ಪಿಯುಸಿಯಲ್ಲಿ ಇದ್ದ 24 ವಿದ್ಯಾರ್ಥಿಗಳು ಅಷ್ಟೇನೂ ಸೀರಿಯಸ್ಸಾಗಿ ಓದುತ್ತಿರಲಿಲ್ಲ. ಇವರೊಡನೆ ನಾನು ಸೇರಿದ ಕಾರಣ ಹೇಸಿಗೆ ತಿನ್ನೋ ಎಮ್ಮೆ ಜೊತೆ ಆಕಳು ಸೇರಿ ಆಕಳೂ ಸಹ ಹೇಸಿಗೆ ತಿನ್ನೋದನ್ನ ಕಲೀತಂತೆ ಅನ್ನೋ ಹಾಗೆ ನಾನೂ ಸಹ ಓದುವುದನ್ನು ಕಮ್ಮಿ ಮಾಡಿದೆ. ನಾನು ತುಂಬಾ ಕ್ಲೋಸ್ ಆಗಿದ್ದು ಲಿಂಗರಾಜ ಹಾಗೂ ಸುಧಾಕರ ಜೊತೆ. ಲಿಂಗರಾಜ ನಮ್ಮದೇ ಕಾಲೇಜು ಆದರೆ ಸುಧಾಕರ ಮಾತ್ರ ಡಿಆರ್ ಎಂ ಕಾಲೇಜು. ನಾವು ಹಾಸ್ಟೆಲ್ಲಿನಲ್ಲಿ ತುಂಬಾ ತಮಾಷೆಯ ತುಂಟಾಟಗಳನ್ನು ಮಾಡುತ್ತಿದ್ದೆವು. ನಾವು ತುಂಟಾಟ ಮಾಡಲು ಹೋಗಿ ನಾವೇ ಹಲವು ಸಲ ಪೇಚಿಗೆ ಸಿಕ್ಕಿಹಾಕಿಕೊಂಡಿದ್ದೆವು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ತಾರನೆಯ ಕಂತು ನಿಮ್ಮ ಓದಿಗೆ
ಕಾಲೇಜ್‌ಗೆ ಸೇರಿ ಎಸ್ಸೆಸ್ಸೆಲ್ಸಿಯಲ್ಲಿ ಕಮ್ಮಿಯಾದ ಅಂಕಗಳನು ಸರಿದೂಗಿಸಿಕೊಳ್ಳಬೇಕು, ನಾನು ಕಡಿಮೆ ಅಂಕ ಪಡೆದಾಗ ಕುಹಕ ಆಡಿದವರಿಗೆಲ್ಲ ಸಾಧಿಸಿ ತೋರಿಸಬೇಕು ಎಂದು ಬಹಳ ಸಲ ಅಂದ್ಕೊಂಡಿದ್ದೆ. ಆದರೆ ಪಿಯುಸಿಯಲ್ಲಿ ಆ ರೀತಿ ಸಾಧಿಸೋಕೆ ಸೂಕ್ತ ವಾತಾವರಣ ಸಿಗಲಿಲ್ಲ. ಕಾಲೇಜಲ್ಲಿ ಅರ್ಥವಾಗದಂತೆ ಕಾಟಾಚಾರಕ್ಕೆ ಪಾಠ ಮಾಡುತ್ತಿದ್ದ ಲೆಕ್ಚರರ್‌ಗಳು ಒಂದೆಡೆಯಾದರೆ, ಓದೋಕೆ ಸರಿಯಾದ ವಾತಾವರಣವಿಲ್ಲದ ಹಾಸ್ಟೆಲ್ ವಾತಾವರಣ ಮತ್ತೊಂದೆಡೆ. ಪದೇ ಪದೇ ಇದು ನನಗೆ ಕಾಡುತ್ತಿತ್ತು. ಕಾಲೇಜಿಗೆ ಹೋದಾಗ ನಮ್ಮ ಜಿಲ್ಲೆ ದಾವಣಗೆರೆಗೆ ಬರುವ ಬಸ್ಸುಗಳನ್ನು ಹಾಗೆಯೇ ನೋಡುತ್ತಾ ನಿಲ್ಲುತ್ತಿದ್ದೆ. ಆಗ ನನಗೆ ಮನದಲ್ಲಿ ದುಃಖ ಒತ್ತರಿಸಿ ಬರೋದು. “ಜನನಿ ಜನ್ಮಭೂಮಿಶ್ಚ ಸ್ವರ್ಗಾದಪೀ ಗರೀಯಸಿ” ಎಂಬಂತೆ ಹುಟ್ಟಿದೂರಿನ ಹುಟ್ಟಿದ ಜಿಲ್ಲೆಯು ನನ್ನನ್ನು ಸೆಳೆಯುತ್ತಿತ್ತು.
‘ನಮ್ಮೂರ ಹಳ್ಳ ಬತ್ತುವುದಿಲ್ಲ
ನಮ್ಮೂರ ಹುಲ್ಲು ಒಣಗುವುದಿಲ್ಲ…. ಕೊನೆಗೆ ‘ನಮ್ಮೂರೇ ನಮಗೆ ಸವಿಬೆಲ್ಲ’ ಎಂದು ಅಂತ್ಯವಾಗುವ ಪದ್ಯವು ತಮ್ಮ ಹುಟ್ಟೂರಿನ ಬಗ್ಗೆ ಯಾವುದೇ ವ್ಯಕ್ತಿಗಿರುವ ಪ್ರೀತಿಯನ್ನು ತಿಳಿಸುತ್ತದೆ. ನನಗೂ ಸಹ ಯಾವಾಗ ನಮ್ಮೂರಿಗೆ ಹೋಗ್ತೀನೋ ಎಂದು ಅನಿಸುತ್ತಿತ್ತು. ಅಲ್ಲದೇ ಬೆಂಗಳೂರಿನಲ್ಲಿ ಎಲ್ಲಿಯಾದರೂ ‘ದಾವಣಗೆರೆ ಬೆಣ್ಣೆ ದೋಸೆ’ ಎಂಬ ಹೆಸರಿನ ಹೋಟೆಲ್ ಕಂಡರೆ ನನಗೆ ನಮ್ಮೂರ ಹೆಸರು ಕಂಡು ಮನದಲ್ಲಿ ಖುಷಿಯೆನಿಸುತ್ತಿತ್ತು. ನಾನು ಒಂದು ಡಿಸೈಡ್ ಮಾಡಿದ್ದೆ. ‘ಮಿಡ್ ಟರ್ಮ್ ಪರೀಕ್ಷೆ ಮುಗಿದ ಮೇಲೆ ವಾಪಾಸ್ ಊರಿಗೆ ಹೋಗಿ ಮತ್ತೆ ಬೆಂಗಳೂರಿಗೆ ಬರೋದೇ ಬೇಡ’ ಎಂದುಕೊಂಡು ಆ ಪರೀಕ್ಷೆ ಮುಗಿದ ಮೇಲೆ ನನ್ನ ಬಟ್ಟೆ ಬರೆ ಎಲ್ಲಾ ತೆಗೆದುಕೊಂಡು ಹೋಗಿದ್ದೆ.
ಊರಲ್ಲಿ ರಜಾ ಮುಗಿಯೋವರೆಗೂ ಸುಮ್ಮನಿದ್ದು ಕಾಲೇಜ್ ಇನ್ನೇನು ಶುರುವಾಗಲು ಒಂದೆರಡು ದಿನವಿದ್ದಾಗ ಈ ವಿಷಯವನ್ನು ಮನೆಯಲ್ಲಿ ತಿಳಿಸಿದೆ. ಆದರೆ ಅವರು ಇದಕ್ಕೆ ಒಪ್ಪಲಿಲ್ಲ. ‘ಹೇಗಾದ್ರೂ ಮಾಡಿ ಇದೊಂದು ವರ್ಷ ಓದು. ಮಾರನೇ ವರ್ಷ ಬೇಕಾದ್ರೆ ವಾಪಾಸ್ಸು ಬರುವಿಯಂತೆ’ ಎಂದಾಗ ‘ಬಂದ ದಾರಿಗೆ ಸುಂಕವಿಲ್ಲ’ ಎಂದು ಸುಮ್ಮನೆ ಹಿಂತಿರುಗಿದ್ದೆ. ಮತ್ತೆ ಬೆಂಗಳೂರಿಗೆ ಬಂದು ಓದುತ್ತಿದ್ದಾಗ ನನ್ನ ಜೀವನದಲ್ಲಿ ಒಂದು ಮರೆಯಲಾಗದ ದುರ್ಘಟನೆ ನಡೆಯಿತು. ಅದೂ ನನ್ನಕ್ಕನ ಮರಣ! ಇದರಿಂದ ನಾನೂ ತುಂಬಾ ನೊಂದೆನಲ್ಲದೇ ನನಗೂ ಸಹ ಜೀವನದ ಬಗ್ಗೆ ಜಿಗುಪ್ಸೆ ಉಂಟಾಗತೊಡಗಿತು. ಈ ನೋವನ್ನು ಮರೆಯಲು ನಾನು ಬಿಂದಾಸ್ ಆಗಿ ಇರುವ ಹಾಸ್ಟೆಲ್ ಹುಡುಗರ ಸಹವಾಸ ಮಾಡತೊಡಗಿದೆ. ಅವರ ಜೊತೆ ಸುಖಾಸುಮ್ಮನೆ ಬೆಂಗಳೂರು ತಿರುಗುವುದು, ಹಾಳು ಹರಟೆ ಹೊಡೆಯುವುದು, ಫಿಲಂಗಳಿಗೆ ಹೋಗುವುದು ಇತ್ಯಾದಿ ಮಾಡತೊಡಗಿದೆ. ಇದು ನನ್ನ ವಿದ್ಯಾಭ್ಯಾಸಕ್ಕೆ ತೊಡಕುಂಟು ಮಾಡಿದ್ದು ಸುಳ್ಳಲ್ಲ.
ಕಾಲೇಜಲ್ಲಿ ಒಮ್ಮೆ ಹೀಗೆಯೇ ಆಯ್ತು. ನನ್ನ ಪಕ್ಕದಲ್ಲಿ ಕೂರುವವರ ಜೊತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ಹುಡುಗಿಯೊಬ್ಬಳಿಗೆ ಚಿಕ್ಕ ಕಲ್ಲು ತೆಗೆದುಕೊಂಡು ಹೊಡೆಯೋದು ತಕ್ಷಣ ಅವರು ಅಲ್ಲಿಂದ ಬೇರೆ ಕಡೆ ಹೋಗುವುದು ಮಾಡ್ತಿದ್ರು. ಆ ಹುಡುಗಿ ಹಿಂದಿರುಗಿ ನೋಡಿದಾಗ ನಾನು ಒಬ್ನೇ ನಿಂತಿರುತ್ತಿದ್ದೆ. ಸದ್ಯ ಆ ಹುಡುಗಿ ನನಗೆ ಏನೂ ಮಾಡಲಿಲ್ಲ. ಒಂದೊಮ್ಮೆ ಅವಳು ಬಂದು ನನಗೆ ಕಪಾಳಮೋಕ್ಷ ಮಾಡಿದ್ದರೆ ನಾನು ಹೊಡೆತ ತಿನ್ನಬೇಕಾಗಿತ್ತು. ಆದರೆ ನನ್ನ ಪುಣ್ಯ ಈ ರೀತಿ ಆಗಲಿಲ್ಲ. ಈ ರೀತಿ ತರಲೆ ಮಾಡಿದವರ ಜೊತೆಯಲ್ಲಿ ಇರೋದನ್ನು ಅಂದಿನಿಂದ ಬಿಟ್ಟೆ. ಇನ್ನು ಪರೀಕ್ಷೆ ಸಮಯದಲ್ಲಿ ನನ್ನ ನೋಟ್ಸನ್ನು ‘ನಾಳೆ ಕೊಡುತ್ತೇನೆ’ ಎಂದು ತೆಗೆದುಕೊಂಡು ಹೋದವನು ಮಾರನೇ ದಿನದಿಂದ ಕಾಲೇಜಿಗೆ ಬರೋದನ್ನೇ ಬಿಟ್ಟಿದ್ದ!!
ಇನ್ನು ಭಾನುವಾರ ಬಂದಾಗ ನಾನು ನನ್ನ ಮಾವನ ರೂಮಿಗೆ ಹೋಗುತ್ತಿದ್ದೆ. ಅವನು ನನಗೆ ಕಂಪ್ಯೂಟರ್‌ನಲ್ಲಿ ಗೇಮ್‌ಗಳನ್ನು ಹಾಕಿಕೊಡುತ್ತಿದ್ದ. ಅದನ್ನು ಆಡಿದ ನಂತರ ಮತ್ತೆ ಓದಲು ಕೂರುತ್ತಿದ್ದೆ. ಇಲ್ಲಿ ಸೈಲೆಂಟ್ ವಾತಾವರಣ ಇದ್ದದ್ದರಿಂದ ಓದಲು ಕೂರುತ್ತಿದ್ದೆ. ಅಲ್ಲಿಯೇ ಮಧ್ಯಾಹ್ನ ಊಟ ಮಾಡಿ ಮತ್ತೆ ಸಂಜೆ ಹಾಸ್ಟೆಲ್ಲಿಗೆ ವಾಪಾಸ್ಸಾಗುತ್ತಿದ್ದೆ. ನನಗೆ ನಮ್ಮಜ್ಜಿ ಊರಿನಿಂದ ಬೆಂಗಳೂರಿಗೆ ಕೆಲಸಕ್ಕೆಂದು ಬಂದಿದ್ದ ನಾಗರಾಜ ಎಂಬ ನನ್ನ ಸೀನಿಯರ್ ನನಗೆ ಕೆಲವೊಮ್ಮೆ ಸಿಗುತ್ತಿದ್ದ. ಅವನು ಕೆಲಸಕ್ಕಿದ್ದ ಅಂಗಡಿ ನಮ್ಮ ಕಾಲೇಜಿನ ಹತ್ತಿರವೇ ಇತ್ತು. ಅವನ ವೇತನ ಕಮ್ಮಿಯಾಗಿದ್ದರೂ ಸಹ ನನ್ನ ಕಷ್ಟಕ್ಕೆ ನೆರವಾಗುತ್ತಿದ್ದ. ನನ್ನ ಮಾವನೂ ಸಹ ಹೆಚ್ಚಿನ ವೇತನವನ್ನು ಪಡೆಯುತ್ತಿರಲಿಲ್ಲ. ಆದರೂ ಸಹ ನನ್ನ ವಿದ್ಯಾಭ್ಯಾಸಕ್ಕೆ ನೆರವಾಗಿದ್ದ. “ಯಾವುದೇ ಕಾರಣಕ್ಕೂ ಹಣವಿಲ್ಲವೆಂದ ಮಾತ್ರಕ್ಕೆ ಉಪವಾಸ ಇರಬೇಡ ಹಣ ಕೇಳು ಕೊಡುತ್ತೇನೆ, ಊಟ ಮಾಡು” ಎನ್ನುತ್ತಿದ್ದ. ಆದರೂ ನಾನೇ ಕೇಳುತ್ತಿರಲಿಲ್ಲ. ಆ ಹಣವನ್ನು ನಮ್ಮ ಮನೆಯವರು ವಾಪಾಸ್ಸು ಕೊಡೋಲ್ಲ ಸುಮ್ಮನೇ ಅವನ ಋಣವೇಕೆ ಎಂದು ಕೇಳುತ್ತಿರಲಿಲ್ಲ. ಬೆಂಗಳೂರಿನಲ್ಲಿ ನನ್ನ ಮತ್ತೊಬ್ಬ ಸಂಬಂಧಿಕರು ಒಳ್ಳೇ ಸ್ಥಿತಿಯಲ್ಲಿ ಇದ್ದರೂ ಒಂದು ದಿನಕ್ಕೂ ಬಂದು ನನ್ನ ವಿಚಾರಿಸುತ್ತಿರಲಿಲ್ಲ. ‘ಇರುವವರಿಗೇ ಆಸೆ ಜಾಸ್ತಿ’ ಅಂತಾ ಬಹಳ ಜನ ಹೇಳ್ತಾರೆ. ಕೆಲವರು ಕೊಡ್ತಾರೆ ಬಲಗೈಯಲ್ಲಿ ಕೊಟ್ಟಿದ್ದನ್ನು ಎಡಗೈಗೆ ತಿಳಿಯದಂತಿರುತ್ತಾರೆ. ಕೆಲವರಂತೂ ‘ಮೂಗಿಗಿಂತ ಮೂಗುತಿ ಭಾರ’ ಎಂಬಂತೆ ಕೊಟ್ಟಿದ್ದಕ್ಕಿಂತ ಹೆಚ್ಚಿನ ಪ್ರಚಾರವನ್ನು ಪಡೆಯುತ್ತಾರೆ. ಸರ್ವಜ್ಞನು ಇದಕ್ಕೆಂದೇ
“ಕೊಟ್ಟು ಕುದಿಯಲು ಬೇಡ| ಕೊಟ್ಟಾಡಿಕೊಳಬೇಡ|
ಕೊಟ್ಟು ನಾ ಕೆಟ್ಟೆನೆನಬೇಡ, ಶಿವನಲ್ಲಿ|
ಕಟ್ಟಿಹುದು ಬುತ್ತಿ ಸರ್ವಜ್ಞ|” ಎಂದು ಹೇಳುತ್ತಾನೆ. ಇದರಂತೆ ನಾವು ದಾನ ಧರ್ಮ ಮಾಡಬೇಕು. ನಮ್ಮ ಜೊತೆಗೆ ಬರುವುದು ಪಾಪ ಪುಣ್ಯಗಳೆರಡೇ ಹೊರತು ನಮ್ಮ ಐಹಿಕ ಸಂಪತ್ತಲ್ಲ ಎಂಬುದನ್ನು ಯಾವತ್ತೂ ಮರೆಯಬಾರದು.
ನಾನು ಕಷ್ಟಪಟ್ಟು ಒಂದು ವರ್ಷದ ಪ್ರಥಮ ಪಿಯುಸಿಯನ್ನು ಮುಗಿಸುತ್ತಾ ಬಂದೆ. ಆದರೆ ನನಗೆ ಪಾಸಾಗುವುದೇ ಅನುಮಾನ ಎಂಬ ಹಂತಕ್ಕೆ ಬಂದಿದ್ದೆ. ಆದರೆ ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದೆ. ವಿಜ್ಞಾನ ವಿಭಾಗದಲ್ಲಿ ಪ್ರಥಮ ಪಿಯುಸಿಯಲ್ಲಿ ಗಣಿತ ವಿಷಯದಲ್ಲಿ ಕ್ಯಾಲ್ಕ್ಯೂಲಸ್, ತ್ರಿಕೋನಮಿತಿ ಎಂಬ ಹೊಸ ಪಾಠಗಳು ಬರುವುದರಿಂದ ಇವನ್ನು ನಾನು ಪರಿಣಾಮಕಾರಿಯಾಗಿ ಕಲಿಸುವವರ ಕೊರತೆಯಿಂದ ಅಷ್ಟಾಗಿ ಕಲಿಯಲಿಲ್ಲ. ಪ್ರಥಮ ಪಿಯುಸಿ ಮುಗಿದ ಕೂಡಲೇ ದ್ವಿತೀಯ ಪಿಯುಸಿಗೆ ನಾನು ಹಿಂದೆ ಪ್ರೌಢಶಾಲೆ ಓದಿದ ಸಂಸ್ಥೆಯ ಕಾಲೇಜಿಗೆ ಸೇರಬೇಕೆಂದುಕೊಂಡೆ. ಬೇಸಿಗೆ ರಜಾ ಅವಧಿಯಲ್ಲಿ ಟ್ಯೂಷನ್ನಿಗೆ ಹೋಗಬಯಸಿ ನಾನು ದಾವಣಗೆರೆಗೆ ಸೇರಿದೆ. ಫಿಸಿಕ್ಸ್, ಕೆಮಿಸ್ಟ್ರಿ, ಮ್ಯಾಥ್ಸ್, ಬಯಾಲಜಿ ಹೀಗೆ ನಾಲ್ಕೂ ವಿಷಯಕ್ಕೂ ಟ್ಯೂಷನ್ ಸೇರಿದೆ. ನಾನು ಟ್ಯೂಷನ್ ಮಾತ್ರ ಇಲ್ಲಿ ಸೇರಿ ರಜಾ ಮುಗಿದ ನಂತರ ಮಲ್ಲಾಡಿಹಳ್ಳಿಯ ಕಾಲೇಜಿಗೆ ಹೋಗಬೇಕೆಂದುಕೊಂಡಿದ್ದೆ.
ಪಿಯುಸಿಯನ್ನು ದಾವಣಗೆರೆಯಲ್ಲಿ ಓದಬೇಕು ಎಂದು ಬಯಸಿರಲಿಲ್ಲ. ಆದರೆ ಟ್ಯೂಷನ್ನಿನಲ್ಲಿ ಪಿಯುಸಿಯ ಪಾಠಗಳನ್ನು ಹೆಚ್ಚು ಮಾಡಿರದ ಕಾರಣ ಇಲ್ಲಿಯೇ ಪಿಯುಸಿ ಓದುವ ಅನಿವಾರ್ಯತೆ ಸೃಷ್ಟಿಯಾಯಿತು. ಆದರೆ ಬರೀ ಟ್ಯೂಷನ್ನಿಗೆ ಅಂತಾ ನನ್ನ ಚಿಕ್ಕಮ್ಮನ ಮನೆಯಲ್ಲಿ ಉಳಿದದ್ದು ಆದರೆ ಪಿಯುಸಿಯನ್ನು ಇಲ್ಲಿಯೇ ಓದಬೇಕು ಎಂದು ತೀರ್ಮಾನಿಸಿದಾಗ ಯಾವುದಾದರೂ ಹಾಸ್ಟೆಲ್ ಸೇರಬೇಕು ಅಂದುಕೊಂಡೆ. ಆಗ ನನಗೆ ಸಿಕ್ಕಿದ್ದು ಜಯದೇವ ಹಾಸ್ಟೆಲ್. ಇಲ್ಲಿ ತುಂಬಾ ಕಡಿಮೆ ಶುಲ್ಕ ಇತ್ತು. ಆದರೆ ಇದು ಶುರುವಾಗುತ್ತಿದ್ದುದು ಅಕ್ಟೋಬರ್ ನಂತರ. ಅಲ್ಲಿಯವರೆಗೂ ಹಾಸ್ಟೆಲ್‌ನಲ್ಲಿ ಉಳಿಯೋಕೆ ಅವಕಾಶ ಕೊಟ್ಟಿದ್ರು. ಆದರೆ ಊಟವನ್ನು ಮಾತ್ರ ಕೊಡುತ್ತಿರಲಿಲ್ಲ. ಇದಕ್ಕಾಗಿ ನನ್ನ ಇನ್ನೊಂದು ಚಿಕ್ಕಮ್ಮನ ಮನೆಗೆ ಹೋಗುತ್ತಿದ್ದೆ. ಹಾಸ್ಟೆಲ್ ಶುರುವಾಗೋವರೆಗಿನ ನನ್ನ ಈ ಸ್ಥಿತಿ ಕಷ್ಟ ಎನಿಸುತ್ತಿತ್ತು.
ಇನ್ನು ಕಾಲೇಜಿನ ವಿಷಯಕ್ಕೆ ಬಂದಾಗ ನಾನು ಸೇರಬೇಕೆಂದುಕೊಂಡಿದ್ದ ಡಿ.ಆರ್.ಎಂ ಕಾಲೇಜಲ್ಲಿ ನನಗೆ ಸೀಟು ಸಿಗಲಿಲ್ಲ. ಇದಕ್ಕಾಗಿ ಒಂದು ಸರ್ಕಾರಿ ಕಾಲೇಜು ಸೇರಿದೆ. ಇಲ್ಲಿನ ಫಲಿತಾಂಶ ತುಂಬಾ ಕಡಿಮೆ ಇತ್ತು. ಯಾವುದೇ ಕಾಲೇಜಿನಲ್ಲಿ ಸೀಟು ಸಿಗದೇ ಇರುವವರು ಮಾತ್ರ ಇಲ್ಲಿಗೆ ಸೇರುತ್ತಿದ್ದರು. ಇಲ್ಲಿಗೆ ಸೇರುವ ಹುಡುಗರೂ ಸಹ ಅದೇ ರೀತಿ ಇರುತ್ತಿದ್ದರು. ಸರಿಯಾಗಿ ಓದುತ್ತಿರಲಿಲ್ಲ. ಎಲ್ಲೋ ಕೆಲವರು ಮಾತ್ರ ಓದುತ್ತಿದ್ದರು. ಆಗ ದಾವಣಗೆರೆಯಲ್ಲಿ ಟ್ಯೂಷನ್ನಿಗೆ ಸೇರಿಸಿಕೊಳ್ಳೋಕೂ ಸಹ ಕಾಲೇಜಿನ ಹೆಸರು ಕೇಳುತ್ತಿದ್ದರು. ಅಪ್ಪಿ ತಪ್ಪಿ ಈ ಕಾಲೇಜಿನಲ್ಲಿ ಓದುತ್ತಿದ್ದೇವೆ ಎಂದರೆ ಟ್ಯೂಷನ್ನಿಗೆ ಸೇರಿಸಿಕೊಳ್ಳುತ್ತಿರಲಿಲ್ಲ!!
ನಾನು ಟ್ಯೂಷನ್ನಿಗೆ ಹೋಗಲು ಒಂದೊಂದು ವಿಷಯದ ಲೆಕ್ಚರ್ ಮನೆ ಒಂದೊಂದು ಕಡೆ ಇದ್ದುದರಿಂದ ನನಗೆ ಹೋಗಲು ನನ್ನ ಚಿಕ್ಕಪ್ಪ ಅವರ ಹಳೇ ಅಟ್ಲಾಸ್ ಸೈಕಲ್ ಕೊಟ್ಟಿದ್ದರು. ಇದರಿಂದಾಗಿ ನನಗೆ ತುಂಬಾ ಸಹಾಯವಾಗಿತ್ತು. ಆದರೆ ಟ್ಯೂಷನ್ನಿಗೆ ಬರುವ ಬಹುತೇಕರು ತಮ್ಮ ಬೈಕು, ತೀರ ಹೊಸ ಹೊಸ ಮಾಡರ್ನ್ ಸೈಕಲ್‌ಗಳನ್ನು ತರುತ್ತಿದ್ದರಿಂದ ನನಗೆ ದೊಡ್ಡವರು ಬಳಸುವ ಈ ಹಳೇ ಲಡುಗೂರಿ ಸೈಕಲ್ ತೆಗೆದುಕೊಂಡು ಹೋಗಲು ಮುಜುಗರ ಆಗುತ್ತಿತ್ತು. ಇದರಿಂದಾಗಿ ಕೆಲವು ಸಲ ಹಾಗೆಯೇ ನಡೆದುಕೊಂಡು ಹೋಗುತ್ತಿದ್ದೆ. ನಾನು ಜೀವಶಾಸ್ತ್ರ ಟ್ಯೂಷನ್ನಿಗೆ ಹೋಗುತ್ತಿದ್ದ ಲೆಕ್ಚರ್ ಹತ್ತಿರ ಬರುವವರೆಲ್ಲರೂ ಬೈಕಿನಲ್ಲಿ ಬರುತ್ತಿದ್ದರು. ನಾನೊಬ್ಬ ಮಾತ್ರ ಅಟ್ಲಾಸ್ ಸೈಕಲ್ಲಿನಲ್ಲಿ ಹೋಗುತ್ತಿದ್ದೆ, ಅಲ್ಲದೇ ಅಲ್ಲಿಗೆ ಹೋಗುತ್ತಿದ್ದವರ ಪೈಕಿ ನಾನೊಬ್ಬ ಮಾತ್ರ ಹುಡುಗನಾಗಿದ್ದೆ. ಆದ್ದರಿಂದ ನಾನು ಟ್ಯೂಷನ್ ಹೋಗುವುದನ್ನೇ ನಿಲ್ಲಿಸಿದೆ!
ಇನ್ನುಳಿದಂತೆ ನಾನು ಸೇರಿದ ಟ್ಯೂಷನ್ ಲೆಕ್ಚರರ್‌ಗಿಂತ ಇನ್ನೂ ಉತ್ತಮ ಲೆಕ್ಚರರ್‌ಗಳು ಇದ್ದರು. ಆದರೆ ನಾನು ಯಾರು ಟಾಪ್ ಲೆಕ್ಚರ್ ಎಂಬ ಸರಿಯಾದ ಮಾಹಿತಿಯ ಕೊರತೆಯಿಂದ ಅಷ್ಟೇನೂ ಚೆನ್ನಾಗಿ ಬೋಧಿಸದೇ ಇರುವವರ ಬಳಿ ಹೋಗುತ್ತಿದ್ದೆ. ಈ ಕೊರಗು ನನ್ನನ್ನು ತೀವ್ರವಾಗಿ ಬಾಧಿಸತೊಡಗಿತು. ಕಾಲೇಜಲ್ಲೂ ಪಾಠವಿಲ್ಲ, ಟ್ಯೂಷನ್ನಿನಲ್ಲೂ ಪರಿಣಾಮಕಾರಿಯಾದ ಪಾಠವಿಲ್ಲ. ಸೇರಿದ ಹಾಸ್ಟೆಲ್ಲಿನ ಪಿಯುಸಿ ಹುಡುಗರಲ್ಲೂ ಓದುವ ಸ್ಪರ್ಧಾತ್ಮಕ ಮನೋಭಾವ ಇಲ್ಲದೇ ಇದ್ದ ಕಾರಣ ನನ್ನ ಶೈಕ್ಷಣಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಇದರ ಪ್ರತಿಫಲ ಫಲಿತಾಂಶದಲ್ಲಿ ಸಿಕ್ಕಿತು!!
ಹಾಸ್ಟೆಲ್ಲಿನಲ್ಲಿ ನಮಗೆ ಊಟ ಶುರುವಾದಾಗ ಬೆಳಗ್ಗೆ ತಿಂಡಿ ಕೊಡುತ್ತಿರಲಿಲ್ಲ. ಮಧ್ಯಾಹ್ನ ಹಾಗೂ ರಾತ್ರಿ ಮಾತ್ರ ಜೋಳದ ಮುದ್ದೆ ಅನ್ನ ಊಟ ಕೊಡುತ್ತಿದ್ದರು. ಸಾಂಬಾರಿನ ರುಚಿ ಅಷ್ಟಕ್ಕಷ್ಟೇ ಇರುತ್ತಿತ್ತು. ಪಿಯುಸಿಯಿಂದ ಮೆಡಿಕಲ್, ಇಂಜಿನಿಯರ್, ಡಿಪ್ಲೊಮೋ, ನರ್ಸಿಂಗ್ ಕೋರ್ಸಿನ ವಿದ್ಯಾರ್ಥಿಗಳು ಈ ಹಾಸ್ಟೆಲ್ಲಿನಲ್ಲಿದ್ದರು. ಇಲ್ಲಿದ್ದವರು ಬಹುತೇಕರು ಬಡತನದ ಹಿನ್ನೆಲೆಯಿಂದ ಬಂದವರಾಗಿದ್ದರು. ಬೇರೆಲ್ಲಾ ಕೋರ್ಸಿನವರು ಸಿಕ್ಕಾಪಟ್ಟೆ ಓದುತ್ತಿದ್ದರು. ಆದರೆ ಪಿಯುಸಿಯಲ್ಲಿ ಇದ್ದ 24 ವಿದ್ಯಾರ್ಥಿಗಳು ಅಷ್ಟೇನೂ ಸೀರಿಯಸ್ಸಾಗಿ ಓದುತ್ತಿರಲಿಲ್ಲ. ಇವರೊಡನೆ ನಾನು ಸೇರಿದ ಕಾರಣ ಹೇಸಿಗೆ ತಿನ್ನೋ ಎಮ್ಮೆ ಜೊತೆ ಆಕಳು ಸೇರಿ ಆಕಳೂ ಸಹ ಹೇಸಿಗೆ ತಿನ್ನೋದನ್ನ ಕಲೀತಂತೆ ಅನ್ನೋ ಹಾಗೆ ನಾನೂ ಸಹ ಓದುವುದನ್ನು ಕಮ್ಮಿ ಮಾಡಿದೆ. ನಾನು ತುಂಬಾ ಕ್ಲೋಸ್ ಆಗಿದ್ದು ಲಿಂಗರಾಜ ಹಾಗೂ ಸುಧಾಕರ ಜೊತೆ. ಲಿಂಗರಾಜ ನಮ್ಮದೇ ಕಾಲೇಜು ಆದರೆ ಸುಧಾಕರ ಮಾತ್ರ ಡಿಆರ್ ಎಂ ಕಾಲೇಜು. ನಾವು ಹಾಸ್ಟೆಲ್ಲಿನಲ್ಲಿ ತುಂಬಾ ತಮಾಷೆಯ ತುಂಟಾಟಗಳನ್ನು ಮಾಡುತ್ತಿದ್ದೆವು. ನಾವು ತುಂಟಾಟ ಮಾಡಲು ಹೋಗಿ ನಾವೇ ಹಲವು ಸಲ ಪೇಚಿಗೆ ಸಿಕ್ಕಿಹಾಕಿಕೊಂಡಿದ್ದೆವು. ಅವುಗಳ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ.
ನಾವು ಯಾವುದೇ ತೀರ್ಮಾನ ಕೈಗೊಳ್ಳುವಾಗ ಅದರ ಸಾಧಕ ಬಾಧಕಗಳನ್ನು ಮುಂಚೆಯೇ ಊಹಿಸಿರಬೇಕು. ಅದಕ್ಕಾಗಿ ನಾವು ಯೋಜನೆ ರೂಪಿಸಿಕೊಂಡಿರಬೇಕು. ‘ಗುರಿ ಇಲ್ಲದ ಜೀವನ ರೆಕ್ಕೆಯಿಲ್ಲದ ಪಕ್ಷಿಯಂತೆ’ ಎಂಬಂತೆ ನಮ್ಮ ಜೀವನದಲ್ಲೂ ಗುರಿ, ಯೋಜನೆ ಇಲ್ಲದೇ ಹೋದರೆ ನಮ್ಮ ಲೈಫ್ ಎಕ್ಕುಟ್ಟಿ ಹೋಗುತ್ತದೆ. ಅದರಲ್ಲೂ ಮಕ್ಕಳ ವಿಷಯದಲ್ಲೂ ಪೋಷಕರು ಜಾಗರೂಕರಾಗಿರಬೇಕು. ‘ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು’ ಎಂಬ ಮಾತನ್ನು ಅನುಸರಿಸಿ ಎಂದು ಹೇಳಬಯಸುತ್ತೇನೆ.
ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
ಹುಟ್ಟಿದ ಊರನೂ
ಬಿಟ್ಟು ಬಂದಾ ಮೇಲೆ
ಇನ್ನೇನು ಬಿಡುವುದು ಬಾಕಿ ಇದೆ..