ವಿಜ್ಞಾನದ ಆಳವಾದ ಜ್ಞಾನದ ಜೊತೆಗೆ ಸಮಾಜವಿಜ್ಞಾನ, ಅರ್ಥವಿಜ್ಞಾನ, ಮನೋವಿಜ್ಞಾನ, ಪರಿಸರವಿಜ್ಞಾನ, ಕೃಷಿವಿಜ್ಞಾನ, ಭಾಷಾವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಕೂಡ ಅವರ ತಿಳಿವಳಿಕೆ ಮೆಚ್ಚುವಂಥದ್ದು. ಈ ಎಲ್ಲ ಕ್ಷೇತ್ರಗಳ ಜ್ಞಾನದ ಮೂಲಕ ವಿಜ್ಞಾನದ ಜೊತೆಗೆ ಮಾನವನ ಅಭ್ಯುದಯದ ಸಂಬಂಧ ಕಲ್ಪಿಸುವಿಕೆ ಅವರಿಗೆ ಪ್ರಿಯವಾದುದು. ಹೀಗೆ ಹತ್ತಾರು ಆಯಾಮಗಳ ಮೂಲಕ ಅವರು ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಾರೆ. ಇದಕ್ಕೆಲ್ಲ ಬೇಕಾದ ಸಂತನ ತಾಳ್ಮೆಯನ್ನೂ ಅವರು ಹೊಂದಿದ್ದಾರೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 72ನೇ ಕಂತು ನಿಮ್ಮ ಓದಿಗೆ

ಪ್ರಜಾವಾಣಿ ಮತ್ತು ಸುಧಾ ವಾರಪತ್ರಿಕೆಯಲ್ಲಿ ನಾಗೇಶ ಹೆಗಡೆಯವರು ಆತ್ಮೀಯ ಸಹೋದ್ಯೋಗಿಯಾಗಿದ್ದರು. ಅವರಿಗೆ ಪತ್ರಿಕೋದ್ಯಮ ಒಂದು ತಪಸ್ಸಾಗಿತ್ತು. ಅವರ ಜೊತೆ ಕೆಲಸ ಮಾಡುವುದೇ ನನ್ನಂಥವರ ಸುಯೋಗವಾಗಿತ್ತು.

ಅವರು ಸದಾ ಕ್ರಿಯಾಶೀಲರಾಗಿರುತ್ತಿದ್ದರು. (ಈಗೂ ಹಾಗೇ ಇದ್ದಾರೆ.) ವೈಜ್ಞಾನಿಕ ಲೇಖನಗಳನ್ನು ಸೃಜನಶೀಲ ಭಾಷೆಯಲ್ಲಿ ಬರೆಯುವ ಅತಿವಿರಳ ಲೇಖಕರಲ್ಲಿ ಅವರೊಬ್ಬರಾಗಿದ್ದಾರೆ. ವಿಜ್ಞಾನವನ್ನು ಚಿತ್ರಕ ಶೈಲಿಯಲ್ಲಿ ಮನಂಬುಗುವಂತೆ ತಿಳಿಸುವುದನ್ನು ಅವರು ಕರಗತ ಮಾಡಿಕೊಂಡಿದ್ದು ಹೆಮ್ಮೆಯ ವಿಷಯ.

ನಾಗೇಶ ಹೆಗಡೆಯವರು ಭಾಷಾಜ್ಞಾನದ ಮೂಲಕ ರೂಪಕಗಳನ್ನು ಸೃಷ್ಟಿಸುತ್ತ ವಿಜ್ಞಾನದ ಗಹನ ವಿಚಾರಗಳನ್ನು ಓದುಗರಿಗೆ ತಿಳಿಯುವಂತೆ ಮಾಡುವಲ್ಲಿ ನಿಷ್ಣಾತರು. ಅವರ ಪ್ರತಿಭೆ ಮತ್ತು ಅದಕ್ಕೆ ತಕ್ಕ ಶಬ್ದಸಂಪತ್ತು ಆಶ್ಚರ್ಯ ಹುಟ್ಟಿಸುವಂಥದ್ದು. ವಿಜ್ಞಾನದ ವಿವರಣೆಗೆ ಅವಶ್ಯವಾದ ಅನೇಕ ಶಬ್ದಗಳನ್ನು ಕನ್ನಡದಲ್ಲಿ ಸೃಷ್ಟಿಸುವ ಸಾಮರ್ಥ್ಯ ಅವರಿಗಿದೆ.

ವಿಜ್ಞಾನದ ಆಳವಾದ ಜ್ಞಾನದ ಜೊತೆಗೆ ಸಮಾಜವಿಜ್ಞಾನ, ಅರ್ಥವಿಜ್ಞಾನ, ಮನೋವಿಜ್ಞಾನ, ಪರಿಸರವಿಜ್ಞಾನ, ಕೃಷಿವಿಜ್ಞಾನ, ಭಾಷಾವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಕೂಡ ಅವರ ತಿಳಿವಳಿಕೆ ಮೆಚ್ಚುವಂಥದ್ದು. ಈ ಎಲ್ಲ ಕ್ಷೇತ್ರಗಳ ಜ್ಞಾನದ ಮೂಲಕ ವಿಜ್ಞಾನದ ಜೊತೆಗೆ ಮಾನವನ ಅಭ್ಯುದಯದ ಸಂಬಂಧ ಕಲ್ಪಿಸುವಿಕೆ ಅವರಿಗೆ ಪ್ರಿಯವಾದುದು. ಹೀಗೆ ಹತ್ತಾರು ಆಯಾಮಗಳ ಮೂಲಕ ಅವರು ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಾರೆ. ಇದಕ್ಕೆಲ್ಲ ಬೇಕಾದ ಸಂತನ ತಾಳ್ಮೆಯನ್ನೂ ಅವರು ಹೊಂದಿದ್ದಾರೆ.

ಜನವಿರೋಧಿ ರಾಜಕೀಯ ತಂತ್ರಗಾರಿಕೆಯನ್ನು ಬಯಲಿಗೆಳೆಯುವ ಧೈರ್ಯವನ್ನು ಕೂಡ ಅವರು ಹೊಂದಿದ್ದಾರೆ. ಗೋಮಾಂಸ ರಾಜಕೀಯಗೊಳಿಸುವುದನ್ನು ಅವರು ತಮ್ಮದೇ ಆದ ಸೃಜನಾತ್ಮಕ ಶೈಲಿಯ ಬರವಣಿಗೆಯೊಂದಿಗೆ ವಿರೋಧಿಸಿದ್ದಾರೆ. ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ಪರಿಸರ ಹದಗೆಡಿಸುವ ಯೋಜನೆಗಳನ್ನು ತರುವಾಗಲೆಲ್ಲ ಅವರ ವೈಚಾರಿಕ ಪ್ರತಿಭಟನೆ ಬರಹದ ಮೂಲಕ ಸದಾ ಇರುವಂಥದ್ದು.

ಕೈಗಾ ಅಣುವಿದ್ಯುತ್ ಸ್ಥಾವರಗಳಿಂದಾಗುವ ಅನಾಹುತಗಳ ಬಗ್ಗೆ ಅವರು ಆರಂಭದಲ್ಲೇ ಅರಿವು ಮೂಡಿಸಿದ್ದು ಶ್ಲಾಘನೀಯವಾಗಿದೆ. ಪ್ರಜಾವಾಣಿ ಬಾತ್ಮೀದಾರನಾಗಿ ನನಗೆ 1991ರಲ್ಲಿ ಕಾರವಾರಕ್ಕೆ ವರ್ಗವಾಯಿತು. ನಾನು ಕಮ್ಯುನಿಜ಼ಂ ಒಲವಿನ ವ್ಯಕ್ತಿಯಾದ ಕಾರಣ ಕೈಗಾ ಕುರಿತು ಸಕಾರಾತ್ಮಕವಾಗಿ ಬರೆಯಬಹುದು ಎಂದು ಅವರಿಗೆ ಅನಿಸಿತ್ತು. ಆದರೆ ನಾನು ಕೈಗಾ ವಿರೋಧಿ ನಿಲವು ತಾಳಿದ್ದು ಅವರಿಗೆ ಸಮಾಧಾನ ತಂದಿತು. ಆ ಸಂದರ್ಭದಲ್ಲಿ ಕೈಗಾ ಅಣುವಿದ್ಯುತ್ ಸ್ಥಾವರಗಳ ನಿರ್ಮಾಣ ಯೋಜನೆ ಪ್ರಾರಂಭವಾಗಿತ್ತು. ಹೀಗಾಗಿ ಪರಿಸರವಾದಿಗಳ ಕೈಗಾ ವಿರೋಧಿ ಚಟುವಟಿಕೆಗಳು ನಡೆಯುತ್ತಿದ್ದವು. ನಾನು ಕೈಗಾ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಬರೆದು, ಕೊನೆಯಲ್ಲಿ, ‘ಇಂಥ ಯೋಜನೆಗಳು ಎಲ್ಲ ಆಧುನಿಕ ಸೌಲಭ್ಯಗಳನ್ನು ಬಯಸುವವರಿಗೆ ಅಂಜುವುದಿಲ್ಲ. ಅವು ಅಂಜುವುದು ಹಾಲಕ್ಕಿ ಗೌಡರಂಥ ನಿಸರ್ಗದ ಜೊತೆ ಒಂದಾಗಿ ಬದುಕುವ ಲಂಗೋಟಿ ಜನಸಾಮಾನ್ಯರಿಗೆ ಮಾತ್ರ’ ಎಂದು ಬರೆದ ನೆನಪು. ಅದನ್ನು ಓದಿ ಹೆಗಡೆಯವರು ಖುಷಿಪಟ್ಟಿದ್ದರು.

ಕೈಗಾ ಅಣುವಿದ್ಯುತ್ ಉತ್ಪಾದನೆ ಪ್ರಾರಂಭವಾದ ನಂತರ ಆ ಪರಿಸರದ ಹಳ್ಳಿಗಳ ಜನರ ಮೇಲೆ ಅಣುವಿಕಿರಣದ ಪ್ರಭಾವ ಆಗುವ ಬಗ್ಗೆ ಅವರು ಎಚ್ಚರಿಸಿದ್ದರು. ಪ್ರಾರಂಭಕ್ಕೆ ಮೊದಲು ಆ ಎಲ್ಲ ಹಳ್ಳಿಗಳ ಜನರ ಆರೋಗ್ಯ ಸಮೀಕ್ಷೆ ಮಾಡಬೇಕು ಎಂಬುದು ಅವರ ಒತ್ತಾಸೆಯಾಗಿತ್ತು. ನಾನು 1995ರ ವರೆಗೆ ಕಾರವಾರದಲ್ಲಿ ಇರುವವರೆಗೂ ಅದಾಗಲಿಲ್ಲ. ನಂತರ ಕೂಡ ಆಗಿದ್ದು ಗೊತ್ತಾಗಲಿಲ್ಲ.

ಯಾಣ ಪರಿಸರದಲ್ಲಿ ಸುಣ್ಣದ ಕಲ್ಲಿನ ಕಾರ್ಖಾನೆಗೆ ಉತ್ತರ ಕನ್ನಡ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಅನುಮತಿ ನೀಡಿದ್ದರ ಕುರಿತು ನಾನು ಬರೆದ ಸುದ್ದಿ ಪ್ರಜಾವಾಣಿಯಲ್ಲಿ ಪ್ರಕಟವಾಯಿತು. ನೈಸರ್ಗಿಕವಾಗಿ ಸುಣ್ಣದ ಕಲ್ಲಿನಿಂದ ನಿರ್ಮಾಣವಾಗಿರುವ ಪ್ರಸಿದ್ಧ ಯಾಣ ಕ್ಷೇತ್ರಕ್ಕೆ ಇಂಥ ಕಾರ್ಖಾನೆಗಳಿಂದ ಹಾನಿಯಾಗುವ ಕುರಿತು ಆ ಸುದ್ದಿಯಲ್ಲಿ ವಿವರಿಸಿದ್ದೆ. ಮದನಗೋಪಾಲ ಅವರು ಆಗ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಇದನ್ನು ಓದಿದ ಅವರು ಕಾರವಾರಕ್ಕೆ ಧಾವಿಸಿ, ಯಾಣಕ್ಕೆ ಹೋಗಿ ಪರಶೀಲನೆ ಮಾಡಿ ಸಂಜೆ ಐದು ಗಂಟೆಗೆ ಕಾರವಾರ ಕಚೇರಿಗೆ ಬಂದು ಪರವಾನಗಿ ನೀಡಿದ ಅಧಿಕಾರಿಯನ್ನು ಅಮಾನತುಗೊಳಿಸಿದರು. ಆಗ ಸುಧಾ ವಾರಪತ್ರಿಕೆ ಮುಖ್ಯಸ್ಥರಾಗಿದ್ದ ನಾಗೇಶ ಹೆಗಡೆಯವರು ಯಾಣ ಕುರಿತು ಲೇಖನ ಬರೆಯಲು ತಿಳಿಸಿದರು. ಆ ಲೇಖನಕ್ಕೆ ಅವರು ದೀರ್ಘವಾಗಿ ಬರೆದ ಇಂಟ್ರೋ ನೋಡಿ ನನಗೆ ರೋಮಾಂಚನವಾಯಿತು. ಕನ್ನಡ ಭಾಷಾಸಾಮರ್ಥ್ಯಕ್ಕೆ ಅದೊಂದು ಉದಾಹರಣೆಯಾಗಿತ್ತು. ಅವರು ಬಳಸಿದ ಶಬ್ದಗಳೆಲ್ಲ ನನ್ನ ಮನಸ್ಸಿನಲ್ಲಿ ವಜ್ರದ ಹರಳುಗಳಂತೆ ಹೊಳೆಯತೊಡಗಿದವು. ಶಂಕರ ಮೊಕಾಶಿ ಪುಣೇಕರ ಅವರ ‘ಅವಧೇಶ್ವರಿ’ ಕಾದಂಬರಿಯಲ್ಲಿ ಬರುವ ವಜ್ರದ ಅಂಗಡಿಯಲ್ಲಿನ ಸಂಭಾಷಣೆಯಲ್ಲಿ ನಾನು ಕನ್ನಡದ ಭಾಷಾ ಸಾಮರ್ಥ್ಯವನ್ನು ವಿಭಿನ್ನವಾಗಿ ಅನುಭವಿಸಿದ್ದೆ. ಆ ಸಂಭಾಷಣೆಯ ಪುಟದಷ್ಟೇ ನನಗೆ ಖುಷಿ ಕೊಟ್ಟಿದ್ದೆಂದರೆ ಹೆಗಡೆಯವರು ನನ್ನ ಲೇಖನಕ್ಕೆ ಬರೆದ ಆ ದೀರ್ಘ ಇಂಟ್ರೋ!

ತಮ್ಮ ಸಹೋದ್ಯೋಗಿಗಳಿಗೆ ಅವರು ಭಾಷೆಯ ಬಗ್ಗೆ ನಗುನಗುತಾ ಸದಾ ನೆನಪಿನಲ್ಲಿ ಉಳಿಯುವಂತೆ ತಿಳಿಸುವ ರೀತಿ ಆಪ್ಯಾಯಮಾನವಾಗಿದೆ. “ಜನಾರ್ಧನ” ಎಂದು ಯಾರಾದರೂ ತಪ್ಪು ಬರೆದರೆ, “ಜನಾ ಆರ್ ದನ ಅಂದರೆ ಜನಾರ್ದನ” ಎಂದು ಹೇಳುತ್ತಿದ್ದರು. “ಎಷ್ಟೇ ಭಾರಿ ಡಿಕ್ಕಿ ಹೊಡೆದರೂ ಢಿಕ್ಕಿಯಾಗುವುದಿಲ್ಲ” ಎನ್ನುತ್ತಿದ್ದರು. “ರೋದನ ಎಷ್ಟೇ ಜೋರಾಗಿದ್ದರೂ ರೋಧನ ಆಗುವುದಿಲ್ಲ” ಎಂದು ತಮಾಷೆ ಮಾಡುತ್ತಲೇ ತಪ್ಪುಗಳನ್ನು ತಿದ್ದುತ್ತಿದ್ದರು. ಇಂಥ ಅದೆಷ್ಟೋ ಘಟನೆಗಳಿವೆ. ನಾನು ಅವರ ಫೇಸ್ ಬುಕ್ ಲೇಖನಗಳನ್ನು ಈಗಲೂ ಬಹಳ ಲಕ್ಷಗೊಟ್ಟು ಓದುವೆ. ಎಂದಾದರೊಮ್ಮೆ, ಒನ್ಸ್ ಇನ್ ಎ ಬ್ಲೂ ಮೂನ್ ಅಂತಾರಲ್ಲಾ ಹಾಗೆ ತಪ್ಪು ಕಂಡುಬಂದರೆ ಕೂಡಲೆ ತಿಳಿಸುವೆ. ಅವರು ಬಹಳ ಖುಷಿ ಪಡುವರು. ಇದು ಅವರ ದೊಡ್ಡಸ್ತಿಕೆ. ನಾನು ಹಾಗೆ ಹೇಳುವುದು ಒಂದೇ ಕಾರಣಕ್ಕಾಗಿ. ಯುವ ಪ್ರತಿಭೆಗಳ ಮೇಲೆ ಅವರಷ್ಟು ಪ್ರಭಾವ ಬೀರಿದಷ್ಟು ಇನ್ನೊಬ್ಬ ಪತ್ರಕರ್ತನನ್ನು ನಾನು ಕಂಡಿಲ್ಲ. ಒಂದು ಸಣ್ಣ ಕಾಗುಣಿತ ದೋಷ ಆ ಯುವಕರ ತಲೆಯಲ್ಲಿ ‘ಸರಿ’ ಎಂಬ ಭಾವದಿಂದ ಉಳಿದುಕೊಳ್ಳಬಾರದು ಎಂಬುದೇ ನನ್ನ ಆಶಯವಾಗಿದೆ.

ನಾವಿಬ್ಬರೂ ಎಷ್ಟೇ ಪ್ರಗತಿಪರರಾಗಿದ್ದರೂ ಭಾಷೆಯ ವಿಚಾರದಲ್ಲಿ ‘ಕರ್ಮಠ’ರಾಗಿದ್ದೇವೆ. ಭಾಷೆಯ ರಂಜಕತೆಯ ವಿಚಾರದಲ್ಲಿ ಅವರಿಗೆ ಎಲ್ಲಿಲ್ಲದ ಉತ್ಸಾಹ. ಕೆಲವೊಂದು ಸಲ ಅವರು ಓದುಗರಿಗೆ ಅರ್ಥವಾಗಲು ಬಳಸುತ್ತಿದ್ದ ಮಹೋಪಮೆಗಳನ್ನು ನಾನು ತಮಾಷೆ ಮಾಡುತ್ತಿದ್ದೆ. ಅವರ ವಿಜ್ಞಾನ ಸಾಹಿತ್ಯಕ್ಕೆ ಕನ್ನಡದ ಸೃಜನಶೀಲತೆಯ ಮೆರುಗು ಇದೆ.

ಅವರದು ಶಾಂತ ಸ್ವಭಾವ. ಆದರೆ ಹೇಳುವುದನ್ನೆಲ್ಲ ಮೆಲುಧ್ವನಿಯಲ್ಲಿ ಹೇಳುತ್ತಿದ್ದರು. ಎಂದೂ ಸಿಟ್ಟಿಗೆ ಬಾರದ ಇಂಥ ಇನ್ನೊಬ್ಬ ವ್ಯಕ್ತಿಯನ್ನು ನಾನು ಜೀವನದಲ್ಲಿ ನೋಡಲಿಲ್ಲ. “ಸಿಟ್ಟು ತರಿಸುವ ಇಂಜೆಕ್ಷನ್ ಎಲ್ಲಿಯಾದರೂ ಸಿಗುತ್ತದೆಯೆ?” ಎಂದು ನಾನು ಅವರಿಗೆ ಒಮ್ಮೆ ಕೇಳಿದ್ದೆ. ಅವರು “ಯಾಕೆ” ಎಂದು ಕೇಳಿದಾಗ ಹೇಳಿದ್ದೆ, “ನಿಮಗೆ ಆ ಇಂಜೆಕ್ಷನ್ ಮಾಡಬೇಕಿದೆ” ಎಂದು. ಆಗ ಅವರು ನಕ್ಕು ಮುಂದೆ ಸಾಗಿದ್ದರು.

ಆ ಲೇಖನಕ್ಕೆ ಅವರು ದೀರ್ಘವಾಗಿ ಬರೆದ ಇಂಟ್ರೋ ನೋಡಿ ನನಗೆ ರೋಮಾಂಚನವಾಯಿತು. ಕನ್ನಡ ಭಾಷಾಸಾಮರ್ಥ್ಯಕ್ಕೆ ಅದೊಂದು ಉದಾಹರಣೆಯಾಗಿತ್ತು. ಅವರು ಬಳಸಿದ ಶಬ್ದಗಳೆಲ್ಲ ನನ್ನ ಮನಸ್ಸಿನಲ್ಲಿ ವಜ್ರದ ಹರಳುಗಳಂತೆ ಹೊಳೆಯತೊಡಗಿದವು. ಶಂಕರ ಮೊಕಾಶಿ ಪುಣೇಕರ ಅವರ ‘ಅವಧೇಶ್ವರಿ’ ಕಾದಂಬರಿಯಲ್ಲಿ ಬರುವ ವಜ್ರದ ಅಂಗಡಿಯಲ್ಲಿನ ಸಂಭಾಷಣೆಯಲ್ಲಿ ನಾನು ಕನ್ನಡದ ಭಾಷಾ ಸಾಮರ್ಥ್ಯವನ್ನು ವಿಭಿನ್ನವಾಗಿ ಅನುಭವಿಸಿದ್ದೆ.

ಮೂರೂವರೆ ದಶಕಗಳ ಹಿಂದೆ ಅವರು ಪ್ರಜಾವಾಣಿ ಕಚೇರಿಯಲ್ಲಿ ಒಂದು ಪ್ರಯೋಗ ಮಾಡಿದರು. ಅಶ್ಲೀಲ ಸಾಹಿತ್ಯದ ಒಂದು ವಿದೇಶಿ ವರ್ಣರಂಜಿತ ಸಚಿತ್ರ ಮಾಸಪತ್ರಿಕೆಯೊಂದನ್ನು ತಂದು ಡೆಸ್ಕ್ ಮೇಲೆ ಇಟ್ಟರು. ಅದನ್ನು ಎಲ್ಲ ಜಾತಿಯ ಹಿರಿಯ ಕಿರಿಯ ಸಹೋದ್ಯೋಗಿಗಳು ಹಾಗೂ ಹೀಗೂ ನೋಡುತ್ತಲೇ ಇದ್ದರು. ಆ ಮಾಸಪತ್ರಿಕೆ ಅನೇಕ ದಿನಗಳವರೆಗೆ ಡೆಸ್ಕಿಂದ ಡೆಸ್ಕಿಗೆ ಓಡಾಡುತ್ತಲೇ ಇತ್ತು. ಅದೊಂದು ಜಾತ್ಯತೀತ ಮತ್ತು ಧರ್ಮಾತೀತ ನೋಡುವಿಕೆಯಾಗಿತ್ತು. ಅಂದರೆ ಆ ಪತ್ರಿಕೆಯನ್ನು ನೋಡುವಲ್ಲಿ ಎಲ್ಲರೂ ಸಮಾನರಾಗಿದ್ದರು. “ಮನುಷ್ಯರೆಲ್ಲ ಒಂದೇ” ಎಂಬುದನ್ನು ತೋರಿಸುವ ಒಂದು ಪ್ರಯೋಗ ಅವರದಾಗಿರಬಹುದು.

ಕಚೇರಿಯ ಸ್ವಿಚ್ ಬೋರ್ಡ್ಗಳಲ್ಲಿರುವ ಸ್ವಿಚ್‌ಗಳು ಕಪ್ಪಾಗಿದ್ದವು. ಒಂದು ದಿನ ಹೆಗಡೆಯವರು ಕೊಲಿನ್‌ನಿಂದ ಒಂದು ಬೋರ್ಡಿನ ಸ್ವಿಚ್‌ಗಳಲ್ಲಿ ಒಂದನ್ನು ಬಿಟ್ಟು ಎಲ್ಲ ಸ್ವಿಚ್‌ಗಳನ್ನು ಸ್ವಚ್ಛಗೊಳಿಸಿದರು. ಆ ಒಂದು ಕಪ್ಪಾದ ಸ್ವಿಚ್ ಅನ್ನು ಸ್ವಚ್ಛತೆಯ ಮಹತ್ವ ತಿಳಿಸಲು ಹಾಗೇ ಬಿಟ್ಟಿದ್ದರು. ಅವರು ಕಲಿಸುವ ರೀತಿ ಕೂಡ ಅನನ್ಯವಾಗಿದೆ.

ಇಂಥ ಒಬ್ಬ ಮೇಧಾವಿ ಮಾನವತಾವಾದಿಯನ್ನು ದುಷ್ಕರ್ಮಿಗಳು ಎಳೆದಾಡಿ ಹೊಡೆದದ್ದುಂಟು. ಬಹುಶಃ ಗಣಪತಿ ಉತ್ಸವವಿರಬೇಕು. ಬಹಳ ಜೋರಾಗಿ ಧ್ವನಿವರ್ಧಕ ಹಚ್ಚಿ ಸಪ್ಪಳ ಮಾಡುತ್ತಿದ್ದವರಿಗೆ ತಿಳಿಹೇಳಲು ಹೋದಾಗ ಇಂಥ ಕಹಿ ಅನುಭವ ಅವರಿಗಾಯಿತು.

ಅವಿಶ್ರಾಂತವಾಗಿ ಕರ್ತವ್ಯ ನಿರ್ವಹಿಸುವ ಸಾಮರ್ಥ್ಯವುಳ್ಳ ನಾಗೇಶ ಹೆಗಡೆ ಅವರಿಗೆ ವಿಶ್ರಾಂತಿ ಎಂದರೆ, ಬರವಣಿಗೆ ಮುಗಿಸಿದ ಕ್ಷಣ ಮತ್ತು ಬರವಣಿಗೆಯನ್ನು ಕೈಗೆತ್ತಿಕೊಳ್ಳುವ ಕ್ಷಣ. ಹೀಗೆ ಅವರು ಹಿಡಿದ ಕಾರ್ಯವನ್ನು ಪೂರ್ತಿಗೊಳಿಸುವ ಮೂಲಕ ವಿಶ್ರಾಂತಿ ಪಡೆಯುವ ಮನಸ್ಸುಳ್ಳವರು.

ನಾಗೇಶ ಹೆಗಡೆ ಅವರು ಜೆ.ಎನ್.ಯು.ನಲ್ಲಿ ಓದಿ ಬಂದವರು. ಸಹಾಯಕ ಸಂಪಾದಕರಾಗಿ ಪ್ರಜಾವಾಣಿ ಸೇರಿದರು. ಆದರೆ ತಾಂತ್ರಿಕ ದೋಷದಿಂದಲೋ ಅಥವಾ ಸಂಬಂಧಪಟ್ಟ ಕಚೇರಿ ಸಿಬ್ಬಂದಿಯ ಬೇಜವಾಬ್ದಾರಿತನದಿಂದಲೋ ಅವರ ಹೆಸರು ಆ ಹುದ್ದೆಯಿಂದ ಹಾರಿಹೋಯಿತು. ಆದರೆ ನಾಗೇಶ ಅವರು ತಲೆಕೆಡಿಸಿಕೊಳ್ಳಲಿಲ್ಲ. ತಮ್ಮ ಕಾರ್ಯದಲ್ಲೇ ಮಗ್ನರಾಗಿ ಇರುತ್ತಿದ್ದರು. ಪತ್ರಿಕಾ ಮಾಲೀಕರು ಅವರಿಗೆ ಆಪ್ತರಾಗಿದ್ದರೂ ಈ ತಪ್ಪನ್ನು ಅವರಿಗೆ ವಿವರಿಸಿ ಹೇಳಿ ತಮಗಾದ ಅನ್ಯಾಯವನ್ನು ಸರಿಪಡಿಸಿಕೊಳ್ಳಲಿಲ್ಲ. ಹೀಗಾಗಿ ಅವರು ಯಾವ ಹುದ್ದೆ ಪಡೆದು ಬಂದಿದ್ದರೋ ಕೊನೆಗೆ ಆ ಹುದ್ದೆಯಲ್ಲೇ ನಿವೃತ್ತರಾದರು ಎಂಬ ಘಟನೆ ನೆನಪಾಗುತ್ತಿದೆ.

ಅವರ ಸಂತಗುಣ ಅವರನ್ನು ರಕ್ಷಿಸಿದೆ. ಅವರು ಇಷ್ಟೆಲ್ಲ ತದೇಕಚಿತ್ತದಿಂದ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಕಚೇರಿಯ ಕೆಲ ಹಳೆತಲೆಗಳು ಅವರಿಗೆ ಮಾನಸಿಕವಾಗಿ ಹಿಂಸೆ ಕೊಟ್ಟಿದ್ದುಂಟು. ಅವರು ಈ ಕುರಿತು ಯಾರ ಮುಂದೆಯೂ ತೋಡಿಕೊಳ್ಳಲಿಲ್ಲ. ಯಾರನ್ನೂ ಟೀಕಿಸಲಿಲ್ಲ. ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತ ಮುನ್ನಡೆದರು.

ಅವರ ಕೀರ್ತಿ ಮತ್ತು ಪ್ರತಿಭೆಯ ಪ್ರಭಾವದಿಂದ ಉತ್ತರ ಕನ್ನಡದ ಅನೇಕ ಹವ್ಯಕ ಯುವಕರು ಪತ್ರಿಕಾರಂಗ ಸೇರಿದರು. ವಿವಿಧ ಪತ್ರಿಕೆಗಳಲ್ಲಿ ಉನ್ನತ ಹುದ್ದೆಗಳನ್ನು ಪಡೆದರು. ಆದರೆ ನಾಗೇಶ ಹೆಗಡೆ ಅವರ ಜಾತ್ಯತೀತ ದೃಷ್ಟಿಕೋನವನ್ನು ಪಡೆದವರು ಅತಿ ವಿರಳ. ಪ್ರತಿಭೆಯ ಮಾತಂತೂ ದೂರ ಉಳಿಯಿತು.

ಸರ್ವಧರ್ಮಗಳು ಮಾನವರ ಮನಸ್ಸನ್ನು ರೂಪಿಸಿರುವುದಕ್ಕಿಂತ ಹೆಚ್ಚು ಉತ್ತಮವಾದ ಮನಸ್ಸನ್ನು ವಿಜ್ಞಾನ ರೂಪಿಸಲು ಸಾಧ್ಯ ಎಂಬುದನ್ನು ನಾಗೇಶ ಹೆಗಡೆಯವರ ಮನಸ್ಸನ್ನು ಅರಿತವರಿಗೆ ಗೊತ್ತು. ಇಂಥ ಅನನ್ಯ ಪ್ರತಿಭೆ ನೂರ್ಕಾಲ ಬಾಳಲಿ. ಅವರ ಕನಸಿನಂತೆ ವೈಜ್ಞಾನಿಕವಾಗಿ, ವೈಚಾರಿಕವಾಗಿ ಮತ್ತು ಜಾತ್ಯತೀತವಾಗಿ ಈ ದೇಶ ಬೆಳೆಯುವಂತಾಗಲಿ.