಡೆಯುವ ಖಾಸಗಿ ಮಾತುಕತೆಗಳನ್ನು ಕೂಡ ಬಳಸಿಕೊಂಡಿದ್ದಾರೆ. ಈ ಕೌಟುಂಬಿಕ, ಸಾರ್ವಜನಿಕ ದಾಖಲೆಗಳನ್ನೆಲ್ಲ ಇಷ್ಟು ಕಾಲ ಜತನವಾಗಿ ಇಟ್ಟುಕೊಂಡು ಬಂದಿರುವ ಕುಟುಂಬದ ಸದಸ್ಯರಿಗೆ ಕೃತಜ್ಞತೆಗಳು. ಮತ್ತೆ ಇದನ್ನೆಲ್ಲ ಕ್ರೋಡೀಕರಿಸಿ, ಸಂಪಾದಿಸಿ, ಸೂಕ್ತವಾಗಿ ಕೃತಿ ರಚನೆಯಲ್ಲಿ ಬಳಸಿಕೊಂಡಿರುವ ವಿಶ್ವನಾಥರಿಗೂ ಅಭಿನಂದನೆಗಳು ಸಲ್ಲಬೇಕು. ಇಲ್ಲಿ ಇನ್ನೂ ಒಂದು ವಿಷಯವನ್ನು ಕೂಡ ಪ್ರಸ್ತಾಪಿಸಬೇಕು. ಮುಂದೆ ನಮ್ಮ ಕುಟುಂಬದ ಬಗ್ಗೆ ಯಾರಾದರೂ ಜೀವನ ಚರಿತ್ರೆ, ಆತ್ಮಚರಿತ್ರೆ ಬರೆಯುತ್ತಾರೆಂದು ಈ ದಾಖಲೆಗಳನ್ನು ಯಾರೂ ಉಳಿಸಿಕೊಂಡು ಬಂದಿಲ್ಲ. ಕೆಲವು ದಾಖಲೆಗಳು ಹಾಗೆಯೇ ಉಳಿದುಕೊಂಡು ಬಂದಿವೆ ಮತ್ತು ಈಗ ವಿಶ್ವನಾಥರಂತವರ ಕೈ ಸೇರಿವೆ. ಹಾಗಾಗಿ ಈ ಸಂಪನ್ಮೂಲಗಳ ಬಳಕೆಯಲ್ಲಿ ಒಂದು ನಿಸ್ಪೃಹತೆ, ಪ್ರಾಮಾಣಿಕತೆ ಇದೆ. ಈ ಸಾಕ್ಷ್ಯಾಧಾರಗಳನ್ನು ಲೇಖಕರು ನಮ್ಮ ಮೇಲೆ ಹೇರುತ್ತಿದ್ದಾರೆ ಎಂದು ಓದುಗರಿಗೆ ಅನಿಸುವುದಿಲ್ಲ.
*****
ಇತಿಹಾಸವನ್ನು, ಇತಿಹಾಸ ಪುರುಷರನ್ನು, ತೀರಾ ನಿಖರವಾಗಿ ಹೇಳಬೇಕೆಂದರೆ, ಮೈಸೂರು ಸಂಸ್ಥಾನದ ಇತಿಹಾಸ, ರಾಜಮನೆತನ, ಆಯ್ದ ದಿವಾನರುಗಳು ಮನೋಧರ್ಮ, ಗಾಂಧಿಗೆ ರಾಜಮನೆತನದ ಬಗ್ಗೆ ಇದ್ದ ನಿಲುವು ಈವರೆಗೆ ನಾವು ತಿಳಿದಿರುವ ಅಥವಾ ತಿಳಿದಿರುವುದನ್ನು ಸರಿಯಾದ, ನಿಜವಾದ ನೆಲೆ ಎಂದುಕೊಂಡಿಋುವಂಥವುದನ್ನು ಪ್ರಶ್ನಿಸಲು ಈ ಕೃತಿ ನಮಗೆ ಅನೇಕ ಒಳನೋಟಗಳನ್ನು ನೀಡುತ್ತದೆ. ನಾಲ್ವಡಿಯವರ ಋಜುಸ್ವಭಾವ, ಪ್ರಗತಿಶೀಲತೆ, ಮಿರ್ಜಾರವರ ಆಧುನಿಕತೆ ಇವುಗಳನ್ನು ಒಪ್ಪಿಕೊಳ್ಳುವ ಉತ್ಸಾಹದಲ್ಲಿ ನಾವು ದಿವಾನರುಗಳಿಗೆ, ಆಡಳಿತಕ್ಕೆ ಜನರ ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಪತ್ರಿಕಾ ಸ್ವಾತಂತ್ರ್ಯ ಕುರಿತು ಯಾವ ನಿಲುವುಗಳಿದ್ದವು ಎಂಬ ಪ್ರಶ್ನೆಯನ್ನು ಮುಖ್ಯವಾಗಿ ಪರಿಗಣಿಸುವುದಿಲ್ಲ. ಈ ಕುರಿತು ವಿಶ್ವನಾಥರು ಸೂಕ್ತ ದಾಖಲೆಗಳನ್ನು ಉಲ್ಲೇಖಿಸಿ ವಸ್ತುನಿಷ್ಠ ಒಳನೋಟಗಳನ್ನು ನೀಡುತ್ತಾರೆ. ಇತಿಹಾಸದ, ಸಂಸ್ಕೃತಿಯ ವಿದ್ಯಾರ್ಥಿಗಳು ಈ ಉಲ್ಲೇಖಗಳನ್ನು ಗಮನಿಸಲೇಬೇಕು.
“ಬ್ರಿಟಿಷರ ವಿರುದ್ಧ ಯಾವ ಚಳವಳಿಯೂ ನಡೆಯದಂತೆ ಬ್ರಿಟಿಷ್ ರೆಸಿಡೆಂಟರು ನೋಡಿಕೊಳ್ಳುತ್ತಿದ್ದರು. ಆದ್ದರಿಂದ ಮಹಾರಾಜರು ಸರಕಾರವನ್ನು ನಡೆಸುವಾಗ ಈ ಅಂಶವನ್ನು ಗಮನದಲ್ಲಿಟ್ಟುಕೊಂಡೇ ಇದ್ದರು. ಮೈಸೂರು ರಾಜ್ಯ, ಬ್ರಿಟಿಷರಿಗೆ ಅಧೀನವಾಗಿದ್ದರೂ ನೇರವಾದ ಅಧೀನತೆ ಇರಲಿಲ್ಲ. ಮಹಾರಾಜರ ಮೂಲಕ ಅಧೀನತೆ. ಈ ಮಿತಿಯನ್ನು ತಿಳಿದುಕೊಂಡಿದ್ದ ವೆಂಕಟಕೃಷ್ಣಯ್ಯನವರು ತಮ್ಮ ರಾಜಕೀಯ ಹೋರಾಟವನ್ನು, ಮಹಾರಾಜರನ್ನು ಮುಟ್ಟದಂತೆ ನಡೆಸಿದರು.”
“ಶೇಷಾದ್ರಿ ಐಯ್ಯರ್ ಅತ್ಯಂತ ಮೇಧಾವಿಗಳೂ, ಚತುರರೂ, ದಕ್ಷರೂ ಆಗಿದ್ದಲ್ಲದೆ ಬಹಳ ವರ್ಚಸ್ಸಿನಿಂದ ಕೂಡಿದ ಮಹಾನುಭಾವರಾಗಿದ್ದರು. ಆದರೆ ಪ್ರಜೆಗಳ ಹಕ್ಕು-ಬಾದ್ಯತೆಯ ವಿಷಯದಲ್ಲಿ ರಂಗಾಚಾರ್ಲು ಅವರಂತೆ ಉದಾರಿಗಳಾಗಿರಲಿಲ್ಲ. ಪ್ರಜಾ ಪ್ರತಿನಿಧಿ ಸಭೆಯು ತಮ್ಮ ಆಡಳಿತಕ್ಕೆ ಆತಂಕವೆಂಬ ಭಾವನೆಯಿಂದ ಅದನ್ನು ತಿರಸ್ಕಾರ ಮತ್ತು ತಾತ್ಸಾರ ಭಾವನೆಯಿಂದ ನೋಡುತ್ತಿದ್ದರು.”
“ಇಂದಿನ ಕಣ್ಣುಗಳಿಂದ ನೋಡಿದರೆ ಮೈಸೂರು ಸಂಸ್ಥಾನದ ಕೆಲವು ದಿವಾನರು ಬ್ರಿಟಿಷರ ಪರವೇ ಇದ್ದ ಹಾಗೆ ಕಾಣುತ್ತಿತ್ತು.”
“ಬ್ರಿಟಿಷರನ್ನು ಮೆಚ್ಚಿಸಬೇಕೆಂಬ ಮಹಾರಾಜರ ಮತ್ತು ಮೈಸೂರು ಸರ್ಕಾರದ ಮಿತಿಮೀರಿದ ಉತ್ಸಾಹವೇ ಅಪಕೀರ್ತಿಗೆ ಗುರಿಯಾದ ವೃತ್ತಪತ್ರಿಕಾ ಶಾಸನ ಜಾರಿಗೆ ಬರಲು ಬಹುಮಟ್ಟಿಗೆ ಕಾರಣವೆಂದು ಕಂಡು ಬರುತ್ತದೆ.”
“ಸರ್ಕಾರವನ್ನು ಟೀಕಿಸಿ ಪತ್ರಿಕೆಗಳಲ್ಲಿ ಬಂದ ಲೇಖನಗಳು ಮಿರ್ಜಾರಿಗೆ ಸರಿ ಎನಿಸಲಿಲ್ಲ. ಹಿಂದಿನವರಾರೂ ಪ್ರಯೋಗಿಸದೆ ಇದ್ದ ಶಸ್ತ್ರವನ್ನು ಮಿರ್ಜಾರವರು ಉಪಯೋಗಿಸಿದರು.. ಒಟ್ಟಿನಲ್ಲಿ ೧೯೨೯ನೇ ಆದಿ ಭಾಗದಲ್ಲಿ ಮಿರ್ಜಾ ಸರ್ಕಾರ ಬಹಳ ಉಗ್ರರೂಪವನ್ನು ತಾಳಿತ್ತು.”
“ಗಾಂಧೀಜಿಯವರು ಮೈಸೂರಿನ ಜನತೆಯ ಪ್ರಜಾಪ್ರಭುತ್ವದ ಆಕಾಂಕ್ಷೆಗಳ ಬಗ್ಗೆ ಅಷ್ಟು ಆಸಕ್ತಿ ವಹಿಸಲಿಲ್ಲವೆಂದು ತೋರುತ್ತದೆ.”
ಈ ಉಲ್ಲೇಖಗಳಷ್ಟೇ ಮುಖ್ಯವಾದ ಸಂಗತಿಯೆಂದರೆ, ವಿಶ್ವನಾಥರು ಮಿರ್ಜಾರವರ ಪ್ರಗತಿಶೀಲತೆಯನ್ನು, ದೂರದರ್ಶಿತ್ವವನ್ನು (ಕೆಲವು ಸಂಗತಿಗಳಲ್ಲಿ) ಮನಸಾರೆ ಮೆಚ್ಚುವುದು, ಲೇಖಕರಿರಲಿ, ಸ್ವತಃ ಪಾಲಹಳ್ಳಿ ರಾಮಯ್ಯನವರೇ ಮಿರ್ಜಾರ ಬಗ್ಗೆ ಕೆಲ ಸಂಗತಿಗಳನ್ನು ಕುರಿತಂತೆ ಸದಭಿಪ್ರಾಯ ಹೊಂದಿದ್ದರು. ದಿವಾನರ ಜೊತೆ ವೈಯಕ್ತಿಕ ಸಂಬಂಧ ಚೆನ್ನಾಗಿಯೇ ಇತ್ತು. ಇದು ಹಾಗಿರಲಿ, ಸ್ವತಃ ಮಿರ್ಜಾರವರೇ ಒಂದು ಸಂದರ್ಭದಲ್ಲಿ ರಾಮಯ್ಯನವರ ಪತ್ರಿಕಾ ಧೋರಣೆಯನ್ನು ಮೆಚ್ಚಿ ಪತ್ರ ಬರೆದಿದ್ದಾರೆ. ವಿಶ್ವನಾಥರು ಬರವಣಿಗೆಯಲ್ಲಿ ತೋರಿಸಿರುವ ಈ ಮನೋಧರ್ಮದ ಹಿನ್ನೆಲೆಯಲ್ಲಿ ಮೈಸೂರು ಸಂಸ್ಥಾನದ ಬೆಳವಣಿಗೆಗಳನ್ನು ನಾವು ಇನ್ನೂ ಸಮಗ್ರವಾಗಿ ಗಮನಿಸಿಯೇ ಮೌಲ್ಯ ಮಾಪನ ಮಾಡಬೇಕೆನಿಸುತ್ತದೆ. ಹಾಗೆ ಮಾಡಲು ಈ ಕೃತಿ ನೀಡಿರುವ ವಿವರಗಳು ಪ್ರೇರಣೆ ನೀಡುತ್ತವೆ.
*****
ಪತ್ರಿಕೋದ್ಯಮಕ್ಕೆ ಬರುವ ಮುಂಚೆಯೇ ರಾಮಯ್ಯನವರು ಮನೆ ಬಿಟ್ಟು ಓಡಿ ಹೋಗಿ ಕಾಶಿಯಲ್ಲಿ ಸ್ವತಂತ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಸಂದರ್ಭದಲ್ಲಿ ಅವರು ತಂದೆಗೆ ಬರೆದ ಪತ್ರ ಸೂಕ್ಷ್ಮವಾಗಿದೆ “ನೀವು ನನ್ನ ಮೇಲೆ ನಿಮ್ಮ ಅಭಿಪ್ರಾಯ, ವ್ಯಕ್ತಿತ್ವವನ್ನು ಹೇರುತ್ತಿದ್ದಿರಿ. ನಾನು ಸ್ವತಂತ್ರವಾಗಿ ಯೋಚಿಸಲು, ಅರಳಲು ಬಿಡುತ್ತಿರಲಿಲ್ಲ. ಎಲ್ಲದರಲ್ಲೂ ನಿಮ್ಮದೇ ಹಟ. ಇದರಿಂದಲೇ ಮನಸ್ತಾಪ. ನನ್ನ ಮದುವೆಯನ್ನು ಕೂಡ ನೀವೇ ನಿರ್ಧರಿಸಿದಿರಿ” ಎಂದೆಲ್ಲಾ ದೂರಿ ರಾಮಯ್ಯ ಬರೆಯುತ್ತಾರೆ. ಈ ಪತ್ರದಿಂದಲೇ ನನಗೆ ನಮ್ಮ ತಂದೆಯ ವ್ಯಕ್ತಿತ್ವದ ಬಗ್ಗೆ ಕುತೂಹಲ ಮೂಡಿತು ಎಂದು ವಿಶ್ವನಾಥ್ ಹೇಳುತ್ತಾರೆ. ಗಾಂಧಿ-ಮಾಲವೀಯರಿಂದ ಪ್ರೇರಣೆ ಪಡೆದು ದಕ್ಷಿಣ ಭಾರತಕ್ಕೆ ಹಿಂತಿರುಗಿದ ಮೇಲೂ ಪತ್ರಿಕೋದ್ಯಮದ ಬಗ್ಗೆಯೇ ಎನ್ನುವಷ್ಟು ಆಸಕ್ತಿಯಿರಲಿಲ್ಲ. ಮದ್ರಾಸಿನ ಸ್ವರಾಜ್ಯ ಪತ್ರಿಕೆಯಲ್ಲಿ ಕೆಲಸ ಮಾಡುತ್ತಾ ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಬೆಳೆಸಿಕೊಂಡಂತೆ ಕಾಣುತ್ತದೆ. ವಿಶ್ವನಾಥರು ನೀಡಿರುವ ವಿವರಗಳ ಪ್ರಕಾರ ರಾಮಯ್ಯನವರಿಗೆ ಸುದ್ದಿ, ಸಮಕಾಲೀನ ಪ್ರಜ್ಞೆ ಇರುವುದರ ಜೊತೆಗೆ, ತಂಡವೊಂದನ್ನು ಕಟ್ಟುವ, ಬೆಳೆಸುವ ಛಾತಿಯೂ ಇತ್ತು. ಇದು ಅವರು ಆಯ್ಕೆ ಮಾಡಿಕೊಳ್ಳುವ ಯಂತ್ರೋಪಕರಣಗಳಿಂದ, ಪತ್ರಿಕೆಯ ಸ್ವರೂಪ ಮತ್ತು ವ್ಯಾಪ್ತಿಯನ್ನು ಕ್ರಮೇಣವಾಗಿ ವಿಸ್ತರಿಸಿದ ರೀತಿಯಿಂದ, ಆ ಕಾಲಕ್ಕೇ ಬೇರೆ ಬೇರೆ ನಗರಗಳಲ್ಲಿ, ರಾಜ್ಯಗಳಲ್ಲಿ ಬಾತ್ಮೀದಾರರನ್ನು ನೇಮಕ ಮಾಡಿಕೊಳ್ಳುವ ದೂರದೃಷ್ಟಿಯಿಂದ ನಮಗೆ ಗೊತ್ತಾಗುತ್ತದೆ. ಸರ್ಕಾರ ಯಾವುದೇ ರೀತಿಯಲ್ಲಿ ಎಷ್ಟೇ ದಮನಕಾರಿಯಾಗಿದ್ದರೂ, ಅದರ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳುತ್ತಾ, ಹೊಸ ಹೊಸ ಪತ್ರಿಕೆಗಳನ್ನು, ವೇದಿಕೆಗಳನ್ನು ಸ್ಥಾಪಿಸುತ್ತಾ ಹೋಗುತ್ತಾರೆ. ಇಲ್ಲಿ ಎರಡು ಅಂಶಗಳನ್ನು ನಮೂದಿಸಬೇಕು. ತಂದೆಯ ವಿರುದ್ಧ ಬಂಡಾಯ, ಪ್ರತಿರೋಧ ತೋರಿದ ಮೇಲೆ ರಾಮಯ್ಯ ಮುಂದೆ ತಮ್ಮ ಜೀವನದಲ್ಲಿ ಗಂಡು ಮಕ್ಕಳ ವಿಷಯದಲ್ಲಾದರೂ ಹೆಚ್ಚಿನ ಸ್ವಾತಂತ್ರ್ಯ ನೀಡುತ್ತಾರೆ. ಮಗಳು ರಾಮೇಶ್ವರಿಗೆ ಈ ಸ್ವಾತಂತ್ರ್ಯ ನೀಡುವ ಹೊತ್ತಿಗೆ ಆಕೆಯ ಜೀವನ ಹಳಿ ತಪ್ಪಿರುತ್ತದೆ.
ಮುಂದೆ ರಾಮಯ್ಯ ನಗರಸಭೆ ಸದಸ್ಯರಾಗುತ್ತಾರೆ. ಶಾಸನ ಸಭೆ ಸದಸ್ಯರಾಗುತ್ತಾರೆ. ಆ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ಆದರೆ ಅವರ ದೂರದೃಷ್ಟಿ, ಕನಸುಗಾರಿಕೆ, ಚಿಂತನಶೀಲತೆ, ಸಂಘಟನಾಚಾತುರ್ಯ, ಎಲ್ಲವೂ ಸಮರ್ಥವಾಗಿ, ವ್ಯಾಪಕವಾಗಿ ವ್ಯಕ್ತವಾಗುವುದು ಪತ್ರಿಕೋದ್ಯಮದಲ್ಲೇ. ಪತ್ರಿಕೆ ಬೆಳೆಸುವುದೆಂದರೆ ಅದರ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ಮತ್ತು ಪ್ರಯೋಗಶೀಲರಾಗಿರುವುದು ಎಂಬ ರಾಮಯ್ಯನವರ ವಿಚಾರ ಇಂದಿಗೂ ಯುಕ್ತವಾಗಿಯೇ ಇದೆ. ಈ ಧೋರಣೆಯ ರಾಮಯ್ಯ, ಕೆಂಗಲ್ ಹನುಮಂತಯ್ಯನವರಿಗೆ ಏಕೆ ವೈಯಕ್ತಿಕವಾಗಿ ಆಪ್ತರಾದರು? ಏಕೆ, ಹೇಗೆ, ಆ ಸಂಬಂಧದಿಂದ ಪತ್ರಿಕೆಯ ಕಾಂತಿ ಮಸುಕಾಯಿತು? ಎಂದು ಓದುಗರಾದ ನಮಗೆ ಮಾತ್ರವಲ್ಲ, ಸ್ವತಃ ವಿಶ್ವನಾಥರಿಗೂ ಕೂಡ ಪ್ರಶ್ನೆಗಳಿವೆ. ಇಂತಹ ಪ್ರಶ್ನೆಗಳು ಏನೇ ಇದ್ದರೂ, ರಾಮಯ್ಯನವರು-ಪತ್ರಿಕೆಯ ಸಂಬಂಧವನ್ನು ವಿಶ್ವನಾಥರು ಕರಾರುವಾಕ್ಕಾಗಿ ಗುರುತಿಸುತ್ತಾರೆ. “ಒಂದು ಪತ್ರಿಕೆ ಹುಟ್ಟಿ ಬೆಳೆಯಬೇಕಾದರೆ ಹಲವಾರು ವಿಭಿನ್ನ ಕೌಶಲ್ಯ ಮತ್ತು ಸಾಮರ್ಥ್ಯಗಳಿರುವ ವ್ಯಕ್ತಿಗಳು ಕೆಲಸ ಮಾಡಬೇಕಾಗುತ್ತದೆ. ರಾಮಯ್ಯನವರು ತಮ್ಮ ಪತ್ರಿಕೆಯನ್ನು ಬೆಳೆಸುವಾಗ ಎಲ್ಲ ಕೆಲಸಗಳನ್ನೂ ಅವರೇ ಮಾಡಬೇಕಾಯಿತು. ದಿಟ್ಟ ಪತ್ರಕರ್ತ/ಸಂಪಾದಕ ಮತ್ತು ವ್ಯವಸ್ಥಾಪಕ/ಆಡಳಿತಗಾರ, ಉದ್ಯಮಿ, ಈ ಶೀರ್ಷಿಕೆಗಳಡಿಯಲ್ಲಿ ರಾಮಯ್ಯನವರ ವೃತ್ತಿ ಜೀವನದ ಸಾಧನೆಗಳನ್ನು ವಿಶ್ವನಾಥರು ಓದುಗರಿಗೆ ಪರಿಚಯ ಮಾಡಿಕೊಡುತ್ತಾರೆ. ತಾಯಿನಾಡು ಪತ್ರಿಕೆ ನಿಂತ ಸಂದರ್ಭದ ಚರ್ಚೆ ಕೂಡ ವಸ್ತುನಿಷ್ಠವಾಗಿದೆ. ಒಬ್ಬ ಮಗ ತಂದೆಯ ಉದ್ಯಮದ ಏಳು-ಬೀಳುಗಳ ಬಗ್ಗೆ ಬರೆಯುವ ಕೌಟುಂಬಿಕ ವರದಿಯಂತೆ. ಇಂತಹ ಚರ್ಚೆಗಳೆಲ್ಲವನ್ನು ಗಮನಿಸಬೇಕು. ಕನ್ನಡ ಪತ್ರಿಕೋದ್ಯಮದ ಇತಿಹಾಸವನ್ನು ಕುರಿತು ಅಧ್ಯಯನದ ಮಾಡುವವರಿಗೆ ಇಲ್ಲಿ ವಿಪುಲ ಸಾಮಗ್ರಿಯಿದೆ, ಒಳನೋಟಗಳಿವೆ.
ಮುಂದೆ ನಮ್ಮ ಕುಟುಂಬದ ಬಗ್ಗೆ ಯಾರಾದರೂ ಜೀವನ ಚರಿತ್ರೆ, ಆತ್ಮಚರಿತ್ರೆ ಬರೆಯುತ್ತಾರೆಂದು ಈ ದಾಖಲೆಗಳನ್ನು ಯಾರೂ ಉಳಿಸಿಕೊಂಡು ಬಂದಿಲ್ಲ. ಕೆಲವು ದಾಖಲೆಗಳು ಹಾಗೆಯೇ ಉಳಿದುಕೊಂಡು ಬಂದಿವೆ ಮತ್ತು ಈಗ ವಿಶ್ವನಾಥರಂತವರ ಕೈ ಸೇರಿವೆ. ಹಾಗಾಗಿ ಈ ಸಂಪನ್ಮೂಲಗಳ ಬಳಕೆಯಲ್ಲಿ ಒಂದು ನಿಸ್ಪೃಹತೆ, ಪ್ರಾಮಾಣಿಕತೆ ಇದೆ. ಈ ಸಾಕ್ಷ್ಯಾಧಾರಗಳನ್ನು ಲೇಖಕರು ನಮ್ಮ ಮೇಲೆ ಹೇರುತ್ತಿದ್ದಾರೆ ಎಂದು ಓದುಗರಿಗೆ ಅನಿಸುವುದಿಲ್ಲ.
ವಿಶ್ವನಾಥರ ಬರವಣಿಗೆಯ ಇನ್ನೊಂದು ವೈಶಿಷ್ಟ್ಯವೆಂದರೆ, ವೈಯಕ್ತಿಕ ನೆಲೆಯಿಂದ ಕೌಟುಂಬಿಕ ನೆಲೆಗೆ, ನಂತರ ಸಾರ್ವಜನಿಕ ಬದುಕಿನ ನೆಲೆಗೆ ಮತ್ತೆ ವೃತ್ತಿಯ ನೆಲೆಗೆ ಯಾವುದೇ ಬಿರುಕಿಲ್ಲದಂತೆ ಚಲಿಸುತ್ತಾರೆ. ನಿರೂಪಣೆಯನ್ನು ಮುಂದುವರಿಸುತ್ತಾರೆ. ಮೇಲುನೋಟಕ್ಕೆ ಭಿನ್ನ ಭಿನ್ನ ನೆಲೆಗಳು ಎಂದು ಕಾಣುವುದು ಒಂದು ಏಕಸೂತ್ರವನ್ನು ಕೂಡ ಹೊಂದಿದೆ ಎಂಬುದನ್ನು ಕೂಡ ಅವರ ನಿರೂಪಣೆಯ ಕ್ರಮದಿಂದ ಓದುಗರಿಗೆ ವೇದ್ಯವಾಗುತ್ತದೆ.
ಆ ಕಾಲದ ಬೆಂಗಳೂರು, ಬಸವನಗುಡಿ ಬಗ್ಗೆ ಕೂಡ ವಿವರಗಳಿವೆ. ಇದಕ್ಕಿಂತ ಮುಖ್ಯವಾಗಿ, ಈಗಾಗಲೇ ನಗರದಲ್ಲಿ ನೆಲೆ ಊರಿರುವ ಒಂದು ಕುಟುಂಬ ಯಾವುದೇ ಸಂಪ್ರದಾಯವನ್ನು ವಿಶೇಷವಾಗಿ ಅನುಸರಿಸದೆ ಆದರೆ ಪ್ರಶ್ನಿಸದೇ ಕೂಡ ವಿದ್ಯಾಭ್ಯಾಸ, ವೃತ್ತಿಯ ಮೂಲಕ ಹೇಗೆ ಆಧುನಿಕತೆಯತ್ತ ಹೊರಳಿತು ಎನ್ನುವುದನ್ನು ಕೂಡ ವಿಶ್ವನಾಥ್ ಚರ್ಚಿಸುತ್ತಾರೆ. ಅವರು ನೀಡಿರುವ ಕುಟುಂಬದ ಭಾವಚಿತ್ರಗಳು ನಾನಾ ಕತೆಗಳನ್ನು ಹೇಳುತ್ತವೆ. ಆ ಕಾಲದ ಜೀವನ ಶೈಲಿಯ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಭಾಗದಲ್ಲಿ ಅವರು ದಾಖಲಿಸಿರುವ ಕೆಲ ಸಂಗತಿಗಳು ತೀರಾ ಖಾಸಗಿಯಾದವು. ಈ ವಿವರಗಳನ್ನೆಲ್ಲ ಅವರು ನಿರೂಪಣೆಯನ್ನು ಆಕರ್ಷಣೀಯವಾಗಿ ಮಾಡಲು ದಾಖಲಿಸುತ್ತಿಲ್ಲ ಎಂಬುದು ಅವರು ಅದನ್ನು ಮಂಡಿಸಿರುವ ಗಾಂಭೀರ್ಯ ಮತ್ತು ಸಂಯಮದ ಧ್ವನಿಯಿಂದಲೇ ಗೊತ್ತಾಗುತ್ತದೆ.
ರಾಮಯ್ಯನವರಿಗೆ ಎರಡು ಮದುವೆ ಆಗಿತ್ತು. ೧೯೧೧ರಲ್ಲಿ, ೧೯೨೦ರಲ್ಲಿ. ಎರಡನೇ ಮದುವೆ ಕುರಿತು, “ಏಕೋ, ಏನೋ ವಿವಾಹ ಮಾಡಿಕೊಳ್ಳುತ್ತಾರೆ” ಎಂದು ಬರೆಯುತ್ತಾರೆ. ಸಾಂಸಾರಿಕ ಜೀವನದ ಬಗ್ಗೆ ಬರೆದಿರುವ ಈ ಮಾತುಗಳನ್ನು ನೋಡಿ, “ಅದಲ್ಲದೆ ಯುವಕ ತನ್ನ ಗುರುಗಳು ಗಾಂಧೀಜಿ ಕಸ್ತೂರಿ ಬಾ ಅವರಿಗೆ ಕೊಟ್ಟಷ್ಟೇ ತೊಂದರೆಯನ್ನು ತನ್ನ ಹೆಂಡತಿಗೆ ಕೊಟ್ಟ.” ಇಬ್ಬರು ಹೆಂಡತಿಯರಿಗೂ ರಾಮಯ್ಯ ಹೊಡೆಯುತ್ತಿದ್ದರಂತೆ. ಇದರ ಬಗ್ಗೆ ಮುಂದೆ ಮಗಳು ರಾಮೇಶ್ವರಿ ಕೇಳಿದಾಗ, “ನನಗೆ ಬುದ್ಧಿ ಇರಲಿಲ್ಲ” ಎಂದರಂತೆ ರಾಮಯ್ಯ. ತಾಯಿಯನ್ನು ಕೇಳಿದಾಗ ಅವರು ನಕ್ಕುಬಿಟ್ಟಿದ್ದರಂತೆ. ಸೋದರಿ ರಾಮೇಶ್ವರಿಯವರ ಮೊದಲ ಮದುವೆಯನ್ನು ಆತುರಾತುರವಾಗಿ ಮಾಡಿದ್ದು, ಆ ಮದುವೆ ದಡ ಹತ್ತದೆ ಹೋದಾಗ ತಪ್ಪನ್ನು ಒಪ್ಪಿಕೊಳ್ಳುವ ಪ್ರಾಂಜಲತೆ, ನಂತರದ ವಿವಾಹಕ್ಕೆ ಪ್ರೋತ್ಸಾಹಿಸಿದ್ದು, ಅದರಲ್ಲಿ ಭಾಗವಹಿಸಿದ್ದು ಇದೆಲ್ಲದರ ಸಂಯಮಪೂರ್ಣ ನಿರೂಪಣೆಯನ್ನು ಓದುಗರು ಗಮನಿಸಿಯೇ ಗಮನಿಸುತ್ತಾರೆ. ಕುಟುಂಬ ಎಲ್ಲ ರೀತಿಯಲ್ಲೂ ಆಧುನಿಕತೆಗೆ ತೆರೆದುಕೊಳ್ಳುತ್ತಿತ್ತು. ಎಂತಹ ಆಧುನಿಕ ಕುಟುಂಬಗಳಲ್ಲೂ ಆಗಿನ ಕಾಲದಲ್ಲೂ (ಈಗಿನ ಕಾಲದಲ್ಲೂ) ಹೆಣ್ಣು ಮಕ್ಕಳನ್ನು ಬೆಳೆಸುವ ರೀತಿ, ಮದುವೆ ಮಾಡುವ ರೀತಿ, ಮದುವೆಗಳಿಂದ ನಿರೀಕ್ಷೆ ಇಟ್ಟುಕೊಳ್ಳುವ ರೀತಿ ಗಂಡು ಮಕ್ಕಳದ್ದಕ್ಕಿಂತ ಭಿನ್ನವಾಗಿರುತ್ತದೆ. ಒಂದೇ ವಾಕ್ಯದಲ್ಲಿ ಇದನ್ನು ದಾಖಲಿಸುವ ರೀತಿ ನೋಡಿ: “ನಮ್ಮ ತಾಯಿಯ ಕಡೆ ಗಂಡು ಹುಡುಗರಿಗೆ ಮದ್ರಾಸಿನ ಕಡೆಯ ಅದೂ ಶ್ರೀಮಂತ ಮನೆತನಗಳಿಂದ ಹೆಣ್ಣುಗಳನ್ನು ತಂದರು. ಆದರೆ ಹೆಣ್ಣು ಮಕ್ಕಳನ್ನು ಮೈಸೂರಿನ ಕಡಿಮೆ ಸಾಧಾರಣ ಮನೆತನದ ಹುಡುಗರಿಗೆ ಮದುವೆ ಮಾಡಿಕೊಟ್ಟರು.” ಈ ಕುಟುಂಬದ ಜೀವನ ಶೈಲಿಯ ಇನ್ನೊಂದು ಮುಖ್ಯವಾದ ಸಂಗತಿಯೆಂದರೆ, “ನಮ್ಮ ಮನೆ ಎಂಬ House Journal ಪ್ರಕಟಿಸಿ, ಕುಟುಂಬದ ಎಲ್ಲ ಸದಸ್ಯರೂ ಬರೆಯುತ್ತಿದ್ದರು.”
ತಾಯಿ ಜಯಲಕ್ಷ್ಮಮ್ಮನವರ ಬಗ್ಗೆ ಇರುವ ಪ್ರತ್ಯೇಕ ಅಧ್ಯಾಯ ಈ ಕೃತಿಯ ವಿಶಿಷ್ಟ ಮನಕಲಕುವ ಭಾಗ. ಸಾರ್ವಜನಿಕ ಜವಾಬ್ದಾರಿ, ಸಾಮಾಜಿಕ ಕಾಳಜಿಯಿಂದ ಅವರ ವ್ಯಕ್ತಿತ್ವ ವಿಕಾಸಗೊಳ್ಳುವುದು ರಾಮಯ್ಯನವರ ಶಾಸಕತನ, ಸಂಪಾದಕಗಿರಿ ಎಲ್ಲ ಮುಗಿದು, ಅವರು ಆಧ್ಯಾತ್ಮದ ಕಡೆ ಹೊರಳಿದಾಗ. ಇದನ್ನು ಹೋಲಿಸಿ ವಿಶ್ವನಾಥ್ ಹೀಗೆ ಬರೆಯುತ್ತಾರೆ:
“ಅಂತೂ ೧೯೫೭ರಲ್ಲಿ ನಮ್ಮ ತಂದೆ ಮೂವತ್ತು ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ಪತ್ರಿಕೆಯನ್ನು ಮಾರಿಬಿಟ್ಟು ಸಾರ್ಜನಿಕ ಜೀವನದಿಂದ ದೂರ ಸರಿದರು. ಆದರೆ ಸಾರ್ವಜನಿಕ ಜೀವನ ನಮ್ಮ ಮನೆಯಿಂದ ದೂರ ಸರಿಯಲಿಲ್ಲ. ನಮ್ಮ ತಂದೆ ಹೊರ ಜೀವನದಿಂದ ಮನೆಯ ಒಳಗೆ ಬಂದರು ಮತ್ತು ಸುಮಾರು ಅದೇ ಸಮಯದಲ್ಲಿ ನಮ್ಮ ತಾಯಿ ಒಳಗಿನಿಂದ ಹೊರ ಜೀವನಕ್ಕೆ ದೃಢವಾಗಿ ಕಾಲು ಇಡಲು ಶುರು ಮಾಡಿದರು. ಉಪಮೆ ಕೊಡಬೇಕೆಂದರೆ ನಮ್ಮ ಮನೆಯಲ್ಲಿ ಸೂರ್ಯಾಸ್ತವಾಗಿತ್ತು. ಆದರೆ ನಮ್ಮಗಳ ಅದೃಷ್ಟದಿಂದ ಚಂದ್ರೋದಯವೂ ತಕ್ಷಣವೇ ಶುರುವಾಯಿತು. ಸೂರ್ಯ ಪ್ರಖರ ಶಾಖವಿಲ್ಲದೆ ತಣ್ಣನೆಯ ಹುಣ್ಣಿಮೆಯ ಚಂದ್ರ. ಅದು ನಮ್ಮ ಮನೆಯ ಚಂದ್ರೋದಯ.”
ಜಯಲಕ್ಷ್ಮಮ್ಮನವರ ಸಾರ್ವಜನಿಕ ವ್ಯಕ್ತಿತ್ವಕ್ಕೆ ಹಲವಾರು ಆಯಾಮಗಳು. ಈ ಎಲ್ಲ ಆಯಾಮಗಳ ಗುರಿ ಒಂದೇ – ಸಾರ್ವಜನಿಕ ಸೇವೆ. “ನಮ್ಮ ಕಣ್ಣುಗಳ ಮುಂದೆಯೇ ನಮ್ಮ ಅಮ್ಮ ಜೀವನದಲ್ಲಿ ಸೋತ ಹೆಣ್ಣುಗಳ ಮತ್ತು ಅನಾಥ ಮಕ್ಕಳ ಅಮ್ಮನಾಗಿ ಪರಿವರ್ತನೆಗೊಳ್ಳುತ್ತಿದ್ದರು. ಹೀಗೆಯೇ ನಾವೆಲ್ಲಾ (ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು) ದೂರದಲ್ಲಿ ಹೋಗಿ ನೆಲಸುತ್ತಿದ್ದಂತೆ ಅಮ್ಮನಿಗೆ ಬೇರೆಯ ಮಕ್ಕಳು ಹುಟ್ಟಿಬಿಟ್ಟಿದ್ದರು.” ವಿಶ್ವನಾಥ್ ತಾಯಿಯ ಬಗ್ಗೆ ನೀಡಿರುವ ಎಷ್ಟೋ ವಿವರಗಳಲ್ಲಿ ನನ್ನ ಮನಸ್ಸನ್ನು ತುಂಬಾ ಕಲಕ್ಕಿದ್ದು ಸ್ವಂತ ಮಗನ (ವಿಶ್ವನಾಥನ) ಮದುವೆ ಸಂದರ್ಭದಲ್ಲಿ ಸೊಸೆಯಾಗುವವಳಿಗೆ ಹೇಳಿದ ಮಾತುಗಳು:
“ನೋಡು ಸರಿಯಾಗಿ ಯೋಚನೆ ಮಾಡು. ಅವಸರ ಬೇಡ. ಅವನು ಬಹಳ ವರ್ಷಗಳಿಂದ ಹೊರಗೆ ಇದ್ದವನು. ಅವನದ್ದೇ ಅಭ್ಯಾಸಗಳು. ಸರಿ ಹೋಗುತ್ತೋ ಇಲ್ಲವೋ ಯೋಚಿಸು.” ಮಗನೂ, ಲೇಖಕನೂ ಆಗಿರುವ ವಿಶ್ವನಾಥರ ವ್ಯಾಖ್ಯಾನ ಹೀಗಿದೆ: “ಇದು ಮಗ ಎಂಬ ಪಕ್ಷಪಾತ ತೋರಿಸದೆ ಮಹಿಳೆಯರ ವಿಷಯದಲ್ಲಿ ಅವರಿಗಿದ್ದ ಉದಾತ್ತ ಮನಸ್ಸನ್ನು ಸೂಚಿಸುತ್ತದೆ.”
ವಿಶ್ವನಾಥರ ಹಿರಿಯ ಸಹೋದರ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಪಿ. ಆರ್. ಬ್ರಹ್ಮಾನಂದರನ್ನು ಕುರಿತ ಪ್ರಸ್ತಾಪ, ವಿಶ್ಲೇಷಣೆ ಈ ಕೃತಿಯ ಭಾಗವಾಗಿಯೂ ಮುಖ್ಯವಾದದ್ದು. ಹಾಗೆಯೇ ಆ ಕಾಲಮಾನದ ಆರ್ಥಿಕ ಚಿಂತನೆಯ ಸ್ವರೂಪವನ್ನು ಗುರುತಿಸುವ ದೃಷ್ಟಿಯಿಂದಲೂ ಮುಖ್ಯವಾದದ್ದು. ವಿಶ್ವನಾಥರು ತಮ್ಮ ಸೋದರನ ಸ್ವಭಾವ, ವೈಚಿತ್ರ್ಯಗಳನ್ನು ಆತ್ಮೀಯವಾಗಿಯೇ ವಿವರಿಸುತ್ತಾರೆ. ಲೇಖಕರು ವಿದೇಶಕ್ಕೆ ಉನ್ನತ ವ್ಯಾಸಂಗಕ್ಕೆ ಹೊರಟು ನಿಂತಾಗ ಬ್ರಹ್ಮಾನಂದರು ತೋರಿಸುವ ಪ್ರತಿರೋಧ ಕುತೂಹಲಕಾರಿಯಾದುದಾಗಿದೆ. ಆದರೆ ಒಂದು ಕಾಲದಲ್ಲಿ ದೇಶಾಂತರ ಹೋಗಿ ತನ್ನ ವ್ಯಕ್ತಿತ್ವ ರೂಪಿಸಿಕೊಂಡ ತಂದೆ ರಾಮಯ್ಯನವರು ವಿಶ್ವನಾಥರನ್ನು ಬೆಂಬಲಿಸುತ್ತಾರೆ. ಬ್ರಹ್ಮಾನಂದ್ ಅರ್ಥಶಾಸ್ತ್ರಜ್ಞರಾಗಿ ಆಗ ಪ್ರಚಲಿತವಿದ್ದ, ಪ್ರಭಾವಿಯಾಗಿದ್ದ ಕೇಂದ್ರೀಕರಣ, ನಗರೀಕರಣ, ಬಂಡವಾಳ ವಸ್ತುಗಳ ಉತ್ಪಾದನೆಗೆ ಪ್ರಾಧಾನ್ಯತೆಯನ್ನು ಆಧರಿಸಿದ ಮಹಾಲನೊಬಿಸ್-ನೆಹರೂ ಪ್ರಣೀತ ಆರ್ಥಿಕ ಬೆಳವಣಿಗೆಯ ಮಾದರಿಗೆ ವಿರೋಧಿಯಾಗಿದ್ದರು. ಸಿ. ಎನ್. ವಕೀಲರ ಜೊತೆ ಪರ್ಯಾಯ Wage-Good Model ಮುಂದಿಟ್ಟವರು. ಹೀಗಾಗಿ ಮುಂಬೈ ಅರ್ಥಶಾಸ್ತ್ರಜ್ಞರದೇ ಒಂದು ಪ್ರತ್ಯೇಕ ಗುಂಪಾಯಿತು. ದೆಲ್ಲಿ ಕೇಂದ್ರಿತ ಅರ್ಥಶಾಸ್ತ್ರಜ್ಞರು ಈ ಗುಂಪು ಮತ್ತು ಚಿಂತನೆಯನ್ನು ವಿರೋಧಿಸಿದರು. ಸಹಜವಾಗಿಯೇ ಸರ್ಕಾರಿ ಹುದ್ದೆ, ಸಮಿತಿಗಳಿಂದ ಈ ಗುಂಪು ದೂರ ಉಳಿಯಬೇಕಾಯಿತು. ಬ್ರಹ್ಮಾನಂದರಿಗೆ ಅವರ ಪ್ರತಿಭೆಯ ಮಟ್ಟ, ಸ್ವರೂಪಕ್ಕೆ ಸಿಕ್ಕಬೇಕಾದ ಮನ್ನಣೆ ಕರ್ನಾಟಕದಲ್ಲಾಗಲೀ, ಅಖಿಲ ಭಾರತ ಮಟ್ಟದಲ್ಲಾಗಲೀ ಸಿಗಲಿಲ್ಲ. ಆದರೆ ಇದಕ್ಕಿಂತ ಹತ್ತು ಪಟ್ಟು ಹೆಚ್ಚು ವಿದೇಶೀಯ ಅರ್ಥಶಾಸ್ತ್ರಜ್ಞರು, ಅಂತರರಾಷ್ಟ್ರೀಯ ಆರ್ಥಿಕ ಸಂಘ ಸಂಸ್ಥೆಗಳು ಅವರನ್ನು ಗೌರವಿಸಿದವು. ಈ ಎಲ್ಲ ಬೆಳವಣಿಗೆಗಳ ಹಿಂದಿನ ಮನೋಧರ್ಮ, ಸೂಕ್ಷ್ಮಗಳನ್ನು ವಿವರಿಸುತ್ತಲೇ ವಿಶ್ವನಾಥ್ ಆಗಿನ ಕಾಲದ ಮುಂಬೈ ನಗರದ ಜೀವನ ಹೇಗಿತ್ತು ಎಂಬುದರ ವಿವರಗಳನ್ನು ಕೂಡ ನೀಡುತ್ತಾರೆ. ಮುಂಬೈ ಕೂಡ ಇನ್ನೂ ಒಂದು ಸಣ್ಣ, ಆತ್ಮೀಯ ಪಟ್ಟಣದಂತೆಯೇ, ಜೀವಂತಿಕೆ ಪುಟಿಯುತ್ತಿರುವ ಕಾರಂಜಿಯಂತೆಯೇ ಕಾಣುತ್ತದೆ. ಇದೇ ಕಾಲದ ಇದೇ ಮುಂಬೈ ಆಗತಾನೇ ಕನ್ನಡದಲ್ಲಿ ಬರೆಯಲು ಶುರುಮಾಡಿಕೊಂಡಿದ್ದ ನಗರ ಪ್ರಜ್ಞೆಯ ಲೇಖಕರಾದ ಬಲ್ಲಾಳ, ದೇಸಾಯಿ ಮತ್ತು ಚಿತ್ತಾಲರಿಗೆ ಬೇರೆ ರೀತಿಯೇ ಕಂಡಿದೆ ಎಂಬುದು ಕುತೂಹಲಕರ. ಗಾಂಧಿವಾದಿ ಹಿನ್ನೆಲೆಯಿಂದ ಬಂದ ಬ್ರಹ್ಮಾನಂದರು ವಿಕೇಂದ್ರೀಕರಣ, ಕೃಷಿ ಪ್ರಾಧಾನ್ಯ ಅರ್ಥವ್ಯವಸ್ಥೆಯ ಪರವಾಗಿ ನಿಂತಿದ್ದು, ಅದಕ್ಕಾಗಿ ಹೋರಾಡಿದ್ದು ಸಹಜವಾಗಿಯೇ ಇದೆ. ಇದನ್ನು ಕುರಿತ ವಿಶ್ವನಾಥರ ಒಂದು ವಾಕ್ಯ ಹೀಗಿದೆ: “ಸರಳ ವಸ್ತ್ರಗಳನ್ನು ಧರಿಸಿಕೊಂಡು ನಯನಾಜೂಕುಗಳಿಗೆ ಹೆಚ್ಚು ಮಹತ್ವ ಕೊಡದ ಖಂಡಿತವಾದಿಯಾದ ಬ್ರಹಾನಂದ ಅಂತವರು ಪಶ್ಚಿಮದ ಗಾಳಿ ಕುಡಿದು ಆಧುನಿಕತೆಯ ಸೋಗಿದ್ದ ನಾಜೂಕು ಸಮಕಾಲೀನರ ಮಧ್ಯೆ ಹೊಂದಿಕೊಂಡು ಹೋಗುವುದು ಕಷ್ಟವಾಗಿದ್ದಿರಬಹುದು.”
ಈ ಕುಟುಂಬ ಕತೆಯ ಇನ್ನೊಂದು ವೈಶಿಷ್ಟ್ಯವೆಂದರೆ, ಬರವಣಿಗೆಯು ಕುಟುಂಬದ ಸದಸ್ಯರಿಂದಲೂ ಆಚೆಗೆ ಹೋಗುವುದು. ಇವರಲ್ಲಿ ಕೆಲವರು ರಕ್ತ ಸಂಬಂಧಿಗಳು, ಕೆಲವರು ಅಲ್ಲ. ಆದರೆ ಇವರ ಚಿತ್ರಗಳು ಕೂಡ ಆತ್ಮೀಯವಾಗಿಯೇ ಇವೆ. ನಮ್ಮ ಕುಟುಂಬದ ಸದಸ್ಯರ ಸಾಧನೆಯ ಮುಂದೆ ಇವರದೇನು ಎಂಬ ಧೋರಣೆಯಿಲ್ಲ. ಅವರ ಜೀವನ ಶೈಲಿ, ಹೆಣಗಾಟದ ಬಗ್ಗೆ ಕೂಡ ಲೇಖಕರಿಗೆ ಗೌರವವಿದೆ, ಆದರವಿದೆ. ಕಸಿನ್ ಸಾಮಿಯ ವ್ಯಕ್ತಿಚಿತ್ರ ನನ್ನನ್ನು ತುಂಬಾ ಕಾಡಿತು. ಈಗಿನ ಕಾಲದ ನಮ್ಮಂತವರಿಗೆ ಸ್ವಲ್ಪ ಅಡ್ಡಾದಿಡ್ಡಿ ಮನುಷ್ಯನಂತೆ ಕಾಣುವ ಸಾಮಿಯ ಜೀವನದ ಏಳು-ಬೀಳುಗಳನ್ನು ವಿವರಿಸಿದ ನಂತರ ವಿಶ್ವನಾಥ್ ಎತ್ತುವ ಒಂದು ಪ್ರಶ್ನೆ ತುಂಬಾ ಮೌಲಿಕವಾದದ್ದು. “ಅವನ ಜೀವನದತ್ತ ನೋಡಿದಾಗ ಒಂದು ಯೋಚನೆ ಬರದಿರುವುದಿಲ್ಲ. ಸಾಮಿ ಬುದ್ಧನೂ ಅಲ್ಲ, ಗಾಂಧಿಯೂ ಅಲ್ಲ. ಆದರೆ ಅವರಂತೆಯೇ ಮನೆಯವರನ್ನು ಕಡೆಗಣಿಸಿ ಹೊರ ಪ್ರಪಂಚಕ್ಕೆ ತನ್ನ ಕೈಲಾದಷ್ಟು ಸಹಾಯ ಮಾಡಿದನು. ನನ್ನ ಹೆಂಡತಿ, ನನ್ನ ಮಕ್ಕಳು ಎನ್ನುತ್ತಲೇ ಇದ್ದರೆ ಪರರು ನಮಗೆ ಹೆಚ್ಚಾಗಿ ಕಾಣುವುದಿಲ್ಲವೋ ಏನೋ! ಮನುಷ್ಯರಲ್ಲಿ ಒಂದಿದ್ದರೆ ಇನ್ನೊಂದಿಲ್ಲದಿರುವುದನ್ನು ಕಂಡರೆ ಮಾನವನ ಹೃದಯ ವೈಶಾಲ್ಯ ಅಷ್ಟೇ ಏನೋ ಎನ್ನಿಸುತ್ತದೆ. ಅಥವಾ ಯಾವ ಯಾವುದೋ ಕಾರಣಗಳಿಗೆ ನಮ್ಮವರನ್ನು ನಾವೇ ಕಡೆಗಣಿಸಿದಾಗ ನಾವು ಪ್ರಾಯಶ್ಚಿತ್ತವಾಗಿ ಪರರಿಗೆ ಉಪಕಾರಿಗಳಾಗಲು ಪ್ರಯತ್ನಿಸುತ್ತೇವೆಯೇ? ಈ ಪ್ರಶ್ನೆಗಳಿಗೆ ಉತ್ತರಗಳಿರಲಿ, ಸ್ಪಷ್ಟವಾದ ಪ್ರಶ್ನೆಗಳನ್ನು ಹೇಳುವುದೂ ಕಷ್ಟ.”
*****
ತಂದೆ ಸ್ವಾತಂತ್ರ್ಯ ಹೋರಾಟಗಾರ, ಧೀಮಂತ ಪತ್ರಕರ್ತ, ಕನ್ನಡ ನಾಡಿನ ಪತ್ರಿಕೋದ್ಯಮದ ಇತಿಹಾಸದ ಮೊದಮೊದಲ ಪುಟಗಳ ಸ್ವರೂಪವನ್ನು ನಿರ್ಧರಿಸಿದವರು, ಸೋದರ ವಿಶ್ವಖ್ಯಾತಿಯ ಅರ್ಥಶಾಸ್ತ್ರಜ್ಞ, ಸೋದರಿ ಪ್ರಸಿದ್ಧ ರಂಗತಜ್ಞೆ, ವಿಶ್ವನಾಥರೇ ಅಂತರರಾಷ್ಟ್ರೀಯ ಖ್ಯಾತಿಯ ವಿಜ್ಞಾನ ಪ್ರಾಧ್ಯಾಪಕರು, ಪ್ರಸಿದ್ಧ ಕನ್ನಡ ವಿಜ್ಞಾನ ಲೇಖಕರು; ಕುಟುಂಬವೇ ಒಟ್ಟಾರೆಯಾಗಿ ಹಳೆ ಮೈಸೂರು, ಬೆಂಗಳೂರಿನ ಸಾಂಸ್ಕೃತಿಕ ಗುರುತುಗಳನ್ನು ಕಟ್ಟಲು ಗಣನೀಯವಾಗಿ ಕಾಣಿಕೆ ನೀಡಿರುವಂತದ್ದು. ಆದರೆ ಇದ್ಯಾವುದೂ ತಮ್ಮ ಬರವಣಿಗೆಯಲ್ಲಿ ಹೊರೆಯಾಗದಂತೆ ವಿಶ್ವನಾಥರ ನಿರೂಪಣೆಯ ಧ್ವನಿ ಮತ್ತು ವಸ್ತುನಿಷ್ಠತೆಯಿದೆ. ಆ ಕಾಲದಲ್ಲಿ ಬದುಕಿದ, ವಿಕಾಸಗೊಂಡ ಉಳಿದ ಕುಟುಂಬಗಳಂತೆಯೇ ತನ್ಮದೂ ಒಂದು ಎಂಬ ನಿರ್ಮಮ ಭಾವದಲ್ಲೇ ವಿಶ್ವನಾಥ್ ಬರೆದಿದ್ದಾರೆ. ಹೀಗಾಗಿ ಅವರ ಕುಟುಂಬದ, ಮನೆಯ ಒಳಾಂಗಣದ ಸಾಧಾರಣ, ಸಾಮಾನ್ಯ ವಿವರಗಳೂ ಕೂಡ ಈ ಕೃತಿಯಲ್ಲಿ ಪ್ರವೇಶಿಸಿವೆ. ಇನ್ನೂ ಮುಖ್ಯವಾಗಿ ಆ ಕಾಲದ ಹಳೆ ಮೈಸೂರು, ಬೆಂಗಳೂರು-ಮೈಸೂರು ನಗರಗಳ ಜೀವನ ಶೈಲಿ, ವಿವರಗಳನ್ನು ಕುರಿತು ನಮ್ಮ ಜನಪ್ರಿಯ ಕತೆ-ಕಾದಂಬರಿಗಳು ನೀಡಿರುವುದಕ್ಕಿಂತ ಭಿನ್ನವೇ ಆದ ಚಿತ್ರಣವನ್ನು ನೀಡುತ್ತದೆ. ಈ ಕಾರಣಕ್ಕಾಗಿಯೂ ವಿಶ್ವನಾಥರ ಕೃತಿಗೆ ಸಾಂಸ್ಕೃತಿಕ ಮಹತ್ವವಿದೆ.
ಕನ್ನಡದಲ್ಲಿ ಜೀವನ ಚರಿತ್ರೆ, ಆತ್ಮಚರಿತ್ರೆಯ ಬರವಣಿಗೆಗೆ ಮಾದರಿಗಳಿವೆ. ಕುಟುಂಬದ ಚರಿತ್ರೆ ಬರೆಯುವುದಕ್ಕೆ ಮಾದರಿಗಳಿಲ್ಲ. ಆ ದಿಕ್ಕಿನಲ್ಲಿ ವಿಶೇಷ ಪ್ರಯತ್ನಗಳೂ ಕೂಡ ನಡೆದಿಲ್ಲ, ನನಗೆ ತಿಳಿದಂತೆ. ವಿಶ್ವನಾಥರ ಕೃತಿ ಬೇರೆ ಬೇರೆ ಪ್ರದೇಶಗಳಿಗೆ ಸೇರಿದ, ಭಿನ್ನ ಸಾಮಾಜಿಕ, ಆರ್ಥಿಕ ಸ್ತರಗಳಿಗೆ ಸೇರಿದವರು ಕುಟುಂಬ ಚರಿತ್ರೆಗಳನ್ನು ಬರೆಯಲು ಖಂಡಿತವಾಗಿ ಪ್ರೇರಣೆ, ಮಾದರಿಗಳನ್ನು ಒದಗಿಸುತ್ತದೆ. ಇಂತಹ ವಿಶಿಷ್ಯ ಕೃತಿಯೊಂದರ ಬರವಣಿಗೆಗಾಗಿ ವಿಶ್ವನಾಥರಿಗೆ ಅಭಿನಂದನೆಗಳು.
ಬ್ರಹ್ಮಾನಂದ ಸ್ಮಾರಕ ಉಪನ್ಯಾಸದ ಸಂದರ್ಭದಲ್ಲಿ ಕೆಲವರ್ಷಗಳ ಹಿಂದೆ ವಿಶ್ವನಾಥರ ಪರಿಚಯವಾಯಿತು. ವಿಜ್ಞಾನ ಬರವಣಿಗೆ, ವಿಜ್ಞಾನಿಗಳ ಜೀವನ ಚರಿತ್ರೆಗಳನ್ನು ಓದಲು ಪ್ರೋತ್ಸಾಹಿಸಿದರು. ನನ್ನ ಕೆಲವು ಬರವಣಿಗೆಗಳನ್ನು ಕೂಡ ಬೇರೊಂದು ದೃಷ್ಟಿಯಲ್ಲಿ ವಿಶ್ಲೇಷಿಸಿ ಪ್ರೋತ್ಸಾಹಿಸಿದರು. ಆ ವೇಳೆಗಾಗಲೇ ಅವರು ಈ ಕೃತಿಯನ್ನು ಬರೆಯಲು ಪ್ರಾರಂಭಿಸಿದ್ದರು. ಹಲವು ರೀತಿಯ ಪರಿಷ್ಕರಣೆ, ಮರುಸಂಯೋಜನೆಗಳನ್ನು ಈ ಕೃತಿ ಹಾದು ಬಂದಿದೆ. ನನ್ನ ಬಗ್ಗೆ ವಿಶ್ವಾಸ ತೋರಿ ಇಂತಹ ಬದಲಾವಣೆ, ಪರಿಷ್ಕರಣೆಗಳನ್ನು ಒಮ್ಮೊಮ್ಮೆ ವಿಶ್ವನಾಥರು ನನ್ನ ಕೂಡ ಪ್ರಸ್ತಾಪಿಸುತ್ತಿದ್ದರು.
ಈಗ ಈ ಕೃತಿಗೆ ಪ್ರವೇಶ ಬರಹವನ್ನು ಬರೆಯುವ ಅಪೂರ್ವ ಅವಕಾಶವನ್ನು ಕೂಡ ನೀಡಿದ್ದಾರೆ. ಅವರಿಗೆ ಕುಟುಂಬದ ಸದಸ್ಯರಿಗೆ, ವಂದನೆಗಳು, ಶುಭಾಶಯಗಳು.
ಬೆಂಗಳೂರಿನವರಾದ ಪಾಲಹಳ್ಳಿ ವಿಶ್ವನಾಥ್ ಭೌತಶಾಸ್ತ್ರ ಪ್ರಾಧ್ಯಾಪಕರು. ಕ್ಯಾಲಿಫೋರ್ನಿಯಾ, ಮೇರಿಲ್ಯಾಂಡ್ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಅಮೆರಿಕದ ಫರ್ಮಿಲ್ಯಾಬ್, ಲಾಸ್ ಅಲಮೋಸ್ ಲ್ಯಾಬ್ , ಗೊಡಾರ್ಡ್ ಸ್ಪೇಸ್ ಸೆಂಟರ್ ಗಳಲ್ಲಿ ಅವರು ಸಂಶೋಧನೆಗಳನ್ನು ಮಾಡಿದ್ದಾರೆ. ವಿಜ್ಞಾನ ಬರಹಗಾರರಾದ ಅವರ ಕೃತಿಗಳು, ಆಕಾಶದಲ್ಲೊಂದು ಮನೆ, ಕಣಕಣ ದೇವಕಣ, ಭೂಮಿಯಿಂದ ಬಾನಿನತ್ತ, ಪಾಪ ಪ್ಲೂಟೊ.