ಆಸ್ಟ್ರೇಲಿಯಾದ ದಕ್ಷಿಣ ಭಾಗಗಳಲ್ಲಿ ಈಗಾಗಲೇ ಶರತ್ಕಾಲದ ಚಿಹ್ನೆಯಾದ ಎಲೆ ಉದುರುವುದು ಶುರುವಾಗಿದೆ. ದಿನದ ಉಷ್ಣಾಂಶ ತಗ್ಗುತ್ತಿದೆ. ರಾತ್ರಿ ಚಳಿ ಜಾಸ್ತಿಯಾಗುತ್ತಿದೆ. ಬೇಸಿಗೆಯ ತೀವ್ರತೆಯಿಂದ ಬಳಲಿದ್ದ ಮೈಮನಗಳಿಗೆ ಈ ತಂಪು ಹಿತವಾಗಿದ್ದು, ಬೆಚ್ಚನೆ ಹೊದಿಕೆಯಲ್ಲಿ ಮೈ ತೂರಿಸಿ ಸುಖವಾಗಿ ನಿದ್ರಿಸುವ ಈ ದಿನಗಳು ಅಪ್ಯಾಯಮಾನವಾಗಿವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ಅಂಕಣ

ಪ್ರಿಯ ಓದುಗರೆ,

ತಣ್ಣನೆ ಗಾಳಿ ಬೀಸುತ್ತಿದೆ. ತಂಪು ವಾತಾವರಣ, ಆಗಾಗ ಒಂದಷ್ಟು ತುಂತುರು ಮಳೆ. ಇದರಿಂದ ಕಕ್ಕಾಬಿಕ್ಕಿಯಾಗಿ, ತಂಪನ್ನು ಹೊರದೂಡುವುದಕ್ಕೆ ಹುನ್ನಾರ ನಡೆಸುತ್ತಾ ಇದ್ದಕ್ಕಿದ್ದಂತೆ ಸಾಕ್ಷಾತ್ ಸೂರ್ಯದೇವನಿಗೇ ಮುತ್ತು ಕೊಡಲು ಹೊರಟಂತೆ ಏರಿಬಿಡುವ ಬಿಸಿಲು-ಸೆಕೆ-ಬೆವರು. ಒಂದೇ ಎರಡೇ ಈ ಶರತ್ಕಾಲದ ಚಮತ್ಕಾರಗಳು! ಈ ರೀತಿ ಭೂ-ಆಕಾಶಗಳು ನಡೆಸುವ ರಮಣೀಯ ಚೋದ್ಯಗಳಿಂದ ಶರತ್ಕಾಲವೆಂದರೆ ನನಗೆ ಬಲು ಇಷ್ಟ.

ಆಸ್ಟ್ರೇಲಿಯಾದ ದಕ್ಷಿಣ ಭಾಗಗಳಲ್ಲಿ ಈಗಾಗಲೇ ಶರತ್ಕಾಲದ ಚಿಹ್ನೆಯಾದ ಎಲೆ ಉದುರುವುದು ಶುರುವಾಗಿದೆ. ದಿನದ ಉಷ್ಣಾಂಶ ತಗ್ಗುತ್ತಿದೆ. ರಾತ್ರಿ ಚಳಿ ಜಾಸ್ತಿಯಾಗುತ್ತಿದೆ. ಬೇಸಿಗೆಯ ತೀವ್ರತೆಯಿಂದ ಬಳಲಿದ್ದ ಮೈಮನಗಳಿಗೆ ಈ ತಂಪು ಹಿತವಾಗಿದ್ದು, ಬೆಚ್ಚನೆ ಹೊದಿಕೆಯಲ್ಲಿ ಮೈ ತೂರಿಸಿ ಸುಖವಾಗಿ ನಿದ್ರಿಸುವ ಈ ದಿನಗಳು ಅಪ್ಯಾಯಮಾನವಾಗಿವೆ.

ನಮ್ಮ ರಾಣಿರಾಜ್ಯದ (ಕ್ವೀನ್ಸ್‌ಲ್ಯಾಂಡ್) ಮಟ್ಟಿಗೆ ಹೇಳುವುದಾದರೆ ಹಾಗೇನು ಹೇಳಿಕೊಳ್ಳುವಂಥಾ ಬದಲಾವಣೆಗಳು ಇನ್ನೂ ಕಾಣುತ್ತಿಲ್ಲ. ಹಸಿರು ಇನ್ನೂ ನಳನಳಿಸುತ್ತಿದೆ. ಆದರೆ, ಕಣ್ಣ ದೃಷ್ಟಿಯನ್ನು ಕೆಳಗಿಳಿಸಿ ಸೂಕ್ಮವಾಗಿ ನೋಡಿದರೆ ನೆಲವು ಮಂಕಾಗುತ್ತಿರುವುದು ಅರಿವಾಗುತ್ತದೆ. ನೆಲದಲ್ಲಿ ಒಣ ಕಂದು ಬಣ್ಣ ಕಾಣುತ್ತಿದೆ. ಇದೇನೂ ನಮ್ಮ ಕೈತೋಟಿಗರನ್ನು ಧೃತಿಗೆಡಿಸಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ತಂಪು ಹವೆ ಕಾಲಿಡುವುದನ್ನೇ ಕಾಯುವ ಅವರು ಈಗಾಗಲೇ ಹಲವಾರು ತರಕಾರಿ ಮತ್ತು salad ಗಳ ಬೀಜಗಳನ್ನು seedling tray ಗಳಲ್ಲಿ ನೆಟ್ಟು, ಅವುಗಳ ಮೊಳಕೆ ಬಂದು, ಮರಿಗಳಾಗಿ ಈಗ ಅವನ್ನು ನೆಲದ ಮಣ್ಣಿನಲ್ಲಿ ನೆಡುವ ಕೆಲಸ ಮಾಡುತ್ತಿದ್ದಾರೆ. ಸದಾ ಕೈತೋಟಿಗರ ಗುಂಪುಗಳಲ್ಲಿ ಇದೇ ಮಾತುಕತೆ. ಈ ತಂಪು-ಬಿಸಿ ಹವಾಮಾನವು ಹುರಳಿಕಾಯಿ, ಕೋಸುಗಡ್ಡೆಗಳ ವಿಧಗಳನ್ನು ಬೆಳೆಯುವುದಕ್ಕೆ ಹೇಳಿಮಾಡಿಸಿದ್ದು ಎನ್ನುತ್ತಾರೆ. ನಾನೂ ಕೂಡ ಅವುಗಳ ಬೀಜಗಳನ್ನು ಕೊಂಡು ತಂದಿಟ್ಟುಕೊಂಡಿದ್ದೀನಿ. ಬರುವ ಈಸ್ಟರ್ ರಜೆಯಲ್ಲಿ ಅವನ್ನು ನೇರ ನೆಲದಲ್ಲಿ ಬಿತ್ತಬೇಕು. ಅವೆಲ್ಲಾ ಮೊಳಕೆಯೊಡೆಯುತ್ತವೆ ಎನ್ನುವ ಖಾತ್ರಿಯಂತೂ ಕಿಂಚಿತ್ತೂ ಇಲ್ಲ. ಅವು ನೆಲದೊಳಗಿನ ಕ್ರಿಮಿಗಳಿಗೆ ಹಬ್ಬದೂಟವಾಗುವ ಸಂಭವವೇ ಹೆಚ್ಚು!

ನಾನು ಮೇಲೆ ಹೇಳಿದಂತೆ ಮರಗಳು ಇನ್ನೂ ತಮ್ಮ ಹಸಿರ ಮೈಯನ್ನು ಕಳಚಿಲ್ಲ. ನಮ್ಮ ರಾಣಿರಾಜ್ಯದಲ್ಲಿ ಸಮಶೀತೋಷ್ಣ ಹವೆಯಿರುವುದರಿಂದ ಉಷ್ಣದೇಶಗಳಿಂದ ತಂದು ಇಲ್ಲಿ ನೆಟ್ಟು ಬೆಳೆಸುವ ಗಿಡಮರಗಳು ನಳನಳಿಸುತ್ತಿವೆ. ಭೂಮಧ್ಯರೇಖೆಯ ಆಚೆಕಡೆ ಇರುವ ಉತ್ತರ ಧ್ರುವದಲ್ಲೀಗ ವಸಂತ ಕಾಲ ಕಾಲಿಟ್ಟಿದೆ. ಪ್ರಕೃತಿ ನಿಯಮದ ಪ್ರಕಾರ ಹೊಸ ಚಿಗುರಿನ ಹೊತ್ತು ಇದು. ನಮ್ಮನೆ ಅಂಗಳದಲ್ಲಿ ಉಷ್ಣದೇಶಗಳ ಹಣ್ಣುಮರಗಳಾದ ಮಾವು, ದಾಳಿಂಬೆ, ಸೀಬೆ, ಹಲಸು ಇವೆ. ಇವು ದಕ್ಷಿಣಧ್ರುವದಲ್ಲಿರುವ ಆಸ್ಟ್ರೇಲಿಯಾದ ಮಾರ್ಚ್ ತಿಂಗಳಿನ ಶರತ್ಕಾಲದ ತಂಪಿಗೆ ಸೊಪ್ಪು ಹಾಕದೆ ತಾವು ವಸಂತಕಾಲಕ್ಕೇ ಸೇರಿರುವುದನ್ನು ಸಾಬೀತು ಮಾಡುತ್ತಿವೆ. ದಾಳಿಂಬೆ ಮರದಲ್ಲಿ ಮತ್ತೆ ಕೆಂಪು ಹೂ! ಮಾವಿನ ಕಿರಿಮರದ ನೆತ್ತಿಯಲ್ಲಿ ಚಿಗುರಿದ ಹೊಸ ಜುಟ್ಟು! ಮಲ್ಬೆರ್ರಿ ಮರದ ಕೊಂಬೆಗಳ ತುಂಬಾ ಚಿಗುರುಗಳು. ಚೆನ್ನಾಗಿ ಆರೈಕೆ ಮಾಡಿಸಿಕೊಂಡು ಈಗ ಆರೋಗ್ಯವಾಗಿರುವ ನಿಂಬೆ ಮರದಲ್ಲಿ ಹಣ್ಣುಗಳು ಮಾಗುತ್ತಿವೆ.

ಕೆಂಪು ಸೀಬೆಹಣ್ಣಿನ ಮರದ ತುಂಬಾ ಹಸಿರು ಕೊಂಬೆಗಳಲ್ಲಿ ತೂಗಾಡುತ್ತಿರುವ ಕಾಯಿಹಣ್ಣುಗಳು. ಅವು ಎಲ್ಲವೂ ಹಕ್ಕಿಗಳಿಗೆ, ಬಾವಲಿಗಳಿಗೆ ಸಮರ್ಪಿತ. ಕಾಯಿ ಮಾಗಲು ಶುರುವಾದ ತಕ್ಷಣ ಅದಕ್ಕೆ ಫ್ರೂಟ್ ಫ್ಲೈಸ್‌ (fruitflies) ಬಂದು ರಂಧ್ರ ಕೊರೆದು ಹಣ್ಣಿನೊಳಗೆ ತೂರಿಕೊಂಡು ಮನೆಮಾಡಿ ಸಂಸಾರ ಶುರು ಮಾಡುತ್ತವೆ. ಸೀಬೆಹಣ್ಣಿನ ಆಸೆಯಿಂದ ನಾನು ಹಣ್ಣು ಕೊಯ್ದು ನೋಡಿದರೆ ಅದರೊಳಗೆ ಹುಳುಗಳು ಈಜಾಡುತ್ತಿರುತ್ತವೆ. ಹುಳುಗಳಿಂದ ಹಣ್ಣನ್ನು ರಕ್ಷಿಸಬೇಕೆಂದರೆ ಒಂದು ವಿಶೇಷ fruitfly netting (ಸೊಳ್ಳೆಪರದೆ ತರಹ) ಕೊಂಡು, ಮರಹತ್ತಿ ಪ್ರತಿಯೊಂದು ಕಾಯಿನ ಸುತ್ತಲೂ netting ಕಟ್ಟಬೇಕು. ಇಷ್ಟೆಲ್ಲಾ ಕೆಲಸ ಯಾಕೆ ಎಂದುಕೊಂಡು ನಾನು ಎಲ್ಲವೂ ಪ್ರಕೃತಿಮಾತೆಯ ಕೃಪೆ, ಸೀಬೆಹಣ್ಣು ಪ್ರಕೃತಿಗೇ ಸಮರ್ಪಣೆಯಾಗಲಿ, ಎಂದು ಸುಮ್ಮನಾಗಿದ್ದೀನಿ.

ಈ ನನ್ನ ಮನೋಭಾವವನ್ನು ಕೇಳಿದ ಕೆಲ ಕೈತೋಟಿಗರು ‘ಬೇರೆ ಬೇರೆ ತೋಟಗಳಿಗೆ ಹೋಗಿ ನೋಡು, ಅವರೆಲ್ಲ ಹೇಗೆ ತಾವು ಬೆಳೆಯುತ್ತಿರುವ ತರಕಾರಿ, ಹಣ್ಣುಗಳನ್ನು ಹುಳುಹುಪ್ಪಟೆ, ಕೀಟಗಳು, ಪ್ರಾಣಿಪಕ್ಷಿಗಳಿಂದ ಕಾಪಾಡುತ್ತಾರೆ ಎನ್ನುವುದನ್ನು ಕಲಿಯಬಹುದು’ ಅಂದರು. ಹೋದವಾರ ನಮ್ಮ ಪ್ರದೇಶದಲ್ಲಿ ಸ್ಥಳೀಯ ನಗರಪಾಲಿಕೆ ಆಯೋಜಿಸಿದ್ದ ಒಂದು ‘garden trail’ ನಡೆಯಿತು. ಇದು ಹೇಗೆಂದರೆ, ನಗರಪಾಲಿಕೆಯ ತೋಟಗಾರಿಕೆ ವಿಭಾಗದವರು ಈ ವರ್ಷ ಇಂಥದ್ದೊಂದು ಕಾರ್ಯಕ್ರಮವನ್ನು ನಡೆಸುತ್ತೀವಿ, ಇದರಲ್ಲಿ ಭಾಗವಹಿಸುವ ಸ್ಥಳೀಯ ತೋಟಗಳ (ಗಾರ್ಡನ್ ಅಥವಾ ಫಾರ್ಮ್ ಆಗಿರಬಹುದು) ಮಾಲೀಕರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು ಎಂದು ಹೇಳುತ್ತಾರೆ. ನೋಂದಾಯಿಸಿದ ತೋಟದವರು ಕಾರ್ಯಕ್ರಮ ನಡೆಯುವ ವಾರಾಂತ್ಯ ತಮ್ಮ ತೋಟವನ್ನು ಸಾರ್ವಜನಿಕರಿಗೆ ತೆರೆದಿಡುತ್ತಾರೆ.

ನಗರಪಾಲಿಕೆಯು ಒಂದು ಟಿಕೆಟ್ ದರವನ್ನು ನಿಗದಿ ಪಡಿಸುತ್ತದೆ. ಈ ಟಿಕೆಟ್ ಹಣದಲ್ಲಿ ಒಂದಂಶ ತೋಟದ ಮಾಲೀಕರಿಗೂ ಸೇರುತ್ತದೆ. ಭಾಗವಹಿಸುವ ತೋಟಗಳ ಸ್ಥಳಗಳನ್ನು ತೋರಿಸುವ ಒಂದು ನಕ್ಷೆಯನ್ನು ಮುದ್ರಿತ ರೂಪದಲ್ಲಿ ಹಾಗೂ ಎಲೆಕ್ಟ್ರಾನಿಕ್ ರೂಪದಲ್ಲಿ ಸಿದ್ಧಪಡಿಸುತ್ತಾರೆ. ಕಾರ್ಯಕ್ರಮದ ಬಗ್ಗೆ ಸಾಕಷ್ಟು ಪ್ರಚಾರ ನಡೆಸುತ್ತಾರೆ. ವಿವಿಧ ತೋಟಗಾರಿಕೆ ಗುಂಪುಗಳು ಹಾಗೂ ಕೈತೋಟಿಗರು ವಿಷಯವನ್ನು ಪರಸ್ಪರ ಹಂಚಿಕೊಂಡು ಕಾರ್ಯಕ್ರಮವನ್ನು ಪ್ರೋತ್ಸಾಹಿಸುತ್ತಾರೆ. ಸಾರ್ವಜನಿಕರು ಟಿಕೆಟ್ ಕೊಂಡುಕೊಂಡು ಹಲವಾರು ತೋಟಗಳಿಗೆ ಹೋಗಿ ಅವನ್ನು ನೋಡಿ, ಬೆಳೆಗಾರರು ನಡೆಸುವ ಪ್ರಾತ್ಯಕ್ಷಿಕೆಗಳಲ್ಲಿ ಪಾಲ್ಗೊಂಡು ಹೊಸದನ್ನು ಕಲಿಯುವ ಅವಕಾಶವಿತ್ತು. ಹೀಗೆ ಪಾಲ್ಗೊಳ್ಳುವಾಗ ಸ್ವಪ್ರೇರಿತರಾಗಿ ಅಲ್ಲಿರಿಸಿರುವ ಡೊನೇಶನ್ ಪೆಟ್ಟಿಗೆಯಲ್ಲಿ ಹಣದಾನವನ್ನು ಕೂಡ ಮಾಡಬಹುದು. ಕೆಲ ಸಹೃದಯ ಬೆಳೆಗಾರರು ಪಾಲ್ಗೊಳ್ಳುವ ಮಂದಿಗೆ ಕಾಫಿ ಟೀ, ಬಿಸ್ಕತ್ತು ಕೊಡುವುದಲ್ಲದೆ ತಾವು ಬೆಳೆದಿದ್ದನ್ನು ಹಂಚಿಕೊಳ್ಳುತ್ತಾರೆ. ವಾರಾಂತ್ಯದ ಎರಡೂ ದಿನಗಳಲ್ಲಿ ಈ ನಿಗದಿತ ತೋಟಗಳು ತೆರೆದಿರುತ್ತವೆ. ನಂತರ ಭಾಗವಹಿಸಿದವರು ಸಾಮಾಜಿಕ ತಾಣಗಳ ಗುಂಪುಗಳಲ್ಲಿ ತಾವು ನೋಡಿದ್ದನ್ನು, ಕಲಿತಿದ್ದನ್ನು ಹಂಚಿಕೊಂಡು ಚರ್ಚಿಸುತ್ತಾರೆ.

ಬರುಬರುತ್ತಾ ಆಸ್ಟ್ರೇಲಿಯಾದಲ್ಲಿ ಸಮುದಾಯ ತೋಟಗಾರಿಕೆ ಪ್ರಜ್ಞೆ ಹೆಚ್ಚುತ್ತಿದೆ. ನಗರಪಾಲಿಕೆಗಳಿಗೆ ಸೇರಿದ ಖಾಲಿ ಸ್ಥಳಗಳನ್ನು ಗುರುತಿಸಿ ಅಲ್ಲಿ ತೋಟಗಾರಿಕೆ ವಿಭಾಗದ ಉಸ್ತುವಾರಿಯಲ್ಲಿ ಅನುಮತಿ ಪಡೆದ ಸಾರ್ವಜನಿಕರು ತರಕಾರಿ ಹಣ್ಣು ಬೆಳೆಯುವ ಪ್ರಯತ್ನಗಳು ಹೆಚ್ಚಾಗುತ್ತಿವೆ. ಇದರಲ್ಲಿ ಕಾಂಪೋಸ್ಟಿಂಗ್, ಮಣ್ಣಿನ ಆರೋಗ್ಯ, ಬೀಜ ಸಂರಕ್ಷಣೆ, ಹೊಸಬರಿಗೆ ತರಬೇತಿ ಕೊಡುವುದು, ಬೆಳೆದ ತರಕಾರಿ-ಹಣ್ಣುಗಳನ್ನು ಉಪಯೋಗಿಸಿ ತಿಂಡಿತಿನಿಸು ತಯಾರಿಸುವುದು ಎಲ್ಲವೂ ಸೇರಿದೆ. ಇದರಿಂದ ಸಮುದಾಯ ಸಾಮರಸ್ಯ ಬೆಳೆಯುತ್ತದೆ.

ಸಾಮರಸ್ಯ ಎಂದಾಗ ಇದು ನೆನಪಿಗೆ ಬಂತು ನೋಡಿ. ಆಸ್ಟ್ರೇಲಿಯಾದಲ್ಲಿ ಮಾರ್ಚ್ ೧೮ ರಿಂದ ೨೪ ರವರೆಗೆ ‘ಹಾರ್ಮೊನಿ ವೀಕ್’ ನಡೆಯುತ್ತಿದೆ. ಮಾರ್ಚ್ ೨೧ ರಂದು ಹಾರ್ಮೊನಿ ಡೇ ಎಂದು ಆಚರಿಸಲಾಗುತ್ತದೆ. ಪ್ರತಿವರ್ಷವೂ ಸರಕಾರವು ನಡೆಸುವ ಈ ವಾರದ ವಿಶೇಷತೆ ಇರುವುದು ಆಸ್ಟ್ರೇಲಿಯಾದಲ್ಲಿ ವಾಸಿಸುವ ಎಲ್ಲರ ವೈವಿಧ್ಯತೆಗಳನ್ನು ಗೌರವಿಸಿ ಎಲ್ಲರೂ ಸಲ್ಲುವ ಬಹುತ್ವಗಳ ಸಮಾಜವನ್ನು ಬೆಂಬಲಿಸುವುದು. ಈ ಬೆಂಬಲವನ್ನು ತೋರಿಸಲು ಎಲ್ಲೆಲ್ಲೂ ಸಾಮರಸ್ಯ/ಸೌಹಾರ್ದತೆ ಕಾರ್ಯಕ್ರಮಗಳು ನಡೆಯುತ್ತವೆ. ಶಾಲಾ ಮಕ್ಕಳು, ವಿಶ್ವವಿದ್ಯಾಲಯಗಳು, ಸರಕಾರೀ ಮತ್ತು ಖಾಸಗಿ ಕಚೇರಿಗಳು, ಸಂಘಸಂಸ್ಥೆಗಳು ಎಲ್ಲವೂ, ಎಲ್ಲರೂ ಒಂದಲ್ಲಾ ಒಂದುರೀತಿಯಲ್ಲಿ ಪಾಲ್ಗೊಳ್ಳುತ್ತಾರೆ. ಸಂತೋಷವಾಗುತ್ತದೆ. ಮೂಲವಾಸಿಗಳು, ಆಂಗ್ಲೋ-ಯುರೋಪಿಯನ್ ಸೆಟ್ಟ್ಲರ್ಸ್ ಮತ್ತು ವಲಸಿಗರ ಈ ಸಮಾಜದಲ್ಲಿ ಸೌಹಾರ್ದತೆ/ಸಾಮರಸ್ಯದ ಸಂವಾದಗಳು ಹೆಚ್ಚಲಿ ಎಂದು ಆಶಿಸೋಣ.

ಜೊತೆಗೆ ಈ ಒಂದು ವಿಷಯವೂ ಬಹಳ ಮುಖ್ಯವೆನಿಸುತ್ತದೆ. ಪ್ರತಿವರ್ಷ ಮಾರ್ಚ್ ೨೧ ನೇ ತಾರೀಖನ್ನು International Day for the Elimination of Racial Discrimination ಎಂದು ಆಚರಿಸಲಾಗುತ್ತದೆ. ೧೯೬೬ನೇ ಇಸವಿಯಲ್ಲಿ ವಿಶ್ವಸಂಸ್ಥೆಯು ಇದನ್ನು ಅಂಗೀಕರಿಸಿದ್ದು. ಈ ದಿನದ ಆಚರಣೆಯ ಮೂಲ ಉದ್ದೇಶ ಇರುವುದು ರೇಸಿಸಂ ಅಥವಾ ವರ್ಣಭೇದ ಅಥವಾ ಜನಾಂಗಭೇದವನ್ನು ಕುರಿತು ಮಾತನಾಡಿ ಅದರ ನಿರ್ಮೂಲನೆಯತ್ತ ಕೆಲಸ ಮಾಡಲು ಅರಿವು ಮೂಡಿಸುವುದು. ಆಸ್ಟ್ರೇಲಿಯಾದಲ್ಲಿ ನಡೆಸಲಾಗುವ ಹಾರ್ಮೊನಿ ಡೇ ಮತ್ತು ಅದರ ಕಾರ್ಯಕ್ರಮಗಳು ಜನಾಂಗಭೇದವನ್ನು ತೊಲಗಿಸುವ ಮೂಲ ಉದ್ದೇಶವನ್ನು ಕೈಬಿಟ್ಟು ಅದನ್ನು ವೈವಿಧ್ಯತೆಗಳ ಆಚರಣೆ ಎಂದು ಕರೆದರೆ ಅದು ತಪ್ಪಾಗುತ್ತದೆ ಎಂದು ಹೊಸ Race Discrimination ಕಮಿಷನರ್ ಗಿರಿ ಶಿವರಾಮನ್ ಹೇಳಿದ್ದಾರೆ. ಸಾಮಾಜಿಕ ಸಾಮರಸ್ಯ ಎಲ್ಲರಿಗೂ ಬೇಕು, ಆದರೆ ಅದು ಉಂಟಾಗುವುದು ರೇಸಿಸಂ ನಿರ್ಮೂಲನೆಯಿಂದ, ಎಂದವರು ಹೇಳಿದ್ದಾರೆ. ಅವರ ಅಭಿಪ್ರಾಯವು ಸರಿ. ಸೌಹಾರ್ದತೆ, ಸಾಮರಸ್ಯಕ್ಕೆಂದು ಕೆಲಸ ಮಾಡುವ ಬದ್ಧತೆಯನ್ನಿಟ್ಟುಕೊಂಡು ಜೊತೆಜೊತೆಗೇ ನಾವು ರೇಸಿಸಂ ಧೋರಣೆಗಳನ್ನು, ಮನೋಭಾವಗಳನ್ನು ಮತ್ತು ವರ್ತನೆಯನ್ನು ಖಂಡಿಸುತ್ತಾ ಅವುಗಳನ್ನು ಹೊಡೆದೋಡಿಸಬೇಕು, ಅಲ್ಲವೇ.