ನಮ್ಮಲ್ಲಿ ನಿದ್ರೆಯಲ್ಲಿ ಬೆಚ್ಚಿ ಬೀಳುವ, ಮಾತನಾಡುವವರು ಇದ್ದರು. ಜೊತೆ ಜೊತೆಗೆ ವಾಯುವಾತದ ನಾನಾ ಸದ್ದು….. ನಮ್ಮ ಕಾಲದಲ್ಲಿ ಲ್ಯಾಂಡ್ ಲೈನ್ ಫೋನ್ ಬಿಟ್ಟರೆ ಸೆಲ್ ಫೋನ್ಗಳು ಇರಲಿಲ್ಲ. ಇದ್ದಿದ್ದರೆ ಅದೆಷ್ಟು ವಿಡಿಯೋಗಳು ವೈರಲ್ ಆಗುತ್ತಿದ್ದವೋ ಏನೋ? ಗೊತ್ತಿಲ್ಲ! ಆದರೂ ಒಬ್ಬಾಕೆ ನಿದ್ರೆಯಲ್ಲಿ ಓಡಾಡುತ್ತಿದ್ದಳು. ಅದೊಂದು ಡಿಸಾರ್ಡರ್ ಎನ್ನುತ್ತಾರೆ. ಅವರನ್ನು ತಕ್ಷಣಕ್ಕೆ ಎಬ್ಬಿಸಬಾರದು ಇತ್ಯಾದಿ ಇತ್ಯಾದಿ…… ನಮ್ಮಲ್ಲಿ ನಿದ್ರೆಯಲ್ಲಿ ಓಡಾಡುತ್ತಿದ್ದವಳನ್ನು ಬೆಳಗ್ಗೆ ಎಲ್ಲರೂ ಛೇಡಿಸುತ್ತಿದ್ದರು… ದೆವ್ವ ಹಿಡಿದಿದೆ ಎಂಬಿತ್ಯಾದಿ ಅಸಂಬದ್ಧ ಮಾತುಗಳೂ ಬಂದಿದ್ದವು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹದಿನೇಳನೆಯ ಕಂತು ನಿಮ್ಮ ಓದಿಗೆ
‘ಒಟ್ಟಿಗೆ ಬಾಳುವ ತೆರದಿ ಹರಸು, ಕಚ್ಚಾಡುವರನು ಕೂಡಿಸಿ ಒಲಿಸು’ ಎಂದು ಪುನಃ ಪುನಃ ಕೇಳಿಕೊಂಡೇ ನಮ್ಮ ಬೋರ್ಡಿಂಗ್ ವಾಸವನ್ನು ಮುಂದುವರೆಸಿದೆವು ಎಂದರೆ ತಪ್ಪಿಲ್ಲ. ನಮ್ಮ ನಮ್ಮ ಮನೆಯಲ್ಲಿ ಇದ್ದಾಗ ಮನಸೋ ಇಚ್ಛೆಯಂತೆ ಇರುತ್ತೇವೆ, ವರ್ತಿಸುತ್ತೇವೆ. ಆದರೆ ನಮ್ಮ ಕುಟುಂಬದವರನ್ನು ಹೊರತು ಪಡಿಸಿ ಒಬ್ಬರು ಎಕ್ಸ್ಟ್ರಾ ಆದರೂ ಅಲ್ಲಿ ಹೊಂದಾಣಿಕೆ ಪ್ರಮೇಯ ಹಿಂದೆ ಬಂದರೆ ಕಷ್ಟ ಅನ್ನಿಸುತ್ತಿರಲಿಲ್ಲ. ಆದರೆ ಇಂದಿನ ಮಕ್ಕಳಿಗೆ ಆಗುವುದೇ ಇಲ್ಲ ಅನ್ನುವ ಹಾಗಾಗಿದೆ.
ನಮ್ಮ ತರಗತಿಯಲ್ಲಿ ಇದ್ದ ಗೆಳತಿಯರಲ್ಲಿ ಅತೀಶ್ರೀಮಂತ, ಶ್ರೀಮಂತ ಕುಟುಂಬದಿಂದ, ಅಧಿಕಾರಿವರ್ಗ, ಸೈನಿಕ ಕುಟುಂಬ, ಕಾರ್ಮಿಕ ಕುಟುಂಬದಿಂದ ಬಂದವರಿದ್ದರು. ಹಾಗಾಗಿ ಅದದೇ ವರ್ಗಕ್ಕೆ ಸೇರಿದ ಗುಂಪುಗಳಾಗಿದ್ದು ಅಂದಿಗೆ ವಿಶೇಷ ಅನ್ನಿಸಿರಲಿಲ್ಲ. ಪ್ರಸ್ತುತ ಅದು ಎಷ್ಟು ಅಪಾಯಕಾರಿ ಅನ್ನಿಸುತ್ತದೆ. ಹಣವಂತರ ಮಕ್ಕಳ ದಬ್ಬಾಳಿಕೆ ಇದ್ದೇ ಇತ್ತು. ಆದರೆ ನಮ್ಮ ಸಿಸ್ಟರ್ಸ್ ಅದಕ್ಕೆ ಎಂದಿಗೂ ಅವಕಾಶ ಕೊಟ್ಟಿದ್ದಿಲ್ಲ. ನೆಲ ಒರೆಸು ಗುಡಿಸು ಎಲ್ಲ ಕೆಲಸವನ್ನು ಎಲ್ಲರೂ ಸರಿಸಮಾನವಾಗಿ ಮಾಡುತ್ತಿದ್ದರು.
ಶ್ರೀಮಂತರ ಮಕ್ಕಳು ನೈಟ್ ಡ್ರೆಸ್ಗಳನ್ನು ಹಾಕಿದರೆ ಇನ್ನು ಕೆಲವರು ಸ್ವಲ್ಪ ಹಳೆಯದಾದ ಬಟ್ಟೆಗಳನ್ನು ಶಾಲಾ ಸಮಯ ಹೊರತು ಪಡಿಸಿ ಹಾಕುವರು. ಮತ್ತೂ ಕೆಲವರು ಯೂನಿಫಾರ್ಮ್ ಹಾಕುವುದಕ್ಕೆ ಬಹಳ ಇಷ್ಟ ಪಡುತ್ತಿದ್ದರು. ಸೂಕ್ಷ್ಮ ಓದುಗರಿಗೇ ಬಿಟ್ಟಿದ್ದು…. ಹಣವಂತರು ಬೋರ್ಡಿಂಗಿನ ಊಟವನ್ನು ಮಾಡಿದರೆ ಕಾರ್ಮಿಕ ಕುಟುಂಬದಿಂದ ಬಂದವರಿಗೆ ಸ್ವತಃ ಅವರ ಅಪ್ಪ ಅಮ್ಮನೆ ಊಟ ತೆಗೆದುಕೊಂಡು ಬಂದು ಕೈ ತುತ್ತು ತಿನ್ನಿಸುತ್ತಿದ್ದರು. ಅವರ ನಗು ಅವರು ಕಡೆಗೆ ‘ಜಾಗೃತೆ’ ಎಂದು ಹೇಳುವುದು ಬಹಳ ಆಪ್ಯಾಯಮಾನವಾಗಿತ್ತು. ಆ ದೃಶ್ಯವನ್ನು ಹಣವಂತರು ನೋಡಿ ನಗಣ್ಯ ಎನ್ನುವಂತೆ ವರ್ತಿಸುತ್ತಿದ್ದರು. ಓದಿನ ವಿಷಯಕ್ಕೆ ಬಂದಾಗ ಎಲ್ಲಾ ವರ್ಗದವರಲ್ಲೂ ಬುದ್ಧಿವಂತರು ಇದ್ದರು.
ಅನಿತಾ ಮತ್ತು ಸುನಿತಾ ಎಂಬ ಅಕ್ಕ -ತಂಗಿ ಒಂದೇ ತರಗತಿಯಲ್ಲಿ ಇದ್ದು ಒಟ್ಟಿಗೆ ಓದುತ್ತಿದ್ದರು. ಒಂದೇ ತರಗತಿ ಆದರೂ ಅಕ್ಕ ಸುನಿತಾ ತಂಗಿಯನ್ನು ಬಹಳ ಕೇರ್ ಮಾಡುತ್ತಿದ್ದುದು ವಿಶೇಷ ಎನ್ನುವಂತೆ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಪ್ರಿಪರೇಟರಿ ಪರೀಕ್ಷೆಯ ಹಿಂದಿನ ವಾರ ಒಂದು ರಾತ್ರಿ ತಂಗಿ ಅನಿತಾಗೆ ಸಹಿಸಲಾರದಷ್ಟು ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ವಿಲವಿಲನೆ ಒದ್ದಾಡುತ್ತಿದ್ದಳು. ಅವಳ ಅಳು ‘ಶಾಂತಿ ನಿಲಯ’ವನ್ನು ದಾಟಿ ಸಿಸ್ಟರ್ಸ್ವರೆಗೂ ಕೇಳಿಸಿತ್ತು. ತಕ್ಷಣ ಸಿಸ್ಟರ್ ಮೇರಿಲೊಬೊ ಬಂದವರೆ ಅನಿತಾಳ ಮೈ ಮುಟ್ಟಿ ಹೊಟ್ಟೆ ಮುಟ್ಟಿ ನೋಡಿ ಗಲಿಬಿಲಿಯಾದರೂ ತೋರಿಸಿಕೊಳ್ಳದೆ ಆಯಾ ಕರೆದು ತಣ್ಣಗಿನ ಹಾಲು ತರ ಹೇಳಿದ್ದರು. ಅವರು ತಂದ ಕೂಡಲೆ ಅಕ್ಕ ಸುನಿತಾಗೆ, ಹೊಟ್ಟೆ ನೋವು ಹೆಚ್ಚಾದಾಗ ಚಮಚದಲ್ಲಿ ಕುಡಿಸಬೇಕು ಎಂದು ಹೇಳಿದ್ದರು. ಸುನಿತಾ ಹಾಗೆ ಬೆಳಗಿನವರೆಗೂ ಮಾಡಿದಳು. ಬೆಳಗಾಗುವಷ್ಟರಲ್ಲಿ ಅವರ ತಂದೆ ತಾಯಿ ಬಂದಾಗಲೇ ನಮಗೆಲ್ಲಾ ತಿಳಿದದ್ದು ಅವಳಿಗೆ ಅಪೆಂಡಿಸ್ಐಟಿಸ್ ಆಗಿದೆ ಎಂದು. ಆದರೆ ಮಧ್ಯಾಹ್ನದ ವೇಳೆಗೆ ಆಕೆಗೆ ನಾಳೆಯೇ ಸರ್ಜರಿ ಎನ್ನುವ ವಿಷಯ ತಿಳಿದು ಇಡೀ ತರಗತಿ ಮೌನ ಆಚರಿಸಿತ್ತು. ಮರುದಿನ ಎಲ್ಲವೂ ಸಹಜ ಸ್ಥಿತಿಗೆ ಬಂತು.
ಅದೇ ನಗು ಅದೇ ಹಾರಾಟ ಅದರ ನಡುವೆ ಸೀಕ್ರೆಟ್ ರೂಮ್ಗೆ ಹೋಗುವರ ಗುಂಪಿತ್ತು. ಒಟ್ಟೊಟ್ಟಿಗೆ ಹೋಗುವುದು ಎಲ್ಲಿಗೆ ಅಂದರೆ ‘ಸೀಕ್ರೆಟ್’ ಎನ್ನುತ್ತಿದ್ದರು. ಅದೊಂದು ಕೋಡ್ ವರ್ಡ್ ಎಂದೇ ಭಾವಿಸವಹುದು. ಒಂದೆರಡು ದಿನ ಕಳೆದು ಸಿಸ್ಟರ್ ಮೆರಿಲೋಬೊ ಜೋರು ಜೋರಾಗಿ ಮಾತನಾಡುತ್ತಿದ್ದರು. ಕಾರಣ ಬಾಚಿದ ತಲೆಗೂದಲು ಎಲ್ಲೆಂದರಲ್ಲಿ ಬಿದ್ದಿದೆ ಎನ್ನುವ ಕಾರಣಕ್ಕೆ. ನಮ್ಮಲ್ಲಿಯೂ ಆಶಿಸ್ತಿನ ಮೊಟ್ಟೆಗಳು ಇದ್ದರು. ತಲೆಬಾಚಿ ಬಂದ ಕೂದಲನ್ನು ಎಲ್ಲೆಂದರಲ್ಲಿ ಗಾಳಿಗೆ ತೂರಿಬಿಡುತ್ತಿದ್ದರು. ಅದನ್ನು ನೋಡಿ ಸಿಸ್ಟರ್ಗೆ ದುಃಖವೂ ಇತ್ತು. ಕಾರಣ ಇದ್ದ ತೊಂಬತ್ತು ಸಹಪಾಠಿಯರಲ್ಲಿ ಎಪ್ಪತ್ತರಿಂದ ಎಂಬತ್ತು ಮಂದಿಯ ತಲೆಕೂದಲೂ ಮೊಳದಾಟಿ, ಮಾರು, ಒಂದೂವರೆಮಾರಿನವರೆಗೂ ಉದ್ದವಿತ್ತು, ಕೆಲವರಂತೂ ತಿಂಡಿ ತಿನ್ನಲೂ ಸಮಯವಿಲ್ಲದಂತೆ ಒಂದೊಂದು ಕೂದಲಿನ ಎಳೆಯನ್ನು ನಯವಾಗಿ ಬಾಚುತ್ತಿದ್ದರು. ಇನ್ನು ಕೆಲವರು ಜಡೆಹಾಕಿ ಜಡೆ ತುದಿಯನ್ನು ಮುದ್ದಿಸುತ್ತಿದ್ದರು. ಬಹುಶಃ ಹೆಣ್ಣು ಮಕ್ಕಳು ತಲೆಗೂದಲಿಗೆ ಕೊಡುವ ಆದ್ಯತೆ ಹೆಚ್ಚು ಅನ್ನಿಸುತ್ತದೆ.
ಇಂದಿಗೂ ನೆನಪಿರುವಂತೆ ಉದುರಿದ ತಲೆಗೂದಲು ಹಾಕಲು ಮರದ ಡಬ್ಬವೊಂದನ್ನು ಇಟ್ಟಿದ್ದರು. ಅದೋ ಎರಡೆ ದಿನಕ್ಕೆ ಭರ್ತಿಯಾಗುತ್ತಿತ್ತು. ಅದನ್ನು ಆಗಾಗಲೆ ಉರಿಯುತ್ತಿದ್ದ ಕಸದ ತೊಟ್ಟಿಗೆ ಹಾಕಿಸುತ್ತಿದ್ದರು. ಅದರ ಕಮಟು ವಾಸನೆ ಬಂದಾಗಂತೂ ಎಲ್ಲರ ಮುಖಗಳು ಹುಳ್ಳಗಾಗುತ್ತಿದ್ದವು. ಇದಾದ ಮೇಲೆ ಅದೇ ಸಿಸ್ಟರ್ ಮೇರಿಲೊಬೊ ಒಂದಿಬ್ಬರನ್ನು ಹಿಡಿದು ನಿಲ್ಲಿಸಿಕೊಂಡಿದ್ದರು. ಕಾರಣ ಅವರಿಬ್ಬರೂ ಸೀಕ್ರೆಟ್ ಎಂದಿದ್ದು. ಆಗ ಮಧ್ಯೆ ಬಂದವರು ಸಿಸ್ಟರ್ ಜೋಸೆಫ್.. ಅವರು “ಮಾಸಿಕ ಮುಟ್ಟಿನ ಬಟ್ಟೆಗಳನ್ನು ತೊಳೆದು ಒಣಗಿಸುವ ಕೊಠಡಿಗೆ ಇವರು ಹಾಗೆನ್ನುತ್ತಾರೆ!” ಎಂದರೂ ಸಿಸ್ಟರ್ ಮೇರಿಲೊಬೊ “ಅದು ಜಗಜ್ಜಾಹಿರು. ಅದರಲ್ಲೇನಿದೆ ಸೀಕ್ರೆಟ್? ಬೋಲ್ಡ್ ಆಗಿ ಹೇಳಬೇಕಲ್ವ!” ಎಂದಿದ್ದು ಇಂದಿಗೂ ಮತ್ತೆ ಮತ್ತೆ ಕಿವಿಯಲ್ಲಿ ಕೇಳಿಸುತ್ತದೆ. ಏನೇ ಆದರೂ ಮುಚ್ಚು ಮರೆ ಏಕೆ? ಎಲ್ಲರಿಗೂ ತಿಳಿದಿರುವಂಥದ್ದೆ ಧೈರ್ಯವಾಗಿ ಹೇಳಬೇಕು! ಅನ್ನಿಸಿತ್ತು. ಈಗಿನ ಹಾಗೆ ಸ್ಯಾನಿಟರಿ ಪ್ಯಾಡ್ಗಳನ್ನ ಎಲ್ಲರೂ ಬಳಸುತ್ತಿರಲಿಲ್ಲ. ಅಂಥ ಬಟ್ಟೆ ತೊಳೆಯಲು ನಲ್ಲಿ ವ್ಯವಸ್ಥೆ ಬಟ್ಟೆ ಒಣಗಿಸುವ ವ್ಯವಸ್ಥೆ ಎಲ್ಲವೂ ಅಚ್ಚುಕಟ್ಟಾಗಿತ್ತು, ಸ್ಯಾನಿಟರಿ ಪ್ಯಾಡ್ ಬಳಸಿ ಎಲ್ಲೆಂದರಲ್ಲಿ ಬಳಸಿ ಎಸೆಯುವುದಕ್ಕಿಂತ ಈ ವ್ಯವಸ್ಥೆ ಒಳ್ಳೆಯದೆ ಅನ್ನಿಸುತ್ತದೆ. ಯಾವುದನ್ನು ನಮ್ಮ ಹೆಣ್ಣು ಮಕ್ಕಳು ಗೌಪ್ಯ ಎನ್ನುತ್ತಾರೋ ಅವೆಲ್ಲವೂ ಕಸದ ರಾಶಿಯಲ್ಲಿ ಡ್ರೈನೇಜ್ ಕ್ಲೀನ್ ಮಾಡಿದಾಗ ಹೊರಗೆ ಅಸಹ್ಯವಾಗಿ ಬಿದ್ದಿರುತ್ತವೆ. ಎಲ್ಲದರ ಬಗ್ಗೆ ಮಾತನಾಡುವ ಹೆಣ್ಣುಮಕ್ಕಳು ತಾವು ಬಳಸುವ ಮತ್ತು ಮಕ್ಕಳಿಗೆ ಬಳಸುವ ಸ್ಯಾನಿಟರಿ ಪ್ಯಾಡ್ಗಳ ಸರಿಯಾದ ವಿಲೆವಾರಿ ಕ್ರಮವನ್ನು ಪಾಲಿಸಬೇಕಾಗಿದೆ.
ಈ ನಡುವೆ ನೆನಪಾದ ಸಿಸ್ಟರ್ ಜೋಸೆಫ ಕುರಿತು ಕ್ವಚಿತ್ತಾಗಿ ಬರೆಯಲೇಬೇಕು. ಅವರಿಗೆ ಈಗ ನಮಸ್ತೆ ಸಿಸ್ಟರ್!! ಹೇಗಿದ್ದೀರಿ? ಎನ್ನಲಾಗದು.. ನಿತ್ಯವೂ ನೆನಪಿಗೆ ಬರುವ ಸ್ಥಳ ಅಂದರೆ ಅಕ್ಷರ ಕಲಿತ ಶಾಲೆ, ಟೀಚರ್, ಕ್ಲಾಸ್ಮೇಟ್ಸ್, ಬೆಂಚ್ಮೇಟ್ಸ್. ಸ್ಮೃತಿಪಟಲದಿಂದ ಅಚಾನಕ್ ಆಗಿ ಮರೆತ ಎಲ್ಲ ಘಟನೆಗಳು ನೆನಪಾಗುತ್ತವೆ, ಕಾಡುತ್ತವೆ. ಇಂದು ಶಾಲೆಯ ಆವರಣದಲ್ಲಿಯೇ ಇದ್ದೇನೆ ಅನ್ನಿಸುತ್ತಿದೆ. ಎಲ್ಲಾ ಟೀಚರ್ಗಳು ಆಡಿದ ಮಾತುಗಳು ಮಾರ್ದನಿಸುತ್ತಿವೆ. ನಮಗೆ ಮುಖ್ಯೋಪಧ್ಯಾಯರಾಗಿದ್ದ ಸಿಸ್ಟರ್ ಜೋಸೆಫ ತೀರಿಕೊಂಡು ಒಂದು ವರ್ಷ ಕಳೆಯಿತು. ಆದರೆ ನೆನಪಿನಂಗಳದಲ್ಲಿ ಅವರ ಕುರಿತ ನೆನಪುಗಳು ಮಾಸಿಲ್ಲ.
ಹಣವಂತರು ಬೋರ್ಡಿಂಗಿನ ಊಟವನ್ನು ಮಾಡಿದರೆ ಕಾರ್ಮಿಕ ಕುಟುಂಬದಿಂದ ಬಂದವರಿಗೆ ಸ್ವತಃ ಅವರ ಅಪ್ಪ ಅಮ್ಮನೆ ಊಟ ತೆಗೆದುಕೊಂಡು ಬಂದು ಕೈ ತುತ್ತು ತಿನ್ನಿಸುತ್ತಿದ್ದರು. ಅವರ ನಗು ಅವರು ಕಡೆಗೆ ‘ಜಾಗೃತೆ’ ಎಂದು ಹೇಳುವುದು ಬಹಳ ಆಪ್ಯಾಯಮಾನವಾಗಿತ್ತು. ಆ ದೃಶ್ಯವನ್ನು ಹಣವಂತರು ನೋಡಿ ನಗಣ್ಯ ಎನ್ನುವಂತೆ ವರ್ತಿಸುತ್ತಿದ್ದರು.
ಇಂದಿಗೂ ಸಿಸ್ಟರ್ ಜೋಸೆಫ ಇನ್ನಿಲ್ಲ ಅನ್ನುವ ಮಾತನ್ನು ತಕ್ಷಣಕ್ಕೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ನಾವು ಹಾಗೆಯೇ! ಇದ್ದಾಗ ಬಾರದ ನೆನಪುಗಳು ಅವರು ಇನ್ನಿಲ್ಲ ಅಂದಾಗ ಬರುತ್ತವೆ. ಬೇಗ ಪ್ರತಿಕ್ರಿಯಿಸುತ್ತೇವೆ. 1982-1983 ರಿಂದ 1992=1993 ರವರೆಗೆ ನಾನು ಮಡಿಕೇರಿಯ ಸಂತಜೋಸೆಫರ ಶಾಲೆಯಲ್ಲಿ ಕಲಿತೆ. ಅಷ್ಟೂ ವರ್ಷ ನಮಗೆ ಮುಖ್ಯೋಪಧ್ಯಾಯರಾಗಿದ್ದವರು ಸಿಸ್ಟರ್ ಜೋಸೆಫ. ಬಹಳ ಮುಂಗೋಪಿಯಾದರೂ ಮನಸ್ಸು ಕಾಠಿಣ್ಯವಾಗಿರಲಿಲ್ಲ. ಎಲ್ಲೆಡೆ ಪಾದರಸದಂತೆ ಓಡಾಡುತ್ತಿದ್ದರು. ಹೈಸ್ಕೂಲಿನಲ್ಲಿ ನಮಗೆ ನೀತಿಭೋದೆ ಪಾಠ ಹೇಳುತ್ತಿದ್ದರು. ಕತೆಗಳ ಹೂರಣವಾಗಿರುತ್ತಿದ್ದ ಅವರ ತರಗತಿಗೆ ಪ್ರತಿಯೊಬ್ಬರು ಕಾಯುತ್ತಿದ್ದೆವು.
ಸಿಸ್ಟರ್ ಜೋಸೆಫ ಬಳಿ ಮಾತಿರಲಿ ವಿಷ್ ಮಾಡಲೂ ಭಯವಾಗುತ್ತಿತ್ತು. ಆದರೆ ಮಾನವೀಯತೆ ಅಂದರೆ ಏನು ಅನ್ನುವುದನ್ನು ಅರ್ಥ ಮಾಡಿಸಿದ್ದರು. ಸಿಸ್ಟರ್ ಛೇಂಬರ್ಗೆ ಎರಡೂ ಕಡೆ ಬಾಗಿಲು, ಅವರ ಸುತ್ತಲೂ ಶೋಕೇಸ್ ಅದರ ತುಂಬೆಲ್ಲಾ ಶಾಲೆಗೆ ಬಂದ ಬಹುಮಾನಗಳು. ಅವರ ಎಡ ಭಾಗದಲ್ಲಿ ಎರಡು ಮೈಕ್ ಸ್ಟ್ಯಾಂಡ್ ಬಲಭಾಗದಲ್ಲಿ ನೋಟ್ಸ್ಗಳ ಒಟ್ಟಲು ನಡುವೆ ಇವರು ಪೇರೆಂಟ್ಸ್ ಮೀಟಿಂಗ್ ದಿ ನಮಗೆ ಅಲ್ಲಿ ಹೋಗುವ ಸರದಿ. ನಮ್ಮ ರ್ಯಾಂಕ್ ಕಾರ್ಡ್ ಹಿಡಿದು ನಮ್ಮನ್ನೊಮ್ಮೆ ನೋಡುತ್ತಿದ್ದ ಅವರ ನೋಟ ಇಂದಿಗೂ ನೆನಪಿದೆ. ಸುಮಾರು 2000 ದಷ್ಟಿದ್ದ ವಿದ್ಯಾರ್ಥಿಗಳಿಗೆ ಕಾಮನ್ ಎಸೆಂಬ್ಲಿ ಕಾರ್ಯಕ್ರಮದ ಕಡೆಯಲ್ಲಿ ಅವರ ಮಾತುಗಳು ಮೌಲ್ಯಯುತವಾಗಿರುತ್ತಿದ್ದವು. ಯಾವಾಗಲೂ ಎಡಗೈ ಮೇಲೆ ಬಲಗೈ ಹಿಡಿದಿರುತ್ತಿದ್ದ ಅವರ ನೋಟ ಮತ್ತೆ ನೆನಪಿಗೆ ಬರುತ್ತದೆ. ಜುಲೈ- ಆಗಸ್ಟ್ ನಲ್ಲಿ ಎಲ್ಲರ ನೋಟ್ಸನ್ನು ಪರಾಮರ್ಶೆಗೆ ತರಿಸಿಕೊಳ್ಳುತ್ತಿದ್ದರು. ನಮ್ಮ ನೋಟ್ಸಿಗೆ ಅವರು ಸಹಿ ಮಾಡಿರುವರೆ? ಇಲ್ಲ ಏನಾದರೂ ಕಮೆಂಟ್ಸ್ ಬರೆದಿರುವರೆ ಅನ್ನುವ ಕುತೂಹಲ ಇದ್ದೆ ಇರುತ್ತಿತ್ತು. ಸಕಾರಣ ಇಲ್ಲದೆ ಶಾಲೆಗೆ ಗೈರಾದವರಿಗೆ ಗದ್ಯ ಕಂಠಪಾಠದ ಪನಿಷ್ಮೆಂಟ್ ಇರುತ್ತಿತ್ತು… ಇವೆಲ್ಲವೂ ಈಗ ನೆನಪು ಮಾತ್ರ. ಗುದ್ದು-ಮುದ್ದು ನೀಡಿದ ಅಷ್ಟು ದೊಡ್ಡಶಾಲೆಯನ್ನು ವ್ಯವಸ್ಥಿತವಾಗಿ ನಡೆಸಿದ ಸಿಸ್ಟರ್ ಜೊಸೇಫ್ ನಮ್ಮನ್ನಗಲಿ ವರ್ಷವಾಗಿದೆ. ನಮ್ಮೆಲ್ಲರ ಹೆಸರಿಗೆ ಬುನಾದಿಯಾಗಿದ್ದಾರೆ. ಸ್ಮೃತಿಪಟಲದಲ್ಲಿ ಹಸಿರಾಗಿದ್ದಾರೆ. ಈ ಬರಹದ ಮೂಲಕ ಸಿಸ್ಟರ್ ನಿಮಗೆ ಅಂತಿಮ ನಮನಗಳು.
ಎಂಥ ಬಾವುಕತೆಯಿದ್ದರೂ… ನೋವಿದ್ದರೂ ವಾಸ್ತವಕ್ಕೆ ಸಹಜವಾಗಿ ಮರಳಲೇಬೇಕು. ಅದು ಜೀವನದ ರೀತಿಯೂ ಹೌದಲ್ವ! ಹಾಗೆ ನಮ್ಮ ಬೋರ್ಡಿಂಗ್ ವಾಸದಲ್ಲಿ ಓದಿಗಿಂತ ನಮ್ಮ ಚಿತ್ತ ಅನ್ಯ ವಿಷಯಗಳತ್ತಲೇ ಹೆಚ್ಚು ಹೊರಳುತ್ತಿತ್ತು. ಕೆಲವರು ಇದ್ದಲ್ಲೆ ತೂಕಡಿಸುತ್ತಿದ್ದರು. ಅವರು ಓದುತಿದ್ದ ನೋಟ್ಸನ್ನು ತಿರುಗಿಸಿ ಇಟ್ಟರೂ ತಿಳಿಯುತ್ತಿರಲಿಲ್ಲ. ಅದೆ ನಮ್ಮ ರಸಸಂಜೆ ಎಂದರೂ ತಪ್ಪಿಲ್ಲ. ಅದರಲ್ಲಿ ನಿದ್ರೆ ಮಾಡುವವರನ್ನು ಹುಡುಕುವುದು ನಿದ್ರೆ ಮಾಡುವವರನ್ನು ಗಮನಿಸಲು ಹೋದವರೆ ನಿದ್ರೆ ಹೋದ ಉದಾಹರಣೆಗಳು ಇಲ್ಲದಿಲ್ಲ. ನಾವು ಜೀವಿಸುವ ಎಲ್ಲ ರೀತಿಯಲ್ಲೂ ಕೃತಕತೆಯನ್ನು ಕೆಲ ಮಟ್ಟಿಗೆ ಅನುಸರಿಸಬಹುದು. ಆದರೆ ನಿದ್ರೆ ವಿಚಾರದಲ್ಲಿ ಹಾಗಲ್ಲ, ಗೊರಕೆ ಹೊಡೆಯುತ್ತೇವೆಯೋ ಕೈಕಾಲು ಹೇಗೆ ಚಾಚಿ ಮಲಗುತ್ತೇವೆಯೋ, ಮಾತನಾಡುತ್ತೇವೆಯೋ? ಅಳುತ್ತೇವೆಯೋ? ನಗುತ್ತೇವೆಯೋ? ಗೊತ್ತಿಲ್ಲ ನಮ್ಮ ನಮ್ಮ ಮಲಗುವ ಭಂಗಿ ನಮ್ಮದೆ. ಹೌದು!
ನಮ್ಮಲ್ಲಿ ನಿದ್ರೆಯಲ್ಲಿ ಬೆಚ್ಚಿ ಬೀಳುವ, ಮಾತನಾಡುವವರು ಇದ್ದರು. ಜೊತೆ ಜೊತೆಗೆ ವಾಯುವಾತದ ನಾನಾ ಸದ್ದು….. ನಮ್ಮ ಕಾಲದಲ್ಲಿ ಲ್ಯಾಂಡ್ ಲೈನ್ ಫೋನ್ ಬಿಟ್ಟರೆ ಸೆಲ್ ಫೋನ್ಗಳು ಇರಲಿಲ್ಲ. ಇದ್ದಿದ್ದರೆ ಅದೆಷ್ಟು ವಿಡಿಯೋಗಳು ವೈರಲ್ ಆಗುತ್ತಿದ್ದವೋ ಏನೋ? ಗೊತ್ತಿಲ್ಲ! ಆದರೂ ಒಬ್ಬಾಕೆ ನಿದ್ರೆಯಲ್ಲಿ ಓಡಾಡುತ್ತಿದ್ದಳು. ಅದೊಂದು ಡಿಸಾರ್ಡರ್ ಎನ್ನುತ್ತಾರೆ. ಅವರನ್ನು ತಕ್ಷಣಕ್ಕೆ ಎಬ್ಬಿಸಬಾರದು ಇತ್ಯಾದಿ ಇತ್ಯಾದಿ…… ನಮ್ಮಲ್ಲಿ ನಿದ್ರೆಯಲ್ಲಿ ಓಡಾಡುತ್ತಿದ್ದವಳನ್ನು ಬೆಳಗ್ಗೆ ಎಲ್ಲರೂ ಛೇಡಿಸುತ್ತಿದ್ದರು… ದೆವ್ವ ಹಿಡಿದಿದೆ ಎಂಬಿತ್ಯಾದಿ ಅಸಂಬದ್ಧ ಮಾತುಗಳೂ ಬಂದಿದ್ದವು. ಆದರೆ ಅವಳು ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ. ಇನ್ನೂ ಗೊರಕೆ ಹೊಡೆಯವುದು ಉಸಿರಾಟದ ತೊಂದರೆ ಇದ್ದರೆ. ಗೊರಕೆ ಸಮಸ್ಯೆ ಇರುತ್ತದೆ ಎನ್ನುತ್ತಾರೆ. ಅದೆ ಗೊರಕೆಯೇ ಸಮಸ್ಯೆಯಾದರೆ ಕಷ್ಟ! ಕಷ್ಟ! ಇನ್ನು ಕೆಲವರು ಮಲಗುವ ಭಂಗಿ ವಿಚಿತ್ರವಾಗಿರುತ್ತಿತ್ತು. ನಿದ್ರೆ ಬಾರದವರು ತುರ್ತು ಕೆಲಸ ನಿಮಿತ್ತ ಇದ್ದವರ ವೀಕ್ಷಣೆಗೆ ಈ ದೃಶ್ಯಾವಳಿಗಳು ಲಭ್ಯವಾಗುತ್ತಿದ್ದವು. ಈ ಚರ್ಚೆ ಆದ ನಂತರ ಒಂದಿಬ್ಬರು ಎರಡು ಕಾಲುಗಳನ್ನು ಕಟ್ಟಿಕೊಂಡು ಮಲಗುತ್ತಿದ್ದರು. ನನಗೆ ಆ ರೀತಿಯ ಸಮಸ್ಯೆ ಇರಲಿಲ್ಲ. ಆದರೆ ಪಕ್ಕದವಳು ನಿದ್ರೆಯಲ್ಲಿ ಜೋರಾಗಿ ವಿಚಿತ್ರ ಧ್ವನಿಯಲ್ಲಿ ಕಿರುಚುತ್ತಿದ್ದಳು. ಅದನ್ನು ಕೇಳಿದಾಗ ಭಯವಾಗುತ್ತಿತ್ತು. ಮರುದಿನ ಅವಳಲ್ಲಿ ಕೇಳಿದರೆ ಹೌದಾ? ಸಾರಿ ಸಾರಿ ಎನ್ನುತ್ತಿದ್ದಳು.. ಹೀಗೆ ಮುಂದುವರೆದಾಗ ಯಾಕೆ ಹಾಗೆ ಎನ್ನುವ ಚರ್ಚೆ ನಡೆಸಿದಾಗ ಅವಳು ನನಗೆ ಏನೋ ಹೇಳಬೇಕು ಅನ್ನಿಸುತ್ತಿದ್ದರೂ ಹೇಳಲು ಸಾಧ್ಯವಾಗುತ್ತಿರುವುದಿಲ್ಲ ಎನ್ನುತ್ತಿದ್ದಳು. ಬಹುಶಃ ಆ ಸಂದರ್ಭದಲ್ಲಿ ವಿಚಿತ್ರ ಸದ್ದು ಕೇಳಿಸುತ್ತಿತ್ತೇನೋ. ಒಮ್ಮೆ ಆ ವಿಚಿತ್ರ ಸದ್ದು ಕೇಳಿ ಎಚ್ಚರವಾಗಿದ್ದಾಗ ನಿದ್ರೆಯಲ್ಲಿ ನಡೆದಾಡುವ ಸಮಸ್ಯೆಯಿದ್ದವಳು ಎದ್ದು ಆ ವಿಶಾಲವಾದ ಆ ಹಾಲಿನಲ್ಲಿದ್ದ ಅಷ್ಟೂ ಬಾಗಿಲುಗಳಿಗೂ ನಮಸ್ಕಾರ ಮಾಡುತ್ತಿದ್ದಳು. ಭಯ ಹೋಗಿ ನಗು ಬರುತ್ತಿತ್ತು. ಅಷ್ಟರಲ್ಲಿ ಯಾರೋ ನಕ್ಕ ಹಾಗಾಯಿತು, ಯಾರು ಎನ್ನುವಾಗಲೆ ಅದು ಶಾಂತಿಯ ಸ್ವರವೆಂದು ತಿಳಿಯಿತು. ನಾನೂ ಎಚ್ಚರವಾಗಿದ್ದೇನೆ ಎಂದು ಕೈ ಬೀಸಿದೆ. ಆಗಲೇ ನಾವಿಬ್ಬರೂ ಆ ದೃಶ್ಯವನ್ನು ಯಾರಲ್ಲಿಯೂ ಹೇಳಬಾರದೆಂದು ಪರಸ್ಪರ ತೀರ್ಮಾನ ಮಾಡಿಕೊಂಡೆವು.
ನಮ್ಮ ಸಹಪಾಠಿಗಳ ಕೊಂಕು ಇನ್ನಷ್ಟು ಹೆಚ್ಚಾಗಬಾರದೆನ್ನುವುದು ನಮ್ಮ ಬಯಕೆಯಾಗಿತ್ತು. ಇಡೀ ತರಗತಿಯವರು ನಾವು ಆರು ತಿಂಗಳು ಹೀಗೆ ಸಹ ಜೀವನ ನಡಸಿದ್ದೆವು. ಕಡೆ ಕಡೆಗೆ ಪ್ರಾರಂಭದ ಬಿಂಕ ಬಿಗುಮಾನ ಮರೆಯಾಗಿ ಆತ್ಮೀಯತೆ ಹೆಚ್ಚಾಗತೊಡಗಿತ್ತು. ಪ್ರಾರಂಭದ ದಿನಗಳಲ್ಲಿ ಇದ್ದ ಗದ್ದಲ ಕಡಿಮೆಯಾಗಿ ಮೌನವೆ ಹೆಚ್ಚಾಗಿತ್ತು. ಜೊತೆಗೆ ಈರ್ಷ್ಯೆಯೂ… ಯಾರ್ಯಾರು ಯಾವ ಪೇಜ್ ಓದುತ್ತಾರೆ ಎನ್ನುವುದನ್ನು ಗೂಢಾಚಾರಿಕೆ ಮಾಡಿಸಿ ತಾವೂ ಓದುವ ಗೆಳತಿಯರು ಎದುರಿಗೆ ಶಾಲೆಯಲ್ಲಿ ಕೊಟ್ಟ ನೋಟ್ಸನ್ನು ಇಟ್ಟುಕೊಂಡು ಮಡಿಲಲ್ಲಿ ಬೇರೆ ಬೇರೆ ಮೆಟೀರಿಯಲ್ಸ್ ಇಟ್ಟು ಓದುತ್ತಿದ್ದವರು ಇದ್ದರು. ಅಲ್ಲಲ್ಲಿ ಗುಂಪು ಮಾಡಿಕೊಂಡು ಯಾರಿಗೆ ಹೆಚ್ಚು ಅಂಕಗಳು ಬರುತ್ತವೆ ಎಂಬ ಚರ್ಚೆಗಳಾಗುತ್ತಿದ್ದವು. ಕೆಲವೊಮ್ಮೆ ಊಟವಾದ ಬಳಿಕ ನಮಗೆ ಪರೀಕ್ಷೆ ಕೊಡುತ್ತಿದ್ದರು. ಪರೀಕ್ಷೆ ಬರೆದು ಮುಗಿದವರು ನಿದ್ರೆ ಮಾಡಬಹುದಿತ್ತು. ಕೆಲವರು ನಿದ್ರೆ ಮಾಡುವ ಸಲುವಾಗಿ ಬೇಗ ಬರೆಯುತ್ತಿದ್ದರು. ಇನ್ನು ಕೆಲವರು ನಿದ್ರೆ ಬಿಟ್ಟು ಚಾಯ್ಸ್ ತೆಗೆದುಕೊಳ್ಳದೆ ಎಲ್ಲಾ ಪ್ರಶ್ನೆಗೆ ಉತ್ತರಿಸುತ್ತಿದ್ದುದು ಇದೆ. ಇನ್ವಿಜಿಲೇಟರ್ ಇರಲಿ ಇಲ್ಲದಿರಲಿ ಸಮಸ್ಯೆ ಇರುತ್ತಿರಲಿಲ್ಲ ಆ ಪ್ರಾಮಾಣಿಕತೆ ಇಂದಿನ ದಿನಮಾನಗಳಲ್ಲಿ ಇಲ್ಲವೇ ಇಲ್ಲ ಎನ್ನುವುದು ವಿಷಾದದ ಸಂಗತಿ.
ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.