ನಿಶ್ಚಿತಾರ್ಥಕ್ಕೆ ಮೂರು ದಿನ ಉಳಿದಿತ್ತು. ಅದೇನಾಯಿತೋ ಕಾಣೆ. ರಾತ್ರಿ ಮನೆಯಲ್ಲಿ ಮಲಗಿದ್ದವಳು ಬೆಳಗ್ಗಿಗೆ ಕಾಣಲಿಲ್ಲ. ಊರೆಲ್ಲಾ ಹುಡುಕಾಯಿತು. ಸುಳಿವಿಲ್ಲ, ಸುದ್ದಿಲ್ಲ. ಅಮ್ಮ ಪಕ್ಕದೂರಿನ ದರ್ಗಾಕ್ಕೆ ಹೋಗಿ ”ಎಲ್ಲಾರ ಇರ್ಲಿ ಸುಖವಾಗಿರ್ಲಿ” ಅಂತ ದುವಾ ಕೇಳಿಕೊಂಡು ಬಂದ್ಲು. ಬಾಬಾ ‘ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ’ ಅನ್ನೊ ಗಾದೆ ನಿಜವಾಗಬಾರದೆಂದು ಉಳಿದ ನಾವು ನಾಲ್ಕು ಹೆಣ್ಣು ಮಕ್ಕಳನ್ನ ಹೆಚ್ಚು ಹೆಚ್ಚು ಕಾಯಲು ಶುರುಮಾಡಿದ. ಸಹಜವಾಗಿಯೇ ಪಾತಿ ಮತ್ತು ಸಯೀದನ ಮದುವೆ ಮುರಿದುಬಿದ್ದಿತ್ತು. ನನಗೆ ನಿಜಕ್ಕೂ ಶಾಕ್ ಹೊಡೆದಂಗಾಗಿತ್ತು.
‘ಜಂಕ್ಷನ್ ಪಾಯಿಂಟ್’ ಅಂಕಣದಲ್ಲಿ ದಾದಾಪೀರ್ ಜೈಮನ್ ಹೊಸ ಬರಹ
”ಮದುವೆಗೂ ಮುನ್ನ ಎಷ್ಟು ಲವಲವಿಕೆಯಿಂದಿದ್ದಿರಿ ಆಪಾ… ಹೋದ ಬಂದ ಕಡೆಯೆಲ್ಲಾ ಒಳ್ಳೆ ಪಾದರಸದಂತೆ ಓಡಾಡಿಕೊಂಡಿದ್ದಿರಿ. ಇಡೀ ಮನೆಯೇ ಕಲಕಲ ಅಂತಿತ್ತು. ಈಗ ತುಂಬ ಸೈಲೆಂಟಾಗಿಬಿಟ್ಟೀರಿ… ಎಲ್ಲ ಸರಿಯಿದೆ ತಾನೇ?” ಎಂಬ ಆ ಹುಡುಗನ ಪ್ರಶ್ನೆಗೆ ಉತ್ತರಿಸಲಾಗದೇ ತತ್ತರಿಸಿ ಹೋಗಿದ್ದೆ. ದೂರದ ಬೆಂಗಳೂರಿನಲ್ಲೆಲ್ಲೋ ಉದ್ಯೋಗ ಮಾಡಿಕೊಂಡಿರುವ, ಆಗಾಗ ಕತೆಗಿತೆ ಬರೆದುಕೊಂಡಿರುವ ಆ ಹುಡುಗ ನಮ್ಮ ಮನೆಗೆ ಬಂದು ನನ್ನ ಮುಂದೆ ಹೀಗೊಂದು ಕನ್ನಡಿ ಹಿಡಿದುಬಿಟ್ಟು, ಮರೆತೇ ಹೋಗಿದ್ದ ನನ್ನನ್ನು ಕಾಣಿಸಿದಾಗ ದಂಗಾಗಿದ್ದೆ. ಇಡೀ ನಮ್ಮ ಮನೆತನದಲ್ಲೆ ಬಾಯಿಬಡುಕಿ, ಬಜಾರಿ ಬೇಗಂ, ಗಟ್ವಾಣಿ ಬೇಗಿ ಎಂದೆಲ್ಲ ಕರೆಸಿಕೊಳ್ಳುತ್ತಿದ್ದ ನಾನು ಮದುವೆಯಾದ ಮೇಲೆ ನನ್ನಕ್ಕ ಪಾತಿಗಿಂತಲೂ ಸೈಲೆಂಟಾಗಿದ್ದು ಯಾರಿಗೂ ಒಂದು ಕಾಳಜಿಯ ವಿಷಯವೆ ಆಗಲಿಲ್ಲವೆ? ಬೇರೆಯವರು ಸಾಯಲಿ, ಕನಿಷ್ಠ ಪಕ್ಷ ನನಗೂ ಅನಿಸಲಿಲ್ಲವೇಕೆ? ಹೆರಿಗೆಯಾಗುವುದಕ್ಕೆ ಕೆಲವೇ ದಿನಗಳು ಬಾಕಿಯಿರುವಾಗ ಮನಸಿನ ಶಾಂತಿ ಕಲಕುವ ಇಂತಹ ಪ್ರಶ್ನೆಗಳನ್ನು ಎದುರಿಸದಿರುವುದೇ ಒಳ್ಳೆಯದೆನಿಸಿದರೂ; ಈಗ ಕೆದಕಿ, ಹೇಳಿಕೊಂಡು, ಕಣ್ಣೀರಿಸಿ ಹಗುರಾಗದಿದ್ದರೆ ತೆಗೆದುಕೊಳ್ಳುವ ಪ್ರತಿಯುಸಿರೂ ಭಾರವಾಗಿ ಬದುಕೇ ನಿಂತು ಹೋದೀತೆಂಬ ಭಯದಿಂದ ಎದುರುಗೊಳ್ಳುತ್ತಿದ್ದೇನೆ.
ನಮ್ಮದು ಸಣ್ಣ ಹಳ್ಳಿ. ಅಂದು ನನ್ನ ಮದುವೆಯ ದಿನ. ನಮ್ಮಲ್ಲಿ ಹೆಣ್ಣಿನ ಕಡೆಯೇ ಮದುವೆಯಾದ್ದರಿಂದ ಮನೆಯ ಮುಂದೆ ಒಂದು ಸಣ್ಣ ಚಪ್ಪರ ಹಾಕಿದ್ದರು. ಝಗಮಗ ಟಿಕ್ಲಿ ಸೀರೆಯನ್ನುಟ್ಟು, ಮಲ್ಲಿಗೆ ಮುಡಿದು, ಎರಡೂ ಕೈಗಳಿಗೆ ಮೆಹಂದಿ ಹಾಕಿಕೊಂಡು, ತಲೆನೋವು ಬರುವಷ್ಟು ಅತ್ತರು ಹಾಕಿಕೊಂಡಿದ್ದ ಹೆಂಗಸರ ಮಧ್ಯೆ ನಾನು ಮದುಮಗಳಾಗಿ ಕುಳಿತಿದ್ದೆ. ಆಗ ನನ್ನ ತಲೆಯಲ್ಲಿ ಏನು ಓಡುತ್ತಿತ್ತು? ಈಗ ನನಗೆ ನೆನಪಿರುವ ಪ್ರಕಾರ ಖಾಲಿಯಿತ್ತು. ಅಸುಗು ಮಸುಗು ಕೇಳಿಸುತ್ತಿತ್ತು ಮತ್ತು ಕಾಣಿಸುತ್ತಿತ್ತು… ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಮೂರು ಸಲ ‘ಕಬೂಲ್ ಹೈ’ ಹೇಳಿಬಿಟ್ಟರೆ ಮದುವೆ ಮುಗಿಯಿತು. ಭಯವಾಗುತ್ತಿತ್ತು. ಹೇಗಾದರೂ ಆಗಿ ಈ ಮದುವೆಯೊಂದು ನಿಂತರೆ ಸಾಕೆನಿಸುತ್ತಿದ್ದರೂ ಅದು ಸಾಧ್ಯವಿಲ್ಲದ್ದೆಂದೂ ಗೊತ್ತಿತ್ತು.
ನಿಜ ಹೇಳಬೇಕೆಂದರೆ ಸಯೀದನನ್ನು ಮದುವೆಯಾಗಬೇಕಾಗಿದ್ದವಳು ನನ್ನಕ್ಕ ಫಾತಿಮಾ. ತನ್ನ ತವರು ಕಡೆಯಿಂದಲೇ ಹೆಣ್ಣು ತರಬೇಕೆಂದುಕೊಂಡಿದ್ದ ಸಯೀದನ ತಾಯಿಗೆ ಪಾತಿ ತುಂಬಾ ಹಿಡಿಸಿದ್ದಳು. ಸಯೀದನೂ ಬೇಡವೆಂದಿರಲಿಲ್ಲ. ‘ಒಳ್ಳೆ ಜೋಡಿ… ಒಳ್ಳೆ ಜೋಡಿ’ ಎಂದು ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು. ನನಗಿನ್ನು ಚೆನ್ನಾಗಿ ನೆನಪಿದೆ. ಸಯೀದನ ಅಣ್ಣ ಹಮೀದ್ ಊರಿನ ಕುರುಬರ ಯಮುನಿಯನ್ನ ಪ್ರೀತಿಸಿ ಓಡಿಸಿಕೊಂಡು ಹೋಗಿದ್ದ. ವಾರದವರೆಗೂ ಸುದ್ದಿಯಿರಲಿಲ್ಲ. ಇತ್ತ ಇವರಮ್ಮ, ಮಗ ಹೋದ ದುಃಖಕ್ಕೋ, ಮರ್ಯಾದೆ ಹೋದ ಸಂಕಟಕ್ಕೋ ಗೊತ್ತಿಲ್ಲ!!! ಅನ್ನ ಮುಟ್ಟಿರಲಿಲ್ಲ. ನಾನು ಮತ್ತೆ ಪಾತಿ ಇವಳ ಸೇವೆಗೆ ಬಂದಿದ್ದಾಯಿತು. ”ಸಾಬ್ರ ಹುಡುಗ ಕುರುಬರ ಹುಡುಗಿಯನ್ನ ಒಡಿಸ್ಕ್ಯಂಡು ಹೋಗ್ಯಾನಂತೆ” ಎಂಬ ವಿಷಯ ಕಿವಿಯಿಂದ ಕಿವಿಗೆ ಜಾನಪದದಂತೆ ಗುಲ್ಲಾಗಿತ್ತು. ಸದ್ಯ ಟೀವಿಗೀವಿನಾಗೆ ಬರಲಿಲ್ಲ. ಆಗಿನ್ನು ಊರು ಇಷ್ಟೊಂದು ಹೊಲ್ಸೆದ್ದಿರಲಿಲ್ಲ ಇರ್ಬೇಕು!!! ಕಡೆಗೂ ಒಂದಿನ ಫೋನು ಬಂತು. ನಾವೆಣಿಸಿದಂತೆ ಆ ಕಡೆಯಿಂದ ಹಮೀದ್ ಭಯ್ಯಾ, ಈಕಡೆ ಅವರಮ್ಮ. ಬೈದು, ಅತ್ತೂ ಕರೆದೂ ಮೆಲ್ಲಕ ಅಡಿಗಿ ಮನೀಗ ಬಂದು ”ಅಕೀನ ಅಲ್ಲೆ ಬಿಟ್ಟ ಬಂದುಬಿಡಲೋ… ಇಲ್ಲಿ ಏನಾರ ಮೇನೇಜ್ ಮಾಡಿಕಂಡರಾತು” ಅಂತಂದು ಬಿಟ್ಲು ಈ ಕಲ್ಲು ಹೃದಯದ ರಂಡೆ. ಅಲ್ಲೆ ಒಲಿ ಮ್ಯಾಲ ಅನ್ನಕ್ಕಿಟ್ಟು ಉದಗೊಳಿಬಿಲೆ ಊದ್ತಾ ಇದ್ದೋಳು ಗಾಬರಿಯಾಗಿಬಿಟ್ಟೆ. ತಿನ್ನ ಅನ್ನದ ಮೇಲಾಣೆ, ಈ ಮನಿ ಮ್ಯಾಗಿದ್ದ ಎಲ್ಲ ಯಾಮೋಹಾನೂ ಕರಗೋಯ್ತು. ಸದ್ಯ ಹಮೀದ್ ಭಯ್ಯಾ ಎಷ್ಟೇ ಉಂಡರಗೋವಿ ಆಗಿದ್ರೂ ”ಬಂದ್ರೆ ನಾ ಇಕಿನ್ನೂ ಕರಕೊಂಡು ಬರ್ತೀನಿ. ಇಲ್ಲಾಂದ್ರೆ ನಮ್ಮಾದಿ ನಮಿಗೆ, ನಿಮ್ದು ನಿಮಿಗೆ” ಎಂದನಂತೆ. ಅವನು ಹಾಗೆ ಹಠ ಹಿಡಿದದ್ದಕ್ಕೆ ಬೇರೆ ವಿಧಿಯಿಲ್ಲದೆ ಜಮಾತಿನ ಅಣತಿಯ ಪ್ರಕಾರ ರಾತ್ರೋ ರಾತ್ರಿ ಶಾದಿ ಮಾಡಿ ಯಮುನಿಗೆ ಬೀಬಿಜಾನ್ ಹೆಸರಿಟ್ಟು ಜಾತಿಯೊಳಗಾಕ್ಕಂಡು ಆ ಕತಿ ಮುಗ್ಸಿದ್ರು. ಯಮುನಿ ಭಾಬಿನೂ ಜಾಣಿ. ಯಾರೇನೆ ಬೈದ್ರು ಕಿವ್ಯಾಗಕ್ಯಳ್ದಂಗ ಅಕಿ ಮನಿಯಾಗ ನಮಾಜು, ಪೂಜಿ ಎರಡೂ ಮಾಡಿಕ್ಯಂಡೊಕ್ಕಾಳ… ಬರೀ ಹಬ್ಬ ಹರಿದಿನ ಸತ್ತಾಗ ಕೆಟ್ಟಾಗಷ್ಟೇ ಬಂದೋದರಾಯ್ತು ಅಂತಾ ನಿರ್ಧಾರ ಮಾಡಿದ್ದಾಕಿ ಯಮುನಿ ಮಕ ನೋಡಿನೆ ಪ್ರತೀಸತಿ ಬಂದೋಗತಿದ್ದೆನಾದ್ರೂ ಸಯೀದನ ತಾಯಿ ಮುಖ ನೋಡಾಕು ಮನಸ್ಸಿರ್ತಿಲ್ಲಿಲ್ಲ.
ಸರ್ವಗುಣ ಸಂಪನ್ನೆ, ಬಾಯಿ ಸತ್ತ ಹುಡುಗಿ, ಜಾಣೆ ಹೀಗೇ ಎಲ್ಲರಿಂದ ಸದಾ ಹೊಗಳಿಸಿಕೊಳ್ಳುತ್ತಿದ್ದ ಪಾತಿಗೆ ಸರಿಯಾದ ಜಾಗವೇ ಸಿಕ್ಕಿದೆ. ಸಾಯಲಿ ಬೋಸುಡಿ ಅಂತ ಖುಷಿಯಾದರೂ ಈ ಕಟುಕರ ಮಧ್ಯೆ ಅವಳು ಹೇಗೆ ಬದುಕುತ್ತಾಳೋ ಎಂದು ರಾತ್ರಿ ಅಂಗಳದಲ್ಲಿ ನಕ್ಷತ್ರ ನೋಡುತ್ತಾ ಮಲಗುವಾಗ, ಬೀಡಿ ಕಟ್ಟುವಾಗ, ಮುಸುರೆ ತಿಕ್ಕುವಾಗ ಮರುಕ ಹುಟ್ಟಿದ್ದಂತೂ ಸುಳ್ಳಲ್ಲ. ದೇವರು ಇದಕ್ಕೆ ಆಮಿನ್ ಅಂದುಬಿಟ್ಟನೋ ಏನೋ ಈ ಕಟುಕರ ಕೂಪಕ್ಕೆ ನನ್ನ ತಗುಲಾಕಿಬಿಟ್ಟ.
ಪಾತಿ ಮತ್ತು ಸಯೀದನ ನಿಶ್ಚಿತಾರ್ಥಕ್ಕೆ ಒಂದು ವಾರ ಇತ್ತು. ಅವಳ ಮೇಲೆ ನನಗೆ ಆಳದಲ್ಲಿ ಎಷ್ಟೇ ಹೊಟ್ಟೆ ಕಿಚ್ಚಿದ್ದರೂ ತಡೆಯಲಾಗದೆ ”ಬ್ಯಾಡೆ ಪಾತಿ… ಅವರು ಕಟುಕರು. ಅವರ ಮಧ್ಯೆ ನಿಂಗೆ ಸೆಟ್ಟಾಗಲ್ಲ… ಒಲ್ಲೆ ಅಂದುಬಿಡೆ” ಎಂದು ಮನೆಯಲ್ಲಿ ನಾವಿಬ್ಬರೆ ಬೀಡಿ ಕಟ್ಟುವಾಗ ಹೇಳಿದ್ದೆ.
”ಆ ಮನಿ ನೋಡು. ಈ ಮನಿ ನೋಡು. ಇಲ್ಲಿ ಕೂಲಿಗೆ, ಅವರಿವರ ಹೊಲದ ಕಳೆ ಕೀಳಕೋಗ್ಬೇಕು. ಅಲ್ಲಿ ಇರದ್ರಾಗ ಅನುಕೂಲವಾಗಿದಾರೆ ಬೇಗಿ. ಮಂಚ, ಫ್ಯಾನು, ಫ್ರಿಜ್ಜು, ಟೀವಿ ಎಲ್ಲ ಐತಿ. ಸಯೀದ್ ಕೂಡ ಜವಾಬ್ದಾರಿ ಮನುಷ್ಯ. ಹಮೀದ್ ಭಯ್ಯಾನ ಹಂಗಲ್ಲ. ಅವನದ್ದೆ ಎಗ್‌ರೈಸಿನಂಗಡಿ ಇದೆ. ಬಾಡಿಗೆ ವ್ಯಾನು ತಗೊಳೊ ಪ್ಲಾನೈತಂತೆ. ಇರೋದ್ರಲ್ಲೆ ಇದೇ ಒಳ್ಳೇದು…” ಎಂದಳು. ಪಾತಿ ನಾನಂದುಕೊಂಡಷ್ಟು ದಡ್ಡಿಯಲ್ಲ ಅಂತ ಅವತ್ತು ಗೊತ್ತಾಗಿತ್ತು.
ನಿಶ್ಚಿತಾರ್ಥಕ್ಕೆ ಮೂರು ದಿನ ಉಳಿದಿತ್ತು. ಅದೇನಾಯಿತೋ ಕಾಣೆ. ರಾತ್ರಿ ಮನೆಯಲ್ಲಿ ಮಲಗಿದ್ದವಳು ಬೆಳಗ್ಗಿಗೆ ಕಾಣಲಿಲ್ಲ. ಊರೆಲ್ಲಾ ಹುಡುಕಾಯಿತು. ಸುಳಿವಿಲ್ಲ, ಸುದ್ದಿಲ್ಲ. ಅಮ್ಮ ಪಕ್ಕದೂರಿನ ದರ್ಗಾಕ್ಕೆ ಹೋಗಿ ”ಎಲ್ಲಾರ ಇರ್ಲಿ ಸುಖವಾಗಿರ್ಲಿ” ಅಂತ ದುವಾ ಕೇಳಿಕೊಂಡು ಬಂದ್ಲು. ಬಾಬಾ ‘ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ’ ಅನ್ನೊ ಗಾದೆ ನಿಜವಾಗಬಾರದೆಂದು ಉಳಿದ ನಾವು ನಾಲ್ಕು ಹೆಣ್ಣು ಮಕ್ಕಳನ್ನ ಹೆಚ್ಚು ಹೆಚ್ಚು ಕಾಯಲು ಶುರುಮಾಡಿದ. ಸಹಜವಾಗಿಯೇ ಪಾತಿ ಮತ್ತು ಸಯೀದನ ಮದುವೆ ಮುರಿದುಬಿದ್ದಿತ್ತು. ನನಗೆ ನಿಜಕ್ಕೂ ಶಾಕ್ ಹೊಡೆದಂಗಾಗಿತ್ತು. ಅವಳು ಓಡಿ ಹೋದ ದಿನದ ಸಂಜೆ; ಅವಳಿಗೇನನ್ನಿಸಿತೋ ಏನೋ, ಒಳಮನೆಯ ಪುಟ್ಟ ಅಂಗಳದಲ್ಲೆ ಕುಂಟಾಬಿಲ್ಲೆ ಆಟಕ್ಕೆ ಗೆರೆ ಬರೆದು ಬಚ್ಚ ತಲೆಮೇಲಿಟ್ಟು ಕುಂಟುತ್ತಾ ‘ಆಮೆರೈಟ್…ಆಮೆರೈಟ್’ ಎಂದು ಕೇಳಿದ್ದು… ನಾನದಕ್ಕೆ ‘ಯೆಸ್…ಯೆಸ್’ ಎಂದದ್ದು… ಈಗಲೂ ಅದೆಲ್ಲಾ ಮರೆಯಲಾಗದ ನೆನಪು. ನೋಡಿ ಈಗಲೂ ಕಣ್ತುಂಬಿ ಬರುತ್ತಿದೆ. ಈ ಕಣ್ಣೀರಿನ ಹಿಂದಿನ ಅರ್ಥ ಕೇಳಬೇಡಿ ಮತ್ತೆ…
ಸರ್ವಗುಣ ಸಂಪನ್ನೆ, ಬಾಯಿ ಸತ್ತ ಹುಡುಗಿ, ಜಾಣೆ ಹೀಗೇ ಎಲ್ಲರಿಂದ ಸದಾ ಹೊಗಳಿಸಿಕೊಳ್ಳುತ್ತಿದ್ದ ಪಾತಿಗೆ ಸರಿಯಾದ ಜಾಗವೇ ಸಿಕ್ಕಿದೆ. ಸಾಯಲಿ ಬೋಸುಡಿ ಅಂತ ಖುಷಿಯಾದರೂ ಈ ಕಟುಕರ ಮಧ್ಯೆ ಅವಳು ಹೇಗೆ ಬದುಕುತ್ತಾಳೋ ಎಂದು ರಾತ್ರಿ ಅಂಗಳದಲ್ಲಿ ನಕ್ಷತ್ರ ನೋಡುತ್ತಾ ಮಲಗುವಾಗ, ಬೀಡಿ ಕಟ್ಟುವಾಗ, ಮುಸುರೆ ತಿಕ್ಕುವಾಗ ಮರುಕ ಹುಟ್ಟಿದ್ದಂತೂ ಸುಳ್ಳಲ್ಲ.
ಆಗಿದ್ದಾಯಿತು ಎಂದೊಂದು ದೀರ್ಘ ನಿಟ್ಟುಸಿರು ಬಿಟ್ಟು ಮುಂದುವರಿಯುವ ಮೊದಲೇ ಬದುಕು ಮತ್ತೊಂದಿಷ್ಟು ಅನಿರೀಕ್ಷಿತಗಳೊಟ್ಟಿಗೆ, ಪ್ರವಾಹದ ರಭಸದೊಂದಿಗೆ, ಯೋಚಿಸಲೂ ಸಮಯ ಕೊಡದೆ ಧುತ್ತೆಂದು ನುಗ್ಗಿ ಬಂದಾಗ ಅದರಲ್ಲಿ ಕೊಚ್ಚಿ ಹೋಗುವುದೊಂದೆ ಉಳಿದಿರುವ ಮಾರ್ಗ ಎಂದು ನಂಬಿಸುತ್ತಿತ್ತು. ಇತ್ತ ತವರಿನಕ್ಕರೆಯ ಸಯೀದನ ತಾಯಿ, ಮಕ್ಕಳ ಮದುವೆಯ ಚಿಂತೆ ಹೊತ್ತ ನನ್ನಮ್ಮ, ನನ್ನ ಮತ್ತು ಸಯೀದನ ಮದುವೆ ಪ್ರಸ್ತಾಪಕ್ಕೆ ಸಜ್ಜಾಗುತ್ತಿದ್ದರು.
******
ಇದಾದ ಕೆಲವೇ ದಿನಗಳಲ್ಲಿ ಸಯೀದನ ಊರಿನಲ್ಲಿರುವ ಒಂದೇ ಒಂದು ಸರಕಾರಿ ಶಾಲೆಯಲ್ಲಿ, ಒಂಭತ್ತನೆಯ ತರಗತಿ ಓದುತ್ತಿದ್ದ ನೀಲವ್ವ ಎಂಬ ಹುಡುಗಿ ರಾತ್ರಿ ಬೆಂಕಿ ಹಚ್ಚಿಕೊಂಡು ಸತ್ತು ಹೋದ ಸುದ್ದಿ ಇಡೀ ಊರನ್ನೆ ಬೆಚ್ಚಿ ಬೀಳಿಸಿತು. ಮನೆಯವರು ಅವಳಿಗೆ ಅಚಾನಕ್ಕಾಗಿ ತಗುಲಿದ ಬೆಂಕಿಯಿಂದ ಸತ್ತಳೆಂದು ಹೇಳಿಕಿ ಕೊಟ್ಟರೂ ನೀಲಳ ಅಪ್ಪ, ಚಿಕ್ಕಪ್ಪರನ್ನ ಕರೆದು ವಿಚಾರಿಸಿ, ಚೆನ್ನಾಗಿ ತದುಕಿ ಕಳಿಸಿದ್ದರೆಂದು ಸುದ್ದಿಯಿತ್ತು. ನೀಲಿ ಸತ್ತ ಮಾರನೆಯ ದಿನವೇ ಸಯೀದ ಊರು ಬಿಟ್ಟು ತಲೆಮರೆಸಿಕೊಂಡಿದ್ದು ಕೇವಲ ಆಕಸ್ಮಿಕವಲ್ಲವೆಂಬುದು ಗೊತ್ತಾಗಿ ಹೋಗಿತ್ತು. ನೀಲಿಯ ಮನೆಯಲ್ಲೊಂದು ಮೊಬೈಲು ಸಿಕ್ಕು ಅದ್ಯಾರದೆಂದು ಅವಳ ಮನೆಯಲ್ಲಿ ವಿಚಾರಿಸಿ ರಗಳೆಯಾಗಿ ಅವರ ಮನೆಯವರೆ ಅವಳನ್ನ ಕೊಂದರೆಂದು ಕೆಲವು ಜನ, ಸಯೀದನೇ ಪ್ರೀತಿಸಿ ಅವಳನ್ನ ಮದುವೆಯಾಗಲೊಪ್ಪದಿದ್ದಾಗ ನೊಂದುಕೊಂಡು ಬೆಂಕಿಗಾಹುತಿಯಾದಳೆಂಬ ಮಾತೂ ಇತ್ತು. ನೀಲಿ ಬಸುರಿಯಾಗಿದ್ದಳೆ? ಇವನು ಅದಕ್ಕೆ ಒಪ್ಪಲಿಲ್ಲವೆ? ಸಾವಿನಲ್ಲಿ ಅವಳ ಮನೆಯವರ ಕೈವಾಡವೂ ಇದೆಯೆ? ಇವನು ಭಯದಿಂದ ಊರು ಬಿಟ್ಟನೆ? ವಾರದ ಬಳಿಕ ಅವನು ಪ್ರತ್ಯಕ್ಷವಾಗಿ, ನೀಲಳ ಮನೆಯವರಿಗೆ ಲಕ್ಷಕ್ಕೆ ಹತ್ತಿರದಷ್ಟು ರೊಕ್ಕ ಕೊಟ್ಟಾಗ ಸಾಬೀತಾಗಿತ್ತು. ಮಗಳ ಗತಿಗೆ ಕಾರಣನಾದ ಸಯೀದನನ್ನು ಅವರು ಸುಮ್ಮನೆ ಬಿಟ್ಟುಬಿಡುತ್ತಾರಾ? ನಮ್ಮ ಮನೆಯಲ್ಲಿಯೆ ಹೀಗಾಗಿದ್ದರೆ ನಾವು ಸುಮ್ಮನಿರುತ್ತಿದ್ದೇವೆಯ? ಯೋಚಿಸುತ್ತಾ ಹೋದಂತೆ ನಿದ್ದೆಯೇ ಹತ್ತುತ್ತಿರಲಿಲ್ಲ. ಸಯೀದನ ತಾಯಿ ಇವನಿಗೂ ಈಗ ಯಾರೂ ಹೆಣ್ಣು ಕೊಡಲಾರರೆಂದೊ ಮದುವೆಯ ಪ್ರಸ್ತಾಪ ತಂದಿಟ್ಟಳು. ಅವನೂ ಬೇಡವೆನ್ನಲಿಲ್ಲ. ನನ್ನ ಒಪ್ಪಿಗೆಯನ್ನ ಯಾರೂ ಕೇಳಲೂ ಇಲ್ಲ. ಈ ಹಲ್ಕಟ್ ಜನ ಇಂತಹ ಸಂದರ್ಭದಲ್ಲೂ ವರದಕ್ಷಿಣೆ ಕೇಳಿದರಂತೆ. ನನ್ನವ್ವ ಹುಡುಗನ ಕಡೆಯೂ ಊನ ಇದ್ದಿದ್ದರಿಂದ ಒಂದು ನಯಾಪೈಸೆ ಕೊಡಲಾಗುವುದಿಲ್ಲ ಎಂದಳಂತೆ.
ಮದುವೆಮನೆಯ ಸಂಭ್ರಮದ ಗದ್ದಲಗಳೂ ನನ್ನಲ್ಲಿ ಯಾವ ಕಂಪನಗಳನ್ನೂ ಉಂಟು ಮಾಡುತ್ತಿರಲಿಲ್ಲ. ಸುಡು ಬೇಸಗೆಯ ನಿದ್ದೆ ಬಾರದ ದಿನಗಳಲ್ಲಿ ಫ್ಯಾನಿನ ಸೌಂಡು ಎಷ್ಟೇ ಕರ್ಕಶವಿದ್ದರೂ ಸಹಿಸಿಕೊಳ್ಳುತ್ತೀವಲ್ಲ ಹಾಗೆ ಸಹಿಸಿಕೊಳ್ಳದೆ ಯಾವ ದಾರಿಯೂ ಉಳಿದಿರಲಿಲ್ಲ. ಈ ಎಲ್ಲ ಸಮಸ್ಯೆಗಳು ಶುರುವಾದದ್ದು ಎಲ್ಲಿಂದ? ಪಾತಿಯಿಂದಲಾ? ಜಾತಿಯೊಂದಿಲ್ಲವಾಗಿದ್ದರೆ ಪಾತಿ ಓಡಿಹೋಗುತ್ತಿರಲಿಲ್ಲವಾ? ಜಾತಿಯಿಲ್ಲದಿದ್ದರೆ ಸಯೀದ ನೀಲಿಯನ್ನ ಒಪ್ಪುತ್ತಿದ್ದನಾ? ಆಗ ನನ್ನ ಸ್ಥಾನದಲ್ಲಿ ನೀಲಿ ಕುಳಿತಿರುತ್ತಿದ್ದಳಾ? ನಾನಾದರೂ ಈಗ ಅವಡುಗಚ್ಚಿ ಕುಳಿತಿರುವುದು ವರದಕ್ಷಿಣೆಯಿಲ್ಲ; ನನ್ನ ಹಿಂದೆ ಇನ್ನು ಮೂರು ಜನ ಮದುವೆಯಾಗುವವರಿದ್ದಾರೆ ಎಂಬ ಕಾರಣದಿಂದ ಮಾತ್ರವಾ? ನನಗೆ ನನ್ನ ಮನೆಯ ಬಡತನದಿಂದ ಪಾರಾಗುವ ಆಸೆಯಾ? ಯಾವುದೂ ನನ್ನ ಅಳತೆಗೆ ಸಿಕ್ಕದಾಗಿ ಎಲ್ಲವೂ ಸಿಕ್ಕು ಸಿಕ್ಕಾಗಿ ಕಾಣುವಾಗಲೇ ‘ಕಬೂಲ್ ಹೈ’ ಎಂದು ಉಸುರುವುದಕ್ಕೆ ಕೆಲವೇ ಕ್ಷಣಗಳು ಬಾಕಿಯಿದ್ದವು. ಬಹುಶಃ ನಗು ನನ್ನಿಂದ ಮಾಯವಾಗಿದ್ದು ಆಗಲೇ ಇರಬೇಕು… ಕಣ್ಣಿಗೆ ಕತ್ತಲು ಕಟ್ಟಿತು. ನೋವು ಧುಮ್ಮಿಕ್ಕಿತು.
*****
ಕಣ್ಣು ತೆರೆದಾಗ ಸರಕಾರಿ ಆಸ್ಪತ್ರೆಯ ಕೋಣೆ. ಎಡಪಕ್ಕದಲ್ಲಿ ಮಗು ಮಲಗಿದೆ. ಅವ್ವ ಬಂದು ‘ಹೆಣ್ಣು ಮಗು’ ಅಂದು ‘ಥೇಟ್ ಅವರಪ್ಪನದೇ ಮುಖ’ ಎಂದದನ್ನ ಮುದ್ದಿಸತೊಡಗಿದಳು. ನಾನು ಬಲಪಕ್ಕದಲ್ಲಿ ಕಿಟಕಿಯಾಚೆ ರೋಡಿಗೆ ಹರಡಿರುವ ಸೋಲಾರ್ ಬೆಳಕಿಗೆ ಮುಖ ತಿರುಗಿಸಿದೆ. ಹೆರಿಗೆಯೂ ರಾತ್ರಿಯೇ ಆಗಿದೆ. ಪಾತಿ ಓಡಿಹೋದದ್ದು, ಯಮುನಿ ಬೀಬಿಜಾನ್ ಆದದ್ದು, ನೀಲಿ ಬೆಂಕಿಯಲ್ಲಿ ಕರಕಲಾದದ್ದು, ಮತ್ತೀ ಮಗು ಹುಟ್ಟಿದ್ದು ರಾತ್ರಿ. ಸಯೀದನ ತಾಯಿ ಧಾವಿಸಿ ಬಂದು ಸಂಭ್ರಮದಿಂದ ಹುಡುಗಿಗೆ ಹೆಸರು ಯೋಚಿಸಲು ಶುರುಮಾಡಿದಳು. ನಾನೇ ಇಡುವುದಿದ್ದರೆ ಏನಿಡುತ್ತಿದ್ದೆ? ಯಮುನಿ, ಬೀಬಿಜಾನ್, ಪಾತಿ, ನೀಲಿ? ಹೆಸರಲ್ಲೇನಿದೆ? ಎಂದುಕೊಂಡು ಮತ್ತೆ ಕಿಟಕಿಯಾಚೆಗಿನ ಬೆಳಕನ್ನ ನೋಡಹತ್ತಿದೆ. ಬೆಳಕನ್ನುಗುಳುತ್ತಿದ್ದ ಲೈಟಿನ ಕಂಬದ ಪಕ್ಕದಲ್ಲಿ ಪಾತಿ ನಿಂತಂತೆ ಕಂಡಿತು. ಅವಳು ಏನೋ ಹೇಳುತ್ತಿರುವಂತೆ ಅನಿಸತೊಡಗಿತು. ‘ಆಮೆರೈಟ್… ಆಮೆರೈಟ್’ ಕೇಳುತ್ತಿದ್ದಾಳಾ? ‘ಒಳಗೆ ಬರಲ?’ ಎನ್ನುತ್ತಿದ್ದಾಳಾ? ಮನಸಿನಲ್ಲಿ ”ಬರಲಿ ರಂಡೆ!!! ಕಪಾಳಕ್ಕೆರಡು ಬಾರಿಸಿಯೇ ಮುಂದೆ ಮಾತನಾಡುತ್ತೀನಿ” ಎಂದುಕೊಂಡು ಅವಳು ನಿಂತದ್ದು ನಿಜವಾ ಎಂದು ಯಮುನಿಯನ್ನೊಮ್ಮೆ ಕೇಳಿಬಿಡಬೇಕು ಎಂದು ಎಡಕ್ಕೆ ತಿರುಗಿದಾಗ ಯಮುನಿ ತನ್ನೆರಡು ಹೆಣ್ಣು ಮಕ್ಕಳೊಂದಿಗೆ ಎಂದಿನಂತೆ ಗಂಭೀರೆಯಾಗಿ ಮಂದಸ್ಮಿತದೊಂದಿಗೆ ಬರುವುದು ಕಾಣಿಸಿತು… ಸಯೀದನ ತಾಯಿಯ ಕೈಯಲ್ಲಿದ್ದ ನನ್ನ ಕೂಸು ಈ ಲೋಕವನ್ನ ಹೊಸ ಬೆರಗಿನಲ್ಲಿ ನೋಡುತ್ತಿದ್ದಂತೆ ತೋರಿತು…
ಇಷ್ಟು ಕತೆಯನ್ನ ವಿವರವಾಗಿ ಆ ಹುಡುಗನಿಗೆ ಹೇಳಿ ‘ಇದನ್ನ ಕತೆಯಾಗಿಸುತ್ತೀಯ?’ ಎಂದು ಕೇಳಿದೆ. ಅದಕ್ಕವನು ಒಂಚೂರು ಬದಲಾವಣೆ ಮಾಡಿಕೊಂಡು, ಸೇರಿಸಿ, ತೆಗೆದು ಬರೀತಿನಿ ಪರವಾಗಿಲ್ಲವಾ? ಎಂದು ಕೇಳಿದ್ದಕ್ಕೆ ಮೊದಲಬಾರಿ ಮನಃಪೂರ್ವಕವಾಗಿ ಕಬೂಲ್ ಹೇಳಿದ್ದೇನೆ. ಅದೆಷ್ಟು ಬರುತ್ತೊ ಬರಲಿ. ಕೊನೆಗೂ ನಮಗೆ ಹೇಳಲಿಕ್ಕಾಗುವುದು ನಮಗೆ ದಕ್ಕಿದಷ್ಟನ್ನೆ… ಮುಂದೊಮ್ಮೆ ನನ್ನ ಮಗಳು ಕತೆ ಹೇಳುವ ಸಂದರ್ಭ ಬಂದರೆ ಅವಳು ಹೊಸ ಕತೆಯನ್ನ ಹೇಳುವಂತಾಗಲಿ.
ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಇವರ ಆಸಕ್ತಿಯ ಕ್ಷೇತ್ರಗಳು. ಇವರ ಹಲವು ಕವಿತೆಗಳು, ಕಥೆಗಳು ನಾಡಿನ ಪ್ರಮುಖ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಇಕ್ಬಾಲುನ್ನೀಸಾ ಹುಸೇನ್ ಅವರ ‘ಪರ್ದಾ & ಪಾಲಿಗಮಿ’ ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ. ಛoದ ಪುಸ್ತಕ ಪ್ರಕಾಶನ ಅದನ್ನು ಹೊರತಂದಿದೆ. Dmitrij Gawrisch ಅವರ ‘ಬ್ಯಾರೆನ್ ಲ್ಯಾಂಡ್’ ಎನ್ನುವ ಜರ್ಮನ್ ನಾಟಕವನ್ನು ಅನುವಾದ ಮಾಡಿದ್ದಾರೆ. ನೀಲಕುರಿಂಜಿ ಇವರ ಪ್ರಥಮ ಪ್ರಕಟಿತ ಕಥಾಸಂಕಲನ.
ಕತೆ ತುಂಬಾ ಹಿಡಿಸಿತು
I started imaging myself as a character in your story