ಪ್ರತಿವರ್ಷ ಅಕ್ಟೋಬರ್ ಕಡೆಗೆ ಅಥವಾ ನವೆಂಬರ್ ಶುರುವಿನಲ್ಲಿ ಆಯಾ ಸ್ಥಳೀಯ ನಗರಪಾಲಿಕೆಗಳು ಸಾರ್ವಜನಿಕ ಉದ್ಯಾನವನಗಳಲ್ಲಿರುವ ನೀರಿನ ಕಾರಂಜಿಗಳು, ಮರಗಳು, ಕಮಾನುಗಳು, ಸೇತುವೆಗಳು, ರಸ್ತೆಗಳ ಕಮಾನುಗಳು ಇತ್ಯಾದಿಗಳಿಗೆ ಈ ರೀತಿ ಅಲಂಕಾರಗಳನ್ನು ತೊಡಿಸುತ್ತಾರೆ. ಹೊಸವರ್ಷದ ಆರಂಭದಲ್ಲಿ ತೆಗೆದು ಪುನಃ ಪೆಟ್ಟಿಗೆಗೆ ಸೇರಿಸಿ ಭದ್ರಪಡಿಸುತ್ತಾರೆ. ಕತ್ತಲಾಗುತ್ತಿರುವಂತೆ ಈ ಚಿತ್ತಾಕರ್ಷಕ ಅಲಂಕಾರಗಳನ್ನು ನೋಡಲು ಜನರು ಹೊರಡುತ್ತಾರೆ. ಅದೋ ಅಲ್ಲಿ ನೋಡು ಆ ಮರದ ನೆತ್ತಿಯಿಂದ ಸ್ನೋ ಡ್ರಾಪ್ಸ್ ಬೀಳುತ್ತಿದೆ, ಇಲ್ಲಿ ನೋಡು ಸಾಂಟಾ ಸೈಕಲ್ ಹೊಡೆಯುತ್ತಿದ್ದಾನೆ, ಓಹೋ, ಈ ಕುಣಿದಾಡುತ್ತಿರುವ ಸ್ನೋ ಮ್ಯಾನ್ ಬೊಂಬೆ ಎಷ್ಟು ಮುದ್ದಾಗಿದೆ, ಎಂದೆಲ್ಲಾ ಉದ್ಘಾರಗಳು ಕೇಳುತ್ತವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

ಈ ಆಸ್ಟ್ರೇಲಿಯಾ ಎಂಬ ಬಹು ಪುರಾತನ ನಾಡಿನ ಮುದ್ದು ಪ್ರಾಣಿ ಕಾಂಗರೂ. ಯಾರ ತಂಟೆಗೂ ಬರದೇ, ಯಾರನ್ನೂ ಬೇಟೆಯಾಡದೆ ತನ್ನಷ್ಟಕ್ಕೆ ತಾನು ಓಡಾಡಿಕೊಂಡು ಅಲ್ಲಲ್ಲಿ ಮೈಚಾಚಿಕೊಂಡು ದೊಡ್ಡ ತತ್ವಜ್ಞಾನಿಯಂತೆ ಕಾಣುವ ಸಾಧುಜೀವಿ. ಅದೂ ಕೂಡ ಒಂದು ಪುರಾತನ ಆತ್ಮ. ನನಗೆ ಎಷ್ಟೋ ಬಾರಿ ಆಫ್ರಿಕಾ ಖಂಡದಲ್ಲಿ ಜಿರಾಫೆ ಇರುವಂತೆ ಆಸ್ಟ್ರೇಲಿಯಾದಲ್ಲಿ ಕಾಂಗರೂ ಇದೆ; ಇವರಿಬ್ಬರೂ ಮಹಾನ್ ದಾರ್ಶನಿಕರು ಅನ್ನಿಸಿದೆ. ಈ ‘ಬಿಗ್ ಫೂಟ್’ ಬೂಮರ್ ಕಾಂಗರೂ ಲೋಕಕ್ಕೆ ನವೆಂಬರ್ ಆರಂಭದಲ್ಲೇ ಸರಸರನೆ ಕ್ರಿಸ್ಮಸ್ ಆಗಮಿಸಿ ಈಗಂತೂ ‘Merry Chirstmas’ ಕ್ಷಣ ಎಣಿಕೆ ಶುರುವಾಗಿದೆ. ಸಾಂಟಾ ಕ್ಲಾಸ್ ರಥದ ರೇನ್‌ಡೀರ್‌ಗಳಿಗೆ ನಮ್ಮ ಪಾತಾಳಲೋಕದ ಬೇಸಿಗೆಯ ಬಿಸಿಲು ತಾಳಲಾಗದು. ಅವು ಉತ್ತರಧ್ರುವದಲ್ಲಿಯೇ ಉಳಿದುಕೊಂಡು ತಮ್ಮ ಕೆಲಸಕ್ಕೆ ರಜೆ ಹಾಕಿವೆ. ಹಾಗೆಂದು ಸಾಂಟಾ ತನ್ನ ಕೆಲಸ ನಿಲ್ಲಿಸುವುದೇ?! ಅದಂತೂ ಸಾಧ್ಯವೇ ಇಲ್ಲ ಎನ್ನುವುದು ಆಸ್ಟ್ರೇಲಿಯಾ ಮಕ್ಕಳ ಒಮ್ಮತ. ಹಾಗಾದರೆ ಡೌನ್ ಅಂಡರ್ ಪ್ರಪಂಚದಲ್ಲಿ ಸಾಂಟಾ ರಥವನ್ನು ಎಳೆಯುವವರು ಯಾರು? ಸಾಂಟಾ ತಾತ ಏನು ಸಣ್ಣಕ್ಕೆ ಉದ್ದಕ್ಕೆ ಬಳುಕುವ ದೇಹದ ಚೆಲುವಚೆನ್ನಿಗರಾಯನೇ? ಇದೇನು ಪುಟಾಣಿ ದೇಶವೇ? ಖಂಡದ ಪೂರ್ತಿ ಓಡಾಡಬೇಕೆಂದರೆ ಒಳ್ಳೆ ಬಲವಾದ ಕಾಲುಗಳಿರಬೇಕು. ಜಿಂಕೆಗಳ ಬದಲಿಗೆ ಇಲ್ಲಿ ಯಾರಿದ್ದಾರೆ? ರಥವನ್ನು ಓಡಿಸುವ ಸರದಾರ ಯಾರು?

ಇಗೋ ಇಲ್ಲಿದ್ದಾರೆ ನಮ್ಮ Six White Boomers! ಹಿಂಗಾಲುಗಳನ್ನು ಪಾದಸಮೇತ ನೆಲಕ್ಕೆ ಊರಿಕೊಂಡು ಒಮ್ಮೆ ಚಿಮ್ಮಿಸಿ ನೆಗೆದರೆ ಮೂವತ್ತು ಅಡಿ ಕ್ರಮಿಸುವ ‘ಬಿಗ್ ಫೂಟ್’ ಬೂಮರ್ ಕಾಂಗರೂಗಳೇ ಆ ಮೇಲಿನ ಲೋಕದ ಉತ್ತರ ಧ್ರುವದ ರೇನ್‌ಡೀರ್‌ಗಳಿಗೆ ಸರಿಸಮಾನರಾದವರು. ಅಷ್ಟಲ್ಲದೇ ಹುಟ್ಟಿತೇ ಹಾಡು ಆಸ್ಟ್ರೇಲಿಯಾದಲ್ಲಿ! ಇದನ್ನು ಬರೆದಿದ್ದು ರಾಲ್ಫ್ ಹ್ಯಾರಿಸ್ ಎಂಬಾತ, ೧೯೬೦ರಲ್ಲಿ. ಆಗಿನ ಆಸ್ಟ್ರೇಲಿಯಾದ ಪಶ್ಚಿಮ ತೀರದ ಪೆರ್ತ್ ನಗರದಲ್ಲಿದ್ದ ಈತ ಡಿಸೆಂಬರ್ ಕಡು ಬೇಸಿಗೆಯಲ್ಲೂ ಜನರು ಉತ್ತರ ಧ್ರುವಕ್ಕೆ, ಚಳಿದೇಶಗಳ ಕ್ರಿಸ್ಮಸ್ ಹಬ್ಬಕ್ಕೆ ಹೊಂದುವ ಅದೇ ಹಳೇ ಹಾಡುಗಳನ್ನು ಹಾಡುತ್ತಿದ್ದದ್ದನ್ನ ಕೇಳಿ ನಮ್ಮ ಆಸ್ಟ್ರೇಲಿಯಾದ ಡಿಸೆಂಬರ್ ಬೇಸಿಗೆ ಕ್ರಿಸ್ಮಸ್‌ಗೆ ತಕ್ಕಂಥ ಹಾಡು ಬೇಕು ಎಂದು ಆಲೋಚಿಸಿ Six White Boomers ಎನ್ನುವ ಹೆಸರಿನ ಮಕ್ಕಳ ಚಿತ್ರ-ಪುಸ್ತಕವನ್ನು ತಂದರು. ಪುಸ್ತಕವು ಬಲು ಜನಪ್ರಿಯವಾಗಿ ಅದೊಂದು ಹಾಡಾಗಿ ಜನಮನದಲ್ಲಿ ಇಂದಿಗೂ ಚಿರವಾಗಿದೆ. ಆಸ್ಟ್ರೇಲಿಯಾದ ಬಹುತೇಕ ಮಕ್ಕಳಿಗೆ ಇದು ಚಿರಪರಿಚಿತವಾದ ಹಾಡು ಹಾಗೂ ಪ್ರಿಯವಾದದ್ದು. ಈ ಹಾಡನ್ನು ಕೇಳಿ ತಲೆದೂಗಬೇಕೆಂದರೆ ಲಿಂಕ್ ಇಲ್ಲಿದೆ ನೋಡಿ- https://youtu.be/E8Gbsn5S3hQ. ಹಾಡಿನ ಒಂದು ತುಣುಕು ಇದು:

Six white boomers, snow white boomers,
Racing Santa Claus through the blazing sun.
Six white boomers, snow white boomers,
On his Australian run.

ವಾಪಸ್ ಕ್ರಿಸ್ಮಸ್ ೨೦೨೩ ಲೋಕಕ್ಕೆ ಬರೋಣವಂತೆ. ಶಾಲೆ, ಕಾಲೇಜು, ವಿಶ್ವವಿದ್ಯಾಲಯ, ಕಛೇರಿಗಳು, ಎಲ್ಲಾ ಕೆಲಸದ ಸ್ಥಳಗಳಲ್ಲೂ ಕ್ರಿಸ್ಮಸ್ ಅಲಂಕಾರ ಮತ್ತು ದೀಪೋತ್ಸವ. ದೀಪೋತ್ಸವ ಅಂದರೆ ನಮ್ಮ ಭಾರತದ ದೇವಸ್ಥಾನಗಳಲ್ಲಿ ಕಾಣುವಂಥದ್ದಲ್ಲ. ಎಲ್ಲೆಲ್ಲೂ ಬಣ್ಣಬಣ್ಣದ ಬೆಳಕಿನ ಹಾರಗಳು, ಚಿತ್ತಾರಗಳು, ತೋರಣಗಳು. ಅನೇಕ ಸಾರ್ವಜನಿಕ ಸ್ಥಳಗಳಲ್ಲಿ, ಸೂಪರ್ ಮಾರ್ಕೆಟ್ಟುಗಳಲ್ಲಿ, ಅಂಗಡಿವಹಿವಾಟು ಸ್ಥಳಗಳಲ್ಲಿ ಮತ್ತು ಅಲ್ಲಲ್ಲಿ ಮನೆಗಳ ಮುಂದಿನ ಭಾಗಗಳನ್ನು ಬಗೆಬಗೆಯಲ್ಲಿ ಅಲಂಕರಿಸಿದ್ದಾರೆ. ವಿದ್ಯುತ್ ಚಾಲಿತ ವ್ಯವಸ್ಥೆಯಿಂದ ಅಲಂಕೃತವಾದ ಸಾಂಟಾ ಸ್ಟೇಷನ್ ಗಳಲ್ಲಿ ಸಾಂಟಾ ಜೊತೆ ಅವನ ರೇನ್‌ಡೀರ್‌ಗಳು, elves ಮುಂತಾದವರು ತಲೆ ತೂಗುವುದು, ಕೈ ಬೀಸುವುದು ಇದೆ. ಪೋಲಾರ್ ಬೇರ್, ಕಾಂಗರೂಗಳು, ಸ್ನೋ ಮ್ಯಾನ್, ನಕ್ಷತ್ರಗಳು, ಬಲೂನುಗಳು, ಬ್ಯಾಟರಿ ಚಾಲಿತ ಟ್ರೇನ್ ಸ್ಟೇಷನ್, ಇನ್ನೂ ಅದೇನೇನೋ ಅಲಂಕಾರಗಳು. ಇತ್ತೀಚೆಗೆ ಸೂರ್ಯಶಕ್ತಿ ಚಾಲಿತ ದೀಪಗಳು ಹೆಚ್ಚುತ್ತಿವೆ.

ಪ್ರತಿವರ್ಷ ಅಕ್ಟೋಬರ್ ಕಡೆಗೆ ಅಥವಾ ನವೆಂಬರ್ ಶುರುವಿನಲ್ಲಿ ಆಯಾ ಸ್ಥಳೀಯ ನಗರಪಾಲಿಕೆಗಳು ಸಾರ್ವಜನಿಕ ಉದ್ಯಾನವನಗಳಲ್ಲಿರುವ ನೀರಿನ ಕಾರಂಜಿಗಳು, ಮರಗಳು, ಕಮಾನುಗಳು, ಸೇತುವೆಗಳು, ರಸ್ತೆಗಳ ಕಮಾನುಗಳು ಇತ್ಯಾದಿಗಳಿಗೆ ಈ ರೀತಿ ಅಲಂಕಾರಗಳನ್ನು ತೊಡಿಸುತ್ತಾರೆ. ಹೊಸವರ್ಷದ ಆರಂಭದಲ್ಲಿ ತೆಗೆದು ಪುನಃ ಪೆಟ್ಟಿಗೆಗೆ ಸೇರಿಸಿ ಭದ್ರಪಡಿಸುತ್ತಾರೆ. ಕತ್ತಲಾಗುತ್ತಿರುವಂತೆ ಈ ಚಿತ್ತಾಕರ್ಷಕ ಅಲಂಕಾರಗಳನ್ನು ನೋಡಲು ಜನರು ಹೊರಡುತ್ತಾರೆ. ಅದೋ ಅಲ್ಲಿ ನೋಡು ಆ ಮರದ ನೆತ್ತಿಯಿಂದ ಸ್ನೋ ಡ್ರಾಪ್ಸ್ ಬೀಳುತ್ತಿದೆ, ಇಲ್ಲಿ ನೋಡು ಸಾಂಟಾ ಸೈಕಲ್ ಹೊಡೆಯುತ್ತಿದ್ದಾನೆ, ಓಹೋ, ಈ ಕುಣಿದಾಡುತ್ತಿರುವ ಸ್ನೋ ಮ್ಯಾನ್ ಬೊಂಬೆ ಎಷ್ಟು ಮುದ್ದಾಗಿದೆ, ಎಂದೆಲ್ಲಾ ಉದ್ಘಾರಗಳು ಕೇಳುತ್ತವೆ. ಮಕ್ಕಳ ಹರ್ಷವನ್ನು, ಅವರ ಮುಖದ ಮೇಲೆ ಅಚ್ಚೊತ್ತಿರುವ ಅಚ್ಚರಿಯನ್ನು ನೋಡುವುದು ಹಿತವೆನಿಸುತ್ತದೆ.

ಸಾಂಟಾ ಮತ್ತು ಅವನ elves ಗಳು, ಇತರ ಸಹಾಯಕರು ಅಲ್ಲಲ್ಲಿ ಅಗ್ನಿಶಾಮಕ ದಳದವರಂತೆ, ಸರ್ಫ್ ಲೈಫ್ ಸೇವಿಂಗ್ ಕ್ಲಬ್ ಸಿಬ್ಬಂದಿಯಂತೆ, ರೆಡ್ ಕ್ರಾಸ್ ತಂಡದವರಂತೆ ಪೋಷಾಕು ಧರಿಸಿ ನಿಂತಿರುತ್ತಾರೆ. ಅವರು ಹಿಡಿದಿರುವ ಪೆಟ್ಟಿಗೆಗಳಿಗೆ ನಾವು ಒಂದಷ್ಟು ನಾಣ್ಯಗಳನ್ನು ಹಾಕುವುದನ್ನು ಮರೆಯುವುದಿಲ್ಲ. ಕೆಲ ಮನೆಗಳಲ್ಲಿನ ಸಹೃದಯರು ಮಕ್ಕಳಿಗೆ ಚಾಕೊಲೇಟ್ ಕೊಡುತ್ತಾರೆ. ನನಗೆ ಕಡ್ಡಾಯವಾಗಿ ನೆನಪಾಗುವುದು ನಮ್ಮ ನವರಾತ್ರಿ/ದಸರಾ ಹಬ್ಬದ ದಿನಗಳು. ಕಾರಲ್ಲ, ನಮ್ಮ ಕಾಲನ್ನೇ ಚಕ್ರವಾಗಿಸಿಕೊಂಡು ನಾವು ಬೀದಿಬೀದಿ ಸುತ್ತುತ್ತಾ, ಬೊಂಬೆಹಬ್ಬವನ್ನು ಕಣ್ತುಂಬಿಸಿಕೊಂಡು, ತಿಂಡಿಗಳನ್ನು ಶೇಖರಿಸಿಕೊಂಡು ಚಪ್ಪರಿಸುತ್ತಾ, ಸ್ನೇಹಿತರೊಡನೆ ನಲಿದಾಡುತ್ತಾ ಆನಂದಿಸುತ್ತಿದ್ದ ದಿನಗಳು ಅವು. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ಜೀವನದಲ್ಲಿ ನವರಾತ್ರಿ, ದೀಪಾವಳಿ ಹಬ್ಬಗಳ ಸಂಭ್ರಮವನ್ನು ಮರುಕಳಿಸುವುದು ಮತ್ತೊಂದು ಬಣ್ಣಗಳ, ದೀಪಗಳ ಹಬ್ಬವಾದ ಈ ಕ್ರಿಸ್ಮಸ್ ಹಬ್ಬ.

ನಾನು ಕ್ರಿಸ್ಮಸ್ ಅಲಂಕಾರವನ್ನು ಬೆಂಗಳೂರಿನಲ್ಲಿ ನೋಡಿದ್ದೆನಾದರೂ ಹಿಮದೇಶಗಳ ಜನಜೀವನದಲ್ಲಿ, ಅವರ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಈ ಹಬ್ಬದ ಆಚರಣೆಯೇ ಬೇರೆ ತರಹ ಎನ್ನುವುದು ಮೊದಲು ಅರ್ಥವಾಗಿದ್ದು ಆಸ್ಟ್ರೇಲಿಯಾದಲ್ಲಿ ನೋಡಿದ ಕ್ರಿಸ್ಮಸ್ ಅಲಂಕಾರಗಳಿಂದ. ಹಿಮವಿಲ್ಲದೆ ಇಲ್ಲಿ ಬೇಸಿಗೆಯಿದ್ದರೂ ಹಬ್ಬವನ್ನು ಆಚರಿಸುತ್ತಿದ್ದ ಮಂದಿ ಬಿಳಿಯರು. ಬ್ರಿಟನ್ನಿನಿಂದ, ಯೂರೋಪಿನಿಂದ ಬಂದು ನೆಲೆಸಿದ್ದವರು ಅಲ್ಲಿಂದ ತಂದಿದ್ದ ತಮ್ಮ ಹಬ್ಬಗಳನ್ನು, ಸಂಸ್ಕೃತಿಗಳನ್ನು ನಿಷ್ಠೆಯಿಂದ ಆಚರಿಸುತ್ತಿದ್ದದ್ದು ಕ್ರಮೇಣ ಅರ್ಥವಾಗಲು ಶುರುವಾಯ್ತು. ಬರುಬರುತ್ತಾ ಅದು ಯಾಕೆ, ಇದು ಹೀಗೆ ಯಾಕೆ, ಏನು ಎನ್ನುವ ಪ್ರಶ್ನೆಗಳಿಂದ ಈ ಕ್ರಿಸ್ಮಸ್ ಹಬ್ಬದ ಪರಿಚಯ ಚೆನ್ನಾಗಾಗಿದೆ. ವೊಲೊಂಗಾಂಗ್, ಸಿಡ್ನಿ, ಮೆಲ್ಬೋರ್ನ್, ಪ್ಯಾರಿಸ್, ಬ್ರಿಸ್ಬೇನ್, ಇಂಗ್ಲೆಂಡ್, ಜರ್ಮನಿ ಎಂಬಂತೆ ಬೇರೆಬೇರೆ ಊರುಗಳಲ್ಲಿ, ದೇಶಗಳಲ್ಲಿ ನೋಡಿದ ಕ್ರಿಸ್ಮಸ್ ಅಲಂಕಾರಗಳು, ಮಾರ್ಕೆಟ್, ಮತ್ತವು ತರುವ ಮಧುರ ನೆನಪುಗಳು ಬೆಚ್ಚಗಿವೆ. ಆಗೆಲ್ಲಾ ತೆಗೆಯುತ್ತಿದ್ದ ರಾಶಿರಾಶಿ ಫೋಟೋಗಳು ಎಲ್ಲಿವೆಯೋ ಈಗ, ಅವನ್ನು ಹುಡುಕಬೇಕು.

ಇದೆಲ್ಲಾ ನೆನಪುಗಳನ್ನ ಈಗ ಜರಡಿ ಹಿಡಿದು ನೋಡಿದರೆ ಕಾಣುವುದು ಜನರು ಧಾರ್ಮಿಕ ಆಚರಣೆ, ಅಂತಹ ಒಂದು ಭಾವನೆಗಿಂತಲೂ ಹಬ್ಬದ ನೆಪದಲ್ಲಿ ಒಟ್ಟುಸೇರುವುದು, ಸಂಭ್ರಮಿಸುವುದು, ಬಣ್ಣಗಳನ್ನು, ದೀಪಗಳನ್ನು, ಅಲಂಕಾರಗಳನ್ನು ನೋಡಿ ಆನಂದಿಸುವುದು, ಒಟ್ಟಾಗಿ ಕೂತು ಉಣ್ಣುವುದು, ಹಂಚಿಕೊಳ್ಳುವುದು ಇತ್ಯಾದಿ ಜನರಿಗೆ ಮುಖ್ಯವೆನಿಸುತ್ತದೆ. ಎಷ್ಟಾದರೂ ನಾವು ಸಾಂಘಿಕ ಜೀವಿಗಳಲ್ಲವೇ. ಇದು ಎಂದಿಗಿಂತಲೂ ಈಗ ಹೆಚ್ಚು ಮಹತ್ತರವಾದದ್ದು ಎಂದೆನಿಸುತ್ತದೆ.

ನವೆಂಬರ್ ಕೊನೆಯಲ್ಲಿ ಶುರುವಾಗುವುದು ‘Christmas Do’ ಪಾರ್ಟಿಗಳು, get together ಗಳ ಸರಣಿಗಳು. ಇವುಗಳಿಗೆ ಹೋಗುವವರು ಅವರುಇವರು ಅಂತೇನೂ ಇಲ್ಲ. ಸ್ನೇಹಿತರು, ಸಹೋದ್ಯೋಗಿಗಳು, ಕುಟುಂಬ ವಲಯಗಳಲ್ಲಿನ ಸದಸ್ಯರು, ಚಾರಿಟಿ ಸಂಸ್ಥೆಗಳು ಏರ್ಪಡಿಸುವ ‘Christmas Do’ ಗಳಲ್ಲಿ ಆಸಕ್ತಿಯಿದ್ದವರು, ವಿಶೇಷ ಆಹ್ವಾನಿತರು, ವಿದ್ಯಾರ್ಥಿಗಳು ಏರ್ಪಡಿಸುವ ಕ್ರಿಸ್ಮಸ್ ಪಾರ್ಟಿಗಳು… ಪ್ರಪಂಚದಾದ್ಯಂತ ಅಸಂಖ್ಯಾತ ಜನರು ಧರ್ಮ, ಜಾತಿ, ಪಂಗಡ, ಹಣಕಾಸು ಸ್ಥಿತಿ, ಆರೋಗ್ಯ ಸಮಸ್ಯೆಗಳು ಎಲ್ಲವನ್ನೂ ಪಕ್ಕಕ್ಕಿಟ್ಟು ಹೀಗೆ ಸೇರಿ ಹಿಗ್ಗುವುದು ಬಹುಶಃ ಕ್ರಿಸ್ಮಸ್ ಸಂದರ್ಭದಲ್ಲಿ ಮಾತ್ರವೆನಿಸುತ್ತದೆ. ಆಗ ಅರಿವಿಗೆ ಬರುವುದು ವಸಾಹತುಶಾಹಿಗಳ ಪ್ರಭಾವ, ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯ ಬಲ, ಜಾಗತೀಕರಣವು ಎಷ್ಟು ಬೇಗ ಎಲ್ಲೆಲ್ಲೂ ಹಬ್ಬಿ ಬೇರೂರಿರುವುದು. ಜೊತೆಗೆ ಎಲ್ಲದರ ನಡುವೆ ಜ್ವಲಿಸುವ ಮನುಷ್ಯ ಸ್ವಭಾವಗುಣಗಳು. ಸಹಜವಾಗಿಯೇ ಅಲ್ಲಿ ಎತ್ತಿ ಕಾಣುವುದು ಆಶಾದಾಯಕ ಮನೋಭಾವ. ಅದು ಇನ್ನೇನು ಬರಲಿರುವ ಹೊಸ ವರ್ಷದ ಕೈದೀವಿಗೆ ಕೂಡ.