ಲೂಸ್ ಇರಿಗೆರೆ, ಹೆಲೆನ್ ಸಿಝೂ ಮೊದಲಾದ ಫೆಮಿನಿಸ್ಟ್ ಚಿಂತಕರು ಮಹಿಳಾ ಸ್ವಾಂತಂತ್ರ್ಯದ ಸಂದರ್ಭದಲ್ಲಿ ಕೇಳುವ ಸಮಾನತೆ ಅಥವಾ ವೈವಿಧ್ಯತೆಯ ಪ್ರಶ್ನೆಯನ್ನು ಇಲ್ಲಿಯೂ ಕೇಳುವುದಾದರೆ ಕನಕದಾಸರು ತಮ್ಮ ಕಾವ್ಯದಲ್ಲಿ ಸಮಾನತೆಯನ್ನು ಎತ್ತಿ ಹಿಡಿಯುವ, ವೈವಿಧ್ಯತೆಯನ್ನು ಗುರುತಿಸುವ ಬಹು ಆಯಾಮದ ನೋಟವನ್ನು ತೋರಿದ್ದಾರೆ ಅನ್ನಿಸುತ್ತದೆ. ರಾಗಿಯನ್ನು ರಾಘವತ್ವಕ್ಕೆ ಉನ್ನತೀಕರಿಸಿದ ಮೇಲೆಯೂ ಅವುಗಳ ನಡುವೆ ಸಾಮರಸ್ಯ ಉಳಿದಿದೆ ಎಂಬುದಕ್ಕೆ ರಾಮ ಭತ್ತವನ್ನು ಚೋಳದೇಶಕ್ಕೆ ಕಳುಹಿಸಿ ರಾಗಿಯನ್ನು ತನ್ನಲ್ಲೇ ಉಳಿಸಿಕೊಳ್ಳುವುದನ್ನು ಎಚ್ಚರಿಕೆಯಿಂದ ಗಮನಿಸಬೇಕು.
ಎಸ್. ಸಿರಾಜ್ ಅಹಮದ್ ಅಂಕಣದಲ್ಲಿ ರಾಮಧಾನ್ಯ ಚರಿತೆ ಕುರಿತ ಬರಹ:
ಕನಕದಾಸರ ಕೃತಿಗಳಲ್ಲಿರುವ ವೈಚಾರಿಕತೆ, ಧಾರ್ಮಿಕ ವಿಡಂಬನೆಯ ಕಾರಣದಿಂದಲೇ ಅವರ ಕೃತಿಗಳಿಗೆ ಸಾರ್ವಕಾಲಿಕ ಮನ್ನಣೆ, ನಿರಂತರತೆ ಒದಗಿಬಂದಿದೆ. ಅದರಲ್ಲೂ ಮುಖ್ಯವಾಗಿ ಅವರ ಕುಲವಿರೋಧಿ ಆಶಯದ ಕೀರ್ತನೆಗಳು ಹಾಗೂ ‘ರಾಮಧಾನ್ಯಚರಿತೆ’ ಕೃತಿಗಳು ಕನಕದಾಸರ ವೈಚಾರಿಕ ಪ್ರಣಾಲಿಯ ಪ್ರಮುಖ ಆಶಯಗಳಾಗಿವೆ. ರಾಮಧಾನ್ಯ ಚರಿತೆಯನ್ನು ಸಮಾನತೆಯ ಆಶಯವನ್ನು ಎತ್ತಿಹಿಡಿಯುವ ಕನ್ನಡದ ಮೊದಲ ವೈಚಾರಿಕ ಬಂಡಾಯದ ಕೃತಿಗಳಲ್ಲಿ ಒಂದು- ಎಂದು ಗುರುತಿಸಲಾಗಿದೆ. ಈ ಕೃತಿಯ ‘ಬಂಡಾಯದ ಸ್ವರೂಪ’ ಹೇಗೇ ಇರಲಿ, ಅದು ಕನ್ನಡ ವೈಚಾರಿಕ ಪರಂಪರೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.
ಕನಕದಾಸರು ತಮ್ಮ ಕೀರ್ತನೆಗಳಲ್ಲಿ ನೇರವಾದ ಸಾಮಾಜಿಕ ವಿಮರ್ಶೆ ಮಾಡಿದರೆ, ರಾಮಧಾನ್ಯ ಚರಿತೆಯಲ್ಲಿ ಪೌರಾಣಿಕ ಹಿನ್ನೆಲೆಯ ಕಥಾವಸ್ತುಗಳ ಮೂಲಕ ಸಮಾಜದ ಶೋಷಿತರ, ಶೂದ್ರವರ್ಗಗಳ ಆತ್ಮಗೌರವವನ್ನು ಎತ್ತಿಹಿಡಿಯುವ, ಮೇಲ್ವರ್ಗದ ಸುಳ್ಳು ಪ್ರತಿಷ್ಠೆಯನ್ನು ಧಿಕ್ಕರಿಸುವ ಪ್ರಯತ್ನಮಾಡುತ್ತಾರೆ. ಹಾಗೆಯೇ ಮೇಲ್ನೋಟಕ್ಕೆ ರಮ್ಯಕಾವ್ಯದಂತೆ ಕಾಣುವ ನಳಚರಿತೆಯಲ್ಲೂ ಸಹ ಹೆಣ್ಣಿನ ಸಂಕಲ್ಪಬಲ, ಎಲ್ಲ ಕಷ್ಟ ಪರಂಪರೆಗಳನ್ನು ಮೆಟ್ಟಿನಿಲ್ಲುವ ಆತ್ಮಸ್ಥೈರ್ಯದ ಚಿತ್ರಣವನ್ನು ನೀಡುತ್ತಾರೆ. ಪುರಾಣದ ಪರಿಚಿತ ಕಥನಗಳ ಮೂಲಕ ಸಾಮಾಜಿಕ ಚಿಂತನೆಗೆ ಇಂಬು ಕಲ್ಪಿಸುವುದು ಕನಕದಾಸರ ವೈಚಾರಿಕ ಕ್ರಮವಾಗಿ ಕಾಣುತ್ತದೆ. ಅವರ ಕಥನ ಕಾವ್ಯಗಳು ಸಮಾಜದ ಶೋಷಿತರ ಹಾಗೂ ಹೆಣ್ಣಿನ ಆತ್ಮಗೌರವವನ್ನು ಎತ್ತಿಹಿಡಿಯುವ ಕಾರಣದಿಂದ ಅವು ಬಹಳ ದೊಡ್ಡ ಸಾಂಸ್ಕೃತಿಕ ಮನ್ನಣೆಗೆ ಪಾತ್ರವಾಗಿವೆ.
ರಾಮಧಾನ್ಯ ಚರಿತೆಯಲ್ಲಿ ರಾಮಾಯಣದ ಕತೆ ಒಂದು ಭಿತ್ತಿಯಂತೆ ಆವರಿಸಿಕೊಂಡಿದ್ದರೂ, ಅದರ ಮುಖ್ಯ ಉದ್ದೇಶ ಮನುಷ್ಯ ಪ್ರಪಂಚದ ಅಂಕುಡೊಂಕುಗಳನ್ನು, ಅಲ್ಲಿರುವ ಅಸಮಾನತೆಯ ರಚನೆಗಳನ್ನು ಪ್ರಶ್ನಿಸುವುದೇ ಆಗಿದೆ. ಹಾಗಾಗಿ ಕನಕರ ರಾಮಧಾನ್ಯಚರಿತೆಯನ್ನು ಪುರಾಣದ ಕತೆಯೊಂದನ್ನು ಮಾನವೀಕರಣಗೊಳಿಸಿರುವ ಕೃತಿಗೆ ಉದಾಹರಣೆಯಾಗಿ ಓದಬಹುದು.
ಪಂಚತಂತ್ರದ ಕತೆಗಳಲ್ಲಿ ಪ್ರಾಣಿಗಳ ರೂಪಕಗಳ ಮೂಲಕ ರಾಜಕೀಯ ಕಥನವನ್ನು ಕಟ್ಟುವ ಪ್ರಯತ್ನ ನಡೆದರೆ, ಇಲ್ಲಿ ಕನಕರು ಧಾನ್ಯಗಳ ರೂಪಕದಲ್ಲಿ ಬ್ರಾಹ್ಮಣ-ಶೂದ್ರರ ನಡುವಿನ ಸಾಮಾಜಿಕ ಸಂಘರ್ಷವನ್ನು ವಿವರಿಸುವ ಪ್ರಯತ್ನ ಮಾಡಿದ್ದಾರೆ. ಪ್ರಾಣಿಗಳ-ಪ್ರಕೃತಿಯ ರೂಪಕಗಳ ಮೂಲಕ ಕಥಾನಕವನ್ನು ಬೆಳೆಸುವ ಕ್ರಮವನ್ನು ಹೊರತುಪಡಿಸಿದರೆ, ಧಾನ್ಯಗಳನ್ನು ರೂಪಕಗಳಾಗಿ ಬಳಸಿ ಕಥನವನ್ನು ಬೆಳೆಸಿದವರಲ್ಲಿ ಬಹುಶಃ ಕನಕರೇ ಮೊದಲಿಗರಿರಬೇಕು. ಇಲ್ಲಿ ಕವಿಯ ಉದ್ದೇಶ ನರೆದಲಗ-ವ್ರೀಹಿ(ರಾಗಿ-ಭತ್ತ)ಗಳ ನಡುವಿನ ಸಂಘರ್ಷವನ್ನು ಹೇಳುವುದಾದರೂ ಕಾವ್ಯದ ತುಂಬ ರಾಮಕತೆಯೇ ಎಲ್ಲ ಕಡೆ ವ್ಯಾಪಿಸಿಕೊಂಡಿದೆ.
ಅರಣ್ಯವಾಸದಲ್ಲಿರುವ ಪಾಂಡವರಿಗೆ ಅವರ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಲು ಶಾಂಡಿಲ್ಯಮುನಿ ಅರಣ್ಯವಾಸ, ಸೀತಾಪಹರಣ, ರಾವಣವಧೆ, ವಿಭೀಷಣನ ಪಟ್ಟಾಭಿಷೇಕ ಮುಂತಾದ ರಾಮಕಥೆಯ ಭಾಗಗಳನ್ನು ಹೇಳುತ್ತ ಅದರೊಂದಿಗೆ ರಾಗಿ-ಬತ್ತಗಳ ನಡುವಿನ ಸಂಘರ್ಷದ ಕತೆಯನ್ನು ಹೇಳುತ್ತಾನೆ. ರಾವಣವಧೆ,ವಿಭೀಷಣನ ಪಟ್ಟಾಭಿಷೇಕದ ನಂತರ ರಾಮ ಅಯೋಧ್ಯೆಗೆ ಹಿಂತಿರುಗುವಾಗ ಮಾರ್ಗ ಮಧ್ಯೆ ಗೌತಮ ಋಷಿಯ ಆಶ್ರಮಕ್ಕೆ ಭೇಟಿ ನೀಡುವ ಪ್ರಸಂಗವಿದೆ. ಅಲ್ಲಿ ಗೌತಮ ಋಷಿ ಔತಣಕೂಟವನ್ನು ಏರ್ಪಡಿಸುತ್ತಾನೆ. ಔತಣಕೂಟದಲ್ಲಿ ಬತ್ತ-ರಾಗಿಗಳ ಶ್ರೇಷ್ಠತೆಯ ಬಗ್ಗೆ ಚರ್ಚೆ ಶುರುವಾಗಿ ಗೌತಮಮುನಿ ರಾಗಿಯ ಶ್ರೇಷ್ಠತೆಯ ಬಗ್ಗೆ ಮಾತನಾಡಿದಾಗ ಬತ್ತಕ್ಕೆ ತೀವ್ರ ಅವಮಾನವಾದಂತಾಗಿ ಭತ್ತ-ರಾಗಿಗಳ ನಡುವೆ ತೀಕ್ಷ್ಣ ಸಂವಾದ ನಡೆಯುತ್ತದೆ.
ಕಾವ್ಯದ ಮುಖ್ಯಭಾಗ ಭತ್ತ-ರಾಗಿಗಳ ನಡುವಿನ ಸಂವಾದವೇ. ಹಾಗಾಗಿ ಕಾವ್ಯಕ್ಕೆ ಒಂದು ನಾಟಕೀಯ ತೀವ್ರತೆ ಒದಗಿಬಂದಿದೆ.ರಾಗಿಯನ್ನು ಶೂದ್ರಾನ್ನವೆಂದು ಹೀಯಾಳಿಸುವ ಭತ್ತ ಮೇಲ್ಜಾತಿಗೆ, ಶ್ರೀಮಂತರಿಗೆ ಸೂಚಕವಾಗಿದೆ. ಮಂತ್ರಾಕ್ಷತೆ ಯಜ್ಞಯಾಗಾದಿಗಳಲ್ಲಿ ಮಾತ್ರ ಬಳಕೆಯಾಗುವ ಭತ್ತ ತನ್ನ ಕುಲದ ಶ್ರೇಷ್ಠತೆಯನ್ನು ನಂಬಿಕೊಂಡಿದೆ. ಬಡವರ ಸಾಮಾನ್ಯ ಆಹಾರವಾದ ರಾಗಿ ತನ್ನನ್ನು ಅವಮಾನಿಸುವವರ ನಡುವೆ ನಡೆಸುವ ವಾಗ್ವಾದ ಸಮಾಜದ ಶೋಷಿತವರ್ಗಗಳು ತಮ್ಮ ಆತ್ಮಗೌರವಕ್ಕೆ ನಡೆಸುವ ಪ್ರಯತ್ನದಂತೆ ಕಾಣುತ್ತದೆ. ಭತ್ತ ರಾಗಿಗಳ ನಡುವಿನ ಅಸಮಾನತೆ ವೈಷಮ್ಯಗಳನ್ನು ಕಾವ್ಯ ನಿರೂಪಿಸಿದರೂ ಕೊನೆಗೆ ರಾಗಿಯ ಅಂತಸ್ಸತ್ವದ ಎದುರು ಸೋಲುಂಡ ಭತ್ತವನ್ನು ರಾಮ ಹತ್ತಿರ ಕರೆದು ಸಾಮರಸ್ಯದ ಪಾಠ ಹೇಳಲು ಮರೆಯುವುದಿಲ್ಲ. ರಾಗಿ-ಭತ್ತಗಳ ನಡುವಿನ ಸಂಘರ್ಷ-ವಾಗ್ವಾದಗಳಿಂದ ಶುರುವಾಗುವ ಕಾವ್ಯ ಎರಡರ ನಡುವೆ ಸಾಮರಸ್ಯ ಸ್ಥಾಪಿಸುವುದರೊಂದಿಗೆ, ರಾಮ ತನ್ನ ಹೆಸರನ್ನು ರಾಗಿಗೆ ನೀಡುವುದರೊಂದಿಗೆ ಮುಕ್ತಾಯವಾಗುತ್ತದೆ.
ಮೇಲ್ನೋಟಕ್ಕೆ ರಮ್ಯಕಾವ್ಯದಂತೆ ಕಾಣುವ ನಳಚರಿತೆಯಲ್ಲೂ ಸಹ ಹೆಣ್ಣಿನ ಸಂಕಲ್ಪಬಲ, ಎಲ್ಲ ಕಷ್ಟ ಪರಂಪರೆಗಳನ್ನು ಮೆಟ್ಟಿನಿಲ್ಲುವ ಆತ್ಮಸ್ಥೈರ್ಯದ ಚಿತ್ರಣವನ್ನು ನೀಡುತ್ತಾರೆ.
ಕೃತಿಯನ್ನು ಇದುವರೆಗೆ ಹಲವು ಬಗೆಗಳಲ್ಲಿ ಓದಲಾಗಿದೆ. ಮೇಲ್ವರ್ಗಗಳ ಶ್ರೇಷ್ಠತೆಯ ವ್ಯಸನ, ಕೆಳಜಾತಿಗಳ ಅಪಮೌಲ್ಯೀಕರಣಗಳ ಈ ಕತೆಯನ್ನು ತಳಸಮುದಾಯಗಳ ಹೋರಾಟದ ಭಾಗವಾಗಿ ನೋಡಲು ಸಾಧ್ಯ ಎಂಬ ವಿಶ್ಲೇಷಣೆಗಳು ಇವೆ. ಹಾಗೆಯೇ ರಾಗಿ ತನ್ನ ಅಪಮೌಲ್ಯೀಕರಣವನ್ನು ಮೆಟ್ಟಿನಿಲ್ಲುವ ಕತೆಯನ್ನು ಕೆಳಜಾತಿಗಳ ಕ್ರಿಯಾತ್ಮಕ ಹೋರಾಟದ ಪ್ರತೀಕವಾಗಿ ನೋಡಲು ಸಾಧ್ಯವಿದೆ ಎಂದು ಹಲವರು ವ್ಯಾಖ್ಯಾನಿಸಿದ್ದಾರೆ. ಈ ಬಗೆಯ ಓದುವ ಕ್ರಮಗಳನ್ನು ಒಪ್ಪಿಕೊಂಡೇ, ಇದಕ್ಕಿಂತ ಭಿನ್ನವಾಗಿ ಓದುವ ಕ್ರಮವನ್ನೂ ಸಹ ರೂಪಿಸಿಕೊಳ್ಳುವ ಅಗತ್ಯವೂ ಇದೆ. ರಾಮಧಾನ್ಯ ಚರಿತೆಯನ್ನು ತಳವರ್ಗದ ಹೋರಾಟಗಳ ಪ್ರತೀಕವಾಗಿ ನೋಡುವುದರಲ್ಲಿ ಸಮಸ್ಯೆ ಇಲ್ಲ. ಸಮಸ್ಯೆ ಇರುವುದು ರಾಗಿಯನ್ನು ರಾಘವತ್ವಕ್ಕೆ ಏರಿಸುವ ಕನಕದಾಸರ ಕ್ರಮವನ್ನು ಬಂಡಾಯದ ಮಾದರಿಯಾಗಿ ಹೇಗೆ ಸ್ವೀಕರಿಸಬೇಕು? ಹಾಗೆ ನೋಡಿದರೆ ರಾಗಿ-ರಾಘವ ಎಂಬ ಶಬ್ದಗಳ ನಡುವೆ ನರೆದಲಗ-ವ್ರೀಹಿಯ ನಡುವೆ ಇರುವ ಕಂದರಗಳೇ ಇವೆ. ರಾಗಿ ಎಂಬ ದೇಸಿ ಸ್ಥಿತಿಯು ಅಂತಿಮವಾಗಿ ರಾಘವನೆಂಬ ಮಾರ್ಗದ ಕಡೆ ಸಾಗುವುದು ಪ್ರತಿಸಂಸ್ಕೃತಿಯ ಮಾದರಿಯೋ? ಸಂಸ್ಕೃತೀಕರಣದ ಮಾದರಿಯೋ?
ಇನ್ನೊಂದು ಸಮಸ್ಯೆಯೆಂದರೆ: ರಾಗಿ ಹಾಗೂ ಭತ್ತಗಳನ್ನು ಜಾತಿಸೂಚಕವಾದ ಸಾರ್ವತ್ರಿಕ ರೂಪಗಳೆಂದು ಹೇಗೆ ಪರಿಗಣಿಸುವುದು? ಇದನ್ನು ಸಾಹಿತ್ಯಿಕ ರೂಪಕಗಳನ್ನು ಅತಿರೇಕವಾಗಿ ಓದುವ ಸಮಸ್ಯೆಯ ಉದಾಹರಣೆಯನ್ನಾಗಿ ನೋಡಬಹುದು. ಸ್ವತಃ ರಾಗಿಯಾಗಲೀ ಭತ್ತವಾಗಲೀ – ಕರ್ನಾಟಕದಲ್ಲಾಗಲೀ ಭಾರತದಲ್ಲಾಗಲೀ – ಮೇಲ್ಜಾತಿಗಳಲ್ಲಾಗಲೀ ಕೆಳಜಾತಿಗಳಲ್ಲಾಗಲೀ – ಪೂರ್ಣವಾಗಿ ಸಾರ್ವತ್ರಿಕ ಆಹಾರದ ಕ್ರಮವಾಗಿಲ್ಲ. ರಾಮನ ಅಯೋಧ್ಯೆಯಲ್ಲಿ ಅಕ್ಕಿಯಂತೆ ಗೋಧಿಗೂ ಪ್ರಮುಖ ಸ್ಥಾನವಿದೆ. ಸ್ವತಃ ಕನಕನ ಸೀಮೆಯಲ್ಲಿ ರಾಗಿಗಿಂತ ಜೋಳಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಕರ್ನಾಟಕದ ಹಲವು ಪ್ರದೇಶಗಳಲ್ಲಿ ಅಕ್ಕಿ-ರಾಗಿಗಳನ್ನು ಅಲ್ಲಿನ ಹವಾಮಾನಕ್ಕೆ ತಕ್ಕಂತೆ ಆಹಾರವಾಗಿ ಬಳಸುವ ಪರಿಪಾಠವಿರುವಾಗ ಅವುಗಳನ್ನು ಎರಡು ಜಾತಿಗಳಿಗೆ ಸಾರ್ವತ್ರಿಕವಾಗಿ ಅನ್ವಯಿಸುವುದು ಹೇಗೆ?
ಪೂರಕವಾದ ಸಂಗತಿಯೆಂದರೆ, ಭತ್ತ ರಾಗಿಗಳು ಭಾರತದ ಸಾಮಾಜಿಕ ರಚನೆಯಲ್ಲಿ ಮೇಲು ಕೀಳಿನ ಸಂಕೇತವಾಗಿರುವಂತೆ ಎರಡು ಭಿನ್ನ ಆಹಾರಕ್ರಮಗಳ, ಭಿನ್ನ ಪೋಷಕ ಸತ್ವಗಳ ಪ್ರತಿನಿಧಿಗಳೂ ಆಗಿವೆ. ಹಾಗಿರುವಾಗ ರಾಗಿ ಭತ್ತಗಳ ನಡುವಿನ ಅಸಮಾನತೆಯನ್ನು ಪ್ರಶ್ನಿಸಬೇಕಾದದ್ದು ಮಾತ್ರವಲ್ಲ. ಬದಲಾಗಿ ಅವುಗಳ ನಡುವಿನ ವೈವಿಧ್ಯವನ್ನೂ ಸಹ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ.
ಲೂಸ್ ಇರಿಗೆರೆ, ಹೆಲೆನ್ ಸಿಝೂ ಮೊದಲಾದ ಫೆಮಿನಿಸ್ಟ್ ಚಿಂತಕರು ಮಹಿಳಾ ಸ್ವಾಂತಂತ್ರ್ಯದ ಸಂದರ್ಭದಲ್ಲಿ ಕೇಳುವ ಸಮಾನತೆ ಅಥವಾ ವೈವಿಧ್ಯತೆಯ (ಡಿಫರೆಂಟ್ ಆರ್ ಈಕ್ವಲ್) ಪ್ರಶ್ನೆಯನ್ನು ಇಲ್ಲಿಯೂ ಕೇಳುವುದಾದರೆ ಕನಕದಾಸರು ತಮ್ಮ ಕಾವ್ಯದಲ್ಲಿ ಸಮಾನತೆಯನ್ನು ಎತ್ತಿ ಹಿಡಿಯುವ, ವೈವಿಧ್ಯತೆಯನ್ನು ಗುರುತಿಸುವ ಬಹು ಆಯಾಮದ ನೋಟವನ್ನು ತೋರಿದ್ದಾರೆ ಅನ್ನಿಸುತ್ತದೆ.
ಗಮನಿಸಬೇಕಾದ ಸಂಗತಿಯೆಂದರೆ, ರಾಗಿಯನ್ನು ರಾಘವತ್ವಕ್ಕೆ ಉನ್ನತೀಕರಿಸಿದ ಮೇಲೆ ಅವುಗಳ ನಡುವೆ ಸಾಮರಸ್ಯ ಉಳಿದಿದೆ. ಅವುಗಳ ನಡುವಿನ ವೈಶಿಷ್ಟತೆ ಉಳಿದಿದೆ ಎಂಬುದಕ್ಕೆ ರಾಮ ಬತ್ತವನ್ನು ಚೋಳದೇಶಕ್ಕೆ ಕಳುಹಿಸಿ ರಾಗಿಯನ್ನು ತನ್ನಲ್ಲೇ ಉಳಿಸಿಕೊಳ್ಳುವುದನ್ನು ಎಚ್ಚರಿಕೆಯಿಂದ ಗಮನಿಸಬೇಕು. ಇಲ್ಲಿ ಕನಕದಾಸರಿಗೆ ಬತ್ತದ ಪಾರಮ್ಯವನ್ನು ಪ್ರಶ್ನಿಸಿ ಪರಂಪರೆಯಿಂದ ಸಿಡಿದು ಹೋಗುವ ಮತ್ತು ಸಮಾಜದ ಎರಡು ಗುಂಪುಗಳ ನಡುವೆ ಯಾವುದೇ ಸಾಮರಸ್ಯ ಸಂಬಂಧಗಳಿಲ್ಲದ ಶಾಶ್ವತ ವಿರೋಧಿಗುಂಪುಗಳನ್ನು ಸೃಷ್ಟಿಸುವುದರಲ್ಲಿ ಆಸಕ್ತಿಯಿಲ್ಲ. ಹಾಗಾಗಿಯೇ ರಾಗಿ ಭತ್ತಗಳ ನಡುವಿನ ಕೃತಕ ಶ್ರೇಷ್ಠತೆ-ಹೀನತೆಗಳನ್ನು ಕಟುವಾಗಿ ಪ್ರಶ್ನಿಸುತ್ತಲೇ ಅವುಗಳ ನಡುವಿನ ಸಾಮರಸ್ಯಕ್ಕೂ ಅವಕಾಶ ಕಲ್ಪಿಸುತ್ತಾರೆ.
ಬಂಡಾಯವಷ್ಟೇ ಅಲ್ಲ
ಹಾಗಾಗಿ ಕನಕರ ಕಾವ್ಯವನ್ನು ಕೇವಲ ಬಂಡಾಯದ ಮಾದರಿಯನ್ನಾಗಿ ಮಾತ್ರ ನೋಡಬೇಕಿಲ್ಲ. ಬಂಡಾಯವೇ ಹೌದೆನ್ನುವುದಾದರೆ ಅದು ಭಿನ್ನತೆ-ಸಾಮರಸ್ಯಗಳೆರಡನ್ನೂ ಗುರುತಿಸುವ ಶ್ರದ್ಧಾಪೂರ್ವಕ ಬಂಡಾಯದ (ರೆವರೆನ್ಶಿಯಲ್ ರೆಬೆಲಿಯನ್) ಉದಾಹರಣೆಯನ್ನು ಇಲ್ಲಿ ಕಾಣಬಹುದು. ಇಲ್ಲಿ ಕನಕದಾಸರ ಬಂಡಾಯ ಸಮಾಜದ ಸಾರ್ವತ್ರಿಕ ಅಪೇಕ್ಷೆಗಳ ಚೌಕಟ್ಟಿನಲ್ಲಿಯೇ ಪರಂಪರೆಯೊಳಗಿನ ಬಂಡಾಯವಾಗಿ ರೂಪುಗೊಂಡಿದೆ. ರಾಗಿ ಭತ್ತಗಳ ನಡುವಿನ ಸಂಘರ್ಷವನ್ನು ಕೇವಲ ಅಸಮಾನ ವರ್ಗಗಳ ನಡುವಿನ ಸಂಘರ್ಷವಾಗಿ ನೋಡುವುದರ ಬದಲಾಗಿ, ಅವುಗಳಲ್ಲಿರುವ ಸಾಮರಸ್ಯದ ಸ್ಥಿತಿಯನ್ನು ಉಳಿಸುವ, ಸಮಾಜದ ವೈವಿಧ್ಯತೆ-ಭಿನ್ನತೆಗಳನ್ನು ಪೋಷಿಸುವ ಡೆಮಾಕ್ರಟಿಕ್ ಆಶಯವನ್ನಾಗಿ ನೋಡುವ ಅಗತ್ಯವೂ ಇದೆ.
ಹಾಗೆ ನೋಡಿದರೆ, ಕನಕದಾಸರ ಕೃತಿಗಳಲ್ಲಿ ರಾಗಿಯು ರಾಘವತ್ವಕ್ಕೆ ಏರುವ ಉದಾಹರಣೆಗಳಿರುವಂತೆ ಕನಕದಾಸರ ಜೀವನದಲ್ಲಿಯೂ ಸಹ ತಿಮ್ಮಪ್ಪ-ಕನಕನಾಯಕ(ಕನ್ನರದಾಸ)-ಕನಕದಾಸನಾಗುವ ರೂಪಾಂತರ ಪ್ರಕ್ರಿಯೆ ನಡೆದಿರುವುದಕ್ಕೆ ಹಲವಾರು ಉದಾಹರಣೆಗಳು ದೊರೆಯುತ್ತವೆ. ಇಂಥ ಸಂಸ್ಕೃತೀಕರಣದ ಪ್ರಕ್ರಿಯೆ ತಮ್ಮ ಜೀವನದಲ್ಲಿ ನಡೆದರೂ ಅದರ ನಡುವೆಯೇ “ನಾವು ಕುರುಬರು ನಮ್ಮ ದೇವರು ಬೀರಯ್ಯ/ ಕಾವ ನಮ್ಮಜ್ಜ ನರಕುರಿಯ ಹಿಂಡುಗಳ” ಎಂಬ ಮಾತುಗಳ ಜೊತೆ ಜೊತೆಯಲ್ಲಿಯೇ “ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿಗಳೆ/ ಜನ್ಮ ಸಾರ್ಥಕವಿಲ್ಲದವರೆಲ್ಲ ಭಾಗವತರೇ ?” ಎಂಬ ಪ್ರಶೆಗಳೂ ಸಹ ಅದೇ ಧಾಟಿಯಲ್ಲಿ ಬರುವುದನ್ನು ಕಾಣಬಹುದು.ಹಾಗಾಗಿ ಕನಕದಾಸರ ಕೃತಿಗಳನ್ನು ಓದುವಾಗ ಅವುಗಳನ್ನು ಕೇವಲ ಬಂಡಾಯದ, ಸಂಸ್ಕೃತೀಕರಣದ ಪಠ್ಯಗಳನ್ನಾಗಿ ಮಾತ್ರ ನೋಡದೆ, ಸಾಂಸ್ಕೃತಿಕ ವೈವಿಧ್ಯತೆಯನ್ನು ಪೋಷಿಸುವ ವಿಶಾಲವಾದ ಪ್ರಜಾಪ್ರಭುತ್ವವಾದಿ ದೃಷ್ಟಿಕೋನದ ಕೃತಿಗಳನ್ನಾಗಿ ಓದಿದಾಗ ಹೆಚ್ಚಿನ ಅರ್ಥಗಳು ಹೊಳೆಯುತ್ತವೆ.
ಕನ್ನಡ ವಿಮರ್ಶಕ, ಲೇಖಕ, ಅನುವಾದಕ. ಮೂಲತಃ ಚಿತ್ರದುರ್ಗದವರು. ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರು
ರಾಗಿ ಮತ್ತು ಭತ್ತದ ವೈಚಾರಿಕ ನಿಲುವುಗಳಲ್ಲಿ ವರ್ಗ ಸಂಘರ್ಷ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾಳಜಿಯ ವಿಚಾರವನ್ನು ಡಾ ಸಿರಾಜ್ ಅಹಮದ್
ಚೆನ್ನಾಗಿ ನಿರೂಪಿಸಿದ್ದಾರೆ.
ಧನ್ಯವಾದಗಳು
It’s really good way of presentation