“ನಾ. ಕಸ್ತೂರಿಯವರು ಸಾಯಿಬಾಬಾರನ್ನ ಸಾವಿರದೊಂಬೈನೂರ ನಲವತ್ತೆಂಟನೇ ಇಸವಿಯಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನೋಡಿದರು.ನಾ. ಕಸ್ತೂರಿ ಅವರ ಹದಿನೆಂಟರ ಹರೆಯದ ಮಗ ‘ವೆಂಕಟಾದ್ರಿ’ ವಿಷಮ ಶೀತ ಜ್ವರದಲ್ಲಿ ಕಾಲವಾದಾಗ ಜೀವನದಲ್ಲಿ ಜಿಗುಪ್ಸೆ ಆಗಿದ್ದ ಕಾಸ್ತೂರಿ ದಂಪತಿಗಳು ಮನಸ್ಸಿನ ಶಾಂತಿಗಾಗಿ ಸ್ನೇಹಿತರ ಸಲಹೆ ಮೇರೆಗೆ ಸಾಯಿಬಾಬಾ ಅವರನ್ನು ನೋಡಿದರು.ಮುಂದೆ 30 ವರ್ಷ ಪುಟ್ಟಪರ್ತಿಯಲ್ಲಿದ್ದು ಸೇವೆ ಸಲ್ಲಿಸಿದರು.”
ಹಿರಿಯ ಬರಹಗಾರ ಮತ್ತು ಬ್ಲಾಗರ್ ಇ. ಆರ್. ರಾಮಚಂದ್ರನ್ ಬರೆಯುವ ನಾ. ಕಸ್ತೂರಿಯವರ ಬದುಕು ಬರಹಗಳ ಕುರಿತ ನುಡಿಚಿತ್ರದ ಎರಡನೆಯ ಕಂತು.

 

ನಾ. ಕಸ್ತೂರಿ ಮೈಸೂರಿನಲ್ಲಿ ಇದ್ದಾಗ, ಬೆಂಗಳೂರಿನಲ್ಲಿ ರಾಶಿಯವರು ಶುರು ಮಾಡಿದ್ದ ಕನ್ನಡ ಹಾಸ್ಯ ಮಾಸಿಕ ಪತ್ರಿಕೆ ‘ಕೊರವಂಜಿ’ಗೆ ಹಾಸ್ಯ ಕಥೆ, ಪದ್ಯ, ಅನರ್ಥಕೋಶ, ಇತ್ಯಾದಿ  ಪ್ರತಿ ತಿಂಗಳು ಬರೆಯುತ್ತಿದ್ದರು. ಕೊರವಂಜಿಗೆ ಬೇರೆ ಬೇರೆ ಹೆಸರಿನಲ್ಲಿ ಅಂದರೆ ನಾಕ, ತಾರಕ, ರುದ್ರಮ್ಮ, ಶ್ರೀಮತಿ ಕೇಸರಿ, ಪಾಟೀಳಿ ಎಂಬಿತ್ಯಾದಿ ಕಾವ್ಯನಾಮಗಳಲ್ಲಿ ಲೇಖನಗಳನ್ನು ಬರೆಯುತ್ತಿದ್ದರು. ಶಂಕರ್ಸ್ ವೀಕ್ಲಿಯಲ್ಲೂ ‘ಮಿಯರ್ ಪ್ರಾಬ್ಲಂ’ ಅನ್ನುವ ಅಂಕಣವನ್ನೂ ಬರೆಯುತ್ತಿದ್ದರು. ಆಗಿನ ಕಾಲದಲ್ಲಿ ನಾ.ಕ ಅವರು ಕಾರ್ಡಿನ ಮೇಲೆ, ಪಕ್ಕದಲ್ಲಿ, ಕೆಳಗಡೆ ಎಲ್ಲೆಲ್ಲಿ ಜಾಗವಿತ್ತೋ ಅಲ್ಲೆಲ್ಲಾ ಬರೆದು ಲೇಖನಗಳನ್ನು ಕೊರವಂಜಿಗೆ ಕಳುಹಿಸುತ್ತಿದ್ದರು. ಕೊರವಂಜಿ ಬಹಳ ಜನಪ್ರಿಯವಾಗಿ ಎರಡು ಲಕ್ಷಕ್ಕೂ ಹೆಚ್ಚಿನ ಓದುಗರಿದ್ದರು ಎಂದು ಹೇಳಲಾಗಿತ್ತು. ಅವರು 1954ರ ತನಕ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡಿದರು. ಪ್ರತಿ ವರ್ಷ ವಾರ್ಷಿಕ ಸಮಾರಂಭದಲ್ಲಿ ಅವರು ನಾಟಕಗಳನ್ನು ಬರೆದು, ದಿಗ್ದರ್ಶನ ಮಾಡಿ ಪಾತ್ರ ವಹಿಸುತ್ತಿದ್ದರು.

ಒಮ್ಮೆ ಕಸ್ತೂರಿಯವರು ಹೀಗೆ ಹೇಳುತ್ತಾರೆ… ‘ತಮ್ಮಣ್ಣನ ಮಗ ಬಲು ತುಂಟ. ಸದಾ ಕೀಟಲೆ, ಸದಾ ಅರಚಾಟ, ಹಟ. ಒಂದು ದಿನ ಮನೆ ಎದುರಿಗಿನ ಪಾಳು ಗೋಡೆ ಹತ್ತಿರ ಒಂದು ಕತ್ತೆ ನಿಂತಿತ್ತು. ಅದರ ಮೇಲೆ ಕೂತು ಬೀದಿ ಉದ್ದಕ್ಕೂ ಮೆರವಣಿಗೆ ಹೊಡಬೇಕೆಂಬ ಹಟ ಆ ಮಗುವಿಗೆ. ತಾಯಿ ಎಷ್ಟು ಸಮಾಧಾನ ಮಾಡಿದರೂ ಕೇಳಲಿಲ್ಲ. ಅಷ್ಟು ಹೊತ್ತಿಗೆ ತಮ್ಮಣ್ಣ ಮನೆಯೊಳಕ್ಕೆ ಬಂದ. ‘ಆವಾಗಿನಿಂದ ಒಂದೇ ಸಮ ಕಿರಚುತ್ತಾ ಇದ್ದಾನೆ. ಕತ್ತೆ ಸವಾರಿ ಮಾಡಬೇಕಂತೆ, ನೋಡಿ, ಇವನ ಹಟಾನ.. ಕೊಂಚ ನೀವೇ ಬೆನ್ನ ಮೇಲೆ ಕೂರಿಸಿಕೊಂಡು ಸವಾರಿ ಮಾಡಿಸಬಾರದೆ?’

ಮಜ ಮಾಡೋಕೆ ಎಂಥಹ ಪ್ಲ್ಯಾನ್ ಹಾಕಿದ ಮುದುಕ.. ನೀವೇ ನೋಡಿ…
“ಅಪ್ಪ ಮಗನ ಹತ್ರ ‘ನನಗೆ ಇನ್ನು ಏನೂ ಬೇಡ! ನಾನು ಸನ್ಯಾಸ ತೆಗೆದುಕೊಂಡು ಈ ಕ್ಷಣ ಮನೆ ಬಿಟ್ಟು ಹೊರಡ್ತೀನಿ. ನನ್ನ ತಲೆ ಬೋಳಿಸಲು ಏರ್ಪಾಡು ಮಾಡು. ಒಳ್ಳೇ ಶುಭ ದಿನದಲ್ಲಿ… ನೆರೆ ಕೂದಲು ಕಿವಿಯಲ್ಲಿ ವೈರಾಗ್ಯ ಜಪಿಸುತಿದೆ. ಜರೆ ಜರಿಯುತ್ತಿದೆ. ಮಕ್ಕಳು ಉಣಬಡಿಸುವ ಕಾಲಕ್ಕೆ ಅಪ್ಪ ಕಾಡಿಗೆ ಹೋಗಲೇಬೇಕು. ಇದೇ ಭಾರತದ ಸಂಸ್ಕೃತಿ. ಸಂಸಾರದಲ್ಲಿ ಅಡಗಿರುವ ಸೊನ್ನೆಯನ್ನು ಪತ್ತೆ ಹಚ್ಚಿಬಿಟ್ಟೆ! ಇನ್ನು ಇದು ಉರಿಯುವ ಮನೆ, ಇಲ್ಲಿ ನಿಲ್ಲಲಾರೆ. ಕರೆಯಿಸು ಕ್ಷೌರಿಕನನ್ನ. ತೆಗೆದು ತಾ ಪಂಚಾಗವನ್ನ.. ಹೊರಟೆ ನಾ ಕಾಡಿಗೆ…’. ಎಷ್ಟು ಕೇಳಿಕೊಂಡರೂ, ಬೇಡ ಬೇಡ ಅಂತ, ಬಡಕೊಂಡರೂ ಕೇಳದ ಅಪ್ಪ.. ಇವನು ನನ್ನ ಅಪ್ಪನೇನು…”

(ಕಸ್ತೂರಿ ದಂಪತಿ)

ಕೊನೆಗೆ ಅಪ್ಪ ಹೇಳ್ತಾನೆ..

ನಾನೊಬ್ಬನೇ ಇದ್ದಾಗ… ‘ಕೇಳೋ ದಡ್ಡ! ಸನ್ಯಾಸವೇ ಸುಖ! ಕಷಾಯವೇ ಕಲ್ಪತರು. ಇಷ್ಟು ದಿವಸ ನಾನು ನನ್ನ ಸಂಸಾರದಲ್ಲೂ ನಿನ್ನ ಸಂಸಾರದಲ್ಲೂ ನೊಂದದ್ದಾಯಿತು. ಇನ್ನಾದರೂ ಇರುವ ಅಲ್ಪ ಸ್ವಲ್ಪ ಆಯಸ್ಸಿನಲ್ಲಿ ಗಟ್ಟಿ ಹಾಲು, ಬೆಣ್ಣೆ ಕಾಯಿಸಿದ ತುಪ್ಪ, ಫೇಣಿ, ಲಡ್ಡುಪೂರಿ ತಿನ್ನಬೇಡವೇ? ಕಳ್ಳತನ, ಕಾಳಸಂತೆ ಲಂಚ ಎಂಬ ಪಾಪಮಾರ್ಗಗಳಿಂದ ಹಣ ಮಾಡಿರುವವರು ಭಯಪೀಡಿತರಾಗಿ ಸನ್ಯಾಸಿಗಳ ಹತ್ತಿರ ಹೋಗಿ ,ಧನಸೇವೆಯಿಂದ ಅವರ ಅನುಗ್ರಹ ಪಡೆದು ಶುದ್ಧಾತ್ಮರೆನಿಸಿಕೊಳ್ಳುವ ಸುಸಮಯ. ಶ್ರೀಮಂತ ಶಿಷ್ಯರು ನಾಳೆಯಿಂದಲೇ ನನ್ನನ್ನು ಮೆರೆಸುತ್ತಾರೆ. ಈ ಹರಕಲು ಶರ್ಟು ಬಿಚ್ಚಿ ಎಸೆದರೇನಯ್ಯ, ಮಗು, ಅವರು ಬೆಚ್ಚಗೆ ಹೊದೆಯಲು ಶಾಲು ಕೊಡುತ್ತಾರೆ, ಊರೂರು ತಿರುಗಲು ಕಾರು ಕೊಡುತ್ತಾರೆ, ವಿಶಾಲವಾದ ಮಠಗಳಿವೆ. ನನ್ನನ್ನೇಕೆ ಇಲ್ಲಿ ಇರಿಸಿಕೊಂಡು ಸಂಕಟ ಪಡಿಸುತ್ತೀಯಾ? ನಾನೊಂದು ಒಳ್ಳೆ ಜಾಗ ನೋಡಿ ಬಂದಿದ್ದೇನೆ. ಬೆಟ್ಟದ ತುದಿ, ಕೆಟ್ಟ ಜನ, ಪಟ್ಟಾಗಿ ಊಟ.. ಹೋಗು ಕರೆದುಕೊಂಡು ಬಾ ಕ್ಷೌರಿಕನ್ನನ ಎಂದ. ಘಾಟಿ ಮುದುಕ ಅಂತ ಮೂಗಿನ ಮೇಲೆ ಬೆರಳಾಡಿಸಿದೆ. ಪಿತನ ಸೇವೆಗೆ ನಾಪಿತ ಬಂದ.
***
ನಾ.ಕಸ್ತೂರಿ ಅವರ ನಗೆ ಬುಗ್ಗೆ ಎಲ್ಲಿಗೆ ಹರಡಿತೆಂದರೆ ಅವರು ಇದನ್ನು ರಾಮಾಯಣಕ್ಕೂ ತೆಗೆದುಕೊಂಡು ಹೋದರು. ಶ್ರೀರಾಮಚಂದ್ರ ಲಂಕೆಗೆ ಹೋಗಿ ಅಂಗದ ಸುಗ್ರೀವ ನೀಲ ಆಂಜನೆಯ ಮುಂತಾದ ಕರಡಿ ಕಪಿಗಳೊಂದಿಗೆ ಹೋದಾಗ ಅವರಿಗೆ ಕಿಶ್ಕಿಂದೆಯಲ್ಲಿ ಆರತಿ ಎತ್ತಿ, ದೃಷ್ಟಿ ತೆಗೆದು ಬುತ್ತಿಕಟ್ಟಿಕೊಟ್ಟವರು ಅಲ್ಲಿನ ರಾಣಿವಾಸದವರು. ಅವರಿಗೆಲ್ಲ ಬಯಕೆ ಒಂದೆ. ಮಾನವ ಜಾತಿಯ ಹೆಣ್ಣನ್ನು ಅದರಲ್ಲೂ ಸೌಂದರ್ಯವತಿಯಾದ ರಾಣಿ ಸೀತೆಯನ್ನು ನೋಡಬೇಕೆಂಬ ಹೆಬ್ಬಯಕೆ. ಅವಳ ರೂಪವನ್ನು ನೋಡಿ ರಾವಣ ಅಪಹರಿಸಿದ. ರಾಮ ದಂಡು ಕಟ್ಟಿ ಅವಳನ್ನು ಬಿಡಿಸಿಕೊಂಡು ಬರಲು ಹೋಗುತ್ತಿದ್ದ. ಅಂಥವಳನ್ನು ನೋಡಬೇಕು ಎಂಬುವ ಹಂಬಲ ಎಲ್ಲಾ ರಾಣಿವಾಸದವರಿಗೂ ಇತ್ತು.

ಯುದ್ಧ ಗೆದ್ದಿದ್ದಾಯ್ತು. ಈಗ ಹೇಗೆ ಬರುವರೋ? ಹನುಮಂತನ ಹೆಗಲ ಮೇಲೆ ಗಂಡ-ಹೆಂಡತಿ ಬರಬಹುದು ಎಂದು ಸೇವಕಿ ಹೇಳಿದಾಗ ಅವಳ ಬುದ್ದಿಗೆ ಮೆಚ್ಚಿದರು. ಕೊನೆಗೆ ಕಾದು ಕಾದು ಸಾಕಾದಾಗ, ಆಕಾಶದಲ್ಲಿ ಕುಬೇರನ ಪುಷ್ಪಕ ವಿಮಾನದಲ್ಲಿ ಸಾವಿರಾರು ವಿಷ್ಣು ಚಕ್ರ ತಿರುಗುವುದನ್ನು ನೋಡಿ ಮರದ ಮೇಲಿಂದ ಇಳಿದು ಬಂದಾಗ ಅಷ್ಟರಲ್ಲಿ ವಿಮಾನ ನೆಲಕ್ಕಿಳಿದಿತ್ತು. ರಾಮ, ಲಕ್ಷ್ಮಣರ ಜೊತೆ, ವಾನರರ ಜೊತೆ ಪುತ್ಥಳಿಯಂತಿದ್ದ ಹೊಸಬರೊಬ್ಬರು ಬಂದರು.

ಅವಳನ್ನು ನೋಡಿ ರಾಣಿವಾಸದವರಿಗೆ ನಗು ತಡೆಯಲಾಗಲಿಲ್ಲ. ನೆಲಕ್ಕೆ ಬಿದ್ದು ಬಿದ್ದು ನಕ್ಕರು. ಕಿಟಕಿ ಕಂಬಿಯನ್ನು ಹಿಡಿದು ನಕ್ಕರು. ಇವಳೇನೆ ಸೀತೆ! ಅಯ್ಯೋ! ಹಣೆ ನೋಡು ಅಷ್ಟು ಅಗಲ, ಉದ್ದವಾದ ಜಡೆ ಬೇರೆ. ಮುಖ ಕೊಂಚವೂ ಚಾಚಿಲ್ಲ. ಕೈ ಬೇರೆ ಮೋಟು, ಹಲ್ಲೆಲ್ಲ ಶುದ್ಧ ಅಕ್ಕಿ ಕಾಳಿನಂತಿದೆ. ಬಾಲವೇ ಇಲ್ಲ. ಬಾಲ ನಾಸ್ತಿ!’ ಎಂದು ಕೇಕೆ ಹಾಕಿ ನಕ್ಕರು.

‘ರಂಗನಾಯಕಿ’ ಕಾದಂಬರಿಯಲ್ಲಿ ಬರೆಯುತ್ತಾ, ‘ಬಿಂದು ಸಂಸಾರ ಸಮೇತ ಸುಖವಾಗಿದ್ದಾನೆಯೇ?’ ಅಂದಾಗ , ‘ಮದುವೆಯಾಗಿ ಸಂಸಾರ ಸಮೇತವಾಗಿ ಇರುವ ಯಾವ ಪ್ರಾಣಿ ತಾನೆ ಸುಖವಾಗಿದ್ದಾನು? ಗೃಹಸ್ಥಾಶ್ರಮ ಒಂದು ಗರಡಿ ಮನೆ. ಅಲ್ಲಿ, ಗಂಡಸು ಕುತ್ತಿಗೆವರೆಗೆ, ಕೆಮ್ಮಣ್ಣಲ್ಲೇ ಹೂತು ಬಿದ್ದಿರುತ್ತಾನೆ’. ಆದರೆ ಬಿಂದು ಒಳ್ಳೆಯ ಫುಟ್ಬಾಲ್ ಆಟಗಾರ. ಒದೆಯುವುದಂದರೆ ಅವನಿಗೆ ಪರಮ ಪ್ರೇಮ. ಎದುರಿಗೆ ಯಾರು ಸಿಕ್ಕಿದರೂ ಅವನು ಕಾಲು ಬೀಸುತ್ತಾನೆ. ಕೂಸಾಗಿದ್ದಾಗಲೇ ಒದ್ದು ತೊಟ್ಟಿಲನ್ನು ಚೂರು ಚೂರು ಮಾಡಿದ್ದನಂತೆ. ಅವನು ಫೀಲ್ಡಿಗೆ ಇಳಿದರೆ, ಆಂಬ್ಯುಲೆನ್ಸ್ ಗಾಡಿಗಳು ಎರಡು ಮೂರು ಹಾಜರಿರಬೇಕು. ಅಂಥವನು ಹೆಂಡತಿಯನ್ನು ಒದ್ದು ಗೋಳಾಡಿಸದೆ ಇರುತ್ತಾನೆಯೇ?

‘ತುಳಸೀದಳ’ ದಲ್ಲಿ ಮಲೇರಿಯಗೆ ಏನೇನು ಔಷದ ಎಂಬ ವಿಚಾರವಾಗಿ ಬರೆಯುತ್ತಾ.. ‘ಸ್ವಾಮಿ. ಮಲೆನಾಡಿನಲ್ಲಿ ಹುಷಾರಾಗಿರಿ. ಮಲೇರಿಯ.. ದಿನವೂ ಬೆಳಿಗ್ಗೆ ಎದ್ದು ನಾಲ್ಕು ಡಜನ್ ತುಳಸೀದಳ ಬಾಯಿಗೆ ಹಾಕಿಕೊಳ್ಳಿ. ತುಳಸೀದಳಕ್ಕೆ ಬರಗಾಲ ಬಂದಿಲ್ಲ.’ ‘ಅಯ್ಯೋ! ನೂರೆಂಟು ಜನ ನೂರೆಂಟು ಔಷಧಿ ಹೇಳಿದ್ರೆ ನಾನು ಏನು ತಿನ್ಲಿ, ಏನು ಕುಡೀಲಿ, ನನ್ನದೇನು ಹೊಟ್ಟೆಯೋ ಹೋಲ್ಡಾಲೊ? ಮಜ್ಜಿಗೆ ಹುಲ್ಲಿನಲ್ಲಿ ಪಾನಕ ಅಂತಾರೆ ಒಬ್ಬ್ರು. ಸೊಪ್ಪಿನ ಕಷಾಯದಲ್ಲಿ ನಿಂಬೆ ಹಣ್ಣಿನ ರಸ ಸೇರಿಸಿ ಕಣ್ಣುಮುಚ್ಚಿ ಕುಡಿ ಅಂತಾನೆ ಶಾಸ್ತ್ರಿ. ಸಿಕ್ಕಿದಷ್ಟು ಕಾಫಿ ಕುಡಿ. ಮಲೆನಾಡಿನಲ್ಲಿ ಬಾಬಾ ಬುಡನ್ಗಿರಿಯವರು ಕಾಫಿ ಬೆಳಸಿದ್ದೇ ಅದಕ್ಕಾಗಿಯೇ ಅಂತಾನೆ ಶಂಕರ… ಸೇದು ಬತ್ತಿಯೇ ಸರಿ ಅಂತಾರೆ ಕ್ಲಬ್ಬಿನಲ್ಲಿ. ಸಾಂಬ್ರಾಣಿ ಹೊಗೆ ಯಾವ ಮೂಲೆಗೆ ಅಂತಾರೆ. ದಿನವೂ ಬರೀ ಹೊಟ್ಟೇಲಿ ಸರ ಸರ ನಡೆದುಬಿಡಿ ಅಂತಾರೆ ಮೇಷ್ಟ್ರು. ನನ್ನ ನಡಿಗೆಗಾಗಲಿ ನಾನು ಯಾರ ಬರೀ ಹೊಟ್ಟೆ ಹುಡುಕಲಿ? ದಿನವೂ 6 ಬೆಳ್ಳುಳ್ಳಿ ಅಗೆದು ನುಂಗಿಬಿಡು. ನಾನು ಸಂಗೀತ ಮೇಷ್ಟ್ರು. ದಿನವೂ ನಾನು ಬೆಳ್ಳಿಳ್ಳಿ ತಿಂದರೆ ನನಗೆ ಪ್ರೈವೇಟ್ ಟ್ಯೂಷನ್ಗಳು ಮುಂದೆ ಸಿಗುತ್ಯೇ?’


***
ನಾ. ಕಸ್ತೂರಿ ಕನ್ನಡದ ಪದ್ಯಗಳು, ಪುರಂದಾಸರ ಕೃತಿಗಳನ್ನೂ ಬಿಡಲಿಲ್ಲ. ಡಿ.ವಿ.ಜಿ ಯವರ ‘ವನಸುಮದೊಳೆಗೆನ್ನ ಜೀವನವು’, ಪುರಂದರ ದಾಸರ ‘ನಾನ್ಯಾಕೆ ಬಡವನು? ನಾನ್ಯಾಕೆ ಪರದೇಶಿ ? ಎಂಬುದನ್ನು ‘ಅಳಿಯನಿಗೇನು ಕಡಿಮೆ’?’ ಮತ್ತು ‘ಎನಗೂ ಆಣೆ ರಂಗ, ನಿನಗೂ ಆಣೆ’ ಎಂಬ ಪುರಂದರ ದಾಸರ ಕೃತಿಯನ್ನು ‘ಎನಗೂ ನಾಮ, ನಿನಗೂ ನಾಮ’ ಎಂಬ ಹಾಸ್ಯ ಪದ್ಯಗಳನ್ನೂ ರಚಿಸಿದರು.
‘ನಾನ್ಯಾಕೆ ಬಡವನು… ನಾನ್ಯಾಕೆ ಪರದೇಶಿ’ ಪುರಂದರ ದಾಸರ ಕೃತಿಯನ್ನು ನಾ. ಕಸ್ತೂರಿ ‘ಅಳಿಯನಿಗೇನು ಕಡಿಮೆ’? ಎಂದು ಒಂದು ಹಾಸ್ಯ ಪದ್ಯವನ್ನಾಗಿ ರಚಿಸಿದರು.
ನಾನ್ಯಾಕೆ ಬಡವನು? ನಾನ್ಯಾಕೆ ಪರದೇಶಿ ?
ಸೋಮಾರಿ?… ಹೇ ಮಾವ! ನೀನಿರುವ ತನಕ? !ಪ!

ಪುಟ್ಟಿಸಿದ ತಾಯ್ತಂದೆ ಎಷ್ಟು ಮಾತ್ರದ ನಂಟು?
ಕಷ್ಟದಲಿ ಕೈಹಿಡಿದ ಸತಿಯ ತಂದೆ!!
ಪೆಟ್ಟಿಗೆಯೊಳಗಿನ ಚೆಕ್ಕು ಬುಕ್ಕಿನ ಹಾಳೆ
ನೆಟ್ಟಗೆ ರುಜುಹಾಕಿ ನೀ ಕೊಡುವ ತನಕ!!
ಬೂಟ್ಸು ಕೊಟ್ಟವ ನೀನೆ ಪಾಲಿಷ್ ಹಾಕುವವ ನೀನೆ
ಉಡಲು ಹೊದೆಯುವ ಬಟ್ಟೆ ಕೊಡುವವ ನೀನೆ
ವಿದ್ಯೆ ಕಲಿಯಲು ನೀನೆ ದುಡ್ಡು ಬಿಚ್ಚದೆ ಸುಮ್ನೆ
ಉದ್ಧಾರ ಕರ್ತ, ಮಮ ಸ್ವಾಮಿ ನೀನೇ!!

ಪುರಂದರ ದಾಸರ ದೇವರನಾಮ ‘ಎನಗೂ ಆಣೆ ರಂಗ ನಿನಗೂ ಆಣೆ’ ಹಾಡನ್ನು ಈಗಿನ ಕಾಲಕ್ಕೆ, ಸಂದರ್ಭಕ್ಕೆ ಹೊಂದುವಹಾಗೆ ನಾ. ಕಸ್ತೂರಿ, ‘ಎನಗೂ ನಾಮ ರಂಗ, ನಿನಗೂ ನಾಮ ರಂಗ’ ಎಂದು ಹಾಸ್ಯ ಪದ್ಯವನ್ನಾಗಿ ಮಾಡಿದರು.

ಎನಗೂ ನಾಮ ರಂಗ, ನಿನಗೂ ನಾಮ
ಎನಗು ನಿನಗು ಇಬ್ಬರಿಗು ಪಂಗನಾಮ !!ಪ!!
ನಿನ್ನ ಬಿಟ್ಟು ಅನ್ಯರ ಕೂಡಿದ್ದೆನಗೆ ನಾಮ
ಎನ್ನ ನೀ ಕೈ ಬಿಟ್ಟು ಹೋದ ನಿನಗೆ ನಾಮ
ತನುಮನಧನದಲಿ ಲಂಚ ವಂಚಕ ಎನಗೆ ನಾಮ
ಮನುಜರ ಮಾತಲಿ ನಂಬಿದ್ದಕ್ಕೆ ನಿನಗೆ ನಾಮ
ಕಾಕುಜನರಾ ಸಂಘವ ಮಾಡಿ ಎನಗೆ ನಾಮ
ಸಾಕು ಎನ್ನಲಾರದೆ ಹೋದ ನಿನಗೆ ನಾಮ
******
ನಾ. ಕಸ್ತೂರಿ ಸಾಯಿಬಾಬಾ ಸ್ವಾಮಿಗಳನ್ನ 1948ರಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನೋಡಿದರು. ನಾ. ಕಸ್ತೂರಿ ಅವರ 18ನೆ ವರ್ಷದ ಮಗ ‘ವೆಂಕಟಾದ್ರಿ’ ವಿಷಮ ಶೀತ ಜ್ವರದಲ್ಲಿ ಕಾಲವಾದಾಗ ಜೀವನದಲ್ಲಿ ಜಿಗುಪ್ಸೆ ಆಗಿದ್ದ ಕಾಸ್ತೂರಿ ದಂಪತಿಗಳು ಮನಸ್ಸಿನ ಶಾಂತಿಗಾಗಿ ಸ್ನೇಹಿತರ ಸಲಹೆ ಮೇರೆಗೆ ಸಾಯಿಬಾಬಾ ಅವರನ್ನು ನೋಡಿದರು. ಅವರು ರಿಟೈರ್ ಆಗುವ ತನಕ ಶ್ರೀ ಸಾಯಿಬಾಬ ಅವರ ಪ್ರೇರಣಯಿಂದ ಮುಂದೆ 30 ವರ್ಷ ಪುಟ್ಟಪರ್ತಿಯಲ್ಲಿದ್ದು ಸ್ವಾಮಿಗಳ ಸೇವೆ ಸಲ್ಲಿಸಿದರು. ಅಲ್ಲಿ ಅವರು ಸ್ವಾಮಿಗಳ ಜೀವನ ಚರಿತ್ರೆ – ‘ಸತ್ಯಂ, ಶಿವಂ ಸುಂದರಂ’ ಅನ್ನುವ ಹೆಸರಿನ ಪುಸ್ತಕವನ್ನು ಬರೆದರು.

ಪುಟ್ಟಪರ್ತಿಯಲ್ಲಿ ‘ಸನಾತನ ಸಾರಥಿ’ ಅನ್ನುವ ಮ್ಯಾಗಜೀನ್ ಹೊರಡಿಸಲು ಸಂಪಾದಕರಾಗಿ ಅದರಲ್ಲಿ ಬೇಕಾಗುವ ಎಲ್ಲಾ ಕೆಲಸವನ್ನು ಕಲಿತುಕೊಂಡರು. ಇಂಕನ್ನು ಹಚ್ಚಿ ಅದನ್ನು ಒಣಗಿಸಿ ಪ್ರತಿಲಿಪಿಯನ್ನೂ ಕೂಡಿಸಿ ‘ಕಂಪಾಸಿಟರ್’ ಕೆಲಸವನ್ನು ಮಾಡಲೂ ಕಲಿತರು. ಈ ವಯಸ್ಸಿನಲ್ಲಿ ತೆಲುಗು ಭಾಷೆಯನ್ನು ಕಲಿತು ಅದರಲ್ಲಿ ಮಾತನಾಡುವುದು, ಬರೆಯಲೂ ಕಲಿತರು. ಅವರು ಪ್ರಶಾಂತಿನಿಲಯದಲ್ಲಿ ಕೆಲಸ ಮಾಡುವಾಗ 1954ರಲ್ಲಿ ಯಾವುದೋ ಸಮಾರಂಭದಲ್ಲಿ ಅವರ ಹೆಸರಿನ ಜೊತೆ ‘ಡಾಕ್ಟರ್’ ಕಸ್ತೂರಿ ಇದ್ದಾಗ ಯಾರೊ ಸಾಯಿ ಬಾಬಾರನ್ನು ಕೇಳಿದರಂತೆ ಇವರು ‘ಡಾಕ್ಟರ್’ ಯಾವಾಗ ಆದರು’ ಅಂತ. ಸಾಯಿಬಾಬ ಹೇಳಿದರಂತೆ. ಇಲ್ಲಿ ಶುರುಮಾಡುವ ವಿಶ್ವವಿದ್ಯಾನಿಲದಲ್ಲಿ ಅವರಿಗೆ ‘ಡಾಕ್ಟರೇಟ್’ ಪದವಿ ಕೊಡಲಾಗುತ್ತೆ’ ಅಂತ. ಅದು 1981 ರಲ್ಲಿ ಶುರುವಾಗಿ ಅವರಿಗೆ ‘ಡಾಕ್ಟರೇಟ್’ ಅನ್ನು ಕೊಟ್ಟರು.

ನಾ. ಕಸ್ತೂರಿ ಅವರು ಕನ್ನಡದಲ್ಲಿ ರಚಿಸಿದ ಕೃತಿಗಳು

ನಾಟಕ ಪ್ರಹಸನಗಳು : ಷಾಜಹಾನ್ 1918 ( ಮಲೆಯಾಳಂ ), ಕಾಡಾನೆ, ಗಗ್ಗಯನ ಗಡಿಬಿಡಿ, ವರಪರೀಕ್ಷೆ ,ಹೆಡ್ಮಾಸ್ಟರ ಮಗಳು, ತಾಪತ್ರಯ ತಪ್ಪಿತು, ಬ್ಯಾಂಕಿನ ದೀವಾಳಿ, ರಾಮಕೃಷ್ಣನ ದರ್ಭಾರು.

ಮಕ್ಕಳ ಸಾಹಿತ್ಯ : ಕೆಂಪ ಮೈಸೂರಿಗೆ ಹೋದದ್ದು (1920), ಪಾತಾಳದಲ್ಲಿ ಪಾಪಚ್ಚಿ, ಅನರ್ಥಕೋಶ, ಗಾಳಿ ಗೋಪುರ, ಶಂಖವಾದ್ಯ, ರಂಗನಾಯಕಿ, ಅಲ್ಲೋಲಕಲ್ಲೋಲ, ಉಪಾಯವೇದಾಂತ, ಯದ್ವಾತದ್ವಾ, ಚಿತ್ರವಿಚಿತ್ರ

ಕಾದಂಬರಿ- ಕಥೆ : ಸಂಪತ್ತು, ಚೆಂಗೂಲಿ ಚೆಲುವ, ಚಕ್ರದೃಷ್ಟಿ ನೊಂದ ಜೀವಿ (ಅನುವಾದನ ಲೇ ಮಿಸರ್ಬಲೆ ), ಡೊಂಕು ಬಾಲ, ಗೃಹದಾರಣ್ಯಕ

ಇತರೆ: ಮದುವೆ, ದಿಲ್ಲೀಶ್ವರನ ದಿನಚರಿ, ಅಶೋಕ -ಚೇರ್ಮನ್ ಪೆರುಮಾಳ್, ಚೈನಾ ಜಪಾನ್ ಕಥೆಗಳು, ಕೋಹಂ ಸೋಹಂ, ಅಣುಕು ಮಿಣುಕು ಕಥೆಗಳು, ಸತ್ಯಂ ಶಿವಂ ಸುಂದರಂ

ಇಂಗ್ಲೀಷ್ ನಲ್ಲಿ ಬರೆದ ಕೃತಿಗಳು: ಲವಿಂಗ್ ಗಾಡ್ (2 ನೆ ಮುದ್ರಣ), ಕೇರಳ ಇನ್ ಕರ್ಣಾಟಕ, ದಿ ಲಾಸ್ಟ್ ರಾಜಾಸ್ ಅಫ್ ಕೂರ್ಗ್.
***
ಜಾಂಡಿಸ್ ನಿಂದ ಬಳಲುತ್ತಿದ್ದ ಕಸ್ತೂರಿ ಆಗಸ್ಟ್ 14, 1987ರಲ್ಲಿ ಕಾಲವಾದರು. ಚಿತ್ರವತಿ ನದಿ ತೀರದಲ್ಲಿ ಅವರನ್ನು ಸಂಸ್ಕಾರ ಮಾಡಲಾಯಿತು. ಅವರಿಗೆ ಆಗ 90 ವರ್ಷವಾಗಿತ್ತು.

(ಮುಗಿಯಿತು)

 

(ಈ ಲೇಖನವನ್ನು ಬರೆಯುವುದಕ್ಕೆ ಸಹಾಯಕ ಮಾಹಿತಿಗಳನ್ನು ಇತ್ತ ಕನ್ನಡ ಸಾಹಿತ್ಯ ಪರಿಷತ್, ಬೆಸ್ಟ್ ಆಫ್ ಕಸ್ತೂರಿ, ರಾಮಕೃಷ್ಣ ಮಿಷನ್, ಸನಾತನ ಸಾರಥಿ, ಪ್ರಶಾಂತಿ ನಿಲಯ ಇವೆಲ್ಲ ಸಂಸ್ಥೆಗಳಿಗೂ ನಾನು ಆಭಾರಿ )