Advertisement
ಕರೆಯ ನಡುವೆ ನಿಂತು ಹೋದ ದೂರವಾಣಿ

ಕರೆಯ ನಡುವೆ ನಿಂತು ಹೋದ ದೂರವಾಣಿ

ವಿಜ್ಞಾನ ಬರಹಗಾರ ಡಾ. ಹಾಲ್ದೊಡ್ಡೇರಿ ಸುಧೀಂದ್ರ ಹೊಸ ವಿಷಯಗಳನ್ನು ಕಲಿಯಲು ಸದಾ ಉತ್ಸುಕರಾಗಿರುತ್ತಿದ್ದರು. ಹೊಸತನ್ನು ತಿಳಿಯುವುದಷ್ಟೇ ಅಲ್ಲ, ಅನ್ವಯಿಸಿ ಅದರ ಫಲಿತಾಂಶ ಗಮನಿಸುವ, ಕುತೂಹಲದ ಮನಸ್ಸು ಅವರದ್ದು. ತಾವು ಕಂಡುಕೊಂಡ ವಿಚಾರಗಳನ್ನು ಹಂಚಿಕೊಳ್ಳುವುದರಲ್ಲಿಯೂ ಅವರಿಗೆ ಬಹಳ ಆಸಕ್ತಿ.  ಅವರೊಡನೆ ಒಡನಾಡಿದ ಕ್ಷಣಗಳನ್ನು ನೆನಪು ಮಾಡಿಕೊಂಡು, ಬರಹಗಾರ ಟಿ.ಜಿ. ಶ್ರೀನಿಧಿ ಬರೆದ ಪುಟ್ಟ ಬರಹ ಇಲ್ಲಿದೆ.

 

ಮಧ್ಯಾಹ್ನ ಏನೋ ಓದುತ್ತಿದ್ದಾಗ ಜೋರು ಸದ್ದು ಕೇಳಿಸಿತು, ಕಿಟಕಿಯೆಲ್ಲ ಅಲ್ಲಾಡಿದ್ದು ಗಮನಕ್ಕೆ ಬಂತು. ಸ್ವಲ್ಪಹೊತ್ತು ಬಿಟ್ಟು ಟ್ವಿಟರ್‌ನಲ್ಲಿ ಇಣುಕಿದರೆ ಅದರಲ್ಲಿ ಆ ಸದ್ದಿನದೇ ಸದ್ದು! ಅದೇ ಸಾಲಿನ ಇನ್ನೊಂದು ಪೋಸ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿಗಳು ಪ್ರಕಟವಾದ ಸುದ್ದಿ ಇತ್ತು. ಸುಧೀಂದ್ರ ಅವರ ಹೆಸರೂ ಪಟ್ಟಿಯಲ್ಲಿತ್ತು.

ಮಾಮೂಲಿ ದಿನವಾಗಿದ್ದರೆ ಸಂಜೆಯೊಳಗೆ ಸುಧೀಂದ್ರರಿಗೆ ಫೋನ್ ಮಾಡಿ, ಕಿಟಕಿ ಯಾಕೆ ಅಲುಗಾಡ್ತು ಎಂದು ಕೇಳಿ, ಪ್ರಶಸ್ತಿ ಬಂದಿದ್ದಕ್ಕೆ ಟ್ರೀಟು ಯಾವಾಗ ಕೊಡಿಸ್ತೀರಿ ಅಂತ ಮಾತು ಶುರು ಮಾಡಿ, ನಂತರ ಸಾಕಷ್ಟು ವಿಷಯ ಮಾತನಾಡಲು ಒಳ್ಳೆಯ ಅವಕಾಶ ಆಗಿರುತ್ತಿತ್ತು. ಆದರೆ ಫೋನು ಮಾಡಲು ಅವರೇ ಇಲ್ಲ ಎನ್ನುವುದನ್ನು ನಂಬುವುದು ಇನ್ನೂ ಕಷ್ಟವೇ.

ಅವರ ಬರಹಗಳನ್ನು ಓದಿ ಖುಷಿಪಟ್ಟಾಗ, ಸೋಶಿಯಲ್ ಮೀಡಿಯಾದಲ್ಲಿ ಅವರು ಮಾಡುತ್ತಿದ್ದ ಹೊಸ ಪ್ರಯತ್ನಗಳನ್ನು ಮೆಚ್ಚಿಕೊಂಡಾಗ ಸಂತೋಷಪಡುತ್ತಿದ್ದ ಅವರು, ಹೀಗೂ ಮಾಡಬಹುದಿತ್ತಲ್ಲ ಸರ್ ಎಂದು ಕೇಳುವ ಸ್ವಾತಂತ್ರ್ಯವನ್ನೂ ನನಗೆ ಕೊಟ್ಟಿದ್ದರು. ಅವರು ತಮ್ಮ ಪರಿಣತಿಯ ಕ್ಷೇತ್ರದ ವಿಷಯಗಳನ್ನು ಮನಮುಟ್ಟುವಂತೆ ಇತರರಿಗೆ ಹೇಳಿಕೊಡುತ್ತಿದ್ದರಷ್ಟೇ ಅಲ್ಲ, ತಮಗೆ ಗೊತ್ತಿಲ್ಲದ್ದು ಏನೋ ಇದೆ ಎಂದು ಅನಿಸಿದಾಗ, ಆ ಬಗ್ಗೆ ಬಹಳ ಆಸಕ್ತಿಯಿಂದ ಹೇಳಿಸಿಕೊಳ್ಳುತ್ತಲೂ ಇದ್ದರು. ಕಲಿತದ್ದನ್ನು ಪ್ರಯೋಗಿಸಿ ಅದರ ಫಲಿತಾಂಶಗಳನ್ನೂ ಖುಷಿಯಿಂದ ಹಂಚಿಕೊಳ್ಳುತ್ತಿದ್ದರು. ನನ್ನ ಬರಹಗಳನ್ನು ಹಂಚಿಕೊಂಡಾಗಲೂ ಅಷ್ಟೇ, ಪೂರ್ತಿಯಾಗಿ ಓದಿ, ಉಪಯುಕ್ತ ಸಲಹೆಗಳನ್ನು ನೀಡುತ್ತಿದ್ದರು. ಕಳೆದ ವರ್ಷದ ಸಾನಿಕ್ ಬೂಮ್ ಸಂದರ್ಭದಲ್ಲಿ ನಾವು ಮಾಡಿಕೊಂಡ ವಿಚಾರವಿನಿಮಯವನ್ನು ನಾನು ಬಹಳ ಜೋಪಾನವಾಗಿ ಉಳಿಸಿಟ್ಟುಕೊಂಡಿದ್ದೇನೆ.

ಇಜ್ಞಾನ ಜಾಲತಾಣಕ್ಕೆ ಒಂದು ಅಂಕಣ ಬರೆದುಕೊಡುವುದಾಗಿ ಅವರು ಹೇಳಿದ್ದರು. ೨೦೨೧ರಲ್ಲಿ ಒಂದು ಒಳ್ಳೆಯ ಪುಸ್ತಕ ಅನುವಾದಿಸುವಂತೆ ನನಗೆ ಸಲಹೆ ಮಾಡಿದ್ದರು. ಕೆಲಸದ ಒತ್ತಡ ಕೊಂಚ ಕಡಿಮೆಯಾದ ನಂತರ ನನ್ನ ಹೊಸ ಪುಸ್ತಕಗಳನ್ನು ಓದುವುದಾಗಿ ಇತ್ತೀಚೆಗೆ ಮೆಸೇಜ್ ಕಳಿಸಿದ್ದರು. ಹೀಗೆ ನಮ್ಮ ನಡುವಿನ ಸಂವಹನ ಆಪ್ತವಾಗಿಯೇ ಸಾಗಿತ್ತು.

ಆದರೆ, ಕರೆಯ ನಡುವೆ ಫೋನ್ ಇದ್ದಕ್ಕಿದ್ದಂತೆ ಕಟ್ ಆದ ಹಾಗೆ, ನಮ್ಮ ಮಾತುಕತೆ ಅಪೂರ್ಣವಾಗಿಯೇ ಉಳಿದುಬಿಟ್ಟಿದೆ. ನೆಟ್‌ವರ್ಕ್ ಕವರೇಜ್ ಇನ್ನೆಂದೂ ಸಿಗದಂತೆ! ಹೋಗಿಬನ್ನಿ ಸುಧೀಂದ್ರ ಸರ್, we will miss you!

About The Author

ಟಿ.ಜಿ. ಶ್ರೀನಿಧಿ

ಮಾಹಿತಿ ತಂತ್ರಜ್ಞಾನ ಕುರಿತು ಕನ್ನಡದಲ್ಲಿ ಬರೆಯುವ ಟಿ.ಜಿ. ಶ್ರೀನಿಧಿ ಬಿ.ಇ. ಪದವೀಧರರು. ವಿಜ್ಞಾನ ವಿಷಯಗಳ ಕುರಿತು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ.  ಹಾರುವ ಕನಸನು ಕಂಡವರು, ಅಂತರಿಕ್ಷದ ಅದ್ಭುತಗಳು, ಕಂಪ್ಯೂಟರ್ ಕನ್ನಡ ಮತ್ತು ಕೆ.ಪಿ.ರಾವ್ ಎಂಬ ಕೃತಿಗಳು ಸೇರಿದಂತೆ ಹದಿನೈದಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ಶ್ರೇಷ್ಠ ಲೇಖಕ' ಪ್ರಶಸ್ತಿ ಅವರಿಗೆ ಸಂದಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ