ರಕ್ತದ ಒಣ ಹುಡಿಯ ಬೊಟ್ಟನ್ನಿಟ್ಟುಕೊಳ್ಳುವ ಆಪತ್ತಿನ ವೇಳೆ ಢಾಕಿನಿ ಗಾಂಧಿಯವರ ಮೇಲೆ ನಂಜು ಕಾರಿದುದು ವಿಶೇಷವಿಲ್ಲ . ಅಹಿಂಸಾ ಪರಮೋ ಧರ್ಮ ಮಂತ್ರೋಪಾಸಕಾರದ ಗಾಂಧೀಜಿಯವರ ಮಾಟದಿಂದಾಗಿ ಭಾರತವೂ ರಕ್ತ ಶೂನ್ಯವಾಯಿತೆಂದೇ ಹೇಳಬೇಕು. ಆದರೂ ವರುಷಕ್ಕೊಮ್ಮೆ ನವರಾತ್ರಿಯಲ್ಲಿ ಆಯುಧಪೂಜೆಯೆಂಬುದೊಂದು ನಡೆಯುತ್ತಿದೆ. ಆಯುಧದಿಂದ ಅಧಿದೇವತೆ ಶಕ್ತಿಯ ಆರಾಧನೆಯಾಗುತ್ತಿದೆ. ಹಣ್ಣು ಕಾಯಿ ಸಮರ್ಪಣೆ, ದೀಪಧೂಪಾರತಿ, ಮಂತ್ರ ಘೋಷಗಳೆಲ್ಲಾ ಆಗುತ್ತಿವೆ. ಹೀಗಾಗಿ ದೇವಿ ಮಹಾಶಕ್ತಿಗೆ ಭಾರತವನ್ನು ಹಿಡಿಯಲಿಕ್ಕೂ ಅಲ್ಲ, ಬಿಡಲಿಕ್ಕೂ ಅಲ್ಲ, ಎನ್ನುವಂಥಾ ಸಂಕಟ. ‘
ಡಾ. ಜನಾರ್ದನ ಭಟ್ ಸಾದರಪಡಿಸುವ ಓಬಿರಾಯನಕಾಲದ ಕಥಾ ಸರಣಿಯಲ್ಲಿ ಎಂ.ವಿ. ಹೆಗಡೆ ಬರೆದ ಕಥೆ ‘ಆಯುಧ ಪೂಜೆ ಆದರೆ ದೇವಿಯೆಲ್ಲಿ?’
ನವರಾತ್ರಿ. ಭೂತ ಲೋಕದಲ್ಲಿ ಶಾಕಿನಿ ಢಾಕಿನಿಯರು ಶೃಂಗರಿಸಿಕೊಳ್ಳಲು ತೊಡಗಿದ್ದರು. ಮನುಷ್ಯ ಚರ್ಮದ ತನ್ನ ಸೀರೆಗೆ ನೆರಿಗೆಯೇರಿಸಿಕೊಳ್ಳುವಾಗ ಶಾಕಿನಿ ಹೇಳಿದಳು : ‘ನನ್ನ ಸೀರೆಯ ಬಣ್ಣವೆಲ್ಲಾ ಹೋಗಿಬಿಟ್ಟಿತು.’
‘ಸೀರೆಯ ಬಣ್ಣ ಹೋದರೆ ನಿನ್ನನ್ನು ಅಲ್ಲಿ ಭೇತಾಳ ಕಾದು ನಿಂತಿದ್ದಾನೆಂದು ಭಾವಿಸಿದಿಯಾ! ಹೋಗಿಬರುವ ಕ್ರಮವೊಂದನ್ನು ತೀರಿಸಿಬಿಡೋಣವೆಂದು ಹೊರಟರೆ, ನೀನು ಬೆಡಗಿನ ಮಾತಾಡುತ್ತೀ’ ಢಾಕಿನಿಯಂದಳು.
‘ಅದು ಅಷ್ಟೆ. ನೋಡು – ನನ್ನ ಹಾರದ ಮಣಿಗಳೆಲ್ಲಾ – ತೂತು ಬೀಳಲಾರಂಭಿಸಿವೆ; ಇನ್ನು ವಸ್ತ್ರಹಾರವಾವುದೂ ಇಲ್ಲದೆ ಬತ್ತಲೆ ಕುಣಿಯುವ ಕಾಲ ಬರುತ್ತದೇನೋ!’ ರುಂಡ ಹಾರವನ್ನು ತೊಟ್ಟುಕೊಳ್ಳುವಾಗ ಪುನಃ ಶಾಕಿನಿಯ ಶೋಕ.
‘ನಿನ್ನದೇ ಎಂದೇನು, ನನ್ನ ಸೀರೆ ಹಾರಗಳಲ್ಲೂ ತೂತುಗಳು ಬಿದ್ದಿವೆ. ಬೀಳದೆ ಮತ್ತೇನಾದೀತು, ಅವು ದ್ವಾಪರ ಯುಗದವುಗಳಲ್ಲವೇ? ಆಮೇಲೆ ಎಂದಾದರೂ ಸೀರೆ, ಹಾರ ನಮಗೆ ದೊರೆತುದುಂಟೆ?’
‘ಹೌದೇನೆ ಅಕ್ಕ! ಹೀಗೆಯೇ ಆದರೆ ಹೇಗೆ? ಈ ಸಲವಾದರೂ ಒಂದು ಸೀರೆ, ಹಾರ, ಸಂಪಾದಿಸಿಕೊಂಡು ಬರಬಹುದೋ ಹೇಗೆ?’
‘ನಿನ್ನ ಅತ್ಯಾಶೆಗೆ ಸರಿಯಾಗಿ ಅಂತಹದೇ ಕಾಲವೂ ಬಂದಿದೆ. ನೀನು ಶೃಂಗಾರ ಮಾತಿನಲ್ಲಿದ್ದಿ; ಕಳೆದ ಕೆಲವು ವರುಷಗಳಿಂದ ಹೊಸ ಚರ್ಮ, ಹೊಸ ರುಂಡದ ಮಾತು ಬಿಡು. ಬಾಯಿ ಮುಕ್ಕಳಿಸಿ ನಾಲ್ಕು ಗುಟುಕು ಕೆನ್ನೀರು ನಾವು ಕುಡಿದುದುಂಟೆ ಭಾರತದಲ್ಲಿ? ಆ ಮನುಷ್ಯನೊಬ್ಬ ಸಾಯದೆ ನಮಗೇನೂ ದೊರೆಯುವಂತಿಲ್ಲ!’ ಢಾಕಿನಿಯು ಗಾಂಧಿಗೆ ಶಾಪಕೊಟ್ಟಳು.
‘ಹೌದೆನ್ನುತ್ತೇನೆ! ಆ ತ್ರೇತಾ ದ್ವಾಪರಾ ಯುಗಗಳಲ್ಲಿ ಎಂತಹ ಹಬ್ಬದೂಟವಿತ್ತು! ಈಗ ಕೆಲವು ವರುಷಗಳಿಂದ ಬಿಸಿ ರಕ್ತಕ್ಕಾಗಿ ಬಾಯಿ ನೀರೂರಿಸುವದೇ ಬಂತು.’
‘ನಿಜ, ಆ ಯುಗಗಳಲ್ಲಿ ರಾಮನಿದ್ದ, ಕೃಷ್ಣನಿದ್ದ. ಈಗ ಇರುವುದು ಆ ಫಕೀರನಲ್ಲವೇ? ಅವ ಹಿಂದಿನವರಂತೆ ರಕ್ತ ಸುರಿಸುವದು ಬಿಡು, ಸುರಿಯುವ ಚಿಹ್ನೆ ಕಂಡೊಡನೆ ಕಣ್ಣೀರು ಸುರಿಸುತ್ತಾನಂತೆ! ಮತ್ತೆ ರಕ್ತ್ತ ಸಿಕ್ಕುವದೆಂದರೆ ಹೇಗೆ?’ ಢಾಕಿನಿಗೇಕೋ ನಮ್ಮ ಗಾಂಧಿಯಜ್ಜನ ಮೇಲೆಯೇ ಕಣ್ಣು.
‘ಆದರೆ ಅಕ್ಕಾ, ಕಳೆದ ನವರಾತ್ರಿಯ ವೇಳೆ ನಾವು ಹೋಗಿದ್ದಾಗ ಒಂದು ವಾರ್ತೆ ಕೇಳಿದ್ದಿದೆ – ಅವನಿಗೂ ರಕ್ತದ ಒತ್ತಡವಾರಂಭವಾಗಿತ್ತಂತೆ! ಈ ತನಕ….’
‘ಇದೊಂದು ಹುಚ್ಚು! ಆ ಒಣ ಮುದುಕನ ರಕ್ತದ ಒತ್ತಡವೇರಿ ಅದು ನಮ್ಮ ಬಾಯಿಗೆ ಬಂದು ಬಿದ್ದೀತೆಂದು ನೆನಸಿದೆಯಾ? ಅಂತೂ ದೇವಿಯಾಜ್ಞೆಗಾಗಿ ಹೋಗಿ ಬರುವ ಪದ್ಧತಿಯೊಂದುಂಟು – ಇಲ್ಲವಾದರೆ ಯಾರು ಸಾಯುತ್ತಿದ್ದರು. ಆ ಹಾಳು ಭೂಮಿಗೆ!’ ಢಾಕಿನಿಯು ನಿರಾಶೆಯಿಂದ ಉದ್ಗರಿಸಿದಳು.
‘ಹಾಗಾದರೆ ಈ ಬಾರಿಯೂ ಏನೂ ಪ್ರಯೋಜನವಿಲ್ಲವೆನ್ನುತ್ತೀಯಾ? ಮತ್ತೆ ಆ ದೇವಿ ಯಾಕೆ ಇನ್ನೂ ಆ ನಿಷ್ಪ್ರಯೋಜಕ ಮಾನವರ ಬಳಿ ಬಿದ್ದುಕೊಂಡಿದ್ದಾಳಪ್ಪಾ!’
‘ಅವಳೀಗ ತೀರಾ ಮಂಕಳಾಗಿ ಹೋಗಿದ್ದಾಳೆ. ‘ಅಮ್ಮಾ! ತಾಯಿ! ಮೂಕಾಂಬಾ, ಓಂಕಾರ ಸ್ವರೂಪಿಣೀ, ಮಹಾಮಾತೇ’ ಎಂದು ಆ ಮಾನವರು ಹೊಗಳುತ್ತಾ ಇದ್ದಾರಲ್ಲಾ – ಆ ಬಾಯಿ ಹೊಗಳಿಕೆಗೆ ಮರುಳಾಗಿ ಹೋಗಿದ್ದಾಳೆ ಆಕೆ; ಒಂದು ತುತ್ತು ತಿಂಡಿ ಆ ಮನುಜರಿಗೂ ಇಲ್ಲ – ಒಂದು ತಟಕು ರಕ್ತ ಇವಳ ನಾಲಿಗೆ ತುದಿಗೂ ಇಲ್ಲ. ಅವರು ‘ಅಮ್ಮಾ ತಾಯೇ’ ಎನ್ನುವುದು – ಇವಳು ಕಿವಿಯರಳಿಸಿ ಕೇಳುವುದು, ಇಷ್ಟೇ; ಖೆ ಖೆ ಖೆ ಖೆ’ ಇದು ಢಾಕಿನಿಯ ನಂಜಿನ ನಗೆ. ಶಾಕಿನಿ ತಾನು ಬುದ್ಧಿವಂತೆಯೆಂಬ ಹೆಗ್ಗಳಿಕೆಯೊಡನೆ ಹೇಳಹತ್ತಿದಳು: ‘ಈ ಕಲಿಕಾಲದ ಮಾನವರಿಗೇಕೆ ಬುದ್ಧಿಯಿಲ್ಲವೋ ತಿಳಿಯದು. ಆ ಪಂಚಕಜ್ಜಾಯದ ಪೂಜೆಗೆ ಅವರಿಟ್ಟಿರುವ ಹೆಸರೇನು ಗೊತ್ತೇ ಅಕ್ಕಾ – ‘ಆಯುಧ ಪೂಜೆ’ಯಂತೆ! ಹೇ ಹೆ ಹೆ! ಈಗ ಈ ಅವಸ್ಥೆ ಬಂದಿರುವದು ನಮಗೆ ಮಾತ್ರವೆಂದು ಭಾವಿಸಬೇಡ. ಕಳೆದ ಗೋಪೂಜೆಗೆಂದು ಭಾರತಕ್ಕೆ ಹೋಗಿ ಬಂದಿದ್ದ ಬಲಿರಾಜ ಹೇಳುತ್ತಿದ್ದ, ‘ನಾನು ಗೋಪೂಜೆ ನೋಡಬೇಕೆಂದು ಉತ್ಸಾಹದಿಂದ ಹೋದವ ಕಣ್ಣೀರು ಸುರಿಸುತ್ತಾ ಬಂದೆ. ಅಲ್ಲಿ ದನಗಳ ಮೈಯಲ್ಲಿ ಎಲುಬು, ನೆತ್ತಿಯಲ್ಲಿ ಕೊಂಬು ಹೊರತು ಒಂದು ಹಿಡಿ ಮಾಂಸವವುಗಳ ಮೈಯಲ್ಲಿಲ್ಲ. ಗೋಪೂಜೆಗೆಂದು ಮಾನವರು ಆರತಿ ಕುಂಕುಮದ ಹರಿವಾಣ ತಂದಾಗ, ಹಸಿದಿದ್ದ ದನವೊಂದು ತಿಂಡಿ ಬಂತೆಂದು ಭಾವಿಸಿ ಬಾಯಿ ಹಾಕಿ ಹರಿವಾಣವನ್ನು ಕವಚಿಹಾಕಿತು. ಒಡನೆ ಲಟಪಟವೆಂದು ಅದರ ಬೆನ್ನೆಲುಬಿನ ಮೇಲೆ ಪೆಟ್ಟು ಬೀಳುವಾಗ ನನ್ನ ಕಪಿಲ ದನ ಒದ್ದಾಡುವದನ್ನು ನೋಡಲಾರದೆ ಓಡಿ ಬಂದುಬಿಟ್ಟೆ’ ಎಂದು. ವೀರಭದ್ರಾ! ಈ ಭಾರತೀಯರಿಗೇಕಪ್ಪಾ ಇಂಥ ಹಾಳು ಬುದ್ಧಿ ಬಂತು!’
‘ಈ ಸಲವೂ ಆ ಜಿಡ್ಡೆಣ್ಣೆಯ ವಾಸನೆಯಷ್ಟೇ ದೊರೆತರೆ ನಾವು ಖಂಡಿತವಾಗಿ ದೇವಿಯೊಡನೆ ಹೇಳಬೇಕು – ಇನ್ನು ಮುಂದೆ ನಾವೀ ಆಯುಧ ಪೂಜೆಗೆ ಬರುವಂತಿಲ್ಲವೆಂದು’ ಎಂದು ಢಾಕಿನಿ ಕಂಠೋಕ್ತವಾಗಿ ಹೇಳಿದಳು.
ನರಚರ್ಮಾಂಬರಧಾರಿಗಳಾಗಿ, ರುಂಡಮಾಲಾಲಂಕೃತರಾಗಿ, ಎಂದೋ ಸಂಗ್ರಹಿಸಿಟ್ಟ ರಕ್ತ ಹುಡಿಯ ಬೊಟ್ಟನಿಟ್ಟುಕೊಂಡು, ಶಾಕಿನಿ ಢಾಕಿನಿಯರು ಭೂಲೋಕಕ್ಕಿಳಿದರು.
*****
ಇಂದಿನ ಯುದ್ಧ ಪರ್ವದಲ್ಲಿ ಸಂಕ ಸೇತುವೆಗಳನ್ನು ಕಡಿದು ಹಾಕುವದಾದರೂ ಸುಲಭ. ಅನಾದಿಯ ಸಂಬಂಧವನ್ನು ಕಡಿದುಕೊಳ್ಳುವದು ಬಹು ಕಷ್ಟ. ಇಲ್ಲವಾದರೆ ದೇವಿ ಮಹಾಶಕ್ತಿಯು ಭಾರತೇಯರ ಸಂಬಂಧವನ್ನು ಎಂದೋ ಕೈ ಹಿಡಿದುಕೊಳ್ಳುತ್ತಿದ್ದಳು. ಭಾರತವೂ ಯುಗಯುಗಾಂತರಗಳಿಂದ ಓಂಕಾರ ಸ್ವರೂಪಿಣಿ ಮಹಾಕಾಳಿಯನ್ನು ಆರಾಧಿಸಿಕೊಂಡು ಬಂದಿದ್ದ ದೇಶ. ಕೃತ, ತ್ರೇತಾ, ದ್ವಾಪರಾ ಯುಗಗಳಲ್ಲಂತೂ ಕ್ಷತ್ರಿಯರ ಉಕ್ಕುವ ರಕ್ತ ಶಕ್ತಿಯಾರ್ಪಣಕ್ಕಾಗಿಯೇ ಮೀಸಲಿತ್ತು. ಈ ಯುಗದಲ್ಲಿ ಕೂಡಾ ಭೀಮಸಿಂಗ, ಶಿವಾಜಿಯರ ಕಾಲದವರೆಗೆ ಅವಳ ಆರಾಧನೆಗೆ ಕೊರತೆಯಿರಲಿಲ್ಲ. ‘ಮೈ ಭೂಕ್ತಾ ಹೂಂ’ ಎಂದು ಭೀಮಸಿಂಗನಿಗೆ ಕನಸಿನಲ್ಲಿ ಹೇಳಿದೊಡನೆ ಅವ ರಾಜಪುತ್ರರ ಬಿಸಿ ಬಿಸಿ ರಕ್ತವವಳಿಗಾಗಿ ಸುರಿಸಿದ. ಶಿವಾಜಿಯು ಭವಾನಿ ಖಡ್ಗದ ಬಲದಿಂದ ಮಹಾಕಾಳಿಗೆ ಸಾಕಷ್ಟು ರಕ್ತತರ್ಪಣ ಕೊಟ್ಟಿದ್ದ. ಆಮೇಲೆ ಮಾತ್ರ ಅಂತಹದಾವುದನ್ನೂ ಕೇಳಬೇಡಿ. ಭಾರತೇಯರು ಕಾಲಕ್ರಮೇಣ ರಕ್ತಶೂನ್ಯ ಸ್ಥಿತಿಗೆ ಬಂದರು. ಅಂದರೆ ಮೈಯಲ್ಲಿಯೂ ಸಾಕಷ್ಟು ರಕ್ತ ತಂಬುತ್ತಿದ್ದಿಲ್ಲ – ಇದ್ದ ರಕ್ತವನ್ನು ಸುರಿಯುವುದು ಘೋರ ಪಾತಕವೆಂಬ ಧರ್ಮವೂ ಸ್ವಾಭಾವಿಕವಾಗಿ ಅಂಗೀಕರಿಸಲ್ಪಟ್ಟಿತು.
ರಕ್ತದ ಒಣ ಹುಡಿಯ ಬೊಟ್ಟನ್ನಿಟ್ಟುಕೊಳ್ಳುವ ಆಪತ್ತಿನ ವೇಳೆ ಢಾಕಿನಿ ಗಾಂಧಿಯವರ ಮೇಲೆ ನಂಜು ಕಾರಿದುದು ವಿಶೇಷವಿಲ್ಲ . ಅಹಿಂಸಾ ಪರಮೋ ಧರ್ಮ ಮಂತ್ರೋಪಾಸಕಾರದ ಗಾಂಧೀಜಿಯವರ ಮಾಟದಿಂದಾಗಿ ಭಾರತವೂ ರಕ್ತ ಶೂನ್ಯವಾಯಿತೆಂದೇ ಹೇಳಬೇಕು. ಆದರೂ ವರುಷಕ್ಕೊಮ್ಮೆ ನವರಾತ್ರಿಯಲ್ಲಿ ಆಯುಧಪೂಜೆಯೆಂಬುದೊಂದು ನಡೆಯುತ್ತಿದೆ. ಆಯುಧದಿಂದ ಅಧಿದೇವತೆ ಶಕ್ತಿಯ ಆರಾಧನೆಯಾಗುತ್ತಿದೆ. ಹಣ್ಣು ಕಾಯಿ ಸಮರ್ಪಣೆ, ದೀಪಧೂಪಾರತಿ, ಮಂತ್ರ ಘೋಷಗಳೆಲ್ಲಾ ಆಗುತ್ತಿವೆ. ಹೀಗಾಗಿ ದೇವಿ ಮಹಾಶಕ್ತಿಗೆ ಭಾರತವನ್ನು ಹಿಡಿಯಲಿಕ್ಕೂ ಅಲ್ಲ, ಬಿಡಲಿಕ್ಕೂ ಅಲ್ಲ, ಎನ್ನುವಂಥಾ ಸಂಕಟ. ‘ಮಾತೇ! ಓಂಕಾರ ಸ್ವರೂಪಿಣೀ! ನಮಗೆ ನೀನೇ ಗತಿ’ ಎಂದು ಅಡ್ಡಾದಿಡ್ಡಿ ಬೀಳುವ ಪುರೋಹಿತರನ್ನು ಕಡೆಗಾಲಿಂದ ಒದ್ದು ಹೊರಟುಹೋಗುವಷ್ಟು ದಯಾಹೀನೆಯಾಗಲಿಲ್ಲ ಅಮ್ಮ. ಆದರೆ ಅವಳ ನಾಲಿಗೆ ರುಚಿಯ ರಕ್ತಕ್ಕೆ ಮಾತ್ರ ಬರಗಾಲ! ಮೇಲಾಗಿ ಅವಳ ಗಣಗಳಾದ ಶಾಕಿನಿ ಢಾಕಿನಿ ಭೂತಗಳಿವೆ. ಅವರನ್ನು ವರುಷಕ್ಕೊಮ್ಮೆಯಾದರೂ ತೃಪ್ತಿಪಡಿಸುವುದು ಒಡತಿಯ ಕರ್ತವ್ಯ. ಅದಕ್ಕಾಗಿ ನವರಾತ್ರಿಗೆ ತಾನಿದ್ದಲ್ಲಿಗೆ ಬಂದು ಹೋಗಿ ಎಂದು ಅವಳ ಅಪ್ಪಣೆಯಾಗಿತ್ತು.
ಒಡತಿಯ ಆಜ್ಞೆಯಂತೆ ಆ ಗಣಗಳು ಪ್ರತಿ ನವರಾತ್ರಿ ಭಾರತಕ್ಕೆ ಬರುವ ವಾಡಿಕೆ. ಬಂದರೆ ಇಲ್ಲಿ ಇರುವವರೆಲ್ಲ ಥಂಡಾ ರಕ್ತದವರೆ – ಬಿಸಿ ರಕ್ತದ ವಾಸನೆ ಕೂಡಾ ಅವುಗಳ ಮೂಗಿಗೆ ಬಡಿಯಲಿಕ್ಕಿಲ್ಲ. ಬದಲಾಗಿ ಪಂಚಕಜ್ಜಾಯದ ಜಿಡ್ಡೆಣ್ಣೆಯ ವಾಸನೆ! ಸಾಲದುದಕ್ಕೆ ಆ ಕಾಳರಾತ್ರಿ ಪ್ರೇಮಿಗಳ ಮುಖದಿದಿರು ದೀಪಾರತಿ! ಹೀಗಾಗಿ ಆ ಭೂತಗಳು ಪ್ರತಿ ವರುಷವೂ ಗೊಣಗುಟ್ಟುತ್ತಾ ಹಿಂದಿರುಗುವ ವಾಡಿಕೆ. ಬಂದ ಅತಿಥಿಗಳ ಬಾಯಿಕೆಂಪು ಮಾಡಿಸಿ ಕಳುಹಿಸುವ ಕ್ರಮವೊಂದು ಭಾರದಲ್ಲುಂಟಲ್ಲಾ – ಆ ಆತಿಥ್ಯವೇನೋ ಪ್ರಯಾಸದಿಂದಲಾದರೂ ಶಾಕಿನಿ ಢಾಕಿನಿಯರಿಗೂ ದೊರೆಯುತ್ತಿತ್ತು.
‘ನಿನ್ನ ಅತ್ಯಾಶೆಗೆ ಸರಿಯಾಗಿ ಅಂತಹದೇ ಕಾಲವೂ ಬಂದಿದೆ. ನೀನು ಶೃಂಗಾರ ಮಾತಿನಲ್ಲಿದ್ದಿ; ಕಳೆದ ಕೆಲವು ವರುಷಗಳಿಂದ ಹೊಸ ಚರ್ಮ, ಹೊಸ ರುಂಡದ ಮಾತು ಬಿಡು. ಬಾಯಿ ಮುಕ್ಕಳಿಸಿ ನಾಲ್ಕು ಗುಟುಕು ಕೆನ್ನೀರು ನಾವು ಕುಡಿದುದುಂಟೆ ಭಾರತದಲ್ಲಿ? ಆ ಮನುಷ್ಯನೊಬ್ಬ ಸಾಯದೆ ನಮಗೇನೂ ದೊರೆಯುವಂತಿಲ್ಲ!’ ಢಾಕಿನಿಯು ಗಾಂಧಿಗೆ ಶಾಪಕೊಟ್ಟಳು.
ವಿದ್ಯಾದಶಮಿಯ ಮೆರವಣಿಗೆ ಮಸೀದಿಗಳಿದಿರು ಬಂದಾಗ, ಅಲ್ಲಿಯೊಂದು ಹತ್ತಿಪ್ಪತ್ತು ತಟಕು ರಕ್ತ ಸುರಿದರೆ ಶಾಕಿನಿ ಢಾಕಿನಿಯರು ತುಟಿ ಕೆಂಪು ಮಾಡಿಕೊಳ್ಳುವಷ್ಟರಲ್ಲಿ ತಲೆಕೆಂಪಿದ್ದವರು ಅಲ್ಲಿ ಬಂದು ಅದಕ್ಕೂ ತಡೆಯೊಡ್ಡುತ್ತಿದ್ದರು. ಹೀಗಾಗಿ ಭಾರತದ ಆಯುಧ ಪೂಜೆಯ ದಿನ ಬಂತು ಎಂದಾದೊಡನೆ ಆ ಭೂತಗಳಿಗೆ ತೀರಾ ನಿರುತ್ಸಾಹ. ಮೊದಲು ಭಾರತ ಪ್ರವಾಸವೆಂದೊಡನೆ ಹಿಗ್ಗಿ ಹಾರುತ್ತಿದ್ದ ಗಣಗಳು ಈಗ, ಇದೊಂದು ಪ್ರಯಾಸವೆಂದು ಜಿಗುಪ್ಸೆಗೊಳ್ಳುತ್ತಿದ್ದವು. ಆದರೆ ಕಾಲಕಷ್ಟ. ದೇವಿಯ ಆಜ್ಞೆ ಇದೆ, ಹೋಗಲೇಬೇಕು ಎಂಬುದಕ್ಕಾಗಿ ಹೊರಡುತ್ತಿದ್ದವು. ಅಂತೆಯೇ ಈ ವರುಷವೂ ಹೊರಟವೆನ್ನಿ.
*******
ಶಾಕಿನಿ ಢಾನಿಯರು ಭಾರತ ಭೂಮಿಯ ಮೇಲೆ ಬಂದು ಬಿದ್ದವರೇ ಅಮ್ಮನನ್ನು ಹುಡುಕುತ್ತಾ ಹೊರಟರು. ಹಾದಿ ನಡೆಯುತ್ತಿದ್ದಾಗ, ಜನರಲ್ಲಾವುದೋ ಒಂದು ವಿಧದ ಬದಲಾವಣೆಯಾಗಿರುವುದು ಅವರಿಗೆ ಕಂಡು ಬಂತು. ಎಷ್ಟೋ ಮಂದಿ ಸತ್ತರಂತೆ, ಏನೋ ಮುಳುಗಿತಂತೆ, ಯಾವುದೋ ಬೀಳುತ್ತದಂತೆ ಎಂದು ಜನರಾಡಿಕೊಳ್ಳುವ ಮಾತನ್ನಾಧರಿಸಿ ಸಂಭಾಷಿಸುತ್ತಾ ಬಂದರು. ಅವರಿಳಿದುದು ಹಿಂದುಸ್ಥಾನದ ಯಾವುದೋ ಒಂದು ಮುಖ್ಯ ಪಟ್ಟಣದಲ್ಲಾಗಿರಬೇಕು. ಈ ಉತ್ಸವ ಎಲ್ಲಿ ನಡೆಯುತ್ತಿದೆ. ಎಲ್ಲಿಯೂ ಕಾಣುವುದಿಲ್ಲವಲ್ಲಾ. ದೇವಿ ಸಿಕ್ಕಿದಳಾದರೆ ತಿಳಿಯುತ್ತದೆ ಎಂದು ಶಕ್ತಿಯನ್ನು ಹುಡುಕುತ್ತಾ ಹೊರಟರು. ಆದರೆ ದೇವಿಯ ಪತ್ತೆಯಿಲ್ಲ. ತಳಿರು ತೋರಣಗಳಡಿಯಲ್ಲಿ ನಡೆದರು; ಸುಮಂಗಲೆಯರನ್ನು ತಮ್ಮಷ್ಟಕ್ಕೆ ಅಣಕಿಸುತ್ತಾ ಸಾಗಿದರು. ಆದರೆ ಎಲ್ಲಿಯೂ ದೇವಿ ಕಾಣಲಿಲ್ಲ. ಒಂದೆಡೆಯಿಂದ ಘಣ ಘಣಘಂಟಾರವವು ಕೇಳಿ ಬರುತ್ತಿತ್ತು. ‘ಓ ಅಲ್ಲಿ ದೇವೀ ಪೂಜೆ ನಡೆಯುತ್ತಿದೆ. ಅಮ್ಮ ಇದ್ದರೆ ಅಲ್ಲಿ ಇರಬೇಕು’ ಎಂದಳು ಶಾಕಿನಿ. ‘ಆಗಲಿ ನೋಡೋಣ’ ಎಂದು ಹೊರಟಿತು, ಅಲ್ಲಿಗೆ ಅವರ ಸವಾರಿ.
ಸಮೀಪವಾದಂತೆ ‘ಅಂಬಂಭಜಾಮಿ || ಜಗ || ದಂಬಾ ಭಜಾಮಿ || ಕಾಳಿ ಭಜಾಮಿ || ಮಹಾಂಕಾಳಿ ಭಜಾಮಿ ||’ ಎಂದು ತಾಳ ಹಾಕಿ ಕುಣಿಯುವ ಗದ್ದಲ ಕೇಳಿ ಬರಹತ್ತಿತ್ತು. ಸ್ಮಶಾನ ರುದ್ರ ಮತ್ತು ಮಹಾಂಕಾಳಿಯರ ಜತೆಯಲ್ಲಿ ಒಂದೆರಡು ನೃತ್ಯದಲ್ಲಿ ಭಾಗವಹಿಸಿ ಅನುಭವವಿದ್ದ ಈ ಗಣಗಳಿಗೆ, ಎರಡು ಸುತ್ತು ಕುಣಿಯೋಣವೇ ಎಂಬ ಮೈಮರುಳು ಬಂತು. ಆದರೆ ಅಲ್ಲಿದ್ದ ದೀಪ, ಧೂಪದ ಹೊಗೆ, ಇವುಗಳಿಗೂ ಅಂದಿನವುಗಳಿಗೂ ವ್ಯತ್ಯಾಸವಿದ್ದುದರಿಂದ ಅಲ್ಲೇ ತಡೆದು ನಿಂತು ಮುಂಭಾಗಕ್ಕೆ ನೋಡಿದರು. ಭಟ್ಟರು ಒಂದು ಕೈಯಲ್ಲಿ ಆರತಿ, ಇನ್ನೊಂದರಲ್ಲಿ ಘಂಟಾಮಣಿ ಹಿಡಿದುಕೊಂಡು ಬಾಯಲ್ಲಿ ಏನೋ ಮಣ ಮಣ ಮಾಡುತ್ತಿದ್ದರು. ‘ಅವನೇನು ಗುಣಗುಟ್ಟುತ್ತಾನೆ. ದೇವೀ ಸ್ತೋತ್ರ ಪಠಿಸುತ್ತಿರುವಂತೆ ಕಾಣುವುದಿಲ್ಲವಲ್ಲಾ’ ಎಂದಳು ಶಾಕಿನಿ. ‘ಅವ ಪೂಜಾ ಸಾಹಿತ್ಯಗಳನ್ನು ನೋಡಿ ಗೊಣಗುತ್ತಿರುವಂತೆ ಕಾಣುತ್ತದೆ. ಕಡಿಮೆಯಾಯಿತೆಂದೋ ಏನೋ! ಆದರೆ ಈ ಭಜನೆ ಘಂಟಾರವದ ಗದ್ದಲದಲ್ಲಿ ಅದನ್ನು ಕೇಳುವವರಿಲ್ಲವೆನ್ನು – ಅದೊಂದು ಅನುಕೂಲ!’ ಎಂದಳು ಢಾಕಿನಿ.
‘ಹೋ! ಅಲ್ಲಿದ್ದಾಳಲ್ಲಾ ದೇವಿ!’ ಎಂದಳು ಪಕ್ಕನೆ ಶಾಕಿನಿ. ಇಬ್ಬರೂ ಆತುರದಿಂದ ನೋಡಿದರು.
ಅದು ದೇವಿಯ ಮೂರ್ತಿ. ಆದರೆ ಮೈಯೆಲ್ಲಾ ಪುಷ್ಪ ಮತ್ತು ಇತರ ಅಲಂಕಾರಗಳಿಂದ ಮುಚ್ಚಿಹೋಗಿತ್ತು. ಎರಡು ಕಣ್ಣುಗಳು ಮಾತ್ರ ಕುರುಡಿಯ ಕಣ್ಣುಗಳಂತೆ ನೋಡುವವರಿಗೆ ತೋರುತ್ತಿದ್ದವು! ‘ಅದೊಂದು ಗೊಂಬೆ’ ಎಂದಳು ಢಾಕಿನಿ. ‘ಛೆಕ್! ಹೊರಡೋಣ ಇಲ್ಲಿಂದ’ ಅಲ್ಲಿದ್ದವರನ್ನು ರಕ್ತಾಕ್ಷಿಗಳಿಂದ ನೋಡುತ್ತಾ ಇಬ್ಬರೂ ಹೊರಬಿದ್ದರು. ಆ ಪೂಜಾ ಗ್ರಹದ ಹೊರಭಾಗದ ದೀಪವೊಂದನ್ನೂ ಇಟ್ಟಿರಲಿಲ್ಲ . ‘ಈ ಬಾರಿ ಆಗಿರುವ ನಮಗನುಕೂಲವಾದ ಸುಧಾರಣೆಯೆಂದರೆ ಇದು’ ಎನ್ನುತ್ತಾ ಅವರು ಅಲ್ಲಿಂದ ನಡೆದರು.
ಒಡತಿಯನ್ನು ಹುಡುಕುತ್ತಾ ಮತ್ತೊಂದು ಹಾದಿ ಹಿಡಿದು ಶಾಕಿನಿ ಢಾಕಿನಿಯರು ಬರುತ್ತಿದ್ದರು. ಕಿವಿಕೊಡುತ್ತಾ ಮುಂದುವರಿದು, ಘಣ ಘಣರವ, ಮಂತ್ರ ಘೋಷ ಕೇಳಿ ಬರುತ್ತಿರುವ ಒಂದು ಕಡೆಗೆ ಚಿತ್ತೈಸಿತು ಆ ಗಣಗಳ ಸವಾರಿ.
‘ಶಕ್ತಿದಾಯಕೀ, ಮಾತೆ ಓಂಕಾರ ಸ್ವರೂಪಿಣಿ’ ಎಂಬ ಸ್ತುತಿಯಾಗುತ್ತಿರುವಲ್ಲಿಗೆ ನುಗ್ಗಿದರು. ‘ದೇವಿ ಸಿಕ್ಕಿ ಬಿದ್ದಿರುವುದು ಈ ಮಂತ್ರದ ದೆಸೆಯಿಂದಲೇ. ಮತ್ತೇನೂ ಸಾಗದೆ ಸ್ವರ ಮಾತ್ರವೆಬ್ಬಿಸುತ್ತಿರುವ ಈ ಕಂಠಗಳನ್ನು ಶೂಲದಿಂದ ಚುಚ್ಚುವವರಿಲ್ಲದೆ ಹೋದರು!’ ಎಂದು ಸಪ್ಪೆಯೇರಿದ ತುಟಿಕಚ್ಚಿಕೊಂಡಳು ಢಾಕಿನಿ. ಒಂದೆಡೆಯಲ್ಲಿ ಸಾಲಾಗಿ ತುಕ್ಕು ಹಿಡಿದ ಆಯುಧಗಳನ್ನಿರಿಸಲಾಗಿತ್ತು. “ಆ ಆಯುಧದ ಬೆನ್ನಾವುದು ಬಾಯಿ ಯಾವುದು ಹೇಳು ನೋಡೋಣ” ಎಂದಳು ಶಾಕಿನಿ ತಮಾಷೆಯಾಗಿ. ಭಟ್ಟ ಎತ್ತುತ್ತಿದ್ದ ಆರತಿಯ ಬೆಳಕಿನಲ್ಲಿ ಕೂಡ ಅದನ್ನು ಗುರುತಿಸಲಾರದೆ ಢಾಕಿನಿ ಸೋತುಹೋದಳು. ‘ಅಬ್ಬಾ ಆಯುಧ ಪೂಜೆಯೇ! ಮಂಕು ಮಾನವರ ರೀತಿ ನೋಡಿದಿಯಾ. ಆ ತರುಣರೆಲ್ಲಾ ದೂರನಿಂತು ಕೈಮುಗಿಯುತ್ತಿದ್ದಾರೆ ಪಾಪ – ಮುಟ್ಟಿದರೆ ಭ್ರಷ್ಠವಾದೀತಲ್ಲಾ! ಇದು ಆಯುಧ ಪೂಜೆಯಲ್ಲ, ಆಯುಧ ಪೂಜ್ಯ (0). ದೇವಿಯೆಲ್ಲಿ ಸತ್ತಳು! ನಡಿ, ಹೊರಡೋಣ’ ಎನ್ನುತ್ತಾ ಇಬ್ಬರೂ ಅಲ್ಲಿಂದ ಹೊರಟರು.
ಅಲ್ಲಿಯೂ ಹೊರಗೆ ದೀಪವಿಲ್ಲ. ಶಾಕಿನಿ ಢಾಕಿನಿಯರು ಈ ವ್ಯತ್ಯಾಸಕ್ಕೇನು ಕಾರಣವೆಂಬ ಯೋಚನೆಯಲ್ಲಿ ಬಿದ್ದರು. ದೇವಿಯೆಲ್ಲಿ ಹೋದಳಪ್ಪಾ ಎಂದು ಕಾತರಿಸಹತ್ತಿದರು. ದೇವಿ ಈ ದೇಶದಲ್ಲಿರುವದಾದರೆ ಅಲ್ಲಿಯೇ ಇರಬೇಕಿತ್ತು; ಈ ಮಾನವರು ಪೂಜೆಯ ಸಮಯ ತುಂಬಾ ಬೆಳಕಿಡುವ ಕ್ರಮ, ಅದೂ ಇಲ್ಲ. ಮೇಲಾಗಿ ರಸ್ತೆಯಲ್ಲೆಲ್ಲಾ ಮನುಷ್ಯರು ರಕ್ತ ಸುರಿಯುವ ಪಂಚಾಯತಿಕೆ ಮಾತಾಡುತ್ತಾ ಹೋಗುತ್ತಿದ್ದಾರೆ. ಏನಿದು? ಅಮ್ಮ ಎಲ್ಲಿ ಹೋದಳು? ಎಂದು ಗದ್ದಲಗಳ ಪ್ರದೇಶಗಳನ್ನೆಲ್ಲಾ ಹಾದು ನಡು ಗುಡ್ಡಕ್ಕೆ ಬಂದು ನಿಂತುಕೊಂಡು ನಾಲ್ದೆಸೆಗಳನ್ನೂ ನೋಡಹತ್ತಿದರು. ಪಶ್ಚಿಮ ಕಡೆಯ ಗಾಳಿಯು ಬಿಸಿರಕ್ತದ ವಾಸನೆಯೊಡನೆ ಬಂದು ಅವರ ಮೂಗಿಗೆ ಬಡಿಯಿತು. ‘ಹಾಂ! ಆ ಕಡೆಯಲ್ಲಿ! ಎಂದು ಇಬ್ಬರೂ ಒಮ್ಮೆ ನೆಟ್ಟಗಾದರು. ‘ನಿಲ್ಲು ಆ ಕಡೆಗೆ ಕಿವಿಕೊಡು, ಏನೋ ಓಂಕಾರದ ಹಾಗೆ ಕೇಳಿಬರುತ್ತದಲ್ಲಾ’ ಶಾಕಿನಿಯೆಂದಳು. ಢಾಕಿನಿ ಲಕ್ಷ್ಯಕೊಟ್ಟು ಆಲಿಸಿ,
‘ಅದು ಓಂಕಾರವಲ್ಲ , ಮಾನವರೆಬ್ಬಿಸುತ್ತಿರುವ ಹೂಂಕಾರ. ಈ ಕಾಲದಲ್ಲಿ ಓಂಕಾರದ ರೂಪ ಹಾಗಾಗುತ್ತದೋ ಏನೋ. ಅಮ್ಮ ಅಲ್ಲಿ ಇರಬಹುದು’ ಎಂದಳು.
‘ಸರಿ ಸರಿ ಅಲ್ಲಿರಬೇಕು. ನಮಗೊಂದು ದೊಡ್ಡ ಬಲಿ. ಹೂ… ಹೊರಡೋಣ!’
ಇಬ್ಬರೂ ದಬಕ್ಕನೆ ಪಶ್ಚಿಮ ದೇಶಕ್ಕೆ ಹಾರಿದರು.
ಅಲ್ಲಿ ಹೋಗಿ ನೋಡುತ್ತಾರೆ. ದೇವಿ ಅಲ್ಲಿದ್ದಾಳೆ ! ಕುರುಕ್ಷೇತ್ರದಲ್ಲಿ ಇದ್ದ ಭಂಗಿಯಲ್ಲಿಯೆ ಇದ್ದಾಳೆ! ಕಾಲುಗಳನ್ನು ಮಡಚಿ ಚೌಕ ಹಾಕಿ ಕುಳಿತು ಮಹಿಷಮರ್ದಿನಿ ಹರಿದು ಬರುತ್ತಿದ್ದ ರಕ್ತದ ಕಾಲುವೆಗೆ ಬಾಯಿ ಕೊಟ್ಟಿದ್ದಾಳೆ. ನೊರೆ ನೊರೆಯಾಗಿ ಕಾಲ ಬುಡಕ್ಕೆ ಹರಿದು ಬರುತ್ತಿದೆ ಬಿಸಿ ಬಿಸಿ ರಕ್ತ. ಸಾಲದುದಕ್ಕೆ ಸುತ್ತಲೂ, ಅಂದಿನ ಪ್ರಲಯ ಭೇರಿ ನಿನಾದವನ್ನು ಹಿಂದಿಕ್ಕುವ ‘ಧಡಧಡಾರ್’ ‘ಧುಡುಂ’ ಶಬ್ದ ಶಾಕಿನಿ ಢಾಕಿನಿಯರನ್ನು ಕಂಡಾಗ ದೇವಿ ಹರ್ಷವದನಳಾಗಿ ‘ಬಂದಿರೇ, ಬನ್ನಿ. ಈವರೆಗೂ ಆ ಬಂಜರು ಭೂಮಿಯಲ್ಲಿ ನಿಂತು ನಾನೂ ದಣಿದೆ, ನಿಮ್ಮನ್ನೂ ದಣಿಸಿದೆ. ಇಲ್ಲಿ ಇತ್ತು ನಮ್ಮ ಸ್ಥಾನ; ಇಂದಿಗೆ ಬಂತು ನಮ್ಮ ಭಾಗ್ಯೋದಯದ ಕಾಲ. ಆ ಕಡೆ ನೋಡಿ. ಇನ್ನೂ ನೆರೆಯೇರಲಿಕ್ಕಿದೆ. ಕುಡಿಯಿರಿ, ಕುಣಿಯಿರಿ.’ ಅವಳು ಬಾಯಿತೆರೆದು ಆಮಂತ್ರಿಸಿದಾಗ ಆ ನಗುವಿನೊಡನೆ ರಕ್ತ ಸೂಸುತ್ತಿತ್ತು. ‘ಮಾತೆ! ನಿನ್ನನ್ನಾಶ್ರಯಿಸಿ ಧನ್ಯರಾದೆವು. ದೇವೀ. ನಮೋನ್ನಮಃ’ ಎಂದು ಶಾಕಿನಿ ಢಾಕಿನಿಯರು ಚಂಡಮುಂಡಾಂತಕಿಗೆ ಪ್ರಣಾಮಮಾಡುವ ನೆವದಿಂದ ಅಲ್ಲೇ ಬಿದ್ದರು; ಬಿದ್ದವರು ಅಲ್ಲಿಗೆ ಹರಿದು ಬರುತ್ತಿದ್ದ ನೊರೆ ರಕ್ತವನ್ನು ಅಲ್ಲಿಯೆ ಜುಬ್ ಜುಬ್ ಹೀರಹತ್ತಿದರು.
ಈ ತನಕ ಎದ್ದಿಲ್ಲ!
(ಅಂತರಂಗ; 15 ಅಕ್ಟೋಬರ್ 1939)
*****
ಟಿಪ್ಪಣಿ:
ಉಡುಪಿಯ ‘ಅಂತರಂಗ’ ಮತ್ತು ಮಂಗಳೂರಿನ ‘ನವಭಾರತ’ ಪತ್ರಿಕೆಗಳ ಸಂಪಾದಕರಾಗಿದ್ದ ಎಂ. ವಿ. ಹೆಗ್ಡೆ (ಉಡುಪಿ ಜಿಲ್ಲೆಯ ಮಟ್ಟಾರು ಗ್ರಾಮದ ವಿಠ್ಠಲ ಹೆಗ್ಡೆಯವರು) ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜ ಸುಧಾರಕರಾಗಿದ್ದರು. ಇವರು ತಮ್ಮ ಹರಿತವಾದ ವ್ಯಂಗ್ಯ ಹಾಗೂ ವಿಡಂಬನೆಗಳ ಮೂಲಕ ಧಾರ್ಮಿಕ ಡಂಭಾಚಾರ, ಸಮಾಜದೋಷಗಳು ಹಾಗೂ ರಾಜಕೀಯ ಅಲಾಲಟೋಪಿತನಗಳನ್ನು ಖಂಡಿಸುತ್ತಿದ್ದರು. ಇವರು ಸುಮಾರು ಮೂವತ್ತು ಕತೆಗಳನ್ನು ಬರೆದಿರುವರೆಂದು ಅಂದಾಜಿಸಲಾಗಿದೆ. ಇಪ್ಪತ್ತಕ್ಕಿಂತ ಹೆಚ್ಚು ಕತೆಗಳು ಹಳೆಯ ಪತ್ರಿಕೆಗಳಲ್ಲಿ ದೊರಕಿವೆ. ಎಂ. ವಿ. ಹೆಗ್ಡೆಯವರ ಹತ್ತು ಇತರ ಕೃತಿಗಳು ಪ್ರಕಟವಾಗಿವೆ. ಆದರೆ ಕತೆಗಳ ಸಂಕಲನವೊಂದು ಪ್ರಕಟವಾಗಬೇಕಾದುದು ಅಗತ್ಯವಾಗಿದೆ.
ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82.