ನಾವು ತೋಟದ ಒಂದು ಅಂಚಿನಿಂದ ಇನ್ನೊಂದು ಅಂಚಿಗೆ ಬಿರಬಿರನೆ ಹೆಜ್ಜೆ ಹಾಕುತ್ತಿದ್ದೆವು. ಮರಗಿಡಗಳ ನಡುವಿನ ಕಾಲು ಹಾದಿಯಲ್ಲಿ ಸ್ವಲ್ಪ ದೂರ ನಡೆದು ಪಂಪ್ ಹೌಸ್ ಬಳಿ ಅವರು ನಿಂತರು. ಮರಗಿಡಗಳ ನಡುವೆ ಏನೋ ಕಂಡಂತಾಗಿ ನಾನು ನಿಂತೆ. ನಿಧಾನವಾಗಿ ಹೆಜ್ಜೆಯಿಟ್ಟು ಮುಂದೆ ಸರಿದು ನೋಡಿದರೆ ಪ್ರಪಾತದಂತೆ ಆಳ, ಅಗಲ, ವಿಸ್ತಾರವಾದ ತುಂಗಾ ನದಿ. ಅಬ್ಬಾ! ರೋಮಾಂಚನವಾಯಿತು. ನಾವು ನದಿಯ ತಟದಲ್ಲಿ ನಿಂತಿದ್ದೆವು.
ರಂಗಕರ್ಮಿ ಸತೀಶ್ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿಯ ಕೆಲವು ಅಧ್ಯಾಯಗಳು ಪ್ರತಿ ಶನಿವಾರ ನಿಮ್ಮ ಕೆಂಡಸಂಪಿಗೆಯಲ್ಲಿ ಪ್ರಕಟಗೊಳ್ಳಲಿವೆ
ಪ್ರಿಯ ಭೂಮಿ
ಕೆಲವು ವರ್ಷಗಳ ಹಿಂದೆ ಶೂದ್ರಕ ಕವಿಯ ಸಂಸ್ಕೃತ ನಾಟಕ ಮೃಚ್ಛಕಟಿಕಾ ಆದರಿಸಿದ ‘ವಸಂತಸೇನೆ’ ನಾಟಕದ ಪ್ರಕ್ರಿಯೆಯಲ್ಲಿ ನಿರ್ದೇಶಕನಾಗಿ ಪಾಲ್ಗೊಂಡಿದ್ದೆ. ಪ್ರದರ್ಶನವಾದ ಮರುದಿನ ಎಲ್ಲರನ್ನು ಬೀಳ್ಕೊಟ್ಟು ನಾನು ನನ್ನ ಕುಟುಂಬದೊಂದಿಗೆ ಹೆಗ್ಗೋಡಿನಿಂದ ತೀರ್ಥಹಳ್ಳಿಗೆ ಹೋಗಿದ್ದೆ. ಇಲ್ಲಿ ಸ್ನೇಹಿತರಾದ ಶ್ರೀಧರ್ ಅವರನ್ನು ಭೇಟಿಮಾಡಿ ಅವರ ತೋಟವನ್ನು ನೋಡುವುದು ನಮ್ಮ ಉದ್ದೇಶವಾಗಿತ್ತು. ನೀನಾಸಮ್ ಸೇರಿದಂತೆ ಕರ್ನಾಟಕದ ಹಲವು ರಂಗಮಂದಿರಗಳನ್ನು ವಿನ್ಯಾಸ ಮಾಡಿದ ಶ್ರೀಧರ್ ವಿನ್ಯಾಸಕಾರರಾಗಿ, ಆಧುನಿಕತೆಯ ಎಲ್ಲಾ ಆಯಾಮಗಳಿಗೂ ವಿಸ್ತರಿಸಿಕೊಂಡು ಪರಿಸರವಾದಿಯಾಗಿ ಧ್ಯಾನಸ್ಥರಂತೆ ತೋಟದಲ್ಲಿ ಇರುವವರು.
ತೀರ್ಥಹಳ್ಳಿಯಿಂದ ಶಿವಮೊಗ್ಗದ ದಾರಿಯಲ್ಲಿ ನಾಲ್ಕು ಕಿಲೋಮೀಟರ್ ಸಾಗಿದರೆ ಎಡಕ್ಕೆ ಸಿಗುವ ಕಣಿವೆಯ ಒಳದಾರಿಯಲ್ಲಿ ಇವರ ಊರು ಕಲ್ಲಹಳ್ಳ ಇದೆ. ಇಲ್ಲೇ ಇವರ ತೋಟದ ಮನೆ ಇರುವುದು. ಕಲ್ಲಹಳ್ಳ ಎಂದರೆ ಇವರದೊಂದೆ ಮನೆ. ತೋಟದೊಳಗೆ ಇವರ ಹಿರಿಯರು ವಾಸಿಸುತ್ತಿದ್ದ ದೊಡ್ಡ ಮನೆ. ಸುತ್ತಲೂ ದೊಡ್ಡ ತೋಟ. ಈ ಮನೆತನದ ಈ ಪ್ರದೇಶಕ್ಕೆ ಸುಮಾರು ನಾಲ್ಕು ನೂರು ವರ್ಷಗಳ ಇತಿಹಾಸವಿದೆ ಎಂದು ಅವರು ಹೇಳಿದ ನೆನಪು. ಶ್ರೀಧರ್ ಅವರ ತಂದೆ ಗಂಗಾಧರ್ ಅವರು ಯು.ಆರ್ ಅನಂತಮೂರ್ತಿ ಮತ್ತು ಕೆ.ವಿ ಸುಬ್ಬಣ್ಣನವರ ಸಮಕಾಲೀನರು. ಈ ಮೂವರು ಒಟ್ಟಿಗೆ ಇರುತ್ತಿದ್ದುದನ್ನು ನಾನು ನೀನಾಸಮ್ ವಿದ್ಯಾರ್ಥಿಯಾಗಿದ್ದಾಗ ಹಲವು ಬಾರಿ ನೋಡಿದ್ದೆ.
ಶ್ರೀಧರ್ ಸ್ವತಃ ಹಿಂದೂಸ್ತಾನಿ ಸಂಗೀತ ಅಭ್ಯಾಸದಲ್ಲಿರುವವರು ಮತ್ತು ಅವರ ತಾಯಿ ಕರ್ನಾಟಕ ಸಂಗೀತದಲ್ಲಿ ವಿದ್ವತ್ ಪಡೆದವರು. ಇದನ್ನೆಲ್ಲ ಹೇಳಲು ಕಾರಣ ಇದೆ. ಅವರ ತೋಟದ ನೈಜತೆಯಲ್ಲಿ ಈ ಮನೆತನದ ಹಿನ್ನೆಲೆಯ ಶೃತಿಯಿರುವಂತೆ ಭಾಸವಾಗುತ್ತದೆ. ಅದು ನಿಜವಾಗಿ ತೋಟವಲ್ಲ ಕಾಡು; ಕಾಡೇ.. ಈ ತೋಟ ಆಳ ಕಣಿವೆಯಲ್ಲಿದ್ದರೆ; ಮತ್ತೊಂದು ಅಲ್ಲೇ ಹತ್ತಿರದ ತುಂಗಾ ನದಿಯ ದಂಡೆಯಲ್ಲಿ. ಮಳೆಗಾಲದಲ್ಲಿ ನದಿ ತುಂಬಿ ಹರಿದರೆ ಇವರ ತೋಟವನ್ನು ಆವರಿಸುವುದುಂಟಂತೆ. ಈ ಎರಡೂ ತೋಟಗಳು ಇರುವುದು ಅನಂತಮೂರ್ತಿಯವರ ಕಾದಂಬರಿ ‘ಭಾರತೀಪುರ’ ಅಂತ ಇದೆಯಲ್ಲ ಆ ಭಾರತೀಪುರದ ಬಳಿ. ಶ್ರೀಧರ್ ಹೇಳಿದಂತೆ ಹೆಸರೊಂದನ್ನು ಹೊರತುಪಡಿಸಿದರೆ ಕಾದಂಬರಿಯ ಸನ್ನಿವೇಶಗಳಿಗೂ ಈ ಭಾರತೀಪುರಕ್ಕೂ ಏನೂ ಸಂಬಂಧವಿಲ್ಲವಂತೆ.
ಹೆಗ್ಗೋಡಿನಿಂದ ತೀರ್ಥಹಳ್ಳಿಗೆ ಕಾರಿನಲ್ಲಿ ಹೋಗುವಾಗ ಮನಸ್ಸು ತುಂಬಾ ಭಾರವಾಗಿತ್ತು. ನಾಟಕ ಇನ್ನೂ ಬೆಳೆಯುತ್ತಿರುವ ಹಂತದಲ್ಲೇ ಪ್ರದರ್ಶನವಾಗಿತ್ತು. ನಾಟಕ ತನ್ನ ಎಮೋಷನಲ್ ಮೆಚ್ಯೂರಿಟಿಯನ್ನು (ಒಂದು ಹಂತದ ಭಾವಸ್ಥರಗಳ ಪ್ರಬುದ್ಧ ಸ್ಥಿತಿ) ತಲುಪಲು ಇನ್ನೂ ದೂರ ಸಾಗಬೇಕಿತ್ತು. ಆದರೆ ನನಗಿದ್ದ ಕಾಲ ಮಿತಿಯಲ್ಲಿ ಅಸಹಾಯಕನಾಗಿದ್ದೆ. ನಾಟಕದ ಪಾತ್ರಗಳ ಉಳಿದೆಲ್ಲಾ ಭಾವನೆಗಳು ನನ್ನೊಳಗೆ ಬೆಳೆಯತೊಡಗಿದ್ದವು. ನಟ ನಟಿಯರಿಲ್ಲದೇ ಯಾರೊಂದಿಗೂ ಹಂಚಿಕೊಳ್ಳಲಾಗದ ವಿಕಲಾಂಗ ಪರಿಸ್ಥಿತಿ ನನ್ನದಾಗಿತ್ತು. ಆದರೂ ಒಂದು ರೀತಿಯ ಸಮಾಧಾನವಿತ್ತು. ನಾಟಕ ಆಗುವಲ್ಲಿ ನಾನು ಕಂಡುಕೊಂಡ ಪ್ರಕ್ರಿಯೆಗಳಲ್ಲಿ ನನಗೆ ವಿಶ್ವಾಸ ಮೂಡಿತ್ತು. ಬಹಳ ವರ್ಷಗಳಿಂದ ನಾನು ನಮ್ಮ ರಂಗಪ್ರಯೋಗ ಶಾಲೆಯಲ್ಲಿ ನಡೆಸಿದ ಸಹಜ ಕೃಷಿಯ ಪ್ರಯೋಗಗಳು ಫಲಕೊಡುವ ಲಕ್ಷಣಗಳು ನನಗೆ ಇಲ್ಲಿ ಕಾಣಿಸಿತ್ತು. ಈ ತಂಡದೊಂದಿಗಿನ ನಾಟಕ ಪ್ರಕ್ರಿಯೆಯಲ್ಲಿ ನಾನೇನೂ ಕಲಿಸಲು ಪ್ರಯತ್ನಿಸಿರಲಿಲ್ಲ, ಅವರು ಏನೂ ಕಲಿತಂತೆನಿಸಲಿಲ್ಲ ಆದರೂ ನಾಟಕ ಆಯಿತು. ಇಲ್ಲಿ ನಾನು ಮತ್ತು ಅವರು ಬೇರೆ ಬೇರೆಯಾಗಿರಲಿಲ್ಲ. ಈ ಇಡೀ ಪ್ರಕ್ರಿಯೆಯಲ್ಲಿ ‘ನಾನು’ ಎನ್ನುವ ಕೇಂದ್ರವೇ ಇಲ್ಲವಾಗಿ ಅವರೊಳಗೆ ಬೆರೆತು ಹೋಗುವ ಪ್ರಯತ್ನ ಮಾಡಿದ್ದೆ. ಅದಕ್ಕೆ ಏನೋ ಈ ಎಲ್ಲ ಪಾತ್ರಗಳನ್ನೂ ನನ್ನೊಳಗಿಂದ ವಿಸರ್ಜಿಸಬೇಕಾದ ಅನಿವಾರ್ಯತೆ ಸೃಷ್ಟಿಯಾದಾಗ ಸಂಕಟವಾಗಿದ್ದು. ಇದು ನನ್ನ ಪ್ರೋಸಸ್‌ನ ಸಮಸ್ಯೆ ಇರಬಹುದೇ; ಗೊತ್ತಿಲ್ಲ. ನಾನು ಕಂಡುಕೊಳ್ಳಬೇಕಿತ್ತು. ಈ ಎಲ್ಲ ಪ್ರಶ್ನೆಗಳೂ ತೀರ್ಥಹಳ್ಳಿಗೆ ಹೋಗುವ ದಾರಿಯುದ್ದಕ್ಕೂ ಕಾಡುತ್ತಿದ್ದವು.
ಕಾರು ಭಾರತೀಪುರ ಮುಟ್ಟಿ ಕಣಿವೆಯಲ್ಲಿ ಇಳಿಯುತ್ತಿರುವಂತೆಯೇ ದೂರದಲ್ಲಿ ಕಲ್ಲಹಳ್ಳದ ತೋಟ ಗೋಚರವಾಗಿ ವಿಸ್ಮಯ ಲೋಕವೊಂದು ನಮ್ಮೊಳಗೆ ತೆರೆದುಕೊಳ್ಳುತ್ತಿರುವಂತೆ ಭಾಸವಾಯಿತು. ಶ್ರೀಧರ್ ಅವರು ಹಿಂದೆ ಅವರ ಪೂರ್ವಿಕರು ಬಳಸುತ್ತಿದ್ದ ಕೊಟ್ಟಿಗೆಯನ್ನೇ ‘ಕಛೇರಿ-ಮನೆ’ಯಂತೆ ರೂಪಿಸಿಕೊಂಡಿದ್ದರು. ಅವರ ಸಹಾಯಕರೊಬ್ಬರು ಕಂಪ್ಯೂಟರ್‌ನಲ್ಲಿ ಯಾವುದೊ ಮನೆಯ ವಿನ್ಯಾಸ ಮಾಡುತ್ತಿದ್ದರು. ಅಲ್ಲೆ ಪಕ್ಕದಲ್ಲೆ ಶ್ರೀಧರ್ ಅಯ್ಯನವರು (ಹೆದ್ದಾರಿಯ ತಿರುವಿನಲ್ಲಿ ಇವರ ತೋಟದ ಮನೆಯ ವಿಳಾಸ ಕೇಳಿದಾಗ ಗೂಡಂಗಡಿಯ ಆ ಹೆಣ್ಣು ಮಗಳು ಇವರನ್ನು ಸಂಬೋಧಿಸಿದ್ದು ‘ಶ್ರೀಧರ್ ಅಯ್ಯ’ನವರು ಎಂದು) ಜೀನ್ಸ್ ಪ್ಯಾಂಟ್, ವೇಸ್ಟ್ ಕೋಟ್, ತಲೆಗೊಂದು ರೌಂಡ್ ಹ್ಯಾಟ್, ಶೂ ಹಾಕಿಕೊಂಡು ಆಧುನಿಕ ಕೃಷಿಕನಂತೆ ಮೆಣಸನ್ನು ಅಳತೆ ಮಾಡಿಸುತ್ತಿದ್ದರು.
ಅವರ ತೋಟದ ನೈಜತೆಯಲ್ಲಿ ಈ ಮನೆತನದ ಹಿನ್ನೆಲೆಯ ಶೃತಿಯಿರುವಂತೆ ಭಾಸವಾಗುತ್ತದೆ. ಅದು ನಿಜವಾಗಿ ತೋಟವಲ್ಲ ಕಾಡು; ಕಾಡೇ.. ಈ ತೋಟ ಆಳ ಕಣಿವೆಯಲ್ಲಿದ್ದರೆ; ಮತ್ತೊಂದು ಅಲ್ಲೇ ಹತ್ತಿರದ ತುಂಗಾ ನದಿಯ ದಂಡೆಯಲ್ಲಿ. ಮಳೆಗಾಲದಲ್ಲಿ ನದಿ ತುಂಬಿ ಹರಿದರೆ ಇವರ ತೋಟವನ್ನು ಆವರಿಸುವುದುಂಟಂತೆ. ಈ ಎರಡೂ ತೋಟಗಳು ಇರುವುದು ಅನಂತಮೂರ್ತಿಯವರ ಕಾದಂಬರಿ ‘ಭಾರತೀಪುರ’ ಅಂತ ಇದೆಯಲ್ಲ ಆ ಭಾರತೀಪುರದ ಬಳಿ.
ಬೆಲ್ಲ ಹಾಕಿದ ಹಾಲು ಹಾಗು ಮಾವಿನ ಹಣ್ಣುಗಳನ್ನು ತಿಂದು ಸ್ವಲ್ಪ ಹರಟಿ ಅವರೊಂದಿಗೆ ನಾವು ತೋಟ ನೋಡಲು ಹೊರಟೆವು. ಅದೊಂದು ವಿಸ್ಮಯ ಸಂಚಾರ. ಅದು ಸಮತಟ್ಟಾದ ತೋಟವಲ್ಲ, ಏಕ ರೂಪದ ಗಿಡಮರಗಳಿಲ್ಲ. ಹಲವು ಹಸಿರುಗಳ ವೈವಿಧ್ಯ. ಏರು, ತಗ್ಗು, ಇಳಿಜಾರು, ಸಣ್ಣದಾಗಿ ಹರಿಯುವ ತೊರೆಯ ಕೊರಕು, ಮಳೆಯ ಅಬ್ಬರದ ದಿನಗಳಲ್ಲಿ ತುಂಬಿ ಹರಿಯುವ ಕಾಲುವೆ, ದಾಟಲು ಕಟ್ಟಿದ ದಣಪೆಗಳು… ನೆಡೆದಷ್ಟೂ ಕಗ್ಗಾಡು, ತಟ್ಟನೆ ಎದುರಾಗಿ ದಿಕ್ಕು ಬದಲಿಸಲು ಹೇಳುವ ಗುಡ್ಡ ಹೀಗೆ ಸುಮಾರು ನಲವತ್ತು ಎಕರೆ ವಿಸ್ತಾರವಾದ ‘ಕಾಡು ತೋಟ’. ಆಕಳ ಗಂಜಳ, ಸಗಣಿ, ಮಣ್ಣ ವಾಸನೆ ಬಿಟ್ಟರೆ ಯಾವ ರಸಾಯನಿಕಗಳ ಹಂಗಿಲ್ಲದ ತೋಟ. ಶ್ರೀಧರ್ ಅಡಿಕೆ, ತೆಂಗು, ಕೋಕ್, ಮೆಣಸು, ಏಲಕ್ಕಿ, ಸೇರಿದಂತೆ ಅವರ ತೋಟದಲ್ಲಿದ್ದ ಹಲವಾರು ರೀತಿಯ ಹಣ್ಣಿನ ಮತ್ತು ಕಾಡು ಮರಗಳ ಕುರಿತು ವಿವರಿಸುತ್ತಾ ಸಾಗುತ್ತಿದ್ದರು. ಕಣ್ಣಿಗೆ ಅಡ್ಡಲಾಗುವ ಮರಗಿಡಗಳ ರೆಕ್ಕೆಗಳಿಂದ ದಾರಿ ಬಿಡಿಸಿಕೊಳ್ಳುತ್ತಾ ನಾವು ನಡೆಯುತ್ತಿದ್ದೆವು. ದಾರಿಯಲ್ಲಿ ನಡುವೆ ನೀಲಿ ಬಣ್ಣದ ಡ್ರಂ ಒಂದರಲ್ಲಿ ‘ಜೀವಾಮೃತ’ವನ್ನು ಬೆರೆಸಿ ಇಟ್ಟಿದ್ದರು. ಇದು ಸಗಣಿ, ಗಂಜಲ, ಬೆಲ್ಲ ಇತರ ನೈಸರ್ಗಿಕವನ್ನು ಬಳಸಿ ಮಾಡಲಾದ ಭೂಮಿಯ ಫಲವತ್ತತೆ ಹೆಚ್ಚಿಸುವ, ಮರಗಿಡಗಳಿಗೆ ಚೈತನ್ಯವನ್ನು ನೀಡುವ ಅಮೃತ. ಈ ತೋಟದಲ್ಲಿ ಹೀಗೆ ಸುತ್ತಾಡುತ್ತಿರುವ ಹೊತ್ತಿಗೆ ಮಧ್ಯಾಹ್ನ ಸಂಜೆಗೆ ತಿರುಗಿಕೊಳ್ಳುವ ಸಮಯವಾಗುತ್ತಿದ್ದುದರಿಂದ ಅಲ್ಲೇ ಸ್ವಲ್ಪ ದೂರದಲ್ಲಿ ರಸ್ತೆಯ ಬಲ ಬದಿಗೆ ಇದ್ದ ಇನ್ನೊಂದು ತೋಟದಿಂದ ಆಕಳಿಗೆ ಮೇವು ತರಲು ಹೊರಟ ಶ್ರೀಧರ್‌ರವರೊಂದಿಗೆ ನಾವು ಮುಂದುವರೆದೆವು.
ಈ ತೋಟವಿರುವುದು ಭಾರತೀಪುರ ಹೆದ್ದಾರಿಯಿಂದ ಬಲಗಡೆಯ ತಿರುವಿನಲ್ಲಿ. ಸ್ವಲ್ಪ ದೂರ ಕಿರಿದಾದ ದಾರಿಯಲ್ಲಿ ಹೋಗಬೇಕು. ನಾವು ಹೋಗುವಷ್ಟರಲ್ಲಿ ಕೆಲ ಹೆಂಗಸರು ದೊಡ್ಡ ದೊಡ್ಡ ಹಸಿರಾದ ಹುಲ್ಲಿನ ಪೆಂಡಿಗಳನ್ನು ಕಟ್ಟಿ, ಗೇಟಿನ ಬಳಿ ಜೋಡಿಸುತ್ತಿದ್ದರು. ನಮ್ಮ ಕಡೆ ಅಷ್ಟು ಹಸಿರಾದ ಆ ಜಾತಿಯ ಹುಲ್ಲಿನ ಪೆಂಡಿಗಳನ್ನು ನೋಡಿರಲಿಲ್ಲ. ಸಮಯ ಕಡಿಮೆ ಇದ್ದುದರಿಂದ ನಾನು ಶ್ರೀಧರ್ ಅವರ ಹಿಂದೆ ಓಡಿದೆ. ನಾವು ತೋಟದ ಒಂದು ಅಂಚಿನಿಂದ ಇನ್ನೊಂದು ಅಂಚಿಗೆ ಬಿರಬಿರನೆ ಹೆಜ್ಜೆ ಹಾಕುತ್ತಿದ್ದೆವು. ಮರಗಿಡಗಳ ನಡುವಿನ ಕಾಲು ಹಾದಿಯಲ್ಲಿ ಸ್ವಲ್ಪ ದೂರ ನಡೆದು ಪಂಪ್ ಹೌಸ್ ಬಳಿ ಅವರು ನಿಂತರು. ಮರಗಿಡಗಳ ನಡುವೆ ಏನೋ ಕಂಡಂತಾಗಿ ನಾನು ನಿಂತೆ. ನಿಧಾನವಾಗಿ ಹೆಜ್ಜೆಯಿಟ್ಟು ಮುಂದೆ ಸರಿದು ನೋಡಿದರೆ ಪ್ರಪಾತದಂತೆ ಆಳ, ಅಗಲ, ವಿಸ್ತಾರವಾದ ತುಂಗಾ ನದಿ. ಅಬ್ಬಾ! ರೋಮಾಂಚನವಾಯಿತು. ನಾವು ನದಿಯ ತಟದಲ್ಲಿ ನಿಂತಿದ್ದೆವು. ಅವರ ತೋಟ ಉದ್ದಕ್ಕೂ ನದಿಯನ್ನು ಮುಟ್ಟಿಕೊಂಡೇ ಇದೆ. ಮಳೆಗಾಲದಲ್ಲಿ ನದಿ ತುಂಬಿ ಹರಿದರೆ, ತೋಟದ ಯಾವೆಲ್ಲಾ ಭಾಗ ಜಲಾವೃತವಾಗುತ್ತದೆಂದು ಅವರು ತೋರಿಸಿದರು. ಆ ಚಿತ್ರಣವನ್ನು ನೆನಸಿಕೊಂಡೇ ಮೈ ಮನಸ್ಸೆಲ್ಲಾ ಪುಳಕಗೊಂಡಿತ್ತು. ‘ತುಂಗಾ ತೀರದ ಬಲಗಡೆಯಲ್ಲಿ ಅಲ್ಲೊಂದಿತ್ತು ಬೊಮ್ಮನಹಳ್ಳಿ’ ಅಂತ ಕುವೆಂಪು ಅವರ ಕಿಂದರ ಜೋಗಿ ನಾಟಕದ ಮೊದಲ ಸಾಲು ನೆನಪಾಯಿತು. ಆಳುಗಳು ನಮಗಾಗಿ ಕಾಯುತಿದ್ದುದರಿಂದ ಮತ್ತೆ ಬಂದ ದಾರಿಯಲ್ಲಿ ಹೆಜ್ಜೆ ಹಾಕಿದೆವು.
ಶ್ರೀಧರ್ ನಡಿಗೆಯಲ್ಲಿದ್ದ ವಿಶ್ವಾಸ, ಮುಖದಲ್ಲಿನ ಮಂದಹಾಸ, ಮಾತಿನಲ್ಲಿನ ಸಮಚಿತ್ತ, ಅವರು ಕಟ್ಟಿಕೊಂಡ ಜೀವನ ಕ್ರಮದ ಬಗೆಗಿನ ಸಾರ್ಥಕತೆಯನ್ನು ಸೂಸುತ್ತಿತ್ತು. ಅಪರೂಪಕ್ಕೆ ನೋಡುವವರಿಗೆ ಚಂದವೆನಿಸಿದರೂ ಆ ಕಾಡಿನ ಕಣಿವೆಯ ನಡುವಿರುವ ತೋಟಗಳಲ್ಲಿನ ನೀರವತೆ, ಲಯ ಸ್ತಬ್ಧತೆ, ಒಂದೇ ಸಮನೆ ಸುರಿವ ಮಳೆ ಇವೆಲ್ಲ ಕೂಡಿ ಸದಾ ಅಲ್ಲೆ ಇರುವವರಿಗೆ ಒಂದು ರೀತಿಯ ಏಕತಾನತೆ ಬಂದು ಬಿಡಬಹುದು. ಶ್ರೀಧರ್ ಅವರಲ್ಲಿ ಆ ರೀತಿಯ ಯಾವ ಚಹರೆಯೂ ಕಾಣಲು ಸಾಧ್ಯವಿರಲಿಲ್ಲ. ಪ್ರತಿದಿನವೂ ತಾನು ಬಾಳುವ ಪ್ರಕೃತಿ ಪರಿಸರವನ್ನು ಹೊಸದಾಗಿ ಕಾಣುವ, ನವೀಕರಿಸಿಕೊಳ್ಳುವ ಸೌಂದರ್ಯ ಪ್ರಜ್ಞೆ ಮತ್ತು ಒಬ್ಬ ಕಲಾವಿದನಿಗೆ ಇರಬಹುದಾದ ಜೀವನ ರಸಿಕತೆ, ಜೊತೆಗೊಂದಿಷ್ಟು ಎಲೆಅಡಿಕೆ, ತಂಬಾಕು, ಸಂಗೀತ ಎಲ್ಲವೂ ಕೂಡಿ ಕಾಡಿನಲ್ಲಿ ಕ್ರಿಯಾಶೀಲವಾಗಿ ಚಿಂತಿಸುತ್ತಾ ಅಲೆವ ಧ್ಯಾನಸ್ಥನಂತೆ ಶ್ರೀಧರ್ ಅಂದು ನನಗೆ ಕಾಣಿಸುತ್ತಿದ್ದರು. ನನಗೂ ಹಾಗೆ ಇದ್ದು ಬಿಡುವ ಆಸೆ. ಆದರೆ ನನ್ನ ತೋಟವೇ ಬೇರೆ. ಆ ಬಗ್ಗೆ ಮುಂದೆ ಬರೆಯುತ್ತೇನೆ…
ನಾವು ಹೋಗುವಷ್ಟರಲ್ಲಿ ಹುಲ್ಲಿನ ಪೆಂಡಿಗಳನ್ನು ರಸ್ತೆಗಿಟ್ಟು ಕಾಯುತ್ತಿದ್ದ ಹೆಂಗಸರು ಎಲ್ಲವನ್ನು ಮಾರುತಿ ವ್ಯಾನ್‌ನ ಮೇಲೆ ಒಳಗೆ ಎಲ್ಲಾ ತುಂಬಿ ತಮ್ಮ ತಮ್ಮ ಅತಾರಗಳ ಸಮೇತ ಗಾಡಿಯ ಒಳಗೆ ತೂರಿಕೊಂಡು ಬಾಗಿಲು ಮುಚ್ಚಿದರು. ಶ್ರೀಧರ್ ಅಯ್ಯನವರ ಸಹೃದಯತೆಯ ಸಲಿಗೆಯಲ್ಲಿ ಬಹಳ ಕಾಲದಿಂದ ಅವರ ತೋಟದಲ್ಲಿ ಕೆಲಸ ಮಾಡುತ್ತಿರುವಂತೆ ಕಂಡ ಆ ಹೆಂಗಸರು ತಮ್ಮ ಸಮುದಾಯದ ಕಥೆಯನ್ನೇನೋ ಮಾತನಾಡುತ್ತ ದಾರಿ ಸವೆಸಿ ಕಲ್ಲಹಳ್ಳದ ತೋಟಕ್ಕೆ ತಲುಪಿಸಿದರು.
ಶ್ರೀಧರ್‌ರವರ ಕೊಟ್ಟಿಗೆಯ ಕಛೇರಿಯ ಪಕ್ಕದಲ್ಲಿ ಅವರ ಪೂರ್ವಿಕರು ಕಟ್ಟಿದ್ದ ದೊಡ್ಡ ತೊಟ್ಟಿ ಮನೆಯೊಂದು ಇದೆ. ಅವರ ತಾತ ಅಜ್ಜಿ, ತಂದೆ, ತಾಯಿ, ಚಿಕ್ಕಪ್ಪಂದಿರು ಎಲ್ಲರೂ ಬಾಳಿದ ಕೂಡು ಕುಟುಂಬದ ಮನೆ. ಮನೆಯೆಂದರೆ ಈಗಿನಂತೆ ಎರಡು ಕೋಣೆಗಳ ಮನೆಯಲ್ಲ. ಹಲವಾರು ಕೋಣೆಗಳು, ಅಟ್ಟಗಳು, ಉಪ್ಪರಿಗೆಗಳು, ದೊಡ್ಡ ಹಜಾರ, ಜಗಲಿ, ಜೋಕಾಲಿ, ಆಳು-ಕಾಳು, ಅಡಕೆಯ ದೊಡ್ಡ ಮನೆ. ಈ ಮನೆಯಲ್ಲೇ ಶ್ರೀಧರ್ ಬಾಲ್ಯ ಯೌವ್ವನವ ಕಳೆದದ್ದು. ಈಗ ದೊಡ್ಡ ಮನೆಯಲ್ಲಿ ಉಳಿದಿದ್ದವರು ಇಬ್ಬರೆ ಅವರ ಚಿಕ್ಕಪ್ಪ ಮತ್ತು ಚಿಕ್ಕಮ್ಮ. ನಾವು ಆ ಮನೆಯೊಳಗೆಲ್ಲಾ ಸುತ್ತು ಹಾಕಿದೆವು. ಮನೆಯ ಪ್ರತಿಯೊಂದು ಜಾಗ, ವಸ್ತುಗಳು ಕಾಲದ ವೈಭವದ ಕಥೆಗಳನ್ನೆಲ್ಲಾ ತನ್ನೊಳಗೆ ಹುದುಗಿಸಿಕೊಂಡು ಒಂಟಿತನದಲ್ಲಿ ಕೊರಗುತ್ತಾ ಮುಟ್ಟಿದರೆ ಸಾಕು ಗತಕಾಲದ ಚಿತ್ರಗಳನ್ನು ಬಿಚ್ಚಿಡುವ ತವಕದಲ್ಲಿದ್ದವು.
ಈ ಎಲ್ಲದರ ನಡುವೆಯೂ ನಾಟಕದ ಗುಂಗಿನಿಂದ ಹೊರಬರಲು ಇಚ್ಚಿಸದ ಮನಸ್ಸು ಊರಿಗೆ ಹೊರಡಬೇಕಾದ ಅನಿವಾರ್ಯತೆಯ ತಾಕಲಾಟದಲ್ಲಿ ಚಡಪಡಿಸುತ್ತಾ ಇತ್ತು. ಹೀಗೆ ಇಳಿಸಂಜೆಯ ಇಡೀ ಕಾಡು, ಕಣಿವೆ, ಕತ್ತಲೆಯಲ್ಲಿ ಕರಗಿ ಹೋಗುವ ಮುನ್ನ ಒಲ್ಲದ ಮನಸ್ಸಿನಿಂದಲೇ ವಿದಾಯ ಹೇಳಿ ಹೆಗ್ಗೋಡಿನ ಹಾದಿ ಹಿಡಿದೆವು. ಇಂಥ ಕಾಡು ಕಣಿವೆಯ ತೋಟಗಳನ್ನೆಲ್ಲಾ ವಿವರವಾಗಿ ನೋಡಲು ಆಸ್ವಾದಿಸಲು ಕೆಲವು ದಿನಗಳಾದರೂ ಬೇಕು. ಆದರೂ ಈ ಚಿತ್ರಗಳು ನಮ್ಮ ಸ್ಮೃತಿ ಸಂಚಯದಲ್ಲಿದ್ದ ಕುವೆಂಪುರವರ ಮಲೆಗಳಲ್ಲಿ ಮದುಮಗಳು, ಪರಿಸರದ ಕಥೆಗಳು, ತೇಜಸ್ವಿಯವರ ಕಥೆಗಳ ಕಾಡಿನೊಳಗೆಲ್ಲಾ ಸೇರಿಕೊಂಡು ಒಂದರೊಳಗೊಂದು ಬೆರೆತು ಈ ಚಿಕ್ಕ ಭೇಟಿಯಲ್ಲೂ ಗಾಢ ಅನುಭವವಾದಂತಾಯಿತು. ನಿಜವಾಗಿಯೂ ನನ್ನನ್ನು ಪ್ರಭಾವಿಸಿದ ಗುರು ಫುಕುವೋಕಾನ ತೋಟವನ್ನೇ ಕಂಡಂತಾಗಿ ರಂಗಭೂಮಿಯಲ್ಲಿನ ನನ್ನ ಪ್ರಯೋಗ ಪ್ರಕ್ರಿಯೆಯ ‘ರೂಪಕ’ವೊಂದರ ದರ್ಶನವಾಗಿತ್ತು.
(ಕೃತಿ: ಮಣ್ಣಿನ ಬಂಡಿಯಲ್ಲಿ ಫುಕುವೋಕಾ (ರಂಗ ಕೃಷಿಯ ಆತ್ಮಾವಲೋಕನ), ಲೇಖಕರು: ಸತೀಶ್ ತಿಪಟೂರು, ಪ್ರಕಾಶಕರು: ಭೂಮಿ ಪ್ರಕಾಶನ, ಬೆಲೆ: 200/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ