ಬಹುಶಃ ಕತೆಗಳ ಅವಶ್ಯಕತೆಯಿಲ್ಲ ಆ ವನಸಿರಿಗೆ. ಜೀವಂತ ಕತೆ ಹೊತ್ತು ಓಡಾಡುವ ಅದೆಷ್ಟು ಜನ ಇಲ್ಲೊಮ್ಮೆ ಬಂದು ತಮ್ಮ ಜೋಡಿ ಹೆಜ್ಜೆಗಳ ಗುರುತು ಮಾಡಿ ಹೋಗಿದ್ದರೋ… ಕತೆಗಳು ನಮಗೆ ಬೇಕು. ನಮ್ಮೊಳಗಿನ ಕತೆಗಿಂತ ಭಿನ್ನವಾದ ಕತೆಯ ಕುರಿತಾದ ಹುಚ್ಚು ಕೂತೂಹಲವನ್ನ ತಣಿಸಿಕೊಳ್ಳಲಿಕ್ಕಾಗಿ… ಸುಳ್ಳೇ ಆದರೂ ನಂಬಲು ಸಿದ್ಧರಿರುತ್ತೇವಲ್ಲ ಹೇಗಿದ್ದರೂ… ಕತೆ ಕಟ್ಟುವುದರಲ್ಲಿ ನಿಸ್ಸೀಮರು ನಾವು. ಅದರಿಂದ ಯಾರಿಗಾದರೂ ತೊಂದರೆಯಾಗಬಹುದು, ನೋವಾಗಬಹುದೆಂದೂ ಲೆಕ್ಕಿಸಲಾರೆವು. ತಿಳಿದೂ ತಡೆಯಲಾರೆವು.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ
ನಿನಗೊಂದು ಕತೆ ಹೇಳಲಾ? ನಾವು ಸುತ್ತಾಡಿರುವ ಅದೇ ನಂದಿ ತಪ್ಪಲಿನ ಒಂದು ಕತೆ.. ಸುಂದರ ನವಿರಾದ ಅಂತೆಲ್ಲ ಹೇಳಬಹುದಾದರೂ ಹಾಗೆಲ್ಲ ಸಧ್ಯಕ್ಕೆ ಹೇಳಲು ಹೋಗುವುದಿಲ್ಲ. ಇರಲಿ; ಈಗಲೇ ಎಲ್ಲ ಹೇಳಿ ಬಿಟ್ಟರೆ ಸ್ವಾರಸ್ಯ ಉಳಿಯುವುದಾದರೂ ಹೇಗೆ ಅಲ್ಲವಾ… ಆದರೆ ನಾವು ಬಹುಶಃ ಅದೇ ವಂಶದ ಮುಂದುವರಿಕೆ ಎಂದು ಮಾತ್ರ ಮನವರಿಕೆಯಾಗದಿದ್ದರೆ ಕೇಳು…
ಅದು ಟಿಪ್ಪುವಿನ ಕಾಲ. ಅದೇ ತಾನೆ ನಂದಿಯ ಮೇಲೆ ಹಿಡಿತ ಸಾಧಿಸಿದ್ದ ಟಿಪ್ಪು ಸುಲ್ತಾನ್, ಗಂಗರ ಕಾಲದಲ್ಲಿ ಕಟ್ಟಲಾಗಿದ್ದ ಕೋಟೆಯನ್ನು ಇನ್ನಷ್ಟು ಬಲಪಡಿಸಿ, ಅಲ್ಲೊಂದು ಅರಮನೆಯನ್ನೂ ಕಟ್ಟಿಸಿದ್ದನಂತೆ. ಈಗ ಟಿಪ್ಪು ಡ್ರಾಪ್ ಅಂತಲೇ ಪ್ರಸಿದ್ಧವಾಗಿರುವ ಆ ಪ್ರಪಾತವಿರುವ ಜಾಗವನ್ನು ಮೊದಲ ಬಾರಿಗೆ ಟಿಪ್ಪು ಕಂಡಾಗ ಅವನಿಗೆ ಏನೋ ಹೊಳೆದಂತಾಯಿತಂತೆ. ಅಪರಾಧ ಸಾಬೀತಾಗಿ ಮರಣದಂಡನೆಗೆ ಗುರಿಯಾದ ಕೈದಿಗಳನ್ನು ಅಲ್ಲಿಂದ ಕೆಳಗೆ ತಳ್ಳಿಸುವ ಆಲೋಚನೆ ಬಂದಿತಂತೆ. ಅದರ ಪ್ರಯೋಗವಾಗಬೇಕಿತ್ತಷ್ಟೇ… ಆ ವಿಚಾರ ರಾಜ್ಯದ ತುಂಬೆಲ್ಲ ಹರಡಿ ಎಲ್ಲರೂ ನಡುಗತೊಡಗಿದ್ದರು. ಆ ಪ್ರಪಾತವಾದರೂ ಎಂಥದ್ದು! ಬಿದ್ದವರ ಹೆಣವಿರಲಿ, ಒಂದು ಸಣ್ಣ ಮೂಳೆ ಸಹ ಸಿಗುವುದು ಕಷ್ಟ, ಅಂತಹ ಪ್ರಪಾತವದು. ನಂದಿಯ ಸೊಬಗನ್ನು ನೋಡಲು ಬಂದವರಿಗೆ ಮನೋಲ್ಲಾಸದ ಜೊತೆಗೇ ಟಿಪ್ಪು ಡ್ರಾಪಿನ ಭವಿಷ್ಯದ ಆತಂಕವೂ ಶುರುವಾಗಿಬಿಡುತ್ತಿತ್ತು. ಎಲ್ಲರಿಗೂ ಒಂದೇ ಭಯ. ಎಲ್ಲಾದರೂ ಏನಾದರೂ ತಪ್ಪಾಗಿಬಿಟ್ಟರೆ?! ತಮಗೇನಾದರೂ ಶಿಕ್ಷೆಯಾಗಿಬಿಟ್ಟರೆ?! ಈ ಡ್ರಾಪಿನಿಂದ ತಳ್ಳಲ್ಪಟ್ಟರೆ?! ಅದೆಂತಹ ಅವ್ಯಕ್ತ ಭಯ ಅದು… ಈ ಸುಂದರ ಬೆಟ್ಟದ ಮೇಲೆ ಬೆಳ್ಳಂ ಬೆಳಗ್ಗೆ ಅದೇ ತಾನೆ ಹುಟ್ಟುತ್ತಿರುವ ಸೂರ್ಯನ ಮೊದಲ ಕಿರಣವೊಂದು, ಪುಟ್ಟ ಎಳೆ ಗರಿಕೆಯ ಮೊದಲ ಚಿಗುರೆಲೆಯ ಮೇಲೆ ಮಗುವಿನ ಗುಲಾಬಿ ತುಟಿಗಳ ಮೇಲೆ ಉಳಿದ ತಾಯ ಮೊಲೆ ಹಾಲಿನಂತೆ ಹೊಳೆಯುತ್ತಾ ಕೂತಿರುವ ಮಂಜಿನ ಹನಿಯನ್ನು ಮುತ್ತಿಡುವ ಮೋಹಕವನ್ನು ಕಣ್ತುಂಬಿಕೊಳ್ಳುವುದು ಎಂಥ ಸುಖ… ಆಹಾ… ಛೇ… ಆದರೆ ಟಿಪ್ಪುವಿಗೆ ಸುಖಾಸುಮ್ಮನೆ ಬಂದ ಈ ಐಡಿಯಾದಿಂದಾಗಿ ಜನ ಅವ್ಯಕ್ತ ಭಯದ ದಣಪೆಯನ್ನು ದಾಟಲು ಅಂಜುವಂತಾಗಿತ್ತು. ಅಂತಹ ಸಂದರ್ಭದಲ್ಲಿಯೇ ವಿಚಿತ್ರ ಘಟನೆಯೊಂದು ನಡೆದುಹೋಯಿತು.
ಅದು ಪಿನಾಕಿನಿಯ ದಡ… ಅವಳು ಮೈತುಂಬಿ ಹರಿಯುತ್ತಿದ್ದಳು. ನದಿಯ ಈ ಬದಿ ಮೇಖಲೆ ಬಟ್ಟೆ ಒಗೆಯುತ್ತಿದ್ದಳು. ಅತ್ತ ಆ ಬದಿ ದನ ಮೇಯಿಸುತ್ತಿದ್ದ ಶೃಂಗ. ಇವರಿಬ್ಬರನ್ನೂ ಒಂದು ಮಾಡಿ ಆಟ ನೋಡುವ ಹುಕಿ ಹುಟ್ಟಿರಬೇಕು ಪಿನಾಕಿನಿಗೆ. ಅವಳ ಹೃದಯವನ್ನು ಜೋಪಾನವಾಗಿ ಕಾಪಾಡುತ್ತಿದ್ದ ಅವಳ ರವಿಕೆಯನ್ನು ಸೆಳೆದೊಯ್ಯತೊಡಗಿದಳು. ತನ್ನ ರವಿಕೆಗಾಗಿ ಮೇಖಲ ಬೊಬ್ಬೆಯಿಡತೊಡಗಿದಳು. ಇದನ್ನೆಲ್ಲ ಅಚಾನಕ್ ನೋಡುತ್ತಿದ್ದ ಶೃಂಗ ಒಂದೇ ಏಟಿಗೆ ನದಿಗೆ ಹಾರಿ ಅವಳ ರವಿಕೆಯನ್ನು ಅವಳಿಗೆ ತಂದುಕೊಟ್ಟಿದ್ದ. ಇದು ಅವರ ಮೊದಲ ಭೇಟಿ. ಎಷ್ಟೋ ಭೇಟಿಗಳಿಗೆ ನಾಂದಿ ಹಾಡಿದ ಭೇಟಿ. ಪಿನಾಕಿನಿಯ ಶ್ರಮ ವ್ಯರ್ಥವಾಗಲಿಲ್ಲ. ಮುಂದೆ ಅವರಿಬ್ಬರೂ ಪ್ರೇಮಿಗಳಾಗಿಬಿಟ್ಟರು. ಏಳೇಳು ಜನ್ಮಗಳ ಕನಸುಗಳ ಕಟ್ಟುತ್ತಾ ಇಹದ ಪರಿವೆಯನ್ನು ಕಳೆದುಕೊಂಡರು. ಅದ್ಯಾವ ಪರಿ ಹಚ್ಚಿಕೊಂಡುಬಿಟ್ಟರು ಎಂದರೆ ಯಾರಾದರೂ ಊಹಿಸಲೂ ಸಾಧ್ಯವಿರಲಿಲ್ಲ. ಅಷ್ಟು ಗಾಢ ಪ್ರೇಮವದು. ಸಾವಿರ ಟಿಪ್ಪುಡ್ರಾಪುಗಳಿದ್ದರೂ ಭಯ ಪಡಲಾರದ ಮನಸ್ಥಿತಿ ಅದು…
ಇಬ್ಬರೂ ಪರಸ್ಪರ ದ್ವೇಷಿಸುತ್ತಿದ್ದ ಕುಟುಂಬಗಳಿಗೆ ಸೇರಿದವರು, ಅನ್ಯ ಕೋಮಿನವರು, ಅಲ್ಲದೇ ಇಬ್ಬರದೂ ಬೇರೆ ಬೇರೆ ಜಾತಿ. ಅವ ಗಂಡು, ಇವಳು ಹೆಣ್ಣು! ಹೇಗೆ ಸಾಧ್ಯ ಹೇಳಿ! ಜಾತಿಯೇ ಬೇರೆ ಅಂದ ಮೇಲೆ ಯಾರೂ ಪ್ರೀತಿಸಲೇ ಬಾರದು, ಮದುವೆಯಾಗಲೇ ಬಾರದು ಅಲ್ಲವಾ…! ಇದು ಒಂದಷ್ಟು ಹೊತ್ತು ನನ್ನ ಯೋಚನಾ ಶಕ್ತಿಯ ಬೇರನ್ನೇ ಅಲುಗಿಸಿತು. ಆದರೆ ಪ್ರೀತಿಗೆ ಯಾವ ಭೇದದ ಅರಿವೂ ಇರುವುದಿಲ್ಲ. ಅದು ಹುಟ್ಟಬೇಕೆನಿಸಿದಾಗ ಹುಟ್ಟುತ್ತದೆ ಅಷ್ಟೇ. ಯಾರ ಅನುಮತಿಯ ಅಗತ್ಯ ಅದಕ್ಕಿಲ್ಲ. ಎರೆಡು ಮುಗ್ಧ, ನಿಷ್ಕಲ್ಮಷ ಮನಸುಗಳು ಇದ್ದರೆ ಸಾಕು; ಪ್ರೀತಿಯ ಸಸಿ ಬೆಳೆಯಲಿಕ್ಕೆ.
ಹಾಗೇ ಈ ಮೇಖಲಾ ಮತ್ತೆ ಶೃಂಗ ಇಬ್ಬರೂ ಒಬ್ಬರನ್ನೊಬ್ಬರು ಪಿನಾಕಿನಿಯ ಎರೆಡು ದಂಡೆಗಳನ್ನು ಕೂಡಿಸುವಂತೆ ಒಂದಾಗಿ ಹೋದರಂತೆ. ಆದರೆ ವಿಷಯ ತಿಳಿದು ಎರೆಡೂ ಕುಟುಂಬಗಳೂ ವಿರೋಧಿಸಿದರಂತೆ. ಬೇರೆ ಮಾಡಲು ನೋಡಿದರಂತೆ. ಆದರೆ ಅವರಿಬ್ಬರ ಅನುರಕ್ತಿ ಎಲ್ಲರನ್ನೂ ದಾರಿಗೆ ತಂದಿತಂತೆ. ಕೊನೆಗೆ ಅವರಿಬ್ಬರೂ ಒಂದಾಗಿ ಬಾಳಲಿಲ್ಲ…
ಹೌದು… ದಿಗ್ಭ್ರಮೆಯಾಯಿತಾ?! ಕೆಲವೊಮ್ಮೆ ಇಬ್ಬರನ್ನು ಒಂದಾಗಿಸಲು ಇಡೀ ಪ್ರಕೃತಿಯೇ ಪಣತೊಡುತ್ತದಂತೆ. ಅದೇ ರೀತಿ ಇಬ್ಬರನ್ನು ಬೇರ್ಪಡಿಸಲು, ಪ್ರಕೃತಿಯೇ ಮುನಿದು ದಂಡೆತ್ತಿ ಬರುತ್ತದಂತೆ. ನಾವು ಸಾಧಾರಣ ಮನುಷ್ಯರು… ಎಷ್ಟು ಮಾತ್ರದವರು ಹೇಳು… ತಡೆಯಲು…
ಒಂದು ದಿನ ಇದೇ ನಂದಿಯ ಮೇಲೆ ಟಿಪ್ಪು ಡ್ರಾಪಿನ ಬಳಿ ಶೃಂಗ ಮೇಖಲೆಗಾಗಿ ಕಾಯುತ್ತಾ ನಿಂತಿದ್ದನಂತೆ. ಸೂರ್ಯ ಪಶ್ಚಿಮದಲ್ಲಿ ಮುಳುಗುತ್ತಿದ್ದ. ದೇವರ ಮನೆಯ ಎಲ್ಲ ಕುಂಕುಮವನ್ನು ಕದ್ದು ಚೆಲ್ಲಾಡಿದಂತೆ ಬಾನ್ ಕೆಂಪಾಗಿತ್ತು. ಇಡೀ ಪಶ್ಚಿಮದ ಆಕಾಶವನ್ನೆಲ್ಲಾ ಕೆಂಪು ಮತ್ತು ಅದರಿಂದ ಹುಟ್ಟಿದ ಎಲ್ಲ ಮಿಶ್ರ ಬಣ್ಣಗಳ ಓಕುಳಿಯಾಡಿ, ರಂಗೇರಿಸಿ, ಮುಳುಗಲು ಧಾವಿಸತೊಡಗಿದ್ದ ಸೂರ್ಯ. ಮುಂದೆ ನಿಂತಿರುವವರು ಕಾಣದಷ್ಟು ಮಬ್ಬು ಕವಿಯತೊಡಗಿತ್ತು. ಅಲ್ಲೆಲ್ಲೋ ಮೇಖಲೆ ಬಂದರೂ ಶೃಂಗನಿಗೆ ತಿಳಿಯುವಂತಿರಲಿಲ್ಲ. ಮೇಖಲೆ ಅಲ್ಲಿಗೆ ಬಂದರೂ ಶೃಂಗನನ್ನು ಹುಡುಕುವುದು ಸಾಧ್ಯವಿರಲಿಲ್ಲ. ಇವ ಅಲ್ಲಿ ಕಾಯುತ್ತಿದ್ದುದನ್ನು ಯಾರೋ ಕೆಲವರು ಕಂಡಿದ್ದರಂತೆ. ಮೇಖಲೆ ಬೆಟ್ಟ ಹತ್ತುತ್ತಿರುವುದನ್ನೂ ಕೆಲವರು ಕಂಡಿದ್ದರಂತೆ. ಅಷ್ಟೇ…
ನಂದಿಯ ಸೊಬಗನ್ನು ನೋಡಲು ಬಂದವರಿಗೆ ಮನೋಲ್ಲಾಸದ ಜೊತೆಗೇ ಟಿಪ್ಪು ಡ್ರಾಪಿನ ಭವಿಷ್ಯದ ಆತಂಕವೂ ಶುರುವಾಗಿಬಿಡುತ್ತಿತ್ತು. ಎಲ್ಲರಿಗೂ ಒಂದೇ ಭಯ. ಎಲ್ಲಾದರೂ ಏನಾದರೂ ತಪ್ಪಾಗಿಬಿಟ್ಟರೆ?! ತಮಗೇನಾದರೂ ಶಿಕ್ಷೆಯಾಗಿಬಿಟ್ಟರೆ?! ಈ ಡ್ರಾಪಿನಿಂದ ತಳ್ಳಲ್ಪಟ್ಟರೆ?! ಅದೆಂತಹ ಅವ್ಯಕ್ತ ಭಯ ಅದು…
ಮರುದಿನ ಬೆಳಗೆ ಟಿಪ್ಪುಡ್ರಾಪಿನ ಕೆಳಗೆ ಇಬ್ಬರೂ ಹೆಣವಾಗಿ ಬಿದ್ದಿದ್ದರಂತೆ. ಪಾಪಿಗಳ ಪ್ರಾಣ ತೆಗೆಯಲು ಕಟ್ಟಿಸಿದ್ದ ಡ್ರಾಪಿನ ಕೆಳಗೆ ಈ ನಿಷ್ಪಾಪಿ ಪ್ರೇಮಿಗಳು ಸತ್ತು ಬಿದ್ದಿರುವುದನ್ನು ಕಂಡು ಜನ ಮುಮ್ಮಲ ಮರುಗಿದರಂತೆ… ಆದರೆ ಯಾಕಾಗಿ, ಯಾರಿಂದಾಗಿ ಸತ್ತರು ಎಂಬುದು ಮಾತ್ರ ಇಂದಿಗೂ ನಿಗೂಢ… ಯಾರೆಂದರೆ ಯಾರಿಗೂ ಗೊತ್ತಿಲ್ಲ. ಹುಡುಕ ಹೊರಟವರಿಗೆ ಕತೆಗಳು ಮಾತ್ರ ಸಿಕ್ಕಿವೆ. ಅದೂ ನೂರಾರು ಕತೆಗಳು. ಯಾವುದನ್ನಂತ, ಎಷ್ಟಂತ ನಂಬುವುದು?! ತಿಳಿಯುವುದಿಲ್ಲ…
ಅಂತಹ ಅದೆಷ್ಟೋ ದಂತ ಕತೆಗಳನ್ನು ನಾವು ಕೇಳಿರುತ್ತೇವೆ. ನಂದಿಯ ಒಡಲೂ ಅಂತಹ ಕತೆಗಳಿಂದ ತುಂಬಿ ಹೋಗಿದೆ. ಆ ಸಾಲಿನಲ್ಲಿ ನನ್ನದೂ ಒಂದು ಕತೆ ಇರಲಿ ಎಂದು ಈ ಕತೆ ಕಟ್ಟಿದೆ. ಯಾವ ಮೇಖಲೆಯೋ, ಯಾವ ಶೃಂಗನೋ… ಎಲ್ಲ ಕತೆಯ ಪಾತ್ರಗಳಷ್ಟೇ. ನಿತ್ಯ ಪ್ರೇಮಿಗಳ ಮಧುರ ಸಲ್ಲಾಪಕ್ಕೆ ಸಾಕ್ಷಿಯಾಗುವ ನಂದಿಯ ವನಸಿರಿ, ಅದೆಷ್ಟು ಪ್ರೇಮದ ನವಿರು ಭಾವಗಳನ್ನು ಕಂಡು ಪುಳಕಿತಗೊಂಡು ಹಿತವಾಗಿ ಕಂಪಿಸಿದೆಯೋ…
ಬಹುಶಃ ಕತೆಗಳ ಅವಶ್ಯಕತೆಯಿಲ್ಲ ಆ ವನಸಿರಿಗೆ. ಜೀವಂತ ಕತೆ ಹೊತ್ತು ಓಡಾಡುವ ಅದೆಷ್ಟು ಜನ ಇಲ್ಲೊಮ್ಮೆ ಬಂದು ತಮ್ಮ ಜೋಡಿ ಹೆಜ್ಜೆಗಳ ಗುರುತು ಮಾಡಿ ಹೋಗಿದ್ದರೋ… ಕತೆಗಳು ನಮಗೆ ಬೇಕು. ನಮ್ಮೊಳಗಿನ ಕತೆಗಿಂತ ಭಿನ್ನವಾದ ಕತೆಯ ಕುರಿತಾದ ಹುಚ್ಚು ಕೂತೂಹಲವನ್ನ ತಣಿಸಿಕೊಳ್ಳಲಿಕ್ಕಾಗಿ… ಸುಳ್ಳೇ ಆದರೂ ನಂಬಲು ಸಿದ್ಧರಿರುತ್ತೇವಲ್ಲ ಹೇಗಿದ್ದರೂ… ಕತೆ ಕಟ್ಟುವುದರಲ್ಲಿ ನಿಸ್ಸೀಮರು ನಾವು. ಅದರಿಂದ ಯಾರಿಗಾದರೂ ತೊಂದರೆಯಾಗಬಹುದು, ನೋವಾಗಬಹುದೆಂದೂ ಲೆಕ್ಕಿಸಲಾರೆವು. ತಿಳಿದೂ ತಡೆಯಲಾರೆವು.
ಒಂದು ಮುಗ್ಧ ಹುಡುಗಿ. ಮುಗ್ಧೆ ಅಂದರೆ ಮುಗ್ಧೆ. ಪಾಪದವಳು. ಅದೇ ತಾನೆ ಮದುವೆಯಾಗಿತ್ತು. ಹಸಿ ಮೈ ಇನ್ನೂ ಆರಿರಲಿಲ್ಲ. ಅಂತಹ ಹುಡುಗಿಯ ಮೇಲೆ ಕತೆ ಕಟ್ಟುವ ಗಂಡಸೊಬ್ಬನ ದೃಷ್ಟಿ ಬೀಳಬೇಕೇ… ವರಸೆಯಲ್ಲಿ ದೊಡ್ಡಪ್ಪನಾಗಬೇಕಾದ ಆ ಮನುಷ್ಯ ಒಮ್ಮೆ ಆ ಹುಡುಗಿಯನ್ನು ಯಾರೋ ಮತ್ತೊಬ್ಬ ಹುಡುಗನ ಜೊತೆ ನೋಡಿದ್ದೇ ಅವಳ ಚಾರಿತ್ರ್ಯದ ಬಗ್ಗೆ ಕಲಾತ್ಮಕವಾಗಿ ಪ್ರಶ್ನೆ ರಚಿಸಿ ಎಲ್ಲರೆದುರೂ ತಂದಿಟ್ಟ. ಪರಿಣಾಮ ಆ ಹುಡುಗಿಯ ಚಾರಿತ್ರ್ಯವಧೆ ಮಾಡಲಾಯಿತು. ತವರಿಗೆ ಅಟ್ಟಲಾಯಿತು. ಮಾನಸಿಕವಾಗಿ ಜರ್ಜರಿತಗೊಳಿಸಲಾಯಿತು. ಅವಳೊಂದಿಗಿದ್ದ ಹುಡುಗ ಯಾರ ಕಣ್ಣಿಗೂ ಬೀಳದಂತೆ, ಯಾರ ಕೈಗೂ ಸಿಗದಂತೆ ಊರು ಬಿಟ್ಟು ಓಡಿಹೋದ. ಅವಳ ಗಂಡ ಅವಳ ಬೆನ್ನಿಗೆ ನಿಲ್ಲದೆ, ಈ ಎಲ್ಲ ಪ್ರತಿವಾದಿ ಗುಂಪಿನ ನಾಯಕನಾಗಿಬಿಟ್ಟ. ಅವಳ ನಾಲ್ಕೈದು ಜನ ಚಿಕ್ಕಮ್ಮ ದೊಡ್ಡಮ್ಮಂದಿರೂ ಅವಳನ್ನು ಬೈಯ್ಯುವುದರಲ್ಲಿ ಹಿಂದೆ ಬೀಳಲಿಲ್ಲ. ನಾನಾ ಕತೆಗಳು ಹುಟ್ಟಿಕೊಂಡವು. ಅವಳು ಮಾಡಿಲ್ಲದೆ ಇರುವುದನ್ನೂ ಇವರೆಲ್ಲ ಸೇರಿ ಸೃಷ್ಟಿಸಿದರು. ಆದರೂ ಅವರಿಗೆ ಸಮಾಧಾನವಾಗಲಿಲ್ಲ. ಅವಳ ವಿಧವೆ ತಾಯಿಯ ನಡತೆಯ ಬಗ್ಗೆಯೂ ಪ್ರಶ್ನಿಸಹತ್ತಿದರು. ಇದು ಮಾತ್ರ ಮುಗಿಲು ಮುಟ್ಟಿದಂತಿತ್ತು. ಆ ತಾಯಿ ಮಗಳು ಎಲ್ಲರಿಂದ ದೂರವಾಗಿಬಿಟ್ಟರು. ಎಲ್ಲ ತಣ್ಣಗಾದ ಮೇಲೆ ಜನ ಆ ಕತೆ ಕಟ್ಟಿದವನನ್ನು ಹುಗ್ಗಾ ಮುಗ್ಗಾ ಮಾತಿನ ಚಾಟಿಗಳಿಂದ ಹೊಡೆಯತೊಡಗಿದರು. ಕೊನೆಗೂ ಅವರಿಗೆಲ್ಲ ಬುದ್ಧಿ ಬಂತು. ಆ ಮುಗ್ಧ ಹುಡುಗಿ ಮತ್ತು ಅವಳ ತಾಯಿಯಲ್ಲಿ ಕ್ಷಮೆ ಕೇಳಿದರು. ಅವಳನ್ನು ಗೌರವದಿಂದ ಸೊಸೆಯಾಗಿ ಮನೆತುಂಬಿಸಿಕೊಂಡರು. ನಂತರ ಅವಳಿಗೊಂದು ಮುದ್ದಾದ ಮಗುವೂ ಆಯಿತು. ಅದನ್ನು ಪ್ರತಿ ಬಾರಿ ಎತ್ತಿ ಮುದ್ದಾಡುವಾಗಲೂ, ಜನ ಮಾತ್ರ ಅವಳ ಆ ಕತೆಯನ್ನು ನೆನಪಿಸಿಕೊಳ್ಳುವುದನ್ನು ಮಾತ್ರ ಮರೆಯುವುದಿಲ್ಲ. ಇದು ಹೀಗೆಯೇ ಗೊತ್ತಿಲ್ಲದವರಿಗೂ ಗೊತ್ತಾದದ್ದು… ನಾಲಿಗೆಯಿಂದ ನಾಲಿಗೆಗೆ…
ನಮಗೆ ಕತೆಗಳು ಬೇಕು. ರಕ್ತ ಮಾಂಸ ಕಿತ್ತು ಬರುವಷ್ಟು ಯಾರಿಗಾದರೂ ನೋವಾದರೂ ನಮಗದರ ಚಿಂತೆಯಿಲ್ಲ… ಇದು ಸತ್ಯ ಕಥೆ. ಆ ಮುಗ್ಧೆ ಈಗಲೂ ನಮ್ಮೊಂದಿಗೆ ಇದ್ದಾಳೆ. ಇಂದಿಗೂ ಭಾರವಾದ ತನ್ನ ಕತೆಯನ್ನು ಹೊತ್ತು ತಿರುಗುತ್ತಲೇ ಇದ್ದಾಳೆ…
ಬಾ… ಈಗ ನಾವು ನಮ್ಮೊಳಗಿನ ಅಪೂರ್ಣ ಕತೆಯನ್ನು ಪೂರ್ಣಗೊಳಿಸೋಣ. ಅದೃಷ್ಟವಿದ್ದರೆ ಯಾರದೋ ಕೈಯಲ್ಲಿ ದಂತಕತೆಯಾಗಬಹುದು ನಾವೂ ಸಹ.. ಅಲ್ಲವಾ…
ಕತೆ ಹೇಳುವೆ ನನ್ನ
ಕತೆ ಹೇಳುವೆ…
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ “ಮೌನ ತಂಬೂರಿ.”
ಈ ಕವನವು ಶ್ರೀ ಸಾಮಾನ್ಯರ ಮನಸ್ಥಿತಿಯನ್ನು ತಿಳಿಸುತ್ತದೆ.