`ಹಾಣಾದಿ’ ಕಾದಂಬರಿ ತನ್ನ ಕಥಾವಸ್ತು, ನಿರೂಪಣಾ ವಿಧಾನ ಮತ್ತು ಲೇಖಕ ಹೀಗೆ ಹಲವು ಕಾರಣಗಳಿಂದ ಗಮನ ಸೆಳೆಯುವ ಕೃತಿ. ವರ್ತಮಾನ ಮತ್ತು ಭೂತಕಾಲ ಜತೆಜತೆಗೆ ಸಾಗುವ, ನೆನಪುಗಳ ಸಿಕ್ಕುಗಳಲ್ಲಿ ಓದುಗನನ್ನು ಸಿಲುಕಿಸುವ ಕಾದಂಬರಿ. `ಗಾರುಡಿ ವಾಸ್ತವತೆ’ಯ ತಂತ್ರವನ್ನು ಬಳಸುತ್ತದೆ. ಕಥೆಯೊಳಗೆ ಕಥೆ, ಅದರೊಳಿನ್ನೊಂದು ಕಥೆ ಎಂಬಂತೆ ಇದರ ನಿರೂಪಣೆ. ಕಾದಂಬರಿಯಲ್ಲಿ ಜನಪದ ರಮ್ಯಾದ್ಭುತ ಕಥೆಗಳಲ್ಲಿನಂತೆ ಗುಬ್ಬಿ ಆಯಿ ಎಂಬ ಅಡಗೂಳಜ್ಜಿ ಇದ್ದಾಳೆ. ಬೇತಾಳವನ್ನು ಬೆನ್ನಿಗೆ ಹಾಕಿಕೊಂಡಿರುವ ರಾಜಾ ತ್ರಿವಿಕ್ರಮನಂತೆ ನೆನಪುಗಳ ಪಾಥೇಯವನ್ನು ಹೊತ್ತ ಕಥಾನಿರೂಪಕನಿದ್ದಾನೆ.
ಕಪಿಲ ಪಿ.ಹುಮನಾಬಾದೆ ಅವರ ಕಾದಂಬರಿ “ಹಾಣಾದಿ”ಗೆ ಡಾ.ಬಾಳಾಸಾಹೇಬ ಲೋಕಾಪೂರ ಮತ್ತು ಕೇಶವ ಮಳಗಿ ಅವರ ಮಾತುಗಳು

 

ಯುವ ಮಿತ್ರ ಕಪಿಲ ಹುಮನಾಬಾದಿ ಉತ್ತಮ ಓದುಗ, ಸೂಕ್ಷ್ಮಗ್ರಾಹಿ, ಸಾಹಿತ್ಯದ ಅಪಾರ ಕೂತೂಹಲಿಗ. ಅವರ ಮೊದಲ ಕಾದಂಬರಿಗೆ ಮುನ್ನುಡಿ ಪರ ನಾಲ್ಕು ಮಾತು ಬರೆಯುವದು ನನಗೆ ಸಂತಸದ ವಿಷಯ. ಕನ್ನಡದ ಸಂದರ್ಭದಲ್ಲಿ ಕೆಲವು ವರ್ಷಗಳ ಹಿಂದೆ ‘ಈಗ ಕಾದಂಬರಿ ಯುಗ ಮುಗಿಯಿತು. ಈಗ ಏನಿದ್ದರೂ ಚುಟುಕಾಗಿ ಓದುವ ಬರೆಹಗಳ ಕಾಲ. ದೀರ್ಘವಾದ ಬರೆಹಗಳನ್ನು ಯಾರು ಓದುತ್ತಾರೆ ?’ ಎನ್ನುವ ಸಿನಿಕತನದ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೆವು. ಆದರೆ ಈಗ ಅದೆಷ್ಟು ಕಾದಂಬರಿಗಳು ಬರುತ್ತಿದ್ದಾವೆ ಎಂದರೆ ಮನಸ್ಸಿಗೆ ಆನಂದವಗುವಷ್ಟು. ಕನ್ನಡದಲ್ಲಿ ಹೆಸರು ಮಾಡಿದ ಹಿರಿಯ ಕಾದಂಬರಿಕಾರರ ಜೊತೆಗೆ ಹೊಸ ಯುವ ಬರೆಹಗಾರರು ಕಾದಂಬರಿ ಪ್ರಕಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಈಗ ಇದು ಕಾದಂಬರಿಗಳ ಕೆನೆಫಸಲಿನ ಕಾಲವಾಗಿದೆ. ಕನ್ನಡದ ಮಟ್ಟಿಗೆ ಇದೊಂದು ಸ್ವಾಗತಾರ್ಹವಾದ ಸಂಗತಿ.

ಕಪಿಲ ಅವರ ಈ ಕಾದಂಬರಿ ‘ಹಾಣಾದಿ’ ಹೊಸ ರೀತಿಯ ಬರೆಹವಾಗಿದೆ. ಹಾಣಾದಿ ಎಂದರೆ ಎತ್ತಿನ ಬಂಡಿಯ ಹಾದಿ. ಈ ಕಾದಂಬರಿ ಕೂಡಾ ಅಂತಹ ಹಾದಿಯ ಗಮ್ಯದಲ್ಲಿಯೇ ಓಡಾಡುತ್ತದೆ. ಏರು ಇಳಿಯು, ಅಂಕು ಡೊಂಕು, ಓರೆ ಕೋರೆ, ಮುಂದೇನು ಎಂದು ಸವಾಲೊಡ್ಡುವ ನಿಗೂಢ ಹಾದಿಯ ಹಾಗೆ ಹಾಣಾದಿ ಕಾದಂಬರಿಯ ಕತೆ ಸಾಗುತ್ತದೆ. ಇಡೀ ಕಾದಂಬರಿ ಮಾಂತ್ರಿಕ ವಾಸ್ತವವಾದದ ಛಾಯೆಯಲ್ಲಿ ನಡೆಯುತ್ತದೆ. ಅಲ್ಲಲ್ಲಿ ಕಥನ ಶೈಲಿ ಸರ್ ರಿಯಲಾಸ್ಟಿಕ್ ಶೈಲಿಗೆ ಹೊರಳುತ್ತ ಹೊರಳುತ್ತಿರುವಾಗಲೇ ಫ್ಯಾಂಟಸಿ ಕಥನ ಕ್ರಮವನ್ನು ಮೈದಾಳಿಸಿಕೊಳ್ಳುತ್ತದೆ. ಈ ಬಗೆಯ ಶೈಲಿಯಿಂದ ಕಾದಂಬರಿಯ ನಡೆಗೆ ಎಲ್ಲೋ ಒಂದು ಕಡೆ ಹಿನ್ನೆಡೆ ಅನ್ನಿಸಿದರೂ ಕಾದಂಬರಿಕಾರ ಕಪಿಲ ಅದನ್ನು ಚೆನ್ನಾಗಿಯೇ ನಿರ್ವಹಿಸಿದ್ದಾರೆ. ಹಾಗಾಗಿ ಓದುಗ ಶೈಲಿಯನ್ನು ಮರೆತು ಕಥೆಯಲ್ಲಿ ಗರ್ಕಾಗುತ್ತಾನೆ. ಕಾದಂಬರಿಯು ಓದಿನ ಪ್ರಜ್ಞೆಯ ಸಿದ್ಧಮಾದರಿಗಳನ್ನು ಮುರಿಯುತ್ತಲೇ ನೆನಪುಗಳನ್ನು ದಾಟಿ ಪ್ರಜ್ಞೆಯ ಭಾಗವಾಗಿ ಬೆಳೆಯುತ್ತದೆ. ಇದರಿಂದಾಗಿ ಕಾದಂಬರಿಗೆ ಒಂದು ಬಗೆಯ ಚಲನೆ ಸಿಕ್ಕಂತಾಗಿದೆ.

ಕಾದಂಬರಿ ಒಂದು ರಚನೆ ಆಗಿರುವದರಿಂದ ಇಲ್ಲಿ ಕಟ್ಟುವ ಕೆಲಸ ನಾಜೂಕಾಗಿ ನಡೆಯಬೇಕು. ಉಪಮೆಗಳು, ಮಹೋಪಮೆಗಳು, ನೆನಪುಗಳು, ವಿವರಗಳು, ವ್ಯಕ್ತಿಗತ ತಳಮಳಗಳು ಹೀಗೆ ಭಾವಾಭಿವ್ಯಕ್ತಿ ನಿರಂತರ ಕಥೆಯ ಓಘವನ್ನು ಮುರಿದು ಕಟ್ಟುತ್ತಾ ಹೋಗಬೇಕು. ಅದಕ್ಕಾಗಿ ಕಥೆ ಸರ್ವಸಾಕ್ಷಿ ಪ್ರಜ್ಞೆಯಲ್ಲಿ ಸಾಗಬೇಕು. ಇನ್ನೊಬ್ಬ ವ್ಯಕ್ತಿಯ ಅಂತರಂಗದ ತಳಮಳವನ್ನು ಚಿತ್ರಿಸಲು ತೀರ ಸರಳವಾಗುತ್ತದೆ. ಆದರೆ ಕಪಿಲ ಅವರು ಪ್ರಥಮಾ ವಿಭಕ್ತಿಯಲ್ಲಿ ಕತೆಯನ್ನು ಪ್ರಾರಂಭ ಮಾಡಿದ್ದಾರೆ. ಇದರಿಂದ ಕಥಾ ರಚನೆಯಲ್ಲಿ ಬಿಕ್ಕಟ್ಟುಗಳನ್ನು ಅವರು ಎದುರಿಸಿದ್ದಾರೆ.

ಇನ್ನೊಂದು ವಾದವೆಂದರೆ ಕಾದಂಬರಿಗೆ ಒಂದು ಕೇಂದ್ರ ಇರಬೇಕು ಎನ್ನುವದು. ಬಹಳ ಹಿಂದೆಯೇ ಕುವೆಂಪು ಅವರು ತಮ್ಮ ಕಾದಂಬರಿಗೆ ಕೇಂದ್ರ ಎನ್ನುವದೇನು ಬೇಕಿಲ್ಲ ಎನ್ನುವಂತೆ ಬರೆದು ನಮಗೆ ಕಥೆ ಹೇಳಿದ್ದಾರೆ. ಕಥನ ಕೇಂದ್ರದಿಂದ ಬಾಹ್ಯದ ಬಹುಮುಖಿ ಸಮಾಜದ ಆಗು ಹೋಗುಗಳಿಗೆ ಮುಖಾಮುಖಿ ಆಗುವದು ಒಂದು ಬಗೆಯಾದರೆ ಬಾಹ್ಯ ಘಟನೆಗಳಿಂದ ಕಥನ ಕೇಂದ್ರಕ್ಕೆ ಮೈ ಚಾಚುವದು ಇನ್ನೊಂದು ಕ್ರಮ. ಇದನ್ನೇ ನಾವು ‘ಗೋಪುರ ಮಾದರಿ’ ಎನ್ನುವದು. ಕಪಿಲ ಅವರ ಹಾಣಾದಿ ಈ ಬಗೆಯ ಕಾದಂಬರಿಯಾಗಿದೆ.

ಹಾಣಾದಿಯ ಕಥೆ ಸರಳವಾಗಿದೆ. ಕಾದಂಬರಿ ನಡೆಯುವದು ಕೇವಲ ಒಂದು ಹಗಲು ಒಂದು ರಾತ್ರಿ ಮಾತ್ರ. ಆದರೆ ಇಲ್ಲಿಯ ಘಟನೆಗಳು ನಿರೂಪಕನ ಬಾಲ್ಯದ ಅಖಂಡ ಅನುಭವಗಳನ್ನು ತಣ್ಣಗೆ ವಿವರಿಸುತ್ತ ಸಾಗುತ್ತದೆ. ಕಥೆ ನಡೆಯುವದು ಒಂದು ಹಳ್ಳಿಯಲ್ಲಿ. ಅಲ್ಲಿಯ ಒಂದು ಮನೆಯ ಮುಂದಿನ ಬಾದಾಮಿ ಗಿಡದ ಸುತ್ತ ಘಟನಾವಳಿಗಳು ಬಿಚ್ಚಿಕೊಳ್ಳುತ್ತವೆ. ಬಹುತೇಕ ಕತೆ ಮಾತಿನ ರೂಪದಲ್ಲಿ ನಡೆಯುವದು ಕಾದಂಬರಿಯ ವಿಶೇಷವಾಗಿದೆ. ಗುಬ್ಬಿ ಆಯಿ ಎನ್ನುವ ನಿಗೂಡವಾದ ಮುದುಕಿ ಒಬ್ಬಳು ನಿರೂಪಕನಿಗೆ ಕಥೆ ಹೇಳುತ್ತ ಹೋಗುವ ವಿವರಗಳೇ ಕಾದಂಬರಿಯ ಹಂದರವಾಗುತ್ತ ಸಾಗುತ್ತದೆ. ಈ ಗುಬ್ಬಿ ಆಯಿ ಹೇಗಿದ್ದಳೆಂದರೆ ‘ಕಟ್ಟಿಗೆ ಒಂದಕ್ಕೆ ಸೀರೆ ಸುತ್ತಿಟ್ಟಂತೆ ಇದ್ದಳು ಆಯಿ’ ಎಂದು ಕಾದಂಬರಿಯಲ್ಲಿ ವರ್ಣಿತವಾಗಿದೆ. ಮನೆ ಮುಂದಿನ ಬಾದಾಮಿ ಗಿಡದ ಮೇಲಿನ ಅಪ್ಪನ ಪ್ರೇಮ ಅದನ್ನು ಪರಿಸರ ಪ್ರೇಮ ಎಂದೇನು ಸುಳ್ಳು ಸುಳ್ಳೆ ವಿಜ್ರಂಭಿಸುವದು ಲೇಖಕನಿಗೆ ಇಷ್ಟವಿಲ್ಲ. ಅದು ಕೇವಲ ಅವನ ಬಾದಾಮಿ ಗಿಡದ ಮೇಲಿನ ಪ್ರೀತಿ ಮಾತ್ರ ಆಗಿ ಉಳಿಯುವದರಿಂದ ಕಾದಂಬರಿ ಸಾಚಾ ಎನ್ನಿಸಿಕೊಳ್ಳುತ್ತದೆ.

ಬಾದಾಮಿ ಗಿಡದ ಮೇಲಿನ ಊರವರ ಅಕಾರಣ ದ್ವೇಷ ಮತ್ತು ಸಿಟ್ಟು, ಗಿಡದಲ್ಲಿ ದೆವ್ವ ಸೇರಿಕೊಂಡಿದೆ ಮತ್ತು ಊರಲ್ಲಿ ನಡೆಯುವ ಅವಘಡ ಮತ್ತು ಸಾವುಗಳಿಗೆಲ್ಲಾ ಆ ಶಾಪಗ್ರಸ್ತ ಬಾದಾಮಿ ಗಿಡವೇ ಕಾರಣ ಎನ್ನುವ ಊರ ರಾಮಯ್ಯನಂತವರು ಹುಟ್ಟಿಸುವ ಪುಕಾರಗಳು, ಅದನ್ನು ಕಡಿದು ಚೆಲ್ಲು ಎನ್ನುವ ಜನರ ಒತ್ತಾಯ, ಅದಕ್ಕೆ ಮಣಿಯದ ಅಪ್ಪ, ಊರಲ್ಲಿ ನಡೆಯುವ ಸಾಲು ಸಾಲು ಸಾವುಗಳು, ಭಯದಿಂದ ಊರನ್ನೇ ಬಿಟ್ಟು ಹೋದ ಊರವರು, ಒಂದು ರಾತ್ರಿ ಯಾರೋ ಬಾದಾಮಿ ಗಿಡವನ್ನು ಕಡಿದು ಚೆಲ್ಲಿದ್ದು ಹೀಗೆ ಕತೆ ನಿಗೂಢತೆಯನ್ನು ಸಂಘರ್ಷವನ್ನು ಎದುರು ಹಾಕಿಕೊಳ್ಳುತ್ತ ಬದುಕು ಗೆರೆ ಕೊರೆದಂತೆ ಅಲ್ಲ. ಅದು ಎತ್ತಿನ ಗಾಡಿಯ ಹಾಣಾದಿಯ ಹಾಗೆ ಎನ್ನುವದನ್ನು ಸಾಕ್ಷೀಕರಿಸುತ್ತ ಹೋಗುತ್ತದೆ.

ಇದರೊಂದಿಗೆ ಈ ಘಟನೆಗಳಿಗೆ ಈಡಾಗುವ ಭಿನ್ನ ಭಿನ್ನ ನೆನಪಿನ ತುಂಡುಗಳು, ಓದುವ ದಾರಿಯಲ್ಲಿ ಎದುರಾಗುವ ವಿವೇಕದ ಮಿಂಚು ಸಾಲುಗಳು, ನಿಗೂಢಕ್ಕೆ ಸಾಗುವ ಕಥನ, ಗುಬ್ಬಿ ಆಯಿ ನಿರೂಪಕನೊಂದಿಗೆ ನಿರಾಳ ಕಥೆ ಹೇಳುತ್ತ ರಾತ್ರಿಯಲ್ಲಾ ಅಡ್ಡಾಡುವದು, ತ್ಯೊತ್ಯಾನ ಮಗಳ ಮಕ್ಕಳಾಟ ಇವೆಲ್ಲ ಘಟನೆಗಳು ಕಾದಂಬರಿಗೆ ನಿಗೂಢತೆಯನ್ನು ತಂದಿವೆ.

ಕಾದಂಬರಿ ಒಂದು ರಚನೆ ಆಗಿರುವದರಿಂದ ಇಲ್ಲಿ ಕಟ್ಟುವ ಕೆಲಸ ನಾಜೂಕಾಗಿ ನಡೆಯಬೇಕು. ಉಪಮೆಗಳು, ಮಹೋಪಮೆಗಳು, ನೆನಪುಗಳು, ವಿವರಗಳು, ವ್ಯಕ್ತಿಗತ ತಳಮಳಗಳು ಹೀಗೆ ಭಾವಾಭಿವ್ಯಕ್ತಿ ನಿರಂತರ ಕಥೆಯ ಓಘವನ್ನು ಮುರಿದು ಕಟ್ಟುತ್ತಾ ಹೋಗಬೇಕು. ಅದಕ್ಕಾಗಿ ಕಥೆ ಸರ್ವಸಾಕ್ಷಿ ಪ್ರಜ್ಞೆಯಲ್ಲಿ ಸಾಗಬೇಕು.

ವಾಸ್ತವವಾದಿ ಕಾದಂಬರಿ ಪ್ರಕಾರಕ್ಕೆ ಒಗ್ಗಿಕೊಂಡಿರುವ ಓದುಗರಿಗೆ ಈ ಕಾದಂಬರಿಯ ನಡೆ ಒಂದು ನಿಗೂಢಲೋಕದ ಅನೂಹ್ಯ ಅಘೋರಿ ವಿವರಗಳಿಂದಾಗಿ ವಿಸ್ಮಯವನ್ನು ಉಂಟು ಮಾಡುತ್ತವೆ. ಇಲ್ಲಿಯೇ ಓದುಗನಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅಪ್ಪ ಸತ್ತದ್ದು ಕಥಾನಾಯಕನಿಗೆ ಹೇಗೆ ತಿಳಿಯಲಿಲ್ಲ ಎನ್ನುವದನ್ನು ಹಿಡಿದು , ಗುಬ್ಬಿ ಆಯಿ ನಿರೂಪಕನನ್ನು ರಾತ್ರಿಯೆಲ್ಲ ಹೊಲದಲ್ಲಿ ಅಡ್ಡಾಡಿಸುತ್ತ ಕತೆ ಹೇಳುತ್ತ ಹೊಗುವದು ಇತ್ಯಾದಿಗಳ ಒಗಟನ್ನು ತಿಳಿಯಲು ಕಾದಂಬರಿಯಲ್ಲಿ ಇನ್ನಷ್ಟು ವಿವರಗಳು ಸೇರಬೇಕಿತ್ತು ಎನ್ನಿಸದೆ ಇರದು. ಮಿಲನ ಕುಂದೇರಾ ಹೇಳುವಂತೆ ‘ಕಾದಂಬರಿಗಳ ಜಗತ್ತು ಸರ್ವಾಧಿಕಾರಿಗಳ ಜಗತ್ತು ಅಲ್ಲಿ ಉತ್ತರಗಳಿಗೆ ಜಾಗವಿಲ್ಲ’ ಅಂದರೆ ಕಾದಂಬರಿಯಲ್ಲಿ ಹುಟ್ಟುವ ಪ್ರಶ್ನೆಗಳಿಗೆ ಕಾದಂಬರಿಯಲ್ಲಿಯೇ ಉತ್ತರ ಸಿಗಲಾರದು ಲೋಕಪ್ರಜ್ಞಪ್ತಿಯ ನಿರಧಾರ ಸೂತ್ರಗಳೆ ಅದಕ್ಕೆ ಉತ್ತರ ಕೊಡಬೇಕು. ಹಾಣಾದಿ ಓದಿದಾಗಲೂ ಅಷ್ಟೆ.

(ಡಾ. ಬಾಳಾಸಾಹೇಬ ಲೋಕಾಪುರ)

ನಮಗೆ ಮಾಂತ್ರಿಕ ವಾಸ್ತವವಾದವನ್ನು ಕಲಿಸಿದವನು ಅದರ ಹರಿಕಾರನಾದ ಮಾರ್ಕವೇಜ್. ನಾವು ಅವನಂತೆ ಬರೆಯಲು ಹೋದಾಗ ಅದು ಸುಳ್ಳು ಕತೆಯಂತಾಗುವ ಅಪಾಯ ಇದ್ದೇ ಇದೆ. ಪ್ರಜ್ಞೆ ಮತ್ತು ನೆನಪಿನ ಸಮಸ್ಸೆ ಇದು. ನೆನಪನ್ನು ಅಳಿಸಿ ಹಾಕಿ ಪ್ರಜ್ಞೆಯಲ್ಲಿ ಸೇರಿದ್ದನ್ನು ಬರೆಯಬೇಕು ಎನ್ನುವದು ಯಾವುದೇ ಬರೆಹದ ಮೂಲ ಪಾಠವಾಗಿದೆ.

ಕಾದಂಬರಿಯಲ್ಲಿ ಸೇರಿಕೊಂಡಿರುವ ಅಪರೂಪದ ಮಿಂಚು ಮಾತುಗಳು ಖಂಡಿತವಾಗಿಯೂ ನಮ್ಮನ್ನು ಆನಂದ ಪಡಿಸುತ್ತವೆ.

1 ಕ್ರಿಸ್ತನಿಗೆ ವಯಸ್ಸಾದಂತೆ ಕಂಡಿತು.
2 ನನ್ನೂರು ಸುತ್ತುವರೆಯಲ್ಪಟ್ಟ ಗುಡ್ಡಗಳ ಮಧ್ಯೆ ಗುಬ್ಬಿ ಮರಿಯಂತೆ ಮುದುಡಿ ಕುಂತಿತ್ತು.
3 ಮುಗಿಲು ನೀಲಿಯೆಲ್ಲ ಟಪ್ಪನೆ ಸೇರಿ ಕಣ್ಣಲ್ಲಿ ಬಿತ್ತು.
4 ಯಾರೋ ಗದರಿಸಿ ಹೋದಂತೆ ಮುಗಿಲು ಗಂಭೀರವಾಗಿತ್ತು.
5 ಫ್ಯಾಕ್ಟರಿಯ ಕೊಳವೆಗಳು ಯಾರೋ ಮಲಗಿ ಸಿಗರೇಟು ಸೇದುತ್ತಿರುವಂತೆ ಹೊಗೆ ಬಿಡುತ್ತಿದ್ದವು.
6 ಉಣ್ಣೋ ಅನ್ನಕ್ಕ ದೇವರು ಬೆಳಸಿದ ಗಿಡಕ್ಕ ಎಲ್ಲಿಂದ ಜಾತಿ?

ಇಂತಹ ಮಿಂಚು ಸಾಲುಗಳು ಕಾದಂಬರಿಯ ತುಂಬ ಇಡುಕುಗೊಂಡಿವೆ.

ಕಾದಂಬರಿಕಾರ ಕಪಿಲ ಅವರ ಬಾಲ್ಯದ ಅನುಭವಗಳು ಬಹಳ ಗಟ್ಟಿಯಾಗಿವೆ. ನಾಜೂಕಾಗಿವೆ. ಈ ಕಾದಂಬರಿ ಅವರು ಬರೆಯಬಹುದಾದ ಅದೆಷ್ಟೊ ಸಾಹಿತ್ಯದ ಬೀಜರೂಪವಾಗಿದೆ. ನಿರಂತರ ಓದುವವರಾದ ನಾವು ನಮ್ಮ ಸಾಹಿತ್ಯ ರಚನಾ ಕಾಲದಲ್ಲಿ ವಿಸರ್ಜನಾ ಸಾಮರ್ಥ್ಯವನ್ನು ಬೆಳಸಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ನೆನಪು ಮರೆಯಾಗಿ ನಮ್ಮ ಪ್ರಜ್ಞೆಯ ಭಾಗವಾಗಿ ನಮ್ಮ ಸಾಹಿತ್ಯ ಹುಟ್ಟುತ್ತದೆ. ಯುವ ಗೆಳೆಯ ಕಪಿಲ ಅವರಿಗೆ ಆ ಸಾಮರ್ಥ್ಯವಿದೆ. ಕಪಿಲ ಇನ್ನಷ್ಟು ಮತ್ತಷ್ಟು ಬರೆಯಲಿ ಒಂದು ಕೃತಿಯನ್ನು ಹೊರತರದೆ ಮುಂದಿನ ಕೃತಿಯ ಸ್ವವಿಮರ್ಶೆ ನಮಗೆ ದಕ್ಕಲಾರದು. ಹೊರಗಿನ ವಿಮರ್ಶೆಯ ಮಾತುಗಳಿಗೆ ಯಾವ ಯಾವದೋ ಆಮಿಶಗಳು ಇರಬಹುದು. ಆದರೆ ಸ್ವತಃ ಲೇಖಕನೆ ತನ್ನ ಕೃತಿಗೆ ತಾನೆ ಮುಖಾಮುಖಿ ಆಗುವದು ಆ ಮೂಲಕ ಬರಬಹುದಾದ ನಮ್ಮ ಮುಂದಿನ ಕೃತಿಗೆ ನಾವೆ ಜವಬ್ದಾರಿಗಳಾಗುವದು ಸರಿಯಾದ ಮಾರ್ಗ. ಅದನ್ನು ಕಪಿಲ ಮಾಡಲಿ ಎಂದು ಆಶಿಸುತ್ತೇನೆ. ಕಪಿಲ ಇನ್ನಷ್ಟು ಮತ್ತಷ್ಟು ಬರೆಯಲಿ ಎಂದು ಹಾರೈಸುತ್ತ ಕನ್ನಡ ಸಾಹಿತ್ಯ ಲೋಕಕ್ಕೆ ಅವರನ್ನು ಹೃದಯಪೂರ್ವಕ ಬರಮಾಡಿಕೊಳ್ಳುತ್ತೇನೆ.

-ಡಾ. ಬಾಳಾಸಾಹೇಬ ಲೋಕಾಪುರ

*******

`ಹಾಣಾದಿ’ ಕಾದಂಬರಿ ತನ್ನ ಕಥಾವಸ್ತು, ನಿರೂಪಣಾ ವಿಧಾನ ಮತ್ತು ಲೇಖಕ ಹೀಗೆ ಹಲವು ಕಾರಣಗಳಿಂದ ಗಮನ ಸೆಳೆಯುವ ಕೃತಿ. ವರ್ತಮಾನ ಮತ್ತು ಭೂತಕಾಲ ಜತೆಜತೆಗೆ ಸಾಗುವ, ನೆನಪುಗಳ ಸಿಕ್ಕುಗಳಲ್ಲಿ ಓದುಗನನ್ನು ಸಿಲುಕಿಸುವ ಕಾದಂಬರಿ. `ಗಾರುಡಿ ವಾಸ್ತವತೆ’ಯ ತಂತ್ರವನ್ನು ಬಳಸುತ್ತದೆ. ಕಥೆಯೊಳಗೆ ಕಥೆ, ಅದರೊಳಿನ್ನೊಂದು ಕಥೆ ಎಂಬಂತೆ ಇದರ ನಿರೂಪಣೆ. ಕಾದಂಬರಿಯಲ್ಲಿ ಜನಪದ ರಮ್ಯಾದ್ಭುತ ಕಥೆಗಳಲ್ಲಿನಂತೆ ಗುಬ್ಬಿ ಆಯಿ ಎಂಬ ಅಡಗೂಳಜ್ಜಿ ಇದ್ದಾಳೆ. ಬೇತಾಳವನ್ನು ಬೆನ್ನಿಗೆ ಹಾಕಿಕೊಂಡಿರುವ ರಾಜಾ ತ್ರಿವಿಕ್ರಮನಂತೆ ನೆನಪುಗಳ ಪಾಥೇಯವನ್ನು ಹೊತ್ತ ಕಥಾನಿರೂಪಕನಿದ್ದಾನೆ. ಅವರ ಮಾತುಕತೆ, ನೆನಪು, ಉಪಕಥೆಗಳು ಭ್ರಮ-ವಿಭ್ರಮ ಲೋಕವನ್ನು ಸೃಷ್ಟಿಸುತ್ತವೆ. ಒಂದು ಗ್ರಾಮದ ಅವನತಿ, ಸಾವು-ನೋವು, ವಿಷಮ ಸಂಸಾರ, ಸಂಬಂಧಗಳು, ಮಾನವ ಸಹಜ ದ್ವೇಷಾಸೂಯೆ, ಬದುಕು ಬಲಿ ಕೊಡುವ ನಂಬಿಕೆ ಇತ್ಯಾದಿಗಳು ಈ ಗಾರುಡಿ ಲೋಕದಲ್ಲಿ ಬಿಚ್ಚಿಕೊಳ್ಳುತ್ತವೆ.

ಕಥಾನಾಯಕ ಭೂತಕಾಲದ ನೆನಪುಗಳ ಆಶ್ರಿತ. ಈ ನೆನಪುಗಳು ಮತ್ತೆ ಮತ್ತೆ ಬಾಲ್ಯಕ್ಕೆಳೆದು ಸಿಹಿಕಹಿಯನ್ನು ಉಣಬಡಿಸುತ್ತದೆ. ಗುಬ್ಬಿ ಆಯಿ, ಒಮ್ಮೆ ಸಾಕ್ಷಿಯಾದರೆ, ಮಗದೊಮ್ಮೆ ದುರಂತಗಳಲ್ಲಿ ಭಾಗಿ. ಕಾದಂಬರಿಯಲ್ಲಿ, ಅಪ್ಪ, ಪುಟ್ಟ ಬಾಲಕಿ, ಅಡವಿ, ಗುಡ್ಡ, ಹೊಲ, ಹಳ್ಳಿಯ ಉಳಿದ ಪಾತ್ರಗಳಂತೆಯೇ ಬಾದಾಮಿ ಮರ ಕೂಡ ಪ್ರಮುಖ ಪಾತ್ರ. ಮಾತ್ರವಲ್ಲ, ಆ ಹಳ್ಳಿಯಲ್ಲಿ ನಡೆಯುವ ಎಲ್ಲ ದುರಂತಗಳಿಗೆ ಸಾಕ್ಷಿಯಾಗಿ ಕೊನೆಗೆ ಗುರುತು ಕೂಡ ಉಳಿಸದೆ ಮರೆಯಾಗುವ ಪ್ರತಿಮೆ.

(ಕೇಶವ ಮಳಗಿ)

ಲೇಖಕನ ಕಾರಣದಿಂದ ಗಮನ ಸೆಳೆವ ಕೃತಿಯೆಂದು ಹೇಳಿದೆ. ಇನ್ನೂ ವಿದ್ಯಾರ್ಥಿಯಾಗಿರುವ ಇಪ್ಪತ್ತರ ಆಸುಪಾಸಿನ ಕಪಿಲ ಹುಮನಾಬಾದೆ ಕಾದಂಬರಿ ರಚನೆಯಲ್ಲಿ ತೋರಿರುವ ಶ್ರದ್ಧೆ, ತಂತ್ರ, ಆಯ್ದುಕೊಂಡ ಕಥಾವಸ್ತು ಮತ್ತು ಅದನ್ನು ನಿಭಾಯಿಸಿರುವ ದೃಷ್ಟಿಯಿಂದ ಅಭಿನಂದನೆಗೆ ಅರ್ಹರು. ಸಾಗಬೇಕಾದ ದಾರಿ ದೂರವಿರಬಹುದು. ಆದರೆ, ಅವರ ಮೊದಲ ಹೆಜ್ಜೆ ಅಳೆದು-ತೂಗಿ, ವಿಚಾರಿಸಿ ಇಟ್ಟಿರುವಂಥದ್ದು. ಹಾಗೆಂದೇ, ತನ್ನ ಸೀಮಿತಾರ್ಥದಲ್ಲಿ ಹಾಣಾದಿ ಒಂದು ಯಶಸ್ವಿ ಕಾದಂಬರಿ.

ವಿಕ್ರಮ-ಬೇತಾಳ ಕಥೆಯ ಅಂತ್ಯವನ್ನು ನಾವೆಲ್ಲ ಬಲ್ಲೆವು. ಹಾಣಾದಿ ಕೃತಿಯ ಅಂತ್ಯವನ್ನು ಓದಿಯೇ ಅರಿತುಕೊಳ್ಳಬೇಕು.

-ಕೇಶವ ಮಳಗಿ