ವರ್ಷಕ್ಕೊಮ್ಮೆ ಶರಾಬು, ಶೇಂದಿ ಅಂಗಡಿಗಳ ಏಲಂ ನಡೆಯುತ್ತಿತ್ತು. ಆಗ ಪತ್ರಿಕೆಗಳು, ರೇಡಿಯೋ ಯಾವುದೂ ಇರಲಿಲ್ಲ. ಬರೇ ಟಂಕಿನಿಶಿ ಮಾಡುತ್ತಿದ್ದರು ಅಥವಾ ಪಟೇಲರ ಚಾವಡಿಗೆ ನೋಟೀಸು ಹೋಗುತ್ತಿತ್ತು. ಅಬಕಾರಿ ಇಲಾಖೆಯವರು ಗುತ್ತಿಗೆದಾರರಿಗೆ ತಿಳಿಸುತ್ತಿದ್ದರು. ಆದರೆ ನೆರಿಯದಂತಹ ಮೂಲೆಯ ಗ್ರಾಮಕ್ಕೆ ಸುದ್ದಿ ಮುಟ್ಟಿಸುವುದು ಅಬಕಾರಿ ಇಲಾಖೆಗೆ ಸಮಸ್ಯೆಯೇ ಆಗುತ್ತಿತ್ತು. ಆದುದರಿಂದ ಈ ಭಾಗದ ಜನರಲ್ಲಿ ಬಾಯ್ದೆರೆ ಹೇಳಿ ಕಳುಹಿಸಲಾಗುತ್ತಿತ್ತು. ಆದರೆ ಗ್ರಾಮದಲ್ಲಿ ಪ್ರತಿಸ್ಪರ್ಧಿಗಳಿದ್ದರೆ ಎದುರಿನವರಿಗೆ ಏಲಂನ ವಿಚಾರ ತಿಳಿಸದೆ ಕಮ್ಮಿಗೆ ಬಿಡ್ಡು ಮಾಡುವ ಅನ್ಯಾಯವೂ ನಡೆಯುತ್ತಿತ್ತು.
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುವ ಓಬಿರಾಯನಕಾಲದ ಕಥಾಸರಣಿಯಲ್ಲಿ ಬಿ. ತಮ್ಮಯ ಬರೆದ ಕಥೆ ‘ದೊರೆಗಳ ದರ್ಬಾರು ಮತ್ತು ಗಾಂಧೀಜಿಯವರ ಪ್ರಭಾವ’ ನಿಮ್ಮ ಓದಿಗೆ
ನಮ್ಮ ತಂದೆಯವರು ಮೊದಲು ಬೆಳ್ತಂಗಡಿ ತಾಲೂಕಿನ ಬಂಗಾಡಿಯ ಬಳಿ ಇರುವ ನಾವೂರ ಗ್ರಾಮದಲ್ಲಿ ವಾಸವಾಗಿದ್ದರಂತೆ. ನಾವೂರ ಗ್ರಾಮದ ಉತ್ತರಕ್ಕೆ ಕಾಡಿನ ಮಧ್ಯೆ ಮಲವಂತಿಗೆ ಎಂಬ ಗ್ರಾಮ ಇದೆ. ಈ ಮಲವಂತಿಗೆ ಗ್ರಾಮದಲ್ಲಿ ಬ್ರಿಟಿಷ್ ಕಾಲದಲ್ಲಿ ಒಂದು ಬಂಗ್ಲೆ ಇತ್ತು. ಬ್ರಿಟಿಷರ ಬಂಗ್ಲೆಗಳು ಗುಡ್ಡ ಮತ್ತು ಕಾಡಿನ ಮಧ್ಯೆ ಇರುತ್ತಿದ್ದವು. ಬೇಸಿಗೆಯ ಸೆಕೆಯನ್ನು ತಡೆಯುವುದಕ್ಕೆ ಇಂತಹ ಸ್ಥಳವನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಮಲವಂತಿಗೆಗೆ ಬಂಗಾಡಿಯಿಂದ ಕಾಲು ದಾರಿ ಮಾತ್ರ ಇತ್ತು. ಇತ್ತೀಚೆಗೆ ಉದಯವಾಣಿ ಕುಗ್ರಾಮವೆಂದು ಈ ಗ್ರಾಮವನ್ನು ಆಯ್ಕೆ ಮಾಡಿತ್ತು. ಸಂಸೆಯ ಮೂಲಕ ಇಲ್ಲಿಗೆ ರಸ್ತೆ ಇತ್ತು.
ನಾವೂರ ಗ್ರಾಮದ ಮನೆಯಲ್ಲಿ ಪ್ರತಿದಿನ ಹಾಳೆಯ ಬುತ್ತಿ ಕಟ್ಟಿ ಮನೆ ಮುಂದೆ ತೂಗುಹಾಕುತ್ತಿದ್ದರಂತೆ. ಪಟೇಲರಿಂದ ಕರೆ ಬಂದಾಕ್ಷಣ ಮನೆಯ ಯುವಕನೋರ್ವ ಈ ಬುತ್ತಿ ಹಿಡಿದುಕೊಂಡು ಹೋಗಬೇಕು. ಪಟೇಲರ ಮನೆಗೆ ಬಂದ ದೊರೆಗಳನ್ನು ಮೇಣೆಯಲ್ಲಿ ಹೊತ್ತು ಮಲವಂತಿಗೆಗೆ ಸಾಗಿಸುತ್ತಿದ್ದರಂತೆ. ಕೆಲವರು ದೊರೆಗಳನ್ನು ಹೊರುವುದಕ್ಕಾದರೆ ಇನ್ನು ಕೆಲವರು ಅವರ ಸಾಮಾನು ಸರಂಜಾಮುಗಳನ್ನು ಕೊಂಡುಹೋಗುವುದಕ್ಕೆ. ಅಂತೂ ದೊರೆಗಳನ್ನು ಅಲ್ಲಿ ಬಿಟ್ಟು, ತಾವು ಒಯ್ದ ಬುತ್ತಿಯಿಂದ ಊಟಮಾಡಿ ವಾಪಾಸು ಬರಬೇಕು. ಮತ್ತೆ ಅವರು ಹೇಳಿದ ದಿನ ಹೋಗಿ ಅವರನ್ನು ಹೊತ್ತು ತರಬೇಕಿತ್ತಂತೆ. ಇದು ಈ ಜನರ ಸಂಬಳ ರಹಿತ ಸೇವೆ. ದೊರೆಗಳು ಮಲವಂತಿಗೆಯಲ್ಲಿ ಬೇಟೆಯಾಡಿ ಮಾಂಸದ ಊಟ, ಕುಡಿತ ಇತ್ಯಾದಿಗಳಿಂದ ತೃಪ್ತಿಗೊಂಡು ಹಿಂತಿರುಗುತ್ತಿದ್ದರಂತೆ.
ನಾವೂರದಿಂದ ತಂದೆಯವರು ತೋಟತ್ತಾಡಿ ಗ್ರಾಮಕ್ಕೆ, ಅಲ್ಲಿಂದ ನೆರಿಯ ಗ್ರಾಮದ ಬಯಲುಪಾದೆ ಮನೆಗೆ ಬಂದರು. ತಂದೆಯವರು ಒಳ್ಳೆಯ ಕೃಷಿಕರು ಮತ್ತು ಒಳ್ಳೆಯ ಮೂರ್ತೆದಾರರಾಗಿದ್ದರು. ಅವರು ಕೃಷಿ ಮಾಡುವ ಗದ್ದೆ, ಹುಣಿಗಳನ್ನು ನೋಡಿದರೆ ಅವರ ಶಿಸ್ತುಬದ್ಧ ಕೃಷಿ ಕೆಲಸದ ಪರಿಚಯವಾಗುತ್ತಿತ್ತು. ಗದ್ದೆಯು ಎತ್ತರ ತಗ್ಗು ಇಲ್ಲದೆ ಸಮತಟ್ಟಾಗಿರುತ್ತಿತ್ತು. ಹುಣಿಯು ಅಗಲವಾಗಿ ಹುಲ್ಲುಗಳನ್ನು ಕತ್ತರಿಸಿ ನಡೆದಾಡಲು ಅನುಕೂಲವಾಗಿತ್ತು. ಸುಗ್ಗಿಯಲ್ಲಿ ಎಲ್ಲಾ ಹುಣಿಗಳಿಗೆ ಗದ್ದೆಯ ಮಣ್ಣು ಹಾಕಿ ಹಾರೆಯಿಂದ ಒತ್ತಿ ಚಂದಗೊಳಿಸುತ್ತಿದ್ದರು. ಹಾರೆಗಳಾಗಲಿ, ಪಿಕ್ಕಾಸು, ಸಬ್ಬಲು, ಕತ್ತಿ ಎಲ್ಲವೂ ಒಪ್ಪ ಓರಣವಾಗಿರಬೇಕು. ಅವರು ಮೂರ್ತೆ ಮಾಡುವ ಕತ್ತಿಯ ಹಿಡಿಗೆ ಬೆಳ್ಳಿಯ ಕವಚ ಇತ್ತು. ಮೂರ್ತೆಗೆ ಉಪಯೋಗಿಸುವ ಎರಡು ತುಂಡು ಕೋಲು – ಇದು ತಾಳೆ ಮರದ ತಿರುಳಿನಿಂದ ಮಾಡಿದ್ದು – ಇದರ ತುದಿಗೆ ಬೆಳ್ಳಿಯ ಕವಚ ಇತ್ತು. ಕೈಲುಗುದ್ದುವ ಕಲ್ಲು – ಅದರ ತುದಿಗೆ ಮುಗುಳಿನಂತೆ ಕುಸುರಿ ಕೆಲಸದ ಬೆಳ್ಳಿ ಕವಚ ಇತ್ತು. ಅವರು ಹಿಂದೆ ನಶ್ಯ ಹಾಕುತ್ತಿದ್ದರಂತೆ. ಅವರ ನಶ್ಯದ ಬುರುಡೆಗಳೂ ಬೆಳ್ಳಿಯಿಂದ ಮುಚ್ಚಿರುತ್ತಿದ್ದವು. ನಮಗೆ ಬುದ್ದಿ ತಿಳಿಯುವಾಗ ಅವರು ನಶ್ಯದಿಂದ ಎಲೆ ಅಡಿಕೆಗೆ ಬದಲಾಗಿದ್ದರು. ಅವರ ಬೆಳ್ಳಿಯ ಈ ಸೊತ್ತುಗಳು ಅವರ ನೆನಪಿಗಾಗಿ ಈಗಲೂ ನನ್ನ ಹತ್ತಿರ ಇವೆ.
ಅವರ ಶಿಕಾರಿಯ ನೆನಪಿಗಾಗಿ ಹಂದಿಯ ದಾಡೆಗಳು ಬೆಳ್ಳಿಯಿಂದ ಕಟ್ಟಿದ್ದು – ತುಂಬಾ ದೊಡ್ಡ ದಾಡೆಗಳು – ನನ್ನ ‘ಶೋ’ ಕಪಾಟಿನಲ್ಲಿ ಈಗಲೂ ಇವೆ. ಅಂದರೆ ಅವರು ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದರು; ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಅಲ್ಲದೇ ಅವರಿಗೆ ಎಲ್ಲವೂ ಸೊಗಸಾಗಿರಬೇಕಿತ್ತು, ಶ್ರೀಮಂತವಾಗಿರಬೇಕಿತ್ತು!
ನನ್ನ ತಂದೆಯವರು ಬ್ರಿಟಿಷರ ಕಾಲದಲ್ಲಿ ಶೇಂದಿ, ಶರಾಬು ಅಂಗಡಿಗಳ ಗುತ್ತಿಗೆದಾರರಾಗಿದ್ದರು ಎಂದು ಆಗಲೇ ಹೇಳಿದ್ದೇನೆ. ಅವರ ಕಲೆಂಬಿಯಲ್ಲಿ (ಹಿಂದೆ ಮರದ ದೊಡ್ಡ ಪೆಟ್ಟಿಗೆಯನ್ನು ಕಲೆಂಬಿ ಎನ್ನುತ್ತಿದ್ದರು.) ಗುತ್ತಿಗೆಯ ಲೆಕ್ಕ ಪತ್ರಗಳು ಇತ್ತೀಚಿನವರೆಗೂ ಇದ್ದವು. ಓದು ಬರಹ ಇಲ್ಲದೇ ಇದ್ದರೂ ಗುತ್ತಿಗೆಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ವ್ಯವಸ್ಥಿತವಾಗಿ ಬರೆಯಿಸಿ ಜೋಪಾನವಾಗಿ ಇಟ್ಟಿದ್ದರು.
ಕೊರುಂಗೆಜಾಲು ಎಂಬಲ್ಲಿ ನಾಡು ಪೂಜಾರಿ ಎಂಬವರು ಇದ್ದರು. ಇವರು ಕೂಡ ಗುತ್ತಿಗೆದಾರರಾಗಿದ್ದರು. ತಂದೆಯವರು ಮತ್ತು ಇವರು ಪ್ರತಿಸ್ಪರ್ಧಿಗಳಾಗಿದ್ದರು. ತಂದೆಗೆ ಶೇಂದಿ ಅಂಗಡಿ ಸಿಕ್ಕಿದರೆ ಅವರಿಗೆ ಶರಾಬು ಅಂಗಡಿ. ಇವರಿಗೆ ಶರಾಬು ಅಂಗಡಿ ಸಿಕ್ಕಿದರೆ ಅವರಿಗೆ ಶೇಂದಿ ಅಂಗಡಿ. ಹೀಗೆ ಒಂದಲ್ಲ ಒಂದನ್ನು ಇಬ್ಬರೂ ಸ್ವಾದೀನ ಮಾಡಿಕೊಳ್ಳುತ್ತಿದ್ದರು.
ಶರಾಬನ್ನು ತಾಲೂಕು ಕೇಂದ್ರದಿಂದ ಹೊತ್ತು ತರಬೇಕು. ಆಗ ಬೆಳ್ತಂಗಡಿ ತಾಲೂಕು ಇರಲಿಲ್ಲ. ಮೊದಲಿಗೆ ಉಪ್ಪಿನಂಗಡಿ ತಾಲೂಕು; 1883ರ ಅನಂತರ ಪುತ್ತೂರು ತಾಲೂಕು; 1954ರಲ್ಲಿ ಬೆಳ್ತಂಗಡಿ ತಾಲೂಕು ಆಯಿತು. ನೆರಿಯದಿಂದ ಉಪ್ಪಿನಂಗಡಿಗೆ ಅಥವಾ ಪುತ್ತೂರಿಗೆ ನಡೆದೇ ಹೋಗಿ ಕಿಸ್ತು ಕಟ್ಟಿ ಬರಬೇಕು. ಆಗ ಇದ್ದುದು ಶಂಕರವಿಠಲ್ ಬಸ್ಸು. ಅದು ಬೆಳಿಗ್ಗೆ ಚಾರ್ಮಾಡಿಯಿಂದ ಮಂಗಳೂರಿಗೆ ಹೋಗಿ ಸಂಜೆ ವಾಪಾಸು ಬರುತ್ತಿತ್ತು. ಈ ಬಸ್ಸಿನ ಡ್ರೈವರ್ ಬಾಬು ಶೆಟ್ಟಿ ಎಂಬವರು ಸಜ್ಜನರು. ಎಲ್ಲರಿಗೂ ಒದಗುವವರು. ಹಾಗಾಗಿ ಇವರೆಂದರೆ ಎಲ್ಲರಿಗೂ ಅಭಿಮಾನ. ಎಲ್ಲಾ ಮದುವೆಗಳಿಗೂ ಇವರೇ ಮಂಗಳೂರು ಮಲ್ಲಿಗೆ ತಂದು ಕೊಡುವವರು. ಆಗ ಬಸ್ಸಲ್ಲಿ ಶರಾಬು ಇಡುವುದಕ್ಕೆ ಅನುಮತಿ ಇರಲಿಲ್ಲ. ಆದರೆ ತಂದೆಯವರು ಸಂಜೆ ಶರಾಬು ಹೊತ್ತು ಬರುತ್ತಿದ್ದರೆ ಬಸ್ಸು ನಿಲ್ಲಿಸಿ, ಕಂಡಕ್ಟರೇ ‘ಹಾಲಿನ ಪಾತ್ರೆ’ ಸ್ವಲ್ಪ ಒಳಗಿಡಿ ಎಂದು ಹೇಳುತ್ತಿದ್ದರಂತೆ. ಹೀಗೆ ಅವರು ಎಲ್ಲರಿಗೂ ಬೇಕಾಗಿದ್ದರಂತೆ. ಅದರಲ್ಲೂ ಅವರು ತಂದೆಯವರ ಮೇಲೆ ಹೆಚ್ಚೇ ಪ್ರೀತಿ ಇಟ್ಟಿದ್ದರಂತೆ.
ತಂದೆಯವರು ಗುತ್ತಿಗೆಯ ಕಿಸ್ತು ಕಟ್ಟಲು ಟ್ರಜರಿಗೆ ಹೋಗುತ್ತಿದ್ದರಲ್ಲ! ಅಲ್ಲಿಯ ಲಂಚಾವತಾರವನ್ನು ಕಂಡು ಹೇಸುತ್ತಿದ್ದರು ಅವರು. ಮನೆಗೆ ಬಂದವರಲ್ಲಿ ಹೇಳಿಕೊಂಡು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಆ ದಿನಗಳಲ್ಲಿ ಸರಕಾರಿ ನೌಕರರು ಇಡೀ ಕೈಯ ಬಿಳಿ ಅಂಗಿ ಹಾಕಿ ಪ್ಯಾಂಟು ತೊಡಬೇಕು, ಶರ್ಟು ಒಳಹಾಕಬೇಕು. ಇಲ್ಲವಾದರೆ ಅಂಗಿಯ ಮೇಲೆ ಕಚ್ಚೆ ಹಾಕಿ ಅದರ ಮೇಲೆ ಕೋಟು ಹಾಕಿ ಕಚೇರಿಗೆ ಬರಬೇಕು. ಟ್ರಜರಿಯ ನಗದು ಗುಮಾಸ್ತ ಬೆಳ್ಳಿಯ ಪಾವಲಿಗಳನ್ನು, ಲೆಕ್ಕ ಮಾಡಲು ಮೇಜಿನ ಮೇಲೆ ಹರಡಬೇಕು. ಹರಡುತ್ತಾನೆ. ಹಾಗೆ ಎರಡೂ ಕೈಗಳನ್ನು ಮುಂದಕ್ಕೆ ತಂದು ಹರಡುವಾಗ ಅಂಗಿಯ ಕೈಯ ಸಂದಿನಲ್ಲಿ ಕೆಲವಾದರೂ ಬೆಳ್ಳಿ ಪಾವಲಿಗಳು ಸೇರಬೇಕಲ್ಲ? ಸೇರುತ್ತವೆ. ಸೇರಿದ ಮೇಲೆ ಎರಡೂ ಕೈ ಮೇಲೆತ್ತಿ ರಿಲ್ಯಾಕ್ಸ್ ಮಾಡಿದಂತೆ ಮಾಡುವಾಗ ಆ ಬೆಳ್ಳಿ ಪಾವಲಿಗಳು ಮೇಲಕ್ಕೆ ಬಂದು ಕೆಳಗಿಳಿದು ಸೊಂಟದಲ್ಲಿ ಶೇಖರಗೊಳ್ಳುತ್ತವೆ. ಎಷ್ಟು ಪಾವಲಿ ಒಳಸೇರಿತೋ ಅಷ್ಟು ಪಾವಲಿ ಕಡಿಮೆ ಇದೆ ಎಂದು ಹೇಳಿ ಅಷ್ಟನ್ನು ಕೊಟ್ಟ ಮೇಲೇ ಚಲನ್ ಕೊಡಲಾಗುತ್ತಿತ್ತಂತೆ. ಆದರೆ ತಂದೆಯವರು ಎಷ್ಟು ಕಿಸ್ತು ಕಟ್ಟಬೇಕೋ ಅಷ್ಟನ್ನು ಮೊದಲು ಇಟ್ಟು, ಅವನಿಗೆ ಇನಾಮು ಎಂದು ಒಂದೆರಡು ಪಾವಲಿ ಬೇರೆ ಇಡುತ್ತಿದ್ದರಂತೆ. ಆಗ ನಗದು ಗುಮಾಸ್ತನು ಈ ಟ್ರಿಕ್ ಮಾಡುತ್ತಿರಲಿಲ್ಲ.
ಕೋವಿಯ ಪರವಾನಿಗೆ ನವೀಕರಿಸುವಾಗಲೂ ಬೆಳಗ್ಗಿನಿಂದ ಸಂಜೆವರೆಗೂ ತಾಲೂಕು ಕಚೇರಿ ಹೊರಗೆ ದೊಡ್ಡ ದೊಡ್ಡ ಜನ ಕಾಯುತ್ತಿದ್ದರಂತೆ. ಆದರೆ ತಂದೆಯವರು ಒಂದೆರಡು ಬೆಳ್ಳಿ ಪಾವಲಿಗಳನ್ನು ಲೈಸನ್ಸ್ ಪುಸ್ತಕದಲ್ಲಿ ಸೇರಿಸಿಕೊಟ್ಟು ಬೇಗ ಕೆಲಸ ಮುಗಿಸಿಕೊಂಡು ಬರುತ್ತಿದ್ದರಂತೆ. ಇದನ್ನು ನೋಡಿ ಆ ದೊಡ್ಡ ಮನುಷ್ಯರು ನಿಮಗೆ ಎಷ್ಟು ಸಾವಿರ ಮುಡಿಗೇಣಿ ಬರುತ್ತದೆ ಮಾರಾಯ್ರೇ ಎಂದು ಕೇಳುತ್ತಿದ್ದರಂತೆ. ತಂದೆಯವರು ನಾನು ಗೇಣಿ ಒಕ್ಕಲು ಎಂದು ಹೇಳಿ ನಗುತ್ತಿದ್ದರಂತೆ. ಬ್ರಿಟಿಷ್ ಕಾಲದ ಲಂಚದ ಪ್ರಕರಣಗಳನ್ನು ಹೀಗೆ ತಂದೆಯವರು ಬಹಳ ರಸವತ್ತಾಗಿ ಹೇಳುತ್ತಿದ್ದರು.
ವರ್ಷಕ್ಕೊಮ್ಮೆ ಶರಾಬು, ಶೇಂದಿ ಅಂಗಡಿಗಳ ಏಲಂ ನಡೆಯುತ್ತಿತ್ತು. ಆಗ ಪತ್ರಿಕೆಗಳು, ರೇಡಿಯೋ ಯಾವುದೂ ಇರಲಿಲ್ಲ. ಬರೇ ಟಂಕಿನಿಶಿ ಮಾಡುತ್ತಿದ್ದರು ಅಥವಾ ಪಟೇಲರ ಚಾವಡಿಗೆ ನೋಟೀಸು ಹೋಗುತ್ತಿತ್ತು. ಅಬಕಾರಿ ಇಲಾಖೆಯವರು ಗುತ್ತಿಗೆದಾರರಿಗೆ ತಿಳಿಸುತ್ತಿದ್ದರು. ಆದರೆ ನೆರಿಯದಂತಹ ಮೂಲೆಯ ಗ್ರಾಮಕ್ಕೆ ಸುದ್ದಿ ಮುಟ್ಟಿಸುವುದು ಅಬಕಾರಿ ಇಲಾಖೆಗೆ ಸಮಸ್ಯೆಯೇ ಆಗುತ್ತಿತ್ತು. ಆದುದರಿಂದ ಈ ಭಾಗದ ಜನರಲ್ಲಿ ಬಾಯ್ದೆರೆ ಹೇಳಿ ಕಳುಹಿಸಲಾಗುತ್ತಿತ್ತು. ಆದರೆ ಗ್ರಾಮದಲ್ಲಿ ಪ್ರತಿಸ್ಪರ್ಧಿಗಳಿದ್ದರೆ ಎದುರಿನವರಿಗೆ ಏಲಂನ ವಿಚಾರ ತಿಳಿಸದೆ ಕಮ್ಮಿಗೆ ಬಿಡ್ಡು ಮಾಡುವ ಅನ್ಯಾಯವೂ ನಡೆಯುತ್ತಿತ್ತು.
ಒಮ್ಮೆ ಅಬಕಾರಿ ಇನ್ಸ್ಪೆಕ್ಟರ್ ಏಲಂ ದಿನಾಂಕ ನಿಗದಿ ಮಾಡಿದರು. ಅದನ್ನು ಅವರು ತಂದೆಯವರಿಗೆ ತಿಳಿಸಬೇಕು. ಆದರೆ ತಂದೆಯವರ ಭೇಟಿ ಆಗಲಿಲ್ಲ. ಅದೇ ಹೊತ್ತಿಗೆ ನಾಡು ಪೂಜಾರಿ ಕಚೇರಿಗೆ ಹೋದರಂತೆ. ಅವರೊಡನೆ ಗುಮ್ಮ ಪೂಜಾರಿಗೆ (ನಮ್ಮ ತಂದೆಯವರ ಹೆಸರು) ಬರಲು ಹೇಳಿ ಎಂದರು ಇನ್ಸ್ಪೆಕ್ಟರು. ನಾಡು ಪೂಜಾರಿ ಆಯಿತು ಎಂದರು. ಆದರೂ ಅವರು ಹೇಳಲಾರರು ಎಂಬ ಸಂಶಯ ಇನ್ಸ್ಪೆಕ್ಟರ್ ಅವರಿಗೆ. ಅದಕ್ಕೆ ಅವರೊಂದು ಉಪಾಯ ಮಾಡಿದರು. “ಅವನು ಕೈಬೀಸಿ ಬರುವುದು ಬೇಡ. ಒಂದು ಸತ್ತ ಪ್ರಾಣಿ, ಒಂದು ಜೀವದ ಪ್ರಾಣಿ ಸಹಿತ ಬರಲಿ. ಇಲ್ಲದಿದ್ದರೆ ಬರುವುದೇ ಬೇಡ” ಎಂದು ಕೊಂಚ ಏರು ಸ್ವರದಲ್ಲಿ ಬಿರುಸಾಗಿಯೇ ಹೇಳಿದರು. ಇದರಿಂದಾಗಿ ನಾಡು ಪೂಜಾರಿ ಮನಸ್ಸಿನಲ್ಲೇ ಇನ್ಸ್ಪೆಕ್ಟರು ಹೇಗೂ ಗುಮ್ಮ ಪೂಜಾರಿ ಕಡೆಗಿಲ್ಲ ಎಂದುಕೊಂಡು ಖುಷಿ ಪಟ್ಟರು. ಹಾಗಾಗಿ ತಂದೆಗೆ ವಿಷಯ ಮುಟ್ಟಿಸಿದರು. ತಂದೆಯಾದರೂ, ಸತ್ತ ಪ್ರಾಣಿ ಸಿಗಬಹುದು. ಜೀವ ಸಹಿತ ಪ್ರಾಣಿ ಹಿಡಿಯುವುದು ಹೇಗೆ ಎಂದು ನಿದ್ದೆ ಕೆಡಿಸಿಕೊಂಡರು. ಆದರೂ ಇನ್ಸ್ಪೆಕ್ಟರಿಗೆ ಎರಡನ್ನೂ ತಲಪಿಸಬೇಕು. ಇದು ತಂದೆಯವರ ಪ್ರೀತಿ, ಹಠ. ಇನ್ಸ್ಪೆಕ್ಟರೆಂದರೆ ತಂದೆಯವರಿಗೆ ಅಷ್ಟು ವಿಶ್ವಾಸ. ಅದಕ್ಕಾಗಿ ಬಲೆ ಬಿಟ್ಟು ಪ್ರಾಣಿ ಹಿಡಿಯುವವರನ್ನು ಕಂಡು ಮಾತನಾಡಿದರು. ಅವರೆಲ್ಲ ಎಷ್ಟೇ ಪ್ರಯತ್ನಿಸಿದರೂ ಬಲೆಗೆ ಪ್ರಾಣಿ ಬೀಳಲಿಲ್ಲ.
ಓಬಯ್ಯ ಭಂಡಾರಿಯವರ ಬಗ್ಗೆ ಹಿಂದೆ ನಾನು ಬರೆದಿದ್ದೆನಲ್ಲ. ಅವರ ತಂದೆ ನನ್ನ ತಂದೆಯ ಶಿಕಾರಿಯ ಸಾಥಿಯಾಗಿದ್ದರಂತೆ. ಬೇರೆ ದಾರಿ ಕಾಣದೇ ಇವರಿಬ್ಬರೂ ಶಿಕಾರಿಗೆ ಹೋಗಿ ಕಡವೆಯೊಂದನ್ನು ಗುಂಡು ಇಟ್ಟು ಕೊಂದರು. ಮೊಲವೊಂದರ ಕಾಲಿಗೆ ಗುರಿ ಇಟ್ಟು ಹೊಡೆದರು. ಅದು ಕುಂಟು ಕಾಲಿನಿಂದ ಓಡುವಾಗ ಇಬ್ಬರೂ ಅದರ ಹಿಂದೆಯೇ ಓಡಿ ಅದನ್ನು ಹಿಡಿದು ತಂದರು. ತಂದೆಯವರು ಅದನ್ನು ಬೆಳಿಗ್ಗೆ ಗೋಣಿಯಲ್ಲಿ ತುಂಬಿಸಿ, ಬಾಬು ಶೆಟ್ಟರ ಬಸ್ಸು ಹತ್ತಿದರು. ಅಬಕಾರಿ ಇನ್ಸ್ಪೆಕ್ಟರ ಮನೆ ಸೇರಿದರು. ಇನ್ಸ್ಪೆಕ್ಟರ್ ಇನ್ನೂ ಎದ್ದಿರಲಿಲ್ಲ. ಅವರ ಪತ್ನಿ ಬಾಗಿಲು ತೆರೆದು ಕೂತುಕೊಳ್ಳಲು ಹೇಳಿದರು. ಇನ್ಸ್ಪೆಕ್ಟರ್ ಎದ್ದು ಹೊರ ಬಂದಾಗ ತಂದೆಯವರನ್ನು ನೋಡಿ `ಓ! ಬಂದು ಬಹಳ ಹೊತ್ತಾಯಿತಾ? ನಾಡು ಪೂಜಾರಿ ಹೇಳಿದನಾ?’ ಎಂದರು. ತಂದೆಯವರು ಹೌದು ಎಂದು ಹೇಳಿ ನೀವು ಹೇಳಿದ್ದು ತಂದಿದ್ದೇನೆ ಎಂದರು. ಅಯ್ಯೋ, ನಾಡು ಪೂಜಾರಿ ಏಲಂ ವಿಚಾರ ಹೇಳಲಾರ ಎಂದುಕೊಂಡು ಹಾಗೊಂದು ನಾಟಕ ಮಾಡಿದ್ದೆ. ನೀನು ನಂಬಿ ಬಿಡುವುದೇ ಮಾರಾಯಾ? ಎನ್ನುತ್ತಾ ಗೋಣಿ ಬಾಯಿ ಬಿಚ್ಚುವುದಕ್ಕೆ ಹೋದರು. ಆಗ ತಂದೆಯವರು ಜಗಲಿಯ ಬಾಗಿಲು ಹಾಕಿದರು. ಹಾರಿದ ಮೊಲ ಓಡಿ ಹೋಗಲು ಹೆಣಗಾಡಿತು. ಅದನ್ನು ನೋಡಿ ಮಕ್ಕಳಿಗೆ ತುಂಬಾ ಖುಷಿಯಾಯಿತು. ‘ಅಲ್ಲಾ, ನಾನು ಸುಮ್ಮನೆ ಹೇಳಿದ್ದನ್ನು ನೀನು ಸಾಧಿಸಿ ತೋರಿಸಿದಿಯಲ್ಲ’ ಎಂದು ಮೆಚ್ಚಿಗೆ ಸೂಚಿಸಿ, ಗುತ್ತಿಗೆ ಏಲಂನ ಮಾಹಿತಿ ಕೊಟ್ಟು ಕಳುಹಿಸಿದರಂತೆ. ತಂದೆಯವರು ಈ ಕಾಲದ ಇಂತಹ ನಂಬಿಕೆಯ ಅಧಿಕಾರಿಗಳನ್ನು ಆಗಾಗ ನೆನಪು ಮಾಡಿಕೊಳ್ಳುತ್ತಿದ್ದರು.
ಎಲ್ಲಾ ಮದುವೆಗಳಿಗೂ ಇವರೇ ಮಂಗಳೂರು ಮಲ್ಲಿಗೆ ತಂದು ಕೊಡುವವರು. ಆಗ ಬಸ್ಸಲ್ಲಿ ಶರಾಬು ಇಡುವುದಕ್ಕೆ ಅನುಮತಿ ಇರಲಿಲ್ಲ. ಆದರೆ ತಂದೆಯವರು ಸಂಜೆ ಶರಾಬು ಹೊತ್ತು ಬರುತ್ತಿದ್ದರೆ ಬಸ್ಸು ನಿಲ್ಲಿಸಿ, ಕಂಡಕ್ಟರೇ ‘ಹಾಲಿನ ಪಾತ್ರೆ’ ಸ್ವಲ್ಪ ಒಳಗಿಡಿ ಎಂದು ಹೇಳುತ್ತಿದ್ದರಂತೆ.
ತಂದೆಯವರಿಗೆ ಶೇಂದಿ ಅಂಗಡಿಯೇ ಹೆಚ್ಚಾಗಿ ಸಿಗುತ್ತಿತ್ತು. ಅವರೊಂದಿಗೆ ಖಾಯಂ ಮೂರ್ತೆ ಮಾಡಲು ಒಂದೆರಡು ಜನ ಇದ್ದೇ ಇರುತ್ತಿದ್ದರು. ಆಗ ಪರ್ಲದಲ್ಲಿ ಮುದರ ಗೌಡ ಎಂಬವರು ವಾಸವಾಗಿದ್ದರು. ಅಲ್ಲಿ ತುಂಬಾ ತಾಳೆಮರಗಳು. ತಂದೆಯವರಿಗೆ ಈ ಮರಗಳನ್ನು ಮೂರ್ತೆಗೆ ಕೊಡುತ್ತಿದ್ದ ಮುದರ ಗೌಡರು ವರ್ಗದಾರರಾಗಿದ್ದರು. ಆಗ ಈಗಿನಂತೆ ಬೆಳಿಗ್ಗೆಯಿಂದಲೇ ಕುಡಿಯುವ ಅಭ್ಯಾಸ ಇರಲಿಲ್ಲ. ವರ್ಗದಾರರೆಲ್ಲಾ ಆಗ ಗುತ್ತಯೆಗೆ ಖಾಯಂ ಕಳ್ಳು ಕುಡಿಯುವುದು ವಾಡಿಕೆ. ಅದರಂತೆ ಮುದರ ಗೌಡರೂ ಖಾಯಂ ಗಿರಾಕಿಯಾಗಿದ್ದರು. ಇಷ್ಟು ಅನುಕೂಲದ ಗೌಡರು ಮಾರ್ಚ್ ತಿಂಗಳಲ್ಲಿ ತೀರ್ವೆ ಕಟ್ಟಲು ಪರದಾಡುತ್ತಿದ್ದರು. ಎರಡು ರೂಪಾೈಗೆ ಒಂದು ಮುಡಿ ಅಕ್ಕಿ ಸಿಕ್ಕುವ ಕಾಲವದು. ತೀರ್ವೆ ಕಟ್ಟಲು ದುಡ್ಡು ಇಲ್ಲದೆ ಉಗ್ರಾಣಿ ಕಂಡಾಗೆಲ್ಲ ತಲೆ ಮರೆಸಿಕೊಳ್ಳುವುದು ಸಾಕಾಗಿ ಹೋಯಿತು. ಅವರು ತಂದೆಯವರಲ್ಲಿ ನೀನು ಈ ಭೂಮಿ ತೆಗೆದುಕೋ ಎಂದು ಒತ್ತಾಯ ಮಾಡತೊಡಗಿದರು.
ತಂದೆಯವರು ಮಾತ್ರ ನಿಮ್ಮ ಜಾಗ ನಿಮ್ಮಲ್ಲೇ ಇರಬೇಕು. ಕೊಡುವ ಮಾತಾಡಬೇಡಿ. ಆದರೆ ನಿಮ್ಮ ತಾಳೆ ಮರಗಳನ್ನು ನನಗಲ್ಲದೇ ಬೇರೆ ಯಾರಿಗೂ ಕೊಡಬೇಡಿ ಎಂದು ಪ್ರೀತಿ, ಮಮತೆಗಳಿಂದ ಹೇಳಿ ತೀರ್ವೆ ಕಟ್ಟಲು ತಾವೇ ದುಡ್ಡು ಕೊಡುತ್ತಿದ್ದರು. ಕೊನೆಗೂ ತಂದೆಯವರು ಮುದರ ಗೌಡರ ಒತ್ತಾಯ ಹೆಚ್ಚುತ್ತಾ ಹೋದಾಗ ಈ ಪರ್ಲದ ಸ್ಥಳ ತೆಗೆದುಕೊಳ್ಳುವುದಕ್ಕೆ ಮನಸ್ಸು ಮಾಡಿದರು. ಈ ವಿಚಾರ ತಿಳಿದ ನಾಡು ಪೂಜಾರಿ ನಾನು ಕೊರುಂಗೆಜಾಲು ಬಿಡುತ್ತೇನೆ. ನನಗೆ ಪರ್ಲದ ಸ್ಥಳ ಬೇಕು. ನೀನು ಹೇಳದೆ ಮುದರ ಗೌಡರು ನನಗೆ ಕೊಡುವುದಿಲ್ಲ ಎಂದು ನನ್ನ ತಂದೆಯವರಲ್ಲಿ ದುಂಬಾಲು ಬಿದ್ದರು. ಕೊನೆಗೆ ತಂದೆಯವರು ನಾಡು ಪೂಜಾರಿಗೆ ಈ ಸ್ಥಳ ಮಾರಲು ಹೇಳಿ, ತಾಳೆ ಮರ ಮೂರ್ತೆಗೆ ತನಗೆ ಕೊಡಬೇಕೆಂದು ಶರ್ತ ವಿಧಿಸಿದರು.
ಹಾಗೆ ನಾಡು ಪೂಜಾರಿ ಪರ್ಲದ ಭೂಮಾಲೀಕರಾದರು. ಅಣಿಯೂರು ನೆರಿಯ ಹೊಳೆಯ ದಡದಲ್ಲಿರುವ ಈ ಸ್ಥಳ ಈಗ ಕೊಚ್ಚಿ ಕ್ರಿಶ್ಚನರಲ್ಲಿದೆ. ಕೋಟಿ ರೂಪಾೈ ಮೌಲ್ಯ ಹೊಂದಬಹುದಾದ ಈ ಸ್ಥಳ ಋಣ ಇಲ್ಲದೆ ಕೈಜಾರಿತೆಂದು ತಂದೆಯವರು ಆಗಾಗ ಹೇಳುತ್ತಿದ್ದರು. ಈ ಕಾರಣದಿಂದಲೇ ಋಣವಂತ ಪರ್ಲ ಕೊಚ್ಚಿ ಕ್ರಿಶ್ಚನ್ ಕುಟುಂಬವನ್ನು ತಂದೆಯವರು ತುಂಬಾ ಪ್ರೀತಿಸುತ್ತಿದ್ದರು. ಯಾವುದಕ್ಕೂ ಋಣ ಬೇಕು ಎಂದು ಪದೇ ಪದೇ ಅಭಿಪ್ರಾಯ ಪಡುತ್ತಿದ್ದರು.
ತಂದೆಯವರಿಗೆ ಐತು ಪೂಜಾರಿ ಎಂಬ ಅಳಿಯ ಮತ್ತು ಅಕ್ಕಮ್ಮ ಎಂಬ ಸೊಸೆ ಇದ್ದರು. ಐತು ಪೂಜಾರಿಯನ್ನು ದೆಯ್ಯಕ್ಕು ಎಂಬವರೊಂದಿಗೆ, ಅಕ್ಕಮ್ಮ ಸೊಸೆಯನ್ನು ಬೊಮ್ಮಯ್ಯ ಪೂಜಾರಿ ಎಂಬವರೊಡನೆ ತಂದೆಯವರು ಮದುವೆ ಮಾಡಿಸಿದ್ದರು. ಮದುವೆ ಮನೆಯಲ್ಲಿ ಯಾರೂ ಕುಡಿದು ಗಲಾಟೆ ಮಾಡದಿರಲಿ ಎಂಬ ಕಾರಣಕ್ಕೆ ತಂದೆಯವರು ನೆರಿಯದಲ್ಲಿ ಶರಾಬು ಮತ್ತು ಶೇಂದಿ ಅಂಗಡಿಗಳನ್ನು ಆ ದಿನದ ಮಟ್ಟಿಗೆ ಮುಚ್ಚಿಸಿದ್ದರಂತೆ. ಶೇಂದಿ ಅಂಗಡಿ ತಂದೆಯವರ ಕೈಯ್ಯಲ್ಲೇ ಇತ್ತು. ಬಿಲ್ಲವರು ಹಿಂದೆ ಶೇಂದಿ ತಯಾರಿಸುತ್ತಿದ್ದರು. ಆದರೆ ಅದನ್ನು ಅವರು ಕುಡಿಯುತ್ತಿರಲಿಲ್ಲ. ಅದವರಿಗೆ ನಿಷಿದ್ಧವಾಗಿತ್ತು. ಹಾಗೊಮ್ಮೆ ಕುಡಿದರೆ ಜಾತಿಯಿಂದ ಬಹಿಷ್ಕರಿಸಲ್ಪಡುತ್ತಿದ್ದರು. ಆದರೂ ತಂದೆಯವರು ಶೇಂದಿ ಅಂಗಡಿ ಬಾಗಿಲು ತೆರೆದಿರಲಿಲ್ಲ.
ಆದರೆ ಬಿಲ್ಲವರಲ್ಲಿ ಶರಾಬು ಕುಡಿಯುವವರು ಇದ್ದರು. ಹಾಗಾಗಿ ಶರಾಬು ಅಂಗಡಿ ಬಂದ್ ಮಾಡಿಸುವುದು ಮುಖ್ಯವಾಗಿತ್ತು. ಶರಾಬು ಅಂಗಡಿ ನಾಡು ಪೂಜಾರಿಯವರ ಸ್ವಾಧೀನವಿತ್ತು. ಅವರ ಬಳಿಗೆ ಹೋದ ತಂದೆಯವರು ದಿನಕ್ಕೆ ಎಷ್ಟು ಶರಾಬು ಮಾರಾಟವಾಗುತ್ತದೆ ಎಂದು ವಿಚಾರಿಸಿದರು. ಇಷ್ಟು ಅಂತ ಲೆಕ್ಕ ಕೊಟ್ಟರು ನಾಡು ಪೂಜಾರಿಯವರು. ನಾಡು ಪೂಜಾರಿಯವರಿಗೆ ಆಶ್ಚರ್ಯ. ಯಾಕೆ ಲೆಕ್ಕ ಕೇಳುತ್ತಿರುವುದು? ‘ನನ್ನ ಅಳಿಯ – ಸೊಸೆಯಂದಿರ ಮದುವೆ. ಆ ದಿನ ಶರಾಬು ಅಂಗಡಿ ಬಂದ್ ಮಾಡಿ ಸಹಕರಿಸಬೇಕು. ಶರಾಬಿನ ದುಡ್ಡು ನಾನು ಕೊಡುತ್ತೇನೆ. ಈಗಲೇ ತೆಗೆದುಕೊ’ ಎಂದು ತಂದೆಯವರು ಅಷ್ಟು ಹಣ ಕೊಟ್ಟು ಬಿಟ್ಟರು. ನಾಡು ಪೂಜಾರಿಯವರಿಗೆ ಶರಾಬೂ ಉಳಿಯಿತು; ದುಡ್ಡೂ ಬಂತು ಎಂದು ಖುಷಿ ಪಟ್ಟು ಆ ದಿನದ ಮಟ್ಟಿಗೆ ಶರಾಬು ಅಂಗಡಿಗೆ ರಜೆ ಕೊಟ್ಟು ಉಪಕರಿಸಿದರು. ಆದ್ದರಿಂದ ಮದುವೆ ಮನೆಯಲ್ಲಿ ಕುಡಿದವರ ಗಲಾಟೆಗೆ ಆಸ್ಪದವಿರಲಿಲ್ಲ.
ಆದರೆ ಆ ಕಾಲದಲ್ಲಿ ಗುರಿಕಾರರ ದರ್ಪ ಇತ್ತು. ತಾನು ದೊಡ್ಡವ, ತಾನು ದೊಡ್ಡವ ಎಂದು ಅವರು ಒಬ್ಬರ ಮೇಲೆ ಒಬ್ಬರು ಪೈಪೋಟಿ ಮಾಡುವುದಿತ್ತು. ನಮ್ಮ ಮನೆಯಲ್ಲಿ ಗುರಿಕಾರರು ಮಾವ. ಆದರೆ ದೆಯ್ಯಕ್ಕು ಮದುಮಗಳ ಕಡೆಯ ಗುರಿಕಾರ ಅಳಿಯ ಅಂತೆ. ದಿಬ್ಬಣ ಬಂದು ಹೊರಗೆ ಕೂತಿದ್ದಾರೆ. ನಮ್ಮ ಮನೆಯ ಗುರಿಕಾರರನ್ನು ಹುಡುಕಿದರೆ ಅವರು ಮಂದ್ರಿ (ಬೆಡ್ಶೀಟ್) ಹೊದೆದು ಮಲಗಿ ಬಿಟ್ಟಿದ್ದಾರೆ! ಎಬ್ಬಿಸಿದರೆ ಸ್ವಲ್ಪ ಹೊತ್ತು ಗುಡ್ಡೆಯಲ್ಲಿ ಕೂತುಕೊಳ್ಳಲಿ ಎಂದು ಅವರು. ಹೀಗೆ ತಂದೆಯವರು ಮಲಗಿದ ಗುರಿಕಾರ ಮತ್ತು ಗುಡ್ಡೆಯಲ್ಲಿ ಕೂತ ಗುರಿಕಾರರ ಮಧ್ಯೆ ಓಡಾಡಿ, ಹೊಂದಾಣಿಕೆ ಮಾಡಿಸಿದರು. ಮದುಮಗಳನ್ನು ಚಪ್ಪರಕ್ಕೆ ಬರಮಾಡಿಕೊಂಡರು. ಗುರಿಕಾರರ ಇಂಥ ಅತಿರೇಕ ವರ್ತನೆಗಳನ್ನು ತಂದೆಯವರು ನೆನಪಿಸಿಕೊಳ್ಳುತ್ತಿದ್ದರು. ಈಗ ಗುರಿಕಾರರು ಅಮುಖ್ಯವಾಗಿರುವುದನ್ನು ಬೆಂಬಲಿಸಿ ಮಾತಾಡುತ್ತಿದ್ದರು. ಈ ಘಟನೆ ಆಗಿನ ಸಾಮಾಜಿಕ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ.
******
1947 ಅಗೋಸ್ತು 15ರಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಮಹಾತ್ಮ ಗಾಂಧೀಜಿಯವರ ಸಲಹೆಯಂತೆ ದೇಶದಲ್ಲಿ ಮದ್ಯ ನಿಷೇಧ ಕಾನೂನು ಜಾರಿಯಾಯಿತು. ಮದ್ಯ ನಿಷೇಧದ ಹಿಂದಿನ ದಿನ ಎಲ್ಲಾ ಶರಾಬು, ಶೇಂದಿ ಅಂಗಡಿಗಳಲ್ಲಿ ಮಾನವನ ಮೂರ್ತಿ ಮಾಡಿ ಅದಕ್ಕೆ ಬೆಂಕಿ ಕೊಟ್ಟು ಸುಟ್ಟು ಹಾಕಿದರಂತೆ. ಆಗ ಎಲ್ಲಾ ಶರಾಬು, ಶೇಂದಿ ಅಂಗಡಿಗಳು ಬಿಲ್ಲವರ ಕೈಯಲ್ಲೇ ಇತ್ತು. ಬೇರೆಯವರು ಈಗಿನಂತೆ ಆಗ ಈ ಉದ್ಯೋಗ ಹಿಡಿದಿರಲಿಲ್ಲ. ತನ್ನ ಮೂರ್ತಿ ತಾನೇ ಮಾಡಿ ಸುಟ್ಟ ಪ್ರಸಂಗ ಈ ದೇಶದಲ್ಲಿ ಇದು ಮಾತ್ರ. ತಮ್ಮ ವಿರೋಧಿಗಳ ಮೂರ್ತಿ ಮಾಡಿ ಸುಡುವ ಪರಿಪಾಠ ಇವತ್ತಿನ ದಿನಗಳಲ್ಲಿ ಬೇಕಾದಷ್ಟು ಇದೆ. ಆದರೆ ಅಂತಹ ಪ್ರಕರಣ ಅದೇ ಮೊದಲು, ಅದೇ ಕೊನೆಯದೂ ಆಯಿತು.
ಶೇಂದಿ ಹಾಗೂ ಶರಾಬು ಮಾರಾಟ ನಿಲ್ಲಿಸಿದ್ದರಿಂದ ಅದನ್ನೇ ನಂಬಿದ್ದವರಿಗೆ ಪರ್ಯಾಯ ಉದ್ಯೋಗ ಇರಲಿಲ್ಲ! ಆದರೂ ಅಧೀರರಾಗದೇ ವೃತ್ತಿಗೆ ವಿದಾಯ ಹೇಳಿದ್ದು ಸಣ್ಣ ಸಂಗತಿ ಆಗಿರಲಿಲ್ಲ. ಅದೂ ಅಲ್ಲದೇ ಇದೇ ಶೇಂದಿ, ಶರಾಬು ಅಂಗಡಿಗಳಿಗೆ ಕುಡಿಯಲು ಬರುತ್ತಿದ್ದವರು ನಿತ್ಯದಂತೆ ಅಲ್ಲಿಗೆ ಬಂದು ಶಿಸ್ತಿನಲ್ಲಿ ಕೂತು ಭಕ್ತಿ ಭಾವ ಪರವಶರಾಗಿ ದೇವರ ಭಜನೆ ಮಾಡಿದ್ದೂ ಉದಾತ್ತ ಚರಿತ್ರೆಯೇ ಆಗಿದೆ. ಹಳ್ಳಿಗಳಲ್ಲಿ ಅಲ್ಲಲ್ಲಿ ಕಾಣಸಿಗುವ ಕೆಲವು ಭಜನಾ ಮಂದಿರಗಳ ಹಿಂದೆ ಅಂತಹ ಇತಿಹಾಸವಿದೆ. ನನ್ನ ತಂದೆಯವರಂತೂ ತನ್ನ ಮೂರ್ತಿಯನ್ನು ತಾನೇ ಮಾಡಿ ಸುಟ್ಟು ಹಾಕಿದ ಪ್ರಸಂಗವನ್ನು ಆಗಾಗ ಹೆಮ್ಮೆಯಿಂದ ಕೇಳಿಕೊಳ್ಳುತ್ತಿದ್ದುದು ನಾನೆಂದೂ ಮರೆಯುವಂತಿಲ್ಲ.
******
(ಹಿಂದಿರುಗಿ ನೋಡಿದಾಗ…. ಆತ್ಮಚರಿತ್ರೆಯ ಪುಟಗಳು. 2009)
ಬಿ. ತಮ್ಮಯ
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ದಿ. ಬಿ. ತಮ್ಮಯ (? – 2019) ಇವರು ರೆವಿನ್ಯೂ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ನಿವೃತ್ತರಾಗಿದ್ದರು. ನಿವೃತ್ತರಾದ ಮೇಲೆ ಸಾಹಿತ್ಯ ಸಂಘಟನೆ, ತುಳು ಬರವಣಿಗೆಯನ್ನು ಕಲಿಸುವುದು, ತುಳುವಿನಲ್ಲಿ ಹಸ್ತಲಿಖಿತ ಪತ್ರಿಕೆಯನ್ನು ಪ್ರಕಟಿಸುವುದು ಹೀಗೆ ಹಲವು ಆಯಾಮಗಳಲ್ಲಿ ಸಕ್ರಿಯರಾಗಿದ್ದರು. ವಿಶುಕುಮಾರ್ ಅವರ ಹೆಸರಿನಲ್ಲಿ ಸಾಹಿತ್ಯ ಪ್ರಶಸ್ತಿಯನ್ನು ಪ್ರಾರಂಭಿಸಲು ಪ್ರೇರಣೆಯಾಗಿದ್ದರು. ಇವರ ಕೆಲವು ಕೃತಿಗಳು: ಹಣತೆ (ಕವನ ಸಂಕಲನ), ಶ್ರೀ ನಾರಾಯಣ ಗುರು ಭಜನೆ, ಚಿಂತನ ಮಂಥನ, ಕರಿ ಕೋಟು (ಕಥಾ ಸಂಕಲನ), ‘ಹಿಂದಿರುಗಿ ನೋಡಿದಾಗ’ (ಆತ್ಮಕತೆ). ಈ ಸಂಪುಟದಲ್ಲಿ ಸೇರಿರುವ ಬರಹವನ್ನು ಅವರ ಆತ್ಮ ಕತೆಯ ಎರಡು ಅಧ್ಯಾಯಗಳಿಂದ ಸಂಗ್ರಹಿಸಲಾಗಿದೆ.
ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82.