ಘರ್ಷಣೆಗೆ ಕಸುವೇರಲು ಓರ್ವ ಪೋಲೀಸ್ ವೀರ ದರ್ಪದಿಂದ ಧಾವಿಸಿ ಬಂದು ಸುನಂದೆಯ ಬಳಿಯಲ್ಲಿದ್ದ ಒಬ್ಬ ಹುಡುಗಿಯ ತಲೆಗೆ ಲಾಥಿಯಿಂದ ಪ್ರಹಾರ ಮಾಡಿದ. ಉತ್ತರ ಕ್ಷಣ ಅವಳು ಚಟ್ಟನೆ ಚೀರಿ ಬಿದ್ದು ಬಿಟ್ಟಳು. ಈ ದೃಶ್ಯವನ್ನು ಕಂಡು ಕುಪಿತಳಾದ ಸುನಂದೆ ಕೆರಳಿದ ಕೇಸರಿಯಂತೆ ಮುಂಬರಿದು ‘ಎಲೋ ದುರಾತ್ಮಾ, ಬೆತ್ತದೇಟಿನ ಆಜ್ಞೆಯಿರಲು ಹುಡುಗಿಗೆ ದೊಣ್ಣೆಯಿಂದ ಹೊಡೆದೆಯಾ? ನಿನ್ನ ಪೊಳ್ಳು ಪೌರುಷಕ್ಕೆ ಬೆಂಕಿ ಬೀಳಲಿ’ ಎಂದು ಘರ್ಜಿಸಿದಳು. ಅದಕ್ಕೆ ಆತ – “ಹುಡುಗಿಯರಾದರೆ ಮನೆಯೊಳಗೆ ಇರಬೇಕಿತ್ತು; ಇಲ್ಲೇನು ಕೆಲಸ ನಿಮಗೆ?” ಎನ್ನುತ್ತ ದಂಡವನ್ನು ಸುನಂದೆಯ ಮಸ್ತಕಕ್ಕೆ ನೇರವಾಗಿ ಬೀಸಿದ.
ಡಾ. ಜನಾರ್ದನ ಭಟ್ ಸಾದರಪಡಿಸುವ ಓಬಿರಾಯನಕಾಲದ ಕಥಾಸರಣಿಯಲ್ಲಿ ಸಿಕಂದರ್ ಕಾಪು ಬರೆದ ಕತೆ “ಅಗಸ್ಟ್ ವೀರ”
“ಶೇಖರ, ನಮ್ಮಿಷ್ಟು ಮಂದಿಯ ಮಾತನ್ನು ಮೀರಿ ಹೋಗುವೆಯಾ?” ಎಂದ ಕೃಷ್ಣಮೂರ್ತಿ
“ಹೋಗಿರೋ, ದೊಡ್ಡ ದೇಶಭಕ್ತರು ನೀವು! ಸತ್ಯಾಗ್ರಹವಂತೆ! ಸತ್ಯಾಗ್ರಹ! ಅದೇನು ಕಾಫಿ ಕುಡಿದು ಸಿಗರೇಟು ಸೇದಿ, ಮಜಾ ಮಾಡಿದಷ್ಟು ಸುಲಭವೆಂದು ತಿಳಿದಿರಾ? ಸ್ಟಡಿ ಮಾಡೋದು ಬಿಟ್ಟು ಇಲ್ಲದ ಒಣ ಉಸಾಬರಿ” – ಎಂದು ಪ್ರತ್ಯುತ್ತರವಿತ್ತ ಚಂದ್ರಶೇಖರ ಸಹಪಾಠಿಗಳನ್ನು ಅಲ್ಲೇ ಬಿಟ್ಟು ಅಭ್ಯಾಸದ ಪುಸ್ತಕಗಳೊಂದಿಗೆ ಮುನ್ನಡೆದ. ಅವರಲ್ಲಿ ಕೆಲವರು ಆತನನ್ನು ಕೂಗಿ ಹಿಂದೆ ಕರೆಯಲು, ದಳನಾಯಕ ಕೃಷ್ಣಮೂರ್ತಿ, “ಯಾರೊಬ್ಬರೂ ಕರೆಯಕೂಡದು ಅವನನ್ನು; ನೋಡೋಣ ಮುಂದೇನಾಗುವುದೆಂದು! ಗೇಟಿನ ಬಳಿ ಸುನಂದೆ ಇದ್ದಾಳೆ; ಅಲ್ಲಿ ಇಳಿದೀತು – ಈತನ ಜಂಭ” ಎಂದು ಕಟ್ಟಾಜ್ಞೆಯಿತ್ತ.
ಸೆಂಚುರಿ ಕಾಲೇಜಿನ ಉನ್ನತ ಗೋಪುರದ ಗಂಟೆಯ ಗುಂಜಾರವು ಅಂತರಾಳದಲ್ಲಿ ಅಲೆ ಅಲೆಯಾಗಿ ತೇಲಿ ಮಾಯವಾಯಿತು.
ವಿದ್ಯಾರ್ಥಿಯಾದ ಚಂದ್ರಶೇಖರನು ವೇಳೆಯಾದುದನ್ನರಿತು ಧಾವಿಸಿ ಬಂದು ಗೇಟಿನೊಳಗೆ ಕಾಲಿಸಿರಿದ್ದನಷ್ಟೆ – “ಶೇಖರ್” ಎಂಬ ಧ್ವನಿಯು ಅದೆತ್ತಣಿಂದಲೋ ಬಂದು ಕರ್ಣರಂಧ್ರವನ್ನು ಪ್ರವೇಶಿಸಿತು. ಕರೆದ ವ್ಯಕ್ತಿ ಯಾರೆಂದು ನಿಂತಲ್ಲೇ ಬೆರಗಾಗಿ ಅತ್ತಿತ್ತ ನೋಡತೊಡಗಿದ.
“ತುಸು ನಿಲ್ಲಬೇಕು” ಎನ್ನುತ್ತ ಸುನಂದೆಯು ಆತನಿದ್ದಲ್ಲಿಗೆ ಬಂದಳು.
“ಏಕೆ?” ಎಂದು ಕೇಳುವುದೊತ್ತಟ್ಟಿಗುಳಿದು ಶೇಖರನ ಮುಖಭಾವವೇ ಅದೊಂದು ಪ್ರಶ್ನಾರ್ಥಕ ಚಿಹ್ನವಾಗಿತ್ತು.
“ಇದೋ ಈ ಬಳೆದೊಟ್ಟು ಮುನ್ನಡೆ; ಕೈಯಲ್ಲಿ ಅಂದವಾಗಿ ಶೋಭಿಸಬಹುದು” ಎಂದಳು. ಗಟ್ಟಿ ಚಿನ್ನದ ಜೋಡು ಬಳೆಯನ್ನು ಮುಂದಕ್ಕೆ ಚಾಚಿ ಹಿಡಿದಿದ್ದಳು ಸುನಂದೆ. ನಿನ್ನೆ ಕಾಲೇಜಿನ ಚರ್ಚಾ ಸಂಘದಲ್ಲಿ ತನ್ನೆದುರು ಭಾಗವಹಿಸಿ ವಾದಿಸಿದ ಇವಳು ಇಷ್ಟೊಂದು ಗಂಭೀರೆಯಾಗಿದ್ದಿಲ್ಲ. ಅಬ್ಬ, ಇಂದಿನ ಗಾಂಭೀರ್ಯವು ಬಹು ವಿಚಿತ್ರವಾಗಿದೆ! ಸಹಪಾಠಿಗಳ ಮಾತನ್ನು ಸುಲಭವಾಗಿ ಜಾಡಿಸಿಬಿಟ್ಟು, ಉಬ್ಬಿನಿಂದ ಬಂದಿದ್ದ ಶೇಖರ ಸುನಂದೆಯ ಇದಿರಲ್ಲಿ ತೆಪ್ಪಗಾಗಿ ಹೋದ. ಗೇಟಿನ ಹತ್ತಿರ ಅವಳ ನಾಯಕತ್ವದಲ್ಲಿ ಕಾಲೇಜು ಹುಡುಗಿಯರ ಒಂದು ತಂಡವೇರ್ಪಟ್ಟಿತು. ಪರಿಸ್ಥಿತಿಯ ಅರಿವಾಯಿತವನಿಗೆ. ಸತ್ಯಾಗ್ರಹ! ಅದರ ಒಂದಂಗವಾದ ಕಾಲೇಜು ಪಿಕೆಟಿಂಗ್.
ಶೇಖರನಿಗಾದ ಮುಖಭಂಗವು ಅವನಲ್ಲಿ ಕ್ರೋಧವನ್ನು ಕೆರಳಿಸಿತು. “ಸುನಂದಾ, ಇದು ಮಕ್ಕಳಾಟವಲ್ಲವೆಂದು ತಿಳಿದಿರಲಿ; ಅದರಲ್ಲೂ ನಿಮಗೆ! ಹುಡುಗಿಯರಿಗೆ – ಇದು ಸಲ್ಲದ ಕೆಲಸ” ಎಂದು ಕಂಪಿತ ಸ್ವರದಲ್ಲಿ.
“ಹುಡುಗಿಯರೇನು? ಹುಡುಗರೇನು? ಇದು ನಮ್ಮೆಲ್ಲರ ಕೆಲಸ” – ಅನುಯಾಯಿಗಳೊಂದಿಗೆ ಪಕ್ಕದಲ್ಲೇ ಬಂದು ನಿಂತಿದ್ದ ಕೃಷ್ಣಮೂರ್ತಿಯ ಉತ್ತರ. “ಎಪ್ಪತ್ತೆರಡರ ಬಾಪೂಜಿಯು ಭಾರತ ಸ್ವಾತಂತ್ರ್ಯ ಸಮರಕ್ಕೆ ಆಹ್ವಾನವಿತ್ತು ಕೈಬೀಸಿ ಕರೆಯುವಾಗ ಅದಕ್ಕೆ ‘ಓ’ ಕೊಡುವುದು ಮಕ್ಕಳಾಟವೇ? ಯುವ ಜನಾಂಗದ ಮಕುಟಮಣಿಗಳಂತಿರುವ ವಿದ್ಯಾರ್ಥಿಗಳೇ ಸಿದ್ಧರಾಗಿರಿ” ಎನ್ನುವಾಗ ಹಿಂಜರಿದು ನಿಲ್ಲುವುದು ನಮಗೆ ಲಾಂಛನವಲ್ಲವೇ? ಕೇಳಿರುವೆಯಾ ಶೇಖರ, ನಿನ್ನೆಯ ರೇಡಿಯೊ? ಬೊಂಬಾಯಿಯಲ್ಲಿ ಧುರೀಣರ ಬಂಧನ!”
ಶೇಖರ ಕೇಳಿದ ವಿಸ್ಮಿತವಾಗಿ – “ಏನು? ಧುರೀಣರ ಬಂಧನ?”
“ಆ ಬಂಧನದ ರೀತಿಯೆಂದರೆ ಸಾಮ್ರಾಜ್ಯಶಾಹಿಯ ಮರ್ದನ ನೀತಿ” ಎಂದಳು ಸುನಂದೆ.
ಕಂಕುಳದಲ್ಲಿದ್ದ ಪುಸ್ತಕಗಳನ್ನು ಹತ್ತಿರದ ಕಲ್ಲು ಬೆಂಚಿನ ಮೇಲೆ ಮಡಗಿ ಬಂದ ಚಂದ್ರಶೇಖರ ಸಿನೆಮಾ ನಟನ ಠೀವಿಯಲ್ಲಿ ಕೈಕಟ್ಟಿ ಎದೆಯಗಲಿಸಿ ನೆರೆದಿದ್ದವರೊಡನೆ – ‘ಹಾಗಾದರೆ ಮುಂದೇನು’ ಎಂದು ಪ್ರಶ್ನಿಸಿದ. ‘ಸತ್ಯಾಗ್ರಹ!’ ಎಂದಿತು ವಿದ್ಯಾರ್ಥಿವೃಂದ.
***
1942 ನೇ ಇಸವಿ ಅಗೋಸ್ತು ಗಲಭೆಯು ಭಾರತ ರಾಷ್ಟ್ರೇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನೇ ತೆರೆದಿದೆ. ದೇಶದಲ್ಲಿ ನವಕ್ರಾಂತಿಯ ಉಸಿರನ್ನು ಊದಿದೆ. ಆಗ ಜರಗಿದ್ದ ಯಾವತ್ತೂ ಕಾರ್ಯರಂಗಗಳಲ್ಲಿ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಅತ್ಯಧಿಕವಾಗಿ ಪ್ರವೇಶಿಸಿದ್ದರಿಂದ ಅದಕ್ಕೆ ಕಳೆಯೇರಿತೆನ್ನಬಹುದು.
‘ಕ್ವಿಟ್ ಇಂಡಿಯಾ’ (ಚಲೇ ಜಾವ್) ಈ ಮಾತು ಮಹಾತ್ಮಾಜಿಯವರ ಕಂಠದಿಂದ ಹೊರಟು ದೇಶದ ಉದ್ದಗಲಗಳಲ್ಲಿ ವ್ಯಾಪಿಸಿ ಪ್ರತಿಧ್ವನಿಸಿತು. ಅಗೋಸ್ತು 12 ನೇ ತಾರೀಕು ಬಾಪೂಜಿಯ ಪಟ್ಟ ಶಿಷ್ಯ ಮಹದೇವ ದೇಸಾಯಿಯವರ ಅಕಸ್ಮಾತ್ ನಿಧನ ವಾರ್ತೆಯು ಮಿಂಚಿನ ವೇಗದಿಂದ ಹಿಂದುಸ್ಥಾನದ ಮೂಲೆ ಮೂಲೆಗೂ ನುಗ್ಗಿತು. ಮುಖಂಡರ ಬಂಧನದ ನಿಮಿತ್ತ ದೇಶ ಸರ್ವತ ಹರತಾಳ, ಸಭೆ, ಮೆರವಣಿಗೆ ಮೊದಲಾದ ನಿಷೇಧ ಪ್ರದರ್ಶನಗಳು ನಡೆಯುತ್ತಲಿದ್ದು ಈ ದುರ್ವಾರ್ತೆಯು ಉರಿಯ ಮಧ್ಯೆ ಸ್ಫೋಟವಾದಂತಾಗಿ ಜನತೆ ಇನ್ನಷ್ಟು ಕೆರಳಿ ನಿಂತಿತು.
ತೇಜನಗರದ ಗಾಂಧಿ ಮೈದಾನಿನಲ್ಲಿ ವಿದ್ಯಾಲಯಗಳಿಂದ ಹೊರಸಿಡಿದು ಬಂದಿದ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರಚಂಡ ಸಭೆ ಸೇರಿದ್ದರು. ಪಟ್ಟಣಿಗರೂ ಅದರಲ್ಲಿ ಭಾಗವಹಿಸಿದ್ದರು. ಸರಕಾರದ ದಬ್ಬಾಳಿಕೆಯನ್ನು ಖಂಡಿಸಿ ಸ್ಫೂರ್ತಿಯುಕ್ತ ಭಾಷಣಗಳಾಗುತ್ತಿದ್ದವು. ನೋಡಿದತ್ತ ಕೃಷ್ಣಮೂರ್ತಿ, ಚಂದ್ರಶೇಖರ, ಸುನಂದೆಯರ ಚಟುವಟಿಕೆಗಳೂ ಕಂಡುಬರುತ್ತಿದ್ದವು. ವಿದ್ಯಾರ್ಥಿ ಮುಖಂಡರವರು.
ಶಾಂತಿರಕ್ಷಣೆಗೆಂದು ಸ್ವತಃ ಸುಪರಿಂಟೆಂಡೆಂಟರೇ ಅಶ್ವಾರೋಹೀ ರಿಜರ್ವ್ ಪೋಲೀಸ್ ಪಡೆಯೊಡನೆ ಬಂದು ಜನ ಚದುರಲು ಹುಕುಂ ಜಾರಿ ಮಾಡಿದರು. ಸತ್ಯಾಗ್ರಹಿಗಳು ಒಂದಿನಿತೂ ಅಲುಗಾಡಲಿಲ್ಲ. ಕ್ರಮದಂತೆ ಕಾನೂನಿನಂತೆ ಗಂಡಸರಿಗೆ ‘ಲಾಥೀ ಛಾರ್ಜ್’, ಸ್ತ್ರೀಯರಿಗೆ ‘ಬೆತ್ತದೇಟು’ ಬೀಳಲಾರಂಭಿಸಿತು. ಅಹಿಂಸಾ ಪರ ಶಾಂತ ಸತ್ಯಾಗ್ರಹವೆಲ್ಲಿ? ಶಸ್ತ್ರ ಸಹಿತವಾದ ಹೋರಾಟವೆಲ್ಲಿ? ಗುಬ್ಬಿಗೆ ಹೂಡಿದ ಬ್ರಹ್ಮಾಸ್ತ್ರ! ಮತ್ತರಾದ ಪೋಲೀಸರು ಮೈದಾನನ್ನು ರಣರಂಗವೆಂದೇ ಭಾವಿಸಿ ಕೈದೊಣ್ಣೆಗಳನ್ನು ಗರಗರನೆ ತಿರುಗಿಸುತ್ತಾ ಸ್ತ್ರೀಪುರುಷರೆಂಬ ತಾರತಮ್ಯವಿಲ್ಲದೆ ಬಡಿಯತೊಡಗಿದರು. ವಿದ್ಯಾರ್ಥಿ ಮುಂದಾಳುಗಳು ರಾಷ್ಟ್ರಧ್ವಜಗಳನ್ನು ಎತ್ತಿಕೊಂಡು ಮಂದಿಯನ್ನು ಓಡಿಹೋಗದಂತೆ ‘ಜೈ’ ಕಾರಗಳಿಂದ ಹುರಿದುಂಬಿಸುತ್ತಿದ್ದರು. ಅವರೊಳಗೆ ಸ್ವಾತಂತ್ರ್ಯವೀರೆ ಸುನಂದಾದೇವಿಯ ಧೈರ್ಯವು ಅತ್ಯಂತ ಶ್ಲಾಘನೀಯವಾದುದೆಂದು ಈಗಲೂ ಜನರಾಡಿಕೊಳ್ಳುವರು.
ಘರ್ಷಣೆಗೆ ಕಸುವೇರಲು ಓರ್ವ ಪೋಲೀಸ್ ವೀರ ದರ್ಪದಿಂದ ಧಾವಿಸಿ ಬಂದು ಸುನಂದೆಯ ಬಳಿಯಲ್ಲಿದ್ದ ಒಬ್ಬ ಹುಡುಗಿಯ ತಲೆಗೆ ಲಾಥಿಯಿಂದ ಪ್ರಹಾರ ಮಾಡಿದ. ಉತ್ತರ ಕ್ಷಣ ಅವಳು ಚಟ್ಟನೆ ಚೀರಿ ಬಿದ್ದು ಬಿಟ್ಟಳು. ಈ ದೃಶ್ಯವನ್ನು ಕಂಡು ಕುಪಿತಳಾದ ಸುನಂದೆ ಕೆರಳಿದ ಕೇಸರಿಯಂತೆ ಮುಂಬರಿದು ‘ಎಲೋ ದುರಾತ್ಮಾ, ಬೆತ್ತದೇಟಿನ ಆಜ್ಞೆಯಿರಲು ಹುಡುಗಿಗೆ ದೊಣ್ಣೆಯಿಂದ ಹೊಡೆದೆಯಾ? ನಿನ್ನ ಪೊಳ್ಳು ಪೌರುಷಕ್ಕೆ ಬೆಂಕಿ ಬೀಳಲಿ’ ಎಂದು ಘರ್ಜಿಸಿದಳು. ಅದಕ್ಕೆ ಆತ – “ಹುಡುಗಿಯರಾದರೆ ಮನೆಯೊಳಗೆ ಇರಬೇಕಿತ್ತು; ಇಲ್ಲೇನು ಕೆಲಸ ನಿಮಗೆ?” ಎನ್ನುತ್ತ ದಂಡವನ್ನು ಸುನಂದೆಯ ಮಸ್ತಕಕ್ಕೆ ನೇರವಾಗಿ ಬೀಸಿದ.
ಶಹಬಾಸ್! ವೀರಾಗ್ರಣಿಯ ಕಾರ್ಯದಕ್ಷತೆಯ ಮೆಚ್ಚುವಂತಹದೆ! ನಿಜವಾದ ಕಾದಾಟವೆಂದರೆ ಇದೇ ಸೈ! ರುಂಯ್ಗುಟ್ಟಿ ಬಂದ ದೊಣ್ಣೆಯನ್ನು ಬಲಗೈಯಿಂದ ತುಡುಕಿ ಹಿಡಿದು ಸುನಂದೆಗಾಗುವ ಪ್ರಬಲ ಆಘಾತವನ್ನು ತಪ್ಪಿಸಿ ನಿಂತಿದ್ದ ಚಂದ್ರಶೇಖರ. ಏಟಿನ ಭರಕ್ಕೆ ಆತನ ಕೈಬೆರಳುಗಳ ಮಧ್ಯಭಾಗವು ಹರಿದು ರಕ್ತವು ಧಾರೆಗಟ್ಟಿ ಸುರಿಯತೊಡಗಿತು. ಕ್ರೋಧಸಂತಪ್ತವಾದ ರಿಸರ್ವ್ ವೀರನು ಅಶ್ವಾರೋಹಿಯಾಗಿಯೇ ಇದಿರಾಳಿಯ ಹಿಡಿತದಲ್ಲಿದ್ದ ದಂಡವನ್ನು ಕಸಿದು ಇನ್ನೊಂದು ಗಡುಸಾದ ‘ಛಾರ್ಜ್’ ಮಾಡಿದ. ಅದು ಶೇಖರನ ಹೆಗಲಿಗೆ ಬಿತ್ತು. ಅಷ್ಟರಲ್ಲಿ ಎತ್ತಲೋ ಇದ್ದ ಮೂರ್ತಿ ಓಡಿಬಂದು ಶೇಖರ, ಸುನಂದೆಯರನ್ನು ಹಿಂದಿಕ್ಕಿ ತಾನು ಅಶ್ವಾರೋಹಿಯ ಇದಿರಾದ.
ಪರಿಸ್ಥಿತಿಯು ವಿಷಮವಾದುದನ್ನರಿತು ಚದರಿಹೋಗಿ ರೊಚ್ಚಿಗೆದ್ದ ಜನ ಕೈಗೆ ಸಿಕ್ಕಿದ ಕಲ್ಲು ತುಂಡು ಇಟ್ಟಿಗೆ ಇತ್ಯಾದಿಗಳನ್ನು ಪೋಲೀಸ್ ಅಧಿಕಾರಿಗಳ ಮೇಲೆ ಎಸೆಯತೊಡಗಿದರು. ಕೆಲ ಮಂದಿ ಪೋಲೀಸರು ಇದರಿಂದ ಗಾಯಗೊಳ್ಳಲು ಇನ್ನು ನಿರ್ವಾಹವಿಲ್ಲವೆಂದು ಮನಗಂಡ ಸುಪರಿಂಟೆಂಡರು ‘ಫಾಯರ್’ ಅಂದುಬಿಟ್ಟರು.
ಆಜ್ಞೆಯನ್ನು ಇದಿರು ನೋಡುತ್ತಿದ್ದ ಪೋಲೀಸ್ ಪಡೆಯು ಪಿಸ್ತೂಲುಗಳನ್ನು ಹೊರಸೆಳೆದು ಜನದಟ್ಟಣೆಗೆ ಗುರಿಯಿಟ್ಟು ಗುಂಡೆಸೆಯತೊಡಗಿತು. ಕಾಗೆಯ ಹಿಂಡಿಗೆ ಕಲ್ಲು ಹಾರಿದಂತಾಯಿತು. ಇತ್ತ ಈ ವೀರತ್ರಯರನ್ನು ಸಂಧಿಸಿದ್ದ ಅಶ್ವಾರೋಹಿಯು ತನ್ನ ಪಿಸ್ತೂಲನ್ನು ಟೊಂಕದಿಂದ ಹೊರ ತೆಗೆದು ಮುಂಚೆ ಚಾಚಿದ. ಇದನ್ನು ನೋಡಿದ ಸುನಂದೆಯು ಒಡನೆ ಶೇಖರನ ರಟ್ಟೆ ಹಿಡಿದು ಬದಿಗೆಳೆದು – ‘ಮೂರ್ತೀ’ ಎಂದು ಕೂಗಿದಳು. ಅಷ್ಟರೊಳಗೆ ಗುಂಡೊಂದು ಹಾರಿ ಮೂರ್ತಿಯ ಹೆಗಲನ್ನು ಪ್ರವೇಶಿಸಿತು. ನಿಂತಲ್ಲೇ ವಾಲಿದ ಮೂರ್ತಿಯ ದೇಹವು ಚಂದ್ರಶೇಖರ ಸುನಂದೆಯರನ್ನು ಆಧರಿಸಿತು.
***
ಅಂದಿನ ಭಯಂಕರ ಗಲಭೆಯಲ್ಲಿ ಹಲವು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದರು. ಬಂಧಿತರಾಗಿ ಕಾರಾಗೃಹ ಹೊಕ್ಕರು. ಚಂದ್ರಶೇಖರನಿಗಾದ ಗಾಯಗಳಿಗಿಂತಲೂ ಮೂರ್ತಿಯ ಹೆಗಲಿಗೆ ತಗಲಿದ್ದ ಗುಂಡಿನೇಟು ಪ್ರಬಲವಾಗಿತ್ತು. ಆಸ್ಪತ್ರೆಗೊಯ್ದ ಒಂದು ವಾರದಲ್ಲಿ ಆತ ಇಹಲೋಕದ ಕೊನೆಯುಸಿರೆಳೆದ. ಸ್ಥಳೀಯ ಪತ್ರಿಕೆಗಳು ಅಂದಿನ ಅಗ್ರಲೇಖನದಲ್ಲಿ – ‘ಸ್ವಾತಂತ್ರ್ಯ ಸಮರಾಗ್ನಿಯಲ್ಲಿ ದೇಶಭಕ್ತನ ಆತ್ಮ ಸಮರ್ಪಣೆ’ ಎಂದು ಪ್ರಕಟಿಸಿದುವು. ಕೃಷ್ಣಮೂರ್ತಿಯ ಆತ್ಮವೃತ್ತವನ್ನು ಬರೆದು ಬಂಧುಬಳಗದೊಂದಿಗೆ ತಮ್ಮ ಸಹಸಂತಾಪವನ್ನು ವ್ಯಕ್ತಪಡಿಸಿ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದುವು. ವಿದ್ಯಾರ್ಥಿಗಳು ಉದ್ವಿಗ್ನರಾದರು. ಸಾರ್ವಜನಿಕರು ನಾಡಿಗಾಗಿ ದೇಹ ನೀಡಿದ ವೀರನನ್ನು ಮುಕ್ತ ಕಂಠದಿಂದ ಹೊಗಳಿ ಕಂಬನಿಗರೆದರು.
***
ಅಗೋಸ್ತು ಕಳೆದು ಸಪ್ಟೆಂಬರ್ ನಲ್ಲಿ ಮೂರು ವಾರಗಳು ಮುಗಿದಿದ್ದವು. ಚಂದ್ರಶೇಖರನ ಗಾಯಗಳು ಇನ್ನೂ ವಾಸಿಯಾಗಿರಲಿಲ್ಲ. ಸಾಲದುದಕ್ಕೆ ಜ್ವರ ಹಿಡಿದು ಬೇರೆ ಬಾಧಿಸುತ್ತಿತ್ತು. ತೇಜನಗರದ ಅತೀ ದೊಡ್ಡ ಆಸ್ಪತ್ರೆಯಾದ ವಿಕ್ಟೋರಿಯಾ ಹಾಸ್ಪಿಟಲ್ ನ ಕೊಠಡಿಯೊಂದರಲ್ಲಿ ಒರಗಿದ್ದ ಶೇಖರ. ರಾತ್ರೆ ಸುಮಾರು ಹನ್ನೊಂದು ಹೊಡೆದಿರಬಹುದು. ಮಧ್ಯಾಹ್ನ ಹತ್ತಿದ್ದ ಜ್ವರವು ಆಗ ತಾನೇ ಒಂದು ತಾಸಿನ ಮೊದಲು ಇಳಿದುದರಿಂದ ಮೈಯಲ್ಲಿ ಉಲ್ಲಾಸವಿದ್ದಿತು. ಹಾಗೆ ಮಂಚದಲ್ಲೊರಗಿಕೊಂಡು ಹಿಂದು ಮುಂದನ್ನು ಯೋಚಿಸತೊಡಗಿದ.
ಮಹಾತ್ಮಾಜಿಯ ಕರೆ, ಕಾಲೇಜಿನ ತ್ಯಾಗ, ಮುಂದೆ ನಡೆದ ಹತ್ಯಾಕಾಂಡ, ಮೂರ್ತಿಯ ಮರಣ – ಇವೆಲ್ಲವೂ ಚಲಚ್ಚಿತ್ರದಲ್ಲಿ ಪಟ ಪರಿವರ್ತನವಾದಂತೆ ಆತನ ಮುಂದೆ ಹಾಯ್ದುಹೋದವು. ಮೂರ್ತಿಯನ್ನು ನೆನೆದಾಗ ಆತನ ಕಣ್ಣುಗಳು ಅಶ್ರುಪೂರ್ಣವಾದುವು. ಆಹ – ಮೂರ್ತಿ! ದೇಶಮಾತೆಯ ಪದತಲದಲ್ಲಿ ಪ್ರಾಣ ಒಪ್ಪಿಸಿ ವೀರಸ್ವರ್ಗವನ್ನು ಸೂರೆಗೊಂಡೆ! ಧನ್ಯ ನೀನು!! ಎಂದು ಉದ್ಗರಿಸಿದ. ಅನಂತರ ಸ್ವಾತಂತ್ರ್ಯ ಧೀರೆ ಸುನಂದೆಯ ಚಿತ್ರವು ಕಾಣಿಸಿತು. ಆಗ ಅವಳ ಕುರಿತು ಶೇಖರನ ಹೃದಯದಲ್ಲಿ ಒಂದು ತೆರೆದ ಅನಿರ್ವಚನೀಯ ಅಭಿಮಾನವು ಉಕ್ಕೇರಿತು. ಆಕೆಯ ಧೈರ್ಯೋತ್ಸಾಹ, ತೇಜ ಗಾಂಭೀರ್ಯ, ನಿಲುವು ಚೆಲುವುಗಳನ್ನು ಯೋಚಿಸಿ ಅಲ್ಲೇ ತನ್ಮಯನಾದ.
ನಿನ್ನೆ ಕಾಲೇಜಿನ ಚರ್ಚಾ ಸಂಘದಲ್ಲಿ ತನ್ನೆದುರು ಭಾಗವಹಿಸಿ ವಾದಿಸಿದ ಇವಳು ಇಷ್ಟೊಂದು ಗಂಭೀರೆಯಾಗಿದ್ದಿಲ್ಲ. ಅಬ್ಬ, ಇಂದಿನ ಗಾಂಭೀರ್ಯವು ಬಹು ವಿಚಿತ್ರವಾಗಿದೆ! ಸಹಪಾಠಿಗಳ ಮಾತನ್ನು ಸುಲಭವಾಗಿ ಜಾಡಿಸಿಬಿಟ್ಟು, ಉಬ್ಬಿನಿಂದ ಬಂದಿದ್ದ ಶೇಖರ ಸುನಂದೆಯ ಇದಿರಲ್ಲಿ ತೆಪ್ಪಗಾಗಿ ಹೋದ.
ನರ್ಸ್ ಬಂದು ರಾತ್ರಿಯ ಔಷಧ ಕುಡಿಯಗೊಟ್ಟು ರೋಗಿಯ (ಚಂದ್ರಶೇಖರ) ನಾಡಿಯನ್ನು ಪರೀಕ್ಷಿಸಲು ಆತನ ಬಲಗೈಯೆತ್ತಿ ಹಿಡಿದು ನಿಂತಳು. ಕೆಲವು ಸೆಕುಂಡುಗಳು ಸರಿದವು. ನಾಡಿ ನಿರೀಕ್ಷಣೆ ಹಾಗೆಯೇ ನಡೆದಿತ್ತು. ಇದ್ದಕ್ಕಿದ್ದಂತೆಯೇ ಶೇಖರ ಭಾವ ಸಮಾಧಿಯಿಂದ ಎಚ್ಚತ್ತು ನರ್ಸಮ್ಮನ ಮೊಗ ನೋಡಿದ. ಇಷ್ಟು ದಿನ ಬರುತ್ತಿದ್ದವಳಲ್ಲ ಈಕೆ ಹೊಸಬಳು. ಎಲ್ಲಿಯೋ ನೋಡಿದಂತಿದೆ ಮುಖ. ಶಂಕಾತುರನಾಗಿ ದೃಷ್ಟಿಯೆತ್ತಿ ನೋಡಿದ. ಪೂರ್ಣಚಂದ್ರಿಕೆಯ ಚೆಲುವಿನಲ್ಲಿ ಆಗ ತಾನೇ ವಿಕಸಿತವಾಗಿ ನಸುಗಾಳಿಗೆ ಕಂಪಿಸುವ ಮಲ್ಲಿಕಾ ಗುಚ್ಛವನ್ನು ಹೋಲುತ್ತಿತ್ತು ವದನ ಮಂಡಲ. ಮನಸ್ಸಿನೊಳಗೆ ಏನನ್ನೋ ತಿಳಿದು ನಸುನಾಚಿ ಮುಖ ತಗ್ಗಿಸಿದಾತ ಮತ್ತೊಮ್ಮೆ ನೋಡಿದ. ನಾಲ್ಕು ದೃಷ್ಟಿಗಳು ಮಿಲನವಾದುವು. ಒಡನೆ ಚಂದ್ರಶೇಖರನ ದೇಹದಲ್ಲಿ ವಿದ್ಯುತ್ ಸಂಚಾರವಾಯಿತು. ‘ಸುನಂದೆ!’ ವಿಸ್ಮಯ ಮೂಕನಾದ ಅವನ ಬಾಯಿಯಿಂದ ಮಾತು ಹೊರಬಿತ್ತು. “ಸುನಂದಾ, ನನ್ನ ಪ್ರಾಣರಕ್ಷಕಿ” ಎನ್ನುತ್ತ ಒರಗಿದಲ್ಲಿಂದ ಏಳಲು ಯತ್ನಿಸಿದ. ನಾನೀಗ ಕಾಣುತ್ತಿರುವುದು ಕನಸಲ್ಲವಷ್ಟೆ ತನ್ನ ಕಣ್ಣುಗಳನ್ನೇ ನಂಬದಾದ ಶೇಖರ.
“ಏಳಲು ಪ್ರಯತ್ನಿಸಬಾರದು. ಆಗಸ್ಟ್ ವೀರರಿಗೆ ಮತ್ತೆ ಆಯಾಸವಾದೀತು” ಎಂದು ತನ್ನ ಶಿರೋದುಪ್ಪಟವನ್ನು ಬಿಚ್ಚಿದಳು ನರ್ಸ್. ಅಹುದು – ತಾನು ಧ್ಯಾನಿಸುತ್ತಿದ್ದ ದೇವಿಯು ಪ್ರತ್ಯಕ್ಷಳಾಗಿದ್ದಾಳೆ! ಕ್ಷಣದೊಳಗೆ ಶೇಖರನ ಮಿದುಳಲ್ಲಿ ಹತ್ತು ಹಲವು ಬಗೆಯ ವಿಚಾರಗಳು ಮಿಂಚಿ ಮಾಯವಾದವು. ಇದುವರೆಗೆ ಆತನರಿಯದ ಅನುಭವ ರಶ್ಮಿಯೊಂದು ಹೃದಯ ಪ್ರವೇಶಿಸಿತ್ತು. ‘ಅಗಸ್ಟ್ ವೀರೆ, ನೀನಿಲ್ಲಿಗೆ ಹೇಗೆ ಬಂದೆ! ಇದೇನು ಅವತಾರ?’ ಕುತೂಹಲಾಶ್ಚರ್ಯಗಳಿಂದ ಪ್ರಶ್ನಿಸಿದ ಶೇಖರ.
“ನನ್ನ ದೊಡ್ಡಮ್ಮನ ಮಗಳು ತಮ್ಮ ನರ್ಸ್. ಅವಳ ಸಹಾಯದಿಂದ ನನ್ನ ಪ್ರಯತ್ನವು ಕೈಗೂಡಿತು. ಈಗ ಹೇಗಿದೆ ಜ್ವರ, ಕೈ ಗಾಯವು ವಾಸಿಯಾಯಿತೇ?” ಎಂದು ಪ್ರಶ್ನಿಸುತ್ತ ಹತ್ತಿರದಲ್ಲಿದ್ದ ಆಸನದಲ್ಲಿ ಕೂತಳು ಸುನಂದೆ.
ಶೇಖರ ಆಕೆಯ ಯುಕ್ತಿ ಸಾಹಸಗಳಿಗೆ ತಲೆದೂಗಿದ. ತನ್ನ ಯೋಗಕ್ಷೇಮದಲ್ಲಿ ಇಷ್ಟೊಂದು ಆಸಕ್ತಿ ವಹಿಸಿದುದನ್ನು ಯೋಚಿಸುತ್ತ ಸುನಂದೆಯ ಬಗ್ಗೆ ಆತನ ಹೃದಯದಲ್ಲಿ ಸುಪ್ತವಾಗಿದ್ದ ಒಲುವೆಯು ಬುಗ್ಗೆಯೊಡೆಯಿತು.
“ಆ ದಯಾಘನನ ಕೃಪೆಯಿಂದ ನಾನು ಕ್ಷೇಮವಾಗಿದ್ದೇನೆ. ಆದರೆ…. ಆದರೆ ಸುನಂದಾ!” ಶೇಖರನ ಕಂಠವು ಗದ್ಗದಿತವಾಯಿತು. ಮುಂದೆ ಮಾತು ಹೊರಡಲಿಲ್ಲ. ಎವೆಯಿಕ್ಕದೆ ಆಕೆಯನ್ನು ನೋಡತೊಡಗಿದ. ಆ ಬಿಟ್ಟ ಕಂಗಳಲ್ಲಿ ಕೃತಜ್ಞತೆಯು ಮೌನವಾಗಿ ಮಿನುಗುತ್ತಿತ್ತು.
‘ಆದರೆ ಏನು? ಹೇಳಬಾರದೆ? ಮೌನವೇಕೆ?’
‘ಈ ಚಂದ್ರಶೇಖರನ ಮೇಲೆ ಸುನಂದಾದೇವಿಯ ಕೃಪೆಯು ಅತಿ ಅಮೂಲ್ಯವಾಗಿರುವುದು.’
‘ಛೀ ಇದೇನು ಮಾತು. ಅಸ್ವಸ್ಥವಿದ್ದವರ ದೇಹಾರೋಗ್ಯವನ್ನರಿಯುವುದು ಅದೊಂದು ಕೃಪೆಯೇ? ಅಂದು ಪೋಲೀಸ್ ದಂಡವನ್ನು ತಡೆಗಟ್ಟಿದುದು ಮಾತ್ರ ನಿಜವಾದ ಕೃಪೆಯನ್ನಬಹುದು.’
‘ಅದು ನನ್ನಿದಿರಲ್ಲಿ ಮಿಂಚಿದ ಕರ್ತವ್ಯ ವಿಭಾಗವಷ್ಟೆ; ಮತ್ತೇನೂ ಇದ್ದಿಲ್ಲ. ಆದರೆ ಬಾಯ್ದೆರೆದು ಬಂದ ಮೃತ್ಯುವಿನಿಂದ ತಪ್ಪಿಸಿದವರಾರು?’
‘ಏನು ಫಲ? ಮೂರ್ತಿ ಆಹುತಿಯಾಗಿಬಿಟ್ಟನಲ್ಲ!’
‘ಅಹುದು. ಆತನೇ ಆಗಸ್ಟ್ ವೀರ. ದೇಶಮಾತೆಯ ಪುಣ್ಯಸ್ಥಾನವನ್ನು ಸಾರ್ಥಕಗೊಳಿಸಿದ ಸ್ವಾತಂತ್ರ್ಯಯೋಧ.’ ನಿಟ್ಟುಸಿರುಗಳೆರಡು ಒಂದರ ಹಿಂದೊಂದಾಗಿ ಹೊರಟು ಕೊಠಡಿಯ ವಾಯುವಿನಲ್ಲಿ ಲೀನವಾದುವು.
‘ವಿದ್ಯಾರ್ಥಿಗಳ ಹೃದಯದಲ್ಲಿ ಕ್ರಾಂತಿಯನ್ನು ಊದಿದಾತ’ ಎಂದಳು ಸುನಂದೆ.
‘ಆದರೆ ಚಂದ್ರಶೇಖರನಲ್ಲಿ ನವಸ್ಫೂರ್ತಿಯನ್ನು ತುಂಬಿದವರಾರೆಂದು ಬಲ್ಲೆಯೋ?’ ಶೇಖರನ ಪ್ರಶ್ನೆ.
‘ಆತನು ತಾನೇ; ಕೃಷ್ಣಮೂರ್ತಿ.’
‘ಅಲ್ಲ, ಆತನಲ್ಲ.’
‘ಮತ್ತಾರು?’ ಸುನಂದೆ ತಲೆ ಎತ್ತಿ ಶೇಖರನ ಮೊಗ ನೋಡಿದಳು. ಆಕೆಯ ಚಂಚಲ ನೇತ್ರಗಳು ಆವುದೋ ಒಂದು ವಿಷಯವನ್ನು ರಹಸ್ಯವಾಗಿಡಲು ಹವಣಿಸುತ್ತಿದ್ದವು. ಮುಖ ಮುದ್ರೆಯಲ್ಲಿ ಮುಗ್ಧತೆಯ ಕೌಟಿಲ್ಯವಿತ್ತು.
‘ಅವರನ್ನು ಹುಡುಕಲು ಪ್ರಯಾಸವಿದೆಯೇ? ಇದಿರಲ್ಲೇ ಪ್ರತ್ಯಕ್ಷವಾಗಿರುವಾಗ’ ಸುನಂದೆಯು ಅವನತಮುಖಿಯಾದಳು.
‘ಸಾಕು ಉತ್ಪ್ರೇಕ್ಷೆಯೇಕೆ? ನನ್ನಿಂದ ಏನಾದೀತು? ನಾನು ಅಬಲೆಯಲ್ಲವೇ?’
‘ಅಹುದು ಅಬಲೆ! ರಾಜಕೀಯ ಕೈದಿಯನ್ನು ಸಂದರ್ಶಿಸಲು ಸರಕಾರದ ಪ್ರತಿಬಂಧವಿರುವಾಗ ನರ್ಸಿನ ವೇಷ ತಳೆದ ನೀನು ಅಬಲೆ! ಇರಲಿ’ ಶೇಖರನ ಕೈ ನಾಡಿಯು ಏನೆಂದು ನುಡಿಯುತ್ತಿತ್ತಾಗ?
‘ಏನೂ ಇಲ್ಲ! ಸುಖ ಸ್ಪಂದನವಿತ್ತು ಅದರಲ್ಲಿ.’
‘ಆಗ ಅದು ಸುನಂದಾ, ಸುನಂದಾ ಎನ್ನುತ್ತಿರಲಿಲ್ಲವೇ?’
ಶೇಖರನ ದೃಷ್ಟಿಯೂ ಸುನಂದೆಯ ಮೊಗದಾವರೆಯಲ್ಲಿ ನೆಟ್ಟಿತ್ತು.
ಸುನಂದೆಯು ಲಜ್ಜಿತಳಾಗಿ ಅವುಡುಗಚ್ಚಿ ಆತನನ್ನೊಮ್ಮೆ ಕಡೆಗಣ್ಣಿನಿಂದ ನೋಡಿ ತಲೆವಾಗಿದಳು. ಗಲ್ಲಗಳು ಕೆಂಪೇರಿದವು.
ಶೇಖರನು ಕುಳಿತಲ್ಲಿಂದ ಎದ್ದು ಸುನಂದೆಯನ್ನು ಸಮೀಪಿಸಿ, ‘ನನ್ನ ಸುಪ್ತ ಹೃದಯವನ್ನು ಜಾಗೃತಗೊಳಿಸಿದ ದೇವಿ! ನನ್ನ ಪ್ರಾಣ ಪ್ರಿಯೆ! ನಿನ್ನಲ್ಲಿ ಒಂದು ಭಿಕ್ಷೆಯನ್ನು ಯಾಚಿಸುತ್ತೇನೆ. ಅನುಗ್ರಹಿಸುವೆಯಾ?’
‘ಅದೇನಿರಬಹುದು?’
‘ಪ್ರೇಮ ಭಿಕ್ಷೆ! ಮುಂದಕ್ಕೆ ನನ್ನ ಜೀವನ ನೌಕೆಯನ್ನು ದೇಶ ಸೇವೆಯೆಂಬ ಮಹಾನದಿಗೆ ತಳ್ಳಲು ಸಂಕಲ್ಪಿಸಿದ್ದೇನೆ. ಅದರ ನಾಯಕಿಯಾಗಿ ದಡ ಕಾಣಿಸುವವಳು ನಿನ್ನ ಹೊರತು ಅನ್ಯರಿಲ್ಲ. ನೀನೊಲಿದರೆ ಈ ಜೀವನವು ಜೀವಂತವೆನಿಸುವುದು.’
ಅಹ! ಬಯಸಿದ ಹಾರವು ಕೊರಳಲ್ಲಿ ಶೋಭಿಸಿದಂತಾಯಿತು. ಸುನಂದೆಯ ನಯನಗಳಲ್ಲಿ ಬಾಷ್ಪಬಿಂದುಗಳುದುರಿದುವು. ಗುಣ ಹೊಂದಿರುತ್ತಿರುವ ಶೇಖರನ ಗಾಯದ ಹಸ್ತವನ್ನು ಪ್ರೇಮವ್ಯಂಜಕ ಭಕ್ತಿಭಾವದಿಂದ ಕುಸುಮದೋಪಾದಿಯಲ್ಲಿ ಎತ್ತಿ ಹಿಡಿದು – ‘ಈ ಗಾಯವು ಸಾಮಾನ್ಯವಾದುದಲ್ಲ, ಇದು ಇಲ್ಲಿ ತೋರಿದ ಪರಕ್ಷಣದಲ್ಲಿ ನನ್ನ ಹೃತ್ಪಟಲದ ಮೇಲೆ ತಮ್ಮ ಮೋಹನ ಮೂರ್ತಿಯು ಪ್ರತಿಷ್ಠಿತವಾಯಿತು. ಅದರ ಸಾಕ್ಷಾತ್ಕಾರ ಹೊಂದಲು, ಕಣ್ಮುಚ್ಚಿ ನೋಡಲು, ಮನ ತಣಿದು ಕುಣಿದಾಡಲು ಈ ವೇಷದಲ್ಲಿ ಇತ್ತ ಬಂದೆ. ಹಾಗಾದರೆ ನಿಜವಾಗಿಯೂ ನಾನು ನಿಮ್ಮವಳೇ?’
‘ಸಂದೇಹವೇಕೆ? ಎಂದೆಂದಿಗೂ ನೀನು ನನ್ನವಳು!’ ಎನ್ನುತ್ತ ಚಂದ್ರಶೇಖರ ತನ್ನ ಬೆರಳುಂಗುರವನ್ನು ಸುನಂದೆಗೆ ತೊಡಿಸಿದನು.ಹನ್ನೆರಡು ಗಂಟೆಯು ಕೇಳಿಸಿತು. ಸುನಂದೆ ಬಡಿದೆಬ್ಬಿಸಿದಂತಾಗಿ,
‘ಶೇಖರ್, ಹನ್ನೆರಡಾಯಿತು. ಈಗ ನಾನು ಹೊರಡಬೇಕು. ಸೋದರಿಯು ಹೊರಗೆ ಕಾದಿರುವಳು.’
‘ಪುನರ್ಮಿಲನವೆಂದು?….’
‘ಪುನರ್ಮಿಲನ!’ ಆಸ್ಪತ್ರೆಯ ಮಂಚದಿಂದ ಮುಂದಕ್ಕೆ ಕಾರಾಗೃಹದ ಪಂಜರವನ್ನು ಪ್ರವೇಶಿಸಲಿದ್ದೇನೆ. ಆಗ ನನ್ನನ್ನು ಕಾಣಲು ಯತ್ನಿಸಬೇಡ. ಅಪಘಾತವಾದೀತು. ಬಿಡುಗಡೆಯಾದ ಮರುದಿವಸ ಆ ‘ಆಗಸ್ಟ್ ವೀರ’ ನ ಸಮಾಧಿಯ ಸನಿಹದಲ್ಲಿ ವಿದ್ಯಾರ್ಥಿಗಳ ನೆರವಿನಲ್ಲಿ – ತುರಂಗ ಸಿಂಹಗಳ ಮಧ್ಯದಲ್ಲಿ – ರಾಷ್ಟ್ರ ಧ್ವಜದ ಸುಂದರಛಾಯೆಯಲ್ಲಿ ಪುನರ್ಮಿಲನ!’
(ರಾಷ್ಟ್ರಬಂಧು : 1946)
****
ಟಿಪ್ಪಣಿ:
ಸಿಕಂದರ್ ಕಾಪು: ಸಿಕಂದರ್ ಕಾಪು ಎಂಬ ಹೆಸರಿನಲ್ಲಿ ಸಣ್ಣ ಕತೆಗಳನ್ನು ಬರೆಯುತ್ತಿದ್ದ ಇವರ ಪೂರ್ಣ ಹೆಸರು ಹುಸೇನ್ ಸಾಹೇಬ್ ಕೆ. ಕಾಪು. ಇವರು ವೃತ್ತಿಯಲ್ಲಿ ದಫೇದಾರ್ ಆಗಿದ್ದರು. ಬೇರೆ ವಿವರಗಳು ಲಭ್ಯವಿಲ್ಲ. ಸರಕಾರಿ ಉದ್ಯೋಗಸ್ಥರಾಗಿದ್ದ ಇವರು ಗುಪ್ತನಾಮದಿಂದ ಬ್ರಿಟಿಷ್ ಸರಕಾರಕ್ಕೆ ವಿರೋಧಿಯಾದ, ದೇಶಪ್ರೇಮವನ್ನು ಪ್ರೇರೇಪಿಸುವ ಕತೆಗಳನ್ನು ಬರೆದಿರುವುದು ವಿಶೇಷವಾಗಿದೆ.
ಈ ಕತೆ ಮತ್ತು ಮುಂದಿನ ಕತೆಗಳು ನಡೆಯುವ ಕಾಲಾವಧಿಯಲ್ಲಿ ದೇಶದ ಪರಿಸ್ಥಿತಿ ಹೇಗಿತ್ತೆನ್ನುವ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಕೆಳಗೆ ಕೊಡಲಾಗಿದೆ:
ವಿಶ್ವ ಯುದ್ಧಗಳು, ಕಾಂಗ್ರೆಸ್ ಮಂತ್ರಿಮಂಡಳ ಇತ್ಯಾದಿ : 1914 ರಿಂದ 1919 ರವರೆಗೆ ನಡೆದ ಮೊದಲನೆಯ ಮಹಾಯುದ್ಧ ಮತ್ತು 1939 ರಿಂದ 1945 ರವರೆಗೆ ನಡೆದ ಎರಡನೆಯ ಮಹಾಯುದ್ಧದ ಕಾಲದಲ್ಲಿ ನಮ್ಮ ಜನಗಳು ಆಹಾರದ ಅಭಾವದಿಂದ ರೇಷನ್ ಪದ್ಧತಿಯ ಬವಣೆಯನ್ನು ಅನುಭವಿಸಿದರು. ಇತಿಹಾಸ ಪಾಠಗಳಲ್ಲಿ ಹೃದಯವನ್ನು ಸ್ಪರ್ಶಿಸದ ಈ ಕಾಲದ ಬವಣೆಗಳ ಚಿತ್ರಣ ಹಲವು ಕತೆಗಳಲ್ಲಿ ದೊರಕುತ್ತವೆ.
1935 ರಲ್ಲಿ ಬಂದ ರಿಫಾಮ್ರ್ಸ್ ಆ್ಯಕ್ಟ್ ಶಾಸನದಂತೆ ರಾಜಕೀಯ ಸುಧಾರಣೆಗಳು ಆದವು. ಶಾಸನ ಸಭೆಗಳಿಗೆ ಚುನಾವಣೆ ನಡೆಸಿ ಸ್ಥಳೀಯ ರಾಜಕೀಯ ಪಕ್ಷಗಳ ಮೂಲಕ ಆಡಳಿತ ನಡೆಸಲು ಬ್ರಿಟಿಷರು ಮುಂದಾದರು. ಆಗ ಶಾಸನ ಸಭೆಗಳಿಗೆ ನಡೆದ ಚುನಾವಣೆಗಳಲ್ಲಿ ಭಾಗವಹಿಸಿದ ಕಾಂಗ್ರೆಸ್ ಮದ್ರಾಸಿನಲ್ಲಿ ಅಧಿಕಾರ ಹಿಡಿಯಿತು. ಡಾಕ್ಟರ್ ಎ. ಬಿ. ಶೆಟ್ಟಿಯವರು ಮದ್ರಾಸ್ ಸಂಪುಟದಲ್ಲಿ ಸಚಿವರಾಗಿದ್ದರು. ಆದರೆ 1939 ರಲ್ಲಿ ಬ್ರಿಟಿಷ್ ಸರಕಾರ ಜರ್ಮನಿಯ ವಿರುದ್ಧ ಯುದ್ಧ ಘೋಷಿಸಿದಾಗ ಭಾರತದ ಜನತಾ ಮಂತ್ರಿಮಂಡಳಗಳ ಅಭಿಪ್ರಾಯ ಕೇಳದೆ ಭಾರತವೂ ಜರ್ಮನಿಯ ವಿರುದ್ಧ ಯುದ್ಧ ಸಾರಿದೆ ಎಂದು ಘೋಷಿಸಿತು. ಇದನ್ನು ಖಂಡಿಸಿದ ಕಾಂಗ್ರೆಸ್ ಸಂಪುಟಗಳು ರಾಜೀನಾಮೆ ನೀಡಿದವು. ಮದ್ರಾಸ್ ಮಂತ್ರಿಮಂಡಳದಲ್ಲಿ ಮುಖ್ಯಮಂತ್ರಿಯಾಗಿದ್ದ ರಾಜಾಜಿಯವರೂ ಬಂಧನಕ್ಕೊಳಗಾದರು. 1942 ರಲ್ಲಿ ‘ಭಾರತದಿಂದ ತೊಲಗಿ’ (ಕ್ವಿಟ್ ಇಂಡಿಯಾ) ಕಾರ್ಯಕ್ರಮದಂತೆ ‘ಮಾಡು ಇಲ್ಲವೆ ಮಡಿ’ ಹೋರಾಟ ಕಾಂಗ್ರೆಸಿಗರಿಂದ ಪ್ರಾರಂಭವಾಯಿತು. ಸರಕಾರ ವಿರೋಧ ಕಛೇರಿಗಳಿಗೆ ಬೆಂಕಿ ಹಚ್ಚುವುದು ಮುಂತಾದ ವಿವಿಧ ವಿಧ್ವಂಸಕ ಕೃತ್ಯಗಳ ಮೂಲಕವೂ ಹಬ್ಬತೊಡಗಿತು.
ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82.