ಔಷಧಿಗಳ ಹೆಸರಿನಲ್ಲಿ ದೇಹದೊಳಗೆ ಸೇರುವ ಸೂಕ್ಷ್ಮ ಜೀವಿಗಳನ್ನು (antimicrobial) ರೋಗಾಣುಗಳು ಕ್ಯಾರೇ ಅನ್ನುತ್ತಿಲ್ಲ. ಅಂದರೆ ಸೂಕ್ಷ್ಮ ಜೀವಿಗಳ ಲೋಕದಲ್ಲಿ ಬದಲಾವಣೆಗಳು ಆಗುತ್ತಿವೆ ಎಂದಾಯಿತು. ಆ ಬದಲಾವಣೆಗಳಿಂದ ಮನುಷ್ಯರಿಗೆ ಸಮಸ್ಯೆ ಸೃಷ್ಟಿ ಆಗುತ್ತದೆಯೇ. ಒಂದುವೇಳೆ ಸಮಸ್ಯೆಗಳು ಸೃಷ್ಟಿ ಆಗುತ್ತಿವೆ ಎಂದಾದರೆ, ಅವುಗಳ ಪ್ರಮಾಣ ಎಂತಹುದು ಎಂಬುದು ಕುತೂಹಲದ ಸಂಗತಿ. ಕೊರೊನಾ ಓಡಿಸುವ ಭರದಲ್ಲಿ ನಾವು ನೆನಪಿಡಬೇಕಾದ ಇನ್ನೂ ಅನೇಕ ಸಂಗತಿಗಳಿವೆ. ಸೂಕ್ಷ್ಮ ಜೀವಿಗಳ ಕ್ಷೇತ್ರದಲ್ಲಿಯೂ ಅಂತಹ ಗಮನಾರ್ಹ ಸಂಗತಿಯೊಂದನ್ನು ನಾವು ಮರೆಯಬಾರದು.
ಸೂಕ್ಷ್ಮ ಜೀವಿಗಳ ಲೋಕದಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಬರಹ
ಔಷಧಿಗಳ ಹೆಸರಿನಲ್ಲಿ ದೇಹದೊಳಗೆ ಸೇರುವ ಸೂಕ್ಷ್ಮ ಜೀವಿಗಳನ್ನು (antimicrobial) ರೋಗಾಣುಗಳು ಕ್ಯಾರೇ ಅನ್ನುತ್ತಿಲ್ಲ. ಅಂದರೆ ಸೂಕ್ಷ್ಮ ಜೀವಿಗಳ ಲೋಕದಲ್ಲಿ ಬದಲಾವಣೆಗಳು ಆಗುತ್ತಿವೆ ಎಂದಾಯಿತು.
ಶೇಕ್ಸ್ ಪಿಯರ್ ಬರೆದ ‘ಮ್ಯಾಕ್ ಬೆತ್’ ನಾಟಕದಲ್ಲಿ ರಾಜನಾದ ಡಂಕನ್ ಅನ್ನು ಕೊಲೆ ಮಾಡಿದ ಬಳಿಕ ಲೇಡಿ ಮ್ಯಾಕ್ಬೆತ್ ಗೆ ಕೈಗಳಲ್ಲಿ ರಕ್ತದ ಕಲೆಗಳು ಅಂಟಿದಂತೆ ಭಾಸವಾಗುತ್ತದೆ. ಇಡೀ ಅರೇಬಿಯಾದ ಸುಗಂಧವು ನನ್ನ ಕೈಗಳಿಗೆ ಅಂಟಿರುವ ರಕ್ತದ ವಾಸನೆಯನ್ನು ನಿವಾರಿಸುತ್ತಿಲ್ಲವಲ್ಲಾ… ಎಂದು ಆಕೆ ಕೊರಗುತ್ತಿರುತ್ತಾಳೆ. ರಾಣಿಯಾದ ಖುಷಿಯನ್ನು ಅನುಭವಿಸುವುದು ಅವಳಿಗೆ ಸಾಧ್ಯವಾಗುವುದೇ ಇಲ್ಲ. ರಕ್ತಸಿಕ್ತವಾದ ಅಂಗೈಗಳನ್ನು ಪದೇ ಪದೇ ತೊಳೆದೂ ತೊಳೆದೂ ಸುಸ್ತಾಗುತ್ತಾಳೆ. ಏನದು ಕೈಗಳಲ್ಲಿ ಅಂಟಿರುವುದು? ನಿಜವಾಗಿಯೂ ರಕ್ತದ ಕಲೆಗಳೇ? ಅಥವಾ ಆ ಕಲೆಗಳು ಅಂಟಿಕೊಂಡಿರುವುದು ಅಂತರಂಗಕ್ಕಾ? ಕೈಗೆ ಅಂಟಿಕೊಂಡ ರಕ್ತವನ್ನೇನೋ ತೊಳೆದುಕೊಳ್ಳಬಹುದು. ಮನಸ್ಸಿಗೆ ತಾಕಿದ ಕಲೆಗಳನ್ನು ಹೇಗೆ ತೊಳೆದುಕೊಳ್ಳುವುದು?
ಕೋವಿಡ್ 19 ಎಂಬ ವೈರಸ್ ಜಗತ್ತಿನಲ್ಲಿ ಇಂತಹುದೇ ದ್ವಂದ್ವವನ್ನು ಸೃಷ್ಟಿಸುತ್ತಿದೆ. ವೈರಸ್ ಅನ್ನು ಕೊಲ್ಲುವ ಸಾಹಸದಲ್ಲಿ ಜನರು ಬಾಗಿಲು, ಚಿಲಕ, ಗೇಟು ಬೀಗ ಎಲ್ಲವನ್ನೂ ತೊಳೆಯುತ್ತಿದ್ದಾರೆ. ತರಕಾರಿ, ಬುಟ್ಟಿ, ಬ್ಯಾಗು, ನೆಲ, ಕಿಟಕಿಗಳನ್ನು ತೊಳೆದು ತೊಳೆದು ದಣಿವಾಗಿದೆ. ಕೈಗಳನ್ನು ತೊಳೆದು ತೊಳೆದು ಅಂಗೈಗಳಲ್ಲಿ ಉರಿಯುಂಟಾಗಿದೆ.
ಪೆಸ್ಟ್ ಕಂಟ್ರೋಲ್ ಮಾಡುವ ಕಂಪೆನಿಗಳಿಗೆ ಬರೋಬ್ಬರಿ ಉದ್ಯಮ ವೃದ್ಧಿಯಾಗಿದೆ. ಮನೆಯೊಳಗೆ, ಮನೆಯ ಹೊರಗೆ, ಕಚೇರಿಗಳಲ್ಲಿ, ಜಾತ್ರೆ, ಉರುಸು, ನೇಮ ನಿಷ್ಠೆಗಳು ನಡೆಯುವುದಕ್ಕೆ ಮುನ್ನ ಕೀಟ ನಾಶಕ ಸುರಿಯುತ್ತೇವೆ. ಉತ್ಸವಾದಿಗಳು ನಡೆದ ಬಳಿಕವೂ ಮತ್ತೆ ಮತ್ತೆ ಬೀದಿ ಬೀದಿಗಳಲ್ಲಿ ಕೀಟನಾಶಕಗಳನ್ನು ಸುರಿದು ಸ್ವಚ್ಛ ಮಾಡುತ್ತೇವೆ. ಸ್ವಚ್ಛತೆಯ ಎಲ್ಲಾ ನಿಯಮಗಳನ್ನು ಅನುಸರಿಸಿದ್ದೇವೆ ಎಂದು ದಾಖಲೆ ಪತ್ರಗಳಿಗೆ ಸಹಿ ಹಾಕಿ, ತಾತ್ಕಾಲಿಕ ನೆಮ್ಮದಿಯನ್ನು ಹೊಂದುತ್ತಿದ್ದೇವೆ. ಈ ಸ್ವಚ್ಛತೆಯ ಗೀಳುರೋಗದಿಂದ ಮುಕ್ತಿ ಹೇಗೆ? ಅಷ್ಟಕ್ಕೂ ಕೀಟನಾಶಕ ಸುರಿದ ಕೂಡಲೇ ಆ ಜಾಗ ಸ್ವಚ್ಛವಾಯಿತು ಎಂಬುದು ಹೇಗೆ ಸಾಬೀತಾಗುತ್ತದೆ? ಇಷ್ಟೆಲ್ಲ ಸ್ವಚ್ಛತೆಯ ನಿಯಮಾವಳಿಯನ್ನು ಪಾಲಿಸಿದರೂ, ಕೊರೊನಾ ಎಂಬ ಭಯವೊಂದನ್ನು ತೊಡೆದು ಹಾಕಲು ಸಾಧ್ಯವಾಗುತ್ತಿಲ್ಲ.
ನಮ್ಮ ಲೆಕ್ಕಾಚಾರಗಳೇ ಬೇರೆ, ಪ್ರಕೃತಿಯ ಲೆಕ್ಕಾಚಾರಗಳೇ ಬೇರೆ. ಕೊರೊನಾ ಎಂಬ ಜಾಗತಿಕ ಸೋಂಕಿನ ಭಯ ಪಕ್ಕಕ್ಕಿರಲಿ. ನಾವು ನಿರಂತರವಾಗಿ ಸ್ವಚ್ಛತೆಯ ಹೆಸರಿನಲ್ಲಿ ಕೀಟನಾಶಕ ಸುರಿದೂ ಸುರಿದೂ ಸ್ವಚ್ಛತೆಯ ಹೆಸರಿನಲ್ಲಿ ಕೊಲ್ಲುತ್ತ ಬಂದಿರುವ ಸೂಕ್ಷ್ಮಜೀವಿಗಳು ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡಿಲ್ಲವೇ ಎನ್ನುವ ಪ್ರಶ್ನೆಯನ್ನೇ ಮರೆತಂತಿದೆ. ಯಾವುದೇ ವಿಚಾರದಲ್ಲಾಗಲೀ, ನಿರಂತರ ದಾಳಿ ನಡೆಯುತ್ತಿದ್ದರೆ, ರಕ್ಷಣಾತ್ಮಕವಾಗಿ ಬದಲಾಗುವ ಪ್ರಯತ್ನವನ್ನು ಪ್ರತಿಯೊಂದು ಜೀವಿಯೂ ಮಾಡುತ್ತದೆ. ಜೀವಿ ಎಷ್ಟೇ ಸೂಕ್ಷ್ಮವಾಗಿರಲಿ, ಎಷ್ಟೇ ಘನವಾಗಿ ಇರಲಿ – ಬದಲಾವಣೆಯ ಪ್ರಯತ್ನ ನಿರಂತರವಾಗಿರುತ್ತದೆ.
ಈ ಸ್ವಚ್ಛತೆಯ ಗೀಳುರೋಗದಿಂದ ಮುಕ್ತಿ ಹೇಗೆ? ಅಷ್ಟಕ್ಕೂ ಕೀಟನಾಶಕ ಸುರಿದ ಕೂಡಲೇ ಆ ಜಾಗ ಸ್ವಚ್ಛವಾಯಿತು ಎಂಬುದು ಹೇಗೆ ಸಾಬೀತಾಗುತ್ತದೆ?
ಇನ್ನೂ ಸೂಕ್ಷ್ಮವಾಗಿ ಹೇಳಬೇಕೆಂದರೆ ಮನುಷ್ಯನು, ತನಗೆ ಬಂದಿರುವ ರೋಗವೊಂದು ವಾಸಿಯಾಗಲಿ ಎಂದು ಔಷಧಿಗಳನ್ನು ತೆಗೆದುಕೊಂಡರೆ, ರೋಗವನ್ನು ಹೊತ್ತು ತಂದ ಸೂಕ್ಷ್ಮಜೀವಿಗಳು ಈ ಔಷಧಿಗೆ ಕ್ಯಾರೇ ಅನ್ನದೇ ದೇಹವನ್ನು ಪೀಡಿಸುವ ಕೆಲಸವನ್ನು ಮುಂದುವರೆಸುತ್ತವೆ. ಈ ಸೂಕ್ಷ್ಮಜೀವಿಗಳ ಪ್ರತಿರೋಧ ಎಷ್ಟರ ಮಟ್ಟಿಗೆ ಸಬಲವಾದುದು ಎಂದರೆ ಮನುಷ್ಯರು ಈಗಾಗಲೇ ಕಂಡುಹಿಡಿದ ಔಷಧಿಗಳೆಲ್ಲ “ಫೇಲ್” ಆಗುವ ಕಾಲವೂ ಬರಬಹುದು.
ಈ ಆತಂಕದ ವಿಚಾರವನ್ನು ತಿಳಿಸಲು ಮತ್ತು ಆರೋಗ್ಯ ಕ್ಷೇತ್ರದ ನೀತಿ ನಿರೂಪಕರನ್ನು ಎಚ್ಚರಿಸುವ ಸಲುವಾಗಿ ಇತ್ತೀಚೆಗೆ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ ವತಿಯಿಂದ ಜಾಗತಿಕ ವರ್ಚುವಲ್ ಕಾರ್ಯಾಗಾರವೊಂದು ನಡೆಯಿತು. ಸೂಕ್ಷ್ಮ ಜೀವಿಗಳ ಪ್ರತಿರೋಧ (Anti Microbial Resistance) ರೋಗಕ್ಕೆ ವಿರುದ್ಧವಾಗಿ ಕೆಲಸ ಮಾಡುವ ಸ್ವಭಾವವನ್ನು ಕಳೆದುಕೊಳ್ಳುವ ಮೂಲಕ ಇಡೀ ಮನುಷ್ಯಕುಲ ಜಗತ್ತನ್ನೇ ಅಪಾಯಕ್ಕೆ ದೂಡುತ್ತಿದೆ ಎಂಬುದನ್ನು ಈ ಕಾರ್ಯಾಗಾರ ವಿವರಿಸಿತು. “ಮೌನವಾಗಿ ಹರಡುತ್ತಿರುವ ಜಾಗತಿಕ ಸೋಂಕು’’ ಎಂಬ ಶೀರ್ಷಿಕೆಯಡಿ ಈ ಕಾರ್ಯಾಗಾರ ನಡೆಯಿತು.
‘ಒಂದು ವರ್ಷದಲ್ಲಿ ಕೊರೊನಾ ಜಾಗತಿಕ ಸೋಂಕು ಇಡೀ ಜಗತ್ತನ್ನೇ ಹೀಗೆ ಹಿಡಿದು ನಿಲ್ಲಿಸಿದೆ! ಹಾಗಾದರೆ ಔಷಧಿಗಳನ್ನು ತೆಗೆದುಕೊಂಡ ವ್ಯಕ್ತಿಗಳು ಗುಣಮುಖರಾಗುವ ಸಾಮರ್ಥ್ಯವನ್ನು ಕಳೆದುಕೊಂಡರೆ, ಮುಂದಕ್ಕೆ ಎಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬುದನ್ನು ಕಲ್ಪಿಸಿಕೊಳ್ಳಲೂ ಭಯವಾಗುತ್ತಿದೆ ಎಂದು ಕಾರ್ಯಾಗಾರ ಉದ್ಘಾಟಿಸಿದ ಸಿಎಸ್ ಇ ಪ್ರಧಾನ ನಿರ್ದೇಶಕಿ ಸುನೀತಾ ನಾರಾಯಣ್ ಆತಂಕ ವ್ಯಕ್ತಪಡಿಸಿದರು. ಜಗತ್ತಿನ 26 ದೇಶಗಳ ತಜ್ಞರು ಈ ವರ್ಚುವಲ್ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಸೂಕ್ಷ್ಮ ಜೀವಿಗಳು ತಮ್ಮ ಪ್ರತಿರೋಧ ಸ್ವಭಾವವನ್ನು ಬದಲಾಯಿಸಿಕೊಂಡರೆ, ಆರೋಗ್ಯ ಕ್ಷೇತ್ರವು ಎದುರಿಸುವ ಸವಾಲುಗಳು ಏನೇನು ಎಂಬುದನ್ನು ಚರ್ಚಿಸುವುದು, ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳೇನು ಎಂಬುದನ್ನು ಚಿಂತಿಸುವುದು ಆ ಕಾರ್ಯಾಗಾರದ ಉದ್ದೇಶವಾಗಿತ್ತು. ಮನುಷ್ಯರು, ಪ್ರಾಣಿಗಳು ಮತ್ತು ಪರಿಸರ ಆರೋಗ್ಯ ಕ್ಷೇತ್ರವು ಪರಸ್ಪರ ಪೂರಕವಾಗಿ, ಸಹಕಾರದೊಂದಿಗೆ ಈ ಸಮಸ್ಯೆಯನ್ನು ಎದುರಿಸಬೇಕಾಗಿದೆ ಎಂಬ ಪರಿಹಾರ ರೂಪದ ಚರ್ಚೆಯೂ ನಡೆಯಿತು.
ಮುಂದುವರೆದ ಜಗತ್ತಿನ ರಾಷ್ಟ್ರಗಳು ಮಾಲಿನ್ಯ ಸೃಷ್ಟಿ ಮಾಡಿ, ನಂತರ ಅದನ್ನು ಸ್ವಚ್ಛ ಮಾಡಲು ಯೋಜನೆಗಳನ್ನು ಹಮ್ಮಿಕೊಳ್ಳುತ್ತದೆ. ಆದರೆ ಭಾರತದಂತಹ ರಾಷ್ಟ್ರಗಳಲ್ಲಿ ಮೊದಲು ಮಾಲಿನ್ಯ ಸೃಷ್ಟಿ ಮಾಡಿ, ಬಳಿಕ ಅದನ್ನು ಸ್ವಚ್ಛ ಮಾಡುವ ಯೋಜನೆಗಳನ್ನು ರೂಪಿಸಿದಲ್ಲಿ ಅದು ಬಹಳ ದುಬಾರಿ ಆಗುತ್ತದೆ. ಆದ್ದರಿಂದ ಭಾರತವೆಂದೇನಲ್ಲ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪಾಲಿಗೆ ಮುನ್ನೆಚ್ಚರಿಕೆ ವಹಿಸುವ, ಜಾಗೃತಿ ಮೂಡಿಸುವ ಕೆಲಸಗಳೇ ಹೆಚ್ಚು ಉತ್ತಮವಾದುದು ಎಂದು ಸುನೀತಾ ನಾರಾಯಣ್ ವಾಸ್ತವಾಂಶಗಳನ್ನು ವಿವರಿಸುತ್ತಾರೆ.
ಭಾರತದಲ್ಲಿರುವ ವಿಶ್ವಸಂಸ್ಥೆಯ ಪ್ರತಿನಿಧಿ ರೊಡಿರಿಕೊ ಆಫ್ರಿನ್ ಹೇಳುವ ಮಾತುಗಳನ್ನು ಕೇಳಿದರೆ ಭಯವಾಗುತ್ತದೆ. ‘ಜಗತ್ತಿನಲ್ಲಿ ಉತ್ಪಾದನೆಯಾಗುವ ಆಂಟಿಮೈಕ್ರೋಬಿಯಲ್ ಗಳ ಪೈಕಿ ಶೇ 30ರಷ್ಟು ಆಂಟಿಮೈಕ್ರೋಬಿಯಲ್ ಗಳನ್ನು ಮಾತ್ರ ಮನುಷ್ಯರ ಮೇಲೆ ಬಳಸಲಾಗುತ್ತದೆ. ಉಳಿದ ಶೇ 70 ರಷ್ಟನ್ನು ಪ್ರಾಣಿಗಳ ಮೇಲೆ ಬಳಸಲಾಗುತ್ತದೆ. ಇದರಲ್ಲಿ ಶೇ 80-ರಷ್ಟು ಪರಿಸರಕ್ಕೆ ತಳ್ಳಲ್ಪಡುತ್ತದೆ’. ಅಂದರೆ ನಾವು ಸಮತೋಲಿತ ದೃಷ್ಟಿಯಿಂದ ಇನ್ನಾದರೂ ಕ್ರಮ ತೆಗೆದುಕೊಳ್ಳುವುದನ್ನು ಶುರು ಮಾಡಬೇಕಿದೆ. ಅತಿಯಾದರೆ ಅಮೃತವೂ ವಿಷವಾಗುವುದು. ರೋಗ ಹರಡುವ ಸೂಕ್ಷ್ಮ ಜೀವಿಗಳಿಗೆ ವಿರುದ್ಧವಾಗಿ ಸಾಕಷ್ಟು ‘ಪ್ರತಿರೋಧ’ ಇದ್ದಾಗ ಮಾತ್ರ ಅಂತಹ ಸೂಕ್ಷ್ಮಜೀವಿಗಳು ಔಷಧಿ ಎನಿಸಿಕೊಳ್ಳುತ್ತವೆ.
ಪ್ರತೀವರ್ಷ ಜಗತ್ತಿನಲ್ಲಿ ಏಳು ಲಕ್ಷ ಜನರು ಈ ‘ಆಂಟಿ ಮೈಕ್ರೋಬಿಯಲ್ ರೆಸಿಸ್ಟೆನ್ಸ್’ನ ಕಾರಣದಿಂದ ಸಾವನ್ನಪ್ಪುತ್ತಿದ್ದಾರೆ. ಅಂದರೆ ಅವರಿಗೆ ಬಂದ ರೋಗವನ್ನು ಗುಣಪಡಿಸುವಲ್ಲಿ ಔಷಧಿಗಳು ವಿಫಲವಾಗಿವೆ. ಅದರರ್ಥ, ರೋಗ ತರುವ ಸೂಕ್ಷ್ಮ ಜೀವಿಗಳು, ಔಷಧಿಯನ್ನು ಕಂಡು ಹೆದರದೇ, ದೇಹದೊಳಗೆ ಯಾವುದೇ ಎಗ್ಗಿಲ್ಲದೇ ತಮ್ಮ ಸಾಮ್ರಾಜ್ಯ ವಿಸ್ತರಿಸುತ್ತಲೇ ಸಾಗುತ್ತವೆ. 2050ರ ವೇಳೆಗೆ ಹೀಗೆ ರೋಗ ವಾಸಿ ಮಾಡಲು ಔಷಧಿಗಳು ವಿಫಲವಾಗುವ ಕಾರಣದಿಂದಾಗಿ, 10 ದಶಲಕ್ಷ ಜನರು ಜೀವ ಕಳೆದುಕೊಳ್ಳುವ ಭಯವಿದೆ. ಏಷ್ಯಾ ಮತ್ತು ಆಫ್ರಿಕಾದಲ್ಲಿ ಈ ಸಂಖ್ಯೆ ಹೆಚ್ಚಾಗುವ ಸಂಭವವಿದೆಯಂತೆ.
ಪ್ರಕೃತಿಯ ಮೇಲೆ ಸವಾರಿ ಹೊರಟಿರುವ ಮನುಷ್ಯ ಯಾವುದೇ ಸಮಸ್ಯೆಯನ್ನಾದರೂ ಒಂದಲ್ಲ ಒಂದು ರೀತಿಯಲ್ಲಿ ಬಗೆಹರಿಸುತ್ತೇನೆ ಎಂಬ ಅತೀ ಆತ್ಮವಿಶ್ವಾಸದಲ್ಲಿದ್ದಾನೆ. ಆ ವಿಶ್ವಾಸವು ಹಂತಹಂತವಾಗಿ ಕುಸಿದು ಬೀಳುತ್ತಿರುವ ಸಂದರ್ಭದಲ್ಲಿ ಮನುಷ್ಯರು ಯೋಚಿಸುವ ವಿಧಾನವನ್ನೇ ಬದಲಾಯಿಸಬೇಕಾಗಿದೆ ಅನಿಸುತ್ತದೆ.
ಮಂಗಳೂರಿನವರಾದ ಕೋಡಿಬೆಟ್ಟು ರಾಜಲಕ್ಷ್ಮಿ ಪತ್ರಕರ್ತೆಯಾಗಿ ಕೆಲಸ ಮಾಡಿದವರು. ‘ಒಂದುಮುಷ್ಟಿ ನಕ್ಷತ್ರ’ ಅವರು ಬರೆದ ಕಥಾ ಸಂಕಲನ. ‘ಅಮ್ಮನ ಜೋಳಿಗೆ’ ಪ್ರಬಂಧ ಸಂಕಲನ.