ಅಪ್ಪನ ನಂಬಿಕೆಗಳು ಬದಲಾಗಿದ್ದರೂ, ನೈತಿಕವಾಗಿ ಅವರು ಕುಸಿದಿದ್ದರೂ, ಅಪ್ಪ ಬ್ರಾಂದಿ ಅಂಗಡಿಯ ಗಲ್ಲಾದ ಮೇಲೆ ಕೂರುವ ಚಿತ್ರವನ್ನು ಕಲ್ಪಿಸಿಕೊಳ್ಳುವುದು ಮೋಹನನಿಗೆ ತೀರಾ ಅಸಹನೀಯವಾಗಿ ಕಂಡಿತು. ಬ್ರಾಂದಿ ಅಂಗಡಿಯ ಗುತ್ತಿಗೆ ಹಿಡಿದರೆ ಅಪ್ಪ ಇನ್ನೆಂದೂ ಮೊದಲಿನ ದಾರಿಗೆ ಬರುವುದಿಲ್ಲ ಎನ್ನಿಸಿ, ಅಪ್ಪನ ನಿರ್ಧಾರವನ್ನು ವಿರೋಧಿಸಲು ಮೋಹನ ನಿರ್ಧರಿಸಿದ. ಆಗ ಅವನಿಗೆ ಹೊಳೆದದ್ದು ಯಥಾಪ್ರಕಾರ ಗಾಂಧಿ.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ರಘುನಾಥ ಚ.ಹ. ಬರೆದ ಕತೆ “ಕಾಲ ದಾರಿಯಲಿ ಹುಲ್ಲು”

1

ಮರದ ಎಲೆಗಳೆಲ್ಲ ಒಮ್ಮೆ ಗಲಗಲ ಎಂದವು. ಮರ ತನ್ನೊಡನೆ ಮಾತನಾಡುತ್ತಿದೆಯೆನ್ನಿಸಿ ಮೋಹನನಿಗೆ ಪುಳಕವಾಯಿತು. ಸಾವಿರಾರು ಮೈಲುಗಳ ದೂರದಿಂದ ಬಂದ ಮಗನನ್ನು ತೊಡೆಯಮೇಲೆ ಮಲಗಿಸಿಕೊಂಡ ಅಮ್ಮ ತಲೆಗೂದಲಲ್ಲಿ ಬೆರಳಾಡಿಸುತ್ತ `ದಣಿದೆಯೇನೋ ಕಂದಾ, ಎಷ್ಟೊಂದು ಬಡವಾಗಿದ್ದಿ?’ ಎಂದು ಕೇಳಿದಂತೆ ತಣ್ಣನೆ ಗಾಳಿ ಮೈಸೋಕಿದಾಗ ಮೋಹನನಿಗನ್ನಿಸಿತು. ಕಣ್ಣುಗಳನ್ನು ಮುಚ್ಚಿಕೊಂಡವನು ಎದೆಯ ತುಂಬ ಉಸಿರೆಳೆದುಕೊಂಡ. ಬೆಳಗಿನಿಂದ ಸಂಜೆಯವರೆಗಿನ ಸುತ್ತಾಟದ ಆಯಾಸವೆಲ್ಲ ಕಳೆದುಹೋಗಿ ಹೊಸ ಉಸಿರು ದಕ್ಕಿದಂತೆನಿಸಿತು. ಪಕ್ಷಿಗಳು ಗುಂಪುಗುಂಪಾಗಿ ಬಂದು ಮರದ ಎಲೆಗಳ ಜೊತೆ ತಾವೂ ಎಲೆಯಾಗುತ್ತಿದ್ದವು. ದಿನವೆಲ್ಲ ಊರುಕೇರಿ ಹಾರಿದ ಹಕ್ಕಿಗಳು ಸಂಜೆ ಗೂಡಿಗೆ ಮರಳುವುದನ್ನು ನೋಡುತ್ತಿದ್ದ ಮೋಹನನಿಗೆ ತಾನೂ ಕೂಡ ಇಂಥದ್ದೇ ಒಂದು ಹಾರಾಟವನ್ನು ಮುಗಿಸಿ ಗೂಡಿಗೆ ಮರಳಿದ್ದೇನೆನ್ನಿಸಿತು. ಉಹುಂ, ಪಕ್ಷಿಗಳು ಮರುದಿನದ ಬೆಳಗಿನ ಕಿರಣಗಳೊಂದಿಗೆ ಮತ್ತೆ ಗರಿ ಬಿಚ್ಚುತ್ತವೆ; ತಾನೋ ಬೇರು ಬಿಡಲು ಬಂದವನು.

ಹಾರುವ ಆಕಾಶ ಹಾಗೂ ಗೂಡಿನ ಸೆಳೆತದ ಯೋಚನೆಯಿಂದ ಹೊರಬಂದು ಮರದ ಹಾಡುಗಳಿಗೆ ಮೋಹನ ಕಿವಿಯಾಗತೊಡಗಿದ. ಸಂಜೆಗಾಳಿಯ ತಂಪಿನಿಂದ ಮೈಕಾವು ಕಳೆಯುತ್ತಾ ಹೋದಂತೆ ಹಳೆಯ ದಿನಗಳೆಲ್ಲ ಕಣ್ಣುಗಳಲ್ಲಿ ಚಿತ್ರಗಳಾಗತೊಡಗಿದವು. ಬಿಳಿ ಅಂಗಿ ಖಾಕಿ ನಿಕ್ಕರು ತೊಟ್ಟು, ಹೆಬ್ಬೆಟ್ಟಿನಗಲದ ಎಲಾಸ್ಟಿಕ್ಕಿನೊಳಗೆ ಬಂಧಿಯಾದ ಪುಸ್ತಕಗಳ ಹಿಡಿದು ಸ್ಕೂಲಿಗೆ ಬರುತ್ತಿದ್ದ ದಿನಗಳವು. ಇಡೀ ಸ್ಕೂಲು ನಿಂತಿರುವುದೇ ತಮ್ಮಿಂದ ಎನ್ನುವ ಗತ್ತಿನ ಮೇಷ್ಟ್ರು ನೆನಪಾದರು. ಮೇಷ್ಟ್ರು ಅಂದ್ರೆ ಮೇಷ್ಟ್ರು. ಆದರೆ ಮೋಹನನಿಗೆ ಮಾತ್ರ `ಮೇಷ್ಟ್ರೇ’ ಎಂದು ಬಾಯಿತುಂಬ ಕರೆಯುವುದು ಎಂದಿಗೂ ಸಾಧ್ಯವಾಗಿರಲಿಲ್ಲ. ಮನೆಯಲ್ಲಿ ಮಾತ್ರ ಅಪ್ಪ, ಸ್ಕೂಲಿನಲ್ಲಿ ಮೇಷ್ಟ್ರು ಎಂದು ಎಷ್ಟು ಸಾರಿ ಹೇಳಿಕೊಂಡರೂ ಮಾತನಾಡಿಸುವ ಸಂದರ್ಭ ಎದುರಾದಾಗ `ಸಾರ್’ ಎನ್ನುವ ಶಬ್ದ ಮೋಹನನ ಗಂಟಲಲ್ಲೇ ಉಳಿದುಬಿಡುತ್ತಿತ್ತು. ಹೈಸ್ಕೂಲಿನ ಮೂರು ವರ್ಷ ಕನ್ನಡ ಮೇಷ್ಟ್ರಾದ ಅಪ್ಪನೊಂದಿಗೆ ಸ್ಕೂಲಿನಲ್ಲಿ ಮೋಹನ ಗಟ್ಟಿಯಾಗಿ ಮಾತನಾಡಿದ್ದು `ಆ್ಞ ಹ್ಞೂ’ ಮಾತ್ರ. ಮನೆಯಲ್ಲಿ ಮಾತ್ರ ಕೂಸುಮರಿ.

ತನ್ನಪ್ಪ ಇತರ ಮೇಷ್ಟ್ರುಗಳಂತಲ್ಲ ಎನ್ನುವ ಬಗೆಗೆ ಮೋಹನನಿಗೆ ವಿಪರೀತ ಅಭಿಮಾನವಿತ್ತು. ಕುಮಾರವ್ಯಾಸ – ಪಂಪಭಾರತವನ್ನು ಅಪ್ಪ ಹಾಡುತ್ತಿದ್ದರೆ ಅಲ್ಲಿ ಮಹಾಭಾರತ ಸಾಕ್ಷಾತ್ಕಾರಗೊಳ್ಳುತ್ತಿತ್ತು. ಗೋವಿನ ಹಾಡು ಹಾಡುವಾಗ ಧರಣಿ ಮಂಡಲ ಮಧ್ಯದ ಪುಣ್ಯಕೋಟಿಯ ಸಂಸಾರ ಜೀವಗೊಳ್ಳುತ್ತಿತ್ತು. ಅಪ್ಪ ಪಾಠ ಮಾಡುತ್ತಿದ್ದರೆ ಆಚೆಬದಿ ಈಚೆಬದಿ ಓಡಾಡುವ ಇತರ ಮೇಷ್ಟ್ರುಗಳ ಹೆಜ್ಜೆ ನಿಧಾನವಾಗುತ್ತಿದ್ದುದನ್ನು ಮೋಹನ ಗಮನಿಸಿದ್ದ. ಕೆಲವೊಮ್ಮೆ ಕಾಲೇಜಿನ ಹುಡುಗರೂ ಬಂದು ಹಿಂದಿನ ಡೆಸ್ಕಿನಲ್ಲಿ ಕುಳಿತುಕೊಳ್ಳುತ್ತಿದ್ದರು. ಅಪ್ಪನ ಪಾಠಕ್ಕೊಂದು ಚೌಕಟ್ಟಿತ್ತೇ? ಕರ್ಣ ರಸಾಯನದ ನಡುವೆ ಮೇಷ್ಟ್ರು ಗಾಂಧಿಯ ಬಗ್ಗೆ ಹೇಳುತ್ತಿದ್ದರು. ಶ್ರೀಮತಿ ಸ್ವಯಂವರದ ವೇಳೆ ತಮ್ಮ ಬಾಲ್ಯದ ಅಂಗಳದಲ್ಲಿನ ಚಂದ್ರಮ್ಮನ ಪದಗಳ ಬಗ್ಗೆ, ಸೋಬಾನೆ ಪದಗಳ ಚೆಂದದ ಬಗ್ಗೆ ಹೇಳುತ್ತಿದ್ದರು. `ಎಲ್ಲಮ್ಮಣ್ಣೀ, ಒಂದು ಸೋಬಾನ ಪದ ಹಾಡು’ ಎಂದು ಹುಡುಗಿಯರನ್ನು ಕೇಳಿ ಪ್ರತಿಕ್ರಿಯೆಯಿಲ್ಲದೆ ನಿಟ್ಟುಸಿರಿಡುತ್ತಿದ್ದರು. ತಾವೇ ಒಂದೆರಡು ಸಾಲು ಹಾಡಿ ನೆನಪುಗಳ ಚಪ್ಪರಿಸುತ್ತಿದ್ದರು. ಮತ್ತಾವುದೋ ಸ್ವಾರಸ್ಯಕರ ಪ್ರಸಂಗ ನೆನಪಿಸಿಕೊಳ್ಳುತ್ತಿದ್ದರು. ಹೀಗಾಗಿ ಒಂದೇ ಪಾಠ-ಪದ್ಯ ವಾರಗಟ್ಟಲೆ ಮುಂದುವರಿಯುತ್ತಿದ್ದುಂಟು. ಆದರೆ ವಿದ್ಯಾರ್ಥಿಗಳಿಗೆಂದೂ ಕನ್ನಡ ಮೇಷ್ಟ್ರು ಪೀರಿಯೆಡ್ಡು ಬೇಸರ ತರಿಸುತ್ತಿರಲಿಲ್ಲ. ಉಹುಂ, ಅವರೆಂದೂ ಪುಸ್ತಕವನ್ನು ಪೂರ್ತಿ ಮುಗಿಸಿದ ಮೇಷ್ಟ್ರು ಅಲ್ಲವೇ ಅಲ್ಲ. ಕನ್ನಡ ಪುಸ್ತಕದೊಳಗೆ ಸೇರಿಕೊಂಡಿರುತ್ತಿದ್ದ ಜೀವನ ಚರಿತ್ರೆಗಳನ್ನು, ಪರಿಸರದ ಕಥೆಗಳನ್ನು ಮಾಡುತ್ತಲೇ ಇರಲಿಲ್ಲ. ಪಬ್ಲಿಕ್ ಪರೀಕ್ಷೆಯ ವಿದ್ಯಾರ್ಥಿಗಳಿಗೆ ಮಾತ್ರ ಎಲ್ಲ ಪಾಠಗಳನ್ನೂ ಮುಗಿಸಲು ಪ್ರಯತ್ನಿಸುತ್ತಿದ್ದರು. ಅಪ್ಪನಿಗೇನಿದ್ದರೂ ಪುರಾಣದ ನಾಯಕರ ಕುರಿತು ಮೆಚ್ಚು. ಇತಿಹಾಸದ ಸಾಂಸ್ಕೃತಿಕ ನಾಯಕರ ಕುರಿತು ನೆಚ್ಚು. ಪದ್ಯಗಳ ಹುಚ್ಚು. ನಾಡುನುಡಿ ಬಗೆಗೆ ಮಕ್ಕಳಿಗೆ ಪ್ರೀತಿ ಮೂಡಿಸುವುದು ಹಾಗೂ ಸಾಂಸ್ಕೃತಿಕ ಜಗತ್ತಿನ ಮೂಲಕ ಮಕ್ಕಳ ಅಭಿರುಚಿಯನ್ನು ಹದಗೊಳಿಸುವುದು ಕನ್ನಡ ಮೇಷ್ಟ್ರುಗಳ ಕರ್ತವ್ಯ ಎಂದು ಅಪ್ಪ ನಂಬಿದ್ದರು. ಕಿರಿಯ ಮೇಷ್ಟ್ರುಗಳ ಬಗ್ಗೆ ಅವರಿಗೆ ಅಷ್ಟೇನೂ ನಂಬಿಕೆಯಿರಲಿಲ್ಲ. ಪದ್ಯಗಳನ್ನು ಗದ್ಯದಂತೆ ಓದುವವರಂತೂ ಕನ್ನಡ ಮೇಷ್ಟ್ರಾಗಲು ನಾಲಾಯಖ್ಖು ಎಂದು ಜರೆಯುತ್ತಿದ್ದರು. ಅಪ್ಪ ಹೇಳಿದ್ದೆಲ್ಲ ಮೋಹನನಿಗೆ ವೇದವಾಕ್ಯದಂತೆ ತೋರುತ್ತಿತ್ತು. ಹಳೆಯ ವಿದ್ಯಾರ್ಥಿಗಳು ಮೇಷ್ಟ್ರ ಪಾಠದ ಗತ್ತು ಗಮ್ಮತ್ತು ನೆನಪಿಸಿಕೊಳ್ಳುವುದನ್ನು ಕೇಳಿದಾಗೆಲ್ಲ ಅಪ್ಪನ ಬಗೆಗಿನ ಮೋಹನನ ಹೆಮ್ಮೆ ಇನ್ನಷ್ಟು ಹೆಚ್ಚಾಗುತ್ತಿತ್ತು.

ಅಪ್ಪ ಎಂದರೆ ಬೇರೆ ಮೇಷ್ಟ್ರುಗಳಿರಲಿ, ಹೆಡ್ಮಾಸ್ಟರರೂ ಅಂಜುತ್ತಿದ್ದರು. ಅಪ್ಪನದು ಜೋರು ಗಂಟಲು. ಸಣ್ಣಸಣ್ಣ ವಿಚಾರಕ್ಕೂ ದೂರ್ವಾಸರಾಗುತ್ತಿದ್ದರು. ಹೀಗಿದ್ದೂ ಅಪ್ಪನ ಕುರಿತು ಎಲ್ಲರಿಗೂ ಭಯಮಿಶ್ರಿತ ಗೌರವವಿತ್ತು. ಏಕೆಂದರೆ ಸ್ಕೂಲಿನ ಪ್ರತಿ ಸಮಸ್ಯೆಗೂ ಅಪ್ಪನ ಬಳಿಯೇ ಉತ್ತರವಿರುತ್ತಿತ್ತು. ಯಾವ ಮೇಷ್ಟ್ರಿಗೆ ತೊಂದರೆಯೊದಗಿದರೂ ಆ ತೊಂದರೆ ತನ್ನದೆಂದು ಭಾವಿಸುತ್ತಿದ್ದರು. ಚಪ್ಪನೈವತ್ತಾರು ಹಳ್ಳಿಗಳ ಸ್ಕೂಲುಗಳ ಹುಡುಗ ಹುಡುಗಿಯರು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಬರುತ್ತಿದ್ದುದು ಇದೇ ಊರಿಗೆ. ಜಾತ್ರೆಯಂತಿದ್ದ ಪರೀಕ್ಷೆ ಸುಸೂತ್ರವಾಗಿ ಸಾಗಲು ಅಪ್ಪನೇ ಹೆಗಲು ಕೊಡಬೇಕಿತ್ತು. `ಮೇಷ್ಟ್ರು ಸ್ಕೂಲಿನ ಕಂಬ’ ಎಂದು ಊರಜನ ಮಾತನಾಡುತ್ತಿದ್ದರು.

ಕಂಬದಂಥ ಅಪ್ಪನ ಮೇಷ್ಟ್ರುಗಿರಿಯ ಬಗ್ಗೆ ಮೋಹನ ಮೊದಲ ಸಲ ಬೇಜಾರು ಮಾಡಿಕೊಂಡಿದ್ದು ಮರಗಿಡಗಳ ಕಾರಣಕ್ಕೆ. ಮೇಷ್ಟ್ರಿಗೆ ಅದೆಂಥ ಹುಕಿ ಬಂದಿತ್ತೋ ಏನೋ, ಸ್ಕೂಲಿನ ಮುಂಭಾಗದಲ್ಲಿದ್ದ ವಿಶಾಲ ಮೈದಾನದಲ್ಲಿ ಗಿಡಗಳ ನೆಡಿಸತೊಡಗಿದರು. ಆಟದ ಪೀರಿಯೆಡ್ಡು ಬರುವುದೇ ತಡ, ಮಕ್ಕಳನ್ನು ಒಟ್ಟು ಮಾಡಿಕೊಂಡು, ತಾವೇ ಖುದ್ದು ನಿಂತು ಗುಂಡಿ ತೋಡಿಸಿ ಅರಣ್ಯ ಇಲಾಖೆಯಿಂದ ಗಿಡ ತರಿಸಿ ನೆಡಿಸತೊಡಗಿದರು. ನೆಟ್ಟ ಗಿಡಗಳ ಸುತ್ತ ಮುಳ್ಳುಕಂಟಿ ಕಟ್ಟಿಸಿದರು. ದಿನವೂ ಒಂದೊಂದು ಸೆಕ್ಷನ್ನಿನ ಹುಡುಗ ಹುಡುಗಿಯರು ಗಿಡಗಳಿಗೆ ನೀರುಣಿಸಬೇಕಿತ್ತು. ಬೋಳು ಬಯಲಲ್ಲಿ ಮುಳ್ಳುಕಂಟಿಗಳ ಹೊದ್ದ ಗಿಡಗಳು ಎದ್ದು ನಿಲ್ಲತೊಡಗಿದಂತೆ ಅಪಸ್ವರಗಳು ಕೇಳಿಸತೊಡಗಿದವು. ಸ್ಕೂಲು ಮೈದಾನವನ್ನು ಹಾದು ಪಕ್ಕದ ಹಳ್ಳಿಗಳಿಗೆ ಹೋಗುತ್ತಿದ್ದವರು ರಾತ್ರಿ ಕತ್ತಲಲ್ಲಿ ಮುಳ್ಳುಬೇಲಿಗಳಿಗೆ ಮುತ್ತಿಟ್ಟು ಮುಖಭಂಗ ಅನುಭವಿಸಿದರು. ಇನ್ನೂ ಗಿಡ ನೆಡದ ಗುಂಡಿಗಳಲ್ಲಿ ಎಡವಿ ಕಾಲುಳುಕಿಸಿಕೊಂಡವರು ನಶೆಯಲ್ಲೇ ಶಾಪ ಹಾಕಿದರು. ಹೊಟೇಲಿನಲ್ಲಿ ಕ್ಷೌರದಂಗಡಿಯಲ್ಲಿ ಮೇಷ್ಟ್ರ ಬಗ್ಗೆ ಗುಸುಗುಸು ಹಬ್ಬತೊಡಗಿತು. ಕಾಲು ಉಳುಕಿಸಿಕೊಂಡವರು, ಮುಳ್ಳು ಚುಚ್ಚಿಸಿಕೊಂಡವರು ಸ್ಕೂಲು ಮುಂದೆ ಗಲಾಟೆ ಮಾಡುತ್ತಾರೆನ್ನುವ ಮಾತುಗಳು ಕೇಳಿಸತೊಡಗಿದವು. ಈ ನಡುವೆ ನೆಟ್ಟಿದ್ದ ಒಂದಷ್ಟು ಗಿಡಗಳನ್ನು ರಾತ್ರೋರಾತ್ರಿ ಯಾರೋ ಕಿತ್ತುಹಾಕಿದರು. ಕೆಲವರು ಹೋಗುತ್ತಾ ಬರುತ್ತಾ ಚಿಗುರು ಹರಿದರು. ಇದಾವುದರಿಂದಲೂ ಮೇಷ್ಟ್ರ ಉತ್ಸಾಹ ಕಡಿಮೆಯಾಗಲಿಲ್ಲ. ಬರಿದಾಗಿದ್ದ ಗುಂಡಿಗಳಲ್ಲಿ ಹೊಸಗಿಡ ನೆಡಿಸಿದರು. ಮುಳ್ಳಿನ ಬೇಲಿಗಳ ಮತ್ತಷ್ಟು ಬಿಗಿಗೊಳಿಸಿದರು. ಸ್ಕೂಲಿನ ಇತರ ಮೇಷ್ಟ್ರುಗಳು ಇತ್ತ ತಲೆ ಹಾಕದಿದ್ದಾಗ ಅವರೊಂದಿಗೆ ಜಗಳ ಕಾಯ್ದರು. ಕೊನೆಗೆ ತಾವೊಬ್ಬರೇ ಎಲ್ಲ ಹೊರೆ ಹೊತ್ತರು. ಬೆಳಗ್ಗೆ ಎಚ್ಚರಾದದ್ದೇ ತಡ ಸ್ಕೂಲು ಮೈದಾನಕ್ಕೆ ಬಂದು ಗಿಡಗಳ ಕ್ಷೇಮ ಸಮಾಚಾರ ವಿಚಾರಿಸುತ್ತಿದ್ದರು. ಸಂಜೆಗೆ ಕಪ್ಪೇರುವವರೆಗೂ ಗಿಡಗಳೊಂದಿಗೆ ಮಾತನಾಡುತ್ತಿದ್ದರು. ಮನೆಗಿಂತ ಹೆಚ್ಚು ಹೊತ್ತು ಮೈದಾನದಲ್ಲೇ ಇರುತ್ತಿದ್ದ ಮೇಷ್ಟ್ರಿಗೆ ಗಿಡಗಳ ಹುಚ್ಚು ತಗುಲಿದೆ ಎಂದು ಜನ ಮಾತನಾಡತೊಡಗಿದರು. ಬರಬರುತ್ತಾ ವಿರೋಧದ ಕಾವು ಕಡಿಮೆಯಾಗತೊಡಗಿತು. ಆದರೆ ವಿರೋಧದ ಕಿಡಿ ಇದ್ದೇ ಇತ್ತು, ಅದು ಕ್ರಿಕೆಟ್ ಆಡುವವರದು.

ಸ್ಕೂಲು ಮೈದಾನದಷ್ಟು ವಿಶಾಲವಾದ ಮೈದಾನ ತಾಲ್ಲೂಕು ಕೇಂದ್ರದಲ್ಲಿರಲಿ ಜಿಲ್ಲಾ ಕೇಂದ್ರದಲ್ಲೇ ಇರಲಿಲ್ಲ. ಇಂಥದೊಂದು ಮೈದಾನವನ್ನು ಗಿಡ ಬೆಳೆಸುವ ಹೆಸರಲ್ಲಿ ಮೇಷ್ಟ್ರು ವಿರೂಪಗೊಳಿಸಹೊರಟಿದ್ದು ಯುವ ಕ್ರಿಕೆಟಿಗರನ್ನು ಕೆರಳಿಸಿತ್ತು. ಅವರೆಲ್ಲ ಮೇಷ್ಟ್ರು ವಿರುದ್ಧ ಬಂಡೆದ್ದರು. ಸ್ಕೂಲಿನ ಗೋಡೆಯ ಮೇಲೆ ಕನ್ನಡ ಮೇಷ್ಟ್ರ ಜಾತಕ ಬರೆದರು. ಬಹಿರಂಗವಾಗಿ ಧಿಕ್ಕಾರ ಹಾಕಿದರು. ಧಿಕ್ಕಾರ ಕೂಗಿದವರಲ್ಲಿ ಮೇಷ್ಟ್ರ ಹಳೆಯ ವಿದ್ಯಾರ್ಥಿಗಳೂ ಇದ್ದರು. ಮೇಷ್ಟ್ರಿಗೆ ಮೌನವಾಗಿ ಧಿಕ್ಕಾರ ಹಾಕಿದವರಲ್ಲಿ ಮೋಹನನೂ ಇದ್ದ. ಅವನಿಗೆ ಕ್ರಿಕೆಟ್ಟೆಂದರೆ ಪ್ರಾಣ. ಮೇಷ್ಟ್ರು ಯಾವುದಕ್ಕೂ ಜಗ್ಗಲಿಲ್ಲ. `ಸುಮ್ಮನೆ ಬೇರೆ ಮೈದಾನ ನೋಡ್ಕೊಳ್ಳಿ. ಬಾಲ ಬಿಚ್ಚಿದ್ರೆ ಪೊಲೀಸ್ ಕಂಪ್ಲೇಂಟ್ ಕೊಟ್ಟು ಒಳಗೆ ಹಾಕಿಸ್ತೀನಿ’ ಎಂದು ಧಮಕಿ ಹಾಕಿದರು. `ಇದು ಯಾವುದಕ್ಕೂ ಬಗ್ಗದ ಮೊಂಡು ಘಟ’ ಎಂದು ನಿರಾಶರಾದ ಕ್ರಿಕೆಟ್ ಕಲಿಗಳು ಉಳಿದಿದ್ದ ಚೂರುಪಾರು ಮೈದಾನದಲ್ಲೇ ಕ್ರಿಕೆಟ್ ಆಡತೊಡಗಿದರು. `ಪಾಪ ಹುಡುಗರು ಆಡಿಕೊಳ್ಳಲಿ’ ಎಂದು ಚೂರುಪಾರು ಮೈದಾನವನ್ನು ಮೇಷ್ಟ್ರು ಉದಾರತನದಿಂದ ಬೋಳಾಗಿಯೇ ಬಿಟ್ಟರು. ಚೆಂಡು ಗಿಡಗಳ ಮುಳ್ಳುಬೇಲಿಯಲ್ಲಿ ಅಡಗಿಕೊಳ್ಳುವುದು, ಹುಡುಗರು ಕೈ ತರಚಿಕೊಳ್ಳುವುದು ಮಾಮೂಲಾಯಿತು.

ಬೇಲಿಯ ಕವಚದ ಅವಶ್ಯಕತೆ ಗಿಡಗಳಿಗಿನ್ನು ಸಾಕೆಂದು ಅನ್ನಿಸುವವರೆಗೂ ದಸರೆ ಬೇಸಗೆಯೆನ್ನದೆ ಮೇಷ್ಟ್ರು ಗಿಡಗಳ ಆರೈಕೆ ಮಾಡಿದರು. ಕೊಂಬೆರೆಂಬೆಗಳ ಅಗಲಿಸಿಕೊಂಡು ಎಲೆಗಳ ಕೂಡಿಸಿಕೊಂಡು ಪ್ರಾಯದ ಗಿಡಗಳು ನಳನಳಿಸುವುದನ್ನು ನೋಡಿ `ಅಂತೂ ಸಾಧಿಸಿಯೇಬಿಟ್ರಿ ಮೇಷ್ಟ್ರೆ, ಹಠ ಅಂದ್ರೆ ನಿಮ್ಮದು’ ಎಂದು ಅವರಿವರು ಹೇಳುವಾಗ ಮೇಷ್ಟ್ರು ಮುಖ ಅಗಲವಾಗುತ್ತಿತ್ತು.

ಗಿಡಗಳೀಗ ಮರಗಳಾಗಿವೆ. ಮರಗಳಲ್ಲಿ ಎಷ್ಟೊಂದು ಜೀವಗಳು ಸೇರಿಕೊಂಡಿವೆ. ಮೋಹನನಿಗೆ ಹಳೆಯ ದಿನಗಳೆಲ್ಲ ನೆನಪಿಗೆ ಬಂದು ಕಣ್ಣು ಒದ್ದೆಯಾಗಿ ಎದೆ ಭಾರವಾಗತೊಡಗಿತು. ಇನ್ನೆಷ್ಟು ಹೊತ್ತು ನೆನಪಿನದೋಣಿಯಲ್ಲವನು ವಿಹರಿಸುತ್ತಿದ್ದನೋ ಏನೋ, `ಏನಪ್ಪಾ ದೊರೆ ಯಾವ ಲೋಕದಲ್ಲಿರುವೆ. ಹಳ್ಳಿಯಲ್ಲಿ ಕೂತು ಅಮೆರಿಕಾದ ಕನಸು ಕಾಣುತ್ತಿರುವೆಯೇನು?’ ಎಂದು ಶ್ರೀಧರ ಬಂದು ಮಾತನಾಡಿಸದೆ ಇದ್ದಿದ್ದರೆ.

ಮಾತಿಗೆ ಸಿಕ್ಕ ಗೆಳೆಯರ ನಡುವೆ ಹಳೆಯ ನೆನಪುಗಳು ಧೂಳು ಕೊಡವಿಕೊಂಡವು. `ಅಮೆರಿಕಾದ ಕೆಲಸ ಬಿಟ್ಟು ಬಂದು ಅವಿವೇಕ ಮಾಡಿಕೊಂಡೆ. ಈ ಹಳ್ಳಿಯಲ್ಲೇನಿದೆ ಮಣ್ಣು’ ಎಂದ ಶ್ರೀಧರ. `ಮಣ್ಣಿನ ವಾಸನೆ ಸೆಳೆಯಿತು, ಬಂದುಬಿಟ್ಟೆ’ ಎಂದ ಮೋಹನ. ಇಬ್ಬರೂ ನಕ್ಕರು.

ಸಂಜೆಯ ಕೆಂಪು ಕಪ್ಪಾಗತೊಡಗಿದಂತೆ ಶ್ರೀಧರ ಮನೆಗೆ ಹೊರಡುವ ಆತುರ ವ್ಯಕ್ತಪಡಿಸಿದ. `ನಮ್ಮ ಪಾಳಿ ಮುಗಿಯಿತಪ್ಪ. ನಾವು ಇಲ್ಲಿಂದ ಜಾಗ ಖಾಲಿ ಮಾಡಿ ಹೊಸ ಪಾಳಿಯವರಿಗೆ ಅವಕಾಶ ಮಾಡಿಕೊಡಬೇಕು’ ಎಂದು ಶ್ರೀಧರ ಕಣ್ಣು ಹೊಡೆಯುತ್ತ ಹೇಳಿದ. `ಕುಡುಕರ ಕಾಟ ಈ ಮೈದಾನಕ್ಕಿನ್ನೂ ತಪ್ಪಿಲ್ಲ ಹಾಗಾದ್ರೆ’ ಎಂದು ಮೋಹನ ನಸುನಗುತ್ತಾ ಕೇಳಿದ. `ಈಗಿನ್ನೂ ಜಾಸ್ತಿ ಆಗಿದೆ ಮಾರಾಯ’ ಎಂದ ಶ್ರೀಧರ.

`ಬೆಳಗ್ಗೆ ಸಿಗೋಣ’ ಎಂದು ಮೋಹನ ಎದ್ದುನಿಂತ. ಏನೋ ಹೊಳೆದವನಂತೆ ಹೊರಟುನಿಂತ ಮೋಹನನ್ನು ನಿಲ್ಲಿಸಿ, `ಒಂದು ವಿಷಯ ಹೇಳ್ತೇನೆ, ನೀನು ಹೇಗೆ ಅರ್ಥ ಮಾಡಿಕೊಳ್ತೀಯೋ ಗೊತ್ತಿಲ್ಲ. ನನಗೆ ಮೇಷ್ಟ್ರು ಬಗ್ಗೆ ತುಂಬಾ ಗೌರವ ಇರೋದರಿಂದ ಹೇಳ್ತಾ ಇದ್ದೀನಿ. ಈಚೆಗೆ ಮೇಷ್ಟ್ರು ಕೂಡ ಮೈದಾನದಲ್ಲಿ ರಾತ್ರಿ ಹೊತ್ತು ಕಾಣಿಸಿಕೊಳ್ತಿದ್ದಾರೆ. ಈ ಬಗ್ಗೆ ನೀನು ಏನಾದ್ರೂ ಮಾಡೋಕಾಗುತ್ತಾ ನೋಡು. ಆದ್ರೆ, ನಾನು ಈ ವಿಷಯ ಹೇಳ್ದೆ ಅಂತ ಮಾತ್ರ ಮೇಷ್ಟ್ರಿಗೆ ಹೇಳಬೇಡ’ ಎಂದ ಶ್ರೀಧರ. ಮೋಹನನಿಗೆ ಮಾತು ಹುಟ್ಟಲಿಲ್ಲ. ವಿಷಯವನ್ನು ಅರಗಿಸಿಕೊಳ್ಳುವುದೇ ಕಷ್ಟವಾಗಿ, ಒಮ್ಮೆಗೇ ಉಂಟಾದ ಕೋಪ ಹಾಗೂ ಸಂಕಟದಲ್ಲಿ ಆವರೆಗೂ ಉಂಡಿದ್ದ ಸಂಜೆಯ ತಂಪು ಕಳೆದುಹೋದಂತೆ ಖಿನ್ನನಾದ. ಮರಗಳ ಹಾಡುಗಳು ನಿಂತುಹೋಗಿದ್ದವು.

2

ಊರಿನ ಜನ ನಕ್ಕುಬಿಟ್ಟಿದ್ದರು. ಕೋಪದ ನಡುವೆಯೂ ಅಪ್ಪ ನಕ್ಕುಬಿಟ್ಟಿದ್ದರು. `ಏನೋ ಇದು ಹುಚ್ಚಾಟ’ ಎಂದ ಅಮ್ಮನ ದನಿಯಲ್ಲಿ ಮಗನ ದಡ್ಡತನದ ಬಗೆಗೆ ಅನುಕಂಪವಿತ್ತು. ಊರಿನ ಜನ ನಕ್ಕಾಗ, ಅಪ್ಪ ಕೋಪ ಮಾಡಿಕೊಂಡಾಗ, ಅಮ್ಮ `ಅಯ್ಯೋ’ ಎಂದಾಗ ಮೋಹನನಿಗೆ ಬೇಜಾರಾಗಿರಲಿಲ್ಲ. ಇದೆಲ್ಲವನ್ನೂ ಅವನು ನಿರೀಕ್ಷಿಸಿಯೇ ಇದ್ದ. ಆದರೆ ಅವನ ನಿರೀಕ್ಷೆಗೆ ಮೀರಿದ್ದುದು ಪ್ರಮೀಳಾಳ ನಗು.

ಊರ ಜನರಂತೆ ಪ್ರಮೀಳಾ ಕೂಡ ನಕ್ಕು ಸುಮ್ಮನಾಗಿದ್ದರೆ ಪರವಾಗಿರಲಿಲ್ಲ. ಆದರವಳು ಮೋಹನನ ಪ್ರಾಮಾಣಿಕತೆಯನ್ನು ಶಂಕಿಸಿದ್ದಳು. ಅವನ ಆದರ್ಶಗಳ ಪೊಳ್ಳುತನದತ್ತ ಬೆಟ್ಟು ಮಾಡುವ ಮೂಲಕ ಅವನ ವ್ಯಕ್ತಿತ್ವವನ್ನು ಪ್ರಶ್ನಿಸಿದ್ದಳು. `ಚೆಂದದೊಂದು ಕಾರಣ ಕೊಡಲಿಕ್ಕೂ ಬರದ ದಡ್ಡ ನೀನು. ಅಮೆರಿಕಾದ ದಾಳಿಕೋರತನ ವಿರೋಧಿಸಿ ಕೆಲಸ ಬಿಟ್ಟೆ ಎನ್ನೋದು ಎಷ್ಟು ತಮಾಷೆ ಅಲ್ವಾ? ಹೋಗಲಿ ನಿನ್ನ ಮಾತು ನಿಜ ಎಂದೇ ಒಪ್ಪಿಕೊಳ್ಳೋಣ. ಆದರೆ ಅಮೆರಿಕಾಕಕ್ಕೆ ಹೋಗುವ ಮುಂಚೆ ನಿನ್ನ ಬುದ್ಧಿ ಎಲ್ಲಿತ್ತು. ನೀನು ಅಲ್ಲಿಗೆ ಹೋಗೋ ಮುಂಚೆಯೇನೂ ಅಮೆರಿಕಾ ಶಾಂತಿಪ್ರಿಯ ದೇಶ ಆಗಿರಲಿಲ್ಲ ಅಲ್ಲವಾ?’

ಪ್ರಮೀಳಾಳ ಪ್ರಶ್ನೆಗೆ ಮೋಹನನಿಗೆ ತಕ್ಷಣ ಉತ್ತರಿಸಲಾಗಲಿಲ್ಲ. ಈ ಮುನ್ನ ಅವನನ್ನು ಯಾರೂ ಈ ರೀತಿ ಪ್ರಶ್ನಿಸಿರಲಿಲ್ಲ. ಅಮೆರಿಕದಲ್ಲಿನ ಕೆಲಸ ಬಿಟ್ಟು ಬಂದ ಮೋಹನನ ನಿರ್ಧಾರವನ್ನು ಗೇಲಿ ಮಾಡಿದವರಿದ್ದರು, ಕೋಪ ಮಾಡಿಕೊಂಡವರಿದ್ದರು. ಬದುಕಲು ಬಾರದ ದಡ್ಡ ಎಂದಿದ್ದರು. ಹುಚ್ಚುಮುಂಡೇದು ಎಂದವರೂ ಇದ್ದರು. ಆದರೆ ಅವನ ಉದ್ದೇಶವನ್ನೇ ಪ್ರಶ್ನಿಸಿದವರಿರಲಿಲ್ಲ. ಪ್ರಮೀಳಾ ಆ ಕೆಲಸ ಮಾಡಿದ್ದಳು.

ಯಾವುದಾದರೊಂದನ್ನು ಆರಿಸಿಕೊ ಎನ್ನುವಂತೆ ಮೋಹನ ಕಾರಣಗಳ ಮೇಲೆ ಕಾರಣ ಹೇಳುತ್ತಾ ಹೋದ. ಅಲ್ಲಿಗೆ ಹೋಗುವ ಮುನ್ನ ಹಾಗೂ ಹೋದ ನಂತರ ತನ್ನ ವಿಚಾರಧಾರೆಗಳಲ್ಲಾದ ಬದಲಾವಣೆಗಳ ಕುರಿತು ಹೇಳಿದ. ದೂರ ನಿಂತು ನೋಡುವುದಕ್ಕೂ ಒಳಗಿದ್ದು ನೋಡುವುದಕ್ಕೂ ಇರುವ ವ್ಯತ್ಯಾಸಗಳ ವಿವರಿಸಿದ. ಜಾಗತೀಕರಣದ ಕುರಿತು ವಾದ ಮಂಡಿಸಿದ. ತನ್ನ ವಾದಕ್ಕೆ ಸಮರ್ಥನೆಯಾಗಿ ಗಾಂಧಿಯಿಂದ ಅನಂತಮೂರ್ತಿಯವರೆಗಿನ ಚಿಂತಕರನ್ನು ಗುರಾಣಿಯಾಗಿ ಬಳಸಿದ. ದಾಳಿಕೋರತನದ ವಿರೋಧವೊಂದೇ ಅಲ್ಲ; ಗುಲಾಮಿತನವೂ ಬೇಡವೆನ್ನಿಸಿತು, ವಾಪಸ್ಸು ಬಂದೆ ಎಂದ. ಯಾರಿಗೋ ಜೀತ ಮಾಡುವುದಕ್ಕೆ ಬದಲಾಗಿ ಊರಲ್ಲೇ ಇದ್ದು ಏನನ್ನಾದರೂ ಸಾಧಿಸುವ ತನ್ನ ಕನಸಿನ ಕುರಿತು ಹೇಳಿದ.

ಪ್ರಮೀಳಾ ಸುಲಭಕ್ಕೆ ಒಪ್ಪಿಕೊಳ್ಳಲಿಲ್ಲ. `ಇದೆಲ್ಲವನ್ನೂ ನೀನು ಮೊದಲೇ ಯೋಚಿಸಬೇಕಿತ್ತು. ಅಮೆರಿಕನ್ನರ ಐಷಾರಾಮಿ ಬದುಕು, ಗಗನಚುಂಬಿಗಳು, ಸಪಾಟು ರಸ್ತೆ, ಡಾಲರುಗಳ ಕೊಬ್ಬು- ಪ್ರತಿಯೊಂದೂ ದುರ್ಬಲ ರಾಷ್ಟ್ರಗಳ ಕೊಳ್ಳೆಯಿಂದಲೇ ಬಂದುದು. ನೀನು ಈ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಅಮೆರಿಕಾಗೆ ಹೋಗಬೇಕಿರಲಿಲ್ಲ. ನಿಜವಾಗಿ ಹೇಳಬೇಕೆಂದರೆ ನಿನ್ನದು ಪಲಾಯನವಾದ. ಸೋಲನ್ನು ಮುಚ್ಚಿಕೊಳ್ಳಲು ಏನೇನೋ ಕಾರಣಗಳನ್ನು ಸೃಷ್ಟಿಸುತ್ತಿರುವೆ. ಇಷ್ಟಕ್ಕೂ ಪರಿಪೂರ್ಣವಾದ ವ್ಯವಸ್ಥೆಯಾದರೂ ಯಾವುದು? ಪ್ರತಿಯೊಂದನ್ನೂ ನಿರಾಕರಿಸುತ್ತ ಓಡತೊಡಗಿದರೆ ನಿಲ್ದಾಣವಾದರೂ ಎಲ್ಲಿದೆ? ಬಹುಶಃ ನಿನ್ನನ್ನು ನೀನೇ ವಂಚಿಸಿಕೊಳ್ಳುತ್ತಿರುವೆ’.

ಮೋಹನ ದಿಗ್ಭ್ರಾಂತನಾಗಿದ್ದ. ಅವನ ಕಲ್ಪನೆಯ ಪ್ರಮೀಳಾ ಬೇರೆಯೇ ಆಗಿದ್ದಳು. ತನ್ನ ನಿರ್ಧಾರದ ಬಗ್ಗೆ ಅವನಿಗೆ ಪೂರ್ಣ ವಿಶ್ವಾಸವಿತ್ತಾದರೂ, ಪ್ರಮೀಳಾಳ ಮಾತುಗಳನ್ನು ಕೇಳಿದ ಮೇಲೆ ತನ್ನ ಯೋಚನೆಯ ಮಿತಿಗಳ ಕುರಿತು ನಾಚಿಕೆಯೆನ್ನಿಸಿತು. ಆ ನಾಚಿಕೆಯಲ್ಲೇ, `ಬಹುಶಃ ನನ್ನ ನಿರ್ಧಾರದಲ್ಲಿ ವೈಚಾರಿಕೆಗಿಂತ ಭಾವುಕತೆಯ ಪಾಲೇ ಹೆಚ್ಚಿರಬೇಕು’ ಎಂದು ಸಂಧಾನದ ಧಾಟಿಯಲ್ಲಿ ಹೇಳಿದ.

ತನ್ನ ಮಾತುಗಳಿಂದ ಮೋಹನ ಘಾಸಿಗೊಂಡಿರುವುದು ಅರ್ಥವಾದವಳಂತೆ- `ತಪ್ಪು ತಿಳೀಬೇಡ ಮೋಹನ. ನಿನ್ನನ್ನು ನಾನು ಅನುಮಾನಿಸುತ್ತಿಲ್ಲ. ಅಮೆರಿಕಾ ಬಿಟ್ಟುಬಂದ ನಿನ್ನ ಬಗ್ಗೆ ನನಗೆ ಹೆಮ್ಮೆಯೆನ್ನಿಸುತ್ತದೆ. ಆದರೆ ದುಡುಕಿಬಿಟ್ಟೆಯೇನೊ ಎಂದು ಒಂದೊಂದ್ಸಲ ಅನ್ನಿಸುತ್ತೆ. ಎಷ್ಟು ಜನಕ್ಕೆ ಅಮೆರಿಕಾಗೆ ಹೋಗೋ ಅವಕಾಶ ಸಿಗುತ್ತೆ ಹೇಳು?’ ಎಂದಳು ಪ್ರಮೀಳಾ.

`ನಾನು ದಡ್ಡ ಎನ್ನೋ ಊರವರ ಒಮ್ಮತದ ನಿರ್ಣಯಕ್ಕೆ ನಿನ್ನ ಸಹಮತವೂ ಇದೆ ಅನ್ನು’ ಎಂದು ಮೋಹನ ನಕ್ಕ. ಪ್ರಮೀಳಾ ಕೂಡ ನಕ್ಕಳು.

`ಅಮೆರಿಕಾದ ಕಥೆ ಬಿಡು. ನಿನ್ನ ಕಥೆ ಹೇಳು. ಇಲ್ಲಿದ್ದು ಏನು ಮಾಡಬೇಕು ಅಂದ್ಕೊಂಡಿದ್ದೀಯಾ ಹೇಳು’ ಎಂದಳು ಪ್ರಮೀಳಾ.

`ಸತ್ಯದ ಅನ್ವೇಷಣೆ. ಗಾಂಧಿಯ ಹಾದಿಯಲ್ಲಿ ನಡೆಯೋದು’.

`ಅದು ಸರಿಯಪ್ಪ, ಹೊಟ್ಟೆಗೇನು ಮಾಡ್ತೀಯಾ?’.

`ಊರ ಹಿತದಲ್ಲೇ ನನ್ನ ಹಿತವೂ ಅಡಗಿದೆ ಗೆಳತಿ’.

`ನಿಮ್ಮಪ್ಪ ಮೋಹನ ಅಂತ ಹೆಸರಿಟ್ಟಿದ್ದು ಸಾರ್ಥಕವಾಯ್ತು ನೋಡು. ಇನ್ನೊಂದು ವಿಷಯ ಗೊತ್ತಾ? ಭಾರತೀಯರಿಗೆಲ್ಲ ಜ್ಞಾನೋದಯವಾಗುವುದು ಪರಸ್ಥಳಗಳಲ್ಲೇ. ಗಾಂಧಿಗೆ ಜ್ಞಾನೋದಯವಾದದ್ದು ಪರದೇಶದಲ್ಲಿ; ನಿನ್ನ ಜ್ಞಾನೋದಯವೂ ಪರದೇಶದಲ್ಲೇ. ಮನೆ ಬಿಟ್ಟ ಮೇಲೆಯೇ ಗೌತಮನಿಗೆ ಜ್ಞಾನೋದಯವಾಗಿ ಬುದ್ಧನಾದದ್ದು. ಯಾರಿಗೆ ಗೊತ್ತು, ನೀನು ಮರಿಗಾಂಧಿ ಆದ್ರೂ ಆಗಬಹುದು’.

`ಜ್ಞಾನೋದಯದ ಬಗೆಗೆ ನಿನ್ನ ಸಿದ್ಧಾಂತ ಚೆನ್ನಾಗಿದೆ’ ಎಂದ ಮೋಹನ.

`ಏ ಮೋಹನ ಅಮೆರಿಕದಲ್ಲಿ ನಿನಗೆ ಯಾವ ಹುಡುಗಿಯೂ ಗಂಟು ಬೀಳಲಿಲ್ಲವೇನೊ?’ ಮಾತು ಬದಲಿಸಿದ ಪ್ರಮೀಳೆಯ ದನಿಯಲ್ಲಿ ತುಂಟತನವಿತ್ತು, ಕುತೂಹಲವಿತ್ತು.

`ನನ್ನ ಮನಸ್ಸು ನನ್ನ ಬಳಿ ಇಲ್ಲದಿರುವುದು ನಿನಗೆ ಗೊತ್ತಲ್ವಾ’ ಎಂದು ಮೋಹನ ಒಗಟಿನಂತೆ ಉತ್ತರಿಸಿದ. ಪ್ರಮೀಳೆ ಮೌನವಾದಳು. ತುಂಬಾ ಹೊತ್ತಿನ ನಂತರ-

`ಆದರ್ಶದ ಕನಸುಗಳಿಗೂ ಪ್ರೇಮದ ಕನಸುಗಳಿಗೂ ಹೊಂದಾಣಿಕೆಯಾಗುವುದಿಲ್ಲ ಎಂದು ಅಪ್ಪ ಹೇಳ್ತಿರ್ತಾರೆ’ ಎಂದಳು.

`ನಿನ್ನ ಅಭಿಪ್ರಾಯವೂ ಅದೇ ಏನು?’

`ನಾನಿನ್ನೂ ಸ್ವಂತ ಅಭಿಪ್ರಾಯ ಇಟ್ಟುಕೊಳ್ಳುವಷ್ಟು ಸ್ವತಂತ್ರಳಲ್ಲ.’

……… ……….. ………..

ಇನ್ನೇನು ಹೊರಡಬೇಕು ಅನ್ನುವಾಗ ಕೊನೆಯ ಗೊಂದಲವನ್ನು ಪರಿಹರಿಸಿಕೊಳ್ಳುವವಳಂತೆ ಪ್ರಮೀಳಾ ಕೇಳಿದಳು-

`ನಾನು ಈ ರೀತಿ ಕೇಳ್ತಿರೋದಕ್ಕೆ ತಪ್ಪು ತಿಳಿಬೇಡ. ಮನಸ್ಸಲ್ಲಿ ಯಾವುದೇ ಪ್ರಶ್ನೆ ಉಳಿಸಿಕೊಳ್ಳೋದು ಬೇಡ ಅಂತ ಕೇಳ್ತಿದ್ದೀನಿ. ನೀನಾಗಿಯೇ ಕೆಲಸ ಬಿಟ್ಟು ಬಂದೆಯೋ, ಅಥವಾ….. ಇದು ಲೇಆಫ್ ಕಾಲ ಅಲ್ವಾ…..’

ಗುಟ್ಟುಗಳನ್ನು ಓದಿಬಿಡುವವನಂತೆ ಪ್ರಮೀಳಾಳ ಕಣ್ಣುಗಳನ್ನೋ ನೋಡುತ್ತಾ ಹೇಳಿದ,

`ನಾನು ಸುಳ್ಳನಲ್ಲ’

`ನನಗೆ ಗೊತ್ತಿತ್ತು. ಖಚಿತ ಪಡಿಸಿಕೊಂಡೆ ಅಷ್ಟೆ’ ಎಂದ ಪ್ರಮೀಳಾ ಮೋಹನನ ಕೈ ಅಮುಕಿದಳು. ಮೋಹನನ ಕಣ್ಣುಗಳಲ್ಲಿ ಹೊಳಪು ತುಳುಕಿತು.

*****

ಮೋಹನ ಹಾಗೂ ಪ್ರಮೀಳೆಯ ಅಪ್ಪಂದಿರಿಬ್ಬರು ಜೀವದ ಗೆಳೆಯರು. ಮೋಹನ ಹಾಗೂ ಪ್ರಮೀಳೆಯ ನಡುವೆಯೂ ಗೆಳೆತನ ಸಹಜವಾಗಿಯೇ ಬೆಳೆದಿತ್ತು. ಮೋಹನ ಅಮೆರಿಕಾಗೆ ಹಾರುವ ಸ್ವಲ್ಪ ದಿನಗಳ ಮೊದಲಷ್ಟೇ ತಮ್ಮ ಗೆಳೆತನ ಸಂಬಂಧದ ಬಂಧದಲ್ಲಿ ಗಟ್ಟಿಯಾಗಬಾರದೇಕೆ ಎನ್ನುವ ಪ್ರಸ್ತಾವನೆಯನ್ನು ಪ್ರಮೀಳೆಯ ಅಪ್ಪ ಮಂಡಿಸಿದ್ದ. ಈ ಪ್ರಸ್ತಾವನೆಯನ್ನು ಎಲ್ಲರೂ ಸಂತೋಷದಿಂದಲೇ ಒಪ್ಪಿಕೊಂಡಿದ್ದರು. ಆದರೆ, ತನ್ನ ಅಮೆರಿಕಾದ ಕೆಲಸಕ್ಕೂ ಪ್ರಮೀಳೆಯೊಂದಿಗಿನ ಮದುವೆಗೂ ಸಂಬಂಧವಿದೆ ಎನ್ನುವ ಯೋಚನೆ ಮೋಹನನಿಗೆಂದೂ ಬಂದಿರಲಿಲ್ಲ. ಈಗ ಪ್ರಮೀಳೆಯ ಅಪ್ಪನ ನಡವಳಿಕೆಯನ್ನು ನೋಡಿದರೆ ಅವರು ಮೆಚ್ಚಿಕೊಂಡಿದ್ದುದು ಅಮೆರಿಕಾದಲ್ಲಿರುವ ಮೋಹನನನ್ನೇ ಹೊರತು ಹಳ್ಳಿಯಲ್ಲಿನ ತನ್ನನ್ನಲ್ಲ ಎನ್ನುವುದು ಸ್ಪಷ್ಟವಾಗಿ ಮೋಹನ ನಿರಾಶನಾಗಿದ್ದ. ಪ್ರಮೀಳೆಗೆ ತನ್ನ ಕುರಿತು ಪ್ರೀತಿಯಿದ್ದರೂ ಅಪ್ಪ ಹಾಕಿದ ಗೆರೆಯನ್ನು ಮೀರುವ ಶಕ್ತಿ ಅವಳಿಗಿಲ್ಲ ಎನ್ನುವುದೂ, ಪ್ರಮೀಳೆಯ ಹೊರತಾಗಿ ಬೇರೆ ಹುಡುಗಿಯನ್ನು ಬಾಳಸಂಗಾತಿಯನ್ನಾಗಿ ಕಲ್ಪಿಸಿಕೊಳ್ಳುವುದು ತನಗೆ ಸಾಧ್ಯವಿಲ್ಲ ಎನ್ನುವುದೂ ಮೋಹನನಿಗೆ ಅರ್ಥವಾಗಿತ್ತು.

ಮೊನ್ನೆ ಪ್ರಮೀಳೆ ಆಕಸ್ಮಿಕವಾಗಿ ಸಿಕ್ಕಾಗ, ತಾನಾಗಲೀ ಅವಳಾಗಲೀ ಮದುವೆಯ ಕುರಿತು ಒಂದೂ ಮಾತನ್ನು ನೇರವಾಗಿ ಆಡದಿರಲು ಹೇಗೆ ಸಾಧ್ಯವಾಯಿತು ಎನ್ನುವ ವಿಷಯ ಮೋಹನನಿಗೆ ಒಗಟಾಗಿಯೇ ಉಳಿಯಿತು.

3

`ನಾನಿನ್ನು ಅಮೆರಿಕಾಗೆ ಹೋಗೋದಿಲ್ಲ. ಅಲ್ಲಿನ ಕೆಲಸ ಬಿಟ್ಟು ಬಂದ್ಬಿಟ್ಟೆ. ಇಲ್ಲಿದ್ದೇ ಏನಾದ್ರೂ ಮಾಡ್ತೀನಿ’ ಎಂದು ಮೋಹನ ಹೇಳಿದಾಗ ಮೇಷ್ಟ್ರು ಮೊದಲಿಗೆ ನಂಬಿರಲಿಲ್ಲ. ಮಗ ತಮಾಷೆ ಮಾಡುತ್ತಿದ್ದಾನೆ ಎಂದುಕೊಂಡು ನಕ್ಕಿದ್ದರು. ಆದರೆ ವಾರದ ನಂತರವೂ ಮೋಹನ ಅದೇ ರಾಗ ಹಾಡತೊಡಗಿದಾಗ ಕೆಂಡಾಮಂಡಲವಾಗಿದ್ದರು.

`ಮನೆಯ ಜವಾಬ್ದಾರಿಗಳನ್ನು ಅರ್ಥ ಮಾಡಿಕೊ. ನಿನ್ನನ್ನು ನಂಬಿಕೊಂಡು ಮನೆ ಕಟ್ಟಿದ್ದಾಯ್ತು. ಯಾವ ಯಾವುದಕ್ಕೋ ಸಾಲ ಮಾಡಿದ್ದಾಯ್ತು. ನಿನ್ನಮ್ಮನ ಆರೋಗ್ಯ ಬೇರೆ ಸರಿಯಿಲ್ಲ. ಮನೆ-ಆಸ್ಪತ್ರೆ ಅಂತಲೇ ಪೆನ್ಷನ್ ಎಲ್ಲಾ ಖರ್ಚಾಗುತ್ತೆ. ಇದೆಲ್ಲ ನಿನಗೆ ಯಾಕೆ ಅರ್ಥವಾಗೋಲ್ಲ?’ ಎಂದು ಮಗನ ಬೇಜವಾಬ್ದಾರಿಯನ್ನು ಟೀಕಿಸಿದ್ದರು.

`ಮಗನಿಂದ ಕಷ್ಟಗಳೆಲ್ಲ ತೀರುವ ದಿನಗಳು ಬಂದವು ಎಂದು ನೆಮ್ಮದಿಯ ಉಸಿರು ಬಿಡುವ ಹೊತ್ತಿನಲ್ಲಿ ಏನೋ ಇದು ಹುಚ್ಚಾಟ. ನೀನು ಮಾಡ್ತಿರೋದು ಸರಿಯಲ್ಲ ಕಣಪ್ಪ’ ಎಂದು ಅಮ್ಮ ಕಣ್ಣೀರು ಹಾಕಿದಾಗ ಮೋಹನನಿಗೆ ನಾಲಗೆ ಕಟ್ಟಿತ್ತು.

`ನೀವೇನೂ ಯೋಚನೆ ಮಾಡಬೇಡಿ. ಇಲ್ಲಿದ್ದೇ ದುಡೀತೀನಿ. ಸಾಲವನ್ನು ನಾನೇ ತೀರಿಸ್ತೇನೆ. ನಿಮಗೂ ವಯಸ್ಸಾಯ್ತು. ಈ ವಯಸ್ಸಲ್ಲಿ ನಾನು ನಿಮ್ಮ ಹತ್ತಿರ ಇರೋದೇ ಒಳ್ಳೆಯದಲ್ಲವಾ?’ ಎಂದು ಮೋಹನ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ.

ಮೇಷ್ಟ್ರು ಯಾವ ಸಮರ್ಥನೆಗೂ ಮೆದುವಾಗುವಂತಿರಲಿಲ್ಲ. ಕೊನೆಕೊನೆಗಂತೂ, `ನೀನು ನಮ್ಮನ್ನು ಸಾಕದಿದ್ದರೂ ಪರವಾಗಿಲ್ಲ. ನಮ್ಮ ಕಷ್ಟಗಳಿಗೆ ಹೆಗಲು ಕೊಡದಿದ್ದರೂ ಪರವಾಗಿಲ್ಲ. ಇಲ್ಲಿದ್ದು ನಮ್ಮ ಮರ್ಯಾದೆ ಕಳೀಬೇಡ, ಕಾಣದ ದೇಶದಲ್ಲಿ ಭಿಕ್ಷೆ ಬೇಡಿಕೊಂಡಾದರೂ ಇರು. ಊರಿನವರ ಪ್ರಶ್ನೆಗಳಿಗೆಲ್ಲ ಉತ್ತರಿಸಿ ಹುಚ್ಚು ಹಿಡಿಯೋದೊಂದೇ ಬಾಕಿ’ ಎಂದು ಬೇಡಿಕೊಂಡಿದ್ದರು. ಮಗ ತಮ್ಮ ಕೋಪಕ್ಕೆ, ಬೇಡಿಕೆಗೆ, ಅಮ್ಮನ ಕಣ್ಣೀರಿಗೆ ಮಣಿಯದಿದ್ದಾಗ ಗೆಳೆಯರಿಂದಲೂ ಹೇಳಿಸಿನೋಡಿದ್ದರು.

ಮೋಹನನ ನಿರ್ಧಾರ ಅಚಲವಾಗಿತ್ತು. ಬೇರುಬಿಡುವ ನೆಲದಲ್ಲಿ ಕಲ್ಲುಕೊರಕಲುಗಳ ಅಡೆತಡೆ ಇರುತ್ತವೆಂದು ಅವನು ನಿರೀಕ್ಷಿಸಿಯೇ ಇದ್ದ. ಈ ಎಲ್ಲ ಅಡೆತಡೆಗಳ ದಾಟಿ, ಬೇರುಬಿಟ್ಟು, ಏನ್ನನಾದರೂ ಸಾಧಿಸಿ ಅಪ್ಪನಿಂದ ಸೈ ಅನ್ನಿಸಿಕೊಳ್ಳಬೇಕೆಂದು ಕನಸು ಕಾಣುತ್ತಿದ್ದ. ಇಂದಲ್ಲಾ ನಾಳೆ ಮಗನೆಂಬ ವಾತ್ಸಲ್ಯದೆದುರು ಅಪ್ಪ ಅಮ್ಮನ ವಿರೋಧದ ಕಾವು ಕರಗುತ್ತದೆಂದು ಯೋಚಿಸಿದ್ದ. ಆದರೆ ಅವನ ನಿರೀಕ್ಷೆಗೆ ವಿರುದ್ಧವಾಗಿ ಅಪ್ಪ ಸಂಬಂಧ ಕಡಿದುಕೊಳ್ಳುವ ಮಾತನಾಡಿದ್ದರು.

`ನನ್ನ ಮಗಳು ಸದ್ಯಕ್ಕೆ ಮದುವೆ ಬೇಡವೆನ್ನುತ್ತಿದ್ದಾಳೆ’ ಎನ್ನುವ ಪ್ರಮೀಳೆಯ ಅಪ್ಪನ ಒಂದು ಸಾಲಿನ ಸಂದೇಶ ಮೂರನೆಯವರ ಮೂಲಕ ತಲುಪಿದಾಗ ಮೇಷ್ಟ್ರು ಮೋಹನನ ಬಗ್ಗೆ ಮತ್ತಷ್ಟು ಕ್ರುದ್ಧರಾಗಿದ್ದರು. `ಬಂಗಾರದಂಥ ಸಂಬಂಧವನ್ನು ಹಾಳು ಮಾಡಿಕೊಂಡೆ ನೋಡು. ಪ್ರಮೀಳೆ ಅಷ್ಟೇ ಅಲ್ಲ, ಇನ್ನ್ಯಾಯರೂ ನಿನ್ನನ್ನು ಮೂಸಿ ನೋಡೊಲ್ಲ. ಯಾವುದಾದ್ರೂ ಮಾಸಿದ ಮುಖ ಸಿಗಬೇಕು ಅಷ್ಟೇ’ ಎಂದು ಕೂಗಾಡಿದ್ದರು.

`ಇನ್ನೂ ಕಾಲ ಮಿಂಚಿಲ್ಲ. ತಪ್ಪನ್ನು ಸರಿ ಮಾಡಿಕೊಳ್ಳಲು ಪ್ರಯತ್ನಿಸು. ಅಮೆರಿಕಾಗೆ ಹೋಗಲಿಕ್ಕೆ ನಿನಗಿಷ್ಟವಿಲ್ಲದಿದ್ದರೆ ಬೇಡ. ಬೆಂಗಳೂರಿನಲ್ಲಾದ್ರೂ ಕೆಲಸಕ್ಕೆ ಸೇರಿಕೊ. ನಿನ್ನ ಓದಿಗೆ ಒಳ್ಳೆಯ ಕೆಲಸ ಸಿಕ್ಕೇ ಸಿಗುತ್ತೆ. ಬೇಕಿದ್ರೆ ನಿಂಜೊತೆ ನಾವೂ ಬೆಂಗಳೂರಿಗೆ ಬರ‍್ತೀವಿ’ ಎಂದು ಸಿಟ್ಟು ಕಡಿಮೆಯಾದ ನಂತರ ಮೇಷ್ಟ್ರು ಹೇಳಿದ್ದರು.

ಮೋಹನನ ನಿರ್ಧಾರ ಬದಲಾಗಿರಲಿಲ್ಲ.

`ಅಪ್ಪಾ ಕೆಲಸದ ಬಗ್ಗೆ ದಯವಿಟ್ಟು ಏನನ್ನೂ ಹೇಳಬೇಡಿ. ನನಗೆ ಈ ಊರು ಬಿಟ್ಟು ಹೋಗಲಿಕ್ಕೆ ಸಾಧ್ಯವಿಲ್ಲ. ನೀವು ದುಡ್ಡಿನ ಬಗ್ಗೆ ತೀರಾ ತಲೆ ಕೆಡಿಸಿಕೊಳ್ಳಬೇಡಿ. ಇಲ್ಲಿದ್ದೇ ನಾವೆಲ್ಲಾ ಸುಖವಾಗಿರಬಹುದು. ಈ ಜಗತ್ತಲ್ಲಿ ಪ್ರಮೀಳಾ ಒಬ್ಬಳೇ ಹೆಣ್ಣಲ್ಲ. ನನ್ನ ಕೆಲಸವನ್ನು ನೋಡಿ ಮದುವೆಯಾಗುವ ಹೆಣ್ಣು ನನಗೆ ಬೇಡ. ಮದುವೆ ವಿಷಯ ಸದ್ಯಕ್ಕೆ ಬಿಟ್ಟು ಬಿಡಿ. ನಾನು ಇಲ್ಲಿದ್ದೇ ದುಡೀತೀನಿ. ಸಾಧ್ಯವಾದರೆ ನನಗೊಂದು ಕೆಲಸ ಕೊಡಿಸಿ. ಹೇಗಿದ್ದರೂ ಅಕ್ಕಮಹಾದೇವಿ ಸ್ಕೂಲಿನವರು ನಿಮ್ಮ ಸ್ನೇಹಿತರು’ ಎಂದ ಮೋಹನ.

ಮೇಷ್ಟ್ರು ಸಹನೆ ತೀರಿಹೋದದ್ದೇ ಆಗ. `ನನ್ನ ಮಾತು ಕೇಳದಿದ್ದ ಮೇಲೆ ನನಗೂ ನಿನಗೂ ಯಾವ ಸಂಬಂಧವೂ ಇಲ್ಲ. ನೀನು ಈ ಮನೆಯಲ್ಲಿ ಇರಬೇಕಾದ್ದೂ ಇಲ್ಲ’ ಎಂದು ಇದೇ ಅಂತಿಮ ಎನ್ನುವಂತೆ ಮಾತು ಮುಗಿಸಿ ಹೊರಗೆ ಹೋದರು. ಮತ್ತೆ ಅವರು ಮನೆ ಸೇರಿದ್ದು ರಾತ್ರಿ ಕಲ್ಲುಕರಗುವ ವೇಳೆಯಲ್ಲಿ. ಕೋಣೆಯೊಳಗಿನಿಂದ ಬಹುಹೊತ್ತಿನವರೆಗೂ ಕೇಳಿಸುತ್ತಿದ್ದ ಅಪ್ಪನ ತೊದಲು ಹಾಗೂ ಅಮ್ಮನ ಅಳುವಿನಿಂದಾಗಿ ಮೋಹನ ಆ ರಾತ್ರಿ ನಿದ್ದೆ ಹೋಗಲಿಲ್ಲ.

*****

ಹೊಲ ಕೆರೆ, ನಾಲ್ಕು ಗಾಲಿಯ ಬಾವಿ, ಸಂತೆ ಮೈದಾನ, ನಾಗರಹಳ್ಳ, ರಂಗಪ್ಪಸ್ವಾಮಿಗಳ ಗದ್ದುಗೆ, ಹೀಗೆ ಮೋಹನ ಸುತ್ತದ ತಾವೇ ಊರಲ್ಲಿರಲಿಲ್ಲ. ಊರಿನ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು ಅವನ ತಿರುಗಾಟದ ಉದ್ದೇಶವಾಗಿತ್ತು. ಬಡತನ, ಅನಕ್ಷರತೆ, ಶೋಷಣೆ, ಜಾತೀಯತೆ ಮುಂತಾದ ಜಾಡ್ಯಗಳು ಎಲ್ಲೆಡೆಯಂತೆ ಈ ಊರಲ್ಲೂ ಇದ್ದವು. ಅವುಗಳನ್ನು ಅರ್ಥ ಮಾಡಿಕೊಳ್ಳಲೇನೋ ಪ್ರಯತ್ನಿಸಬಹುದು, ಪರಿಹರಿಸುವುದು ಹೇಗೆ? ಮೋಹನ ಊರಿನ ಯುವಕ ಸಂಘದ ಪ್ರತಿನಿಧಿಗಳನ್ನು ಭೇಟಿ ಮಾಡಿದ. ಹಿರೀಕರನ್ನು ಮಾತನಾಡಿಸಿದ. ಆದರೆ ದಾರಿ ಸ್ಪಷ್ಟವಾಗಲಿಲ್ಲ. ವಂತಿಗೆ ಸಂಗ್ರಹಿಸಿ ರಾಜ್ಯೋತ್ಸವ ಆಚರಿಸುವುದು, ಸ್ಕೂಲು ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸುವುದು, ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವುದಕ್ಕಷ್ಟೇ ಯುವಕ ಸಂಘದ ಚಟುವಟಿಕೆಗಳು ಸೀಮಿತವಾಗಿದ್ದವು. ಇದರಾಚೆಗೆ ಯೋಚಿಸುವುದಕ್ಕೆ ಅವರಿಗೆ ಮನಸ್ಸೂ ಇರಲಿಲ್ಲ. ಇನ್ನು ಊರ ಹಿರಿತಲೆಗಳು ಮೋಹನನಿಗೆ ದಾರಿ ತೋರುವ ಬದಲು ಮತ್ತಷ್ಟು ಧೈರ್ಯಗುಂದಿಸಿದರು. `ಮೊದಲು ಅಪ್ಪ ಅಮ್ಮನಿಗೆ ತಕ್ಕ ಮಗನಾಗು’ ಎಂದು ಬುದ್ಧಿ ಹೇಳಿದರು. ಗೆಳೆಯರನ್ನಾದರೂ ಒಟ್ಟು ಮಾಡಿಕೊಂಡು ಏನನ್ನಾದರೂ ಮಾಡುವುದು ಸಾಧ್ಯವಾ ಎಂದು ಮೋಹನ ಪ್ರಯತ್ನಿಸಿದ. ಆದರೆ ಈಗಾಗಲೇ ಸಂಸಾರಸ್ಥರಾಗಿದ್ದ ಮಕ್ಕಳೊಂದಿಗರಾಗಿದ್ದವರಿಗೆ ಯಾವುದರಲ್ಲೂ ಆಸಕ್ತಿಯಿರಲಿಲ್ಲ. ಉಳಿದವರಿಗೆ ಕೆಲಸ ಹುಡುಕಿಕೊಂಡು, ಮದುವೆಯಾಗಿ ನೆಲೆ ನಿಲ್ಲುವುದೇ ಮುಖ್ಯವಾಗಿತ್ತು.

ತಿಂಗಳು ಕಳೆಯುವಷ್ಟರಲ್ಲಿ ಮೋಹನನ ಉತ್ಸಾಹ ಅರ್ಧಕ್ಕರ್ಧ ಕಡಿಮೆಯಾಗಿತ್ತು. `ತಕ್ಷಣಕ್ಕೆ ಕೆಲಸ ಕೊಡುವುದು ಸಾಧ್ಯವಿಲ್ಲ. ಬೇಸಗೆ ರಜೆ ಕಳೆದ ಮೇಲೆ ಬನ್ನಿ’ ಎಂದು ಅಕ್ಕಮಹಾದೇವಿ ಸ್ಕೂಲಿನ ಅಧ್ಯಕ್ಷರು ಹೇಳಿದ್ದರು. ರಜೆ ಕಳೆದು ಮತ್ತೆ ಶಾಲೆ ಶುರುವಾಗಲಿಕ್ಕೆ ಮೂರ‍್ನಾಲ್ಕು ತಿಂಗಳು ಬಾಕಿಯಿತ್ತು.

ಅಮೆರಿಕ ಬಿಟ್ಟು ಬರಲು ಆತುರ ತೋರಿದೆನೇನೊ ಎಂದು ಮೋಹನನಿಗೆ ಅನ್ನಿಸತೊಡಗಿತು. `ಊರು ತನ್ನನ್ನು ಪ್ರೀತಿಯಿಂದ ಸ್ವಾಗತಿಸುತ್ತದೆ’ ಎಂದು ಇಲ್ಲಿಗೆ ಬರುವ ಮುಂಚೆ ಅಂದುಕೊಂಡಿದ್ದ. ಆದರೆ ಊರು ಮೋಹನನನ್ನು ಅಪರಿಚಿತನಂತೆ ನೋಡತೊಡಗಿತ್ತು. ಅವಿವೇಕಿಯಂತೆ ಕಾಣತೊಡಗಿತ್ತು. ಮೋಹನನ ಆದರ್ಶಗಳಿಗೆ ಊರಿನಲ್ಲಿ ಕವಡೆ ಕಿಮ್ಮತ್ತೂ ಇರಲಿಲ್ಲ. ಇಡೀ ಊರು ದುಡ್ಡು ಹಾಗೂ ಅಕಾರದ ಬೆನ್ನು ಬಿದ್ದಿದೆ ಎಂದು ಮೋಹನನಿಗನ್ನಿಸುತ್ತಿತ್ತು. ಅಮೆರಿಕಾದಿಂದ ಬರುವಾಗ ಒಂದಷ್ಟು ಲಕ್ಷಗಳನ್ನು ಹೊತ್ತು ತಂದಿದ್ದರೆ ಒಂದಿಷ್ಟು ಗೌರವವಾದರೂ ಇರುತ್ತಿತ್ತೇನೊ ಅನ್ನಿಸುತ್ತಿತ್ತು. ತನ್ನಂಥ ಯುವಕರ ಅವಶ್ಯಕತೆ ಊರಿಗಿದೆ ಎಂದು ಮೋಹನ ಅಂದುಕೊಂಡಿದ್ದುದು ಸುಳ್ಳಾಗಿತ್ತು. ಅಮೆರಿಕಾ ತ್ಯಜಿಸಲಿಕ್ಕೆ ಮೋಹನ ಏನೆಲ್ಲ ಕಾರಣಗಳನ್ನು ಹುಡುಕಿಕೊಂಡಿದ್ದನೋ, ಅವೆಲ್ಲ ಕಾರಣಗಳು ಇಲ್ಲೂ ಇದ್ದವು. ತನ್ನೂರು ಅಮೆರಿಕಾದ ಒಂದು ತುಂಡಿನಂತೆ ಕಾಣಿಸಿ ಮೋಹನ ಖಿನ್ನಗೊಳ್ಳುತ್ತಿದ್ದ. ಒಂದಷ್ಟು ದುಡ್ಡು ಸಂಪಾದಿಸದ ಹೊರತು ಊರು ತನ್ನನ್ನು ವಿಶ್ವಾಸದಿಂದ ಕಾಣುವುದಿಲ್ಲವೆನ್ನುವುದು ಅವನಿಗೆ ಸ್ಪಷ್ಟವಾಗಿತ್ತು.

ಸಣ್ಣ ಊರೊಂದರಲ್ಲಿ ನೆಲೆ ಕಂಡುಕೊಳ್ಳಲಾಗದ ತನ್ನ ಅಸಾಮರ್ಥ್ಯದ ಕುರಿತು ಮೋಹನ ದುಗುಡಗೊಳ್ಳುತ್ತಿದ್ದ. ಇಡೀ ದೇಶವನ್ನು ತನ್ನ ನಿಲುವಿಗೆ ಒಲಿಸಿಕೊಂಡ ತುಂಡುಬಟ್ಟೆಯ ಗಾಂಧಿಮಹಾತ್ಮನ ಮಾರ್ಗದಲ್ಲಿ ಸಾಗುವುದು ತನ್ನಿಂದ ಸಾಧ್ಯವಿಲ್ಲ ಎಂದು ಸೋಲೊಪ್ಪಿಕೊಂಡ. ಹೋರಾಟದ ದಾರಿಯಲ್ಲೀಗ ಅವನ ಪಾಲಿಗುಳಿದ ಗುರಿ ಸೀಮಿತವಾಗಿತ್ತು. `ಊರನ್ನಂತೂ ಗೆಲ್ಲಲು ಸಾಧ್ಯವಾಗಲಿಲ್ಲ, ಕನಿಷ್ಠ ಮನೆಯನ್ನಾದರೂ ಸರಿಪಡಿಸಬೇಕು’.

4

ಮೇಷ್ಟ್ರು ಮಗನ ಬಗೆಗಿನ ಎಲ್ಲ ಭರವಸೆಗಳನ್ನು ಕಳೆದುಕೊಂಡಿದ್ದರು. ಮೋಹನ ಕೆಲಸ ಬಿಟ್ಟು ಬಂದದ್ದು ಗೊತ್ತಾದದ್ದೇ ಸಾಲಗಾರರೆಲ್ಲ ಒಟ್ಟಿಗೆ ಕಾಡತೊಡಗಿದ್ದರು. ಪೆನ್ಷನ್ನು ಬಡ್ಡಿ ಕಟ್ಟುವುದಕ್ಕೂ ಸಾಲುತ್ತಿರಲಿಲ್ಲ. `ಮೇಷ್ಟ್ರು ಮನೆ ಮಾರುತ್ತಾರಂತೆ’ ಎನ್ನುವ ಮಾತು ಒಬ್ಬರಿಂದ ಒಬ್ಬರಿಗೆ ಹಬ್ಬತೊಡಗಿತು.

ಈಚೆಗೆ ಅಮ್ಮ ಮಾತು ಕಡಿಮೆ ಮಾಡಿರುವುದನ್ನು ಮೋಹನ ಗಮನಿಸಿದ್ದ. ಐಾರ‍್ಯಾರೋ ಬಂದು ಮನೆಯನ್ನು ನೋಡಿಕೊಂಡು ಹೋಗುವುದು ಅವರನ್ನು ಘಾಸಿಗೊಳಿಸಿತ್ತು. ಜೀವನಪೂರ್ತಿ ಸ್ವಂತ ಮನೆಯ ಕುರಿತು ಕನಸುಕಂಡ ಜೀವವದು. ಇಳಿವಯಸ್ಸಿನಲ್ಲಿ ಕೈಗೂಡಿದ ಕನಸು ಮತ್ತೆ ಕೈಜಾರುತ್ತಿರುವ ಆತಂಕ ಆಕೆಯ ಮುಖದಲ್ಲಿ ಒಡೆದುಕಾಣುತ್ತಿತ್ತು. ಮತ್ತೆ ಬಾಡಿಗೆ ಮನೆಗೆ ಹೋಗುವ ಅವಮಾನವನ್ನು ನೆನೆದು ಅವರು ಕಣ್ಣೀರಿಡುತ್ತಿದ್ದರು.

ಊರಿನ ಜನ ನಕ್ಕುಬಿಟ್ಟಿದ್ದರು. ಕೋಪದ ನಡುವೆಯೂ ಅಪ್ಪ ನಕ್ಕುಬಿಟ್ಟಿದ್ದರು. `ಏನೋ ಇದು ಹುಚ್ಚಾಟ’ ಎಂದ ಅಮ್ಮನ ದನಿಯಲ್ಲಿ ಮಗನ ದಡ್ಡತನದ ಬಗೆಗೆ ಅನುಕಂಪವಿತ್ತು. ಊರಿನ ಜನ ನಕ್ಕಾಗ, ಅಪ್ಪ ಕೋಪ ಮಾಡಿಕೊಂಡಾಗ, ಅಮ್ಮ `ಅಯ್ಯೋ’ ಎಂದಾಗ ಮೋಹನನಿಗೆ ಬೇಜಾರಾಗಿರಲಿಲ್ಲ. ಇದೆಲ್ಲವನ್ನೂ ಅವನು ನಿರೀಕ್ಷಿಸಿಯೇ ಇದ್ದ. ಆದರೆ ಅವನ ನಿರೀಕ್ಷೆಗೆ ಮೀರಿದ್ದುದು ಪ್ರಮೀಳಾಳ ನಗು.

ಮನೆಯ ಮಾರಾಟದ ವಿಷಯದಲ್ಲಿ ಮೋಹನ ಅಸಹಾಯಕನಾಗಿದ್ದ. ಇದೇ ಹೊತ್ತಿನಲ್ಲಿ ಶ್ರೀಧರ ತಂದು ಮುಟ್ಟಿಸಿದ ಸುದ್ದಿ ಸಿಡಿಲಿನಂತಿತ್ತು. ಮೇಷ್ಟ್ರು ಬ್ರಾಂದಿ ಅಂಗಡಿಯನ್ನು ಗುತ್ತಿಗೆಗೆ ಪಡೆಯಲು ಪ್ರಯತ್ನಿಸುತ್ತಿದ್ದರು. ನಿತ್ಯವೂ ಆದಾಯ ತರುವ ಬ್ರಾಂದಿ ಅಂಗಡಿಗಾಗಿ ಮತ್ತಷ್ಟು ಸಾಲ ಮಾಡಲು ಪ್ರಯತ್ನ ನಡೆಸಿದ್ದರು. ತಮ್ಮ ಆರ್ಥಿಕ ಸಂಕಷ್ಟಗಳಿಂದ ಹೊರಬರಲು ಮೇಷ್ಟ್ರು ನಡೆಸುತ್ತಿದ್ದ ಅಂತಿಮ ಪ್ರಯತ್ನ ಅದಾಗಿತ್ತು. ಮನೆ ಮಾರಿದರೂ ಚಿಂತೆಯಿಲ್ಲ, ಅಪ್ಪ ಬ್ರಾಂದಿ ಅಂಗಡಿ ನಡೆಸಲು ಮಾತ್ರ ಬಿಡಬಾರದು ಎಂದು ಮೋಹನ ನಿರ್ಧರಿಸಿದ.

ತನ್ನಪ್ಪನ ಆದರ್ಶಗಳೆಲ್ಲ ಮೋಹನನಿಗೆ ನೆನಪಾದವು. ಅಪ್ಪನಿಗೆ ಗಾಂಧಿಯೆಂದರೆ ಭಕ್ತಿ. ಆ ಕಾರಣದಿಂದಲೇ ಮಗನಿಗೆ ಮೋಹನ ಎಂದು ಹೆಸರಿಟ್ಟಿದ್ದರು. ತನ್ನ ಹೆಸರಿನ ಹಿನ್ನೆಲೆ ನೆನಪಾದಾಗಲೆಲ್ಲ ಮೋಹನ ತನ್ನೊಳಗೊಂದು ಗಾಂಧಿಯ ತುಣುಕು ಇದೆಯೆಂದುಕೊಂಡು ಎದೆಯುಬ್ಬಿಸುತ್ತಿದ್ದ. ಸ್ಕೂಲು ಬಯಲಿನಲ್ಲಿ ಮೇಷ್ಟ್ರು ಹಸಿರು ಬಿತ್ತುವ ಹೊತ್ತಿನಲ್ಲೇ ಊರಿನಲ್ಲಿ ಬ್ರಾಂದಿ ಅಂಗಡಿ ಪ್ರಾರಂಭವಾಗಿತ್ತು. ಬ್ರಾಂದಿ ಅಂಗಡಿಯ ಕತ್ತಲಿನಲ್ಲಿ ಸಂಸಾರಸ್ಥರ ನೆರಳುಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಮೇಷ್ಟ್ರು ಖಿನ್ನರಾಗಿದ್ದರು. ಊರಿನ ಹುಡುಗರಿಗೆಲ್ಲ ಕುಡಿಯುವ ಚಟ ಹತ್ತಿಸುವ ಬ್ರಾಂದಿ ಅಂಗಡಿಯನ್ನು ಮೇಷ್ಟ್ರು ಬಹಿರಂಗವಾಗಿ ಟೀಕಿಸುತ್ತಿದ್ದರು. ಅಪ್ಪನ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಮೋಹನನ ಮನಸ್ಸಿನೊಳಗೆ ಕುಡಿತದ ಕುರಿತು ಅಸಹ್ಯ ಉಂಟಾಗಿತ್ತು. ಆದರೆ ಅದೇ ಅಪ್ಪನ ನೆರಳು ಬ್ರಾಂದಿ ಅಂಗಡಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಸುದ್ದಿ ಕೇಳಿದಾಗ ಮೋಹನನಿಗೆ ಆಶ್ಚರ್ಯವಾಗಿತ್ತು. ಅಪ್ಪನ ಹೆಜ್ಜೆ ಯಾವತ್ತಿಗೂ ಹೊರಳುವುದಿಲ್ಲವೆಂದು ಮೋಹನ ನಂಬಿದ್ದ. ಅಪ್ಪನಲ್ಲಿನ ಬದಲಾವಣೆ, ನೈತಿಕತೆಯ ನಾಶ ಕಂಡು ಅವನಿಗೆ ಸಾಯುವಷ್ಟು ದುಃಖವಾಯಿತು.
ಅಪ್ಪನ ಆದರ್ಶಗಳ ದಾರಿಯಲ್ಲಿ ನಡೆಯಬೇಕು ಎನ್ನುವ ಉತ್ಸಾಹದಿಂದಲೇ ಮೋಹನ ಅಮೆರಿಕಾ ಬಿಟ್ಟು ಊರಿಗೆ ಬಂದಿದ್ದ. ಅಪ್ಪ ತನಗೆ ಗುರುವಾಗುತ್ತಾರೆ, ಗುರಿಯ ದೀವಿಗೆಯಾಗುತ್ತಾರೆ ಎಂದು ನಿರೀಕ್ಷಿಸಿದ್ದ. ಆದುದೇ ಬೇರೆ. ಮೇಷ್ಟ್ರು ಮಗನ ವಾಪಸ್ಸಾತಿಯಿಂದ ನಿರಾಶರಾಗಿದ್ದರು, ಕ್ರುದ್ಧರಾಗಿದ್ದರು. ಹಣದ ಮೂಲಕವೇ ಬದುಕಿನ ಬೆಲೆ ಕಟ್ಟುವರರ ಸಾಲಿಗೆ ಅಪ್ಪನೂ ಸೇರಿದ್ದಾರೆ ಎನ್ನುವುದನ್ನು ಅರಗಿಸಿಕೊಳ್ಳುವುದು ಮೋಹನನಿಗೆ ಕಷ್ಟವಾಗಿತ್ತು.

ಅಪ್ಪನ ನಂಬಿಕೆಗಳು ಬದಲಾಗಿದ್ದರೂ, ನೈತಿಕವಾಗಿ ಅವರು ಕುಸಿದಿದ್ದರೂ, ಅಪ್ಪ ಬ್ರಾಂದಿ ಅಂಗಡಿಯ ಗಲ್ಲಾದ ಮೇಲೆ ಕೂರುವ ಚಿತ್ರವನ್ನು ಕಲ್ಪಿಸಿಕೊಳ್ಳುವುದು ಮೋಹನನಿಗೆ ತೀರಾ ಅಸಹನೀಯವಾಗಿ ಕಂಡಿತು. ಬ್ರಾಂದಿ ಅಂಗಡಿಯ ಗುತ್ತಿಗೆ ಹಿಡಿದರೆ ಅಪ್ಪ ಇನ್ನೆಂದೂ ಮೊದಲಿನ ದಾರಿಗೆ ಬರುವುದಿಲ್ಲ ಎನ್ನಿಸಿ, ಅಪ್ಪನ ನಿರ್ಧಾರವನ್ನು ವಿರೋಧಿಸಲು ಮೋಹನ ನಿರ್ಧರಿಸಿದ. ಆಗ ಅವನಿಗೆ ಹೊಳೆದದ್ದು ಯಥಾಪ್ರಕಾರ ಗಾಂಧಿ.

5

`ಅಪ್ಪ ಬ್ರಾಂದಿ ಅಂಗಡಿಯನ್ನು ಗುತ್ತಿಗೆಗೆ ಪಡೆಯುವ ನಿರ್ಧಾರ ಕೈಬಿಡುವವರೆಗೂ ಅಗುಳು ಮುಟ್ಟುವುದಿಲ್ಲ’ ಎಂದು ಮೋಹನ ಉಪವಾಸ ಕೈಗೊಂಡಿದ್ದ. ಅಮ್ಮನ ಕಣ್ಣೀರಿಗೂ ಅವನು ಹಠ ಸಡಿಲಿಸಲಿಲ್ಲ. ಮಗನ ಅನಿರೀಕ್ಷಿತ ಪ್ರತಿರೋಧದಿಂದ ಮೇಷ್ಟ್ರು ಮೊದಲಿಗೆ ಕಂಗಾಲಾದರು. ಮರುಕ್ಷಣವೇ ಚೇತರಿಸಿಕೊಂಡು, `ಹೊಟ್ಟೆ ಚುರುಗುಟ್ಟಿದ್ರೆ ತಿಂತಾನೆ ಬಿಡು’ ಎಂದು ಹೆಂಡತಿಯನ್ನು ಸಮಾಧಾನಪಡಿಸುವ ವಿಫಲ ಯತ್ನ ನಡೆಸಿದ್ದರು. `ಮನೆಯಲ್ಲಿ ನೆಮ್ಮದಿಯಿಲ್ಲ’ ಎಂದು ಕೂಗಾಡಿ ಗೆಳೆಯರನ್ನು ಹುಡುಕಿಕೊಂಡು ಮೇಷ್ಟ್ರು ಹೊರಟರು.

ಎರಡನೇ ಹಗಲಿನ ಸಂಜೆಯ ವೇಳೆಗೆ ಮೋಹನ ನಿತ್ರಾಣನಾಗಿದ್ದ. ಅತ್ತೂ ಅತ್ತೂ ಅಮ್ಮ ಒಳಕೋಣೆ ಸೇರಿದ್ದರು. ನೆಮ್ಮದಿ ಹುಡುಕುತ್ತಾ ಮನೆಬಿಟ್ಟ ಮೇಷ್ಟ್ರು ಇನ್ನೂ ವಾಪಸ್ಸಾಗಿರಲಿಲ್ಲ. ಮನೆಯೊಳಗೆ ಉಸಿರುಕಟ್ಟುತ್ತಿದೆಯೆನ್ನಿಸಿ ಮೋಹನ ಹೊಸ ಉಸಿರಿಗಾಗಿ ಸ್ಕೂಲು ಮೈದಾನದತ್ತ ಹೆಜ್ಜೆಗಳನ್ನು ಎಳೆಯುತ್ತಾ ಹೊರಟ. ಅವೇ ಮರಗಳು, ಮರಗಳ ಹಾಡು, ಪಕ್ಷಿಗಳ ಗೂಡುಗಳನ್ನು ನೋಡುತ್ತಾ ಕೂತ ಮೋಹನನಿಗೆ ಮೈ ಹಗುರವಾದಂತೆನ್ನಿಸಿತು. ಒಮ್ಮೆ ಗಿಡವೊಂದರ ಮೇಲೆ ತನ್ನ ಇನಿಷಿಯಲ್ಲು ಕೆತ್ತಿ ಅಪ್ಪನಿಂದ ಬೈಗುಳ ತಿಂದದ್ದು ನೆನಪಾಯಿತು. ಆ ಇನಿಷಿಯಲ್ಲು ಇನ್ನೂ ಇದೆಯಾ? ಮೋಹನ ಮರದಿಂದ ಮರ ಸುತ್ತತೊಡಗಿದ. ಮರದ ಕಾಂಡಗಳಲ್ಲಿ ಬಾಣ ಚುಚ್ಚಿಕೊಂಡ ಹೃದಯದ ಚಿತ್ರಗಳಿದ್ದವು. ಯಾರಯಾರದೋ ಹೆಸರುಗಳಿದ್ದವು. ಮೋಹನನ ಇನಿಷಿಯಲ್ ಮಾತ್ರ ಕಾಣಲಿಲ್ಲ. ಜಡ ಊರಷ್ಟೇ ಅಲ್ಲ, ಜೀವಂತ ಪರಿಸರವೂ ತನ್ನನ್ನು ದೂರವಿಟ್ಟಂತೆನ್ನಿಸಿ ಮೋಹನ ವಿಷಾದದ ನಗೆನಕ್ಕ.

ಆಗಸದಂಗಳದಲ್ಲಿ ಸೂರ್ಯನೆಂಬ ರೈತ ಹಗಲಿಡೀ ಬಿತ್ತಿದ ಬೀಜಗಳು ಮೊಳಕೆಯೊಡೆದಂತೆ, ಸಂಜೆಗೆಂಪು ಕಪ್ಪಾಗುತ್ತಾ ಆಗುತ್ತಾ ನಕ್ಷತ್ರಗಳು ಕಣ್ಣುತೆರೆಯತೊಡಗಿದವು. ಮೋಹನನ ತಲೆಯಲ್ಲೂ ಯೋಚನೆಯ ಕುಡಿಯೊಂದು ಕಣ್ಣುಬಿಡತೊಡಗಿತು.

ಮೋಹನ ಮನೆಗೆ ಬರುವ ವೇಳೆಗೆ ಹನ್ನೆರಡು ದಾಟಿತ್ತು. ಅಪ್ಪ ಇನ್ನೂ ಮಲಗಿರಲಿಲ್ಲ, ಪುಸ್ತಕವೊಂದರಲ್ಲಿ ಕಳೆದುಹೋಗುವ ಪ್ರಯತ್ನದಲ್ಲಿದ್ದರು. ಮೂಲೆಯೊಂದರಲ್ಲಿ ಮಾತು ಮರೆತವರಂತೆ ಅಮ್ಮ ಮಂಕಾಗಿ ಕೂತಿದ್ದರು. ಅಮ್ಮನನ್ನು ನೋಡುತ್ತಲೇ ಮೋಹನನ ಕಣ್ಣುಗಳು ತುಂಬಿಕೊಂಡು ಅಳಿದುಳಿದ ನಶೆಯೂ ಇಳಿಯಿತು. ಶಕ್ತಿಯೆಲ್ಲವನ್ನೂ ಗಂಟಲಿಗೆ ತುಂಬಿಕೊಂಡು `ಹುಷಾರಿಲ್ಲವೇನಮ್ಮ?’ ಎಂದ. ಅಮ್ಮ ತಲೆಯೆತ್ತಿ ನೋಡಿದರು. ಆವರೆಗೂ ಕೊಳಗಳಾಗಿದ್ದ ಅವರ ಕಣ್ಣುಗಳಲ್ಲಿ ಒಮ್ಮೆಗೇ ಕಿಚ್ಚು ಹೊತ್ತಿಕೊಂಡಿತು.

`ನಿನ್ನಂಥ ಕುಲಪುತ್ರನಿದ್ದ ಮೇಲೆ ಹುಷಾರಾಗಿರೋದು ಹೇಗಪ್ಪ? ನಮ್ಮ ನೆಮ್ಮದಿ ಹಾಳು ಮಾಡಬೇಕು ಅಂತಲೇ ಅಮೆರಿಕಾದಿಂದ ಬಂದೆಯೇನು? ನೂರೆಂಟು ದೇವರನ್ನು ಬೇಡಿ ನಿನ್ನನ್ನು ಪಡೆದದ್ದು ಈ ಸುಖ ಅನುಭವಿಸಲಿಕ್ಕೇನು? ನಾವು ನಿನಗೆ ಏನನ್ಯಾಯ ಮಾಡಿದೆವೆಂದು ಹೀಗೆ ಹೆತ್ತಹೊಟ್ಟೆ ಉರಿಸ್ತಿದ್ದೀಯಾ?…… ನೋಡು, ನಿನ್ನಿಂದಾಗಿ ನಿಮ್ಮಪ್ಪನೂ ಊಟ ಬಿಟ್ಟಿದ್ದಾರೆ. ನಾವಿಬ್ಬರೂ ಸತ್ರೆ ನಿನಗೆ ನೆಮ್ಮದಿಯಾ?……’

ಅಮ್ಮ ಸ್ಫೋಟಿಸುತ್ತಾ ಹೋದಂತೆ ಮೋಹನ ಕುಸಿಯುತ್ತಾ ಹೋದ. ಅಪ್ಪ ಪುಸ್ತಕ ಮುಚ್ಚಿಟ್ಟಿದ್ದರು.
`ಕೊನೆಯದಾಗಿ ಹೇಳ್ತೇನೆ ಕೇಳು ಮೋಹನ. ನನಗೂ ನಿನಗೂ ಯಾವ ಸಂಬಂಧವೂ ಇಲ್ಲ. ನನ್ನ ಮಾತುಗಳನ್ನು ನೀನು ಕೇಳದಿದ್ದ ಮೇಲೆ ನಿನ್ನ ಮಾತುಗಳನ್ನು ನಾನು ಕೇಳಬೇಕಿಲ್ಲ. ನಾನು ನಿನ್ನ ದಾರಿಗೆ ಅಡ್ಡಬರೊಲ್ಲ, ನೀನೂ ನನ್ನ ದಾರಿಗೆ ಅಡ್ಡ ಬರಬೇಡ, ಅರ್ಥವಾಯಿತಾ?’ ಎಂದರು. ಮಾತುಮುಗಿಸಿದವರೇ ಪ್ರತಿಕ್ರಿಯೆಯನ್ನೂ ನಿರೀಕ್ಷಿಸದೆ ಕೋಣೆಗೆ ಹೋದರು. ಅಪ್ಪನನ್ನು ಅಮ್ಮ ಹಿಂಬಾಲಿಸಿದರು.

ಯಾವುದೋ ಜಾವದಲ್ಲಿ ನಿದ್ದೆಗೆ ಜಾರಿಬಿದ್ದು ಎಲ್ಲ ದುಃಖಗಳನ್ನೂ ಮರೆತಿದ್ದ ಮೋಹನನಿಗೆ ಬಚ್ಚಲಿನಿಂದ ಕೇಳಿಬಂದ ಅಮ್ಮನ ಕೂಗಿನಿಂದಾಗಿ ತಲೆಯ ಮೇಲೆ ತಣ್ಣೀರು ಸುರಿದೆಬ್ಬಿಸಿದಂತೆ ಎಚ್ಚರವಾಯಿತು. ಮೋಹನ ಬಚ್ಚಲಿಗೆ ಓಡಿಬಂದ. ಅಮ್ಮ ಕುಸಿದುಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರು. ಅಷ್ಟರಲ್ಲಿ ಅಪ್ಪ ಕೂಡ ಗಾಬರಿಯಿಂದ ಎದ್ದುಬಂದರು. ಕುಡಿಯುವ ನೀರಿಗಾಗಿ ಅಡುಗೆಮನೆಗೆ ಹೋದ ಮೋಹನನನ್ನು ಓರಣವಾಗಿ ಜೋಡಿಸಿದ ಪಾತ್ರೆಗಳು ಸ್ವಾಗತಿಸಿದವು. ಅಡುಗೆಮನೆ ಬೆಂಕಿಕಂಡು ಮೂರು ದಿನವಾಗಿತ್ತು.

6

ಮಳೆ ಸುರಿಸಿದ ನಂತರದ ಆಕಾಶದ ನೆಮ್ಮದಿ ಅಪ್ಪಅಮ್ಮನ ಮುಖದಲ್ಲಿತ್ತು. ಒಮ್ಮೆ ಆಕಳಿಸಿದ ಬಸ್ಸು ನಿಧಾನಕ್ಕೆ ಓಡತೊಡಗಿತು. ಕಿಟಕಿಯಿಂದ ತಲೆ ಹೊರಹಾಕಿದ ಮೋಹನ `ಬರ‍್ತೀನಿ’ ಎಂದ. ಅಪ್ಪ ಕೈ ಆಡಿಸಿದರು. ನೀರು ತುಂಬಿದ್ದ ಅಮ್ಮನ ಕಣ್ಣುಗಳು ಮಿಂಚುತ್ತಿದ್ದವು. ದೂರದಲ್ಲಿ ಕಾಣುತ್ತಿದ್ದ ಸ್ಕೂಲು ಮೈದಾನ ಹಾಗೂ ಮೈದಾನದಲ್ಲಿನ ಹಸುರನ್ನು ಎಟುಕಿಸಿಕೊಳ್ಳಲು ಮೋಹನ ಕಣ್ಣುಗಳನ್ನಗಲಿಸಿದ. ಕಣ್ಣು ಮಂಜು ಮಂಜು.

ಊರಿನ ಗಡಿ ಮುಗಿಯುತ್ತಿದ್ದಂತೆ ಮೋಹನ ಅಂಗಿಜೇಬಿನಲ್ಲಿದ್ದ ಪತ್ರ ಹೊರತೆಗೆದ. ಬಸ್ಸಿನ ಮೆಟ್ಟಿಲು ಹತ್ತುವ ಹೊತ್ತಿನಲ್ಲಿ ನೂರರ ನೋಟುಗಳೊಂದಿಗೆ ಅಪ್ಪ ಜೇಬಿನಲ್ಲಿರಿಸಿದ್ದ ಪತ್ರವದು. ಅಪ್ಪನ ಅಕ್ಷರಗಳು ಅಂದ ಕಳೆದುಕೊಂಡಿದ್ದವು; ಇಸ್ತ್ರಿ ಮಾಸಿದ ಬಟ್ಟೆಯ ಸುಕ್ಕುಗಳಂತಿದ್ದವು.

“ಮೋಹನಾ, ಈ ಪತ್ರ ಬರೆಯುವಾಗಿನ ನನ್ನ ದೈನ್ಯತೆ, ಸಂಕೋಚ ಹಾಗೂ ಅಸಹಾಯಕತೆ ನಿನಗರ್ಥವಾಗುವುದು ಕಷ್ಟ. ನಿನಗೊಬ್ಬ ಮಗ ಹುಟ್ಟಿ, ಅವನು ಎದೆಮಟ್ಟ ನಿಂತ ಒಂದುದಿನ ಇಂದಿನ ನನ್ನ ತೊಳಲಾಟ ನಿನಗರ್ಥವಾಗಬಹುದು. ಇಂದಿನ ಅಪ್ಪನ ಬಗ್ಗೆ ನಿನಗೆ ಅತೀವ ನಿರಾಶೆಯಿರುವುದು ನನಗೆ ಗೊತ್ತು. ಕೋಪ, ತಿರಸ್ಕಾರವೂ ಇದೆಯೇನೋ? ಕಲ್ಪಿಸಿಕೊಳ್ಳಲಾಗುತ್ತಿಲ್ಲ.

ಅಮೆರಿಕಾ ಬಿಟ್ಟುಬಂದು ಕೊಂಚವೂ ಅಳುಕಿಲ್ಲದೆ ಎದುರಿಗೆ ನಿಂತ ನಿನ್ನನ್ನು ನೋಡಿದಾಗ ತಕ್ಷಣ ನನಗೆ ನೆನಪಾದದ್ದು ನನ್ನ ಯೌವನದ ದಿನಗಳು. ಶಕ್ತಿಯಿರುವಾಗಲೇ ನೀನು ಹಾರಾಟ ಮುಗಿಸಿ ವಾಪಸ್ಸಾಗಿದ್ದೆ. ನಾನು ಕಸುವು ಕುಂದುವವರೆಗೂ ಹಾರಾಡುತ್ತಲೇ ಇದ್ದೆ. ನೌಕರಿ, ಮದುವೆಯ ಚೌಕಟ್ಟಿನಲ್ಲಿ ನನ್ನ ಹಾರಾಟದ ಉತ್ಸಾಹ ತೀರಿಹೋಯಿತು. ನಿನಗೂ ಗೊತ್ತು, ಇಂದಿನ ನಿನ್ನ ಕನಸುಗಳೆಲ್ಲ ಒಂದುಕಾಲದಲ್ಲಿ ನನ್ನ ಕನಸುಗಳೇ ಆಗಿದ್ದವು. ಆದರೆ ಕಾಲದೊಂದಿಗಿನ ಓಟದಲ್ಲಿ ನಾನು ಸೋತೆ. ನೀನು ನಂಬಿದ್ದ ಮೇಷ್ಟ್ರು ಬದಲಾಗಿದ್ದರು. ಈ ಬದಲಾವಣೆಗಳಿಗೆ ಕಾರಣಗಳನ್ನು ಹುಡುಕುವುದು ಬೇಡ. ಎಲ್ಲ ಕಾರಣಗಳೂ ಸುಳ್ಳಿರಬಹುದು, ಕಾರಣಗಳೇ ಇಲ್ಲದಿರಬಹುದು. ಒಂದAತೂ ನಿಜ, ನೀನು ಕನಸುಗಳನ್ನು ತುಂಬಿಕೊAಡು ಬರುವ ಹೊತ್ತಿಗೆ ನಾನು ಕನಸುಗಳನ್ನು ಕಳೆದುಕೊಂಡಿದ್ದೆ.

ನೀನು ಇನ್ನಷ್ಟು ಹಾರಾಡಬೇಕು ಮೋಹನ. ಆ ಹಾರಾಟದಲ್ಲಿ ಹೊಸ ಭರವಸೆಗಳನ್ನು, ಕನಸುಗಳನ್ನು ಕೈಗೂಡಿಸಿಕೊಳ್ಳುವ ಒಳಗುಟ್ಟುಗಳನ್ನು ಅರಗಿಸಿಕೊಳ್ಳಬೇಕು. ನೀನು ಸೋತಾಗ ನಾನು ಹೆಗಲು ನೀಡಲಿಲ್ಲ. ಆದರೆ ನಿನ್ನ ಅನುಪಸ್ಥಿತಿಯಲ್ಲಿ ನನ್ನ ಹಳೆಯ ದಾರಿಯನ್ನು ಮತ್ತೆ ನೆನಪಿಸಿಕೊಳ್ಳುತ್ತೇನೆ. ಬೆಂಗಳೂರಿನಲ್ಲಿ ನೀನು ಹೆಚ್ಚು ಕಾಲ ಇರುವುದಿಲ್ಲವೆನ್ನುವುದು ನನಗೆ ಗೊತ್ತು. ನೀನು ವಾಪಸ್ಸಾಗುವ ಹೊತ್ತಿಗೆ ಕಳೆದುಹೋದ ನಿನ್ನ ಮೇಷ್ಟ್ರು ಮತ್ತೆ ಜೀವಂತವಾಗಿರುತ್ತಾರೆ…..

ನೀನು ಕುಡಿಯಬಾರದಿತ್ತು ಮೋಹನ… ನಿನ್ನ ಅಮ್ಮ ಕುಸಿದುಬಿದ್ದದ್ದು ನಿತ್ರಾಣದಿಂದಲ್ಲ, ನೀನು ಬ್ರಾಂದಿ ಅಂಗಡಿಯೆದುರು ಕುಡಿದು ಕೂಗಾಡುತ್ತಿದ್ದೆಯೆಂಬ ಸುದ್ದಿ ಕೇಳಿ…… ಒಬ್ಬರನ್ನೊಬ್ಬರು ನೋಯಿಸುವುದಿನ್ನು ಸಾಕು. ದಣಿದಿದ್ದೇನೆ. ಮಗನ ಬಟ್ಟಲಿಗೆ ಮದಿರೆ ಬಗ್ಗಿಸುವ ಅಪ್ಪನಾಗುವ ಬಯಕೆಯೂ ಇಲ್ಲ. ಮೋಹನಾ, ವೈಯಕ್ತಿಕ ಹಿತಕ್ಕಾಗಿ ಮಗನ ಕನಸುಗಳನ್ನು ಬಲಿಕೊಟ್ಟ ಸ್ವಾರ್ಥಿ ತಂದೆಯಾ ನಾನು? ಸಣ್ಣವನಾಗಿಬಿಟ್ಟೆ ಕಣೋ… ಯಾವ ಅಪ್ಪನೂ ತನ್ನ ಮಗನೆದುರು ಸಣ್ಣವನಾಗಬಾರದಷ್ಟು…..’’

ಅಪ್ಪನೇ ಎದುರು ನಿಂತು ಮಾತನಾಡುತ್ತಿದ್ದಾರೆಂದು ಮೋಹನನಿಗನ್ನಿಸಿತು. ಕಣ್ಣುಗಳಿಂದ ತುಳುಕಿದ ನೀರಹನಿ ಪತ್ರದಲ್ಲಿ ಇಂಗಿದವು. ಬ್ಯಾಗಿನಲ್ಲಿದ್ದ `ನನ್ನ ಸತ್ಯಾನ್ವೇಷಣೆ’ ಪುಸ್ತಕದಲ್ಲಿ ಅಪ್ಪನ ಪತ್ರವನ್ನು ಜೋಪಾನವಾಗಿರಿಸಿದ.

*****

ಯಾವುದೇ ಕಥೆಯಾದರೂ ಅದನ್ನು ಬರೆಯುವಾಗ ಅದು ನನ್ನನ್ನು ಒಳಗೊಳ್ಳದೆ ಹೋದರೆ, ಆ ಕಥೆಯೊಳಗೆ ಯಾವುದೋ ಒಂದು ರೀತಿಯಲ್ಲಿ ಬರೆಯುವ `ನಾನು’ ಕಾಣಿಸದೆ ಹೋದರೆ, ಅಷ್ಟರಮಟ್ಟಿಗೆ ಆ ಕಥೆ ಅನ್ಯವೆನ್ನಿಸುತ್ತದೆ. ಹೀಗೆ ನನ್ನನ್ನು ಕೊಂಚ ಹೆಚ್ಚೇ ಎನ್ನುವಷ್ಟು ಒಳಗೊಂಡ, ಬರೆದ ನಂತರವೂ ಈ ಕಥೆಯಲ್ಲಿ ನಾನು ಕಾಣಿಸುತ್ತೇನೆ ಎನ್ನುವ ಭಾವ ಹುಟ್ಟಿಸುವ ಕಥೆ `ಕಾಲ ದಾರಿಯಲಿ ಹುಲ್ಲು’.
ಬರೆದದ್ದು ಕೆಲವೇ ಕಥೆಗಳಾದ್ದರಿಂದ ಎಲ್ಲ ಕಥೆಗಳ ಬಗ್ಗೆಯೂ ಒಂದು ಬಗೆಯ ವಾಂಛಲ್ಯ ಭಾವ. ಆದರೆ, ಮನಸ್ಸಿಗೆ ಹತ್ತಿರವಾದುದು ಹಾಗೂ ಹೆಚ್ಚು ಪ್ರಾಮಾಣಿಕ ಎನ್ನಿಸುವುದು `ಕಾಲ ದಾರಿಯಲಿ ಹುಲ್ಲು’. ಕಥೆಯೇ ಇಲ್ಲಿರುವುದರಿಂದ, ಅದರ ಬಗ್ಗೆ ಹೆಚ್ಚು ಹೇಳುವುದು ಅಗತ್ಯವಿಲ್ಲ.