ಅರ್ಧ ನೇಯ್ದಿಟ್ಟ ಸ್ವೆಟರ್ ಯೋಧನ ಕುಟುಂಬದ ಬದುಕಿನ ಅನಾವರಣ. ಇಲ್ಲಿ ಮಹಿಳೆಯೊಬ್ಬಳ ಮಾನಸಿಕ ತುಮುಲಗಳ ಸಾಮಾಜಿಕ ಬೇಕು ಬೇಡಗಳ ಒಳಗೊಳ್ಳುವಿಕೆ ಮತ್ತು ಅದನ್ನು ಮೀರುವ ಆಕೆಯ ಕನಸು ಹರಿಯನ್ನು ಕಾಣುವ ತವಕದೊಂದಿಗೆ ಮೂರ್ತರೂಪ ಪಡೆದು ನಮ್ಮನ್ನು ಚಿಂತಿಸುವಂತೆ ಮಾಡುತ್ತದೆ.
ಸದಾಶಿವ ಸೊರಟೂರು ಅವರ ಕಥಾ ಸಂಕಲನ “ಧ್ಯಾನಕ್ಕೆ ಕೂತ ನದಿ”ಯ ಕುರಿತು ಮಾರುತಿ ಗೋಪಿಕುಂಟೆ ಬರಹ

ಸದಾಶಿವ ಸೊರಟೂರರ ಬರಹವನ್ನು ಓದುವುದೆ ಒಂದು ಖುಷಿ. ನಾನು ಅವರ ಕವಿತೆಗಳನ್ನು ಓದಿಯೆ ಅಭಿಮಾನಿಯಾದವನು. ಅವರ ನಿರೂಪಣೆಯ ಭಾಷೆಯ ಲಾಲಿತ್ಯ ನಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಅವರ ಕತೆಗಳಲ್ಲಿಯೂ ಕಾವ್ಯದ ಭಾಷೆಯೆ ಗದ್ಯದ ಲಯದೊಂದಿಗೆ ಸಾಗಿ ಓದುಗನನ್ನು ಕತೆಯೂ ಕಾಡುತ್ತದೆ. ಕಾವ್ಯದ ಭಾಷೆಯೂ ಕಾಡುತ್ತದೆ.

(ಸದಾಶಿವ ಸೊರಟೂರು)

ಅವರ ಇತ್ತೀಚಿನ ಕಥಾ ಸಂಕಲನ “ಧ್ಯಾನಕ್ಕೆ ಕೂತ ನದಿ” ಶೀರ್ಷಿಕೆಯಿಂದಲೆ ಮನ ಸೆಳೆಯುತ್ತದೆ ಮತ್ತು ಕಾಡುತ್ತದೆ. ಕಾಡುವ ಯಾವ ಕತೆಯಾದರೂ ಅದು ಜೀವಂತ. ಓದಿ ಮುಗಿಸಿದ ಮೇಲೂ ಕತೆಯ ಅನುರಣನ ಮತ್ತೆ ಮತ್ತೆ ಎದೆಯ ದನಿಗೆ ತಾಕಿ ಕತೆ ಉಸಿರಾಡುತ್ತದೆ. ಈ ಸಂಕಲನದಲ್ಲಿ ಒಟ್ಟು ಹತ್ತು ಕತೆಗಳಿವೆ. ಪ್ರತಿಯೊಂದು ಮನುಷ್ಯ ಸಂಬಂಧದ ಬೇರೆ ಬೇರೆ ಮುಖಗಳನ್ನು ಕಟ್ಟಿಕೊಂಡ ಸಂಬಂಧ ಮತ್ತು ಬಿಟ್ಟುಹೋದ ಸಂಬಂಧ ಮತ್ತು ಕಳೆದುಕೊಂಡ ಬದುಕಿನ ಅಹವಾಲುಗಳನ್ನು ಪಾತ್ರ ಮತ್ತು ಸನ್ನಿವೇಶಗಳೊಂದಿಗೆ ಹೇಳುವ ರೀತಿಯೆ ಸೊಗಸು. “ಹರಿದ ಕುಪ್ಪಸದ ಬೆಳಕು” ಶರ್ವನ ಬದುಕಿನ ಹಿನ್ನೆಲೆಯೊಂದಿಗೆ ತನ್ನ ತಂದೆಯ ಬದುಕಿನ ಗತವನ್ನು ನೆನೆದು ಸಾವಿನೊಂದಿಗೆ ಅಂತ್ಯವಾಗುವ ಮನಸ್ಸು ಬೇರೊಂದು ದಿಕ್ಕಿಗೆ ಅನಾಮತ್ತು ಕರೆದೊಯ್ಯುವ ಪ್ರಕ್ರಿಯೆ ಇಲ್ಲಿ ಯಾವುದು ಎಣಿಸಿದಂತೆ ಇರುವುದಿಲ್ಲ. ಬದುಕಿನ ತಿರುವುಗಳೆ ಹಾಗೆ; ಇನ್ನೇನು ಮುಗಿಯಿತು ಎನ್ನುವಾಗಲೆ ಇನ್ನೊಂದು ಬಂಧ ಶುರುವಾಗುತ್ತದೆ ಎಂಬುದನ್ನು ತಿಳಿಸುತ್ತದೆ.

“ಧ್ಯಾನಕ್ಕೆ ಕೂತ ನದಿ” ಕತೆಯ ಹುಡುಗಿ ಕನಸು ಮತ್ತು ವಾಸ್ತವದ ಕತೆಯೊಂದಿಗೆ ಆಪ್ತವಾಗುತ್ತ ಕವಿ ಮತ್ತು ಕವಿತೆಗೆ ದಕ್ಕುವ ಧ್ಯಾನ. ಕವಿತೆಯ ಕೇಳುವ ನದಿ ಎಲ್ಲವೂ ನೀರವ ಮೌನ ಕವಿತೆ ಕೇಳಿದ ಅವಳ ನಗು ನೀರಿನೊಂದಿಗೆ ಲೀನ. ಅಲ್ಲಿ ಕವಿತೆಯ ದನಿಯ ಕಲರವದ ಕೂಗು ಮಾತ್ರ ಓದುಗನದ್ದು.

ಮರಣಕೆ ತೊಡಿಸಿದ ಅಂಗಿ ಸಾರ್ ಈ ಬದುಕು. ಅಂಗಿ ಹರಿದ ದಿನ ಸಾವು ಕಾಣಿಸುತ್ತೆ. ಎಂದು ಹೇಳುವ ಮುಕ್ತಿವಾಹನದ ಡ್ರೈವರ್ ಮತ್ತು ಆತನ ಅಮ್ಮನ ಸಾವಿನೊಂದಿಗೆ ಕೊನೆಯಾಗುವಾಗ ದಿಗ್ಭ್ರಮೆ ಮತ್ತು ಮನಸ್ಸು ಕೋಲಾಹಲಕ್ಕೆ ಕಾರಣವಾಗುವಂತೆ ಶುಭ ಕಾಣಿಸಿಕೊಳ್ಳುವುದು. ಹರಿದ ಅಂಗಿಗೆ ಮುರಿದ ಸಂಬಂಧವೆ ಕಾರಣವಾಯಿತು ಅನಿಸುತ್ತದೆ.

ಸಂಕನ ಪೂಜೆ ದೇವರ ಪೂಜೆಯೊಂದಿಗೆ ಮಳೆಬರಿಸುವ ಸಾಂಕೇತಿಕವೂ ಸಂಪ್ರದಾಯವೊಂದನ್ನು ಮೀರಿ ನಡೆಯುವುದು ಮನುಷ್ಯ ಸಂಬಂಧಗಳು ಮಾತ್ರ ವಿಧವೆಯೊಬ್ಬಳನ್ನು ಕೂಡುವ ಸಂಕನ ಆಸೆಗೆ ಪ್ರಕೃತಿಯ ನೆರವು ಇಲ್ಲಿ ಕಾಣಿಸಿದರೂ ಉಳಿಯುವ ಸತ್ಯವೊಂದೆ ಬದುಕಿನಲ್ಲಿ ನಡೆಯಬೇಕಾದುದು ನಡೆಯುತ್ತದೆ. ಇಲ್ಲಿ ಅದಕ್ಕೆ ನಿರ್ಬಂಧವಿಲ್ಲ ಎಂದು ಹೇಳುತ್ತದೆ.

ಅರ್ಧ ನೇಯ್ದಿಟ್ಟ ಸ್ವೆಟರ್ ಯೋಧನ ಕುಟುಂಬದ ಬದುಕಿನ ಅನಾವರಣ. ಇಲ್ಲಿ ಮಹಿಳೆಯೊಬ್ಬಳ ಮಾನಸಿಕ ತುಮುಲಗಳ ಸಾಮಾಜಿಕ ಬೇಕು ಬೇಡಗಳ ಒಳಗೊಳ್ಳುವಿಕೆ ಮತ್ತು ಅದನ್ನು ಮೀರುವ ಆಕೆಯ ಕನಸು ಹರಿಯನ್ನು ಕಾಣುವ ತವಕದೊಂದಿಗೆ ಮೂರ್ತರೂಪ ಪಡೆದು ನಮ್ಮನ್ನು ಚಿಂತಿಸುವಂತೆ ಮಾಡುತ್ತದೆ.

ಹತ್ತಿರವಿದ್ದೂ ದೂರನಿಂತು ಕತೆಯ ಚಿತ್ರ ಕಲಾವಿದ ಬೇರೆಯವರ ಮನಸ್ಸನ್ನು ಓದಿ ಚಿತ್ರಿಸುವುದರಲ್ಲಿ ನಿಸ್ಸೀಮನಾದರೂ ತನ್ನ ಒಳಗನ್ನು ಅರಿಯದೆ ಸೋಲುವುದು. ಮನುಷ್ಯನ ಇನ್ನೊಂದು ಮುಖವನ್ನೆ ತೋರಿಸಿಬಿಡುತ್ತದೆ.

ಹಲಗೆಯ ಸದ್ದು ದರ್ಪದ ಉಳಿಗಮಾನ್ಯ ವ್ಯವಸ್ಥೆಯ ಶೋಷಣೆಯ ಕತೆಯನ್ನು ಹೇಳುತ್ತಲೆ ಪಟೇಲ ಸಾವಿತ್ರಿಯೊಂದಿಗಿನ ಅನಾದರ ಸಂಬಂಧ ಬಸ್ಯನ ಬದುಕು ಪಟೇಲರ ಹೆಂಡತಿ ಕಮಲಿಯನ್ನು ಕೂಡುವ ಮಾದ್ರ ಪರಮೇಶಿ ಎಲ್ಲವೂ ಹಲಗೆಯ ಸದ್ದಿನೊಂದಿಗೆ ಬದುಕಿನ ಬೇರೆ ಬೇರೆ ಲಯದಲ್ಲಿ ಸಾಗುವ ಪರಿಯ ಕತೆ ಮನಸ್ಸಿನಲ್ಲಿಯೆ ಉಳಿಯುತ್ತದೆ. ಇಂತಹುದೆ ಮನುಷ್ಯ ಸಂಬಂಧದಲ್ಲಿಯೇ ಲೀನವಾಗುವ ಮಾಲಾ ಬಿಡುಗಡೆಯಾಗುವ ಶಿವೆ ಇಂತಹುದೆ ಸನ್ನಿವೇಶಕ್ಕೆ ಪದೆ ಪದೆ ಒಳಗಾಗುವ ಕತೆಯನ್ನು ಹೇಳುತ್ತವೆ.

ಪಲ್ ಪಲ್ ದಿಲ್ ಕೆ ಪಾಸ್ ಕತೆಯಲ್ಲಿನ ಕಂಡಕ್ಟರ್ ನಾಗಪ್ಪ ಪ್ರೀತಿಗಾಗಿ ಹಂಬಲಿಸುವ ಬದುಕಿನ ಅನಿವಾರ್ಯಕ್ಕೆ ಸಿಕ್ಕು ದಿನ ದೂಡುವಾಗ ಜೊತೆಯಾದದ್ದು ಕಿಶೋರ್ ಕುಮಾರನ ಹಾಡು ಅದರ ನೆನಪಿನಲ್ಲಿ ತನ್ನ ಹೆಂಡತಿಯನ್ನು ನೆನೆದು ಮಾತಿಗಷ್ಟೆ ಜೊತೆಯಾಗಿ ದಿಕ್ಕು ಬದಲಾಯಿಸುವ ಹೊತ್ತಿಗೆ ಬದುಕು ಮುರಿದು ಬೀಳುತ್ತದೆ. ರಹಸ್ಯ ಹಾಗೆ ಉಳಿಯುತ್ತದೆ. ಮುಖೇಶನ ಹಾಡು ಮಾತ್ರ ಬದುಕಿಗೆ ಜೊತೆಯಾಗುವ ಪರಿ. ‘ರಾತ್ರಿ ಮನೆ ಬಿಟ್ಟು ಬಂದು ಮಲಗಿದರೆ ಸುಖ ಬಿಟ್ಟು ಬಂದು ಮಲಗಿದಂತೆ’ ಮಾನಪ್ಪನ ಮಾತು ಮರೆಯಾಗದೆ ಉಳಿದು ಬಿಡುತ್ತದೆ. ಇಂತಹುದೆ ಕತೆ ‘ಚೆಕ್ಔಟ್’ ಕೆಲವು ಸಂಬಂಧಗಳಿಗೆ ಈ ಬೋರ್ಡ್ ಬಿದ್ದರೆ ಉಳಿಯುತ್ತವೆ. ಜಯನ ತಂದೆಯ ಬದುಕು ಸಾವನ್ನಪ್ಪುವ ಆತನ ತಾಯಿ ಅಲಕಾ ಎಲ್ಲರೂ ‘ಚೆಕ್ಔಟ್’ ನ ಬಂಧಿಗಳೆ ಇಲ್ಲಿ ಓದುಗನು ಕತೆಯ ಬಂಧಿಯೆ. ಓದಿ ಮುಗಿಸಿದ ಮೇಲು ಸೊರಟೂರರ ಕತೆಗಳು ನಮ್ಮನ್ನು ಕಾಡದೆ ಬಿಡಲಾರವು.

ಹಿಡಿದ ಪುಸ್ತಕವನ್ನು ಒಂದೆ ಉಸಿರಿಗೆ ಓದಿ ಮುಗಿಸಿದೆ. ಒಂದಕ್ಕಿಂತ ಒಂದು ಕತೆಗಳು ಚಂದ. ನಿರೂಪಣೆಯ ಸೊಗಸು ಕಾವ್ಯದ ದಾಟಿ ಕತೆಯ ಕಟ್ಟುವಿಕೆ ಎಲ್ಲವೂ ಇಷ್ಟವಾದವು. ನೀವು ಓದಿ ನಿಮಗೂ ಇಷ್ಟವಾಗಬಹುದು. ಒಂದೊಳ್ಳೆಯ ಓದು ನಿಮ್ಮದಾಗಲಿ. ಸೊರಟೂರರು ಹೀಗೆ ಕತೆ ಬರೆಯುತ್ತಿರಲಿ.