ಈ ಹಿನ್ನೆಲೆಯಲ್ಲಿ ನಾನೂ ಪ್ರಕಾಶಕ ಆದೆ. ಪುಸ್ತಕ ಮಾರಾಟದಲ್ಲಿ, ಗ್ರಂಥಾಲಯಕ್ಕೆ (ರಾಜ್ಯದಲ್ಲಿನ ಗ್ರಂಥಾಲಯಗಳಿಗೆ ಅವರು ಕೇಳಿದಾಗ ಎರಡು ಮೂರು ಪ್ರತಿ ರವಾನಿಸಬೇಕು)ಕೊಡುವಲ್ಲಿ ಮತ್ತು ಕೆಲವು ಸಲ ಲಂಚವನ್ನು ಕೊಡಬೇಕಾದ ಸಂದರ್ಭ ಸಹ ಹುಟ್ಟುತ್ತದೆ… ಈ ಸಮಸ್ಯೆ ಆಳಕ್ಕೆ ಇಳಿದ ಹಾಗೆ ಇದು ನನ್ನಂತಹ ಸಭ್ಯ, ಸಜ್ಜನನಿಗೆ ಸರಿಹೋಗದ ವ್ಯಾಪಾರ ಅನಿಸಿತಾ? ಇನ್ನುಮೇಲೆ ಪ್ರಕಾಶಕ ಎಂದು ಕರೆಸಿಕೊಳ್ಳಬಾರದು ಎಂದು ನಿರ್ಧರಿಸಿದೆ. ಹೀಗೆ ಒಬ್ಬ ಪ್ರಕಾಶಕ ಆಗಿ ಪೆಂಗ್ವಿನ್ ಅಂತಹ ದೊಡ್ಡ ಸಂಸ್ಥೆಗೆ ಪೈಪೋಟಿ ಕೊಡುವ ನನ್ನಾಸೆ ಅಂದೇ ಕಮರಿ ಹೋಯಿತು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೮ನೇ ಬರಹ ನಿಮ್ಮ ಓದಿಗೆ
ಹೋದ ಕಂತು ಹೀಗೇ ತಾನೇ ಮುಗಿಸಿದ್ದು…
ಕಥಾ ಕಾರಂಜಿ ಕಾರ್ಯಕ್ರಮದಲ್ಲಿ ಶ್ರೀ ಶರ್ಮಾ ಅವರೊಬ್ಬರೇ ಮಾತಾಡಿದ್ದು. ನನ್ನ ಸಂಕಲನದ ಬಗ್ಗೆ ಸಖತ್ ಜಾಡಿಸಿಬಿಟ್ಟರು! ಎಂಬತ್ತು ವರ್ಷ ಹಿಂದೆ ಮಾಸ್ತಿ ಬರೆದ ಹಾಗೇ ಈಗಲೂ ಬರೆದರೆ ಕತೆಗಳು ಬೆಳೆಯೋದು ಬೇಡವೇ…. ಹೀಗೆ ಅವರ ಭಾಷಣ ಇತ್ತು. ಆರುನೂರು ಪುಸ್ತಕ ಮಾರಿದರಂತೆ….. ಅಂತ ನಕ್ಕರು! ನಮ್ಮ ಗೆಳೆಯ ಸಹೋದ್ಯೋಗಿ ಮತ್ತು ಕನ್ನಡ ಪರಿಚಾರಕ ಶ್ರೀ ಎಂ ಎ ವೆಂಕಟೇಶ್ ಅವರೂ ಜಯನಗರದವರು. ವಾಪಸ್ ಅತಿಥಿಗಳ ಜತೆ ಅದೇ ಕಾರಿನಲ್ಲಿ ವಾಪಸ ಹೋದರು. ಕಾರ್ ನಲ್ಲಿ ಶ್ರೀ ಶರ್ಮಾ ಅವರಿಗೂ ಶ್ರೀ ನರಸಿಂಹ ಮೂರ್ತಿ ಅವರಿಗೂ ನನ್ನ ಸಂಕಲನದ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯಿತು ಎಂದು ಮಾರನೇ ದಿವಸ ತಿಳಿಸಿದರು. ಪುಸ್ತಕ ಮಾರಾಟ ಆಗಿರುವುದು ಸತ್ಯ ಎಂದು ವೆಂಕಟೇಶ್ ತಿಳಿಸಿದರಂತೆ…
ವಂದನಾರ್ಪಣೆ ಸಮಯ ಬಂತಾ?
ಮುಳಕುಂಟೆ ಪ್ರಕಾಶ್ ಒಬ್ಬೊಬ್ಬರ ಹೆಸರು ಹೇಳುವುದು. ಹೆಸರಿನವರು ಬಂದು ಹಾರ ಹಾಕುವುದು… ಇದು ಯೋಜಿತ ವ್ಯವಸ್ಥೆ. ಇಳಾ ಮುದ್ರಣಾಲಯದಿಂದ ಶ್ರೀಮತಿ ವಿಜಯ ಅವರೂ ಕಾರ್ಯಕ್ರಮಕ್ಕೆ ಬಂದಿದ್ದರು.ಅವರಿಗೆ ಮಾಲಾರ್ಪಣೆ ಶ್ರೀಮತಿ ಪ್ರಭಾ (ಇದು ನನ್ನ ಬಾಸ್) ಅವರಿಂದ ಆಗಬೇಕು, ನಮ್ಮ ರೂಪು ರೇಷೆ ಪ್ರಕಾರ.
ಮುಳ ಕುಂಟೆ ಪ್ರಕಾಶ್ ಈಗ ಇಳಾ ಮುದ್ರಣಾಲಯದ ಶ್ರೀಮತಿ ವಿಜಯ ಅವರಿಗೆ ಶ್ರೀಮತಿ ಪ್ರಭಾ ಅವರಿಂದ ಮಾಲಾರ್ಪಣೆ ಎಂದು ಅನೌನ್ಸ್ ಮಾಡಿದರು. ತಟಕ್ಕನೆ ಒಂದು ಹುಡುಗಿ ಹಾರ ತೆಗೆದುಕೊಂಡು ಶ್ರೀಮತಿ ವಿಜಯ ಅವರ ಕೊರಳಿಗೆ ಹಾಕಿ ಬಿಟ್ಟಿತು. ಮುಂದೆ ಬಂದ ನನ್ನಾಕೆ ಮುಜುಗರದಿಂದ ಹಿಂದೆ ಸರಿದರು.ಮುಳ ಕುಂಟೆ ಪ್ರಕಾಶ್ ಮುಖದಲ್ಲಿ ಗೊಂದಲ ಗಲಿಬಿಲಿ ಕಾಣಿಸಿದರೆ ಅದನ್ನು ಮಾಚಿ(ಮಾಚಿ ಅಂದರೆ ಮರೆಸಿ ಅಂತ.) ಅವರು ಮುಂದಿನ ಮಾಲಾರ್ಪಣೆಗೆ ಮುಂದಾದರು.
ಲಲಿತಾ ಅವರ ಬಂಧು ಒಬ್ಬರಿಗೆ ಈ ಹಾರಹಾಕುವ ಕೆಲಸ ಒಪ್ಪಿಸಿ ಅದನ್ನು ನಿರೂಪಕರಿಗೆ ಲಲಿತಾ ಅವರು ತಿಳಿಸಿರಲಿಲ್ಲ. ಅದರಿಂದ ಈ ಅಭಾಸ ಆಯಿತು ಎಂದು ನಂತರ ತಿಳಿಯಿತು!
ಇದರ ಎಫೆಕ್ಟ್ ಸುಮಾರು ದಿವಸ ಸುಮಾರು ಕಡೆ ಆಯಿತು ಅಂತ ಬೇರೆ ಹೇಳಬೇಕಿಲ್ಲ. ಅದರದ್ದೇ ಒಂದು ಪುರಾಣ…. ಪುಸ್ತಕ ಮಾರಾಟದ ವಿಕ್ರಮ ಮತ್ತು ಅದರಿಂದ ಉಂಟಾದ ಮುಜುಗರಗಳು, ಪುಸ್ತಕದ ಸಂಬಂಧ ಕರ್ನಾಟಕ ಸರ್ಕಾರದ ಮೇಲೆ ಕೇಸ್ ಹಾಕಿದ್ದು….. ಹೀಗೆ ಹತ್ತು ಹಲವು ನೆನಪುಗಳು ತಲೆ ತುಂಬಾ ತುಂಬಾ ತುಂಬಾ ತುಂಬುತ್ತಿವೆ…
ಈಗ ಮುಂದಕ್ಕೆ ಹೋಗಲಾ ತಮ್ಮ ಅನುಮತಿ ಇದೆ ಎಂದು ಭಾವಿಸಿ…
ಮೊದಲು ಸರ್ಕಾರದ ಮೇಲಿನ ದಾವೆ ಬಗ್ಗೆ ತುಂಬಾ ಚಿಕ್ಕದಾಗಿ ಹೇಳಿಬಿಡುತ್ತೇನೆ. ಅದಕ್ಕೊಂದು ಪೂರಕ ಸಂಗತಿ ಹೇಳಬೇಕು. ಅದರ ಪ್ಯಾರಲಲ್ ಆಗಿ ಕತೆ ಮುಂದಕ್ಕೆ ಹೋಗುತ್ತೆ.

ಪುಸ್ತಕ ಪ್ರಕಾಶನ ಮತ್ತು ಮಾರಾಟ… ಎಪ್ಪತ್ತರ ದಶಕದಲ್ಲಿ ಕನ್ನಡ ಪ್ರಕಾಶನ ಉದ್ಯಮ ದೊಡ್ಡ ಬಿಕ್ಕಟ್ಟು ಎದುರಿಸುತ್ತಿತ್ತು. ಪುಸ್ತಕ ಪ್ರಕಟಣೆ ಮತ್ತು ಮಾರಾಟ ವ್ಯವಸ್ಥೆ ಎರಡಕ್ಕೂ ತಾಳೆ ಇರಲಿಲ್ಲ. ಪ್ರಕಾಶನಗೊಂಡ ಪುಸ್ತಕಗಳು ವರ್ಷಾನುಗಟ್ಟಲೆ ಮನೆಯ ಗೋದಾಮಿನ ಅಟ್ಟದ ಮೇಲೇ ಇರುತ್ತಿತ್ತು. ಇದರಿಂದ ಶಾಶ್ವತ ಸಾಹಿತ್ಯ ಅನ್ನುವ ಪಟ್ಟ ಪಡೆದಿತ್ತು. ಗೋದಾಮಿನ ಅಟ್ಟ ಎಂದಕೂಡಲೇ ನನಗೊಂದು ಪ್ರಸಂಗ ತಲೆಯಲ್ಲಿ ನುಗ್ಗಿಕೊಂಡು ಬಂದಿದೆ. ಶ್ರೀ ದ ರಾ ಬೇಂದ್ರೆ ಅವರ ನಾಕು ತಂತಿ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ ಬಂತು ನೋಡಿ ಆಗಿನ ನೆನಪು ಇದು. ೧೯೭೩ರಲ್ಲಿ ಈ ಪ್ರಶಸ್ತಿ ಬಂತು ಅಂತ ಕಾಣ್ಸುತ್ತೆ. ಬೇಂದ್ರೆಯವರ ಕಾವ್ಯ ಅಂದರೆ ಅದು ಶಬ್ದಗಳ ಗಾರುಡಿ. ‘ನಾಕುತಂತಿ’ ಕೇವಲ ಒಂದು ಸಂಕಲನವಲ್ಲ; ಅದು ಮಾನವನ ಅಧ್ಯಾತ್ಮಿಕ ಮತ್ತು ಮನೋವೈಜ್ಞಾನಿಕ ಆಯಾಮಗಳನ್ನು (ನಾನು, ನೀನು, ತಾನು, ಎಂಬ ನಾಲ್ಕು ತಂತಿಗಳ ಮೂಲಕ) ವಿಶ್ಲೇಷಿಸುವ ಅದ್ಭುತ ಕೃತಿ. ಇಂತಹ ಅಪೂರ್ವ ಕೃತಿಯನ್ನು ಈವರೆಗೆ ಓದಿಲ್ಲವೇ ಎನ್ನುವ inferiority complex ನನ್ನನ್ನು ಬಾಧಿಸಲು ಶುರು ಆಗಬೇಕೇ… ಒಂದು ರೀತಿಯ ಸಂಕಟ, ಒಳಭಾದೆ ಕಾಡಬೇಕೇ..? ಈ ವಾಕ್ಯ ಟೈಪಿಸಬೇಕಾದರೆ ಮತ್ತೊಂದು ಸಂಶಯ ಹುಟ್ಟಿದೆ ನೋಡಿ… ಭಾದೆ ಸರಿಯೋ ಬಾಧೆ ಸರಿಯೋ? ಒಂದು ಎರಡು ವರ್ಷ ಹಿಂದೆ ಆಗಿದ್ದರೆ ರೂಮಿಗೆ ಹೋಗಿ ಶೆಲ್ಫಿನಲ್ಲಿ ಇರುತ್ತಿದ್ದ ಭಾರದ್ವಾಜ ತೆಗೆದು ಸರಿ ಯಾವುದು ಅಂತ ನೋಡಿ ಬರ್ತಾ ಇದ್ದೆ. ಭಾರದ್ವಾಜ ಅಂದರೆ ಭಾರದ್ವಾಜ ಅವರು ಬರೆದಿರುವ ನಿಘಂಟು! ಆದರೆ ಈಗ ಜೀವನ ಹೇಗೆ ಸಲೀಸು ಆಗಿದೆ ಅಂದರೆ ಅಂಗೈಯಲ್ಲಿ AI ಇರ್ತದೆ. ಅದಕ್ಕೆ ಯಾವುದು ಸರಿ ಸರ? ಭಾದೆ ಬಾಧೆ? ಅಂತ ಕ್ವೆಶ್ಚನ್ ಎಸೆದೆ. ಅದು ಹೀಗೆ ಅಪ್ಪಣೆ ಕೊಡಿಸಿತು….” ಕನ್ನಡದಲ್ಲಿ ‘ಬಾಧೆ’ ಎಂಬುದು ಸರಿಯಾದ ರೂಪ.
Inferiority ಬಾಧೆ ತಪ್ಪಿಸಿಕೊಳ್ಳಲು ನಾಕು ತಂತಿ ತರಬೇಕು ತಂದು ಓದಬೇಕು ಅನ್ನುವ ಪ್ರಬಲವಾದ ಉಮೇದು ಹುಟ್ಟಬೇಕೇ?
ಸೀದಾ ಮೆಜೆಸ್ಟಿಕ್ ಹೋದೆ. ಬಳೆಪೇಟೆ ರಸ್ತೆಯ ಮೂಲೆಯಲ್ಲಿದ್ದ ಗೀತಾ ಏಜೆನ್ಸಿ ಮೆಟ್ಟಲು ಹತ್ತಿದೆ. ಇನ್ನೂ ಬೆಳಿಗ್ಗೆ ಹತ್ತು ಗಂಟೆ ಆಗ. ಆಗತಾನೇ ಅಂಗಡಿ ಬಾಗಿಲು ತೆರೆದಿದ್ದರು ಅಂತ ಕಾಣ್ಸುತ್ತೆ. ಅಂಗಡಿ ಒಳಹೊಕ್ಕೆ. ಎದುರು ಯಜಮಾನರು ಕೂತಿದ್ದರು, ಯಾವುದೋ ಪೋಸ್ಟ್ ನೋಡುತ್ತಾ ಇದ್ದರು.
ಏನು ಬೇಕು… ಅಂದರು.
ನಾಕು ತಂತಿ, ಬೇಂದ್ರೆ ಅವರ ನಾಕು ತಂತಿ ಬೇಕು ಇದೆಯಾ..? ಅಂದೆ.
ಹೂಂ ಇದೆ. ಈಗಲೇ ಬೇಕಾ?
ಹೌದು ಅಂತ ತಲೆ ಆಡಿಸಿದೆ. ಅವರೆದುರಿನ ಸ್ಟೂಲ್‌ನಲ್ಲಿ ಕೂತೆ. ಅವರು ಒಂದು ಮರದ ಏಣಿ ಹಾಕಿಕೊಂಡು ಅಟ್ಟ ಹತ್ತಿದರು. ಸುಮಾರು ಇಪ್ಪತ್ತು ಮೂವತ್ತು ನಿಮಿಷ ಡಬ್ಬ ಸರಿಸಿದ, ಪರ ಪರ ಹಾಳೆ ಹರಿದ, ಧೂಳು ಹೊಡೆದ ಶಬ್ದ ಕೇಳಿಸುತ್ತಿತ್ತು. ಕೊನೆಗೆ ಕೈಯಿಂದ ಒಂದು ಪುಸ್ತಕದ ಕಟ್ಟಿನ ಮೇಲಿನ ಧೂಳು ಜಾಡಿಸುತ್ತಾ ಅಟ್ಟ ಇಳಿದರು. ಅವರ ತಲೆ ಮೈ ಬಟ್ಟೆಗಳು ಧೂಳಿನಿಂದ ಆಗ ತಾನೇ ಅಭ್ಯಂಜನ ಮಾಡಿಕೊಂಡ ಹಾಗಿತ್ತು. ಪಾಪ ಅವರಿಗೆ ತೊಂದರೆ ಕೊಟ್ಟೆ ಅಂತ ಮನಸು ಪಿಚ್ ಆಯಿತು.
“ನಿಮಗೆ ತೊಂದರೆ ಕೊಟ್ಟೆ ಇವರೇ…..” ಅಂದೆ.
“ತೊಂದರೆ ಏನಿಲ್ಲ ಸ್ವಾಮಿ. ಪುಸ್ತಕ ಮೂಲೆಯಲ್ಲಿ ಎಲ್ಲೋ ಸೇರಿತ್ತು. ಹುಡುಕೋಕೆ ಇಷ್ಟು ಹೊತ್ತಾಯಿತು. ಕೆಲವರು ಬರ್ತಾರೆ. ಪುಸ್ತಕ ಇದೆಯಾ ಅಂತ ಕೇಳ್ತಾರೆ. ಹುಡುಕಿ ಕೊಟ್ಟರೆ ನೋಡಿ ಆಮೇಲೆ ಬರ್ತೀನಿ ಅಂತ ಹೋಗಿಬಿಡ್ತಾರೆ. ಅದಕ್ಕೇ ನಿಮಗೆ ಈಗಲೇ ಬೇಕಾ ಅಂತ ಕೇಳಿದ್ದು….” ಅಂತ ಹೇಳಿದರು. ಕೆಲವು ಪ್ರತಿ ಕೊಂಡೆ. ಡಿಸ್ಕೌಂಟ್ ಕೊಡಲಿಲ್ಲ ಅವರು ಅನ್ನುವ ಸಂಕಟ ಈಗಲೂ ಉಂಟು.
ಈಗ ಇದು ಯಾಕೆ ನೆನಪಿಗೆ ಬಂತು ಅಂದರೆ ಅಂತಹ ಹೆಸರು ಮಾಡಿದ್ದ ಹಿರಿಯ ಕವಿಗಳ ಪುಸ್ತಕದ ಗಂಟು ಅಟ್ಟದ ಮೇಲೆ ದಿನ ದೂಡಿತ್ತು ನೋಡಿ ಅದರಿಂದ. ಪ್ರಕಾಶಕರ ಪುಸ್ತಕ ಮಾರಾಟದ ಸಂಕಟ ಮತ್ತು ನೋವು ಇವುಗಳ ಒಂದು ಪಾರ್ಶ್ವ ನೋಟ ಇದು. ಇದು ೧೯೭೩ರ ಕತೆ ತಾನೇ. ಪುಸ್ತಕ ಪ್ರಕಾಶಕರು ತಮ್ಮ ಹೊರೆಗೆ ಒಂದು ಪರಿಹಾರ ಕಂಡು ಹಿಡಿಯಲು ಹಲವಾರು ಪ್ರಯತ್ನ ನಡೆಸಿದ್ದರು. ಅಂತಹ ಒಂದು ಪ್ರಯತ್ನ ಎಂದರೆ ಪ್ರಕಟಿತ ಪುಸ್ತಕದ ಮುನ್ನೂರು ಪ್ರತಿ ಸರ್ಕಾರವೇ ಕೊಳ್ಳುವುದು. ಈ ಯೋಜನೆ ಸರ್ಕಾರದಿಂದ ಅಂಗೀಕೃತವಾಗಿ ಸರ್ಕಾರ ಪುಸ್ತಕ ಕೊಳ್ಳುವ ಒಂದು ಯೋಜನೆ ಜಾರಿಯಲ್ಲಿತ್ತು. ಇದರಿಂದ ದೊಡ್ಡ ದೊಡ್ಡ ಪ್ರಕಾಶಕರಿಗೆ ಹೆಚ್ಚು ಅನುಕೂಲವಾಯಿತು. ನನ್ನಂತಹ ಒಂದು ಪುಸ್ತಕ ಪ್ರಕಾಶಿಸಿದವರಿಗೂ ಮೊದ ಮೊದಲು ಅನುಕೂಲ ಆಗಿತ್ತು. ಅದರಿಂದ ಪುಸ್ತಕ ಪ್ರಕಾಶನಕ್ಕೆ ನಾನೇ ಕೈ ಹಾಕಿದ್ದೆ. ಮುನ್ನೂರು ಪುಸ್ತಕ ಸರ್ಕಾರ ಕೊಳ್ಳುವ ಯೋಜನೆ, ಜತೆಗೆ ರಾಜಾರಾಮ್ ಮೋಹನ ರಾಯ್ ಯೋಜನೆಯಡಿಯಲ್ಲಿ ಗ್ರಂಥಾಲಯವು ಸಹ ನೂರಾ ಐವತ್ತು ಪುಸ್ತಕ ಕೊಳ್ಳುವ ಯೋಜನೆ ಜಾರಿಯಿತ್ತು. ಇದರೊಂದಿಗೆ ನಗರ ಕೇಂದ್ರ ಗ್ರಂಥಾಲಯಗಳು ಅವುಗಳ ಮರ್ಜಿಗೆ ತಕ್ಕಂತೆ ಹತ್ತು ಇಪ್ಪತ್ತು ಪ್ರತಿಕೊಳ್ಳುವ ಪರಿಪಾಠ ಇತ್ತು. ಈಗಲೂ ಸದರಿ ಯೋಜನೆಗಳು ಜಾರಿಯಲ್ಲಿದ್ದರೂ ಸರ್ಕಾರದ ಇಲಾಖೆ ಐದಾರು ವರ್ಷಗಳಿಂದ ಪುಸ್ತಕ ಕೊಂಡಿಲ್ಲ ಎನ್ನುವ ಕೊರಗನ್ನು ಆಗಾಗ ಪತ್ರಿಕೆಯಲ್ಲಿ ಓದುತ್ತೇವೆ.
ಸರ್ಕಾರ ಪುಸ್ತಕ ಕೊಳ್ಳಲು ಅರ್ಜಿ ಆಹ್ವಾನಿಸುವುದು, ಆಯ್ಕೆ ಪ್ರಕ್ರಿಯೆ ಇವುಗಳಿಗೆ ಒಂದು ಸಮಿತಿ ನೇಮಕವಾಗುತ್ತದೆ. ಸಮಿತಿ ಕೆಲವು ನಿಯಮಗಳನ್ನು ರೂಪಿಸಿ ಪುಸ್ತಕ ಸಲ್ಲಿಸಲು ಪ್ರಕಟಣೆ ಹೊರಡಿಸುತ್ತದೆ.
ಈ ಪ್ರಕಟಣೆಗೆ ಎಲ್ಲ ಪ್ರಕಾಶಕರು ಕಾಯುತ್ತಾರೆ.
ನಾನೂ ಪುಸ್ತಕವನ್ನು ಪ್ರಕಟಣೆ ಸೂಚಿಸಿದ ರೀತಿಯೇ ಸಲ್ಲಿಸಿದೆ. ಆಯ್ಕೆ ಆಗೇ ಆಗುತ್ತದೆ ಎನ್ನುವ ಬಲವಾದ ನಂಬಿಕೆ ಸಹ ಇತ್ತು. ಪ್ರಶಸ್ತಿ ವಿಜೇತ ಕೃತಿ ತಾನೇ!
ಎರಡು ಮೂರು ತಿಂಗಳಲ್ಲಿ ಸಮಿತಿ ಪುಸ್ತಕದ ಆಯ್ಕೆ ಮಾಡಿತು. ಆಶ್ಚರ್ಯ ಎಂದರೆ ಸುಮಾರು ಒಳ್ಳೆಯ ಪುಸ್ತಕಗಳು ಆಯ್ಕೆ ಆಗಿರಲಿಲ್ಲ. ಆಯ್ಕೆ ಸಮಿತಿ ತನ್ನ ನಿಯಮಗಳನ್ನೇ ಮುರಿದು ಪುಸ್ತಕ ಆಯ್ಕೆ ಮಾಡಿತ್ತು. ಅದರಲ್ಲಿ ಪ್ರಮುಖವಾಗಿದ್ದು ಮೊದಲನೇ ಮುದ್ರಣ ಆಗಿರಬೇಕು ಎನ್ನುವ ನಿಯಮ ಮೀರಿ ಹತ್ತನೇ ಪುನರ್ಮುದ್ರಣದ ಪುಸ್ತಕ ಆಯ್ಕೆ ಆಗಿತ್ತು. ಇದೇ ರೀತಿ ಹಲವು ಎದ್ದುಕಾಣುವ ದೋಷಗಳೂ ಇದ್ದವು!
ಸಹಜವಾಗಿ ಸರ್ಕಾರದ ಕಡೆಯಿಂದ ಇಂತಹ ತಪ್ಪುಗಳು ಆದಾಗ ನನ್ನಂತಹವರು ಸಿಡಿದು ಏಳಬೇಕು ತಾನೇ? ನನ್ನ ರೀತಿಯ ಐದಾರು ಜನ ಸೇರಿದೆವು.
ಸಿಡಿದೆವು ಮತ್ತು ಎದ್ದೆವು! ನನ್ನ ಗೆಳೆಯ ನಟರಾಜ್ ಈ ವೇಳೆಗೆ ವಕೀಲಿ ವೃತ್ತಿ ಕೈಗೊಂಡಿದ್ದ. ಅವನ ಮೂಲಕ ಸರ್ಕಾರದ ವಿರುದ್ಧ ಒಂದು ದಾವೆ ದಾಖಲಾಯಿತು. ಸರ್ಕಾರದ ವಿರುದ್ಧ ಹೈ ಕೋರ್ಟ್‌ನಲ್ಲಿ ಒಂದು ದಾವೆ ಹೂಡಿದೆವು.
ಆಯ್ಕೆ ಸಮಿತಿ ಮಾಡಿರುವ ಆಯ್ಕೆಗಳು ದೋಷದಿಂದ ಕೂಡಿವೆ, ಅರ್ಧ ದಿವಸದಲ್ಲಿ ಏಳುನೂರು ಚಿಲ್ರೆ ಪುಸ್ತಕ ಆಯ್ಕೆ ಮಾಡಿದ್ದಾರೆ, ಸಮಿತಿ ಸದಸ್ಯರ ಪುಸ್ತಕಗಳೇ ಆಯ್ಕೆ ಆಗಿವೆ, ನಿಯಮ ಮುರಿದು ಹತ್ತನೇ ಮುದ್ರಣದ ಪುಸ್ತಕ ಆಯ್ಕೆ ಆಗಿದೆ. ಸಮಿತಿ ಸದಸ್ಯರು ಆಯ್ಕೆ ಸಂದರ್ಭದಲ್ಲಿ ಪಕ್ಷಪಾತಿ ಆಗಿದ್ದಾರೆ, ಮೂರು ಗಂಟೆ ಅವಧಿಯಲ್ಲಿ ಅಷ್ಟೊಂದು ಪುಸ್ತಕದ ಆಯ್ಕೆಯ ಮಾನದಂಡವೇನು? ಆಯ್ಕೆ ಸಮಿತಿ ಈ ರೀತಿ ಆಯ್ಕೆ ಮಾಡಿದ್ದರಿಂದ ನನ್ನ ಮೂಲಭೂತ ಹಕ್ಕಿಗೆ ಭಾರೀ ಧಕ್ಕೆಯಾಗಿದೆ… ಹೀಗೆ ಸುಮಾರು ಲಾ ಪಾಯಿಂಟ್ ಹಾಕಲಾಗಿತ್ತು. ನಟರಾಜ ಈ ಕೇಸನ್ನು ಹೈ ಕೋರ್ಟ್‌ನಲ್ಲಿ ದಾಖಲಿಸಿದ್ದ. ಕೋರ್ಟು ಇದಕ್ಕೆ ಒಂದು ನಂಬರು ಕೊಟ್ಟಿತ್ತು ಮತ್ತು ನ್ಯಾಯಾಧೀಶರ ಮುಂದೆ ಕೇಸು ಬರಬೇಕಿತ್ತು. ಇಷ್ಟು ವಿವರವಾಗಿ ಯಾಕೆ ಹೇಳುತ್ತಾ ಇದ್ದೀನಿ ಅಂದರೆ ಇದರ ಕ್ಲೈಮ್ಯಾಕ್ಸ್ ಹೇಗಾಯಿತು ಎಂದು ವಿವರಿಸಲು.
ಕೇಸು ದಾಖಲಾದ ಮೇಲೆ ಒಂದು ದಿನ ಒಂದು ಫೋನ್ ಬಂತು.
ದುರ್ಗಪ್ಪನವರ ಮಾತಾಡ್ತಾ ಇರೋದು ಲೈಬ್ರರಿ ಡಿಪಾರ್ಟ್ಮೆಂಟ್‌ನಿಂದ…. ಅಂತ.
ನಾನು ನಿಮ್ಮ ಸಂಗಡ ಮಾತಾಡಬೇಕು ಬನ್ನಿ ಅಂದರು. ಮಾತಾಡಕ್ಕೆ ಅವರ ಕಚೇರಿ ಸೇರಿದೆ. ಕಾಫಿಗೆ ಕರೆದುಕೊಂಡು ಹೋದರು. ಅವರ ಖರ್ಚಲ್ಲೇ ಕಾಫಿ ಆಯಿತು. ನಮ್ಮ ಸಾಹೇಬರು ಮಲ್ಲೇಶಪ್ಪ ಅವರು ನಿಮ್ಮನ್ನ ಮಾತಾಡಿಸಿ ಬಾ ಅಂದರು. ಅದಕ್ಕೇ ನಿಮ್ಮನ್ನು ಕರೆದದ್ದು… ಮಲ್ಲೇಶಪ್ಪ ಎನ್ನುವವರು ಆಗ ಗ್ರಂಥಾಲಯ ಇಲಾಖೆ ಮುಖ್ಯಸ್ಥರು, ಆಗಾಗ ಅವರ ಹೆಸರು ಪೇಪರಿನಲ್ಲಿ ಕಾಣಿಸುತ್ತಾ ಇತ್ತು. ಮುಖ್ಯಸ್ಥರೇ ಹೇಳಿ ಕಳಿಸಿದ್ದಾರೆ ಅಂತ ಒಂದೂವರೆ ಅಡಿ ಎತ್ತರ ಆದೆ!
ನಿಮ್ಮ ಪುಸ್ತಕ ಸರಕಾರಕ್ಕೆ ಸರಬರಾಜು ಮಾಡುವ ಆದೇಶ ಕೊಡ್ತೀನಿ….
ನನ್ನ ತರಹವೇ ಕೇಸ್ ಹಾಕಿದವರು ನನ್ನ ಗುಂಪಿನಲ್ಲಿ ಆರೇಳು ಮಂದಿ ಇದ್ದೇವೆ ಅಂದೆ.
ಸರಿ ಎಲ್ಲರದ್ದನ್ನು ತಗೊತೀವಿ… ಅಂದರು.
ಎರಡು ಮೂರು ದಿನದಲ್ಲಿ ಪುಸ್ತಕ ಸರಬರಾಜು ಮಾಡಿ ಎನ್ನುವ ಆದೇಶ ಬಂದಿತು. ಇದೇ ಪತ್ರದ ಪ್ರತಿ ನನ್ನ ಜತೆ ಕೇಸು ಹಾಕಿದ್ದ ಮಿಕ್ಕವರಿಗೂ ತಲುಪಿತು. ಪುಸ್ತಕ ಸರಬರಾಜಿನ ನಂತರ ಇವರು ಅಂದರೆ ದುರ್ಗಪ್ಪನವರ ಸಿಕ್ಕಿದರು.
ಈಗಲೂ ಕಾಫಿ ಅವರ ಖರ್ಚಿನಲ್ಲೇ ಆಯಿತು.
ನಿಮ್ಮ ಕೇಸು Infructuous ಮಾಡಿಬಿಟ್ಟೆ….. ಅಂತ ನಕ್ಕರು.
Infructuous ಪದದ ಅರ್ಥ ಆ ಕ್ಷಣಕ್ಕೆ ಹೊಳೆಯಲಿಲ್ಲ.
ಏನು ಇವರೇ ಹಾಗಂದರೆ… ಅಂದೆ.
ಕೋರ್ಟ್‌ನಲ್ಲಿ ನಿಮ್ಮ ಕೇಸೇ ಇಲ್ಲ… ಮತ್ತೆ ನಗು.
ನನ್ನ blank ಮುಖ ನೋಡಿ ವಿವರಿಸಿದರು.
ನಿಮ್ಮದು cause of action ಇಲ್ಲ ಈಗ. ಪುಸ್ತಕ ತಗೊಂಡಿಲ್ಲ ಅಂತ ನಿಮ್ಮ ಕೇಸ್ ಇತ್ತು. ಪುಸ್ತಕ ಕೊಂಡ ಮೇಲೆ ನಿಮ್ಮ ಕೋರಿಕೆ ಮನ್ನಾ ಆಯ್ತು ತಾನೇ…..
ಪುಸ್ತಕ ಮಾರಾಟ ಆಗಿತ್ತು ಸರಿ. ಆದರೆ ವ್ಯವಸ್ಥೆಗೆ ಒಂದು ಪಾಠ ಕಲಿಸಬೇಕು ಎನ್ನುವುದು ಮುಖ್ಯ ಉದ್ದೇಶ ಇತ್ತಲ್ಲ? ಅದೇ ಎಗರಿ ಹೋಯ್ತು… ಅಂದರೆ?
ನಮ್ಮ ಪರವಾಗಿ ವಕಾಲತ್ತು ಸಲ್ಲಿಸಿದ್ದ ನಟರಾಜನಿಗೆ ಹೀಗೆ ಹೀಗೆ ಹೀಗಾಯ್ತು ಅಂತ ದುರ್ಗಪ್ಪನವರ ಜತೆಯ ಮಾತು ಕತೆ ವಿವರಿಸಿದೆ. ಪುಸ್ತಕ ಕೊಂಡರಲ್ಲಾ ಬಿಡಿ ಮುಖ್ಯ ಉದ್ದೇಶ ಅದೇ ತಾನೇ ಇದ್ದದ್ದು….
ವ್ಯವಸ್ಥೆಗೆ ಒಂದು ಪಾಠ ಕಲಿಸಬೇಕು ಎನ್ನುವುದು ಸಹ ನಮ್ಮ ಉದ್ದೇಶ ಅಲ್ಲವೇ…?
ಅದಕ್ಕೆ ನಿಮ್ಮ ಬೆಂಬಲಕ್ಕೆ ಯಾರಾದರೂ ಇದ್ದಾರಾ …?
ಈ ವೇಳೆಗೆ ಏನಾಗಿತ್ತು ಅಂದರೆ ವಕಾಲತ್ತು ಸಹಿ ಹಾಕಿದ್ದ ಕೆಲವರು ಲಾಯರ್ ಫೀಸು ಕೊಟ್ಟಿರಲಿಲ್ಲ. ಪಾಪ ಲಾಯರು ಅವರಿಗೆ ಪತ್ರ ಬರೆದರೂ ಅದಕ್ಕೆ ಮಾರುತ್ತರ ಇಲ್ಲ!
ವ್ಯವಸ್ಥೆಗೆ ಪಾಠ ಕಲಿಸುವ ಪ್ರಯತ್ನ ಅಲ್ಲಿಗೆ ನಿಂತಿತು. ಆದರೆ ಒಂದು ದೊಡ್ಡ ಸಮಾಧಾನ ಈಗಲೂ ಇರುವುದು ಕೇಸಿಗೆ ಮನಸು ಮಾಡಿದ್ದರಲ್ಲಿ. ಗೆ. ನಟರಾಜ್ ಹಾಕಿದ ಕೆಲವು ಲಾ ಪಾಯಿಂಟ್ ಈಗಲೂ ಪ್ರಸ್ತುತ. ಅರ್ಧ ದಿವಸದಲ್ಲಿ ಏಳುನೂರು ಚಿಲ್ರೆ ಪುಸ್ತಕ ಆಯ್ಕೆ ಮಾಡಿದ್ದಾರೆ, ಸಮಿತಿ ಸದಸ್ಯರ ಪುಸ್ತಕಗಳೇ ಆಯ್ಕೆ ಆಗಿವೆ, ನಿಯಮ ಮುರಿದು ಹತ್ತನೇ ಮುದ್ರಣದ ಪುಸ್ತಕ ಆಯ್ಕೆ ಆಗಿದೆ….. ಮೊದಲಾದ ಪ್ರಶ್ನೆಗಳನ್ನು ಈಗಲೂ ನ್ಯಾಯಕ್ಕೆ ಹೋರಾಡುವ ಜನ ಕೇಳುತ್ತಾರೆ. ಕನ್ನಡದ ಖ್ಯಾತ ಸಾಹಿತಿ ಒಬ್ಬರ ಹತ್ತನೇ ಮುದ್ರಣದ ಪುಸ್ತಕ ಆಯ್ಕೆ ಆಗಿತ್ತು. ಇದು ಸುದ್ದಿ ಆಗಿದ್ದರೆ (ಐವತ್ತು ವರ್ಷ ಹಿಂದೆ) ಹಿರಿಯರಿಗೆ ಖಂಡಿತ ಮುಜುಗರ ಆಗುತ್ತಿತ್ತು. ಈಗ ಅದೇ ಪ್ರಸಂಗ ರಿಪೀಟ್ ಆದರೂ ಯಾರಿಗೂ ಯಾವುದೇ ರೀತಿಯ ಇರಸು ಮುರುಸು ಆಗದು, ಕಾರಣ ಎಲ್ಲರೂ ಇದರಲ್ಲಿ ಪಾಲುದಾರರು! ಎರಡು ಮೂರು ಪುಸ್ತಕಗಳನ್ನು ಸ್ವಂತ ಪ್ರಕಾಶನದಲ್ಲಿ ಮಾಡಿ ಒಂದು ಚಟ ಬೆಳೆಸಿಕೊಂಡಿದ್ದೆ ಅಂತ ಹೇಳಿದ್ದೆ ಅಲ್ಲವೇ? ಇಲ್ಲ ಅಂದರೆ ಅದನ್ನು ಕುರಿತು ಒಂದು ಪುಟ್ಟ ಟಿಪ್ಪಣಿ ಇಲ್ಲಿ…
ಮೊದಲನೇ ಪುಸ್ತಕ ಪ್ರಿಯ ವೀಕ್ಷಕರೇ… ರಂಗಸ್ವಾಮಿ ಪ್ರಕಾಶಕರಾಗಿದ್ದರು. ಎರಡನೆಯದು ನಾನೇ ಮಾಡಿದ್ದು.. ಮೇಲಿನ ರೋಚಕ ಕತೆ. ನಂತರ ಎರಡೋ ಮೂರೋ ಪುಸ್ತಕ ನಾನೇ ಪ್ರಕಾಶನ ಮಾಡಿದೆ. ಪುಸ್ತಕಕ್ಕೆ ಆಗ ಹೇಗೆ ಬೆಲೆ ಇಡುತ್ತಿದ್ದರು ಅನ್ನುವುದನ್ನು ನಿಮಗೆ ಹೇಳಲೇ ಬೇಕು. ಒಂದು ಪುಸ್ತಕಕ್ಕೆ ಪೇಪರು, ಕಲಾವಿದರಿಗೆ ಸಂಭಾವನೆ, ಮುದ್ರಣದ ವೆಚ್ಚ, ನಿಮ್ಮ ಓಡಾಟದ ವೆಚ್ಚ…. ಹೀಗೆ ಎಲ್ಲವೂ ಸೇರಿ ಒಂದು ರೂಪಾಯಿ ಖರ್ಚು ಆಗಿದೆ ಅಂತ ಇಟ್ಟುಕೊಳ್ಳಿ (ಒಂದು ರೂಪಾಯಿಗೆ ಯಾವ ಪುಸ್ತಕವನ್ನೂ ಮಾಡಲು ಆಗುವುದಿಲ್ಲ. ಅಂತಹ ಕಾಲ ಯಾವಾಗಲಾದರೂ ಬಂದರೆ ನಾನು ನನ್ನ ಬೃಂದಾವನದಿಂದ (ಬೃಂದಾವನ ಎಂದರೆ ಸಾಧು ಸಂತರ ಸಮಾಧಿ ಅಂತ ಓದಿಕೊಳ್ಳಿ..) ಮತ್ತೆ ಎದ್ದು ಬಂದೇ ಬರುತ್ತೇನೆ..!). ಒಂದು ರೂಪಾಯಿಯ ಮೂರರಷ್ಟು ಬೆಲೆ ಇರಿಸುವುದು ಅಂದಿನ ಅಂದರೆ ಐವತ್ತು ವರ್ಷದ ಹಿಂದಿನ ರೂಢಿ. ಅಂದರೆ ನಿಮಗೆ ಎರಡು ರೂಪಾಯಿ ನಿವ್ವಳ ಲಾಭ ತರಬೇಕು. ಆದರೆ ಪುಸ್ತಕದ ಅಂಗಡಿಗೆ ಸೋಡಿ (ಇದು ಆಗ ಶೇಖಡಾ ಐವತ್ತು ಮತ್ತು ಇನ್ನೂ ಹೆಚ್ಚು), ನೆಂಟರಿಗೆ ಗೆಳೆಯರಿಗೆ ಹೆಸರು ಮಾಡಿರುವ ಮಾಡದಿರುವ ವಿಮರ್ಶಕರಿಗೆ… ಪತ್ರಿಕೆಗಳಿಗೆ ವಿಮರ್ಶೆಯ ಕೃಪೆಗಾಗಿ.. ಹೀಗೆ ಸುಮಾರು ನೂರಾ ಐವತ್ತು ಇನ್ನೂರು ಪ್ರತಿ ಹೋದರೆ ನಿಮಗೆ ನಿವ್ವಳ ಲಾಭ ಒಂದು ರೂಪಾಯಿ ಖರ್ಚಿಗೆ ಎರಡು ರೂಪಾಯಿ ಆಗುತ್ತಿತ್ತು. ಸಾವಿರ ಪ್ರತಿಯ ಪುಸ್ತಕ ಮಾರಾಟಕ್ಕೆ ಎಂಟು ಹತ್ತು ವರ್ಷ ಹಿಡಿಯುತ್ತಿತ್ತು ಆಗ.
ಈ ಹಿನ್ನೆಲೆಯಲ್ಲಿ ನಾನೂ ಪ್ರಕಾಶಕ ಆದೆ. ಪುಸ್ತಕ ಮಾರಾಟದಲ್ಲಿ, ಗ್ರಂಥಾಲಯಕ್ಕೆ (ರಾಜ್ಯದಲ್ಲಿನ ಗ್ರಂಥಾಲಯ ಗಳಿಗೆ ಅವರು ಕೇಳಿದಾಗ ಎರಡು ಮೂರು ಪ್ರತಿ ರವಾನಿಸಬೇಕು)ಕೊಡುವಲ್ಲಿ ಮತ್ತು ಕೆಲವು ಸಲ ಲಂಚವನ್ನು ಕೊಡಬೇಕಾದ ಸಂದರ್ಭ ಸಹ ಹುಟ್ಟುತ್ತದೆ… ಈ ಸಮಸ್ಯೆ ಆಳಕ್ಕೆ ಇಳಿದ ಹಾಗೆ ಇದು ನನ್ನಂತಹ ಸಭ್ಯ, ಸಜ್ಜನನಿಗೆ ಸರಿಹೋಗದ ವ್ಯಾಪಾರ ಅನಿಸಿತಾ? ಇನ್ನುಮೇಲೆ ಪ್ರಕಾಶಕ ಎಂದು ಕರೆಸಿಕೊಳ್ಳಬಾರದು ಎಂದು ನಿರ್ಧರಿಸಿದೆ. ಹೀಗೆ ಒಬ್ಬ ಪ್ರಕಾಶಕ ಆಗಿ ಪೆಂಗ್ವಿನ್ ಅಂತಹ ದೊಡ್ಡ ಸಂಸ್ಥೆಗೆ ಪೈಪೋಟಿ ಕೊಡುವ ನನ್ನಾಸೆ ಅಂದೇ ಕಮರಿ ಹೋಯಿತು!
ಕತೆ ಮುಂದಕ್ಕೆ ಹೋಗುವ ಮೊದಲು ಎರಡು “ಆಮೇಲೆ ಹೇಳುತ್ತೇನೆ” ಸಮಸ್ಯೆ ಬಗೆಹರಿಸಿದ್ದೇನೆ ಸರ ಮೇಡಂಮೋರೇ… ಒಂದು ಸರ್ಕಾರದ ಮೇಲೆ ದಾವೆ ಹಾಕಿ ಗೆದ್ದದ್ದು (ಗೆದ್ದದ್ದು ಎನ್ನುವುದು ನನ್ನ ಇಂಟರ್ಪ್ರಿಟಿಷನ್. ಹಾಗೆ ನೋಡಿದರೆ ವ್ಯವಸ್ಥೆ ನನ್ನನ್ನು ಅಗಿದು ಜಗಿದು ನುಂಗಿಬಿಟ್ಟಿತು). ಎರಡನೆಯದು ನಾನು ಅಂಟಿಸಿಕೊಂಡ ಹೊಸಾ ಚಟ. ಅದೇ ಪುಸ್ತಕ ಪ್ರಿಂಟ್ ಹಾಕಿ ಮಾರುವುದು. ಇಲ್ಲಿ ಹೇಗೆ ನನ್ನಂತಹ ಸಾಚಾ, ಸಭ್ಯ ಸಜ್ಜನ ಮೊದಲಾದ “ಸ”ಇಂದ ಆರಂಭವಾಗುವ ಹಲವಾರು ಗುಣ ಸಂಬಂಧಿ ಪದಗಳಿಗೆ ನಾನು unfit ಅಂತ ಜ್ಞಾನೋದಯ ಆಗಿದ್ದು.
ಇಷ್ಟು ಆಯ್ತಾ? ಈಗ ಮೂರನೆಯ “ಆಮೇಲೆ ಹೇಳುತ್ತೇನೆ” ಪ್ರಸಂಗಕ್ಕೆ ತಮ್ಮನ್ನು ಕರೆದು ಒಯ್ಯಲೇಬೇಕಾದ ಪ್ರಮೇಯ ಒದಗಿದೆ. ಅದೇನು ಮಾರಾಯಾ ಅಂದಿರಾ? ಈಗ ಅದಕ್ಕೇ ಬಂದೆ…
ಮಾಲಾರ್ಪಣೆ ಅನ್ನೋದು ಪ್ಲ್ಯಾನ್ ಪ್ರಕಾರ ನಡೆಯಬೇಕಿತ್ತು ಸರ, ಮೇಡಮ್ಮೋರೇ… ಆದರೆ ನನ್ನ ಭಾಗ್ಯ ನೋಡಿ — ನನ್ನ ಹೆಸರೇ ಬಂದರೆ ಹೀಗೇ ಆಗಬೇಕು ಅನ್ನೋ ಹಾಗೆ, ಒಂದು ಕ್ಷಣ ಏನಾಯಿತೋ ಹಾರ ಇನ್ನೊಬ್ಬರ ಕೈಯಿಂದ ಹೋಗಿ ಕೊರಳಿಗೆ ತಗುಲಿದಂತೇ ಎಲ್ಲರೂ ಮುಖ ನೋಡಿಕೊಂಡರು. ನನ್ನಾಕೆಯ ಮುಜುಗರ, ನಿರೂಪಕರ ಗಲಿಬಿಲಿ, ನಾನು ಒಳಗೆ ಒಳಗೆ “ಇದು ನಮ್ಮದೇ ಕಾರ್ಯಕ್ರಮ ತಾನೇ!” ಅಂತಂದುಕೊಂಡದ್ದು — ಎಲ್ಲ ಸೇರಿ ಆ ಕ್ಷಣ ಸಣ್ಣ ಗೊಂದಲವಾಯ್ತು. ಆಗ ಸ್ವಲ್ಪ ಕಿರಿಕಿರಿ ಅನಿಸಿತು, ಆದರೆ ಈಗ ನೆನಪಾದರೆ ನಗು ಬರುತ್ತದೆ — ಕಾರ್ಯಕ್ರಮಗಳ ಸೌಂದರ್ಯ ಇದೇ ಇರಬೇಕು ಅನ್ನಿಸುತ್ತದೆ ಸರ… ಕೊನೆಯಲ್ಲಿ ಮನಸ್ಸಿನಲ್ಲಿ ಒಂದೇ ಮಾತು — “ಕಾರ್ಯಕ್ರಮ ನಮ್ಮದು, ಗೊಂದಲ ದೇವರದು!”
ಕಾರ್ಯಕ್ರಮ ನಾವು ಪ್ಲ್ಯಾನ್ ಮಾಡ್ತೀವಿ… ಆದರೆ ಕ್ಲೈಮ್ಯಾಕ್ಸ್ ಯಾವತ್ತೂ ದೇವರ ಡೈರೆಕ್ಷನ್!”
“ಹಾರ ಯಾರ ಕೊರಳಿಗೆ ಹೋಗಬೇಕು ಅಂತ ಕೊನೆಗೆ ನಿರ್ಧಾರ ಮಾಡುವವರು ಮೇಲಿನವರೇ ಅನಿಸುತ್ತೆ!”
“ನಮ್ಮ ಯೋಜನೆ ಒಂದೇ… ಆಗೋದು ಇನ್ನೊಂದೇ — ಅದೇ ಕಾರ್ಯಕ್ರಮದ ಸೊಗಸು ಸರ!”
“ನನ್ನ ಹೆಸರಿದ್ದಲ್ಲಿ ಸಣ್ಣ ಗಲಿಬಿಲಿ ಫ್ರೀ ಬೋನಸ್ ಅಂತ ಈಗ ನಂಬಿದ್ದೇನೆ!”
“ಆ ದಿನದ ನಂತರ ಒಂದು ಪಾಠ — ಕಾರ್ಯಕ್ರಮಕ್ಕೆ ಸ್ಕ್ರಿಪ್ಟ್ ಇರಬಹುದು, ಕ್ಷಣಗಳಿಗೆ ಇರೋದಿಲ್ಲ!”

ಮಾಲಾರ್ಪಣೆ ನಂತರದ ಗೊಂದಲದ ನನಗೆ ಶೇಪ್ ತೆಗೆದ ಕೆಲವು ನೆನಪುಗಳು ಕೆರೆ ಕಟ್ಟೆ ಒಡೆದ ಹಾಗೆ(ಇದು ಒಡೆದ ನೋ ಅಥವಾ ಹೊಡೆದ ನೋ? ಸದ್ಯಕ್ಕೆ ಒಡೆದ ಇರಲಿ)ಒಡೆದುಕೊಂಡು ಬರುತ್ತಿವೆ. ಅದನ್ನು ಸರಿಯಾಗಿ ಎ ಬೀ ಸೀ ಡೀ ತರಹ ಜೋಡಿಸಿಕೊಂಡು ಹೇಳಬೇಕು ಸರ, ಮೇಡಂಮೋರೇ…. ಮುಂದಿನ ಸಂಚಿಕೆ ತನಕ ಕಾಯ್ರೇಲಾ…..
ಇನ್ನೂ ಉಂಟು

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
