ಅವತ್ತು ರಾತ್ರಿ ಅವನಿಗೆ ಆ ಕನಸು ಬೀಳಲಿಲ್ಲ. ಆದರೆ ಅದರ ವಾಸನೆ ಮಾತ್ರ ಹಿಂಬಾಲಿಸುತ್ತಲೇ ಇತ್ತು. ಏನೇನೋ ಪ್ರಯತ್ನಗಳನ್ನು ಮಾಡಿದರೂ ಅದರ ವಾಸನೆಯಿಂದ ತಪ್ಪಿಸಿಕೊಳ್ಳಲು ಆಗದೆ ಹೈರಾಣಾದ. ಯಾರೊಂದಿಗೂ ಹಂಚಿಕೊಳ್ಳುವುದಿರಲಿ, ಅದನ್ನ ಮತ್ತೊಮ್ಮೆ ನೆನಪಿಸಿಕೊಂಡರೇನೇ ಪ್ರಾಣ ಹೋದಂತಾಗುವ ಕನಸು ಅದಾಗಿತ್ತು. ಪ್ರತಿರಾತ್ರಿ ಮಲಗುವಾಗಲೂ ದೇವರೇ ಆ ಕನಸು ಮತ್ತೊಮ್ಮೆ ಬೀಳದಿರಲಿ ಎಂದು ಬೇಡಿಕೊಂಡು ಮಲಗುತ್ತಿದ್ದ. ಆದರೆ ಅದರ ವಾಸನೆಯಿಂದ ತುಂಬಾ ಹೊತ್ತು ನಿದ್ದೆ ಬರುತ್ತಲೇ ಇರಲಿಲ್ಲ.
ಮಂಜುನಾಯಕ ಚಳ್ಳೂರು ಬರೆದ ಹೊಸ ಕತೆ ನಿಮ್ಮ ಓದಿಗಾಗಿ.
ಹೈದ್ರಾಬಾದ್ ಕರ್ನಾಟಕದ ಮೂಲೆಯೊಂದರಲ್ಲಿರುವ ಚಿಕ್ಕ ಊರು ಕನ್ನೇರುಮಡುವಿನ ತಾಯಮ್ಮನ ಗುಡಿಯ ಮೈಕಿನಲ್ಲಿ ಶರೀಫಜ್ಜನ ಹಾಡುಗಳು ಬೆಳಗ್ಗೆ ಆರಕ್ಕೆ ಬದಲು ತಿಂಗಳಿಗೊಂದು ಸಲ ಆರುವರೆ, ಏಳಕ್ಕೆ ಪ್ರಸಾರವಾಗುವುದುಂಟು; ಅದೂ ಗುಡಿಯ ಪೂಜಾರಿ, ಆರೂ ಕಾಲು ಅಡಿ ಎತ್ತರದ ಬ್ರಹ್ಮಚಾರಿ ಉದ್ದನ್ ಬಾಲಯ್ಯ ಪಕ್ಕದೂರು, ಜೀರಾಳಕ್ಕೆ ಹೋಗಿ ತನ್ನ ಗೆಣತಿ, ಮಾಟ ಮಂತ್ರ ಮಾಡಿಕೊಂಡು ಊರವರನ್ನೆಲ್ಲ ಹೆದರಿಸಿಕೊಂಡಿರುವ ಮಾತಂಗಿಯ ಮನೆಗೆ ಹೋಗಿ ಮರುದಿನ ಬರುವುದು ತಡವಾದಾಗ ಮಾತ್ರ, ಕೊಟ್ಟ ಬಟ್ಟೆಯನ್ನು ಯಾವತ್ತೂ ಹೇಳಿದ ಟೈಮಿಗೆ ಹೊಲಿದುಕೊಟ್ಟ ಇತಿಹಾಸವೇ ಇಲ್ಲದ ಟೇಲರ್ ಪಿಂಜಾರ್ ಮಾಬುವೇ ಆ ಊರಿನ ಮಸೀದಿಯಂಥ ಜಾಗದಲ್ಲಿ, ಇರುವ ಆರೇಳು ಜನ ಪಿಂಜಾರರಿಗಾಗಿ ಅಜಾನು ಕೂಗುವುದರಿಂದ ನಮಾಜಿನ ಸಮಯವೂ ತಾಸುಗಟ್ಟಲೆ ಏರುಪೇರಾಗಿದ್ದಿದೆ. ಆದರೆ ಮಿರ್ಚಿ ರಂಗಮ್ಮ ಎಂದೇ ಕನ್ನೆರುಮಡುವಿನಲ್ಲಿ ಹೆಸರಾಗಿರುವ, ಸುಮಾರು ವರ್ಷಗಳ ಹಿಂದೆ ಬುಕ್ಕನಹಟ್ಟಿಯಲ್ಲಿ ಬರಬಿದ್ದಾಗ ಅಲ್ಲಿಂದ ಗುಳೆ ಬಂದ ಜನರಲ್ಲಿ ಒಬ್ಬಳಾಗಿರುವ, ಗಂಡ, ಮಕ್ಕಳು, ಬಂಧುಗಳು ಅಂತ ಯಾರೂ ಇಲ್ಲದ ರಂಗನಾಯಕಮ್ಮ ಮಾತ್ರ ಓಂ ಸಿನಿಮಾದ ಪೋಸ್ಟರನ್ನು ಇನ್ನೂ ಅಂಟಿಸಿಕೊಂಡಿರುವ, ನಿಜಾಮನ ಕಾಲದ ದೊಡ್ಡ ಕಟ್ಟಡವೊಂದನ್ನೇ ನವೀಕರಿಸಿ ನಿರ್ಮಿಸಲಾಗಿರುವ ಊರಿನ ಬಸ್ಸ್ಟ್ಯಾಂಡ್ ಕಟ್ಟಡದ ಮುಂದಿನ ಜಾಗಕ್ಕೆ ತನ್ನ ತಳ್ಳುಗಾಡಿಯೊಂದಿಗೆ ಬಂದು ಕರೆಕ್ಟಾಗಿ ಆರು ಹದಿನೈದಕ್ಕೆ ಮೊದಲ ಸುತ್ತಿನ ಮಿರ್ಚಿಗಳನ್ನು ಕೊತಕೊತ ಕುದಿಯುತ್ತಿರುವ ಎಣ್ಣೆಗೆ ಬಿಡುವುದನ್ನು ಎಂದೂ ತಪ್ಪಿಸಿದವಳಲ್ಲ.
ಅಷ್ಟೊತ್ತಿಗಾಗಲೇ ಕನ್ನೆರುಮಡುವಿನ ಪುರುಷ ಮಹಾಜನತೆ ಮುಖ ತೊಳೆದುಕೊಂಡು, ಟವೆಲ್ ಜಾಡಿಸಿಕೊಂಡು, ಲುಂಗಿ ಏರಿಸಿ ಕಟ್ಟಿಕೊಂಡು, ಬಸ್ ಸ್ಟಾಂಡ್ ನ ಕಲ್ಲು ಬೆಂಚುಗಳ ಮೇಲೆ ಹಾಗೂ ಅಲ್ಲೇ ಸಮೀಪದಲ್ಲಿರುವ ಸಂಗಪ್ಪನ ಪಾನ್ ಶಾಪ್ ಕಟ್ಟೆಯ ಮೇಲೆ ಕಿಕ್ಕಿರಿದು ಬಿಟ್ಟಿರುತ್ತದೆ. ಬಣ್ಣ ಕಂಡು ವರ್ಷಗಳೇ ಆಗಿರುವ ತಳ್ಳುಗಾಡಿಯೊಂದರ ಮೇಲೆ ಕುಂಟುಗಾಲಿನ ಒಂದು ನೀಲಿ ಸ್ಟೌ, ಒಂದು ದೊಡ್ಡ ಬಾಣಲೆ, ಒಂದು ರಂದ್ರಮೈಯ ಚಮಚ, ಕಲಸಿದ ಹಿಟ್ಟು ತುಂಬಿಕೊಂಡ ದೊಡ್ಡ ಡಬರಿ, ಒಂದು ಅಗಲ ಪರಾತ, ಒಂದು ಡಬ್ಬಿ ಒಳ್ಳೆಣ್ಣೆ, ಒಂದು ಸಣ್ಣ ಮಂಡಾಳು ಚೀಲ, ಸೀಮೆ ಎಣ್ಣೆ ಡಬ್ಬ, ಹರಿದು ಪ್ಲೇಟ್ ಮಾಡಿಕೊಳ್ಳಲು ಒಂದು ಪೆಂಡಿ ಹಳೆಯ ದಿನಪತ್ರಿಕೆ, ಕೈ ಒರೆಸಿಕೊಳ್ಳುವ ಬಟ್ಟೆ ಇತ್ಯಾದಿ ಸಾಮಾನು ಸರಂಜಾಮುಗಳನ್ನು ಹೇರಿಕೊಂಡ ರಂಗಮ್ಮನ ಸವಾರಿ ಬಂದದ್ದೇ ಎಲ್ಲರೂ ಎದ್ದು, ಟವಲ್ ಜಾಡಿಸಿ, ಲುಂಗಿ ಸರಿಪಡಿಸಿಕೊಂಡು ರಂಗಮ್ಮನ ತಳ್ಳುಗಾಡಿಯ ಸುತ್ತ ನೆರೆದುಬಿಡುತ್ತಾರೆ.
ಬೆಳಗ್ಗೆ ಎಂಟುಗಂಟೆಯಿಂದಲೇ ಬಿರುಬಿಸಿಲು ಸುರಿಯಲು ತೊಡಗುವ ಕನ್ನೆರುಮಡುವಿನಲ್ಲಿ ಅತ್ಯಂತ ಆಹ್ಲಾದಕರ ಸಮಯವೆಂದರೆ ಅದು ಸಾಯಂಕಾಲ ಮಾತ್ರ. ಹೊಲಗಳಿಗೆ ಹೋದ ದನ-ಕರು, ಕುರಿ-ಮರಿ, ಜನಗಳೆಲ್ಲಾ ಧೂಳೆಬ್ಬಿಸಿಕೊಂಡು ಊರು ಸೇರುವ, ಮನೆಯಂಗಳಗಳೆಲ್ಲಾ ಗುಡಿಸಿಕೊಂಡು, ನೀರು ಚಿಮುಕಿಸಿಕೊಂಡು ಹುಡಿಮಣ್ಣ ಪರಿಮಳ ಹರಡುವ, ತಾಯಮ್ಮನ ಗುಡಿಯಿಂದ ‘ತರವಲ್ಲ ತಗಿ ನಿನ್ನಾ’ ಕೇಳಿಬರುವ – ಗೋಧೂಳಿಯ ಈ ತಂಪೊತ್ತಿನಲ್ಲಿ ಊರ ಗಣಮಕ್ಕಳೆಲ್ಲ ಒಂದೆಡೆ ಸೇರಿ ಹರಟಲು, ಜಗಳ ಕಾಯಲು, ಅವರಿವರ ಬಗ್ಗೆ ಆಡಿಕೊಂಡು ಊರತಿಪ್ಪಿ ಕೆದರಲು, ಬದುಕು ಬಾಳೇವಿನ ಬಗ್ಗೆ, ಊರ ಕಾರ್ಯಗಳ ಬಗ್ಗೆ ಮಾತನಾಡಲು, ಕಟ್ಟೆಗೆ ಇದ್ದಿಲಿನಿಂದ ಗೆರೆ ಕೊರೆದು ಹುಲಿಮನೆ, ಚೌಕಾಬಾರ ಆಡಲು, ಒಬ್ಬರಿಗೊಬ್ಬರು ತಮಾಷೆ ಮಾಡಲು, ರಂಗಮ್ಮನ ಮಿರ್ಚಿ ಸ್ಟಾಲ್ ಒಂದು ರುಚಿಕಟ್ಟಾದ ವೇದಿಕೆಯಾಗಿತ್ತೆಂದೇ ಹೇಳಬಹುದು. ಆದರೆ ಎಂಥವರಿಗೂ ಬಾಯಲ್ಲಿ ನೀರೂರಿಸುವ ರಂಗಮ್ಮನ ಮಿರ್ಚಿಗಳ ಮೋಹವನ್ನೂ ಮೀರಿದ ಭೂಪರೂ ಆ ಊರಿನಲ್ಲಿ ಕೆಲವರಿದ್ದರು. ಅವರು ಈ ಹೊತ್ತಿನಲ್ಲಿ ಇಳಿಗೇರ ಗಂಗಣ್ಣನ ಹೆಂಡದಂಗಡಿಯಲ್ಲಿ ಕುಡಿದು ಡಿಂಗಾಗಿ, ಬೀಳಲು ಗಟಾರು ಹುಡುಕುತ್ತಲೋ, ಜಗಳವಾಡಲು ವೈರಿಗಳನ್ನು ಹುಡುಕುತ್ತಲೋ, ಇಲ್ಲಾ ಹೆಂಡತಿ ಮಕ್ಕಳನ್ನು ಹಿಡಿದು ಬಡಿಯಲು ಕಾರಣ ಹುಡುಕುತ್ತಲೋ ಇರುತ್ತಿದ್ದರು. ಇನ್ನೂ ಕೆಲವರು, ಇದ್ದುದರಲ್ಲೇ ಕೈಯಲ್ಲಿ ಸ್ವಲ್ಪ ಜಾಸ್ತಿ ದುಡ್ಡು ಆಡುತ್ತಿದ್ದವರು ಕಳ್ಳಿಗುಡ್ಡದ ಬೇಲಿ ಪೊದೆಗಳ ಮರೆಯಲ್ಲಿರುವ, ಕನ್ನೆರುಮಡುವಿನ ಅನಭಿಶಕ್ತ ಸೌಂದರ್ಯವತಿ ಶೇಪನ್ ರಾಣಿಯ ಹತ್ತಂಕಣದ ಮನೆಹೊಕ್ಕು ತಮ್ಮ ಪಾಲಿನ ಮಾಲನ್ನು ತೆಕ್ಕೆಬಡಿದುಕೊಂಡು ಗುದುಮುರುಗಿಯಾಡುತ್ತ ಹಗ್ಗದ ಮಂಚ ಮುರಿಯುವ ಪ್ರಯತ್ನದಲ್ಲಿ ನಿರತರಾಗಿರುತ್ತಿದ್ದರು.
ಹಾಗೆ ನೋಡಿದರೆ ಕನ್ನೆರುಮಡುವಿನ ಎಷ್ಟೋ ಮದುವೆ ಮಾತುಕತೆಗಳು, ಪಂಚಾಯಿತಿಗಳು ಆಗಿದ್ದು, ಕೊಲೆ ಸಂಚುಗಳು ರೂಪುಗೊಂಡದ್ದು, ಎಷ್ಟೋ ಗಂಡಂದಿರಿಗೆ ತಮ್ಮ ಹೆಂಡತಿಯರ ಗೆಣೆಯರ ವಿಷಯಗಳು ಗೊತ್ತಾಗಿ ಹಲವು ಮನೆತನಗಳ ಚರಿತ್ರೆಗಳು ರಕ್ತಸಿಕ್ತ ಅಂತ್ಯ ಕಾಣಲು ಕಾರಣವಾಗಿದ್ದು ಕೂಡ ರಂಗಮ್ಮನ ಮಿರ್ಚಿ ಪರಿಮಳದ ಆವರಣದಲ್ಲಿಯೇ.
ರಂಗಮ್ಮ ಗಿರಾಕಿಗಳನ್ನು ‘ಯಣ್ಣಾ, ಚಿಗಪ್ಪಾ, ದೊಡಪ್ಪಾ, ಮುದೇತಾ, ತಮ್ಮಾ, ಮುದಿಯಾ’ ಅಂತ ಕರೆಯುತ್ತ ವ್ಯಾಪಾರ ಮಾಡುತ್ತಿದ್ದ ರೀತಿಯೇ ಚಂದವಿತ್ತು. ಒಂದು ಕೈಯಿಂದ ಪ್ಲೇಟ್ ಗೆ ಮಂಡಾಳು ಸುರಿದು, ಮಿರ್ಚಿ ಇಟ್ಟು ಕೊಡುತ್ತ, ಇನ್ನೊಂದು ಕೈಯಿಂದ ಮೆಣಸಿನಕಾಯಿಯನ್ನು ಹಿಟ್ಟಲ್ಲದ್ದಿ ಎಣ್ಣೆಗೆ ಬಿಡುತ್ತಿದ್ದ ಅವಳಿಗೆ ದುಡ್ಡು ಇಸಿದುಕೊಳ್ಳಲು ಕೈಗಳು ಖಾಲಿ ಇರುತ್ತಿರಲಿಲ್ಲ. ಹಾಗಾಗಿ ಐದಾರು ಜನ ತಿಂದಮೇಲೆ ಕೈ ಒರೆಸಿಕೊಂಡು ಒಟ್ಟಿಗೇ ದುಡ್ಡು ಇಸಿದುಕೊಳ್ಳುತ್ತಿದ್ದಳು. ಪಾರ್ಸಲ್ ಕಟ್ಟಲೂ ಅವಳಲ್ಲಿ ಅಂಥ ವ್ಯವಸ್ಥೆಗಳೇನು ಇರಲಿಲ್ಲ. ದೊಡ್ಡ ಹಾಳೆಯಲ್ಲಿ ಮಂಡಾಳು ಸುರುವಿ, ಮಿರ್ಚಿ ಇಟ್ಟು, ಮಡಚಿ, ಗಿರಾಕಿ ಕೈಗಿಟ್ಟರೆ ಮುಗಿಯಿತು. ಮಂಡಾಳು ಚಲ್ಲದಂತೆ ಕಾಯ್ದುಕೊಂಡು ಮನೆಗೊಯ್ಯುವುದು ಅವರವರ ಜವಾಬ್ದಾರಿ. ಎಲ್ಲರೂ ಟವೆಲ್ ಹಾಕಿಕೊಳ್ಳುವವರೇ ಆಗಿದ್ದರಿಂದ ಇದೇನು ಅಂಥ ಸಮಸ್ಯೆಯ ವಿಚಾರವೂ ಆಗಿರಲಿಲ್ಲ.
ರಂಗಮ್ಮನ ಮಿರ್ಚಿ ಸಮಾರಾಧನೆ ಸುಮಾರು ಎಂಟೊಂಬತ್ತು ಗಂಟೆವರೆವರೆಗೂ ನಡೆಯುತ್ತಿತ್ತು. ಅಷ್ಟರೊಳಗೆ ಸಂಗಪ್ಪನ ಅಂಗಡಿಯ ಅಂಗಳವೆನ್ನುವುದು ಕಣಕಣದಲ್ಲೂ ಕೇಸರಿ ತುಂಬಿಕೊಂಡ ಪಾನ್ ಪರಾಕುವೀರರ ಲಾಲಾರಸದಿಂದ ಹೋಳಿ ಆಚರಿಸಿರುತ್ತಿತ್ತು. ಜನರೆಲ್ಲ ತಮ್ಮ ತಮ್ಮ ಮಾತು, ಕತೆಗಳನ್ನೆಲ್ಲ ಮುಗಿಸಿಕೊಂಡು ಹೆಂಡತಿ ಮಕ್ಕಳಿಗೆ ಕಟ್ಟಿಸಿಕೊಂಡ ಮಿರ್ಚಿ ಪಾರ್ಸಲ್ ನೊಂದಿಗೆ ಮನೆಗೆ ಹೊರಡಲು ಅನುವಾಗುತ್ತಿದ್ದರು. ರಂಗಮ್ಮ ಮೊದಲು ಗಿರಾಕಿಗಳು ತಿಂದೆಸೆದ ಹಾಳೆಗಳನ್ನೆಲ್ಲ ಗುಡಿಸಿ ರಟ್ಟಿನ ಡಬ್ಬಿಗೆ ತುಂಬಿ ತಿಪ್ಪೆಗೆ ಎಸೆದು ಬರುತ್ತಿದ್ದಳು. ಅದಾದಮೇಲೆ ಡಬರಿ, ಪರಾತ, ಚಮಚಗಳನ್ನು ಲೇಪಣ್ಣ ಶೆಟ್ಟಿಯ ಮನೆಮುಂದಿದ್ದ ಕೈಬೋರಿನ ನೀರಲ್ಲಿ ತೊಳೆದುಕೊಂಡು ಬರುತ್ತಿದ್ದಳು. ಎಲ್ಲ ಒಪ್ಪವಾಗಿದ್ದೇ ತನ್ನ ಗಾಡಿ ತಳ್ಳಿಕೊಂಡು ಊರಹೊರಗಿನ ಮಾಳಗಡ್ಡಿಯಲ್ಲಿದ್ದ ತನ್ನ ಗುಡಿಸಲ ಕಡೆಗೆ ಸಾಗುತ್ತಿದ್ದಳು.
ಈಗ ಮೂವತ್ತೇಳು ಮೂವತ್ತೆಂಟರ ವಯಸ್ಸಿನವಳಾಗಿರಬಹುದಾದ ಅವಳ ಗಂಡ ಹುಸೇನಿ, ಅಡಿವೆಮ್ಮ ಸಾವ್ಕಾರ್ತಿಯ ತೋಟಕ್ಕೆ ತೆಂಗಿನಕಾಯಿ ಕದಿಯಲು ಹೋದಾಗ ಜೇನು ಕಚ್ಚಿಸಿಕೊಂಡು ಸತ್ತನೆಂದು ಕೆಲವರು ಹೇಳುತ್ತಾರೆ. ರಂಗಮ್ಮನನ್ನು ಪ್ರೇಯಸಿಯನ್ನಾಗಿ ಇಟ್ಟುಕೊಳ್ಳಲು ಬಯಸಿದ್ದ ಅಡಿವೆಮ್ಮ ಸಾವ್ಕಾರ್ತಿಯ ಗಂಡ, ಯಾವುದೋ ನಿಗೂಢ ರೋಗ ಬಂದು ಇದ್ದಕ್ಕಿದ್ದಂತೆ ತೀರಿಹೋದ. ಗಂಗೇಗೌಡನೇ ಹುಸೇನಿಯನ್ನು ಕೊಲ್ಲಿಸಿದ ಎಂಬ ಕತೆಯೂ ಚಾಲ್ತಿಯಲ್ಲಿದೆ. ಆದರೆ ಯಾರನ್ನೂ ಅಷ್ಟಾಗಿ ಹಚ್ಚಿಕೊಳ್ಳದ, ತನ್ನ ಪಾಡಿಗೆ ತಾನು ಜಾಲಿಮರದಂತೆ ಬದುಕುತ್ತಿರುವ ರಂಗಮ್ಮನ ಬದುಕು ಕನ್ನೆರುಮಡುವಿನ ಜನರ ಪಾಲಿಗೆ ಅವಳು ಮಾಡುವ ಮಿರ್ಚಿಗಳ ವಿಶಿಷ್ಟ ಪರಿಮಳದಷ್ಟೇ ನಿಗೂಢವಾಗಿ ಉಳಿದಿದೆ. ಸಾಯಂಕಾಲವಾದದ್ದೇ ತನ್ನ ಮಿರ್ಚಿಮಾಡುವ ಸಾಮಾನುಗಳ ತೇರಿನೊಂದಿಗೆ ಹಾಜರಾಗುತ್ತಿದ್ದ ಅವಳು ಅಷ್ಟೊತ್ತಿನವರೆಗೂ ಏನು ಮಾಡುತ್ತಾಳೆ, ಬೇಸರವಾದಾಗ ಯಾರೊಂದಿಗೆ ಮಾತನಾಡುತ್ತಾಳೆ, ತನ್ನ ಕಷ್ಟಗಳನ್ನೆಲ್ಲ ಯಾವ ದೇವರ ಮುಂದೆ ಹಂಚಿಕೊಳ್ಳುತ್ತಾಳೆ, ಹುಷಾರುತಪ್ಪಿದಾಗ ಯಾರಿಂದ ಆರೈಕೆ ಪಡೆಯುತ್ತಾಳೆ ಎಂದು ತಲೆಕೆಡಿಸಿಕೊಳ್ಳುವಂಥ ಹಿತೈಷಿಗಳ್ಯಾರೂ ಅವಳಿಗಿರಲಿಲ್ಲ. ಅದಲ್ಲದೆ ಅವಳು ಯಾರ ಸ್ನೇಹ, ಕಾಳಜಿಯನ್ನೂ ಬಯಸಿದವಳಲ್ಲ. ಎಷ್ಟುಬೇಕೋ ಅಷ್ಟು ಮಾತು, ಎಷ್ಟು ಬೇಕೋ ಅಷ್ಟು ಸ್ನೇಹ. ಹಾಗಂತ ಅವಳು ವ್ಯಾವಹಾರಿಕ ಮನೋಭಾವದವಳು ಅಂತಲೂ ಅಲ್ಲ. ನಾಳೆಗಳ ನಿರೀಕ್ಷೆ ಇಲ್ಲದೆ, ನಾಳೆಗಾಗಿ ಏನನ್ನೂ ಕೂಡಿಡದೆ ಬದುಕುತ್ತಿದ್ದ ಅವಳು ವರ್ಷಕ್ಕೊಮ್ಮೆ ನಡೆಯುವ ಸೋಮನಾಥನ ಜಾತ್ರೆಯ ದಿನ ತನ್ನ ಆ ವರ್ಷದ ದುಡಿಕೆಯನ್ನು ಗುಡಿಯ ಹುಂಡಿಗೆ ಹಾಕಿ ಗುಡಿಯ ಪಕ್ಕದಲ್ಲಿ ಹರಿಯುತ್ತಿರುವ ತುಂಗಭದ್ರೆ ನದಿಯ ದೊಡ್ಡ ಕಾಲುವೆಯಲ್ಲಿ ಕೈತೊಳೆದುಕೊಂಡುಬಿಡುತ್ತಿದ್ದಳು.
ಸಮಾಧಾನದಿಂದಲೇ ಗಿರಾಕಿಗಳನ್ನು ಸಂಭಾಳಿಸುತ್ತಿದ್ದ ರಂಗಮ್ಮ, ಹಿಂದಿನ ಬಾಕಿ ಕೊಡದೆ ಮತ್ತೆ ಮಿರ್ಚಿ ಒಯ್ಯಲು ಬಂದವರಿಗೂ ‘ಯಣ್ಣಾ ಹಳೇದ್ ಉದ್ರಿ ಉಳುದೈತ್ಯಪೋ?’ ಅಂತ ಸಂಕೋಚದಿಂದಲೇ ಕೇಳುತ್ತಿದ್ದಳು. ಯಾರೊಂದಿಗೂ ಜೋರಾಗಿ ಮಾತನಾಡಿದವಳಲ್ಲ. ಜಗಳವಂತೂ ಅವಳ ಮಟ್ಟಿಗೆ ತುಂಬಾ ದೂರದ ಮಾತು. ಆದರೆ ಅಂಥ ಶಾಂತಮೂರ್ತಿಯ ಒಳಗೂ ಒಬ್ಬ ದುರ್ಗೆ ಇದ್ದಾಳೆ ಎಂದು ಕನ್ನೆರುಮಡುವಿನ ಜನತೆಗೆ ಗೊತ್ತಾಗಿದ್ದು ಮಾತ್ರ ಪಂಪ್ ಲಚುಮ ಮಾಡಿದ ಒಂದು ವಿಕೃತ ಸಾಹಸದಿಂದ.
ಹಾಗೆ ನೋಡಿದರೆ ಕನ್ನೆರುಮಡುವಿನ ಎಷ್ಟೋ ಮದುವೆ ಮಾತುಕತೆಗಳು, ಪಂಚಾಯಿತಿಗಳು ಆಗಿದ್ದು, ಕೊಲೆ ಸಂಚುಗಳು ರೂಪುಗೊಂಡದ್ದು, ಎಷ್ಟೋ ಗಂಡಂದಿರಿಗೆ ತಮ್ಮ ಹೆಂಡತಿಯರ ಗೆಣೆಯರ ವಿಷಯಗಳು ಗೊತ್ತಾಗಿ ಹಲವು ಮನೆತನಗಳ ಚರಿತ್ರೆಗಳು ರಕ್ತಸಿಕ್ತ ಅಂತ್ಯ ಕಾಣಲು ಕಾರಣವಾಗಿದ್ದು ಕೂಡ ರಂಗಮ್ಮನ ಮಿರ್ಚಿ ಪರಿಮಳದ ಆವರಣದಲ್ಲಿಯೇ.
ಕನ್ನೆರುಮಡುವಿನ ಪಾಲಿಗೆ ಏಕೈಕ ಮೆಡಿಕಲ್ ಸ್ಟೋರ್ ಆಗಿರುವ ಸಿದ್ಧಿವಿನಾಯಕ ಮೆಡಿಕಲ್ ಸ್ಟೋರ್ ಮುಂದಿನ ಕಟ್ಟೆಗೆ ಕೂತು ನಾರಾಯಣಿಯಿಂದ ಹೊಸ ಹೊಸ ವಿಡಿಯೋಗಳನ್ನು ಡೌನ್ಲೋಡ್ ಮಾಡಿಸಿಕೊಂಡು ನೋಡುವುದನ್ನೇ ತನ್ನ ಜೀವನದ ಪರಮಉದ್ಯೋಗ ಮಾಡಿಕೊಂಡಿರುವ ಪಂಪ್ ಲಚುಮನ ನಿಜವಾದ ಹೆಸರು ಲಕ್ಷ್ಮಣ. ಊರತುಂಬ ಗೆಣತಿಯರನ್ನು ಮಾಡಿಕೊಂಡು ಮೆರೆಯುತ್ತಿರುವ, ತನಗೊಬ್ಬ ಮಗ ಇದ್ದಾನೆ ಎಂಬುದನ್ನೇ ಮರೆತು ಗೂಳಿಯಂತೆ ಸಿಕ್ಕಸಿಕ್ಕಲ್ಲೆಲ್ಲ ಮೆಯ್ದುಕೊಂಡು ಓಡಾಡುತ್ತಿರುವ ಮಲ್ಲರುದ್ರಪ್ಪನ ಏಕೈಕ ಮಗ, ತನ್ನ ಆರನೇ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡ, ನೋಡಲು ಹಂಚಿಕಡ್ಡಿಯಂತೆ ಕಾಣುವ, ಎಸ್.ಎಸ್.ಎಲ್.ಸಿ ಪಾಸಾಗಿದ್ದರೆ ಈಗ ಬಿ.ಎ ಮುಗಿಸಿರುತ್ತಿದ್ದ ಲಕ್ಷ್ಮಣ ಕನ್ನೆರುಮಡುವಿನ ತುಂಬ ಪಂಪ್ ಲಚುಮನೆಂದೇ ಖ್ಯಾತಿಯಾಗಿದ್ದಾನೆ. ಹಾಗೆ ನೋಡಿದರೆ ಅವನನ್ನು ಅರ್ಧ ಹಾಳು ಮಾಡಿದ್ದು ಮೆಡಿಕಲ್ ಶಾಪ್ ನ ನಾರಾಯಣಿಯೇ ಎನ್ನಬೇಕು. ಇವನಿಗೆ ”ಅಂಥ” ವಿಡಿಯೋಗಳನ್ನು ನೋಡುವ ರುಚಿ ಹತ್ತಿಸಿದ್ದಲ್ಲದೆ ಅರ್ಜೆಂಟ್ ಗೆ ಬೇಕಾಗಬಹುದೆಂದು ಒಂದೆರಡು ಕಾಂಡಮ್ ಪಾಕೆಟ್ ಗಳನ್ನೂ ಕೊಟ್ಟಿದ್ದ. ಲಚುಮ ಯಾವಾಗಲೂ ಅವೆರಡು ಪಾಕೆಟ್ ಗಳನ್ನು ತನ್ನ ಆರ್.ಕೆ.ಜಿ ಚಡ್ಡಿಯ ಜೇಬಿನಲ್ಲಿಟ್ಟುಕೊಂಡು, ಲುಂಗಿ ಮೇಲೇರಿಸಿಕೊಂಡು, ಅರ್ಧ ತೊಡೆ ಕಾಣಿಸಿಕೊಂಡು ತಿರುಗುತ್ತಿದ್ದ. ಎಲ್ಲಾದರೂ ಚಾನ್ಸ್ ಸಿಕ್ಕರೆ ತನ್ನ ಆಪ್ತಮಿತ್ರ ಕೊಟ್ಟಿರೋ ಹತ್ಯಾರುಗಳನ್ನು ಪ್ರಯೋಗಿಸಬೇಕೆಂದು ಹಾತೊರೆಯುತ್ತಿದ್ದ ಅವನ ಕೈಗೆ ಯಾವುದೇ ಬ್ಯಾಟಿಯೂ ಸಿಕ್ಕಿರಲಿಲ್ಲ. ಅದಲ್ಲದೆ ಇವನ ಮೂರೋತ್ತೂ ಕಬಡ್ಡಿ ನೋಡುವ ಚಾಳಿಯ ಬಗ್ಗೆ ಊರಿಡೀ ಜನರಿಗೆ ಗೊತ್ತಿದ್ದರಿಂದ ಇವನು ತಮ್ಮ ಓಣಿಯ ಬೀದಿಯಲ್ಲಿ ಸುಳಿದಾಡಿದರೂ ಸಾಕು ಹಿರಿಯರು ನಿಲ್ಲಿಸಿ ಕೇಳುತ್ತಿದ್ದರು ‘ಯಾಕ್ ಲಚುಮಾ ಇತ್ತಾಗ್ ಬಂದಿ?’ ಎಂದು. ಅಷ್ಟರಮಟ್ಟಿಗೆ ಲಚುಮನ ಲೂಸ್ ಲಾಡಿ ವಿಷಯ ಹಬ್ಬಿತ್ತು. ನಾರಾಯಣಿ ಕೊಟ್ಟ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಲು ತಕ್ಕ ಅವಕಾಶ ಸಿಗದೆ ಹತಾಶನಾಗಿದ್ದ ಲಚುಮ ಹಳ್ಳದ ಮರೆಯ ಬೇಲಿಯ ವಿವಿಧ ಸ್ಥಳಗಳಲ್ಲಿ ಪಂಪ್ ಹೊಡೆದುಕೊಳ್ಳುವ ಮೂಲಕ ತನ್ನ ಅಸಹಾಯಕತೆಯನ್ನು ಮೀರುವ ಸಾಹಸ ಮಾಡುತ್ತಿದ್ದ.
ಅಂಥವನು ಅವತ್ತು ಅದ್ಯಾವ ವೀಡಿಯೋ ನೋಡಿಕೊಂಡು, ಪಂಪ್ ಹೊಡೆದುಕೊಳ್ಳದೆ ಹಾಗೇ ಬಂದಿದ್ದನೋ ಏನೋ ಗದ್ದಲದಲ್ಲಿ ಯಾರಿಗೂ ಗೊತ್ತಾಗುವುದಿಲ್ಲ ಎಂದುಕೊಂಡು ರಂಗಮ್ಮನ ಪೃಷ್ಠಕ್ಕೆ ಕೈ ತಾಕಿಸುವ ಸಾಹಸಕ್ಕೆ ಕೈ ಹಾಕಿದ್ದಾನೆ. ಗಿರಾಕಿಗಳು ಕಂಡಾಪಟ್ಟೆ ಇದ್ದದ್ದರಿಂದ ರಂಗಮ್ಮನಿಗೆ ಮೊದಮೊದಲು ಏನೂ ಅನ್ನಿಸಿರಲಿಲ್ಲ. ಮರಪಟ್ಟಿಲೆ ಯಾರದೋ ಕೈ ತಾಕುತ್ತಿದೆ ಎಂದುಕೊಂಡಿದ್ದಾಳೆ. ಆದರೆ ಈ ಚೇಷ್ಟೆ ಮತ್ತೆ ಮತ್ತೆ ಪುನರಾವರ್ತನೆಯಾದಾಗ ಅನುಮಾನ ಬಂದಿದೆ, ಆಗ ಹಿಂದಕ್ಕೆ ನೋಡಿದಾಗ ಪಂಪ್ ಲಚುಮ ತನ್ನ ಪಾನ್ ಪರಾಕಿನ ಕೆಂಪುಶೋಭಿತ ಹಲ್ಲುಗಳನ್ನು ಇಷ್ಟಗಲ ಕಿಸಿದು ತೋರಿಸಿದ್ದಾನೆ. ಆಗ ಅವಳಿಗೆ ಇಷ್ಟರವರೆಗೂ ತನ್ನ ಪೃಷ್ಠಕ್ಕೆ ಕೈತಾಗಿಸುತ್ತಿದ್ದ ‘ಅಡಾವುಡಿ’ ಇವನೇ ಎಂಬುದರಲ್ಲಿ ಅನುಮಾನ ಉಳಿದಿಲ್ಲ. ಹಾಗನ್ನಿಸಿದ್ದೇ ತಡ ಬಡಾಬಡಾ ಕಾಲಾಗಿನ ಕೆರುವು ತೆಗೆದು ಅವನ ಮುಖಕ್ಕೆ ರಪ ರಪ ಹೊಡೆಯಲು ಶುರು ಮಾಡಿದಳು. ಅವನು ‘ಯಾಕಂಗೇ? ಯಾಕಂಗೇ?’ ಅಂತ ಕೇಳುತ್ತಿದ್ದಾನೆ. ಆದರೆ ಅವಳು ಅವನ ಯಾವ ಮಾತುಗಳನ್ನೂ ಲೆಕ್ಕಿಸದೆ ಅವನನ್ನು ಹೊಡೆಯುತ್ತಲೇ ಇದ್ದಳು. ಅವನನ್ನು ನಿಲ್ಲಿಸಿ ಬಡಿದದ್ದು ಆಕೆಗೆ ಸಮಾಧಾನ ತಂದಿಲ್ಲ ಎನಿಸುತ್ತೆ. ಹಾಗಾಗಿ ಕೆಡವಿ ಬೀಳಿಸಿ ಕುಂಬಾರ ಮಣ್ಣು ತುಳಿದಂತೆ ತುಳಿಯತೊಡಗಿದಾಗ ಮಾತ್ರ ಎಲ್ಲರೂ ಗಾಬರಿಯಾದರು. ಒಂದಿಬ್ಬರು ಹಿರಿಯರು ‘ಸಾಕ್ ಬುಡು ರಂಗಮ್ಮ? ಆ ಸುಳೆಮಗ ಸತ್ ಗಿತ್ ಹೋಗ್ಯಾನ್ ಇಂದಡಿಗೆ’ ಎಂದು ಸಮಾಧಾನ ಮಾಡಿ ನಿಲ್ಲಿಸಿದರು. ಆದರೂ ಆಕೆಯ ಸಿಟ್ಟು ಇಳಿದಂತಿರಲಿಲ್ಲ. ಪಂಪ್ ಲಚುಮನನ್ನು ವಾಚಾಮಗೋಚರವಾಗಿ ಬಯ್ಯತ್ತಲೇ ಇದ್ದಳು.
ಅದೇ ಕೊನೆ ಲಚುಮ ರಂಗಮ್ಮನ ಸ್ಟಾಲ್ ಕಡೆ ಬರುವುದಿರಲಿ ವೀಡಿಯೋ ನೋಡುವುದನ್ನೂ ಬಿಟ್ಟುಬಿಟ್ಟ. ಹೆಚ್ಚಾನೆಚ್ಚು ಅವರ ಮಾಗಣಿ ಹೊಲದ ಶೆಡ್ಡಿನಲ್ಲೇ ಕಾಲ ಕಳೆಯತೊಡಗಿದ. ಅದಾಗಿ ಒಂದೆರಡು ತಿಂಗಳಿಗೆ ಅವನು ಎಲ್ಲರಿಗೂ ಗಾಬರಿಯಾಗುವಂತೆ ಜಾತ್ರೆ, ಶ್ರಾವಣ, ಶಿವರಾತ್ರಿಗಳಲ್ಲಿ ಭಾವಪರವಶನಾಗಿ ಭಜನಾಪದ ಹಾಡಲು ಶುರು ಮಾಡಿಬಿಟ್ಟ. ಅದಲ್ಲದೆ ಅವನು ಆ ವರ್ಷದ ದಸರಾದಲ್ಲಿ ತೆಗೆದುಕೊಂಡ ನಿರ್ಧಾರವಂತೂ ಎಲ್ಲರ ದಿಗ್ಭ್ರಮೆಗೆ ದೂಡಿತ್ತು. ‘ಬನ್ನಿ’ ಕೊಡುವ ದಿನದಂದು ಅವನು ಪ್ರತಿ ಮನೆಗೂ ಹೋಗಿ ಸಣ್ಣವರು ದೊಡ್ಡವರು ಎನ್ನದೆ ಎಲ್ಲರಿಗೂ ಕಾಲುಬಿದ್ದು ನಮಸ್ಕಾರ ಮಾಡಿದ. ‘ನೀವೆಲ್ಲ ಇನ್ಮ್ಯಾಲಿಂದ ನನಿಗಿ ತಂದಿತಾಯಿ ಸಮಾನ’ ಎಂದ. ಆದಾದಮೇಲೆ ಅವನು ತನ್ನ ಮನೆ ಬಿಟ್ಟು ಪಂಪಾಪತಿ ತಾತನ ಮಠದಲ್ಲೇ ಇರತೊಡಗಿದ. ಅವಾಗಿನಿಂದ ಜನರೆಲ್ಲ ‘ರಂಗಮ್ಮ ಅವತ್ತು ಒದ್ಕಂತ ಒದ್ಕಂತ ಲಚುಮನ ಬೀಜಾ ತುಳುದುಬುಟ್ಟಾಳ. ಅದ್ಕಾ ಅವ್ನು ಸನ್ಯಾಸಿ ಆಗ್ಯಾನ’ ಎಂದು ಮಾತನಾಡಿಕೊಳ್ಳತೊಡಗಿದರು. ಆದರೆ ಅದರ ಕಾರಣ ಅವರೆಂದುಕೊಂಡಷ್ಟು ಸರಳ ಇರಲಿಲ್ಲ.
ಅವತ್ತು ಲಚುಮನನ್ನು ಒದ್ದು ಬಂದ ದಿನದಿಂದ ರಂಗಮ್ಮನ ಬದುಕಿನಲ್ಲಿ ವಿಚಿತ್ರ ಬದಲಾವಣೆಗಳು ಘಟಿಸತೊಡಗಿದವು. ಅವತ್ತಾದ ಲಫಡಾದಿಂದ ಬೇಸತ್ತು ಎಂದಿಗಿಂತ ಬೇಗನೇ ಮನೆಗೆ ಬಂದ ಅವಳಿಗೆ ಯಾವತ್ತೂ ಇರದಂಥ ವಿಪರೀತ ತಲೆನೋವು. ನಿದ್ದೆಬಾರದೆ ನಸುಕಿನ ನಾಲ್ಕರವರೆಗೆ ಹೊರಳಾಡುತ್ತಲೇ ಇದ್ದಳು. ಆಮೇಲೆ ಸಣ್ಣಗೆ ಜೊಂಪು ಹತ್ತಿತು. ಎಚ್ಚರವಾದಾಗ ಮಟಮಟ ಮಧ್ಯಾಹ್ನ. ಹಾಸಿಗೆಯಿಂದ ಮೇಲೇಳಲಿಕ್ಕೆ ನೋಡಿದರೆ ಒಂದು ಕಾಲು ಮೇಲಕ್ಕೆ ಏಳುತ್ತಲೇ ಇಲ್ಲ. ಅದಕ್ಕೆ ಹೆಬ್ಬಾವು ಸುತ್ತಿಕೊಂಡಿದೆಯೇನೋ ಎಂಬಷ್ಟು ಭಾರ. ಒಂದೇ ಕಾಲಮೇಲೆ ಭಾರ ಹಾಕಿ ಮಲಗಿರಬೇಕು, ಅದಕ್ಕೇ ಕಾಲಿಗೆ ಜೋಮು ಹಿಡಿದಿದೆ ಎಂದುಕೊಂಡಳು. ಆದರೆ ಎಷ್ಟೊತ್ತಾದರೂ ಕಾಲು ಮೇಲಕ್ಕೆ ಏಳದಿದ್ದಾಗ ನಿಜಕ್ಕೂ ಕಾಲಿಗೆ ಹೆಬ್ಬಾವು ಸುತ್ತಿಕೊಂಡಿದೆಯೇನೋ ಎಂಬ ಅನುಮಾನ ಬರತೊಡಗಿತು. ತುಂಬಾ ಹೊತ್ತಿನವರೆಗೆ ಅವಳ ಕಾಲಿಗೆ ಸುತ್ತಿಕೊಂಡಿದ್ದ ಹೆಬ್ಬಾವು ಬಿಡಲೇ ಇಲ್ಲ. ಕಡೆಗೂ ಅವಳು ಇನ್ನಿಲ್ಲದ ತ್ರಾಸು ಪಟ್ಟುಕೊಂಡು ಹಲ್ಲುಕಚ್ಚಿಕೊಂಡು, ತಿಣುಕಾಡಿ ಅದರ ಕಾಲು ಬಿಡಿಸಿಕೊಂಡು ಮೇಲೇಳುವ ಹೊತ್ತಿಗೆ ಹುಟ್ಟಿದ ಎರಡೇ ದಿನಕ್ಕೆ ಕಣ್ಣುಮುಚ್ಚಿದ ತನ್ನ ಮಗನ ನೆನಪಾಗಿ ದಳ ದಳ ಕಣ್ಣೀರು ಉದುರಿದ್ದವು.
ಅವತ್ತು ಎಂದಿಗಿಂತ ಚೂರು ತಡವಾಗಿಯೇ ಬಸ್ಸ್ಟ್ಯಾಂಡ್ಗೆ ಬಂದಳು. ಅಷ್ಟೊತ್ತಿಗಾಗಲೇ ಜನ ಗುಂಪಾಗಿ ಸೇರಿ ಕಾಯುತ್ತ ನಿಂತಿದ್ದರು. ರಂಗಮ್ಮ ಗಾಡಿ ನಿಲ್ಲಿಸಿ, ಎಲ್ಲ ತಯಾರಿ ಶುರು ಮಾಡಿಕೊಂಡಳು. ಮೊದಲ ಸುತ್ತಿನ ಮಿರ್ಚಿಗಳನ್ನು ಕರಿದು ಪರಾತಕ್ಕೆ ಸುರುವಿದಳು. ದಿನವೂ ಬರುತ್ತಿದ್ದ ಮಿರ್ಚಿಯ ಪರಿಮಳಕ್ಕೆ ಬೇರೆನೋ ಸೇರಿಕೊಂಡಿದೆ ಎನ್ನಿಸಿತು. ಮಿರ್ಚಿ ಕರಿದದ್ದೇ ಜನ ಅವಳ ಸುತ್ತ ಸೇರಿ ‘ನಂಗ್ಯೊಂದ್ ಪ್ಲೇಟ್, ನಂಗ್ಯೊಂದ್ ಪ್ಲೇಟ್ ರಂಗಮ್ಮ’ ಅಂತ ಪೈಪೋಟಿಗಿಳಿದರು. ಯಾಕೋ ಅವಳಿಗೆ ಉಸಿರುಗಟ್ಟಿದಂತಾಯಿತು. ಬೆನ್ನು ಬಿಸಿಯಾಗತೊಡಗಿತು. ಹೆಬ್ಬಾವು ಮತ್ತೆ ಬಂದು ಕಾಲಿಗೆ ಸುತ್ತಿಕೊಳ್ಳತೊಡಗಿದೆಯೇನೋ ಎಂಬಂತೆ ಕಾಲುಗಳೆರಡು ಬಿಗಿಯಾಗತೊಡಗಿದವು. ‘ಸ್ವಲ್ಪ ಹಿಂದಕ್ ಸರ್ಕರೀ ಅಣ್ಣ? ಎಲ್ಲರಿಗಿ ಕೊಡ್ತೀನಿ’ ಎಂದು ಎಲ್ಲರನ್ನೂ ಸ್ವಲ್ಪ ದೂರ ನಿಲ್ಲಿಸಿದಳು. ತನ್ನ ಹಿಂದೆ ನಿಂತಿದ್ದವರನ್ನೆಲ್ಲ ಮುಂದೆ ಬರುವಂತೆ ಕೇಳಿಕೊಂಡಳು. ಈಗ ಚೂರು ಹಗುರ ಅನ್ನಿಸಿತು. ಮಿರ್ಚಿ ಕಟ್ಟಿಕೊಡತೊಡಗಿದಳು. ಎಲ್ಲರಿಗಿಂತ ಮೊದಲು ಪ್ಲೇಟ್ ಮಿರ್ಚಿ ತೆಗೆದುಕೊಂಡು ತಿಂದ ಮೂಲಿಮನಿ ಸ್ವಾಮ ಬಂದು ‘ರಂಗಮ್ಮ ಇವತ್ ಮಿರ್ಚಿ ಕಂಡಂಗ್ ಖಾರ ಆಗ್ಯಾವಲಾ..?’ ಎಂದ. ಉಳಿದವರೂ ಅದಕ್ಕೆ ಹ್ಞೂಂಗುಟ್ಟಿದರು.
ಇವತ್ತು ಕೂಡ ಎಂದಿಗಿಂತ ಬೇಗನೇ ಗಾಡಿ ತಳ್ಳಿಕೊಂಡು ಬಂದಳು ರಂಗಮ್ಮ.
ಮನೆಗೆ ಬಂದವಳೇ ತನ್ನ ಹಳೆಯ ಟ್ರಂಕಿನಲ್ಲಿದ್ದ ಹುಸೇನಿಯ ಫೋಟೋ ತೆಗೆದು ಎಷ್ಟೋ ಹೊತ್ತಿನವರೆಗೆ ಅದನ್ನ ಕೈಯಿಂದ ಸವರತೊಡಗಿದಳು. ದಿನಾ ಸರಹೊತ್ತಲ್ಲಿ ಬಂದು ಎಚ್ಚರಿಸಿ ಉಳಿದ ಅನ್ನ ಹಾಕಿಸಿಕೊಂಡು ತಿಂದು ಹೋಗುವ ‘ಕರಿಯ’ ಬಂದು ಬೊಗಳಿದಾಗಲೇ ತಾನು ಅಡುಗೆ ಮಾಡಿಕೊಳ್ಳದಿರುವುದು ನೆನಪಾಯಿತು ಅವಳಿಗೆ. ರೊಟ್ಟಿಪುಟ್ಟಿಯಲ್ಲಿ ಉಳಿದಿದ್ದ ಎರಡು ಒಣರೊಟ್ಟಿಗಳಲ್ಲಿ ಒಂದನ್ನು ಒಯ್ದು ಕರಿಯನಿಗೆ ಕೊಟ್ಟಳು. ಇನ್ನೊಂದನ್ನು ಅವನ ಮುಂದೆಯೇ ಕುಳಿತು, ಅವನು ಕಡಿದಂತೆ ತಾನೂ ಹಲ್ಲಿನಿಂದ ಕಡಿದು ತಿನ್ನತೊಡಗಿದಳು, ಕಡಿಯುತ್ತ ಕಡಿಯುತ್ತ ಆವೇಶ ಬಂದಂತಾಯಿತು. ರೊಟ್ಟಿ ಮುಗಿದುಹೋಗಿ ಎಷ್ಟೊತ್ತಿನವರೆಗೂ ಕಡಿಯುತ್ತಲೇ ಇದ್ದಳು, ಕರಿಯನ ತಣ್ಣನೆಯ ಮೂತಿ ಕೈಗೆ ತಾಕಿದಾಗಲೇ ಅವಳಿಗೆ ಎಚ್ಚರವಾಗಿದ್ದು. ಆದರೆ ಅಷ್ಟೊತ್ತಿಗಾಗಲೇ ಬಾಯಿತುಂಬ ರಕ್ತತುಂಬಿಕೊಂಡು ತುಟಿಯಿಂದ ತಾಂಬೂಲದಂತೆ ಜಿನುಗತೊಡಗಿತ್ತು. ಗಾಬರಿಯಿಂದ ಬಚ್ಚಲು ತಟ್ಟಿಮರೆಗೆ ಹೋಗಿ ಬಾಯಿ ತುಂಬ ನೀರು ತುಂಬಿಕೊಂಡು ಮುಕ್ಕಳಿಸಿದಳು, ಆದರೆ ಅವಳಿಗೆ ಆಶ್ಚರ್ಯವಾಗುವ ರೀತಿಯಲ್ಲಿ ಮೈಮನ ಹಗುರ ಎನ್ನಿಸತೊಡಗಿತು. ಬೇಗನೇ ನಿದ್ದೆಯೂ ಬಂತು.
ಮರುದಿನ ಎಚ್ಚರವಾದಾಗ ಮಟಮಟ ಮಧ್ಯಾಹ್ನ. ಇವತ್ತು ಕೂಡ ನೆನ್ನೆಯ ಪಾಡೇ ಎದುರಾಯಿತು. ಹೆಬ್ಬಾವು ಬೇಗ ಅವಳನ್ನು ಮೇಲೇಳಲು ಬಿಡಲೇ ಇಲ್ಲ. ಅಂತೂ ಹೇಗೋ ಕಷ್ಟಪಟ್ಟು ಎದ್ದವಳೇ ಸೀದಾ ಗುಡಿಸಲ ಮುಂದಿರುವ ತಟ್ಟಿಮರೆಯಲ್ಲಿ ಕುಳಿತು ದಬದಬ ನೀರು ಸುರುವಿಕೊಂಡಳು. ಒದ್ದೆಬಟ್ಟೆಯಲ್ಲೇ ಗುಡಿಸಲೊಳಕ್ಕೆ ಬಂದು ಟ್ರಂಕು ತೆಗೆದಳು, ಬಳಸುವುದನ್ನು ಬಿಟ್ಟು ಎಷ್ಟೋ ವರ್ಷಗಳಾಗಿದ್ದ, ಒಮ್ಮೆ ಹುಲಿಗೆಮ್ಮನ ಜಾತ್ರೆಗೆ ಹೋಗಿದ್ದಾಗ ಹುಸೇನಿ ಕೊಂಡುಕೊಂಡು ಬಂದಿದ್ದ ತಗಡಿನ ಫ್ರೇಮಿನ ಕನ್ನಡಿಗಾಗಿ ಹುಡುಕಿದಳು. ಮೂಲೆಯಲ್ಲಿ ಬಿದ್ದುಕೊಂಡಿದ್ದ ಅದರ ಕಟ್ಟುಗಳಿಗೆ ಜಂಗು ಹಿಡಿದುಹೋಗಿತ್ತು. ಒದ್ದೆಸೀರೆಯ ಅಂಚಿನಿಂದ ಒರೆಸಿದಾಗ ಫಳ ಫಳ ಹೊಳೆಯತೊಡಗಿತು. ಅದರಲ್ಲಿ ಕಂಡ ಬಟ್ಟಲು ಕಂಗಳ ಸುಂದರಿಯನ್ನು ನೋಡಿ ಒಂಥರ ಎನಿಸಿತು.
ಧೂಳುಮೆತ್ತಿಕೊಂಡಿದ್ದ ಸೆರಗನ್ನೇ ಬಾಯಿಗೆ ಇಟ್ಟುಕೊಂಡು ನಗು ತಡೆದುಕೊಂಡಳು. ಆ ಕನ್ನಡಿಯನ್ನು ಮಗುವೇನೋ ಎಂಬಂತೆ ಜೋಪಾನವಾಗಿ ಎತ್ತಿಕೊಂಡು ಬಂದು ಮೊಳೆಯೊಂದಕ್ಕೆ ನೇತುಹಾಕಿದಳು. ಆ ಮಗುವನ್ನು ಮತ್ತೊಮ್ಮೆ ನೋಡುವ ಮನಸ್ಸಾಯಿತು. ಈ ಸಲ ನೋಡಿದಾಗ ತನ್ನ ಗದ್ದದ ಮೇಲಿರುವ ಹಸಿರು ನಕ್ಷತ್ರಮಚ್ಚೆ ಕಣ್ಣಿಗೆ ಬಿತ್ತು. ‘ನನಿಗೆಸ್ಟರೇ ವಯ್ಸಾದ್ರೂ ಈ ಖೋಡಿಗ್ ವಯ್ಸಾಗಲ್ ಅನ್ಸತ್? ಈಗ ಸೈತ ಹಂಗಾ ಐತಿ’ ಎಂದು ತನಗೆ ತಾನೇ ಮಾತಾಡಿಕೊಂಡು ಕೊಕ್ ಕೊಕ್ ಎಂದು ನಗತೊಡಗಿದಳು. ನಗುತ್ತ ನಗುತ್ತ ಅಳುವಿನ ಅಂಚಿಗೆ ತಲುಪಿದಳು.
ನಾಳೆಗಳ ನಿರೀಕ್ಷೆ ಇಲ್ಲದೆ, ನಾಳೆಗಾಗಿ ಏನನ್ನೂ ಕೂಡಿಡದೆ ಬದುಕುತ್ತಿದ್ದ ಅವಳು ವರ್ಷಕ್ಕೊಮ್ಮೆ ನಡೆಯುವ ಸೋಮನಾಥನ ಜಾತ್ರೆಯ ದಿನ ತನ್ನ ಆ ವರ್ಷದ ದುಡಿಕೆಯನ್ನು ಗುಡಿಯ ಹುಂಡಿಗೆ ಹಾಕಿ ಗುಡಿಯ ಪಕ್ಕದಲ್ಲಿ ಹರಿಯುತ್ತಿರುವ ತುಂಗಭದ್ರೆ ನದಿಯ ದೊಡ್ಡ ಕಾಲುವೆಯಲ್ಲಿ ಕೈತೊಳೆದುಕೊಂಡುಬಿಡುತ್ತಿದ್ದಳು.
ಅವತ್ತು ರಾತ್ರಿ ರಂಗಮ್ಮನಿಂದ ಒದೆಸಿಕೊಂಡು ಬಂದ ಲಚುಮನನ್ನು ಅವನಪ್ಪ ಬಾರುಕೋಲಿನಿಂದ ದನಕ್ಕೆ ಬಡಿಯುವಂತೆ ಬಡಿದ. ರಕ್ತಸಿಕ್ತ ಮೊಣಕಾಲು ಮಡಿಸಿಕೊಂಡು, ಬಾರು ಬಿದ್ದ ಬೆನ್ನು ಒರಗಿಸಿ ನೆಲ್ಲುಚೀಲ ಒಟ್ಟುವ ಕೋಣೆಯಲ್ಲಿ ಎಷ್ಟೋ ಹೊತ್ತು ಪ್ರಜ್ಞೆತಪ್ಪಿ ಬಿದ್ದಿದ್ದ ಲಚುಮನನ್ನು ಎಬ್ಬಿಸಲಿಕ್ಕೆ ಇನ್ನೊಂದು ಜೀವವೂ ಇರಲಿಲ್ಲ ಆ ದೊಡ್ಡ ಮನೆಯಲ್ಲಿ. ಮರುದಿನ ಬೆಳಗಾಗುವವರೆಗೂ ಹಾಗೇ ಬಿದ್ದುಕೊಂಡಿದ್ದ. ಎಚ್ಚರವಾದಾಗ ಕುಂಟುತ್ತ ಅಡುಗೆ ಮನೆಗೆ ಹೋಗಿ ಅರಿಸಿನ ಡಬ್ಬಿಗೆ ಕೈ ಹಾಕಿ ಹಿಡಿ ಅರಿಶಿಣ ತೆಗೆದುಕೊಂಡು ಬೆನ್ನಿಗೆ, ಮೊಣಕಾಲಿಗೆ ಸವರಿಕೊಂಡ. ಚೂರು ಹಿತವೆನಿಸಿತು. ದನದ ಬಂಕದ ಕಡೆಯಿಂದ ಬಂದ ‘ಹರ್ಯಾ ಹರ್ಯಾ’ ಸದ್ದು ಕೇಳಿ ಒಂದು ಕ್ಷಣ ಬೆಚ್ಚಿಬಿದ್ದ. ಅಪ್ಪ ಎತ್ತುಕಟ್ಟಿಕೊಂಡು ಹೊಲಕ್ಕೆ ಹೊರಟಿರುವುದು ಖಾತ್ರಿಯಾಯಿತು. ಹೊಟ್ಟೆ ಚುರುಗುಟ್ಟುತ್ತಿರುವುದು ಗಮನಕ್ಕೆ ಬಂತು. ಅಡುಗೆಮನೆಯೊಳಕ್ಕೆ ಹೋದ ಅವನಿಗೆ ಆಶ್ಚರ್ಯವಾಗುವ ರೀತಿ ಅವರಪ್ಪ ಮೊದಲ ಬಾರಿಗೆ ತಾನೇ ಅನ್ನ ಬೇಯಿಸಿಟ್ಟಿದ್ದ. ಸಾರನ್ನೂ ಮಾಡಿಟ್ಟಿದ್ದ. ಒಂದು ತಟ್ಟೆಗೆ ಅನ್ನ ಸಾರು ಸುರುವಿಕೊಂಡು ಗಬಗಬ ತಿಂದ. ಯಾಕೋ ಮೊದಲ ಬಾರಿಗೆ ಹೊಟ್ಟೆತುಂಬ ಊಟ ಮಾಡಿದೆ ಅನ್ನಿಸಿತು. ತಟ್ಟೆಯಲ್ಲಿ ಅನ್ನ ಇನ್ನೂ ಇರುವಾಗಲೇ ಕಣ್ಣು ನಿದ್ದೆಗೆಳೆಯತೊಡಗಿದವು. ಬಂಕದಲ್ಲಿರುವ ಹೊರಸಿಗೆ ಬಂದು ಅಡ್ಡಾದ. ನಿದ್ದೆ ಹತ್ತಿತು.
ನಿದ್ದೆ ಹೋಗಿ ಹದಿನೈದು ನಿಮಿಷವೂ ಆಗಿಲ್ಲ, ಕೆಟ್ಟ ಕನಸುಬಿದ್ದು ಚಿಟ್ ಅಂತ ಚೀರಿಕೊಂಡು ಎಚ್ಚರಗೊಂಡ. ಕಪಾಳ ಕೆಂಪಾಗುವಂತೆ ರಪ ರಪ ಹೊಡೆದುಕೊಳ್ಳತೊಡಗಿದ. ನಾಲಗೆಯನ್ನು ಲುಂಗಿಯಿಂದ ಒರೆಸಿಕೊಳ್ಳತೊಡಗಿದ. ಬಚ್ಚಲುಮನೆಗೆ ಹೋಗಿ ವಾಂತಿ ಮಾಡಿಕೊಂಡ. ಮುಷ್ಟಿತುಂಬ ಇದ್ದಿಲು ಬಾಯಿಗಿಟ್ಟುಕೊಂಡು ಕರಕರ ಕಡಿದು, ಹಲ್ಲುಜ್ಜಿಕೊಂಡ. ಬಾಯಿಮುಕ್ಕಳಿಸಿದ. ದಬದಬ ನೀರು ಸುರುವಿಕೊಂಡ. ಆದರೆ ಅವನು ಕಂಡು ಬೆಚ್ಚಿಬಿದ್ದ ಆ ಭಿಭತ್ಸ ಕನಸಿನ ಒಡೆದ ಹಾಲಿನಂಥ ವಾಸನೆ ಅವನ ಮೂಗು, ಬಾಯಿ, ನಾಲಗೆ, ರಕ್ತವನ್ನೆಲ್ಲ ಸೇರಿಕೊಂಡಿದೆಯೇನೋ ಎಂಬಂತೆ ಅವನಿಂದ ದೂರ ಹೋಗಲೊಲ್ಲದು. ಸ್ನಾನ ಮುಗಿಸಿ ಮನೆಯಿಂದ ಹೊರಬಿದ್ದ. ಆಗಲೂ ಆ ವಾಸನೆ ಅವನನ್ನು ಹಿಂಬಾಲಿಸತೊಡಗಿತು. ಅದರಿಂದ ತಪ್ಪಿಸಿಕೊಳ್ಳಲೆಂಬಂತೆ ಓಡತೊಡಗಿದ. ಓಡುತ್ತ ಓಡುತ್ತ ತಮ್ಮ ಮಾಗಣಿ ಹೊಲಕ್ಕೆ ಬಂದ. ಅಷ್ಟೊತ್ತಿಗೆ ಬಟ್ಟೆಯೆಲ್ಲ ಬೆವರಿನಿಂದ ತೊಯ್ದು ತೊಪ್ಪೆಯಾಗಿತ್ತು. ಕೈಕಾಲೆಲ್ಲ ಸೋತು, ಗಂಟಲೆಲ್ಲ ಒಣಗಿಹೋಗಿತ್ತು. ಶೆಡ್ಡಿಗೆ ಹೋಗಿ ಪಂಪ್ಸೆಟ್ ಆನ್ ಮಾಡಿದ. ಬೋರ್ನ ಬಾಯಿಗೆ ಬಾಯಿಟ್ಟು ಹೊಟ್ಟೆತುಂಬುವವರೆಗೆ ನೀರು ಕುಡಿದ. ಅಲ್ಲೇ ಕಡಿಮಿ ಮೇಲೆ ಅಡ್ಡಾದ. ನಿದ್ದೆ ಹತ್ತಿತು. ಮತ್ತದೇ ಒಡೆದ ಹಾಲಿನ ವಾಸನೆಯ ಕನಸು ಬಿದ್ದು ಚಿಟ್ಟೆಂದು ಚೀರಿಕೊಂಡು ಎದ್ದಾಗ ಕತ್ತಲಾಗಿತ್ತು. ಬಾಯಿತುಂಬಾ ಒಡೆದ ಹಾಲು ತುಂಬಿಕೊಂಡಿರುವಂತೆ ದುರ್ನಾತ. ಸಹಿಸಲಸಾಧ್ಯವಾಗಿ ಗದ್ದೆಗೆ ಹರಿಸಿದ್ದ ನೀರನ್ನೇ ಬಾಯಿಗೆ ಹಾಕಿಕೊಂಡು ಮುಕ್ಕಳಿಸಿದ. ನೀರಿನೊಳಗೆ ಬೆರೆತಿರೋ ಕ್ರಿಮಿನಾಶದ ವಾಸನೆಯಿಂದ ಒಳಗಿದ್ದದ್ದೆಲ್ಲಾ ಕಕ್ಕಿಕೊಂಡ. ಅಲ್ಲಿಂದ ಧಾವಿಸಿಕೊಂಡು ಮನೆಗೆ ಬಂದ. ನಡುಮನೆಯ ಗೋಡೆಗೆ ತೂಗುಹಾಕಿದ್ದ ತನ್ನ ಅವ್ವನ ಫೋಟೋದ ಮುಂದೆ ಬಂದು ಕೈಮುಗಿದು ನಿಂತ. ಕಪಾಳಗಳಿಗೆ ಚಟ್ ಚಟ್ ಎಂದು ಹೊಡೆದುಕೊಳ್ಳತೊಡಗಿದ. ಅವನಪ್ಪ ಬಂದು ನಿಲ್ಲಿಸದಿದ್ದರೆ ಅವನು ಕಪಾಳಗಳನ್ನೇ ಹರಿದುಕೊಳ್ಳುತ್ತಿದ್ದನೇನೋ?!
ಅವತ್ತು ರಾತ್ರಿ ಅವನಿಗೆ ಆ ಕನಸು ಬೀಳಲಿಲ್ಲ. ಆದರೆ ಅದರ ವಾಸನೆ ಮಾತ್ರ ಹಿಂಬಾಲಿಸುತ್ತಲೇ ಇತ್ತು. ಏನೇನೋ ಪ್ರಯತ್ನಗಳನ್ನು ಮಾಡಿದರೂ ಅದರ ವಾಸನೆಯಿಂದ ತಪ್ಪಿಸಿಕೊಳ್ಳಲು ಆಗದೆ ಹೈರಾಣಾದ. ಯಾರೊಂದಿಗೂ ಹಂಚಿಕೊಳ್ಳುವುದಿರಲಿ, ಅದನ್ನ ಮತ್ತೊಮ್ಮೆ ನೆನಪಿಸಿಕೊಂಡರೇನೇ ಪ್ರಾಣ ಹೋದಂತಾಗುವ ಕನಸು ಅದಾಗಿತ್ತು. ಪ್ರತಿರಾತ್ರಿ ಮಲಗುವಾಗಲೂ ದೇವರೇ ಆ ಕನಸು ಮತ್ತೊಮ್ಮೆ ಬೀಳದಿರಲಿ ಎಂದು ಬೇಡಿಕೊಂಡು ಮಲಗುತ್ತಿದ್ದ. ಆದರೆ ಅದರ ವಾಸನೆಯಿಂದ ತುಂಬಾ ಹೊತ್ತು ನಿದ್ದೆ ಬರುತ್ತಲೇ ಇರಲಿಲ್ಲ. ದಿನಗಳೆದಂತೆ ಅವನು ಅದರ ವಾಸನೆಗೆ ಒಗ್ಗಿಕೊಂಡ, ಆದರೆ ದಿನದಿನಕ್ಕೂ ಸೊರಗತೊಡಗಿದ, ಮನೆಯಲ್ಲಿದ್ದಾಗಲೇ ಅದರ ಘಾಟು ಜಾಸ್ತಿ ಅಂತ ಗೊತ್ತಾದ ದಿನದಿಂದ ಮಾಗಣಿ ಹೊಲದ ಶೆಡ್ಡಿನಲ್ಲೇ ಇರತೊಡಗಿದೆ. ಅದೊಂದು ದಿನ ಯಾವುದೋ ಕಾರಣಕ್ಕಾಗಿ ಪಂಪಾಪತಿ ಮಠಕ್ಕೆ ಹೋದಾಗ ಆ ಕನಸಿನ ವಾಸನೆ ಮತ್ತಷ್ಟು ತೀವ್ರತೆ ಕಳೆದುಕೊಂಡದ್ದು ಗಮನಿಸಿದ ಅವನು ಅವತ್ತಿನಿಂದ ಅಲ್ಲೇ ಇರತೊಡಗಿದ. ಅವನಪ್ಪ ಬಂದು ಎಷ್ಟೇ ಬೆದರಿಕೆ ಹಾಕಿದರೂ ಅಲ್ಲಿಂದ ಕದಲಲಿಲ್ಲ.
ಇತ್ತ ರಂಗಮ್ಮನಿಗೆ ದಿನಬೆಳಗಾದರೆ ಹೆಬ್ಬಾವಿನ ಕಾಟ ರೂಢಿಯಾಗಿಹೋಯ್ತು. ಆದರೆ ಅವಳಿಗೆ ಮಿರ್ಚಿ ಮಾಡುವ ಉತ್ಸಾಹ ದಿನದಿಂದ ದಿನಕ್ಕೆ ಕಡಿಮೆಯಾಗತೊಡಗಿತು. ಜನ ‘ಮಿರ್ಚಿಗೆ ಮೊದ್ಲಿನ್ ರುತಿ ಇಲ್ಲಾ ರಂಗಮ್ಮ’ ಎನ್ನತೊಡಗಿದರು. ಬಸ್ಸ್ಟ್ಯಾಂಡ್ನಿಂದ ಗುಡಿಸಲಿಗೆ ಬಂದದ್ದೇ ಏನಾದರೊಂದು ವಸ್ತುವೋ, ಸಂಗತಿಯೋ ಅವಳಿಗೆ ಹುಟ್ಟಿದ ಎರಡೇದಿನಕ್ಕೆ ಕಳೆದುಹೋದ ಮಗನ ಹಸಿಮೈ ವಾಸನೆ ಹೊತ್ತು ತಂದು ಹಿಂಸೆ ನೀಡುತ್ತಿದ್ದವು. ತನ್ನ ಹಂಬಲದ ಕರುಳೇ ದಿನಬೆಳಗೆದ್ದರೆ ಸುತ್ತಿಕೊಳ್ಳುವ ಹೆಬ್ಬಾವಿರಬೇಕೆಂದು ತೀರ್ಮಾನಿಸಿ, ಅದು ತನ್ನ ಕೊರಳಿಗೆ ಸುತ್ತಿಕೊಳ್ಳುವವರೆಗೆ ಹೇಗೋ ಸಹಿಸಿಕೊಂಡು ಬದುಕಿದರಾಯಿತೆಂದು ನಿರ್ಧರಿಸಿದಳು.
ಅದು ಬನ್ನಿ ಹಬ್ಬದ ರಾತ್ರಿ. ಊರಜನರೆಲ್ಲಾ ಒಬ್ಬರಿಗೊಬ್ಬರು ಬನ್ನಿ ಹಂಚಿಕೊಂಡು ‘ಬನ್ನಿ ತಗಂಡ್ ಬಂಗಾರದಂಗ್ ಇರಂಬ್ರಿ’ ಎಂದು ಹಾರೈಸಿಕೊಳ್ಳುವ ವಿಶೇಷ ರಾತ್ರಿ. ಆದರೆ ರಂಗಮ್ಮ, ಹುಸೇನಿ ತೀರಿಕೊಂಡಾಗಿನಿಂದ ಯಾರೊಂದಿಗೂ ಬನ್ನಿ ಹಂಚಿಕೊಂಡಿಲ್ಲ. ಸೋಮನಾಥನ ದೇವಸ್ಥಾನಕ್ಕೆ ಹೋಗಿ ಬನ್ನಿ ಇಟ್ಟು ಕೈಮುಗಿದರೆ ಅವಳ ಪಾಲಿನ ಬನ್ನಿ ಹಬ್ಬ ಮುಗಿಯಿತು. ಅವತ್ತೂ ಹಾಗೇ ಮಾಡಿ ಗುಡಿಸಲ ಕಡೆ ಬಂದವಳನ್ನು ಒಂದು ಚಿಕ್ಕ ಬಿಳಿಬಣ್ಣದ ನಾಯಿಮರಿ ಸ್ವಾಗತಿಸಿತು. ಬಾಲ ಅಲ್ಲಾಡಿಸುತ್ತ ನಿಂತಿದ್ದ ಅದನ್ನು ಕಂಡು ಮುದ್ದು ಬಂತು. ಅದನ್ನೆತ್ತಿಕೊಂಡು ಗುಡಿಸಲೊಳಕ್ಕೆ ಹೋದಳು. ಒಂದು ಬಟ್ಟಲಿನಲ್ಲಿ ಮಜ್ಜಿಗೆ ಸುರುವಿ ಅದಕ್ಕೆ ಕುಡಿಯಲು ಕೊಟ್ಟಳು. ಅದರ ತಲೆನೇವರಿಸುತ್ತಾ ಕುಳಿತುಕೊಂಡಳು. ಅದರ ಸ್ವರ್ಶ ಸಾಕಾಯಿತು ಅವಳಿಗೆ ಮಗನ ಹಸಿಮೈ ವಾಸನೆಯ ಆವರಣಕ್ಕೆ ಜಾರಿಕೊಳ್ಳಲು. ದಳದಳ ಕಣ್ಣೀರು ಸುರಿಸುತ್ತ ಕಲ್ಲಿನಂತೆ ಕುಳಿತುಕೊಳ್ಳಲು. ಅತ್ತಷ್ಟೂ ಅವಳ ಎದೆಬಿಗಿಯತೊಡಗಿತು. ನಾಯಿಮರಿ ಅದರೊಳಗಿದ್ದ ಮಜ್ಜಿಗೆ ಮುಗಿಸಿ ಇನ್ನಷ್ಟು ಎಂಬಂತೆ ಇವಳೆಡೆ ನೋಡತೊಡಗಿತು. ಅದರ ‘ಬೇಕು ಬೇಕು’ ಎಂಬ ಕಣ್ಣುಗಳನ್ನು ನೋಡಿದ್ದೇ ಕಣ್ಣು ಮತ್ತಷ್ಟು ತುಂಬತೊಡಗಿದವು. ಎದೆಯ ಭಾರ ಸಹಿಸಲಸಾಧ್ಯವಾಗುವಷ್ಟು ಹೆಚ್ಚಾಯಿತು. ಬಟ್ಟಲು ತೆಗೆದುಕೊಂಡು ಅದರೊಳಕ್ಕೆ ಅದನ್ನು ರವಾನಿಸಿ, ಆ ನಾಯಿಮರಿಯ ಮುಂದಿಟ್ಟಳು. ಎರಡು ಗುಟುಕು ಕುಡಿದದ್ದೇ ಅದು ನಿದ್ದೆ ಬಂದು ಅವಳ ಮಡಿಲಲ್ಲಿ ಮಲಗಿತು. ಅದಕ್ಕೆ ಚೋ ಬಡಿಯುತ್ತ ಕುಳಿತುಕೊಂಡಳು.
ಒಂದಷ್ಟು ಹೊತ್ತು ಆಗಿರಬೇಕು. ಯಾರೋ ‘ಚಿಗವ್ವಾ’ ಎಂದು ಕರೆದಂತಾಯಿತು. ಅವಳು ಸೆರಗು ಸರಿ ಮಾಡಿಳ್ಳುವಷ್ಟರಲ್ಲಿ ಲಚುಮ ಕದ ನೂಕಿಕೊಂಡು ಒಳಕ್ಕೆ ಬಂದ. ಗುಡಿಸಲೊಳಕ್ಕೆ ಕಾಲಿಟ್ಟದ್ದೇ ಅವನಿಗೆ ತನ್ನನ್ನು ಇಷ್ಟುದಿನ ಹಿಂಬಾಲಿಸುತ್ತಿದ್ದ ಕೆಟ್ಟ ಕನಸಿನ ವಾಸನೆ ಬಿಟ್ಟು ಹೋಗುತ್ತಿರುವುದು ಗಮನಕ್ಕೆ ಬಂದು ಮನಸು ಹಗುರವಾಗತೊಡಗಿತು. ಆದರೆ ಅವನನ್ನು ನೋಡಿದ್ದೇ ರಂಗಮ್ಮನಿಗೆ ಮೈಯೆಲ್ಲಾ ಬೆಂಕಿ ಹತ್ತಿದಂತಾಯಿತು. ಅವನು ಬನ್ನಿ ಹಿಡಿದುಕೊಂಡು ಮುಗುಳ್ನಗುತ್ತ ‘ಚಿಗವ್ವಾ ಬನ್ನಿ ಕೊಡಾಕ್ ಬಂದೀನಿ’ ಅಂದ. ಇವಳಿಗೆ ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಅವನನ್ನು ಬಾರಿಸಬೇಕು ಎನ್ನಿಸತೊಡಗಿತು. ಕಣ್ಣು ಕೆಂಪು ಮಾಡಿಕೊಂಡು ಹಾಗೇ ಕುಳಿತುಕೊಂಡಳು. ಅವನು ಮತ್ತೊಮ್ಮೆ ‘ಚಿಗವ್ವಾ ಬನ್ನಿ ಕೊಡಾಕ್ ಬಂದೀನಿ’ ಅಂದ. ಅವಳು ‘ಸುಮ್ಕ್ಯಾ ಹೋಗಲೋ ಚಿಟ್ಯಾ’ ಎಂದು ಜೋರಾಗಿ ಕೂಗಿದಳು. ನಾಯಿಮರಿಗೆ ಎಚ್ಚರವಾಗಿ ಹೊರಕ್ಕೆ ಓಡಿತು. ಲಚುಮ ಹಾಗೇ ನಿಂತಿದ್ದ.
‘ನೀ ಬನ್ನಿ ಇಸ್ಕಂಬಮಟ ನಾ ಹೋಗಲ್ಲ..’ ಎಂದ. ಅವಳಿಗೆ ಮತ್ತಷ್ಟು ಆವೇಶ ಬಂದು ಅಲ್ಲೇ ಪಕ್ಕದಲ್ಲಿದ್ದ ಚಾ ವಾಟಗ ತೆಗೆದುಕೊಂಡು ಅವನೆಡೆಗೆ ಬೀಸಿದಳು. ಅದು ಅವನ ಮೊಣಕಾಲಿಗೆ ಬಿದ್ದು ರಕ್ತ ಸುರಿಯತೊಡಗಿತು. ಅವನು ಕದಲದೆ ನಿಂತ. ಅವಳು ಹೆಬ್ಬಾವಿನಂತೆ ಬುಸುಗುಡುತ್ತಲೇ ಇದ್ದಳು. ಇದ್ದಕ್ಕಿದ್ದಂತೆ ಅವಳ ಕಣ್ಣಲ್ಲಿ ದಳದಳ ಕಂಬನಿ. ಅವನು ‘ಯಾಕ್ ಚಿಗವ್ವಾ..?’ ಎಂದು ಸಮಾಧಾನ ಮಾಡಲೆಂದು ಅವಳ ಸಮೀಪಕ್ಕೆ ಹೊರಟ. ತನ್ನನ್ನು ಕೆಟ್ಟಕನಸಿನ ವಾಸನೆಯಿಂದ ಪಾರು ಮಾಡಲೆಂದೇ ಹೊರಡುತ್ತಿದೆಯೇನೋ ಎಂಬಂಥ ಪರಿಮಳ ಆವರಿಸತೊಡಗಿತು ಅವನನ್ನು. ಅವಳು ಮತ್ತಷ್ಟು ರೋಷಗೊಂಡು ಅವನನ್ನು ಎಡಗಾಲಿನಿಂದ ಒದ್ದು ‘ಹೋಗಲೋ ಅಡಾವುಡಿಗುಡಿದೋನೇ’ ಎಂದು ಬೈದಳು. ಅವನು ಸಾವರಿಸಿಕೊಂಡು ಎದ್ದು ಅವಳ ಪಕ್ಕದಲ್ಲೇ ಚಕ್ಕಳಮಕ್ಕಳ ಹಾಕಿಕೊಂಡು ಕುಳಿತ. ಅವಳ ಕಣ್ಣೀರಿನ ರಭಸ ಹೆಚ್ಚಾಗುತ್ತಲೇ ಇತ್ತು. ಅವನು ಅವಳ ಪಕ್ಕದಲ್ಲಿದ್ದ ಬಟ್ಟಲನ್ನು ತೆಗೆದುಕೊಂಡ. ಅದರೊಳಗಿದ್ದ ಆಕೆಯ ಎದೆಭಾರವನ್ನು ಮಗುವಿನಂತೆ ಕುಡಿದ. ಆಗ ಅವಳ ಕಣ್ಣೀರಿನ ರಭಸಕ್ಕೆ ಹಳ್ಳ ಬಂತು. ಅದು ರಭಸದಿಂದ ನದಿಸೇರಿ ಪ್ರವಾಹವಾಗಿ ಸಾಗರದಲ್ಲಿ ಐಕ್ಯವಾಗಿ ಶಾಂತವಾಯಿತು. ಅವನು ‘ತಪ್ಪಾತಾ ನಮವ್ವಾ?’ ಎಂದು ಚಿಕ್ಕಮಗುವಿನಂತೆ ದುಃಖಿಸತೊಡಗಿದ. ಅವಳು ಅವನ ತಲೆಯನ್ನೊಮ್ಮೆ ನೇವರಿಸಿ, ಮಡಿಲಲ್ಲಿಟ್ಟುಕೊಂಡು ಚೋ ಬಡಿಯತೊಡಗಿದಳು.
ಮಂಜುನಾಯಕ ಮೂಲತಃ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಳ್ಳೂರಿನವರು. ಸದ್ಯ ಬೆಂಗಳೂರಿನ ನಿವಾಸಿ. ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಮಂಜುನಾಯಕ ಪ್ರಸ್ತುತ ಕಲರ್ಸ್ ಸೂಪರ್ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಕತೆಗಳಿಗೆ 2017ರ ಸಾಲಿನ ಟೋಟೋ ಪುರಸ್ಕಾರ ಲಭಿಸಿದೆ. “ಫೂ” ಇವರ ಪ್ರಕಟಿತ ಕಥಾ ಸಂಕಲನ.
ಭಾಳ ಛಂದ ಲೇಖನ ಮಂಜು. ಬಸ್ಸಿನೊಳಗ ಕುಂತು ಓದುತ್ತಾ ಸ್ಟಾಪ್ ಬಂದಿದ್ದೇ ಗೊತ್ತಾಗ್ಲಿಲ್ಲ. ಇನಾ ಜಾಸ್ತಿ ಬರೀರಿ. ಕಾದು ಓದ್ತೀವಿ.
ಗ್ರಾಾಮೀಣ ಬದುಕನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡ ಅದ್ಭುತ ಬರಹಗಾರ ನೀವು. ಇನ್ನೂ ಅತ್ಯುತ್ತಮ ಕತೆಗಳು ಹೊರಬರಲಿ.