ಗುರುಗಳಿಗೆ ಈ ಕಬ್ಬಿಗ ತಂತ್ರಾಂಶ ಮಗುವಿನ ಕೈಯಲ್ಲಿ ಆಟಿಗೆ ಸಿಕ್ಕಂತಾಯಿತು. ಅವರು ಹೂವು, ಹಣ್ಣು, ಚಂದ್ರ, ಬೆಳದಿಂಗಳು, ದೀಪಾವಳಿ, ಯುಗಾದಿ ಕೊನೆಗೆ ಹೋಳಿ ಹುಣ್ಣಿಮೆಯ ಬಗ್ಗೆ ಕೂಡ ಪದ್ಯ ಬರೆಸಿದರು. ಪದ್ಯಗಳನ್ನು ಒಂದು ಷಟ್ಪದಿಯಲ್ಲಿ ಬರೆಸಿ, ಮತ್ತೊಂದು ಷಟ್ಪದಿಗೆ ಬದಲಾಯಿಸಿಸಿದರು.. ಎಲ್ಲಾ ಪದ್ಯಗಳೂ ಚನ್ನಾಗಿರುತ್ತಿರಲಿಲ್ಲವಾದರೂ, ಅದರ ಬದಲು ಮತ್ತೊಂದು ಪದ್ಯ ಕೆಲವೇ ಕ್ಷಣಗಳಲ್ಲಿ ತಯಾರಾಗುತ್ತಿದ್ದರಿಂದ ಗುರುಗಳಿಗೆ ತಂತ್ರಾಂಶದ ಬಗ್ಗೆ ಬಹಳ ಸಂತೋಷವಾಗಿತ್ತು. ನನಗೂ ಕೂಡ ತಂತ್ರಾಂಶದ ಫಲಿತಾಂಶ ಸಮಾಧಾನಕರವಾಗಿತ್ತು.
ಗುರುರಾಜ್‌ ಕೆ. ಕುಲಕರ್ಣಿ ಬರೆದ ಕತೆ “ಕಬ್ಬಿಗ.ai” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ನಾನು ಸ್ವಭಾವತಹ ಮೌನಿ, ಮುಖೇಡಿ ಎಂದರೂ ಆದೀತು. ಯಾರೊಂದಿಗೂ ಹೆಚ್ಚಿಗೆ ಮಾತನಾಡುವುದಿಲ್ಲ, ಆಡಿದ ಮಾತುಗಳು ಕೂಡ ಎಷ್ಟು ಬೇಕೋ ಅಷ್ಟು. ಹೊಸ ಗೆಳೆಯರನ್ನು ಮಾಡಿಕೊಳ್ಳೋದು ನನ್ನ ಸ್ವಭಾವಕ್ಕೆ ಕಷ್ಟದ ಕೆಲಸ. ಈಗಲೂ ನನ್ನ ಆಪ್ತ ಸ್ನೇಹಿತರು ಬಹುತೇಕ ನನ್ನ ಶಾಲಾದಿನಗಳಿಂದ ಚಡ್ಡಿದೋಸ್ತುಗಳಾಗಿದ್ದವರೇ. ಉದ್ಯೋಗ ಪರ್ವದಲ್ಲಿ ಸಿಕ್ಕ ನಾಲ್ಕೈದು ಜನ ಗೆಳೆಯರನ್ನು ಬಿಟ್ಟು ಉಳಿದವರೆಲ್ಲ ನನಗೆ ಪರಿಚತರೇ ಹೊರತು ಗೆಳೆಯರಲ್ಲ. ಆಫೀಸುಗಳಲ್ಲಿ ಸಿಗರೇಟು ಸೇದುವವರು ಧೂಮ್ರವಲಯದಲ್ಲಿ ಒಬ್ಬರಿಗೊಬ್ಬರು ಕಡ್ಡಿಪೆಟ್ಟಿಗೆ, ಸಿಗರೇಟು ಕೈಗಡ ಕೊಡು-ತೆಗೆದುಕೊಳ್ಳುವುದರಿಂದ ಪರಿಚಯ ಹೆಚ್ಚಾಗಿ, ಗೆಳೆಯರೂ ಆಗುತ್ತಾರೆ ಎಂದು ಕೇಳಿದ್ದೇನೆ. ನಾನೋ ಸಿಗರೇಟಿನ ರೇಟೂ ಕೂಡ ಗೊತ್ತಿರದ ಮುಗ್ದ. ಕೂಡಿ ಎಣ್ಣೆ ಹೊಡೆಯುವವರು, ಪರಮಾತ್ಮ ಒಳಹೊಕ್ಕ ನಂತರ ತಮ್ಮ ಒಳಗಿನ ದುಃಖವನ್ನು ಹೊರಹಾಕಿ ಒಬ್ಬರಿಗೊಬ್ಬರು ಆತ್ಮಸಖರಾಗುತ್ತಾರೆ ಎಂದೂ ಹೇಳುತ್ತಾರೆ. ನಾನೋ ‘ಎಂಡ ಇಡಿಯದ ಕೈʼಲಿ ಪುಸ್ತಕ ಹಿಡಿದು ಅದರಲ್ಲಿ ಮುಳುಗಿರುವ ಪುಸ್ತಕದ ಹುಳು, ಹ್ಯಾಗೆ ಹೊಸ ಗೆಳೆಯರು ಸಿಗುತ್ತಾರೆ ?

ಇಂತಹ ಒಳಮುಚ್ಚುಗನಾದ ನನ್ನ ಆಪ್ತವಲಯಕ್ಕೆ, ವಯಸ್ಸಿನಲ್ಲಿ, ಓದಿನಲ್ಲಿ, ಉದ್ಯೋಗದಲ್ಲಿ, ಸ್ವಭಾವದಲ್ಲಿ ಸಾಟಿಯಲ್ಲದ ಈ ಪುಟ್ಟಲಿಂಗಯ್ಯನವರು ಹೇಗೆ ಲಗ್ಗೆಯಿಟ್ಟರು ಎಂಬುದೇ ಸೋಜಿಗ.

ದೊಡ್ಡ ಕಂಪನಿಯಲ್ಲಿ ಸಣ್ಣ ಇಂಜಿನಿಯರಿಂಗ್ ಮ್ಯಾನೇಜರ್ ಆಗಿರುವವನು ನಾನಾದರೆ, ಪುಟ್ಟಲಿಂಗಯ್ಯನವರು ನಿವೃತ್ತ ಕನ್ನಡ ಮೇಷ್ಟ್ರು. ಅಷ್ಟಿಷ್ಟು ಸಾಹಿತ್ಯ ನಾನು ಓದಿಕೊಂಡಿದ್ದರೆ, ಮೇಷ್ಟ್ರ ಜೀವನ ಪೂರ್ತಿ ಸಾಹಿತ್ಯದಲ್ಲೇ ಕಳೆದುಹೋಗಿದೆ. ಆಗಲೇ ಹೇಳಿದಂತೆ ‘ಮಾತಾಡಿದರೆ ಮುತ್ತು ಉದುರುತ್ತವಯೋʼ ಎನ್ನುವಂತಹ ಮಾತಿಲ್ಲದ ಮಲ್ಲ ನಾನಾದರೆ, ಮಾತಿನಿಂದಲೇ ಹೊಟ್ಟೆ ಹೊರೆದುಕೊಂಡು, ಈಗ ನಿವೃತ್ತರಾದರೂ ವಾಚಾಳಿಯಾಗಿರುವರು ಮೇಷ್ಟ್ರು. ಒಟ್ಟಿನಲ್ಲಿ “ಬೆಟ್ಟದ ಮೇಲಣ ನೆಲ್ಲಿಯ ಕಾಯಿ ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯಾ?” ಎನ್ನುವಂತೆಯೇ ಇರುವ ನಮ್ಮ ಸ್ನೇಹ ಶುರುವಾದದ್ದು ಹೀಗೆ:

ವಯಸ್ಸು ನಲವತ್ತರ ಗಡಿ ದಾಟಿದ ನಂತರ ರಕ್ತದೊತ್ತಡ, ಸಕ್ಕರೆ ಕಾಯಿಲೆಗಳು ‘ಹಾಯ್‌ʼ ಹೇಳಲು ಬರುತ್ತಿವೆ ಎಂದು ತಿಳಿದು ಪ್ರತಿದಿನ ಬೆಳಿಗ್ಗೆ ನಮ್ಮ ಬಡಾವಣೆಯ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಆಡಲು ಹೋಗತೊಡಗಿದೆ. ನಮ್ಮ ಬಡಾವಣೆಯ ಕ್ರೀಡಾಂಗಣದಲ್ಲಿ ಎರಡು ಗುಂಪುಗಳಿವೆ- ಒಂದು ಚಿಕ್ಕಹುಡುಗರದು, ಇನ್ನೊಂದು ವಯಸ್ಸಾದ ಮುದುಕರದು. ಹೆಚ್ಚು ಕಡಿಮೆ ಹೈಸ್ಕೂಲ್ ನಂತರದ ಮಕ್ಕಳು ಬಹುತೇಕವಾಗಿ ತಮ್ಮ ಕ್ಲಾಸು-ಟ್ಯೂಷನ್ನುಗಳಲ್ಲಿ, ಕಾಲೇಜು ಹುಡುಗರು ಡೇಟಿಂಗು-ಔಟಿಂಗುಗಳಲ್ಲಿ ವ್ಯಸ್ತರಾಗಿರೋದರಿಂದ ಆಟದ ಮೈದಾನ ಅವರಿಗೆ ಅಪರೂಪ. ಇನ್ನು ಯುವಕರು, ಮಧ್ಯವಯಸ್ಕರು ತಮ್ಮ ತಮ್ಮ ಉದ್ಯೋಗದಲ್ಲಿ ಬಹುಕಾಲ ಕಳಿಯುವದರಿಂದ, ಅವರಲ್ಲಿಯೂ ಆಸಕ್ತಿ ಇದ್ದವರು ಕಾಸು ಕೊಟ್ಟು ಜಿಮ್ಮು ಸೇರಿರುವುದರಿಂದ, ಅವರಿಗೂ ಬಿಬಿಎಂಪಿಯ ಆಟದ ಮೈದಾನಕ್ಕೂ ಮುಹೂರ್ತ ಕೂಡಿ ಬರುವುದು ಅಪರೂಪ. ಹೀಗಾಗಿ ಕ್ರೀಡಾಂಗಣದಲ್ಲಿ ಚಿಕ್ಕಮಕ್ಕಳು ಮತ್ತು ಮುದುಕರದೇ ಸಾಮ್ರಾಜ್ಯ. ಇತ್ತ ಹುಡುಗನು ಅಲ್ಲದ ಅತ್ತ ಮುದುಕನೂ ಅಲ್ಲದ ನನಗೆ, ಅಲ್ಲಿಯೂ ಸಲ್ಲದೆ ಇಲ್ಲಿಯೂ ಸಲ್ಲದೆ ಅಂತರ್ ಪಿಶಾಚಿಯಾಗುವ ಭಾವ. ಆದರೂ ಮಕ್ಕಳ ವಯಸ್ಸಿಗಿಂತ ಮುದುಕರ ವಯಸ್ಸಿಗೆ ನಾನು ಹತ್ತಿರವಿರುವುದರಿಂದ ಅದರಲ್ಲಿಯೇ ಕೂಡಿಕೊಂಡು ಬ್ಯಾಡ್ಮಿಂಟನ್‌ ಆಡಲು ಶುರುಮಾಡಿದೆ.

ಅಲ್ಲಿ ಸಿಕ್ಕವರೇ ಪುಟ್ಟಲಿಂಗಯ್ಯನವರು. ಅವರು ಬ್ಯಾಡ್ಮಿಂಟನ್‌ ತಂಡದ ನಾನ್-ಪ್ಲೇಯಿಂಗ್‌ ಕ್ಯಾಪ್ಟನ್‌ ಇದ್ದಂತೆ- ಯಾರು ಮೊದಲು ಆಡಬೇಕು, ಯಾರು ಇನ್ನೂ ಒಂದಿಷ್ಟು ಕಾಯಬೇಕು ಹೀಗೆ. ಅದಲ್ಲದೇ ಚನ್ನಾಗಿ ಆಡಿದಾಗ ಚಪ್ಪಾಳೆ ತಟ್ಟಿ, ತಪ್ಪಿದಾಗ ಕಾಲೆಳೆದು ಅವರು ಪಾರ್ಟ-ಟೈಂ ಕೋಚ್‌ ಕೆಲಸವನ್ನೂ ಮಾಡುತ್ತಾರೆ. ಬ್ಯಾಡ್ಮಿಂಟನ್ ಅಂಗಳದ ಸುತ್ತಲಿನ ಹುಲ್ಲು-ಕಸ ಕತ್ತರಿಸುವುದು, ಅಂಗಳಕ್ಕೆ ಮಣ್ಣು ಹಾಕಿಸಿ, ನೀರು ಚಿಮುಕಿಸಿ, ಗೆರೆ ಹಾಕಿಸುವುದು ಇತ್ಯಾದಿಗಳಲ್ಲೂ ಹಿರಿತನವಹಿಸಿ, ಕೆಲಸ ಮಾಡಿಸಿ ತಂಡದ ಮ್ಯಾನೇಜರ್ ಕರ್ತವ್ಯವನ್ನು ನಿಭಾಯಿಸುತ್ತಾರೆ. ಒಟ್ಟಿನಲ್ಲಿ ಪುಟ್ಟಲಿಂಗಯ್ಯನವರು ಆಡುವುದಕ್ಕಿಂತ ಹೆಚ್ಚಾಗಿ ಇತರೆ ಉಪದ್ವ್ಯಾಪದಲ್ಲೇ ಆಸಕ್ತರು.

ಬ್ಯಾಡ್ಮಿಂಟನ್ ಆಡಲು ಹೋಗಲು ತೊಡಗಿದ ಕೆಲವೇ ದಿನಗಳಲ್ಲಿ ಈ ಬ್ಯಾಡ್ಮಿಂಟನ್ ಕ್ಲಬ್ ಅನ್ನೋದು, ಎಲ್ಲ ಮುದುಕರಿಗೆ ಟೈಂಪಾಸ್‌ನ ಬಹುಮೂಲ್ಯ ಸಾಧನ ಎಂದು ನನಗೆ ಅರ್ಥವಾಯಿತು. ಆಟ ಮುಗಿಸಿದ ಮೇಲೆ ಅವರೆಲ್ಲ ಒಟ್ಟಿಗೆ ನಮ್ಮ ಬಡಾವಣೆಯಲ್ಲಿರುವ ಹೋಟೆಲ್‌ ಒಂದಕ್ಕೆ ಹೋಗಿ ತಿಂಡಿ ತಿನ್ನುವುದು ಅವರ ರೂಢಿ. ವಾರ-ಎರಡು ವಾರಕ್ಕೊಮ್ಮೆ ವಿದ್ಯಾರ್ಥಿ ಭವನ, ಎಂಟಿಆರ್‌ ಇತ್ಯಾದಿ ಹಳೆಯ ಹೋಟಲುಗಳು ಕಲಿಗಾಲದ ಆರ್ಭಟಕ್ಕೆ ಸೋತು ಹಳೆಯ ರುಚಿಯನ್ನು ಕಳೆದುಕೊಂಡಿಲ್ಲ ಎಂದು ಪರೀಕ್ಷಿಸುವುದೂ ಅವರು ಮಾಡುವ ಸಮಾಜಸೇವೆ. ಅದಲ್ಲದೇ ಆಗಾಗ ಎಲ್ಲ ಸೇರಿ ಹತ್ತಿರದ ಜಾಗಗಳಿಗೆ ಪ್ರವಾಸ ಹೋಗುವುದು ಕೂಡ ಉಂಟು. ಒಟ್ಟಿನಲ್ಲಿ ಎಲ್ಲ ಹಿರಿಯ ಜೀವಗಳಿಗೆ ಬ್ಯಾಡ್ಮಿಂಟನ್ ಕ್ಲಬ್ ಒಂದು ಏಕತಾನತೆಯನ್ನು ಮೀರುವ ಜೀವನೋತ್ಸಾಹ ಒದಗಿಸಿತ್ತು. ಅವರೆಲ್ಲರ ನಡುವೆ ಎಳೆ ಮುದುಕನಾಗಿದ್ದ ನನಗೆ ಒಬ್ಬನಿಗೇ ವೇಳೆಯ ಅಭಾವ. ಪ್ರತಿ ದಿನ ಆಟ ಮುಗಿಸಿ ಆಫೀಸಿಗೆ ಓಡಿ ಹೋಗುವುದು, ಒಂದೊಂದು ದಿನ ಆಟದಲ್ಲಿ ಸರದಿ ಬರುವುದು ತಡವಾದರೆ, ಆಡದೇ ಹೋಗಿಬಿಡುವುದು, ಇಲ್ಲವೇ ಅರ್ಧ ಆಟ ಬಿಟ್ಟು ಓಡುವುದು ನನ್ನ ಕರ್ಮವಾಗಿತ್ತು. ಕೆಲ ದಿನಗಳ ನಂತರ ಪುಟ್ಟಲಿಂಗಯ್ಯನವರಿಗೆ ನನ್ನ ಪರಿಸ್ಥಿತಿ ಅರ್ಥವಾಯಿತು. ಹೀಗಾಗಿ ನಾನು ಬಂದ ತಕ್ಷಣ ನನಗೆ ಆಡಲು ಸರದಿ ಒದಗಿಸುತ್ತಿದ್ದರು. ಉಳಿದ ಹಿರಿಯ ಜೀವಗಳಿಗೆ ಅದರಿಂದ ಏನೂ ಬೇಜಾರಿರಲಿಲ್ಲ- ಅವರ ಹತ್ತಿರವಿದ್ದ ಅಗಾಧವಾದ ವೇಳೆಯನ್ನು ಒಂದು ಚೂರು ನನ್ನ ಆಟ ನೋಡುತ್ತಾ ಕಳಿಯುವುದಕ್ಕೆ ಅವರದೇನು ಅಭ್ಯಂತರವಿರಲಿಲ್ಲ.

ಒಂದು ದಿನ ನಾನು ನನ್ನ ಸರದಿಗಾಗಿ ಕಾಯುತ್ತಿದ್ದೆ. ಎಂದಿನಂತೆ ಪುಟ್ಟಲಿಂಗಯ್ಯನವರು ಎಲ್ಲರಿಗೂ ಜೋರಾಗಿ, “ಕುಲಕರ್ಣಿಯವರು ಆಫೀಸ್ಗೆ ಹೋಗ್ಬೇಕು, ಅವರು ಆಡಲಿ ಬಿಡಿ” ಎಂದು ಘೋಷಿಸಿ, “ಬನ್ನಿ ಸರ್” ಎಂದು ನನ್ನನ್ನು ಕರೆದರು. ಪ್ರತಿದಿನವೂ ಸಂಕೋಚದಿಂದಲೇ ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದ ನಾನು ಅಂದು, “ಪರವಾಗಿಲ್ಲ ಸರ್. ಇವತ್ತು ನಂದು ಆಫೀಸ ರಜೆ. ಅದಕ್ಕೆ ನಂತರ ಆಡ್ತೀನಿ” ಅಂದೆ. ಪುಟ್ಟಲಿಂಗಯ್ಯನವರು “ನಿಮ್ಮ ಆಫೀಸ್ಗೆ ರಜೆ ಯಾಕೆ? ನಿಮ್ಮ ಆಫೀಸಿನವರು ಯುಗಾದಿ ದಿನವೇ ರಜಾ ಕೊಡೋದಿಲ್ಲ, ಇವತ್ತ್ಯಾಕೆ ?” ಎಂದು ಕೇಳಿದರು. ನಾನು “ಆಫೀಸಿಗೆ ರಜಾ ಇಲ್ಲ ಸರ್, ನಾನು ರಜಾ ಹಾಕಿದಿನಿ.. ಇವತ್ತು ನೆಚ್ಚಿನ ಕಾದಂಬರಿಕಾರರಾದ ಸಾಹಿತಿ ಗೊಮ್ಮಟರ ಕಾದಂಬರಿ ಬಿಡುಗಡೆ ಇದೆ. ನಾನು ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿ, ಅಲ್ಲಿ ಕಾದಂಬರಿಯನ್ನು ಕೊಂಡು ಬರಬೇಕು ಅನ್ಕೊಂಡಿದ್ದೀನಿ.. ಅದಕ್ಕೆ ಆಫೀಸ ರಜಾ ಹಾಕಿದಿನಿ.” ಎಂದೆ. ಪುಟ್ಟಲಿಂಗಯ್ಯನವರಿಗೆ ಅಚ್ಚರಿ-ಸಂತಸ ಒಮ್ಮೆಲೆ ಆಯ್ತು ಅನ್ಸುತ್ತೆ. “ಓಹೋ.. ನೀವು ಗೊಮ್ಮಟರ ಅಭಿಮಾನಿಗಳಾ? ನಾನು ಕೂಡ… ಇವತ್ತಿನ ಕಾರ್ಯಕ್ರಮಕ್ಕೆ ನಾನೂ ಹೋಗಬೇಕು ಅಂದ್ಕೊಂಡಿದೀನಿ. ಇಲ್ಲಾ ಅಂದ್ರೆ ಅವರ ಪುಸ್ತಕ ವಿದ್ಯಾರ್ಥಿ ಭವನದ ದೋಸೆಯಂತೆ ಖರ್ಚಾಗಿಬಿಡುತ್ತೆ. ಮುಂದಿನ ಮರುಮುದ್ರಣದವರೆಗೆ ಕಾಯಬೇಕು..” ಎಂದು ಹೇಳಿ, “ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಇಬ್ಬರೂ ಜೊತೆಯಾಗಿ ಹೋಗೋಣ” ಎಂದರು. ಒಪ್ಪಿಕೊಂಡು ನಾನು ಅವರನ್ನು ಕಾರಿನಲ್ಲಿ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದೆ. ಕಾರ್ಯಕ್ರಮದಲ್ಲಿ ಪುಟ್ಟಲಿಂಗಯ್ಯನವರ ಗೆಳೆಯರು, ಶಿಷ್ಯರು, ಪರಿಚಿತರು ಬಹಳಷ್ಟು ಜನರು ಇದ್ದರು. ಭೇಟಿಮಾಡಿದವರಿಗೆಲ್ಲ ನನ್ನ ಪರಿಚಯಿಸಿ ಅಭಿಮಾನದಿಂದ “ನೋಡಿ ನಮ್ಮ ಕುಲಕರ್ಣಿಯವರು ಸಾಫ್ಟ್‌ವೇರ್‌ನಲ್ಲಿ ದೊಡ್ಡ ಉದ್ಯೋಗ ಮಾಡುತ್ತಾರೆ, ಆದ್ರು ಕನ್ನಡ ಸಾಹಿತ್ಯದ ಬಗ್ಗೆ ಅಭಿಮಾನ” ಎಂದು ಹೇಳಿ ನನ್ನನ್ನು ಸಂಕೋಚಕ್ಕೆ ಒಳಪಡಿಸಿದರು. ಇಂತಹ ಕಾರ್ಯಕ್ರಮಕ್ಕೆ ಹೋದಾಗ ಕಳ್ಳನಂತೆ ಒಂದು ಮೂಲೆಯಲ್ಲಿ ಕೂತು, ಮಾತುಗಳನ್ನು ಕೇಳಿ ಎದ್ದುಬರುತ್ತಿದ್ದ ನಾನು, ಈ ಸಲ ಪುಟ್ಟಲಿಂಗಯ್ಯನವರ ದೆಸೆಯಿಂದಾಗಿ ಸಾಹಿತಿ ಗೊಮ್ಮಟರ ಹಸ್ತಾಕ್ಷರವನ್ನೂ, ಅವರೊಂದಿಗೆ ಸೆಲ್ಫಿಯನ್ನೂ ತೆಗೆದುಕೊಂಡು ಬಂದೆ.

ಇದಾದ ನಂತರ ಪುಟ್ಟಲಿಂಗಯ್ಯನವರು ಮತ್ತು ನಾನು ಆಪ್ತರಾದೆವು. ನಂತರ ನನಗೆ ಪುಟ್ಟಲಿಂಗನವರ ಬಗ್ಗೆ ಹಲವಾರು ವಿಷಯಗಳು ಗೊತ್ತಾಗತೊಡಗಿದವು.

ಕನಕಪುರ ತಾಲೂಕಿನ ಹಳ್ಳಿಯೊಂದರಲ್ಲಿ ಹುಟ್ಟಿದ್ದ ಪುಟ್ಟಲಿಂಗಯ್ಯನವರು ಬಾಲ್ಯದಲ್ಲಿ ಬಹಳಷ್ಟು ಬಡತನ ಅನುಭವಿಸಿದ್ದರಂತೆ. ಹಾಗೋ ಹೀಗೋ ಓದಿದ್ದರಂತೆ. ಆಗಿನ ಕಾಲದಲ್ಲಿ, ಅವರ ಪರಿಸರದಲ್ಲಿ ಓದುವುದೆಂದರೆ, ಕನ್ನಡ ವಿಷಯದಲ್ಲಷ್ಟೇ ಸಾಧ್ಯವಾಗಿದ್ದರಿಂದ, ಅದರಲ್ಲಿಯೇ ಪದವಿ, ಸ್ನಾತಕೋತ್ತರ ಪದವಿ ಪಡೆದಿದ್ದರಂತೆ. ನಂತರ ಅವರು ಬೆಂಗಳೂರು ಗ್ರಾಮಾಂತರದ ಒಂದು ಊರಿನ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ದುಡಿದು, ಈಗ ನಿವೃತ್ತರಾಗಿ ಬೆಂಗಳೂರಿನಲ್ಲಿ ಬಿಡಿಎ ಹಂಚಿಕೆ ಮಾಡಿದ ಸೈಟ್‌ನಲ್ಲಿ ಮನೆ ಕಟ್ಟಿಕೊಂಡು ಇದ್ದಾರೆ. ಅವರ ಮಗ ಅಮೆರಿಕೆಗೆ ಓದಿಗಾಗಿ ಹೋದವನು ಅಲ್ಲಿಯೇ ನೌಕರಿ ಹಿಡಿದು, ತಳ ಊರಿದ್ದಾನೆ. ಮೇಸ್ಟ್ರು ಮತ್ತು ಹೆಂಡತಿ ವಯಸ್ಸಾದರೂ ಚೆನ್ನಾಗಿ ಆರೋಗ್ಯ ಕಾಯ್ದುಕೊಂಡು ಆರಾಮಾಗಿ ಇದ್ದಾರೆ.

ತಮ್ಮ ಮನೆಯ ಮಹಡಿಯ ಮೇಲೆ ತಮಗಾಗಿಯೇ ಒಂದು ಕೋಣೆ ಕಟ್ಟಿಸಿಕೊಂಡು ಅದರಲ್ಲಿ ತಮ್ಮ ಖಾಸಗಿ ಗ್ರಂಥಾಲಯವನ್ನು ಮಾಡಿಕೊಂಡಿದ್ದಾರೆ. ಬಾಲ್ಯದಲ್ಲಿ ಓದಲು ಪುಸ್ತಕ ಸಿಗಲಾರದಂತೆ ಮಾಡಿದ್ದ ಬಡತನದ ಮೇಲೆ ಸೇಡು ತೀರಿಸುವಂತೆ ಹಲವಾರು ಪುಸ್ತಕಗಳನ್ನು ಕೊಂಡು ತಂದು ಓದುವುದು ಅವರ ಹವ್ಯಾಸ. ಅವರ ವ್ಯಕ್ತಿತ್ವದ ಪರಿಚಯವಾದ ಮೇಲೆ ನಾನು ಅವರನ್ನು ಗೌರವದಿಂದ ‘ಗುರುಗಳೇʼ ಎಂದೇ ಕರೆಯುವುದು..

ಅವರೊಂದಿಗೆ ನನ್ನ ಆಪ್ತತೆ ಬೆಳೆದ ಮೇಲೆ, ಅವರ ಅಟ್ಟದ ಕೋಣೆಗೆ ನನಗೆ ಅನಿರ್ಭಂದಿತ ಪ್ರವೇಶ ಸಿಕ್ಕಿದೆ. ವಾರಕ್ಕೆ ಒಂದು ಅರ್ಧ ದಿನವಾದರೂ ನಾನು ಅವರ ಅಟ್ಟದ ಗ್ರಂಥಾಲಯದ ಪುಸ್ತಕಗಳೊಂದಿಗೆ ಕಳೆಯುವುದು ಕೆಲವು ತಿಂಗಳುಗಳಿಂದ ರೂಢಿಯಾಗಿದೆ. ಮೇಷ್ಟ್ರ ಹೆಂಡತಿಯು ನನ್ನಲ್ಲಿ ಅಮೆರಿಕದಲ್ಲಿರುವ ತಮ್ಮ ಮಗನನ್ನು ಕಾಣುತ್ತಾರೆ ಆದ್ದರಿಂದ, ಕಾಫಿ-ತಿಂಡಿಗೆ ಕೂಡ ತಲೆಕೆಡಿಸಿಕೊಳ್ಳದಂತೆ ನನ್ನ- ಅಟ್ಟದ ಪುಸ್ತಕಗಳ ಸಾಂಗತ್ಯ ನಿರಾತಂಕವಾಗಿ ನಡೆದಿದೆ.

ವಯಸ್ಸಾಗಿದ್ದರೂ ಮೇಷ್ಟ್ರ ಬುದ್ಧಿ ಬಲು ಚುರುಕು, ಅವರ ನೆನಪೂ ಪ್ರಖರ. ಚಿಕ್ಕ ಮಕ್ಕಳಿಗೆ ಇರುವಂತೆ ಎಲ್ಲ ವಿಷಯದ ಬಗ್ಗೆ ಅವರಿಗೆ ಅಗಾಧ ಕುತೂಹಲ. ಚಿಕ್ಕಂದಿನಲ್ಲಿ ವಿಜ್ಞಾನ ಓದಿಲ್ಲವಾದದ್ದರಿಂದಲೇನೋ, ಈಗ ನಿವೃತ್ತಿಯ ನಂತರ ವಿಜ್ಞಾನದ ಬಗ್ಗೆ ಅವರಿಗೆ ಅಗಾಧ ಆಸಕ್ತಿ. ನನ್ನ ಅವರ ಗೆಳೆತನ ಆದಮೇಲೆ ನನ್ನನ್ನು ಹಲವಾರು ಪ್ರಶ್ನೆಗಳನ್ನು ಕೇಳಿ, ತಿಳಿದುಕೊಂಡಿದ್ದಾರೆ – ಸಂಗೀತದ ಸಪ್ತ ಸ್ವರಗಳಲ್ಲಿ ಫ್ರಿಕ್ವೆನ್ಸಿಯ ಅಂತರ ಹೇಗಿರುತ್ತದೆ? ಮೊಬೈಲ್ ಫೋನು ಹ್ಯಾಗೆ ಕೆಲಸ ಮಾಡುತ್ತದೆ? ಇತ್ಯಾದಿ. ನಾನು ಅವರ ಕೇಳಿದ ಪ್ರಶ್ನೆಗಳನ್ನು ಗಂಭೀರವಾಗಿ ವಿಚಾರ ಮಾಡಿ, ಮಕ್ಕಳಿಗೆ ತಿಳಿಯುವಂತಹ ಮಾತುಗಳಲ್ಲಿ ಅವರಿಗೆ ವಿಷಯ ತಿಳಿಸಲು ಪ್ರಯತ್ನ ಪಟ್ಟಿದ್ದೇನೆ. ಆಗಾಗ ಅವರ ಪ್ರಶ್ನೆಗೆ ಉತ್ತರ ಕೊಡುವಂತಹ ಯೂಟ್ಯೂಬ್ ವಿಡಿಯೋಗಳನ್ನು ಅವರಿಗೆ ತೋರಿಸಿ ಅರ್ಥ ಮಾಡಿಸಿದ್ದೇನೆ.

ಇಂತಹದೇ ಒಂದು ದಿನ ಪುಟ್ಟಲಿಂಗಯ್ಯನವರು “ಚಾಟ್ ಜಿಪಿಟಿ ಎಂದರೆ ಏನು?” ಎಂದು ಕೇಳಿದರು.

ಅವರ ಆ ಮುಗ್ಧ ಪ್ರಶ್ನೆ ಮುಂದಿನ ಹಲವಾರು ದಿನಗಳ ನಮ್ಮ ತಾಪತ್ರಯಕ್ಕೆ ಕಾರಣವಾಗುತ್ತದೆ ಎಂದು ನನಗೆ ಆಗ ಅನ್ನಿಸಿರಲಿಲ್ಲ..

ನಾನು ಚಾಟ್‌ ಜಿಪಿಟಿ ಬಗ್ಗೆ ಒಂದು ಚಿಕ್ಕ ಉಪನ್ಯಾಸವನ್ನೇ ಕೊಟ್ಟೆ- “ಚಾಟ್‌ ಜಿಪಿಟಿ ಎಂಬ ಹೆಸರಿನಲ್ಲಿ ‘ಜಿಪಿಟಿ’ ಎನ್ನುವುದು ‘Generative Pre-trained Transformer’ ಎನ್ನುವುದರ ಹ್ರಸ್ವರೂಪ. ಇದೊಂದು ಬಗೆಯ ಯಂತ್ರಕಲಿಕೆಯ ಸಂಕೀರ್ಣ ವ್ಯವಸ್ಥೆ. ಈಗಾಗಲೇ ಲಭ್ಯವಿರುವ ಅಗಾಧ ಪಠ್ಯವನ್ನು ಸಂಸ್ಕರಿಸಿ, ಒಂದು ನುಡಿ-ಮಾದರಿ ತಯಾರಿಸಿಟ್ಟುಕೊಂಡು, ಅದರಂತೆ ನಮಗೆ ಬೇಕಾದ ಪಠ್ಯವನ್ನು ನಾವೇ ಬರೆದಂತೆಯೇ ಬರೆದುಕೊಡುವುದು ಇದರ ವೈಶಿಷ್ಟ್ಯ. ಈ ಮಾದರಿಗಳು ಹೆಚ್ಚು ಪುಟಗಳನ್ನು ಓದಿ-ಕಲಿತಷ್ಟು ಇವು ಬರೆದುಕೊಡುವ ಪಠ್ಯ ಮನುಷ್ಯ ಲೇಖಕರು ಬರೆವ ಪಠ್ಯದಷ್ಟೇ ಸಹಜವಾಗುತ್ತವೆ” ಎಂದು ಹೇಳಿದೆ.

ಅದಕ್ಕೆ ಮೇಷ್ಟ್ರು “ಓಹೋ.. ಈ ಚಾಟು-ವಿಟ್ಠಲನಾಥ ಒಂದು ರೀತಿಯಿಂದ ಸರ್ವಜ್ಞನೇ ಸರಿ. ಸರ್ವರೊಳಗೊಂದು ನುಡಿ ಕಲಿತು ವಿದ್ಯದ ಪರ್ವತವೇ ಆದ ಸರ್ವಜ್ಞ.. “ ಎಂದು ನಕ್ಕರು.

ನಾನು ಕೂಡ ಮೇಷ್ಟ್ರ ಮಾತನ್ನು ಒಪ್ಪಿ, ಅವರು ‘ಚಾಟ್‌ ಜಿಪಿಟಿʼಯನ್ನು ಚಾಟು-ವಿಟ್ಠಲನಾಥ ಎಂದು ನಡುಗನ್ನಡದ ಕವಿಯ ಹೆಸರಿನ ದೀಕ್ಷೆ ಕೊಟ್ಟದ್ದು ಗಮನಿಸಿ ನಸುನಕ್ಕೆ.

ನಾನು ಒಂದು ಇಂಗ್ಲೀಷ್ ಪ್ರಶ್ನೆಯನ್ನು ಗೂಗಲ್‌ನಲ್ಲಿ ಕೇಳಿ ಅದೇ ಪ್ರಶ್ನೆಯನ್ನು ‘ಚಾಟ್‌ ಜಿಪಿಟಿʼನಲ್ಲೂ ಕೇಳಿ, ಅವೆರಡರ ಉತ್ತರಗಳನ್ನು ಮೇಷ್ಟ್ರಿಗೆ ತೋರಿಸಿ ವ್ಯತ್ಯಾಸ ತಿಳಿಸಿದೆ. ಗುರುಗಳು ಚಾಟು ವಿಠಲನ ಚಾತುರ್ಯಕ್ಕೆ ಮಾರು ಹೋದರು. ಆದರೆ ಮೇಷ್ಟ್ರು ಒಂದು ಪ್ರಶ್ನೆಯನ್ನು ಕನ್ನಡದಲ್ಲಿ ಕೇಳಿದರು. ಚಾಟ್ ವಿಠಲ ಏನೋ ಅಸಂಬದ್ಧವಾಗಿ ಉತ್ತರ ಬರೆದ. ಗುರುಗಳಿಗೆ ರೇಗಿ ಹೋಯಿತು. “ನೀವು ಇಷ್ಟೆಲ್ಲ ಜನ ಬೆಂಗಳೂರನ್ನ ಐಟಿ ಹಬ್ ಮಾಡಿದೀವಿ ಎಂದು ಕೊಚ್ಚಿಕೊತೀರಿ. ಟೆಕ್ನಾಲಜಿಯಲ್ಲಿ ಅಷ್ಟೆಲ್ಲ ಮುಂದುವರೆದರೆ ಕನ್ನಡದಲ್ಲಿ ಯಾಕೆ ಸರಿಯಾದ ಸೇವೆ ಸಿಗುತ್ತಿಲ್ಲ” ಎಂದು ದಬಾಯಿಸಿದರು. ನಾನು ಕೂಡ ಮೇಷ್ಟ್ರ ಮಾತಿಗೆ ಒಪ್ಪಿದೆ. ಬಹುತೇಕವಾಗಿ ನಾವು ಕನ್ನಡದಲ್ಲಿ ಸೇವೆ ಹಕ್ಕಿನಿಂದ ಕೇಳುವುದಿಲ್ಲ. ಹೀಗಾಗಿ ಯಾರೂ ಕನ್ನಡದಲ್ಲಿ ಸೇವೆ ಒದಗಿಸುವುದಿಲ್ಲ, ಒದಗಿಸಿದರೂ ಅದು ಕಳಪೆಮಟ್ಟದ ಅನುವಾದವೇ ಆಗಿರುತ್ತದೆ ಎಂದುಕೊಂಡೆ.

ಆದರೂ ಗುರುಗಳಿಗೆ ಸಮಾಧಾನ ಮಾಡೋಣವೆಂದು “ಇಂತಹ ಕೆಲವೊಂದು ತಂತ್ರಾಂಶಗಳು ಈಗ ಮುಕ್ತ ತಂತ್ರಾಂಶಗಳಾಗಿವೆ, ಅವುಗಳನ್ನು ನಾವು ನಮ್ಮ ಕನ್ನಡದಲ್ಲಿ ಸರಿಯಾದ ಪ್ರತಿಕ್ರಿಯೆ ಕೊಡುವಂತೆ ಮಾಡಬಹುದು” ಎಂದು ಹೇಳಿದೆ. ಸಮಾಧಾನಕ್ಕೆಂದು ಹೇಳಿದ ಮಾತನ್ನೇ ಗುರುಗಳು ಗಟ್ಟಿಯಾಗಿ ಹಿಡಿದು ನನ್ನ ಜೀವ ತಿನ್ನುತ್ತಾರೆ ಎಂದು ಅಂದುಕೊಂಡಿರಲಿಲ್ಲ.

ಕೆಲ ದಿನಗಳ ನಂತರ ಗುರುಗಳು ಹಳೆಯ ಮಾತನ್ನು ನೆನಪಿಸಿ, ಯಾವಾಗ ಕೆಲಸ ಶುರು ಮಾಡುವುದು ಎಂದು ನನ್ನನ್ನು ಕೇಳಿದರು. ನಾನು ‘ಏನೋ ಆಫೀಸಿನ ಕೆಲಸದಲ್ಲಿ ತೊಡಗಿರುವುದರಿಂದ ಮುಂದಿನವಾರದಿಂದ ಶುರು ಮಾಡೋಣʼ ಎಂದು ಬೀಸೋ ದೊಣ್ಣೆಯಿಂದ ಪಾರಾದೆ. ಮುಂದಿನ ವಾರ ಮೇಷ್ಟ್ರು ಮತ್ತೆ ಹಳೆಯ ದೊಣ್ಣೆಯೊಂದಿಗೆ ಹಾಜರಾದರು. ಹೀಗೆ ಎರಡು-ಮೂರು ಸಲವಾದ ಮೇಲೆ ನನಗೆ ನನ್ನ ಬಗ್ಗೆಯೇ ಜಿಗುಪ್ಸೆಯಾಯಿತು… ವಯಸ್ಸಾದ ಮೇಷ್ಟ್ರು ಅಷ್ಟು ಉತ್ಸಾಹದಿಂದ ಇರಬೇಕಾದರೆ, ನಾನು ಅವರ ಮಾತನ್ನು ವಾರದಿಂದ ವಾರಕ್ಕೆ ಮುಂದೂಡುತ್ತಾ ಇರೋದು ನಾಚಿಗ್ಗೇಡು ಎಂದು, ಒಂದು ವಾರ ಬ್ಯಾಡ್ಮಿಂಟನ್‌ ಆಡಲು ಕೂಡ ಹೋಗದೆ ಆರ್ಟಿಫಿಷಿಯಲ್‌ ಇಂಟಲೀಜನ್ಸ್‌ ಬಗೆಗಿನ, ಅದರಲ್ಲೂ ಮಶೀನ್‌ ಲರ್ನಿಂಗ್‌ನ ಬಗೆಗಿನ ಎಲ್ಲ ಮಾಹಿತಿಯನ್ನೂ ಸಮೀಕ್ಷೆ ಮಾಡಿ ಮುಗಿಸಿದೆ. ಅದರ ಬಗೆಗೆ ಒಂದು ಯೋಜನೆಯನ್ನೂ ತಯಾರಿಸಿದೆ.

ಒಂದು ಶುಭ ಶುಕ್ರವಾರ ನಾನು ಮೇಷ್ಟ್ರ ಮನೆಗೆ ಹೋಗಿ ನನ್ನ ಲ್ಯಾಪ್‌ಟಾಪ್‌ನಲ್ಲಿ ಪಿಪಿಟಿ ಪ್ರೆಸೆಂಟೇಷನ್ ಅನ್ನು ತೋರಿಸುತ್ತ ಅವರಿಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಇತಿಹಾಸವನ್ನು ತಿಳಿಸಿದೆ. ಗುರುಗಳು “ಈ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅನ್ನು ಕನ್ನಡದಲ್ಲಿ ‘ಕೃತಕ ಬುದ್ಧಿಮತ್ತೆʼ ಅಂತಾರಲ್ಲ? ಅದನ್ನು ‘ಕೃಬುʼ ಎಂದು. ಹೃಸ್ವೀಕರಿಸಬಹುದು… ಇಲ್ಲವೇ ‘ಯಂತ್ರ ಜಾಣ್ಮೆʼ ಎಂದು ಅನುವಾದಿಸಿ ʼಯಂಜಾʼ ಎಂದು ಸ್ವೀಕರಿಸಬಹುದು” ಎಂದರು. ಅದಕ್ಕೆ ನಾನು “‘ಕೃಬುʼ ಅನ್ನೋದು ಒಂದು ಚೂರು ಕಷ್ಟ. ‘ಯಂಜಾʼನೇ ಚೆನ್ನಾಗಿದೆ. ಇದೆ ಇರಲಿ” ಎಂದೆ.

ನನ್ನ ಪ್ರಸೆಂಟೇಷನ್‌ ಮುಂದುವರಿಸಿ “ನಾವು ತಯಾರಿಸುತ್ತಿರುವ ಈ ತಂತ್ರಾಂಶ ವ್ಯವಸ್ಥೆಯ ಕೇಂದ್ರಬಿಂದು – ಲಾರ್ಜ್ ಲಾಂಗ್ವೇಜ್‌ ಮಾಡಲ್. ಅದಕ್ಕೆ ನಾವು ಕನ್ನಡದಲ್ಲಿ “ನುಡಿ ಮಾದರಿ” ಎನ್ನಬಹುದು. ಏನೇ ಪ್ರಶ್ನೆ ಕೇಳಿದರೂ ತಂತ್ರಾಂಶ ‘ಮಾದರಿʼಯ ನೋಡಿಕೊಂಡು, ಈಗಾಗಲೇ ಗೊತ್ತಿರುವ ಮಾಹಿತಿಯನ್ನು ಉಪಯೋಗಿಸಿ ಉತ್ತರ ಬರೆಯುತ್ತದೆ. ಈ ನುಡಿ ಮಾದರಿ ಎಷ್ಟು ದೊಡ್ಡದಿರುತ್ತದೋ, ಎಷ್ಟು ವ್ಯವಸ್ಥಿತವಾಗಿರುತ್ತದೋ, ಅಷ್ಟು ತಂತ್ರಾಂಶದಿಂದ ಬರುವ ಫಲಿತಾಂಶ ಚನ್ನಾಗಿ ಇರುತ್ತದೆ. ಬಹಳಷ್ಟು ವಿಷಯಗಳು, ಶೈಲಿಗಳು ನುಡಿ ಮಾದರಿಯಲ್ಲಿ. ನೋಂದಣಿಯಾಗಿದ್ದರೆ, ತಂತ್ರಾಂಶದ ಕಾರ್ಯಕ್ಷಮತೆ ಹೆಚ್ಚಿರುತ್ತದೆ.” ಎಂದು ಉಸಿರು ತೆಗೆದುಕೊಳ್ಳಲು ನಿಂತೆ.

ಗುರುಗಳು “ಲಾರ್ಜ್ ಲಾಂಗ್ವೇಜ್‌ ಮಾಡಲ್ದ ಅನುವಾದ ‘ದೊಡ್ಡ ನುಡಿ ಮಾದರಿʼ. ಅದನ್ನು ನಾವು ದೊನುಮಾ ಎಂದು ಹೇಳಬಹುದು” ಎಂದರು.

ನಾನು ಗುರುಗಳ ನಾಮಕರಣವನ್ನು ಒಪ್ಪಿ, ಮುಂದುವರಿಸಿದೆ. “ಈಗಾಗಲೇ ಕೆಲ ಸ್ವಯಂಸೇವಕರು ಕನ್ನಡದ ವ್ಯಾಕರಣವನ್ನು ಅರ್ಥಮಾಡಿಕೊಳ್ಳುವಂತಹ ತಂತ್ರಾಂಶವನ್ನು ಬರದಿದ್ದಾರೆ. ಅದರ ಸೋರ್ಸ್‌ ಕೋಡನ್ನು ನಾವು ಉಪಯೋಗಿಸಿ, ಬೆಳೆಸಬಹುದು” ಎಂದು ಹೇಳಿ ಆ ತಂತ್ರಾಂಶದ ಡೆಮೋ ತೋರಿಸಿದೆ.

ನಾನು ‘ಈಗ ವೇಳೆ ಎಷ್ಟಾಯಿತು?ʼ ಎಂದು ಕೇಳಿದ್ದಕ್ಕೆ ತಂತ್ರಾಂಶ ಸರಿಯಾಗಿ ಉತ್ತರ ಕೊಟ್ಟಿತು.

ಮೇಷ್ಟ್ರು “ಈಗ ಸಮಯ ಎಷ್ಟಾಯಿತು?” ಎಂದು ಕೇಳಿದ್ದಕ್ಕೆ ತಂತ್ರಾಂಶ ಸರಿಯಾಗಿ ಉತ್ತರ ಕೊಟ್ಟಿತು. “ಈಗ ಕಾಲ ಎಷ್ಟಾಯಿತು?”, “ಈಗ ಹೊತ್ತು ಎಷ್ಟಾಯಿತು?” ಎಂದೆಲ್ಲಾ ಕೇಳಿದರೂ ತಂತ್ರಾಂಶ ಸರಿಯಾಗಿ ಉತ್ತರ ಕೊಟ್ಟಿತು. ಗುರುಗಳು ಸಂತುಷ್ಟರಾದರು.

ಆದರೂ ಇನ್ನೂ ಒಂದು ಪ್ರಯತ್ನ ಮಾಡೋಣ ಎಂದು “ಈಗ ಟೈಮು ಎಷ್ಟಾಯಿತು?” ಅವರು ಕೇಳಿದಾಗ ತಂತ್ರಾಂಶ ಕಕ್ಕಾಬಿಕ್ಕಿಯಾಗಿ “ಉತ್ತರ ಗೊತ್ತಿಲ್ಲ” ಎಂದು ಪೆಚ್ಚು ಮುಸುಡಿಯ ಇಮೋಜಿ ಪ್ರಕಟಿಸಿತು!

ನಾನು ಗುರುಗಳಿಗೆ “ಈ ದೊನುಮಾ ದಲ್ಲಿ ನಾವು ಕನ್ನಡದಲ್ಲಿ ‘ಟೈಮ್‌ʼ ಎಂಬ ಆಂಗ್ಲಪದವನ್ನು ತದ್ಭವ ಮಾಡಿಕೊಂಡು ಬಳಸುತ್ತೇವೆ ಎಂದು ನೊಂದಣಿಯಾಗಿಲ್ಲ. ಅದಕ್ಕೆ ತಂತ್ರಾಂಶ ʼಉತ್ತರ ಗೊತ್ತಿಲ್ಲʼ ಎಂದಿತು” ಎಂದು ವಿವರಿಸಿದೆ.

ಗುರುಗಳು ತಲೆಯಾಡಿಸಿ “ಗೊತ್ತಿಲ್ಲದ್ದು ಗೊತ್ತಿಲ್ಲ ಎಂದು ಹೇಳುವ ಈ ಪ್ರಾಮಾಣಿಕ ತಂತ್ರಾಂಶಕ್ಕೆ ‘ಕೃತಕʼʼ ಎಂದರೆ ದೇವರು ಮೆಚ್ಚುವನೆ? ನಾವು ಯಂಜಾ- ಯಂತ್ರಜಾಣ್ಮೆ ಎಂದಿದ್ದೇ ಒಳ್ಳೆಯದಾಯಿತು” ಎಂದು ತಮಾಷೆಮಾಡಿದರು.

‘ಕೃತಕʼ ಪದದ ಮೇಲೆ ಅವರು ಶ್ಲೇಷೆ ಮಾಡಿದ್ದು ಗಮನಿಸಿ ನಾನೂ ನಸುನಕ್ಕೆ.

ಗುರುಗಳು ಇನ್ನೂ ತಮಾಷೆಯ ಮೂಡಿನಲ್ಲಿಯೇ ಮುಂದುವರಿಸಿದರು – “ನಿಮಗೆ ಒಂದು ಜೋಕು ಹೇಳತೇನಿ ಕೇಳಿ.. ಒಂದು ಚರ್ಚಿನಲ್ಲಿ ಇಬ್ಬರು ಗೆಳೆಯರು ಪಾದ್ರಿಗಳ ಪ್ರವಚನ ಕೇಳತಾ ಇದ್ದರು. ಪ್ರವಚನ ಮುಗಿದ ಮೇಲೆ ಇಬ್ಬರಲ್ಲಿ ಒಬ್ಬನಿಗೆ ಭಕ್ತಿಜಾಗ್ರತಿಯಾಯಿತು. ಅವನು ಪಾದ್ರಿಗಳ ಹತ್ತಿರ ಹೋಗಿ, ಅಂಜುತ್ತಾ ‘ಫಾದರ್‌, ದೈವಪ್ರಾರ್ಥನೆ ಮಾಡುವಾಗ ಸಿಗರೇಟು ಸೇದಬಹುದಾ?ʼ ಎಂದು ಕೇಳಿದ. ಪಾದ್ರಿಗಳು ‘ಶಾಂತಂ ಪಾಪಂ, ಪ್ರಾರ್ಥನೆಯಂತಹ ಪವಿತ್ರ ಕಾರ್ಯಮಾಡುವಾಗ ಸಿಗರೇಟು ಸೇದುವಂತಹ ಅಧಮ ಕೆಲಸ ಸಲ್ಲದು ಮಗುʼ ಎಂದು ಹೇಳಿ ಕಳುಹಿಸಿದರು. ಇನ್ನೊಬ್ಬನಿದ್ದನಲ್ಲ, ಅವನು ಕಿಲಾಡಿ. ಪ್ರಶ್ನೆ ಕೇಳಿ ತನ್ನ ಪೆಚ್ಚುಮೋರೆ ಹಾಕಿಕೊಂಡು ಬಂದ ಗೆಳೆಯನ ಅವಸ್ಥೆ ನೋಡಿ, ತಾನೂ ಪಾದ್ರಿಗಳ ಹತ್ತಿರ ಹೋಗಿ ಒಂದು ಪ್ರಶ್ನೆ ಕೇಳಿದ – ʼ ‘ಫಾದರ್‌, ಸಿಗರೇಟು ಸೇದುವಾಗ ಪ್ರಾರ್ಥನೆ ಮಾಡಬಹುದಾ?ʼ. ಪಾದ್ರಿಗಳು ‘ಓಹೋ, ಯಾಕಾಗೋದಿಲ್ಲ? ಪ್ರಾರ್ಥನೆಯಂತಹ ಪವಿತ್ರ ಕಾರ್ಯ ಯಾವಾಗಬೇಕಾದರೂ ಮಾಡಬಹುದುʼ ಎಂದರು. ವಾಪಸ ಬಂದ ಕಿಲಾಡಿ ತನ್ನ ಗೆಳೆಯನಿಗೆ ಹೇಳಿದ ʼಸರಿಯಾದ ಉತ್ತರ ಬೇಕೆಂದರೆ ಸರಿಯಾದ ಪ್ರಶ್ನೆ ಕೇಳಬೇಕು!!ʼ” ಎಂದು ಹೇಳಿ “ನಿಮ್ಮ ಈ ತಂತ್ರಾಂಶ ಸರಿಯಾದ ಉತ್ತರ ಕೊಡ ಬೇಕೆಂದರೆ ಅದಕ್ಕೆ ಸರಿಯಾದ ಪ್ರಶ್ನೆ ಕೇಳಬೇಕು” ಎಂದು ನಕ್ಕರು.

ಗುರುಗಳನ್ನು ಹಾಗೆ ಬಿಟ್ಟರೆ ತಮಾಷೆ ಮಾಡುತ್ತಾ ಹಾದಿ ತಪ್ಪಿ ಹೋಗುತ್ತಾರೆ ಎಂದು ನಾನು ವಾಪಸ್ಸು ಅವರನ್ನು ವಿಷಯಕ್ಕೆ ಕರೆತಂದೆ. “ಈ ತಂತ್ರಾಂಶದಲ್ಲಿ ನಾವು ಆರ್ಟಿಫಿಶಿಯಲ್ ಇಂಟಲಿಜೆನ್ಸ್ನ ವಿಭಾಗವಾದ ಮಶೀನ್ ಲರ್ನಿಂಗ್ ಅನ್ನು ಉಪಯೋಗಿಸುತ್ತೇವೆ. ಮಷೀನ್ ಲರ್ನಿಂಗ್ಗೆ ಕನ್ನಡದಲ್ಲಿ ‘ಯಂತ್ರ ಕಲಿಕೆʼ ಎನ್ನಬಹುದು” ಎಂದೆ. ಗುರುಗಳು “ಯಂತ್ರ ಕಲಿಕೆ ಅನ್ನು ʼಯಂಕʼ ಎಂದು ಶಾರ್ಟಫಾರ್ಮ್ ಮಾಡಬಹುದು” ಎಂದರು. ಅವರ ಈ ಶಾರ್ಟ್‌ಫಾರ್ಮ್ ಮಾಡುವ ಹುಚ್ಚಿಗೆ ನನಗೆ ಕಿರಿಕಿರಿಯಾದರೂ ಮುಂದುವರಿಸಿದೆ.

“ಯಂಕ ತಂತ್ರಾಂಶ ಮೂರು ಹಂತಗಳಲ್ಲಿ ಕೆಲಸ ಮಾಡುತ್ತದೆ. ಮೊದಲನೇಯದು ‘ಕಲಿಕೆʼ ಹಂತ. ಇದರಲ್ಲಿ ಈಗಾಗಲೇ ಲಭ್ಯವಿರುವ ಕನ್ನಡ ಬರಹಗಳನ್ನು ತಂತ್ರಾಂಶಕ್ಕೆ ಒದಗಿಸಿ, ಅದರಿಂದ ದೊನುಮಾ ದಲ್ಲಿ ಸೇರಿಸೋದು. ಎರಡನೇ ಹಂತ ‘ಕಣ್ಗಾವಲ ಕೆಲಸʼ. ಇದು ಕೆಲಸದೊಂದಿಗೆ ಕಲಿಯುವುದು. ಈ ಹಂತದಲ್ಲಿ ಯಾರಾದರೂ ತಂತ್ರಾಂಶವನ್ನು ಬಳಸುತ್ತಾ ಅದು ಮಾಡುವ ತಪ್ಪನ್ನು ಅದಕ್ಕೆ ತಿಳಿಸಿಕೊಟ್ಟರೆ, ಅದು ತನ್ನನ್ನು ತಾನೇ ತಿದ್ದಿಕೊಳ್ಳುತ್ತದೆ. ಕೊನೆಯ ಹಂತ ಯಾರ ಕಣ್ಗಾವಲು ಇಲ್ಲದೆ ಕೆಲಸ ಮಾಡುವುದು..”

ಇಷ್ಟು ತಾಂತ್ರಿಕ ವಿವರ ಕೇಳುವಷ್ಟರಲ್ಲಿ ಗುರುಗಳಿಗೆ ಬೋರ್ ಆಯ್ತು ಅನಿಸುತ್ತದೆ. ಅವರು ತಮಾಷೆಯ ದನಿಯಲ್ಲಿ “ಕುಲಕರ್ಣಿ, ಮೇಷ್ಟ್ರಾದ ನಾನೇ ಎಲ್ಲರಿಗೆ ಬೋರ್ ಹೊಡೆಸುತ್ತೇನೆ ಅಂದುಕೊಂಡಿದ್ದೆ, ನೀವು ನನಗೆ ಬೋರ್ ಹೊಡೆಸಿದಿರಿ. ಗುರುವಿಗೆ ತಿರುಮಂತ್ರನಾ..” ಎಂದು ತಮಾಷೆ ಮಾಡಿದರು.

ನಾನು ಕೂಡ ನಕ್ಕು ಬೇಗ ಬೇಗವಾಗಿ ಮುಂದಿನ ಯೋಜನೆಯನ್ನು ವಿವರಿಸಿದೆ. ಅದರ ಪ್ರಕಾರ ನಾನು ಎರಡು ವಾರ ಕೆಲಸ ಮಾಡಿ, ಈಗಿನ ತಂತ್ರಾಂಶದಲ್ಲಿರುವ ಚಿಕ್ಕಪುಟ್ಟ ಸಮಸ್ಯೆಗಳನ್ನು ಪರಿಹರಿಸಿ, ಗುರುಗಳಿಗೆ ಉಪಯೋಗಿಸಲಿಕ್ಕೆ ಬರುವಂತೆ ಮಾಡುವುದು. ಗುರುಗಳು ಮುಂದಿನ ಎರಡು ತಿಂಗಳು ಹೈಸ್ಕೂಲ್ ಮಟ್ಟದ ಕನ್ನಡ ಪಠ್ಯ ಪುಸ್ತಕಗಳು, ಗೈಡ್‌ಗಳು, ಪ್ರಶ್ನೆಪತ್ರಿಕೆಗಳು ಇತ್ಯಾದಿಗಳನ್ನೆಲ್ಲ ದೊನುಮಾದಲ್ಲಿ ಸರಿಯಾಗಿ ಅಳವಡಿಸೋದು. ನಂತರ ಒಂದೊಂದೇ ಪ್ರಶ್ನೆ ಕೇಳಿ ಅದಕ್ಕೆ ಬಂದ ಉತ್ತರವನ್ನು ಪರೀಕ್ಷಿಸಿ, ತಪ್ಪುಗಳನ್ನು ತಿದ್ದುವುದು. ತಂತ್ರಾಂಶದಲ್ಲಿ ಸಮಸ್ಯೆಗಳು ಬಂದಾಗ ನಾನು ಪರಿಹರಿಸಿಕೊಳ್ಳುವುದು. ಒಟ್ಟಿನಲ್ಲಿ ಸುಮಾರು ಮೂರು ತಿಂಗಳಲ್ಲಿ ನಮ್ಮ ತಂತ್ರಾಂಶ ಒಬ್ಬ ಹೈಸ್ಕೂಲ್ ವಿದ್ಯಾರ್ಥಿಯಷ್ಟು ಜಾಣತನ ಕಲಿಯಬೇಕು. ಅದಾದಮೇಲೆ ಮುಂದಿನ ಯೋಜನೆ ಯೋಚಿಸೋದು.

ನನ್ನ ಯೋಜನೆಗೆ ಗುರುಗಳೂ ಒಪ್ಪಿಕೊಂಡರು.

ಗುರುಗಳು ಚಾಟು ವಿಠಲನ ಚಾತುರ್ಯಕ್ಕೆ ಮಾರು ಹೋದರು. ಆದರೆ ಮೇಷ್ಟ್ರು ಒಂದು ಪ್ರಶ್ನೆಯನ್ನು ಕನ್ನಡದಲ್ಲಿ ಕೇಳಿದರು. ಚಾಟ್ ವಿಠಲ ಏನೋ ಅಸಂಬದ್ಧವಾಗಿ ಉತ್ತರ ಬರೆದ. ಗುರುಗಳಿಗೆ ರೇಗಿ ಹೋಯಿತು. “ನೀವು ಇಷ್ಟೆಲ್ಲ ಜನ ಬೆಂಗಳೂರನ್ನ ಐಟಿ ಹಬ್ ಮಾಡಿದೀವಿ ಎಂದು ಕೊಚ್ಚಿಕೊತೀರಿ. ಟೆಕ್ನಾಲಜಿಯಲ್ಲಿ ಅಷ್ಟೆಲ್ಲ ಮುಂದುವರೆದರೆ ಕನ್ನಡದಲ್ಲಿ ಯಾಕೆ ಸರಿಯಾದ ಸೇವೆ ಸಿಗುತ್ತಿಲ್ಲ” ಎಂದು ದಬಾಯಿಸಿದರು. ನಾನು ಕೂಡ ಮೇಷ್ಟ್ರ ಮಾತಿಗೆ ಒಪ್ಪಿದೆ.

ಅಂದುಕೊಂಡಂತೆ ನಾನು ತಂತ್ರಾಂಶದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿ, ಅದನ್ನು ಓಡಿಸಲು ಒಂದು ಬಾಡಿಗೆ ಸರ್ವರ್‌ನ್ನು ಹೊಂದಿಸಿಕೊಂಡು, ಗುರುಗಳ ಮನೆಯಲ್ಲಿದ್ದ ಹಳೆಯ ಲ್ಯಾಪ್‌ಟಾಪ್‌ನಿಂದ ಕೆಲಸಕ್ಕೆ ಅನುವು ಮಾಡಿಕೊಟ್ಟೆ. ಗುರುಗಳು ಪಠ್ಯಪುಸ್ತಕಗಳನ್ನು ಜಾಲತಾಣಗಳಲ್ಲಿ ಹುಡುಕಿ, ಅವುಗಳನ್ನು ದೊನುಮಾದಲ್ಲಿ ಭರ್ತಿ ಮಾಡಿದರು. ಅದಲ್ಲದೇ ಈಗ ಕನ್ನಡ ಮೇಷ್ಟ್ರಾಗಿರುವ ತಮ್ಮ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಅವರಿಂದ ಹಲವಾರು ಪ್ರಶ್ನೆ ಪತ್ರಿಕೆಗಳನ್ನೂ, ಉತ್ತಮ ಉತ್ತರ ಪತ್ರಿಕೆಗಳನ್ನೂ, ಸ್ಕ್ಯಾನ್ ಮಾಡಿಸಿ ಅವುಗಳನ್ನು ಒಸಿಆರ್ ತಂತ್ರಜ್ಞಾನದಿಂದ ಅಕ್ಷರವಾಗಿ ಬದಲಾಯಿಸಿ, ದೊನುಮಾದಲ್ಲಿ ಭರ್ತಿ ಮಾಡಿದರು. ಅಲ್ಲಿಯವರೆಗೆ ಅಷ್ಟೇನು ಪರಿಚಯವಿಲ್ಲದ ಕಂಪ್ಯೂಟರನ್ನು ಈಗ ಕಲಿಯುತ್ತ, ಕಂಪ್ಯೂಟರ್ಗೆ ಕನ್ನಡವನ್ನು ಕಲಿಸುತ್ತ, ಅದರಲ್ಲಿ ಬರುತ್ತಿದ್ದ ಸಮಸ್ಯೆಗಳನ್ನು ನನಗೆ ತಿಳಿಸುತ್ತ, ಗುರುಗಳು ವೇಗವಾಗಿ ಕೆಲಸಮಾಡತೊಡಗಿದರು. ಮೊದಮೊದಲು ದಿನವೂ ಗುರುಗಳ ಮನೆಗೆ ಹೋಗಿ ಅವರಿಗೆ ಬಂದಿದ್ದ ಸಮಸ್ಯೆಗಳನ್ನು ಪರಿಹರಿಸಿ ಬರುತ್ತಿದ್ದೆ. ನಂತರ ವಾರಕ್ಕೆ ಒಮ್ಮೆ, ಇಲ್ಲವೇ ಎರಡು ಸಲ ಗುರುಗಳ ಮನೆಗೆ ಹೋಗತೊಡಗಿದೆ.. ನಾವು ಅಂದುಕೊಂಡಂತೆ ಮೂರು ತಿಂಗಳಲ್ಲಿ ನಮ್ಮ ತಂತ್ರಾಂಶ, ಗುರುಗಳ ಮಾರ್ಗದರ್ಶನದಲ್ಲಿ ನಿಜವಾಗಿಯೂ ಜಾಣನಾಗಿತ್ತು. ‘ಒಂದೇ ವಾಕ್ಯದಲ್ಲಿ ಉತ್ತರಿಸುವʼ, ‘೫ ಅಂಕಕ್ಕಾಗಿ ವಿಸ್ತೃತವಾಗಿ ಉತ್ತರಿಸುವʼ, ಸಂಧಿ-ಸಮಾಸ, ತತ್ಸಮ-ತತ್ಭವ,ಛಂದಸ್ಸು – ಯಾವುದೇ ಪ್ರಶ್ನೆಗೆ ಸರಿಯಾಗಿ ಥಟ್ಟನೇ ಉತ್ತರ ಬರೆಯವಂತೆ ನಮ್ಮ ತಂತ್ರಾಂಶ ತಯಾರಾಯಿತು. ಮೊದಲೇ ಅದು ‘ಯಂತ್ರ ಕಲಿಕೆʼಯ ತಂತ್ರಾಂಶ. ಯಂತ್ರಕ್ಕೆ ಕಲಿಸಲು ಪುಟ್ಟಲಿಂಗಯ್ಯನವರಂತಹ ಒಳ್ಳೆಯ ಮೇಷ್ಟ್ರು ಇರುವಾಗ, ಅನುಕೂಲ ಆಗದೇ ಇದ್ದೀತೆ?

ಮೊದಲು ಒಲ್ಲದ ಮನಸ್ಸಿನಿಂದಲೇ ಕೆಲಸ ಶುರುಮಾಡಿದ್ದ ನಾನು, ನಮ್ಮ ತಂತ್ರಾಂಶ ಇಷ್ಟು ಚನ್ನಾಗಿ ಕೆಲಸಮಾಡುವುದನ್ನು ನೋಡಿ ಸಂತೃಪ್ತನಾಗಿದ್ದೆ. ಇದನ್ನು ಶಿಕ್ಷಕರ-ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಮುಕ್ತ ತಂತ್ರಾಂಶವಾಗಿ ಬಿಡುಗಡೆ ಮಾಡಬೇಕು ಎಂದು ವಿಚಾರ ಮಾಡತೊಡಗಿದೆ. ಗುರುಗಳಿಗೆ ಬೇರೆ ಒಂದು ವಿಚಾರ ಬಂತು. “ಕುಲಕರ್ಣಿ ಅವರೇ, ನಮ್ಮ ಯಂಕ ಈಗ ಗದ್ಯ ಬರೆಯುವಷ್ಟು ಜಾಣನಾಗಿದ್ದಾನೆ, ಅವನನ್ನು ಪದ್ಯ ಬರೆಯುವಷ್ಟು ಜಾಣ ಯಾಕೆ ಮಾಡಬಾರದು?” ಎಂದು ನನ್ನ ತಲೆಗೆ ಹುಳ ಬಿಟ್ಟರು.

ನಾನು ಅನುಮಾನದಿಂದಲೇ “ಗದ್ಯವಾದರೆ ಅಲ್ಲಿಂದ ಒಂದು ಪದ ಇಲ್ಲಿಂದ ಒಂದು ಪದ ದೇಪಿ ಬರೆದುಕೊಡುವುದು ಸರಳ. ಆದ್ರೆ ಪದ್ಯವನ್ನು ಯಂಕ ಬರೆಯುವುದು ಹೇಗೆ? ಪದ್ಯದ ಅಂದ ಅದರಲ್ಲಿರುವ ಕಲ್ಪನೆ ರಮ್ಯತೆಯಿಂದಾಗಿ, ಪದಗಳ ಲಾಲಿತ್ಯದಿಂದಾಗಿ ಅಲ್ಲವೇ ? ಅಂತಹ ಪದ್ಯ ಯಂಕ ಬರೆಯಲಾದೀತೆ ?” ಎಂದೆ.

ಗುರುಗಳು ನನ್ನ ಮಾತಿಗೆ ಅಸಮ್ಮತಿ ಸೂಚಿಸುತ್ತ “ಗದ್ಯವೋ ಪದ್ಯವೋ ಎಲ್ಲವೂ ಕೂಡ ಹಿಂದಿನವರ ಕೃತಿಗಳ ಆಧಾರ-ಸ್ಫೂರ್ತಿಯಿಂದ ರಚಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ವ್ಯಾಸನ ಮೂಲ ಕಥೆಯನ್ನೇ ಕುಮಾರವ್ಯಾಸ ತನ್ನ ‘ಕೃಷ್ಣ ಕತೆʼಯಾಗಿ ಹೇಳಲಿಲ್ಲವೇ ? ವಾಲ್ಮೀಕಿ ಬರೆದ ಕತೆಯನ್ನೇ ಮುಂದಿನ ಹಲವಾರು ಕವಿಗಳು ಹೇಳಿ-ಹೇಳಿ ಫಣಿರಾಯನನ್ನು ತಿಣುಕಿಸಲಿಲ್ಲವೇ? ಹಾಗೆಯೇ ಕಾಳಿದಾಸನ ಮೇಘದೂತ ಬೇಂದ್ರೆಯ ಮೇಘದೂತನಿಗೆ ಸ್ಪೂರ್ತಿ ಆಗಲಿಲ್ಲವೆ? ಅದೆಲ್ಲಾ ಬಿಡಿ, ಬೀಚಿಯವರು ಒಂದು ಕಡೆ ಏನು ಹೇಳಿದ್ದಾರೆ ಗೊತ್ತಾ?” ಎಂದು,

“ಅಲ್ಲಿಷ್ಟು ಕದ್ದಿಹೆನು ಇಲ್ಲಿಷ್ಟು ಮೆದ್ದಿಹೆನು|
ಬೆಲ್ಲವನು ನೊಣ ಸವಿಯೆ ಅದು ಕಳ್ಳತನವೇ?||
ಎಲ್ಲರೂ ಕಳ್ಳರೆ, ಕವಿಗಳ ಸಾಲು ನಿಂತಿಹುದು|
ಎಲ್ಲ ಜೇಬಲಿ ಕೈ, ಜೇಬು ಅವರದಲ್ಲ ಸಾಲಾಗಿ ನಮಿಸೋ ತಿಂಮ||”ಎಂದು ರಾಗವಾಗಿ ಹೇಳಿದರು.

ನನಗೂ ಅದು ಸರಿ ಎನ್ನಿಸಿದರೂ ಇನ್ನು ಅನುಮಾನ ಇದ್ದೇ ಇತ್ತು. “ಸಾಮಾನ್ಯ ಜನರಿಗೆ ಗದ್ಯಂ ಹೃದ್ಯಂ. ಗದ್ಯವೇ ಬರೆಯಲು, ಓದಲು ತಿಳಿಯಲು ಸರಳ. ಮನುಷ್ಯರಾಗಿದ್ದರೂ ಅವರಿಗೆ ಕವಿಹೃದಯವಿಲ್ಲದಿದ್ದರೆ ಕವಿತೆ ಒಲಿಯುವುದಿಲ್ಲ, ಇನ್ನು ಯಂತ್ರ ಕವಿತೆ ಬರದೀತೆ?” ಎಂದೆ.

ಗುರುಗಳು “ನಿಮ್ಮ ಮಾತನ್ನು ಈಗ ಒಪ್ಪಿದೆ ಅಂದುಕೊಳ್ಳಿ. ಯಂಕನನ್ನು ಕವಿ ಮಾಡಲು ಆಗದಿದ್ದರೂ ಲಿಪಿಕಾರನಾಗಿ ಮಾಡಬಹುದು ಅಲ್ಲವೇ? ಅಂದರೆ ನಾವು ಬರೆಯಬೇಕಾದ ವಿಷಯ ಕೊಟ್ಟರೆ, ಯಂಕ ಹಲಗೆ ಬಳಪವ ಹಿಡಿಯದೆ, ಪದಕ್ಕೆ ಪದ ಸೇರಿಸಿ ಕಾವ್ಯ ಹೊಸೆಯಬಹುದಲ್ಲವೇ?” ಎಂದರು

ನನ್ನ ಅನುಮಾನ ಇನ್ನು ಬಗೆಹರಿದಿರಲಿಲ್ಲ “ನಾವು ವಿಷಯ ಕೊಟ್ಟರೆ ಯಂಕ ವಾಕ್ಯಗಳನ್ನು ಬರೆಯುವಂತೆ ಮಾಡಬಹುದು. ಅವನು ಬರೆದಿರುವುದು ಗದ್ಯವೋ, ಪದ್ಯವೋ ಎಂದು ಹೇಗೆ ಹೇಳೋದು?” ಅಂದೆ.

ನನ್ನ ಮಾತಿಗೆ ಒಪ್ಪಿಗೆ ಸೂಚಿಸುತ್ತ, ಗುರುಗಳು “ನೀವು ಹೇಳೋದು ನಿಜ. ಈಗಿನ ಮುಕ್ತ ಛಂದದ ಬರಹಗಳಲ್ಲಿ ಯಾವುದು ಪದ್ಯ, ಯಾವುದು ಗದ್ಯ ಎಂದು ಹೇಳುವುದು ಕಷ್ಟದ ವಿಷಯ. ಅದಕ್ಕಾಗಿ ನಾವು ಒಂದು ಉಪಾಯ ಮಾಡಬಹುದು.” ಎಂದರು. ಮುಂದುವರಿಸಿ “ನಾವು ಛಂದೋಬಂಧಕ್ಕೆ ಒಳಪಟ್ಟ ಕಾವ್ಯ ಬರೆಯಲು ಹೇಳಿದರೆ ಯಂಕನಿಗೆ ಅದು ಸುಲಭ. ಅದೂ ಮಾತ್ರಾಗಣ ಆಧಾರಿತ ಛಂದಸ್ಸಾದರೆ ಮತ್ತೂ ಸಲೀಸು. ಕುಮಾರವ್ಯಾಸ ಬರೆದ ಹಾಗೆ ಆರು ಸಾಲಿನ ಪದ್ಯ – ಒಂದು, ಎರಡು, ನಾಲ್ಕು ಮತ್ತು ಐದನೇ ಸಾಲುಗಳಲ್ಲಿ ೩-೪-೩-೪ ರ ಮಾತ್ರೆಗಳುಳ್ಳ ಪದಗಳನ್ನು ಹಾಕಿ, ಮೂರು ಮತ್ತು ಆರನೇ ಸಾಲಿನಲ್ಲಿ ೩-೪-೩-೪-೩-೪ ರ ಮಾತ್ರೆಗಳುಳ್ಳ ಪದಗಳನ್ನು ಹಾಕಿ ಪದ್ಯ ಹೊಸೆ ಎಂದರೆ ಭಾಮಿನಿ ಷಟ್ಪದಿಯ ಪದ್ಯ ಬರೆಯಬಹುದಲ್ಲವೇ?” ಎಂದರು.

ನಾನು ಅವರ ಮಾತು ಕೇಳಿ ಮೂಕನಾಗಿ ಹೋದೆ. ಗುರುಗಳು ಈ ಯಂಕ ತಂತ್ರಜ್ಞಾನದ ಸಾಧ್ಯತೆಗಳ ಬಗ್ಗೆ ಎಷ್ಟು ಯೋಚಿಸಿದ್ದಾರೆ ಎಂದು ಅಚ್ಚರಿಯಾಯಿತು.

ಆವಾಗ ಹುಟ್ಟಿದ್ದೇ ಈ ಕಬ್ಬಿಗ.ai ತಂತ್ರಾಂಶ.

ಬಹುಬೇಗ ನಾನು ಆರೂ ಷಟ್ಪದಿಗಳಿಗೆ ಟೆಂಪ್ಲೇಟುಗಳನ್ನು ರಚಿಸಿದೆ- ಭಾಮಿನಿಗೆ ೩-೪-೩-೪ ರ ಮಾತ್ರಾಗಣದ್ದು, ವಾರ್ಧಕಕ್ಕೆ ೫-೫-೫-೫ ಮಾತ್ರಾಗಣದ್ದು ಹೀಗೆ. ಈ ಟೆಂಪ್ಲೇಟುಗಳನ್ನು ಉಪಯೋಗಿಸಿ ತಂತ್ರಾಂಶ, ಅಯಾ ಸಂದರ್ಭಕ್ಕೆ ಅರ್ಥ ಸರಿ ಹೋಗುವಂತಹ, ಜೊತೆಗೆ ಸರಿಯಾದ ಮಾತ್ರೆಯೂ ಇರುವ ಪದಗಳನ್ನು ಶಬ್ದಕೋಶದಲ್ಲಿ ಹುಡುಕಿ ಛಂದೋಬದ್ಧವಾದ ಪದ್ಯ ರಚಿಸಬಹುದು. ಜೊತೆಗೆ ಗುರುಗಳು ರಾಘವಾಂಕನಿಂದ ಶುರು ಮಾಡಿ, ಕುಮಾರವ್ಯಾಸ, ಲಕ್ಷ್ಮೀಶ, ಸಿದ್ಧನಂಜೇಶರನ್ನು ಸೇರಿಸಿ, ಕೊನೆಗೆ ಮುದ್ದಣನವರೆಗೆ ಎಲ್ಲಾ ಷಟ್ಪದಿ ಕವಿಗಳ ಕೃತಿಗಳನ್ನು ದೊನುಮಾಕ್ಕೆ ಅಳವಡಿಸಿಕೊಟ್ಟರು. ಅದರಿಂದ ನಮ್ಮ ಕಬ್ಬಿಗ.ai ತಂತ್ರಾಂಶ ಆ ಎಲ್ಲಾ ಕವಿಗಳ ಕೃತಿಗಳಿಂದ ಒಂದೊಂದು ನುಡಿ ಬಳಸಿ, ಜೊತೆಗೆ ತನ್ನ ಸಂಗ್ರಹದಲ್ಲಿರುವ ಅಗಾಧ ಪದ ಸಂಪತ್ತನ್ನು ಉಪಯೋಗಿಸಿ ತನ್ನದೇ ಕಾವ್ಯ ಬರೆಯುವಂತಹ ಸರ್ವಜ್ಞ ಕವಿಯಾಯಿತು. ಬಳಕೆದಾರ ಕೆಲವೇ ಪದಗಳಲ್ಲಿ ಸಂದರ್ಭ ಸೂಚಿಸಿ, ತನಗೆ ಶರ-ಕುಸುಮ-ಭೋಗ-ಭಾಮಿನಿ-ಪರಿವರ್ಧಿನಿ-ವಾರ್ಧಕಗಳಲ್ಲಿ ಯಾವ ಷಟ್ಪದಿಯಲ್ಲಿ ಪದ್ಯ ಬೇಕು ಎಂದರೆ, ಆ ಷಟ್ಪದಿಯ ಪದ್ಯ ಕ್ಷಣಾರ್ಧದಲ್ಲಿ ತಂತ್ರಾಂಶದಿಂದ ತಯಾರು. ಪದ್ಯ ಇಷ್ಟವಾಗಲಿಲ್ಲವಾ? ರಿಫ್ರೆಶ್‌ ಮಾಡಿದರೆ ಮತ್ತೊಂದು ಪದ್ಯ ರೆಡಿ. ಪ್ರತಿ ಪದ್ಯಕ್ಕೂ ಅದು ಅತೀ ಹೆಚ್ಚು ಹೋಲಿಕೆಯ ಪೂರ್ವಸೂರಿಗಳ ಪದ್ಯವನ್ನೂ ತೋರಿಸುತ್ತದೆ. ಹೋಲಿಕೆ ತುಸು ಹೆಚ್ಚೇ ಇದೆ ಎನ್ನಿಸಿದರೆ, ರಿಫ್ರೆಶ್‌ ಮಾಡಿದರಾಯ್ತು!! ಪದ್ಯದಲ್ಲಿ ಒಂದು ಪದ ಇಷ್ಟವಾಗಲಿಲ್ಲವಾ? ನೀವೇ ಬೇರೆ ಪದ ಸೇರಿಸಿ, ಅದೂ ಕೂಡ ಓಕೆ!!

ಗುರುಗಳಿಗೆ ಈ ಕಬ್ಬಿಗ ತಂತ್ರಾಂಶ ಮಗುವಿನ ಕೈಯಲ್ಲಿ ಆಟಿಗೆ ಸಿಕ್ಕಂತಾಯಿತು. ಅವರು ಹೂವು, ಹಣ್ಣು, ಚಂದ್ರ, ಬೆಳದಿಂಗಳು, ದೀಪಾವಳಿ, ಯುಗಾದಿ ಕೊನೆಗೆ ಹೋಳಿ ಹುಣ್ಣಿಮೆಯ ಬಗ್ಗೆ ಕೂಡ ಪದ್ಯ ಬರೆಸಿದರು. ಪದ್ಯಗಳನ್ನು ಒಂದು ಷಟ್ಪದಿಯಲ್ಲಿ ಬರೆಸಿ, ಮತ್ತೊಂದು ಷಟ್ಪದಿಗೆ ಬದಲಾಯಿಸಿಸಿದರು.. ಎಲ್ಲಾ ಪದ್ಯಗಳೂ ಚನ್ನಾಗಿರುತ್ತಿರಲಿಲ್ಲವಾದರೂ, ಅದರ ಬದಲು ಮತ್ತೊಂದು ಪದ್ಯ ಕೆಲವೇ ಕ್ಷಣಗಳಲ್ಲಿ ತಯಾರಾಗುತ್ತಿದ್ದರಿಂದ ಗುರುಗಳಿಗೆ ತಂತ್ರಾಂಶದ ಬಗ್ಗೆ ಬಹಳ ಸಂತೋಷವಾಗಿತ್ತು. ನನಗೂ ಕೂಡ ತಂತ್ರಾಂಶದ ಫಲಿತಾಂಶ ಸಮಾಧಾನಕರವಾಗಿತ್ತು.

ನಾನು ಇದರ ಬಗ್ಗೆ ಯಾವುದಾದರೂ ಕಾನ್ಫರನ್ಸ್‌ನಲ್ಲಿ ಪೇಪರ್ ಪ್ರಸೆಂಟ್ ಮಾಡಬೇಕು ಎಂದು ವಿಚಾರ ಮಾಡುತ್ತಿರುವಾಗ ಗುರುಗಳು ಬೇರೆಯದೇ ಆಲೋಚನೆಯಲ್ಲಿದ್ದರು..

“ಈಗ ಷಟ್ಪದಿ ರಚನೆ ಮಾಡುವಂತೆ ಮುಂದೆ ಕಂದಪದ್ಯ, ತ್ರಿಪದಿಗಳನ್ನು ರಚಿಸುವಂತೆ ಮಾಡಬೇಕು. ಮತ್ತೂ ಒಂಚೂರು ಪ್ರಯತ್ನ ಪಟ್ಟರೆ, ಈ ‘ಕಬ್ಬಿಗʼನನ್ನು ಶತಾವಧಾನಿಯಲ್ಲ, ಸಹಸ್ರಾವಧಾನಿ ಮಾಡಬಹುದು..” ಎಂದು ಗುರುಗಳು ಹೇಳ ತೊಡಗಿದರು. ನಾನು ಅವರನ್ನು ತಡೆದು “ಎಲ್ಲಾ ಮಾಡೋಣ ಗುರುಗಳೆ, ಈಗ ನನ್ನ ಆಫೀಸಿನ ಕೆಲಸ ಸುಮಾರು ಉಳಿದುಕೊಂಡಿದೆ. ಅದನ್ನು ತೀರಿಸಿ, ಒಂಚೂರು ಸುಧಾರಿಸಿಕೊಳ್ಳುತ್ತೇನೆ. ಆಮೇಲೆ ಮುಂದಿನ ವಿಚಾರ ಮಾಡೋಣ” ಎಂದು ಅವರಿಂದ ಬಿಳ್ಕೊಂಡಿದ್ದೆ.

ಅದಾದ ನಂತರ ನಾನು ಆಫೀಸಿನ ಕೆಲಸದ ನಿಮಿತ್ತ ಅಮೇರಿಕೆಗೆ ಒಂದು ತಿಂಗಳು ಹೋಗಬೇಕಾಯಿತು.

ಅಮೇರಿಕೆಯಲ್ಲಿದ್ದಾಗ ಗುರುಗಳಿಂದ ವಾಟ್ಸಾಪಿನಲ್ಲಿ “ಯಂಜಾಚಾರ್ಯ ವಿರಚಿತ ಪದ್ಮಾವತಿ ಪರಿಣಯವು” ಎಂಬ ಕಡತ, ಅದರ ಜೊತೆಗೆ ಸಾಧ್ಯವಾದಾಗ ಫೋನು ಮಾಡಲು ಒಂದು ಸಂದೇಶ ಬಂದಿತ್ತು. ಕೆಲಸದ ಒತ್ತಡದ ನಡುವೆ ಮೂರು-ನಾಲ್ಕು ದಿನ ಬಿಟ್ಟು ಆ ಕಡತ ನೋಡಿದರೆ ಅದು ಒಂದು ಚಿಕ್ಕ ಕಥನ ಕಾವ್ಯ. ವೆಂಕಟೇಶ-ಪದ್ಮಾವತಿಯರ ಕತೆಯೇ ಕಾವ್ಯದ ಹೂರಣ. ಸುಮಾರು ಇನ್ನೂರು ಪದ್ಯಗಳಿದ್ದ, ಒಂದೊಂದು ಪದ್ಯವೂ ಒಂದೊಂದು ಷಟ್ಪದಿಯಲ್ಲಿ ರಚಿಸಲಾದ ಕಾವ್ಯ.

ನಾನು ಗುರುಗಳಿಗೆ ಫೋನು ಮಾಡಿದೆ. ಅವರು “ಹ್ಯಾಗಿದೆ ನಮ್ಮ ಯಂಜಾಚಾರ್ಯರ ಕಾವ್ಯ?” ಎಂದು ಕೇಳಿದರು. ಅವರ ದನಿಯಲ್ಲಿ ಏನೋ ಕಿಲಾಡಿತನ ಇರೋದನ್ನು ಗುರುತಿಸಿ “ಸಾರ್‌, ಯಾರಿದು ಯಂಜಾಚಾರ್ಯ? ನೀವೇ ತಾನೇ ?” ಎಂದೆ.

ಅವರು “ನಾನಲ್ಲಪ್ಪ.. ನಿಮ್ಮ ಕಬ್ಬಿಗನೇ ಯಂಜಾಚಾರ್ಯ. ಇದು ಅವನೇ ಬರದದ್ದು, ನಾನು ಮಾರ್ಗದರ್ಶಕ ಮಾತ್ರ” ಎಂದರು.

ನಾನು “ಮತ್ತ್ಯಾಕೆ ಈ ಯಂಜಾಚಾರ್ಯ ಹೆಸರು?” ಎಂದು ಕೇಳಿದೆ.

ಅವರು “ಯಂಜಾ ಅಂದರೆ ಯಂತ್ರ-ಜಾಣ್ಮೆ- ಆರ್ಟಿಫೀಸಿಯಲ್‌ ಇಂಟಲೀಜನ್ಸ್.‌ ಯಂಜಾಚಾರ್ಯ ಎಂದರೆ ಅದರ ಆಚಾರ್ಯ” ಎಂದು ನಕ್ಕರು. ಮುಂದುವರಿಸುತ್ತಾ “ಈ ಕಾವ್ಯವನ್ನು ನಾನು ಕೆಲವು ಪಂಡಿತರಿಗೆ ನಮ್ಮ ಹಳ್ಳಿಯ ಮನೆಯ ಅಟ್ಟದಲ್ಲಿ ನಮ್ಮ ಮುತ್ತಾತನ ಕಾಲದ ಸಂದುಕದಲ್ಲಿ ಸಿಕ್ಕಿತು ಎಂದು ಹೇಳಿ ಕಳುಹಿಸಿಕೊಡುತ್ತೇನೆ. ಯಾರಿಗಾದರೂ ಇದು ಯಂಕ ತಂತ್ರಾಂಶದಿಂದ ಬರೆದ್ದು ಎಂದು ಗೊತ್ತಾಗುತ್ತಾ ನೋಡೋಣ” ಎಂದರು.

ನನಗೆ ಗುರುಗಳ ಮಾತಿನಿಂದ ಸಿಟ್ಟು ಬಂತು. ಅವರು ಇಂತಹ ಹಲವಾರು ಪ್ರ್ಯಾಕ್ಟಿಕಲ್‌ ಜೋಕುಗಳನ್ನು ನಮ್ಮ ಬ್ಯಾಡ್ಮಿಂಟನ್‌ ಗುಂಪಿನಲ್ಲಿ ಮಾಡಿದ್ದು ನೆನಪಿತ್ತು. ಆದರೆ ಈ ಹುಡುಗಾಟದಿಂದ ಕನ್ನಡ ಪಂಡಿತ ಲೋಕ ಅಲ್ಲೋಲ ಕಲ್ಲೋಲವಾಗುವುದೆಂದು ನನ್ನ ತಳಮಳವಾಗಿತ್ತು. ನಾನು “ಗುರುಗಳೆ, ಇದು ಅನೈತಿಕ. ಸತ್ಯ ಮುಚ್ಚಿಟ್ಟು ನೀವು ಆಟ ಆಡೋದು ಒಳ್ಳೆಯದಲ್ಲ” ಎಂದು ಜೋರು ದನಿಯಲ್ಲಿಯೇ ದಬಾಯಿಸಿದೆ.

ಗುರುಗಳು “ಕುಲಕರ್ಣಿ, ಕೂಲ್‌ ಡೌನ್..‌ ಬೇರೆಯವರು ಬರೆದದ್ದಕ್ಕೆ ತಮ್ಮ ಹೆಸರು ಹಾಕಿಕೊಂಡು ಮೆರೆಯೋರ ಜಗತ್ತಿನಲ್ಲಿ ನೀವು-ನಾನು ಕೂಡಿ ಮಾಡಿದ ಕೆಲಸಕ್ಕೆ ಒಬ್ಬ ಅನಾಮಿಕನ ಹೆಸರು ಹಾಕತಾ ಇರೋದು ಒಂದು ರೀತಿಯಿಂದ ಸ್ವಾರ್ಥರಹಿತ ಕೆಲಸ. ನಂದಳಿಕೆಯ ಲಕ್ಷ್ಮೀನಾರಣಪ್ಪ ‘ಮುದ್ದಣʼನ ಹೆಸರಿನಲ್ಲಿ ತನ್ನ ಮಹಾಕಾವ್ಯಗಳನ್ನು ಪ್ರಕಟಿಸಿದ್ದು ಕೂಡ ಇಂತಹದೇ ಉದಾಹರಣೆ.” ಎಂದರು.

ನಾನು “ಅಲ್ಲಾ..” ಅಂತೇನೋ ಬಾಯಿ ತೆಗೆಯುತ್ತಿದ್ದಂತೆ, ಗುರುಗಳು ತಾವು ದನಿಯೇರಿಸಿ “ನಿಮಗಿಂತ ನನಗೆ ಅನುಭವ ಹೆಚ್ಚು. ಅದೂ ಈ ಕನ್ನಡ ಪಂಡಿತರ ಮನಸ್ಥಿತಿ ತುಂಬ ಚನ್ನಾಗಿ ಗೊತ್ತು. ಈಗ ನಾವೇ ಇದು ಯಂತ್ರದಿಂದ ಬರೆದಿದ್ದು ಎಂದರೆ ಎಲ್ಲರ ಗಮನ ಯಂತ್ರದ ಮೇಲೆ ಹೋಗಿ, ಅದು ಬರೆದಿರುವ ಸಾಹಿತ್ಯ ಕೃತಿಯ ಬಗ್ಗೆ ಗಮನವೇ ಹೋಗುವುದಿಲ್ಲ. ಆದರಿಂದ ಅಷ್ಟು ಚನ್ನಾಗಿ ಬರೆದ ನಮ್ಮ ಕಬ್ಬಿಗ ತಂತ್ರಾಂಶದ ವಿಶೇಷತೆ ಬೆಳಕಿಗೆ ಬರೋದಿಲ್ಲ. ಮೊದಲು ಪಂಡಿತ ಜನ ‘ಪದ್ಮಾವತಿ ಪರಿಣಯʼ ಬಗ್ಗೆ ಮಾತನಾಡಲಿ ನಂತರ ಕಬ್ಬಿಗ ತಂತ್ರಾಂಶದ ಬಗ್ಗೆ ಬಹಿರಂಗ ಪಡಿಸೋಣ” ಎಂದು ಸಮಾಧಾನ ಪಡಿಸಿದರು.

ನನಗೋ ಗುರುಗಳ ಮಾತಿನಲ್ಲಿ ಏನೂ ತರ್ಕ ಕಾಣಲಿಲ್ಲ, ಆದರೆ ಹಾಳಾಗಿ ಹೋಗಲಿ ಎಂದು ಹೂಂಗುಟ್ಟಿದೆ.

ಎರಡು- ಮೂರು ದಿನಗಳ ನಂತರ ಗುರುಗಳು ಹಲವಾರು ಪತ್ರಿಕೆಗಳ ಕಟ್ಟಿಂಗಗಳ ಚಿತ್ರ ಕಳುಹಿಸಿದ್ದರು. ಅವುಗಳಲ್ಲಿ ಗುರುಗಳು ಒಂದು ಪತ್ರಿಕಾಗೋಷ್ಠಿ ಮಾಡಿ ‘ಪದ್ಮಾವತಿ ಪರಿಣಯʼ ತಮಗೆ ಹ್ಯಾಗೆ ಸಿಕ್ಕಿತು ಎಂದು ಕತೆ ಹೇಳಿದ್ದರ ಸುದ್ದಿ ಇತ್ತು. ಜೊತೆಗೆ ಒಬ್ಬ ಪಂಡಿತರು “ಆರು ಷಟ್ಪದಿಗಳ ಬಗೆಗಳನ್ನು ಸಶಕ್ತವಾಗಿ ದುಡಿಸಿಕೊಂಡಿರುವ ಯಂಜಾಚಾರ್ಯ ಒಬ್ಬ ಮಹಾಕವಿ” ಎಂದು ಉದ್ಘರಿಸಿದ ವಿಷಯ, ಮತ್ತೊಬ್ಬ ಪಂಡಿತರು ಆ ಮಹಾಕಾವ್ಯದಲ್ಲಿ ಯಂಜಾಚಾರ್ಯನ ಆಧುನಿಕ ಮನೋಭಾವ ಕಂಡು ಮೆಚ್ಚಿದ ಸುದ್ದಿ, ಕವಿಯ ಕಾಲದ ಬಗ್ಗೆ ಮತ್ತ್ಯಾರದೋ ಊಹೆ.. ಹೀಗೆ ತರಹಾವೇರಿ ವಿಷಯವಿತ್ತು. ಅದನ್ನೆಲ್ಲಾ ಓದಿ ನಮ್ಮ ಗುರುಗಳು ಇವರನ್ನೆಲ್ಲಾ ಏಪ್ರಿಲ್‌ ಒಂದು ಅಲ್ಲದಿದ್ದರೂ ಮೂರ್ಖ ಮಾಡಿದ್ದಾರಲ್ಲ ಎಂದು ನಕ್ಕೆ. ನಾಳೆ ತಾವೆಲ್ಲ ಟೋಪಿ ಹಾಕಿಸಿಕೊಂಡಿರುವುದು ಗೊತ್ತಾದಾಗ ನಮ್ಮ ಗುರುಗಳನ್ನು ಇವರು ಹಾಗೆಯೇ ಬಿಡುತ್ತಾರೆಯೇ ಎಂದು ಕಾಳಜಿಯೂ ಆಯಿತು..

ನಾನು ಅಮೇರಿಕೆಯ ಆಫೀಸಿಗೆ ಬಂದು ಒಂದು ತಿಂಗಳು ಮುಗಿಯಲು ಬಂದರೂ ಅಂದುಕೊಂಡ ಕೆಲಸಗಳು ಆಗಿಯೇ ಇರಲಿಲ್ಲ. ಆ ಒತ್ತಡದ ನಡುವೆ ಗುರುಗಳು, ಕಬ್ಬಿಗ ಮತ್ತು ಯಂಜಾಚಾರ್ಯರ ಬಗ್ಗೆ ತಲೆ ಕೆಡಿಸಿಕೊಳ್ಳಲು ಸಮಯವೇ ಇರಲಿಲ್ಲ. ಅಂತೂ ಇಂತೂ ಎಲ್ಲ ಕೆಲಸವನ್ನು ಮುಗಿಸಿ ಊರಿಗೆ ಮರಳಲು ತಯಾರಿ ನಡೆಸಿದ ದಿನ ಒಂಚೂರು ಅವಕಾಶ ಸಿಕ್ಕಿತು ಎಂದು ವಾಟ್ಸಾಪು ತೆಗೆದು ನೋಡಿದರೆ ನಮ್ಮ ಬ್ಯಾಡ್ಮಿಂಟನ್‌ ಗುಂಪಿನಲ್ಲಿ ಗುರುಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಂದೇಶ ನೋಡಿ ದಿಗ್ಮೂಢನಾದೆ! ಗುಂಪಿನ ಪರಿಚಿತರಿಗೆ ಫೋನು ಮಾಡಿ ಕೇಳಿದರೆ ಎರಡು ದಿನದ ಹಿಂದೆಯೇ ಗುರುಗಳು ಬ್ಯಾಡ್ಮಿಂಟನ್‌ ಅಂಕಣದಲ್ಲಿಯೇ ಹೃದಯಾಘಾತದಿಂದ ಕುಸಿದು ಬಿದ್ದಿರಂತೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತಂತೆ.

ಈಗ ನಾನು ಏನು ಮಾಡಲಿ ?

ಪುಟ್ಟಲಿಂಗಯ್ಯ ಗುರುಗಳು ಯಂಜಾಚಾರ್ಯನ ಕಾವ್ಯದ ಬಗ್ಗೆ ಹೇಳಿದ್ದೆಲ್ಲವೂ ಕಟ್ಟುಕತೆ ಎಂದು ಬಹಿರಂಗ ಪಡಿಸಲೇ? ಅದೊಂದು ಹುಡುಗಾಟವಾಗಿತ್ತು ಎಂದು ನಾನು ಹೇಳಿದರೆ ಜನ ನಂಬುತ್ತಾರೆಯೇ? ಹಾಗೆ ಹೇಳುವುದರಿಂದ ತೀರಿಕೊಂಡ ಗುರುಗಳ ಗೌರವಕ್ಕೆ ಕುಂದು ಆಗುವದಿಲ್ಲವೇ ? ಯಾರಿಗೂ ಹೇಳದೇ ಅ ಸತ್ಯ ನನ್ನ ಹತ್ತಿರವೇ ಉಳಿದು ಹೋಗಲಿಯೇ ?

ಗುರುಗಳ ಸಾವಿನ ದುಃಖದ ಜೊತೆಗೆ ಇದೊಂದು ಪೀಡೆ ಗಂಟು ಬಿತ್ತಲ್ಲ..

ಏನು ಮಾಡಲಿ ? ಈಗ ನಾನು ಏನು ಮಾಡಲಿ ?..

ಅಂದ ಹಾಗೆ ಷಟ್ಪದಿಯಲ್ಲಿ ಕಾವ್ಯ ರಚನೆ ಮಾಡುವ ಕಬ್ಬಿಗ ತಂತ್ರಾಂಶ ನನ್ನ ಹತ್ತಿರವೇ ಇದೆ, ನಿಮಗೂ ಬೇಕಾ?