ಆಗ ಹಳ್ಳಿಗಳಲ್ಲಿ ಅದ್ಯಾರು ಈ ಸುದ್ದಿ ಹರಿಸಿದರೋ ಗೊತ್ತಿಲ್ಲ. ರಾತ್ರಿ ವೇಳೆ ದೆವ್ವಗಳು ಬರುತ್ತವೆ, ಅದಕ್ಕೆ ಅವುಗಳ ಕಾಟದಿಂದ ಪಾರಾಗಲು ‘ನಾಳೆ ಬಾ’ ಎಂದು ಮನೆಯ ಮುಂಬಾಗಿಲ ಮೇಲೆ ನೀರಿನಲ್ಲಿ ಅದ್ದಿದ ಚಾಕ್ ಪೀಸ್‌ನಲ್ಲಿ ಬರೆದಿದ್ದರು. ನಾನೂ ಸಹ ನಮ್ಮ ಮನೆಯ ಮೇಲೂ ಹೀಗೆ ಬರೆದು ದೆವ್ವದ ಕಾಟದಿಂದ ಪಾರಾದೆ ಎಂದು ಖುಷಿಪಟ್ಟಿದ್ದೆ!!! ಅಷ್ಟಕ್ಕೂ ದೆವ್ವಗಳಿಗೆ ಓದೋಕೂ ಬರುತ್ತೆ ಅಂತಾ ಯಾರು ಹೇಳಿದ್ದರೋ ಗೊತ್ತಿಲ್ಲ. ಇದರ ಬಗ್ಗೆ ಚರ್ಚೆ ಮಾಡೋಕೆ ಈಗಿನಂತೆ ಆಗ ನ್ಯೂಸ್ ಚಾನೆಲ್‌ಗಳೂ ಇರಲಿಲ್ಲ!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಒಂಭತ್ತನೆಯ ಕಂತು ನಿಮ್ಮ ಓದಿಗೆ

ಅಜಾನುಬಾಹು‌, ಗುಂಗುರು ಕೂದಲು, ಕಂಚಿನ ಕಂಠ, ಶ್ವೇತ ವರ್ಣ ಹೊಂದಿದ್ದ ಲೋಕಪ್ಪ ಮೇಷ್ಟ್ರು ನಮಗೆ ಸಿಕ್ಕಿದ್ದು ನಮ್ಮ ಪಾಲಿನ ಸುಕೃತವೇ ಸರಿ. ಇವರು ಕೇವಲ ಪಾಠ ಮಾತ್ರವಲ್ಲ. ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ಕೊಡ್ತಿದ್ರು. ಚೆನ್ನಾಗಿ ಓದುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಒಂಬತ್ತಕ್ಕೆ ಬಂದು ನವೋದಯ ಕ್ಲಾಸ್ ಮಾಡ್ತಿದ್ರು. ನನಗೆ ಆಗ ನವೋದಯ ಪುಸ್ತಕ ಕೊಂಡುಕೊಳ್ಳೋಕೆ ಆಗಿರಲಿಲ್ಲ. ಬೇರೆಯವರ ಪುಸ್ತಕದಲ್ಲಿ ನೋಡಿಕೊಂಡು ಓದಿಕೊಳ್ಳುತ್ತಿದ್ದೆ. ಆಗ ಮನೆಯಲ್ಲಿ ಒಂದೊಮ್ಮೆ ಕರೆಂಟ್ ಕೈಕೊಟ್ಟಾಗ ಬುಡ್ಡಿ, ಲಾಟೀನ್ ಬೆಳಕಿನಲ್ಲಿ ಓದಿಕೊಳ್ಳುತ್ತಿದ್ದೆ. ಬುಡ್ಡಿ ಎಂದರೆ ಗಾಜಿನ ಬಾಟಲಿಯ ಮುಚ್ಚಳಕ್ಕೆ ಸೆಣಬಿನ‌ ದಾರ ಸಿಗಿಸಿಕೊಂಡು ಅದರಲ್ಲಿ ಸೀಮೆಎಣ್ಣೆ ಹಾಕಿಕೊಂಡು ಉಪಯೋಗಿಸುತ್ತಿದ್ದೆವು. ಆದರೆ ಇದರ ಬೆಳಕಿನಲ್ಲಿ ಓದಿಕೊಳ್ಳುವಾಗ ಹೊಗೆ ಹೆಚ್ಚು ಬರುತ್ತಿತ್ತು. ಲಾಟೀನ್‌ನಲ್ಲಿ‌ ಕಡಿಮೆ ಹೊಗೆ. ಈಗಿನಂತೆ ಆಗ ಸೋಲಾರ್ ಲೈಟ್, ಯೂಪಿಎಸ್ ವ್ಯವಸ್ಥೆ ಇರಲಿಲ್ಲ. ಮದುವೆ ಮನೆಗಳಲ್ಲಿ ಒಂದೊಮ್ಮೆ ಕರೆಂಟ್ ಹೋದಾಗ ಹೆಚ್ಚು ಬೆಳಕು ಬೀರುವ ಲಾಟೀನ್ ರೀತಿ ಇರುವ ಗ್ಯಾಸ್ ಲೈಟನ್ನು ಬಾಡಿಗೆಗೆ ತರಬೇಕಾಗಿತ್ತು.

ನಾವು ಐದನೇ ತರಗತಿಯಲ್ಲಿ ಓದುತ್ತಿದ್ದಾಗ ನಮಗೆ ಆಗ ಸಂತೆಬೆನ್ನೂರಿನಲ್ಲಿ‌ ನಡೆಯುತ್ತಿದ್ದ ಅಂತರ್ ಶಾಲಾ ಮಟ್ಟದ ಚರ್ಚಾ ಸ್ಪರ್ಧೆ ನಡೆಯುತ್ತಿತ್ತು. ಅಲ್ಲಿ ಕೊಟ್ಟ ವಿಷಯಕ್ಕೆ ಪರ ಮತ್ತು ವಿರೋಧ ಕುರಿತು ಮಾತನಾಡಲು ಲೋಕಪ್ಪ ಮೇಷ್ಟ್ರು ಅವರೇ ವಿಷಯವನ್ನು ಬರೆದುಕೊಟ್ಟು ತಯಾರಾಗಲು ತಿಳಿಸುತ್ತಿದ್ದರು. ಇದರ ಜೊತೆಗೆ ಆಂಗಿಕ ಅಭಿನಯ, ಧ್ವನಿಯ ಏರಿಳಿತ ಹೇಗಿರಬೇಕೆಂಬುದನ್ನು ತಿಳಿಸಿಕೊಡುತ್ತಿದ್ದರು. ವಿಷಯದ ಪರವಾಗಿ ಮಾತನಾಡಲು ನನ್ನನ್ನು ಹಾಗೂ ವಿರೋಧವಾಗಿ ಮಾತನಾಡಲು ಪ್ರದೀಪನನ್ನು ಆಯ್ಕೆ ಮಾಡಿಕೊಂಡರು. ಅಲ್ಲಿ ಒಟ್ಟು ಹತ್ತು ಬಹುಮಾನಗಳನ್ನಿಟ್ಟಿರುತ್ತಿದ್ದರು. ಪರವಾಗಿ ಹತ್ತು, ವಿರೋಧವಾಗಿ ಹತ್ತು ಬಹುಮಾನಗಳು. ಪರ ಮತ್ತು ವಿರೋಧ ಸ್ಪರ್ಧಿಗಳು ಮೊದಲ ಸ್ಥಾನಗಳನ್ನು ಅಲಂಕರಿಸಿದರೆ ಪಾಯಿಂಟ್‌ ಆಧಾರದ ಮೇಲೆ ಆ ಶಾಲೆಗೆ ಶೀಲ್ಡ್ ನ್ನು ಬಹುಮಾನವಾಗಿ‌ ಕೊಡುತ್ತಿದ್ದರು. ಮೂರು ವರ್ಷ ಯಾರು ಶೀಲ್ಡ್ ಗೆಲ್ಲುತ್ತಾರೋ ಆ ಶೀಲ್ಡನ್ನು ಅವರೇ ಇಟ್ಟುಕೊಳ್ಳಬಹುದಿತ್ತು. ನನಗೆ ಐದನೇ ತರಗತಿಯಲ್ಲಿ‌ ಏಳನೇ ಬಹುಮಾನವಾಗಿ ಚೊಂಬು ಸಿಕ್ಕಿತ್ತು! (ಚೊಂಬು ಅಂದ್ರೆ ಏನೂ ಇಲ್ಲ ಅಂತಲ್ಲ. ಸ್ಟೀಲಿನ ಚೊಂಬೇ ಬಹುಮಾನ) ಆಗ ನನಗೆ ಸಿಕ್ಕಾಪಟ್ಟೆ ಖುಷಿಯಾಗಿದ್ರೂ ಬೇರೆ ಬೇರೆ ಹುಡುಗರು ಚೊಂಬು ಹಿಡ್ಕೊಂಡು ಹೋಗು ಎಂದು ಅಣಕಿಸುತ್ತಿದ್ದರಿಂದ ಲೋಕಪ್ಪ ಮೇಷ್ಟ್ರಿಗೆ ಹೇಳಿದೆ. ಅವರು ಆ ಮಕ್ಕಳಿಗೆ ಹೊಡೆದರು. ಮನೆಯಲ್ಲೂ ಅಷ್ಟೇ. ಆ ಚೊಂಬನ್ನು ನೋಡಿದಾಗಲೆಲ್ಲ ‘ನಾ ಗೆದ್ದುಕೊಂಡು ಬಂದ ಚೊಂಬು’ ಎಂದು ಹೆಮ್ಮೆಯಿಂದ ಮನಸಲ್ಲೇ ಖುಷಿಪಡುತ್ತಿದ್ದೆನು.

ಆ ವರ್ಷ ವಿಜ್ಞಾನಕ್ಕೆ ನಮಗೆ ಸಿದ್ದಪ್ಪ ಮೇಷ್ಟ್ರು ಬರುತ್ತಿದ್ದರು. ನಮಗೆ ತಿಂಗಳಿಗೊಂದು ಪರೀಕ್ಷೆ ಕೊಡುತ್ತಿದ್ದರು. ಹೀಗೆ ಒಮ್ಮೆ ಪರೀಕ್ಷೆ ಕೊಟ್ಟಾಗ ನಮಗೆ ‘ಗಾಳಿಗೆ ತೂಕವಿದೆ ಎಂದು ತೋರಿಸುವ ಪ್ರಯೋಗ ವಿವರಿಸಿ’ ಎಂಬ ಪ್ರಶ್ನೆಗೆ ಉತ್ತರಿಸಲು ಬರಲಿಲ್ಲ. ಆಗ ನಾನು ಪರ್ಮಿ, ಪ್ರದೀಪ ಏನು ಮಾಡಿದ್ವಿ ಎಂದರೆ ತರಗತಿಯ ಕಾರಿಡಾರಿನಲ್ಲಿ ಕುಳಿತು ಮೂರೂ ಜನ ಸಿಗ್ನಲ್ ಕೊಟ್ಟುಕೊಂಡು ‘ಮೂತ್ರ ವಿಸರ್ಜನೆಗೆ ಹೋಗ್ಬೇಕು’ ಅಂತಾ ಮೇಷ್ಟ್ರಿಗೆ ಕೇಳ್ಕೊಂಡು ಹೋಗಿ, ಅವರಿಗೆ ಗೊತ್ತಾಗದಂತೆ ಪುಸ್ತಕ ನೋಡಿ ಉತ್ತರವನ್ನು ಕೈಲಿ‌ ಬರೆದುಕೊಂಡು ಬಂದು ಆ ಪ್ರಶ್ನೆಗೆ ಉತ್ತರಿಸಿದ್ದೆವು!

ಆಗ ಇದ್ದದ್ದು ಯಾವ ಸ್ಕೀಮೋ ಗೊತ್ತಿಲ್ಲ, ನಮ್ಮ ಶಾಲೆಯ ಚಿಕ್ಕ ಮಕ್ಕಳಿಗೆ ಕುಡಿಯಲು‌ ಹಾಲನ್ನು ಕೊಡಲು ‘ಆಲಮೀಯಣ್ಣ’ ಎಂಬ ವ್ಯಕ್ತಿ ಬರುತ್ತಿದ್ದನು. ಮಕ್ಕಳಿಗೆ ಬಿಸಿಹಾಲನ್ನು ಅವನೇ ಕಾಸಿಕೊಂಡು ಬಂದು ಒಬ್ಬರಿಗೆ ಒಂದು ಲೋಟದಂತೆ ಕೊಡುತ್ತಿದ್ದನು. ಮಕ್ಕಳು ಹಾಲು ಕುಡಿದ ಲೋಟವನ್ನು ಅವನೇ ತೊಳೆಯಬೇಕಾಗಿತ್ತು. ಆದರೆ ಅವನು ಲೋಟ ತೊಳೆಯದೇ ದೊಡ್ಡ ಕ್ಲಾಸಿನವರಾದ ನಾನು ಹಾಗೂ ಮತ್ತೊಂದಿಬ್ಬರಿಂದಲೇ ಲೋಟ ತೊಳೆಯಿಸಿ ನಮಗೆ ಕುಡಿಯಲು ಹಾಲು ಕೊಡುತ್ತಿದ್ದನು. ನಾವು ಹಾಲಿನ ಆಸೆಯಿಂದ ಆಲಮೀಯಣ್ಣ ಬಂದ ಕೂಡಲೇ ಓಡಿ ಹೋಗಿ ಲೋಟ ತೊಳೆಯುತ್ತಿದ್ದೆವು. ಬರುಬರುತ್ತಾ ಇದಕ್ಕೂ ಸ್ಪರ್ಧೆ ಶುರುವಾಯ್ತು. ಆಗ ನಾವೇ ಅದರಿಂದ ಹಿಂದೆ ಸರಿದೆವು.

ನಮ್ಮ ಶಾಲೆಯಲ್ಲಿ ಸಣ್ಣೀರ ಎಂಬುವವನು ದೆವ್ವಗಳ ಬಗ್ಗೆ ರೋಚಕವಾಗಿ ಕಥೆ ಹೇಳುತ್ತಿದ್ದ. ಸುಂಟರಗಾಳಿ ಶುರುವಾದಾಗ ಅವನು ಗಾಳಿ ಕಡೆಗೆ ತೋರಿಸುತ್ತ ಅಲ್ಲಿ ‘ದೆವ್ವ ಬಂದಿದೆ. ಸುಂಟರಗಾಳಿ ಮಧ್ಯದಲ್ಲಿ ಎಲೆ ಅಡಿಕೆ ಸುಣ್ಣ ಇಟ್ಟರೆ ದೆವ್ವ ಕಾಣುತ್ತೆ’ ಎಂದು ಹೇಳಿದ್ದ. ಅವರಜ್ಜ ಅದನ್ನು ನೋಡಿದ್ದಾಗಿ ನಂಬಿಸಿದ್ದ. ಮನೆಗೆ ಬಂದು ನನ್ನಜ್ಜನ ಹತ್ತಿರ ಇದರ ಬಗ್ಗೆ ವಿಚಾರಿಸಿದಾಗ ಅವರೂ ಸಹ ದೆವ್ವದ ಇರುವಿಕೆಯ ಬಗ್ಗೆ ತಿಳಿಸಿದರು. ಭತ್ತದ ರಾಶಿ ಕಾಯೋಕೆ ಹೋದಾಗ ಇದು ಅನುಭವಕ್ಕೆ ಬಂದಿತ್ತು ಎಂದೂ ತಿಳಿಸಿದರು. ನನಗೆ ಆಗ ಸಿಕ್ಕಾಪಟ್ಟೆ ಭಯ ಶುರುವಾಗಿತ್ತು. ಇದೇ ಸಮಯಕ್ಕೆ ಟೀವಿಯಲ್ಲಿ ‘ಗುಡ್ಡದ ಭೂತ’ ಎಂಬ ಧಾರವಾಹಿ ಬರುತ್ತಿತ್ತು. “ಡೆನ್ನಾನ ಡೆನ್ನಾನ ಡೆನ್ನಾನ ಡೆನ್ನಾನ ಡೆನ್ನಾನ ಡೆನ್ನಾನೀಯೇ.. ತುಳುನಾಡ ಸೀಮೇಡು ಕಮರುಟ್ಟು ಗ್ರಾಮೋಡು ಗುಡ್ಡೇದ ಭೂತವುಂಡು ಹೇ…..” ಎಂಬ ಶೀರ್ಷಿಕೆ ಇರುವ ಈ ಧಾರವಾಹಿಯನ್ನು ತಪ್ಪದೇ ನೋಡುತ್ತಿದ್ದೆ. ಸಂಜೆ 7:30 ಗೆ ಬರುತ್ತಿದ್ದ ಈ ಧಾರವಾಹಿ ನೋಡಿದ ನಂತರ ಮನೆಗೆ ಬಂದು ವಿಪರೀತ ಭಯ ಬೀಳುತ್ತಿದ್ದೆ. ಮನೆಯ ಅಟ್ಟವನ್ನು ಹತ್ತೋಕೂ ಭಯ ಆಗುತ್ತಿತ್ತು. ಇದೇ ನೆಪ ಮಾಡ್ಕೊಂಡು ನನಗೆ ಮನೆಯಲ್ಲಿದ್ದ ನನ್ನಣ್ಣ, ಅಕ್ಕ ದೆವ್ವದ ಬಗ್ಗೆ ಹೆದರಿಸುತ್ತಿದ್ದರು. ಆಗ ನಾನು ಒಬ್ಬನೇ ಮಲಗಲು ಭಯ ಪಟ್ಟು ಅಜ್ಜನ ಪಕ್ಕದಲ್ಲಿ ಮಲಗುತ್ತಿದ್ದೆನು!

ಆಗ ಹಳ್ಳಿಗಳಲ್ಲಿ ಅದ್ಯಾರು ಈ ಸುದ್ದಿ ಹರಿಸಿದರೋ ಗೊತ್ತಿಲ್ಲ. ರಾತ್ರಿ ವೇಳೆ ದೆವ್ವಗಳು ಬರುತ್ತವೆ, ಅದಕ್ಕೆ ಅವುಗಳ ಕಾಟದಿಂದ ಪಾರಾಗಲು ‘ನಾಳೆ ಬಾ’ ಎಂದು ಮನೆಯ ಮುಂಬಾಗಿಲ ಮೇಲೆ ನೀರಿನಲ್ಲಿ ಅದ್ದಿದ ಚಾಕ್ ಪೀಸ್‌ನಲ್ಲಿ ಬರೆದಿದ್ದರು. ನಾನೂ ಸಹ ನಮ್ಮ ಮನೆಯ ಮೇಲೂ ಹೀಗೆ ಬರೆದು ದೆವ್ವದ ಕಾಟದಿಂದ ಪಾರಾದೆ ಎಂದು ಖುಷಿಪಟ್ಟಿದ್ದೆ!!! ಅಷ್ಟಕ್ಕೂ ದೆವ್ವಗಳಿಗೆ ಓದೋಕೂ ಬರುತ್ತೆ ಅಂತಾ ಯಾರು ಹೇಳಿದ್ದರೋ ಗೊತ್ತಿಲ್ಲ. ಇದರ ಬಗ್ಗೆ ಚರ್ಚೆ ಮಾಡೋಕೆ ಈಗಿನಂತೆ ಆಗ ನ್ಯೂಸ್ ಚಾನೆಲ್‌ಗಳೂ ಇರಲಿಲ್ಲ! ಆಗ ಅನಂತನಾಗ್ ನಟಿಸಿದ್ದ ಚಲನಚಿತ್ರದ ‘ತಂಗಾಳಿಯಲ್ಲಿ ನಾನು ತೇಲಿ ಬಂದೆ’ ಎಂಬ ಗೀತೆಯನ್ನು ನೋಡಿದಾಗಲೂ, ದೆವ್ವದ ಚಲನಚಿತ್ರಗಳನ್ನು ನೋಡಿದಾಗಲೂ ಸಿಕ್ಕಾಪಟ್ಟೆ ಭಯಪಡುತ್ತಿದ್ದೆ.

ಆಗ ನಾನು ಪರ್ಮಿ, ಪ್ರದೀಪ ಏನು ಮಾಡಿದ್ವಿ ಎಂದರೆ ತರಗತಿಯ ಕಾರಿಡಾರಿನಲ್ಲಿ ಕುಳಿತು ಮೂರೂ ಜನ ಸಿಗ್ನಲ್ ಕೊಟ್ಟುಕೊಂಡು ‘ಮೂತ್ರ ವಿಸರ್ಜನೆಗೆ ಹೋಗ್ಬೇಕು’ ಅಂತಾ ಮೇಷ್ಟ್ರಿಗೆ ಕೇಳ್ಕೊಂಡು ಹೋಗಿ, ಅವರಿಗೆ ಗೊತ್ತಾಗದಂತೆ ಪುಸ್ತಕ ನೋಡಿ ಉತ್ತರವನ್ನು ಕೈಲಿ‌ ಬರೆದುಕೊಂಡು ಬಂದು ಆ ಪ್ರಶ್ನೆಗೆ ಉತ್ತರಿಸಿದ್ದೆವು!

ಕೆಲವರಂತೂ ಮೂರು ರಸ್ತೆ ಕೂಡುವ ಜಾಗದಲ್ಲಿ ನಿಂಬೆಹಣ್ಣು, ಕುಂಕುಮ, ಮೊರ, ಅರಿಷಿಣ ಹೀಗೆ ಹಾಕಿರುತ್ತಿದ್ದುದನ್ನು ನೋಡಿ ಇದರ ಬಗ್ಗೆ ವಿಚಾರಿಸಿ ತುಂಬಾ ಭಯಪಡುತ್ತಿದ್ದೆ. ಮನಸ್ಸಲ್ಲಿ ಇವುಗಳ ಇರುವಿಕೆಯ ಬಗ್ಗೆ ಪ್ರಶ್ನೆ ಏಳುತ್ತಿತ್ತಾದರೂ ಹೆದರಿಕೊಂಡು ಸುಮ್ಮನಾಗುತ್ತಿದ್ದೆ!

ಹಿಂದೆ ನಾವು ಇನ್ನೊಬ್ಬರಿಗೆ ವಿಷಯ ತಿಳಿಸಲು ಪತ್ರಗಳನ್ನು ಬರೆಯುತ್ತಿದ್ದ ಕಾಲ. ಸಾಮಾನ್ಯವಾಗಿ ಬಹುತೇಕರು ಪೋಸ್ಟ್ ಕಾರ್ಡ್, ಇನ್ಲ್ಯಾಂಡ್ ಲೆಟರ್ ಕಾರ್ಡ್ ಬಳಸುತ್ತಿದ್ದರು. ಆಗ ಒಂದು ಪತ್ರವು ಭಾರಿ ಸುದ್ದಿ ಮಾಡಿತ್ತು. ಆ ಪತ್ರದಲ್ಲಿ ಹೀಗೆ ಬರೆಯಲಾಗುತ್ತಿತ್ತು. ಅದರ ಸಾರಾಂಶವನ್ನಷ್ಟೇ ನಾನಿಲ್ಲಿ ಹೇಳುತ್ತಿದ್ದೇನೆ. ಒಬ್ಬನಿಗೆ ಈ ರೀತಿಯ ಕಾರ್ಡ್ ಸಿಕ್ಕಿತಂತೆ. ಅದರಲ್ಲಿ ದೇವರ ಬಗ್ಗೆ ಇರುವ ಒಂದು ಪತ್ರವಿದು. ನಿಮಗೆ ಈ ಪತ್ರ ಸಿಕ್ಕ ತಕ್ಷಣ ಇದೇ ರೀತಿ 12 ಜನರಿಗೆ ಪತ್ರ ಬರೆಯಿರಿ ಎಂದು ಇತ್ತಂತೆ. ಅವನು ಬರೆಯದೇ ನೆಗ್ಲೆಕ್ಟ್ ಮಾಡಿದ್ದಕ್ಕೆ ಅವನು ಸತ್ತು ಹೋದನಂತೆ! ಇದೇ ರೀತಿ ಪತ್ರ ಬರೆದವನ ಅದೃಷ್ಟ ಬದಲಾಯಿತಂತೆ! ಎಂಬ ಸಾರಾಂಶವಿರುವ ಪತ್ರ. ನನ್ನ ಗ್ರಹಚಾರಕ್ಕೆ ಈ ಪತ್ರವೂ ನನಗೆ ಸಿಕ್ಕಿ ನಾನೂ ಸಹ 12 ಪೋಸ್ಟ್ ಕಾರ್ಡ್‌ಗಳನ್ನು ತೆಗೆದುಕೊಂಡು ನನ್ನ ಪರಿಚಿತರಿಗೆ ಬರೆದಿದ್ದೆ!!

ನಮಗೆ ಶಾಲಾ ಕೆಲಸ ಎಂದರೆ ತುಂಬಾ ಖುಷಿ ಇರುತ್ತಿತ್ತು. ಶಾಲೆಯ ತರಗತಿಗೆ ಚಕ್ಕರ್ ಹೊಡೆಯಬಹುದು ಎಂಬ ಆಸೆಯೂ ಇದಕ್ಕೆ ಕಾರಣವಾಗಿರಬಹುದು. ಚಾನೆಲ್‌ನ ನೀರನ್ನು ತಿರಿವಿಕೊಂಡು ಬಂದು ಶಾಲಾ ಗಿಡಗಳಿಗೆ ಹಾಕುವುದು, ಶಾಲಾ ಮೈದಾನದ ಕಸ ಹೊಡೆಯುವುದು, ಸ್ವಾತಂತ್ರ್ಯೋತ್ಸವದಲ್ಲಿ ಸಂಜೆವರೆಗೂ ಶಾಲೆಯಲ್ಲಿದ್ದು ಧ್ವಜ ಇಳಿಸಿ ಮನೆಗೆ ಹೋಗುವುದು… ಹೀಗೆ ಶಾಲೆಯಲ್ಲಿ ಕೊಡುತ್ತಿದ್ದ ಯಾವುದೇ ಕೆಲಸಗಳನ್ನೂ ಮಾಡದೇ ಬಿಡುತ್ತಿರಲಿಲ್ಲ. ಹೀಗೆ ಒಮ್ಮೆ ನಮ್ಮ ಮೇಷ್ಟ್ರು ನಮಗೆ ಸ್ವಾತಂತ್ರ್ಯೋತ್ಸವದಂದು ಧ್ವಜ ಕಾಯಲು ತಿಳಿಸಿ ಮನೆಗೆ ಹೋದರು. ನಾವು ಶಾಲೆಯಲ್ಲಿ ಆಗ ಕೊಡುತ್ತಿದ್ದ ಫುಡ್ ಪ್ಯಾಕೇಟ್ಟಿನ ಚೀಲಗಳನ್ನು ನಾವು ನೋಡಿಕೊಂಡಿದ್ದೆವು. ಇದು ಹಿಟ್ಟಿನಂತೆ ಇದ್ದು ತಿನ್ನಲು ಬಹಳ ರುಚಿಯಾಗಿರುತ್ತಿತ್ತು. ಇದನ್ನು ಮಕ್ಕಳಿಗೆ ಮನೆಗೆ ತೆಗೆದುಕೊಂಡು ಹೋಗಲು ಕೊಡುತ್ತಿದ್ದರು. ನಾವು ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಇದ್ದ ಆ ಚೀಲದ ಪ್ಯಾಕೇಟ್‌ಗಳನ್ನು ಒಡೆದು ತಿನ್ನಲು ಶುರು ಮಾಡಿದೆವು. ಈ ರುಚಿಗೆ ಸೋತ ಮನ ಪದೇ ಪದೇ ಆ ಚೀಲಗಳನ್ನು ಹೊಡೆಯುವಂತೆ ಮಾಡಿತ್ತು. ಒಬ್ಬರು ಹೊರಗೆ ನೋಡುತ್ತ ಇರುವುದು, ಮತ್ತೊಬ್ಬರು ತಿನ್ನುತ್ತಾ ಇರುವುದು ಮಾಡುತ್ತಿದ್ದೆವು. ಆದರೆ ಈ ಬಾರಿ ಎಲ್ಲರೂ ಬಾಯಿಯಲ್ಲಿ ತುಂಬಿಕೊಂಡು ಕುಳಿತಿದ್ದೇವೆ. ಅದು ತುಂಬಾ ನೀರು ಬಯಸುವುದರಿಂದ ಬಾಯಲ್ಲಿನ ಜೊಲ್ಲು ರಸವೆಲ್ಲಾ ಖಾಲಿಯಾಗಿ ಬಾಯೇ ಬಿಡಲಾಗುತ್ತಿರಲಿಲ್ಲ. ನುಂಗಲೂ ಆಗುತ್ತಿರಲಿಲ್ಲ. ಆದರೂ ದುರಾಸೆಯ ಮನ ಬಾಯಲ್ಲಿ ತುಂಬಿಕೊಂಡು ಬಿಟ್ಟಿದೆ. ಇದೇ ಸಮಯಕ್ಕೆ ದೇವೇಂದ್ರಪ್ಪ ಮೇಷ್ಟ್ರು ಶಾಲೆಗೆ ಬಂದಿದಾರೆ. ಬಂದವರು ಸೀದಾ ಹೆಡ್ಮಾಷ್ಟ್ರ ರೂಮಿಗೆ ಬಂದು ನಮ್ಮನ್ನು ನೋಡಿದಾಗ ನಾವು ತುಂಬಾ ಹೆದರಿದ್ದೆವು. ಆಗ ಅವರು ನಮ್ಮ ಸ್ಥಿತಿ ನೋಡಿ ಅವರು ‘ಏನ್ರೋ ಇದು ನಿಮ್ಮವತಾರ?’ ಎಂದು ಕೇಳ್ದಾಗ ನಮಗಂತೂ ತುಂಬಾ ಭಯವಾಗಿತ್ತು. ಆದರೆ ಅವರೇ ನಮಗೆ ನೀರು ತಂದುಕೊಟ್ಟು ‘ಅಲ್ರೋ ತಿನ್ಬೇಕು ಅಂದಿದ್ರೆ ಪಾಕೆಟ್ ಕೊಟ್ಟು ಹೋಗಿರುತ್ತಿದ್ದೆ, ಕದಿಯೋದು ಒಳ್ಳೇ ಲಕ್ಷಣವಲ್ಲ ಕಣ್ರೋ’ ಎಂದರು. ನಮಗೆ ಮಾಡಿದ ತಪ್ಪಿಗೆ ಅವರು ಹೊಡೆಯುತ್ತಾರೇನೋ ಅಂದುಕೊಂಡಿದ್ವಿ, ಆದರೆ ಅವರು ಹಾಗೆ ಮಾಡದೇ ಇದ್ದುದು ನಮಗೆ ಆಶ್ಚರ್ಯವಾಗಿ ಇನ್ಮುಂದೆ ಈ ರೀತಿಯ ತಪ್ಪು ಮಾಡೋಲ್ಲ ಎಂದು ಹೇಳಿದಾಗ ಅವರೂ ನಮ್ಮ ತಪ್ಪನ್ನು ಮನ್ನಿಸಿದರು. ಆದರೆ ಹುಡುಗ ಬುದ್ಧಿ ಬಿಡಬೇಕಲ್ಲ!

ನಮ್ಮ ಮೇಷ್ಟ್ರುಗಳೆಲ್ಲಾ ಸಂಜೆಯಾದಾಗ ಎಲ್ರೂ ಹೆಚ್.ಎಂ. ರೂಮಲ್ಲಿ ಕುಳಿತು ಬೋಂಡಾ ಮೆಣಸಿನಕಾಯಿ ಹೋಟೆಲ್‌ನಿಂದ ತರಿಸಿಕೊಂಡು ತಿಂದು ಹೋಗುತ್ತಿದ್ದರು. ಅವರಿಗೆ ನಾವೇ ತಂದುಕೊಡುತ್ತಿದ್ದೆವು. ಆಗ ದಿನಕ್ಕೊಬ್ಬ ಮೇಷ್ಟ್ರು ನಮಗೆ ತಿನ್ನೋಕೆ ಒಂದು ಬೋಂಡಾ ಕೊಡುತ್ತಿದ್ದರು. ಆದರೆ ಒಂದಿಬ್ಬರು ಮಾತ್ರ ಕೊಡುತ್ತಿರಲಿಲ್ಲ. ಆಗ ನಮಗೆ ಮನಸ್ಸಲ್ಲಿ ಇವರ ಬಗ್ಗೆ ಚೂರು ಅಸಹನೆ ಇರುತ್ತಿತ್ತು. ಆಗ ಬೋಂಡಾ ತರೋಕೆ ಹೋದಾಗ ನಮ್ಮ ಜೊತೆ ಬಂದವರು ಏನ್ಮಾಡ್ತಿದ್ರು ಅಂದ್ರೆ, ಅಂಗಡಿಯವನು ಕೊಟ್ಟ ಬೋಂಡಾದಲ್ಲಿ ಚೂರು ಚೋರೆ ಕಿತ್ಕೊಂಡು ತಿನ್ತಾ ಬರುತ್ತಿದ್ದರು. ಕೊನೆಗೆ ಬೋಂಡಾ ಹಂಚಬೇಕಾದ್ರೆ ಕಿತ್ತು ತಿಂದ ಬೋಂಡಾವನ್ನು ಆ ಮೇಷ್ಟ್ರುಗಳಿಗೆ ಇಡುತ್ತಿದ್ದರು! ಅಷ್ಟೇ ಅಲ್ಲದೇ ಅವರಿಗೆ ಕೊಡಬೇಕಾದ ಕುಡಿಯೋ ಟೀ ಲೋಟದಲ್ಲೂ ಸಹ ಚೂರು ಕುಡಿದು ಅವರಿಗೆ ಕೊಡುತ್ತಿದ್ದರು. ಅವರು ‘ಏನ್ರೋ ಇದು ಟೀ ಕಡಿಮೆಯಾಗಿದೆ’ ಎಂದಾಗ ‘ಇಲ್ಲಾ ಸಾರ್ ಎಲ್ಲರಿಗೂ ಅರ್ಧ ಟೀ ಸರ್ ತರಿಸಿದ್ರು ಅದ್ಕೆ ಕಡಿಮೆ ಆಗಿದೆ ಅಂತಾ ಸುಳ್ಳು ಹೇಳುತ್ತಿದ್ದರು!’ ಈಗ ಇವನ್ನೆಲ್ಲಾ ನೆನಪಿಸಿಕೊಂಡರೆ ನಾವು ಮಾಡಿದ್ದು ತಪ್ಪು ಅನಿಸುತ್ತೆ. ಈ ಬಗ್ಗೆ ಅವರ ಬಳಿ ಹಂಚಿಕೊಳ್ಳೋಣವೆಂದರೂ ಆ ಮೇಷ್ಟ್ರುಗಳೂ ಈಗ ಸ್ವರ್ಗಸ್ತರಾಗಿದ್ದಾರೆ!!

ಜೀವನದಲ್ಲಿ ನಾವು ಗೊತ್ತಿದ್ದೂ ಗೊತ್ತಿಲ್ಲದೆಯೋ ತಪ್ಪು ಮಾಡಿರಬಹುದು. ತಪ್ಪು ತಪ್ಪೇ.. ಆದರೆ ‘ಪಶ್ಚಾತ್ತಾಪಕ್ಕಿಂತ ಪ್ರಾಯಶ್ಚಿತ್ತ ಮತ್ತೊಂದಿಲ್ಲ’ ಎಂದು ನೀವು ಆಗಾಗ್ಗೆ ಹೇಳುತ್ತಿದ್ದ ಮಾತು ಮಾತ್ರ ನೆನಪಿಗೆ ಬಂದು ಸಮಾಧಾನ ತರಿಸುತ್ತೆ!!