ವಸಾಹತುಶಾಹಿ-ಸಂಬಂಧಿತ ಅನ್ಯಾಯಗಳು ಮತ್ತು ತಾರತಮ್ಯಗಳು ಆಸ್ಟ್ರೇಲಿಯದಲ್ಲಿ ನಡೆಯುತ್ತಲೇ ಬಂದಿದೆ. ಆಸ್ಟ್ರೇಲಿಯಾದ ಅಬೊರಿಜಿನಲ್ ಜನರ ಕುಟುಂಬಗಳಿಂದ ಬಲವಂತವಾಗಿ ಅವರ ಮಕ್ಕಳನ್ನು ಬೇರ್ಪಡಿಸಿ ಬಿಳಿಯರ ಕುಟುಂಬಗಳಿಗೆ ಕೊಟ್ಟು ಬಿಳಿಯರ ಸಂಸ್ಕೃತಿ, ಶಿಕ್ಷಣ, ಕ್ರೈಸ್ತಧರ್ಮಗಳಿಗೆ ಅನುಗುಣವಾಗಿ ಮಕ್ಕಳು ಬೆಳೆಯುವಂತಾಗಿದ್ದು ಎರಡು ನೂರು ವರ್ಷಗಳಿಂದ ನಡೆದ ವಿಷಯ ಕಣ್ಣಿಗೆ ರಾಚುವಂತಿದೆ. ಅಂತಹ ‘ಸ್ಟೋಲನ್ ಜನರೇಶನ್’ ನ ದನಿಯಾಗಿದ್ದ ಅಂಕಲ್ ಆರ್ಚಿ ರೋಚ್ ಕಳೆದ ವಾರಾಂತ್ಯದಲ್ಲಿ ತೀರಿಕೊಂಡರು. ಅವರು ಅಬೊರಿಜಿನಲ್ ಎಂಬ ಕಾರಣಕ್ಕಾಗಿ, ಅವರ ತಾಯಿಯ ಮಡಿಲಿನಿಂದ ಆಡಳಿತದ ಕಾನೂನುಪಾಲಕರು ಬೇರ್ಪಡಿಸಿದ್ದರು. ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಪತ್ರ ನಿಮ್ಮ ಇಂದಿನ ಓದಿಗಾಗಿ.
ಅಲ್ಲಿನ ದೂರ ತೀರವ ಸೇರಿದ ಧರ್ಮಗುರುಗಳು ‘ಕ್ಷಮಿಸಿ’ ಎಂದರು. ಕದ್ದವರ ಪ್ರಬಲ ಜನಾಂಗಕ್ಕೆ ಸೇರಿದ ಆ ಪ್ರಧಾನಿ ‘ಛೆ, ಹೀಗೂ ಆಗುವುದುಂಟೇ’ ಎಂದು ಉದ್ಗರಿಸಿದರು. ಇಲ್ಲಿ ಕದಿಯಲ್ಪಟ್ಟವರ, ಕಳಕೊಂಡವರ ಜನರ ಹಾಡಾಗಿದ್ದ ಹಾಡುಗಾರ ಲೋಕ ತ್ಯಜಿಸಿ ಹೊರಟ. ಇಹಲೋಕದ ಈ ವ್ಯಾಪಾರಗಳ ಪರಿಣಾಮಗಳು ಸಾವಿರಾರು ಕುಟುಂಬಗಳನ್ನು ಛಿದ್ರಗೊಳಿಸಿದ ಸಂಗತಿ ಇನ್ನೂ ಈಗೀಗ ಬೆಳಕಿಗೆ ಬರುತ್ತಿರುವುದು ತಲ್ಲಣಗೊಳಿಸುತ್ತದೆ.
ನಾನು ಹೇಳುತ್ತಿರುವ ವಿಷಯಕ್ಕೆ ಒಂದು ಕರಾರುವಕ್ಕಾದ ಹೆಸರಿದೆ- ಕದಿಯಲ್ಪಟ್ಟವರ ಜನಾಂಗ (Stolen Generation). ಹೋದವರ್ಷ ಕೆನಡಾ ದೇಶದ ಒಂದೆಡೆ ಹಳೆಯದೊಂದು ಶಾಲೆಯ ನೆಲದೊಳಗೆ ಹುದುಗಿದ್ದ ಶಾಲಾ ವಯಸ್ಸಿನ ಮಕ್ಕಳ ಅಸ್ಥಿಪಂಜರ ಅವಶೇಷಗಳು ಸಿಕ್ಕಿ ಅದೊಂದು ದೊಡ್ಡ ಸುದ್ದಿಯಾಗಿತ್ತು.
ಸುದ್ದಿಯಾಗುವುದಕ್ಕಿಂತಲೂ ಅದಕ್ಕೊಂದು ನಿರ್ದಿಷ್ಟ ಚರಿತ್ರೆಯಿತ್ತು. ಅಮೆರಿಕವನ್ನು ಹಿಂಬಾಲಿಸುತ್ತ ನಡೆದ ಬಿಳಿಯ ಜನಾಂಗದವರು ಕೆನಡಾದಲ್ಲಿ ತಮ್ಮ ವಸಾಹತುಶಾಹಿ ಆಡಳಿತವನ್ನು ಸ್ಥಾಪಿಸಿ, ಅಲ್ಲಿನ ಮೂಲನಿವಾಸಿಗಳ ಜೀವನವನ್ನು ಆಕ್ರಮಿಸಿಕೊಂಡಿದ್ದರು. ಯಥಾಪ್ರಕಾರ ತಮ್ಮ ಯುರೋಪಿಯನ್ ಸಾಂಸ್ಕೃತಿಕ ಪ್ರಾಬಲ್ಯವನ್ನು ಮುಂದಿಟ್ಟುಕೊಂಡು ಮೂಲನಿವಾಸಿಗಳನ್ನು ಪಶುಗಳು ಎಂದು ಹೆಸರಿಸಿ ಅವರನ್ನು ಉದ್ಧಾರ ಮಾಡಿ ಅವರು ತಮ್ಮ ಯುರೋಪಿಯನ್ ಸಂಸ್ಕೃತಿ, ಶಿಕ್ಷಣಗಳ ಪದ್ಧತಿಗಳನ್ನು ಕಲಿಯುವಂತೆ ಮಾಡಲು ನೂರಾರು ಕಾನೂನುಗಳನ್ನು ರೂಪಿಸಿದರು. ಅವುಗಳಲ್ಲಿ ಒಂದು, ಮೂಲನಿವಾಸಿಗಳ ಕುಟುಂಬಗಳಿಂದ ಮಕ್ಕಳನ್ನು ಬೇರ್ಪಡಿಸಿ, ಆ ಮಕ್ಕಳನ್ನು ‘ರೆಸಿಡೆನ್ಷಿಯಲ್ ಶಾಲೆ’ಗಳಲ್ಲಿ ಇರಿಸಿ ಅವರನ್ನು ಬೆಳೆಸುವುದು. ಯುರೋಪಿಯನ್ ಜನರಂತೆ ಮಾರ್ಪಾಡಾಗಲು ಆ ಮಕ್ಕಳು ಬಹು ದುಬಾರಿ ಬೆಲೆ ತೆತ್ತರು. ‘ರೆಸಿಡೆನ್ಷಿಯಲ್ ಶಾಲೆ’ಗಳಲ್ಲಿದ್ದ ಅತೀವ ಕಠಿಣ ಪರಿಸರ, ಶಿಕ್ಷೆ, ಆಹಾರದ ಕೊರತೆ, ಮಕ್ಕಳಿಗೆ ಅತ್ಯವಶ್ಯಕವಾದ ಪ್ರೀತಿ, ಕ್ಷೇಮಭಾವನೆಯ ಕೊರತೆ, ತೀವ್ರ ಚಳಿಗೆ ಈಡಾಗಿದ್ದು, ಸರಿಯಾದ ಆರೈಕೆಯಿಲ್ಲದ ವ್ಯವಸ್ಥೆ – ಈ ರೀತಿ ಕಾರಣಗಳಿಂದ ಅನೇಕ ಮಕ್ಕಳು ಅಸುನೀಗಿದರು. ಹೆತ್ತವರ ಕುಟುಂಬಗಳಿಗೆ ಅವರ ಬಗ್ಗೆ ಸರಿಯಾದ ಮಾಹಿತಿ ಕೊಡುವ ಜವಾಬ್ದಾರಿ ವ್ಯವಸ್ಥೆಗೆ ಇರಲಿಲ್ಲವಾದದ್ದು ಅತ್ಯಂತ ವಿಷಾದನೀಯ.
ಆ ಕ್ರೂರ ಕ್ರಮಗಳಿಗೆ ಸಿಲುಕಿ ಹೇಳಹೆಸರಿಲ್ಲವಾದ, ಅನಾಥರಾದ ಅನೇಕ ಮಕ್ಕಳಲ್ಲಿ ಕೆಲವರ ಅವಶೇಷಗಳು ಆ ಶಾಲೆಯಲ್ಲಿ ಸಿಕ್ಕಿದ್ದು ಈಗಿನ ಕೆನಡಾದ ಮೂಲನಿವಾಸಿಗಳ ಸಮುದಾಯಗಳಲ್ಲಿ ತೀವ್ರ ನೋವಿನ ಸಂಚಲನೆಯನ್ನುಂಟು ಮಾಡಿತ್ತು. ಮಕ್ಕಳು ಯಾವ್ಯಾವ ಕುಟುಂಬಗಳಿಗೆ ಸೇರಿದ್ದವರು ಎಂದು ಕಂಡುಹಿಡಿಯಬೇಕಿತ್ತು. ಎಷ್ಟೋ ದಶಕಗಳ ಹಿಂದೆ ಸತ್ತ ಅವರಿಗೆ ತಮ್ಮ ಸಂಸ್ಕೃತಿಗಳ ಪ್ರಕಾರ ಗೌರವಪೂರ್ವಕ ವಿದಾಯವನ್ನು ಹೇಳುವ ಬಗೆ ಎಲ್ಲವನ್ನೂ ಹೊಸದಾಗಿ ಆಲೋಚಿಸಬೇಕಿತ್ತು. ಇವೆಲ್ಲ ಅವರಿಗೆ ಮತ್ತೆ ಮತ್ತೆ ತಮ್ಮ ಜನರ, ಜೀವನದ ಮೇಲಾದ ವಸಾಹತುಶಾಹಿಗಳ ದಾಳಿಯನ್ನು ನೆನಪಿಸಿತ್ತು.
‘ರೆಸಿಡೆನ್ಷಿಯಲ್ ಶಾಲೆ’ಗಳು ಪಾಲಿಸುತ್ತಿದ್ದದ್ದು ಕ್ರೈಸ್ತ ಧರ್ಮ. ಮಕ್ಕಳು ಅದೇ ಧರ್ಮವನ್ನು ಕಲಿಯುತ್ತಾ ಪಾಲಿಸುವಂತೆ ಅವರಿಗೆ ತರಬೇತಿ ಕೊಡುತ್ತಿದ್ದರು. ಈ ಧಾರ್ಮಿಕ ಎಳೆಯನ್ನು ಗಮನಿಸಿ, ಅದರ ಹೆಸರಿನಲ್ಲಾದ ಅನ್ಯಾಯ, ನೋವು, ಸಾವುಗಳಿಗೆ ಕ್ಷಮಾಪಣೆ ಕೇಳಲು ಹೋದ ತಿಂಗಳು ರೋಮ್ ನಗರದಿಂದ, ಅಲ್ಲಿನ ವ್ಯಾಟಿಕನ್ ಪೋಪ್ ಗುರುಗಳು ಕೆನಡಾ ದೇಶಕ್ಕೆ ಪಯಣಿಸಿದ್ದರು. ಶಾಲೆಯಿದ್ದ ಪ್ರದೇಶದ ಮೂಲನಿವಾಸಿಗಳ ಸಮುದಾಯವನ್ನು ಮತ್ತು ಆ ಮಕ್ಕಳ ಕುಟುಂಬಗಳ ಈಗಿನ ಸದಸ್ಯರನ್ನು ಉದ್ದೇಶಿಸಿ ‘ಕ್ಷಮಿಸಿ’ ಎಂದರು. ಅಲ್ಪಸ್ವಲ್ಪ ಸಮಾಧಾನ ದೊರೆತಿದೆಯೇನೊ.
ಬಿಳಿಯ ಜನಾಂಗದವರು ಕೆನಡಾದಲ್ಲಿ ತಮ್ಮ ವಸಾಹತುಶಾಹಿ ಆಡಳಿತವನ್ನು ಸ್ಥಾಪಿಸಿ, ಅಲ್ಲಿನ ಮೂಲನಿವಾಸಿಗಳ ಜೀವನವನ್ನು ಆಕ್ರಮಿಸಿಕೊಂಡಿದ್ದರು. ಯಥಾಪ್ರಕಾರ ತಮ್ಮ ಯುರೋಪಿಯನ್ ಸಾಂಸ್ಕೃತಿಕ ಪ್ರಾಬಲ್ಯವನ್ನು ಮುಂದಿಟ್ಟುಕೊಂಡು ಮೂಲನಿವಾಸಿಗಳನ್ನು ಪಶುಗಳು ಎಂದು ಹೆಸರಿಸಿ ಅವರು ತಮ್ಮ ಯುರೋಪಿಯನ್ ಸಂಸ್ಕೃತಿ, ಶಿಕ್ಷಣಗಳ ಪದ್ಧತಿಗಳನ್ನು ಕಲಿಯುವಂತೆ ಮಾಡಲು ನೂರಾರು ಕಾನೂನುಗಳನ್ನು ರೂಪಿಸಿದರು. ಅವುಗಳಲ್ಲಿ ಒಂದು, ಮೂಲನಿವಾಸಿಗಳ ಕುಟುಂಬಗಳಿಂದ ಮಕ್ಕಳನ್ನು ಬೇರ್ಪಡಿಸಿ, ಆ ಮಕ್ಕಳನ್ನು ‘ರೆಸಿಡೆನ್ಷಿಯಲ್ ಶಾಲೆ’ಗಳಲ್ಲಿ ಇರಿಸಿ ಅವರನ್ನು ಬೆಳೆಸುವುದು.
ಇದೆ ಸಂದರ್ಭದಲ್ಲಿ ಕೆನಡಾದ ಪ್ರಧಾನಮಂತ್ರಿಗಳು ಮಾತನಾಡಿ ಅವರ ಹಿಂದಿನ ಜನಾಂಗದವರ ಕಾಲದಲ್ಲಿ ಮೂಲನಿವಾಸಿ ಕುಟುಂಬಗಳಿಂದ ಹೀಗೆಲ್ಲಾ ಮಕ್ಕಳನ್ನು ಬೇರ್ಪಡಿಸುತ್ತಿದ್ದರು ಎನ್ನುವುದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಯಾರೋ ಬಂದು ಬಲವಂತದಿಂದ ತನ್ನ ಮಕ್ಕಳನ್ನು ತನ್ನಿಂದ ಬೇರೆ ಮಾಡಿ ಕರೆದೊಯ್ದರೆ ಅದನ್ನು ತಾನು ಸರ್ವಥಾ ಸಹಿಸುವುದಿಲ್ಲ ಎಂದರು. ಅದೇನೋ ಒಪ್ಪುವ ಮಾತೆ ಸರಿ. ಆದರೆ ಇಂದಿಗೂ ಕೆನಡಾ ದೇಶದಲ್ಲಿ ಮೂಲನಿವಾಸಿಗಳಿಗೆ ಅವರ ಹಕ್ಕುಗಳ ಜಾರಿಗೆ ಮತ್ತು ಅವರ ಜೀವನವನ್ನು ಕುರಿತು ಅವರೇ ನಿರ್ಧರಿಸುವ ಸ್ವಯಂ-ನಿರ್ಣಯದ ದಾರಿ ಸುಗಮವಾಗಿಲ್ಲ. ಅದು ನಿಜವೆನ್ನುವುದು ಸಾಬೀತಾಗಿದ್ದು ಮೇಲಿನ ಸಂದರ್ಭದಲ್ಲಿ ಮೌನವಾಗಿ ತಮ್ಮ ನೋವನ್ನು ತೋರಿಸಿಕೊಂಡ ಮೂಲನಿವಾಸಿಗಳು ಹಿಡಿದಿದ್ದ ಭಿತ್ತಿಪತ್ರಗಳು ಮತ್ತು ಬರೆದಿದ್ದ ಘೋಷಣೆಗಳಿಂದ.
ಇದೆ ರೀತಿಯ ವಸಾಹತುಶಾಹಿ-ಸಂಬಂಧಿತ ಅನ್ಯಾಯಗಳು ಮತ್ತು ತಾರತಮ್ಯಗಳು ಆಸ್ಟ್ರೇಲಿಯದಲ್ಲಿ ನಡೆಯುತ್ತಲೇ ಬಂದಿದೆ. ಆಸ್ಟ್ರೇಲಿಯಾದ ಅಬೊರಿಜಿನಲ್ ಜನರ ಕುಟುಂಬಗಳಿಂದ ಬಲವಂತವಾಗಿ ಅವರ ಮಕ್ಕಳನ್ನು ಬೇರ್ಪಡಿಸಿ ಬಿಳಿಯರ ಕುಟುಂಬಗಳಿಗೆ ಕೊಟ್ಟು ಬಿಳಿಯರ ಸಂಸ್ಕೃತಿ, ಶಿಕ್ಷಣ, ಕ್ರೈಸ್ತಧರ್ಮಗಳಿಗೆ ಅನುಗುಣವಾಗಿ ಮಕ್ಕಳು ಬೆಳೆಯುವಂತಾಗಿದ್ದು ಎರಡು ನೂರು ವರ್ಷಗಳಿಂದ ನಡೆದ ವಿಷಯ ಕಣ್ಣಿಗೆ ರಾಚುವಂತಿದೆ. ಅಂತಹ ‘ಸ್ಟೋಲನ್ ಜನರೇಶನ್’ ನ ದನಿಯಾಗಿದ್ದ ಅಂಕಲ್ ಆರ್ಚಿ ರೋಚ್ ಕಳೆದ ವಾರಾಂತ್ಯದಲ್ಲಿ ತೀರಿಕೊಂಡರು. ಅವರಿಗೆ ಕೇವಲ ೬೬ ವರ್ಷ ವಯಸ್ಸಾಗಿತ್ತು. ಅವರ ಬಗ್ಗೆ ನಾನು ಈ ಹಿಂದೆ ‘ಕೆಂಡಸಂಪಿಗೆ’ ಯಲ್ಲಿ ಬರೆದಿದ್ದೆ. (ಆಸ್ಟ್ರೇಲಿಯಾದ ಅಬರಿಜಿನಲ್ ಹಾಡುಗಾರ ಆರ್ಚಿ ರೋಚ್)
ಸ್ವತಃ ಅವರೇ ನಾಲ್ಕುವರ್ಷದ ಪುಟ್ಟ ಬಾಲಕನಾಗಿದ್ದಾಗ, ಅಬೊರಿಜಿನಲ್ ಎಂಬ ಕಾರಣಕ್ಕಾಗಿ, ತನ್ನ ತಾಯಿಯ ಮಡಿಲಿನಿಂದ ಅವರನ್ನು ಬಿಳಿಯರ ಆಡಳಿತದ ಕಾನೂನುಪಾಲಕರು ಬೇರ್ಪಡಿಸಿದ್ದರು. ಆಗ ಇಸವಿ ೧೯೬೦. ಇಪ್ಪತ್ತನೆ ಶತಮಾನ! ಬಾಲಕನೊಂದಿಗೆ ಅವನ ಇಬ್ಬರು ಸೋದರಿಯರನ್ನೂ ಕೂಡ ಬಿಳಿಯರ ಕುಟುಂಬಗಳಿಗೆ ಕೊಡಲಾಗಿತ್ತು. ಈ ಪದ್ಧತಿಯ ಹೆಸರು ‘ಫಾಸ್ಟರ್ ಕೇರ್’ ಎಂದು. ಎರಡು ಮೂರು ಫಾಸ್ಟರ್ ಕೇರ್ ಕುಟುಂಬಗಳಲ್ಲಿ ಹಸ್ತಾಂತರವಾಗಿ ಕಡೆಗೆ ಬಾಲಕ ಆರ್ಚಿ ಬೆಳೆದಿದ್ದು ಒಬ್ಬ ಇಟಾಲಿಯನ್ ಕುಟುಂಬದೊಡನೆ. ಆರ್ಚಿ ಹೇಳಿರುವಂತೆ ಆ ಕುಟುಂಬದೊಡನೆ ಕಳೆದ ಅವರ ಬಾಲ್ಯ ಚೆನ್ನಾಗಿತ್ತು. ಹದಿನೈದು ವರ್ಷದ ಹುಡುಗನಿಗೆ ಸೋದರಿ ಬರೆದ ಪತ್ರದಿಂದ ತನ್ನ ಮಾತೃಕುಟುಂಬದ ಬೇರುಗಳ ನೆನಪಾಗುತ್ತದೆ. ತನ್ನ ಬೇರುಗಳನ್ನು ಹುಡುಕಿಕೊಂಡು ಮನೆಬಿಟ್ಟು ನಡೆದ ಹುಡುಗ ಮತ್ತೆಂದಿಗೂ ತನ್ನ ಇಟಾಲಿಯನ್ ಫಾಸ್ಟರ್ ಕೇರ್ ಕುಟುಂಬಕ್ಕೆ ಮರಳಲಿಲ್ಲ. ವಿಪರ್ಯಾಸವೆಂದರೆ ಹುಡುಕಾಟದ ವರ್ಷಗಳಲ್ಲಿ ತನ್ನ ಹೆತ್ತವರನ್ನು ಕೂಡ ಅವರು ಭೇಟಿಯಾಗಲು ಆಗಲೇ ಇಲ್ಲ. ತಂದೆತಾಯಿಯರು ತೀರಿಕೊಂಡರು. ಕುಡಿತ, ಮಾದಕವಸ್ತುಗಳ ವ್ಯಸನ, ಹೋಂ ಲೆಸ್ ನೆಸ್- ಆಶ್ರಯವಿಲ್ಲದ ಜೀವನದಲ್ಲೂ ರೂಬಿ ಹಂಟರ್ ಬಾಳಸಂಗಾತಿಯಾಗಿ ದೊರೆತು, ತನ್ನಲ್ಲಿದ್ದ ಹಾಡುಗಾರನನ್ನು ಬೆಳೆಸಿದ್ದು ಆರ್ಚಿಯವರ ಸಾಧನೆಯೇ ಹೌದು. ಮೂವತ್ತರ ಹರೆಯದಲ್ಲಿ ತಾವು ಬರೆದು ಹಾಡಿದ ‘Took the Children Away’ ಹಾಡು Stolen Generation ಎಂಬ ಕರಾಳ ವ್ಯವಸ್ಥೆಗೆ ಸಿಲುಕಿದ ಸಾವಿರಾರು ಅಬೊರಿಜಿನಲ್ ಮಕ್ಕಳ ಹಾಗೂ ಅವರ ಕುಟುಂಬಗಳ ಅಂತರಾಳದ ನೋವಿನ ದನಿಯಾಗಿತ್ತು.
೨೦೦೦ ನೇ ದಶಕದ ಹೊಸತರಲ್ಲಿ ಅದೇ Stolen Generation ವ್ಯವಸ್ಥೆಗೆ ಒಳಪಟ್ಟಿದ್ದ ಮಕ್ಕಳಲ್ಲಿ ಉಳಿದುಕೊಂಡು, ಬೆಳೆದು ದೊಡ್ಡವರಾಗಿದ್ದವರನ್ನು ಪತ್ತೆ ಮಾಡಿ ಆ ವ್ಯವಸ್ಥೆಯ ಬಗ್ಗೆ ತನಿಖೆ ನಡೆಸಿ ಸರಕಾರವು Bringing Them Home ಎಂಬ ವರದಿಯನ್ನು ಪ್ರಕಟಿಸಿತ್ತು. ಅದರ ನಂತರ, ೨೦೦೮ನೇ ಇಸವಿಯಲ್ಲಿ ಫೆಬ್ರವರಿ ೧೩ನೇ ತಾರೀಕು ಆಗಿನ ಪ್ರಧಾನ ಮಂತ್ರಿ ಕೆವಿನ್ ರಡ್ ದೇಶದ ಎಲ್ಲಾ ಸರಕಾರಗಳ ಪರವಾಗಿ Stolen Generation ಬಾಧಿತರನ್ನು ಉದ್ದೇಶಿಸಿ ‘ಕ್ಷಮಾಪಣೆ’ ಕೇಳಿದರು. ಅವರ ಭಾಷಣದ ನಂತರ ಅಂಕಲ್ ಆರ್ಚಿ ರೋಚ್ ತಮ್ಮ ‘‘Took the Children Away’ ಹಾಡನ್ನು ಮತ್ತೆ ಹಾಡಿದರು.
ಈ ರೀತಿಯ ಕ್ಷಮಾಪಣೆಗಳನ್ನು ರಾಜಕೀಯ ನಾಯಕರು, ಸರಕಾರಗಳು ಕೇಳುತ್ತಲೇ ಬಂದಿವೆ. ಕೆನಾಡದಲ್ಲಿ ಕಳೆದ ತಿಂಗಳು ಪೋಪ್ ಗುರುಗಳು ಕೇಳಿದ ಕ್ಷಮಾಪಣೆ, ಅಲ್ಲಿನ ಪ್ರಧಾನಿ ಕೇಳಿದ ಕ್ಷಮಾಪಣೆಗಳನ್ನೂ, ಈ ಆಗುಹೋಗುಗಳನ್ನು ಗಮನಿಸಿದರೆ ಸ್ಪಷ್ಟವಾಗುವುದು ವಸಾಹತುಶಾಹಿಗಳಿಂದ ರೂಪುಗೊಂಡ ಪಾಶ್ಚಿಮಾತ್ಯ ದೇಶಗಳಲ್ಲಿ ಅಲ್ಲಿನ ಮೂಲನಿವಾಸಿಗಳ ಅಸ್ಮಿತೆಗೆ ಇನ್ನೂ ನ್ಯಾಯವೊದಗಿಲ್ಲ. ಎಲ್ಲಿಯ ತನಕ ಅವರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುತ್ತಾರೊ ಅಲ್ಲಿಯವರೆಗೆ ಅವರ ಸ್ವಯಂ-ನಿರ್ಣಯದ ಹಕ್ಕು ಜಾರಿಗೆ ಬಂದಿಲ್ಲ ಎಂದರ್ಥ. ಅಂದರೆ, ತಮ್ಮದೇ ನೆಲದಲ್ಲಿ ತಮ್ಮದೇ ಬದುಕಿನಲ್ಲಿ ಅವರು ಪರಕೀಯರು. ಅವರ ಬಗ್ಗೆ ಎಲ್ಲ ನಿರ್ಣಯಗಳನ್ನು ಕೈಗೊಳ್ಳುವುದು ಪರಕೀಯರಾಗಿ ಬಂದು ‘ದೇಶ’ ಕಟ್ಟಿದ ವಸಾಹತುಶಾಹಿಗಳು. ಮೂಲನಿವಾಸಿಗಳೊಂದಿಗೆ ಇವರುಗಳು ಕೈಜೋಡಿಸಿ ಒಟ್ಟಿಗೆ ಕೆಲಸ ಮಾಡುವುದು ಅತ್ಯಂತ ಅವಶ್ಯಕ. ಈ ಅವಶ್ಯಕತೆಯನ್ನು ಪುನಃ ನೆನಪಿಸಿರುವುದು ಆಸ್ಟ್ರೇಲಿಯದ ಮೂಲನಿವಾಸಿಗಳ ಪ್ರತಿನಿಧಿಗಳು. ಇವರಲ್ಲಿ ಯೂನಿವರ್ಸಿಟಿ ಪ್ರೊಫೆಸರ್ ಗಳು, ವಕೀಲರು, ಮನೋವಿಜ್ಞಾನಿಗಳು ಎಂಬಂತೆ ಪ್ರತಿಭಾವಂತರಿದ್ದು ಅವರು ದೇಶದ ಉದ್ದಗಲಕ್ಕೂ ಸಂಚರಿಸಿ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿಗಳ ಜನಪಂಗಡಗಳನ್ನು ಸಂದರ್ಶಿಸಿ ‘ಒಟ್ಟಿಗೆ ನಡೆಯೋಣ ಬನ್ನಿ’ ಎಂಬ ಕರೆಯನ್ನು ಆಸ್ಟ್ರೇಲಿಯದ ಸರಕಾರಗಳಿಗೆ ಮತ್ತು ಜನತೆಗೆ ನೀಡಿದ್ದಾರೆ. ಆ ಕರೆಯನ್ನು ‘Uluru Statement from the Heart’ ಎಂದು ಹೆಸರಿಸಲಾಗಿದೆ.
ಅದನ್ನು ಕುರಿತು ಹೋದ ವಾರಾಂತ್ಯ ನಡೆದ Garma Festival ನಲ್ಲಿ ದೇಶದ ಪ್ರಧಾನಮಂತ್ರಿಗಳನ್ನು ಪ್ರಶ್ನಿಸಲಾಗಿತ್ತು. ಪ್ರಧಾನಿಗಳು ಹೇಳಿದ ಉತ್ತರ ನಮಗೆಲ್ಲ ಬಹಳ ಆಪ್ಯಾಯಮಾನವೆನಿಸಿದೆ. ‘ಈ ನಮ್ಮ ದೇಶದಲ್ಲಿ ಯಾರೊಬ್ಬರಾದರೂ ಸ್ನೇಹ ಹಸ್ತ ಚಾಚಿ ಬನ್ನಿ, ಜೊತೆಯಾಗಿ ನಡೆಯೋಣ ಎಂದರೆ ನಾವು ಯಾರೂ ಆ ಸ್ನೇಹದ ಹಸ್ತವನ್ನು ತಿರಸ್ಕರಿಸುವುದಿಲ್ಲ.’ ಎಲ್ಲಾ ಆಸ್ಟ್ರೇಲಿಯನ್ನರ ಜೀವನದಲ್ಲಿ ಆ ಮಾತು ರುಜುವಾತಾಗುವ ಹೊತ್ತು ಇದು.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.