Advertisement
ಒಂದು ಡೈಲಾಗ್‌ ಹೇಳಿ!:  ಚಿತ್ರಾ ವೆಂಕಟರಾಜು ಸರಣಿ

ಒಂದು ಡೈಲಾಗ್‌ ಹೇಳಿ!: ಚಿತ್ರಾ ವೆಂಕಟರಾಜು ಸರಣಿ

ಕಲಿಕೆಯ ಪ್ರಾರಂಭದಲ್ಲಿ ಎಲ್ಲಾ ಕಲೆಗಳಲ್ಲೂ ಅದನ್ನು ಕಲಿಸುವವರನ್ನು ಅನುಕರಣೆ ಮಾಡುತ್ತಾರೆ. ಒಂದು ಹಂತದಲ್ಲಿ ಅದು ಅನಿವಾರ್ಯ ಕೂಡಾ. ನಂತರ ನಿಧಾನವಾಗಿ ಅದನ್ನು ಬಿಡಿಸಿಕೊಂಡು ಅಂದರೆ ಕೌಶಲವನ್ನು ಮೀರಿ, ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಒಂದು ಪಾತ್ರದ ನಡವಳಿಕೆ ಹೇಗಿರಬಹುದು ಎನ್ನುವುದರಿಂದ ನಟನೆಯ ಪ್ರಕ್ರಿಯೆಯನ್ನು ಪ್ರಾರಂಭ ಮಾಡಬೇಕಾಗುತ್ತದೆ. ಇಲ್ಲದಿದ್ದರೆ, ವರ್ಷಗಳ ಹಿಂದೆ ಅನುಕರಣೆ ಮಾಡಿದ ರೀತಿಯಲ್ಲೇ ಎಲ್ಲಾ ಸಂಭಾಷಣೆಗಳನ್ನೂ ಹೇಳುತ್ತೇವೆ. ಕಾಳಿದಾಸನಿಂದ ಹಿಡಿದು ಷೇಕ್ಸ್‌ಪಿಯರ್‌ ನವರೆಗೂ ಎಲ್ಲಾ ನಾಟಕದ ಎಲ್ಲಾ ಪಾತ್ರಗಳೂ ಒಂದೇ ರೀತಿ ಮಾತನಾಡುತ್ತವೆ. ನಿಜ ಜೀವನದಲ್ಲಿ ಮಾತನಾಡುವಂತೆ ರಂಗದ ಪಾತ್ರಗಳು ಮಾತನಾಡಲು ಆಗುವುದಿಲ್ಲ ಅದಕ್ಕೊಂದು ನಾಟಕೀಯತೆ ಇರಬೇಕಾಗುತ್ತದೆ.
ಚಿತ್ರಾ
ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

 ನಾಟಕ ಮತ್ತು ಸಿನೆಮಾದ ನಟನಟಿಯರು ಯಾವುದಾದರೂ ಕಾರ್ಯಕ್ರಮಕ್ಕೆ ಹೋದಾಗ ಅತಿ ಮುಜುಗರಕ್ಕೀಡುಮಾಡುವ ಕೋರಿಕೆ ಎಂದರೆ ‘ಒಂದು ಡೈಲಾಗ್‌ ಹೇಳಿʼ. ಹೀಗೆ ಕೇಳಿದ ತಕ್ಷಣ ಭೂಮಿಯೇ ಬಾಯಿ ಬಿಡಬಾರದೇ ಎನ್ನುವಷ್ಟು ಮುಜುಗರ ಆಗುತ್ತದೆ. ‘ಹಾಗೆಲ್ಲಾ ಹೇಳುವುದಕ್ಕೆ ಬರುವುದಿಲ್ಲʼ ಅಂತ ಹೇಳುವುದಕ್ಕೂ ಆಗದೇ ಡೈಲಾಗನ್ನು ಹೇಳಲೂ ಆಗದೇ ಒಬ್ಬರೇ ನಗುನಗುತ್ತಲೇ ಯಾತನೆ ಅನುಭವಿಸಬೇಕಾಗುತ್ತದೆ. ಸಂಗೀತದವರು ‘ಒಂದು ಹಾಡು ಹೇಳಿʼ ಎಂದರೆ ಮುಜುಗರ ಪಡುವುದಿಲ್ಲ. ಸಿನೆಮಾ ನಟರು ತಮ್ಮ ಸಿನೆಮಾದ ಪ್ರಸಿದ್ಧ ಸಂಭಾಷಣೆಯನ್ನು ಹೇಳುತ್ತಾರೆ. ಆದರೆ ನಾಟಕದ ನಟನೊಬ್ಬ ಇದ್ದಕ್ಕಿದ್ದಂತೆ ವೇದಿಕೆಯ ಮೇಲೆ ‘ಇರಲೇ ಇಲ್ಲದಿರಲೇʼ, ‘ನಾಳೆ ಮತ್ತೂ ನಾಳೆ ಮತ್ತೂ ನಾಳೆ..ʼ ಎಂದು ಹೇಳುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಡೈಲಾಗ್‌ ಎಂದರೇ ಇಬ್ಬರ ಸಂಭಾಷಣೆ. ಆಡುಮಾತಿನಲ್ಲಿ ನಾಟಕ ಅಥವಾ ಸಿನೆಮಾದ ಪಾತ್ರಗಳ ಮಾತಿಗೆ ಡೈಲಾಗ್‌ ಎನ್ನುವುದೇ ರೂಢಿ. ಮಾನೋಲಾಗ್‌ಗಳಿಗೂ!

ಯಾಕೆ ಹೀಗೆ? ಸಂಗೀತ, ಸಿನೆಮಾ ಇದು ನಾಟಕದಂತೆ  ಪ್ರದರ್ಶಕ ಕಲೆಯೇ ಆದರೂ ಯಾಕೆ ನಾಟಕದ ಸಂಭಾಷಣೆಯೊಂದನ್ನು ಹಾಗೆ ಇದ್ದಕ್ಕಿದ್ದಂತೆ ಎಲ್ಲರೆದುರು ಹೇಳಲು ಬರುವುದಿಲ್ಲ?! ಒಂದು ನಾಟಕ ಎನ್ನುವುದು ನಟನ ಮಾಧ‍್ಯಮವಾದರೂ, ಅದು ಘಟಿಸುವುದು ಒಂದು ಗುಂಪಿನಲ್ಲಿ. ನಾಟಕ ನಡೆಯುವ ಆ ಸಮಯದಲ್ಲಿ ಮಾತ್ರ. ಕಾಲ್ಪನಿಕ ಸನ್ನಿವೇಶವನ್ನು ಎಲ್ಲರೂ ನಿಜವನ್ನಾಗಿ ಮಾಡಿಕೊಂಡ ತಾಲೀಮಿನಲ್ಲಿ ಮತ್ತು ಪ್ರದರ್ಶನದಲ್ಲಿ. ರಂಗದ ಮೇಲೆ,  ಬದುಕುವಷ್ಟು ಹೊತ್ತು ಮಾತ್ರ ನಾಟಕ ಇರುತ್ತದೆ. ನಿಜವಾದ ನಾಟಕ ನಡೆಯುವುದು ಪ್ರದರ್ಶನದ ಸಮಯ ನಾಟಕ ಆಡುವವರು ಮತ್ತು ನೋಡುವವರ ಮಧ್ಯೆ. ನಟ ಅದನ್ನು ಪ್ರೇಕ್ಷಕರಿಗೆ ತಲುಪಿಸುವ ಮಾಧ್ಯಮ. ನಟನ, ಪಾತ್ರದ ಅಸ್ತಿತ್ವ ಇರುವುದು ನಾಟಕ ನಡೆಯುವಷ್ಟು ಹೊತ್ತು ಮಾತ್ರ. ನಾಟಕ ಉಳಿಯುವುದು ಮಾತ್ರ ಪ್ರೇಕ್ಷಕನ ಮನಸಿನಲ್ಲಿ, ನಟನ ಅನುಭವದಲ್ಲಿ. ಕಲಾವಿದರ ತಂಡವೊಂದು ಅದನ್ನು ಎಷ್ಟು ಸಮರ್ಪಕವಾಗಿ ಪ್ರಸ್ತುತ ಪಡಿಸಿತು ಎನ್ನುವುದರಲ್ಲಿ. ನಾಟಕ ಅದೇ ಆದರೂ ಪ್ರತಿ ಪ್ರದರ್ಶನವೂ ಹೊಸದೇ ಆಗುವುದು, ನಾಟಕ ಆ ಕ್ಷಣದಲ್ಲಿ ಘಟಿಸುವುದರಿಂದ. ಅದಕ್ಕಾಗಿಯೇ ನಾಟಕ ಒಂದು ‘ಗುರಿʼ ಅಲ್ಲ ಅದೊಂದು ‘ದಾರಿʼ ಎನ್ನುತ್ತಾರೆ. ಅದರಲ್ಲಿ ಕೊನೆಯಲ್ಲಿ ಬರುವ ‘ಪ್ರಾಡಕ್ಟ್‌ʼಗಿಂತ ‘ಪ್ರಾಸಸ್‌ʼ ಮುಖ್ಯ. ನಾಟಕದ ಓದಿನಿಂದ ಆರಂಭವಾಗುವ ಈ ಪ್ರಕ್ರಿಯೆ ಪ್ರದರ್ಶನದಲ್ಲಿ ಮುಗಿಯುತ್ತದೆ. ಮೊದಲು ನಾಟಕವನ್ನು ನಿರ್ದೇಶಕರು ಓದುತ್ತಾರೆ, ನಂತರ ಎಲ್ಲ ನಟರಿಂದಲೂ ಓದಿಸುತ್ತಾರೆ. ನಿರ್ದೇಶಕರು ಎಷ್ಟೇ ನಾಟಕದ ಬಗ್ಗೆ ಹೇಳಿದರೂ ತನಗೆ ಪಾತ್ರ ಸಿಗುವ ತನಕ ನಟರು ಅಷ್ಟು ಉತ್ಸಾಹದಲ್ಲಿರುವುದಿಲ್ಲ. ಒಮ್ಮೆ ಪಾತ್ರ ಸಿಕ್ಕಿತೋ ನಾಟಕವನ್ನು ಓದುವ ಹುರುಪು ಹೆಚ್ಚಾಗುತ್ತದೆ. ಒಂದು ತಿಂಗಳು ತಾಲೀಮು ಮಾಡಿದರೂ ಪ್ರದರ್ಶನ ಹತ್ತಿರ ಬರುತಿದ್ದ ಹಾಗೆ ನಟನ ತಯಾರಿ 100x ವೇಗದಲ್ಲಿ ಆಗುತ್ತದೆ.

ಮೊದಲು ನಾಟಕ ತಂಡಕ್ಕೆ ಬಂದವರು ಪಾತ್ರ ಕೊಟ್ಟ ತಕ್ಷಣ ‘ನನಗೆ ೨೦ಡೈಲಾಗ್‌ʼ, ‘ನನಗೆ ೩೫ ಡೈಲಾಗ್‌ʼ ಅಂತ ಲೆಕ್ಕ ಹಾಕುವುದೂ ಉಂಟು. ‘ನಾಟಕ ನಡೆಯೋದು ಡೈಲಾಗ್‌ ಇಂದ ಅಲ್ಲಪಾ, ನಿನ್ನ ಅಭಿನಯದಿಂದʼ ಅಂತ  ಏನೇ ಉದಾಹರಣೆ ಕೊಟ್ಟರೂ ‘ಡೈಲಾಗ್‌ʼ ನ ಸೆಳೆತವೇ ಹಾಗಿರುತ್ತದೆ. ಅಭಿನಯ  ಎನ್ನುವುದು ಡೈಲಾಗ್‌ ಇದ್ದಾಗ ಮಾತ್ರ ಇರುವುದು ಎನ್ನುವ ಅಭಿಪ್ರಾಯ ಇರುತ್ತದೆ. ಹಾಗಾಗಿಯೇ ನಟರು ಸರಿಯಾಗಿ ಪಾತ್ರ ಮಾಡದಿದ್ದಾಗ ‘ನಾಳೆ ಸರಿಯಾಗಿ ಹೇಳದಿದ್ದರೆ ನಿನ್ನ ಈ ಡೈಲಾಗ್‌ ಕಟ್‌ ಮಾಡಿಬಿಡ್ತೀನಿʼ ಅಂತ ನಿರ್ದೇಶಕರು ಹೆದರಿಸುವುದೂ ಉಂಟು.  ಸಿನೆಮಾ ನಟನೆ  ನಾಟಕದ ನಟನೆಗಿಂತ ಬೇರೆಯದು. ಅದು ಬಿಡಿಬಿಡಿಯಾಗಿ ಚಿತ್ರೀಕರಣಗೊಳ್ಳುವುದರಿಂದ ನಟನಿಗೂ ತನ್ನ ಪಾತ್ರ ಹೇಗೆ ಒಂದು ರೂಪ ಪಡೆಯುತ್ತದೆ ಎನ್ನುವುದರ ಸಂಪೂರ್ಣ ಕಲ್ಪನೆ ಇರುವುದು ಕಷ್ಟ.  ನಾಟಕದಲ್ಲಿದ್ದಂತೆ ಪಾತ್ರವನ್ನು ನಿಧಾನವಾಗಿ ಕಟ್ಟಿಕೊಳ್ಳುತ್ತಾ ಹೋಗಲು ಆಗುವುದಿಲ್ಲ. ನಾಟಕದಲ್ಲಿ ಹಾಗಲ್ಲ; ಹಕ್ಕಿಯೊಂದು ಗೂಡು ಕಟ್ಟಿದಂತೆ ಒಂದೊಂದೇ ವಿವರಗಳನ್ನು  ತನ್ನ ತಂಡದೊಂದಿಗೆ ಪಾತ್ರವನ್ನು ಕಟ್ಟುತ್ತಾನೆ. ನಾಟಕ ಎನ್ನುವುದೇ ಒಂದು ಕಾಲ್ಪನಿಕ ಸನ್ನಿವೇಶದ್ಲಲಿ ಕಾಲ್ಪನಿಕ ಪಾತ್ರಗಳ ನಡುವ ನಡೆಯುವುದಾದ್ದರಿಂದ ಕೇಳಿದ ತಕ್ಷಣ ಒಂದು ವಾತಾವರಣವಿಲ್ಲದೇ  ಡೈಲಾಗ್‌ ಹೇಳುವುದು ಬಹಳ ಕಷ್ಟ.

ಹಾಗೆ ನೋಡಿದರೆ ಡೈಲಾಗ್‌‌  ಬಾಯಿಪಾಠ ಮಾಡಿ, ಅದನ್ನು ಸರಿಯಾದ ನಿಲುಗಡೆಗಳೊಂದಿಗೆ ಹೇಳುವುದು ಬಹಳ ಸುಲಭ. ಪ್ರತಿದಿನ ತಾಲೀಮಿನಲ್ಲಿ ಹೇಳುತ್ತಿದ್ದರೆ ನಮಗೇ ಗೊತ್ತಿಲ್ಲದ ಹಾಗೆ ಅದು ನಮಗೆ ಬಂದುಬಿಡುತ್ತದೆ. ಆದರೆ ನಿಜವಾದ ಕೆಲಸ ಇರುವುದು ಆ ಒಂದು ಡೈಲಾಗನ್ನು ಆ ಪಾತ್ರ ಹೇಗೆ ಹೇಳುತ್ತದೆ, ಮತ್ತು ಏಕೆ ಹಾಗೆ ಹೇಳುತ್ತದೆ ಎನ್ನುವುದರಲ್ಲಿ. ಇದರಲ್ಲಿ ನಟನೊಬ್ಬನ ಜೀವನಾನುಭವವೂ ದೊಡ್ಡ ಪಾತ್ರ ವಹಿಸುತ್ತದೆ. ಒಂದು ಕತೆಯನ್ನೋ ಕಾದಂಬರಿಯನ್ನೋ ಸಣ್ಣ ವಯಸ್ಸಿನ್ಲಲಿ ಓದಿ ಮತ್ತೆ ಹಲವು ವರ್ಷಗಳಾದ ಮೇಲೆ ಓದಿದಾಗ ಮೊದಲು ಓದಿದಾಗ ತಪ್ಪಿ ಹೋಗಿದ್ದ ಅಥವಾ ಅನುಭವಕ್ಕೆ ನಿಲುಕದ ವಿವರಗಳು ಗಮನ ಸೆಳೆಯುವಂತೆ ಇದು. ನಟನ ಜೀವನಾನುಭವ, ಜೀವನ ದೃಷ್ಟಿ, ನಟನ ಸ್ವಭಾವ ಇವೆಲ್ಲ  ಅಂಶಗಳು ಒಂದು ಡೈಲಾಗನ್ನು ಆ ಪಾತ್ರ ಹಾಗೆ ಏಕೆ ಹೇಳಿತು ಎನ್ನುವುದನ್ನು ನಿರ್ಧರಿಸುತ್ತದೆ. ನಾನು ಜ್ಯೂಲಿಯೆಟ್‌ ಪಾತ್ರ ಮಾಡಿದಾಗ ೨೦ ವರ್ಷದವಳಿದ್ದೆ. ನಾಟಕ ನೋಡಿದ ವಿದೇಶೀ ನಟಿಯೊಬ್ಬರು ನನ್ನ ಬಳಿ ‘ನೀನು ಅದೃಷ್ಟವಂತೆ.  ಜ್ಯೂಲಿಯೆಟ್‌ ಪಾತ್ರದ ವಯಸ್ಸಿನ ಆಸುಪಾಸಿನ ವಯಸ್ಸಿನಲ್ಲಿಯೇ ನಿನಗೆ ಆ ಪಾತ್ರ ಮಾಡುವ ಅವಕಾಶ ಸಿಕ್ಕಿದೆ. ನಾನು ಜ್ಯೂಲಿಯೆಟ್‌ ಪಾತ್ರ ಮಾಡಿದಾಗ ಹೆಚ್ಚು ವಯಸ್ಸಾಗಿತ್ತು” ಎಂದರು. ಆಗ ನನಗೆ ಖುಶಿ ಆಯಿತು. ವಿಚಿತ್ರ ಎಂದರೆ ಅಂತಹ ಪಾತ್ರಗಳನ್ನು ಅಭಿನಯಿಸುವುದಕ್ಕೆ ಜೀವಾನಾನುಭವ ಬೇಕು. ಆದರೆ, ನಮಗೆ ಆ ಅನುಭವ ಬಂದಾಗ ಆ ಪಾತ್ರಗಳನ್ನು ಅಭಿನಯಿಸುವುದಕ್ಕೆ ಆಗುವುದಿಲ್ಲ!

ನಾಟಕ ಕಲಿಯುವಾಗ ಮೊದಲು ನಟನೆಯ ಕೌಶಲಗಳನ್ನು ಕಲಿಯಬೇಕಾಗುತ್ತದೆ. ಅಂದರೆ ರಂಗದ ಮೇಲೆ ನಿಲ್ಲವುದು, ಚಲಿಸುವುದು, ಸಂಭಾಷಣೆಗಳನ್ನು ಸ್ಪಷ್ಟವಾಗಿ ಉಚ್ಛರಿಸುವುದು, ಅದರ ಜೊತೆಗೆ ಪಾತ್ರವನ್ನೂ ಮಾಡಬೇಕಾಗುತ್ತದೆ. ಇವೆಲ್ಲವೂ ಒಂದು ತಿಂಗಳಿನಲ್ಲಿ ಆಗಬೇಕಾದ್ದರಿಂದ ನಿರ್ದೇಶಕರನ್ನು ಅನುಕರಣೆ ಮಾಡುವುದು ಅನಿವಾರ್ಯವಾಗುತ್ತದೆ. ಆಗ, ಒಂದು ಡೈಲಾಗ್‌ನ ಏರಿಳಿತಗಳನ್ನಷ್ಟೇ ಹೊಸ ನಟರು ಕಲಿತಿರುತ್ತಾರೆ. ಅದು ಪ್ರೇಕ್ಷಕರಿಗೆ ಇಷ್ಟವಾಗಿರುತ್ತದೆ ಕೂಡಾ. ಆದರೆ ನಿರಂತರ ಅಭ್ಯಾಸ, ನಟನೆಯ ಬಗ್ಗೆ, ಕಲೆಯ ಬಗ್ಗೆ ಓದು, ಚರ್ಚೆಗಳು, ನಾಟಕಗಳನ್ನು ನೋಡುವುದು ಇವೆಲ್ಲವೂ ಈ ಡೈಲಾಗ್‌ನ ಹಿಂದೆ ನಡೆಯುವ ಕೆಲಸವನ್ನು ಮನದಟ್ಟು ಮಾಡಿಸುತ್ತದೆ. ನಾವೇ ಮಾಡುವಾಗ ಕಲಿಯಲು ಆಗದ್ದನ್ನು  ಪ್ರದರ್ಶನವೊಂದನ್ನು ನೋಡುವಾಗ ಕಲಿಯಲು ಆಗುತ್ತದೆ..

ಕಲಿಕೆಯ ಪ್ರಾರಂಭದಲ್ಲಿ ಎಲ್ಲಾ ಕಲೆಗಳಲ್ಲೂ ಅದನ್ನು ಕಲಿಸುವವರನ್ನು ಅನುಕರಣೆ ಮಾಡುತ್ತಾರೆ. ಒಂದು ಹಂತದಲ್ಲಿ ಅದು ಅನಿವಾರ್ಯ ಕೂಡಾ. ನಂತರ ನಿಧಾನವಾಗಿ ಅದನ್ನು ಬಿಡಿಸಿಕೊಂಡು ಅಂದರೆ ಕೌಶಲವನ್ನು ಮೀರಿ, ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಒಂದು ಪಾತ್ರದ ನಡವಳಿಕೆ ಹೇಗಿರಬಹುದು ಎನ್ನುವುದರಿಂದ ನಟನೆಯ ಪ್ರಕ್ರಿಯೆಯನ್ನು ಪ್ರಾರಂಭ ಮಾಡಬೇಕಾಗುತ್ತದೆ. ಇಲ್ಲದಿದ್ದರೆ, ವರ್ಷಗಳ ಹಿಂದೆ ಅನುಕರಣೆ ಮಾಡಿದ ರೀತಿಯಲ್ಲೇ ಎಲ್ಲಾ ಸಂಭಾಷಣೆಗಳನ್ನೂ ಹೇಳುತ್ತೇವೆ. ಕಾಳಿದಾಸನಿಂದ ಹಿಡಿದು ಷೇಕ್ಸ್‌ಪಿಯರ್‌ ನವರೆಗೂ ಎಲ್ಲಾ ನಾಟಕದ ಎಲ್ಲಾ ಪಾತ್ರಗಳೂ ಒಂದೇ ರೀತಿ ಮಾತನಾಡುತ್ತವೆ. ನಿಜ ಜೀವನದಲ್ಲಿ ಮಾತನಾಡುವಂತೆ ರಂಗದ ಪಾತ್ರಗಳು ಮಾತನಾಡಲು ಆಗುವುದಿಲ್ಲ ಅದಕ್ಕೊಂದು ನಾಟಕೀಯತೆ ಇರಬೇಕಾಗುತ್ತದೆ. ಹಾಗೆಂದು ನಾಟಕೀಯವಾಗಿಯೂ ಸಂಭಾಷಣೆಗಳು ಇರಬಾರದು. ಇವೆರಡರ ಸಾಮರಸ್ಯ ಸಾಧಿಸುವುದೇ ಇದರ ಸವಾಲು.

ನಾಟಕದಲ್ಲಿ ಡೈಲಾಗ್‌ ಕಲಿಸುವುದು ಸಂಗೀತದಲ್ಲಿ ಸ್ವರಗಳನ್ನು ಕಲಿಸಿದಂತೆ. ಸ್ವರಗಳನ್ನು ಕಲಿತ ಮಾತ್ರಕ್ಕೆ ಸಂಗೀತ ಆಗುವುದಿಲ್ಲ. ರಾಗದ ಆರೋಹ ಅವರೋಹ ಕಲಿತ ಮಾತ್ರಕ್ಕೆ ರಾಗ ಆಗುವುದಿಲ್ಲ. ಡೈಲಾಗ್‌ ಎನ್ನುವುದು ನಟನಿಗೆ ಒಂದು ಏಣಿಯಿದ್ದಂತೆ. ಅದನ್ನು ಹತ್ತುತ್ತಾ ಹತ್ತುತ್ತಾ ಹೊಸ ಪ್ರಪಂಚವೊಂದು, ಭಾವಲೋಕವೊಂದು ಕಾಣುತ್ತದೆ. ಅದು ಬೇರೆ ಲೋಕಕ್ಕೆ ನಟರನ್ನೂ, ಪ್ರೇಕ್ಷಕರನ್ನೂ ಒಯ್ಯುತ್ತದೆ. ಡೈಲಾಗ್‌ ಎನ್ನುವುದು ಮಾತಿನಲ್ಲಿ ಹೇಳಲಾದದ್ದೇನನ್ನೋ, ಹೇಳಬೇಕಾದ್ದೇನನ್ನೋ ಮಾತಿನ ಮೂಲಕವೇ ಹೇಳಲು ಇರುವ ಸವಾಲು.

About The Author

ಚಿತ್ರಾ ವೆಂಕಟರಾಜು

ಚಿತ್ರಾ ವೆಂಕಟರಾಜು, ಚಾಮರಾಜನಗರದವರು. ನಟಿ. ಕಳೆದ ೧೮ ವರ್ಷಗಳಿಂದ ಸರ್ಕಾರಿ ಪ್ರೌಢಶಾಲೆಯಲ್ಲಿ ರಂಗಶಿಕ್ಷಣಶಿಕ್ಷಕಿಯಾಗಿಕೆಲಸ ನಿರ್ವಹಿಸುತ್ತಿದ್ದಾರೆ. ನೀನಾಸಮ್ರಂಗಶಿಕ್ಷಣ ಕೇಂದ್ರದಿಂದ ರಂಗಶಿಕ್ಷಣ ದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಚಾಮರಾಜನಗರದಶಾಂತಲಾ ಕಲಾವಿದರುʼ ತಂಡದಲ್ಲಿ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಕಲಾಶಿಕ್ಷಣ, ಸಾಹಿತ್ಯ, ಸಂಗೀತ, ನೃತ್ಯ, ಸಿನೆಮಾದಲ್ಲಿ ಆಸಕ್ತಿ. ಇವರು ಅಭಿನಯಿಸಿದ ಅಮೃತಾ ಪ್ರೀತಂ ಅವರ ಬದುಕನ್ನು ಆಧರಿಸಿದ ಏಕವ್ಯಕ್ತಿ ರಂಗಪ್ರಯೋಗ “ಮೈ ತೆನ್ನು ಫಿರ್ಮಿಲಾಂಗಿ" ಹಲವಾರು ಪ್ರದರ್ಶನಗಳನ್ನು ಕಂಡಿದೆ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ