ಇದೆಲ್ಲ ಇವತ್ತು ಯಾಕೆ  ನೆನಪಾಯಿತೆಂದರೆ ಹೀಗೆ ಕಲಿತು ಬೆರೆತು ಆಟವಾಡಿದ ನಮ್ಮ ಬಯಲು ಸೀಮೆಯ ಶಾಲೆಗಳೆಲ್ಲ ಇಂದು ಸ್ವಾತಂತ್ರ್ಯ ದಿನ ಬರುವ ಹೊತ್ತಿಗೆ ಸರಿಯಾಗಿ ನೆರೆ ನೀರು ತುಂಬಿ, ಮುಳುಗಿ, ಶಾಲೆಯ ಮುಂದಿನ ಧ್ವಜದ ಕಂಬವೂ ಮುಳುಗಿ, ಕಡಲಿಗೆ ಬಂದ ಶ್ರಾವಣ ಶಾಲೆಯ ಅಂಗಳಕ್ಕೂ ಬಂದು ರಾವಣನಂತೆ ಕುಣಿದಿದ್ದಾನೆ. ಪುಟ್ಟ ತನ್ನ ಪಾಟಿ, ಪೆನ್ಸಿಲು, ತನ್ನ ಪ್ರೀತಿಯ ಹಸು ಕರು ಅಂಗಳಕ್ಕೇ ಬಿಟ್ಟು ಸಧ್ಯ ಜೀವ ಉಳಿದರೆ ಸಾಕೆನ್ನುವ ಭಯದಲ್ಲಿ ಇಂದು ಗಂಜೀ ಕೇಂದ್ರಗಳಲ್ಲಿ ನಡುಗುತ್ತ ಅಲ್ಲಿ ಕೊಡುವ ಬಿಸಿ ಉಪ್ಪಿಟ್ಟಿಗಾಗಿ ಸರದಿಸಾಲಿನಲ್ಲಿ ನಿಂತಿದ್ದಾನೆ.
ಡಾ.ಲಕ್ಷ್ಮಣ ವಿ.ಎ. ಅಂಕಣ

 

ದೇಶ ಎಪ್ಪತ್ಮೂರನೇ ಸ್ವಾತಂತ್ರ್ಯ ದಿನಾಚರಣೆ ಹಬ್ಬ ಮುಗಿಸಿದ ಗುಂಗಿನಲ್ಲಿರುವಾಗಲೇ ನನ್ನ ಬಯಲು ಸೀಮೆಯ ಸ್ಕೂಲಿನಲ್ಲಿ ಆಚರಿಸುವ ಸ್ವಾತಂತ್ರ್ಯ ದಿನದ ನೆನಪಾಯಿತು. ಸ್ವಾತಂತ್ರ್ಯೋತ್ಸವದ ಮುನ್ನಾದಿನ ನಮ್ಮ ಸ್ಕೂಲಿಗೆ ಅರ್ಧ ದಿನ ರಜೆ ಕೊಡುತ್ತಿದ್ದರು, ರಜೆ ಮೋಜಿಗಾಗಿ ಅಲ್ಲ. ಬದಲಾಗಿ ವಿಶಾಲಬಯಲಿನ ಸ್ಕೂಲಿನ ಆವರಣದಲ್ಲಿ ಬೆಳೆದ ಕಸ ಕಡ್ಡಿಯನ್ನು ಸ್ವಚ್ಛಗೊಳಿಸಲು ಹಾಗು ತೋಟಪಟ್ಟಿಯವರು ತಮ್ಮತಮ್ಮ ಮನೆ ಅಂಗಳದಲ್ಲಿ ಬೆಳೆಯುವ ಹೂವು ಕೊಯ್ದು ಹಬ್ಬಕ್ಕಾಗಿ ತರುವುದು, ಇನ್ನುಳಿದವರು ನಾಳೆಯ ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತಮ್ಮ ತಮ್ಮ ಅಂತಿಮ ಸಿದ್ಧತೆಯ ಪೂರ್ವತಯಾರಿ ಮಾಡುವುದು…

ಅದು ಹೇಗೆಂದರೆ ಗಾಂಧೀಜಿಯವರ ವೇಷಧಾರಿ ಊರ ಹಿರಿಯರಲ್ಲಿ ಬೇಡಿ ಒಬ್ಬರ ಬಳಿ ಕೋಲು ಇನ್ನೊಬ್ಬರ ಬಳಿ ಕನ್ನಡಕ ಹಾಗು ಧೋತಿಯನ್ನು ಕೇಳಿ ಪಡೆಯುವುದು. ಆ ಮುದುಕರ ಅಸಲೀ ಕಷ್ಟವೇನೆಂದರೆ ತಮ್ಮ ಕೋಲಿನ ಸಹಾಯವಿಲ್ಲದೆ ಈ ಹಬ್ಬ ಮುಗಿದು ಇವರು ತಲುಪಿಸುವ ತನಕ ಎದ್ದು ನಡೆಯುವ ಹಾಗಿಲ್ಲ. ಫ್ರಭಾತ ಪೇರಿ ಮುಗಿದು ಇವರ ಸಾಂಸ್ಕೃತಿಕ ಕಾರ್ಯಕ್ರಮ ಮುಗಿಯುವ ತನಕ ಇವರು ತಮ್ಮ ಮಂಜುಗಣ್ಣಲ್ಲೇ ಲೋಕವನ್ನು ಗ್ರಹಿಸಬೇಕು. ಅಷ್ಟೇ ಅಲ್ಲ, ಪುರುಷ ವೇಷಧಾರಿ ಅದೆಲ್ಲಿಂದಲೋ ಸೀರೆ ಕುಪ್ಪುಸ ಹೊಂದಿಸಬೇಕು, ಮುಖ್ಯವಾಗಿ ಸೀರೆ ಜಾರದಂತೆ ಉಡುವ ಅಭ್ಯಾಸ ಮಾಡಬೇಕು, ಇಲ್ಲವೆಂದರೆ ಸೊಂಟಕ್ಕೆ ಸಿಗಿಸಿದ ಸೀರೆ ಯಾವಾಗಬೇಕಾದರೂ ಕಳಚಿ ಇವರು ವೇದಿಕೆಯ ಮೇಲೆ ಬೆತ್ತಲಾಗುವ ಭಯವಿರುತ್ತಿತ್ತು. ಇಷ್ಟೆಲ್ಲಾ ಮುತುವರ್ಜಿ ವಹಿಸಿದರೂ ಮುಖ್ಯ ನಾಟಕದಲ್ಲಿ ಏನಾದರೊಂದು ಅವಘಡ ನಡದೇ ಹೋಗುತ್ತಿತ್ತು.

ಒಮ್ಮೆ ಹೀಗೆ ಆಯ್ತು. ಇನ್ನೇನು ಬೃಂದಾವನದ ಸೀನು ಬರುವಷ್ಟರಲ್ಲಿ ಕೃಷ್ಣನ ಪಾತ್ರಧಾರಿಗೆ ವಿಪರೀತ ಜಲಬಾಧೆ ಉಂಟಾಯಿತು. ಅವನು ಓಡಿಹೋಗಿ ಕಂಪೌಂಡಿನಾಚೆ ಆ ವೇಷದಲ್ಲೇ ಕೆಲಸ ಮುಗಿಸಿ ಬರುವಷ್ಟರಲ್ಲಿ ಅವನ ಕೊಳಲು ಕಾಣುತ್ತಿಲ್ಲ; ಮೇಷ್ಟ್ರುಗಳ ಪೇಚಾಟ ಹೇಳುವಂತಿಲ್ಲ, ಕೊನೆಗೆ ಕೊಳಲಿಲ್ಲದ ಕೃಷ್ಣ ತನ್ನ ಬೆರಳುಗಳನ್ನೇ ಕೊಳಳು ಮಾಡಿಕೊಂಡು ಕಾಲು ಮಡಚಿ ನಿಂತಾಗ ಸುತ್ತ ರಾಧೆ ಹಾಡುತ್ತ ಅವಳ ಪ್ರೇಮನಿವೇದನೆ ಮಾಡುತ್ತ ನೃತ್ಯ ಮಾಡಬೇಕು.

ಸಾಮಾನ್ಯವಾಗಿ ರಾಧೆ, ಸೀತೆ, ಮಂಡೋದರಿ ಪಾತ್ರವನ್ನು ಹುಡುಗರೇ ಮಾಡುತ್ತಿದ್ದರು. ಸ್ವಾತಂತ್ರ್ಯದ ದಿನವೆಂದರೆ ನಮಗೆಲ್ಲ ಅದು ಕೇವಲ ಧ್ವಜ ಹಾರಿಸಿ ರಾಷ್ಟ್ರಗೀತೆ ಹಾಡುವುದಷ್ಟೇ ಅಲ್ಲ, ಇಲ್ಲೊಂದು ಪುಟ್ಟ ಸಾಂಸ್ಕೃತಿಕ ಲೋಕವೇ ನಮ್ಮೆದುರಿಗೆ ಬಂದು ನಿಂತುಬಿಡುತ್ತಿತ್ತು. ಯಾರದೋ ಮನೆಯ ಕೋಲು, ಇನ್ನಾರದೋ ಕನ್ನಡಕ, ಯಾರದೋ ಹಿತ್ತಿಲಿನ ಹೂಗಳು, ಅಲ್ಲೊಂದು ಪುಟ್ಟ ಬಹುತ್ವ ಭಾರತದ ಸುಂದರ ಅನಾವರಣ ಹಾಗು ಹುಡುಗ, ಹುಡುಗಿಯಾಗುವ, ತರಲೆಯೊಬ್ಬ ಕೃಷ್ಣನಾಗುವ, ಮಹಾ ಉಡಾಳನೊಬ್ಬ ಆ ದಿನ ದೇವರಾಗಿ ಅವರರವ ನಿಜದ ಪಾತ್ರಗಳಿಂದ ಕ್ಷಣ ಹೊತ್ತು ಬಿಡುಗಡೆಯಾಗಿ ಹಗುರಾಗುವ ನಿಜದ ಸ್ವಾತಂತ್ರ್ಯದ ಹಬ್ಬ…

ಇದೆಲ್ಲ ಇವತ್ತು ಯಾಕೆ  ನೆನಪಾಯಿತೆಂದರೆ ಹೀಗೆ ಕಲಿತು ಬೆರೆತು ಆಟವಾಡಿದ ನಮ್ಮ ಬಯಲು ಸೀಮೆಯ ಶಾಲೆಗಳೆಲ್ಲ ಇಂದು ಸ್ವಾತಂತ್ರ್ಯ ದಿನ ಬರುವ ಹೊತ್ತಿಗೆ ಸರಿಯಾಗಿ ನೆರೆ ನೀರು ತುಂಬಿ, ಮುಳುಗಿ, ಶಾಲೆಯ ಮುಂದಿನ ಧ್ವಜದ ಕಂಬವೂ ಮುಳುಗಿ, ಕಡಲಿಗೆ ಬಂದ ಶ್ರಾವಣ ಶಾಲೆಯ ಅಂಗಳಕ್ಕೂ ಬಂದು ರಾವಣನಂತೆ ಕುಣಿದಿದ್ದಾನೆ. ಪುಟ್ಟ ತನ್ನ ಪಾಟಿ, ಪೆನ್ಸಿಲು, ತನ್ನ ಪ್ರೀತಿಯ ಹಸು ಕರು ಅಂಗಳಕ್ಕೇ ಬಿಟ್ಟು ಸಧ್ಯ ಜೀವ ಉಳಿದರೆ ಸಾಕೆನ್ನುವ ಭಯದಲ್ಲಿ ಇಂದು ಗಂಜೀ ಕೇಂದ್ರಗಳಲ್ಲಿ ನಡುಗುತ್ತ ಅಲ್ಲಿ ಕೊಡುವ ಬಿಸಿ ಉಪ್ಪಿಟ್ಟಿಗಾಗಿ ಸರದಿಸಾಲಿನಲ್ಲಿ ನಿಂತಿದ್ದಾನೆ.

ಗಾಂಧೀಜಿಯವರ ವೇಷಧಾರಿ ಊರ ಹಿರಿಯರಲ್ಲಿ ಬೇಡಿ ಒಬ್ಬರ ಬಳಿ ಕೋಲು ಇನ್ನೊಬ್ಬರ ಬಳಿ ಕನ್ನಡಕ ಹಾಗು ಧೋತಿಯನ್ನು ಕೇಳಿ ಪಡೆಯುವುದು. ಆ ಮುದುಕರ ಅಸಲೀ ಕಷ್ಟವೇನೆಂದರೆ ತಮ್ಮ ಕೋಲಿನ ಸಹಾಯವಿಲ್ಲದೆ ಈ ಹಬ್ಬ ಮುಗಿದು ಇವರು ತಲುಪಿಸುವ ತನಕ ಎದ್ದು ನಡೆಯುವ ಹಾಗಿಲ್ಲ. ಫ್ರಭಾತ ಪೇರಿ ಮುಗಿದು ಇವರ ಸಾಂಸ್ಕೃತಿಕ ಕಾರ್ಯಕ್ರಮ ಮುಗಿಯುವ ತನಕ ಇವರು ತಮ್ಮ ಮಂಜುಗಣ್ಣಲ್ಲೇ ಲೋಕವನ್ನು ಗ್ರಹಿಸಬೇಕು.

ನಲವತ್ತೆರೆಡು ವಯಸ್ಸಿನ ನಾನೀಗ ನನ್ನ ಬಾಲ್ಯವನ್ನೆಲ್ಲ ಈಗ ನೆರೆಬಂದು ಮುಳುಗಿದ ಊರುಗಳ ಆಸುಪಾಸಿನಲ್ಲೇ ಕಳೆದಿದ್ದೇನೆ. ಆದರೆ ಈ ಸಲದ ಮಾಯದಂತಹ ಮಳೆಯ ನೆರೆ ಬಡವ ಬಲ್ಲಿದರ ಮನೆಗಳೆನ್ನದೇ ತನ್ನ ವಿರಾಟ್ ರೂಪದ ಸಾಕ್ಷಾತ್ ದರ್ಶನ ಮಾಡಿಸಿದೆ. ಏರಿಯ ಮೇಗಿನ ಬಲ್ಲಾಳ ರಾಯನೂ ಕೇರಿಯೊಳಗಿನ ಬೆಸ್ತರ ಹುಡುಗನೂ ಈಗ ಈ ವಿಧಿ ವಿಧಿಸಿದ ಸಾಮಾಜಿಕ ನ್ಯಾಯವೆನ್ನುವಂತೆ ಒಂದೇ ಸರತಿಯ ಸಾಲಿನ ಮುಂದೆ ಗಂಜಿಗಾಗಿ ತಟ್ಟೆ ಹಿಡಿದಿದ್ದಾರೆ.

ಮೊದಲೆಲ್ಲ ಶ್ರಾವಣವೆಂದರೆ ನಮಗೆ ಹಬ್ಬ. ಹೀಗೆ ಶ್ರಾವಣದಲ್ಲಿ ಬರುವ ಸ್ವಾತಂತ್ರ್ಯೋತ್ಸವವೂ ಶ್ರಾವಣದಲ್ಲಿ ಬರುವ ನಮ್ಮೂರ ಜಾತ್ರೆಯೂ ನಾವೆಂದಿಗೂ ಮರೆಯಲಾಗದ ನೆನಪುಗಳ ಭಾರದ ನೆನಪಿನಲ್ಲೇ ದೈನಿಕಗಳ ದೂಡಿಕೊಂಡು ಕಣ್ಣು ತೇವಮಾಡಿಕೊಂಡೇ ಊರ ಜಾತ್ರೆಗೆ ಹೋಗಲು ಹಂಬಲಿಸಿದವರು. ಆಗಲೂ ಸಹ ನೆರೆ ಬರುತ್ತಿತ್ತು; ಆದರೆ ಮಾನ್ಸೂನಿನ ಈ ಗಳಿಗೆಯಲ್ಲಿ ಹೀಗೆ ಬಂದು ಹಾಗೆ ಹೋಗಿ ದೂರದ ಕುಡಚಿ ಸೇತುವೆಯನ್ನ ಮೂರುದಿನ ಮುಳುಗಿಸಿ ಮಾಯವಾಗಿಬಿಡುತ್ತಿತ್ತು. ನೆಲದ ಗಾಯ ವಾಸಿಮಾಡುವ ಮಳೆ ಒಂದೇ ರಾತ್ರಿಯಲ್ಲಿ ಮಡಿ ಮೈಲಿಗೆಯೆನ್ನದೇ ಬಡವ ಬಲ್ಲಿದನೆನ್ನದೇ ಯಾರ ಮೇಲೆಯೂ ಕರುಣೆ ತೋರದೆ ಎದೆಯ ಘಾಸಿಮಾಡಿ ನಿರಂತರ ರಕ್ತಸ್ರಾವ ಬದುಕ ದುರ್ಭರಗೊಳಿಸಿದೆ.

ನೆರೆ ಮತ್ತು ಬರ ಈ ನೆಲಕ್ಕೆ ಹೊಸದೇನಲ್ಲ ಬಿಡಿ. ಇದರೊಂದಿಗೆ ಹೋರಾಡುತ್ತಲೇ ತಮ್ಮ ಜೀವನಪ್ರೀತಿಯನ್ನು ಕಾಪಿಟ್ಟುಕೊಂಡು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ ನಮ್ಮ ಜನ. ರಾಜ್ಯಗಳಿದ್ದರೂ ಗದ್ದುಗೆಯುರುಳಿದರೂ ಇವರ ನೇಗಿಲಿಗೆ ರಜೆಯಿರುವುದಿಲ್ಲ. ನಿನ್ನೆ ಮೊನ್ನೆಯ ತನಕ “ಯಾತಕ್ಕೆ ಮಳೆಹೋದವೋ ಶಿವ ಶಿವಾ, ಲೋಕ ತಲ್ಲಣಿಸುತಾವೋ…” ಎಂದು ಹಾಡಿದ ಮಂದಿ ರಾತ್ರೋ ರಾತ್ರಿ ಹಾಡಿನ ಟ್ಯೂನ್ ಬದಲಾಗಿ ಸದ್ಯ ಈ ನೆರೆ ನೀರು ನಿಂತರೆ ಸಾಕೆನ್ನುವ ಪ್ರಾರ್ಥನೆ ಮಾಡುತ್ತಿದ್ದಾರೆ.

ಈಗ ಮುಳುಗಡೆಯಾದ ಊರುಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ಒಂದು ಊರು ಒಂದು ನಾಗರೀಕತೆ ರಾತ್ರೋ ರಾತ್ರಿ ಉದ್ಭವವಾಗುವುದಿಲ್ಲ. ಅಲ್ಲಿ ಸಿಗುವ ಆಹಾರ ಬೆಳೆಯುವ ಬೆಳೆ ನದಿಯ ಏರಿಳಿತ ವಾತಾವರಣದ ವ್ಯತ್ಯಾಸ ಲೆಕ್ಕ ಹಾಕಿಯೇ ಒಂದು ಊರು ಸ್ಥಾಪಿತವಾಗಿರುತ್ತದೆ. ಮತ್ತು ಹೀಗೆ ಸ್ಥಾಪಿತವಾದ ಒಂದು ಊರು ಅಷ್ಟು ಸುಲಭವಾಗಿ ಒಂದು ಮಳೆಗೆ ಒಂದು ನೆರೆಗೆ ಕಾಡುವ ಪ್ಲೇಗಿಗೆ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿರುವುದಿಲ್ಲ. ಈ ಅಗ್ನಿದಿವ್ಯಗಳನ್ನೆಲ್ಲಾ ಹಾಯ್ದು ಬಂದ ಊರುಗಳಿವು. ಆದರೀಗ ಪರಿಸ್ಥಿತಿ ಅಷ್ಟು ಸುಲಭವಿಲ್ಲ. ಈ ಊರುಗಳನ್ನು ಶಾಶ್ವತ ಸ್ಥಳಾಂತರ ಮಾಡದೇ ಬೇರೆ ಗತಿಯಿಲ್ಲ. ಆಡಳಿತ ಸೂರು ಕಟ್ಟಿ ಕೊಡುತ್ತದೆಯಾದರೂ ಮುಂದೆ ಹೀಗೆ ಆಗುವುದಿಲ್ಲವೆನ್ನುವ ಯಾವ ಗ್ಯಾರಂಟಿಯಿದೆ? ಹಾಗಿದ್ದರೆ ನಮ್ಮ ಹಿರೀಕರಿಗೆ ನೆರೆಯ ಅರಿವಿರಲಿಲ್ಲವೇ? ನಮ್ಮ ಲೆಕ್ಕಾಚಾರ ಎಲ್ಲಿ ತಪ್ಪಿದೆ?

ನೀವು ಏನಾದರೂ ಕಲ್ಪಿಸಿಕೊಳ್ಳಬಹುದು ಈಗ. ಹಸಿರು ಮನೆ ಪರಿಣಾಮ, ಅರಣ್ಯನಾಶ, ಮರಳು ಲೂಟಿ, ಎಗ್ಗಿಲ್ಲದೆ ಬಳಸಿ ಬಿಸಾಡುವ ಪ್ಲ್ಯಾಸ್ಟಿಕ್ ಸಂಸ್ಕೃತಿ…. ನೆರೆ ಊರು ಬಿಟ್ಟು ತುಸು ಆಚೆ ಈಚೆ ಬನ್ನಿ ಈಗ ಬಿರುಕು ಬಿಟ್ಟ ನೆಲ, ಒಣಗಿದ ಮೆಕ್ಕೆ ಜೋಳ ಕಡಲೆ… ಹೂಳು ತುಂಬಿದ ಕೆರೆ… ಕುಡಿಯುವ ನೀರಿಗಾಗಿ ಲಾರಿಯ ಹಿಂದೆ ಓಡುವ ಮಹಿಳೆಯರು…. ಬರದಿಂದ ಊರು ಬಿಟ್ಟ ಖಾಲೀ ಮನೆಗಳ ಸೋರುತಿಹುದು ಮನೆಯ ಮಾಳಿಗೆ….

ಸ್ವಾತಂತ್ರ್ಯ ಬಂದು ಎಪ್ಪತ್ತ ಮೂರು ವರ್ಷವಾದರೂ ನಮ್ಮ ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ನಾವು ವಿಫಲರಾಗಿದ್ದೇವೆ. ಪ್ರಗತಿಯ ಸೋಗು ಹಾಕಿ ನಾವು ಚಂದ್ರ ಮಂಗಳನಲ್ಲಿ ನೀರು ಹುಡುಕುತ್ತಿದ್ದೇವೆ. ಆದರೆ ಕಾಲಬುಡದಲ್ಲಿ ಬಂದು ಬೀಳುವ ನೆರೆ ನೀರಿಗಾಗಿ ಕಣ್ಣೀರಿಡುತ್ತಿದ್ದೇವೆ. ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದೇವೆ. ಜಿಡಿಪಿಯೊಂದೇ ದೇಶದ ಅಭಿವೃದ್ಧಿ ಸೂಚಕವೆಂಬ ಹುಚ್ಚು ಭ್ರಮೆಯಲ್ಲಿ ತೇಲುವಾಗ ಇಂತಹ ಸಣ್ಣ ಸಣ್ಣ ಸಂಗತಿಗಳು ಮರೆತರೆ ಆಗುವ ಅಪಾಯವಿದು.

ಈಗ ಸಧ್ಯ ಈ ನೆರೆ ನಿಲ್ಲಲಿ, ಅವರ ಬದುಕಿನೊಂದಿಗೆ ಕನಸುಗಳೂ ಕೂಡ ಮುಳುಗದಿರಲೆಂದು ಹಾರೈಸುತ್ತ ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.