ಚಳಿಗಾಲದ ತುಂಬೆಲ್ಲ ಕಡುಚಳಿಯ ಬಗೆಗಿನ ದೂರುಗಳು, ಕಳವಳ, ಗೊಣಗಾಟ, ಕೇಕೆಗಳು, ಕವಿತೆಗಳು  ಜೊತೆಜೊತೆಯಾಗಿ ಕೇಳಿದವು. ಚಳಿಯ ಹಾಡು, ಹಿಮದಲ್ಲಿ  ಕುಣಿತ ಕೇಕೆಗಳನ್ನು ಕೇಳುತ್ತ ನೋಡುತ್ತಾ “ಸ್ನೋ ಮ್ಯಾನ್” ಗಳೂ  ಮೆಲ್ಲನೆ ಕರಗಿದವು.   ತಾವೆಂದೂ   ಇರಲೇ ಇಲ್ಲವೇನೋ ಎನ್ನುವಂತೆ ಚೂರೂ ಕುರುಹು ಬಿಡದೆ  ನೀರಾಗಿ ಇಂಗಿಯೋ ಆವಿಯಾಗಿಯೋ  ಮಾಯವಾದವು; ಚಳಿ ಮುಸುಕಿದ ಹಿಮ ಸುರಿದ  ದಿನಗಳೀಗ ಕನಸಿನಂತೆ ತೇಲಿಹೋದವು.
ಲಂಡನ್ನಿನ ಕಡು ಚಳಿಗಾಲ ನೆನೆಯುತ್ತ ಯೋಗೀಂದ್ರ ಮರವಂತೆ ಬರೆವ ಬ್ರಿಸ್ಟೆಲ್ ಅಂಕಣ

 

ಚಳಿಗಾಲದ ಇಂಗ್ಲೆಂಡ್ ಅಲ್ಲಿ ಕುಳಿತು ಚಳಿಗಾಲವನ್ನೇ  ದೂರಿದರೆ “ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು… ಇವರು ಮೆಚ್ಚುವ  ವಸ್ತು ಇಲ್ಲಿಲ್ಲ ಜೋಕೆ” ಎಂದು ನೀವು ಮೂಗು ಮುರಿಯಬಹುದು. ಅಥವಾ ಕರಾವಳಿಯಲ್ಲೋ, ಮಲೆನಾಡಿನಲ್ಲೋ ವಾಸಿಸುವವರು ಮುಂಗಾರು ಮಳೆಯ ಕಾಲದಲ್ಲಿ  ಎಷ್ಟು  ಜೋರು ಮಳೆ ಎಂಬ ಉದ್ಗಾರಕ್ಕೆ ಸಿಗಬಹುದಾದ ನಿರಾಸಕ್ತಿಯೇ  ನಮ್ಮ ಈ ಗೊಣಗಾಟಕ್ಕೂ  ಸಿಗಬಹುದು. ನಾವು ಇಲ್ಲಿನ ಚಳಿಗಾಲವನ್ನು ಚಳಿಗಾಲ ಮತ್ತು ಕೆಟ್ಟ ಚಳಿಗಾಲ ಎಂದು ವಿಂಗಡಿಸಿ ಬದುಕುವವರು. ನವೆಂಬರದಿಂದ  ಫೆಬ್ರವರಿ ಕೊನೆಯ ತನಕದ ಇಲ್ಲಿನ ಸುಮಾರು ನಾಲ್ಕು ತಿಂಗಳ ಚಳಿಗಾಲದಲ್ಲಿ   ಒಂದು ತಿಂಗಳನ್ನು ನಾನು ಭಾರತದಲ್ಲಿದ್ದು ಕಳೆಯುವುದು ಸಂಪ್ರದಾಯವೇ ಆಗಿಹೋಗಿದೆ. ಒಂದು ಪೂರ್ತಿ ತಿಂಗಳು ಚಳಿಯಿಂದ ತಪ್ಪಿಸಿಕೊಂಡನಲ್ಲ ಆಸಾಮಿ ಎನ್ನುವ ಹೊಟ್ಟೆಕಿಚ್ಚು ಆಗ ನನ್ನ ಆಂಗ್ಲ ಸ್ನೇಹಿತರಿಗೆ; ಹೀಗಿದ್ದರೂ ಚಳಿಗಾಲದೊಳಗಿನ “ಕಡುಚಳಿಗಾಲ” ಬಹುಷ್ಯ ನಾನು ರಜೆ ಮುಗಿಸಿ ಬರುವುದಕ್ಕೆಯೇ ಕಾದಿದೆಯೇನೋ ಎನ್ನುವ ಹಾಗೆ ಫೆಬ್ರವರಿ ತಿಂಗಳ ಕೊನೆಗೆ ಕಾಡಿತು.

ಸಾಮಾನ್ಯವಾಗಿ ಪ್ರತಿವರ್ಷದ ಚಳಿಗಾಲವನ್ನು ಒಣಗಿದ ಬೋಳು ಮರಗಳಂತೆ ನಿರ್ಲಿಪ್ತವಾಗಿ ಕಳೆಯುವ ನಾವು ಈ ವರ್ಷದ  ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ನಮ್ಮನ್ನು  ಕಾಡಿದ  ಕಡು ಕೆಟ್ಟ ಚಳಿಯ ಬಗ್ಗೆ ದೂರಲೇಬೇಕಾಗಿದೆ. ಉತ್ತರಾಯಣ, ದಕ್ಷಿಣಾಯಣ, ಸೂರ್ಯ ಭೂಮಿಗೆ ಹತ್ತಿರ  ಬರುವುದು ದೂರ ಸಾಗುವುದು, ಭ್ರಮಣ  ಪರಿಭ್ರಮಣ,  ವಾತಾವರಣ ಬದಲಾಗುವುದು ಇವೆಲ್ಲ ಪ್ರತಿವರ್ಷದ ಚಳಿಗಾಲ ಬೇಸಿಗೆಗಳ ಹಿನ್ನೆಲೆಯಲ್ಲಿ ಇರುವಂತಹದೇ. ಈ ಸಲದ ಚಳಿಗಾಲದಲ್ಲಿ   ರಷ್ಯಾದ ಕಡೆಯಿಂದ ಬೀಸಿದ  ದೈತ್ಯ  ಹಿಮಗಾಳಿ ಬ್ರಿಟನ್ನನ್ನು  ಆವರಿಸಿತು. ಇಲ್ಲಿನ ಪತ್ರಿಕೆಗಳು  “ಸೈಬೀರಿಯಾದ ಸ್ಪೋಟಕ ಹಿಮದ  ಹೊದಿಕೆಯಲ್ಲಿ ಬ್ರಿಟನ್” ಎಂದು ತಲೆಬರಹ ಕೊಟ್ಟು ಕೊಂಡಾಡಿದವು. ಉತ್ಪ್ರೇಕ್ಷೆಯ  ಶೀರ್ಷಿಕೆ, ರೋಚಕ  ಸುದ್ದಿಗಳನ್ನು ಪ್ರಕಟಿಸುವ  ಆಂಗ್ಲ ಪತ್ರಿಕೆಗಳೂ ಹೊಸ ಶಬ್ದ  ಅಲಂಕಾರಗಳನ್ನು ಹುಡಕುವಂತೆ ಮಾಡಿದ  ಹಿಮಮಾರುತನ ದಾಳಿ ಯುರೋಪ್  ಹಾಗು ಬ್ರಿಟನ್ ಮೇಲೆ ಆಗಿಹೋಯಿತು.

ದೂರದಿಂದ ಕಚೇರಿಗೆ ಬರುವವರು ಬೇಗ ಬೇಗನೆ ಕೆಲಸ ಮುಗಿಸಿ ಬ್ರಿಸ್ಟಲ್ ಹಿಮಸ್ವಾಗತಕ್ಕೆ ಸಜ್ಜಾಗಿ ನಿಲ್ಲುವ  ಮೊದಲೇ ಮನೆ ಕಡೆ ಹೊರಟಿದ್ದರು. ಬ್ರಿಸ್ಟಲ್ ಗೆ ತುಸು ದೂರದ  ವೇಲ್ಸ್ ಕಣಿವೆಯನ್ನು ದಾಟಿ ಕಾರು ಚಲಾಯಿಸಿ ನಿತ್ಯವೂ ಕಚೇರಿಗೆ ಬರುವ ಸಹೋದ್ಯೋಗಿಯೊಬ್ಬಳು ಮನೆಯಿಂದ ಹೊರಟ ಸ್ವಲ್ಪ ಹೊತ್ತಲ್ಲಿ ತನ್ನ ಮುಂದಿದ್ದ  ಕಾರೊಂದು ಜಾರಿ ಕಣಿವೆಗೆ ಇಳಿದದ್ದನ್ನು ಕಂಡು ತನ್ನ ಕಾರನನ್ನು ಮನೆಯೆಡೆಗೆ ಹಿಂದಿರುಗಿಸಿ  ಇವತ್ತು ಮನೆಯಿಂದಲೇ ಕೆಲಸ ಮಾಡುವೆ ಎಂದು ಸಂದೇಶ ಕಳುಹಿಸಿದ್ದಳು.

ವರ್ಷದ ಯಾವುದೇ ದಿನ ಇರಲಿ ಅಂದಿನ ಮುಂದಿನ ಹವಾಮಾನ ಹೇಗೆ ಏನು ಎನ್ನುವುದರ ಮೇಲೆ ಇಲ್ಲಿನ ಜನರು  ನಿಗಾ ಇಟ್ಟಿರುತ್ತಾರೆ.  ಆಯಾ ವಾರದ ಯೋಜನೆಗಳೆಲ್ಲ ಹವಾಮಾನ ಮುನ್ಸೂಚನೆಯ ಆಧಾರದ ಮೇಲೆಯೇ  ನಿಂತಿರುತ್ತದೆ. ರಷ್ಯಾ ಕಡೆಯಿಂದ ಆರಂಭಗೊಂಡು ಸಮುದ್ರ ಸಾಗರಗಳನ್ನು ದಾಟಿ ಲಂಡನ್ ಕಡೆಯಿಂದ ಹಿಮಮಾರುತನ ಪ್ರವೇಶ ಎಂದು ಎಂದೋ ನಿರ್ಣಯಗೊಂಡಿತ್ತಲ್ಲ. ಸರಿಸುಮಾರು  ಊಹಿಸಿದ ಸಮಯಕ್ಕೆ  ಯಾವ ನಿರೀಕ್ಷೆ ಪ್ರತೀಕ್ಷೆಗಳನ್ನು ಸುಳ್ಳುಮಾಡದೆ   ಹಿಮಮಾರುತನ ಪ್ರವೇಶ ಮತ್ತು ಪ್ರಭಾವ  ಬ್ರಿಟನ್ನಿನ ಒಂದೊಂದೇ ಭಾಗದ ಮೇಲೆ ಆಗತೊಡಗಿತ್ತು. ಹೀಗಾಗುವುದೆಂದು  ತಿಳಿದಿದ್ದ  ಬ್ರಿಸ್ಟಲ್ ನ ನನ್ನ ಸಹೋದ್ಯೋಗಿಗಳು ಗಂಟೆ ಗಂಟೆಗೂ ಹವಾಮಾನ ವರದಿ ನೋಡುತ್ತಾ ಈಗ ಹಿಮಮಾರುತ ಅಲ್ಲಿ ಬಂತಂತೆ, ಲಂಡನ್ ಹೊಕ್ಕಿತಂತೆ, ಇನ್ನೂ ಮುಂದೆ ಬಂತಂತೆ  ಎಂದು  ಪಿಸುಗುಟ್ಟುತ್ತಿದ್ದರು. ಆಗಾಗ ಕುರ್ಚಿಯಿಂದೆದ್ದು  ಕಿಟಕಿಯ ಗಾಜಿನ ಹಿಂದೆ ಕೈಕಟ್ಟಿ ನಿಂತು ಆಕಾಶ ದಿಟ್ಟಿಸಿ ಇನ್ನು ಹೆಚ್ಚು ಹೊತ್ತಿಲ್ಲ ಎಂದು ತಲೆ ಆಡಿಸುತ್ತಿದ್ದರು. ದೂರದಿಂದ ಕಚೇರಿಗೆ ಬರುವವರು ಬೇಗ ಬೇಗನೆ ಕೆಲಸ ಮುಗಿಸಿ ಬ್ರಿಸ್ಟಲ್ ಹಿಮಸ್ವಾಗತಕ್ಕೆ ಸಜ್ಜಾಗಿ ನಿಲ್ಲುವ  ಮೊದಲೇ ಮನೆ ಕಡೆ ಹೊರಟಿದ್ದರು. ಬ್ರಿಸ್ಟಲ್ ಗೆ ತುಸು ದೂರದ  ವೇಲ್ಸ್ ಕಣಿವೆಯನ್ನು ದಾಟಿ ಕಾರು ಚಲಾಯಿಸಿ ನಿತ್ಯವೂ ಕಚೇರಿಗೆ ಬರುವ ಸಹೋದ್ಯೋಗಿಯೊಬ್ಬಳು ಮನೆಯಿಂದ ಹೊರಟ ಸ್ವಲ್ಪ ಹೊತ್ತಲ್ಲಿ ತನ್ನ ಮುಂದಿದ್ದ  ಕಾರೊಂದು ಜಾರಿ ಕಣಿವೆಗೆ ಇಳಿದದ್ದನ್ನು ಕಂಡು ತನ್ನ ಕಾರನನ್ನು ಮನೆಯೆಡೆಗೆ ಹಿಂದಿರುಗಿಸಿ  ಇವತ್ತು ಮನೆಯಿಂದಲೇ ಕೆಲಸ ಮಾಡುವೆ ಎಂದು ಸಂದೇಶ ಕಳುಹಿಸಿದ್ದಳು.

ದೂರದಿಂದ ಕೇಳುವವರಿಗೂ, ಭಾವಚಿತ್ರ ನೋಡುವವರಿಗೂ  ಅಥವಾ ಸ್ನೋಫಾಲ್ ಆಗುವ ಊರಿನಲ್ಲಿ ಇರುವವರೇ ಆದರೆ ಸರಿ ಸಮಯಕ್ಕೆ ಮನೆ ತಲುಪಿ ಬೆಚ್ಚಗೆ ಕೂತದ್ದಾದರೆ  ಹಿಮಪಾತ ಒಂದು ರಮ್ಯ ಅನುಭವವಾಗಿ ಕಾಣಬಹುದು. ಆದರೆ  ಚಳಿ ಗಾಳಿ ಹಿಮ ಎನ್ನುವ ಆಯ್ಕೆ ಇರದೇ ತಮ್ಮ ದೈನಂದಿನ ಕೆಲಸಗಳನ್ನು ಅವುಗಳ ನಡುವೆಯೇ  ಮಾಡಲೇಬೇಕಾದ ಅನಿವಾರ್ಯತೆಯಲ್ಲಿ ಹಿಮಪಾತವನ್ನು ನೇರವಾಗಿ ಎದುರಿಸಬೇಕಾದವರಿಗೆ ಹಿಮಪಾತ ಸಿಂಹಸ್ವಪ್ನವಾಗಿಯೂ  ಕಾಡುತ್ತದೆ. ಸಾವು ಬದುಕಿನ ಹೋರಾಟವಾಗಿಯೂ ಎದುರು ನಿಲ್ಲುತ್ತದೆ.  ಅತಿ ಹಿಮ ಬಿದ್ದ  ರಾಷ್ಟ್ರೀಯ  ಹೆದ್ದಾರಿಗಳಲ್ಲಿ ನೂರು ಗಟ್ಟಲೆ  ವಾಹನಗಳು  ಹದಿನೈದು ಇಪ್ಪತ್ತು  ತಾಸುಗಳ ಹೊತ್ತು ಚಲಿಸದೆ ಸಾಲಾಗಿ ನಿಂತವು;  ಮನೆಯನ್ನು  ಬೆಚ್ಚಗಿಡುವ ಗುರುತರ ಹೊಣೆಹೊತ್ತ ಬೊಯ್ಲರ್, ಹೀಟರ್ ಗಳು ಬಳಸುವ ಇಂಧನ ಅತಿ ಬೇಡಿಕೆಯಿಂದಾಗಿ ಖಾಲಿಯಾದರೂ ಆದೀತು  ಎಂದು ರಾಷ್ಟ್ರೀಯ ಇಂಧನ ಘಟಕ ಎಚ್ಚರಿಕೆ ನೀಡಿತು; ಪರಿಸ್ಥಿತಿ  ಕೈ ಮೀರಿದ   ಪ್ರದೇಶಗಳಲ್ಲಿ ಮಿಲಿಟರಿ ಸಹಾಯದಿಂದ ಹಿಮದಲ್ಲಿ ಸಿಕ್ಕಿಬಿದ್ದ ವಾಹನಗಳನ್ನು, ಮನುಷ್ಯರನ್ನು ತೆರವುಗೊಳಿಸಬೇಕಾಗಿ ಬಂತು; ಶಾಲೆ ಕಾಲೇಜುಗಳು  ಮುಚ್ಚಿ ಮಕ್ಕಳಿಗೆ ರಜೆಕೊಟ್ಟವು; ತಂದೆ ತಾಯಿಯರಿಬ್ಬರೂ ಕೆಲಸ ಮಾಡುವ ಮನೆಗಳು  ಇವತ್ತು ಮಕ್ಕಳನ್ನು ಎಲ್ಲಿ ಬಿಡುವುದು ಎಂದು ಚಿಂತೆ ಎಬ್ಬಿಸಿತು;   ಮಕ್ಕಳನ್ನು ಬೇಡವೆಂದಾಗ  ಬಿಡುವ, ಬೇಕೆಂದಾಗ ಎತ್ತಿಕೊಳ್ಳುವ ಅಜ್ಜ ಅಜ್ಜಿಯರ  ಮನೆಗಳು ಸೇವೆಗಳು ಇಲ್ಲೂ ಇದ್ದಿದ್ದರೆ ಚೆನ್ನಾಗಿತ್ತು ಎಂದೆನಿಸಿತು; ಮತ್ತೆ ಇಂತಹ ಯಾವ ಯೋಚನೆಯ ಪರಿವೆ ಇಲ್ಲದ  ಹಿಮ, ಮನೆಯ ಮುಚ್ಚಿಗೆ,  ರಸ್ತೆಯ ಹಾಸು, ಕಾರಿನ ಮಾಡು  ಎಲ್ಲೆಲ್ಲಿ ಇಳಿಯಲು ಜಾಗವಿದೆಯೋ ಎಲ್ಲೆಲ್ಲಿ ಉಳಿಯಲು ಠಾವು  ಇದೆಯೋ ಅಲ್ಲೆಲ್ಲ ಆವರಿಸಿತು.

ದೂರದಿಂದ ಕೇಳುವವರಿಗೂ, ಭಾವಚಿತ್ರ ನೋಡುವವರಿಗೂ  ಅಥವಾ ಸ್ನೋಫಾಲ್ ಆಗುವ ಊರಿನಲ್ಲಿ ಇರುವವರೇ ಆದರೆ ಸರಿ ಸಮಯಕ್ಕೆ ಮನೆ ತಲುಪಿ ಬೆಚ್ಚಗೆ ಕೂತದ್ದಾದರೆ  ಹಿಮಪಾತ ಒಂದು ರಮ್ಯ ಅನುಭವವಾಗಿ ಕಾಣಬಹುದು. ಆದರೆ  ಚಳಿ ಗಾಳಿ ಹಿಮ ಎನ್ನುವ ಆಯ್ಕೆ ಇರದೇ ತಮ್ಮ ದೈನಂದಿನ ಕೆಲಸಗಳನ್ನು ಅವುಗಳ ನಡುವೆಯೇ  ಮಾಡಲೇಬೇಕಾದ ಅನಿವಾರ್ಯತೆಯಲ್ಲಿ ಹಿಮಪಾತವನ್ನು ನೇರವಾಗಿ ಎದುರಿಸಬೇಕಾದವರಿಗೆ ಹಿಮಪಾತ ಸಿಂಹಸ್ವಪ್ನವಾಗಿಯೂ  ಕಾಡುತ್ತದೆ. ಸಾವು ಬದುಕಿನ ಹೋರಾಟವಾಗಿಯೂ ಎದುರು ನಿಲ್ಲುತ್ತದೆ.

ಹಗಲು ಹೊತ್ತಿನಲ್ಲಿ ಸೊನ್ನೆಗಿಂತ ಕೆಳಗಿನ ತಾಪಮಾನವನ್ನು ಕಂಡು ಗೊತ್ತಿರದ ಬ್ರಿಟನ್ ನ ಕರಾವಳಿಯ ಬ್ರಿಸ್ಟಲ್ ನಂತಹ ಊರು ಕೂಡ ಮೈನಸ್ ಆರು ಎಂಟು ಎಂದೆಲ್ಲ ತಾಪಮಾನ ತೋರಿಸಿತು. ಜೊತೆಗೆ ತೀವ್ರವಾದ ಗಾಳಿಯೂ ಸೇರಿಕೊಂಡು  ಮೈನಸ್ ಇಪ್ಪತ್ತು ಡಿಗ್ರಿಯ ತರಹದ ಅನುಭವ ಕೊಟ್ಟಿತು.  ಹವಾಮಾನ ವರದಿಗಾರರು ಈ ವಿಕೋಪದ   ಪರಿಸ್ಥಿತಿಯನ್ನು “ರೆಡ್ ಅಲರ್ಟ್” ಎನ್ನುವುದಾಗಿ ಘೋಷಿಸಿದರು. ಇಂತಹ ಘೋಷಣೆಯನ್ನೇ ಕಾಯುತ್ತಿದ್ದ ಇಲ್ಲಿನ ವಾಹನ ವಿಮೆ  ಕಂಪನಿಗಳು, ರೆಡ್ ಅಲರ್ಟ್ ಘೋಷಣೆ ಮಾಡಿದ ಮೇಲೂ ಯಾರಾದರೂ ತಮ್ಮ ವಾಹನ ಬಳಸಿ ಅಪಘಾತಕ್ಕೀಡಾದರೆ ಅಂತಹವರಿಗೆ ಯಾವುದೇ ಇನ್ಶೂರೆನ್ಸ್ ಸುರಕ್ಷೆ ಸಿಗುವುದಿಲ್ಲ  ಎಂದರು. ಇಷ್ಟಕ್ಕೆಲ್ಲ ಕಾರಣ  “ಬೀಸ್ಟ್ ಫ್ರಮ್ ದಿ ಈಸ್ಟ್” ಎಂದು ರಷ್ಯಾದ ಕಡೆಯಿಂದ ಎದ್ದುಬಂದ ಹಿಮ ಮಾರುತಕ್ಕೆ ಹೆಸರಿಟ್ಟು ಬೊಟ್ಟು ಮಾಡಿದರು.  ರಷ್ಯಾದವರು ಎಂದರೆ ಗೂಢಚಾರರು ಎಂದು ಯಾವಾಗಲು ತಮಾಷೆ ಮಾಡುವ ಆಂಗ್ಲರು, ಈಗ ಬ್ರಿಟನ್ ನ ಮೇಲೆ ಎರಗಿರುವ ರಷ್ಯಾ ಮೂಲದ ಹಿಮಮಾರುತವೂ ಯಾವುದೊ ಗೂಢಚರ್ಯೆಯ ಭಾಗವೇ ಇರಬಹುದೇ ಎಂದು  ವ್ಯಂಗ್ಯವನ್ನೂ ಮಾಡಿದರು. ಇದ್ಯಾವುದರ ಗೊಡವೆಯೇ ಇಲ್ಲದ  ಇತಿಹಾಸಕಾರ  ಆಂಗ್ಲರು ಎಷ್ಟು ನೂರು ವರ್ಷಗಳಲ್ಲಿ ಇದು ಅತಿ ಕೆಟ್ಟ ಚಳಿಗಾಲ ಎಂದು ಚರಿತ್ರೆಯ ಪುಟದಲ್ಲೊಂದು  ತಣ್ಣಗಿನ ಹೊಸಸಾಲು ಸೇರಿಸಿದರು.

ಹಿಮಪಾತದ ಹೊತ್ತಲ್ಲಿ ಜನಜೀವನ ತಣ್ಣಗಾಗಿ, ಇಡೀ ಊರು ದೇಶವೇ  ಬಿಳಿಹೊದಿಕೆ  ಹೊದ್ದು ಮೌನವಾಗಿದ್ದಾಗ  ಹೀಗೊಬ್ಬ ಮೂಕಪ್ರೇಕ್ಷಕ ಕೂಡ ನಮ್ಮ ನಡುವೆ ಪ್ರತ್ಯಕ್ಷನಾಗಿ ಸೇರಿಕೊಂಡ. ಮತ್ತೆ ಈತ ಪ್ರತಿ ಹಿಮಪಾತದ ಸಂದರ್ಭದ ಅತಿಥಿಯೋ  ಅಲ್ಲ  ಅಭ್ಯಾಗತನೋ ಆತನಿಗೂ ಗೊತ್ತಿರಲಿಕ್ಕಿಲ್ಲ. ಕೆಲವು ಮನೆಗಳ ಮುಂದಿನ ಅಂಗಳದಲ್ಲಿ, ಕೆಲವರ ಹಿಂದೋಟದಲ್ಲಿ, ಮತ್ತೆ ಕೆಲವರ ಮನೆಯ ಪಾಗಾರದ ಮೇಲೆ… ಸ್ನೋ ಮ್ಯಾನ್.  ನಾವು ಕೂಡ, ಮನೆಯ ಹಿಂದಿನ ಅಂಗಳದಲ್ಲಿ ಹರಡಿದ ಹಿಮವನ್ನು ಬೊಗಸೆಯಲ್ಲಿ ಹಿಡಿದು ಅಮುಕಿ, ಒತ್ತಿ , ಉಬ್ಬಿದಲ್ಲಿ ಕೆತ್ತಿ, ಗುಳಿ ಬಿದ್ದಲ್ಲಿ ಮೆತ್ತಿ ಹಿಮ ಮನುಷ್ಯನನ್ನು ತಯಾರಿಸಿದೆವು. ಬಾಟಲಿಯ ಮುಚ್ಚಳಗಳನ್ನ ಇವನ ಮುಖದಲ್ಲಿ ಅರೆ ಹುಗಿದು ಕಣ್ಣು ಮೂಡಿಸಿ, ಬಾಯಿ ಬರೆದೆವು. ಮೂಗು ಇರಬೇಕಾದ ಜಾಗಕ್ಕೆ ಒಂದು ಕ್ಯಾರೆಟ್ ಸಿಕ್ಕಿಸಿ ….” ನೀನಿನ್ನು  ಉಸಿರಾಡುವಂತವನಾಗು ಜೀವವೇ” ಎಂದೆವು.

ಹವಾಮಾನ ವರದಿಗಾರರು ಈ ವಿಕೋಪದ   ಪರಿಸ್ಥಿತಿಯನ್ನು “ರೆಡ್ ಅಲರ್ಟ್” ಎನ್ನುವುದಾಗಿ ಘೋಷಿಸಿದರು. ಇಂತಹ ಘೋಷಣೆಯನ್ನೇ ಕಾಯುತ್ತಿದ್ದ ಇಲ್ಲಿನ ವಾಹನ ವಿಮೆ  ಕಂಪನಿಗಳು, ರೆಡ್ ಅಲರ್ಟ್ ಘೋಷಣೆ ಮಾಡಿದ ಮೇಲೂ ಯಾರಾದರೂ ತಮ್ಮ ವಾಹನ ಬಳಸಿ ಅಪಘಾತಕ್ಕೀಡಾದರೆ ಅಂತಹವರಿಗೆ ಯಾವುದೇ ಇನ್ಶೂರೆನ್ಸ್ ಸುರಕ್ಷೆ ಸಿಗುವುದಿಲ್ಲ  ಎಂದರು.

ನೆರೆಹೊರೆಯ ಆಂಗ್ಲರ ಮನೆಗಳಲ್ಲೂ ಕ್ಯಾರೆಟ್ ಮೂಗಿನ ಸ್ನೋ ಮ್ಯಾನ್ ಜೀವಪಡೆದ. ವ್ಯತ್ಯಾಸ ಎಂದರೆ ನಮ್ಮ ಮನೆಯ ಹಿಮಮನುಷ್ಯ  ಕನ್ನಡ ಮಾತಾಡುವವನು, ಮತ್ತೆ ಅಕ್ಕ ಪಕ್ಕದ ಮನೆಯ ಸ್ನೋ ಮ್ಯಾನ್  ಇಂಗ್ಲಿಷ್. ಕೆಲವರದು ಡೊಳ್ಳು ಹೊಟ್ಟೆ, ಮತ್ತೆ ಕೆಲವರದು ದಪ್ಪ ಮೀಸೆ.. ಇನ್ನು ಕೆಲವು ಹಿಮ ಮನುಷ್ಯರದು ಹೊಳೆಯುವ ಕಣ್ಣು. ಅವನ ಕುತ್ತಿಗೆಗೊಂದು  ಶಾಲು ಸುತ್ತಿ ತಲೆಗೆ ಟೊಪ್ಪಿ ಹಾಕಿದ್ದೆವು, ಪಾಪ ಚಳಿ ಆಗದಿರಲಿ ಎಂದು. ದೃಷ್ಟಿ  ಮಂದ ಇದ್ದರೆ  ಅವನ ಕಣ್ಣಿಗೊಂದು ಕನ್ನಡಕವನ್ನೂ  ಸಿಕ್ಕಿಸುವರು. ಹಿಮಪಾತವಾಗಿ ಎರಡು ದಿನ  ಕಳೆದರೂ ವಾತಾವರಣದ ಉಷ್ಣತೆ ಸೊನ್ನೆಯ ಮೇಲೆ ಹತ್ತದಷ್ಟು ದಿನ  ಹಿಮಮನುಷ್ಯನ ಆಯುಸ್ಸು ಗಟ್ಟಿಯೇ.  ಚಳಿ ಸ್ವಲ್ಪ ಕಡಿಮೆ ಆದರೂ ಹಿಮ ಸ್ವಲ್ಪ ಸ್ವಲ್ಪವೇ ಕರಗಿ.. ಇವನ ಬೆನ್ನು ಬಾಗಿ, ಜೀವ ಮಾಗಿ.. ಕರಗಿ ಕಣ್ಮರೆ ಆಗುತ್ತಾನೆ ಎಂದೋ, ಅಲ್ಲ ಇಷ್ಟು ಚಳಿಯಲ್ಲಿ ಮನೆಯ ಹೊರಗಿದ್ದುಕೊಂಡು ಕಾಲಕಳೆಯಬೇಕಲ್ಲ ಇವನು ಎಂದೋ…. ಇವನನ್ನು ಮಾಡಿದ ಮನೆಯ ಮಕ್ಕಳು ಆಗಾಗ ಕಿಟಕಿಯಿಂದಲೇ ಇವನನ್ನು ನೋಡಿ ವಿಚಾರಿಸಿಕೊಂಡರು.

ಯಾರ  ಮನೆಯಲ್ಲಿ ಈತ ಎಷ್ಟು ದಿನದ ಅತಿಥಿ? ಈತನಿಗಂತೂ ಯಾರೂ ಹೇಳಿರಲಿಲ್ಲ. ತಾನೂ ಎಂದೆಂದೂ ಇರುವವನೆಂಬ ಹೆಮ್ಮೆಯಲ್ಲೋ, ನಂಬಿಕೆಯಲ್ಲೋ ಎದೆ ಉಬ್ಬಿಸಿ ಬೆನ್ನು ಸೆಟೆಸಿ  ನಿಂತಿದ್ದ ಹುಲು ಹಿಮಮನುಷ್ಯ. ಈ ಹಿಮ ಮನುಷ್ಯನಿಗೆ ಯಾರು ಅರ್ಥ ಮಾಡಿಸಿಹೇಳುವುದು? ಹಿಮ ಬಿದ್ದಾಗ ಹುಟ್ಟುವವನು; ಮತ್ತೆ ನಾಲ್ಕು ದಿನ ಬಿಟ್ಟು ಸಣ್ಣ ಬಿಸಿಲು ಬಂದ ದಿನವೇ  ಕರಗಿ ಹರಿಯುವವನು. ಎದುರು ಮನೆಯ ಹಿಮಮನುಷ್ಯನ ಹೊಟ್ಟೆ ಕಂಡು ನಮ್ಮ ಮನೆಯವನು ಕಿಸಕ್ಕನೆ ನಗುವುದು, ನಮ್ಮ ಮನೆಯವನ ಭಂಗಿ ನೋಡಿ ಪಕ್ಕದ ಮನೆಯವನು ವ್ಯಂಗ್ಯ ಮಾಡುವುದು ಇವೆಲ್ಲ ಇದ್ದಿತ್ತು ನಮ್ಮ ಚಳಿಮಾಸದೊಳಗೆ. ದಾರಿಯ ತುದಿಯ ಮನೆಯ ಸ್ನೋ ಮ್ಯಾನ್ ಇನ್ನೇನು ಬಿದ್ದೇಹೋದ ಎಂದು ಇನ್ನೂ ನೆಟ್ಟಗೆ ನಿಂತವ  ತಮಾಷೆ ಮಾಡಿದ. “ಛೆ ನೀವೆಲ್ಲ ಥೇಟ್ ಮನುಷ್ಯರ ಥರ ಆಡುತ್ತೀರಲ್ಲ” ಎಂದು ಉಳಿದ ಸ್ನೋ ಮನುಷ್ಯರ ಬಗ್ಗೆ  ಸಿಟ್ಟು ಮಾಡಿಕೊಂಡ ಗಂಭೀರ ಹಿಮಮನುಷ್ಯನೊಬ್ಬ ಬೈಯುವ ಭಂಗಿಯಲ್ಲಿ ನಿಂತಿದ್ದ. ಹೀಗೆ ನಾಲ್ಕಾರು ದಿನ ಹಿಮಮಾನವರು ತಮ್ಮ ತಮ್ಮೊಳಗೆ ಮಾತಾಡುತ್ತ ಒಬ್ಬರನ್ನೊಬ್ಬರು ನೋಡುತ್ತಾ, ನಮ್ಮಲ್ಲಿ ಯಾರು ಸುಂದರ, ಯಾವ ಸ್ನೋ ಮ್ಯಾನ್ ನನ್ನು ಹೆಚ್ಚು  ಜನ ನಿಂತು ನೋಡುತ್ತಾರೆ ಎನ್ನುವ ಸಂಭಾಷಣೆಯಲ್ಲಿ ಕಳೆದರು. ಮತ್ತೆ ತಮ್ಮ ಸಂಭಾಷಣೆಯ ನಡುವೆ, ಬ್ರಿಟನ್ ಅಲ್ಲದೆ ಯುರೋಪ್ ಅಲ್ಲೂ  ದೈನಂದಿನ ಬದುಕನ್ನು ಅಲ್ಲೋಲಕಲ್ಲೋಲ ಮಾಡಿರುವ,  ಹಲವು ಸಾವುನೋವುಗಳಿಗೆ ಕಾರಣವಾದ  ಹಿಮಪಾತದ  ಬಗ್ಗೆ  ಆತಂಕಗೊಂಡರು. ಇಂತಹ   ಆತಂಕಗಳ ನಡುವೆಯೇ, ಇಲ್ಲಿನ ಕವಿಯೊಬ್ಬಳು, ಬೇಸಿಗೆ  ಚಳಿಗಾಲ ಎನ್ನದೇ ಇಲ್ಲಿನ  ಬಸ್ ರೈಲು ನಿಲ್ದಾಣಗಳ ಮೂಲೆಯಲ್ಲಿ, ಬಹುಮಹಡಿ ಕಾರು ನಿಲ್ದಾಣಗಳ ಸಂದುಗಳಲ್ಲಿ ದಿನ ಕಳೆಯುವ ಇಲ್ಲಿನ ಭಿಕ್ಷುಕರ, ಲಂಡನ್ ನ ಅಗಲ ಸ್ವಚ್ಛ ಮನ ಮೋಹಕ ರಸ್ತೆಗಳ ಬದಿಗಳಲ್ಲಿರುವ  ಐಷಾರಾಮಿ ಬಂಗಲೆಗಳಿಂದ ದೂರದಲ್ಲೆಲ್ಲೋ ವಾಸಿಸುವ  ನಿರ್ಗತಿಕರ ನೆನಪು ಮಾಡುತ್ತಾ ಎಂದು ಕಳೆವುದೋ ಈ ಚಳಿ ಎಂದು ಪತ್ರಿಕೆಯಲ್ಲಿ ತನ್ನ ಕಳವಳ ತೋಡಿಕೊಂಡಿಳು…

ಯಾರ  ಮನೆಯಲ್ಲಿ ಈತ ಎಷ್ಟು ದಿನದ ಅತಿಥಿ? ಈತನಿಗಂತೂ ಯಾರೂ ಹೇಳಿರಲಿಲ್ಲ. ತಾನೂ ಎಂದೆಂದೂ ಇರುವವನೆಂಬ ಹೆಮ್ಮೆಯಲ್ಲೋ, ನಂಬಿಕೆಯಲ್ಲೋ ಎದೆ ಉಬ್ಬಿಸಿ ಬೆನ್ನು ಸೆಟೆಸಿ  ನಿಂತಿದ್ದ ಹುಲು ಹಿಮಮನುಷ್ಯ. ಈ ಹಿಮ ಮನುಷ್ಯನಿಗೆ ಯಾರು ಅರ್ಥ ಮಾಡಿಸಿಹೇಳುವುದು? ಹಿಮ ಬಿದ್ದಾಗ ಹುಟ್ಟುವವನು; ಮತ್ತೆ ನಾಲ್ಕು ದಿನ ಬಿಟ್ಟು ಸಣ್ಣ ಬಿಸಿಲು ಬಂದ ದಿನವೇ  ಕರಗಿ ಹರಿಯುವವನು.

“… ಹಿಮ ಮತ್ತು ಮಂಜು ಹಾಗು ಮಂಜು ಮತ್ತು ಹಿಮ
ದೂರಾಗುವುದೇ ಇಲ್ಲವೇ  ಈ ಚಳಿಯ ಮಾಸ?
ಕಳೆದಾರು ಹೇಗಿದನ  ನಿರ್ಗತಿಕರ  ಮಕ್ಕಳು
ಬೆಂಕಿಯ ಶಾಖದ  ಬೆಚ್ಚನೆಯ ಅಪ್ಪುಗೆ ಸಿಗದವರು
ಹಿಮ ಮತ್ತು ಮಂಜು ಹಾಗು ಮಂಜು ಮತ್ತು ಹಿಮ… ”

(ಕವಿ ಕತ್ರಿನ್ ಮ್ಯಾನ್ಸ್ ಫೀಲ್ಡ್  ಳ “ವಿಂಟರ್ ಸಾಂಗ್” ನಿಂದ ಅನುವಾದಿತ ಸಾಲುಗಳು)

ಬ್ರಿಟನ್ನಿನ ಪತ್ರಿಕೆ, ಟ್ವೀಟ್, ದೂರದರ್ಶನ ಮಾಧ್ಯಮಗಳಲ್ಲಿ ಹಿಮಪಾತದ ಹೊತ್ತಿನ ಬಗೆಬಗೆಯ  ಹಿಮಮನುಷ್ಯರ  ಚಿತ್ರಗಳು,  ಕಡುಚಳಿಯ, ಹಿಮಮಾರುತದ ಅನಾಹುತ ವಿಚಿತ್ರಗಳು ವಿಚಾರಗಳು ತುಂಬಿದವು. ದೇಶವೆಲ್ಲಾ ಹೀಗೆ ಹಾನಿ, ಸಂಕಷ್ಟ, ಗೊಣಗಾಟದಲ್ಲಿದ್ದಾಗ  ತಮ್ಮ ಜೀವನ ಸ್ಪೂರ್ತಿಯನ್ನು ತಗ್ಗಿಸದೆ ಅಪೂರ್ವ  ಹಿಮದರ್ಶನಕ್ಕೆ ಖುಷಿ ಪಟ್ಟವರೂ ಇದ್ದರು. ಒಬ್ಬ ಪ್ರಣಯಕವಿ,  “ಒಣಗಿದ ಬೋಳು ಮರದ ಮೇಲೆ ಚೆಲ್ಲಿದ ಬಿಳಿ ಹೂವು, ನಿರ್ಜೀವ ಪ್ರಕೃತಿಗೆ ಆಯಿತು ಜೀವಂತಿಕೆಯ ಹಿಮಸ್ಪರ್ಶ”  ಎಂದು ಆಶಾವಾದದಲ್ಲಿ ಕವನ ಬರೆಯಲಾರಂಭಿಸಿದ. ಇನ್ನು  ವಿದೇಶಗಳ ಹಿಮಾಚ್ಚಾದಿತ ಪರ್ವತಗಳ ಮೇಲಿನಿಂದ ಜಾರಲು ಕಚೇರಿಗೆ ರಜೆ ಹಾಕಿ ಹೋಗುವ ಸಾಹಸಿಗಳು, ತಮ್ಮ ಮನೆಬಾಗಿಲಿಗೆ ಅನಾಯಾಸವಾಗಿ ಬಂದು ಬಿದ್ದ ಹಿಮದ ರಾಶಿಯಲ್ಲಿಯೇ ಸ್ಕೇಟಿಂಗ್, ಸ್ಕೀಯಿಂಗ್ ಮಾಡಿಕೊಂಡು  ಅಷ್ಟಿಷ್ಟು ಜಾರಿ ಮೋಜು ಮಾಡಿದರು. ಮನೆ ಮಂದಿಯೆಲ್ಲ ಜೊತೆಯಾಗಿ  ಆಟವಾಡುವ ಸುಂದರ  ಸಾಂಸಾರಿಕ ಸಮಯ ಇದು ಎಂದು ಕೊಂಡಾಡಿದರು. ಮನೆಯೆದುರಿನ ರಸ್ತೆಗಳಲ್ಲಿ ಹತ್ತಿರದ ಪಾರ್ಕ್ ಗಳಲ್ಲಿ ಹಿಮದಾಟ ಆಡಿದರು. ಬೊಗಸೆಯಲ್ಲಿ  ಸಿಕ್ಕ ಹಿಮವನ್ನು ಚೆಂಡುಮಾಡಿ ಹೊಡೆದಾಡಿ ಕೇಕೆ ಹಾಕಿದರು; ಈ ಹಿಮಪಾತಕ್ಕಾಗಿಯೇ ವರುಷಗಳಿಂದ ಕಾದವರೆಂಬಂತೆ ಕುಣಿದಾಡಿದರು.

ದೇಶವೆಲ್ಲಾ ಹೀಗೆ ಹಾನಿ, ಸಂಕಷ್ಟ, ಗೊಣಗಾಟದಲ್ಲಿದ್ದಾಗ  ತಮ್ಮ ಜೀವನ ಸ್ಪೂರ್ತಿಯನ್ನು ತಗ್ಗಿಸದೆ ಅಪೂರ್ವ  ಹಿಮದರ್ಶನಕ್ಕೆ ಖುಷಿ ಪಟ್ಟವರೂ ಇದ್ದರು. ಒಬ್ಬ ಪ್ರಣಯಕವಿ,  “ಒಣಗಿದ ಬೋಳು ಮರದ ಮೇಲೆ ಚೆಲ್ಲಿದ ಬಿಳಿ ಹೂವು, ನಿರ್ಜೀವ ಪ್ರಕೃತಿಗೆ ಆಯಿತು ಜೀವಂತಿಕೆಯ ಹಿಮಸ್ಪರ್ಶ”  ಎಂದು ಆಶಾವಾದದಲ್ಲಿ ಕವನ ಬರೆಯಲಾರಂಭಿಸಿದ.

ಚಳಿಗಾಲದ ತುಂಬೆಲ್ಲ ಕಡುಚಳಿಯ ಬಗೆಗಿನ ದೂರುಗಳು, ಕಳವಳ, ಗೊಣಗಾಟ, ಕೇಕೆಗಳು, ಕವಿತೆಗಳು  ಜೊತೆಜೊತೆಯಾಗಿ ಕೇಳಿದವು. ಚಳಿಯ ಹಾಡು, ಹಿಮದಲ್ಲಿ  ಕುಣಿತ ಕೇಕೆಗಳನ್ನು ಕೇಳುತ್ತ ನೋಡುತ್ತಾ “ಸ್ನೋ ಮ್ಯಾನ್” ಗಳೂ  ಮೆಲ್ಲನೆ ಕರಗಿದವು.   ತಾವೆಂದೂ   ಇರಲೇ ಇಲ್ಲವೇನೋ ಎನ್ನುವಂತೆ ಚೂರೂ ಕುರುಹು ಬಿಡದೆ  ನೀರಾಗಿ ಇಂಗಿಯೋ ಆವಿಯಾಗಿಯೋ  ಮಾಯವಾದವು; ಚಳಿ ಮುಸುಕಿದ ಹಿಮ ಸುರಿದ  ದಿನಗಳೀಗ ಕನಸಿನಂತೆ ತೇಲಿಹೋದವು.