ವೈಜ್ಞಾನಿಕ ತಳಹದಿಯೇ ಇಲ್ದೇ, ಯಾವುದೋ ಬಂಜರು ಭೂಮಿಯಲ್ಲಿ ಸುಲಭವಾಗಿ ಸಿಕ್ಕ ಯಾವುದೋ ಪ್ರಭೇದದ ಸಸಿಗಳನ್ನ ನೆಟ್ಟು, ಪರಿಸರ ದಿನ ಆಚರಿಸೋದು ಅತ್ಯಂತ ಅರ್ಥಹೀನ; ಮರಗಳನ್ನು ನೆಟ್ಟು ಎಲ್ಲೆಂದರಲ್ಲಿ ಕಾಡು ಮಾಡಿಬಿಡ್ತೀವಿ ಅಂದ್ರೆ ಹೇಗೆ? ಅಲ್ಲಿ ಯಾವ ಜೀವರಾಶಿಯಿತ್ತು? ಅಲ್ಲಿನ ಆಹಾರ ಸರಪಳಿಯ ಕಥೆಯೇನು? ಅಲ್ಲಿನ ಅಜೈವಿಕ ಹಾಗೂ ಜೈವಿಕ ಅಂಶಗಳ ನಡುವಿನ ಸಮತೋಲನದ ಕಥೆಯೇನು? ನಿಜ, ಮಾಲಿನ್ಯ ಕಡಿಮೆ ಮಾಡ್ಬೇಕು ಅಂತ ಎಲ್ರೂ ಎಲೆಕ್ಟ್ರಿಕ್ ವಾಹನಗಳನ್ನ ಕೊಳ್ತಾ, ಅದರ ಬೇಡಿಕೆ ಹೆಚ್ಚಿಸಿದ್ರೆ ಏನಾಗತ್ತೆ ಹೇಳಿ?
ಈ ಹೊಸ ವರ್ಷದಿಂದ ಸ್ವಲ್ಪವಾದರೂ ನಾವು ನಿಂತಿರುವ ಈ ಭೂಮಿಯ ಕುರಿತು ಯಾವೆಲ್ಲ ರೀತಿಯಲ್ಲಿ ಕಾಳಜಿ ವಹಿಸಬಹುದು ಎನ್ನುವುದರ ಕುರಿತು ಕ್ಷಮಾ ವಿ. ಭಾನುಪ್ರಕಾಶ್ ಬರಹ
ಮೊನ್ನೆ ನನ್ನ ಮಗ ಮತ್ತವನ ಫ್ರೆಂಡ್ಸ್ ಫುಟ್ಬಾಲ್ ಆಡಿ, ಮಾತಾಡೋಕೆ ಕೂತಿದ್ದಾಗ ನಾನು ಅಲ್ಲೇ ವಾಕ್ ಮಾಡ್ತಾ ಇದ್ದೆ; ಅವರ ಮೆಸ್ಸಿ, ರೊನಾಲ್ಡೋ, ನೇಮರ್, ಬೆಲಿಂಗಮ್ ಬಗೆಗಿನ ಮಾತುಗಳು ನನಗೆ ಸಾಮಾನ್ಯವೇ; ಆದ್ರೆ ಅವತ್ತು ನನಗನಿಸಿದ್ದು, ಅದು ಹೇಗೆ ಇವರಿಗೆಲ್ಲ ಈ ಯಾವುದೋ ದೇಶದ, ಯಾವುದೋ ಕ್ಲಬ್‌ಗೆ ಆಡುವ ಆಟಗಾರರ ಬಗ್ಗೆ ಇಷ್ಟೆಲ್ಲಾ ಮಾಹಿತಿ ಗೊತ್ತು ಅಂತ! ನನ್ನ ಮಗನಂತೂ ಟಿ.ವಿ ನೋಡೋದು, ಫೋನ್ ಹಿಡಿದು ಯೂಟ್ಯೂಬ್ ನೋಡೋದು ಅತ್ಯಂತ ಕಡಿಮೆ; ಅವನ ಗೆಳೆಯರೂ ಸಹ ಹೊರಗೆ ಆಡೋದೇ ಜಾಸ್ತಿ; ಅವರಿಗೆ ಸಿಕ್ಕ ಕೆಲವೇ ನಿಮಿಷಗಳ ಅಥವಾ ಅರ್ಧ ಘಂಟೆ ಸಮಯದಲ್ಲಿ ಟಿವಿ/ಯೂಟ್ಯೂಬ್/ಪುಸ್ತಕ/ಪೇಪರ್‌ನಲ್ಲಿ ಗಮನಿಸೋದು ಇದೇ ಸುದ್ದಿಗಳನ್ನೇ! ಯಾರು ಹೇಗೆ ಗೋಲ್ ಹೊಡೆದ್ರು, ಯಾರು ಯಾವ ದೇಶದ ಫೇವರೆಟ್ ಆಟಗಾರ ಇತ್ಯಾದಿ. ಜೊತೆಗೆ ಅಂತಹ ವಿಡಿಯೋಗಳ ಹಿನ್ನೆಲೆಯಲ್ಲಿ ಫುಟ್ಬಾಲ್ ಸಂಬಂಧೀ ಹಾಡುಗಳನ್ನೇ ಹಾಕಿದ್ದು, ಈ ಎಲ್ಲಾ ಮಕ್ಕಳಿಗೂ ಆ ಹಾಡುಗಳು ಕೂಡ ಪೂರ್ತಿಯಾಗಿ ಗೊತ್ತು! ಆ ಹಾಡಿನ ಭಾಷೆಯ ಗಂಧ ಗಾಳಿಯೇ ಗೊತ್ತಿಲ್ಲದಿದ್ದರೂನೂ!
ಇನ್ನೂ ಕೆಲವು ಪುಟಾಣಿಗಳು ಆಡ್ತಾ ಇದ್ವು ಅಲ್ಲೇ ಹತ್ತಿರದಲ್ಲಿ; ಅವು ‘ರೀಲ್ಸ್’ ಶೂಟಿಂಗ್ ಮಾಡ್ತಾ ಇರೋ ಹಾಗೆ ನಟನೆ ಮಾಡ್ತಾ, ಆಡ್ತಾ ಇದ್ವು; ಸಾಮಾನ್ಯವಾಗಿ ಯೂಟ್ಯೂಬ್ ಶಾರ್ಟ್ಸ್, ಇನ್ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಕೇಳೋ ಹಾಡುಗಳನ್ನ ತಮ್ಮದೇ ಶೈಲಿಯಲ್ಲಿ ಗುನುಗ್ತಾ, ಒಬ್ಬರು ಆಟದ ಫೋನ್ ಹಿಡಿದು ಶೂಟಿಂಗ್ ಮಾಡೋ ಹಾಗೆ, ಮತ್ತಿಬ್ರು ಹುಕ್ ಸ್ಟೆಪ್ ಹಾಕ್ತಾ ನರ್ತಿಸ್ತಾ ಇದ್ರು; ಇಷ್ಟೆಲ್ಲ ಯಾಕೆ ಹೇಳ್ದೆ ಗೊತ್ತಾ? ಇದಕ್ಕೆಲ್ಲಾ ಕಾರಣ ಅವರ ಕಿವಿ ಮೇಲೆ, ಕಣ್ಣ ಮುಂದೆ ಪದೇ ಪದೇ ಏನು ಸುಳಿಯುತ್ತೋ, ಅದು ಅವರ ಮನದ ಪರದೆಯ ಮೇಲೆ ಅಚ್ಚಾಗತ್ತೆ – ಅನ್ನೋದನ್ನ ಮತ್ತೊಮ್ಮೆ ನಿಮಗೆ ಜ್ಞಾಪಿಸೋಕೆ. ಇದೆಲ್ಲಾ ಗೊತ್ತಿಲ್ಲದ ವಿಷಯವೇನಲ್ಲ; ಆದ್ರೆ, ಪದೇ ಪದೇ ಅದೇ ಗಮನಕ್ಕೆ ಬರ್ತಾ ಇದ್ರೆ ಅದು ನಮ್ಮ ಸಬ್ ಕಾನ್ಷಿಯಸ್ ಮನಸ್ಸಿನ ಆಳಕ್ಕೂ ಸುಪ್ತ ಪದರಗಳಿಗೂ ಇಳಿದುಬಿಡುತ್ತೆ ಅಲ್ವಾ?
ಇದು ಒಳ್ಳೆಯ ವಿಷ್ಯದಲ್ಲಿ ಎಷ್ಟು ನಿಜವೋ, ಬೇಡದ ವಿಷ್ಯದಲ್ಲಿ ಮತ್ತೂ ನಿಜ; ಆದ್ರೂ ವಿವೇಕಾನಂದರು ಹೇಳಿದಂತೆ ‘ಪ್ರಯತ್ನವೇ ಪರಮಾರ್ಥ’ ತಾನೇ? ಅದಕ್ಕೇ, ನಮ್ಮ ಅಸ್ತಿತ್ವಕ್ಕೆ ಕಾರಣವಾಗಿರೋ ಪರಿಸರದ ಅಸ್ತಿತ್ವ ಕಾಪಾಡೋಕೆ, ನಾವು ನಮ್ಮ ಪ್ರಯತ್ನ ಬಿಡೋ ಹಾಗಿಲ್ಲ. ಪರಿಸರ ಸಂರಕ್ಷಣೆ ಬಗ್ಗೆ ಇದೇ ಕಾರಣಕ್ಕೇ ಮತ್ತೆ ಮತ್ತೆ ಮಾತಾಡ್ಬೇಕು; ಆಗಲಾದ್ರೂ ಅದು ನಮ್ಮ ಮಸ್ತಿಷ್ಕದಾಳಕ್ಕೆ ಇಳಿದು ಕೊಂಚವಾದ್ರೂ ಕಾರ್ಯರೂಪಕ್ಕೆ ಬರೋಕೆ ಸಾಧ್ಯ. ‘ಅಯ್ಯೋ ಇವ್ರದ್ದು ಯಾವಾಗ್ಲೂ ಇದ್ದದ್ದೇ! ಮೂರು ಹೊತ್ತೂ ಪರಿಸರ, ಭೂಮಿ, ಅದೂ ಇದೂ ಅಂತ ತಲೇ ತಿಂತಾರೆ’ ಅಂದುಕೊಳ್ಳೋವ್ರ ಬಗ್ಗೆ ೧% ಕೂಡ ತಲೆಕೆಡಿಸಿಕೊಳ್ದೇ, ಮತ್ತೆ ಮತ್ತೆ ಇದರ ಬಗ್ಗೆನೇ ಮಾತಾಡ್ಬೇಕು; ಅರಿವು ಹೆಚ್ಚಿದಂತೆ, ಮತ್ತೆ ಮತ್ತೆ ಅದೇ ವಿಷ್ಯಗಳು ಕಿವಿಗೆ ಬೀಳ್ತಾ ಬೀಳ್ತಾ ಹೊಸ ಲೀಡರ್‌ಗಳು ಹುಟ್ಟಿಕೊಳ್ಳೋಕೆ, ಅಥ್ವಾ ನಮ್ಮಲ್ಲೇ ಹೊಸಹೊಳಹು ಹುಟ್ಟಿ, ಹೊಸ ಬೆಳಕು ಕಾಣೋಕೆ ಸಾಧ್ಯ; ಜನಕ್ಕೆ ಗುಂಗುಹಿಡಿಸೋ ಇನ್ಸ್ಟಾಗ್ರಾಮ್ ರೀಲ್ಸ್ ಮತ್ತು ಯೂಟ್ಯೂಬ್ ಶಾರ್ಟ್ಸ್ ನಂತಹ ಮಾಧ್ಯಮವನ್ನೇ ಬಳಸಿ, ಇಂದಿನ ಮತ್ತು ಮುಂದಿನ ಪೀಳಿಗೆಗೆ ಪರಿಸರದ ಬಗ್ಗೆ ಕಾಳಜಿಯ ಗುಂಗು ಹಿಡಿಸೋಕೆ ಸಾಧ್ಯ.
ಪರಿಸರವನ್ನ ಉಳಿಸೋ ಬಗ್ಗೆ, ಹಾಳಾಗ್ತಾ ಇರೋ ಭೂಮಿಯ ಆರೋಗ್ಯವನ್ನ ಕಾಪಾಡೋ ಬಗ್ಗೆ ಮಾತು ಬಂದಾಗೆಲ್ಲಾ, ಮೊದಲಿಗೆ ಜನ ಹೇಳೋದೇ ಗಿಡ ನೆಡಬೇಕು, ಮಾಲಿನ್ಯ ಕಡಿಮೆ ಮಾಡ್ಬೇಕು, ಸರ್ಕಾರ ಪ್ಲಾಸ್ಟಿಕ್ ಬ್ಯಾನ್ ಮಾಡ್ಬೇಕು ಅಂತ; ನಿಜ, ಇದು ಸತ್ಯವೇ! ಆದ್ರೆ, ಭಾಗಶಃ ಮಾತ್ರ. ವೈಜ್ಞಾನಿಕ ತಳಹದಿಯೇ ಇಲ್ದೇ, ಯಾವುದೋ ಬಂಜರು ಭೂಮಿಯಲ್ಲಿ ಸುಲಭವಾಗಿ ಸಿಕ್ಕ ಯಾವುದೋ ಪ್ರಭೇದದ ಸಸಿಗಳನ್ನ ನೆಟ್ಟು, ಪರಿಸರ ದಿನ ಆಚರಿಸೋದು ಅತ್ಯಂತ ಅರ್ಥಹೀನ; ಮರಗಳನ್ನು ನೆಟ್ಟು ಎಲ್ಲೆಂದರಲ್ಲಿ ಕಾಡು ಮಾಡಿಬಿಡ್ತೀವಿ ಅಂದ್ರೆ ಹೇಗೆ? ಅಲ್ಲಿ ಯಾವ ಜೀವರಾಶಿಯಿತ್ತು? ಅಲ್ಲಿನ ಆಹಾರ ಸರಪಳಿಯ ಕಥೆಯೇನು? ಅಲ್ಲಿನ ಅಜೈವಿಕ ಹಾಗೂ ಜೈವಿಕ ಅಂಶಗಳ ನಡುವಿನ ಸಮತೋಲನದ ಕಥೆಯೇನು? ನಿಜ, ಮಾಲಿನ್ಯ ಕಡಿಮೆ ಮಾಡ್ಬೇಕು ಅಂತ ಎಲ್ರೂ ಎಲೆಕ್ಟ್ರಿಕ್ ವಾಹನಗಳನ್ನ ಕೊಳ್ತಾ, ಅದರ ಬೇಡಿಕೆ ಹೆಚ್ಚಿಸಿದ್ರೆ ಏನಾಗತ್ತೆ ಹೇಳಿ? ಅದರೊಳಗಿನ ಬ್ಯಾಟರಿಯನ್ನ ತಯಾರಿಸಲು ಬೇಕಾದ ಲಿಥಿಯಂ ಅನ್ನು ಹೊರತೆಗೆಯೋಕೆ ಸಮೃದ್ಧ ಬೆಟ್ಟ-ಕಣಿವೆಗಳ ಒಡಲು ಬಗೆದು, ಗಣಿಗಾರಿಕೆ ಮುಗಿಲು ಮುಟ್ತುತ್ತೆ. ಹೆಚ್ಚೆಚ್ಚು EV ಬ್ಯಾಟರಿಗಳ ವಿಲೇವಾರಿ, ಮತ್ತೊಂದು ಮಹಾಮಾರಿಯನ್ನೇ ಎದುರಿಗೆ ನಿಲ್ಸತ್ತೆ. ನಿಜ, ಸರಕಾರವೇ ಸಿಂಗಲ್ ಯೂಸ್ ಪ್ಲಾಸ್ಟಿಕ್ ಅನ್ನು ಬ್ಯಾನ್ ಮಾಡ್ಬೇಕು; ಆದ್ರೆ ಅದಕ್ಕೇನಾದ್ರೂ ಸವಾಲುಗಳಿವ್ಯಾ? ದೊಡ್ಡ ಮಟ್ಟದಲ್ಲಿ ನಾವೇನಾದ್ರೂ ಬದಲಾವಣೆ ತರೋಕೆ ಸಾಧ್ಯವಾ? ನಾವು ನೀವು ಚಳುವಳಿಯ ಮೂಲಕ, ಪೆಟಿಶನ್‌ಗಳ ಮೂಲಕ ಸರ್ಕಾರವನ್ನ ಬಡಿದೆಬ್ಬಿಸೋ ಪ್ರಯತ್ನ ಮಾಡ್ತಲೇ ಇರ್ಬೇಕು; ಆದ್ರೆ, “ನಾನು ಪ್ರಕೃತಿ ಪ್ರಿಯ/ಯೆ;” ಅಂತ ಹಸುರಿನ ವನಸಿರಿಯ ಮುಂದೆ ಸೆಲ್ಫಿ ತೊಗೊಂಡು ಪೋಸ್ಟ್ ಮಾಡೋದ್ರಲ್ಲೇ ಕಳೆದುಹೋದ್ರೆ ಹೇಗೆ? ನಮ್ಮ ಕೈಲಾದ್ದು ಮಾಡ್ಬೇಕಲ್ವಾ?
ನಮ್ಮ ನಡುವೆ, ಸ್ವಲ್ಪವೂ ಪರಿಸರದ ಬಗ್ಗೆ ಕೇರ್ ಮಾಡದವರ ಜೊತೆಜೊತೆಗೇ, ಪರಿಸರಸ್ನೇಹಿಯಾಗಿ ಬದುಕಿನ ಪ್ರತಿ ಹೆಜ್ಜೆಯನ್ನೂ ಇಡೋವ್ರು ಕೂಡ ಇದ್ದೇ ಇದ್ದಾರೆ. ದಾರೀಲೇ ಚಿಪ್ಸ್ ಪ್ಯಾಕೆಟ್ ಬಿಸಾಡಿ, ವನ್ಯಮೃಗಗಳ ಮನೆಯಾದ ಕಾಡಲ್ಲಿ ಸಫಾರಿಯ ನೆಪದಲ್ಲಿ ಜೋರು ಗುಲ್ಲೆಬ್ಸಿ, ಸಿಕ್ಕಲ್ಲಿ ಬಾಟಲ್ ಎಸೆದು ಹುಚ್ಚಾಟ ಆಡೋ ಜನರ ಜೊತೆಜೊತೆಗೇ, ಯಾರೋ ಎಸೆದ ಕಸವನ್ನೂ ಕಾಡಿಗಾಗಿ, ಭೂಮಿಗಾಗಿ ಬಾಚಿ ತಂದು, ಸುತ್ತಲಿನವರನ್ನೂ ಪರಿಸರಸ್ನೇಹೀ ದಾರಿಗೆ ತರುವ ಹರಸಾಹಸ ಪಡುವವರೂ ಇದ್ದಾರೆ. ಆದ್ರೆ, ಈ ಎರಡೂ ಬಗೆಯ ಜನರ ಸಂಖ್ಯೆಯಲ್ಲಿ ವ್ಯತ್ಯಾಸ? ಅಜಗಜಾಂತರ!
ಹಾಗೆ, ಅದೆಷ್ಟೇ ಹೇಳಿದ್ರೂ, ಸಿಂಗಲ್ ಯೂಸ್ ಪ್ಲಾಸ್ಟಿಕ್ ತಂದು ಎಸೆಯುವ, ಎದ್ದಾಗಿನಿಂದಲೂ ಮಲಗುವವರೆಗೆ ಕೆಮಿಕಲ್‌ಗಳ ಆಗರವನ್ನೇ ಬಳಸುವ, ಮೂರು ಹೊತ್ತೂ ಪರಿಸರಕ್ಕೆ ಶತೃವೇನೋ ಎಂಬಂತೆ ಬಾಳುವ ಜನರನ್ನು ನೋಡಿ, ಪರಿಸರ ಸ್ನೇಹಿ ಬದುಕನ್ನು ತಮ್ಮದಾಗಿಸಿಕೊಂಡವ್ರಿಗೂ ಕಸಿವಿಸಿ ಆಗತ್ತೆ, ಭರವಸೆಯೇ ಕಳೆದು ಹೋಗತ್ತೆ! ‘ನಾವೆಷ್ಟು ಮಾಡಿದ್ರೇನು, ಉಪಯೋಗವೇ ಇಲ್ಲ, ಇನ್ನು ನಮ್ಮ ಕಾಡುಗಳಿಗೆ, ಕೀಟಗಳಿಗೆ, ಹಕ್ಕಿಗಳಿಗೆ, ಫಲವತ್ತ ಮಣ್ಣಿಗೆ, ಶುದ್ಧ ಅಂತರ್ಜಲಕ್ಕೆ, ಉಸಿರಿಗೆ ಉಸಿರಾಗೋ ಗಾಳಿಗೆ ಉಳಿಗಾಲವಿಲ್ಲ’ ಅನ್ನೋ ಖಿನ್ನತೆ ಉಂಟಾಗತ್ತೆ; ನೀವು ‘ಯಾರು ಏನು ಮಾಡಿದ್ರೂ ಅಷ್ಟೇ, ಭೂಮೀನ ಕಾಪಾಡೋಕಾಗಲ್ಲ, ಹಾಗಾಗಿ, ನನ್ನ ಅನುಕೂಲವೇ ನನಗೆ ಮುಖ್ಯ, ಮಜಾ ಮಾಡ್ತೀನಿ, ಐ ಡೋಂಟ್ ಕೇರ್’ ಅನ್ನೋವ್ರ? ಅಥ್ವಾ, ‘ಏನು ಮಾಡಿದ್ರೂ ನಮ್ಮ ಪರಿಸರವನ್ನ ಈ ಮೂರ್ಖರಿಂದ ಕಾಪಾಡೋಗಾಗ್ತಾ ಇಲ್ವೇ?’ ಅಂತ ತಲೆ ಮೇಲೆ ಕೈಹೊತ್ತು ಕೂತವ್ರಾ? ನೀವು ಈ ಎರಡರಲ್ಲಿ ಯಾವುದೇ ವರ್ಗಕ್ಕೆ ಸೇರಿರಬಹುದು; ಆದ್ರೆ, ಮತ್ತೊಮ್ಮೆ ಗಮನಕ್ಕೆ ಬರ್ಲಿ ಅಂತ ಹೇಳ್ತಾ ಇದೀನಿ, ನಮಗೆ ಇರುವುದೊಂದೇ ಭೂಮಿ! ಹಾಗಾಗಿ, ಮತ್ತೊಮ್ಮೆ ಮಗದೊಮ್ಮೆ ಪೊರೆ ಕಳಚಿ, ಧೂಳು ಕೊಡವಿ ಎದ್ದೇಳಲೇ ಬೇಕಾದ ಸಮಯ ಇದು. ೨೦೨೫ ಬಂದು ಹಾಯ್ ಹೇಳ್ತಾ ಇದೆ. ಈ ಹೊಸ ವರ್ಷದ ಮೊದಲ ದಿನ ಜನವರಿ ೧ರಂದು ಈ ಸಂಖ್ಯೆ ೧ರ ಗುಟ್ಟು ಹೇಳ್ಲಾ? ಇದೇನಿದು ಪರಿಸರದ ಬದ್ಲು ನ್ಯೂಮರಾಲಜಿಯ ಬಗ್ಗೆ ಮಾತು ಶುರುವಾಯ್ತಾ ಅಂದುಕೋಬೇಡಿ; ನಾನು ಹೇಳ್ತಾ ಇರೋದು ೧ ನಿಮಿಷ ಮತ್ತು ೧ ಪರ್ಸೆಂಟ್ ಬಗ್ಗೆ.
೧ ನಿಮಿಷದಲ್ಲಿ ಏನೇನೆಲ್ಲಾ ಆಗ್ಬಹುದಲ್ವಾ? ಹುಟ್ಟು, ಸಾವು, ಸೋಲು, ಗೆಲುವು ಹೀಗೆ ಏನು ಬೇಕಾದ್ರೂ; ಹಾಗೇ, ಈ ೧ ನಿಮಿಷದಲ್ಲಿ ನಾವು ನಮ್ಮ ಪರಿಸರಕ್ಕೆ ಅಪಾರವಾದ ಕೊಡುಗೆ ನೀಡಬಹುದು; ಉದಾಹರಣೆಗೆ, ಹೊರಗೆ ಹೊರಡೋ ಮುನ್ನ, ಒಂದು ನಿಮಿಷ – ಕೇವಲ – ಒಂದೇ ನಿಮಿಷ ಯೋಚಿಸಿ – ಹೊರಗೆ ಪ್ಲಾಸ್ಟಿಕ್ ಕೈಚೀಲದಲ್ಲಿ ತರಕಾರಿ ಕೊಳ್ಳೋ ಬದ್ಲು ಕೈಯಲ್ಲೊಂದು ಬಟ್ಟೆ ಚೀಲ ಇರ್ಲಿ, ಹೊರಗೆ ಬಾಯಾರಿದಾಗ ಪ್ಲಾಸ್ಟಿಕ್ ಬಾಟಲಲ್ಲಿ ನೀರು ಕೊಳ್ಳೋ ಬದಲು ಬ್ಯಾಗಲ್ಲಿ ಸ್ಟೀಲಿನ ವಾಟರ್ ಬಾಟಲ್ ಇರ್ಲಿ, ಹಸಿವಾದ್ರೆ ತಿಂದು ಬಿಸಾಡೋಕೆ ಹೊರಗೆ ಬಿಸ್ಕೆಟ್ ಪ್ಯಾಕೆಟ್ ಕೊಳ್ಳೋ ಬದ್ಲು, ಸ್ಟೀಲ್ ಡಬ್ಬೀಲಿ ನಿಮಗಿಷ್ಟದ ತಿಂಡಿ ಮನೆಯಿಂದ್ಲೇ ಕೊಂಡು ಹೋಗಿ – ಹೀಗೆ, ಹೊರಗೆ ಹೊರಡೋ ಮುನ್ನ ಒಂದೇ ನಿಮಿಷ ವ್ಯಯಿಸಿದ್ರೆ ಸಾಕು, ಹಲವಾರು ಪರಿಸರಸ್ನೇಹಿ ಕೆಲಸಗಳು ಯಾವುದೇ ಹೊರೆ ಇಲ್ದೇ ಆಗಿಬಿಡತ್ತೆ. ಹೀಗೆ, ಒಂದೊಂದೇ ಅಭ್ಯಾಸ ಆಗ್ತಾ ಆಗ್ತಾ, ಒಂದೇ ನಿಮಿಷ ತಡೆದು ಯೋಚಿಸಿ ಮುಂದಡಿ ಇಡೋಷ್ಟರಲ್ಲಿ, ಸಮಸ್ಯೆಗಳ ಬೆಟ್ಟ ಕಸದ ಬೆಟ್ಟದ ಹಾಗೆ ಕರಗುತ್ತಾ ಕಿರಿದಾಗತ್ತೆ. ಸ್ನಾನಕ್ಕೆ ಶವರ್‌ನ ಬದ್ಲು ಬಕೇಟ್ ತಂಬಿಗೆ ಬಳಸಿದಾಗ ನೀರಿನ ಬಳಕೆ ಕಡಿಮೆ; ಅದರಲ್ಲೂ ಶವರ್ ಬಳಸಲೇ ಬೇಕಾದಾಗ ನಿಮ್ಮ ಸ್ನಾನದ ಸಮಯದಲ್ಲಿ ೧ ನಿಮಿಷ ಕಡಿಮೆ ಮಾಡಿದ್ರೂ, ಲೀಟರ್‌ಗಟ್ಟಲೇ ನೀರು ಉಳಿಸ್ತೀರಿ. ಕೆಲವರಿಗೆ ಒಂದು ಹುಚ್ಚುಂಟು; ಏನೇ ತೊಗೊಂಡ್ರೂ ಏಲ್ಲಾ ರಾಶಿ ರಾಶಿ; ‘ಮಿನಿಮಲಿಸಂ’ ಬಗ್ಗೆ ಕೇಳಿಯೇ ಗೊತ್ತಿರೋಲ್ಲವೇನೋ ಅನ್ನೋ ಹಾಗೆ! ನಾವು ಕೊಳ್ಳುವ, ಬಳಸುವ, ತಿನ್ನುವ, ತೊಡುವ – ಹೀಗೆ ಎಲ್ಲದರಲ್ಲೂ ಕೊಂಚ ಕೊಂಚ ಕಡಿಮೆ ಮಾಡುತ್ತಾ ಬಂದ್ರೆ, ಬದುಕಲು ಎಷ್ಟು ಬೇಕೋ ಅಷ್ಟಕ್ಕೆ ಬಂದು ನಿಲ್ತೀವಿ; ಅಂದ್ರೆ, ‘ಝೀರೋ ವೇಸ್ಟ್’ ಹಂತಕ್ಕೆ ತಲುಪ್ತೀವಿ. ಅಲ್ಲಿಯವರೆಗೂ ಮತ್ತು ಅಲ್ಲಿ ತಲುಪೋಕೂ ಈ ಒಂದು ನಿಮಿಷದ ರೂಲ್ ಫಾಲೋ ಮಾಡ್ಬಹುದು; ಅಂದ್ರೆ ಬಟ್ಟೆ ಕೊಳ್ಳುವಾಗ ೧ ನಿಮಿಷ ಯೋಚಿಸಿ – ಹಾಂ! ಯಾವ ಬ್ರಾಂಡ್, ಯಾವ ಮಾಡೆಲ್ ಹಾಕಿದ್ದ ಡಿಸೈನ್ ಇದು ಅನ್ನೋದನ್ನಲ್ಲ, ಯಾವ ಬಟ್ಟೆಯಿಂದ ಮಾಡಿದೆ ಇದನ್ನ ಅಂತ! ಕಾಟನ್, ಲಿನೆನ್‌ನಂತಹ ಅಪ್ಪಟ ಪರಿಸರ ಸ್ನೇಹಿ, ರೈತ ಸ್ನೇಹಿ ಬಟ್ಟೆಗಿಂತಾ ಚೆಂದದ್ದು ಬೇಕೇನ್ರೀ? ಅದು ಮೈಮನಸ್ಸಿಗೂ ಮುದ, ಪರಿಸರಕ್ಕೂ ಹಿತ ನೀಡೋ ಅನನ್ಯ ಸೃಷ್ಟಿ. ಕೊಳ್ಳುವ ಮುನ್ನ ಒಂದು ನಿಮಿಷ ಯೋಚಿಸಿ ಪಾಲಿಯೆಸ್ಟರ್ ಅಥವಾ ಮತ್ಯಾವುದೇ ಕೆಮಿಕಲ್ ಬೇಸ್ಡ್ ಬಟ್ಟೆಯನ್ನು ಪಕ್ಕಕ್ಕಿಡಿ, ಎಲಿಗೆಂಟ್ ಮತ್ತು ಕ್ಲಾಸೀ ಎನಿಸೋ ಹತ್ತಿ ಉಡುಪುಗಳಿಗೆ ಜೈ ಅನ್ನಿ. ‘ಅದ್ಯಾವುದೋ ದೇಶದಲ್ಲಿ ಫೇಮಸ್ ಅಂತೆ’ ಅಂತ ಎಲ್ಲಿಂದಲೋ ಹಣ್ಣನ್ನ ಆರ್ಡರ್ ಮಾಡೋ ಮುನ್ನ, ಒಂದು ನಿಮಿಷ – ಕೇವಲ ಒಂದೇ ನಿಮಿಷ ಯೋಚಿಸಿ, ಹತ್ತಿರದಲ್ಲಿ ಮತ್ತು ಆ ಋತುಮಾನದಲ್ಲಿ ಬೆಳೆಯೋ ಹಣ್ಣಿನ ರುಚಿನೋಡಿ; ಆ ಹಣ್ಣಿನ ಸವಿ, ಆ ಹಣ್ಣಿನೊಳಗಿನ ‘ಫ್ರುಕ್ಟೋಸ್’ ಅನ್ನೋ ಸಕ್ಕರೆ, ‘ಸಿಟ್ರಿಕ್ ಆಸಿಡ್’ ಅನ್ನೋ ಹುಳಿಯಂಶದಿಂದ ಮಾತ್ರ ಬಂದಿರೋದಿಲ್ಲ; ಪ್ಲಾಸ್ಟಿಕ್ ಪ್ಯಾಕೆಂಜಿಂಗ್, ಪ್ರಿಸರ್ವೇಟಿವ್ ಬಳಕೆಯ ವಿರುದ್ಧ ನೀವಿಟ್ಟ ‘ಪರಿಸರ ಸ್ನೇಹಿ’ ಹೆಜ್ಜೆಯಿಂದಲೂ ಹಣ್ಣಿನ ರುಚಿ ಮತ್ತಷ್ಟು ಹೆಚ್ಚಾಗಿರತ್ತೆ ಗೊತ್ತಾ?
ಇಂತಹ ಕೆಲವು ‘೧ ನಿಮಿಷಗಳು’ ಅನೇಕ ‘ಪರಿಸರ ಸ್ನೇಹಿ’ ಹೆಜ್ಜೆಗಳಿಗೆ ಕಾರಣವೇನೋ ಆಗ್ಬಹುದು; ಆದ್ರೆ, “ನಾವೊಬ್ರೇ ಮಾಡಿದ್ರೆ ಏನ್ ಮಹಾ ಬದಲಾವಣೆ ಬರೋಕೆ ಸಾಧ್ಯ?” ಅಂತ ಅನ್ನಿಸ್ಬಹುದು. ಇದು ಸಹಜ; ಅಂತಹ ಸಮಯದಲ್ಲೇ ನಾವು ೧% ಬಗ್ಗೆ ಯೋಚಿಸ್ಬೇಕು. ನಾವಿಲ್ಲಿ ಮಾಡೋದು ನಮ್ಮ ೧% ಮಾತ್ರ ಅನ್ನೋದನ್ನ ನಾವು ಮತ್ತೆ ಮತ್ತೆ ಮನನ ಮಾಡ್ಕೋಬೇಕು. ಮನೆಯಲ್ಲಿ, ಕಚೇರಿಯಲ್ಲಿ, ಪ್ರವಾಸದಲ್ಲಿರುವಾಗ, ಮದುವೆಮನೆಯಲ್ಲಿರುವಾಗ, ರಸ್ತೆಯಲ್ಲಿರುವಾಗ, ಚಾರಣ ಹೊರಟಾಗ, ಕಾಡಿನಲ್ಲಿ, ಗುಡಿಯಲ್ಲಿ – ಹೀಗೆ ಎಲ್ಲೆಲ್ಲೂ ನಮ್ಮ ೧% ಪರಿಸರಸ್ನೇಹಿ ಕೆಲ್ಸಗಳ ಮೂಲಕ ನಾವು ದೊಡ್ದ ಮಟ್ಟದಲ್ಲಿ ಬದಲಾವಣೆ ತರೋಕೆ ಸಾಧ್ಯ. ನಮ್ಮ ವಾರ್ಷಿಕ ಆದಾಯದಲ್ಲಿ ಕಡೇಪಕ್ಷ ೧% ಹಣವನ್ನ ಪರಿಸರದ ರಕ್ಷಣೆಗೆ ಪ್ರತ್ಯಕ್ಷವಾಗೋ, ಪರೋಕ್ಷವಾಗೋ ವಿನಿಯೋಗಿಸ್ಬೇಕು. ಈ ಒಂದು ನಿಮಿಷ ಮತ್ತು ಒಂದು ಪರ್ಸೆಂಟ್ ರೂಲ್‌ನ ನಾನು ಆದಷ್ಟೂ ಫಾಲೋ ಮಾಡೋ ಪ್ರಯತ್ನ ದಿನವೂ ಮಾಡ್ತೇನೆ; ಇದನ್ನು ನೀವೂ ಮಾಡಿ, ನಮ್ಮ ಉಳಿವಿಗೆ ಕಾರಣವಾದ ಪರಿಸರದ ಅಳಿವನ್ನು ತಡಿಯಬಹುದಲ್ವಾ?
ಬರೀ ಬಾಯಲ್ಲಿ ‘ಐ ಲವ್ ನೇಚರ್’ ಅಂತ ಹೇಳಿ, ಜೀವನದಲ್ಲಿ ನಯಾಪೈಸೆ ಪರಿಸರಸ್ನೇಹಿ ಬದಲಾವಣೆ ಮಾಡಿಕೊಳ್ದೇ ಇದ್ರೆ, ಬದುಕಿಗೊಂದು ಬೆಲೆ ಬೇಡ್ವೇ? ಜೀವಿಗಳನ್ನ ಪೋಷಿಸೋ ಏಕೈಕ ಗ್ರಹದಲ್ಲಿ, ‘ಬುದ್ಧಿವಂತ ಪ್ರಾಣಿ’ ಅಂತ ಕರೆಸಿಕೊಳ್ಳೋ ಮನುಷ್ಯರಾಗಿ ಹುಟ್ಟಿ, ಏನು ಬಂತು ಪ್ರಯೋಜನ? ಹಾಗೆ ನೋಡಿದ್ರೆ, ನಮ್ಮ ಅವಶ್ಯಕತೆ ನಿಜಕ್ಕೂ ಭೂಮಿಗಿಲ್ಲ, ಭೂಮಿಯ ಅವಶ್ಯಕತೆ ನಮಗಿದೆ ಅನ್ನೋದನ್ನ ಜೀವವಿಜ್ಞಾನಿ ಜೋನಸ್ ಸಾಕ್, ತಮ್ಮ ಮಾತಿನ ಮೂಲಕವೇ ನಮಗೊಂದು ಮೊಟಕ್ತಾ ಬುದ್ಧಿ ಹೇಳ್ತಾರೆ! ಪೋಲಿಯೋ ವ್ಯಾಕ್ಸೀನು ಕಂಡು ಹಿಡಿದು, ಜಗತ್ತನ್ನು ಅಕ್ಷರಶಃ ತಮ್ಮ ಕಾಲ ಮೇಲೆ ನಿಲ್ಲೋ ಹಾಗೆ ಮಾಡಿದ್ದು ಇವರೇ; ಈ ವೈರಾಣು ತಜ್ಞರಾದ ಜೋನಸ್ ಸಾಕ್ ಅವರ ಮಾತಿನಲ್ಲೇ ಹೇಳೋದಾದ್ರೆ
“If all the insects were to disappear from the Earth, within fifty years all life on Earth would end. If all human beings disappeared from the Earth, within fifty years all forms of life would flourish.” ಅಂದ್ರೆ, ಕೀಟಗಳು ಭೂಮಿಯಿಂದ ಕಾಲ್ಕಿತ್ತರೆ, ಐವತ್ತೇ ವರ್ಷಗಳಲ್ಲಿ ಭೂಮಿಯ ಇಡೀ ಜೀವಸಂಕುಲವೇ ಇನ್ನಿಲ್ಲವಾಗತ್ತೆ; ಆಹಾರ ಸರಪಳಿಯ, ಜೈವಿಕ ಸಮತೋಲನದ ತಾಕತ್ತು ಅದು. ಆದ್ರೆ, ಅದೇ ಐವತ್ತೇ ವರ್ಷಗಳಷ್ಟು ಕಾಲ, ಮನುಷ್ಯ, ಭೂಮಿಯ ಮೇಲೆ ಇಲ್ಲದಿದ್ರೆ, ಸಸ್ಯ ಸಂಕುಲ, ಪ್ರಾಣಿ ಪರಿವಾರ, ಕೀಟ ಕುಟುಂಬ – ಎಲ್ಲವೂ ಸಮೃದ್ಧ! ಅಂದ್ರೆ, ಜೀವಸಂಕುಲದ ಕುರಿತು ನಮ್ಮ ಜವಾಬ್ದಾರಿ, ನಮ್ಮ ಅಸ್ತಿತ್ವದ ಬೆಲೆ, ಪರಿಸರದ ಪ್ರಾಮುಖ್ಯ – ಎಲ್ಲವೂ ಒಮ್ಮೆ ಗೋಚರವಾಯ್ತಾ?
ಅಪ್ಪಟ ವೈಜ್ಞಾನಿಕ ಮನೋಭಾವದ ಚಿಲುಮೆಯಾಗಿದ್ದ ಖಗೋಳ ವಿಜ್ಞಾನಿ ಕಾರ್ಲ್ ಸೇಗನ್ ಅವರ ಮಾತಿನಂತೆ ‘Anything else you’re interested in is not going to happen if you can’t breathe the air and drink the water. Don’t sit this one out. Do something. You are by accident of fate alive at an absolutely critical moment in the history of our planet.’ ಎಷ್ಟು ನಿಜಾ ಅಲ್ವಾ? ನಮಗೆ ಯಾವುದೋ ಅದ್ಭುತ ಪುಸ್ತಕ ಓದಲಿಕ್ಕಿದೆ, ಹೊಸ ಸಿನೆಮಾ ನೋಡಲಿಕ್ಕಿದೆ, ಹಿಮಾಲಯದ ಚಾರಣ ಮಾಡಲಿಕ್ಕಿದೆ, ಹಳೆಯ ಹಾಡು ಗುನುಗಲಿಕ್ಕಿದೆ – ಇಂತಹ ಎಲ್ಲಾ ನಮ್ಮಿಷ್ಟದ ಚಟುವಟಿಕೆಗಳು ಸಾಧ್ಯವಾಗಬೇಕಿದ್ರೆ, ನಾವು ಬದುಕಿರಬೇಕು! ಬದುಕಲು ಗಾಳಿ ನೀರು ಭೂಮಿ ಬೇಕೇಬೇಕು! ಹಾಗಾಗಿ, ಭೂಮಿಗಾಗಿ ಅಲ್ಲದಿದ್ರೂ ನಿಮಗಾಗಿಯಾದ್ರೂ ಭೂಮಿಯನ್ನು ಕಾಪಾಡಿಕೊಳ್ಲಿ ಅಂತಾರೆ ಕಾರ್ಲ್ ಸೇಗನ್; ಇದು ಪ್ರತಿ ಪರಿಸರವಾದಿಯ ಮಾತು ಕೂಡ.
ನಮ್ಮ ನಡೆಯೊಂದು, ನಮ್ಮ ನುಡಿಯೊಂದು – ಹೀಗೆ ಒಂದಕ್ಕೊಂದು ಸಂಬಂಧವಿಲ್ಲದಿದ್ರೆ, ನೀವು ನಂಬಿದ/ನಂಬದ ದೇವರೂ ಮೆಚ್ಚಲು ಸಾಧ್ಯವಿಲ್ಲ, ಭೂಮಿ ತಾಯಿಯೂ ಹಚ್ಚಗಿರಲು ಸಾಧ್ಯವಿಲ್ಲ, ನಿಮ್ಮ ಸೂರೂ ಬೆಚ್ಚಗಿರಲು ಸಾಧ್ಯವಿಲ್ಲ; ಬಸವಣ್ಣನವರ ವಚನದಂತೆ –
‘ಎನ್ನ ನಡೆಯೊಂದು ಪರಿ,
ಎನ್ನ ನುಡಿಯೊಂದು ಪರಿ,
ಎನ್ನೊಳಗೇನೂ ಶುದ್ಧವಿಲ್ಲ, ನೋಡಯ್ಯಾ.
ನುಡಿಗೆ ತಕ್ಕ ನಡೆಯ ಕಂಡೊಡೆ
ಕೂಡಲ ಸಂಗಮದೇವನೊಳಗಿರ್ಪನಯ್ಯಾ.’
ಎಂಬಂತೆ ನಡೆ-ನುಡಿ ಒಂದಾಗಿ, ‘Walk the Talk’ ಅಂತ ಬದುಕಿದ್ರೆ ಭೂಮ್ತಾಯಿ, ನಮ್ಮನ್ನ ಎಂದಿನಂತೆ ತನ್ನ ಮಗುವಿನಂತೆ ಕಾಪಾಡ್ತಾಳೆ; ಇಲ್ಲದಿದ್ರೆ ರುದ್ರರೂಪ ತಾಳ್ತಾಳೆ ಅಲ್ವೇ?
ಹಳೆಯ ಕಾಮಿಡಿ ಸಿನೆಮಾ ಗುರುಶಿಷ್ಯರು ಸಿನೆಮಾದ ‘ದೊಡ್ದವರೆಲ್ಲಾ ಜಾಣರಲ್ಲ’ ಹಾಡು ಗೊತ್ತಲ್ವಾ?! ಅದ್ರಲ್ಲಿ ಬರೋ ಸಾಲು ‘ಒಂದೊಂದ್ಲ ಒಂದು ಮಗ್ಗಿಯ ಮುಂದೆ ಬೇರೆ ಸುಲಭದ ಲೆಕ್ಕವೇ ಇಲ್ಲ’ ತಾನೇ? ಹೀಗೆ ೧ (ನಿಮಿಷ) ಮತ್ತು ೧ (ಪರ್ಸೆಂಟ್)ನ್ನ ಗುಣಿಸಿ, ಇರುವ ೧ ಭೂಮಿಯನ್ನ, ಕೇವಲ ಒಂದೇ ಭೂಮಿಯನ್ನ ಮುಂದಿನ ತಲೆಮಾರಿಗೂ ಬಿಟ್ಟುಹೋಗೋಣ, ಈಗಿರುವುದಕ್ಕಿಂತಾ ಕೊಂಚ ಉತ್ತಮವಾಗಿ; ಇಲ್ಲದಿದ್ರೆ ನಿಜಕ್ಕೂ ದೊಡ್ಡವರಾದ ನಾವು ಖಂಡಿತಾ ಜಾಣರಲ್ಲ ಅಂತ ಮುಂದಿನ ಪೀಳಿಗೆಯ ಮಕ್ಕಳೂ ಕೋಪದಲ್ಲಿ ಹಾಡಬೇಕಾಗುತ್ತೆ; ಅದಕ್ಕೆ ಆಸ್ಪದ ಕೊಡದೇ, ಹೊಸವರ್ಷದ ನಿಮ್ಮ ರೆಸಲ್ಯೂಶನ್ ನಿರ್ಧರಿಸೊ ಮುನ್ನವೂ ೧ ನಿಮಿಷ ಯೋಚಿಸಿ, ಪರಿಸರದೆಡೆಗೆ ನಿಮ್ಮ ೧% ಜವಾಬ್ದಾರಿಯನ್ನ ನಿರ್ವಹಿಸಿ. ಯಾವುದೇ ಕಾರಣಕ್ಕೂ ನಾವು ನಮ್ಮ ಹೋಪ್ ಕಳೆದುಕೊಳ್ಳಬೇಕಿಲ್ಲ. ನೆನಪಿಡಿ, ಎಲ್ಲಿಯವರೆಗೂ ನೆಲಕ್ಕೆಸೆದಲ್ಲೇ ಒಂದು ಬೀಜ ಮೊಳಕೆಯೊಡೆದು ಗಿಡವಾಗುವುದು ಸಾಧ್ಯವೋ, ಅಲ್ಲಿಯವರೆಗೂ ಪರಿಸರವನ್ನು ಉಳಿಸಿಕೊಳ್ಳುವ ಭರವಸೆ ಇದ್ದೇ ಇದೆ. ನಮ್ಮ ೧% ಮಾಡೋಕೆ ಇನ್ನು ೧ ನಿಮಿಷವೂ ತಡಮಾಡಬೇಕಿಲ್ಲ; ಏನಂತೀರಿ?

ಕ್ಷಮಾ ಸೂಕ್ಷ್ಮಾಣುಜೀವಿ ವಿಜ್ಞಾನದಲ್ಲಿ ಎಂ.ಎಸ್.ಸಿ ಪದವೀಧರೆ. ವಿಜ್ಞಾನ ಶಿಕ್ಷಕಿ. ವಿಜ್ಞಾನ ಲೇಖನಗಳ ಲೇಖಕಿ ಮತ್ತು ಅನುವಾದಕಿ. ರಿಸರ್ಚ್ ಮ್ಯಾಟರ್ಸ್ ನಲ್ಲಿ ವಿಜ್ಞಾನ ಲೇಖನಗಳ ಕನ್ನಡ ವಿಭಾಗದಲ್ಲಿ ಸಂಪಾದಕಿಯೂ ಆಗಿರುವ ಇವರು ಗಾಯಕಿಯೂ, ಕಂಠದಾನ ಕಲಾವಿದೆಯೂ ಹೌದು.
ಲೇಖನ ಚೆನ್ನಾಗಿದೆ, ಅಭಿನಂದನೆಗಳು. ಬರಹದ ಭಾಷೆ ಮತ್ತು ಸಾಹಿತ್ಯ ಸರಳವಾಗಿದೆ. ಉದಾಹರಣೆಗಳು ಉತ್ತಮ…. ಒಟ್ಟಾರೆ, ಓದಿದ ನಂತರ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪರಿಸರ ಸಂರಕ್ಷಣೆಯಲ್ಲಿ ನಮ್ಮ ಕೊಡುಗೆ ಏನು ಎಂಬುವುದರ ಬಗ್ಗೆ.
ಕ್ಷಮಾ ಮ್ಯಾಮ್ ನಮಸ್ತೆ, ತಮ್ಮ ಲೇಖನವನ್ನು ಈಗಷ್ಟೇ ಓದಿದೆ. ನಿಮ್ಮಿಂದ ಮತ್ತಷ್ಟು ವಿಷಯಗಳನ್ನು ತಿಳಿದುಕೊಳ್ಳುವ ಹಂಬಲವಿದೆ.ಆಂಗ್ಲ ಭಾಷೆಯಲ್ಲಿ ವಿಜ್ಞಾನ ಶಿಕ್ಷಣ ಪಡೆದು ನಮ್ಮ ಕನ್ನಡ ಭಾಷೆಯಲ್ಲಿ ತುಂಬಾ ಸೊಗಸಾಗಿ ಸರಳ ಭಾಷೆಯಲ್ಲಿ ಎಲ್ಲರ ಮನಮುಟ್ಟುವಂತೆ ಪರಿಸರದ ಬಗ್ಗೆ ಅರಿವನ್ನು ಮೂಡಿಸಿದ ತಮ್ಮ ಭಾಷಾ ಕೌಶಲ್ಯಕ್ಕೆ ಹೃತ್ಪೂರ್ವಕ ವಂದನೆಗಳು. ಪ್ರತಿಯೊಬ್ಬ ಸಹೃದಯಿ ಮಿತ್ರರು ಜೀವಕ್ಕೆ ಆಧಾರವಾದ ಪ್ರಕೃತಿಯ ಉಳಿವಿನ ಬಗ್ಗೆ ಯೋಚಿಸಲೇಬೇಕು. ಇಲ್ಲವಾದಲ್ಲಿ ಮಾನವಕುಲಕ್ಕೆ ಉಳಿಗಾಲವಿರದು. ಸಾಮಾಜಿಕ ಹೊಣೆಗಾರಿಕೆಯ ಜವಾಬ್ದಾರಿಯನ್ನು ಲೇಖನದ ಮೂಲಕ ಪರಿಚಯಿಸಿದ ತಮಗೆ ಒಳಿತಾಗಲಿ. ತಮ್ಮಿಂದ ಇನ್ನೂ ಅನೇಕ ಜಾಗೃತಿ ಲೇಖನಗಳು ಮೂಡಿ ಬರಲಿ ಎಂದು ಆಶಿಸುವೆ.
ಧನ್ಯವಾದಗಳು
ಡಾ. ಮಾಸ್ತಿ ಬಾಬು
ಉಪನ್ಯಾಸಕರು, ಲೇಖಕರು, ಸಾಹಿತಿ, ಸಂಪನ್ಮೂಲ ವ್ಯಕ್ತಿ
ಬೆಂಗಳೂರು