ಆತ ‘ಎಲ್ಲವನ್ನೂ ತೆಗೆದುಕೊಂಡೆವು, ಆದರೆ ಬಹು ಅಮೂಲ್ಯವಾದ ವಸ್ತುವೊಂದನ್ನು ಇಲ್ಲೇ ಬಿಟ್ಟು ಹೋಗಬೇಕಿದೆ’ ಎನ್ನುತ್ತಾನೆ. ಆಗ ಪತ್ನಿ ಏನೆಂದು ಕೇಳುತ್ತಾಳೆ. ‘ಗೋಡೆಯ ಮೇಲೆ ಮಗ ಗೀಚಿದ ಚಿತ್ರ’ ಎನ್ನುತ್ತಾನೆ ಅವನು. ಅದೆಷ್ಟು ಸುಂದರ ಭಾವವಲ್ಲವೇ ಇದು? ಅಂತಹುದೇ ಪ್ರೀತಿ, ಕನಸುಗಳೆಲ್ಲವನ್ನೂ ಮಾತಿಗೆ ಸಿಲುಕಿಸದೆ, ಮನದೊಳಗೆ ಬಿತ್ತಿ, ಮಗನ ಬದುಕಿಗೆ ರಹದಾರಿಯಾಗಿ ಮೌನವಾಗಿ ಬಿಡುವ ಎಲ್ಲಾ ಅಪ್ಪಂದಿರ ತೆರನಾದ ಬದುಕೇ ವೆಂಕೋಬರದ್ದು.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಹೇಮಂತ್ ರಾವ್ ನಿರ್ದೇಶನದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ವಿಶ್ಲೇಷಣೆ
ನೀನೊಂದು ಮುಗಿಯದ ಮೌನ
ನಾ ಹೇಗೆ ತಲುಪಲಿ ನಿನ್ನ
ನೀನೊಂದು ಕಡಲಿನ ಧ್ಯಾನ
ನಾ ಹೇಗೆ ಬೆರೆಯಲಿ ನಿನ್ನ
ಒಲವಿಗೆ ಚೆಲುವಿಗೆ ಈ ಹೃದಯವೇ ನಿನಗೆ ಕಾದಿದೆ
-ಸುಮನಾ ಕಿತ್ತೂರು
ಪ್ರೇಮವೆಂಬುದು ಪದಗಳ ಬೊಗಸೆಯಲ್ಲಿ ಸೆರೆ ಹಿಡಿಯಲು ಆಗದ ಮಳೆ. ಕಿಟಕಿ ಮುಚ್ಚಿದರೂ ಗಾಜಿನ ದೇಹವ ದಾಟಿ ಬರುವ ಕಿರಣಗಳ ತೆರನಾದ ಆತ್ಯಂತಿಕ ಮನೋಭಾವ. ಹುಡುಗ-ಹುಡುಗಿ, ಅಪ್ಪ- ಮಗಳು, ಅಮ್ಮ-ಮಗ ಹೀಗೆ ಒಲವಿಗೆ ಹಲವು ರೂಪ, ಬಹು ಅರ್ಥಗಳು. ಅದೆಲ್ಲದರಲ್ಲೂ, ಸಾಮಾನ್ಯವಾದ ಸಂಗತಿಯೆಂದರೆ, ಪ್ರೀತಿಯೆಂದರೆ ಭರವಸೆ. ತಿರುಗಣ ರಸ್ತೆಯ ಅಂಚಿನಲ್ಲಿ ನಿಂತಿರುವ ತಡೆಗೋಡೆಯು, ತಲೆ ತಿರುಗಿದ ವಾಹನಗಳು ಪ್ರಪಾತದ ಮಡಿಲಿಗೆ ಬೀಳುವುದನ್ನು ಹೇಗೆ ತಡೆಯುತ್ತದೆಯೋ ಅದೇ ತೆರನಾದದ್ದು ಪ್ರೀತಿ. ಇಂತಹ ಒಲವೆಂಬ ನದಿಯ ಎರಡು ಕವಲುಗಳ ಸಾಗರ ಸಂಗಮವೇ ಹೇಮಂತ್ ರಾವ್ ನಿರ್ದೇಶನದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರ.
ಆತ ಶಿವ. ವೆಂಕೋಬ ರಾವ್ ರವರ ಸುಪುತ್ರ. ಮುಗಿಲೆತ್ತರಕ್ಕೆ ಹರಡಿದ ಕಟ್ಟಡದೊಳಗೆ ಸಮಯ ನೋಡಲು ಸಮಯವಿಲ್ಲದ ಕೆಲಸ ಆತನದ್ದು. ಮಧ್ಯಮ ವರ್ಗದ ಬದುಕಿನ ಹಿನ್ನೆಲೆ. ಸಕ್ಕರೆ ಕಡಿಮೆಯಾದರೆ ಕಾಫಿ ಕಹಿ, ಹೆಚ್ಚಾದರೆ ಭರ್ತಿಯಾಗುವ ಸಿಹಿ ಎನ್ನುವಂತಹ ರೀತಿಯದ್ದು. ಒಂಥರಾ ಹಗ್ಗದ ಮೇಲಿನ ಸಮತೋಲಿತ ನಡಿಗೆಯಂತಿದ್ದ ಬದುಕನು ಕಂಡು, ಜೀವನ ಇನ್ನಷ್ಟು ಸೊಬಗಿರಬಹುದಿತ್ತು, ಅಪ್ಪನ ಆಸ್ಥೆ ಇನ್ನೂ ಹೆಚ್ಚಿದ್ದರೆ ಎಂಬ ಕೊರಗು, ಕೀಳರಿಮೆ ಶಿವನ ಮನಸ್ಸಿನ ಸುತ್ತ ಪಾದಚಾರಿಯಂತೆ ಹೆಜ್ಜೆ ಹಾಕುತಿತ್ತು. ವಿಧಿಯ ನಿರ್ಭಾವುಕತೆಗೆ ಬಲಿಯಾದ ಅಮ್ಮನ ಗೈರು ಹಾಜರಿ ಕಾಡುತ್ತಿರುವಾಗಲೇ ಅಪ್ಪನಿಗೆ ಮರೆವಿನ ಸಮಸ್ಯೆ ಕಾಯಿಲೆಯಾಗಿ ಆವರಿಸಿದ್ದು ಶಿವನ ಮನಸ್ಸಿಗೆ ಸಹಿಸಲಾರದ ಘಾಸಿಯಾಗಿ ಬಿಡುತ್ತದೆ. ಒಂದೆಡೆ ವೃತ್ತಿ ನೀಡುತ್ತಿರುವ ಹೆಚ್ಚುವರಿ ಅವಕಾಶಗಳು, ಇನ್ನೊಂದೆಡೆ ಅವನ್ನು ಅನುಭವಿಸಲು ಅನುವು ಮಾಡದೇ ಇರುವ ಸಮಸ್ಯೆಗಳ ಬಿರುಗಾಳಿ ಆತನಿಗೆ ಶೂನ್ಯತೆಯ ಪ್ರಜ್ಞೆಯನ್ನು ತಂದೊಡ್ದುತ್ತದೆ.
ತಂದೆಯೆಂದರೆ ಹೆಚ್ಚೇನು ಹೇಳಲು ಉಳಿಯದ, ಕಥೆಯಿಲ್ಲದ ಪುಸ್ತಕ ಎಂದು ನಿರ್ಧರಿಸುವ ಶಿವ, ವೆಂಕೋಬ ರಾವ್ ರನ್ನು ಅಲ್ಜಮೈರ್ ರೋಗಿಗಳನ್ನು ನೋಡಿಕೊಳ್ಳುವ ಕೇಂದ್ರದಲ್ಲಿ ಬಿಟ್ಟು ಹೋಗುತ್ತಾನೆ. ಒಂದು ದಿನ ಶಾಪಿಂಗ್‌ಗೆಂದು ಹೊರಗೆ ಕರೆದುಕೊಂಡು ಹೋಗಿ ಮತ್ತೆ ಮರಳಿ ಕರೆದುಕೊಂಡು ಬಂದು ಆರೈಕೆ ಕೇಂದ್ರದಲ್ಲಿ ಬಿಟ್ಟು ಹೋಗುವ ಸಮಯದಲ್ಲಿ ವೆಂಕೋಬ ರಾವ್ ಕಾಣೆಯಾಗುತ್ತಾರೆ. ಹುಡುಕಾಟ ಆರಂಭವಾಗುತ್ತದೆ. ಶಿವನಿಗೆ ಡಾ. ಸಹನಾ ನೆರಳಾಗುತ್ತಾಳೆ. ಎಲ್ಲಿ, ಎಷ್ಟು ಹುಡುಕಿದರೂ ಸುಳಿವಿನ ಸಣ್ಣ ಸುದ್ದಿಯೂ ಸಿಗುವುದಿಲ್ಲ. ಅನಾಥ ಶವ, ವ್ಯರ್ಥ ಖಾಲಿ ಕರೆಗಳು ಮಿಂಚಿನಂತೆ ಬಂದು ಮಾಯವಾಗಿ ಮತ್ತದೇ ಕಡು ವಿಷಾದ ಮುಂದುವರೆಯುತ್ತದೆ. ಇನ್ನೊಂದೆಡೆ, ಉಸಿರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕೃತ್ಯಕೋರರ ಬಳಿ ವೆಂಕೋಬ ರಾವ್ ಸಿಕ್ಕಿ ಹಾಕಿಕೊಳ್ಳುತ್ತಾರೆ. ಅವರೆಲ್ಲರೂ ಕುಮಾರನ ಮನೆಯಲ್ಲಿ ಅಡಗಿಕೊಳ್ಳುತ್ತಾರೆ, ವೆಂಕೋಬ ರಾವ್ ಸಹಿತವಗಿ. ಇತ್ತ ಕಾಂತಿಯೆಲ್ಲವೂ ಇಂಗಿ ಹೋದ ನಾಲ್ಕು ಕಣ್ಣುಗಳು ತಲಾಶಿನಲ್ಲಿ ತೊಡಗಿವೆ. ಆಗ ಸಹನಾ ವೆಂಕೋಬ ರಾವ್ ಬದುಕಿನ ಮುಖ್ಯ ಸಂಗತಿಗಳಾದ ಪ್ರೇಮ, ದಾಂಪತ್ಯ ಇವೆಲ್ಲವನ್ನೂ ಶಿವನೊಂದಿಗೆ ಹಂಚಿಕೊಳ್ಳುತ್ತಾಳೆ. ತಂದೆಯ ಬದುಕು ಸರಳ ರೇಖೆಯ ಆಕೃತಿಯೆಂದು ಅಂದುಕೊಂಡಿದ್ದ ಆತನಿಗೆ ಅನಂತ ಬಣ್ಣಗಳ ಹೊತ್ತ ಚಿತ್ತಾರವೇ ತುಂಬಿದ ಕಥೆಯ ಕೇಳಿ ಅಚ್ಚರಿಯ ಖುಷಿ ಮೂಡುತ್ತದೆ. ಅಪ್ಪನೆಂದರೆ ಕೈಯೊಳಗೆ ಬಂಧಿಸಲಾಗದ ತಂಗಾಳಿ. ಧೂಳಿನ ಕಣಗಳೆಂದು ಬಹು ಮಕ್ಕಳಂತೆ ಭಾವಿಸುವ ಶಿವನಿಗೆ ಅದು ಉಸಿರು ಎಂದು ಅರಿವಾದಾಗ ‘ಅಣ್ಣ’ ಎಂಬ ದನಿಗೆ ಮರುತ್ತರ ನೀಡುವವರಿಲ್ಲ. ಪ್ರತಿಯೊಂದರ ಬೆಲೆಯೂ ತಿಳಿಯುವುದು ಅದನ್ನು ಕಳೆದುಕೊಂಡ ಅನಂತರವೇ ಎಂಬುದರ ರೂಪಕವೇ ಶಿವನ ಅಂದಿನ ಪರಿಸ್ಥಿತಿ. ಕೊನೆಗೆ ಪಾಪಿಗಳು ಕರ್ಮದ ಏಟಿಗೆ ತತ್ತರಿಸಿ ರಕ್ತದಲ್ಲಿ ಮಿಂದು ಈ ಲೋಕವ ಬಿಡುತ್ತಾರೆ. ಕುಮಾರನ ಕಣ್ಣಿಗೆ ಗೋಡೆಯಲ್ಲಿ ಅಪ್ಪಿದ್ದ, ‘ನಾಪತ್ತೆಯಾಗಿದ್ದಾರೆ’ ಫಲಕದಲ್ಲಿ ವೆಂಕೋಬ ರಾವ್ ಕಾಣುತ್ತಾರೆ. ಶಿವನ ಕಳೆದುಹೋದ ನಗು ಮರಳುತ್ತದೆ. ಬದುಕಿಗೆ ‘ಸಹನೆ’ಯೂ ಸಂಕಲನಗೊಳ್ಳುತ್ತದೆ. ಇದು ಕಥೆಯ ಕಿರು ಪಕ್ಷಿ ನೋಟ.
‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರ ವಿಶೇಷ ಎನ್ನಿಸುವುದು ಭಾವನೆಗಳ ರವಾನೆಯ ವಿಚಾರದಲ್ಲಿ. ಸಿನಿಮಾದ ಶೀರ್ಷಿಕೆಯೇ ನಾಪತ್ತೆಯಾದವರ ಕುರಿತು ಪತ್ರಿಕೆ, ಟಿವಿ ಮಾಧ್ಯಮಗಳು ಪ್ರಕಟಿಸುವ ಜಾಹೀರಾತಿನಲ್ಲಿ ಚಹರೆಗೆ ಸಂಬಂಧಿಸಿದ ಮಾಹಿತಿಯೊಂದಿಗೆ ಕಂಡು ಬರುತ್ತಿದ್ದ ಸಾಲು. ಇನ್ನು ಕಥೆಯ ಆತ್ಮ ತುಂಬಿಕೊಂಡಿರುವುದು ಅಪ್ಪ ಮಗನ ನಡುವಿನ ಒಡನಾಟ ಹಾಗೂ ಗಂಡು ಹೆಣ್ಣಿನ ನಡುವಿನ ನಿಷ್ಕಲ್ಮಶ ಪ್ರೇಮದ ಭಾವವನ್ನು. ಮಗನ ಮೇಲೆ ಆಗಸದಷ್ಟು ಕನಸ ಹೊತ್ತು, ತನ್ನ ಬವಣೆಗಳು ಅವನ ಚಿಂತನೆಗೆ ಅಡ್ಡಿಯಾಗದೆ ಇರಲಿ ಎಂದು ಚೌಕಿಯ ಪ್ರಪಂಚದಲ್ಲೇ ಬದುಕುವ ತಂದೆಯ ಧೋರಣೆಗಳು ಮಗನಿಗೆ ಮುಖದ ಮೇಲೆ ಕುರುಚಲು ಕೂದಲು ಅರಳಲು ಆರಂಭಿಸಿದಾಗ ವೈರುಧ್ಯದಂತೆ ಕಂಡುಬರುತ್ತದೆ. ಅಪ್ಪನೆಂದರೆ ಅಮ್ಮನಂತೆ ಆಪ್ತಮಿತ್ರನಲ್ಲ ಎಂದೆನಿಸುತ್ತದೆ. ಅಮ್ಮ ಬಿಟ್ಟುಹೋದ ಖಾಲಿತನವನ್ನು ಅಪ್ಪ ಎಂದಿಗೂ ತುಂಬಲಾರ ಎಂಬ ನಿರ್ಧಾರಕ್ಕೆ ಮಗ ಬರುತ್ತಾನೆ. ಇಲ್ಲಿ ವೆಂಕೋಬ ರಾವ್ ರವರ ಚಿಂತನೆಗಳು ಶಿವನಿಗೆ ಹಳೆಯದು ಎನ್ನಿಸಿ ನಡುವೆ ಉಂಟಾದ ಅಂತರ ಅಗಲವಾಗುತ್ತದೆ. ಕ್ರಮೇಣ ಮರೆವಿನ ದಿಸೆಯಿಂದ ಅಪ್ಪ, ಹೇಳಲು ಅಸಾಧ್ಯವೆನಿಸಿದರೂ ಸಣ್ಣ ಮಟ್ಟಿಗಿನ ಹೊರೆಯೆನಿಸಿಬಿಡುತ್ತಾನೆ. ಆದರೆ ಅಪ್ಪನ ಬದುಕೆಂಬ ಹೊಳೆಯ ಅತ್ತಲಿನ ಅಂಚಿಗೆ ಹುಟ್ಟು ಹಾಕಿದಾಗಲೇ ತಿಳಿಯುವುದು ಅದೆಷ್ಟು ಸೊಗಸಾದ ಕಥೆಗಳು ಅಡಗಿವೆ ಕಾನನದ ಕತ್ತಲೊಳಗೆ ತಪ್ಪಿಸಿಕೊಂಡಿರುವ ತೇಗದ ಮರಗಳಂತೆ ಎಂದು.
ವಿಧಿಯ ನಿರ್ಭಾವುಕತೆಗೆ ಬಲಿಯಾದ ಅಮ್ಮನ ಗೈರು ಹಾಜರಿ ಕಾಡುತ್ತಿರುವಾಗಲೇ ಅಪ್ಪನಿಗೆ ಮರೆವಿನ ಸಮಸ್ಯೆ ಕಾಯಿಲೆಯಾಗಿ ಆವರಿಸಿದ್ದು ಶಿವನ ಮನಸ್ಸಿಗೆ ಸಹಿಸಲಾರದ ಘಾಸಿಯಾಗಿ ಬಿಡುತ್ತದೆ. ಒಂದೆಡೆ ವೃತ್ತಿ ನೀಡುತ್ತಿರುವ ಹೆಚ್ಚುವರಿ ಅವಕಾಶಗಳು, ಇನ್ನೊಂದೆಡೆ ಅವನ್ನು ಅನುಭವಿಸಲು ಅನುವು ಮಾಡದೇ ಇರುವ ಸಮಸ್ಯೆಗಳ ಬಿರುಗಾಳಿ ಆತನಿಗೆ ಶೂನ್ಯತೆಯ ಪ್ರಜ್ಞೆಯನ್ನು ತಂದೊಡ್ದುತ್ತದೆ.
ವಿಶೇಷತಃ ‘ನಿಮ್ಮ ಪುಷ್ಪ’ ದೃಶ್ಯಾವಳಿ. ಸಹನಾ ವೆಂಕೋಬ ರಾವ್ ಬಳಿ ಅವರ ಪ್ರೇಮ ಕಥೆಯ ಬಗ್ಗೆ ಕೇಳುತ್ತಾಳೆ. ಕಾಲೇಜ್ ಬದುಕಿನಲ್ಲಿ, ದ್ವಿ ಸಂವತ್ಸರಗಳ ಕಾಲ ಪ್ರೇಮವು ಬರೀ ನೋಟಗಳ ವರ್ಗಾವಣೆಯಲ್ಲೇ ನಡೆದು, ಪತ್ರ ಬರಹಗಳ ರೂಪ ತಲುಪಿ ಕೊನೆಗೆ ಉತ್ತರವೇ ಇಲ್ಲವೆಂದು ಭಾವಿಸಿದ್ದಾಗ ತನ್ನ ಪತ್ರದ ಖಾಲಿ ಜಾಗದಲ್ಲಿಯೇ ತನ್ನ ಅನಿವಾರ್ಯತೆಯ ವಿವರಿಸಿದ್ದ ಪುಷ್ಪ (ವೆಂಕೋಬರ ಪ್ರಿಯತಮೆ) ಕೊನೆಗೆ ಮುಕ್ತಾಯದಲ್ಲಿ ‘ನಿಮ್ಮ ಪುಷ್ಪ’ ಎಂದು ಬರೆದದ್ದು, ಆ ಭಾವವ ಅರ್ಥೈಸಿ ಬಲವಂತದ ಮದುವೆಯ ವ್ಯೂಹಕ್ಕೆ ಸಿಲುಕಿದ್ದ ತನ್ನ ಹುಡುಗಿಯ ಕರೆತಂದು ದೇವಸ್ಥಾನದಲ್ಲಿ ವಿವಾಹವಾಗಿದ್ದು ಹೀಗೆ ತನ್ನ ಒಲವಿನ ಕಥೆಯನ್ನು ಭಾವುಕರಾಗಿ ಹೇಳುತ್ತಾರೆ. ಈ ತೆರನಾದ ಮೌನದಲ್ಲರಳಿದ ಒಲವಿನ ಕಥಾನಕದ ಪ್ರಸ್ತುತಿಗೆ ಮರೆವು ಕೂಡ ಶರಣಾಗತಿಗೊಂಡು ಬಿಡುತ್ತದೆ. ಪ್ರೀತಿಯೆಂದರೆ ಮಾತು, ದೇಹವಲ್ಲ. ನೋಟಗಳ ಸಂಗಮ, ಭಾವಗಳ ಸಂಕಲನ ಎಂಬುವುದಕ್ಕೆ ವೆಂಕೋಬ-ಪುಷ್ಪ ಜೋಡಿಯೇ ಸಾದೃಶ್ಯ.
ಇನ್ನೊಂದು ದೃಶ್ಯವಿದೆ. ಕಪ್ಪು ನಾಯಿ ಹಾಗೂ ಬಿಳಿನಾಯಿಯ ಬಗೆಗಿನ ವೆಂಕೋಬರ ವಿಶ್ಲೇಷಣೆಯ ಪ್ರಸ್ತುತಿಯ ಕುರಿತಾದದ್ದು. ಸದಾ ಕೋಪ, ತಲ್ಲಣಗಳಿಂದ ತಳಮಳಿಸುತ್ತಿದ್ದ ರಂಗ (ವಸಿಷ್ಟ ಸಿಂಹ) ನ ಪಾತ್ರಕ್ಕೆ ಸಾಂತ್ವನ ಹೇಳುತ್ತಾ ದ್ವೇಷ, ಅಸೂಯೆ ಎಲ್ಲವೂ ಕಪ್ಪು ನಾಯಿ ಇದ್ದಂತೆ, ಪ್ರೀತಿ, ಬಾಂಧವ್ಯ ಬಿಳಿ ನಾಯಿಯಂತೆ. ಯಾವ ನಾಯಿಗೆ ಹೆಚ್ಚು ಬಿಸ್ಕೆಟ್ ಹಾಕುವೆಯೋ ಆ ನಾಯಿ ಮನದೊಳಗೆ ಬಲಿಷ್ಟಗೊಳ್ಳುತ್ತದೆ ಎನ್ನುತ್ತಾರೆ ವೆಂಕೋಬ ರಾವ್. ‘ನಿಮ್ಮ ಪುಷ್ಪ’ದಂತೆಯೇ ಮತ್ತಷ್ಟು ಕಾಡುವುದು, ಬಣ್ಣದ ನಡಿಗೆಯ ಮೇಲಿದ್ದ ವೆಂಕೋಬರ ಆಸಕ್ತಿ ಹಾಗೂ ಆಲೋಚನೆಗಳು. ಮನೆಯೆಲ್ಲಾ ಮರು ಬಣ್ಣ ಬಳಿದರೂ, ತನ್ನ ಮಗ ಬಿಡಿಸಿದ ಚಿತ್ರವ ಅಳಿಸದೇ ಉಳಿಸಿಕೊಂಡಿದ್ದು, ‘ಚಿತ್ರವೆಂದರೆ ಪೇಪರಿನ ಅಗಲಕ್ಕೆ ಸೀಮಿತಗೊಳ್ಳಬೇಕೆಂದಿಲ್ಲ, ಅದು ಅನಂತ ಮೈಲಿಗಳ ಪರ್ಯಂತರ ಹಬ್ಬುವ ಚಿಂತನೆಗಳಂತೆ ಬೆಳೆಯಬಹುದು’ ಎಂದು ಸದಾ ಹೇಳುತ್ತಿದ್ದ ಮಾತುಗಳು ಅವರಲ್ಲಿದ್ದ ಭಾವಪೂರಿತ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ಈ ದೃಶ್ಯ ನೋಡುತ್ತಿದ್ದಾಗ ಜಯಂತ ಕಾಯ್ಕಿಣಿಯವರು ಹೇಳಿದ ಸಣ್ಣ ಘಟನೆ ನೆನಪಾಗುತ್ತದೆ ಆ ಜೋಡಿ ಮನೆ ಖಾಲಿ ಮಾಡಿ ಹೊರಡುತ್ತಿರುತ್ತಾರೆ. ಆಗ ಆತ ‘ಎಲ್ಲವನ್ನೂ ತೆಗೆದುಕೊಂಡೆವು, ಆದರೆ ಬಹು ಅಮೂಲ್ಯವಾದ ವಸ್ತುವೊಂದನ್ನು ಇಲ್ಲೇ ಬಿಟ್ಟು ಹೋಗಬೇಕಿದೆ’ ಎನ್ನುತ್ತಾನೆ. ಆಗ ಪತ್ನಿ ಏನೆಂದು ಕೇಳುತ್ತಾಳೆ. ‘ಗೋಡೆಯ ಮೇಲೆ ಮಗ ಗೀಚಿದ ಚಿತ್ರ’ ಎನ್ನುತ್ತಾನೆ ಅವನು. ಅದೆಷ್ಟು ಸುಂದರ ಭಾವವಲ್ಲವೇ ಇದು? ಅಂತಹುದೇ ಪ್ರೀತಿ, ಕನಸುಗಳೆಲ್ಲವನ್ನೂ ಮಾತಿಗೆ ಸಿಲುಕಿಸದೆ, ಮನದೊಳಗೆ ಬಿತ್ತಿ, ಮಗನ ಬದುಕಿಗೆ ರಹದಾರಿಯಾಗಿ ಮೌನವಾಗಿ ಬಿಡುವ ಎಲ್ಲಾ ಅಪ್ಪಂದಿರ ತೆರನಾದ ಬದುಕೇ ವೆಂಕೋಬರದ್ದು.
ಅಮ್ಮನ ನಿಷ್ಕಲ್ಮಷ ಬದುಕು, ತ್ಯಾಗದ ಕುರಿತು ಹಲವು ಚಿತ್ರಗಳು ಬಂದಿದ್ದರೂ, ಗಂಡು ಮಕ್ಕಳು ಉಪೇಕ್ಷಿಸುವ, ಶಿಸ್ತಿನ ಸಿಪಾಯಿಯೆಂದು ದೂರವಿಡುವ ಅಪ್ಪನ ಪ್ರಚಾರಕ್ಕೊಳಪಡದ ತ್ಯಾಗ, ಪ್ರೇಮವ ತೋರಿಸಿದ ಕಥಾನಕಗಳು ಬಲು ವಿರಳ. ಅಂತಹ ಪ್ರಯತ್ನವೊಂದನ್ನು ನೈಜತೆಯ ನೂಲು ಹಿಡಿದು ಭಾವಪೂರ್ಣವಾಗಿ ಹೊಲಿಯುವ ಪರಿ ಬಹುಶಃ ನಿರ್ದೇಶಕ ಹೇಮಂತರ ಹಿರಿಮೆ ಗರಿಮೆ ಎನ್ನಬಹುದು. ಸಪ್ತ ಸಾಗರದಾಚೆಯೆಲ್ಲೋ, ಕವಲುದಾರಿ ಹೀಗೆ ಎಲ್ಲಾ ಚಿತ್ರಗಳಲ್ಲೂ ಭಾವಗಳ ಬಳಕೆ ಮೇಲಂತಸ್ತಿನಲ್ಲಿ ಒಣಗಲು ಹಾಕಿದ ಬಟ್ಟೆಯು ಗಾಳಿಯ ಓಟಕ್ಕೆ ನಿಲುಗಡೆಯಿಲ್ಲದೆಯೇ ಹಾರುವಂತೆ ತಡೆಯಿಲ್ಲದೇ ಕಾಡುವಂತಹದ್ದೇ. ಇಲ್ಲಿನ ನಿಧಾನಗತಿಯ ನಿರೂಪಣೆಯಿಂದಾಗಿ ಪ್ರತಿ ನಡೆ ನುಡಿಯೂ ಅಚ್ಚಳಿಯದ ಶಾಯಿಯಲ್ಲಿ ಮನದ ಅಂಗಣದಲ್ಲಿ ಬೆಚ್ಚಗೆ ಕುಳಿತು ಬಿಡುತ್ತದೆ.
‘ಕೋಮಲ ಹೆಣ್ಣೇ’, ‘ರಂಗಭೂಮಿಯೇ ಈ ಜಗ’, ‘ಮೌನ’, ‘ಅಲೆ ಮೂಡಿದೆ’ ಹೀಗೆ ಹಲವು ಹಾಡುಗಳು ಅದ್ಭುತ ಸಾಹಿತ್ಯ, ಅನೂಹ್ಯ ಸಂಗೀತದ ದಿಶೆಯಿಂದ ಕಥೆಯ ನೇಗಿಲು ಹಿಡಿದು ಸಾಗಲು ಪೂರಕವಾಗಿದೆ. ವಿಶೇಷತಃ ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತ ಶೈಲಿಯ ಜೋಡಿಯಾಗಿ ಮೂಡಿ ಬಂದಿರುವ ‘ನಾ ಈ ಸಂಜೆಗೆ’ ಹಾಡು ಚರಣರಾಜ್ ಕುಸುರಿಗೆ ಸಾಕ್ಷಿ. ಹಿನ್ನೆಲೆ ಸಂಗೀತವಂತೂ ಭಾವ ತುಂಬಿದ ಸಲಿಲದಲ್ಲಿನ ಜಳಕ. ವೆಂಕೋಬ ರಾವ್ ಆಗಿ ಅನಂತನಾಗ್ ಅಭಿನಯಿಸಿದ್ದಲ್ಲ… ಉಸಿರ ಧಾರೆಯೆರೆದದ್ದು ಎಂದೇ ಹೇಳಬಹುದು. ಆ ನಡಿಗೆ, ಆ ಮಾತು, ಗೊಂದಲವೇ ತುಂಬಿದ ಮುಖಾರವಿಂದ, ಮರೆವಿನ ತಳಮಳಗಳು ಇವೆಲ್ಲವನ್ನೂ ತೋರಿಸಿದ ಪರಿ ಬಹುಶಃ ಜಗತ್ತಿನ ಯಾವ ನಟರಿಂದಲೂ ಕಷ್ಟ ಸಾಧ್ಯದ ಮಾತು ಎಂದೇ ಹೇಳಬಹುದು. ಈ ಪಾತ್ರ ಪ್ರಸ್ತುತಿಗೆ ಪ್ರಪಂಚದ ಅತ್ಯುನ್ನತ ಪುರಸ್ಕಾರಗಳು ಲಭಿಸಿದರೆ ಅದು ಅನಂತನಾಗ್ ಅವರಿಗಲ್ಲ, ಆ ಪ್ರಶಸ್ತಿಗೆ ಲಭಿಸುವ ಹೆಮ್ಮೆ ಎಂದೇ ಹೇಳಬಹುದು. ಅದೆಷ್ಟೋ ಶತಮಾನಗಳಿಗೊಮ್ಮೆ ನಡೆಯುವ ಬಾಹ್ಯಾಕಾಶದ ವಿಸ್ಮಯದಂತೆಯೇ ಈ ಪಾತ್ರ ಪ್ರಸ್ತುತಿ. ಅತಿ ಅಪರೂಪ, ವರ್ಣನೆಯ ವಿಸ್ತಾರಕ್ಕೆ ನಿಲುಕದ್ದು. ಅವರಿಗೆ ಪೂರಕವೆಂಬಂತೆ ಜೋಡಿಯಾಗಿ ಸೆಳೆಯುವ ರಕ್ಷಿತ್ ಶೆಟ್ಟಿ ಮತ್ತು ಶ್ರುತಿ ಹರಿಹರನ್. ನೈಜತೆ ಎಂದರೆ ಲೀಲಾ ಜಾಲತೆ ಎಂದು ನಟಿಸುವ ರಕ್ಷಿತ್‌ಗೆ ಸಾಟಿಯೆಂಬಂತೆ ನಟಿಸಿರುವುದು ಶ್ರುತಿ ಹರಿಹರನ್. ಆ ಭಾವ ತೀವ್ರತೆ, ಮುಗ್ಧತೆಯ ಚಿತ್ರಿಕೆ, ಅಂಚಿನಲ್ಲಿ ಅರಳುವ ನಗುವಿನೊಂದಿಗೆ ಬೇಷರತ್ತಾಗಿ ನೋಡುಗನ ಆಪೋಶನ ತೆಗೆದುಕೊಳ್ಳುತ್ತಾರೆ ಅವರು. ಆ ಅಂತಿಮ ದೃಶ್ಯದಲ್ಲಿ ವೆಂಕೋಬ ರಾವ್-ಪುಷ್ಪರಂತೆಯೇ ಕೂಡುವ ಶಿವ-ಸಹನಾರ ಪ್ರಸ್ತುತಿ, ಅವರ ಜೋಡಿಗೆ ಯಾವ ಕಣ್ಣು ಬೀಳದಿರಲಿ ಎಂಬಂತೆ ಹಾರೈಸುವಂತೆ ಮಾಡುತ್ತದೆ. ವಸಿಷ್ಟ ಸಿಂಹ ಕಂಚಿನ ಕಂಠದಿಂದ ಭಯ ಹುಟ್ಟಿಸುತ್ತಾರೆ. ಉಳಿದೆಲ್ಲಾ ಪಾತ್ರಗಳು ಕಥಾನಕದ ನಡಿಗೆಗೆ ಹಾದಿಗಲ್ಲಾಗಿದೆ.
ಒಟ್ಟಾರೆಯಾಗಿ ಹೇಳಬೇಕಂದರೆ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ನೋಡಿ ಮರೆವ ಕಥೆಯಲ್ಲ. ಪ್ರಿಯತಮೆ ಬಿಟ್ಟು ಹೋದ ನೆನಪಿನಂತೆ, ಕನಸು ಉಳಿಸುವ ಅಚ್ಚರಿಯಂತೆ, ಕವನದ ಸಾಲುಗಳು ಕಾಡುವಂತೆಯೇ ಮನವ ಕಲಕುವ ಕಥನ. ದಿನಗಳು ಕೂಡುತ್ತಲೇ, ಪ್ಯಾಸೆಂಜರ್‌ಗಳ ಕಣ್ಣೋಟಕ್ಕೂ ನಿಲುಕದೆ ಒಂದೇ ಸಮನೆ ಓಟ ಕೀಳುವ ಸೂಪರ್ ಫಾಸ್ಟ್ ರೈಲಿನಂತೆ ಸಾಗುವ ಬದುಕಿನಲ್ಲಿ ಸ್ಟೇಷನ್‌ಗಳಂತೆ ಕಳೆದುಹೋಗುವ ಬಾಂಧವ್ಯದ ಬೆಲೆಯ ಅರಿವು ಆಗುವುದು ಅವುಗಳ ಗೈರಿನಲ್ಲಷ್ಟೇ ಎಂಬುದರ ಭಾವಪೂರ್ಣ ರೂಪಕವೇ ಈ ಚಿತ್ರ.
ಮುಗಿಸುವ ಮುನ್ನ:
ಅಮ್ಮನ ತ್ಯಾಗ, ನಿಷ್ಕಲ್ಮಶ ಪ್ರೇಮವ ಜಗತ್ತು ಬಾಚಿಕೊಂಡರೂ, ಅಪ್ಪನ ಭಾವನಾತ್ಮಕ ಆಂತರ್ಯದ ಅನಾವರಣವಾಗುವುದು ಬಲು ವಿರಳ. ಅಪ್ಪನಲ್ಲೊಂದು ಅನೂಹ್ಯವಾದ ಜಗವಿದೆ. ಅರ್ಥಕ್ಕೆ ನಿಲುಕದೆ ಸದಾ ಕಾಲ ಉಳಿದುಬಿಡುತ್ತಾರೆ ಅದೇ ಜಗದೊಳಗೆ. ಯಾವತ್ತು ಪಾಪು ಒಂದು ಹೆಗಲೇರಿ, ಭುಜದೆತ್ತರಕ್ಕೆ ಬೆಳೆದಾಗಲೇ ಅಪ್ಪ ಎಲ್ಲರಿಗೂ ಅರ್ಥವಾಗುವುದು. ಆದರೆ ಕಾಲ ಖಾಲಿಯಾಗಿರುತ್ತದೆ. ಕಳೆದ ಬದುಕು ಕಾಡುತ್ತದೆ. ಅಪ್ಪ ಮತ್ತೊಮ್ಮೆ ಬೈಯ್ಯಲಾರೆಯಾ ಎಂದು ಮನಸ್ಸು ಕೇಳುತ್ತದೆ….
ರಾಮ್ ಪ್ರಕಾಶ್ ರೈ ದಕ್ಷಿಣ ಕನ್ನಡ ಜಿಲ್ಲೆ, ಕಡಬ ತಾಲೂಕು, ಕಲ್ಲುಗುಡ್ಡೆ ನಿವಾಸಿ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಪ್ರಾಡಕ್ಟ್ ಡಿಸೈನ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ ಹವ್ಯಾಸಿ ಬರಹಗಾರ. ಕಥೆ, ಲೇಖನಗಳೆಂದರೆ ಅಚ್ಚುಮೆಚ್ಚು. ಯಕ್ಷಗಾನ ಭಾಗವತಿಕೆ, ಮದ್ದಳೆ ವಾದನ, ಒರಿಗಾಮಿ ಇತರ ಹವ್ಯಾಸಗಳು….