ನನ್ನ ಮಾತಲ್ಲಿ ಆತ್ಮವಿಶ್ವಾಸ, ಸತ್ಯ ಇಲ್ಲ ಅನ್ನುವುದು ತುಂಬಾ ಸ್ಪಷ್ಟವಾಗಿ ನನಗೇ ಗೊತ್ತಾಗುತ್ತಿತ್ತು, ಬಹುಶಃ ಅಮ್ಮನಿಗೂ ಗೊತ್ತಾಗಿದೆ. ನಾನು ಮಾತು ಮುಂದುವರೆಸಲಿಲ್ಲ, ಅಮ್ಮನೂ ಮುಂದುವರೆಸಲಿಲ್ಲ. ಇಬ್ಬರ ಮನದೊಳಗೂ ದುಃಖವೊಂದು ಹೊಯ್ದಾಡುತ್ತಿತ್ತು. ಅಲ್ಲಿ ನೆಲೆ ನಿಂತಿದ್ದ ಮೌನ ನಮ್ಮಬ್ಬರಲ್ಲೂ ಉಸಿರುಗಟ್ಟಿಸುವ ಭಾವ ಹುಟ್ಟಿಸುತ್ತಿತ್ತು. ಅಮ್ಮನ ಕಣ್ಣು ತುಂಬಿಕೊಳ್ಳುತ್ತಿತ್ತು. ನಾನು ತೀರಾ ನಿರ್ಭಾವುಕಳಂತೆ ಅಲ್ಲಿಂದ ಎದ್ದು ಹೋದೆ, ನನಗೆ ಹಾಗೆ ಹೋಗದೆ ಬೇರೆ ದಾರಿಯೇ ಇರಲಿಲ್ಲ. ಯಾಕೆಂದರೆ ಇನ್ನೆರಡೇ ಎರಡು ನಿಮಿಷ ನಾನಲ್ಲಿ ನಿಂತಿದ್ದರೂ ಅಳು ಭೋರ್ಗರೆಯುತ್ತಿತ್ತು.
ಫಾತಿಮಾ ರಲಿಯಾ ಅನುಭವ ಕಥನ “ಕೀಮೋ” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ
ನನಗೆ ಮೊದಲಿಂದಲೂ ಆಕಾಶ ಅಂದರೆ ಏನೋ ಆಕರ್ಷಣೆ, ತೀರಾ ಚಿಕ್ಕ ಹುಡುಗಿಯಾಗಿದ್ದಾಗಿನಿಂದಲೂ ಆಟ ಆಡುವುದನ್ನೆಲ್ಲಾ ಒಮ್ಮೆಲೇ ಬಿಟ್ಟು ಆಕಾಶ ನೋಡುತ್ತಾ ಕೂರುತ್ತಿದ್ದೆ. ಚಲಿಸುವ ಮೋಡ, ಹಾರುವ ಹಕ್ಕಿಗಳು ಅಥವಾ ಖಾಲಿ ಆಕಾಶವೇ ಇರಲಿ, ಎಷ್ಟು ಹೊತ್ತು ನೋಡಿದರೂ ಬೇಸರ ಅನ್ನಿಸುತ್ತಿರಲಿಲ್ಲ.
ಇದೇ ಹೊತ್ತಿಗೆ ನನ್ನಜ್ಜ ನನ್ನೊಳಗೆ ಏರೋನಾಟಿಕಲ್ ಇಂಜಿನಿಯರಿಂಗ್‌ನ ಕನಸು ಬಿತ್ತಿದ್ದರು. ಹಾಗೆಂದರೇನು ಅಂತ ಕೇಳಿದಾಗ ನನ್ನ ಬಾಲ ಮನಸ್ಸಿಗೆ ಅರ್ಥ ಆಗುವಂತೆ ‘ಅದನ್ನೆಲ್ಲಾ ಕಲ್ತುಕೊಂಡ್ರೆ ನಿಂಗೆ ಆಕಾಶಕ್ಕೆ ಹೋಗ್ಬಹುದು, ಅಲ್ಲಿ ಚಂದ್ರ ಇರುತ್ತೆ, ಮಂಗಳ ಗ್ರಹ ಇರುತ್ತೆ ಅದನ್ನೆಲ್ಲಾ ನೋಡ್ಕೊಂಡು ಬರ್ಬಹುದು. ಅಲ್ಲೇ ಇದ್ದು ಹೊಸತನ್ನು ಏನಾದರೂ ಕಂಡು ಹಿಡಿಯಬಹುದು’ ಅಂತೆಲ್ಲಾ ಹೇಳಿದ್ದರು.

(ಫಾತಿಮಾ ರಲಿಯಾ)
ಅದೊಂದು ರಮಳಾನಿನ 29ನೇ ದಿನ, ‘ಇವತ್ತು ಚಂದ್ರದರ್ಶನ ಆದ್ರೆ ನಾಳೆ ಪೆರ್ನಾಳ್, ಆಗ್ದೇ ಇದ್ರೆ ನಾಳೆ ಒಂದಿವ್ಸ ಉಪವಾಸ ಇರುತ್ತೆ, ನಾಡಿದ್ದು ಹಬ್ಬ’ ಅಂದರು ನನ್ನಜ್ಜ. ಮಗ್ರಿಬ್ ಬಾಂಗ್ ಆದ ಕೂಡ್ಲೇ ಚಂದ್ರ ಕಾಣಿಸುತ್ತಾ ಅಂತ ಹೊರಗೆ ಹೋಗಿ ಕಣ್ಣು ಕಿರಿದಾಗಿಸಿ, ಹಿರಿದಾಗಿಸಿ, ಒಂದು ಕಣ್ಣು ಮುಚ್ಚಿ, ಎರಡೂ ಕಣ್ಣುಗಳನ್ನು ಅರ್ಧ ಮುಚ್ಚಿ ….ಹೀಗೆ ನಾನಾ ತರದ ಸರ್ಕಸ್‌ಗಳನ್ನು ಮಾಡಿ ಕೊನೆಗೂ ನನಗೆ ಚಂದ್ರ ದರ್ಶನ ಆಗಲೇ ಇಲ್ಲ. ಅಷ್ಟು ಹೊತ್ತಿಗೆ ಮೇಲೆ ನೋಡಿ ನೋಡಿ ಕತ್ತು ನೋವು ಶುರುವಾಗಿತ್ತು, ಮನಸ್ಸು ಚಂದ್ರನನ್ನು ನೋಡೋದು ಬಿಟ್ಟು ಬೇರೆಬೇರೆ ಕಡೆ ಅಲೆಯಲು ಶುರು ಮಾಡಿತು.
ಆಗೊಂದು ವಿಚಿತ್ರ ಪ್ರಶ್ನೆ ಹುಟ್ಟಿಕೊಂಡಿತು ‘ನಾನು ದೊಡ್ಡೋಳಾದ ಮೇಲೆ ಚಂದ್ರನ ಮೇಲೆ ಹೋಗ್ತೀನಲ್ಲ, ಆಗ ಹಬ್ಬ ಮಾಡ್ಕೊಳ್ಳೋಕೆ ಏನು ಮಾಡೋದು? ಭೂಮಿ ಕಡೆ ನೋಡ್ಬೇಕಾ? ಭೂಮಿ ದರ್ಶನ ಆದ್ರೆ ಹಬ್ಬಾನಾ?’ ಅಂತ, ಓಡಿ ಹೋಗಿ ಅಜ್ಜನನ್ನು ಕೇಳಿದೆ. ಅಜ್ಜ ತಬ್ಬಿಬ್ಬಾದರು, ಬಹುಶಃ ಮೊದಲು ಅವರಿಗೆ ಯಾವ ಉತ್ತರವೂ ಹೊಳೆಯಲಿಲ್ಲ, ಆಮೇಲೆ ಏನೋ ಒಂದು ಹೇಳಿದರು, ಅದೇನು ಅಂತ ನನಗೀಗ ನೆನಪಿಲ್ಲ. ಆದರೆ ಆ ನಂತರ ಅವರು ಸುಮಾರು ಹೊತ್ತು ಮನೆಯ ಹೊರಗೆ ಹಾಕಿದ್ದ ಈಸಿ ಛೇರಿನಲ್ಲಿ ಕೂತು ಏನನ್ನೋ ಯೋಚಿಸುತ್ತಿದ್ದುದು ಮಾತ್ರ ತುಂಬಾ ಸ್ಪಷ್ಟವಾಗಿ ನೆನಪಿದೆ.
ಸ್ವಲ್ಪ ದೊಡ್ಡವಳಾಗುತ್ತಿದ್ದ ಹಾಗೆ ಆಕಾಶ, ನಕ್ಷತ್ರ ಪುಂಜಗಳು, ನಕ್ಷತ್ರ, ಗ್ರಹಗಳು, ಉಪಗ್ರಹಗಳು… ಈ ಕಲ್ಪನೆಗಳೆಲ್ಲಾ ಅರ್ಥವಾಗತೊಡಗಿತು. ಅಷ್ಟು ಹೊತ್ತಿಗೆ ಮುಂದೆ ನನ್ನ ಕಾರ್ಯಕ್ಷೇತ್ರ ಆ್ಯಸ್ಟ್ರೋಫಿಸಿಕ್ಸೇ ಆಗಿರುತ್ತದೆ ಅಂತ ನಿರ್ಧಾರ ಮಾಡಿದ್ದೆ. ನಾನು ಈ ಬಗ್ಗೆ ಎಷ್ಟು ವಿಶ್ವಾಸದಿಂದ ಇದ್ದೆ ಎಂದರೆ ಯಾರಾದರೂ ದೊಡ್ಡವಳಾದ್ಮೇಲೆ ಏನ್ ಮಾಡ್ತೀಯಾ ಅಂತ ಕೇಳಿದ್ರೆ ‘ಇಸ್ರೋದಲ್ಲಿ ಕೆಲಸ ಮಾಡ್ತೀನಿ’ ಅಂತ ಒಂದು ಕ್ಷಣಾನೂ ಯೋಚಿಸದೆ ಉತ್ತರ ಕೊಡುತ್ತಿದ್ದೆ. ಅದು ಮೊಬೈಲ್, ಇಂಟರ್ನೆಟ್ ಇಲ್ಲದ ಕಾಲ. ಖಗೋಳಶಾಸ್ತ್ರದ ಬಗ್ಗೆ ಅಲ್ಲಿ ಇಲ್ಲಿ ಓದಿದ್ದನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುತ್ತಿದ್ದೆ, ಪತ್ರಿಕೆಗಳಲ್ಲಿ ಬರುತ್ತಿದ್ದ ಲೇಖನಗಳನ್ನು ಕತ್ತರಿಸಿ ಸಂಗ್ರಹಿಸಿಡುತ್ತಿದ್ದೆ, ಅದು ಐದೇ ಗೆರೆಗಳ ಪುಟ್ಟ ಲೇಖನವಾದರೂ ಸಹ ಅದನ್ನು ಎತ್ತಿಟ್ಟುಕೊಳ್ಳುತ್ತಿದ್ದೆ.
ಹೀಗೆ ಕತ್ತರಿಸಿಟ್ಟ, ಬರೆದಿಟ್ಟ ಲೇಖನಗಳು ನಾನು ಪಿ.ಯು.ಸಿ ತಲುಪುವ ಹೊತ್ತಿಗೆ ಒಂದು ದೊಡ್ಡ ಸೂಟ್ ಕೇಸ್ ತುಂಬುವಷ್ಟಾಗಿತ್ತು. ಹತ್ತನೇ ತರಗತಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಮುಂದೇನಾಗ್ತೀಯಾ ಅಂತ ಕನ್ನಡ ಮೇಷ್ಟ್ರು ಕೇಳಿದ್ದಾಗಲೂ ನಾನು ತುಂಬಾ ಆತ್ಮವಿಶ್ವಾಸದಿಂದ ‘ಇನ್ನು ಹತ್ತು ವರ್ಷ ಕಳೆದ ಮೇಲೆ ಈ ಶಾಲೆಗೆ ಮತ್ತೆ ಬರ್ತೀನಿ, ಅದು ಇಸ್ರೋ ವಿಜ್ಞಾನಿಯಾಗಿ ಬರ್ತೀನಿ’ ಅಂತ ಹೇಳಿದ್ದೆ. ಪಿಯುಸಿ ಸೇರಿದಾಗಲೂ ನಿಮ್ಮ ಮುಂದಿನ ಗುರಿ ಏನು ಅಂತ ಕೇಳಿದಾಗಲೂ ‘ಇಸ್ರೋ ವಿಜ್ಞಾನಿ ಆಗೋದು’ ಅಂದಿದ್ದೆ.
ಆದರೆ ಅದೇ ಪಿಯುಸಿಯಲ್ಲಿ, ದೇಹದ ಅನಾಟಮಿಯೇ ಅರ್ಥವಾಗದ ವಯಸ್ಸಲ್ಲಿ ಬದುಕಿಗೆ ‘ಸರ್ವೈವಲ್ ಆಫ್ ಫಿಟ್ಟೆಸ್ಟ್’ ಕಲಿಸುವ ಹುಕಿ ಹುಟ್ಟಿಕೊಂಡು ಬಿಟ್ಟಿತ್ತು, ಹಾಗಾಗಿ ಅದು ಅಮ್ಮನ ದೇಹದೊಳಕ್ಕೆ ಕ್ಯಾನ್ಸರ್ ಅನ್ನು ಕಳುಹಿಸಿಬಿಟ್ಟಿತು. ನಾನು ಅನಿವಾರ್ಯವಾಗಿ ಆರು ತಿಂಗಳುಗಳ ಕಾಲ ತಿಂಗಳೊಂದಕ್ಕೆ ಹದಿನೈದೇ ದಿನಗಳು ತರಗತಿಗೆ ಹಾಜರಾಗುವಂತಾಯಿತು, ಯಾಕೆಂದರೆ ಕಿಮೋತೆರಪಿಯ ಅಷ್ಟೂ ದಿನಗಳಲ್ಲಿ ಅಮ್ಮನ ಜೊತೆ ಆಸ್ಪತ್ರೆಯಲ್ಲಿ ನಾನು ಇರಲೇಬೇಕಿತ್ತು. ಅಮ್ಮ ಏನೋ ‘ನೀ ಹೋಗು, ನಾ ಮ್ಯಾನೇಜ್ ಮಾಡ್ಕೋತೀನಿ’ ಅನ್ನುತ್ತಿದ್ದರು, ಆದರೆ ನನಗೆ ಅಮ್ಮನನ್ನು ಬಿಟ್ಟು ಅಷ್ಟು ಸುಲಭದಲ್ಲಿ ಹೋಗುವುದು ಸಾಧ್ಯವೇ ಇರಲಿಲ್ಲ.
ಒಂದಿನ ನಮ್ಮ ಕಾಲೇಜಿನ ಪ್ರಿನ್ಸಿಪಾಲ್ ತರಗತಿಗೆ ಬಂದು ‘ಸಿಇಟಿ ಪರೀಕ್ಷೆಗೆ ಹಾಜರಾಗುವವರು ಇನ್ನು ಒಂದು ವಾರದಲ್ಲಿ ಅರ್ಜಿ ಸಲ್ಲಿಸಬೇಕು’ ಅಂದರು, ನನ್ನ ಕಣ್ಣ ಮುಂದೆ ಇಸ್ರೋ ಕುಣಿಯುತ್ತಿತ್ತು, ನಾನು ಇಸ್ರೋ ವಿಜ್ಞಾನಿಯಾಗುವುದು, ಅಮ್ಮ ಹೆಮ್ಮೆಯಿಂದ ನನ್ನ ತಬ್ಬಿಕೊಳ್ಳುವುದು, ನಾನು ನನ್ನೊಳಗೆ ಈ ಕನಸನ್ನು ಬಿತ್ತಿದ ಅಜ್ಜನನ್ನು ನೆನೆಸಿಕೊಂಡು ಭಾವುಕಳಾಗುವುದು, ನಾನು ಓದಿದ ಹೈಸ್ಕೂಲಿಗೆ ಹೋಗಿ ‘ನೋಡಿ ನಾನೀಗ ಇಸ್ರೋ ವಿಜ್ಞಾನಿ’ ಅನ್ನುವುದು ಎಲ್ಲವೂ ಒಂದು ಫ್ಲಾಷ್‌ಬ್ಯಾಕಿನಂತೆ, ಹಳೆಯ ಸಿನಿಮಾದ ಚದುರಿದ, ಹಾಳಾದ ಚಿತ್ರದಂತೆ ಬಂದು ಹೋಗುತ್ತಿತ್ತು.
ನಾನು ಸಿ.ಇ.ಟಿಯ ವಿಷಯ ಮನೆಯಲ್ಲಿ ಹೇಳಲೇ ಇಲ್ಲ, ಯಾಕೆಂದರೆ ಕಿಮೋ ಆಗುತ್ತಿರುವಾಗ ಅಮ್ಮನ ದೇಹ ಸ್ಥಿತಿ ತುಂಬಾ ಸೂಕ್ಷ್ಮವಾಗಿತ್ತು, ಅವರನ್ನು ಬಿಟ್ಟು ದೂರ ನಾನು ಓದಲು ಹೋಗುವುದು ತೀರಾ ಅಮಾನವೀಯತೆ ಅಂತ ನನಗೆ ಅನ್ನಿಸುತ್ತಿತ್ತು. ಬಹುಶಃ ನಾನು ಆ ಹೊತ್ತು ಸಿಇಟಿ ಪರೀಕ್ಷೆಗೆ ಅಪ್ಲೈ ಮಾಡೋಕೆ ಹೇಳಿದ್ದಾರೆ ಅನ್ನೋದನ್ನು ಮನೆಯಲ್ಲಿ ಹೇಳಿದ್ದರೆ ಅಮ್ಮನೇ ಬಲವಂತ ಮಾಡಿ ಅರ್ಜಿ ಸಲ್ಲಿಸಲು ಹೇಳುತ್ತಿದ್ದರೇನೋ, ನಾನು ಹೇಳಲೇ ಇಲ್ಲ.
ಅರ್ಜಿ ಸಲ್ಲಿಸಲಿಕ್ಕಿರುವ ಕೊನೆಯ ದಿನ ಪ್ರಿನ್ಸಿಪಾಲ್ ಬಂದು ಮತ್ತೆ ತರಗತಿಯಲ್ಲಿ ವಿಚಾರಿಸಿದರು. ನಾನು ಮತ್ತು ಕೆಲವರು ‘ಇಲ್ಲ’ ಎಂಬಂತೆ ತಲೆ ಆಡಿಸಿದೆವು. ಆವತ್ತು ಸಂಜೆ ಮನೆಗೆ ಬಂದವಳೇ ನಾನು ಲೇಖನಗಳನ್ನು ಸಂಗ್ರಹ ಮಾಡಿಟ್ಟಿದ್ದ ಸೂಟ್ ಕೇಸ್ ಬಿಚ್ಚಿ ಅದರಲ್ಲಿದ್ದ ಅಷ್ಟೂ ಕಾಗದದ ಚೂರುಗಳನ್ನು ಒಟ್ಟು ಮಾಡಿ ಅಂಗಳಕ್ಕೆ ಕೊಂಡೊಯ್ದು ಕೊನೆಯ ಬಾರಿ ಮುಟ್ಟಿ, ಆಘ್ರಾಣಿಸಿ ಬೆಂಕಿ ಹಚ್ಚಿಬಿಟ್ಟೆ. ಆ ಹೊಗೆಯಲ್ಲಿ ನನ್ನ ಹನ್ನೆರಡು ವರ್ಷಗಳ ಕನಸು ಆಕಾಶಕ್ಕೆ ಏರಿ ಹೋಯಿತು. ಕಿಟಕಿ ಪಕ್ಕದಲ್ಲಿ ಕೂತು ಪೇಪರ್ ಓದುತ್ತಿದ್ದ ಅಜ್ಜ ‘ಅದೆಂತ ಬೆಂಕಿ ಹಚ್ಚಿದ್ದು?’ ಕೇಳಿದ್ದರು. ನಾನು ‘ಕಸ’ ಅಂದಿದ್ದೆ. ಅಷ್ಟಾಗಿ ಹೋಗಿ ಮನಸಿನ ಕದವಿಕ್ಕಿ ಕೂತವಳು ಈಗ ಇಲ್ಲಿ ಈ ಅಕ್ಷರಗಳ ಮುಖಾಂತರ ತೆರೆಯುತ್ತಿದ್ದೇನೆ.
ಆದರೆ ಇದೊಂದೂ ಅಮ್ಮನಿಗೆ ಗೊತ್ತೇ ಇರಲಿಲ್ಲ. ಸುಮಾರು ದಿನಗಳ ನಂತರ ಮಂಚದ ಕೆಳಗೆ ಕಸ ಗುಡಿಸುತ್ತಿದ್ದಾಗ ಸೂಟ್ ಕೇಸ್ ಸರಿಸುತ್ತಿರುವಾಗ ಅಮ್ಮ ‘ಅದೇನು ಅಷ್ಟು ಹಗುರಾಗಿದೆ?’ ಕೇಳಿದ್ದರು, ನಾನು ‘ಭಾರ ಕಳೆದುಹೋಗಿದೆ’ ಅಂದಿದ್ದೆ. ಅಮ್ಮನಿಗೆ ಏನೂ ಅರ್ಥ ಆಗಲಿಲ್ಲ, ‘ನೀನೋ ನಿನ್ನ ಕಾವ್ಯದ ಭಾಷೆಯೋ’ ಎಂದು ಗೊಣಗಿ ಸುಮ್ಮನಾದರು. ನಾನು ಆನಂತರ ಒಂದಕ್ಷರವೂ ಮಾತಾಡಲಿಲ್ಲ.
ಸುಮಾರು ದಿನಗಳ ನಂತರ ಅಮ್ಮ ‘ಸಿಇಟಿ ಪರೀಕ್ಷೆ ಯಾವಾಗಂತೆ?’ ಕೇಳಿದರು. ನಾನು ‘ಗೊತ್ತಿಲ್ಲ’ ಎಂದು ಮಗುಮ್ಮಾದೆ.
‘ಗೊತ್ತಿಲ್ವಾ?’ ಅಮ್ಮನಿಗೇನೋ ಅನುಮಾನ
‘ಊಹೂಂ’ ಎಂದು ವಿಷಯ ಬದಲಿಸಲು ನೋಡಿದೆ.
ಅಮ್ಮ ಪಟ್ಟು ಬಿಡಲಿಲ್ಲ.
‘ಅರ್ಜಿ ಸಲ್ಲಿಸುವುದು ಯಾವಾಗಂತೆ?’
‘ಗೊತ್ತಿಲ್ಲ’
‘ನಾಳೆ ಕೇಳಿಕೊಂಡು ಬಾ’ ಎಂದರು. ನಾನು ಹೂಂಗುಟ್ಟಿದೆ.
ಮರುದಿನ ಅಮ್ಮನಿಗೆ ಮರೆತುಹೋಗುತ್ತದೇನೋ ಅಂದುಕೊಂಡಿದ್ದೆ. ಆದರೆ ಹಾಗಾಗಲಿಲ್ಲ. ನಿಲ್ಲಿಸಿ ಗಟ್ಟಿಸಿ ಕೇಳಿದರು.
‘ಕೊನೆ ದಿನ ಮುಗ್ದುಹೋಗಿದೆ ಮೊನ್ನೇನೇ’ ಹೇಳಿದೆ.
‘ಮತ್ಯಾಕೆ ಹೇಳಿಲ್ಲ?’
‘ಇಂಟ್ರೆಸ್ಟ್ ಇಲ್ಲ ಸಿಇಟಿ ಬರೆಯೋಕೆ’
‘ಇಂಟ್ರೆಸ್ಟ್ ಇಲ್ವಾ?’
‘ಮತ್ಯಾರಮ್ಮಾ ಅಷ್ಟೆಲ್ಲಾ ಓದೋದು, ಬರೆಯೋದು? ಸುಮ್ನೆ ಡಿಗ್ರಿಗೆ ಸೇರ್ಕೋತೀನಿ’ ಅಂದೆ. ನನ್ನ ಮಾತಲ್ಲಿ ಆತ್ಮವಿಶ್ವಾಸ, ಸತ್ಯ ಇಲ್ಲ ಅನ್ನುವುದು ತುಂಬಾ ಸ್ಪಷ್ಟವಾಗಿ ನನಗೇ ಗೊತ್ತಾಗುತ್ತಿತ್ತು, ಬಹುಶಃ ಅಮ್ಮನಿಗೂ ಗೊತ್ತಾಗಿದೆ. ನಾನು ಮಾತು ಮುಂದುವರೆಸಲಿಲ್ಲ, ಅಮ್ಮನೂ ಮುಂದುವರೆಸಲಿಲ್ಲ. ಇಬ್ಬರ ಮನದೊಳಗೂ ದುಃಖವೊಂದು ಹೊಯ್ದಾಡುತ್ತಿತ್ತು. ಅಲ್ಲಿ ನೆಲೆ ನಿಂತಿದ್ದ ಮೌನ ನಮ್ಮಬ್ಬರಲ್ಲೂ ಉಸಿರುಗಟ್ಟಿಸುವ ಭಾವ ಹುಟ್ಟಿಸುತ್ತಿತ್ತು. ಅಮ್ಮನ ಕಣ್ಣು ತುಂಬಿಕೊಳ್ಳುತ್ತಿತ್ತು. ನಾನು ತೀರಾ ನಿರ್ಭಾವುಕಳಂತೆ ಅಲ್ಲಿಂದ ಎದ್ದು ಹೋದೆ, ನನಗೆ ಹಾಗೆ ಹೋಗದೆ ಬೇರೆ ದಾರಿಯೇ ಇರಲಿಲ್ಲ. ಯಾಕೆಂದರೆ ಇನ್ನೆರಡೇ ಎರಡು ನಿಮಿಷ ನಾನಲ್ಲಿ ನಿಂತಿದ್ದರೂ ಅಳು ಭೋರ್ಗರೆಯುತ್ತಿತ್ತು. ನಾನು ಖಂಡಿತವಾಗಿಯೂ ಅಷ್ಟು ನಿರ್ಭಾವುಕಿಯೂ, ನಿರ್ಲಿಪ್ತೆಯೂ ಅಲ್ಲ ಎನ್ನುವುದು ಅಮ್ಮನಿಗೆ ಖಚಿತವಿತ್ತು. ಹಾಗಿರುವಾಗ ಅಲ್ಲಿಂದ ಆ ಹೊತ್ತು ಪಲಾಯನ ಮಾಡುವುದಕ್ಕಿಂತ ಚೂರು ಸಮಯ ಅಲ್ಲೇ ಇದ್ದು ಅಮ್ಮನನ್ನೂ ಸಮಾಧಾನ ಮಾಡಿ, ನಾನೂ ಅತ್ತು ಹಗುರಾಗಬೇಕಿತ್ತು ಅಂತ ಈಗ ಇದನ್ನು ಬರೆಯುವಾಗ ಅನ್ನಿಸುತ್ತಿದೆ. ಬದುಕು ಹೀಗೇ ಅಲ್ವಾ, ಅದೇನೇನೋ ಯೋಜನೆಗಳಲ್ಲಿ, ಲೆಕ್ಕಾಚಾರಗಳಲ್ಲಿ ನಾವು ನಿರ್ಮಲವಾಗಿ ನಗುವ, ಅಳುವ ಘಳಿಗೆಗಳನ್ನೆಲ್ಲಾ ಕಳೆದುಕೊಂಡು ಬಿಡುತ್ತೇವೆ. ಆಮೇಲೆ ಹಾಗೆ ಮಾಡಬಹುದಿತ್ತು, ಹೀಗೆ ಮಾಡಬಹುದಿತ್ತು ಅಂದುಕೊಂಡು ಪರಿತಪಿಸುತ್ತೇವೆ.
ಆ ಕಾಲಕ್ಕೆ ನನಗಾಗಲೀ, ಅಮ್ಮನಿಗಾಗಲೀ ಇಸ್ರೋ ವಿಜ್ಞಾನಿಯಾಗಬೇಕಾದರೆ ಏರೋನಾಟಿಕಲ್ ಇಂಜಿನಿಯರಿಂಗ್ ಕಡ್ಡಾಯವಲ್ಲ ಅನ್ನುವುದು ಗೊತ್ತಿರಲಿಲ್ಲ. ಗೊತ್ತಿದ್ದರೆ ಬೇರೆ ಕೋರ್ಸ್ ಮಾಡಿ ಇಸ್ರೋ ಸೇರ ಪ್ರಯತ್ನಿಸುತ್ತಿದ್ದೆನೇನೋ, ಮತ್ತು ಆಗ ಹೀಗೆ ಕೂತು ಬರೆಯಲು, ನನ್ನ ಕಥೆಯನ್ನು ಹೇಳಿಕೊಳ್ಳಲು ಸಮಯ ಮತ್ತು ಅವಕಾಶ ಎರಡೂ ಇರುತ್ತಿರಲಿಲ್ಲವೇನೋ? ಅಥವಾ ನಾನಿದ್ದ ಹಳ್ಳಿಯಲ್ಲಿ ಆ್ಯಸ್ಟ್ರೋಫಿಸಿಕ್ಸ್, ಆಕಾಶ, ಗ್ರಹಗಳು ಎಲ್ಲವೂ ಕೈಗೆಟುಕದ ದ್ರಾಕ್ಷಿಯೇ ಆಗಿ ನನಗೆ ಮತ್ತೆ ನಿರಾಶೆಯೇ ಆಗುತ್ತಿತ್ತೇನೋ. ಗೊತ್ತಿಲ್ಲ. ಈಗ ಕೂತು ಯೋಚಿಸುವಾಗ ಇವೆಲ್ಲಾ ಬದುಕಿನ ಒಂದು ಭಾಗದಂತೆಯೂ, ಆ ಕಾಲಕ್ಕೆ ಸಂಕಟ ಪಟ್ಟುಕೊಂಡು, ಅಳು ನುಂಗಿಕೊಂಡು, ಮೇಲು ಮೇಲಕ್ಕೆ ಏನೂ ಆಗಿಲ್ಲವೆಂದು ಪೋಸ್ ಕೊಟ್ಟುಕೊಂಡು, ಈ ಜಗತ್ತಿನ ಅತ್ಯಂತ ಗಟ್ಟಿಗಿತ್ತಿ ಹೆಣ್ಣುಮಗಳು ನಾನೆಂದು ಸುಳ್ಳೇ ಸುಳ್ಳು ತೋರಿಸಿಕೊಂಡು ಆ ಕಾಲ ಮರೆಯಾದ ಮೇಲೆ ಮತ್ತೆ ಬದುಕಿಗೆ ಹೊಂದಿಕೊಂಡು ಹೋಗಲೇ ಹೀಗೆಲ್ಲಾ ಆಯಿತೇನೋ ಅನ್ನಿಸುತ್ತದೆ.
ಆದರೂ ಒಮ್ಮೊಮ್ಮೆ ಮನಸು ತಡೆಯುವುದಿಲ್ಲ. ಆಗ ಹಾಗೆ ಮಾಡಬಹುದಿತ್ತು, ಹೀಗೆ ಮಾಡಬಹುದಿತ್ತು, ಫೇಸ್‌ಬುಕ್ ಇದ್ದಿದ್ದರೆ ಮಾಹಿತಿಯ ಮಹಾಪೂರವೇ ನನ್ನೆಡೆಗೆ ಹರಿದು ಬರುತ್ತಿತ್ತು ಅಂತೆಲ್ಲಾ ಅನ್ನಿಸುತ್ತದೆ. ಅಷ್ಟು ವರ್ಷಗಳ ಕಾಲ ಹೆಗಲ ಮೇಲೆ ಕೂತಿದ್ದ ಹಗೂರ ರೆಕ್ಕೆಗಳ ಕನಸಿನ ಪಕ್ಷಿಯನ್ನು ‘ಪಟ್ಟಂತ’ ಒಂದೇ ಏಟಿಗೆ ನಾನೇ ಕೊಂದುಬಿಟ್ಟೆನಲ್ಲಾ ಅನ್ನಿಸುತ್ತದೆ. ಮರುಕ್ಷಣ, ಆ ಸರಿದು ಹೋದ ಆ ಕಾಲಕ್ಕೆ ಅದೇ ಸರಿಯಾದ ಮತ್ತು ಉತ್ತಮ ನಿರ್ಧಾರ ಅಂತಲೂ ಅನ್ನಿಸುತ್ತದೆ. ನಾನು ಅಮ್ಮನನ್ನು ಬಿಟ್ಟು ಓದಲೆಂದು ದೂರ ಹೋಗಿ ಸೂಕ್ಷ್ಮ ಆರೋಗ್ಯ ಪರಿಸ್ಥಿತಿಯಲ್ಲಿದ್ದ ಅಮ್ಮನಿಗೆ ಏನಾದರೂ ಹೆಚ್ಚು ಕಮ್ಮಿ ಆಗಿದ್ದಿದ್ದರೆ ನಾನು ಯಾವತ್ತೂ ನನ್ನನ್ನು ಕ್ಷಮಿಸಲು ಸಾಧ್ಯವೇ ಆಗುತ್ತಿರಲಿಲ್ಲವೇನೋ, ಕನ್ನಡಿಯ ಮುಂದೆ ನಿಂತು ನನ್ನ ಮುಖ ನೋಡಿಕೊಳ್ಳಲು ನನ್ನಿಂದ ಆಗುತ್ತಲೇ ಇರಲಿಲ್ಲವೇನೋ ಅನ್ನಿಸುತ್ತದೆ.
ಆದರೆ, ಕಳೆದ ವರ್ಷ ಚಂದ್ರಯಾನ-3 ವಿಜ್ಞಾನಿಗಳ ತಂಡದಲ್ಲಿದ್ದ ವಿಜ್ಞಾನಿಯೊಬ್ಬರು ಮಾತಾಡುತ್ತಾ ‘ಇಸ್ರೋಗೆ ನಾನು ಮೊದ್ಲು ಆಯ್ಕೆ ಆದಾಗ ನಮ್ಮನೆಯಲ್ಲಿ ಅಲ್ಲಿಗೆಲ್ಲಾ ಹೋಗಿ ಅಂತ ಕೆಲಸ ಯಾಕೆ ಮಾಡ್ಬೇಕು? ಇಲ್ಲಿ ಹೇಗೂ ಟೀಚರಾಗಿದ್ದೀಯಲ್ಲಾ ಅದೇ ಕೆಲ್ಸ ಮುಂದುವರ್ಸು, ಹೀಗಿದ್ರೆ ನಿಂಗೆ ಒಳ್ಳೆ ಗಂಡು ಸಿಗುತ್ತೆ, ಮದುವೆಯಾಗಿ ಸುಖವಾಗಿ ಇರ್ಬಹುದು ಅಂತ ಹೇಳಿದ್ರು’ ಅಂದದ್ದನ್ನು ಕೇಳಿದಾಗ ಬೆಚ್ಚಿಬಿದ್ದಿದ್ದೆ. ನಾನು ಅವರ ಜಾಗದಲ್ಲಿ ನಿಂತು ನೋಡಿದಾಗ ನನ್ನ ಪರಿಸ್ಥಿತಿಯೂ ಹೀಗೆಯೇ ಇರುತ್ತಿತ್ತು ಅನ್ನಿಸಿ ಎದೆ ದಸಕ್ಕೆಂದಿತ್ತು. ಅಮ್ಮ ಮಾತ್ರ ಈಗಲೂ, ಇಷ್ಟು ವರ್ಷಗಳಾದ ಮೇಲೂ ಯಾರಾದ್ರೂ aeronautical engineering ಮಾಡುತ್ತಿದ್ದೇನೆ ಅಂದರೆ, ಆ್ಯಸ್ಟ್ರೋ ಫಿಸಿಕ್ಸ್ ಬಗ್ಗೆ ಮಾತಾನಾಡಿದರೆ, ಚಿಕ್ಕ ಮಕ್ಕಳು ಮಹತ್ವಾಕಾಂಕ್ಷೆಯ ಕನಸಿನ ಬಗ್ಗೆ ಮಾತಾಡುತ್ತಿದ್ದರೆ ಕಣ್ಣು ತುಂಬಿಕೊಳ್ಳುತ್ತಾರೆ, ನಾನು ಪಕ್ಕದಲ್ಲಿದ್ದರೆ ನನ್ನತ್ತ ನೋಡುತ್ತಾರೆ, ನಾನು ಅವರ ಕಣ್ಣು ತಪ್ಪಿಸುತ್ತೇನೆ.
ಸಿ.ಇ.ಟಿ, ನಾನು ಪರೀಕ್ಷೆ ತೆಗೆದುಕೊಳ್ಳದೇ ಇದ್ದುದು, ನನ್ನ ಸಬೂಬುಗಳು, ಆ ಮೌನ ಇವೆಲ್ಲಾ ಕಳೆದು ಸುಮಾರು ತಿಂಗಳುಗಳಾದ ನಂತರ ಅಮ್ಮ ಒಂದಿನ ಆ ಸೂಟ್‌ಕೇಸ್‌ನಲ್ಲಿ ಹಳೆಯ ಬಟ್ಟೆ ತುಂಬಿಸಿಡುತ್ತಿದ್ದರು. ಅಮ್ಮನಿಗೆ ಎಲ್ಲವೂ ಗೊತ್ತಾಗಿದೆ, ಎಲ್ಲವೂ ಅರ್ಥವಾಗಿದೆ ಅನ್ನುವುದು ನನಗೆ ಆಗ ತಿಳಿಯಿತು. ಆದರೂ ನಾನು ‘ಎಂತ ಮಾಡ್ತಿರೋದು ನೀವು?’ ಕೇಳಿದ್ದೆ.
‘ಮತ್ತೆ ಭಾರ ತುಂಬುವುದು’.
ನನಗೆ ನಗಬೇಕೆನಿಸಿತು, ಆದರೆ ನಗಲಾಗಲಿಲ್ಲ, ಅಳಬೇಕೆನಿಸಿತು, ಅಳಲೂ ಆಗಲಿಲ್ಲ.
(ಕೃತಿ: ಕೀಮೋ (ಅನುಭವ ಕಥನ), ಲೇಖಕರು: ಫಾತಿಮಾ ರಲಿಯಾ, ಪ್ರಕಾಶಕರು: ಜೀರುಂಡೆ ಪ್ರಕಾಶನ, ಬೆಲೆ: 160/-)

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಮನಸ್ಸನ್ನು ಆರ್ದ್ರಗೊಳಿಸುವ ಬರಹ.