ಕರೆಕ್ಟ ಇವತ್ತಿಗೆ ಹನ್ನೊಂದ ವರ್ಷದ ಹಿಂದ ನಾ ನನ್ನ ಮೂದಲನೇ ಹನಿಮೂನಗೆ ಕೆರಳಾಕ್ಕ ಹೋಗೊ ತಯಾರಿ ಒಳಗ ಇದ್ದೆ. ಮುಂದ ಜೀವನದಾಗ ಎರಡ-ಮೂರ ವರ್ಷಕ್ಕೊಂದ ಹನಿಮೂನಗೆ ಹೋಗಬೇಕು ಅನ್ನೋ ವಿಚಾರದಿಂದ ಅದು ಮೊದಲನೇ ಹನಿಮೂನ್ ಅಂತ ನಾ ಅನ್ಕೊಂಡಿದ್ದೆ. ಆದರ ಈ ಹನ್ನೊಂದ ವರ್ಷದಾಗ ನಾ ಒಂದ ಹನಿಮೂನಗೆ ಹೋಗಿ ಬಂದದ್ದ ರಗಡ ಆತು ಅಂತ ಅನಿಸಿಬಿಟ್ಟದ. ಹಂಗ ಹಗಲಗಲ ಹನಿಮೂನಗೆ ಹೋಗಬೇಕು ಅಂದರ ಒಂದು ನಮ್ಮ ತಲ್ಯಾಗ ಎರಡ-ಮೂರ ಸುಳಿ ಇರಬೇಕು (ತಲ್ಯಾಗಿನ ಒಂದ ಸುಳಿಗೆ ಒಂದ ಹೆಂಡತಿ ಇರತಾಳಂತ ಜನಾ ನಂಬತಾರ) ಇಲ್ಲಾ ನಮಗ ನಮ್ಮ ಇದ್ದ ಒಬ್ಬ ಬಾಳ ಸಂಗಾತಿ ಒಳಗ ಎರಡ-ಮೂರ ವರ್ಷಕ್ಕೊಮ್ಮೆ ಏನೇನರ ಹೊಸಾದ ಕಾಣೋ ಚಟಾ ಇರಬೇಕು. ಇಷ್ಟ ಅಲ್ಲದ ದಾಂಪತ್ಯ ಜೀವನದಾಗ ಮ್ಯಾಲಿಂದ ಮ್ಯಾಲೆ ಛಲಾ ಹಿಡದ ಅರ್ಥ ಹುಡುಕೊ ಹಟಾನೂ ಇರಬೇಕು. ಆಮೇಲೆ ನೋಡಿದವರಿಗೆ ನಮ್ಮ ‘ಜೋಡಿ’ ಆಗದಿ ‘ಎಳೆ ದಂಪತಿಗಳ ಜೋಡಿ’ ಕಂಡಂಗ ಕಾಣತೀರಬೇಕು.
ಆದರ ಈಗ ಲಗ್ನಾಗಿ ಇಷ್ಟ ವರ್ಷ ಆದ ಮ್ಯಾಲೆ ದಾಂಪತ್ಯ ಜೀವನದಾಗ ಅರ್ಥ ಹುಡಕಲಿಕ್ಕ ಹೋಗಿ ಅನರ್ಥ ಯಾಕ ಮಾಡ್ಕೋಬೇಕು ? ’ಹೊಸತನ’ ಕಾಣೋದ ದೂರ ಉಳಿತ ಸುಮ್ಮನ ‘ಅಕಿತನ’ ವನ್ನ ‘ನನ್ನತನ’ ಅಂತ ತಿಳ್ಕೋಂಡ ಬಾಯಿ ಮುಚ್ಚಗೊಂಡ ಇದ್ದಷ್ಟ ದಿವಸ ಚೆಂದಾಗಿ ಸಂಸಾರ ಮಾಡಿದ್ರ ಸಾಕು ಅಂತೇಲ್ಲಾ ಅನಸಲಿಕತ್ತದ. ಅಲ್ಲಾ ಇದ ನನ್ನ ಅನುಭವನಾ ಮತ್ತ ನಿಮ್ಮ-ನಿಂಬದ ನಿಮಗ ಬಿಟ್ಟಿದ್ದ. ಇನ್ನ ನಮ್ಮ ಜೋಡಿ ಅಂತೂ ಅಕಿ ಎರಡ ಹಡದ ಮ್ಯಾಲೇ, ಎಲ್ಲೆರ ಹೊರಗ ಹೊಂಟಾಗ ‘ನಾ ನಮ್ಮ ಮೌಶಿ ಜೋಡಿ ಹೊಂಟಂಗ’ ಕಾಣತದ ಅಂತ ಮಂದಿ ಅಂತಾರ. ಅಂದರ ನನ್ನ ಹೆಂಡತಿ ನನ್ನ ಮೌಶಿ ಕಂಡಂಗ ಕಾಣತಾಳ ಅಂತಲ್ಲಾ, ನಾ ಇನ್ನೂ ಹುಡಗ ಕಂಡಂಗ ಕಾಣತೇನಿ ಅಂತ ಅದರ ಅರ್ಥ. ಇನ್ನ ನನ್ನ ತಲ್ಯಾಗ ಇದ್ದ ಒಂದ ಸುಳಿನ ಲಗ್ನ ಆಗಿ ಹನ್ನೊಂದ ವರ್ಷದಾಗ ಇಷ್ಟ ದೊಡ್ದದ ಆಗೇದ ಅಲಾ, ಈ ಸಂಸಾರದಾಗ ಸಿಕ್ಕ ತಲ್ಯಾಗ ಇದ್ದ ಒಂದ ನಾಲ್ಕ ಕೂದಲಾನೂ ಉದರಿ ಹೋಗ್ಯಾವ.
ಅಲ್ಲಾ, ಎಲ್ಲಾ ಬಿಟ್ಟ ನಾ ಈಗ ಯಾಕ ಹನ್ನೊಂದ ವರ್ಷದ ಹಿಂದಿನ ಹನಿಮೂನ್ ಗೆ ಹೋದೆ ಅನ್ನಲಿಕ್ಕೆ ಏನ ಖಾಸ ಕಾರಣ ಇಲ್ಲಾ. ಹಿಂದಿನ ಒಳ್ಳೆ ದಿನಾ ನೆನಿಸಿಗೊಂಡ ಜೀವನಾದಾಗ ಮುಂದ ಬರೋ ಕಷ್ಟಾ ಎದರಸಬೇಕ ತಮ್ಮಾ ಅಂತ ತಿಳದವರ ಹೇಳ್ಯಾರಲಾ ಹಂಗ ಸುಮ್ಮನ ನೆನಿಸಿಕೊಂಡೆ ಇಷ್ಟ. ನಾ ಹನಿಮೂನ್ ಗೆ ಹೋಗಬೇಕಾರ ನಂದ ಹಸಿ ಮೈ ಇತ್ತ. ಅಂದರ ನಾ ಗ್ರಹಸ್ಥಾಶ್ರಮಕ್ಕ ಕಾಲಿಟ್ಟ, ಬ್ರಹ್ಮಚರ್ಯಕ್ಕ ಬೈ ಹೇಳಿ ದಣೇಯಿನ ಒಂದ ವಾರ ಆಗಿತ್ತು. ಅಂದ್ರ ಮನ್ನೆ ಡಿಸೆಂಬರ ಒಂದಕ್ಕ ನಂದ ‘ಪ್ರಸ್ಥ’ ಆಗಿ ಹನ್ನೊಂದ ವರ್ಷ ಆತ. ಇನ್ನೂ ಹೆಂಗ ನೆನಪ ಇಟ್ಟಾನ ನೋಡ ಅಂತೀರಿ ಏನ? ಮೊದಲನೇ ಸಲಾರಿಪಾ, ನೆನಪ ಇಡಲಾರದ ಏನ? ಅದೇನ ಹಗಲಗಲಾ ಆಗೊದ? ಯಲ್ಲಾರು ತಮ್ಮ-ತಮ್ಮದ ನೆನಪ ಇಟಗೊಂಡಿರತಾರ.
ಹಂಗ ನೋಡಿದ್ರ ನಂದ ಮದುವಿ ಆಗಿದ್ದ ನವೆಂಬರ್ ೨೮ ಕ್ಕ, ಅದರಾಗ ನಮ್ಮಂದಿ ಒಳಗ ಮದುವಿ ಆದ ದಿವಸ ರಾತ್ರಿನ ” ಪ್ರಸ್ಥ” ದ ವ್ಯವಸ್ತೆ ಮಾಡಿ ಬಿಡತಾರ. ದೇವರೂ – ದಿಂಡ್ರೂ ಎಲ್ಲಾ ಆಮ್ಯಾಲೆ ಇಲ್ಲಾ ಮದ್ಲ ಮಾಡಿ ಬಿಡತಾರ. ಆದರ ಯಾಕೋ ನಮ್ಮ ಮನ್ಯಾಗ “ಪ್ರಸ್ಥ” ಮೂರ ದಿವಸ ಮುಂದ ದೂಡಿದ್ದರು ( ನನ್ನ ಹೆಂಡತಿದ ಏನ ಡೇಟ್ ಇದ್ದಿದ್ದಿಲ್ಲ ಮತ್ತ ). ಬಹುಶಃ ನಮ್ಮಿಬ್ಬರಿಗೂ ಒದ್ಕೋಳ್ಳಿಕ್ಕೆ ಅಂತ ಒಂದ ಮೂರ ದಿವಸ ಟೈಮ್ ಕೊಟ್ಟಿದ್ದರ ಕಾಣಸ್ತದ. ಸರಿ, ಡಿಸೆಂಬರ್ ೧ ಕ್ಕ ಪ್ರಸ್ಥ ಫಿಕ್ಸ ಆತು. ನನ್ನ ಹೆಂಡತಿ ಮನೆ ಕಡೆಯಿಂದ ಒಂದಿಬ್ಬರ ಅನುಭವಸ್ತ ಹೆಣ್ಣ ಮಕ್ಕಳು ನಮ್ಮ ಮನಿಗೆ ‘ಪ್ರಸ್ಥ’ದ ಹಾಸಗಿ ಹಾಸಲಿಕ್ಕೆ – ಮಡಚಲಿಕ್ಕೆ ಬಂದಿದ್ದರು, ಅದರಾಗ ಒಬ್ಬರಿಗೂ ಅಂತೂ ನಾಲ್ಕ ಮೊಮ್ಮಕ್ಕಳ ಆಗಿದ್ದರು. ಅಡ್ಡಿ ಇಲ್ಲಾ ಭಾರಿ ಅನುಭವ ಇದ್ದ ಸುಪರವೈಸರನ ಕಳಿಸ್ಯಾರ ಅನಸ್ತು. ನಂಬದ ನೋಡಿದ್ರ ಸಣ್ಣ-ಸಣ್ಣ ಬೆಡರೂಮ್ ಇರೋ ಮನಿ, ಬೆಡರೂಮ್ ನಾಗ ಹೂಂಸ ಬಿಟ್ಟರ ಮುಂಚಿ ಬಾಗಲದಾಗ ಕೆಳಸತಿತ್ತು (ವಾಸನಿ ಬ್ಯಾರೆ ಬರ್ತಿತ್ತು ಆ ಮಾತ ಬ್ಯಾರೆ). ನನಗ ಏನೋ ಒಂದ ತರಹ ಅನಸಲಿಕತ್ತಿತ್ತು. ಅದರಾಗ ನಾ ಸಾಯಿನ್ಸ ಕಲತಾಂವ, ಭಾಳ ಮಂದಿಗೆ ಹಿಂತಾ ವಿಷಯದೋಳಗ “ಜ್ಞಾನ” ಕೊಟ್ಟೊಂವಾ, ಅದೇಲ್ಲಾ ಖರೆ ಆದ್ರ ಹೇಳೋದಕ್ಕೂ ನಾವ ಸ್ವಂತ ಅನುಭವಸೊದಕ್ಕೂ ಭಾಳ ಡಿಫರೆನ್ಸ ಆಗ್ತದರಿ. ಆದ್ರೂ ದೇವರ ಇದ್ದಾನ ಅನ್ನೊ ಒಂದ ಧೈರ್ಯಾ ಇತ್ತ. ರಾತ್ರಿ ೧೧.೩೦ ಸುಮಾರಿಗೆ ಹೆಣ್ಣ ಮಕ್ಕಳ ಆರತಿ, ಅದು-ಇದು ಅಂತ ತಮ್ಮ ಪದ್ಧತಿ ಮಾಡಿ ಕಡಿಕೆ ನಮ್ಮ ಪದ್ಧತಿ ಮಾಡ್ಕೊಳ್ಳಿಕ್ಕೆ ನಮಗ ಒಳಗ ಬಿಟ್ಟರು.
ನನ್ನ ಹೆಂಡತಿ ಹಂತಾ ಥಂಡ್ಯಾಗ ಆರಿ ಅಂಗಾರ ಆಗಿದ್ದ ಒಂದ ವಾಟಗಾ ಹಾಲು ಕುಡಿಲಿಕ್ಕ ಕೊಟ್ಟಳು, ಅದು ಬೆಳ್ಳಿವಾಟಗಾದಾಗ. ನಮ್ಮ ಮನ್ಯಾಗ ಅಷ್ಟ ದೂಡ್ಡ ಬೆಳ್ಳಿ ವಾಟಗಾ ಇದ್ದಿದ್ದಿಲ್ಲಾ, ಬಹುಶಃ ಬೀಗರ ಕೊಟ್ಟಿರಬಹುದು ತೊಗೊ ಅಂತ ಖುಶಿಲೇ ತಣ್ಣಂದ ಹಾಲ ಕುಡದೆ. ಇವತ್ತ ಪ್ರಸ್ಥ ಅಂತ ಸ್ವಲ್ಪ ಬಿಸಿಯಾಗಿದ್ದ ರಕ್ತನೂ ತಣ್ಣಗ ಆಗಲಿಕತ್ತ. ಬಾಜೂಕ ಒಂದ ಕುಂಟೊ ಸ್ಟೂಲ್ ಮ್ಯಾಲೆ ಒಂದಿಷ್ಟ ಹಣ್ಣ ಇಟ್ಟಿದ್ದರು. ಅದರಾಗ ಮೊಸಂಬಿನ ಎದ್ದ ಕಾಣತಿದ್ದವು. ಇಗೆಲ್ಲೆ ತೊಳಿ ಸುಲದ ಮೊಸಂಬಿ ತಿನ್ನಲಿಕ್ಕೆ ಟೈಮ್ ಅದ ಬಿಡ ಅಂತ ಬಿಟ್ಟೆ. ಆದ್ರು ಜೀವನದಾಗ ‘ಹಣ್ಣು- ಹೆಣ್ಣು- ಹೊನ್ನು’ ಒಲ್ಲೆ ಅನ್ನಬಾರದಂತ ಹಂತಾದರಾಗ ನನಗ ಮೂರೂ ಒಂದ ದಿವಸ ಸಿಕ್ಕಾವ ಅಂತ ಶಾಸ್ತ್ರಕ್ಕ ಒಂದ ಎರಡ ದ್ರಾಕ್ಷಿ ಹಣ್ಣ ಬಾಯಗ ಹಾಕ್ಕೊಂಡೆ.
ಸರಿ ಅಷ್ಟರಾಗ ನನ್ನ ಹೆಂಡತಿ ಅತ್ಯಾ ಬಂದ ಒಂದ ಎರಡ ಫೂಟಿನ ‘ಸಮೆ’ ಅಂದರ ‘ದೀಪ’ ಹಚ್ಚಿ ಇಟ್ಟ, ಒಂದ ಡಬ್ಬಿ ತುಪ್ಪ ಇಟ್ಟ
“ಪ್ರಶಾಂತವರ, ರಾತ್ರಿ ಬೆಳತನಕಾ ಇದಕ್ಕ ತುಪ್ಪಾ ಹಾಕೋತಿರ್ರಿ. ದೀಪ ಒಟ್ಟ ಶಾಂತ ಆಗಬಾರದು ” ಅಂದ್ರು.
“ಯೇ. ದೀಪಾ ಯಾಕರಿ ಅತ್ಯಾ, ನಮ್ಮ ಮನ್ಯಾಗ ಜಿರೋ ಬಲ್ಬ ಅದ. ಹಂಗ ಏನರ ಕಾಣಸವಲ್ತು, ಬೆಳಕ ಬೇಕ ಅನಿಸಿದರ ಹಚ್ಚಗೋತೇವಿ” ಅಂದೆ.
“ದೀಪಾ ಹಚ್ಚೋದು ನಿಮಗ ಕಾಣಸಲಿಕ್ಕ ಅಲ್ರಿ, ಇವತ್ತ ರಾತ್ರಿ ನೀವಿಬ್ಬರು ಈ ದೀಪಾ ಕಾಯಬೇಕು, ಅದು ಪದ್ಧತಿ. ಇದನ್ನ ಒಟ್ಟ ಆರಲಿಕ್ಕೆ ಬಿಡಬ್ಯಾಡರಿ ಮ್ಯಾಲಿಂದ ಮ್ಯಾಲೆ ತುಪ್ಪಾ ಹಾಕೋತ ಇರ್ರಿ” ಅಂದ್ರು. ’ಅಯ್ಯೋ ದೇವರ ನಾ ಏಲ್ಲಂತ ಲಕ್ಷಾ ಕೊಡಲಿ’, ನಂಬದ ಪ್ರಸ್ಥ ಮುಖ್ಯನೋ ಇಲ್ಲಾ ರಾತ್ರಿ ಬೆಳತನಕಾ ದೀಪಾ ಕಾಯೋದು ಮುಖ್ಯನೋ ಒಂದು ತಿಳಿಲಿಲ್ಲಾ.
ಆತ, ಸುಮ್ಮನ ಇವತ್ತೊಂದ ರಾತ್ರಿ ದೂಡ್ಡವರ ಹೆಂಗ ಹೇಳ್ತಾರ ಹಂಗ ಕೇಳಿ ಕಳದರಾತ ಅಂತ ಡಿಸೈಡ ಮಾಡಿದೆ. ಕಡಿಕೆ ಎಲ್ಲಾರು ನಮ್ಮಿಬ್ಬರನ ರೂಮ್ ನಾಗ ಬಿಟ್ಟ ಹೊರಗಿನಿಂದ ಅವರ ಬಾಗಲ ಹಾಕ್ಕೊಂಡರು, ಒಳಗಿನಿಂದ ನಾವ ಬಾಗಲ ಹಾಕ್ಕೊಂಡಿವೆ, ಸುಡಗಾಡ ನಮ್ಮ ಮನ್ಯಾಗ ಅಟ್ಯಾಚಡ ಬೆಡರೂಮ್ ಬ್ಯಾರೆ ಇರಲಿಲ್ಲಾ, ರಾತ್ರಿ ಹೊರಗ ಹೋಗ ಬೇಕ ಅನಿಸಿದರ ಏನ ಗತಿ ಅನಸ್ತು. ಅದರಾಗ ಚಳಿಗಾಲ, ತಣ್ಣನೆ ಬೆಳ್ಳಿವಾಟಗಾದ ಚಿಲ್ಡ ಹಾಲ ಬ್ಯಾರೆ ಕುಡದೇನಿ. ನಂಗ ಏನಿಲ್ಲದ ರಾತ್ರಿ ಮೂರ ಸಲಾ ಏಳೊ ಚಟಾ ಬ್ಯಾರೆ, ರಾತ್ರಿ ಹೆಂಗ ಕಳಿಬೇಕಪಾ ಅನಸ್ತು.
ಮನ್ಯಾಗ ಬ್ಯಾರೆ ಯಾರು ಗಂಡಸರು ಇದ್ದದ್ದಿಲ್ಲಾ, ಇದ್ದ ಗಂಡಸರನೆಲ್ಲಾ ಉಟಾ ಆದ ಮ್ಯಾಲೆ ನಮ್ಮ ಮನಿ ಸಣ್ಣದಂತ ಬ್ಯಾರೆಯವರ ಮನಿಗೆ ಮಲಗಲಿಕ್ಕೆ ಕಳಸಿದ್ದರು. ಮನ್ಯಾಗ ಬರೆ ಹೆಂಗಸರ ತುಂಬಿದ್ದರು, ಬರ-ಬರತ ಹೊರಗಿನಿಂದ ಅವರ ಮುಸು-ಮುಸು ನಗೋದು, ಮಾತೋಡೊದು ಬಂದ ಆಗಲಿಕತ್ತ. ಪಾಪ, ಒಂದ ವಾರದಿಂದ ಲಗ್ನದ ಸಂಬಂಧ ದುಡದಿದ್ದರು, ಬಹುಶಃ ಅವರಿಗೆ ಇವತ್ತ ತಾಂವ ಇಷ್ಟ ದಿವಸ ದುಡದಿದ್ದ ಸಾರ್ಥಕ ಆತು ಅಂತ ಅನಸ್ತ ಕಾಣಸ್ತದ, ಕಣ್ಣತುಂಬ ನಿದ್ದಿ ಮಾಡಲಿಕ್ಕೆ ಶುರುಮಾಡಿದರು. ಆದರ ಇಲ್ಲೇ ನಂದ ಇನ್ನೂ ಲಗ್ನ ಆಗಿದ್ದ ಸಾರ್ಥಕ ಆಗೋದ ಬಾಕಿ ಇತ್ತ , ದೀಪಕ್ಕ ತುಪ್ಪಾ ಹಾಕೋ ಕೆಲಸ ಚಾಲ್ತಿ ಇತ್ತ.
ಹಿಂಗ ಒಂದ ತಾಸ ಆಗಿತ್ತೋ ಏನೋ ಒಮ್ಮಿಂದೊಮ್ಮಿಲೇ ‘ಫಡ್ – ಫಡ್, ಫಡಾರ್’ ಅಂತ ಒಂದ ಎರಡ ನಿಮಿಷ ಕಿವಿ ಶೆಟದ ನಿಲ್ಲೊ ಹಂಗ ಜೋರ ಸಪ್ಪಳಾತು. ಅದರಾಗ ನಂಬದ ಸಿಂಗಲ್ ಇಟ್ಟಂಗಿ ಗೊಡೆ, ಎಲ್ಲೆ ಬಚ್ಚಲಮನಿ ಇಲ್ಲಾ, ಅಡಗಿ ಮನಿ ಗೋಡೆ ಬಿತ್ತೋ ಅನಕೊಂಡೆ. ಅಲ್ಲಾ ಈ ಹೌಸಿಂಗ ಬೋರ್ಡ ಮನಿ ಭಾಳ ಅದ್ರ ಇರತಾವ ಅಂತ ಗೊತ್ತಿತ್ತ, ಆದರ ಇಷ್ಟ ಅದ್ರ ಇರತಾವ ಅಂತ ಗೊತ್ತಿರಲಿಲ್ಲಾ, ಎಲ್ಲೋ ಭೂಕಂಪ ಆದರ, ಎಲ್ಲೋ ಮನಿ ಬಿಳ್ತಾವ ಅಂತಾರಲ್ಲಾ ಹಂಗ ಅನಸ್ತು. ಹೊರಗ ಮಲ್ಕೊಂಡಿದ್ದ ಹೆಣ್ಣ ಮಕ್ಕಳೆಲ್ಲಾ ಚೀರಕೋತ ಎದ್ದ ಕೂತರ. “ಅಯ್ಯೋ ಏನೋ ಬಿತ್ರಿ, ತಗಡ ಬಿತ್ತೊ, ಗೋಡೆ ಬಿತ್ತೊ” ಅಂತೆಲ್ಲಾ ಮಾತಡಲಿಕತ್ತರು. ಪಾಪ, ಹೊರಗ ಯಾರೂ ಗಂಡಸರ ಬ್ಯಾರೆ ಇಲ್ಲಾ, ನಡರಾತ್ರಿ ಬ್ಯಾರೆ, ಇರೋಂವಾ ಒಬ್ಬ ಗಂಡಸ ಅಂದ್ರ ನಾನ, ನಾನೂ ಹೊರಗ ಬರೋಹಂಗ ಇಲ್ಲಾ. ನಾ ಹೊರಗ ಹೋದಾಗ ದೀಪಾ ಶಾಂತ ಆದರ ಏನ ಮಾಡ್ತಿರಿ ಮತ್ತ? ಅಷ್ಟರಾಗ ಧೈರ್ಯ ಮಾಡಿ ನಮ್ಮವ್ವಾ “ಪ್ರಶಾಂತಾ??? ” ಅಂದ್ಲು, ನಾ ಒಮ್ಮಿಕ್ಕಲೆ ” ಏ, ನಾ ಏನ್ ಮಾಡಿಲ್ಲವಾ, ಹೊರಗ ಕಂಪೌಂಡ ಗೋಡೆ ಅಲ್ಲೆ ಡಬ್ಬ ಹಾಕಿದ್ದ ತಗಡ ಮ್ಯಾಲೆ ಬಿದ್ದಿರಬೇಕ ತೊಗೊ, ಸುಮ್ಮನ ಮಕ್ಕೊ” ಅಂದೆ. ಆದ್ರ ನಮ್ಮ ಅವ್ವಗ ಸಮಾಧಾನ ಆಗಲಿಲ್ಲಾ. ಅಕಿ ಕಡಿಕೆ ಹಿತ್ತಲ ಬಾಗಲ ತಗದ ನೋಡಿದ್ಲು. ಸುಡಗಾಡ ಯಾ ಗೋಡೀನೂ ಬಿದ್ದಿದ್ದಿಲ್ಲಾ. ಹುಸ್ಸೋಳೆ ಮಕ್ಕಳ ನಮ್ಮ ದೋಸ್ತರ ಒಂದ ನಾಲ್ಕ ಮಂದಿ ಬಂದ ಪಟಾಕ್ಷಿ ಸರಾ ಹಚ್ಚಿ ಓಡಿ ಹೋಗಿದ್ದರು.
ನಮ್ಮ ದೋಸ್ತರಾಗ ಯಾರದರ ಲಗ್ನಾ ಆಗಿ ‘ಪ್ರಸ್ಥ’ ಇದ್ದಾಗ ಅವತ್ತ ರಾತ್ರಿ ಎಲ್ಲಾರೂ ಕಾಂಟ್ರಿಬ್ಯುಶನ್ ಮಾಡಿ ಒಂದ ಸಾವಿರ ರೂಪಾಯಿದ್ದ ಪಟಾಕ್ಷಿ ಸರಾ ಹಚ್ಚೊ ಪದ್ದತಿ ಇತ್ತ, ಮತ್ತ ಈಗ ನನ್ನ ಪಾಳೆ, ಬಿಡತಾರಿನ ಇವರ? ಏನೋ ನಂದ ಪುಣ್ಯಾ ಅಟೊಂಬಾಂಬ್ ಸರಾ ಹಚ್ಚಿಲ್ಲಾ. ಹಂಗೇನರ ಹಚ್ಚಿದ್ದರ ನಾವ ಗಂಡಾ-ಹೆಂಡತಿ ಇಬ್ಬರು ‘ಪ್ರಸ್ಥ’ ದ ದಿವಸ ಬೆಡ್ ರೂಮ ಜೊತಿ ಹಾರಿ ಹೋಗಿರ್ತಿದ್ದವಿ ಆ ಮಾತ ಬ್ಯಾರೆ.
ನಾ ನಮ್ಮ ದೋಸ್ತರಿಗೆ ಒಂದ ಹತ್ತ ಸಲಾ ಹೇಳಿದ್ದೆ “ಲೆ, ಲಿಂಗಾಯಿತರ ಮಂದ್ಯಾಗ ಸತ್ತಾಗ ಪಟಾಕ್ಷಿ ಹಾರಸ್ತಾರ, ನೀವು ಹುಟ್ಟಸಬೇಕಾರ ಹಾರಸ್ತೀರಲ್ಲಲೇ. ಒಂದ ಸ್ವಲ್ಪರ ತಿಳಿತೈತನ” ಅಂತ. ಆದ್ರ ಯಾರೂ ನನ್ನ ಮಾತ ಕೇಳಲಿಲ್ಲಾ. ಅದರಾಗ ಮದ್ಲ ನಮ್ಮದ ಸಣ್ಣ ಮನಿ, ಅದೂ ಕಾಲನಿ ಒಳಗ, ಬ್ಯಾರೆಯವರಿಗೂ ತ್ರಾಸ ಆಗತದ ಅಂತ ತಿಳಿಸಿ ಹೇಳಿದ್ದೆ. ಹಂಗ ನೋಡಿದ್ರ ಅವರಿಗೆ ನನ್ನ ‘ಪ್ರಸ್ಥ’ದ ಡೇಟ ಫಿಕ್ಸ ಆಗಿದ್ದ ವಿಷಯ ಹೇಳಿದ್ದೆ ಇಲ್ಲಾ. ಬಹುಶಾಃ ನಮ್ಮ ಮನ್ಯಾಗಿಂದ ಯಾವಾಗೊ ಸುಳಿವು ತೊಗೊಂಡ ಇಷ್ಟ ಗದ್ಲ ಮಾಡಿ ಪಾಪ ಎಲ್ಲಾರನೂ ಎಬಿಸಿ ಇಟ್ಟರು. ಅದರಾಗ ನನ್ನ ಹೆಂಡತಿ ಮನಿ ಇಂದ ಬಂದಿದ್ದ ಅಜ್ಜಿ ಅಂತೂ ಗಾಬರಿ ಆಗಿ ಎದ್ದ ಎದಿ ಹಿಡಕೊಂಡ ಕೂತಗೊಂಡ ಬಿಟ್ಟಿತ್ತ. ಪಾಪಾ ಅವರಿಗೆ ಏನರ ಹೆಚ್ಚು ಕಡಿಮಿ ಆಗಿದ್ದರ ಏನ ಗತಿ ಅಂತೇನಿ. ನನ್ನ ‘ಪ್ರಸ್ಥ’ಕ್ಕ ಬಂದೊರ ಬ್ಯಾರೆ, ಹಂಗ ಏನರ ಆಗಿದ್ದರ ಮುಂದ ಎಲ್ಲಾರೂ ‘ಪ್ರಶಾಂತನ ಪ್ರಸ್ಥ’ಕ್ಕ ಹೋದಾಗ ಅಜ್ಜಿ ಹೋದರು ಅಂತ ನಾ ಹೋಗೋತನಕ ಮಾತಾಡ್ತಿದ್ದರು.
ನಮ್ಮವ್ವಾ ಅತ್ಲಾಗ ಹಿತ್ತಲ ಬಾಗಲ ತಗಿಯೋದ ಒಂದ ತಡಾ ಈಡಿ ಮನಿ ತುಂಬ ಪಟಾಕ್ಷಿ ಮಕ್ಕಿನ ವಾಸನಿ ತುಂಬಿ ಬಿಡತ. ನಾ ರೂಮನಾಗ ಹಾಕಿದ್ದ ರೂಮ್ ಫ್ರೆಶನರ್, ಮೈ ತುಂಬ ಬಡಕೊಂಡಿದ್ದ ಇಂಪೊರ್ಟೆಡ್ ಪರಫ್ಯೂಮ್, ಡಿಯೋಡ್ರೆಂಟ್ ಎಲ್ಲಾ ಹೊಳ್ಯಾಗ ಹುಣಸಿ ಹಣ್ಣ ತೊಳದಂಗ ಆತ. ಇನ್ನ ಫ್ಯಾನ ಹಚ್ಚಬೇಕ ಅಂದರ ದೀಪ ಶಾಂತ ಆಗತದ, ಅದರಾಗ ನಾ ‘ಪ್ರಸ್ಥ’ದ ರೂಮನಾಗ ಕಡ್ದಿಪೆಟಗಿದ ಏನ ಕೆಲಸ ಅಂತ ಒಳಗ ಕಡ್ದಿಪೆಟಗಿ ಬ್ಯಾರೆ ಇಟಗೊಂಡಿದ್ದಿಲ್ಲಾ. ಇನ್ನ ಹೊರಗಿನವರಿಗೆ ಕಡ್ದಿಪೆಟಗಿ ಕೇಳಿ “ಯಾಕಪಾ ನೀ ಏನ ಈಗ ಬೆಡ್ ರೂಮನಾಗ ಅಟೊಂಬಾಂಬ್ ಹಚ್ಚೊಂವ ಇನ” ಅಂತ ಅಂದ ಗಿಂದಾರಂತ ಸುಮ್ಮನ ಮೂಗ ಮುಚಗೊಂಡ ದೀಪಕ್ಕ ತುಪ್ಪಾ ಹಾಕ್ಕೊತ ಕೂತೆ. ಹೊರಗ ಪಟಾಕ್ಷಿ ಸಪ್ಪಳಕ್ಕ ಎದ್ದ ಕೂತಿದ್ದ ಹೆಣ್ಣ ಮಕ್ಕಳೆಲ್ಲಾ ನಿದ್ದಿ ಹಾರಿ ಹೋತ ಅಂತ ಎದ್ದ ನಮ್ಮ ದೊಸ್ತರಿಗೆ “ಇವರ ಹೆಣಾ ಎತ್ತಲಿ, ಸುಟ್ಟ ಬರಲಿ, ಬುದ್ಧಿ ಎಲ್ಲೆ ಇಟ್ಟಾವ. ನಡರಾತ್ರ್ಯಾಗ ಹೇಂತಾ ಪರಿ ಗಾಬರಿ ಮಾಡಿದ್ವು”ಅಂತೆಲ್ಲಾ ಬಯಲಿಕತ್ತರು. ಆವಾಗ ಎದ್ದ ನಮ್ಮವ್ವ ಮುಂದ ಮಲಗಲೇ ಇಲ್ಲಾ, ಮುಂದ ಒಂದ ತಾಸಿಗೆ ನೀರ ಕಾಯಿಸಲಿಕ್ಕ ಇಟ್ಟ, ನಮ್ಮ ರೂಮಿನ ಬಾಗಲ ಬಡದ “ಪ್ರೇರಣಾ, ಸಾಕ ಏಳವಾ. ನೀರ ಕಾದಾವ. ನಿಮ್ಮ ಅತ್ಯಾನ ಕಡೆ ನಾಕ ತಂಬಿಗೆ ನೀರ ಹಾಕಿಸಿಗೊ” ಅಂತ ನನ್ನ ಹೆಂಡತಿನ ಒದರಿದ್ಲು. “ನಿನ್ನ ಗಂಡಗೂ ಎಬಸ, ನಿಂದ ಸ್ನಾಗ ಮುಗದ ಮ್ಯಾಲೆ ನೀನ ಅವಂಗೊಂದ ಎರಡ ತಂಬಗಿ ನೀರ ಹಾಕಿ ಸ್ವಚ್ಚ ಮೈ ತೊಳಸ ” ಅಂತ ನನಗ ಕೇಳೋ ಹಂಗ ಹೇಳಿದ್ಲು. ಬಹುಶಃ ಪ್ರಸ್ಥ ಮುಗದಂಗ ಆತ ಕಾಣಸ್ತದ ಅಂತ ನಾನೂ ಹಾಸಿಗೆ ಬಿಟ್ಟ ಎದ್ದೆ. ಈಡಿ ರಾತ್ರಿ ಇಷ್ಟ ಗದ್ಲ ಆದರೂ ತನಗ ಏನೂ ಸಂಬಂಧ ಇಲ್ಲದಂಗ ಇದ್ದದ್ದ ಅಂದರ ‘ದೀಪ’ ಒಂದ. ಮುಂಜಾನೆ ತನಕ ಅಗದಿ ಈಗ ಹಚ್ಚಿದವರ ಗತೆ ‘ಶಾಂತ’ ಆಗಿ ಉರಿಲಿಕತ್ತಿತ್ತ. ಮ್ಯಾಲಿಂದ ಮ್ಯಾಲೆ ತುಪ್ಪಾ ಹಾಕೊತ ಇದ್ದೊರ ಯಾರ ಮತ್ತ ?
ಇವತ್ತ ಈ ಘಟನೆ ನಡದ ಹನ್ನೊಂದ ವರ್ಷ ಆದ ಮ್ಯಾಲೆ ಈ ಒಂದ ಪ್ರಸ್ಥದ ಪ್ರಸ್ತಾವನೆ ಮಾಡಿದ್ದ ನಿಮಗ ಅಪ್ರಸ್ತುತ ಅನಸಬಹುದು ಆದರ ನಾ ಖರೆ ಹೇಳತೇನಿ ಇವತ್ತೂ ಗಣಪತಿ ಹಬ್ಬದಾಗ ಇಲ್ಲಾ ದೀಪಾವಳಿ ಒಳಗ ನಡರಾತ್ರ್ಯಾಗ ಯಾರರ ಪಟಾಕ್ಷಿ ಹಾರಿಸಿದರ ನಂಗ ನಂದ ಪ್ರಸ್ಥದ ರಾತ್ರಿ ನೆನಪಾಗಿ ಬಾಜೂಕ ಹೆಂಡತಿ ಇದ್ದರ ಅಕಿನ್ನ ಗಟ್ಟೆ ಹಿಡಕೊಂಡ ಮಲ್ಕೋತೇನಿ. ಪಲ್ಲಂಗ್ ಬುಡಕ ತುಪ್ಪಾ ಹಾಕಲಿಕ್ಕೆ ದೀಪ ಒಂದ ಇರಂಗಿಲ್ಲ ಇಷ್ಟ.
ಹುಟ್ಟಿದ್ದು ಶಿವಮೊಗ್ಗದೊಳಗ. ಮುಂದೆ ಕಲತಿದ್ದು ಬೆಳದಿದ್ದು ಬಲತಿದ್ದು ಎಲ್ಲಾ ಹುಬ್ಬಳ್ಳಿ ಒಳಗ. ಒಂದ ಆರ ವರ್ಷದಿಂದ ತಿಳದಾಗೊಮ್ಮೆ, ಟೈಮ ಸಿಕ್ಕಾಗೊಮ್ಮೆ ಕನ್ನಡ ಹಾಸ್ಯ ಲೇಖನಗಳನ್ನ ಬರಿಲಿಕತ್ತೇನಿ. ಉತ್ತರ ಕರ್ನಾಟಕದ ಆಡು ಭಾಷೆಯೊಳಗ ಬರೇಯೊದು ನನ್ನ ಲೇಖನಗಳ ವಿಶೇಷತೆ.