ಚಳಿ ಬೇಸಿಗೆ ಕಾಲ ಸಂಧಿಸುವ ಈ ದಿನಗಳು ಬಂತೆಂದರೆ ವಾರಕ್ಕೊಮ್ಮೆಯಾದರೂ ಬೆಳಗಿನ ಜಾವ ಮೂರ್ನಾಲ್ಕು ಗಂಟೆಯ ಹೊತ್ತಿಗೆ ‘ಲಕ್ಷ್ಮಿ’ ಬರುತ್ತಿದ್ದಳು.ಶಾಲೆಯಲ್ಲಿದ್ದರೆ ಈ ಸಲ ಏಳನೆಯತ್ತೆ ಪರೀಕ್ಷೆ ಕಟ್ಟಿರುತ್ತಿದ್ದ ಲಕ್ಷ್ಮಿ ಇರುವುದು ರಸ್ತೆಯಿಂದ ಏಳು ಕಿ.ಮೀ. ಒಳಗಿದ್ದ ಬೆಟ್ಟ ಪ್ರದೇಶದ ಹಳ್ಳಿಯೊಂದರಲ್ಲಿ. ತಲೆತಲಾಂತರದಿಂದ ಅಲ್ಲಿ ನೆಲೆಸಿರುವ ರಂಗ-ಪುರುಷಿಯರ ಕಿರಿಯ ಮಗಳು ಅವಳು. ಕನಿಷ್ಟ ನಾಕು ಮೈಲು ನಡೆದು ಜೀಪು-ಲಾರಿ ತಿರುಗುವ ರಸ್ತೆಗೆ ಬರಬೇಕು ಅವರು. ಸರಿರಾತ್ರಿಯಲ್ಲಿ ದೊಂದಿ ಹೊತ್ತಿಸಿಕೊಂಡು, ಉಸಿರೆಳೆಯಲು ಕಷ್ಟಪಡುವ ಮಗಳನ್ನು ಹೆಗಲಮೇಲೆ ಕೂರಿಸಿಕೊಂಡು ಆಚೀಚೆಮನೆಯ ದಾಯಾದಿಗಳಾರನ್ನೋ ಜತೆ ಮಾಡಿಕೊಂಡು ಬಂದೇಬಿಡುತ್ತಿದ್ದ ರಂಗ. ಅರಳುತ್ತಿರುವ ಹೂವಿನಂತಿರಬೇಕಾದ ಆ ಎಳೇಮುಖ ಉಸಿರು ಒಳಗೆಳೆಯಲಾಗದೇ ಬಾಯಿಕಳೆದು, ಮೂಗರಳಿಸಿ ಕಣ್ಣುಕುತ್ತಿಗೆಯನ್ನೆಲ್ಲ ಮೇಲೆಕೆಳಗೆ ಮಾಡುತ್ತಾ ಮೂಕವೇದನೆ ಅನುಭವಿಸುವುದು ನೋಡಿದರೆ ನನಗೇ ಸಂಕಟವಾಗುತ್ತಿತ್ತು. ಎರಡಾದರೂ ಇಂಜೆಕ್ಷನ್ ಹಾಕಿ, ನೆಬುಲೈಸರ್ ,ಮಾತ್ರೆ, ಔಷಧಿ ಕೊಟ್ಟು ಮಲಗಿಸಿದರೆ ಬೆಳಗ್ಗೆ ರೌಂಡ್ಸ್‌ಗೆ ಹೋಗುವುದರಲ್ಲಿ ತನಗೆ ಹೋಟೆಲಿಂದ ಬನ್ಸೇ ತಂದುಕೊಡು ಅಂತ ಹಟ ಮಾಡುತ್ತಿದ್ದ ಲಕ್ಷ್ಮಿ ಕಾಣಿಸುತ್ತಿದ್ದಳು.ಏನೆಲ್ಲ ಮುನ್ನೆಚ್ಚರಿಕೆ , ಔಷಧಿ ಕೊಟ್ಟು ಹೇಳಿ ಕಳಿಸಿಯೂ ಒಂದೆರೆಡು ವಾರದಲ್ಲಿ ಮತ್ತೆ ಹಾಜರಾಗುತ್ತಿದ್ದಳು.
ನಾಲ್ಕಾರು ಹೆಜ್ಜೆ ಬಿರಬಿರನೇ ನಡೆದರೇ ಶ್ವಾಸಕಟ್ಟುವ, ಉಳಿದ ಮಕ್ಕಳಂತೆ ತಾನೂ ಹಾರಿ ಕುಣಿದು ಆಡಿದರೇ ಶುರುವಾಗುವ, ಮುಳ್ಳಣ್ಣು, ಜಂಬೆಹಣ್ಣು, ನೇರ್ಲೆಹಣ್ಣು, ಪೇರ್ಲೆಹಣ್ಣು ಯಾವುದೂ ತಿನ್ನಬೇಡವೆಂದು ಅದುಬೇಡ-ಇದುಬೇಡಗಳ ದೊಡ್ಡಯಾದಿಯನ್ನೇ ಮಕ್ಕಳ ಮುಂದಿರಿಸುವ, ಪದೇಪದೇ ಶುರುವಾಗುವ ಈ ಉಸಿರುಗಟ್ಟಿಸುವ ಮಕ್ಕಳ ಕಾಯಿಲೆಗೆ ಈ ಬದಿ ‘ಕೋವೆ’ಯೆಂಬ ಹೆಸರು. ಮಕ್ಕಳಿಗೆ ಬರುವ ಅಸ್ತಮಾ ಅದು. ಹೆಚ್ಚಿನ ಮಕ್ಕಳಿಗೆ ಶಿಶುವಾದಾಗಲೇ ಶುರುವಾಗಿ ಐದಾರು ವರ್ಷದ ವೇಳೆಗೆ ಕಡಿಮೆಯಾಗುವುದಾದರೂ, ಲಕ್ಷ್ಮಿಯಂತೆ ಒಬ್ಬೊಬ್ಬರಿಗೆ ಅವರ ಬಾಲ್ಯವನ್ನೆಲ್ಲಾ ಕಬಳಿಸಿಬಿಡುತ್ತದೆ.
ರಂಗ ಮೊದಲು ಔಷಧವನ್ನು ನಂಬಿದವನೇ ಅಲ್ಲ. ಗೇರುಹಣ್ಣಿನ ಸಾರಾಯಿ ತಪ್ಪದೇ ದಿನಾ ಮೂರು ತಿಂಗಳು ಕುಡಿಸಿದ್ದ. ಅವಳ ಅವ್ವ ಐದು ವರ್ಷದ ತನಕ ಮೊಲೆಹಾಲು ಕುಡಿಸಿದ್ದಳು. ಗಾಂವ್‌ಟಿ ಬೇರು ತೇದು ಕುಡಿಸಿದ್ದರು. ಗಟ್ಟದ ಮೇಲೆಲ್ಲೋ ಕರೆದುಕೊಂಡು ಹೋಗಿ ಇಡೀಮೀನು ನುಂಗಿಸಿದ್ದರು. ಆ ದೇವಸೇವಕ ಕೊಟ್ಟ ಭಸ್ಮ ಕದರಿ ಕುಡಿಸಿದ್ದರು. ಜಪತಪಗಳಾದವು. ಯಾವುದಕ್ಕೂ ಜಗ್ಗದೇ ಮಗಳು ಬೆಳೆದಂತೆ ಬೆಳೆಯುತ್ತಾ ಹೋದ ‘ಕೋವೆ’ಯಿಂದ ಕಂಗಾಲಾಗಿ ಕೊನೆಗೆ ಆಸ್ಪತ್ರೆಗೆ ಕರೆತಂದಿದ್ದರು.
ಕಾಯಿಲೆಯ ಕಾರಣ-ಲಕ್ಷಣ-ಪರಿಣಾಮ-ಚಿಕಿತ್ಸೆಯ ಬಗ್ಗೆ ನಾನು ತಿಳಿದಷ್ಟನ್ನು ರಂಗನಿಗೆ ನಂಬಿಕೆ ಬರುವಂತೆ ಹೇಳುವಷ್ಟರಲ್ಲಿ ನನ್ನ ತಲೆ ಅರ್ಧ ಖರ್ಚಾಗಿತ್ತು. ಏಳು ವರ್ಷವಾದರೂ ಶಾಲೆಗೆ ದಾಖಲಾಗದ ಲಕ್ಷ್ಮಿ ಅಂತೂ ಒಂದನೇ ಇಯತ್ತೆ ಸೇರಿದಳು. ಮೂರು ಮೈಲು ದೂರದ ಒಂದು ಕೋಣೆಯ ಪ್ರಾಥಮಿಕ ಶಾಲೆಗೆ ಅವಳನ್ನು ಹೊತ್ತು ಕಳಿಸಿ ತರುವುದೇ ಅಜ್ಜನ ಕೆಲಸವಾಯ್ತು. ಪಾಸಾದರೂ ಫೇಲಾದರೂ ಅದೇ ಕೋಣೆಯೆಂದ ಮೇಲೆ ಫೇಲು ಮಾಡುವುದೇಕೆಂದು ಶಾಲೆಯ ಒಂದೇ ಮಾಸ್ತರು ನಾಕನೇಯತ್ತೆ ತನಕ ಮುಂದೆ ಕಳಿಸಿದರು. ಆ ಹೊತ್ತಿಗೆ ಆ ಬೆಟ್ಟದೂರಿಗೆ ಒಂದು ಮಾಧ್ಯಮಿಕ ಶಾಲೆಯೂ ಮಂಜೂರಾಗಿ ಮತ್ತೊಬ್ಬ ಮಾಸ್ತರೂ ಬಂದರು. ‘ಅದ್ಕೆ ಯಂತ ಬರೂದಿಲ್ಲ, ಈ ವರ್ಸ ಅದೇ ಕ್ಲಾಸಿನಾಗೆ ಕೂರಿಸಿ’ ಅಂತ ಹೊಸ ಪಟ್ಟಿ ತಂದುಕೊಡಲಾರದ ರಂಗ ಎಷ್ಟು ಹೇಳಿದರೂ ಕೇಳದ ಮಾಸ್ತರು ಏಳನೆಯತ್ತೆ ತನಕ ತಂದು ಬಿಟ್ಟರು. ಬರುವ ವರ್ಷ ಹೈಸ್ಕೂಲಿಗೆ ಹೋಗಬೇಕಾದ ಮಕ್ಕಳಿಗೆ ಸ್ವಲ್ಪವಾದರೂ ಪಾಠ ತಿಳಿಯದಿದ್ದರೆ ತಮ್ಮ ಮಾನ ಹೋಗುತ್ತದೆಂದರಿತ ಶಿಕ್ಷಕರು ಇದ್ದಕ್ಕಿದ್ದಂತೆ ಕಲ್ಲು ಹೃದಯದವರಾಗಿಬಿಟ್ಟರು. ಇಬ್ಬರೂ ಸ್ಪರ್ಧೆಗೆ ಬಿದ್ದು ಮಕ್ಕಳಿಗೆ ಪಾಠ ಕಲಿಸತೊಡಗಿದರು.
ಅಲ್ಲಿ ಕಲಿಸುವ ಪಾಠವೂ ತಿಳಿಯದೇ, ಮನೆಯಲ್ಲಿ ಅನುಕಂಪದ ಹೊರತಾಗಿ ಮತ್ತಾವ ಸಹಾಯವೂ ಸಿಗದೇ, ಒಮ್ಮೆಲೇ ಬೆದರಿ ಹೋದಳು ಲಕ್ಷ್ಮಿ. ಶಾಲೆಗೆ ಹೊರಡುವ ವೇಳೆಗೆ ಕೋವೆ ಜೋರು! ಶಾಲೆಯ ಬಿಸಿಯೂಟದಲ್ಲಿ ಎಣ್ಣೆ ಜಾಸ್ತಿ ಹಾಕುತ್ತಾರೆಂದೂ ‘ಮಗೆ-ನುಗ್ಗೆ-ತಮಟೆಕಾಯಿ’ ತರದ ತಂಡಿ ತರಕಾರಿ ಸಾರು ಮಾಡುತ್ತಾರೆಂದೂ, ಅದಕ್ಕೇ ಲಕ್ಷ್ಮಿಗೆ ಕೋವೆ ಕಮ್ಮಿಯಾಗುತ್ತಿಲ್ಲವೆಂದೂ ರಂಗ ಬಂದಾಗಲೆಲ್ಲ ಆಪಾದಿಸುತ್ತಿದ್ದ. ಅವಳನ್ನು ಹೊತ್ತು ತಂದೂ ತಂದೂ ಸಾಕಾಗಿದ್ದ. ಏನೆನ್ನಿಸಿತೋ ಅಂತೂ ಒಂದು ದಿನ ಇದ್ದಕ್ಕಿದ್ದಂತೆ ಇನ್ನು ಅವಳು ಶಾಲೆಗೆ ಹೋಗುವುದು ಬೇಡವೆಂದೂ ಘೋಷಿಸಿಬಿಟ್ಟ. ಯಾವ ಮಾಸ್ತರು ಬಂದು ಏನು ಹೇಳಿದರೂ ಪ್ರಯೋಜನವಾಗಲಿಲ್ಲ.
ಶಾಲೆ ಬಿಟ್ಟದ್ದೇ ಲಕ್ಷ್ಮಿಯ ಕೋವೆಯೂ ಕಮ್ಮಿಯಾಯಿತು! ನನಗೂ ಆಶ್ಚರ್ಯವಾಗುವಂತೆ ಅವಳ ಅಸ್ತಮಾ ಇಳಿಮುಖವಾಯಿತು. ಶಾಲೆಯ ಕಟ್ಟಡದ ಜಂತಿ(ತೊಲೆ)ಗೆ ಹಾಕಿದ್ದ ಯಾವುದೋ ಮರಕ್ಕೆ ಒಬ್ಬಳು ನೇಣು ಹಾಕಿಕೊಂಡು ಸತ್ತಿದ್ದಳೆಂದೂ, ಅವಳ ದೆವ್ವದ ಕಾಟದಿಂದ ತನ್ನ ಮಗಳಿಗೆ ಹಾಗಾಗುತ್ತಿತ್ತೆಂದೂ, ಇಷ್ಟು ದಿನವಾದರೂ ತನಗದು ತಿಳಿಯದೇ ಹೋಯಿತಲ್ಲ ಎಂದು ಖೇದ ಪಟ್ಟಿದ್ದ ರಂಗ. ದೆವ್ವ ಭೂತಗಳೆಲ್ಲ ಸುಳ್ಳು ಎನ್ನುವ ನನ್ನ ಅಜ್ಞಾನಕ್ಕೆ ಮರುಕಪಡುತ್ತಾ ಒಟ್ಟಾರೆ ತನ್ನ ಮಗಳ ಸೀಕು ಗುಣವಾದದ್ದರ ಬಗ್ಗೆ ಖುಷಿ ಪಟ್ಟು, ಒಮ್ಮೆ ಲಕ್ಷ್ಮಿಯನ್ನು ಕರೆತಂದು, ಸುರಗಿ ಹೂವು-ಬಾಳೆಕೊನೆ-ಪಾಯಸದ ಸಣ್ಣಕ್ಕಿ ಎಲ್ಲ ಕೊಟ್ಟು ‘ಅಮ್ಮೋರ್‍ಗೆ ಕೈ ಮುಗ್ಯೆ’ ಅಂತ ಅವಳ ಬಳಿ ಕೈ ಮುಗಿಸಿ ಮುಜುಗರಕ್ಕೀಡುಮಾಡಿಹೋದ.
ಹಾಗಾದರೆ ಲಕ್ಷ್ಮಿಯ ಕೋವೆ ಕಮ್ಮಿಯಾದದ್ದು ಬೆಳೆಯುತ್ತಿದ್ದ ಅವಳ ದೇಹ ಪ್ರಕೃತಿ ಬದಲಾಗಿಯೋ?ಶಾಲೆಯ ಒತ್ತಡ ಕಮ್ಮಿಯಾಗಿಯೋ? ಅಥವಾ ರಂಗ ಹೇಳಿದಂತೆ…. ?
******
ಐದಾರು ವರ್ಷಗಳ ಕೆಳಗೆ ನಡೆದ ಮತ್ತೊಂದು ಚಿತ್ರ ಕಣ್ಣಿಗೆ ಕಟ್ಟುತ್ತಿದೆ.
ನಾನು ಹಲವು ವರ್ಷಗಳಿಂದ ಬಲ್ಲ ಪಾವ್ಲಿನ್ ಗಂಡ ದೂರ ಬೊಂಬಾಯಿಯಲ್ಲಿದ್ದಾನೆ. ಅವನು ದುಡಿದು ಕಳಿಸಿದ ದುಡ್ಡಿನಲ್ಲೇ ಮೂರು ಮಕ್ಕಳ ಜತೆ, ಮುದಿ ಮಾವನ ಅಚ್ಚುಕಟ್ಟಾಗಿ ಸಂಸಾರ ನಿಭಾಯಿಸುತ್ತಿದ್ದಾಕೆ ಅವಳು. ಊರಲ್ಲೇ ಪುಟ್ಟ ಮನೆ ಕಟ್ಟಿಸಿ,ಸ್ವಲ್ಪ ಗದ್ದೆ ಕೊಂಡು ಜೇವನ ನಿರ್ವಹಿಸುತ್ತಿದ್ದಾಕೆ. ಗಂಡ ಕ್ರಿಸ್ಮಸ್ ಟೈಮಿಗೆ ಹಾಗೂ ಊರ ಚರ್ಚಿನ ಪೇಸ್ತಿಗೆ ಮಾತ್ರ ಬರುವವನು. ಹಣ ಕೊರತೆಯಾದರೆ ಬಾಕಿ ಉಳಿಸುತ್ತಿದ್ದವಳು ಅವನು ಕಳಿಸಿದ ಕೂಡಲೇ ಕೊಟ್ಟು ಬಿಡುತ್ತಿದ್ದಳು. ಅಂದು..
ಅವರ ಮನೆಯದೇ ಗದ್ದೆ ಕೊಯ್ಲು. ಕೊಯ್ದ ಭತ್ತವನ್ನು ಒಕ್ಕಿ ನೆಲ್ಲು-ಹುಲ್ಲು ಒಳಸಾಗಿಸಿದ ದಿನ. ಮಳೆಬೀಳುವಂತಿದ್ದರಿಂದ ಬೇಗಬೇಗನೇ ಕೆಲಸಮುಗಿಸಿದರು. ದಿನವಿಡೀ ಮಾಡಿದ ಕೆಲಸದ ಆಯಾಸಕ್ಕೋ, ಭತ್ತದ ಧೂಳಿಗೋ, ಅಂತೂ ಇದ್ದಕ್ಕಿದ್ದಂತೆ ಸಂಜೆ ಅವಳಿಗೆ ಅಸ್ತಮಾ ಶುರುವಾಯಿತು. ಮೊದಲು ನಿರ್ಲಕ್ಷಿಸಿದಳಾದರೂ ಉಸಿರು ಕಟ್ಟುತ್ತಾ ಹೋದಂತೆನಿಸಿ ಕೆಪ್ಪ ಮಾವನ ಬಳಿ ಹಿರಿಯ ಮಕ್ಕಳಿಬ್ಬರನ್ನೂ ಬಿಟ್ಟು ಕಿರಿಯ ಮಗುವಿನ ಜೊತೆಗೆ ಆಸ್ಪತ್ರೆಗೆ ಬಂದಳು. ಉಸಿರಾಡಲಾಗದೇ ಚಡಪಡಿಸುತ್ತಿದ್ದಾಳೆ, ಕೈ ಬೆರಳ ತುದಿ ನೀಲಿಯಾಗಿದೆ, ಬೆವರಿ ಮೈಯೆಲ್ಲ ತಣ್ಣಗಾಗಿದೆ. ಪಕ್ಕದ ಮನೆಯವರಿಗೆ ಕೂಡಲೇ ಫೋನು ಮಾಡಿ ಕರೆಸಿ ಹಳ್ಳಿ ಆಸ್ಪತ್ರೆಯ ಪ್ರಥಮಚಿಕಿತ್ಸೆಯನ್ನೆಲ್ಲ ಕೊಟ್ಟೆವು. ಅದಕ್ಕೆ ಪ್ರತಿಕ್ರಿಯೆ ಕಾಣದಾಗ ಫಿಜಿಶಿಯನ್ ಒಬ್ಬರನ್ನೂ ಕರೆಸಿದೆವು. ಆಕ್ಸಿಜನ್,ಇಂಜೆಕ್ಷನ್, ನೆಬುಲೈಸೇಶನ್ ಯಾವುದಕ್ಕೂ ಜಪ್ಪಯ್ಯ ಎನ್ನದ ಅವಳ ಅಸ್ತಮಾ ಹೆಚ್ಚುತ್ತಲೇ ಹೋಯ್ತು. ಆಂಬುಲೆನ್ಸ್ ತರಿಸಿ, ಪಕ್ಕದ ಮನೆಯವರಿಗೆ ಧೈರ್ಯ ಹೇಳಿ, ಅವಳ ಗಂಡನಿಗೆ ಫೋನ್ ಮಾಡಿ ವಾರ್ಡಿಗೆ ಬಂದರೆ ಮಂಚದ ಪಕ್ಕ ನಿಂತುಕೊಂಡೇ ಅವಳ ಎದೆ ಹಾಲು ಕುಡಿಯುತ್ತಿದೆ ಅವಳ ಒಂದೂವರೆ ವರ್ಷದ ಮಗು! ಮಾತನಾಡಲೂ ಆಗುತ್ತಿಲ್ಲ, ಆದರೂ ಕೈ ಸನ್ನೆ ಮಾಡಿ ಹೇಳುತ್ತಿದ್ದಾಳೆ-ನಾನು ಬೇರೆಲ್ಲೂ ಹೋಗಲಾರೆ, ನೀವೆ ನನ್ನ ಕಾಯಿಲೆ ಕಮ್ಮಿ ಮಾಡಿ ಅಂತ! ಉಸಿರಾಡಲಾರದ ಆ ಪ್ರಾಣಸಂಕಟದಲ್ಲೂ ಅವಳು ನನ್ನ ಮೇಲಿಟ್ಟ ವಿಶ್ವಾಸಕ್ಕೆ ಕಣ್ಣು ತುಂಬಿ ಬಾಯಿ ಕಟ್ಟಿ ಹೋದಂತಾದರೂ, ದುಡ್ಡಿನ ವ್ಯವಸ್ಥೆಯಾಗಿದೆ ಚಿಂತಿಸಬೇಡವೆಂದು ಹೇಳಿ, ‘ಮಾಯ್,ಮಾಯ್’ ಎಂದು ಕೂಗುತ್ತಿದ್ದ ಅವಳ ಮಗುವನ್ನು ಮನೆಗೆ ಕಳಿಸಿ ಮಣಿಪಾಲಿಗೆ ಕಳಿಸಿದೆವು. ಹೊತ್ತುಗೊತ್ತಿಲ್ಲದೇ, ಪುರುಸೊತ್ತಿದೆಯೇ ಎಂದು ಕೇಳದೇ, ಹಣದ ಬಗ್ಗೆ ಯೋಚಿಸದೇ ಬರುವ ಕಾಯಿಲೆಗಳು ಮನುಷ್ಯನನ್ನು ಎಷ್ಟು ಅಸಹಾಯಕನನ್ನಾಗಿಸುತ್ತವೆ! ಅಂತೂ ಅವಳು ಹೆಚ್ಚಿನ ಚಿಕಿತ್ಸೆಗಾಗಿ ಮುಂದೆ ಹೋದರೂ ಏನಾಗುತ್ತದೋ ಎಂಬ ಸಣ್ಣ ಅನುಮಾನವೊಂದು ಮನದಲ್ಲಿ ಸುಳಿಯುತ್ತಿತ್ತು. ನನ್ನ ದೂರದ ಅನುಮಾನ ನಿಜವಾಗಿಯೇ ಹೋಯ್ತು. ಅರ್ಧದಾರಿ ಹೋಗುವಷ್ಟರಲ್ಲೇ ಪಾವ್ಲಿನ್ ಪೂರ್ತಿ ತಣ್ಣಗಾಗಿಬಿಟ್ಟಳು.ನಿಂತು ಹಾಲು ಕುಡಿಯುತ್ತಿದ್ದ ಆ ಮಗುವಿನ ಚಿತ್ರ, ನಾನಿಲ್ಲೇ ಇರುವೆನೆಂಬ ಅವಳ ಆ ಆರ್ತನೋಟ ನನ್ನಲ್ಲಿ ಎಷ್ಟು ಸ್ಥಾಯಿಯಾಗಿಬಿಟ್ಟಿತೆಂದರೆ, ಅದು ಹಲವು ರಾತ್ರಿಗಳ ನನ್ನ ನಿದ್ದೆಯನ್ನು ದೂರ ಮಾಡಿತು.
*******
ಪಟ್ಟಣ ಪ್ರದೇಶದಲ್ಲಿರುವ ನಮ್ಮ ಗೆಳೆಯರು-ಬಂಧುಗಳು, ಇಲ್ಲಿನ ಅಸ್ತಮಾ ಪೀಡಿತರ ಕತೆ-ವ್ಯಥೆ ಕೇಳಿ ಅಚ್ಚರಿಪಡುತ್ತಾರೆ. ಧೂಳು,ಹೊಗೆ ತುಂಬಿರುವ ಪಟ್ಟಣಗಳಲ್ಲಿ ಮಾತ್ರ ವಾಯುಮಾಲಿನ್ಯದಿಂದ ಅಸ್ತಮಾ ಬರುತ್ತದೆಂದು ಭಾವಿಸುವ ಅವರು, ಇಷ್ಟು ಶುದ್ಧ ಗಾಳಿಯಿರುವ ಇಲ್ಲೂ ಶ್ವಾಸಕೋಶದ ಕಾಯಿಲೆಯೇ ಎಂದು ಅಚ್ಚರಿ ಸೂಚಿಸುತ್ತಾರೆ.
ಸಮುದ್ರಮಟ್ಟದ ಕರಾವಳಿ ಪ್ರದೇಶದ ವಾತಾವರಣದಲ್ಲಿ ತೇವಾಂಶ ಹೆಚ್ಚು. ಇಲ್ಲಿಯ ಪ್ರಮುಖ ಬೆಳೆ ಅಡಕೆಯ ಸಿಪ್ಪೆಯ ಧೂಳು ತುಂಬಾ ಅಲರ್ಜಿಕಾರಕ. ಅದಲ್ಲದೇ ಭತ್ತ ಬಡಿಯುವಾಗ, ತೂರುವಾಗ, ಹುಲ್ಲು ಕೂಡಿಸಿ ಕಟ್ಟುವಾಗ, ಹಾರುವ ಧೂಳು; ಒಳ ಊರುಕೇರಿಗಳಿಗೆಲ್ಲ ಹರಡಿರುವ ಕೆಮ್ಮಣ್ಣಿನ ರಸ್ತೆಯ ಧೂಳು; ಒಲೆಯ ಹೊಗೆ ಇವೆಲ್ಲವೂ ಅಲರ್ಜಿಯನ್ನುಂಟುಮಾಡುತ್ತವೆ. ಚೈತ್ರ ಮಾಸದ ಹೊತ್ತಿಗೆ ಕಾಡು-ನಾಡಿನಲ್ಲೆಲ್ಲ ನಾನಾತರದ ಹೂವುಗಳು ಬೆಳಗಿನ ವೇಳೆಗೆ ಅರಳುವಾಗ ಪರಾಗರೇಣುಗಳನ್ನು ಗಾಳಿಗೆ ಬಿಡುಗಡೆ ಮಾಡುತ್ತವೆ. ಅವೂ ಅಲರ್ಜಿಕಾರಕಗಳೇ. ಭಾಗಶಃ ಈ ಎಲ್ಲ ಕಾರಣಗಳ ಜೊತೆ ದೈಹಿಕ ಶ್ರಮ, ಆಹಾರಕ್ರಮಗಳೂ ಕಾರಣವಾಗಿ ಮಕ್ಕಳಿಂದ ಮುದುಕರವರೆಗೆ ಹಲವರನ್ನು ಅಸ್ತಮಾ ಕಾಡುತ್ತದೆ. ಕೆಲವರು ವರ್ಷಪೂರ್ತಿ ಅನುಭವಿಸಿದರೆ ಹೆಚ್ಚಿನವರಿಗೆ ಸೀಸನಲ್ ಆಗಿರುತ್ತದೆ.
ಈಗ ಅಸ್ತಮಾಗೆ ನಾನಾತರದ ಔಷಧಗಳು ಮಾರುಕಟ್ಟೆಗೆ ಬಂದಿವೆ. ಅಲರ್ಜಿ ಶುರುವಾಗದಂತೆ ಮೊದಲೇ ತೆಗೆದುಕೊಳ್ಳುವ ಔಷಧಗಳಿಂದ ಹಿಡಿದು ಹೆಚ್ಚಾದದ್ದು ಕೂಡಲೇ ಕಡಿಮೆಯಾಗುವಂತೆ ತೆಗೆದುಕೊಳ್ಳುವ ಔಷಧ-ಕಿಸೆಯಲ್ಲಿಟ್ಟುಕೊಂಡು ಓಡಾಡುವ ಇನ್ಹೇಲರ್‍ಗಳ ತನಕ ಹಲವಾರು ರೀತಿಯ ಔಷಧಗಳು ಲಭ್ಯ. ಅಲ್ಲದೇ ಆಯುರ್ವೇದ, ಹೋಮಿಯೋಪತಿ, ಮತ್ತು ಇತರೆ ವೈದ್ಯ ಪದ್ಧತಿಗಳಲ್ಲೂ ಪರಿಣಾಮಕಾರಿ ಔಷಧಗಳಿವೆಯೆಂಬುದು ಫಲಾನುಭವಿಗಳ ಮಾತು. ಒಟ್ಟಾರೆ ಚಿಕಿತ್ಸೆ ಮೊದಲಿನಷ್ಟು ಕಷ್ಟವಲ್ಲ. ಜನಪ್ರಿಯ ವೈದ್ಯಕೀಯ ಪ್ರಾಕ್ಟೀಸಿನಲ್ಲಿ ತತ್‌ಕ್ಷಣ ಗುಣಮುಖರನ್ನಾಗಿಮಾಡುವುದೇ ಮೂಲಮಂತ್ರ. ಇದಕ್ಕೆ ರೋಗಿಗಳ ಕಡೆಯಿಂದಲೂ ಒತ್ತಡ ಬರುತ್ತದೆ. ಶೀಘ್ರ ಪರಿಣಾಮದ ಆಮಿಷಕ್ಕೆ ಹಲವು ಬಾರಿ ಕ್ವಾಲಿಫೈಡ್ ವೈದ್ಯರೂ ಬಲಿಯಾಗಿ ನಕಲಿ ವೈದ್ಯರಂತೆ ವರ್ತಿಸುವುದುಂಟು.
ಅಸ್ತಮಾದಲ್ಲಿ ಸ್ಟಿರಾಯ್ಡ್ ಬಳಕೆ ಇಂತಹ ಒಂದು ಆಮಿಷ. ಬಹುತೇಕ ಮಿರಾಕ್ಯುಲಸ್ ರಿಮೆಡಿಗಳು ಸ್ಟಿರಾಯ್ಡ್ ಹೊಂದಿರುತ್ತವೆಂದು ಹಲವು ಬಾರಿ ವೈದ್ಯಕೀಯ ಪರೀಕ್ಷೆಯಲ್ಲಿ ಧೃಢಪಟ್ಟಿದೆ. ಅತಿ ಕಡಿಮೆ ದರದ, ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿರುವ, ಕಹಿ ರುಚಿಯಿರದ ಸ್ಟಿರಾಯ್ಡ್ ಮಾತ್ರೆಗಳನ್ನು ಪುಡಿ ಮಾಡಿ ಭಸ್ಮದಂತೆಯೂ, ಕಷಾಯದಲ್ಲಿಯೂ, ಇಡಿಯ ಮೀನಿನಲ್ಲಿ ತುಂಬಿಯೂ, ಯಾವುದೋ ಮೂಲಿಕೆಗಳ ಜೊತೆಗೆ ಮಿಶ್ರ ಮಾಡಿಯೋ- ಹೀಗೇ ಏನೇನೋ ರೂಪಗಳಲ್ಲಿ ಕೊಡಬಹುದಾಗಿದೆ. ಸ್ಟಿರಾಯ್ಡ್ ಬಳಸಿದರೆ ಅಸ್ತಮಾ ಗುಣವಾಗುವುದು ಖಚಿತ. ಆದರೆ ಆ ‘ಗುಣ’ ತಾತ್ಕಾಲಿಕ. ಅಷ್ಟೇ ಅಲ್ಲ, ಒಂದು ಸಲ ದೇಹ ಸ್ಟಿರಾಯ್ಡ್ ರುಚಿಗೆ ಬಿದ್ದರೆ ಅದಕ್ಕೆ ನಂತರ ಮತ್ತೆಲ್ಲ ಔಷಧಗಳೂ ರಸಹೀನ! ಸ್ಟಿರಾಯ್ಡ್ ಥೆರಪಿ ಆಟೋಟಗಳಲ್ಲಿ ಸ್ಟಿರಾಯ್ಟ್ ಬಳಸಿದಷ್ಟೇ ಅಪಾಯಕಾರಿ. ಪ್ರಾಣ ಉಳಿಸಲಷ್ಟೇ ಅದನ್ನು ಬಳಸಬಹುದಾಗಿದೆ. ದೀರ್ಘಾವಧಿ ಸ್ಟಿರಾಯ್ಡ್ ಬಳಕೆಯಿಂದ ದೇಹದ ಮೇಲೆ ಬಹಳಷ್ಟು ಅಡ್ಡ ಪರಿಣಾಮಗಳುಂಟಾಗುತ್ತವೆ. ಹಾಗಾಗಿ ಬಹಳ ಕಾಲದವರೆಗೆ ಅಸ್ತಮಾ ಕಾಯಿಲೆಗೆ ಔಷಧ ಬಳಸಬೇಕಾದಂತಹ ರೋಗಿಗಳು ನಂಬಿಕಸ್ಥ ವೈದ್ಯರ ಬಳಿ ಸ್ಟಿರಾಯ್ಡ್ ರಹಿತ ಔಷಧ ಕೇಳಿ ಪಡೆಯುವುದು ಅವಶ್ಯಕವಾಗಿದೆ. ಅಲ್ಲದೇ ಜೀವನಶೈಲಿಯ ಬದಲಾವಣೆ, ಆಹಾರಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ಹಗುರ ವ್ಯಾಯಾಮ, ನಿಯಮಿತವಾಗಿ ಔಷಧ ತೆಗೆದುಕೊಳ್ಳುವುದೇ ಮೊದಲಾದ ಕ್ರಮಗಳಿಂದ ಅಸ್ತಮಾ ಇದ್ದೂ ಉಳಿದವರಂತೇ ಬದುಕು ಸಾಗಿಸಬಹುದಾಗಿದೆ.
******
ಯುಗಾದಿಯ ದಿನ ದೇವಸ್ಥಾನಕ್ಕೆ ಹೋಗುವ ಎಂದು ಬಳಿಯಲ್ಲಿರುವ ಚನ್ನಕೇಶವ ದೇವಸ್ಥಾನಕ್ಕೆ ಧೂಳು ತುಂಬಿದ ಕೆಂಪು ರಸ್ತೆಯಲ್ಲಿ ಹೋದರೆ, ಭಟ್ಟರು ಮೇಲುಸಿರು ಬಿಡುತ್ತಾ ಮಂತ್ರ ಹೇಳುತ್ತಿದ್ದಾರೆ! ನನ್ನನ್ನು ಕಂಡವರೇ ‘ಶ್ವಾಸದ ಗುಳಿಗೆಯನ್ನೇನಾದರೂ ತಂದಿರಾ’ ಎಂದು ಹಣ್ಣು ಕಾಯಿ ಕೊಡುತ್ತಾ ಕೇಳುತ್ತಿದ್ದಾರೆ! ದೇವಳಕ್ಕೆ ಗುಳಿಗೆ ಏಕೆ ಎಂದು ಬರೀ ಕೈಯಲ್ಲಿ ಹೋಗಿದ್ದ ನಾನು ಭಟ್ಟರ ಖಾಯಿಲೆ ಮೊದಲು ಗುಣ ಮಾಡಪ್ಪಾ ಎಂದು ಕಾಣದ ದೇವರಲ್ಲಿ ಕೈ ಮುಗಿದು ಬಂದೆ….
[ಚಿತ್ರಗಳು- ಮಹೇನ್ ಸಿಂಹ]
2. ಕವಲಕ್ಕಿಯ ಡಾಕ್ಟರಮ್ಮ ಬರೆದ ಕಾಸರಕ ವಿಷಪುರಾಣ
ಈ ದೀಪಾವಳಿಗೆ ದೀಪ ಹಚ್ಚುವ ಮೊದಲೇ ಆ ಊರಿನ ಕೇರಿಗಳಲ್ಲಿ ಕತ್ತಲು ತುಂಬಿಕೊಂಡಿತು….
ಮೊನ್ನೆ ದೀಪಾವಳಿಯ ಬೆಳಿಗ್ಗೆ ಆಗತಾನೇ ಸೂರ್ಯ ಮೇಲೆ ಬಂದಿದ್ದ. ಮಕ್ಕಳನ್ನು ಬಲವಂತದ ಎಣ್ಣೆ ಸ್ನಾನಕ್ಕೆ ಸಿದ್ಧಗೊಳಿಸುತ್ತಿದ್ದೆ. ಆಗ, ದೂರದಿಂದ ಅಳು ಮತ್ತು ಕೂಗಾಟದ ಸದ್ದು ಕೇಳತೊಡಗಿ ದಡದಡ ಸದ್ದಿನೊಂದಿಗೆ ಹತ್ತಿಪ್ಪತ್ತು ಜನ ಯಾರನ್ನೋ ಹೊತ್ತು ತಂದದ್ದು ಗೊತ್ತಾಯಿತು. ಹಬ್ಬದ ಸಲುವಾಗಿ ಖಾಲಿಯಾಗಿದ್ದ ಆಸ್ಪತ್ರೆ ನಿಮಿಷಾರ್ಧದಲ್ಲಿ ರೋದನ-ಅಳು-ಗಲಾಟೆಗಳಿಂದ ತುಂಬಿಹೋಯ್ತು. ಕೋಟೆಯ ಹಾಗೆ ರೋಗಿಯನ್ನು ಸುತ್ತುವರಿದು ನಿಂತವರನ್ನು ಸರಿಸಿ ನೋಡಿದರೆ……… ನಾಗಿ ಮತ್ತವಳ ಮಗನನ್ನು ಮಲಗಿಸಿದ್ದಾರೆ! ಅರೆ, ನಿನ್ನೆಯಷ್ಟೇ ನನ್ನ ಬಳಿ ಬಂದು ಟಾನಿಕ್ ಗುಳಿಗೆ, ಕೆಮ್ಮಿನ ಮದ್ದು ಕೊಡಿ ಎಂದು ತಗೊಂಡು ಹೋಗಿದ್ದಳಲ್ಲ, ಏನಾಯ್ತು? ಅಲ್ಲಿ ಯಾರಿಗೂ ಸರಿಯಾಗಿ ಏನಾಯ್ತೆಂದು ಗೊತ್ತಿಲ್ಲ.
ಇಬ್ಬರೂ ಆಗಷ್ಟೇ ಮಿಂದು ಬಂದದ್ದಿರಬೇಕು. ‘ಲೈಫ್ ಬಾಯ್’ ಸಾಬೂನಿನ ಪರಿಮಳ ಅವರ ದೇಹದಿಂದ ಇನ್ನೂ ಸೂಸುತ್ತಿತ್ತು. ಅರೆನೆರೆದ ನಾಗಿಯ ಒದ್ದೆ ಕೂದಲಿಂದ ಇನ್ನೂ ನೀರಿಳಿಯುತ್ತಿದೆ. ಮಿಂದು ಒಳ ಹೋದವಳನ್ನು ದೇಯಿಯೂ ನೋಡಿದಳಂತೆ. ಹತ್ತೇ ನಿಮಿಷದಲ್ಲಿ, ಚಾಸೊಪ್ಪು ಕೇಳಿ ಬರಲು ಹೋದ ಸುಬ್ಬಿಗೆ ಇವರಿಬ್ಬರೂ ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದದ್ದು ಕಂಡು ಎತ್ತಿಕೊಂಡು ಓಡಿಬಂದಿದ್ದರು. ಮೈಮೇಲೆ ಹಾವು ಕಚ್ಚಿದ ಗುರುತುಗಳಿವೆಯೇ ಎಂದು ಹುಡುಕಿಯಾಯ್ತು, ಏನೂ ಇಲ್ಲ. ಏನಾದರೂ ವಿಷ ಕುಡಿದಿರಬಹುದೇ ಎಂದು ಬಾಯಿ ಕಳೆಸಿ ಮೂಸಿದರೆ ಕಹಿ ಕಹಿ ವಾಸನೆ!
ಅಮ್ಮ, ಮಗ ಇಬ್ಬರೂ ಮೇಲುಸಿರು ಬಿಡುತ್ತಿದ್ದಾರೆ. ತೇಲುಗಣ್ಣು ಬಿಟ್ಟುಕೊಂಡಿರುವ ಇಬ್ಬರಿಗೂ ಮೈಮೇಲೆ ಪ್ರಜ್ಞೆಯಿಲ್ಲ. ಮೈಯೆಲ್ಲ ಸೆಟೆದು ನೀಲಿಗಟ್ಟಿ ಬಾಯಲ್ಲಿ ನೊರೆ ಬರುತ್ತಿದೆ. ನಾಗಿಗಾದರೂ ಖಾಯಂ ದಮ್ಮು. ಅವಳು ಅದಕ್ಕೆ ಔಷಧಿಯ ಮೇಲೇ ಇರುವವಳು. ಆದರೆ ಈ ಸುಬ್ರಾಯ ಇನ್ನೂ ಎಳೆಯ ಪ್ರಾಯದ ಗಟ್ಟಿ ಹುಡುಗ. ನಾಲ್ಕಾರು ವರ್ಷದ ಕೆಳಗೆ ದಮ್ಮಿನಿಂದ ಅವನಪ್ಪ ಸತ್ತ ನಂತರ ಅಮ್ಮ ಮಗ ಇಬ್ಬರೇ ಇದ್ದರೂ, ದಾಯಾದಿಗಳೇ ತುಂಬಿರುವ ಕೇರಿಯಲ್ಲಿ ಇವರು ಎಲ್ಲರಿಗೂ ಬೇಕಾದವರು. ಹಾಗಂತ ಅಲ್ಲಿ ನೆರೆದ ಜನರ ಸಂಖ್ಯೆಯಿಂದಲೇ ತಿಳಿಯುತ್ತಿತ್ತು. ‘ಮಂಗನಿಗಿಂತ ಚೆನ್ನಾಗಿ ಮರ ಹತ್ತುತ್ತಾನೆ’ ಎಂದೇ ಸುಬ್ರಾಯ ಪ್ರಸಿದ್ಧಿ. ಇವರಿಗೇನಾಯ್ತು ಹೀಗೆ ಎಂದು ಅಚ್ಚರಿಗೊಳ್ಳುತ್ತಲೇ ಪ್ರಥಮ ಚಿಕಿತ್ಸೆಗೆ ಏರ್ಪಾಡು ಮಾಡಿದೆವು. ಅಷ್ಟೊತ್ತಿಗೆ ಸುಬ್ರಾಯ ವಾಕರಿಸಿ ವಾಕರಿಸಿ ಸ್ವಲ್ಪ ವಾಂತಿ ಮಾಡಿದ. ಕಹಿ-ಹುಳಿ ವಾಸನೆ ಸೂಸುತ್ತಿದ್ದ ಹಸಿರು ನೀರು ಹೊರಬಂತು. ಬಾಯಿಂದಲೂ ಹೊರಟ ಕಹಿ ವಾಸನೆಗೆ ಅಂದು ಕಹಿ ಕುಡಿಯುವ ಹಬ್ಬ ಎಂಬುದು ನೆನಪಾಯಿತು.
ಉಗಾದಿ-ದೀಪಾವಳಿ-ಸಂಕ್ರಾಂತಿ ಹಬ್ಬಗಳಂದು ಕಹಿ ಕುಡಿಯುವ ಪದ್ಧತಿಯೊಂದು ಈ ಊರುಗಳಲ್ಲಿದೆ. ಹಲವು ಚಕ್ಕೆ- ಬೇರು- ಸೊಪ್ಪು(ಕೊರಶನ, ಗಜ್ಜುಗ, ಆಡುಸೋಗೆ, ಅಮೃತಬಳ್ಳಿ, ಮಾವು, ಬೇವು, ಕಹಿಬೇವು ಇತ್ಯಾದಿ ಇತ್ಯಾದಿ) ಗಳ ಮಿಶ್ರಣವನ್ನು ಕುಟ್ಟಿ ಕುದಿಸಿಯೋ, ಒರಳಲ್ಲಿ ರುಬ್ಬಿಯೋ ಒಂದು ಕಹಿ ದ್ರಾವಣ ತಯಾರಿಸುತ್ತಾರೆ. ಅದಕ್ಕಿರುವ ಔಷಧೀಯ ಗುಣಗಳ ಬಗ್ಗೆ ಹಲವು ಕತೆಗಳೇ ಇವೆ. ಸಿಹಿಯನ್ನು ದಿನನಿತ್ಯ ಹೆಚ್ಚೆನ್ನುವಷ್ಟು ಬಳಸುವ ನಾವು, ಕಹಿಗೆ ಔಷಧೀಯ ಗುಣವನ್ನು ಆರೋಪಿಸುವುದು ಸಹಜ. ಕೆಲ ಕಹಿಕಾರಕ ವಸ್ತುಗಳು ಔಷಧವಾಗಿರಲೂಬಹುದು. ಹೊಟ್ಟೆಯಲ್ಲಿರುವ ಜಂತುಹುಳುಗಳೂ, ಕೆಟ್ಟ ಚಾಳಿಯವರು ಹಾಕಿರಬಹುದಾದ ಮದ್ದೂ, ಇದುವರೆಗೆ ತಿಂದ ಸಿಹಿಯ ನಂಜನ್ನೂ ಆ ಕಹಿ ಮುರಿದುಬಿಡುತ್ತದೆ ಎನ್ನುವ ಪ್ರತೀತಿ. ಸಿಹಿಪ್ರಿಯರೂ ಹೇಗೋ ಮುಖ ಮುದ್ದೆ ಮಾಡಿಕೊಂಡಾದರೂ ಸರಿ, ಸ್ವಲ್ಪವಾದರೂ ಕಹಿ ಕುಡಿಯಲೇಬೇಕು. ಅದು ಹಬ್ಬದ ಬೆಳಗಿನ ರಿವಾಜಾಗಿದೆ. ಈ ದಿನ ಹಬ್ಬದ ಕಹಿ ತಯಾರಿಸುವಲ್ಲೇ ಏನೋ ಎಡವಟ್ಟಾಗಿ ಹೀಗಾಗಿದೆಯೆಂದು ಅವರ ಬಾಯ ವಾಸನೆಯಿಂದ ಸ್ಪಷ್ಟವಾಯ್ತು.
ಅಲ್ಲಿಯತನಕ ದೆವ್ವ ಮೆಟ್ಟಿರಬೇಕೆಂದು ಭಟ್ಟರ ಮನೆಗೆ ಓಡಿದವರೂ, ಮೃತ್ಯು ಹೊಡೆದಿರಬೇಕೆಂದು ಬೆನ್ನ ಮೇಲೆ ಮೂಡಿರಬಹುದಾದ ಮೂರು ಗೆರೆಗಳನ್ನು ಹುಡುಕುತ್ತಿದ್ದವರೆಲ್ಲ ಈಗ ಕಹಿಯ ಕಡೆಗೆ ತಿರುಗಿದರು. ನಿನ್ನೆ ಸಂಜೆ ಸುಬ್ರಾಯ ಕೆಲಸ ಮುಗಿಸಿ ವಡೇರ ಮನೆಯಿಂದ ತನ್ನ ಮನೆಗೆ ಹೋಗುತ್ತಾ ದಾರಿಯಲ್ಲಿ ಬೆಟ್ಟಕ್ಕೆ ಹೋಗಿ ಕಹಿ ಚಕ್ಕೆ ತಂದಿದ್ದನೆಂದು ಅವನ ಜೊತೆಗಿದ್ದ ಪೋರಗಳು ಹೇಳಿದವು. ಆದರೆ ಸಿಕ್ಕ ಯಾವ ಮಾಹಿತಿಯೂ ನಿಜವೋ ಅಲ್ಲವೋ ಎಂದು ತಿಳಿಯುವಷ್ಟರಲ್ಲಿ, ಮೂಗಿಗೆ ಪೈಪು ಹಾಕಿ ಹೊಟ್ಟೆ ತೊಳಸುತ್ತಾ,ಸಲೈನಿನ ವ್ಯವಸ್ಥೆ ಮಾಡುತ್ತಿರುವಂತೆಯೇ, ಎಲ್ಲರೂ ನೋಡನೋಡುತ್ತಿದ್ದ ಹಾಗೇ ಅವರಿಬ್ಬರೂ ಗತಪ್ರಾಣರಾದರು. ಕೇವಲ ಅರ್ಧ ಘಂಟೆಯ ಹಿಂದೆ ಗಟ್ಟಿಮುಟ್ಟಾಗಿದ್ದವರು ಈಗ ಇನ್ನಿಲ್ಲವಾಗಿ ಸಾವಿನ ಶಕ್ತಿಯೆದುರು ಒಮ್ಮೆ ಎಲ್ಲರೂ ಕಂಗಾಲಾದರು. ಕೊಟ್ಟಿಗೆಯಲ್ಲಿದ್ದ ಮೂರು ದನಕರುಗಳನ್ನು ಬಿಟ್ಟರೆ ಆ ಬಿಡಾರವೇ ಖಾಲಿಯಾಗಿ, ಹಬ್ಬದ ಬೆಳಗಿನ ಈ ಅನಿರೀಕ್ಷಿತ ಆಘಾತಕ್ಕೆ ಎಲ್ಲರೂ ತತ್ತರಿಸಿದರು.
ಮರಣೋತ್ತರ ಪರೀಕ್ಷೆಯ ವರದಿಗಳು ಬಂದ ನಂತರವೇ ನಮ್ಮ ಅನುಮಾನ ನಿಜವೆಂದು ಧೃಢಪಟ್ಟಿದ್ದು. ಅವರ ಸಾವು ‘ಆಕ್ಸಿಡೆಂಟಲ್ ಸ್ಟ್ರೈಕ್ನಿನ್ ಪಾಯಿಸನಿಂಗ್’ನಿಂದ ಆಗಿತ್ತು. ಕಹಿ ಅರೆಯುವಾಗ ಅಪ್ಪಿತಪ್ಪಿ ‘ಕಾಸರಕನ ಚಕ್ಕೆ’ ಮೂಲಿಕೆ ಸಂಗ್ರಹದೊಳಗೆ ಸೇರಿ ಇಷ್ಟೆಲ್ಲ ಅನಾಹುತ ಮಾಡಿತ್ತು!
******
ಈ ಕಡೆಯ ಕಾಡು ಬೇಣಗಳಲ್ಲಿ ಯಾವಾಗಲೂ ಸವರಿಕೊಂಡೇ ನಿಂತಿರುವ, ಮಧ್ಯಮ ಎತ್ತರದ ಹಚ್ಚಹಸಿರು ಮರವೊಂದಿದೆ. ಅದರ ಸೊಪ್ಪು ತೋಟದ ಮರಗಳ ಬುಡಕ್ಕೆ ಅತ್ಯುತ್ತಮ ಎಂದು ಪರಿಗಣಿಸಲ್ಪಟ್ಟಿರುವುದರಿಂದ ಚಿಗುರಿದ ಹಾಗೂ ಆ ಮರವನ್ನು ಸವರಿಬಿಡುತ್ತಾರೆ. ಆ ಮರವೇ ಕಾಸರಕ ಅಥವಾ ಕಾಸನಮರ. ಯಾವ ಪ್ರಾಣಿಯೂ ಯಮಕಹಿ ಇರುವ ಇದರ ಸೊಪ್ಪನ್ನು ತಿನ್ನದು. ಇದರ ಹೂವು- ಹಸಿರು. ಚಿಗುರು-ಕೆಂದಳಿರು. ಹಣ್ಣು- ಕಿತ್ತಳೆಯ ರಂಗು. ಗರಟದಂತಹ ಚಿಪ್ಪಿನೊಳಗೆ, ಲೋಳೆಯಲ್ಲಿ ಅಡಗಿ ಕುಳಿತ ಬೀಜ. ಬೇಸಗೆಯ ದಿನಗಳಲ್ಲಿ ಮರದ ಕೆಳಗೆ ಸಿಡಿದು ಚಲ್ಲಾಪಿಲ್ಲಿಯಾಗಿ ಬಿದ್ದಿರುವ ಬೀಜಗಳನ್ನು ನೋಡಬಹುದು. ಉರುಟು ಬೀಜಗಳು ಮಕಮಲ್ ಹೊಳಪು ಹೊಂದಿ ಫಳಫಳ ಹೊಳೆಯುತ್ತಿರುತ್ತವೆ. ಅವನ್ನು ಮುಂಚೆ ಶರಟಿನ ಗುಂಡಿಯಾಗಿ ಬಳಸುತ್ತಿದ್ದರಂತೆ. ಅದೆಲ್ಲ ಹಳೆಯ ಕಾಲದ ಮಾತಾಯಿತು. ಈಗ ಈ ಗಿಡದ ಉಪಯೋಗ ಏನಿದ್ದರೂ ತೋಟದ ಬುಡದ ಸೊಪ್ಪಿಗಾಗಿ ಮಾತ್ರ.ಈ ಗಿಡದ ಎಲ್ಲ ಭಾಗಗಳೂ ಕೆಟ್ಟ ಕಹಿ. ಆದರೂ ತೋಟದ ಸೊಪ್ಪಿನ ಜೊತೆ ಬಂದ ಎಳೆ ಚಿಗುರು ಕೆಲವೊಮ್ಮೆ ದನಗಳ ಬಾಯಿಗೆ ಹೋಗುವುದುಂಟು. ಹಾಗಾಗಿದ್ದರಿಂದ ನಮಗೂ ಒಂದು ‘ಕಹಿ’ ಅನುಭವ ಆಯಿತು.ಸೋಂಕಿನ ಬಗ್ಗೆ ಏನೆಲ್ಲ ಎಚ್ಚರಿಕೆ ವಹಿಸಿಯೂ ನಮ್ಮ ಪುಟ್ಟ ಮಗು ಪದೇಪದೇ ಆಮಶಂಕೆ ಬಾಧೆಯಿಂದ ನರಳುತ್ತಿತ್ತು. ಸ್ವಚ್ಛತೆಯ ಹಲವು ಕ್ರಮಗಳನ್ನು ಕೈಗೊಂಡು, ಏನೆಲ್ಲ ತಪಾಸಣೆ ಮಾಡಿಸಿದರೂ ಹಲವು ಬಾರಿ ಶುರುವಾಗುತ್ತಿದ್ದ ಆಮಶಂಕೆಯಿಂದ ನಾವು ಕಳವಳಗೊಂಡಿದ್ದೆವು. ಒಮ್ಮೆ ಕೃಷ್ಣನೇ ಗಮನಿಸಿದ; ಕಾಫಿ ಕಹಿಯಿರುವಾಗಲೆಲ್ಲ ಮಗುವಿಗೆ ಆಮಶಂಕೆ ಶುರುವಾಗುತ್ತಿತ್ತು ಎಂದು. ಹೌದು! ಹಾಲು, ಕಾಫಿ ಕಹಿಯಿರುವಾಗಲೇ ಮಗುವಿಗೂ ಭೇಧಿ ಶುರುವಾಗುತ್ತಿತ್ತು. ಹಾಲು ಕೊಡುತ್ತಿದ್ದ ಮುಕ್ತಕ್ಕನ ಬಳಿ ಹೀಗೆಂದು ತಿಳಿಸಿದ್ದೇ ಹೇಳಿಬಿಟ್ಟಳು; ‘ಗಂಟಿ ಎಲ್ಲೋ ಕಾಸನ ಸೊಪ್ಪು ತಿಂದಿರಬೇಕು, ಅದಕ್ಕೇ ಹಾಗಾಗ್ತಿದೆ’ ಎಂದು. ಅವಳು ಹೇಳಿದ್ದು ಸರಿಯಾಗಿತ್ತು. ಮಗುವಿಗೆ ಹಾಲು ಕುಡಿಸುವುದಕ್ಕಿಂತ ಮುಂಚೆ ನಾವೊಮ್ಮೆ ಕುಡಿದು ನೋಡಿ, ಕಹಿಯಿದ್ದರೆ ಹಾಲು ಕುಡಿಸುವುದು ನಿಲ್ಲಿಸಿದೆವು. ಆಗ ಮಗುವಿನ ಆಮಶಂಕೆ ನಿಂತಿತು! ದನ ತಿಂದ ಹಿಡಿ ಸೊಪ್ಪಿಗೆ ಪೂರಾ ಹಾಲೇ ಕಹಿಯಾಗುವುದಾದರೆ, ಆ ಹಾಲಿನಿಂದ ತಯಾರಿಸಿದ ಕಾಫಿ, ಮೊಸರು, ಮಜ್ಜಿಗೆಯೂ ಕಹಿಯಾಗಬೇಕಾದರೆ, ಆ ಸೊಪ್ಪು ಇನ್ನೆಷ್ಟು ಕಹಿಯಿರಬೇಡ?! ಕಾಸರಕ ಮರ ಹೂ ಬಿಡುವ ಕಾಲದಲ್ಲಿ ತಯಾರಾಗುವ ಜೇನೂ ಕಹಿಯಂತೆ! ಅದು ಹಲವು ಕಾಯಿಲೆಗೆ ದಿವ್ಯೌಷಧವಂತೆ!ಬರೀ ಕಹಿಯಷ್ಟೇ ಆಗಿದ್ದರೆ ಕಾಸನಮರದ ಬಗ್ಗೆ ಇಷ್ಟು ವಿವರಣೆ ಬೇಕಿರಲಿಲ್ಲ. ಇದು ಘೋರ ವಿಷವೂ ಹೌದು.
ಕೆಲವು ವರ್ಷಗಳ ಕೆಳಗೆ ಊರತುಂಬ ಬೀಡಾಡಿ ನಾಯಿಗಳಾಗಿಬಿಟ್ಟಿದ್ದವು. ಹುಚ್ಚು ಹಿಡಿದ ಕೆಲವು ನಾಯಿಗಳು ಮನುಷ್ಯರಿಗೂ, ಮೇಯಲು ಹೋದ ದನಕರುಗಳಿಗೂ ಎಗ್ಗಿಲ್ಲದೇ ಕಚ್ಚಿದವು. ಹಲವು ದನಕರುಗಳು ಶಂಕಿತ ಹುಚ್ಚುನಾಯಿ ಕಡಿತಕ್ಕೊಳಗಾಗಿ ಸತ್ತವು. ಆ ದನ ಸಾಕಿದ ಮನೆಯವರು ರೇಬೀಸ್ ಇಂಜೆಕ್ಷನ್ ತೆಗೆದುಕೊಂಡರೂ ತಮಗೆಲ್ಲಿ ಹುಚ್ಚುನಾಯಿ ಕಾಯಿಲೆ ಬಂದೀತೋ ಎಂದು ಜೀವಭಯದಲ್ಲಿ ಬದುಕಿದರು. ಆರಾಮಿಲ್ಲದ ದನಗಳ ಹಾಲು ಕುಡಿದವರೂ ಬಿಳಿಚಿಕೊಂಡರು. ಬೀಡಾಡಿ ನಾಯಿಗಳನ್ನು ಹಿಡಿಸಿ ಕೊಲ್ಲಿ ಎಂದು ಗ್ರಾಮಸ್ಥರು ಕೊಟ್ಟ ದೂರು ಅರ್ಜಿಗಳು ಪಂಚಾಯ್ತಿಯ ಕಸದ ಬುಟ್ಟಿ ಸೇರಿದಾಗ ಬೇಸತ್ತ ಊರಜನ, ಒಂದು ಗಾಂವ್‌ಟಿ ವಿಧಾನಕ್ಕೆ ಇಳಿದರು. ಇಲಿ ಹೆಗ್ಗಣಗಳನ್ನು ಕೊಲ್ಲಲು ಲಾಗಾಯ್ತಿನಿಂದ ಬಳಕೆಯಲ್ಲಿರುವ ವಿಧಾನವಂತೆ ಅದು. ಕಾಸರಕನ ತೊಪ್ಪೆ ತಂದು, ಸಣ್ಣಗೆ ಕುಟ್ಟಿ ಪುಡಿ ಮಾಡಿ, ಬೆಲ್ಲದ ಜೊತೆ ಸೇರಿಸಿ ಉಂಡೆ ಮಾಡಿದರು. ಬೆಲ್ಲದ ಪರಿಮಳಕ್ಕೆ ಕಹಿಯನ್ನು ಗ್ರಹಿಸದ ನಾಯಿಗಳು ಉಂಡೆ ತಿಂದವು. ಹತ್ತಿಪ್ಪತ್ತು ನಿಮಿಷಗಳಲ್ಲಿ ಕೈಕಾಲು ಸೆಟೆಸಿ ಬಾಯಲ್ಲಿ ಜೊಲ್ಲು ಸುರಿಸಿ ಪ್ರಾಣ ಬಿಟ್ಟವು. ತೀರ ನೋವು ರಹಿತ ಕೊಲೆ! ಆ ವರ್ಷ ಒಮ್ಮೆಗೇ ಹಾದಿಬೀದಿ ಮೇಲೆಲ್ಲ ನಾಯಿಗಳು ಸತ್ತುಬಿದ್ದಿದ್ದು ನೋಡಿ ಏಕೆಂದು ವಿಚಾರಿಸಿದಾಗ ಈ ಸಂಗತಿ ತಿಳಿಯಿತು.
ಆಗ ನಾವು ಕಾಸರಕನ ಬಗ್ಗೆ ಸ್ವಲ್ಪ ಬೊಟಾನಿಕಲ್ ಮಾಹಿತಿ ಸಂಗ್ರಹಿಸಿದೆವು. ‘ಹಸಿರು ಹೊನ್ನು’ ತೆಗೆದೆವು. ಆಗ ತಿಳಿದಿದ್ದು- ಇದು ಸ್ಟ್ರೈಕ್ನಾಕ್ಸ್ ನಕ್ಸ್ವಾಮಿಕ. ನಮಗೆ ತಿಳಿದಿರುವ ಹಲವು ತೀಕ್ಷ್ಣ ವಿಷಗಳಲ್ಲಿ ಇದೂ ಒಂದು. ಈ ಮರದ ಎಲ್ಲ ಭಾಗಗಳು ಹಲವು ಆಲ್ಕಲಾಯ್ಡುಗಳನ್ನು ಹೊಂದಿದ್ದು ವಿಷಪೂರಿತವಾಗಿವೆ. ಅವುಗಳಲ್ಲಿ ಸ್ಟ್ರೈಕ್ನಿನ್ ಹಾಗೂ ಬ್ರೂಸೀನ್ ಎಂಬೆರೆಡು ಅತಿತೀಕ್ಷ್ಣವಾದವು. ಇದನ್ನು ಸೇವಿಸಿದ ಕೆಲ ನಿಮಿಷಗಳಲ್ಲಿ ದೇಹದ ಸ್ನಾಯುಗಳೆಲ್ಲ ನಿಶ್ಚೇಷ್ಟಿತವಾಗಿಬಿಡುತ್ತವೆ. ಉಸಿರಾಟದ ಸ್ನಾಯುಗಳು ಬೇಗನೇ ಪರಿಣಾಮಕ್ಕೊಳಗಾಗುವುದರಿಂದ ತತ್ ಕ್ಷಣದ ಸಾವು ಬರುತ್ತದೆ. ಅತಿ ಕಡಿಮೆ ಪರಿಮಾಣಗಳಲ್ಲಿ ಹೋಮಿಯೋಪತಿ ವೈದ್ಯರು ಇದನ್ನು ಔಷಧವಾಗಿಯೂ ಬಳಸುತ್ತಾರೆ. ಆಧುನಿಕ ವೈದ್ಯಕೀಯ ಪದ್ಧತಿಯಲ್ಲೂ ಅಪರೂಪದ ನರಸಂಬಂಧಿ ಕಾಯಿಲೆಗಳಿಗೆ ಬಳಸುತ್ತಾರೆ.
ಬೆಳಗಿನ ನಮ್ಮ ವಾಯುವಿಹಾರದ ದಾರಿಯಲ್ಲಿ ಘಮಘಮಿಸುವ ಕಾಡುಮಲ್ಲಿಗೆ ಬಳ್ಳಿಗಳ ಜೊತೆಯೇ ಕಾಸರಕನ ಮರಗಳಿವೆ. ಪರಿಮಳದ ದಾರಿಗೆ ಕಹಿ ವಿಷದ ಬೇಲಿ? ಆ ಗುಡ್ಡದ ತಲೆಯಲ್ಲಿರುವ ಸವರಿದ ಕಾಸರಕನ ಬೊಡ್ಡೆಗಳ ಮೇಲೆ ನವಿಲು ಯಾವಾಗಲೂ ಕೂತಿರುತ್ತದೆ. ಮಧ್ಯಮ ಎತ್ತರದ, ಹೆಚ್ಚು ರೆಂಬೆ ಕೊಂಬೆಗಳಿಲ್ಲದ ಈ ಮರದ ಬೊಡ್ಡೆ, ತನ್ನ ಉದ್ಧ ಪುಚ್ಛದ ಬಾಲ ಇಳಿಸಿ ಕೂರಲು, ಕೂತಲ್ಲಿಂದ ಹಾರಲು ನವಿಲಿಗೆ ಅನುಕೂಲಕಾರಿಯಾಗಿರಬಹುದು. ಈ ಕಾಸರಕನ ಮರ ಮಹಾ ಟೊಳ್ಳು. ಹಾಗಾಗಿಯೇ ಅದರ ಮೈಮೇಲೆ ಸಕಲೆಂಟು ಜಾತಿಯ ಬಂದಳಿಕೆಗಳೂ ಬೆಳೆಯುತ್ತವೆ. ಕೆಲವು ಕಡೆ ಇದು ಕಾಸನ ಮರವೇ ಸುಳ್ಳು ಎಂಬಷ್ಟು ಬಂದಳಿಕೆ ಜಾತಿಯ ಮರ-ಬಳ್ಳಿಗಳು ಅದರ ಮೈಮೇಲೆಲ್ಲ ಹರಡಿ ಬೆಳೆದು ಮರವನ್ನೇ ನಾಶ ಮಾಡುವುದೂ ಇರುತ್ತದೆ. ಅದರಲ್ಲಿ, ‘ಸೀತಾಳೆ ಹೂವು’ ಎಂಬ, ಸುವಾಸನೆಯಿಲ್ಲದಿದ್ದರು ಸುಂದರವಾದ ಹೂವೊಂದು(ಆರ್ಕಿಡ್) ಮಳೆಗಾಲದಲ್ಲಿ ಇದರ ಒಡಲಲ್ಲಿ ಅರಳುತ್ತದೆ. ಚಿಗುರಿ ನಳನಳಿಸುತ್ತಿರುವ ಅಚ್ಚಹಸಿರು ಗಿಡದಲ್ಲಿ ಗೊಂಚಲು ಗೊಂಚಲಾಗಿ ಇಳಿಬಿದ್ದಿರುವ ಹೂವನ್ನು ನೋಡಿದರೆ ಗಂಡಸಿಗೂ ಹೂ ಮುಡಿಯುವಾಸೆಯಾಗಬಹುದು! ಅಷ್ಟು ಚಂದದ ತಿಳಿಗುಲಾಬಿ ಬಣ್ಣದ ಹೂವು. ಅಷ್ಟಕ್ಕಾಗಿ ನನಗೆ ಈ ಗಿಡ ಅತ್ಯಂತ ಅಪ್ಯಾಯಮಾನ! ಆದರೆ, ಮೇಲೆ ಹೇಳಿದ ಹಬ್ಬದ ದಿನದ ದುರ್ಘಟನೆ ನಡೆದ ನಂತರ, ವಾಯುವಿಹಾರದ ವೇಳೆ, ಕಣ್ಣಿಗೆ ಕಂಡ ಚಿಗುರನ್ನೆಲ್ಲ ಚಿವುಟಿ ತಿನ್ನುವ ನನ್ನ ಚಟಕ್ಕೆ ‘ಅವನು’ ವಿರಾಮ ಹಾಕಿದ್ದಾನೆ!
‘ಕಾಸರಕ ಪುರಾಣ’ವು ಇಲ್ಲಿಗೆ ಪರಿಸಮಾಪ್ತಿಯು.
3. ಕವಲಕ್ಕಿ ಡಾಕ್ಟರಮ್ಮ ಬರೆದ ಜಾತ್ರೆ ತೇರು ವಾಂತಿ ಭೇದಿ ಕಥೆ
ವೆಂಕ್ಟ ತೂರಾಡುತ್ತಾ ಹಾಡು ಹೇಳುತ್ತಾ ಜಾತ್ರೆ ಪೇಟೆಯಲ್ಲಿ ತಿರುಗುತ್ತಿದ್ದದ್ದನ್ನು ಮಕ್ಕಳ ಜೊತೆ ತೇರಿಗೆ ಹೋಗಿದ್ದ ನಾನೂ ನೋಡಿದ್ದೆ. ಅವನ ಖುಷಿಗೆ ಭಂಗ ತರಲು ಇಚ್ಛಿಸದೇ ಬೇರೆ ಕಡೆ ತಿರುಗಿ ಹೊರಟರೂ, ನನ್ನ ಮುಖ ನೋಡಿದ್ದೇ ದೊಡ್ಡ ಹುಕಿಯಲ್ಲಿ ಹತ್ತಿರ ಬಂದ. ‘ಓ ಅಮಾ, ನಮ್ಮೂರ ತೇರಿಗೆ ಬಂದ್ರೇನ್ರೋ? ತಂಗಿ, ತೇರು ನೋಡ್ದ್ಯಾ? ಕಡಿಗೆ ಹರಿಚಂದ್ರ ಚರಿತ್ರೆ ಅಂಬೋ ಆಟ ಇತ್ತು, ನೋಡ್ಕಂಡೇ ಹೋಗಿ. ಚಲಚಲೋ ಬಳಿ ಬಂದಿದ್ವು ಅಂದ್ವಪ ನಮ್ ಹೆಣಮಕ್ಳು, ತಂಗಿ ಬಳಿ ತಕಾ ಹ್ಞಾಂ?’ ಎಂದೆಲ್ಲ ಉಪಚಾರದ ಮಾತುಗಳನ್ನಾಡಿದ್ದ. ಆ ಕಡೆ ಈ ಕಡೆ ಕಾಲು ಹಾಕಿ ವಾಪಸ್ ಮನೆಗೆ ಹೊರಡುವಾಗ ಅದೆಲ್ಲಿದ್ದನೋ ಪ್ರತ್ಯಕ್ಷನಾಗಿ ಒಂದು ಕೊಟ್ಟೆ ತುಂಬಾ ಜಿಲೇಬಿ ತುಂಬಿ ತಂದುಕೊಟ್ಟಿದ್ದ. ಅಂತಾ ವೆಂಕ್ಟ ಜಾತ್ರೆಯ ಸಡಗರದ ಪೇಟೆ ಇನ್ನೂ ಹೋಗಿಲ್ಲ, ಆಗಲೇ ಆ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಿದ್ದಾನೆ!
ವಾಂತಿ-ಭೇಧಿಯಾಗಿ ಅವನ ದೇಹದ ನೀರಿನ ಅಂಶವೆಲ್ಲ ಸೋರಿಹೋಗಿ ಚರ್ಮ ಸುಕ್ಕುಗಟ್ಟಿದೆ. ಕಣ್ಣುಗಳು ಆಳ ಗುಳಿಬಿದ್ದಿವೆ. ಸಣ್ಣ ದನಿಯಲ್ಲಿ ನರಳುತ್ತಿದ್ದಾನೆ. ಕೊಟ್ಟರೆ ಒಂದು ಕೊಡ ನೀರನ್ನು ಕುಡಿದೇ ಬಿಡುವವನಂತೆ ಬಾಯಾರಿಕೆಯಿಂದ ತುಟಿ ಸವರಿಕೊಳ್ಳುತ್ತಿದ್ದಾನೆ. ಹೆಂಡ-ಮಿರ್ಚಿಬಜಿ ಹೆಚ್ಚಾಗಿ ವಾಂತಿಯಾಗುತ್ತಿರಬಹುದೆಂದು ಭಾವಿಸಿ ಅವನ ಮನೆಯವರು ಆಸ್ಪತ್ರೆಗೆ ತರಲಿಲ್ಲವಂತೆ. ಈಗ ಎದ್ದು ಹೋಗಲೂ ತ್ರಾಣವಿಲ್ಲದೇ ಎಲ್ಲ ಮಲಗಿದಲ್ಲೇ ಆಗುತ್ತಿರುವಾಗ ಅವನಿಗೆ ಉಟ್ಟ ಕಚ್ಚೆಯ ತುಂಡಿನ ಮೇಲೂ ಜ್ಞಾನವಿಲ್ಲ. ನಾಡಿ ನಾಪತ್ತೆ, ಬಿಪಿ ಪಾತಾಳದಲ್ಲಿ. ಒಮ್ಮೆ ಅಡ್ಮಿಟ್ ಮಾಡಿ ಸಲೈನು ಏರಿಸಿ ನೋಡುವ ಎಂದು ಇಟ್ಟುಕೊಂಡೆವು. ಉಂಡದ್ದು ಕುಡಿದದ್ದು ಕ್ಷಣಮಾತ್ರವೂ ಹೊಟ್ಟೆಯಲ್ಲಿ ನಿಲ್ಲದೇ, ಲೀಟರುಗಟ್ಟಲೇ ವಾಂತಿ, ಗಳಿಗೆಗೊಮ್ಮೆ ಚೊಂಬುಗಟ್ಟಲೇ ಭೇದಿಯಾಗುತ್ತಾ, ಎಷ್ಟು ಬಾಟಲು ಸಲೈನು ಏರಿಸಿದರೂ ತೃಪ್ತಿ ಹೊಂದದ ಅವನ ದೇಹ ಕೊನೆಗೆ ಮೂತ್ರ ತಯಾರಿಯನ್ನು ಬಂದ್ ಮಾಡಿ ಕುಳಿತುಬಿಟ್ಟಿತು. ಅರೆ ಪ್ರಜ್ಞಾವಸ್ತೆ ತಲುಪಿದ ಅವನ ಮೂತ್ರಕೋಶ ವೈಫಲ್ಯ, ಮಂಗಳೂರು ಮುಟ್ಟಿ ಡಯಾಲಿಸಿಸ್ ಆದ ಮೇಲೆಯೇ ಸರಿಹೋಗಿದ್ದು.
ಆಗ ಕಾಯಿಲೆ ಬಿದ್ದ ವೆಂಕ್ಟ ಸರಿಯಾಗಿ ಸುಧಾರಿಸಿಕೊಳ್ಳಲು ಹತ್ತಿರ ಹತ್ತಿರ ಒಂದು ತಿಂಗಳೇ ಬೇಕಾಯಿತು. ಸಿಕ್ಕಸಿಕ್ಕಲ್ಲಿ ಎತ್ತಿದ ಸಾಲದ ಹೊರೆ ಕೆಳಗಿಳಿಸಿಕೊಳ್ಳಲು ಹಲವು ವರ್ಷಗಳೇ ಬೇಕಾದವು. ಅವನ ಹಿಂದೆ ಮುಂದೆ ಅವನ ಊರಿನ ಹಲವರು ಇದೇ ಕಾಯಿಲೆಗಾಗಿ ಆಸ್ಪತ್ರೆ ನೋಡಿ ಬಂದರು. ಮಕ್ಕಳು ಮುದುಕರೆನ್ನದೇ ಕೃಶರಾದರು. ಪ್ರತಿ ವರ್ಷದ ಸಾಧಾರಣ ವಾಂತಿ ಭೇದಿಯಲ್ಲ ಇದು, ಈ ವರ್ಷ ಕಾಲರಾ ಬಂದಿದೆ ಎಂದು ಸರ್ಕಾರಿ ಅಧಿಕಾರಿಗಳು ಘೋಷಿಸಿ ಮನೆಮನೆಗೂ ಬಾವಿಗೆ ಹಾಕಿರೆಂದು ಬ್ಲೀಚಿಂಗ್ ಪೌಡರ್ ಪೊಟ್ಟಣ ಕೊಟ್ಟು ಹೋದರು. ಯಾವುದೋ ಹೊಸ ಕಾಯಿಲೆಯ ಹೆಸರು ಕೇಳಿ ಜನ ಹೆದರಿದಂತೆ ಕಂಡರೂ, ‘ಕುಡಿಯೂ ನೀರೆಲ್ಲ ಗೌಲು ವಾಸ್ನಿ’ ಮಾಡುತ್ತದೆಂದು ಬಹಳಷ್ಟು ಜನ ಆ ಪೌಡರನ್ನು ಹಾಗೇ ಗೊಬ್ಬರ ಗುಂಡಿಗೆ ಬಿಸಾಡಿದರು.
*******
ಜನವರಿ-ಫೆಬ್ರುವರಿ-ಮಾರ್ಚಿ ತಿಂಗಳು ಬಂತೆಂದರೆ ಎಲ್ಲ ಕಡೆ ಜಾತ್ರೆ, ತೇರು, ಮೇಳ, ಫೀಸ್ಟು, ವರ್ಧಂತಿಗಳ ಕಾಲ ಬಂತೆಂದೇ ಲೆಕ್ಕ. ಹಳ್ಳಿಗಳಲ್ಲಿ ನೆಂಟರಿಷ್ಟರೆಲ್ಲ ಒಟ್ಟು ಸೇರುವ ಈ ಉತ್ಸವಗಳಿಗೆ ಇನ್ನಿಲ್ಲದ ತಯಾರಿ ನಡೆಸುತ್ತಾರೆ. ಮುಂಚೆ ಒಂದು ಕಾಲವಿತ್ತು – ಹೆಂಗಸರು ತಮ್ಮ ಖಾಸಗಿ ಬಳಕೆಯ ಎಲ್ಲ ಸಾಮಗ್ರಿಗಳನ್ನೂ ಜಾತ್ರೆಯಲ್ಲೇ ಶಾಪಿಂಗ್ ಮಾಡುತ್ತಿದ್ದದ್ದು. ಅಡುಗೆ ಒಲೆಯಿಂದ ಹಿಡಿದು ಚೆಂದಚೆಂದದ ಬಳೆ ಟೇಪುಗಳವರೆಗೆ ತಮಗೆ ಬೇಕಾದ್ದನ್ನು ಕೊಳ್ಳುವುದಕ್ಕೆ ಅವರಿಗೆಲ್ಲ ಅದೊಂದು ಸುವರ್ಣಾವಕಾಶ. ಈಗ ಬದಲಾದ ಕಾಲದಲ್ಲಿ ಎಲ್ಲ ಗೃಹ ಬಳಕೆಯ, ಅಲಂಕಾರದ ವಸ್ತುಗಳೂ ಸುಲಭವಾಗಿ ಅಂಗಡಿಗಳಲ್ಲಿ ಸಿಕ್ಕರೂ; ಜಾತ್ರೆ ಪೇಟೆಯಲ್ಲಿ ತಿರುಗುತ್ತಾ, ಅಲ್ಲಿ ಒಬ್ಬರಿಗೊಬ್ಬರು ಪರಿಚಯಸ್ಥರ ಜೊತೆ ಮಾತನಾಡಿಸುತ್ತಾ, ಆಕರ್ಷಕವಾಗಿ ಕಂಡದ್ದನ್ನೆಲ್ಲ ಕಣ್ಣು ತುಂಬಿಕೊಳ್ಳುತ್ತ, ಮುಟ್ಟಿ ನೋಡುತ್ತಾ, ಸಾಧ್ಯವಾದರೆ ಕೊಳ್ಳುತ್ತಾ, ಕಿಸೆ ಖಾಲಿಯಾಗುವುದನ್ನೂ ಲೆಕ್ಕಿಸದೇ ಕೊಂಡು ಏನೋ ಸಂತೋಷ ಹೊಂದುತ್ತಾರೆ. ಇಂತಹ ಜಗಮಗಿಸುವ ರಾತ್ರಿಗಳಲ್ಲಿ ತೇಲುತ್ತಾ ಅರೆಗಣ್ಣಿನಲ್ಲಿ ಒಂದು ಯಕ್ಷಗಾನ ಆಟ ಅಥವಾ ನಾಟಕ ನೋಡಲು ಅದೆಷ್ಟೋ ದಿನಗಳಿಂದ ಮನೆಯ ಗಂಡಸರು ಪ್ಲಾನು ಹಾಕಿ ಕಾಯುತ್ತಿರುತ್ತಾರೆ. ಹೀಗೆ ಜಾತ್ರೆ-ಖರ್ಚು ಎಂಬುದು ವರ್ಷದ ರಿವಾಜಾಗಿ, ಆ ದಿನಗಳನ್ನೇ ಎದುರು ನೋಡುತ್ತಾ ತಯಾರಿ ನಡೆಸುವವರು ಈಗಲೂ ಬಹಳ ಜನ ಕಾಣಸಿಗುತ್ತಾರೆ. ಇವು ನೂರಾರು ಜನರನ್ನು ಒಟ್ಟುಕೂಡಿಸುವಂತೆಯೇ ಹಲವು ಅನಾರೋಗ್ಯಕ್ಕೂ ಕಾರಣವಾಗುವುದು ಆತಂಕದ ಸಂಗತಿ.
ಜಾತ್ರೆ ಪೇಟೆ ಎಂದರೆ ಸಾಧಾರಣವಾಗಿ ಹೀಗಿರುತ್ತದೆ; ರಥ ಎಳೆಯುವ ಎರಡೂ ಕಡೆ ಹತ್ತು ಹಲವು ಮಡ್ಲು ಮಾಡಿನ ಅಂಗಡಿಗಳು ತಲೆಯೆತ್ತಿರುತ್ತವೆ. ಹಳ್ಳಿಯ ಜನರಿಗೆ ಬಳೆ-ಚಪ್ಪಲಿ-ಬಟ್ಟೆಯಿಂದ ಹಿಡಿದು ಐಸ್ ಕ್ರೀಂ- ಗೋಬಿ ಮಂಚೂರಿ- ಜಿಲೇಬಿಯ ತನಕ ಎಲ್ಲವನ್ನೂ ತೆರೆದಿಟ್ಟು ಆಮಿಷ ತೋರಿಸುತ್ತವೆ. ಜನರ ಓಡಾಟದಿಂದ ಧೂಳೆದ್ದು ಆ ವಸ್ತುಗಳ ಮೇಲೆಲ್ಲ ತೆರೆಯೆಳೆದಿದ್ದರೂ ಯಾರಿಗೂ ಧೂಳಿನ ಪರಿವೆಯೇ ಇಲ್ಲ. ಸಾಲು ಸಾಲು ಅಂಗಡಿಗಳ ಕೊನೆಗೆ ಬಯಲಲ್ಲಿ ಒಂದು ಆಟದ ಮೇಳದ ಟೆಂಟ್. ಜಾತ್ರೆಯ ಅಂಗಡಿಗಳು ಐದಾರು ದಿನವಾದರೂ ಇರುವುದುಂಟು. ದೂರದೂರುಗಳಿಂದ ಬಂದ ವ್ಯಾಪಾರಿಗಳು ಅಲ್ಲೇ ಉಳಿದುಕೊಳ್ಳುತ್ತಾರೆ. ಅವರೆಲ್ಲ ಅಲ್ಲೇ ತಿಂದು, ಉಗುಳಿ, ಉಂಡು, ಅಲ್ಲೇ ವ್ಯಾಪಾರ ಮಾಡಿ, ಅಲ್ಲೇ ಹೊಟ್ಟೆ ಖಾಲಿ ಮಾಡುವುದರಿಂದ ಅಂಗಡಿಗಳ ಹಿಂದಿರುವ ಜಾಗ ಜಾತ್ರೆ ಮುಗಿಯುವ ವೇಳೆಗೆ ತಿಪ್ಪೆಗುಂಡಿಯಾಗಿರುತ್ತದೆ.
ಈ ಜಾತ್ರೆ ನೆರೆಯುವ ಕಾಲವೇ ನೊಣಗಳ ವಂಶಾಭಿವೃದ್ಧಿ ಕಾಲವೂ ಆಗಿರುವುದರಿಂದ ಎಲ್ಲೆಲ್ಲಿ ಹೊಲಸು, ಕೊಳಕು ತುಂಬಿದೆಯೋ ಅಲ್ಲೆಲ್ಲ ನೊಣಗಳು ಇರುತ್ತವೆ. ನೊಣಗಳು ಕೊಳಕುತನದ ಸೂಚಕಗಳು. ಕೊಳೆಯುವ ವಸ್ತುಗಳಿರುವ ಕಡೆ ಅವು ಕುಳಿತು ಮೊಟ್ಟೆಯಿಡುತ್ತವೆ. ಎಂಟು ಹತ್ತು ದಿನಗಳಲ್ಲಿ ಹೊಸಮರಿಗಳು ಹಾರಿ ಅವುಗಳ ವಂಶ ಬೆಳೆಯುತ್ತಾ ಹೋಗುತ್ತದೆ. ಈ ನೊಣಗಳೇ ಹೊಲಸಿನ ಮೇಲೂ ಕುಳಿತು, ತೆರೆದಿಟ್ಟ ಆಹಾರ ಪದಾರ್ಥಗಳ ಮೇಲೂ ಕೂರುವುದರಿಂದ ಅವುಗಳ ಕಾಲು ಸರ್ವರೋಗವಾಹಕಗಳಾಗುತ್ತವೆ. ಮಲದಲ್ಲಿ ವಿಸರ್ಜಿತವಾಗುವ ಹಲವು ಬ್ಯಾಕ್ಟೀರಿಯಾ, ವೈರಸ್, ಜಂತುಮೊಟ್ಟೆಗಳು ಮರಳಿ ಮನುಷ್ಯನ ಹೊಟ್ಟೆ ಸೇರುವುದು ಹೀಗೆಯೇ. ಕಾಲರಾ ಮೊದಲು ಭಯಂಕರವಾಗಿ ಹರಡುತ್ತಿದ್ದದ್ದು ಈ ಕಾರಣದಿಂದಲೇ. ಕಲುಷಿತ ಆಹಾರ ಪದಾರ್ಥ ತಿಂದದ್ದೇ ನೆಪವಾಗಿ ಟೈಫಾಯ್ಡ್, ಜಾಂಡೀಸ್, ವಾಂತಿಭೇದಿ, ಪೋಲಿಯೋದಂತಹ ಹಲವು ಖಾಯಿಲೆಗಳು ಶುರುವಾಗುತ್ತವೆ. ನೊಣಗಳ ಬಗ್ಗೆ ಒಂದು ಪ್ರಖ್ಯಾತ ಇಂಗ್ಲಿಷ್ ಹೇಳಿಕೆಯಿದೆ- ದೇವರು ತನ್ನ ಬುದ್ಧಿವಂತಿಕೆಯಿಂದ ನೊಣಗಳನ್ನು ಸೃಷ್ಟಿಸಿದ, ಕೊನೆಗೆ ಅವನ್ನು ಸೃಷ್ಟಿಸಿದ್ದೇಕೆಂದು ನಮಗೆ ಹೇಳಲು ಮರೆತ! ಎಂದು. ಅವು ಹರಡುವ ಖಾಯಿಲೆಗಳ ಬಗ್ಗೆ ಓದಿದ ಮೇಲಂತೂ ದೇವರು ಅವನ್ನೇಕೆ ಸೃಷ್ಟಿಸಿದೆ ಎಂದೇ ಮರೆತನೇನೋ ಎನಿಸುತ್ತದೆ. ಕೇವಲ ೧೫ರಿಂದ ೨೫ ದಿನ ಬದುಕುವ ನೊಣಗಳು ಒಮ್ಮೆಗೆ ೧೦೦-೧೫೦ ಮೊಟ್ಟೆಗಳನ್ನಿಡುತ್ತವೆ ಹಾಗೂ ತಮ್ಮ ಅಲ್ಪ ಜೀವಿತಾವಧಿಯಲ್ಲಿ ವಂಶಜರ ಸಂಖ್ಯೆಯನ್ನು ಲಕ್ಷಗಟ್ಟಲೆ ಬೆಳೆಸುತ್ತವೆ ಎಂದರೆ ಆ ಪುಟ್ಟ ಜೀವಿಗಳಿಗಿರುವ ಶಕ್ತಿ ಊಹಿಸಬಹುದು.
ಹೀಗೆ ಜನರೆಲ್ಲ ಒಟ್ಟು ನೆರೆದು ಖುಷಿಯಿಂದ ಆಚರಿಸಬೇಕಾದ ಉತ್ಸವಗಳು ಕೊನೆಗೆ ಮಾರಕ ಖಾಯಿಲೆಗಳಿಗೆ ಆಹ್ವಾನ ನೀಡಿ ಕೊನೆಗೊಳ್ಳುವುದು ವಿಪರ್ಯಾಸವೇ ಸರಿ. ಮೊದಲೇ ಸಂಭ್ರಮಾಚರಣೆಗಳಿಂದ ಖಾಲಿಯಾದ ಕಿಸೆಯನ್ನು ಮತ್ತೂ ಬರಗಿ, ಸಾಲ ಮಾಡಿ, ಚಿಕಿತ್ಸೆ ಪಡೆದು ಜೀವ ಉಳಿಸಿಕೊಳ್ಳುವಂತಾದ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.
ಜಾತ್ರೆ- ಮೇಳಗಳನ್ನು ಬರಖಾಸ್ತುಗೊಳಿಸಿದರೆ ಒಳ್ಳೆಯದೆಂದು ಹೇಳುವುದು ನನ್ನ ಉದ್ದೇಶವಲ್ಲ. ಸಡಗರದ ಜಾತ್ರೆ ಬೇಕು, ಅಲ್ಲಿ ಆರೋಗ್ಯಕ್ಕೆ ಹಾನಿಯಾಗುವಂತಹದನ್ನು ನಿಯಂತ್ರಿಸಬೇಕು.
********
ಭಾರತ ಉಪಖಂಡಕ್ಕೇ ಒಂದು ಅನನ್ಯತೆ ಇದೆ. ಇಲ್ಲಿ ಮಾತ್ರವೇ ಶೌಚಕ್ಕೆ ಕೈಗಳನ್ನು ಬಳಸುವುದು ಎಂದು ಎಲ್ಲೋ ಓದಿದ ಹಾಗಿದೆ. ಗ್ರಾಮೀಣ ಪ್ರದೇಶದ ಹೆಚ್ಚು ಜನ ಈಗಲೂ ಶೌಚಕ್ಕೆ ಬಯಲು-ಗುಡ್ಡವನ್ನೇ ನಂಬಿದ್ದಾರೆ. ಕೆಲವರಿಗೆ ನಾಲ್ಕು ಗೋಡೆಯ ನಡುವೆ ಕುಳಿತರೆ ಏನು ಮಾಡಿದರೂ ಸಾಧ್ಯವಾಗದು. ಆಸ್ಪತ್ರೆಯಲ್ಲಿ ದಾಖಲಾದ ಎಷ್ಟೋ ಹಳಬರು ಡಿಸ್ಚಾರ್ಜ್ ಆಗಿ ಮನೆಗೆ ಹೋಗುವವರೆಗೆ ಹೊರಹೋಗಲಾಗದೇ ಹಾಗೇ ತಡೆದುಕೊಂಡವರು ಇದ್ದಾರೆ, ಅಥವಾ ನನಗೆ ಗೊತ್ತಿಲ್ಲದೇ ಗುಡ್ಡ ಹತ್ತಿ ಬಂದು ಮಲಗಿದವರೂ ಇದ್ದಾರೆ! ಬಳಸಿದ ಕೈಯನ್ನಾದರೂ ಚೊಕ್ಕ ತೊಳೆದಾರೇ? ಮನೆಗೆ ಬಂದು ಶಾಸ್ತ್ರಕ್ಕೆ ನೀರು ಹಾಕಿಕೊಂಡರೆ ಮುಗಿಯಿತು. ಹೆಚ್ಚೆಂದರೆ ಮಣ್ಣು ಹಾಕಿ ತೊಳೆದಾರು! ನಾನು ಗಮನಿಸಿದಂತೆ ಶೌಚದ ಈ ಅಶುಚಿಯ ಅಭ್ಯಾಸ ಜಾತಿ-ಅಂತಸ್ತಿನ ಭೇಧವಿಲ್ಲದೇ ತುಂಬ ಹಳ್ಳಿಗರಲ್ಲಿ ಈಗಲೂ ಉಳಿದಿದೆ.
ತೊಳೆಯುವ ಆ ಕೈಯ್ಯಾದರೂ ಹೇಗಿದ್ದೀತು? ಕೃಷಿ ಕೆಲಸಕ್ಕೆ ಹೋಗುವ ಹಳ್ಳಿಯ ಜನ ಕೈ ಉಗುರನ್ನು ಹತಾರದಂತೆ ಬಳಸುತ್ತಾರೆ. ಕೈ ಉಗುರನ್ನು ತೀರ ಚುಚ್ಚಲು ಶುರುವಾದಾಗಷ್ಟೇ ಎಲ್ಲೋ ತಿಂಗಳಿಗೊಮ್ಮೆ ಕತ್ತಿಯಲ್ಲಿ ಕೊಯ್ದರಾಯಿತು. ಚಿವುಟಲು, ಮುರಿಯಲು, ಗೆರೆ ಎಳೆಯಲು, ಗುರ್ತು ಮಾಡಲು – ಹೀಗೆ ಬಹೂಪಯೋಗಿಯಾದ ಉಗುರನ್ನು ಹತ್ತ ಕತ್ತರಿಸುವುದುಂಟೆ? ಇನ್ನು ಶಾಲಾ ಕಾಲೇಜು ಮೆಟ್ಟಿಲು ಹತ್ತಿರುವ ಪೋರ ಪೋರಿಯರೋ- ಸಿನೆಮಾ ನಟರಿಗೆ ತಾವೇನು ಕಮ್ಮಿಯಿಲ್ಲವೆಂಬಂತೆ ಉಗುರು ಬೆಳೆಸಿ ‘ಶೂರ್ಪನಖ’ರಾಗಿರುತ್ತಾರೆ. ಕೆಲವರು ತಮ್ಮ ಬುದ್ಧಿವಂತಿಕೆ ತೋರಿಸಲು ಬಲಗೈ ಉಗುರನ್ನು ಹತ್ತ ಕತ್ತರಿಸಿ ಎಡಗೈ ಉಗುರನ್ನು ಬೆಳೆಸುತ್ತಾರೆ! ಕಾಲೇಜು- ಮನೆ ಓಡಾಟ, ಓದಿನಲ್ಲಿ ಈ ಮಕ್ಕಳಿಗೆ ಉಗುರು ಸಂದನ್ನು ಚೊಕ್ಕ ಮಾಡಲು ಅದೆಷ್ಟು ಸಮಯ ಸಿಗಬಹುದು? ಈಗಂತೂ ಕೊಳೆ ಕಾಣದಂತೆ ಹಚ್ಚಲು ಪೇಟೆಯಲ್ಲಿ ಹೊಳೆಹೊಳೆಯುವ ಉಗುರು ಪಾಲಿಶ್ ಗಳು ಲಭ್ಯವಿದ್ದು ಉಗುರು ಬಿಡುವವರಿಗೆ ಕ್ಲೀನಾಗಿ ‘ಕಾಣಿಸಿ’ಕೊಳ್ಳುವುದು ಏನೇನೂ ಕಷ್ಟವಲ್ಲ. ಅವರಿಗೆ ಬೇಜಾರಾದರೂ ಪರವಾಗಿಲ್ಲ ಎಂದು ಸಾಧ್ಯವಾದಾಗೆಲ್ಲ ಆರೋಗ್ಯಪೂರ್ಣ ಶೌಚ ಅಭ್ಯಾಸದ ಬಗ್ಗೆ, ಬೆಳೆದ ಉಗುರು ಹೇಗೆ ರೋಗಾಣುಗಳನ್ನು ಅಡಗಿಸಿಡಬಹುದೆಂಬುದರ ಬಗ್ಗೆ ತಿಳಿಸುತ್ತೇನೆ.
ಅದಕ್ಕೇ ಇರಬೇಕು, ಈಗೀಗ ಶಾಲಾಕಾಲೇಜು ಮಕ್ಕಳು ಆಸ್ಪತ್ರೆಗೆ ಬಂದರೆ ನನ್ನೆದುರು ಕೈಕಟ್ಟಿ ವಿಧೇಯ ವಿದ್ಯಾರ್ಥಿಗಳಂತೆ ನಿಲ್ಲುತ್ತಾರೆ. ಆದಷ್ಟು ಉಗುರು ಕಾಣಿಸದ ಹಾಗೆ ನೊಡಿಕೊಂಡು ಮಾತು ಮುಗಿಸಿ ಹೊರಡುತ್ತಾರೆ!
ಹೋದ ಮಳೆಗಾಲ ಹೊಳೆಸಾಲ ಕೇರಿಯ ಒಂದು ವಿಸಿಟ್‌ಗೆ ಹೋಗಿದ್ದೆ. ಬರುವಾಗ ಡಿಂಗಿಯ ಮೇಲೆ ಕುಳಿತು ಹೊಳೆಬದಿಯಲ್ಲೇ ವಾಪಸ್ ಬಂದಾಯಿತು. ಹೊಳೆಯ ಎರಡೂ ಬದಿ ಅರ್ಧ ಮುಳುಗಿ ನಿಂತ ಜಿಂಕ್ ಶೀಟಿನ ಪುಟ್ಟಪುಟ್ಟ ಗೂಡುಗಳು ಕಂಡವು. ಡಿಂಗಿ ಬಿಡುತ್ತಿದ್ದವನನ್ನು ಅವೇನು ಮುಳುಗಿ ನಿಂತ ಪಂಪ್ ಶೆಡ್‌ಗಳೋ ಅಥವಾ ಅವರವರ ತೋಟದ ಬುಡದ ‘ಜಟಗನ ಮನೆ’ಗಳೋ ಎಂದು ಕೇಳಿದ್ದಕ್ಕೆ ಗಟ್ಟಿ ನಗಾಡಿದ್ದ ಅವನು, ‘ಅದು ಹೊಟ್ಯಾಗಿನ ಜಟಗನ್ನ ಹೊರಕಳಿಸೋ ಮನೇನ್ರೇ ಅಮ್ಮಾ’ ಎಂದಿದ್ದ. ಸಂಡಾಸು ಮನೆಯನ್ನು ಗುರುತು ಹಿಡಿಯದ ನನ್ನ ಮೂರ್ಖತನಕ್ಕೆ ನಾನೇ ನಕ್ಕಿದ್ದೆನಾದರು ಹೊಳೆಸಾಲಲ್ಲಿ ಏಕೆ ಹೀಗೆ ಸಾಲು ಹಿಡಿದು ಕಟ್ಟಿರಬಹುದೆಂದು ತಿಳಿದಿರಲಿಲ್ಲ. ಬೇಸಿಗೆಯಲ್ಲೊಮ್ಮೆ ಹೊಳೆಸಾಲಲ್ಲಿ ನಡೆಯುತ್ತಾ ಗೊತ್ತಾಯಿತು -ಅವರಾರೂ ಸೆಪ್ಟಿಕ್ ಟ್ಯಾಂಕನ್ನೇ ಕಟ್ಟುವುದಿಲ್ಲ! ಬದಲಿಗೆ ಸಂಡಾಸು ಪೈಪನ್ನೇ ಹೊಳೆಗೆ ಬಿಟ್ಟು ಅಷ್ಟು ದುಡ್ಡನ್ನು ಉಳಿಸಿಬಿಡುತ್ತಾರೆ! ಇದು ತಾವು ಕಂಡುಹಿಡಿದ ಹೊಚ್ಚಹೊಸಾ ಕಾಸ್ಟ್ ಕಟ್ಟಿಂಗ್ ವಿಧಾನವೆಂದು ಅವರು ಬಹಳ ಹೆಮ್ಮೆಯಿಂದಲೇ ಹೇಳಿಕೊಂಡರು. ಹಾಗೆ ಹೊಳೆಗೆ ತ್ಯಾಜ್ಯ ಬಿಡುವುದರಿಂದ ಕೆಳಗಲ ಊರಿನ ಜನ ಮಲಿನ ನೀರನ್ನು ಕುಡಿಯಬೇಕಾಗುತ್ತದೆಂದೂ, ಹಾಗೆ ಮಾಡುವುದರಿಂದ ಉಂಟಾಗಬಹುದಾದ ಆರೋಗ್ಯ ಸಂಬಂಧಿ ಅನಾಹುತಗಳ ಬಗ್ಗೆಯೂ ತಿಳಿಸಿ ಹೇಳಿದೆ. ನಾನು ಹೇಳಿದ್ದನ್ನೆಲ್ಲ ಕೇಳಿಸಿಕೊಂಡಂತೆ ಮಾಡಿ ಕೊನೆಗೆ ತಮ್ಮ ವಾದವನ್ನೇ ಮುಂದಿಟ್ಟ ಅವರು ಹೇಳಿದ ಪ್ರಕಾರ, ಸೆಪ್ಟಿಕ್ ಟ್ಯಾಂಕ್ ಕಟ್ಟಿದರೂ ಮಳೆಗಾಲದಲ್ಲಿ ಅದು ಪ್ರಯೋಜನಕ್ಕೆ ಬರುವುದಿಲ್ಲ. ಟ್ಯಾಂಕ್ ತುಂಬ ನೀರು ತುಂಬಿಹೋಗಿ ಕುಸಿದು ಹೋದದ್ದೂ ಇದೆ. ಮನೆ ಕೇರಿಗಳೆಲ್ಲ ಕಣಿವೆಯ ತೋಟದೊಳಗೇ ಇರುವ ಈ ಭಾಗದ ಜನರಿಗೆ ಎತ್ತರದ ಪ್ರದೇಶದಲ್ಲಿ ಪಾಯಿಖಾನೆ ಕಟ್ಟಲು ಜಾಗವೂ ಇಲ್ಲ, ಇಷ್ಟವೂ ಇದ್ದಂತಿಲ್ಲ. ಹಾಗಾಗಿ ಸಂಪೂರ್ಣ ನಿರ್ಮಲ ಗ್ರಾಮ ಎಂಬುದು ಇಲ್ಲೆಲ್ಲ ಇನ್ನೂ ದೂರದ ಮಾತಾಗಿಯೇ ಉಳಿದಿದೆ.
[ಚಿತ್ರಗಳು-ಮಹೇನ್ ಸಿಂಹ]
4.ಕವಲಕ್ಕಿ ಡಾಕ್ಟರಮ್ಮ ಬರೆದ ಕೆಲವು ಅನೀಮಿಯಾ ಕಥೆಗಳು
ಹದಿನೆಂಟು ವರ್ಷಕ್ಕೇ ಮದುವೆಯಾಗಿದ್ದ ಗಂಗೆ ವರ್ಷಕ್ಕೊಂದೊಂದರಂತೆ ಎರಡು ಬಾರಿ ಗರ್ಭಿಣಿಯಾಗಿ ಎರಡು ಬಾರಿಯೂ ಗರ್ಭಪಾತವಾಗಿ ತುಂಬ ನಲುಗಿದಂತೆ ಕಾಣುತ್ತಿದ್ದಳು. ಅವಳ ಎಳೇ ಮುಖ ಬಿಳಿಚಿಕೊಂಡು ಕಾಂತಿಹೀನವಾಗಿ ತೋರುತ್ತಿದ್ದರೂ ಎಳೆತನದ ಕಳೆ ಇನ್ನೂ ಪೂರಾ ಮಾಸಿರಲಿಲ್ಲ. ಅವಳೇ ಮಗುವಿನ ತರ ಇದ್ದಾಳೆ, ಇನ್ನು ಇವಳು ಮಗುವನ್ನು ಹೇಗೆ ಹೊತ್ತು ಹೆತ್ತಾಳೋ ಎಂದು ಗರ್ಭನಿಂತು ಅವಳು ಬಂದಾಗಲೆಲ್ಲ ಅಂದುಕೊಳ್ಳುತ್ತಿದ್ದೆ. ಸಪುರ ಗರಿಕೆ ಹುಲ್ಲಿನಂತೆ ಕಾಣುತ್ತಿದ್ದ ಅವಳಿಗೆ ಗದ್ದೆ ಕೆಲಸ ಭಾರವಾಯಿತೋ, ತೋಟಕ್ಕೆ ನೀರು ತೋಕಿದ್ದು ಹೆಚ್ಚಾಯಿತೋ, ಬೆಟ್ಟಕ್ಕೆ ಕಟ್ಟಿಗೆಗೆ ಹೋದದ್ದು ನೆವವಾಯಿತೋ, ಅಂತೂ ಎರಡು ಸಲವೂ ಮೂರು ತಿಂಗಳಾಗುವುದರೊಳಗೆ ಮೈಯಿಳಿದು ಹೋಯಿತು. ಆ ಸಮಯದಲ್ಲಿ ತೀವ್ರ ರಕ್ತಸ್ರಾವವೂ ಆಗಿತ್ತು. ನಂತರ ಅತಿಯಾದ ಕಟ್ಟು ಪಥ್ಯ ಬೇರೆ. ಗರ್ಭಪಾತದಿಂದ ದೈಹಿಕವಾಗಿಯೂ, ಮಾನಸಿಕವಾಗಿಯೂ ಜರ್ಜರಿತಳಾಗಿದ್ದ ಅವಳನ್ನು ಹಲವು ಬಾರಿ ಆಸ್ಪತ್ರೆಗೆ ಕರೆತಂದಿದ್ದರು. ಆಗೆಲ್ಲ ಅವಳ ಗಂಡ ಹಾಗೂ ಅತ್ತೆ ನನ್ನಿಂದ ಬಯಸುತ್ತಿದ್ದುದು ‘ಅವಳಿಗೆ ಸರೀ ತಿರುಗಾಡಿ ಕೆಲಸ ಮಾಡಬೇಕೆಂದು ಬುದ್ಧಿ ಹೇಳಿ’ ಎಂಬುದಷ್ಟೆ. ಅವಳು ಯಾವಾಗಲೂ ಮಲಗಿರುವ ಸೋಮಾರಿಯೆಂದೂ, ಹೇಳಿದ ಮಾತೇ ಕೇಳುವುದಿಲ್ಲವೆಂದೂ, ತನ್ನ ಮನೆ-ಕೆಲಸ ಅಂತ ಒಂಚೂರೂ ಪ್ರೀತಿಯಿಲ್ಲವೆಂದೂ, ಇದೊಂದು ಹೆಣ್ಣು ತಮ್ಮ ಮನೆಗೆ ಎಲ್ಲಿಂದ ಬಂದು ತಾಗಿತೋ ಎಂದು ಯಾವಾಗಲೂ ಹಳಹಳಿಸುತ್ತಾ ಅವಳನ್ನು ಬೈಯುತ್ತಿದ್ದರು. ಅವಳಿಗೆ ಮದ್ದು ಕೊಟ್ಟು ರಿಪೇರಿ ಮಾಡುವುದಕ್ಕಿಂತ ಹೆಚ್ಚಾಗಿ ಅವಳನ್ನು ಹೀಯಾಳಿಸುವುದರಲ್ಲೇ ಕಾಲಕಳೆಯುತ್ತಿದ್ದರು. ಅವಳಿಗಿನ್ನೂ ವಯಸ್ಸಾದರೂ ಎಷ್ಟು, ಸಣ್ಣ ಹುಡುಗಿಯಲ್ಲವೇ ಎಂದು ನಾನೇನಾದರೂ ಅವಳ ಪರವಾಗಿ ನಾಕು ಮಾತು ಹೇಳಹೊರಟರೆ, ತಮ್ಮ ಕೊಪ್ಪದಲ್ಲಿರುವ ಇವಳ ವಯಸ್ಸಿನ ಇನ್ನೆಷ್ಟೋ ಹೆಣ್ಣುಮಕ್ಕಳ ಬಗ್ಗೆ ಹೇಳಿ ಹೋಲಿಕೆಯಲ್ಲಿ ಇವಳು ಯಾತಕ್ಕೂ ಬರದವಳೆನ್ನುವ ಪಟ್ಟ ಕಟ್ಟಿಬಿಡುತ್ತಿದ್ದರು. ನನ್ನ ಬಳಿ ಒಂದೂ ಮಾತನಾಡದೇ ತಲೆತಗ್ಗಿಸಿ ಅವರ ಮಾತನ್ನೆಲ್ಲ ಕೇಳುತ್ತಿದ್ದ ಗಂಗೆಯ ಬಗೆಗೆ ತುಂಬ ಅನುಕಂಪವಾಗುತ್ತಿದ್ದರೂ ಪ್ರತಿಭಟನೆಯಿಲ್ಲದೆ ಸುಮ್ಮನೆ ಕುಳಿತಿರುವ ಅವಳನ್ನು ನೋಡಿದರೆ ಇವರು ಹೇಳಿದ್ದೇ ಸರಿಯೇನೋ, ಅದಕ್ಕೇ ಸುಮ್ಮನಿದ್ದಾಳೋ ಏನೋ ಎಂದೆಲ್ಲ ಅನುಮಾನ ಬರುತ್ತಿತ್ತು. ಅಂತಹ ಅವಳನ್ನು ಇತ್ತೀಚೆಗೆ ಕರೆತಂದಿರಲಿಲ್ಲವಾಗಿ ನೋಡಿರಲಿಲ್ಲ ನಾನು.
ಹೀಗಿರುತ್ತ ಒಂದು ಅರ್ಧರಾತ್ರಿ ಮೈಯೆಲ್ಲ ಬಾತು ಉಬ್ಬಿಕೊಂಡಿದ್ದ ಗಂಗೆಯನ್ನು ಹೊತ್ತುಕೊಂಡು ಬಂದರು. ನೋಡಿದರೆ ಏಳೆಂಟು ತಿಂಗಳ ಗರ್ಭಿಣಿ! ಆ ಪುಟ್ಟದೇಹಕ್ಕೆ ಗರ್ಭವೇ ಒಂದು ಹೊರೆಯೆನ್ನುವಂತೆ ಕಾಣುತ್ತಿತ್ತು. ಅವಳಿಗೆ ಮೈಮೇಲೆ ಪ್ರಜ್ಞೆಯಿರಲಿಲ್ಲ. ಗೊರಕೆ ಹೊಡೆಯುವವರಂತೆ ದೊಡ್ಡ ಶಬ್ದ ತೆಗೆದು ಬಾಯಿಕಳೆದುಕೊಂಡು ಉಸಿರಾಡುತ್ತಿದ್ದಳು. ರಕ್ತಸ್ರಾವವಾಗಿ ಉಟ್ಟಿದ್ದ ಸೀರೆಯೆಲ್ಲ ಕೆಂಪಾಗಿತ್ತು. ರಕ್ತ ಬಸಿದು ಮೈಯೆಲ್ಲ ಬಿಳಿಚಿಕೊಂಡು ಹಳದಿಯಾಗಿ ತೋರುತ್ತಿತ್ತು. ಒಳಗೆ ಕಳಿಸಿ, ತಪಾಸಣೆ ಮಾಡಿದರೆ ಅವಳ ಬಿಪಿ ಸಿಕ್ಕಾಪಟ್ಟೆ ಏರಿಹೋಗಿತ್ತು. ಹೊಟ್ಟೆಯೊಳಗಿದ್ದ ಶಿಶುವಿನ ಹೃದಯಬಡಿತವೂ ಕೇಳುತ್ತಿರಲಿಲ್ಲ. ಹಿಂದಿನ ದಿನವಿಡೀ ತಲೆನೋವೆಂದು ವಾಂತಿ ಮಾಡಿದ್ದಳಂತೆ. ಹೊಟ್ಟೆಯಲ್ಲಿ ತ್ರಾಸಾಗುತ್ತಿದೆಯೆಂದು ಎದ್ದೇ ಇರಲಿಲ್ಲವಂತೆ. ಮೂತ್ರ ಸಂಡಾಸು ಎರಡೂ ಆಗಲಿಲ್ಲವಂತೆ. ಇದು ನಮ್ಮ ಅಳವಿನ ಕೇಸಲ್ಲವೆಂದು ಖಚಿತವಾಗಿ ಈಶ್ವರನನ್ನು ದೊಡ್ಡಾಸ್ಪತ್ರೆಗೆ ಕರೆದುಕೊಂಡು ಹೋಗಿರೆಂದು ಹೇಳಿದೆವು.
‘ಅಯ್ಯೋ, ಹಾಗನಬ್ಯಾಡ್ರೊ ಅಮ. ದೇವ್ರಲ್ಲಿ ಕೇಳ್ಕಂಡೇ ಬಂದಿದೀವಿ ನಾವು. ಇಲ್ಲೇ ಹೋಗಬೇಕು ಅಂತ ಹೇಳಿಕೆ ಆಗದೆ. ಮುಂದೆ ಕಳಸೂ ಮಾತು ಮಾತ್ರ ಹೇಳಬ್ಯಾಡಿ’ ಎಂದು ಅವನು ಅಳುವವರಂತೆ ಮುಖಮಾಡಿದ. ಮುಂಚೆ ಎರಡು ಬಾರಿ ಗರ್ಭಪಾತವಾಗಿದ್ದು ಈ ಬಾರಿ ಗರ್ಭನಿಂತ ಕೂಡಲೆ ಏಕೆ ಆಸ್ಪತ್ರೆಗೆ ಕರೆತರಲಿಲ್ಲವೆಂದು ಕೇಳಿದೆ. ಅವಳ ಅತ್ತೆ ದೊಡ್ಡಬಾಯಿ ಮಾಡಿ ಉತ್ತರ ಹೇಳಿದಳು; ‘ಎಷ್ಟು ಹೇಳೀರೂ ಆಸ್ಪತ್ರೆಗೆ ಬರಾಕೊಲ್ಲೆ ಅಂತಿತ್ತು ಅಮ್ಮ ಅದು. ಹೆಂಗೆ ಬತ್ತದೆ, ಮರ್‍ವಾದಿ ಅದ್ಕೆ. ದಿನಬೆಳಗಾದ್ರೆ ಮಣ್ಣು ತಿಂಬೂದು, ಅಕ್ಕಿ ನೆನೆಸ್ಕ ತಿಂಬೂದು, ಇದ್ಲಿ ತಿಂಬೂದು, ಅನ್ನ ಹೊಟ್ಟೀಗೆ ಬಿದ್ದು ಎಷ್ಟು ಕಾಲ ಆತೋ ಏನೋ? ಒಂದ್ ಕೊಳೆ ತಿಂತಿರ್ಲಿಲ್ಲ. ಹ್ವಾದ ವರ್ಷ ಹಿಂಗೇ ಆಗಿ ನಮ್ಕಡೆ ಬಸರಿ ಒಂದು ತೀರ್‍ಕಂತು. ಅದು ಇವಳ ಗೆಣೆತೀನೆ ಆಗಿತ್ತು. ಅದುರ್‍ದೆ ದೆವ್ವ ಇದ್ನ ಹಿಡ್ದದೆ ಅಂತ ನಿಕ್ಕಿ ಆಗಿ ಎಲ್ಲೆಲ್ಲ ಹೋಗಿ ನೋಡಿಸ್ಕ ಬಂದ್ರು. ನಿನ್ನೆ ಅಮಾಸಿ ಬೇರೆ, ಬೆಳಗಾಗುದ್ರಾಗೆ ಇದರ ಮ್ಯಾಲೆ ಬಂದ ಭಾರ ಇನ್ನೂವರ್ಗೂ ಇಳೀನೇ ಇಲ್ಲ. ನಡುರಾತ್ರಿ ಐದಾರು ಮೈಲಿ ನಡದು ನೋಟಗಾರ್‍ನ ಕರಕಂಡು ಬಂದ್ರು. ಏನು ಮಾಡಿದ್ರೂ ಅವ್ನ ಕಟ್ಟು ನಿಲ್ಲಲಿಲ್ಲ. ದೆವ್ವ ಮೈಬಿಟ್ಟು ಹೋಗಲಿಲ್ಲ. ಕಡಿಗೆ ಅವ್ನೆಯ ನಿಮ್ಮಾಸ್ಪತ್ರಿಗೇ ಕರ್‍ಕಹೋಗಿ, ನಾನು ಮನೆಯಾಗೇ ಕಟ್ಟು ಮಾಡ್ತಿನಿ ಹೆದರದು ಬ್ಯಾಡ ಅಂತ ಹೇಳ್ಕಿ ಮಾಡಿ ಕಳಿಸ್ದ.’
ಓ ದೇವರೇ! ಇವರನ್ನು ನೀನೇ ಕಾಪಾಡಬೇಕು. ಈ ಎಳೆಯ ಹುಡುಗಿಗೆ ಇಷ್ಟು ಸಣ್ಣ ವಯಸ್ಸಿನಲ್ಲಿ ಮದುವೆ ಮಾಡಿ, ಒಂದರ ಮೇಲೊಂದು ಗರ್ಭಪಾತವಾಗಿ, ರಕ್ತಹೀನತೆಯಾಗಿ, ಅದರಿಂದ ಚೇತರಿಸಿಕೊಳ್ಳುವುದರಲ್ಲಿ ಮತ್ತೆ ಗರ್ಭಿಣಿಯಾಗಿ, ಮತ್ತೂ ಬಿಳಿಚಿಕೊಂಡುಹೋದಳು. ರಕ್ತಹೀನತೆಯಿಂದ ಕೆಲವರಿಗೆ ಶುರುವಾಗುವ ತಿನ್ನಬಾರದ್ದನ್ನು ತಿನ್ನುವ ಚಟ (ಪೈಕಾ) ಅವಳನ್ನು ಅಕ್ಕಿ, ಇದ್ದಿಲು, ಮಣ್ಣು ಇವನ್ನೆಲ್ಲ ತಿನ್ನಲು ಪ್ರೇರೇಪಿಸಿದೆ. ಹಸಿವೆಯನ್ನು ಮತ್ತೂ ಕಡಿಮೆ ಮಾಡುವ ಜೀರ್ಣವಾಗದ ಅಂತಹ ಪದಾರ್ಥಗಳು ಅವಳ ರಕ್ತಹೀನತೆಯನ್ನು ಇನ್ನೂ ಹೆಚ್ಚಿಸಿವೆ. ಗರ್ಭದ ಅವಧಿ ಮುಂದುವರೆಯುತ್ತಾ ಹೋದಂತೆ ದೇಹದ ಒಂದೊಂದೇ ಅಂಗಾಂಗಗಳು ರಕ್ತಹೀನತೆಯಿಂದ ಕಾರ್ಯಹೀನವಾಗಿ, ಬಿಪಿ ಹೆಚ್ಚಾಗಿ, ಇಂದಿನ ಅವಳ ಸ್ಥಿತಿಗೆ ತಲುಪಿದ್ದಾಳೆ. ರಕ್ತದಲ್ಲಿ ಹೀಮೋಗ್ಲೋಬಿನ್ ಅಂಶ ೪.೧% ಅಷ್ಟು ಕಮ್ಮಿ ಇದೆ! ಬಿಪಿ ಇನ್ನೂರರ ಗಡಿ ದಾಟಿ ಓಡುತ್ತಿದೆ. ಮೆಡಿಕಲ್ ಭಾಷೆಯಲ್ಲಿ ‘ಎಕ್ಲಾಂಪ್ಸಿಯಾ’ ಕೇಸು ಇದು. ಅದಕ್ಕೆ ಮೊದಲಿನಿಂದ ವೈದ್ಯರ ಕಾಳಜಿ ಅತ್ಯಗತ್ಯ. ಹಾಗಿರುವಾಗ ಇವರು ಅವಳಿಗೆ ಮೊದಲು ಒಮ್ಮೆಯೂ ಆಸ್ಪತ್ರೆಗೆ ಕರೆತರದೇ, ಅವಳಿಗಾಗಿರುವ ಕಾಯಿಲೆಯೇ ಒಂದು, ಇವರು ಮಾಡುತ್ತಿರುವುದೇ ಇನ್ನೊಂದು. ಅವರಿಗೆ ಎಲ್ಲ ವಿವರಿಸಿ, ಒಪ್ಪಿಸಿ, ದೊಡ್ಡ ಆಸ್ಪತ್ರೆಗೆ ಕಳಿಸಿದೆವು. ನಾಲ್ಕು ಬಾಟಲು ರಕ್ತದ ಹೊರತಾಗಿಯೂ, ಹಲವು ಸಾವಿರ ಸಾಲದ ಹೊರತಾಗಿಯೂ ಎರಡು ಜೀವಗಳೂ ಉಳಿಯಲಿಲ್ಲ. ಅವರ ಮಾತಿನಲ್ಲಿ ಹೇಳುವುದಾದರೆ, ‘ದೆವ್ವ ಮುರ್ಕಂಡೇ ಬಿಡ್ತು.’
ದೆವ್ವ-ಭೂತ-ಮಂತ್ರ-ತಾಯತ ಅಂತಲೇ ನಂಬಿ ಕಾಯಿಲೆ ಪರಿಹರಿಸಿಕೊಳ್ಳುವುದು ಹಳ್ಳಿಯ ಜನರಲ್ಲಿ ಸಾಮಾನ್ಯ. ಅದರಲ್ಲೂ ಈ ಪ್ರದೇಶದಲ್ಲಿರುವ ಹಲವು ಬುಡಕಟ್ಟು ಜನಾಂಗಗಳು ಇಂತಹ ವಿಧಾನಗಳನ್ನೇ ಪ್ರಧಾನವಾಗಿ ನಂಬಿಕೊಂಡಿವೆ. ಅವರ ನಂಬಿಕೆಗಳೋ, ಮೂಢ ನಂಬಿಕೆಗಳೋ ಹಲವು ಬಾರಿ ನಮ್ಮನ್ನೇ ಅಸಹಾಯಕರನ್ನಾಗಿ ಮಾಡಿದ್ದುಂಟು.
ನನ್ನ ಸಂಪರ್ಕಕ್ಕೆ ಬರುವ ಆ ಜನರ ಬಗೆಗೆ-ಅಧ್ಯಯನ ವರದಿಯನ್ನಲ್ಲ, ನನ್ನ ಅನುಭವವನ್ನು- ನಿಮಗೆ ಹೇಳಲೇಬೇಕು.
********
ಘಟ್ಟದ ಕಾಡು ಕಣಿವೆಗಳಲ್ಲಿ ವಾಸಿಸುವ ಹಲವು ಬುಡಕಟ್ಟುಗಳ ಜನರಿದ್ದಾರೆ. ಈಗಲೂ ಅವರೆಲ್ಲ ತಮ್ಮ ಕೊಪ್ಪ ಕೇರಿಗಳಿಂದ ಪೇಟೆಗೆ ಬರಲು ಹರಸಾಹಸ ಪಡಬೇಕು. ಬರೀ ಕಾಲುದಾರಿ ಮಾತ್ರ ಹೊಕ್ಕುಹೊರಡುವ ಅವರ ಕೇರಿಗಳಿಂದ ಕಾಯಿಲೆಯಾದವರನ್ನು ತರುವುದು -ಅದೂ ಮಳೆಗಾಲದಲ್ಲಿ- ಬಹು ಕಷ್ಟದ ವಿಷಯ. ಈಗ ಜೀಪು-ಒಮ್ನಿಗಳ ಕಾಲದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆಯಾದರೂ ಮಳೆಗಾಲದಲ್ಲಿ ಚೂಳಿ(ದೊಡ್ಡ ಬೆತ್ತದ ಬುಟ್ಟಿ ಅಥವಾ ಕಂಬಳಿಯ ಹೊರುಚೀಲ)ಯಲ್ಲಿ ರೋಗಿಯನ್ನು ಹೊತ್ತು ತರುವ ಪ್ರಸಂಗಗಳೂ ಇಲ್ಲದಿಲ್ಲ. ಆ ಜನರಿಗೆ ರಸ್ತೆ ಬದಿ ನೆಂಟರ ಮನೆಗಳೇ ಇಲ್ಲ! ಎಲ್ಲರೂ ವನವಾಸಿಗಳೇ. ದಟ್ಟಕಾಡಿನ ನಡುವೆ ತಲೆತಲಾಂತರಗಳಿಂದ ಗದ್ದೆ-ತೋಟದ ಕೃಷಿ ಮಾಡುತ್ತಾ, ಕಾಡಿನ ಉತ್ಪನ್ನಗಳನ್ನು ಬಳಸುತ್ತಾ ವಾಸಿಸಿದ್ದಾರೆ. ಕೆಲವರು ಗ್ರಾಮ್ಯ ಕನ್ನಡವನ್ನೂ, ಕೆಲವರು ಮರಾಠಿಯನ್ನೂ ಮಾತನಾಡುತ್ತಾರೆ. ಅವರು ಮಾತನಾಡುವ ಶೈಲಿ ಭಿನ್ನ. ಒಂದು ರೀತಿ ಎಳೆದೆಳೆದು ಪದಗಳನ್ನು ಜಗಿದು ಸಾವಕಾಶವಾಗಿ ಮಾತನಾಡುತ್ತಾರೆ. ಮಹಾರಾಷ್ಟ್ರದ ಗಡಿ ಅಷ್ಟೇನೂ ಹತ್ತಿರವಿಲ್ಲದಿರುವಾಗ ಬೆಟ್ಟದ ಕಾಡುಗಳಲ್ಲಿ ಈ ಮರಾಠಿ ಜನ ಹೇಗೆ ಬಂದರು ಎಂಬುದು ನನ್ನ ಎಂದಿನ ಅಚ್ಚರಿ. ನನ್ನ ಕಲ್ಪನೆ ಇತಿಹಾಸದಲ್ಲೆಲ್ಲ ಗರಿಗೆದರಿ ಎಲ್ಲೆಲ್ಲೋ ಹಾರಾಡತೊಡಗುತ್ತದೆ. ನಮ್ಮ ಗೇರು ಸೊಪ್ಪದ ರಾಣಿ ಚನ್ನಭೈರಾದೇವಿಯ ಜೊತೆ ಮರಾಠರು ಯುದ್ಧ ಮಾಡಿದ್ದಾರೆ. ಅವಳ ಕಾಲದ ಕೋಟೆ ಎನ್ನಬಹುದಾದ ಅವಶೇಷಗಳು ದಟ್ಟ ಕಾಡಿನ ದುರ್ಗಮ ಹಳುಗಳಲ್ಲಿ ಮುಳುಗಿಹೋಗಿದೆಯಂತೆ. ಅಲ್ಲಿ ವಾಹನ ಸಂಚಾರ ಕಷ್ಟವಾಗಿದ್ದು ನಡೆದೇ ಹೋಗಬೇಕಂತೆ. ಅಲ್ಲೆಲ್ಲೋ ‘ಮೆಣಸಿನ ಬಾವಿ’ ಕೂಡ ಇದೆಯಂತೆ. ಅವಳೇ ‘ಕಾಳು ಮೆಣಸಿನ ರಾಣಿ’ ಅಂತ ಪ್ರಸಿದ್ಧವಾದವಳು. ಅವಳ ಮೇಲೆ ಯುದ್ಧಕ್ಕೆ ಬಂದ ಮರಾಠರು; ಕೆಳದಿ, ನಗರ ಸಂಸ್ಥಾನ, ಇಕ್ಕೇರಿಗೆ ಯುದ್ಧಕ್ಕೆ ಬಂದವರು ದಟ್ಟಕಾಡಿನಲ್ಲಿ ದಿಕ್ಕು ತಪ್ಪಿ ಇಲ್ಲಿ ಉಳಿದರೆ? ಇಂಬಳಕ್ಕೆ ಹೆದರಿ ಹಿಮ್ಮೆಟ್ಟಿದರೆ? ಅಥವಾ ಪೋರ್ಚುಗೀಸರು ಗೋಮಾಂತಕ ವಶಪಡಿಸಿಕೊಂಡ ಕಾಲದಲ್ಲಿ ದಕ್ಷಿಣಕ್ಕೆ ವಲಸೆ ಬಂದ ಹಲವು ಸಮುದಾಯಗಳ ಪೈಕಿ ಇವರೂ ಸೇರಿದ್ದಾರೆಯೆ? ಬುಡತುದಿಯಿಲ್ಲದ ಇಂಥ ಊಹೆಗಳಿಂದ ಬೆಟ್ಟದ ಜನರ ಮೇಲಿನ ನನ್ನ ಕುತೂಹಲ ಇನ್ನೂ ಹೆಚ್ಚಾಗಿದೆ. ಎಚ್.ಜೆ.ಲಕ್ಕಪ್ಪಗೌಡರ ‘ಕರ್ನಾಟಕದ ಬುಡಕಟ್ಟುಗಳು’ ಪುಸ್ತಕಕ್ಕಾಗಿ ತಡಕಾಡಿ, ಇಲ್ಲಿರುವ ಜಾನಪದ ಇತಿಹಾಸ ತಜ್ಞರೊಬ್ಬರನ್ನು ಸದ್ಯವೇ ಭೇಟಿ ಮಾಡಬೇಕೆಂಬ ನಿರ್ಣಯವನ್ನು ಅದೆಷ್ಟನೆಯದೋ ಬಾರಿ ಮಾಡುತ್ತೇನೆ.. ಇತ್ತೀಚೆಗೆ ‘ಮರಾಠಿ ಕುಣಬಿ’ಯರ ಬಗೆಗೊಂದು ಸಂಶೋಧನೆ-ಅಧ್ಯಯನ ಗ್ರಂಥ ಬಂದಿದೆಯೆಂದು ತಿಳಿಯಿತು, ಅದನ್ನು ಆದಷ್ಟು ಬೇಗ ಹುಡುಕಿ ಕೊಳ್ಳಬೇಕು…
ಬಿಪಿ, ಡಯಾಬಿಟೀಸ್, ಅಸಿಡಿಟಿಗಳಂತಹ ಆಧುನಿಕ ಕಾಯಿಲೆಗಳಿಗಿಂತ ನಮ್ಮ ಈ ಗುಡ್ಡಗಾಡಿನ ಬುಡಕಟ್ಟುಗಳನ್ನು ಸಾಮಾನ್ಯವಾಗಿ ಕಾಡುವುದು ‘ಅನೀಮಿಯಾ’ ಅಥವಾ ರಕ್ತಹೀನತೆ. ರಕ್ತದಲ್ಲಿರುವ ಹೀಮೋಗ್ಲೋಬಿನ್ ಎಂಬ ಪ್ರೋಟೀನ್, ರಕ್ತಕ್ಕೆ ಕೇವಲ ಕೆಂಪು ಬಣ್ಣ ನೀಡುವುದಷ್ಟೇ ಅಲ್ಲ, ಪ್ರಾಣವಾಯು(ಆಕ್ಸಿಜನ್) ವಾಹಕವೂ ಹೌದು. ಅದು ತಯಾರಾಗಲು ಸಾಕಷ್ಟು ಕಬ್ಬಿಣಾಂಶ ಆಹಾರದಲ್ಲಿರಬೇಕಾದುದು ಅವಶ್ಯ. ಹಸಿರು ತರಕಾರಿ, ಮಾಂಸದಲ್ಲಿ ಹೇರಳವಾಗಿರುವ ಕಬ್ಬಿಣ ಸತ್ವ ಆಹಾರದಿಂದಲೇ ಪೂರೈಕೆಯಾಗುವಂಥದ್ದು.
ಅಕ್ಕಿ ಇಲ್ಲಿನ ಮುಖ್ಯ ಧಾನ್ಯ. ಗಂಜಿ, ನೆಂಜಿಕೊಳ್ಳಲು ಅತಿಖಾರದ ಚಟ್ನಿ- ಸುಲಭ ತಯಾರಿಯೆಂದೋ ಏನೋ- ಪ್ರಧಾನ ಮೆನು. ದೋಸೆ, ರೊಟ್ಟಿ, ಗಂಜಿ, ಅವಲಕ್ಕಿ, ಅನ್ನ-ಹೀಗೆ ಇಲ್ಲಿ ಎಲ್ಲ ತಿನಿಸುಗಳೂ ಪ್ರಧಾನವಾಗಿ ಅಕ್ಕಿಯಿಂದ ಮಾಡಿದವೇ. ಅಕ್ಕಿಯಲ್ಲಿ ಕಬ್ಬಿಣದ ಸತ್ವ ಇರುವುದು ತೀರ ಕಡಿಮೆ. ಫ್ರಿಜ್ ಇರದ ಹಳ್ಳಿಯ ಜನರ ಫೇವರಿಟ್ ತರಕಾರಿ ಎಂದರೆ ಆಲೂಗಡ್ಡೆ ಮತ್ತು ಈರುಳ್ಳಿ. ಅದರಲ್ಲೂ ಕಬ್ಬಿಣ ಸತ್ವ ನಗಣ್ಯ. ಬೇಟೆಯಾಡುವುದು ಕಷ್ಟವಾಗಿರುವುದರಿಂದ ದಿನವೂ ಮಾಂಸಾಹಾರ ಅಪರೂಪ. ಸಮುದ್ರದಿಂದ ದೂರ ಇರುವ ಗುಡ್ಡಗಾಡುಗಳಿಗೆ ಮೀನು ರವಾನೆಯಾಗುವುದು ಕಡಿಮೆಯೇ. ಮಾಂಸ ತಿನ್ನಬಾರದ ದಿನಗಳ ಯಾದಿಯೂ ಸಣ್ಣದಿಲ್ಲ. ಈ ಆಹಾರ ಕ್ರಮವೇ ರಕ್ತಹೀನತೆಯ ಮುಖ್ಯ ಕಾರಣ. ಜಂತು ಹುಳುಗಳ ಬಾಧೆ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತದೆ. ದೇವರಿಗೆ ಹರಕೆ, ಜಟಗನಿಗೆ ಬಲಿ, ಮದ್ದು ತೆಗೆಸುವುದು-ಇವಾವುವೂ ಸಹಾಯಕ್ಕೆ ಬರದೇ ಇದ್ದಾಗ ಕೈಕಾಲು ಬಾತುಕೊಂಡ ರೋಗಿಗೆ ‘ಉಪ್ಪಿಸ್’ ಎಂಬ ರೋಗದ ಹೆಸರಿಟ್ಟು ಯಾವುದೋ ಬಳ್ಳಿಯನ್ನು ಕೈಕಾಲಿಗೆ ಸುತ್ತುತ್ತಾರೆ. ಈ ಕಾಯಿಲೆಗೆ ಔಷಧ ಮಾಡುವವರು ಉಪ್ಪು ತಿನ್ನುವಂತಿಲ್ಲ. ಬರೀ ಸಪ್ಪೆ ಹೆಸರು ಗಂಜಿ ಉಣ್ಣಬೇಕು. ಹಲವು ಹಣ್ಣು ತರಕಾರಿಗಳೂ ವರ್ಜ್ಯ. ಈ ಕಟ್ಟು ಪಥ್ಯ ಅನೀಮಿಯಾ ಮತ್ತಷ್ಟು ಬಲಿಯುವಂತೆ ಮಾಡುತ್ತದೆ.
ಆಗ ಆಸ್ಪತ್ರೆಗೆ ಬರುವ ಕೆಲವರ ಹೀಮೋಗ್ಲೋಬಿನ್- ಸರಾಸರಿ ೧೦-೧೩ಗ್ರಾಮ್% ಇರಬೇಕಾದ್ದು- ಬರೀ ೩-೪-೫ ಗ್ರಾಂ% ನಷ್ಟು ಕಮ್ಮಿ ಇರುತ್ತದೆ. ಇಂತಹ ರೋಗಿಗಳ ಮನೆಯವರ ಬಳಿ, ಔಷಧೋಪಚಾರದ ಬಗೆಗಿಂತ ಅಡುಗೆಗೆ ಬಳಸಬೇಕಾದ ತರಕಾರಿ ಮಾಂಸದ ಬಗ್ಗೆ, ಅದರ ಅನಿವಾರ್ಯತೆ, ತಯಾರಿಯ ಬಗ್ಗೆ ಹೇಳಲೇ ಹೆಚ್ಚು ಹೊತ್ತು ಕಳೆಯುತ್ತೇನೆ. ಅಡುಗೆ ತೀರಾ ಖಾಸಗಿಯೆಂದು ಭಾವಿಸಿ ಆ ವಿಷಯ ಹಾರಿಸಲಿಕ್ಕೇ ಪ್ರಯತ್ನಿಸುತ್ತಾರೆ. ‘ಮಾಂಸ ತಿನ್ನಿರಿ’ ಎಂದರೆ, ‘ನಾವು ಗೌಲು ಗಿವುಲು ಮುಟ್ಟಲ್ಲ, ತಿಂಬೂದೇ ತರಕಾರಿ’ ಎಂದು ನಾಚಿಕೊಳ್ಳುವ ಹೆಂಗಸರಿದ್ದಾರೆ. ‘ಸೊಪ್ಪು ತಿನ್ನಿ’ ಎಂದರೆ ‘ಅದೆಲ್ಲಿ ಸಿಕ್ತೀತೆ?’ ಎಂದು ನನ್ನನ್ನೇ ಮರುಪ್ರಶ್ನಿಸುತ್ತಾರೆ. ಸೊಪ್ಪೆಂದರೆ ಕೊಟ್ಟಿಗೆಗೆ ಹಾಕಲಿಕ್ಕಿರುವ, ಅಥವಾ ಹೆಚ್ಚೆಂದರೆ ವರ್ಷಕ್ಕೊಮ್ಮೆ ನುಗ್ಗೆ, ತೊಂಡೆ, ಚೊಗತೆ, ಬಸಳೆ, ಎಲ್ಲ ಸೇರಿಸಿ ಮಾಡುವ ಬೆರಕೆ ಸೊಪ್ಪಿನ ಸಾರಷ್ಟೇ ಎಂಬ ಭಾವನೆ. ಹೇರಳವಾಗಿ ಬೆಳೆಯುವ ಕೆಸುವನ್ನು ತಿನ್ನುವುದೇ ಇಲ್ಲ, ಅದು ‘ಗರಮಿ’ಯಂತೆ.
ವಿದ್ಯಾವಂತ ಜನರೇ ಆಹಾರ – ಆರೋಗ್ಯದ ಬಗ್ಗೆ ಇನ್ನಿಲ್ಲದ ಮೌಢ್ಯ ಪ್ರದರ್ಶಿಸಿ ತಮ್ಮ ಅರ್ಧಜ್ಞಾನ ಸಾಬೀತುಮಾಡುವಾಗ, ಅವಿದ್ಯಾವಂತ ಮುಗ್ಧ ಜನರಿಂದ ವೈಜ್ಞಾನಿಕ ತಿಳುವಳಿಕೆ ನಿರೀಕ್ಷಿಸುವುದು ತಪ್ಪು. ಪದೇಪದೇ ಹೇಳುವ ಸುಳ್ಳು ಸತ್ಯವಾಗಿ ಕಾಣುವಂತೆ ತಲೆತಲಾಂತರದಿಂದ ಅನುಸರಿಸುತ್ತ ಬಂದ ಮೌಢ್ಯಗಳು ಪರಂಪರೆ ಎಂಬಂತೆ ಬಿಂಬಿತವಾದರೆ ಆಶ್ಚರ್ಯವಿಲ್ಲ.
*******
ನಮ್ಮ ಬೆಟ್ಟದ ಜನ ಸಣ್ಣ ಪುಟ್ಟ ಕಾಯಿಲೆಗಳಿಗೆಲ್ಲ ಆಸ್ಪತ್ರೆಗೆ ಬರುವವರೇ ಅಲ್ಲ. ತಡೆದುಕೊಳ್ಳಲು ಆಗುವತನಕ ಮನೆಮದ್ದು, ನಾಟಿಮದ್ದು, ನೋಟ ನೋಡಿಸುವುದು, ಹೀಗೇ ಮಾಡಿಕೊಂಡಿರುತ್ತಾರೆ. ಅದ್ಯಾವುದಕ್ಕೂ ಜಗ್ಗದ ಕಾಯಿಲೆಗಳಿಗಷ್ಟೇ ಆಸ್ಪತ್ರೆಯ ಮದ್ದು. ಕೆಲವು ಬಾರಿ ಅವರ ಡಯಾಗ್ನೋಸಿಸ್‌ಗೆ ತಕ್ಕ ಹಾಗೆ ನಾನು ಔಷಧಿ ಕೊಡುವಂತೆ ಮಾಡುತ್ತಾರೆ. ಕೌಟುಂಬಿಕ ಒತ್ತಡಗಳಿಗೋ, ಕೆಲಸದ ಒತ್ತಡಗಳಿಗೋ ಅಂತೂ ಹಲವು ತೆರನ ಲಘು ಮಾನಸಿಕ ಆಘಾತಕ್ಕೊಳಗಾದ ರೋಗಿಗಳಿರುತ್ತಾರೆ. ಆದರೆ ಕಣ್ಣಿಗೆ ಕಾಣದ ‘ಮನಸ್ಸು’ ಎಂಬುದಕ್ಕೊಂದು ರೋಗವೇ? ಎಂಬ ತರ್ಕ ಅವರದು. ಅಂಥವನ್ನೆಲ್ಲ ದೆವ್ವ-ಪಿಶಾಚಿಗಳ ಚೇಷ್ಟೆ ಎಂದು ಪರಿಗಣಿಸುತ್ತಾರೆ. ಕುದ್ದು ಹೋಗುವ ಜ್ವರ ಬಂದು ಕೈಕಾಲು ಅಲ್ಲಾಡದಷ್ಟು ನೋವಿದ್ದಾಗ, ‘ಸಿಕ್ಕಾಪಟ್ಟೆ ಸುಸ್ತು. ನಾಕೆಜ್ಜೆ ನಡೆಯಕಾಗಾಕಿಲ್ಲ. ಒಂದು ಶಕ್ತಿ ಇಂಜೆಶನ್ ಕೊಡಿ ’ ಎನ್ನುತ್ತಾರೆ. ಅವರಿಗೆ ‘ಹ್ಞಾಂ’ ಎಂದು ಹೇಳಿ ಮತ್ತೇನೋ ಕೊಡುವಂತಿಲ್ಲ, ಶಕ್ತಿ ಇಂಜೆಕ್ಷನ್ ಕೆಂಪು ಹಳದಿ ಬಣ್ಣದಿರುತ್ತದೆಂದು ತಿಳಿದಿರುತ್ತಾರೆ. ತುಂಬ ಸೊಂಟ ನೋವಾಗಿದ್ದರೆ ‘ಅದು ವಾಯುಗಸ, ವಾಯು ಹೋಗೂ ಹಂಗೆ ಇಂಜೆಶನ್ ಕೊಡಿ’ ಎನ್ನುತ್ತಾರೆ! ‘ಮೈಯ್ಯು ಕೈಯ್ಯು ಜಗ್ತಾ ಈತೆ. ಬಾಯೀಗೆ ಒಂದ್ ಕೊಳೆ ಅನ್ನ ಹೋಗಾಕಿಲ್ಲ. ರಾಶೀ ಸುಸ್ತಾಗ್ತೀತೆ. ಏನೇನೂ ಮಾಡಕ್ಕಾಗೂದಿಲ್ಲ. ತಿರ್‍ಗಾಡೋದ್ ಸೈತ ಕಷ್ಟ. ಅದ್ ಸತ್ಹೋದ್ ನಮ್ಮತ್ತೀದ್ ಕಿರುಕೂಳ. ಈಗ ಅದಕೆಲ್ಲ ಕಟ್ಟು ಮಾಡ್ಕಂಡಿ ಬಂದಾರೆ. ಒಂದ್ ಚಲೋ ಮದ್ ಕೊಡಿ. ’ ಎಂಬ ಉದ್ದ ಪೀಠಿಕೆಯೊಂದಿಗೆ ಶುರು ಮಾಡುತ್ತಾರೆ. ಸಾವಿಗಿಂತ ಸತ್ತವರ ಬಗ್ಗೆ ತುಂಬ ಹೆದರುವ ಜನ ಬದುಕಿದ್ದಾಗ ತಮಗೆ ಆಗದೇ ಇದ್ದವರು, ಅಥವಾ ತಮ್ಮನ್ನು ತುಂಬ ಇಷ್ಟ ಪಡುವವರು ಸತ್ತಮೇಲೆ ದೆವ್ವವಾಗಿ ಕಾಟ ಕೊಡುತ್ತಾರೆ ಎಂದೇ ನಂಬಿದ್ದಾರೆ. ಹೀಗಾಗಿ ಸತ್ತ ಪ್ರತಿಯೊಬ್ಬರೂ ಒಬ್ಬರಲ್ಲಾ ಒಬ್ಬರ ಪಾಲಿಗೆ ದೆವ್ವವಾಗಿ ಕಾಡಬೇಕಾಗುವುದು ಅನಿವಾರ್ಯ. ಸಾವು ಸಂಭವಿಸಿದ ನಂತರ ಮನೆ(ಬಿಡಾರ)ವನ್ನು ಬದಲಿಸುವ ರಿವಾಜು ಮೊದಲು ಇತ್ತಂತೆ. ಈಗ ಅದು ಸಾವಿನ ನಂತರ ಮನೆಯ ಒಂದು ಗಳವನ್ನು ಹಿರಿದು ತೆಗೆದು ಬೇರೆ ಹಾಕುವಷ್ಟು ಸಾಂಕೇತಿಕತೆಗೆ ಬದಲಾಗಿದೆ. ಬದುಕಿದ ಮನುಷ್ಯನನ್ನು ತೃಪ್ತಿ ಪಡಿಸುವುದಕ್ಕೆ ಮಾಡುವ ಖರ್ಚಿಗಿಂತ ಹೆಚ್ಚು ಖರ್ಚನ್ನು ಸತ್ತವರಿಗಾಗಿ ಮಾಡುತ್ತಾರೆ.
ಹೀಗೆ ತಮ್ಮೆಲ್ಲ ಕಷ್ಟ ಕಾಯಿಲೆಗಳಿಗೆ ದೆವ್ವ -ಭೂತಗಳಂತಹ ಅದೃಶ್ಯ ಶಕ್ತಿಗಳನ್ನೇ ದೂರುತ್ತ, ನಂಬುವವರಿಗೆ ವೈರಸ್, ಬ್ಯಾಕ್ಟೀರಿಯಾ, ವ್ಯಾಕ್ಸೀನ್, ಆಂಟಿಬಯಾಟಿಕ್ಸ್, ಮುನ್ನೆಚ್ಚರಿಕೆಯ ಕ್ರಮ- ಇದರ ಬಗೆಗೆಲ್ಲ ಹೇಳಿದರೆ ಪಿಳಿಪಿಳಿ ಕಣ್ಣುಬಿಡುತ್ತಾ ಮಾತು ತಿರುಗಿಸಿಬಿಡುತ್ತಾರೆ. ‘ಪಾಪ, ನಿಮಗಿದೆಲ್ಲ ತಿಳಿಯೂದಿಲ್ಲರಾ ಅಮ.’ ಎಂದು ನನ್ನ ಅಜ್ಞಾನಕ್ಕೆ ಮರುಗುತ್ತಾರೆ. ಮೊದಲೇ ದೆವ್ವಕ್ಕೆ ಕಟ್ಟು ಮಾಡಿ ಬರದಿದ್ದರೆ ಯಾವ ಔಷಧವೂ ನಾಟುವುದಿಲ್ಲವೆಂಬುದು ಅವರ ನಂಬಿಕೆ. ಹಾಗಾಗಿ ಚಿಕಿತ್ಸೆ ಫಲಿಸದೇ ಹೋದಾಗ ‘ನಿಮ್ಮ ಕೈಲಾದ್ದು ನೀವು ಮಾಡಿದೀರ. ನಿಮ್ಮ ತಪ್ಪಿಲ್ಲ. ನಾವು ಮದ್ಲೇ ನೋಟಗಾರ್‍ನ ಹತ್ರ ಹೋಗಿ ಬರಬೇಕಿತ್ತು.’ ಎಂದು ನನ್ನನ್ನೇ ಸಂತೈಸುತ್ತಾರೆ. ಕಾಯಿಲೆಯ ಅನಿಶ್ಚಿತತೆಗೆ ದೆವ್ವದ ಹೆಸರು! ದೇವರಿಗಿಂತ ಹೆಚ್ಚು ದೆವ್ವವನ್ನೇ ನಂಬಿ ಹೆದರುತ್ತಾರಲ್ಲ ಎಂದು ಅನಿಸಿದ್ದಿದೆ. ಶಿಷ್ಟ ದೇವರುಗಳಿಗಿಂತ ಪೂಜಾರಿಗಳ ಮೇಲೇ ಹೆಚ್ಚು ನಂಬಿಕೆ ಅವರಿಗೆ. ಕೆಲವು ದೇವರುಗಳು ಪ್ರಸಾದ ಕೊಟ್ಟು ವೈದ್ಯರ ಹೆಸರು ಹೇಳಿ ಅವರ ಬಳಿಯೇ ಹೋಗಬೇಕೆಂದು ಸೂಚಿಸುತ್ತವೆ. ನನ್ನಂತಹ ನಾಸ್ತಿಕಳ ಹೆಸರನ್ನೂ ಶಿಫಾರಸ್ಸು ಮಾಡಿ, ನನ್ನ ಬಳಿ ಕಳಿಸುವ ದೇವರಿಗೆ ಎಷ್ಟು ಅಪಾರ ಕರುಣೆ! ಈ ಜನ ನನ್ನನ್ನು ಇತ್ತೀಚೆಗೆ ಎಷ್ಟು ಬದಲಿಸಿಬಿಟ್ಟಿದ್ದಾರೆಂದರೆ, ಅವರು ಹೇಳದಿದ್ದರೆ ನಾನೇ ‘ನೋಟ ನೋಡುಸ್ಕಂಡ್ ಬರ್ಲಿಲ್ವಾ?’ ಅಂತ ಕೇಳಿಬಿಡುತ್ತೀನೇನೋ ಎನಿಸುತ್ತಿದೆ.
ನಮ್ಮ ಗುಡ್ಡಗಾಡಿನ ಜನ ಹಣಕಾಸು ವಿಷಯದಲ್ಲಿ ಬಹಳ ನಿಯತ್ತಿನವರು. ಬಾಕಿ ಇಟ್ಟುಕೊಳ್ಳಲು ತುಂಬ ಹಿಂಜರಿಯುವವರು. ಹಾಗೇ ದುಡ್ಡು ಖರ್ಚುಮಾಡಲೂ ತುಂಬಾ ಯೋಚಿಸುವವರು. ಒಮ್ಮೆ ದುಡ್ಡು ಕೊಡದೇ ಹಾಗೇ ಹೋಗಿದ್ದರೆ, ಮುಂದಿನಸಲ ಬಂದವರು ಮೊದಲು ಟೇಬಲಿನ ಮೇಲೆ ಹಳೆಬಾಕಿಯನ್ನಿಟ್ಟು ‘ಕೊಟ್ಟೀದೆ ಹ್ಞಾಂ’ ಅಂತ ನಾಲ್ಕಾರು ಬಾರಿ ಹೇಳಿ ನಂತರವೇ ಅಂದಿನ ಮಾತನಾಡುತ್ತಾರೆ. ಒಮ್ಮೆ ವಿಶ್ವಾಸ ಮೂಡಿದರೆ ಮುಗಿಯಿತು, ನಂತರ ಪ್ರತಿಸಲ ಬರುವಾಗಲೂ ಹೊಸಬರನ್ನು ಕರೆತಂದು ಪರಿಚಯಿಸಿ, ‘ಇವ್ರಿಗೂ ಚಲೋ ಮದ್ದು ಕೊಡಿ’ ಎಂಬ ಶಿಫಾರಸ್ಸು ಮಾಡುತ್ತಾರೆ. ಕೆಲವು ಸಂಕೀರ್ಣ ಕೇಸುಗಳ ಬಗ್ಗೆ ನಾವು ತಲೆಕೆಡಿಸಿಕೊಂಡಿರುವ ಹೊತ್ತಲ್ಲಿ ‘ನಮ್ಮ ಡಾಕ್ಟಾರೀರು. ಅವ್ರಿದ್ದ ಮ್ಯಾಗೆ ನಮ್ಗೇನು ಚಿಂತಿಲ್ಲ. ಇನ್ನು ದೇವ್ರು ನಡಸಿದಂಗೆ ಆಗುತ್ತೆ’ ಅಂತ ಹೊರಗೆ ಯಾರ ಬಳಿಯೋ ನಿರಾಳವಾಗಿ ಮಾತನಾಡುವುದು ಕೇಳುತ್ತದೆ. ಗುಣಮುಖರಾಗಿ ಹೋದನಂತರವೂ ಬರುವಾಗೆಲ್ಲ ಬಾಳೆಕೊನೆ, ಅನಾನಸು, ಅಬ್ಬಲಿಗೆ ಹೂ, ಕೆಸುವಿನಗೆಡ್ಡೆ, ಜೇನು, ಪಾಯಸದ ಅಕ್ಕಿ,- ಹೀಗೆ ಏನೇನನ್ನೋ ಹೊತ್ತು ತರುತ್ತಾರೆ. ಲೆಕ್ಕ ಚುಕ್ತವಾದ ಸೇವೆಗೂ ಅವರು ಮತ್ತೆ ತೋರುವ ಪ್ರೀತಿಗೆ ಮನಸ್ಸು ಮೂಕವಾಗುತ್ತದೆ.
ಈಗ ಬದಲಾವಣೆಯ ಗಾಳಿ ನಿಧಾನವಾಗಿಯಾದರೂ ಅಲ್ಲೂ ಬೀಸತೊಡಗಿದೆ. ಶಾಲೆಗೇ ಹೋಗದ ಮುಂಚಿನ ಪೀಳಿಗೆಯವರಿಗಿಂತ ಆರು-ಏಳನೆತ್ತೆ ಪಾಸು ಮಾಡಿರುವ ಹಲವರು ಈಗ ಓದಿನ ಮಹತ್ವದ ಬಗ್ಗೆ ತಿಳಿಯತೊಡಗಿದ್ದಾರೆ. ಹತ್ತಿರದ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತಿದ್ದಾರೆ. ಮುಂದಿನ ಹತ್ತಾರು ವರ್ಷಗಳಲ್ಲಾದರೂ ಒಬ್ಬ ಪದವೀಧರ ಬರಬಹುದು. ಸದ್ಯದ ಮಟ್ಟಿಗೆ ಸಾಂಪ್ರದಾಯಿಕ ಕೃಷಿ ಹಾಗು ಅದಕ್ಕೆ ಸಂಬಂಧಪಟ್ಟ ವ್ಯಾಪಾರದ ಹೊರತಾಗಿ ಮತ್ತಾವುದೇ ದುಡಿಮೆಗೆ ಒಗ್ಗದ ಮನಸ್ಥಿತಿಯಿರುವುದರಿಂದ ಓದಿಗೆ ಹೆಚ್ಚು ಪ್ರಾಧಾನ್ಯತೆ ಇಲ್ಲ. ಅಲ್ಲೊಂದಿಲ್ಲೊಂದು ಜೀಪು, ಮಿಕ್ಸರು, ಫೋನು, ಟೀವಿಗಳಂತಹ ಯಂತ್ರಗಳು ಜೀವನ ಕ್ರಮವನ್ನು ಸ್ವಲ್ಪ ಬದಲಾಯಿಸುತ್ತಿವೆ ಎನ್ನಬಹುದು.
ಬದಲಾವಣೆ ಒಳ್ಳೆಯದಕ್ಕೇ ಆಗಲಿ ಎಂಬುದಷ್ಟೇ ಎಲ್ಲರ ಹಾರೈಕೆ.
[ಚಿತ್ರಗಳು- ಲೇಖಕಿಯದು ಮತ್ತು ರಶೀದ್]
5.ರೋಗದ ಬಳಿಯೇ ಬಂದು ನಿಲ್ಲುವ ಮುದುಕರ ಮಾತುಗಳು
ಹಳ್ಳಿಯ ಜನರಲ್ ಪ್ರಾಕ್ಟೀಸ್ ಎಂದರೆ ಎಲ್ಲ ಥರದ ರೋಗಿಗಳನ್ನು ನೋಡಬೇಕಾಗುತ್ತದೆ. ಅದರಲ್ಲೂ ಮುಪ್ಪಾನು ಮುಪ್ಪಿನ ರೋಗಿಗಳನ್ನು ನೋಡಬೇಕಾದ ಪ್ರಮೇಯ ಹೆಚ್ಚು. ಪ್ರತಿಬಾರಿಯೂ ನಗರದ ಸ್ಪೆಷಲಿಸ್ಟರ ಬಳಿ ಗಂಟೆಗಟ್ಟಲೆ ಕಾದು ಕುಳಿತು ತೋರಿಸಿಕೊಂಡು ಬರುವ ಚೈತನ್ಯ ಮುದುಕರಿಗಿರುವುದಿಲ್ಲ, ಆ ವಯಸ್ಸಾದ ಜೀವಗಳ ಗುಣವಾಗದ ಕಾಯಿಲೆ ಬಗ್ಗೆ ಮನೆಯ ಕಿರಿಯರಿಗೆ ಅಂತಹ ಆಸ್ಥೆಯೂ ಇರುವುದಿಲ್ಲ. ಒಟ್ಟಾರೆ ವೈದ್ಯರಿಗೆ ತೋರಿಸಿದಂತೆಯೂ ಆಗಿರಬೇಕು, ಮನೆಯ ಹತ್ತಿರದಲ್ಲೇ ಔಷಧೋಪಚಾರ ಮುಗಿಯಬೇಕು – ಅಂತಹ ವ್ಯವಸ್ಥೆ ಎಲ್ಲರೂ ಬಯಸುವುದರಿಂದ ಸುತ್ತಮುತ್ತಲ ಹಳ್ಳಿಯ ತುಂಬ ಮುದುಕರು ನನಗೆ ಸಾಟಿಯಾಗಿದ್ದಾರೆ ಎನ್ನಬಹುದು. ನನಗೂ ಅವರ ಹಳೆಕಾಲದ ಕತೆಗಳನ್ನು ಕೇಳಲು ತುಂಬ ಇಷ್ಟ. ಆದರೆ ಹೆಚ್ಚಿನ ಮುದುಕರ ಮಾತು ಯಾವ ದಾರಿ ಹಿಡಿದು ಹೊರಟರೂ ಕಡೆಗೆ ತಮ್ಮ ರೋಗದ ಬಳಿಯೇ ಬಂದು ನಿಲ್ಲುತ್ತದೆ. ನಾನು ಸಾಧ್ಯವಾದಷ್ಟು ಆ ಮಾತುಗಳನ್ನು ರೋಗದ ಬಳಿಯಿಂದ ಎತ್ತೊಯ್ದು ಬೇರೆ ಕಡೆ ನಿಲ್ಲಿಸಿಬಿಡುತ್ತೇನೆ.
ಈ ಮುದುಕರ ದೆಸೆಯಿಂದ ಹಲವು ಬಾರಿ ಅವರವರ ಮನೆಗೇ ಹೋಗಬೇಕಾದ ಪ್ರಸಂಗ ಬಂದಿದೆ. ‘ಅಮ್ಮನ್ನೇ ಕರೆಸು’ ಅಂತ ಅವರು ಪಟ್ಟು ಹಿಡಿದು ಕೂತರೆ ಗುಡ್ಡ ಸುತ್ತಿ, ಕಣಿವೆ ಇಳಿದು ಅವರವರ ಮನೆಯಲ್ಲೇ ಅವರನ್ನು ನೋಡಿಬರಬೇಕಾಗುತ್ತದೆ. ಒಮ್ಮೆ ಹೀಗೇ, ಒಂದು ಅಜ್ಜಿಯ ಮನೆಗೆ ಹೋದೆ. ಹೊಟ್ಟೆನೋವೆಂದು ಬೊಬ್ಬೆ ಹೊಡೆದು ಉರುಳುತ್ತಿದ್ದಾರೆಂದೂ, ಕೂಡಲೇ ಬರಬೇಕೆಂದೂ ಅವರ ಮೊಮ್ಮಗ ಬಂದವನು ಅಳುಮುಖ ಮಾಡಿ ಹೇಳಿದ. ಕವಳದ ಬಾಯಲ್ಲಿ ಸ್ವಾರಸ್ಯಭರಿತ ಕತೆಗಳನ್ನು ಹೇಳುತ್ತಿದ್ದ ಅಜ್ಜಿಯ ನೆನಪಾಗಿ ಎದ್ದುಬಿದ್ದು ಅಲ್ಲಿಗೆ ಹೋದರೆ, ಅಜ್ಜಿಯೇ ನಾಪತ್ತೆ! ಮೊಮ್ಮಗ ಆಚೆ ನನ್ನ ಕರೆಯಲು ಹೋದದ್ದೇ ಅಜ್ಜಿ ಸಂಡಾಸಿಗೆಂದು ಗುಡ್ಡೆಗೆ ಹೋಯಿತಂತೆ. ಸುಮಾರು ಹೊತ್ತಾದರೂ ಬರಲಿಲ್ಲ. ಅಜ್ಜಿಯ ಮಗ ಹೋದವರನ್ನು ಹುಡುಕಿಕೊಂಡು ಬರಲು ತಾನೂ ಹೋದ.
ಅಜ್ಜಿಗಾಗಿ ಕಾಯುತ್ತಾ ಮನೆಯೊಳಗಿನ ಲೋಕಾಭಿರಾಮ ಮಾತೆಲ್ಲ ಮುಗಿದು, ಸುತ್ತಲ ತೋಟ ನೋಡುವ ಅಂತ ಹೊರಗೆ ಬಂದೆ. ಅಜ್ಜಿಯ ಮೊಮ್ಮಗ ಸಾಕಿದ್ದ ಜೇನು ಪೆಟ್ಟಿಗೆ ನೋಡಿ, ರಾಣಿ ಜೇನನ್ನು ಹೇಗೆ ಗುರ್ತು ಹಿಡಿಯುವುದೆಂದು ಅವನನ್ನು ಕೇಳಿ ತಿಳಿದು, ಅವನು ಬಾಳೆಕೀತಿಗೆ ಹಾಕಿಕೊಟ್ಟ ತಾಜಾಜೇನನ್ನು ನೆಕ್ಕಿ ಸುಖಿಸಿದ್ದಾಯ್ತು. ಅಮೃತವೆಂದರೆ ಅದೇ ಇರಬೇಕು, ಅಷ್ಟು ಚೆನ್ನಾಗಿತ್ತು. ಮಳೆಗಾಲದಲ್ಲಿ ಜೇನು ಸಾಕಣೆ ಕಷ್ಟವೆಂದೂ, ಕಾಡಿನಲ್ಲಿ ಯಾವ ಹೂವೂ ಇರುವುದಿಲ್ಲವಾಗಿ ಸಕ್ಕರೆ ಪಾಕ ಮಾಡಿ ಹೊರಗೆ ಇಡದಿದ್ದರೆ ಅವು ಹಾರಿ ಹೋಗುತ್ತವೆಂದೂ ತಿಳಿಸಿದ. ಅರ್ಧವರ್ಷ ಕಾಡು ಅಲೆದು ಜೇನು ಸಂಗ್ರಹಿಸುವ ಜೇನ್ನೊಣಕ್ಕೆ ಇನ್ನರ್ಧ ವರ್ಷ ಸಕ್ಕರೆ ಪಾಕದ ಊಟ.! ಇಷ್ಟೆಲ್ಲ ಮಾತಾಗುವ ಹೊತ್ತಿಗೆ, ಅಜ್ಜಿ ಆರಾಮಾಗಿ ಮಾತನಾಡುತ್ತಾ ಸೊಸೆಯೊಂದಿಗೆ ಗುಡ್ಡ ಇಳಿದು ಬರುತ್ತಲಿದೆ! ‘ಏನು, ವೆಂಕಜ್ಜಿ, ನಿನ್ನ ಮೊಮ್ಮಗ ಬಂದು ಅಜ್ಜಿಗೆ ಸೀಕು ಜೋರು ಅಂದ ಹೇಳಿ ಇದ್ದಬದ್ದದ್ದನ್ನೆಲ್ಲ ಬಿಟ್ಟು ಓಡಿಬಂದರೆ, ನೀನು ಇಷ್ಟು ಆರಾಮಾಗಿ ಕವಳ ಜಕ್ಕಂತ ಬರ್‍ತಾಇದ್ದೆಯಲ್ಲ?’ ಎಂದು ಹಾಸ್ಯವಾಗಿ ಆರೋಪ ಮಾಡಿದೆ.
‘ಒಳಗೆ ಬನ್ರಾ ಅಮ, ಹೇಳ್ತೆ’ ಎನ್ನುತ್ತಾ ‘ಏ ತಮಾ, ಅಮ್ಮನಿಗೆ ಒಂದು ಕಂಬಳಿ ಹಾಸೋ. ಒಂದು ಚಲೋ ಬೊಂಡ, ಬಾಳೆಹಣ್ಣು ತಕಬಾರೋ’ ಎಂದೊಂದು ಅವಸರ, ಸಂಭ್ರಮದ ಕೂಗು ಹಾಕಿತು. ‘ನಿನ್ನೆ ನೆಂಟ್ರು ಬಂದಿದ್ರು ಹೇಳಿ ಚಟ್ಲಿ ಸಾರು, ಬಟಾಟೆ ಬೋಂಡ ಮಾಡಿದ್ರಾ ಅಮ. ರುಚಿ ನೋಡಿ ಹನಿ ತಿಂದುಬಿಟ್ಟೆ. ಹೊಟ್ಟೆಶೂಲೆ ಶುರುವಾತು ನೋಡ್ರಾ ಅದು ಹ್ಯಾಗೆ? ಬಾಳಂತಿ ಸೀಕೂ ನಂಗೆ ಈ ಪರಿ ಬಂದಿರ್ಲಿಲ್ಲ. ಈಗ ಮಲಶೋಧ ಆದ್ಮೇಲೆ ಎಲ್ಲ ಸರಿಯಾಯ್ತು’ ಎಂದು ಹೊಟ್ಟೆ ಖಾಲಿಯಾದ ನಿರಾಳದಲ್ಲಿ ಅಜ್ಜಿ ಬಾಯ್ತುಂಬಾ ಮಾತಾಡಿತು. ಆರಾಮ ಇದ್ದರೂ, ‘ಅಮ್ಮ ಮನೆ ಬಾಗ್ಲಿಗೆ ಬಂದಿದಾರಲ’ ಅಂತ ಬಿಪಿ ನೋಡಿಸಿಕೊಂಡು, ಒಂದು ಶಕ್ತಿ ಇಂಜೆಕ್ಷನ್ ಹಾಕಿಸಿಕೊಂಡು, ಜಾಜಿದಂಡೆಯನ್ನು ಕೊಟ್ಟುಕಳಿಸಿತು. ಅಜ್ಜಿಯ ಪಕ್ಕದ ಮನೆಯ ಅದರ ಗೆಳತಿ ( ಮತ್ತೊಂದು ನನ್ನ ಖಾಯಂ ಪೇಶೆಂಟ್) ಕೂಡ ಬಂದು, ಏನೋ ತೊಂದರೆಯೆಂದು ಒಂದು ಇಂಜೆಕ್ಷನ್ ತೆಗೆದುಕೊಂಡು ಹೋಯಿತು.
********
ಜೀವನದ ಇಳಿಗಾಲದಲ್ಲಿ ಬರುವ ಕೆಲ ಕಾಯಿಲೆಗಳು – ಪಾರ್ಶ್ವವಾಯು, ಕ್ಯಾನ್ಸರ್, ಎಲುಬು ಮುರಿತ, ಕುರುಡು, ಅಥವಾ ಮತ್ಯಾವುದೋ ಮುಪ್ಪಿನ ಕಾಯಿಲೆ- ಮುದಿ ಜೀವಗಳನ್ನು ಹಾಸಿಗೆ ಹಿಡಿಸಿಬಿಡುತ್ತದೆ. ಮೊದಲು ಜರ್ಬಿನಿಂದ ಅಡ್ಡಾಡಿಕೊಂಡು ಹೆಮ್ಮೆಯಿಂದ ಇದ್ದವರೂ ಈ ದೀರ್ಘಾವಧಿ ಕಾಯಿಲೆಗಳಿಂದ ದೈನ್ಯದ ಮೂರ್ತಿಯಾಗಿ ನಾಲ್ಕು ಮಾತನಾಡುವುದರೊಳಗೆ ಕಣ್ಣೀರಾಗಿಬಿಡುತ್ತಾರೆ. ಕಾಯಿಲೆಗಿಂತ ಹೆಚ್ಚಾಗಿ ಪರಾಧೀನವಾದ ತಮ್ಮ ಬದುಕಿನ ಬಗ್ಗೆ ಅವರು ಕುಗ್ಗಿಹೋಗುತ್ತಾರೆ. ‘ಆ ದೇವ್ರು ಯಾವಾಗ ಕಣ್ಣು ಹೊಡೀತಾನೋ, ಯಾವಾಗ ಕರುಸ್ಕತಾನೋ? ಸುಮ್ನೆ ಎಲ್ರಿಗೂ ಕಷ್ಟ’ ಎಂಬುದು ಸರ್ವೇ ಸಾಧಾರಣವಾಗಿ ಎಲ್ಲರ ಬಾಯಲ್ಲಿ ಬರುವ ಮಾತು. ಜೊತೆಯಿರುವವರಿಗೆ ತುಂಬ ಸಹನೆ, ಪ್ರೀತಿ ಇಲ್ಲದಿದ್ದರೆ ಮುದುಕರು ಮಾಡಿದ್ದನ್ನೆಲ್ಲ, ಹೇಳಿದ್ದನ್ನೆಲ್ಲ ಸಹಿಸುವುದು ಸುಲಭದ ಮಾತಲ್ಲ. ಈ ಮಾತು ಕಠಿಣವೆನಿಸಬಹುದು, ಆದರೂ ಎಷ್ಟೋ ಹಾಸಿಗೆ ಹಿಡಿದ ಮುದುಕರ ಸ್ಥಿತಿ ಕಂಡು ಅವರು ಬೇಗ ಈ ಜಗದ ಪಯಣ ಮುಗಿಸಲಿ ಅಂತ ನಾನು ಹಾರೈಸಿಕೊಂಡದ್ದಿದೆ. ಶೃಂಗೇರಿ ಶಾಸ್ತ್ರಿಗಳದ್ದೂ ಇಂಥದ್ದೇ ಒಂದು ಪಾಡು. ವರುಷ ತೊಂಭತ್ನಾಲ್ಕು. ಬಿಪಿ, ಡಯಾಬಿಟಿಸ್, ಹೃದಯದ ಕಾಯಿಲೆ ಎಲ್ಲವೂ ಇದ್ದು, ಎರಡು ಬಾರಿ ಪಾರ್ಶ್ವವಾಯುವಾಗಿ, ಎಲ್ಲದರಿಂದ ಪಾರಾಗಿ ಬದುಕಿರುವ ಅವರಿಗೆ; ಈ ವಯಸ್ಸಿನಲ್ಲೂ ಮೊದಲಿನ ಹಾಗೇ ಕಟ್ಟುನಿಟ್ಟಾಗಿ ಬೆಳಿಗ್ಗೆ ಏಳೂವರೆಗೇ ತಿಂಡಿ -ಅದೂ ದೋಸೆ ಬೆಲ್ಲವೇ- ತಯಾರಾಗಬೇಕು. ಮಧ್ಯಾಹ್ನ ಹನ್ನೆರಡೂವರೆಗೆ ಸರಿಯಾಗಿ ಊಟ. ಸಂಜೆ ಏಳೂವರೆಗೆ ಸರಿಯಾಗಿ ಊಟ. ಈ ಟೈಮ್ ಟೇಬಲ್ ಸ್ವಲ್ಪ ಹೆಚ್ಚುಕಮ್ಮಿಯಾದರೂ ಆಕಾಶ ಭೂಮಿ ಒಂದು ಮಾಡುತ್ತಿದ್ದರು. ಪಾರ್ಶ್ವವಾಯುವಲ್ಲದೇ, ಮೂತ್ರನಾಳದ ಸುತ್ತ ಇರುವ ಪ್ರಾಸ್ಟೇಟ್ ಗ್ರಂಥಿಯ ತೊಂದರೆಯಿಂದ ಅವರಿಗೆ ಮೂತ್ರಕ್ಕೆ ಕ್ಯಾಥೆಟರ್(ನಳಿಕೆ) ಹಾಕಿಯೇ ಇಡಲಾಗಿತ್ತು. ಅದನ್ನು ಬ್ಲಾಕ್ ಆದ ಹಾಗೆಲ್ಲ ಪದೇಪದೇ ಬದಲಾಯಿಸಲು ಅವರ ಮನೆಗೆ ಹೋಗಬೇಕಾಗಿತ್ತು. ಆಗೆಲ್ಲ ಅವರ ನೇಮ ನೋಡಿ ಅಚ್ಚರಿಯಾಗುತ್ತಿತ್ತು. ಮಲವಿಸರ್ಜನೆಗೆ ಕುಳಿತಿದ್ದು ತೂತು ಇರುವ ಕುರ್ಚಿಯಾದರೇನಂತೆ? ಕಿವಿಯ ಮೇಲೆ ಜನಿವಾರ ಬರಲೇಬೇಕು. ದಿನವೂ ಸ್ನಾನವಾಗಬೇಕು. ಡಯಾಬಿಟಿಸ್ ಹಸಿವೆಗೆ ಸೊಸೆ ರಾತ್ರಿ ಎದ್ದು ಹವಿಸ್ಸು ಪೂರೈಸುತ್ತಿರಬೇಕು. ವರ್ಷಗಟ್ಟಲೆಯಿಂದ ಮಲಗಿ ಮಲಗಿ ಇರುವ ಬೆನ್ನಿನ ಗಾಯಗಳನ್ನು ಪೌಡರ್ ಹಾಕಿ ಪರಿಮಳಗೊಳಿಸಬೇಕು. ಇದೆಲ್ಲವನ್ನು ತುಂಬ ಮುತುವರ್ಜಿಯಿಂದ ಮಾಡುವ ಅವರ ಸೊಸೆಗೆ ಯಾವ ಪ್ರಶಸ್ತಿ ಕೊಟ್ಟರೂ ಕಡಿಮೆಯೆ. ಅವರಿಗೆ ಕ್ಯಾಥೆಟರ್ ಹಾಕಿ ನಾನು ಹೊರಟು ನಿಂತಾಗ ‘ಒಂದು ಹನಿ ಚಾ ಕುಡದಾದರೂ ಹೋಗೇ ಮಾರಾಯ್ತಿ’ ಅಂತ ಒತ್ತಾಯಿಸಿ ಅಳುದನಿ ತೆಗೆಯುತ್ತಾರೆ. ನನ್ನ ಜೊತೆ ಅವರೂ ಒಂದು ಲೋಟ ಸಕ್ಕರೆ ಹಾಕಿದ ಚಾ ಕುಡಿಯುತ್ತಾರೆ. ಪ್ರತಿಬಾರಿ ಹೊರಡುವಾಗೊಮ್ಮೆ ‘ನನಗೇನೂ ತೊಂದ್ರೆ ಇಲ್ಲಲಾ?’ ಎಂದು ಮತ್ತೆರೆಡು ಬಾರಿ ಕೇಳಿ ಗಟ್ಟಿಮಾಡಿಕೊಳ್ಳುತ್ತಾರೆ. ಅವರ ಜೀವನ ಪ್ರೀತಿಗೆ, ಬದುಕುವ ಆಶೆಗೆ ನಾನು ಮೂಕಳಾಗುತ್ತೇನೆ. ಜೀವನಪ್ರೀತಿಗೂ, ತಿನ್ನುವ ಆಶೆಗೂ ಸಂಬಂಧವಿರಬೇಕು.
ಕೆಲವರಿಗೆ ಏನಾದರೂ ಮದ್ದಿನ ಮೇಲೇ ಇರುವ ಬಯಕೆ. ಸಣ್ಣ ಶಂಕೆಯಾದರೂ ಸಾಕು, ಬಂದೇಬಿಡುತ್ತಾರೆ. ‘ನೀವು ಹೋದ ಸಲ ಕೊಟ್ಟ ಹಣ್ಣಿನ ರಸದ ಟಾನಿಕ್ ಭಾಳ ಲಾಗೂ ಆಯ್ತು. ಈ ಸಲ ಸೇಬು ಹಣ್ಣಿಂದೇ ಕೊಡಿ. ಕಿತ್ತಳೆ ಹಣ್ಣಿಂದು ಥಂಡಿ ಆಗುತ್ತೆ’ ಎನ್ನುತ್ತಾರೆ! ಆ ಟಾನಿಕ್‌ಗಳಿಗೆಲ್ಲ ಹಣ್ಣಿನ ರಸದ ಪರಿಮಳವನ್ನಷ್ಟೇ ಸೇರಿಸಿರುತ್ತಾರೆ, ಅದು ನಿಜವಾದ ಹಣ್ಣಿನ ರಸವಲ್ಲವೆಂದು ಹೇಳಿ ಅವರ ನಂಬಿಕೆಗೆ ಕೊಳ್ಳಿಯಿಡಲೆ?
ಕೆಲವು ಹಿರಿಯ ಜೋಡಿಗಳು ಒಟ್ಟಿಗೇ ಬರುತ್ತಾರೆ, ಒಟ್ಟಿಗೇ ಹೋಗುತ್ತಾರೆ. ಒಬ್ಬರು ಟೇಬಲ್ ಹತ್ತಿದ ಕೂಡಲೇ ಮತ್ತೊಬ್ಬರು ಅವರಿಗಾಗುವ ತೊಂದರೆಗಳ ಬಗ್ಗೆ ಕೂಲಂಕುಶವಾಗಿ ವಿವರಿಸಿ, ಅವರು ಬೇಡವೆಂದರೂ ಬಿಡದ ಕೆಲವು ಚಟಗಳ ಬಗ್ಗೆ ಹೇಳಿ, ‘ಬಗೇಲಿ ಚಲೋ ಮಾಡಿ ನೋಡ್ರಾ’ ಶಿಫಾರಸ್ಸು ಮಾಡುತ್ತಾರೆ. ಇಳಿವಯಸ್ಸಿನಲ್ಲಿ ಪರಸ್ಪರರ ಬಗೆಗಿನ ಅವರ ಕಾಳಜಿ, ಪ್ರೇಮ ನನ್ನನ್ನು ಆನಂದವಶ ಮಾಡುತ್ತದೆ. ಪ್ರಾಯಕಾಲದಲ್ಲಿ ಲೈಂಗಿಕ ಅವಲಂಬನೆ ಇದ್ದಾಗ ಒಬ್ಬರನ್ನೊಬ್ಬರು ಓಲೈಸುವುದು, ಚೆನ್ನಾಗಿ ನೋಡಿಕೊಳ್ಳುವುದು ಏನೂ ವಿಶೇಷವೆನಿಸುವುದಿಲ್ಲ. ಪಂಚೇಂದ್ರಿಯಗಳು ಕುಸಿಯುತ್ತಿರುವಾಗ ತೋರುವ ಈ ಪ್ರೀತಿಗೆ ಅವಲಂಬನೆಯೊಂದೇ ಪ್ರೇರಣೆಯೆ? ‘ನಾನಿರುವಾಗ್ಲೇ ಅದು ಸತ್ರೆ ಚಲೋ. ನಾ ಹೋದ್ಮೇಲೆ ಅದ್ನ ಯಾರು ನದರುಸ್ತಾರೆ?’ ಎಂಬುದು ಬಹುತೇಕ ಅಜ್ಜಂದಿರ ಅಭಿಪ್ರಾಯ. ‘ಹೆಣ್ಮಕ್ಳೆಲ್ಲ ಬೇರೆ ಮನೆ ಸೇರಿದ್ರು. ಸೊಸೆದಿಕ್ಳು ಬೇರೆ ಮನೆಯವ್ರು. ನಾನಲ್ದೆ ಅವೆಲ್ಲ ಇವ್ರ ಚಾಕ್ರಿ ಮಾಡ್ತಾರಾ’ ಎಂಬುದು ಅಜ್ಜಿಯರ ಅಳಲು. ರಿಟೈರ್‌ಮೆಂಟ್ ಇಲ್ಲದ ಅಡಿಗೆಮನೆ ಕೆಲಸದಿಂದ ಮುಕ್ತಿ ಹೊಂದಲು ಅವರಿಗೆ ಸಾವೆಂಬ ಕರುಣಾಳುವೇ ಬರಬೇಕು.
ಒಂದು ಡಜನ್ ಮಕ್ಕಳ ತಾಯಿಯಾದ ಪಾರ್ವತಜ್ಜಿ ಒಮ್ಮೆ ಪಾಶ್ವವಾಯು ಹೊಡೆದು ಹದಿನೆಂಟು ದಿನ ಆಸ್ಪತ್ರೆಯಲ್ಲಿತ್ತು. ಎಲ್ಲ ಮಕ್ಕಳೂ ಕೆಲಸ, ಜಮೀನು ಅಂತ ಬೇರೆಬೇರೆ ಕಡೆ ಇದ್ದು ಮೂಲ ಮನೆಯಲ್ಲಿದ್ದದ್ದು ಅಜ್ಜ ಅಜ್ಜಿ ಇಬ್ಬರೇ. ಮೊದಲ ಆರು ದಿನ ಮೈಮೇಲೆ ಪ್ರಜ್ಞೆಯಿಲ್ಲದೇ ಮಲಗಿದ್ದ ಅಜ್ಜಿ ಏಳನೇ ದಿನ ಪ್ರಜ್ಞೆ ಮರಳಿದ ಕೂಡಲೇ ಮೊದಲು ಹೇಳಿದ್ದು ಏನು ಗೊತ್ತೆ? ‘ಅಯ್ಯೋ, ಬೆಳಗಾಗೋಯಿದು. ಅವ್ರಿಗೆ ದೋಸೆ ಎರೆಯಕಾಗಿತ್ತು, ತಡಾಗೋತು. ಇದೆಲ್ಲಿ ಬಂದಿದ್ದೆ ನಾನು?’ ದೋಸೆ ಎರೆಯಬೇಕೆಂದುಕೊಳ್ಳುತ್ತಿರುವಾಗ ಎಚ್ಚರ ತಪ್ಪಿದ್ದು, ಈಗ ಪ್ರಜ್ಞೆ ಮರಳಿದ ಕೂಡಲೇ ಅಲ್ಲಿಂದಲೆ ತನ್ನ ದಿನ ಶುರುಮಾಡುತ್ತಿದೆ!
ಒಮ್ಮೆ ಮಾಳು ಅಜ್ಜಿಗೆ ಹೇಳಿದೆ, ‘ನೋಡಜ್ಜಿ, ಈಗಿನ ಕಾಲದ ಎಷ್ಟೋ ಗಂಡಂದಿರು ಹೆಣ್ತಿ ಬಗ್ಗೆ ಹನಿ ಪ್ರೀತಿ ಇಲ್ದೇ ಸಾರಾಯಿ ಕುಡದು ಬಿದ್ದಿರ್‍ತಾರೆ. ಅಂತದ್ರಲ್ಲಿ ನಿಮ್ಮೆಜಮಾನ್ರು ನಿನಗೆ ಪ್ರೀತಿಯಿಂದ ಸೊಂಟನೋವು, ಶಕ್ತಿಗೆಲ್ಲ ಇಂಜೆಕ್ಷನ್ ಕೊಡಿಸ್ತಿದಾರೆ’ ಅಂತ. ಅದಕ್ಕೆ ಆ ಅಜ್ಜಿ ಏನು ಹೇಳಬೇಕು? ‘ಗಂಡು ಮಕ್ಳೆಲ್ಲ ಪಾಲಾಗಿ ಬ್ಯಾರೆ ಹೋಗಾರೆ ಅಮ್ಮ. ಇವ್ರೂ ಪ್ರಾಯ ಇದ್ದಾಗ ಕುಡ್ಕಬಂದಿ ನಂಗೇನು ಸ್ವಲ್ಪಾ ಹೊಡೀತಿರ್ಲಿಲ್ಲ. ಈಗ ಆ ನೋವೆಲ್ಲ ನಂಗೆ ಕೆಣಕ್ತೇ ಇರ್ತದೆ. ಕೆಲ್ಸ ಮಾಡಕ್ಕಾಗೂದಿಲ್ಲ ಅಂತೀನೇನೋ ಹೇಳಿ ಇಂಜೆಕ್ಷನ್ ಕೊಡುಸ್ತಾರೆ ಅಷ್ಟೇ’!!
*******
ತುಂಬ ವಯಸ್ಸಾದ ಮೇಲೆ ಯಾವ ಕಾರಣಕ್ಕೇ ಆಸ್ಪತ್ರೆ ಸೇರಲಿ, ಗುಣಮುಖರಾಗುವ ಹೊತ್ತಿಗೆ ಹೆಚ್ಚಿನವರು ಅರಳುಮರುಳಿನಂತೆ ವರ್ತಿಸಲು ಶುರುಮಾಡುತ್ತಾರೆ. ಕೆಲವರು ರೂಮಿನಲ್ಲೇ ಒಂದು ಮೂಲೆಗೆ ಮಕ್ಕಳ ತರ ಉಚ್ಚೆಹಾರಿಸಿದರೆ, ಮತ್ತೆ ಕೆಲವರು ‘ಕೂ-ಹೊಯ್’ ಎಂದು ತೋಟಕ್ಕೆ ಹೋದ ಮಗನನ್ನು ಊಟಕ್ಕೆ ಕರೆಯುತ್ತಾರೆ! ಕೆಲವರು ಬಟ್ಟೆಯ ಮೇಲೆ ಅತಿ ಪ್ರೀತಿ ತಳೆದು, ಹೊದೆದ ಹಾಗೂ ರಗ್ಗನ್ನು ಮತ್ತೆ ಮೈಮೇಲೆ ಎಳೆದುಕೊಳ್ಳುತ್ತಿದ್ದರೆ, ಕೆಲವರು ಕೌಪೀನವನ್ನೂ ಕಳಚಿ ಜನ್ಮಕಾಲದ ವೇಷ ತಳೆಯುತ್ತಾರೆ. ಬಾಯಿಗೆ ಬಂದಂತೆ ಹಲುಬುತ್ತಾ ಇದುವರೆಗೆ ಆಡಲಾರದೇ ಮುಚ್ಚಿಟ್ಟುಕೊಂಡ ಮಾತುಗಳನ್ನೆಲ್ಲಾ ಆಡುವುದು, ಯಾರನ್ನೂ ಗುರುತಿಸದೇ ಹೋಗುವುದು, ಸಣ್ಣ ಮಕ್ಕಳ ತರಹ ವರ್ತಿಸುವುದು-ಎಲ್ಲ ಮಾಡುತ್ತಾರೆ. ಅಂತವರು ಮನೆಗೆ ಹೋಗಿ ಮಾಮೂಲಿ ಕ್ರಿಯೆಗಳಲ್ಲಿ ತೊಡಗಿಕೊಂಡರೆ- ಅದು ಚೊಂಬು ತಗೊಂಡು ಗುಡ್ಡೆಗೆ ಹೋಗುವುದಿರಬಹುದು, ಕವಳ ಜಪ್ಪುವುದಿರಬಹುದು, ಒಂದು ದೊಡ್ಡ ಲೋಟ ತುಂಬಾ ಚಾ ಇರಬಹುದು- ಸರಿಯಾಗಿಬಿಡುತ್ತಾರೆ.
ಮುದಿತನ ಎಲ್ಲ ವಿಷಯಗಳಲ್ಲಿ ಅಕರಾಸ್ಥೆ ಬೆಳೆಸುತ್ತದೆ. ಯಾರ್‍ಯಾರಿಗೆ ಎಷ್ಟು ಮಕ್ಕಳು, ಯಾರ ಮದುವೆ ಯಾವಾಗ ಆಯಿತು, ಎಲ್ಲೆಲ್ಲಿಯ ಸಂಬಂಧಗಳು, ಮದುವೆಗೆ ಎಷ್ಟು ಸಾಲವಾಯಿತು, ಏನು ಭಕ್ಷ್ಯ ಎಂಬುದೆಲ್ಲ ವಿವರಗಳು ಅವರ ಬಳಿ ಸ್ಟೋರ್ ಆಗಿರುತ್ತವೆ. ಎಲ್ಲರನ್ನೂ ಹೋಲಿಸುತ್ತ ಸರಿದೂಗಿಸುತ್ತ ಹಲವು ಬಾರಿ ಕಣಿವೆಗಳ ನಡುವಿನ ಸೇತುವೆಯಂತೆ ಕೆಲಸ ಮಾಡುತ್ತಾರೆ. ಅದಕ್ಕೇ ಗಾದೆ ಮಾತಿರುವುದು, ‘ಮನೆಗೊಂದು ಮುದಿಗೊರಡು, ಒಲೆಗೊಂದು ಒತ್ತುಗೊರಡು’ ಎಂದು. ಒಟ್ಟಾರೆ ಎಲ್ಲರಿಗಾಗಿ ಎಲ್ಲದಕ್ಕಾಗಿ ಕಾತರಿಸುವ ಆ ಹಿರಿಯ ಜೀವಗಳು ಹೆಚ್ಚು ನವೆಯದೇ ಇಹಲೋಕ ತ್ಯಜಿಸಿದರೆ ಅವರ ಹಾಗೂ ಜೊತೆಯಿರುವವರ ಪುಣ್ಯ.
[ಚಿತ್ರಗಳು: ಮಹೇನ್ ಸಿಂಹ ಮತ್ತು ರಶೀದ್]
6. ಕವಲಕ್ಕಿಯ ಡಾಕ್ಟರಮ್ಮ ಬರೆವ ಕರಾವಳಿ ಕಾರ್ಗಾಲ ವೈಭವ
ಇಲ್ಲೇ ಹುಟ್ಟಿ ಬೆಳೆದು ಓದಿಗಾಗಿ ಬಯಲುಸೀಮೆ ಊರು ಸೇರಿರುವ ಮಗಳು ಫೋನು ಮಾಡಿದಾಗೆಲ್ಲ ಕೇಳುತ್ತಾಳೆ, ‘ಅಲ್ಲಿ ಮಳೆ ಶುರು ಆಗಿದೆಯಾ ಅಮ್ಮ?’ ಎಂದು. ಮಳೆ ಸುರಿಯುತ್ತಿದ್ದರೆ ಅದರ ಶಬ್ದ ಕೇಳುವ ಬಯಕೆ, ಅಮ್ಮನಿಗೆ ಹೊರಗೆ ಬಾ ಎಂದು ಕರೆಯುತ್ತಾಳೆ. ‘ಮಳೆಯ ವೀಡಿಯೋ ತೆಗೆದು ನನಗೆ ಮೇಲ್ ಮಾಡು’ ಎನ್ನುತ್ತಾಳೆ. ‘ಇದೊಂದು ವಿಚಿತ್ರ ಊರಪ್ಪ, ಜುಲೈ ತಿಂಗಳಾದ್ರೂ ಸುರಿಯೋ ಮಳೆನೇ ಇಲ್ಲ. ಸರ್ ಅಂತ ಹೀಗೆ ಬಂದು ಹಾಗೆ ಹೋಗಿಬಿಡುತ್ತೆ.’ ಎನ್ನುವಾಗ ಅವಳ ಕಣ್ಣಲ್ಲಿ ಸೋನೆಮಳೆ ಹನಿಯಲು ಶುರುವಾದದ್ದು ಗದ್ಗದಗೊಂಡ ದನಿಯಿಂದ ತಿಳಿಯುತ್ತದೆ. ಪಾಲಕರು ಬರದಿದ್ದಕ್ಕಿಂತ ಹೆಚ್ಚು ಬೇಜಾರು ಬಾರದ ಮಳೆಯ ಮೇಲೆ…
ಬಯಲುಸೀಮೆಯವನಾದ ಎಳೆಯಗೆಳೆಯನಿಗೆ ಮಳೆ ಸುರಿಯುತ್ತಿರುವಾಗೊಮ್ಮೆ ಮಾತನಾಡುತ್ತಾ ಕಣ್ಣೆದುರು ಕಾಣುತ್ತಿದ್ದ ಒಂದು ಅದ್ಭುತದ ಬಗ್ಗೆ ಹೇಳಿದೆ. ಸಾವಿರಾರು ಲೈಟುಗಳು ಒಮ್ಮೆಲೇ ಹತ್ತಿ ಆರುತ್ತಿರುವಂತೆ ತೋರುತ್ತಿದ್ದ ಮಿಣುಕುಹುಳ ತುಂಬಿದ ಮರವೊಂದು ಮನೋಹರವಾಗಿ ನನ್ನ ಕಣ್ಣೆದುರೇ ಕಂಗೊಳಿಸುತ್ತಿದ್ದುದನ್ನು ಕೇಳಿ ‘ಬರೀ ನೋಡೋ ಕಣ್ಣಿದ್ರೆ ಸಾಲ್ದು, ನೋಡಕ್ಕೂ ಪುಣ್ಯ ಮಾಡಿರ್‍ಬೇಕು. ಈ ಮಳೆಗಾಲ ನಿಮ್ಮಲ್ಲಿ ನಾವು ಗೆಳೆಯರೆಲ್ಲ ಬಂದೇ ಬರುತ್ತೇವೆ.’ ಎಂದು ಅವನು ಶಪಥ ಮಾಡಿದ್ದಾನೆ.
*********
ಜೂನ್ ತಿಂಗಳು ಹಗಲು ದೀರ್ಘವಾಗಿರುತ್ತದೆ. ಬೆಳಿಗ್ಗೆ ಆರರ ಒಳಗೇ ಸೂರ್ಯ ಹುಟ್ಟಿಯಾಗಿರುತ್ತದೆ. ಬೆಳಿಗ್ಗೆ ಎಲ್ಲರಿಗಿಂತ ಮುಂಚೆ ಏಳುವುದು ಮಡಿವಾಳ ಹಕ್ಕಿ. ಕತ್ತಲನ್ನು ಸರಿಸುತ್ತಾ ಮೆಲ್ಲಮೆಲ್ಲನೆ ಬೆಳಗು ಬಾನಂಚಿನಲ್ಲಿ ಹೆಜ್ಜೆ ಮೇಲೆ ಹೆಜ್ಜೆಯಿಡುತ್ತಾ ಬರುತ್ತಿರುವಾಗ ಮುಂಜಾನೆ ಐದೂವರೆಗೆಲ್ಲ ಅದು ತನ್ನ ರಾಗ ಶುರು ಮಾಡುತ್ತದೆ. ಹಾಡಾದರೂ ಎಂಥ ಹಾಡು! ತರಹೇವಾರಿ ಧ್ವನಿ ಶೃತಿಗಳು ಮೇಳೈಸಿ ಯಾರ ಜೊತೆಯೋ ಭಾವಪೂರ್ಣ ಸಂಭಾಷಣೆ ನಡೆಸುತ್ತಿದೆಯೇನೋ ಎನ್ನಬೇಕು, ಹಾಗೆ ವಿಭಿನ್ನ ಸ್ವರಗಳಲ್ಲಿ ಕೂಗುತ್ತಿರುತ್ತದೆ. ಅದರ ಬೆನ್ನ ಹಿಂದೇ ಸಂಗೀತ ಕಚೇರಿಗೆ ಸಾಥ್ ನೀಡಲು ಪಿಕಳಾರ, ನಂತರ ಕಾಜಾಣ, ನಂತರ ಬಿಟ್ಟು ಬಿಟ್ಟು ಕೇಕೆ ಹಾಕುವ ನವಿಲು… ಹೀಗೇ…
ಇದ್ದಕ್ಕಿದ್ದಂತೆ ಏಕೋ ಎಲ್ಲ ಸುಮ್ಮನಾಗುತ್ತಾರೆ. ಎಲ್ಲವೂ ಸ್ತಬ್ಧವಾಗುತ್ತದೆ. ಪಡುಬದಿಯಿಂದ ದಟ್ಟ ಕಾರ್ಮೋಡವೊಂದು ನಮ್ಮ ಮೇಲೆರಗುವವರ ಹಾಗೆ ಧಾವಿಸುತ್ತದೆ. ಪುಟ್ಟ ಪುಟ್ಟ ಬೆಟ್ಟಗಳು, ಬೆಟ್ಟದ ಬುಡದ ಮನೆಗಳು, ಹಸಿರು ಎಲ್ಲದರ ಮೇಲೆ ಮೋಡ ಮುಸುಕಲು ಶುರುವಾಗುತ್ತದೆ. ಅಷ್ಟೇ ಸಾಲದೆಂಬಂತೆ ಹೊಗೆಯಂತಹ ತೆಳುಮೋಡವೊಂದು ಕಣಿವೆಯಲ್ಲಿ ನಿಧಾನವಾಗಿ ಕೆಳಗಿಳಿಯುತ್ತದೆ. ಸುಳಿಯುವ ಗಾಳಿಯೆದುರೆ ಚಲಿಸುವ ತೆಳು ಬಿಳಿ ಮೋಡಗಳು…ಮೆಲ್ಲ ಗಾಳಿ ಬೀಸುತ್ತಿರುವ ಸದ್ದು.. ಪಟಪಟ ಎಲೆಗಳು ಅಲುಗುತ್ತಿರುವ ಸದ್ದು..
ಅಕೋ ದೂರದಲ್ಲಿ ಯಾವುದೋ ದಂಡು ಬರುತ್ತಿರುವ ಸದ್ದು. ದೂರದಲ್ಲೆಲ್ಲೋ ಕೇಳಿಬರುತ್ತಿದ್ದ ಭರ್ರೋ ಎಂಬ ಶಬ್ದ ಬರಬರುತ್ತಾ ಹತ್ತಿರವಾಗುತ್ತಿರುವುದು ತಿಳಿಯುತ್ತದೆ. ತಣ್ಣನೆಯ ಗಾಳಿಯೊಂದು ಒಡಲಾಳದವರೆಗೂ ತಂಪು ಹರಿಸುವವರಂತೆ ಬೀಸುತ್ತಾ ಉಸಿರೊಳಗಿಳಿಯುತ್ತದೆ. ಗಾಳಿಯೊಳಗೇ ಅಡಗಿದ ಮಣ್ಣವಾಸನೆ ಏನೇನೋ ನೆನಪುಗಳ ಕೋಶವನ್ನು ಜಾಗೃತಗೊಳಿಸಿ, ಖುಷಿ ಎಲ್ಲೆಲ್ಲೂ ಆವರಿಸಿ, ಉಮ್ಮಳಿಸಿ ಬಂದಂತೆ ಆಗುತ್ತಿರುವಾಗಲೇ ಬೀಳುತ್ತಿದೆ ಮುತ್ತಿನಹನಿ…
ಈಗ ಹತ್ತು ಹನಿ ಬಿದ್ದದ್ದು ಮರುಕ್ಷಣ ಸಾವಿರವಾಯಿತು. ನೋಡನೋಡುತ್ತಿದ್ದಂತೆ ಸೈನ್ಯವೊಂದು ಹತ್ತಿರ ಹತ್ತಿರ ಬರುತ್ತಿರುವಂತೆ ಕೇಳುತ್ತಿರುವ ಶಬ್ದ ಕಿವಿಯೊಳಗೆಲ್ಲ ತುಂಬೇ ಬಿಡುತ್ತದೆ. ನಡುನಡುವೆ ಮಳೆಹಿಂಡನ್ನು ದಾರಿತಪ್ಪದಂತೆ ನಡೆಸಿಕೊಂಡು ಹೋಗುವ ಗುಡುಗುರಾಯ… ಮಿಂಚಿನ ಬಾರುಕೋಲು…ಭರ್ರೋ ಎಂದು ಹುಯ್ಯಲು ಶುರುವಾದ ಮಳೆಗೆ ನಾನು ಹೇಳುತ್ತಿರುವುದು ನಿಮಗೆ ಕೇಳಿಸುತ್ತಿದೆಯೆ? ಬೆಳಕು ಸರಿಯಾಗಿ ಹರಿಯುವ ಹೊತ್ತಿಗೇ ಸುರಿಯಲು ಶುರುವಾದ ಮಳೆಯಿಂದ ಹಾಸಿಗೆಯಲ್ಲಿರುವವರು ಮೇಲೇಳಲು ನಿರಾಕರಿಸುತ್ತಿದ್ದಾರೆ.. ಮಗು ಇಂದು ಶಾಲೆಗೆ ಮಳೆರಜೆ ಕೊಡಬಾರದೇ ಎಂದು ಹಾರೈಸುತ್ತಿದೆ.. ಬೆಟ್ಟಬೇಣಗಳನ್ನು ತಲುಪಿ ಸೊಪ್ಪಿನ ಸಂಗ್ರಹದಲ್ಲಿ ತೊಡಗಿದ್ದವರು ಗೊರಬು ಸೂಡಿಕೊಂಡು ಬೇಗಬೇಗ ಮನೆದಾರಿ ಹಿಡಿಯುತ್ತಾರೆ.. ಸೋರಬಹುದಾದ ಮನೆಯ ಕಾಳಜಿ ಓಡುವ ಹೆಜ್ಜೆಗಳಲ್ಲಿ ವ್ಯಕ್ತವಾಗುತ್ತಿದೆ.. ಮನೆತೋಟಗಳ ಸುತ್ತಲೂ ನೀರಿಗೆ ಹೊಸ ಹರಿಯುವ ದಾರಿ ಮಾಡಿಕೊಡಲು ಪಿಕಾಸಿ ಹಿಡಿದು ಗಂಡಸರು ಓಡುತ್ತಿದ್ದಾರೆ.. ಮೂರು ತಿಂಗಳು ಮೀನಿನ ಬಲೆಗೆ ರಜೆಯೆಂದು ಹೊಳೆಯಲ್ಲಿ ತೊಳೆದು ಒಣಗಿಸಿದ್ದು ಸರಿಯಾಗಿ ತೆಗೆದಿಟ್ಟೆನೇ ಎಂದು ಕಡಲಮಗ ನೆನಪಿಸಿಕೊಳ್ಳುತ್ತಿದ್ದಾನೆ.. ‘ಅಬ್ಬಾ ಅಂತೂ ಮಳೆ ಬಂತು’ ಎಂದು ಕಳೆದು ಹೋದ ಮನೆಮಗ ಸಿಕ್ಕಿದ ಹಾಗೆ ಕಾಡುಕಣಿವೆಗಳ ಜನ ಸಂಭ್ರಮಗೊಂಡಿದ್ದಾರೆ.
ಪಕ್ಕದ ಸಣ್ಣಪುಟ್ಟ ಗುಡ್ಡಗಳಿಂದ ಕೆನ್ನೀರು ಹರಿದು ಬಂದು ಎಲ್ಲ ಸೇರಿ ಅದೇ ದೊಡ್ಡ ಹಳ್ಳದಂತೆ ಭಾಸವಾಗುತ್ತದೆ. ಬೇಸಿಗೆಯ ಕೊಳೆಕಸಗಳನ್ನೆಲ್ಲ ಗುಡಿಸಿ ತಂದು ಗುಡ್ಡೆಹಾಕುವ ಮಳೆರಾಯ ಮುಳ್ಳಿನ ಹಿಂಡೊಂದರಲ್ಲಿ ಸಿಕ್ಕಿಬಿದ್ದಿದ್ದಾನೆ. ಗುಡ್ಡ ಕೊರೆದು ಮಾಡಿದ ರಸ್ತೆಗಳ ಎರಡೂ ಕಡೆ ಪುಟ್ಟಪುಟ್ಟ ಜಲಪಾತಗಳ ಸರಮಾಲೆ, ರಸ್ತೆ ತುಂಬ ನೀರು, ಅಂಗಳ ತುಂಬ ನೀರು… ಗದ್ದೆಬಯಲೆಲ್ಲ ನೀರು.. ತೆಂಗಿನ ಗುಂಡಿ ತುಂಬ ನೀರು.. ಮಾಡಿನಿಂದ ಟಪಟಪ ಸೋರುತ್ತಾ ಕೆಳಗೆ ಹನಿಯುವ ಮಳೆನೀರು.. ಇನ್ನು ಎರಡು ಮಳೆ ಹೀಗೇ ಬರಲಿ, ಬಾವಿಯಲ್ಲಿ ಕೈಹಾಕಿ ತುಂಬಬಹುದು ಅಷ್ಟು ಮೇಲೇ ನೀರು..
ಎಲ್ಲೆಲ್ಲೂ ನೀರೇ…
*******
ಇದು ಕರಾವಳಿಗೆ ಮೊದಲು ಬಂದಿಳಿಯುವ ಮಳೆಯ ಶುರುವಿನ ಒಂದು ಝಲಕ್.
ಹೀಗೆ ಶುರುವಾಗುವ ಸರ್ಕಾರಿ ಮಳೆಗೆ ಎಲ್ಲ ಮೊದಲಿನಿಂದಲೇ ತಯಾರಿ ನಡೆಸಿರುತ್ತಾರಾದರೂ ಅದೆಷ್ಟು ಅಪೂರ್ಣ ಎಂದು ಮಳೆ ಸುರಿಯತೊಡಗಿದ ಮೇಲೇ ತಿಳಿಯುವುದು. ಕೆಲವು ಬಾರಿ ತಾಸರ್ಧ ತಾಸಿಗೇ ನಿಲ್ಲುವ ಮಳೆ, ಮತ್ತೆ ಕೆಲವೊಮ್ಮೆ ಹಗಲು ರಾತ್ರಿಯೆನ್ನದೇ ದಿನವಿಡೀ ಸುರಿದೀತು. ಮಳೆಗೆ ಯಾವ ರಾಯನ ನಿಯಂತ್ರಣ? ಈ ಮಳೆಗೆ ಛತ್ರಿ ಕಂಬಳಿಗಳೆಲ್ಲ ಯಾವ ಲೆಕ್ಕವೂ ಅಲ್ಲ. ಜೋರು ಮಳೆಗೆ ಛತ್ರಿ ಹಿಡಿದಿದ್ದರೂ ನಾಕು ಮಾರು ನಡೆಯುವುದರಲ್ಲಿ ಮೈಯೆಲ್ಲ ಪೂರ್ತಿ ಒದ್ದೆ. ಇದ್ದಿದ್ದರಲ್ಲಿ ಪ್ಲಾಸ್ಟಿಕ್ ಹೊದ್ದ ಗೊರಬೇ ಅಡ್ಡಿಯಿಲ್ಲ. ಅದಕ್ಕೇ ಇರಬೇಕು, ಅದು ನೆಟ್ಟಿ ಹೆಂಗಸರ ನೆಚ್ಚಿನ ಗುರಾಣಿ.
ಮಳೆಗಾಲಕ್ಕೆ ಸರಕಾರದ ಕೊಡುಗೆ ಎಂದರೆ ಉಚಿತ, ನಿರಂತರ, ವಿದ್ಯುತ್ ನಿಲುಗಡೆ! ಒಂದಲ್ಲಾ ಒಂದು ಮರ ಕರೆಂಟು ಲೈನಿನ ಮೇಲೆ ಬೀಳುತ್ತಲೇ ಇರುತ್ತದೆ. ಅದನ್ನು ‘ಕ್ಲಿಯರ್’ ಮಾಡಲು ಲೈನ್ಮ್ಯಾನ್‌ಗಳು ಹರಸಾಹಸ ಪಡುತ್ತಲೆ ಇರುತ್ತಾರೆ. ಮಳೆಸುರಿಯುವ ರಾತ್ರಿಗಳಲ್ಲಿ ಬೆಚ್ಚಗೆ ಚಿಮಣಿ ದೀಪದ ಬೆಳಕಲ್ಲಿ ಕುಳಿತು ಓದುತ್ತಾ ಬರೆಯುತ್ತಾ, ಮಾತನಾಡುತ್ತಾ, ಗುಡುಗಿಗೆ ಬೆಚ್ಚಿ ಬೀಳುತ್ತಾ ಇರುವುದೇ ಅಲ್ಲವೇ ಸುಖ ಎಂದರೆ?
ಮಳೆಗಾಲದಲ್ಲಿ ಎಲ್ಲಕ್ಕೂ ಬೂಸಲು. ಸ್ವಲ್ಪ ತೇವ ಸಿಕ್ಕರೂ ಸರಿಯೇ ಜಾಡಿಯಲ್ಲಿ ತುಂಬಿಟ್ಟ ಉಪ್ಪಿನಕಾಯಿ, ಚೀಲದೊಳಗಿರುವ ಅಕ್ಕಿ, ಬೇಳೆ, ಅಷ್ಟು ಕಷ್ಟಪಟ್ಟು ಬೇಸಿಗೆಯಲ್ಲಿ ಮಾಡಿದ ಹಪ್ಪಳ ಸಂಡಿಗೆ, ಬಾಳಕಗಳ ಮೇಲೆಲ್ಲ ತೆಳುಕೂದಲಿನಂತಹ ಬೂಸಲು ಬೆಳೆಯತೊಡಗುತ್ತದೆ. ಚರ್ಮದ ಚಪ್ಪಲಿಗೂ ಇದೇ ಗತಿಯಾದ್ದರಿಂದ ಕರಾವಳಿ ಮಲೆನಾಡಿನ ಜನ ಮಳೆಗಾಲಕ್ಕೆಂದು ಬೇರೆ ಪ್ಲಾಸ್ಟಿಕ್ ಚಪ್ಪಲಿ ಕೊಂಡಿಟ್ಟುಕೊಳ್ಳುತ್ತಾರೆ. ಅಲ್ಲಾಡದೇ ಹಾಗೇ ನಿಂತರೆ ಇಲ್ಲಿ ನಮ್ಮ ಮೈಮೇಲೇ ಬೂಸಲು ಬೆಳೆಯುತ್ತದೆನ್ನುವುದು ಇಲ್ಲಿಯ ಹಳೆಯ ಜೋಕ್.
ಮಳೆಗಾಲಕ್ಕೆ ಸೀಮಿತವಾದ ಕೆಲ ಹೂವುಗಳನ್ನು ಬಿಟ್ಟರೆ – ಸುರುಳಿ, ಮಂಜಟ್ಲೆ, ಸೀತಾಳೆ ಇತ್ಯಾದಿ – ಇದು ಹಸಿರು ಹೂವಿನ ಕಾಲ. ಬಣ್ಣದ ಹೂವುಗಳು ಕಮ್ಮಿ.
ಗುಡುಗು ಮಳೆಯ ಸದ್ದಿನಷ್ಟೇ ಖಾಯಂ ಆದ ಮತ್ತೊಂದು ಶಬ್ದ ಮಳೆಗಾಲದಲ್ಲಿ ಕರಾವಳಿಗರಿಗೆ ಕೇಳುತ್ತದೆ. ಅದು ಮೊರೆಯುವ ಕಡಲಿನ ಶಬ್ದ. ಹಗಲೆನ್ನದೇ ರಾತ್ರಿಯೆನ್ನದೇ ಮಳೆಗಾಲದ ಮೂರ್ನಾಲ್ಕು ತಿಂಗಳು ಒಂದೇ ಸಮ ಈ ಸಮುದ್ರದ ಮೊರೆತ ಕೇಳಬಹುದು. ಸ್ವಲ್ಪ ಮೇಲೆ ಹತ್ತಿ ನಿಂತರೆ ಏಳೆಂಟು ಮೈಲು ದೂರದ ತನಕ ಈ ಶಬ್ದ ಕೇಳುತ್ತದೆ. ಸಮುದ್ರಮಥನವಾಗುತ್ತಿದೆಯೇನೋ ಎಂದು ಭ್ರಮೆ ಹುಟ್ಟಿಸುವಂಥ ಶಬ್ದ. ರಾತ್ರಿಗಳಲ್ಲಿ ತೀವ್ರ. ಮಳೆನೀರನ್ನು ತನ್ನೊಳಗೆ ಎಳೆದುಕೊಳ್ಳಲು ಅದೇನು ಭರಾಟೆಯೋ ಸಮುದ್ರದ್ದು!
ಮಳೆಬರುವಾಗ ಸಮುದ್ರ ತೀರದಲ್ಲಿ ನಿಂತರೆ ರುದ್ರರಮಣೀಯ ಎಂದರೇನೆಂದು ಅನುಭವಕ್ಕೆ ಬರುತ್ತದೆ. ಭರ್ರೋ ಎಂಬ ಶಬ್ದ ದಂಡಿನೊಂದಿಗೆ ಆಗಮಿಸುವ ಮಳೆಗೆ ಕಡಲು ಹುಚ್ಚೆದ್ದು ಕುಣಿಯುವಂತೆ ಕಾಣುತ್ತದೆ. ಕಡಲ ನೀರೇ ಮೇಲೇರಿ ಮೋಡವಾಗುತ್ತಿದೆಯೋ..ಮೋಡವೇ ನೀರಿನೊಂದಿಗೆ ಕೆಳಗೆ ಬೀಳುತ್ತಿದೆಯೋ.. ಏನೂ ಗೊತ್ತಾಗದ ಹಾಗೆ ಮಳೆ.. ಆ ಮಳೆಯಲ್ಲಿ ಒದ್ದೆಯಾಗದೇ ನಿಲ್ಲುವುದು ಅಸಾಧ್ಯ. ನೆನೆಯುವ ಕಬೂಲಿದ್ದವರೇ ಹೋಗಬೇಕು. ಆ ಗಾಳಿಗೆ ಹಾರಿ ಹೋಗುತ್ತೀವೇನೋ ಎನ್ನಿಸಿ ಗಟ್ಟಿಯಾಗಿ ಹೊಂಯಿಗೆ ಮೇಲೆ ಕಾಲೂರಿ ನಿಂತು ಮಳೆಸುಖ ಅನುಭವಿಸಿದ್ದೊಂದೇ ಗೊತ್ತಾಗುವುದು.
ಮಳೆಗಾಲದ ಸಮುದ್ರದ ಈ ರಭಸಕ್ಕೆ ಹಾಗೂ ಮೀನುಗಳ ಸಂತಾನಾಭಿವೃದ್ಧಿ ಕಾಲವಾದದ್ದಕ್ಕೆ ಎರಡೂವರೆ ತಿಂಗಳು ಮೀನುಗಾರಿಕೆಗೆ ನಿಷೇಧವಿರುತ್ತದೆ.
7. ಮಳೆಗಾಲವೆಂದರೆ……
-ಬೆವರಿಳಿಸಿ ಮಾಡಿಟ್ಟ ತರಹೇವಾರಿ ಹಪ್ಪಳ-ಸಂಡಿಗೆ-ಬಾಳಕಗಳು, ದಾನಿಬೇಳೆ, ಗೇರುಬೀಜಗಳು ಮೈಸುಟ್ಟುಕೊಳ್ಳುತ್ತಾ ಗಮಗಮಿಸುವ ಕಾಲ..
-ಒಗೆದು ಹರುವಿದ ಬಟ್ಟೆ ವಾರವಾದರೂ ಒಣಗದೇ ಮುಗ್ಗಲಾಯಿತೆಂದು ಗೊಣಗುಟ್ಟುವ ಕಾಲ.
-‘ಇದೆಂತಾ ಮಳೆ? ನಾವ್ ಸಣ್ಣಕಿದ್ದಾಗ್ನ ಮಳೆ ನೋಡ್ಬೇಕಿತ್ತ್ ನೀವು’ ಎಂದು ಮುದುಕರು ಅನವರತ ಹಳಹಳಿಸುವ ಕಾಲ.
-ಬಹುಪಾಲು ಮುದಿಜೀವಗಳು ಮಳೆಯ ಉತ್ತುಂಗದಲ್ಲಿ ಹರೋಹರ ಎಂದು ಕಟ್ಟಿಗೆಗೆ-ಮಣ್ಣಿಗೆ ಪರದಾಡಬೇಕಾದ ಕಾಲ.
-‘ಇವತ್ತಿನ ಮಳೆಗೆ ಸಂಕ ಕೊಚ್ಚಿ ಹೋಗಿ ಶಾಲೆಗೆ ರಜೆಯಾಗಲಿ ದೇವರೇ’ ಎಂದು ಮಕ್ಕಳು ಹಾರೈಸುವ ಕಾಲ.
-ಕಾರಗದ್ದೆ ನೆಟ್ಟಿಯಿಂದ ಶುರುವಾದರೆ ದೀಪಾವಳಿ ಬೆಳಗಿನ ಕೊಯಿಲಿನ ತನಕವೂ ಬಾಗಿದ ಸೊಂಟ ಮೇಲೆತ್ತದೆ ಗದ್ದೆ ಬಯಲನ್ನು ಹಸನಾಗಿಸುವ ಹೆಣ್ಣಾಳುಗಳು ಇಡೀ ವರ್ಷಕ್ಕಾಗುವಷ್ಟು ಧವಸ ಒಟ್ಟು ಮಾಡುವ ಕಾಲ.
-ಮೀನಿಗಾಗಿ ಸಮುದ್ರ ಇಳಿಯದ ಗಂಡುಗಳು ಮನೆಗೆ ಮರಳುವುದರಿಂದ ಜೀವಗಳು ಜೋಡಿಯಾಗುವ ಕಾಲ.
-ಮಳೆ ಸುರಿದಷ್ಟೇ ಗದ್ದೆ ತೋಟಗಳಲ್ಲಿ ಬೆವರು ಹರಿಯುವ ಕಾಲ. ಶೀತ ನೆಗಡಿ ಜ್ವರದ ಕಾಲ.
[ಚಿತ್ರಗಳು- ಬಾಲು ಮಂದರ್ತಿ ಮತ್ತು ಲೇಖಕರು]
7.ಕವಲಕ್ಕಿ ಡಾಕ್ಟರಮ್ಮನ ದಿನಚರಿ: ಮೂತ್ರಶಿಲಾಪುರಾಣ
ಶಂಕ್ರನಿಗೆ ಮದುವೆಯಾಗಿ ನಾಲ್ಕು ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಮೊದಲ ಮೂರು ವರ್ಷಗಳು ತಡವಾಗಿ ಆಗಬಹುದೇನೋ ಎಂದು ಕಾದು, ದೇವರ ಬಳಿಯಲ್ಲೆಲ್ಲ ಹೋಗಿಬಂದು, ತೌರಿಗೆ ಓಡಿಹೋಗಿದ್ದ ಹೆಂಡತಿಯನ್ನು ಒಂದು ಜೊತೆ ಕಾಲ್ಗೆಜ್ಜೆ ತಂದುಕೊಟ್ಟು ರಮಿಸಿ ವಾಪಸ್ ಕರೆತಂದು, ವ್ರತನೇಮಗಳನ್ನು ಪಾಲಿಸುತ್ತಾ- ಹೀಗೇ ಕಳೆದುಹೋಗಿತ್ತು. ಇದೆಲ್ಲ ಮುಗಿದ ನಂತರವಷ್ಟೇ ಮಾರುತಿ ದೇವರ ಭಾರ ಮೈಮೇಲೆ ಬಂದಾಗ ಆಸ್ಪತ್ರೆ ಔಷಧವನ್ನೂ ಮಾಡಬೇಕೆಂದು ಹೇಳಿಕೆಯಾದದ್ದು. ಆಗ ನಮ್ಮ ಬಳಿ ಬಂದ ಅವನಿಚ್ಛೆಯಂತೆ, ಮೊದಲು ಹೆಂಡತಿಯ ಪ್ರಾಥಮಿಕ ಪರೀಕ್ಷೆಗಳೆಲ್ಲ ನಡೆದವು. ಮಕ್ಕಳಾಗಲಿಲ್ಲ ಎಂದರೆ ಹೆಂಗಸರದ್ದೇ ಏನೋ ಊನ ಎಂಬುದು ಅವನ ಅಭಿಪ್ರಾಯ. ಆದರೆ ಅವಳಲ್ಲಿ ಏನೂ ತೊಂದರೆ ಕಾಣದೇ ಎಲ್ಲ ಪರೀಕ್ಷೆಯಲ್ಲಿ ಪಾಸಾದಳು. ಈಗ ಶಂಕ್ರನ ತಪಾಸಣೆಯ ಸರದಿ ಬಂದಾಗ, ಒಲ್ಲದ ಮನಸ್ಸಿನಿಂದ ಟೆಸ್ಟ್‌ಗಳಿಗೆ ಒಪ್ಪಿಕೊಂಡ. ಮತ್ಯಾವ ದೈಹಿಕ ತೊಂದರೆಗಳೂ ಕಾಣದೇ, ಅವನ ವೀರ್ಯಪರೀಕ್ಷೆ ನಡೆದು ವರದಿಯಲ್ಲಿ ನಾರ್ಮಲ್ ಆಗಿದೆ ಅಂತಲೇ ಬಂತು. ತನ್ನದೇ ‘ಮಿಷ್ಟೇಕ್’ ಎಂದು ಎಲ್ಲಿ ಹೇಳುವರೋ ಎಂದು ಆತಂಕಗೊಂಡಿದ್ದ ಅವನು, ವೀರ್ಯದ ತೊಂದರೆ ಇಲ್ಲವೆಂದಾಗ ಧೈರ್ಯಗೊಂಡ, ಇಬ್ಬರಲ್ಲೂ ಏನೂ ತೊಂದರೆಯಿಲ್ಲವೆಂದರೆ ಯಾಕೆ ಮಕ್ಕಳಾಗಿಲ್ಲವೆಂದು ನಮ್ಮನ್ನೇ ಕೇಳಿದ. ಹೆಂಡತಿಗೆ ಮಾಡಿದ ಹಾಗೇ ತನಗೂ ಒಂದು ಸ್ಕ್ಯಾನ್ ಮಾಡಿ ಅಂತ ಒತ್ತಾಯಿಸಿದ. ವಿಶೇಷ ಪರೀಕ್ಷೆಯ ಸವಲತ್ತು ತನಗೂ ಸಿಗಲಿ ಎಂದೇ? ಸಂತಾನಪ್ರಾಪ್ತಿ ತಪಾಸಣೆಗೆ ಅವನ ಸ್ಕ್ಯಾನಿಂಗ್ ಅವಶ್ಯವಿಲ್ಲದಿದ್ದರೂ, ಅವನ ಇಚ್ಛೆಯಂತೆ ಮಾಡಿಸಿದೆವು. ಅವನಿಗೆ ಯಾವ ಸೂಚನೆ ಇದ್ದಿರಬಹುದು ಮೊದಲೆ?
ಬಿಸಿಲಲ್ಲಿ ಕೆಲಸ ಮಾಡಿಮಾಡಿ ಸುಟ್ಟ ಕೋಲಿನಂತಿದ್ದ ಅವನಿಗೆ ಮೂತ್ರಕೋಶ ( ಯುರಿನರಿ ಬ್ಲಾಡರ್) ದಲ್ಲಿ ಒಂದು ಕಲ್ಲಿದ್ದುದು ಪತ್ತೆಯಾಯಿತು. ಅಂಥಿಂಥ ಕಲ್ಲಲ್ಲ, ಒಂದು ಮೂಸುಂಬೆ ಹಣ್ಣಿನಷ್ಟು ದೊಡ್ಡದಾಗಿ ಮೈಮೇಲೆಲ್ಲ ಮುಳ್ಳುಮುಳ್ಳಾಗಿದ್ದ ಕಲ್ಲು ಅದು. ಕಿಬ್ಬೊಟ್ಟೆಯ ಕೆಳಭಾಗದಲ್ಲಿ ಚುಚ್ಚುತ್ತಿದ್ದ ಈ ಕಲ್ಲಿನ ನೆವದಿಂದ, ಕುಕ್ಕುರುಗಾಲಿನಲ್ಲಿ ಕೂರುವುದು, ಕವುಚಿ ಮಲಗುವುದು, ಮೂತ್ರ ಕಟ್ಟುವುದು ಅವನಿಗೆ ಕಷ್ಟವಾಗಿತ್ತು. ಅಷ್ಟೇ ಅಲ್ಲ, ಅವನಿಗೆ ಹೆಂಡತಿಯ ಜೊತೆ ದೈಹಿಕಸಂಪರ್ಕವೂ ಕಷ್ಟಸಾಧ್ಯವಾಗಿತ್ತು. ಮುಳ್ಳು ಚುಚ್ಚಿದಂತೆ ತೀವ್ರ ಬಾಧೆ ಉಂಟಾಗಿ, ನಂತರ ಮೂರ್ನಾಲ್ಕು ದಿನ ಮೂತ್ರದಲ್ಲಿ ರಕ್ತ ಹೋಗುತ್ತಿದ್ದದ್ದರಿಂದ ಅವಳ ಬಳಿ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದನಂತೆ. ದೈಹಿಕ ಸಂಪರ್ಕ ‘ಗರಮಿ’ ಎಂದು ತೀರ್ಮಾನಿಸಿದ್ದ! ತಪಾಸಣೆಯ ವೇಳೆ ಬಾರಿಬಾರಿ ಕೇಳಿದಾಗಲೂ ಇಬ್ಬರ ನಡುವಿನ ಈ ತೊಂದರೆಯ ಬಗ್ಗೆ ಬಾಯಿ ಬಿಡದಿದ್ದ ಗಂಡಹೆಂಡತಿ, ಈಗ ಕಲ್ಲಿದೆ ಎಂದು ಹೇಳಿದ ಮೇಲೆ ಒಂದೊಂದನ್ನೂ ವಿವರವಾಗಿ ಹೇಳಿಕೊಳ್ಳತೊಡಗಿದರು. ಕೊನೆಗೆ ಕೂಲಂಕಷ ತಪಾಸಣೆಯ ನಂತರ, ಒಂದು ಶಸ್ತ್ರಚಿಕಿತ್ಸೆಯ ಮೂಲಕ ಆ ಕಲ್ಲನ್ನು ಹೊರತೆಗೆಯಲಾಯಿತು. ಅದಾದ ನಂತರ ಒಂದೇ ವರ್ಷದಲ್ಲಿ ಭಾಗಿ ಬಸುರಿಯಾಗಿ, ಅವರಿಗೀಗ ನಾಲ್ಕು ಮತ್ತು ಒಂದು ವರುಷದ ಇಬ್ಬರು ಮಕ್ಕಳು!
ಮಕ್ಕಳು ಮತ್ತು ಮೂತ್ರಕೋಶದ ಕಲ್ಲು- ಎತ್ತಣಿಂದೆತ್ತಣ ಸಂಬಂಧವಯ್ಯಾ?!
ಅವನಿಗೆ ತೆಗೆದ ಕಲ್ಲು ನೋಡಿದ್ದೇ ಅವನ ಅಪ್ಪ, ‘ಇಷ್ಟು ದೊಡ್ಡ ಕಲ್ಲನ್ನು ಊಟ ಮಾಡ್ತಾ ಅದು ಹ್ಯಾಗೆ ನುಂಗಿಬಿಟ್ಟುನ್ರಾ?’ ಅಂತ ತುಂಬ ಆಶ್ಚರ್ಯದಿಂದ ಕೇಳಿದ್ದ. ಅವನಂತೇ ಬಹಳಷ್ಟು ರೋಗಿಗಳು ಹೊಟ್ಟೆನೋವಿನಿಂದ ನರಳುತ್ತಿರುವಾಗ, ಇದು ಮೂತ್ರದ ಕಲ್ಲಿನಿಂದ ಬಂದ ನೋವಿರಬಹುದಾದ ಸಾಧ್ಯತೆಯಿದೆಯೆಂದ ಕೂಡಲೇ, ‘ಅಯ್ಯೋ ನಾವು ಅಕ್ಕಿ, ಬೇಳೆ ಎಲ್ಲ ಚೊಕ್ಕ ಮಾಡ್ಕಂಡೇ ತಿಂಬುದು ಅಮ್ಮಾ. ಕಲ್ಲುಪಲ್ಲು ಇರಕ್ಕೆ ಸಾಧ್ಯನೇ ಇಲ್ಲ’ ಎನ್ನುತ್ತಾರೆ. ಅವರಿಗೆಲ್ಲ ಮೂತ್ರದ ಕಲ್ಲೆಂಬುದು ಶಿಲೆಯಲ್ಲವೆಂದೂ, ಅದು ಆಹಾರದ ಮೂಲಕ ಒಳಹೋದ ಕಲ್ಲಲ್ಲವೆಂದೂ, ಮೂತ್ರದಲ್ಲಿರುವ ಉಪ್ಪಿನಂಶ ಹರಳುಗಟ್ಟಿ ಆಗಿರುವುದೆಂದೂ, ತುಂಬಾ ನೀರು ಕುಡಿದರೆ ಆ ಉಪ್ಪಿನಹರಳು ಕರಗುವುದೆಂದೂ ಸಂಕ್ಷಿಪ್ತವಾಗಿ ಮೂತ್ರಶಿಲಾಪುರಾಣವನ್ನು ಹೇಳುತ್ತೇನೆ…
*******
ಸೆಕೆ, ಬೆವರಿಗೆ ಕರಾವಳಿ ಜನ ತೆರಬೇಕಾದ ದುಬಾರಿ ಬೆಲೆ ಎಂದರೆ ಮೂತ್ರದ ಕಲ್ಲುಗಳು. ಸಾಮಾನ್ಯವಾಗಿ ಮೂತ್ರವು ಹಲವು ತ್ಯಾಜ್ಯಗಳ, ಲವಣಗಳ ದ್ರಾವಣ. ಬಿಸಿಲಲ್ಲಿ ಕೆಲಸ ಮಾಡಿ, ತಿರುಗಿ, ಬೆವರಿ ದೇಹದಲ್ಲಿರುವ ನೀರಿನ ಅಂಶ ಹೆಚ್ಚು ವ್ಯಯವಾಗಿ ಮೂತ್ರವು ಸಂತೃಪ್ತ ದ್ರಾವಣದಂತೆ ಆಗುತ್ತದೆ. ಆಗ ಅದರಲ್ಲಿರುವ ಲವಣಾಂಶ ಹರಳುಗಟ್ಟುತ್ತದೆ. ಆಹಾರದಲ್ಲಿ ಕ್ಯಾಲ್ಸಿಯಂ, ಆಕ್ಸಲೇಟ್‌ಗಳು, ವಿಟಮಿನ್ ಡಿ ಅಧಿಕವಾಗಿದ್ದಾಗ ಮೂತ್ರದಲ್ಲಿ ಸಣ್ಣ ಹರಳುಗಳು ಉಂಟಾಗುತ್ತವೆ ಹಾಗೂ ಇಂತಹ ಹರಳುಗಳು ಮೂತ್ರದಲ್ಲಿ ವಿಸರ್ಜಿತವಾಗುತ್ತಿರುತ್ತವೆ. ಇದು ನೈಸರ್ಗಿಕವಾಗಿ ನಡೆಯುತ್ತಿರುತ್ತದೆ. ಮೂತ್ರದ ಸೋಂಕು ಉಂಟಾದಾಗ ಒಂದು ಬ್ಯಾಕ್ಟೀರಿಯಾದ ಸುತ್ತಲೋ, ಸಣ್ಣ ಹರಳಿನ ಸುತ್ತಲೋ ಹರಳುಗಟ್ಟುವಿಕೆ ಶುರುವಾಗಿ ಬರಬರುತ್ತ ಹರಳು ಗಾತ್ರದಲ್ಲಿ ದೊಡ್ಡದಾಗುತ್ತದೆ. ಕಿಡ್ನಿಯ(ಮೂತ್ರಜನಕಾಂಗ) ಒಳಗೆ ಹಲವು ಇಂಚುಗಳಷ್ಟು ದೊಡ್ಡ ಕಲ್ಲು ಇದ್ದರೂ ನೋವಿಲ್ಲದೇ ಇರಬಹುದು. ಅಲ್ಲಿಂದ ಹೊರಹೊರಡುವ ಮೂತ್ರನಾಳಗಳು ತುಂಬ ಕಿರಿದಾಗಿದ್ದು, ಕೆಲವು ಮಿಲಿಮೀಟರಿನಷ್ಟು ಸಣ್ಣಹರಳು ಕೂಡ ಆ ನಾಳವನ್ನು ಬ್ಲಾಕ್ ಮಾಡಬಹುದು. ಆಗ ತಯಾರಾದ ಮೂತ್ರವೆಲ್ಲ ಹಿಂದೆಯೇ ಕಟ್ಟಿನಿಲ್ಲುವುದರಿಂದ ತುಂಬ ನೋವನ್ನುಂಟುಮಾಡುತ್ತದೆ. ಕೆಲವು ಬಾರಿ ನೋವಿನ ಕಂತು ಒಂದು ಕೆಟ್ಟ ಪ್ರಯಾಣದ ನಂತರವೋ, ಅಥವಾ ಕಠಿಣ ಕೆಲಸದ ನಂತರವೋ, ವಾಯುಕಾರಕ ವಸ್ತುವಿನ ಸೇವನೆಯ ನಂತರವೋ ಶುರುವಾಗುತ್ತದೆ.
ಅನುಭವಿಸುವ ನೋವಿಗೆ ರ್ಯಾಕಿಂಗ್ ಕೊಟ್ಟರೆ ಪ್ರಥಮ ರ್ಯಾಂಕ್ ಹೆರಿಗೆಯ ನೋವಿಗೆ. ಎರಡನೆಯದು ಮೂತ್ರದ ಕಲ್ಲಿನ ನೋವಿಗೆ. ರೋಗಿಗೆ ನೆಲದ ಮೇಲೆ ಹೊರಳಾಡುವಷ್ಟು ಅತಿತೀವ್ರ ನೋವುಂಟಾಗುತ್ತದೆ. ಒಂದು ಬದಿಯ ಹೊಟ್ಟೆ ಹಾಗೂ ಬೆನ್ನಿನಲ್ಲಿ ಛಳಕಿನಂತೆ ಶುರುವಾಗುವ ನೋವಿನ ಭರಕ್ಕೆ ವಾಂತಿಯಾಗಿ, ತೀವ್ರ ಬೆವರು ಬಂದು, ಎಂತವರನ್ನೂ ದೈನೇಸಿ ಸ್ಥಿತಿಗೆ ತಳ್ಳುತ್ತದೆ. ನೋವು ಕಡಿಮೆಯಾದ ನಂತರ ಕೆಲ ಗಂಡಸರಿಗೆ ನಾನು ತಮಾಷೆ ಮಾಡುವುದಿದೆ – ‘ನಿಮ್ಮ ಹೆಂಡತಿ ಹೆರಿಗೆ ನೋವು ಎಷ್ಟು ಅನುಭವಿಸಿದರೆಂಬುದು ನಿಮಗೆ ಈಗ ಸ್ವಲ್ಪ ಅನುಭವಕ್ಕೆ ಬಂದಿರಬಹುದು’ ಎಂದು. ಮೇರಿ ಮೊಂಟೆಗೋ ಎಂಬ ಆಂಗ್ಲ ಮಹಿಳೆಯೊಬ್ಬಳು ‘ನನ್ನ ಶತ್ರುವಿಗೆ ಸಾವು ಬರುವುದು ಬೇಡ, ಮೂತ್ರದ ಕಲ್ಲುಗಳುಂಟಾಗಲಿ’ ಎಂದು ಹಾರೈಸಿದ್ದಾಳೆ! ನೋವೆಂದರೆ ಅಂತಹ ನೋವದು. ನೋವು ಕಡಿಮೆ ಮಾಡುವುದಾದರೆ ಏನನ್ನೂ ಮಾಡಲು ರೋಗಿ ತಯಾರಾಗುತ್ತಾನೆ. ಒಮ್ಮೆ ನೋವು ಕೊಟ್ಟ ಕಲ್ಲು, ಮೂತ್ರನಾಳದಲ್ಲಿ ಪೂರ್ತಿ ಕೆಳ ಸರಿದು ಬೀಳುವುದರೊಳಗೆ ನಾಲ್ಕಾರು ಬಾರಿ ಮೇಲೇಮೇಲೇ ನೋವು ಕೊಡುತ್ತದೆ. ಒಮ್ಮೆ ಮೂತ್ರದ ಕಲ್ಲುಗಳ ಬಾಧೆಗೆ ಒಳಗಾದವರು, ಐದು ವರ್ಷದೊಳಗೆ ಮತ್ತೆ ಕಲ್ಲಿನ ತೊಂದರೆಗೊಳಗಾಗುವ ಸಾಧ್ಯತೆ ೫೦%!
ಸರಾಸರಿ ಪ್ರತಿದಿನ ಒಬ್ಬ ಕೆಲಸಗಾರ ಮನುಷ್ಯ ೩-೫ ಲೀ. ನೀರು ಕುಡಿದರೆ ಒಳ್ಳೆಯದು. ಕಿಡ್ನಿಯಲ್ಲಿರುವ ಜರಡಿಯಂತಹ ಲೋಮನಾಳಗಳು ರಕ್ತವನ್ನು ಶೋಧಿಸಿ ಮೂತ್ರವನ್ನು ಉತ್ಪತ್ತಿ ಮಾಡುತ್ತವೆ. ದೇಹದ ಚಯಾಪಚಯ ಕ್ರಿಯೆಯಿಂದ ಹುಟ್ಟಿದ ಹಾಗೂ ಆಹಾರದ ಮೂಲಕ ಒಳಬಂದ ಕಶ್ಮಲಗಳು ಮೂತ್ರದಲ್ಲಿ ಹೊರಹೋಗುತ್ತವೆ. ಆದರೆ ಹಳ್ಳಿಯ ಕಡೆ ಕೆಲವು ಜನರಿಗೋ ನೀರು ಕುಡಿಯುವುದೆಂದರೆ ಆಗದು. ತೀರ್ಥ ಕುಡಿದಂತೆ ನೀರು ಕುಡಿಯುತ್ತಾರೆ. ಎಷ್ಟೋ ಜನ ‘ನೀರು ಕುಡಿದೇ ಎಷ್ಟೋ ರೋಗ ಬರುವುದಂತಲ್ಲ’ ಎಂದು ನಮ್ಮನ್ನೇ ಪ್ರಶ್ನಿಸುತ್ತಾರೆ. ಶುದ್ಧ-ಅಶುದ್ಧ ನೀರೆಂದು ಅವರು ತಲೆಕೆಡಿಸಿಕೊಳ್ಳುವುದೇ ಇಲ್ಲ. ಮಲಬದ್ಧತೆ, ಅಸಿಡಿಟಿ, ಮೂತ್ರದ ಕಲ್ಲು, ಉರಿಮೂತ್ರ, ಬಳಲಿಕೆ ಮುಂತಾದ ಹಲವು ತೊಂದರೆಗಳ ರೋಗಿಗಳಿಗೆ ‘ನೀರು ಕುಡಿದಷ್ಟು ಒಳ್ಳೆಯದು’ ಎಂದು ನಾನು ಹೇಳಹೊರಡುವುದರಲ್ಲಿ, ‘ಅಯ್ಯೋ, ನಾನು ಸಿಕ್ಕಾಪಟ್ಟೆ ನೀರು ಕುಡಿಯುತ್ತೇನೆ’ ಎಂದೇ ಪ್ರಮಾಣ ಮಾಡಿ ಹೇಳುತ್ತಾರೆ. ಅವರ ಮನೆಯವರಾದರೋ, ‘ಊಟಕ್ಕೆ ಕೂತಾಗ ಕೊಟ್ಟ ಒಂದು ಲೋಟ ನೀರು ಬಿಟ್ಟರೆ ಮತ್ತೆ ನೀರೇ ಕುಡಿಯುವುದಿಲ್ಲ, ನೀವಾದ್ರೂ ಸ್ವಲ್ಪ ಹೇಳಿ’ ಎಂದು ನನ್ನ ಬಳಿ ಅಲವತ್ತುಕೊಳ್ಳುತ್ತಾರೆ. ಒಮ್ಮೆ ನನ್ನ ಬಂಧುವೊಬ್ಬರು ನನ್ನ ಜತೆ ಕ್ಲಿನಿಕ್‌ನಲ್ಲಿ ಕುಳಿತಿದ್ದರು. ನಾನು ಕೊಟ್ಟ ಸಲಹೆಗಳನ್ನೆಲ್ಲ ಮೌನವಾಗಿ ಆಲಿಸಿದವರೇ, ‘ಎಲ್ರ ಹತ್ರನೂ ನೀರು ಕುಡೀರಿ ನೀರು ಕುಡೀರಿ ಅಂತೀಯಲ್ಲಮ್ಮ, ಅದ್ಕೇ ಜಲಜ ಕ್ಲಿನಿಕ್ ಅಂತ ಹೆಸರು ಇಟ್ಯಾ ಹೇಗೆ ’ ಅಂತ ತಮಾಷೆ ಮಾಡಿದ್ದರು.
ಮೂತ್ರದ ಕಲ್ಲಿಗೆ ಸಿಗುವ ಪುಕ್ಕಟೆ ಔಷಧ ಎಂದರೆ ನೀರು. ಮೂತ್ರಕಲ್ಲಿಗೆ ಗಾಂವ್‌ಟಿ ಔಷಧ ಕೊಡುವವರು ಊರಿಗೊಬ್ಬೊಬ್ಬರಂತೆ ಇದ್ದಾರೆ. ಎಲ್ಲ ಔಷಧಿಗಳು ಸೇರುಗಟ್ಟಲೇ ನೀರಿನಲ್ಲಿ ಕದರಿಕೊಂಡು ಕುಡಿಯುವಂಥವು. ಹಾಗೆ ಕಟ್ಟುನಿಟ್ಟು ಮಾಡದಿದ್ದರೆ ನಮ್ಮ ಜನ ನೀರೇ ಕುಡಿಯಲಾರರು. ಗಾಂವ್‌ಟಿ ಔಷಧ ಕೊಡುವವರು ಪಥ್ಯ, ನೇಮಗಳ ಬಗ್ಗೆ ಬಹಳ ಕಟ್ಟುನಿಟ್ಟಾಗಿ ಹೇಳುತ್ತಾರೆ – ದಿನಕ್ಕೆ ಐದು ಚೊಂಬು ಕಾದನೀರು ಕುಡಿಯಬೇಕು, ಬೀಜವಿರುವ ಯಾವ ತರಕಾರಿಯನ್ನೂ ತಿನ್ನಬಾರದು, ನಂಜಿನ ವಸ್ತು ತಿನ್ನಬಾರದು, ಉಪ್ಪು ತಿನ್ನಬಾರದು- ಹೀಗೇ. ಅವರು ಹೇಳಿದಂತೆ ಮಾಡದಿದ್ದರೆ ಮದ್ದು ತಾಗುವುದೇ ಇಲ್ಲವೆಂದೂ, ರೋಗ ಬಲಿತ ಮೇಲೆ ಚಿಕಿತ್ಸೆ ಮತ್ತೂ ಕಷ್ಟವೆಂದು ಹೇಳಿದ್ದು ಕೇಳಿ ಚಾಚೂತಪ್ಪದೇ ನಿಯಮಗಳನ್ನು ಪಾಲಿಸುತ್ತಾರೆ. ಆ ಕಟ್ಟುನಿಟ್ಟು ನೇಮ ಪಾಲಿಸುವುದರ ಬಗೆಗಿನ ಶ್ರದ್ಧೆಯೇ ಹಲವು ಬಾರಿ ಕಾಯಿಲೆ ಗುಣಪಡಿಸುತ್ತದೆ. ಮೂತ್ರದ ಕಲ್ಲಿನಲ್ಲಿರುವ ಲವಣಗಳ ಮೇಲೆ ನಾಲ್ಕು ತೆರನ ಕಲ್ಲುಗಳು ಉತ್ಪತ್ತಿಯಾಗುತ್ತವೆಂದು ಹೇಳಬಹುದು. ಯಾವ ಲವಣದ ಕಲ್ಲೆಂಬುದು ಪತ್ತೆಯಾದ ಮೇಲೆ ವೈದ್ಯರೂ ಕೆಲವು ಪಥ್ಯಗಳನ್ನು ವಿಧಿಸುತ್ತಾರೆ. ತುಂಬ ಕಾಮನ್ ಆದ ಕ್ಯಾಲ್ಸಿಯಂ ಕಲ್ಲುಗಳಾದವರಿಗೆ ಹಾಲಿನ ಉತ್ಪನ್ನಗಳು, ಚಾಕೊಲೇಟ್, ಬೀಟ್ರೂಟ್, ಕೋಸು ಕುಟುಂಬದ ತರಕಾರಿಗಳು, ಟೊಮ್ಯಾಟೋ, ಮದ್ಯಪಾನ ಇಂತಹವನ್ನು ಬಿಡಲು ಹೇಳುತ್ತಾರೆ. ಆದರೂ ಪಥ್ಯಕ್ಕಿಂತ ನೀರು ಹೆಚ್ಚು ಕುಡಿಯುವಂತೆ ಸಲಹೆ ಕೊಡುವುದೇ ಜಾಸ್ತಿ.
ಔಷಧ ಕೊಡುವವರು ಕುಡಿದ ಇಂತಿಷ್ಟೇ ದಿನದಲ್ಲಿ ಕಲ್ಲು ಬೀಳುತ್ತದೆಂದು ಖಚಿತವಾಗಿ ಹೇಳುವುದರಿಂದ, ಔಷಧ ಕುಡಿದಾತ ಹದಿನೈದು ದಿನಗಟ್ಟಲೇ ಪಾತ್ರೆಯಲ್ಲಿ ಮೂತ್ರ ಮಾಡುತ್ತಾ, ಕಲ್ಲು ಬೀಳುವ ‘ಟಣ್’ ಎಂಬ ಶಬ್ದ ‘ಇಂದು ಕೇಳಬಹುದು, ಈಗ ಕೇಳಬಹುದು’ ಎಂದು ಕಾಯುತ್ತಾನೆ. ಹಾಗೆ ಬಿದ್ದ ಕಲ್ಲುಗಳನ್ನು ಬಹು ಜೋಪಾನವಾಗಿ ಕಾದಿಟ್ಟುಕೊಂಡು ಮನೆಗೆ ಬಂದ ನೆಂಟರಿಷ್ಟರಿಗೆ ತಮಗೆ ಸಂದ ಪ್ರಶಸ್ತಿಯೇನೋ ಎಂಬಂತೆ ತೋರಿಸುವವರಿದ್ದಾರೆ. ಹಾಗಂತ ನನಗೊಬ್ಬ ಪೇಶೆಂಟ್ ಹೇಳಿದ್ದರು, ಅವರ ಮಾವ ಒಟ್ಟು ಹದಿನೇಳು ಮೂತ್ರಕಲ್ಲುಗಳನ್ನು ಸಂಗ್ರಹಿಸಿ ಇಟ್ಟಿದ್ದಾರೆ ಎಂದು. ನನ್ನ ಪೇಶೆಂಟ್‌ಗೆ ಆ ಕಲ್ಲುಗಳು ಮೂತ್ರದ ಕಲ್ಲುಗಳೇ ಹೌದು ಎಂದು ನಿರ್ಧರಿಸುವುದು ಹೇಗೆಂದು ನನ್ನ ಬಳಿ ತಿಳಿಯಬೇಕಾಗಿತ್ತು, ಅಷ್ಟೇ.
ಶಹರದಲ್ಲಿ ಲಿಥೋಟ್ರಿಪ್ಸಿ( ಲೇಸರ್ ಮುಖಾಂತರ ಕಲ್ಲನ್ನು ಪುಡಿ ಮಾಡುವುದು), ಎಂಡೋಸ್ಕೋಪಿ, ಆಪರೇಶನ್ ಮುಂತಾದ ಅತ್ಯಾಧುನಿಕ ಸೌಲಭ್ಯಗಳು ಇದ್ದರೂ ಹಳ್ಳಿಯ ಜನರು ಈಗಲೂ ಕರಿಬಾಳೆ ದಿಂಡಿನ ರಸ, ಯಾವುದೋ ಬೀಜದ ಕಷಾಯ, ನೆಗ್ಗಿಲು ಮುಳ್ಳಿನ ಕಷಾಯ, ಮತ್ತಾವುದೋ ಬೇರಿನ ರಸ ಇಂಥವಕ್ಕೇ ಮೊರೆ ಹೋಗುವುದು ಹೆಚ್ಚು. ಅದಕ್ಕೆ ಸರಿಯಾಗಿ ದೊಡ್ಡ ಆಸ್ಪತ್ರೆಗಳಲ್ಲಿ ಕಲ್ಲು ಪುಡಿಮಾಡಿಕೊಂಡು, ಸಾವಿರಗಟ್ಟಲೆ ಖರ್ಚು ಮಾಡಿಕೊಂಡು ಬಂದ ಎಷ್ಟೋ ಜನ ಮತ್ತೆ ಮೂತ್ರಕಲ್ಲಿನ ತೊಂದರೆಯಿಂದ ನರಳುವ ಕತೆಗಳು ಅವರ ಬಳಿ ಇರುತ್ತವೆ. ಬರೀ ಕಾಯಿ-ಎಲಡಿಕೆ-ಮನಸ್ಸಿಗೆ ತೋಚಿದಷ್ಟು ದುಡ್ಡು ಕೊಟ್ಟರೆ ಔಷಧ ಕೊಡುವವರು ಊರಲ್ಲೇ ಅಷ್ಟು ಜನ ಇರುವಾಗ, ದುಡ್ಡು ಖರ್ಚಾದರೂ ಪೂರ್ತಿ ಹೋಗೇಬಿಡುವುದು ಗ್ಯಾರಂಟಿಯಿರದ ಕಲ್ಲು ಪುಡಿಮಾಡುವ ತುಂಬ ತುಟ್ಟಿಯಾದ ಚಿಕಿತ್ಸೆ ನಡೆಸುವುದು ಅವರ ಮನಸ್ಸಿಗೆ ಒಗ್ಗುವುದಿಲ್ಲ. ಹಲವು ಬಾರಿ ಸ್ಥಳೀಯ ವೈದ್ಯರ ಬಳಿ ಹೋಗಿ, ಕಡಿಮೆಯಾಗದೇ ಮತ್ತೆಮತ್ತೆ ಶುರುವಾಗುವ ನೋವಿಗಷ್ಟೇ ಲಿಥೋಟ್ರಿಪ್ಸಿಗೆ ಹೋಗುತ್ತಾರೆ. ಸಣ್ಣ ಕಲ್ಲನ್ನು ಏನೋ ಲೈಟು ಬಿಟ್ಟು ಪುಡಿ ಮಾಡಲು ಮಿಲಿಮೀಟರಿಗೆ ಇಂತಿಷ್ಟು ಎಂದು ಛಾರ್ಜ್ ಮಾಡುವವರ ಬಗ್ಗೆಯೇ ಅವರ ತಕರಾರು.
ಕಲ್ಲಿನ ತೊಂದರೆ ಬೇಸಿಗೆಯಲ್ಲಿ ಎಷ್ಟು ವ್ಯಾಪಿಸುತ್ತದೆ ಎಂದರೆ, ಊರಿಗೊಬ್ಬರಾದರೂ ನೋವಿನ ಕತೆ ಹೇಳುತ್ತಾರೆ. ಹಲವರ ಬಾಯಲ್ಲಿ ಆ ನೋವಿನ ಕತೆ ಕೇಳುವ ಶಾಲೆಮಕ್ಕಳು, ಶಾಲೆಯಿಲ್ಲದಾಗ ಅದೂ ಇದೂ ತಿಂದು ಗ್ಯಾಸ್ ಆಗಿ ಹೊಟ್ಟೆ ನೋವೆಂದು ಬಂದವು ‘ನಂಗೂ ಮೂತ್ರದ ಕಲ್ಲು ಆಗಿದೆಯಾ?’ ಎಂದು ಪ್ರಶ್ನಿಸುತ್ತವೆ! ಪುಣ್ಯವಶಾತ್ ಇಪ್ಪತ್ತು ವರ್ಷದ ಒಳಗಿನವರಿಗೆ ಮೂತ್ರದ ಕಲ್ಲು ಇಲ್ಲವೆಂಬಷ್ಟು ಅಪರೂಪ. ಹೆಂಗಸರಲ್ಲೂ ಇದು ಕಮ್ಮಿ!
ಅಂತೂ ಬೇಸಿಗೆ ಕಳೆದು ಮಳೆಗಾಲ ಕಾಲಿಡುತ್ತಿರುವ ಈ ಹೊತ್ತು, ಕಲ್ಲಿನ ಭಯದಿಂದ ಬರುವ ಬೇಸಿಗೆಯವರೆಗೆ ಮುಕ್ತವಾಗಬಹುದಾಗಿದೆ.
[ಚಿತ್ರಗಳು-ಲೇಖಕರು ಮತ್ತು ಸಂಗ್ರಹದಿಂದ]
8.ಕವಲಕ್ಕಿ ಡಾಕ್ಟರಮ್ಮನ ದಿನಚರಿ: ಕೆಲವು ಬಸಿರ ಸಂಗತಿಗಳು
ಕಂಕುಳಲ್ಲಿ ಒಂದೂವರೆ ವರ್ಷದ ಮಗುವನ್ನು ಚಚ್ಚಿಕೊಂಡು ಒಳಬಂದವಳೇ ಉಸ್ಸಪ್ಪ ಎಂದು ಹಣೆಯ ಬೆವರನ್ನು ಸೆರಗಿನಿಂದ ಒರೆಸಿಕೊಳ್ಳುತ್ತ ಧಪ್ಪನೆ ಖುರ್ಚಿಯ ಮೇಲೆ ಕುಳಿತಳು ಮಾಲಕ್ಷ್ಮಿ. ಅವಳ ಹಿಂದೇ ಸೇರು, ಪಾವು, ಚಟಾಕುಗಳಂತೆ ಸರಸರ ಅವಳ ಹಿರಿಯ ಮೂರು ಮಕ್ಕಳು ಒಳಬಂದವು. ಆರು ವರ್ಷಕ್ಕೆ ನಾಲ್ಕು ಮಕ್ಕಳನ್ನು ಹೆತ್ತ ಅವಳನ್ನು ನಾನು ‘ನೀನು ಮಾಲಕ್ಷ್ಮಿ ಅಲ್ಲ, ಮಾತಾಯಿ’ ಎಂದು ತಮಾಷೆ ಮಾಡುವುದುಂಟು. ಮೂರನೆಯ ಮಗು ಬಸ್ಸಿಳಿದು ಬರುತ್ತಾ ಬಿದ್ದು ಕೈಕಾಲೆಲ್ಲ ತರಚಿಕೊಂಡು ಅಳುತ್ತಿತ್ತು. ಅದರ ಮೂಗು ಕಣ್ಣನ್ನೆಲ್ಲ ಒರೆಸಿ ಒಂದು ಸಲ ಗದರಿ ಕುಳಿತಳು. ‘ಜೊತೆಯಲ್ಲಿ ಯಾರೂ ಬರಲಿಲ್ವಾ?’ ಎಂದು ನಾನು ಕೇಳಿದ್ದೇ ಅವಳ ಕಣ್ಣುಗಳು ಕೊಳಗಳಾದವು. ಅವರು ಬ್ಯಾಡಂದ್ರೂ ತಾಯಿಮನಿಗೆ ಹೋಗಿದ್ದೆ ಅಂತ ಸಿಟ್ಟುಮಾಡ್ಕಂಡು ‘ಈಗ ನೀನೊಬ್ಳೇ ಬಾ. ಮತ್ತೆ ಮಕ್ಕಳಿಗೇನಾರೂ ಸೀಕು ಆಗಿದ್ರೆ ಮದ್ದು ಮಾಡ್ಕಂಡೇ ಬಾ, ನನಗ್ಗೊತ್ತಿಲ್ಲ’ ಅಂದ್ರು ಇವರು. ಈಗ ಈ ಮೂರು ಮಕ್ಕಳನ್ನೂ ಮೂರು ಮೈಲು ದೂರ ನಡೆಸಿ ಊರುಮುಟ್ಟುವುದು ಹ್ಯಾಗೋ ಏನೋ’ ಎನ್ನುತ್ತ ಮತ್ತೆ ಬಿಕ್ಕಿದಳು. ಮತ್ತೆ ಏನೂ ಮಾತನಾಡದೇ ಬ್ಲೌಸಿನೊಳಗೆ ಕೈ ಹಾಕಿ ಪುಟ್ಟ ಗಂಟು ಹೊರತೆಗೆದವಳು ಮೆಲ್ಲಗೆ ನನ್ನೆದುರು ತೂರಿದಳು.
‘ಎಂತ ಮಾರಾಯ್ತಿ? ಮದ್ದು ಕೊಡಲಿಕ್ಕೆ ಮೊದಲೇ ದುಡ್ಡು ಕೊಡ್ತಿದೀಯಲೆ’ ಎಂಬ ನನ್ನ ಮಾತಿಗೆ ಒಮ್ಮೆ ಹೊರಗೆ ಇಣುಕಿ ನೋಡಿ ಕಣ್ಣೊರೆಸಿಕೊಂಡವಳು ಶುರು ಮಾಡಿದಳು. ‘ಅಮಾ, ನಾನೀಗ ಮುಟ್ಟಾಗಿ ಎರಡು ತಿಂಗಳಾತು. ಈ ನಾಕನೇ ಹುಡುಗಿಯನ್ನು ಹೆತ್ತಾಗಲಾದರೂ ಆಪರೇಶನ್ ಮಾಡಿಸ್ಕಂತೆ ಎಂದು ಎಷ್ಟು ಹೇಳಿದ್ನೋ ಏನೋ. ಅವ್ರು ಕೇಳಲಿಲ್ಲ. ಈಗ ಮುಟ್ಟು ನಿಂತಿದೆ ಅಂತ ತಿಳಿದಿದ್ದೇ ಎಲ್ಲೆಲ್ಲೋ ಹೋಗಿ ಪ್ರಸಾದ ಕೇಳಿ, ಜಾತಕ ತೋರಿಸ್ಕಂಡು ಬಂದಿದಾರೆ. ಈ ಸಲ ಹುಟ್ಟದು ಗಂಡೇ ಅಂತಾರೆ. ಆದ್ರೆ ನಾನು ನಂ ತಾಯಿ ಮನೆ ಚೌಡಿ ಹತ್ರ ಕೇಳ್ದಾಗ ಅದು ಈ ಸಲ ಹೆಣ್ಣೇ ಆಗ್ತದೆ ಅಂತ ಹೇಳ್ಬಿಟ್ಟದೆ. ನನಕೈಲಿ ಮತ್ತೆಮತ್ತೆ ಹೆಣ್ಣು ಹೆತ್ತು, ಆ ಅಬ್ಬೆಮಗನ ಹತ್ರ ಪಿರಿಪಿರಿ ಬೈಸಿಕೊಳ್ಳೋಕೆ ಸಾದ್ದಿಲ್ಲೆ ಅಮಾ. ಬರೀ ಹೆತ್ತು ಹಾಕಿರೆ ಆಯ್ತಾ? ಆ ಮಕ್ಳ ದೇಖರೇಖೆ ನೋಡಬ್ಯಾಡ್ವಾ? ಈ ಗಣಸ್ರಿಗೆ ಅದೆಂತ ತಿಳೀತಿಲ್ಲೆ. ನಾನು ದುಡ್ಕಬಂದು ಹಾಕ್ತೆ, ನಿಂಗೆ ಮಕ್ಳ ಸಾಕುಕೇನ್ ಕಷ್ಟ ಅಂತ ಕೇಳ್ತ್ರು ಅಮಾ.’
‘ಓಹ್. ಹಾಗಾದರೆ ಮತ್ತೊಂದು ಬಾಣಂತನಕ್ಕೆ ತಯಾರಿನಾ?’
‘ಎಂತ ಬಾಣಂತನ ಅಮಾ. ಆ ಸಲ ನೋಡಿದ್ರಲೆ ನೀವು, ಹದಿನೈದು ದಿನ ಕಳೆಯದರಾಗೆ ಎದ್ದು ಎಲ್ಲ ಕೆಲ್ಸ ಶುರು ಮಾಡ್ಬೇಕು. ಅದಿರ್ಲಿ, ಇನ್ನು ಎರಡು ಮೂರು ದಿನದಾಗೆ ಇವ್ರು ನನ್ನ ಕರ‍್ಕಬತ್ತಾರೆ. ಆಗ ನೀವು ಈ ಸಲದ್ದೂ ಹೆಣ್ಣೆಯಾ ಅಂತೇಳಿ ಸ್ಕ್ಯಾನ್ ಮಾಡಿ ಹೇಳಿಬಿಡಿ, ಆಗ ತೆಗೆಸುಕೆ ಒಪ್ತಾರೆ.’
‘ಆದ್ರೆ ಹಂಗೆ ಹೇಳಿದ್ರೆ ನನ್ನ ಹಿಡ್ದು ಜೈಲಿಗೆ ಹಾಕ್ತಾರೆ ಅಷ್ಟೇ. ಅಲ್ಲದೇ ಇಷ್ಟು ಬೇಗ ಅದು ತಿಳಿಯುದೇ ಇಲ್ಲ. ಅದಕ್ಕೆ ಏಳು ತಿಂಗಳ ಮೇಲೆ ಆಗ್ಬೇಕು’, ಆತ್ಮ ರಕ್ಷಣೆಗೆ ಸುಳ್ಳೊಂದನ್ನು ಹೇಳಿದೆ.
‘ಹಾಗಾದ್ರೆ ಮತ್ತೇನಾರೂ ಸೀಕು ಸಂಕ್ಟದ ವಿಷ್ಯ ಹೇಳಿ. ಒಟ್ಟೂ ನನಗೀ ಬಸುರು ಬ್ಯಾಡ ಅಷ್ಟೇ. ಈ ದುಡ್ನ ಇಟ್ಕಳಿ. ನಮಣ್ಣ ಕೊಟ್ಟಿದ್ದು, ನಂಗೆ ಬೇಕಾದಾಗ ಇಸ್ಕಂತೆ. ಇವ್ರತ್ರ ತಕಹೋಗಿ ಕೊಟ್ರೆ ಎರಡೇ ದಿನಕ್ಕೆ ಅದು ಕಾಣೆಯಾಗೋಗುತ್ತೆ. ಮತ್ತೆ ನಾನು ಇಲ್ಲಿ ಬಂದ ವಿಷ್ಯ ಅವ್ರಿಗೂ ನಮತ್ತೆ ಮಾವಂಗು ಹೇಳ್ಬೇಡಿ. ಇದು ನಿಮ್ಮಲ್ಲೇ ಇರ್ಲಿ.’
*******
ಆ ಬೋರ್ಡಿಂಗ್ ಶಾಲೆಯ ಮಕ್ಕಳು ನನಗೆ ಪರಿಚಯವೆನ್ನಬಹುದು. ಅವಕ್ಕೆಲ್ಲ ಹುಶಾರಿಲ್ಲದಾಗ ಅವರ ವಾರ್ಡನ್ ಒಬ್ಬೊಬ್ಬರನ್ನೇ ಕರೆತರುತ್ತಾ, ದೊಡ್ಡಮಕ್ಕಳ ಜೊತೆ ಮಾಡಿ ಕಳಿಸುತ್ತಾ ಇರುತ್ತಾರೆ. ಆ ಮಕ್ಕಳು ತಮ್ಮ ಮನೆ, ತಾಯ್ತಂದೆಯರನ್ನು ಬಿಟ್ಟು ಈ ದೂರದ ಹಳ್ಳಿಯ ಊರಿನಲ್ಲಿ ಶಾಲೆ ಕಲಿಯಲಿಕ್ಕೆಂದು ಇದ್ದಾವಲ್ಲ ಎಂದು ಒಂದು ರೀತಿಯ ಕರುಣೆ ನನಗೆ. ಆ ಮಕ್ಕಳ ತಾಯ್ತಂದೆಯರು ಯಾವ ಪರಿಸ್ಥಿತಿಗೆ ಇಲ್ಲಿ ಬಿಟ್ಟಿದ್ದಾರೋ, ಏನು ಕಷ್ಟದಲ್ಲಿದ್ದಾರೋ? ಯಾರಿಗೆ ಗೊತ್ತು?
ಆ ಮಕ್ಕಳ ಬಳಿ ಹಣ ಇರುವುದಿಲ್ಲ. ಮನೆಯಿಂದ ತಂದ ಹಣ ವಾರ್ಡನ್ ಬಳಿ. ತಮ್ಮ ಖರ್ಚಿಗೆಲ್ಲ ಅವರ ಬಳಿ ಕೇಳಿಯೇ ಹಣ ಪಡೆಯಬೇಕು, ಅಂತಹ ವ್ಯವಸ್ಥೆ. ಅಂಥದ್ದರಲ್ಲಿ ಕೆಲವು ಬಾರಿ ಆಸ್ಪತ್ರೆ ಔಷಧಿಗೆ ಅಂತ ಬಂದ ಮಕ್ಕಳ ಜೊತೆಗೆ ಬರುವ ಹಿರಿಯ ಜೊತೆಗಾರರು ಒಂದು ವಿಚಿತ್ರ ಬೇಡಿಕೆ ಮುಂದಿಡುತ್ತಾರೆ… ಬಿಲ್ಲನ್ನು ಸ್ವಲ್ಪ ‘ಹೆಚ್ಚು’ ಬರೆದುಕೊಡಿ ಎಂದು! ಕಚೇರಿ ಕೆಲಸ ಮಾಡುವವರು ಮಾಡಿದ ಖರ್ಚನ್ನು ತಿರುಗಿ ಪಡೆಯಲು ಹೀಗೆ ಕೇಳುವುದು ಸಾಮಾನ್ಯ. ಈ ಹುಡುಗರಾದರೋ ಹೆಚ್ಚುವರಿ ಹಣವನ್ನು ವಾರ್ಡನ್ ಬಳಿಯಿಂದ ವಸೂಲಿ ಮಾಡಲು ಈ ಉಪಾಯ ಹೂಡುತ್ತಾರೆ. ಕೊನೆಗೆ ದುಡ್ಡು ಏತಕ್ಕೆ ಎಂದರೆ ಬಹುಪಾಲು ಹುಡುಗರು ನಾಚಿ ನಾಚಿ ‘ಪಾನಿಪೂರಿ ತಿನ್ನಲಿಕ್ಕೆ, ಐಸ್ಕ್ರೀಂ ತಿನ್ನಲಿಕ್ಕೆ, ಗೋಬಿ ಮಂಚೂರಿಗೆ..’ ಅಂತ ಏನೇನೋ ಸಬೂಬು ಹೇಳುತ್ತವೆ. ಹುಡುಗಿಯರಿಗೆ ಅಲಂಕಾರ ಸಾಮಗ್ರಿಗೆ ಹಣ ಬೇಕಾಗಿರುತ್ತದೆ. ಮನೆಯಲ್ಲಿ ತರಹೇವಾರಿ ತಿಂಡಿ ತಿಂದುಂಡೂ ವಾರದ ಕೊನೆಗೆ ಉತ್ತರ ಭಾರತ ಶೈಲಿಯ ಊಟ ಬಯಸುವ ನನ್ನ ಮಕ್ಕಳು ಕಣ್ಣಮುಂದೆ ಬಂದು ನಿಂತಂತಾಗಿ ಹತ್ತಿಪ್ಪತ್ತು ರೂಪಾಯಿ ಬಿಲ್ಲು ಹೆಚ್ಚಿಗೆ ಬರೆದುಕೊಡುತ್ತೇನೆ. ಅಷ್ಟಕ್ಕೂ ಅದು ಅವರದ್ದೇ ದುಡ್ಡು. ಸಿನೆಮಾ ಟಾಕೀಸಿಲ್ಲದ ಆ ಸಣ್ಣ ಊರಿನಲ್ಲಿ ಖರ್ಚು ಮಾಡಿದರೆ ತಿಂದುಡಲು ಮಾತ್ರ ಎಂಬುದು ನನಗೆ ಖಾತ್ರಿಯಿದೆ. ಹುಡುಗರು ಹೋಗುವಾಗ ಹೇಳಿಹೋಗುತ್ತಾರೆ.. ‘ಥಾಂಕ್ಯೂ ಮೇಡಂ. ಆದ್ರೆ ವಾರ್ಡನ್ ಹತ್ರ ಮಾತ್ರ ಹೇಳಬೇಡಿ….ದಯವಿಟ್ಟು’. ಆಗಲೆಂದು ಭರವಸೆ ಕೊಟ್ಟು ಮತ್ತೊಮ್ಮೆ ಹೀಗೆ ನನ್ನ ಬಳಿ ಹೀಗೆ ಕೇಳುವಂತಿಲ್ಲವೆಂಬ ಶರತ್ತಿನೊಂದಿಗೆ ಕಳಿಸುತ್ತೇನೆ.
ಸುಳ್ಳು ಹೇಳಬಾರದೆಂದು ಬೈದು ಅವರನ್ನು ಹಾಗೇ ಕಳಿಸಬಹುದಿತ್ತಲ್ಲವೇ, ಹಾಗೆ ಬೈಯ್ಯಲು ನನಗೇಕೆ ಆಗುವುದಿಲ್ಲ ಎಂದು ಪ್ರತಿಬಾರಿ ಅಂದುಕೊಳ್ಳುತ್ತೇನೆ. ಕಚೇರಿ ಜನರ ಬಳಿ ಸತ್ಯಹರಿಶ್ಚಂದ್ರನ ಮೊಮ್ಮಗಳ ಹಾಗೆ ಆಡಲು ಹೋಗಿ ನಿಷ್ಠುರ ಕಟ್ಟಿಕೊಳ್ಳುವ ನಾನು, ಈ ಮಕ್ಕಳಿಗೇಕೆ ವಿನಾಯಿತಿ ತೋರುತ್ತೇನೆ?
*******
ಆಸಿಯಾ ನಮ್ಮೂರಿನ ಜವಳಿ ವ್ಯಾಪಾರಸ್ಥರ ಏಕಮಾತ್ರ ಪುತ್ರಿ. ಗಲಗಲ ಮಾತಿನ ಚುರುಕು ಹುಡುಗಿ. ಎರಡನೇ ಪಿಯುಸಿಯಲ್ಲಿ ೭೫% ಅಂಕ ಗಳಿಸಿ ಖುಷಿಯಲ್ಲಿದ್ದಳು. ಆಗಲೇ ಅಪ್ಪ ಮದುವೆಗೆ ತಯಾರಿ ನಡೆಸಿದಾಗ ನನಗೊಂದು ಕಾಗದ ಕಳಿಸಿದ್ದಳು. ತಾನು ಸಹಪಾಠಿಯನ್ನು ಪ್ರೀತಿಸಿರುವುದಾಗಿಯೂ, ಅವನು ೯೦% ಅಂಕ ಗಳಿಸಿ ಇಂಜಿನಿಯರಿಂಗ್ ಸೇರುತ್ತಿದ್ದಾನೆಂದೂ, ತಾನೂ ಅದೇ ಓದಬೇಕೆಂದು ಮಾಡಿದ್ದಾಗಿಯೂ, ಅದಕ್ಕೆ ನನ್ನ ಸಹಾಯ ಅವಶ್ಯವಾಗಿ ಬೇಕೆಂದೂ ಬರೆದಿದ್ದಳು. ತಾನು ಆರಾಮಿಲ್ಲವೆಂದು ಮಲಗಿರುವುದಾಗಿಯೂ, ಬಾಪ್ಪಾ ತನ್ನನ್ನು ಕರೆತಂದಾಗ ನಾನು ಅವರ ಬಳಿ ಮಾತನಾಡಿ ಏನೋ ಮನಸ್ಸಿಗೆ ಹಚ್ಚಿಕೊಂಡು ಹೀಗಾಗಿದೆಯೆಂದು ಹೇಳಬೇಕೆಂದೂ, ಮುಂದೆ ಓದು ಮುಂದುವರಿಸಲಿ ಎಂದು ಸಲಹೆ ಕೊಡಬೇಕೆಂದೂ ತಿಳಿಸಿದ್ದಳು. ಅದೇ ದಿನ ನಾನು ಬಲ್ಲ ಅವಳ ಬಾಪ್ಪಾ ಅವಳನ್ನು ಕರೆತಂದರು. ತಮ್ಮ ಕುಟುಂಬದಲ್ಲೇ ಯಾರೂ ತೆಗೆದಿರಲಿಲ್ಲ, ಇವಳು ೭೫% ಅಂಕ ಗಳಿಸಿದ್ದಾಳೆಂದು; ಅದೇ ವೇಳೆಗೆ ಬಹರೇನಿನಲ್ಲಿ ಇಂಜಿನಿಯರನಾಗಿರುವ ವರ ಬಂದಿರುವುದಾಗಿಯೂ, ಎಷ್ಟು ಒಳ್ಳೇ ಸಂಬಂಧವೆಂದರೆ ಕೈಬಿಡುವ ಹಾಗೇ ಇಲ್ಲವೆಂದೂ ಹೆಮ್ಮೆಯಿಂದ ಹೇಳಿಕೊಂಡರು. ‘ನೀವಾದರೂ ತಿಳಿದವರು. ಹೆಣ್ಣುಮಕ್ಕಳು ಎಷ್ಟು ಓದಿದರೂ ಕೊನೆಗೆ ಮದುವೆ ಮಾಡಿಕೊಡುವುದೇ. ದೇವರ ದಯೆಯಿಂದ ಇಂಥಾ ಸಂಬಂಧ ಸಿಕ್ಕಿದೆ. ಈ ಮದುವೆಗೆ ಒಪ್ಪು ಎಂದು ಅವಳಿಗೆ ಬುದ್ಧಿಮಾತು ಹೇಳಿ’ ಎಂದು ನನ್ನನ್ನೇ ಒತ್ತಾಯಿಸಿದರು!
ಆಗ ಮಾತ್ರ ನಾನು ಸ್ಪಷ್ಟವಾಗಿ ಆಸಿಯಾ ಪರ ನಿಂತೆ. ‘ಕುಟುಂಬದಲ್ಲೇ ಯಾರೂ ತೆಗೆದಿರದ ಅಂಕ ಗಳಿಸಿದ್ದಾಳೆ ಅನ್ನುತ್ತೀರಿ, ಮುಂದೆ ಓದಿಸಿ. ಮುಂದೆ ಇನ್ನೂ ಒಳ್ಳೆಯ ವರ ಸಿಕ್ಕಾನು. ಅವಳಿಗಿನ್ನೂ ಹದಿನೆಂಟು ವರ್ಷ. ಸಂಸಾರದ ಜಂಜಾಟ ಮುಂದೆ ಇದ್ದೇ ಇದೆ. ಈಗ ಅವಳಿಗೆ ಆಸಕ್ತಿಯಿರುವಾಗ ಓದಲಿ. ಅಲ್ಲದೇ ಅವಳ ಓದಿಗಾಗಲೀ, ಮದುವೆಗಾಗಲೀ ಹಣದ ತೊಂದರೆ ನಿಮಗಿಲ್ಲದಿರುವಾಗ ಓದಿಸಿ ಮದುವೆ ಮಾಡುವುದೇ ಒಳ್ಳೆಯದಾದೀತು’ ಎಂದೆ. ಅವರು ಅವಳನ್ನು ನನ್ನ ಬಳಿ ಕರೆತಂದ ಉದ್ದೇಶ ಉಲ್ಟಾ ಆದದ್ದು ನೋಡಿ ಮೌನವಾದರು. ‘ಈಗ ಕಾಲ ಬದಲಾಗಿದೆ. ಮಕ್ಕಳ ಇಷ್ಟಕ್ಕೆ ತೀರ ವಿರುದ್ಧ ನಡೆಯುವಂತೆ ಇಲ್ಲ. ತುಂಬ ಒತ್ತಾಯದಿಂದ ನೀವು ಅವಳ ಮದುವೆ ಮಾಡಿ, ಕೊನೆಗೆ ಅವನ ಜೊತೆ ಸಂಸಾರ ಸಾಗಿಸುವ ಮನಸ್ಸೇ ಬರದೇ ಹೋದರೆ ಏನು ಮಾಡುತ್ತೀರಿ? ಇಂತಹ ಬಹಳ ಉದಾಹರಣೆಗಳು ಈಗ ನಮ್ಮ ಕಣ್ಣಮುಂದೆಯೇ ನಡೆಯುತ್ತಿವೆ. ಈಗಿನ ಮಕ್ಕಳು ಬಹಳ ಸೂಕ್ಷ್ಮ. ನಿಮ್ಮ ಮುದ್ದಿನ ಒಬ್ಬಳೇ ಹುಡುಗಿ ಅವಳು, ಮನಸ್ಸಿಗೆ ಇದನ್ನೇ ಹಚ್ಚಿಕೊಂಡು ಮುಂದೆ ಜೀವಕ್ಕೇನಾದರೂ ತೊಂದರೆ ಮಾಡಿಕೊಂಡರೂ ಕಷ್ಟವೇ. ಅವಳಿಷ್ಟ ಏನಂತ ಕೇಳದೇ ಮುಂದುವರೆಯಬೇಡಿ’ ಎಂದು ಸೋದಾಹರಣವಾಗಿ ಒಂದೆರೆಡು ಪ್ರಕರಣ ವಿವರಿಸಿದೆ. ಅವಳು ಮಂಕಾಗಿರುವುದಕ್ಕೆ ಓದು ಸಾಧ್ಯವಾಗದೇ ಇರುವುದೇ ಕಾರಣವಿರಬಹುದೆಂದೂ ಹೇಳಿಬಿಟ್ಟೆ.
ಕೊನೆಯ ಬಾಣ ನಾಟಿತು.
ಆಸಿಯಾ ಇಂದು ಸಾಫ್ಟ್‌ವೇರ್ ಇಂಜಿನಿಯರ್. ತಾನು ಪ್ರೀತಿಸಿದ ಕ್ಲಾಸ್‌ಮೇಟನ್ನೇ ಮದುವೆಯಾದಳು. ಇಬ್ಬರೂ ಮುಂಬಯಿಯ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಅವಳು ತೌರಿಗೆ ಬಂದಾಗಲೆಲ್ಲ ಗಂಡನ ಜೊತೆಗೂಡಿ ನನ್ನ ಬಳಿ ಬಂದುಹೋಗುತ್ತಾಳೆ. ‘ಮೇಡಂ, ನನ್ನ ಖುಷಿಯಲ್ಲಿ ಯಾವತ್ತೂ ನಿಮ್ಮದೊಂದು ಪಾಲಿದೆ’ ಎಂದು ನಗೆಯನ್ನು ಹಂಚುತ್ತಾಳೆ…
*******
ಮಂಜು ಹಾಗೂ ಸುಬ್ಬಿ ಇವರಿಬ್ಬರನ್ನು ತುಂಬ ದಿನಗಳಿಂದ ನೋಡುತ್ತಿದ್ದೆ. ಮದುವೆಯಾಗಿ ಇಪ್ಪತ್ತು ವರ್ಷ ಕಳೆದರೂ ಮಕ್ಕಳಾಗಲಿಲ್ಲವೆಂಬ ಕೊರಗಿನಲ್ಲಿದ್ದಾಗಲೇ ಮಂಜು ಅಡಿಕೆ ಮರ ಹತ್ತಿದವ ಕೆಳಗೆ ಬಿದ್ದು ಸೊಂಟದಿಂದ ಕೆಳಗೆ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ. ಕಾಲಿನ ಸ್ವಾಧೀನವಷ್ಟೇ ಅಲ್ಲ, ಮೂತ್ರ ಹಾಗೂ ಮಲಬಾಧೆಯ ಮೇಲಿನ ನಿಯಂತ್ರಣ ಹಾಗೂ ಲೈಂಗಿಕ ಸಾಮರ್ಥ್ಯ ಕೂಡ ಇಲ್ಲವಾಗಿತ್ತು. ಹೀಗಾಗಿ ನಾಲ್ಕಾರು ವರ್ಷಗಳೇ ಕಳೆದು ಬರೀ ವಾಟರ್ ಬೆಡ್ಡಿನ ಮೇಲೆ ದಿನ ದೂಡುತ್ತಿದ್ದ ಅವನು ಮೂರ್ನಾಲ್ಕು ಬಾರಿ ಆಸ್ಪತ್ರೆಗೆ ದಾಖಲಾಗಿದ್ದ. ಬೆನ್ನ ಮೇಲೆಲ್ಲ ಹುಣ್ಣು. ಅವನ ಮಲಮೂತ್ರ ಬಳಿಬಳಿದು ಸುಬ್ಬಿಯೂ ಹೈರಾಣಾಗಿದ್ದರೂ ಯಾರ ಬಳಿಯೂ ಹೇಳುವಂತಿರಲಿಲ್ಲ.
ಹೀಗಿರುವಾಗ ಒಂದುದಿನ ತುಂಬ ಕಳವಳದ ಮುಖ ಹೊತ್ತು ಬಂದಳು.
ಅವಳೀಗ ಮುಟ್ಟಾಗದೇ ಎರಡು ತಿಂಗಳಾಗಿದೆ! ಗಂಡನ ಬಳಿ ಏನೂ ಸಾಧ್ಯವಿಲ್ಲ ಎಂದು ನನಗೆ ಗೊತ್ತೆಂದು ಅವಳಿಗೂ ತಿಳಿದಿದೆ. ಯಾವ ಮಾನವ ಸಹಜ ದೌರ್ಬಲ್ಯಕ್ಕೊಳಗಾದಳೋ? ನಿಂತಿದ್ದು ಹೌದೆಂದು ಖಚಿತವಾದದ್ದೇ ಭೋರೆಂದು ಅತ್ತಳು. ಅದಕ್ಕೆ ಕಾರಣನಾದವ ಮುಂದೆ ಅವಳ ಗಂಡನ ಜೀವಕ್ಕೆ ತೊಂದರೆಯಾದರೆ ತಾನೇ ಅವಳನ್ನು ಮದುವೆಯಾಗಿ ಮಗುವನ್ನು ಬೆಳೆಸಲು ಸಹಾಯ ಮಾಡುತ್ತೇನೆಂದು ಹೇಳಿದ್ದಾನಂತೆ. ಆದರೆ ಇವಳಿಗೆ ಸಿಕ್ಕಾಪಟ್ಟೆ ದ್ವಂದ್ವ. ಆಗಬೇಕಾದ್ದೇ.
ಯಾವುದನ್ನು ಬಯಸಿ ಅವಳು ಸಾವಿರಾರು ರೂ. ಖರ್ಚು ಮಾಡಿದ್ದಳೋ, ಅದು ಇಂದು ದಕ್ಕಿದ್ದರೂ ಅವಳಿಗೆ ಬೇಡವಾಗಿದೆ! ನಿಜವಾಗಿ ಏನಾಗಿದೆ ಎಂದು ಗಂಡನಿಗೆ ತಿಳಿಯದಂತೆ, ಅವನ ವೀರ್ಯವನ್ನು ತೆಗೆದು ಇಂಜೆಕ್ಷನ್‌ನಂತೆ ಕೊಟ್ಟು ಈ ಗರ್ಭ ನಿಂತಿತೆಂದು ಹೇಳಿ ಉಳಿಸಿಕೊಳ್ಳಲು ಸಾಧ್ಯವೇ ಎಂಬುದು ಅವಳ ಪ್ರಶ್ನೆಯಾಗಿತ್ತು. ಸದ್ಯದ ಭಾವುಕತೆಗೆ ಒಳಗಾಗಿ ಮಗುವನ್ನು ಹೆತ್ತರೆ ಮುಂದೆ ಎದುರಾಗಬಹುದಾದ ಸನ್ನಿವೇಶಗಳನ್ನೆದುರಿಸಲು ತಕ್ಕ ಛಾತಿ ಬೇಕು. ಅದು ಅವಳಲ್ಲಿರಲಿಲ್ಲ. ಹೇಗಾದರೂ ಒಂದು ಮಗುವನ್ನು ಹೆತ್ತುಬಿಡುವ ಆಶೆ… ಯಾವುದೋ ಸಬೂಬು ಹೇಳಿ ಮಗುವನ್ನು ಉಳಿಸಿಕೊಳ್ಳಲು ಆಗಿದ್ದರೆ ಎನ್ನುವಾಗ ಅವಳ ಕಣ್ಣುಗಳು ಆಸೆಯಿಂದ ಮಿಂಚುತ್ತಿದ್ದರೆ, ಅಲ್ಪಕಾಲ ಬದುಕಬಹುದಾದ ಗಂಡನಿಗೆ ದುರ್ಬಲ ಗಳಿಗೆಯಲ್ಲಿ ನಂಬಿಕೆಗೆ ದ್ರೋಹ ಮಾಡಿದೆನಲ್ಲವೇ ಎಂಬ ವಿಷಾದವೂ ಮಾತಿನಲ್ಲಿ ಕಾಣುತ್ತಿತ್ತು. ಗಂಡನ ತಿಳುವಳಿಕೆಯಿಲ್ಲದೇ ಮಗುವನ್ನು ಇಟ್ಟುಕೊಳ್ಳುವುದು ಸಾಧ್ಯವೂ ಇಲ್ಲ. ಹೇಳಿ ಒಪ್ಪಿಸುವ ಧೈರ್ಯವೂ ಇಲ್ಲ.ಮಗುವಿನ ಆಸೆ ಅವರ ಪ್ರತಿ ಹಾವಭಾವದಲ್ಲಿ ಹೊಮ್ಮುತ್ತಿದ್ದರೂ, ಗಂಡ ಅಥವಾ ಮಗು – ಎರಡರಲ್ಲೊಂದು ಎಂಬ ಆಯ್ಕೆ ಬಂದಾಗ ಸಮಾಜದ ಭಯಕ್ಕೆ ಮಗುವಿನ ಆಸೆಯ ಮೇಲೆ ಸಮಾಧಿಯ ಕಲ್ಲೆಳೆದರು.
‘ನಂ ಪೈಕಿ ಜನ ನಿಮ್ಮತ್ರ ಬರ‍್ತಾ ಇರ್ತಾರೆ. ಅವರ‍್ಯಾರಿಗೂ ಈ ಸುದ್ದಿ ತಿಳಿಯದಂತೆ ಇದೊಂದ್ನ ಹೇಗಾದ್ರೂ ತೆಕ್ಕೊಡಿ. ಯಾರ್ಗೂ ಹೇಳ್ಬೇಡಿ’ ಎಂಬುದು ಅವಳ ಕೊನೆಯ ಪ್ರಾರ್ಥನೆಯಾಗಿತ್ತು..
*******
‘ಮೇಡಂ, ನಮ್ಮಾವ ಆರು ತಿಂಗ್ಳಿಗೆ ಒಂದ್ಸಲನೂ ತಾಯಿ ಮನೆಗೆ ಕಳಿಸಲ್ಲ. ಅದ್ಕೇ ನಾನು ಮಕ್ಳಿಗೆ ಆರಾಮಿಲ್ಲದಿದ್ದಾಗ ಅಲ್ಲಿಯ ಡಾಕ್ಟ್ರ ಹತ್ರಿಂದ ತಂದ ಮದ್ದನ್ನ ಸರೀ ಕೊಡುದೇ ಇಲ್ಲ. ಅಲ್ಲಿಯ ಔಷಧಕ್ಕೆ ಸೀಕು ಕಮ್ಮಿಯಾಗುದಿಲ್ಲ ಅಂತ ಹೇಳಿ ಇಲ್ಲೇ ಕರ‍್ಕಂಡು ಬಂದುಬಿಡ್ತೆ. ನಿಮ್ಮ ಔಷಧದಲ್ಲಿ ಮಕ್ಕಳಿಗೆ ಬೇಗ ಗುಣನೂ ಕಾಣ್ತದೆ, ಆಮೇಲೆ ನನಗೂ ಆ ನೆವದಲ್ಲಿ ಮಕ್ಕಳಿಗೆ ಸರಿಯಾಗೋ ತನ್ಕ ತಾಯಿ ಮನೇಲೇ ಉಳದು ಹೋದಹಾಗೂ ಆಗ್ತದೆ.’
‘ಅದು ಸ್ವಲ್ಪ ಪರಾಮಾಯ್ಸಿ ಆಯ್ತು ಮೇಡಂ. ಮದುವೆಗೆ ಮೊದಲೇ ಹುಡುಗ ಮನೆಗೆ ಬಂದುಹೋಗಿದ್ದ. ಅದೇ ಏನಾರ ಹೆಚ್ಚುಕಮ್ಮಿ ಆಗಿರ್ಬೇಕು. ಅದಕ್ಕೆ ಮದುವೆಯಾಗಿ ಬರೀ ನಾಕೇ ತಿಂಗಳಾಗಿರೋದು. ಆರು ತಿಂಗಳು ಅಂತ ಹೇಳ್ಬೇಡಿ. ಸ್ಕ್ಯಾನಿಂಗ್ ನಾಗೂ ನಾಕೇ ತಿಂಗ್ಳು ಅಂತ ತೋರ್ಸಿ. ಇಲ್ದಿದ್ರೆ ಊರ ಜನ ಕೆಟ್ಟ ತಿಳಿತಾರೆ.’
‘ಅವಳಿಗೆ ಸ್ವಲ್ಪ ಆರಾಮ ಕೊಡಬೇಕು, ಒಳ್ಳೇ ಟಾನಿಕ್ ಕೊಡ್ಬೇಕು, ಇಲ್ದಿದ್ರೆ ಆಸ್ಪತ್ರೆಗೆ ಅಡ್ಮಿಟ್ ಮಾಡ್ಬೇಕಾಗುತ್ತೆ ಅಂತ ಹೇಳಿ ಅಮಾ. ಇವರಿಗೆ ಎಷ್ಟು ಗೇಯ್ದ್ರೂ ಸಾಕಾಗಲ್ಲ. ಒಂದ್ ನಾಕ್ ದಿನನಾದ್ರೂ ಆರಾಮ ಮಾಡಿ ಸೊಂಟ ಗಟ್ಟಿ ಮಾಡ್ಕಳ್ತೆ.’
*******
ಆತ್ಮೀಯರ ಇಂತಹ ಹಲವು ಒಳಗುಟ್ಟು ಬಚ್ಚಿಟ್ಟು, ಮುಚ್ಚಿಟ್ಟು, ನನ್ನೆದೆಯೆಂಬ ಗುಬ್ಬಿಗೂಡು ತುಂಬಿಹೋಗಿದೆಯೇನೋ ಎನಿಸುತ್ತದೆ. ಆದರೆ ಇಲ್ಲ. ಮತ್ತಾರದೋ ಬೇರೆಲ್ಲೂ ಹೇಳಿಕೊಳ್ಳಲಾಗದ ಮಾತೊಂದು ನರಳುತ್ತಾ ನನ್ನ ಬಳಿಗೆ ಬಂದೊಡನೆ ಕಿವಿ ಮೂಲಕ ಎದೆ ತಲುಪಿಯೇ ಬಿಡುತ್ತದೆ. ಇದ್ದ ರಾಶಿಯ ನಡುವೆಯಲ್ಲೆಲ್ಲೋ ಒಂದು ಸಂದಿ ಹುಡುಕಿ ಕುಳಿತುಬಿಡುತ್ತದೆ.
ನನ್ನದೇನಿದ್ದರೂ ಗುಟ್ಟುಮುಚ್ಚಿಟ್ಟುಕೊಳ್ಳುವುದಷ್ಟೇ ಕೆಲಸ – ಚಿನ್ನದ ಗಣಿ ಕಾಯುವ ಕಾವಲುಗಾರನ ಹಾಗೆ… ಕಂತೆಕಂತೆ ಹಣ ಎಣಿಸಿ ಖಜಾನೆ ತುಂಬಿಕೊಳ್ಳುವ ಬ್ಯಾಂಕರನ ಹಾಗೆ.. ಅತ್ತರೂ ಸತ್ತರೂ ಮಿಸುಕದ ಶಿಲಾಮೂರ್ತಿಯ ಹಾಗೆ… ಅವರ ಮಾತುಗಳಿಗೆಲ್ಲ ಅರ್ಥ ಹುಡುಕುತ್ತ ಪಾಪಪುಣ್ಯಗಳೆಂಬ ವಿವೇಚನೆಯಾಗಲೀ, ಮೋಸ-ಅವಮಾನವೆಂಬ ತೀರ್ಮಾನವಾಗಲೀ, ಯಾರು ಎಂಥವರೆಂದು ಹಣೆಪಟ್ಟಿ ಕಟ್ಟುವುದಾಗಲೀ ನನ್ನ ಕೆಲಸವಲ್ಲ. ಅದು ತರವೂ ಅಲ್ಲ. ವೈದ್ಯರು ಹೇಳಿಕೇಳಿ ‘ಯಮನ ಬೊಜ್ಜ ತಿನ್ನುವವರು’. ಏಕೋಭಾವದಿಂದ ನಿರ್ಲಿಪ್ತವಾಗಿ ಎಲ್ಲವನ್ನು ಎಲ್ಲರನ್ನು ನೋಡಬೇಕೆಂದು ನಾನು ಓದಿದ್ದು ನನಗೆ ಕಲಿಸಿದೆಯಾದರೂ, ವಿಶಾಲ ಜಗತ್ತಿನಲ್ಲಿ ಈ ಪುಟ್ಟ ಮಾನವನ ಮನಸ್ಸೆಂಬೋ ಮನಸ್ಸಿನ ವಿವಿಧ ಮಜಲುಗಳನ್ನು, ಮಸಲತ್ತುಗಳನ್ನೂ ಅವಲೋಕಿಸುತ್ತಾ, ಅಚ್ಚರಿಯೆಂಬ ಒಂದು ಮಾತ್ರ ನನ್ನೊಳಗೆ ಉಳಿದಿದೆ.
[ರೇಖಾಚಿತ್ರಗಳು-ರಾಥೋಡ್]
[ಫೋಟೋ-ರಶೀದ್]
9. ಕವಲಕ್ಕಿ ಡಾಕ್ಟರ ಡೈರಿ: ಕಾಮ ಪ್ರೇಮ ಕಷ್ಟ ಸುಖ
‘ಮೇಡಂ, ಮುಂಚೆ ನನಗಿದೆಲ್ಲ ಏನೂ ಗೊತ್ತಿದ್ದಿದ್ದಿಲ್ರೀ. ನಾ ಎಷ್ಟ್ ಒಲ್ಯಾಂದ್ರೂ ಕೇಳ್ದ ನಂ ಮನ್ಯಾಗ್ ಲಗ್ಣ ಮಾಡಿದರ್ರೀ. ಈ ಊರು, ಜನ, ಅಡಿಗಿ ಇದ್ಯಾವ್ದೂ ನಂಗ ಸರೀನೇ ಬರವಲ್ದ್‌ರೀ. ಇವರನ್ನಾ ಅದ್ಯಾವ ಪರಿ ಮಾಡ್ತಾರ್ರೀ! ನನಗ ಯಾರ ಹಂತ್ರ ಹೇಳಾಕೂ ನಾಚ್ಕಿ ಬರ್ತತ್ರಿ. ನನಗ ರಾತ್ರರೇ ಯಾಕ ಆಗ್ತದೋ ಏನೋ ಅನಿಸಿಹೋಗ್ ಬಿಟ್ಟದ್ ನೋಡ್ರೀ ಖರೇವಂದ್ರೂ. ನಡು ರಾತ್ರಿ ನಿದ್ದಿಂದ ಎಬ್ಬುಸ್ತಾರ್ರೀ. ನನ ಕೈಕಾಲ್ನೆಲ್ಲ ಒತ್ತಿ ಹಿಡೀತಾರ್ರೀ. ಉಸುರು ಕಟ್ಟಿಹೋಗೂ ಹಂಗ್ ಮಾಡ್ತಾರ್ರೀ. ಹೊಲಸು ಅದೇನೇನ್ ಮಾಡ್ತಾರೋ ಏನ? ನಾನೇನ್ ಮನಷಾಳೋ ಇಲಾ ಗೊಂಬೀನೋ, ಏನಂದ್‌ಕೊಂಡಾರೋ..! ಅದೂ ಈಗ ಮದಿವ್ಯಾಗಿ ಆರ್ ತಿಂಗಳಾತ್ರೇ, ಇನಾ ಮುಟ್ಟು ನಿಲವಲ್ದು. ನೀನು ನಂದೇನ್ನೂ ಒಳಗಿಟ್ಕಳಂಗಿಲ್ಲ, ನಂಗೂ ನಿಂಗೂ ಸಂಬಂಧೇ ಇಲ್ಲ, ನಿನಗ ನನ ಮ್ಯಾಲೆ ಪ್ರೀತಿನೇ ಇಲ್ಲ, ಅದ್ಕೇ ನಿಂಗ್ ಮುಟ್ಟು ನಿಲವಲ್ದು ಅನ್ತಾರ್ರೀ.
ನಮ್ಮಕ್ಕನ್ನ ಕೇಳಿದನ್ರೀ. ಆಕಿ ಮದಿವ್ಯಾದಾಗ ಸೊಲ್ಪು ದಿನ ಹಂಗಾಗ್ತದ. ಗಣಮಕ್ಳೂ ಹಂಗ ಮಾಡ್ತಾರ, ಅಂಜಬ್ಯಾಡ. ಒಂದ್ ಕೂಸಾಗೂ ಮಟ ಹೆಂಗಾರೂ ಅಲ್ಲೇ ಉಳಿ. ಕಡಿಗೆ ಸರಿಯಾಗ್ಲಿಲ್ಲಂದ್ರ ಇಲ್ಲೇ ವಾಪಸ್ ಬಂದ್ಬಿಡುವಂತ ಅಂತ ಹೇಳ್ಯಾಳ… . ನಿಂ ಹತ್ರ ಅದಕ ಬಂದೀನಿ ನೋಡ್ರೀ ಮೇಡಂ. ಅವರು ಹಂತೇಕ ಬಂದ್ ಮ್ಯಾಲ ಸಿಕ್ಕಾಪಟ್ಟೆ ಬಿಳಿಮುಟ್ಟು ಹೋಗಿ ಎಲ್ಲ ಹೊರಗೆ ಹರ‍್ದೇ ಹೋಗ್ತತ್ರೀ. ಎಲ್ಲರಿಗೂ ಹಂಗ್ ಆಗ್ತತೋ ಅಥವಾ ನಂಗ್ ಮಾತ್ರ ಹಿಂಗೋ, ಏನೂ ತಿಳಿವಲ್ದ್‌ರೀ. ನೀವು ನನಗೊಂದು ಮಗು ಬ್ಯಾಗ ಆಗೂ ಹಂಗ ಏನಾರ ಮಾಡಿ ಪುಣ್ಯ ಕಟ್ಕೊರೀ ಮೇಡಂ.
ಹೀಂಗಂತನಿ ಅಂತ ಬ್ಯಾರೆ ತಿಳಿಬ್ಯಾಡ್ರೀ. ಅವರಿಗೆ ಏನಾದ್ರೂ ನಿದ್ದಿ ಮಾತ್ರಿ ಕೊಡಕ್ಕಾಗ್ತತ್ರೇ? ದಿನಾ ಅದ$ ಪದಾ ಅಂದ್ರ ಬ್ಯಾಸ್ರ ಬರ‍್ತತ್ರೀ. ಅದ್ಕ ಮಾತ್ರಿ ಗೀತ್ರಿ ಕೊಟ್ರಾರೆ ಸುಮ್ನುಳಿತಿದ್ರನೂ ಅಂತ ಕೇಳ್ದೆ ಅಷ್ಟಾರೀ.’
ಸ್ಥೂಲಕಾಯದ ಮೂವ್ವತ್ತೈದು ದಾಟಿರಬಹುದಾದ ಅವಳು ಹೇಳುತ್ತಲೇ ಇದ್ದಳು. ಕಾರಣಾಂತರಗಳಿಂದ ಊರುಕೇರಿ ಬಿಟ್ಟು ಯಾವುದೋ ಕಾಣದ ಊರಿಗೆ ಮದುವೆಯಾಗಿ ಬಂದು, ಹೊಂದಿಕೊಳ್ಳಲಾಗದೇ ದಿಕ್ಕೆಟ್ಟ ಮನಸ್ಥಿತಿ ಅವಳದಾಗಿತ್ತು. ಅವಳೂ ತಡವಾಗಿ ಮದುವೆಯಾದವಳು. ವರನೂ ನಡುಹರೆಯ ಮೀರಿದವನು. ಅವನು ಗಡ್ಡಬಿಟ್ಟು ನೋಡಲು ಸಂಭಾವಿತನಂತೇ ಕಾಣುತ್ತಿದ್ದ. ಆದರೆ ಯಾವ ಹುತ್ತದಲ್ಲಿ ಯಾವ ಹಾವೋ..? ನಡುಹರೆಯ ಮೀರಿದ ಇಬ್ಬರದೂ ಮಿತಿಮೀರಿದ ನಿರೀಕ್ಷೆಗಳು. ಇಷ್ಟು ದಿನ ಸಂಗಾತಿಯಿಲ್ಲದೇ ಒದ್ದಾಡಿದ ಅವನ ದೇಹ ಈಗ ಕಟ್ಟುಬಿಚ್ಚಿದ ಕುದುರೆಯಂತೆ ಕುಣಿದಾಡುವಾಗ ನಾನು ಸಂಯಮದ ಪಾಠ ಹೇಳಿದರೆ ಉಪಯೋಗಕ್ಕೆ ಬರಲಾರದು. ಅವಳಿಗೂ ಗಂಡ, ಅವನಿಗೆ ಹೊಂದಿಕೊಂಡು ಸುಮ್ಮನಿರಬೇಕು ಎಂಬ ಭಾವನೆ ಇದ್ದಹಾಗಿರಲಿಲ್ಲ. ಬೆಳೆದು ಬಲಿತ ಆ ಮರ ಬಾಗಿಸಿದರೆ ಮುರಿಯುವಂತಿತ್ತೇ ಹೊರತು ಬಳುಕುವಂತಿರಲಿಲ್ಲ. ಅವರಿಬ್ಬರ ಬೇರೆಬೇರೆ ಭಾಷೆ, ಸಂಸ್ಕಾರ, ಇಷ್ಟಾನಿಷ್ಟಗಳು ಎಲ್ಲವೂ ಅವರ ನಡುವೆ ತೆರೆಯಾಗಿ ಹರಡಿನಿಂತವು. ಪ್ರೇಮಕಾಮವೆಂಬ ಬಿಸಿಯೂ ಆ ಮಂಜನ್ನು ಕರಗಿಸಲಾರದೇ ಹೋಯಿತು. ಎಲ್ಲಕ್ಕೂ ಕೊನೆಗೆ ಬಲಿಯಾದದ್ದು ಅವರ ದಾಂಪತ್ಯ…
*******
ದೂರದ ಜಿಲ್ಲೆಯೊಂದರಲ್ಲಿ ಕೆಲಸ ಮಾಡುವ ಅವನು ಮನೆಗೆ ಬರುವುದು ತಿಂಗಳೆರೆಡು ತಿಂಗಳಿಗೊಮ್ಮೆ. ಮದುವೆಯಾಗಿ ಬರೋಬ್ಬರಿ ಮೂರು ವರ್ಷವಾದರೂ ಮಕ್ಕಳಾಗಿಲ್ಲ. ಇದುವರೆಗೂ ನಾನವರನ್ನು ನೋಡಿರಲಿಲ್ಲ. ಇದೇ ಮೊದಲ ಬಾರಿ ನನಗೆ ಗೊತ್ತಿದ್ದ ಯಾವುದೋ ಪೇಶೆಂಟ್ ಕಡೆಯವರ ಶಿಫಾರ್ಸಿನ ಮೇರೆಗೆ ನನ್ನ ಬಳಿ ಬಂದಿದ್ದರು. ಆದರೆ ಅವರು ಮಕ್ಕಳಾಗಲಿಲ್ಲವೆಂದು ಔಷಧಕ್ಕೆ ಬಂದವರಲ್ಲ. ಏಕೆ ಬಂದರೆಂದು ತಿಳಿದ ಮೇಲೆ ನಾನೇ ಬೆಚ್ಚಿದೆ…
ಈ ಮೂರು ವರ್ಷದಲ್ಲಿ ಅವರಿಬ್ಬರ ನಡುವೆ ಇನ್ನೂ ಸಮಾಗಮ ಎಂಬುದು ನಡೆದೇ ಇಲ್ಲ!
ಅವನು ಸೋತ ದನಿಯಲ್ಲಿ ನಡುನಡುವೆ ಚಂದದ ಪುಟ್ಟ ಹೆಂಡತಿಯ ಮುಖ ನೋಡುತ್ತಾ, ಅವಳ ಮುಖಭಾವ ಗಮನಿಸುತ್ತಾ, ಸುತ್ತು ಬಳಸಿ ಹೇಳುತ್ತ ಹೋಗುತ್ತಿದ್ದ. ಅವಳ ಮೇಲೆ ಏನೂ ಆಪಾದನೆ ಹೊರಿಸದ ಹಾಗೆ, ವಸ್ತುಸ್ಥಿತಿಯನ್ನಷ್ಟೇ ಹೇಳುತ್ತ ಹೋದ. ಏನು ಹೇಳಿದರೆ ಅವಳೇನು ತಿಳಿದಾಳೋ ಎಂಬ ಕಾಳಜಿ ಅವನ ಮಾತಿನಲ್ಲಿ ಎದ್ದು ತೋರುತ್ತಿತ್ತು. ಕಲ್ಲುಮುಖ ಮಾಡಿ ಕುಳಿತ ಅವಳೋ ಹ್ಞೂಂ ಉಹ್ಞೂಂ ಎನ್ನದೇ, ಅವನ ಕಡೆಗೂ ನೋಡದೇ, ಎತ್ತಲೋ ನೋಡುತ್ತಾ ಕೆಳಮುಖ ಮಾಡಿ ಕುಳಿತುಬಿಟ್ಟಿದ್ದಳು. ಮಾತು ತನಗೆ ಸಂಬಂಧಿಸಿದ್ದೇ ಅಲ್ಲವೇನೋ ಎಂಬಷ್ಟು ನಿರ್ಭಾವುಕ ಮುಖ… .ಸಂಭಾಷಣೆಯಲ್ಲಿ ಪಾಲ್ಗೊಳ್ಳುವ ಯಾವುದೇ ಇರಾದೆ ಇಲ್ಲದ ಮುಖಭಾವ.
ಒಮ್ಮುಖ ದಾರಿಯಲ್ಲಿ ದೂರ ಪ್ರಯಾಣ ಕಷ್ಟ. ಅವಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಯಾವುದೂ ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿ ಮುಂದಿನ ಒಂದೆರೆಡು ಬಾರಿ ಅವಳನ್ನು ಬೇರೆ ಏನೇನೋ ಕಾರಣಗಳಿಗಾಗಿ ಮತ್ತೆ ಬರಹೇಳಲಾಯಿತು. ಎಲ್ಲವಕ್ಕೂ ತಪಾಸಣೆಯ ನೆವಗಳು ಅಷ್ಟೇ. ಅಂತೂ ಇಂತೂ ಬೇಸಿಗೆ ರಜೆ ಮುಗಿದು ಅವಳ ಗಂಡ ಹೋಗುವುದರೊಳಗಾಗಿ ಏನಾದರೂ ರಿಪೇರಿ ಕೆಲಸ ಮಾಡಬೇಕೆಂಬ ನಮ್ಮ ಇರಾದೆಗೆ ಎಲ್ಲ ಅನುಕೂಲಗಳು ಒದಗಿದವು.
ತುಟಿಬಿಚ್ಚಿ ಮಾತನಾಡುವಷ್ಟಾದ ನಂತರ ಅವಳು ಅಷ್ಟು ವಾಚಾಳಿ ಎಂದು ನಂಬಲೇ ಸಾಧ್ಯವಿಲ್ಲ, ಅಷ್ಟು ತೆರೆದುಕೊಂಡಳು. ಬೇರೆ ಬೇರೆ ಉದಾಹರಣೆಗಳ ಮೂಲಕ ನಾವು ನಮ್ಮ ಸಫಲ ಕತೆಗಳನ್ನಷ್ಟೇ ಅವಳಿಗೆ ಹೇಳುತ್ತಾ ಹೋದೆವು. ಅವಳ ಪ್ರಕಾರ ಅವಳಿಗೆ ಗಂಡನ ಮೇಲೆ ತುಂಬಾ ಪ್ರೀತಿಯಂತೆ. ಆದರೆ ಪ್ರೀತಿಯೆಂದರೆ ಅವನ ಜೊತೆ ಮಲಗುವುದೇ ಯಾಕಾಗಿರಬೇಕು ಎಂಬ ವಾದ ಹೂಡಿದಳು. ಅವನು ರಜೆ ಹಾಕಿ ಮನೆಗೆ ಬಂದಾಗಲೆಲ್ಲ ಅವನನ್ನು ತುಂಬ ಉಪಚರಿಸಿ ಚೆನ್ನಾಗಿ ನೋಡಿಕೊಳ್ಳುತ್ತಾಳಂತೆ. ಹಗಲಿಡೀ ಅವನನ್ನು ಬಿಟ್ಟು ಆಚೆ ಕದಲುವುದೇ ಇಲ್ಲವಂತೆ. ಅವನ ಬಟ್ಟೆ ತೊಳೆದು ಒಣಗಿಸಿ ಇಸ್ತ್ರಿ ಹಾಕಿ ರೆಡಿ ಮಾಡಿ ಕೊಡುತ್ತಾಳಂತೆ. ಆದರೆ… ರಾತ್ರಿಯೆಂದರೆ ಮಾತ್ರ ಅವಳಿಗೆ ಭಯ, ಹೇಸಿಗೆ, ಅಸಹ್ಯ… ಅದೇ ಕಾರಣಕ್ಕೆ ಅವಳು ‘ಮನೆಮಾಡುತ್ತೇನೆ, ನೀನೂ ಅಲ್ಲೇ ಬಾ’ ಎಂದು ಅವನು ಎಷ್ಟು ಕರೆದರೂ ಇವಳು ಹೋಗಿಲ್ಲವಂತೆ. ಅವಳು ಎಲ್ಲೋ ಓದಿಕೊಂಡಿದ್ದಾಳೆ, ಮತ್ತಾರೋ ಗೆಳತಿಯರು ಹೇಳಿದ್ದು ಕೇಳಿದ್ದಾಳೆ, ಮೊದಲ ರಾತ್ರಿಯೆಂದರೆ ರಕ್ತ ಹರಿಯುತ್ತದೆಂದು… ತುಂಬಾ ನೋವಾಗುತ್ತದೆಂದು… ಅಸಹ್ಯವಾದದ್ದೆಲ್ಲ ನಡೆಯುತ್ತದೆಂದು… ರಕ್ತ ನೋಡಿದರೆ ಕಣ್ಣುಕತ್ತಲೆಯಾಗುವ, ನೋವಿಗೆ ಹೆದರುವ ಅವಳಿಗೆ ಗಂಡನ ಒಟ್ಟಿಗಿರುವ ಕಲ್ಪನೆಗೇ ವಾಂತಿ ಬಂದಂತಾಗುತ್ತದೆಯಂತೆ.
ಇಷ್ಟೇ ಅಲ್ಲ, ಅವಳಲ್ಲಿ ಇನ್ನೂ ಹಲವು ಚಿತ್ರವಿಚಿತ್ರ ತಪ್ಪು ಕಲ್ಪನೆಗಳಿದ್ದವು. ಆ ಹುಡುಗಿ ನನ್ನ ಬಳಿ ಅದನ್ನೆಲ್ಲ ಹೇಳಿಕೊಳ್ಳುವಷ್ಟು ತೆರೆದ ಮನಸ್ಸಿನವಳಿದ್ದಾಳೆ ಎಂದರೆ ಅವಳನ್ನು ಪಳಗಿಸುವುದು ಕಷ್ಟವಲ್ಲ ಎನ್ನಿಸಿತು. ಸ್ವಲ್ಪ ತಡೆ ಎಂದು ಗಂಡನಿಗೆ ಸಾವಧಾನ ಹೇಳಿದೆವು. ಲೈಂಗಿಕತೆಯಲ್ಲಿ ಆಸಕ್ತಿಯೇ ಇಲ್ಲದ ತಾನು ಹೆಣ್ಣೇ ಹೌದೋ ಅಲ್ಲವೋ ಎಂದು ತಪಾಸಣೆ ಮಾಡಿ ನೋಡಲು ಹೇಳಿದಳು. ತನ್ನ ಅಂಗಾಂಗಗಳು ತೀರಾ ಸಣ್ಣವಾಗಿವೆ ಎಂಬ ಮತ್ತೊಂದು ಸಂದೇಹ. ತಿಂಗಳು ತಿಂಗಳು ಸರಿಯಾಗಿ ಮುಟ್ಟಾಗುತ್ತಿದ್ದ ಅವಳು ಹೆಣ್ಣೇ ಎನ್ನುವುದಕ್ಕೆ ದೈಹಿಕವಾಗಿ ಗಟ್ಟಿ ಸಾಕ್ಷಿಗಳಿದ್ದವು. ತಮಾಷೆಯಾಗಿ ಅವನ್ನೆಲ್ಲ ಅವಳಿಗೆ ವಿವರಿಸಿ ಹೇಳಾಯಿತು. ಈ ಎಲ್ಲದನ್ನು ಪರಿಹರಿಸಿಕೊಂಡವಳು ಮತ್ತೊಂದು ಕ್ಯಾತೆ ತೆಗೆದಳು – ತನಗೆ ಮಕ್ಕಳೆಂದರೆ ತುಂಬ ಇಷ್ಟ, ಆದರೆ ಹೆರಲು ಹೆದರಿಕೆ. ಮಕ್ಕಳು ಬೇಡವಾದ್ದರಿಂದ ಅವನ ಬಳಿ ಹೋಗುವುದಾದರೂ ಏಕೆ ಎಂದಳು! ಕೊನೆಗೆ ‘ಗಂಡನ ಬಳಿಯಿದ್ದೂ ಮಕ್ಕಳಾಗದಂತೆ ಮಾಡಿಕೊಳ್ಳಲು ನೋವಿಲ್ಲದ ಬಹಳಷ್ಟು ವಿಧಾನಗಳಿವೆ, ಆ ಬಗ್ಗೆ ಅವನ ಬಳಿ ಮಾತನಾಡಿ ಮನವೊಲಿಸಿಕೋ. ನಾವೂ ಹೇಳುತ್ತೇವೆ. ನಿನ್ನ ಅಭಿಪ್ರಾಯವೂ ನಂತರ ಬದಲಾಗಬಹುದು.’ ಎಂದು ಹೇಳಿ ಒಪ್ಪಿಸಬೇಕಾಯಿತು.
ನಮ್ಮ ಕೊನೆಯ ತರಗತಿಯಲ್ಲಿ ಅವಳಿಗೆ ಸಾರಾಂಶವಾಗಿ ಮತ್ತೆಲ್ಲ ಹೇಳಿಕಳಿಸಿದೆವು; ‘ನಿನ್ನ ಬಳಿ ದೈಹಿಕ ನ್ಯೂನತೆಗಳಾವುವೂ ಇಲ್ಲ. ಕೆಲವು ತಪ್ಪು ಕಲ್ಪನೆಗಳಿಂದ ಲೈಂಗಿಕ ಕ್ರಿಯೆ ಪಾಪವೆಂದು ತಿಳಿದು ಹೀಗೆ ಮಾಡುತ್ತಿರುವೆ. ಅದೇನೂ ಪಾಪವಲ್ಲ. ಪೀಳಿಗೆಯ ಉಳಿವಿಗಾಗಿ ಸಕಲ ಜೀವರಾಶಿಗಳೂ ಅದರಲ್ಲಿ ತೊಡಗಿವೆ, ಅದೇನು ಬರಿಯ ಮಜಾಕ್ಕಾಗಿ ಅಲ್ಲ. ಅದು ಪ್ರಕೃತಿ ನಿಯಮ ಕೂಡ. ನಿನ್ನ ಗಂಡ ಪಾಪ ಒಳ್ಳೆಯವನು. ಮೂರು ವರ್ಷವಾದರೂ ಸುಮ್ಮನೇ ಕಾದಿದ್ದಾನೆ. ಮತ್ತೆ ಯಾರಾದರೂ ಆಗಿದ್ದರೆ ಇಷ್ಟು ಕಾಯುತ್ತಿರಲಿಲ್ಲ. ಮನೆಯವರ ಒತ್ತಡಕ್ಕೆ ಬೇರೆ ಮದುವೆ ಮಾಡಿಕೊಂಡಿರುತ್ತಿದ್ದರು. ನಿನಗೆ ಅವನ ಮೇಲೆ ಸಿಕ್ಕಾಪಟ್ಟೆ ಪ್ರೀತಿಯೆನ್ನುತ್ತೀ. ಆದರೆ ಇದೆಂಥಾ ಪ್ರೀತಿ? ಇದಕ್ಕೆ ಮದುವೆ ಏಕೆ ಬೇಕಾಗಿತ್ತು…’ ಎಂದೆಲ್ಲ ಸಕಲೋಪಾಯಗಳನ್ನು ಬಳಸಿ, ನೈತಿಕ ಪ್ರಶ್ನೆ ಹಾಕಿ, ಅವಳನ್ನು ಸೋಲಿಸಿ ಗೆದ್ದೆವು. ಅಥವಾ ಅವಳು ಗೆದ್ದು ನಮ್ಮನ್ನು ಸೋಲಿಸಿದಳು.
ಅಂತೂ ಒಂದು ಒಳ್ಳೆಯ ದಿನ ಮಂತ್ರಾಲಯಕ್ಕೆ ಹೋದ ಅವರು ರಾಯರ ಸಾನ್ನಿಧ್ಯದಲ್ಲಿ ಸತಿಪತಿಗಳಾಗಿದ್ದು ತಿಳಿಯಿತು. ಅಲ್ಲಿಂದಲೇ ಫೋನ್ ಮಾಡಿದ ಗಂಡನ ಖುಷಿಗೆ ನಾವೇ ಹೊಸದಾಗಿ ಮದುವೆಯಾದವರಂತೆ ಸಂಭ್ರಮ ಪಟ್ಟೆವು..!
*******
‘ಮೇಡಂ, ನಂಗೆ ಮೂತ್ರ ಮಾಡುವಾಗ ಉರಿಯಾತದೆ. ‘ಅಲ್ಲಿ’ ನೋವಾತದೆ. ಇಲ್ಲಿ ಗಾಯ ಆಗದೆ.. ಇಲ್ಲೆಲ್ಲ ತುರುಸ್ತದೆ..’
ಈಗ ೧೨-೧೩ ಇರಬಹುದಾದ, ಸೊಂಟಕ್ಕೆ ಎರಡು ವರ್ಷದ ತಂಗಿಯನ್ನು ಚಚ್ಚಿಕೊಂಡಿದ್ದ ಆ ಪೋರಿ ಸಣ್ಣ ದನಿಯಲ್ಲಿ ತಾನು ಹೇಳಿದ್ದು ತನಗೇ ಕೇಳಬಾರದು ಹಾಗೆ ಹೇಳುತ್ತಿದ್ದಳು. ಖಾಸಗಿತನ ಹಾಗೂ ಸಂಕೋಚ ಅತಿ ಹೆಚ್ಚಿರುವ ಈ ಹದಿಹರೆಯದ ಎಳವೆಯ ಹುಡುಗಿ, ನೋವು ಮತ್ತು ಭಯವನ್ನು ತನ್ನ ಮುಖದಲ್ಲಿ ಹೊತ್ತು ತನ್ನ ಗುಪ್ತ ಅಂಗಾಂಗಗಳ ಬಗೆಗೇ ಹೇಳುತ್ತಿದೆ! ಶಾಲೆಗೆ ಹೋಗಿದ್ದರೆ ಈ ಬಾರಿ ಎಂಟನೆತ್ತೆ ಆಗಬೇಕಿದ್ದ ಇನ್ನೂ ಮುಟ್ಟಾಗದ ಹುಡುಗಿ ಅದು.
ಅವಳನ್ನು ನಾನು ಬಲ್ಲೆ. ಅವಳ ಅಮ್ಮ ಹೃದ್ರೋಗಿ ಆಗಿದ್ದರೂ, ‘ಮತ್ತೆ ಹೆರುವುದು ನಿನ್ನ ಜೀವಕ್ಕೆ ಅಪಾಯ’ವೆಂದು ವೈದ್ಯರು ಹೇಳಿದ್ದರೂ, ಒಂದಾದ ಮೇಲೊಂದರಂತೆ ಐದು ಹೆಣ್ಣು ಹೆತ್ತು ಹೆತ್ತು, ಕೊನೆಗೆ ಐದನೇ ಬಾಣಂತನದಲ್ಲಿ ಈಗ್ಗೆ ಒಂದು ವರ್ಷದ ಕೆಳಗೆ ತೀರಿಹೋಗಿದ್ದಳು. ಅವಳ ಗಂಡ ಬಂದವನು ‘ಮನೇಲಿ ಈಗ ಯಾರಿಲ್ಲ, ಕೆಲಸಕ್ಕೂ ಈ ಮಕ್ಕಳನ್ನು ಬಿಟ್ಟು ಹೋಗಲಾಗುವುದಿಲ್ಲ, ನಾನೇ ಅಡಿಗೆ ಎಲ್ಲ ಮಾಡುವುದು’ ಎಂದಾಗ ಅಚ್ಚರಿಗೊಂಡಿದ್ದೆ. ಕೇರಿಯ ಮೇಲೆ ಉಳಿದವರಾರಿಗೂ ಅವರ ಮೇಲೆ ಸದಭಿಪ್ರಾಯವಿರಲಿಲ್ಲ. ಗಾಳಿ ಬಂದರೆ ಹಾರಿಹೋಗುವಂತಿದ್ದ ಕುಡುಕ ಗಂಡನನ್ನು ಕಟ್ಟಿಕೊಂಡು ಅವಳು ಹೇಗಾದರೂ ಜೀವನ ನಿಭಾಯಿಸಿಯಾಳು ಎಂದು ನಾನು ಅಚ್ಚರಿಪಡುವಾಗ, ಅವಳ ನಿಗೂಢ ನಡತೆಯ ಬಗ್ಗೆ ಹಾಗೂ ಅವಳಿಗೆ ಸಿಗುವ ಹಣದ ಮೂಲದ ಬಗ್ಗೆ ಆಚೆ ಕೇರಿಯ ಜನ ಬೇರೆ ಬೇರೆ ಕತೆ ಹೇಳಿದ್ದರು. ಅವಳನ್ನು ನೋಡಿದರೆ, ಮಾತು ಕೇಳಿದರೆ, ಹಾಗೆನಿಸುವಂತಿರಲಿಲ್ಲ. ಯಾವ ಒತ್ತಡವೋ, ಏನು ಪರಿಸ್ಥಿತಿಯೋ ಎಂದು ನಾನು ಅವಳ ನಡತೆ, ಹಣಮೂಲ ಅವ್ಯಾವುವೂ ನನಗೆ ಬೇಕಿರಲಿಲ್ಲವಾಗಿ ಅವಳ ಹೃದಯದ ಕಾಯಿಲೆ, ಸಂತಾನ ನಿಯಂತ್ರಣ, ದೈಹಿಕ ಆರೋಗ್ಯ ಇವುಗಳ ಬಗೆಗೇ ಹೇಳಿಕೇಳಿ ಮಾಡುತ್ತಿದ್ದೆ. ಅಂತೂ ಇಂತೂ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುತ್ತೀನೆಂದು ಅವಳು ಒಪ್ಪುವ ಹೊತ್ತಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಅವಳಿಗೆ ತೀವ್ರವಾದ ಹೃದ್ರೋಗ ಹಾಗೂ ರಕ್ತಹೀನತೆ ಇರುವುದರಿಂದ ಆಪರೇಶನ್ ಮಾಡಲಾಗದೆಂದು ವಾಪಸು ಕಳಿಸಿದ್ದರು. ಇಂತಿರುವಾಗ ಹೆರುವ, ನಿಭಾಯಿಸುವ ಈ ಜಂಜಾಟಗಳಾವುವೂ ಬೇಡವೆಂಬ ಹಾಗೆ ಕೊನೇ ಬಾಣಂತನದಲ್ಲಿ ತೀರಿಹೋಗಿದ್ದಳು.
ಈಗ ಅವಳ ಗಂಡನಿಗೆ ಮತ್ತಾರು ಹೆಣ್ಣು ಕೊಡುತ್ತಾರೆ? ಆಗಲೇ ಏಳು ಕಲಿಯುತ್ತಿದ್ದ ಹಿರಿಯ ಹುಡುಗಿಯನ್ನು ಅವನು ಶಾಲೆ ಬಿಡಿಸಿದ್ದು. ಸಣ್ಣ ಮಗುವಿನ ಜವಾಬ್ದಾರಿ, ತಂಗಿಯರನ್ನು ಶಾಲೆಗೆ ಕಳಿಸುವುದು, ತಿಳಿದಷ್ಟು ಅಡಿಗೆ ಅಪ್ಪನ ಜೊತೆ ಮಾಡುವುದು, ಬಟ್ಟೆ ತೊಳೆಯುವುದು ಎಲ್ಲವನ್ನು ಮಾಡುತ್ತಿದ್ದ ಅವಳು ಪದೇಪದೇ ಆಸ್ಪತ್ರೆಗೆ ಬರುತ್ತಿದ್ದಳು. ಆ ಪುಟ್ಟ ಹುಡುಗಿಗೆ ವಯಸ್ಸಿಗೆ ಮೀರಿದ ಜವಾಬ್ದಾರಿಯಿಂದ ನಲುಗಿ ಹೋಗುತ್ತಿದೆಯೆನ್ನುವುದು ನಗೆಯಿಲ್ಲದ ಅದರ ಮುಖಭಾವದಲ್ಲೇ ತೋರಿ ಒಂಥರಾ ಸಂಕಟವಾದರೂ ಅವರ ಸಮಸ್ಯೆಗೆ ಪರಿಹಾರ ಅಷ್ಟು ಸರಳವಿರಲಿಲ್ಲ. ಅದು ಕಾಲದ ಸೊತ್ತಾಗಿತ್ತು..
ಹೀಗೇ ಸಂಸಾರದ ಚಕ್ರ ಎಳೆಯುತ್ತಿದ್ದ ಅವರು ತಮ್ಮ ಕಷ್ಟಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಹಾಗೆ ತೋರಲಿಲ್ಲ. ತೀರ ನಿಸ್ಸಹಾಯಕವಾದ ಮೇಲೆ ಮತ್ತೆ ಮಾಡುವುದಾದರೂ ಏನು? ನಮ್ಮ ಹಣೆಬರಹ ಎಂದು ಕೈಚೆಲ್ಲಿ ಜೀವವಿದ್ದದ್ದಕ್ಕೆ ಬದುಕುತ್ತಾ ಹೋಗುವುದು.. ಹೊಟ್ಟೆಯೊಂದು ಹೇಗಾದರೂ ತುಂಬಿದರೆ ಪರಮ ತೃಪ್ತರು ಅವರು. ಅವಳಿಗೆ ನನ್ನ ಬಳಿ ಬಂದಾಗ ನಾಲ್ಕು ಒಳ್ಳೆಯ ಮಾತು ಹೇಳಿ ನನ್ನ ಕೈಲಾದ ಸಹಾಯ ಮಾಡುವುದಲ್ಲದೇ ಮತ್ತಾವುದೂ ಉಪಯೋಗಕ್ಕೆ ಬರುವಂತಿರಲಿಲ್ಲ. ಒಣ ಅನುಕಂಪದಿಂದ ಯಾವ ಲಾಭವೂ ಇಲ್ಲ. ಅವಳನ್ನು ಖುಷಿ ಪಡಿಸಲೋ ಎಂಬಂತೆ ಅವಳ ಅಪ್ಪ ಅವಳಿಗೆ ಒಳ್ಳೊಳ್ಳೆಯ ಬಟ್ಟೆ ಬರೆ, ಬಳೆ, ಚಪ್ಪಲಿ ಕೊಡಿಸುತ್ತಿದ್ದ ಎಂದು ತೋರುತ್ತದೆ. ಮೊದಲಿಗಿಂತ ಶಿಸ್ತಾಗಿ ಬರುತ್ತಿದ್ದಳು.
ಈಗ ಆ ಹುಡುಗಿ ಹೀಗೆ ಹೇಳುತ್ತಿದೆಯಲ್ಲ, ಏನಾಗಿದೆ ನೋಡೋಣವೆಂದು ಒಳಗೆ ಕರೆದೆ. ಅವಳ ಖಾಸಗಿ ಅಂಗಾಂಗಗಳೆಲ್ಲ ಗಾಯಗೊಂಡಂತಿದ್ದವು..! ಚರ್ಮ ಸುಲಿದು ಕೆಂಪಾಗಿ ದಾಸವಾಳದ ಎಸಳಿನ ಹಾಗೆ ತೋರುತ್ತಿತ್ತು. ಬಲವಂತದ ಲೈಂಗಿಕ ಕ್ರಿಯೆಯ ಪರಿಣಾಮ ಅದು ಎಂದು ತಿಳಿಯಲು ಯಾವ ನಿಪುಣ ವೈದ್ಯರಾಗಬೇಕಿಲ್ಲ, ಕಾಮನ್‌ಸೆನ್ಸ್ ಇರುವ ಯಾರಿಗೂ ತಿಳಿಯುವ ಹಾಗಿತ್ತು. ಸುಮ್ಮಸುಮ್ಮನೇ ಒದ್ದೆ ಬಟ್ಟೆಯನ್ನುಟ್ಟೋ, ಸ್ವಚ್ಛತೆಯಿಲ್ಲದೆಯೋ ಆಗುವ ಸೋಂಕು ಅದಲ್ಲ. ಬಲಾತ್ಕಾರವೇ ಕಾರಣವೆಂದು ಮತ್ತೆಮತ್ತೆ ಅನಿಸಿ ಅಯಾಚಿತವಾಗಿ ನನ್ನ ಕಣ್ಣು ತುಂಬಿಬಂದವು. ಬಡವರಿಗೆ ಬದುಕು ಎಷ್ಟು ಕ್ರೂರಿಯಾಗಬಲ್ಲುದು!? ಆ ಮುಗ್ಧ ಹುಡುಗಿಯಾದರೂ ತನಗಾಗುವ ನೋವಿನ ಬಗ್ಗೆ ಹೇಳಿದಳೇ ಹೊರತು ಅದಕ್ಕೆ ಕಾರಣವೇನೆಂದು ಬಾಯಿಬಿಡಲಿಲ್ಲ. ನನ್ನ ಧೈರ್ಯದ ಮಾತುಗಳಾವುವೂ ಅವಳ ದನಿಗೆ ಜೀವ ತುಂಬಲಿಲ್ಲ.
ಹೆಂಡತಿ ಸತ್ತಿರುವ ಅವಳ ಅಪ್ಪನ ಕೆಲಸವೇ ಇದು? ಅಥವಾ ಹಣಕ್ಕಾಗಿ ಈ ಸಣ್ಣ ಹುಡುಗಿಯನ್ನು ಬಳಸಿಕೊಂಡು ಬೇರೆ ದಂಧೆ ನಡೆಸುತ್ತಿದ್ದಾನೆಯೇ? ಈ ಹುಡುಗಿಯಾದರೂ ಯಾಕೆ ಪ್ರತಿರೋಧ ತೋರಬಾರದು? ಅವಳಿಗೆ ಸಣ್ಣಪುಟ್ಟ ವಸ್ತುಗಳ ಆಮಿಷವೊಡ್ಡಿ ಹೀಗೆ ಮಾಡುತ್ತಿದ್ದಾನೆಯೋ ಅಥವಾ ಅವಳಿಗೂ ತಾನು ಕುಡಿಯುವಾಗ ಒಂದು ಕೊಟ್ಟೆ ಸಾರಾಯಿ ಕುಡಿಸಿ ಅವಳಿಗೇ ಗೊತ್ತಿಲ್ಲದಂತೆ ಇದನ್ನೆಲ್ಲ ನಡೆಸುತ್ತಿದ್ದಾನೆಯೋ? ಅಥವಾ ಇದೆಲ್ಲ ನನ್ನ ಅತಿ ಕಲ್ಪನೆಯೋ? ಆದರೆ ಕಲ್ಪನೆಯಿರಬಹುದೆಂದು ನನ್ನ ಮನಸ್ಸು ಒಪ್ಪಲು ತಯಾರಿರಲಿಲ್ಲ. ಈ ಹುಡುಗಿಯನ್ನು ಹೇಗಾದರೂ ಪಾರು ಮಾಡಬೇಕು. ಇಲ್ಲದಿದ್ದರೆ ಅರಳುವುದರೊಳಗೆ ಈ ಮೊಗ್ಗು ಒಣಗಿಹೋಗುವುದು ನಿಸ್ಸಂಶಯ. ಹೆಚ್ಚು ಸಂಬಳದ ಆಮಿಷವೊಡ್ಡಿ ನಮ್ಮಲ್ಲೇ ಕೆಲಸಕ್ಕೆ ಉಳಿಸು ಎಂದು ಹೇಳಿದರೆ? ಒಪ್ಪದಿದ್ದರೆ ಅವಳಪ್ಪನಿಗೆ ಹೆದರಿಸಬೇಕು. ಮತ್ತೊಂದು ಮದುವೆಯಾಗೆಂದು ಸೂಚಿಸಬೇಕು. ಇಲ್ಲದಿದ್ದರೆ ಅವನ ಉಳಿದ ನಾಲ್ಕು ಹೆಣ್ಣುಗಳಿಗೂ ಸಾಲಾಗಿ ಇದೇ ಗತಿ ಬರುವುದು ನಿಶ್ಚಿತ.
ಹೀಗೇ ಏನೇನೋ ಯೋಚಿಸಿಕೊಂಡು ಅವಳ ಅಪ್ಪನನ್ನು ಒಳಕರೆಸಿದೆ. ಅವನಾದರೋ ಅತಿವಿನಯ ಪ್ರದರ್ಶಿಸುತ್ತ, ಕೈಕೈ ಮುಗಿಯುತ್ತಾ, ನಾನು ಹೇಳಿದ್ದನ್ನಾವುದನ್ನೂ ಕೇಳಿಸಿಕೊಳ್ಳದೇ, ಬರೇ ಧೂರ್ತನ ಹಾಗೆ ನಗಾಡಿ ಏನೇನೋ ಬಡಬಡಿಸಿ ಹೋಗಿದ್ದ.
ಇಷ್ಟೆಲ್ಲ ಆದದ್ದೇ ನಾನು ಅವರನ್ನು ಮತ್ತೆ ನೋಡಲೇ ಇಲ್ಲ. ನನ್ನ ಬಳಿ ಮಾತ್ರ ಬರುತ್ತಿಲ್ಲವೆಂದುಕೊಂಡಿದ್ದೆ, ಇಲ್ಲ, ಅವರು ಆ ಊರನ್ನೇ ಬಿಟ್ಟು ಕೂಲಿ ಕೆಲಸಕ್ಕೆಂದು ಪಟ್ಟಣಕ್ಕೆ ಹೋದರೆಂದು ನಂತರ ತಿಳಿಯಿತು. ‘ಆ ಹುಡುಗಿಗಾದ್ರೂ ಏನ್ ಸೊಕ್ಕು ಬಂದದ್ರೋ ಅಮಾ. ಹೋಗ್ತಾ ನಮ್ಮೊಬ್ರ ಹತ್ರನೂ ಇಂತಾ ಕಡೆ ಹೋಗ್ತೀವಿ ಅಂತ ಹೇಳಿ ಹೋಗಲಿಲ್ಲ. ಅವತ್ತು ಪಾರೆಸ್ಟ್ ಗಾಲ್ಡು ಬಂದವ್ನು ಅವ್ರ ಗುಡ್ಲು ಇದ್ದ ಜಾಗ ಖಾಲಿ ಮಾಡ್ಬೇಕು, ಅದು ಅವ್ರ ಜಾಗ ಅಲ್ಲ ಅಂತ ಗಲಾಟೆ ಮಾಡಿಹೋಗಿದ್ದ. ಅದ್ಕೇ ಊರು ಬಿಟ್ಟು ಹೋದ್ರೋ, ಎಂತಾಯ್ತೋ ಅಂತೂ ಯಾರ್ಗೂ ಹೇಳ್ದ ಪರಿ ಸಾಮಾನೆಲ್ಲ ತಗಂಡ್ ಹೋಗಾರೆ. ಸಾಮಾನಾದ್ರೂ ಎಂತ ಇತ್ರಾ ಅಮಾ ಆ ಮನೇಲಿ? ಎಲ್ಲ ಒಂದ್ ಚಾದರದಾಗೆ ಸುತ್ಕಂಡ್ ಅದರಪ್ಪ ತಲೆಮೇಲೆ ಇಟ್ಕ ಹೋಗಾನಪ್ಪ. ಸಾಮಾನು ಅಂದ್ರೆ ಆ ಐದು ಮಕ್ಕಳೇ….’
ನನ್ನ ತನಿಖೆಗೆ ಹೆದರಿ ಅವರು ಊರು ಬಿಡಲಿಲ್ಲವಷ್ಟೇ……
ಪ್ರೇಮ ಕಾಮಗಳೆಂಬ ನೈಸರ್ಗಿಕ ಆನಂದ ಹೊಂದಲು ಏನೇನೆಲ್ಲ ದಾರಿಗಳು! ಯಾವ್ಯಾವ ಅಡೆತಡೆಗಳು!
ಮೇಲಿನ ಘಟನೆಗಳೆಲ್ಲವೂ ನಿಮ್ಮ ಮನಸ್ಸಿನ ಕ್ಯಾನ್ವಾಸಿನಲ್ಲಿ ತನ್ನಷ್ಟಕ್ಕೆ ತಾನೇ ಚಿತ್ರ ಮೂಡಿಸಿರುವಾಗ ಯಾವ ವಿವರಣೆಯೂ, ಚೌಕಟ್ಟೂ, ವಿಶ್ಲೇಷಣೆಯೂ ಅಗತ್ಯವಿಲ್ಲ ಎಂದೇ ಎನಿಸುತ್ತಿದೆ…
10. ಕವಲಕ್ಕಿ ಡಾಕ್ಟರ ಡೈರಿ: ಹಂದಿಜ್ವರದ ಹೊತ್ತಲ್ಲಿ ಮರಣವ್ಯಾಧಿಗಳ ನೆನಪು
ಹಂದಿಜ್ವರದ ಭೀತಿಯ ಜ್ವರ ಎಲ್ಲಕಡೆ ತೀವ್ರವಾಗಿ ಹರಡುತ್ತ, ಜನರೆಲ್ಲ ಅಂತ್ಯಕಾಲ ಸಮೀಪಿಸಿದ ದುಗುಡದಲ್ಲಿರುವವರಂತೆ ಮೂಗುಮುಖ ಮುಚ್ಚುವ ಮುಖಗವಸು ತೊಟ್ಟು ತಿರುಗುತ್ತ, ಬರೀ ಬಲಿಯನ್ನಷ್ಟೇ ತೋರಿಸುವ ಸುದ್ದಿಮಾಧ್ಯಮಗಳ ತಾಜಾಸುದ್ದಿಗಾಗಿ ತವಕಿಸುತ್ತ, ಎಲ್ಲ ಮುಗಿದೇ ಹೋಗಬಹುದೇನೋ ಎಂಬ ಆತಂಕದಲ್ಲಿರುವಾಗ….
ಮೊನ್ನೆ ಕ್ಲಿನಿಕ್ಕಿಗೆ ಬಂದ ಎಂಭತ್ತು ವರ್ಷದ ಕೇಶಿ ಅಜ್ಜಿ ನಾನು ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದು ನೋಡಿ ಗಲಗಲನೆ ನಗಾಡಿಬಿಟ್ಟಿತು. ‘ನಿಮ್ಗೂ ಬಂದೋಯ್ತೇನ್ರಾ ಅಮ ಹಂದಿಜ್ವರ?’ ಅಂತ ಕೇಳಿತು. ಅಷ್ಟೊತ್ತಿಗೆ ತೀವ್ರ ಧಾವಂತದಲ್ಲಿ ಎಳೆಯನೊಬ್ಬ ಓಡೋಡುತ್ತ ಬಂದವನೇ ‘ಗೊತ್ತಾಗ್ದೇ ನಿನ್ನೆ ಹಂದಿಹೊಡ್ದು ತಿಂದುಬಿಟ್ವಿ, ಇಂದು ನನಗೆ ಜ್ವರ ಬಂದದೆ. ಟೀವೀಲಿ ನೋಡಿದ್ದೇ ಕಂಗಾಲಾಗಿಹೋಯ್ತು. ಇದು ಹಂದಿಜ್ವರನಾ?’ ಎಂದು ಒಂದೇ ಉಸುರಲ್ಲಿ ಕೇಳಿದ. ನಾನು ಬಾಯಿ ಬಿಡುವ ಮೊದಲೇ ಕೇಶಿ ಅಜ್ಜಿ ಏನು ಹೇಳಿತು ಗೊತ್ತೆ? ‘ತಮಾ, ತಿಂದುದ್ನ ಅರ‍್ಗುಸ್ಕಬೇಕೇ ಹೊರ್ತ ಹೆದರ‍್ಬಾರ್ದು. ಏನೂ ಆಗುದಿಲ್ಲ. ನಮ್ಮೂರ‍್ಗೆ ಮಂಗನ ಕಾಯ್ಲೆ ಆಯ್ತು, ಇಲಿಜ್ವರ ಆಯ್ತು, ಅದೆಂತದೋ ಚಿಕನ್ ಜ್ವರ ಆಯ್ತು, ಈಗ ಹಂದಿಜ್ವರ ಅಷ್ಟೆಯ. ಹೆಚ್ಚಂದ್ರೆ ಏನಾಗ್ಬೋದೋ ತಮಾ? ಸಾವು ಬರಬೋದು ಅಷ್ಟೇಯ. ಅದು ಎಂದಾದ್ರು ಒಂದಿನ ಈ ಕಾಯ್ಲೆ ಅಲ್ದಿದ್ರೆ ಮತ್ತೊಂದು ಕಾಯ್ಲೆಗೋ ಮತ್ತೆಂತಕೋ ಬರುದೆಯಾ. ನೀ ಹೆದರಬೇಡ, ನಮ್ಕಾಲದ ಕತಿ ಕೇಳಬೇಕು ನೀನು..’ ಎನ್ನುತ್ತ ತನ್ನ ಕವಳದ ಗಂಟು ಬಿಚ್ಚಿ ತಂಬಾಕು ಸುಣ್ಣದ ಡಬ್ಬಿ ಅರಸುತ್ತ ತನ್ನ ನೆನಪಿನ ಚೀಲ ಬಿಚ್ಚಿತು…
ಕೇಶಿಗೆ ಈಗಿರುವುದು ಒಂದೇ ಕಣ್ಣು. ಮತ್ತೊಂದು ಕಣ್ಣು ಚಿಕ್ಕಂದಿನ ಮೈಲಿಬೇನೆಗೆ ಕರಗಿ ಹೋಗಿದೆ. ಇರುವ ಒಂದೇ ಕಣ್ಣಿಗೆ ಪೊರೆ ಬಂದು ಅದೂ ಮಸುಕು ಮಸುಕಾಗಿ ಕಾಣುತ್ತಾ ಇರುವಾಗ, ಕಣ್ಣಿನ ಆಪರೇಶನ್ ಮಾಡಿಸಿಕೋ ಎಂದರೆ ಅವಳು ಏನು ಮಾಡಿದರೂ ಒಪ್ಪಲಿಲ್ಲ. ಎಂಭತ್ತು ವರ್ಷದ ತನಗೇಕೆ ಆಪರೇಶನ್ ಎಂಬುದು ಅವಳ ವಾದ. ಅವಳ ಗಂಡ ಕ್ಯಾಸನದೂ ಅಜ್ಜಿಯ ಮಾತಿಗೆ ಅನುಮೋದನೆ. ಜೋಡಿಯೆಂದರೆ ಅವರದು. ಸಣ್ಣವಳಿದ್ದಾಗ ಅಜ್ಜಿಗೆ ಮೈಲಿಬೇನೆ ಆಗಿ ಆ ಕಾಯಿಲೆಯಲ್ಲಿ ಅದರ ಅಪ್ಪ ಅಮ್ಮ ಹಾಗೂ ಪೂರಾ ಕುಟುಂಬ ನಾಶವಾಗಿ ಈ ಕೇಶಿಯೊಂದೇ ಉಳಿದಿದ್ದಂತೆ. ಅವಳ ಮಾವನ ಮನೆಯಲ್ಲೇ ಬೆಳೆದ ಅಜ್ಜಿ ಕೊನೆಗೆ ಮಾವನ ಮಗನಾದ ಕ್ಯಾಸ – ಅವನೂ ಮೈಲಿಬೇನೆಯಾಗಿ ಕಿವಿ ದೂರವಾಗಿದ್ದವನೇ – ಅವನನ್ನೇ ಮದುವೆಯಾಗಿ ಅಲ್ಲೇ ನೆಲೆ ನಿಂತಿತಂತೆ. ಅವರದ್ದು ‘ದೇವ್ರೇ ಮಾಡಿದ ಜೋಡಿ’ ಎಂದೇ ಎಲ್ಲ ಹೇಳುವಷ್ಟು ಅನ್ಯೋನ್ಯ ದಂಪತಿಗಳು. ಅವರಿಗೆ ಗನಸ್ಥರಾದ ಎಂಟು ಜನ ಮಕ್ಕಳು. ಈಗ ಆ ಕುಟುಂಬದ ಸಂಖ್ಯೆ ನೂರು ದಾಟಿರಬಹುದು.
ಇಂತಹ ಮೈಲಿಬೇನೆಯಾದ ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬರನ್ನು ನಾವಿಂದು ನೋಡುತ್ತೇವೆ. ಅದೇ ಮುಖಚಹರೆ ಹೊತ್ತ ಕೆಲವು ಸಿನಿಮಾ ನಟರೂ ಇದ್ದಾರೆ. ಈ ಮೈಲಿ ಮುಖಗಳು ಕಾಣುವುದೂ, ಅವರು ಊರ ಜೀವ ಹಿಂಡಿದ ಆ ಕಾಯಿಲೆಯನ್ನು ನೆನಪು ಮಾಡುವುದೂ ಬರಬರುತ್ತಾ ಕಡಿಮೆಯಾಗುತ್ತಿದೆ. ಆ ಕಾಯಿಲೆಯಂತೇ ಅದರ ನೆನಪೂ ಜನರ ಮನದಿಂದ ಮರೆಯಾಗುತ್ತಿದೆ…
*****
ಒಂದಾನೊಂದು ಕಾಲದಲ್ಲಿ ಮನುಷ್ಯ ಸಮಾಜವನ್ನು ಇನ್ನಿಲ್ಲದಂತೆ ಕಾಡಿದ ಹಲವು ರೋಗಗಳನ್ನು ನಾವಿಂದು ಕಾಣುವುದೇ ಇಲ್ಲ. ನಿಷ್ಕಾರುಣ್ಯದಿಂದ ಮಕ್ಕಳು ಮುದುಕರೆನ್ನದೇ ಲಕ್ಷಗಟ್ಟಲೇ ಜನರನ್ನು ಕೊಂದು, ಹಲವು ಸಂಸಾರಗಳನ್ನು ನಾಶ ಮಾಡಿ, ಬದುಕುಳಿದವರಿಗೂ ಜೀವನ ದುರ್ಭರವಾಗುವಂತೆ ಮಾಡುತ್ತಿದ್ದ ಕಾಯಿಲೆಗಳು ಇಂದು ಚರಿತ್ರೆಯ ಪುಟಗಳಲ್ಲಿ ಸೇರಿಹೋಗಿವೆ. ನಾವಿಂದು ಅಂತಹ ಒಂದೂ ಕೇಸು ನೋಡದ, ಆದರೆ ‘ಅದು ಹೀಗಿತ್ತಂತೆ’ ಎಂಬ ಅಚ್ಚರಿ ದಿಗ್ಭ್ರಮೆಗಳಿಂದ ಓದಿ ತಿಳಿದುಕೊಂಡು ಅದರ ಬಗೆಗಿನ ಎಚ್ಚರವನ್ನಷ್ಟೇ ಇರಿಸಿಕೊಂಡ ಎರಡು ಕಾಯಿಲೆಗಳು – ಮೈಲಿಬೇನೆ ಹಾಗೂ ಪ್ಲೇಗ್ – ಅವುಗಳ ಬಗ್ಗೆ ‘ಹೀಗೊಂದು ಶ್ರದ್ಧಾಂಜಲಿ’….
ಮೈಲಿಬೇನೆ ಅಥವಾ ಸ್ಮಾಲ್ ಪಾಕ್ಸ್ ಕ್ರಿ.ಪೂ. ೧೦೦೦೦ ವರ್ಷಗಳಷ್ಟು ಹಳೆಯದೆನ್ನುತ್ತಾರೆ. ಆಗ ಇದ್ದುದಕ್ಕೆ ಸಾಕ್ಷಿ ಆಧಾರಗಳಿಲ್ಲವಾದರೂ ಯಾವಾಗ ಮಾನವ ಅಲೆಮಾರಿ ಜೀವನ ತ್ಯಜಿಸಿ ಕೃಷಿಗಾಗಿ ಒಂದೇ ಪ್ರದೇಶದಲ್ಲಿ ನೆಲೆ ನಿಲ್ಲಲು ಶುರು ಮಾಡಿದನೋ ಆವಾಗಿನಿಂದ ಇದು ಮನುಷ್ಯನನ್ನು ಪೀಡಿಸುತ್ತಿರಬಹುದೆಂಬ ಒಂದು ಅಂದಾಜಿದೆ. ಕ್ರಿ.ಪೂ. ೧೫೦೦ರ ಸುಮಾರಿನ ಈಜಿಪ್ತಿನ ಮಮ್ಮಿಗಳ ದೇಹದ ಮೇಲಿನ ಕಲೆಗಳು ಮೈಲಿಬೇನೆಯ ವೆಂದು ಹೇಳುತ್ತಾರೆ. ಕ್ರಿ.ಪೂ. ೧೧೦೦ರ ಸುಮಾರಿಗೆ ಚೈನಾದಲ್ಲೂ ಇದು ಇತ್ತೆಂದು ಬಗ್ಗೆ ಶಂಕಿಸಲಾಗಿದೆ. ಒಟ್ಟಾರೆ ಮಾನವಕುಲವನ್ನು ಸಾವಿರಾರು ವರ್ಷಗಳಿಂದ ಕಾಡುತ್ತಾ ಬಂದಿರುವ ಈ ಕಾಯಿಲೆಗೆ ಕಾರಣ ‘ವೇರಿಯೋಲ’ ಎಂಬ ವೈರಸ್. ಮೊದಲು ಜ್ವರ, ತಲೆನೋವಿನಂತಹ ಸಾಧಾರಣ ರೋಗಲಕ್ಷಣ ಹೊಂದಿದ್ದು ಬರಬರುತ್ತ ವಾಂತಿ, ಮೈಮೇಲೆಲ್ಲ ದೊಡ್ಡ ಗುಳ್ಳೆಗಳೆದ್ದು ಅಪಸ್ಮಾರವುಂಟಾಗುವ ತನಕ ಜ್ವರ ಹೆಚ್ಚುತ್ತಿತ್ತು. ಎದ್ದ ಗುಳ್ಳೆಗಳು ಮಾಯ್ದ ಮೇಲೂ ಖಾಯಂ ಕಲೆಯನ್ನುಂಟುಮಾಡುತ್ತಿದ್ದವು. ಮರಣ ಪ್ರಮಾಣ ಶೇ.೨೦-೬೦ರಷ್ಟು. ಅದೂ ಮಕ್ಕಳು ಮತ್ತು ಮಹಿಳೆಯರಲ್ಲಿ ಜಾಸ್ತಿ. ಬದುಕುಳಿದವರಿಗೆ ನರಸಂಬಂಧಿ ರೋಗಗಳು, ಕುಂಠಿತ ಬೆಳವಣಿಗೆ, ಕಿವುಡು, ಕುರುಡು.. ಹೀಗೇ ನಾನಾತೆರನ ತೊಂದರೆಗಳುಂಟಾಗುತ್ತಿದ್ದವು.
ಅಂತಹ ಕಾಯಿಲೆಯೊಂದು ಈಗ ಹೇಳಹೆಸರಿಲ್ಲದ್ದಾಗಿದ್ದರೆ ಅದರ ಕೀರ್ತಿ ‘ಎಡ್ವರ್ಡ ಜೆನ್ನರ್’ಗೆ ಸಲ್ಲಬೇಕು.
ಪ್ರಾಚೀನ ಚೀನಾ, ಭಾರತ ಹಾಗೂ ಟರ್ಕಿಗಳಲ್ಲಿ ಮೈಲಿಬೇನೆಯಾದವರ ಕೀವನ್ನು ತಮ್ಮ ದೇಹಕ್ಕೆ ಸೇರಿಸುವುದು ನಡೆದೇ ಇತ್ತು. ಟರ್ಕಿಗೆ ಇಂಗ್ಲೆಂಡಿನ ರಾಯಭಾರಿಯಾಗಿದ್ದ ಲೇಡಿ ಮಾಂಟೆಗು ಇದರ ಬಗ್ಗೆ ಬರೆದಿದ್ದಾಳೆ. ಜೆನ್ನರನು ಲಸಿಕೆ ಕಂಡುಹಿಡಿಯುವ ಅರ್ಧಶತಮಾನ ಮೊದಲೇ ಅವಳು ಇಂಗ್ಲೆಂಡಿನಲ್ಲಿ ಈ ಕ್ರಮವನ್ನು ಜನಪ್ರಿಯಗೊಳಿಸಲೆತ್ನಿಸಿದ್ದಳು. ಆದರೆ ಈ ವಿಧಾನದಲ್ಲಿ ತೀವ್ರವಾದ ರೋಗಬಂದು ಕೆಲವರು ಸಾವನ್ನಪ್ಪುವ ಸಾಧ್ಯತೆಯೂ ಇತ್ತು. ನಂತರ ಜೆನ್ನರನು ೧೮ನೇ ಶತಮಾನದ ಪೂರ್ವಾರ್ಧದಲ್ಲಿ ದನಗಳ ಸಿಡುಬಿಗೆ ಒಳಗಾದ ಗೌಳಿಗರನ್ನು ಮೈಲಿಬೇನೆಯು ಹೆಚ್ಚು ತೊಂದರೆಗೊಳಪಡಿಸದೇ ಇದ್ದುದ್ದನ್ನು ಗಮನಿಸಿದ. ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗಲೇ ಅವನನ್ನು ಮೈಲಿಬೇನೆ ಬಾಧಿಸಿತ್ತು. ವೈರಸ್ಸಿನಿಂದ ಬರುವ ಕಾಯಿಲೆಯಿದು ಎಂದು ತಿಳಿಯುವ ಮುನ್ನವೇ ದನಗಳ ಸಿಡುಬಿನ ಗುಳ್ಳೆಗಳ ಕೀವನ್ನೇ ತೆಗೆದು ಶುದ್ಧೀಕರಿಸಿ ಲಸಿಕೆ ತಯಾರು ಮಾಡಿದ. ಅದನ್ನು ತೆಗೆದುಕೊಳ್ಳಲು ಯಾರೂ ಮುಂದೆ ಬರದಿದ್ದಾಗ ಸ್ವತಃ ತನ್ನ ಪುಟ್ಟ ಮಕ್ಕಳಿಗೆ ಲಸಿಕೆ ಮೊದಲು ನೀಡಿದ. ನಂತರ ಲಸಿಕೆ ತೆಗೆದುಕೊಂಡವರೂ ದನಗಳ ಸಿಡುಬಿನ ಲಸಿಕೆ ಹಾಕಿ ತಮಗೂ ಕೋಡುಮೂಡಬಹುದು ಎಂದು ಹೆದರಿದ್ದರಂತೆ! ಲಸಿಕೆ ತೆಗೆದುಕೊಂಡ ಕೆಲವರಲ್ಲಿ ಮೈಲಿಬೇನೆಯು ತುಂಬ ಲಘುರೂಪದಲ್ಲಿ ಕಾಣಿಸಿಕೊಂಡಿತು ಹಾಗೂ ಹಲವರಿಗೆ ಅದು ಬರಲೇ ಇಲ್ಲ.
ನಂತರದ ವರ್ಷಗಳಲ್ಲಿ ಜೆನ್ನರನ ಲಸಿಕಾ ಕಾರ್ಯಕ್ರಮ ತುಂಬ ಜನಪ್ರಿಯವಾಯಿತು. ನೆಪೋಲಿಯನ್ ತನ್ನ ಸೈನಿಕರಿಗೆಲ್ಲ ಲಸಿಕೆ ಹಾಕಿಸಿದ. ಅಮೆರಿಕದ ಅಧ್ಯಕ್ಷ ಥಾಮಸ್ ಜಫರ‍್ಸನ್ ಕುಟುಂಬದವರೆಲ್ಲ ಲಸಿಕೆ ತೆಗೆದುಕೊಂಡರು. ಜೆನ್ನರನ ಸೂತ್ರಗಳ ಆಧಾರದ ಮೇರೆಗೆ ಬೇರೆ ಕಾಯಿಲೆಗಳಿಗೆ ಲಸಿಕೆಗಳನ್ನು ತಯಾರುಮಾಡಲಾಯಿತು. ಯಾವುದೇ ಒಬ್ಬ ವ್ಯಕ್ತಿಯಿಂದ ಅತಿ ಹೆಚ್ಚು ಮಾನವ ಜೀವಿಗಳು ಉಳಿದಿದ್ದೇ ಆದಲ್ಲಿ ಅದು ಎಡ್ವರ್ಡ್ ಜೆನ್ನರನಿಂದ. ಅವನನ್ನು ‘ಇಮ್ಯುನಾಲಜಿಯ ಪಿತಾಮಹ’ ಎನ್ನಲಾಗುತ್ತದೆ.
ಭಾರತದಲ್ಲಿ ಕೊನೆಯ ಮೈಲಿಬೇನೆ ಕೇಸು ಪತ್ತೆಯಾದದ್ದು ೧೯೭೫ರ ಮೇನಲ್ಲಿ. ನಂತರ ಭಾರತವನ್ನು ‘ಮೈಲಿಬೇನೆ ಮುಕ್ತ ರಾಷ್ಟ್ರ’ ಎಂದು ಘೋಷಿಸಲಾಯಿತು. ೧೯೮೦ರಲ್ಲಿ ವಿಶ್ವವು ಮೈಲಿಬೇನೆ ಮುಕ್ತ ಎಂದು ಘೋಷಿಸಲಾಯಿತು. ಸುಮ್ಮನೇ ಲಸಿಕೆ ಹಾಕುವುದರಿಂದ ತೀವ್ರ ಪರಿಣಾಮವಾಗುವ ಸಾಧ್ಯತೆಯಿರುವುದರಿಂದ ೧೯೮೨ರ ನಂತರ ಲಸಿಕೆ ಹಾಕುವುದನ್ನು ನಿಲ್ಲಿಸಲಾಗಿದೆ. ಆದರೂ ಒಮ್ಮೆಲೇ ೩೦೦ ಮಿಲಿಯನ್ ಜನರಿಗೆ ಲಸಿಕೆ ಹಾಕಲು ಸಾಧ್ಯವಾಗುವಂತೆ ವಿಶ್ವ ಆರೋಗ್ಯ ಸಂಸ್ಥೆಯು ಲಸಿಕಾ ಸಂಗ್ರಹವನ್ನು ಜಿನೀವಾ, ಟೊರಾಂಟೋ ಹಾಗೂ ನವದೆಹಲಿಗಳಲ್ಲಿಟ್ಟಿದೆ.
ಕೆಲವು ವರ್ಷಗಳ ಕೆಳಗೆ ಗುಜರಾತಿನ ಸೂರತ್‌ನಲ್ಲಿ ಇಲಿಗಳು ಸಾಯತೊಡಗಿ, ಜನರಿಗೆ ಪ್ಲೇಗ್ ರೀತಿಯ ಸಾಂಕ್ರಾಮಿಕ ರೋಗವೊಂದು ಕಾಣಿಸಿಕೊಂಡು ಕೆಲವು ಜನ ಸಾವನ್ನಪ್ಪಿದ್ದೇ ವಿಶ್ವಾದ್ಯಂತ ಎಲ್ಲರ ಗಮನ ಭಾರತದ ಮೇಲೆ ಬಿತ್ತು. ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು, ವೈದ್ಯರ ತಂಡ ಬಂದು ಹಲವು ತೆರನ ಪರೀಕ್ಷೆಗಳನ್ನು ನಡೆಸಿ ಅದು ನ್ಯುಮೋನಿಕ್ ಪ್ಲೇಗಿನ ಸಂಕ್ಷಿಪ್ತ ರೂಪ ಆಗಿರಬಹುದೆಂದೂ, ಅತಿ ಅಪಾಯಕಾರಿಯಲ್ಲದಿದ್ದರೂ ಸೂಕ್ತಕ್ರಮಗಳನ್ನು ತೆಗೆದುಕೊಳ್ಳಬೇಕೆಂದೂ, ತಿಳಿಸಿತು. ಹಳೆಯ ನೆನಪುಗಳ ಮೆಲುಕಲ್ಲೇ ಹಲವರು ನಡುಗಿದರು ಆಗ.
‘ಯೆರ‍್ಸೀನಿಯಾ ಪೆಸ್ಟಿಸ್’ ಎಂಬ ಬ್ಯಾಕ್ಟೀರಿಯಾದಿಂದ ಬರುವ ಪ್ಲೇಗ್ ಮೂಲತಃ ಮೂಷಿಕಗಳ ಕಾಯಿಲೆ. ಈ ಬ್ಯಾಕ್ಟೀರಿಯಾವು ನಿಸರ್ಗದಲ್ಲಿರುತ್ತದೆ, ಎಲ್ಲಾದರೊಮ್ಮೆ ಮಾನವ ಚಟುವಟಿಕೆಗಳ ಫಲವಾಗಿ ಮೂಷಿಕಗಳಿಂದ ಮನುಷ್ಯನಿಗೆ ಕಾಯಿಲೆ ವರ್ಗಾವಣೆಯಾಗುತ್ತದೆ.
೧೪ನೇ ಶತಮಾನದ ಯೂರೋಪಿನ ಮೂರನೇ ಒಂದು ಭಾಗ ಜನರು ಪ್ಲೇಗೆಂಬ ‘ಕಪ್ಪು ಸಾವಿ’ಗೆ ಸಿಕ್ಕಿ ನಾಶವಾದರು. ಈಗಲೂ ಶಾಲೆಯ ಮಕ್ಕಳು ಹೇಳಿಕೊಳ್ಳುವ ಕೆಳಗಿನ ನರ್ಸರಿ ರೈಮ್ ಅನ್ನು ಆ ಸಮಯದಲ್ಲಿ ಹಾಡಿಕೊಳ್ಳುತ್ತಿದ್ದದ್ದೆಂದು ನಂಬಲಾಗಿದೆ.
‘ ರಿಂಗ್ ಅರೌಂಡ್ ಅ ರೋಸೀ
ಎ ಪಾಕೆಟ್ ಫುಲ್ ಆಫ್ ಪೋಸೀಸ್
ಯು ಸರ್, ಐ ಸರ್,
ಆಲ್ ಫಾಲ್ ಡೌನ್ …’
ಚಿಗಟ ಕಚ್ಚಿದ ಕೆಂಪು ಗುರುತು, ವಾಸನೆ ತಡೆಗಟ್ಟಲು ಎಲ್ಲ ಕೊಂಡೊಯ್ಯುತ್ತಿದ್ದ ಹೂವುಗಳು, ಕೊನೆಗೆ ಎಲ್ಲರ ಸಾವು.. ಇದನ್ನೇ ಶಿಶುಗೀತೆಯಾಗಿ ಹಾಡುವ ಮಕ್ಕಳು.. ಎಂಥ ದಾರುಣ ಸಾವಿನ ಕಾಲವಿರಬಹುದು ಅದು!
ಪ್ಲೇಗಿನಲ್ಲಿ ಮೂರು ವಿಧದ ಕಾಯಿಲೆಗಳಿವೆ. ಬ್ಯುಬೋನಿಕ್ ಪ್ಲೇಗಿನಲ್ಲಿ ತೊಡೆಯ ಸಂದಿ ದುಗ್ಧರಸ ಗ್ರಂಥಿ(ಗಳಲೆಯ ಬೀಜ)ಗಳು ದೊಡ್ಡದಾಗುತ್ತವೆ. ತೀವ್ರ ಜ್ವರ, ತಲೆನೋವು ಬಂದು ಮಿದುಳಿನ ತನಕ ನಂಜು ಹರಡುತ್ತದೆ. ನ್ಯುಮೋನಿಕ್ ಪ್ಲೇಗಿನಲ್ಲಿ ಕೆಮ್ಮು, ರಕ್ತಕಫ, ಉಸಿರಾಟದ ತೊಂದರೆ, ಉಂಟಾಗಿ ರೋಗಿಯು ಉಸಿರು ಕಟ್ಟಿ ಬೇಗ ಸಾವನ್ನಪ್ಪುತ್ತಾನೆ. ಸೆಪ್ಟಿಸೆಮಿಕ್ ಪ್ಲೇಗಿನಲ್ಲಿ ದೇಹದ ಎಲ್ಲ ಭಾಗಗಳಿಗೂ ಹರಡಿದ ನಂಜಿನಿಂದ ಆಂತರಿಕ ರಕ್ತಸ್ರಾವವಾಗುತ್ತದೆ. ಚರ್ಮದ ಮೇಲೆಲ್ಲ ರಕ್ತಹೆಪ್ಪುಗಟ್ಟಿದಂತಿರುವ ಕಪ್ಪುಕಲೆಗಳು ತೋರುತ್ತವೆ. ಅದಕ್ಕೇ ‘ಕಪ್ಪು ಸಾವು’ ಎಂದು ಇದನ್ನು ಕರೆಯುವುದು. ಸಾವಿನ ಪ್ರಮಾಣ ಶೇ.೫೦ರಿಂದ ಶೇ.೧೦೦ರ ತನಕ.
ಭಾರತದಲ್ಲಿ ದಾಖಲಾಗಿರುವ ಮೊದಲ ಪ್ಲೇಗ್ ಸಾಂಕ್ರಾಮಿಕ ೧೬೧೨ರಲ್ಲಿ, ಜಹಾಂಗೀರನ ಕಾಲದಲ್ಲಿ. ಈ ಶತಮಾನದ ಮೊದಲ ದಶಕವಂತೂ ಪ್ರತಿ ವರ್ಷ ಪ್ಲೇಗಿಗೆ ಐದು ಲಕ್ಷ ಜನ ಸಾವನ್ನಪ್ಪುತ್ತಿದ್ದ ಕಾಲ! ನಂತರ ಶುರುವಾದ ಮಲೇರಿಯಾಕ್ಕಾಗಿ ತೀವ್ರ ಸಂಶೋಧನೆಗಳು ನಡೆದು, ಮಲೇರಿಯಾದ ಸೊಳ್ಳೆಗಳನ್ನು ನಿರ್ಮೂಲನೆ ಮಾಡಲಿಕ್ಕೆ ಸಿಂಪಡಿಸಿದ ಡಿಡಿಟಿಯಲ್ಲಿ ಚಿಗಟಗಳೂ ಸತ್ತು ಪ್ಲೇಗಿನ ಹಾವಳಿ ಸ್ವಲ್ಪ ಕಡಿಮೆಯಾಯಿತೆಂದೇ ಹೇಳಬಹುದು. ಪ್ರೊ. ವ್ಲದಿಮಿರ್ ಹಾಫ್ಕಿನ್ಸ್ ಅವರು ತಯಾರಿಸಿದ ಲಸಿಕೆಯೂ ಪರಿಣಾಮಕಾರಿಯಾಗಿದ್ದಲ್ಲದೇ, ಭಾರತ ಸಂಜಾತ ಅಮೆರಿಕದ ವೈದ್ಯವಿಜ್ಞಾನಿ ಡಾ. ಯಲ್ಲಪ್ರಗಡ ಸುಬ್ಬರಾವ್ ‘ಟೆಟ್ರಾಸೈಕ್ಲಿನ್’ ಎಂಬ ಅದ್ಭುತ ಜೀವಿರೋಧಕ ಕಂಡುಹಿಡಿದ ಬಳಿಕ ಪ್ಲೇಗೆಂಬ ಕಾಯಿಲೆ ೧೯೬೭ರಲ್ಲಿ ನಿರ್ಮೂಲವಾಯಿತೆಂದೇ ಹೇಳಬಹುದು.
ಔಷಧ ಗೊತ್ತಿಲ್ಲದ ಕಾಲದಲ್ಲಿ ಜನರು ಸಿಡುಬಿಗೊಂದು ಪ್ಲೇಗಿಗೊಂದು ದೇವರನ್ನು ಸೃಷ್ಟಿಮಾಡಿ, ಆ ದೇವತೆಯ ಸಿಟ್ಟಿನಿಂದ ಹೀಗಾಗುತ್ತದೆಯೆಂಬ ತೀರ್ಮಾನಕ್ಕೆ ಬಂದಿದ್ದರು. ಒಳ್ಳೆಯ ಮಾತಿನಲ್ಲಿ ಅವಳು ಕಾಯಿಲೆಯನ್ನು ತಹಬಂದಿಗೆ ತರದಿದ್ದರೆ, ಮೊರ-ಕಸಬರಿಕೆ-ಹಳೆಬಟ್ಟೆ ಇತ್ಯಾದಿಗಳ ಸಮೇತ ಊರಗಡಿ ದಾಟಿಸುತ್ತಿದ್ದರು. ಹೀಗೆ ಪ್ಲೇಗ್ ಹಾಗೂ ಮೈಲಿಬೇನೆ ಎಂಬ ಇಬ್ಬರು ಹೆಮ್ಮಾರಿಗಳು ಜಗತ್ತಿನಾದ್ಯಂತ ಎಲ್ಲರನ್ನು ಭಯದ ನೆರಳಿನಲ್ಲಿ ಹಿಡಿದಿಟ್ಟುಕೊಂಡಿದ್ದಾಗಲೇ, ಮುಂದುವರಿದ ವಿಜ್ಞಾನ ತಂತ್ರಜ್ಞಾನಗಳು ಮಾನವನ ಸಾವನ್ನು ಗೆಲ್ಲುವ ಛಲಕ್ಕೆ ಹೊಸ ಭಾಷ್ಯವನ್ನೇ ಬರೆದವು. ಆದರೆ ಇಂಥ ಕಾಯಿಲೆ ಸಾವಿನ ಕಾಲದಲ್ಲೂ ಕಲೆ, ಸಾಹಿತ್ಯ, ವಿಜ್ಞಾನ ಎಲ್ಲದರಲ್ಲಿ ಔನ್ನತ್ಯ ಸಾಧಿಸುತ್ತ, ಹಲವು ಹೋರಾಟ ಚಳುವಳಿಗಳನ್ನು ಹುಟ್ಟುಹಾಕುತ್ತ ಹೋದದ್ದನ್ನು, ಮಾನವ ಕಾಯಿಲೆಗೆ ಹೆದರಿ ಕೂರಲಿಲ್ಲವೆಂಬುದನ್ನೂ ನಾವು ಗಮನಿಸಬೇಕು.
11.ಕವಲಕ್ಕಿ ಡಾಕ್ಟರ ಡೈರಿ : ಧನುರ್ವಾಯು ಪುರಾಣ
ಆ ಅಜ್ಜ ಏನಕ್ಕೋ ತನ್ನ ಕತೆ ಹೇಳುತ್ತಿದ್ದಾಗ ತಿಳಿಯಿತು – ಅವರಿಗೆ ಮೂರು ಜನ ಹೆಂಡತಿಯರು ಎಂದು. ತನಗಷ್ಟೇ ಅಲ್ಲ, ತನ್ನ ವಾರಗೆಯ ಗಂಡಸರಿಗೆ ಮುಂಚೆಯೆಲ್ಲ ಎರಡು ಮೂರು ಹೆಂಡತಿ ಇರುತ್ತಿದ್ದದ್ದು ಸಾಧಾರಣ ವಿಷಯ ಎಂದರು. ಅದಕ್ಕೆ ಕಾರಣ ಇಲ್ಲದಿಲ್ಲ. ಅವರ ಮೊದಲ ಇಬ್ಬರು ಹೆಂಡತಿಯರೂ ಬಾಣಂತನದಲ್ಲೇ ತೀರಿಹೋಗಿದ್ದಂತೆ. ಮೊದಲ ಹೆಂಡತಿ ಮೊದಲ ಬಸುರಿಗೆ ತಾಯಿಮನೆಗೆ ಹೋದವರು ಮತ್ತೆ ಬರಲಿಲ್ಲ. ಎರಡನೆಯವರಂತೂ ಐದು ಮಕ್ಕಳನ್ನು ಹೆತ್ತರೆ, ಅದರಲ್ಲಿ ಒಂದೂ ಉಳಿಯದೇ ಅವರೂ ಕೊನೆಯ ಬಾಣಂತನದಲ್ಲಿ ತೀರಿಹೋಗಿದ್ದರು. ಮುಂಚಿನವರು ಹೆರಿಗೆ ಸಮಯದಲ್ಲೇ ಸತ್ತದ್ದರಿಂದ ಇವಳಿಗೂ ಅವರಂತೇ ಆಗದಿರಲಿ ಎಂದು ಆ ಅಜ್ಜ ಕಿರಿಯ ಹೆಂಡತಿಯನ್ನು ಮಣಿಪಾಲದ ತನಕ ಹೋಗಿ ತೋರಿಸಿಕೊಂಡುಬಂದಿದ್ದರಂತೆ. ಮನೆಯಲ್ಲೇ ಹೆತ್ತರೂ ಹೆರಿಗೆ ಕಷ್ಟವಾಗದೆ ಅವರ ನಾಲ್ಕು ಮಕ್ಕಳೂ ಉಳಿದಿವೆ. ಇನ್ನು ಮಕ್ಕಳು ಬೇಡವೆಂದು ನಂತರ ಅಜ್ಜನೇ ಅದೆಲ್ಲೋ ಕ್ಯಾಂಪಿಗೆ ಹೋಗಿ ‘ನರ ಕತ್ತರಿಸಿಕೊಂಡು’ ಬಂದರಂತೆ.
ಅವರಿಗೆಲ್ಲ ಏನಾಗಿ ಆ ತರಹ ತೀರಿಕೊಂಡರು ಎನ್ನಲಾಗಿ ಅಜ್ಜ ಹೇಳಿದರು, ‘ಎಲ್ಲಾರಿಗೂ ಆಗಿದ್ದು ಒಂದೇ ಕಾಯ್ಲೆ ಕಣಮ್ಮಾ, ಧನುರ್ವಾತ. ಸಾಲು ಸಾಲಾಗಿ ಒಂಭತ್ತು ಜನರನ್ನು ಆ ಕಾಯಿಲೆಗೆ ಕೊಟ್ಟು ಬಿಟ್ಟೆ..’ ಎಂದು ನಿಟ್ಟುಸಿರು ಬಿಟ್ಟಿದ್ದರು. ಕೊನೆಗೆ ಆ ಕಾಯಿಲೆ ಬರದ ಹಾಗೆ ಇಂಜೆಕ್ಷನ್ ಬಂದಿದೆ ಎಂದು ತಿಳಿದೇ ಮಣಿಪಾಲಕ್ಕೆ ಹೋಗಿ ಕೊಡಿಸಿಕೊಂಡು ಬಂದಿದ್ದರಂತೆ, ಅದೂ ಒಂದೊಂದು ಬಸುರಿಗೂ ಐದೈದು ಇಂಜೆಕ್ಷನ್! ದಾರಿಯಲ್ಲಿ ಆರೇಳು ಹೊಳೆ ದಾಟಿ ಮಣಿಪಾಲದ ಆಸ್ಪತ್ರೆಗೆ ಹೋಗಿ ಬರಲು ಒಂದು ವಾರ ಹಿಡಿಯುತ್ತಿದ್ದದ್ದು ನೆನಪಿಸಿಕೊಂಡು ಹೇಳುತ್ತಿದ್ದರು.
ಮುಂಚಿನ ಬಹುತೇಕ ಗಂಡಸರು ಬಹುಪತ್ನೀವಲ್ಲಭರಾಗುವಂತೆ ಮಾಡುತ್ತಿದ್ದ ಈ ಧನುರ್ವಾಯುವೆಂದರೆ ಯಾವುದು?
*****
ಅವರು ಊರಲ್ಲಿ ಎಲ್ಲರಿಗೂ ಗೌರಕ್ಕನೇ. ಅವರಿಗೆ ಎಷ್ಟು ವರ್ಷ ಎಂದು ನಿಖರವಾಗಿ ಯಾರಿಗೂ ಗೊತ್ತಿಲ್ಲ. ಅವರೂ ಹೇಳುವುದಿಲ್ಲ. ತನ್ನಂತಹ ಕೊರಡಿಗೆ ‘ಎಷ್ಟು ವರ್ಷ ಆದ್ರೆ ಏನು’ ಅಂದು ಮಾತು ಹಾರಿಸಿಬಿಡುತ್ತಾರೆ. ಅವರಿಗೆ ನೂರು ದಾಟಿರಬಹುದು ಎಂದೇ ಎಲ್ಲರ ಅಂಬೋಣ. ಈಗಲೂ ಏಳೆಂಟು ಹಲ್ಲುಗಳಿರುವ ಅವರ ವಾರಿಗೆಜೊತೆಯವರು ಊರಿನಲ್ಲಿ ಯಾರೂ ಉಳಿದಿಲ್ಲ.
ಈ ಗೌರಕ್ಕನಿಗೆ ಹತ್ತನೇ ವರ್ಷಕ್ಕೇ ಮದುವೆಯಾಗಿದ್ದಂತೆ. ಹನ್ನೊಂದನೇ ವರ್ಷಕ್ಕೇ ಗಂಡ ಸತ್ತುಹೋಗಿದ್ದಂತೆ. ಮೈನೆರೆಯುವ ಮೊದಲೇ ಗಂಡನನ್ನು ಕಳೆದುಕೊಂಡು, ಕೆಂಪು ಸೀರೆಯುಟ್ಟು, ತಲೆ ಬೋಳಿಸಿಕೊಂಡು, ಒಂದೇ ಹೊತ್ತು ಊಟ ಮಾಡುತ್ತಾ ಬದುಕಿದ್ದಾರೆ. ನನ್ನವರು ತನ್ನವರೆನ್ನುವವರಿಲ್ಲದೇ ಒಬ್ಬರೇ ಒಂದು ಗುಡ್ಲಿನಂತಹ ಮನೆಯಲ್ಲಿ ಬರೀ ಮುಷ್ಟಿ ಅನ್ನ, ಅವಲಕ್ಕಿ ತಿಂದು ಅವರು ಇಷ್ಟು ವರ್ಷ ಬದುಕಿದ್ದರ ಗುಟ್ಟು? ಅದು ಅವರ ಜೀವನ ಪ್ರೀತಿಯಲ್ಲದೇ ಮತ್ತೇನೂ ಇರಲು ಸಾಧ್ಯವಿಲ್ಲ. ಕೇರಿಯ ಸುತ್ತಮುತ್ತಲ ಮನೆಗಳಲ್ಲಿ ಏನೇ ಸುಖದುಃಖದ ಸಮಾರಂಭಗಳಿರಲಿ, ಅಲ್ಲಿ ಕರೆಯದೇ ಬರುವ ಕೆಲಸದಾಳೆಂದರೆ ಗೌರಕ್ಕ. ಒಂದೆರೆಡು ಬಾರಿ ತೀರಾ ಆರಾಮಿಲ್ಲದಾಗ ಆಚೀಚೆ ಮನೆಯ ದಾಯಾದಿಗಳು ತಂದು ಆಸ್ಪತ್ರೆಗೆ ಸೇರಿಸಿದ್ದಿದೆ. ಬಿಪಿ, ಶುಗರ್ ಏನೂ ಇಲ್ಲದ, ತನ್ನ ಪಾಲಿನ ಹತ್ತು ಗುಂಟೆ ಅಡಿಕೆ ತೋಟದಲ್ಲಿ ಕೈಯಾಡಿಸುತ್ತಾ ಇಡೀದಿನ ಏನಾದರೂ ಮಾಡುತ್ತಲೇ ಇರುವ ಅವರಲ್ಲಿ ಒಂದು ವಿಷಯ ಗಮನಿಸಿದ್ದೇನೆ. ‘ತನ್ನ ಗತಿ ಹೀಗಾಯಿತಲ್ಲ, ದೇವರೇ ತಾನಿನ್ನು ಯಾಕೆ ಬದುಕಬೇಕು? ತನ್ನನ್ನು ಬೇಗ ಕರೆದುಕೊಂಡು ಹೋಗು’ ಎಂಬಂತಹ ಮಾತು ಅವರ ಬಾಯಲ್ಲಿ ಬಂದದ್ದಿಲ್ಲ. ಸಾಂಸಾರಿಕ ಸುಖವೆಂದರೇನೆಂದು ಕಾಣದ ತನ್ನ ವಿಧಿಯ ಬಗ್ಗೆ ಹಳಿದಿದ್ದಿಲ್ಲ. ಅದಕ್ಕೇ ಇರಬೇಕು, ಈ ಮುದುಕಿಯೆಂದರೆ ಅಲ್ಲಿ ಎಲ್ಲರಿಗೂ ಒಂದು ರೀತಿಯ ಕರುಣೆ ಬೆರೆತ ಪ್ರೀತಿ.
ಎಲ್ಲರ ಬಳಿ ಅವರು ಪದೇಪದೇ ಪ್ರಸ್ತಾಪಿಸುತ್ತಿದ್ದದ್ದು ‘ಧನುರ್ವಾಯು’ ಎಂಬ ತಮ್ಮ ಎಳೆಯ ಗಂಡನನ್ನು ಸಾಯಿಸಿದ ಕಾಯಿಲೆಯ ಬಗ್ಗೆ. ಈಗ ಯಾರೂ ಕಾಣದ ಆ ಕಾಯಿಲೆಯ ಬಗ್ಗೆ ಅವರು ಹೇಳಿದ್ದನ್ನು ಎಲ್ಲರೂ ನಂಬುವುದೇ, ಅಷ್ಟು ಬಣ್ಣಿಸಿ ಹೇಳುತ್ತಿದ್ದರು. ಅವರು ಹೇಳುವುದು ನೋಡಿದರೆ, ಅಂದಿಗೆ ದೊಡ್ಡವನು ಅವರ ಪುಟ್ಟ ಗಂಡನೋ ಅಥವಾ ಧನುರ್ವಾಯುವೋ? ಏನದು ಧನುರ್ವಾಯು ಎಂದರೆ?
*******
ನಡುವಯಸ್ಸಿನವರೊಬ್ಬರು ಕಾಲೆಳೆಯುತ್ತಾ ಬಂದರು. ಅವರಿಗೆ ಈಗೀಗ ಕಾಲಿನ ಮೇಲೆ ಪದೇ ಪದೇ ಕುರುಗಳಾಗುತ್ತಿವೆಯಂತೆ. ಮೈ ತುರಿಕೆಯೂ ಬರುತ್ತಿದೆಯಂತೆ. ಆರು ತಿಂಗಳ ಕೆಳಗೆ ತುಕ್ಕು ಹಿಡಿದ ಮೊಳೆಯೊಂದು ಚುಚ್ಚಿದ್ದಾಗ ತಾನು ನಿರ್ಲಕ್ಷ್ಯ ಮಾಡಿದ್ದಾಗಿಯೂ, ಅದಕ್ಕೇ ಈಗ ಪದೇಪದೇ ಕುರು ಏಳುತ್ತಿರುವುದಾಗಿಯೂ, ಒಂದು ಟಿಟಿ ಇಂಜೆಕ್ಷನ್ ಕೊಡಬೇಕೆಂದೂ ಕೇಳಿದರು. ಟಿಟಿಗೂ, ಈಗ ಏಳುತ್ತಿರುವ ಕುರುವಿಗೂ ಸಂಬಂಧವಿಲ್ಲವೆಂದೂ, ಒಮ್ಮೆ ಸಿಹಿಮೂತ್ರದ ಬಗ್ಗೆ ತಪಾಸಣೆ ಮಾಡಿಸುವುದು ಒಳ್ಳೆಯದೆಂದೂ ಹೇಳಿದೆ. ‘ಮನೆಯಲ್ಲಿ ಬೈತಾ ಇದಾರೆ ಮೇಡಂ. ಕಡೆಗೆ ನಂಜಾಗಿ ದೊಡ್ಡ ರಾಮಾಯ್ಣ ಆಗುದು ಬ್ಯಾಡ. ನೀವು ಒಂದು ಇಂಜೆಕ್ಷನ್ ಕೊಟ್ಟೇ ಬಿಡಿ’ ಎಂದು ಹೇಳಿ ಟಿಟಿ ತೆಗೆದುಕೊಂಡುಹೋದರು. ಹೋದವರು ಎಂಟು ದಿನದಲ್ಲಿ ವಾಪಸು ಬಂದರು. ‘ಇಂಜೆಕ್ಷನ್ ತೆಗೆದುಕೊಂಡಿದ್ದೇ ಮತ್ತೂ ನಂಜು ಹೆಚ್ಚಾಗಿದೆ. ಸ್ವಲ್ಪ ಬಂಗಡೆ ತಿಂದುಬಿಟ್ಟೆ ಅದ್ಕೇ ಇರ‍್ಬೇಕು’ ಎಂದರು. ಈ ಬಾರಿ ಅವರ ಮಾತು ಕೇಳದೇ ಮೂತ್ರ ತಪಾಸಿಸಲಾಗಿ ಅವರಿಗೆ ಶುಗರ್ ಇರುವುದು ಪತ್ತೆಯಾಯಿತು. ಅವರಿಗೆ ಶುಗರ್ ಬಗೆಗಿನ ತಲೆಬಿಸಿಗಿಂತಲೂ, ‘ಟಿಟಿ ಇಂಜಕ್ಷನ್ ತಗೊಳ್ಳಲು ತಡವಾಗಿದ್ದಕ್ಕೇ ಹೀಗಾಯಿತು, ತುಕ್ಕು ಮೊಳೆ ಚುಚ್ಚಿದ ಕೂಡಲೇ ತೆಗೆದುಕೊಂಡಿದ್ದರೆ ಈ ಸಕ್ರೆ ಕಾಯ್ಲೆನೇ ಬರ್ತಿರಲಿಲ್ಲ’ ಎಂಬ ನಂಬಿಕೆ!
ಕುರುವಿಗೂ ಟಿಟಿಗೂ ಸಂಬಂಧವಿಲ್ಲವೆಂದಾದರೆ ಮತ್ತೇನಕ್ಕೆ ಈ ಟಿಟಿ ಇಂಜೆಕ್ಷನ್?
******
ಸಾವಿರಾರು ವರ್ಷಗಳಿಂದ ಯುದ್ಧವೇಳೆಯ ಸಾವುನೋವುಗಳಿಗಿಂತಲೂ ಯುದ್ಧಾನಂತರದ ಗಾಯಗಳಿಂದ, ಧನುರ್ವಾಯುವಿನಿಂದ ಹೆಚ್ಚು ಜನ ಅಸುನೀಗುತ್ತಿದ್ದರು. ಹೆರಿಗೆಯ ನಂತರ ಮಗು ಹಾಗೂ ಬಾಣಂತಿಯ ಸಾವಿಗೂ ಈ ಧನುರ್ವಾಯುವೇ ಮುಖ್ಯ ಕಾರಣವಾಗಿತ್ತು. ಪ್ರಾಚೀನ ಗ್ರೀಕ್ ವೈದ್ಯ, ತತ್ವಶಾಸ್ತ್ರಜ್ಞ ಹಿಪ್ಪೋಕ್ರೆಟೀಸ್ ಬಣ್ಣಿಸಿರುವ, ಪ್ರಾಚೀನ ಭಾರತದ ಶಸ್ತ್ರ ಚಿಕಿತ್ಸಕ ಸುಶ್ರುತ ದಾಖಲಿಸಿರುವ ಧನುರ್ವಾಯುವೆಂದರೆ ಇದು;
ಕ್ಲಾಸ್ರ್ಟೀಡಿಯಂ ಟೆಟನಿ ಎಂಬೊಂದು ಬ್ಯಾಕ್ಟೀರಿಯಾ ಸರ್ವಾಂತರ್ಯಾಮಿ. ಅದು ಸಾಧಾರಣವಾಗಿ ಮನುಷ್ಯರ ಹಾಗೂ ಪ್ರಾಣಿಗಳ ಕರುಳಿನಲ್ಲಿ ನಿರಪಾಯಕಾರಿಯಾಗಿ ವಾಸಿಸುತ್ತಿದ್ದು ಮಲದಲ್ಲಿ ಹೊರಹೋಗುತ್ತಿರುತ್ತದೆ. ಅನಾನುಕೂಲ ಸನ್ನಿವೇಶ ಇದ್ದಾಗ ಬೀಜ (ಸ್ಪೋರ್) ರೂಪಿಯಾಗಿ ಮಣ್ಣಿನಲ್ಲಿ, ಧೂಳಿನಲ್ಲಿ, ವಾತಾವರಣದಲ್ಲಿ ಎಲ್ಲೆಡೆಯೂ ಇರುತ್ತದೆ. ಈ ಬೀಜರೂಪಿ ಸ್ಪೋರ್ ತುಂಬ ಗಟ್ಟಿಯಿದ್ದು ಕುದಿಸುವುದು, ಫಿನಾಲ್, ೧೨೦ ಸೆ. ಶಾಖವೂ ಅದನ್ನು ನಾಶಗೊಳಿಸಲಾರದು. ಕೊಳೆಯುವ ಅಂಗಾಂಶಗಳಿರುವ ಕಡೆಯಲ್ಲಿ, ಗಾಯಗಳಲ್ಲಿ, ಆಕ್ಸಿಜನ್ ಕಡಿಮೆ ಇದ್ದಂತಹ ಕಡೆ ಇವು ಒಡೆದು ಬ್ಯಾಕ್ಟೀರಿಯಾ ಕ್ರಿಯಾಶೀಲವಾಗುತ್ತದೆ. ವೃದ್ಧಿಗೊಳ್ಳುತ್ತಾ ಹೋಗುವ ಬ್ಯಾಕ್ಟೀರಿಯಾವು ಒಂದು ಟಾಕ್ಸಿನ್ನನ್ನು(ಜೀವಿಷ) ಉತ್ಪತ್ತಿ ಮಾಡುತ್ತದೆ. ಆ ನಂಜುಕಾರಕ ಟಾಕ್ಸಿನ್ ದೇಹದ ಎಲ್ಲ ಕಡೆ ಹರಡಿ ಮಾಂಸಖಂಡಗಳ ಮೇಲೆ ಪರಿಣಾಮವುಂಟುಮಾಡುತ್ತದೆ. ಎರಡು ಮೂರು ವಾರಗಳಲ್ಲಿ ರೋಗಲಕ್ಷಣಗಳು ಪ್ರಕಟವಾಗುತ್ತವೆ.
ತಲೆನೋವು ಹಾಗೂ ಜ್ವರ ಮೊದಲು ಕಾಣಿಸಿಕೊಳ್ಳುತ್ತದೆ. ನಂತರ ಮಾಂಸಖಂಡಗಳು ಸತತ ಸೆಳೆತದ ಸ್ಥಿತಿಗೊಳಗಾಗುವುದರಿಂದ ಬಾಯಿ ಕಳೆಯಲು ಆಗುವುದಿಲ್ಲ. ಒಂದು ರೀತಿಯ ವಿಷಾದದ ನಗುವಿನಂತೆ ಕಾಣಿಸುವ ಹಾಗೆ ಮುಖದ ಸ್ನಾಯುಗಳು ಬಿಗಿದುಕೊಳ್ಳುತ್ತವೆ. ಮುಟ್ಟಿದರೆ, ಬೆಳಕು ಹೆಚ್ಚಾದರೆ, ಶಬ್ದವುಂಟಾದರೆ ಸಾಕು ಸ್ನಾಯುಗಳು ತೀವ್ರ ಸೆಳೆತಕ್ಕೊಳಗಾಗಿ ಅಪಸ್ಮಾರ ಸಂಭವಿಸುತ್ತದೆ. ಬೆನ್ನುಹುರಿಯ ಪಕ್ಕದ ಸ್ನಾಯುಗಳ ಸೆಟೆತದಿಂದ ದೇಹ ಬಿಲ್ಲಿನಂತೆ ಬಾಗುತ್ತದೆ. ವಿಜ್ಞಾನ ಮುಂದುವರಿದ ಈ ಕಾಲದಲ್ಲೂ ಈ ಕಾಯಿಲೆಯ ಚಿಕಿತ್ಸೆ ಅತಿ ದುಬಾರಿ ಹಾಗೂ ಬದುಕುಳಿಯುವುದು ಕಷ್ಟಸಾಧ್ಯ. ಮೊದಲೆಲ್ಲ ಕಾಯಿಲೆ ಬಂದವರು ಸತ್ತೇ ಹೋಗುತ್ತಿದ್ದರು. ಈಗಲೂ ಮರಣ ಪ್ರಮಾಣ ಶೇ.೫೦ರ ಆಸುಪಾಸಿನಲ್ಲಿ. ನವಜಾತ ಶಿಶುಗಳಲ್ಲಿ ಇದು ಶೇ. ೬೦-೮೦ರಷ್ಟು.
ಮುಂಚಿನ ದಿನಗಳಲ್ಲಿ ಮನೆಯಲ್ಲೇ ಹೆರಿಗೆಯಾಗುತ್ತಿದ್ದದ್ದು ತಾನೇ? ಬಹಳಷ್ಟು ಹಳ್ಳಿಗರು ಮಗುವಿನ ಹೊಕ್ಕುಳ ಬಳ್ಳಿಗೆ ದನದ ಸಗಣಿ ಮುದ್ದೆ ಮೆತ್ತಿಡುತ್ತಿದ್ದರು. ಬಾಣಂತಿ ಕೋಣೆಯನ್ನು ದಿನವೂ ಸಗಣಿಯಿಂದ ಸಾರಿಸುತ್ತಿದ್ದರು, ಮಗು ಮಲಗಿಸುವ ಮೊರಕ್ಕೆ ಸಗಣಿ ಲೇಪ ಮಾಡುತ್ತಿದ್ದರು. ಶುದ್ಧವೂ ಪವಿತ್ರವೂ ಎರಡೂ ಒಟ್ಟಿಗೇ ಆದ ಧನ್ಯತೆ. ಸಗಣಿ ಬಹಳ ಜನರಿಗೆ ಪವಿತ್ರವಾಗಿರಬಹುದು. ಆದರೆ ಅದರಲ್ಲಿ ಟೆಟನಸ್ ಬ್ಯಾಕ್ಟೀರಿಯಾ ಹಾಗೂ ಬೀಜರೂಪಿ ಕಣಗಳು ಹೇರಳವಾಗಿದ್ದು ಅದೇ ಮಗುವಿಗೆ ಧನುರ್ವಾಯು ಬರಲು ಮುಖ್ಯ ಕಾರಣವಾಗುತ್ತಿತ್ತು. ಹಿಂದಿನ ಶತಮಾನದವರೆಗೂ ಬಹಳಷ್ಟು ನವಜಾತ ಶಿಶುಗಳು ಸಾಯುತ್ತಿದ್ದದ್ದು ಇದರಿಂದಲೇ. ಮಗುವಿನಂತೇ ತಾಯಿಗೂ ಕೂಡ ಹಸಿಗಾಯದ ಸೋಂಕುಂಟಾಗಿ ಮರಣ ಸಂಭವಿಸುತ್ತಿತ್ತು. ಗರ್ಭಿಣಿಯರಿಗೆ ಕಡ್ಡಾಯವಾಗಿ ಟೆಟನಸ್ ಲಸಿಕೆ ಹಾಕಲು ಶುರು ಮಾಡಿದ ಮೇಲೆ ಈಗ ಧನುರ್ವಾಯು ಪ್ರಕರಣಗಳು ತೀರಾ ಅಪರೂಪವಾಗಿವೆ ಎಂದೇ ಹೇಳಬಹುದು. ಹೀಗಾಗಿ ಈಗ ಮಗು ಹುಟ್ಟುವಾಗಲೇ ಧನುರ್ವಾಯುವಿನ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಅಲ್ಲದೇ ನಂತರ ಹಾಕುವ ಲಸಿಕೆಗಳಲ್ಲಿ ( ಡಿಪಿಟಿ -ಇದರಲ್ಲಿ ಟಿ ಎಂದರೆ ಟೆಟನಸ್ ಲಸಿಕೆ) ಟೆಟನಸ್ ಟಾಕ್ಸಾಯ್ಡ್ (ಟಿಟಿ) ಇರುವುದರಿಂದ ಕಾಯಿಲೆ ನಿಯಂತ್ರಣದಲ್ಲಿದೆ. ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ವ್ಯಾಪಕ ಟಿಟಿ ಬಳಕೆಯಿಂದ ಧನುರ್ವಾಯುವಿನ ವಿರುದ್ಧ ಸಮುದಾಯ ನಿರೋಧಕ ಶಕ್ತಿಯು ಗಮನಾರ್ಹವಾಗಿ ಹೆಚ್ಚಾಗಿದೆ.
ನೆನಪಿಡಿ;
೧. ಎಲ್ಲೇ ಗಾಯವಾದರೂ ಸ್ವಚ್ಛವಾಗಿ ನೀರಿನಲ್ಲಿ ತೊಳೆಯಿರಿ. ನಂತರವೂ ಗಾಯವನ್ನು ಸ್ವಚ್ಛವಾಗಿಡಿ. ನೀರು ತಾಗಿಸಬಾರದೆಂದು ದಿನಗಟ್ಟಲೇ ಗಾಯವನ್ನು ತೊಳೆಯದೇ ಇರಬೇಡಿ.
೨. ಯಾವುದೇ ಪ್ರಾಣಿ ಕಚ್ಚಿದರೂ ಟಿಟಿ ತೆಗೆದುಕೊಳ್ಳಿ. ಎಲ್ಲವನ್ನೂ ಹಸಿಯಾಗಿ ತಿನ್ನುವ ಅವುಗಳ ಬಾಯಿಯಲ್ಲಿ, ಹಲ್ಲಿನಲ್ಲಿ ಸ್ಪೋರ್ ಗಳಿರಬಹುದು.
೩. ಚುಚ್ಚಿ ಉಂಟಾದ ಗಾಯಗಳಿಗೆ – ಅದು ಕಬ್ಬಿಣ ಚುಚ್ಚಿದ್ದೇ ಇರಲಿ, ಮುಳ್ಳುಕಡ್ಡಿ ಚುಚ್ಚಿದ್ದೇ ಇರಲಿ, ತುಕ್ಕು ಹಿಡಿದ ವಸ್ತುವಾಗಿರಲಿ ಇಲ್ಲದಿರಲಿ – ಅವಶ್ಯವಾಗಿ ಟಿಟಿ ತೆಗೆದುಕೊಳ್ಳಬೇಕು. ಸುಟ್ಟ ಗಾಯಗಳು, ತರಚಿದ ಗಾಯಗಳು, ಚರ್ಮದ ವ್ರಣಗಳು, ಹಾಗೂ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಈ ಚುಚ್ಚುಮದ್ದು ತೆಗೆದುಕೊಳ್ಳುವುದು ಸುರಕ್ಷಿತ. ತುಕ್ಕು ಹಿಡಿಯಲು ಕಬ್ಬಿಣವು ಹೆಚ್ಚು ಕಾಲ ಹೊರಗಿರಬೇಕಾಗುತ್ತದೆ. ಹಾಗಾಗಿ ಅದು ಗಾಳಿಧೂಳಿನಲ್ಲಿರುವ ಟೆಟನಸ್ ಬ್ಯಾಕ್ಟಿರಿಯಾವನ್ನು ಹೆಚ್ಚು ಹೊಂದಿರುತ್ತದೆ. ನಮ್ಮಲ್ಲಿ ಎಷ್ಟೋ ಜನ ತನಗೆ ಚುಚ್ಚಿದ ವಸ್ತು ತುಕ್ಕು ಹಿಡಿದಿದ್ದೋ ಅಥವಾ ಹೊಸದೋ, ಟಿಟಿ ಬೇಕೋ ಬೇಡವೋ ಎಂಬ ಮೀಮಾಂಸೆಯಲ್ಲೇ ಹೆಚ್ಚು ಕಾಲ ಕಳೆಯುತ್ತಾರೆ. ಸುಮ್ಮನೇ ಟಿಟಿ ತೆಗೆದುಕೊಂಡರೂ ಏನೂ ಅಪಾಯವಿಲ್ಲ, ಆದ್ದರಿಂದ ಅಷ್ಟೆಲ್ಲ ವಿಚಾರ ಮಾಡುವ ಅಗತ್ಯವಿಲ್ಲ.
೪. ಟಿಟಿ ತೆಗೆದುಕೊಳ್ಳಲು ತುರ್ತಾಗಿ ಅರ್ಧರಾತ್ರಿಯಲ್ಲಿ ಓಡಬೇಕಾದ ತುರ್ತಿಲ್ಲ. ಗಾಯ ಸಣ್ಣದಿದ್ದರೆ ಒಂದು ದಿನ ತಡೆದು ತೆಗೆದುಕೊಂಡರೂ ಅಡ್ಡಿಯಿಲ್ಲ. ಧನುರ್ವಾಯು ಕಾಯಿಲೆಯೂ, ಅದರಿಂದುಂಟಾಗುವ ಸಾವುನೋವುಗಳೂ ಜನರ ಮನದಿಂದ ಮರೆಯಾಗಿದ್ದರೂ ಟಿಟಿ ಇಂಜೆಕ್ಷನ್ ಏನೇನೋ ಶಕ್ತಿಗಳನ್ನು ತನ್ನಮೇಲೆ ಆವಾಹಿಸಿಕೊಂಡಂತಿದೆ. ಸರಿರಾತ್ರಿ ತುಳಿದ ಮೊಳೆಗೆ ಆಗಿಂದಾಗ ಜೀಪು ಮಾಡಿಕೊಂಡು ಟಿಟಿ ಇಂಜೆಕ್ಷನ್ ತೆಗೆದುಕೊಳ್ಳಲು ಬರುವ ಜನರನ್ನು ನೋಡಿ ಹೀಗೆ ಬರೆಯಬೇಕಾಯಿತು.
೫. ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವ ರೋಗವಲ್ಲ.
೬. ಟಿಟಿ ಇಂಜೆಕ್ಷನ್ನಿನ ಡೋಸ್ ಹಾಗೂ ಪರಿಮಾಣ ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಒಂದೇ. ಅರ್ಧ ಮಿ.ಲೀ.- ಒಂದೇ ಬಾರಿ. ಒಂದು ಇಂಜೆಕ್ಷನ್ ಆರು ತಿಂಗಳ ಕಾಲ ರಕ್ಷಣೆಯೊದಗಿಸಬಲ್ಲುದು. ಆರು ವಾರಗಳ ನಂತರ ಒಂದು ಹಾಗೂ ಆರು ತಿಂಗಳ ನಂತರ ಒಂದು, ಹೀಗೇ ಒಟ್ಟು ಮೂರು ಬಾರಿ ಚುಚ್ಚುಮದ್ದು ತೆಗೆದುಕೊಂಡರೆ ಹತ್ತು ವರ್ಷದವರೆಗೆ ನಿರೋಧಕ ಶಕ್ತಿಯಿರುತ್ತದೆ ಎಂದು ಸಾಬೀತಾಗಿದೆ.
ಆಫ್ರಿಕಾ, ಏಷ್ಯಾಗಳಲ್ಲಿ ಈಗಲೂ ಆರೋಗ್ಯಸಮಸ್ಯೆಯಾಗಿರುವ, ಪ್ರತಿವರ್ಷ ಒಂದು ಮಿಲಿಯನ್ ಜನರನ್ನು ವಿಶ್ವಾದ್ಯಂತ ಬಾಧಿಸುವ ಟೆಟನಸ್ ಕಾಯಿಲೆ ಮೂರರಿಂದ ಐದು ಲಕ್ಷ ಜನರ ಸಾವಿಗೂ ಕಾರಣವಾಗಿದೆ. ಬರಿಯ ಸ್ವಚ್ಛತೆ ಮತ್ತು ಮುನ್ನೆಚ್ಚರಿಕೆಗಳಿಂದಲೇ ಈ ಕಾಯಿಲೆಯನ್ನು ನಮ್ಮಿಂದ ದೂರವಿಡಬಹುದು.
12.ಕವಲಕ್ಕಿ ಡಾಕ್ಟರ ಡೈರಿ: ಹಲ್ಲಿಯ ತಲೆ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ?
‘ಬಿಸಿಯೂಟದ ಸಾರಿನಲ್ಲಿ ಹಲ್ಲಿ. ಎಂಟು ಮಕ್ಕಳು ಅಸ್ವಸ್ಥ. ಇಬ್ಬರು ಆಸ್ಪತ್ರೆಗೆ. ಪ್ರಾಣಾಪಾಯದಿಂದ ಪಾರಾದ ಮಕ್ಕಳು.. ಅಡುಗೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಪಾಲಕರಿಂದ ವ್ಯಾಪಕ ಆಪಾದನೆ..’
‘ಮಸಣವಾಗಬೇಕಿದ್ದ ಮದುವೆಮನೆ.. ಸ್ವಲ್ಪದರಲ್ಲಿ ತಪ್ಪಿದ ಅನಾಹುತ.. ಪಾಯಸದಲ್ಲಿ ಬಿದ್ದ ಹಲ್ಲಿಯನ್ನು ಮೊದಲೇ ಗುರುತಿಸಿದ ಅಡುಗೆಯವರು..’
ಹೀಗೇ.. ಇಂತ ‘ಹಲ್ಲಿ’ ಎಂಬ ಘನಘೋರ ವಿಷದ ಬಗೆಗಿನ ಸುದ್ದಿಗಳನ್ನು ನೀವು ಬಹಳ ಸಾರಿ ಪೇಪರಿನಲ್ಲಿ ನೋಡಿರುತ್ತೀರಿ. ಆದರೆ ಪ್ರತಿಬಾರಿಯೂ ಅಕಸ್ಮಾತ್ ಅನಾಹುತ ತಪ್ಪಿ ಸಾವುನೋವು ತಪ್ಪಿದ ಬಗೆಗೆ ಸುದ್ದಿಯಿರುತ್ತದೆಯೇ ಹೊರತು ಸತ್ತ ಸುದ್ದಿ ನಿಮಗೆ ಸಿಗುವುದಿಲ್ಲ.
ಸರಿರಾತ್ರಿಯಲ್ಲೊಂದು ಫೋನು; ‘ಅಮ್ಮೋರೇ, ಸಾರಿನಲ್ಲಿ ಹಲ್ಲಿ ಬಿದ್ದುಬಿಟ್ಟಿತ್ತು, ಗೊತ್ತಾಗದೇ ಮನೆಯವರೆಲ್ಲ ಉಂಡುಬಿಟ್ವಿ. ಈಗ ಪಾತ್ರ ತೊಳೀತ ತಿಳೀತು. ಮೂರ್ನಾಲ್ಕು ಜನಕ್ಕೆ ಆಗ್ಲೇ ವಾಂತಿ ಶುರುವಾಗಿಹೋಗಿದೆ. ಈಗ್ಲೇ ಜೀಪು ಮಾಡ್ಕಂಡು ಬರ್ತೀವಿ, ನೀವು ಅದಕ್ಕೆ ಮದ್ದು ಕೊಡ್ತೀರಿ ಅಲ್ವಾ?’
ವಿದ್ಯೆ ಕಲಿತವರು, ಕಲಿಯದೇ ಇರುವವರೂ ಕೂಡ ನಂಬಿಕೊಂಡ ಬಂದ ಮಿಥ್ಯೆ ಹಲ್ಲಿಯ ವಿಷದ ಬಗೆಗಿನದು. ಬಹುಪಾಲು ಅಸ್ವಸ್ಥತೆ ‘ವಿಷಸೇವನೆ ಆಯಿತಲ್ಲಾ, ಇನ್ನೇನು ಗತಿ’ ಎಂಬ ಆತಂಕದಿಂದ ಆಗಿರುತ್ತದೆ. ಕೆಲವು ಸಲ ಉಪ್ಪುನೀರು ಕುಡಿಸಿ ವಾಂತಿಮಾಡಿಸಿಬಿಟ್ಟಿರುತ್ತಾರೆ. ಮಾಧ್ಯಮಗಳಾದರೂ ಹಲ್ಲಿ ಬಿದ್ದ ಬಗ್ಗೆ ಬರೆಯುತ್ತವೆಯೇ ಹೊರತು ಅದು ವಿಷವಲ್ಲ ಎಂದು ಆಸ್ಪತ್ರೆಗೆ ಹೋದಾಗ ವೈದ್ಯರು ಹೇಳಿದ್ದನ್ನು ದಾಖಲಿಸುವುದು ಕಡಿಮೆ. ಸತ್ಯ ಬಿಳಿಬಣ್ಣದ್ದು, ಅದಕ್ಕೆ ಚಿತ್ತ ಸೆಳೆವ ರಂಗಿಲ್ಲ.
ಶುರುವಿನಲ್ಲೇ ಹಲ್ಲಿ ಹಾಗೂ ಅದರ ವಿಷದ ಬಗೆಗೆ ನಿಮಗೆ ಮೂರು ಸತ್ಯಗಳನ್ನು ಹೇಳಿಬಿಡುತ್ತೇನೆ.
ಹಲ್ಲಿ ವಿಷವಲ್ಲ! ಹಲ್ಲಿ ವಿಷವಲ್ಲ! ಹಾಗೂ, ಹಲ್ಲಿ ವಿಷವಲ್ಲ!
ಮೂರು ಬಾರಿ ಏಕೆ ಹೇಳಿದ್ದೆಂದರೆ ಮೂರರಲ್ಲಿ ಒಂದು ಸತ್ಯವಾದರೂ ನಿಮ್ಮ ನೆನಪಿನಲ್ಲುಳಿಯಬಹುದು ಎಂದು!
‘ಬಿಸಿಯೂಟದ ಸಾರಿನಲ್ಲಿ ಹಲ್ಲಿ. ಎಂಟು ಮಕ್ಕಳು ಅಸ್ವಸ್ಥ. ಇಬ್ಬರು ಆಸ್ಪತ್ರೆಗೆ. ಪ್ರಾಣಾಪಾಯದಿಂದ ಪಾರಾದ ಮಕ್ಕಳು.. ಅಡುಗೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಪಾಲಕರಿಂದ ವ್ಯಾಪಕ ಆಪಾದನೆ..’
‘ಮಸಣವಾಗಬೇಕಿದ್ದ ಮದುವೆಮನೆ.. ಸ್ವಲ್ಪದರಲ್ಲಿ ತಪ್ಪಿದ ಅನಾಹುತ.. ಪಾಯಸದಲ್ಲಿ ಬಿದ್ದ ಹಲ್ಲಿಯನ್ನು ಮೊದಲೇ ಗುರುತಿಸಿದ ಅಡುಗೆಯವರು..’ ಹೀಗೇ.. ಇಂತ ‘ಹಲ್ಲಿ’ ಎಂಬ ಘನಘೋರ ವಿಷದ ಬಗೆಗಿನ ಸುದ್ದಿಗಳನ್ನು ನೀವು ಬಹಳ ಸಾರಿ ಪೇಪರಿನಲ್ಲಿ ನೋಡಿರುತ್ತೀರಿ. ಆದರೆ ಪ್ರತಿಬಾರಿಯೂ ಅಕಸ್ಮಾತ್ ಅನಾಹುತ ತಪ್ಪಿ ಸಾವುನೋವು ತಪ್ಪಿದ ಬಗೆಗೆ ಸುದ್ದಿಯಿರುತ್ತದೆಯೇ ಹೊರತು ಸತ್ತ ಸುದ್ದಿ ನಿಮಗೆ ಸಿಗುವುದಿಲ್ಲ. |
ನೈರುತ್ಯ ಅಮೆರಿಕಾ ಹಾಗೂ ಮೆಕ್ಸಿಕೋದಲ್ಲಿ ವಾಸವಿರುವ ‘ಗೀಲಾ ಮಾನ್‌ಸ್ಟರ್’ ಎಂಬ ಹಲ್ಲಿಜಾತಿಯ ಎರಡು ಪ್ರಬೇಧಗಳನ್ನು ಹೊರತುಪಡಿಸಿ ಸರಿಸುಮಾರು ಮೂರು ಸಾವಿರ ಪ್ರಬೇಧಗಳಿರುವ ಹಲ್ಲಿಗಳು ವಿಷಜಂತುಗಳಲ್ಲ. ಹಲ್ಲಿ, ಹಾವು, ಹರಣೆಗಳನ್ನೆಲ್ಲ ಮಂಚೂರಿ, ಉಪ್ಪಿನಕಾಯಿ, ಫ್ರೈ ಮಾಡಿಕೊಂಡು ತಿನ್ನುವ ಚೀನೀ ಜನರು ನೂರಿಪ್ಪತ್ತು ಕೋಟಿ ಇರುವಾಗ, ಹಲ್ಲಿ ತಿಂದವರು ಸಾಯುವುದು ಹೇಗೆ? ಅಸಲಿಗೆ ಹಲ್ಲಿಯ ಯಾವ ಭಾಗವೂ ವಿಷಪೂರಿತವಲ್ಲ. ಇದೇ ಮಾತು ಗೋಸುಂಬೆಗೂ ಅನ್ವಯಿಸುತ್ತದೆ. ಮನೆ ಹಲ್ಲಿ(ಗೆಕೋ), ಕಚ್ಚುವುದೇ ಇಲ್ಲ. ಚೇಳಿನಂತೆ ಕುಟುಕುವುದೂ ಇಲ್ಲ. ವಿಷಪೂರಿತವಾದ ಯಾವ ಭಾಗವೂ ಅದರ ದೇಹದಲ್ಲಿಲ್ಲ. ಹಗಲೆಲ್ಲ ಕತ್ತಲಲ್ಲಿ ಅಡಗಿಕೊಂಡಂತಿದ್ದು ರಾತ್ರಿ ಮನೆಯ ಫೋಟೋಗಳ ಸಂದಿನಿಂದಲೋ, ಕ್ಯಾಲೆಂಡರುಗಳ ಸಂದಿನಿಂದಲೋ, ಹೊರಬಂದು ಲೈಟಿನ ಬಳಿ ಹುಳಹುಪ್ಪಟೆ ಬೇಟೆಯಾಡುವ ಈ ನಿರುಪದ್ರವಿ ಪ್ರಾಣಿ ನಮಗೆ ಉಪಕಾರಿಯೆನ್ನಲಡ್ಡಿಯಿಲ್ಲ. ಅದು ಜೇಡ, ಸೊಳ್ಳೆ, ನೊಣ, ಜಿರಲೆಯಂತಹ ಕೀಟಗಳನ್ನು ಹಿಡಿದು ತಿಂದು ಮನೆ ಚೊಕ್ಕಟವಾಗಿರುವಂತೆ ನೋಡಿಕೊಳ್ಳುತ್ತದೆನ್ನಬಹುದು.
ಹೆಚ್ಚೂಕಡಿಮೆ ಎಲ್ಲರ ಮನೆಯಲ್ಲೂ ಇರುವೆ, ಜಿರಲೆ, ಚಿಟ್ಟೆ ಮತ್ತಿತರ ಹುಳಹುಪ್ಪಟೆಗಳ ನಡುವೆ ಹತ್ತರ ಜೊತೆ ಹನ್ನೊಂದು ಇರುವ ಹಾಗಿರುವ ಹಲ್ಲಿಗೆ ಮಾತ್ರ ಬೇಕಿದ್ದಕ್ಕಿಂತ ಹೆಚ್ಚು ಗಮನ ದೊರೆತಿರುವುದು ಅದರ ವಿಲಕ್ಷಣ ಆಕಾರದಿಂದಲೋ ಅಥವಾ ತನ್ನ ಬಾಲ ತಾನೇ ಕಳಚಿಕೊಂಡು ಓಡುತ್ತ ಶತ್ರುಗಳಿಂದ ತಪ್ಪಿಸಿಕೊಳ್ಳುವ ಅದರ ವಿಚಿತ್ರ ನಡವಳಿಕೆಯಿಂದಲೋ?
ನಾನು ರೋಗಿಯೊಬ್ಬರ ಮನೆಗೊಮ್ಮೆ ವಿಸಿಟ್‌ಗಾಗಿ ಹೋಗಿದ್ದೆ. ಬಾಗಿಲು ದಾಟುತ್ತಾ ಅಲ್ಲೇ ಫೋಟೋದ ಹಿಂದಿದ್ದ ಹಲ್ಲಿಯೊಂದು ಲೊಚಪಚ ಎನ್ನುತ್ತಾ ನನ್ನ ತಲೆಯ ಮೇಲೆ ಬಿತ್ತು. ಕೂಡಲೇ ನಾನು ಕೈಯಿಂದ ಹಲ್ಲಿಯನ್ನು ದೂಡಿ ಕೆಳಗೆ ಹಾಕಿದೆ. ಅಲ್ಲಿದ್ದ ಅಜ್ಜಿಯೊಬ್ಬರು ‘ತಲಿಮ್ಯಾಲೆ ಹಲ್ಲಿ ಬಿದ್ರೆ ಸಾವು ಅಂತಾರೆ ಅಮಾ’ ಎಂದು ಗಾಬರಿಗೊಂಡರು. ಆದರೆ ಸಾವು ನನಗಲ್ಲ, ಹಲ್ಲಿಗೇ ಬಂದಿತ್ತು. ನಾನು ಕೈಯಿಂದ ಕೆಳಗೆ ದೂಡಿದ್ದೇ ಅಲ್ಲೇ ಸುಳಿದಾಡುತ್ತಿದ್ದ ಬೆಕ್ಕೊಂದು ಪಟ್ಟನೇ ಆ ಹಲ್ಲಿ ಹಿಡಿದು ತಿಂದುಬಿಟ್ಟಿತು!
ಹಲ್ಲಿಯ ತಲೆ ಮೇಲೆ ಯಾವಾಗಲೂ ಗೂಬೆಯೇ. ಹಲ್ಲಿಯಂತೂ ಮೈಮೇಲೆ ಬೀಳುವ ಹಾಗೇ ಇಲ್ಲ. ದೇಹದ ಯಾವ್ಯಾವ ಭಾಗಗಳಲ್ಲಿ ಬಿದ್ದರೆ ಏನೇನು ದುರ್ಗತಿ ಕಾದಿದೆ ಎಂದು ಶಾಸ್ತ್ರವಾಗಿ ಹೇಳುವ ‘ಗೌಳೀ ಪತನ ಫಲ’ ಗ್ರಂಥಗಳೇ ಉಂಟು. ಮೈಮೇಲೆ ಹಲ್ಲಿ ಬಿದ್ದರೆ ಶನಿ ದೇವರ ದೇವಸ್ಥಾನಕ್ಕೆ ಹೋಗಿ ಎಳ್ಳೆಣ್ಣೆ ದೀಪ ಹಚ್ಚಿಟ್ಟುಬರುವವರುಂಟು. ಕತೆ ವ್ರತ ಮಾಡಿಸುವವರುಂಟು. ಕಂಚಿಯ ಕಾಮಾಕ್ಷಿ ದೇವಸ್ಥಾನದಲ್ಲಿ ಚಿನ್ನದ ಹಾಗೂ ಬೆಳ್ಳಿಯ ಹಲ್ಲಿಯ ಮೂರ್ತಿಗಳಿವೆ. ಅಲ್ಲಿಗೆ ಹೋದವರೆಲ್ಲ ಆ ವಿಗ್ರಹವನ್ನು ಮುಟ್ಟಿ ಪೂಜಿಸಿಬರುತ್ತಾರೆ. ಹಾಗೆ ಹೋಗಿಬಂದವರಿಗೆ ನಂತರ ಎಲ್ಲೆಲ್ಲಿ ಹಲ್ಲಿ ಬಿದ್ದರೂ ಏನೂ ದೋಷವಿಲ್ಲವಂತೆ. ಮೈಮೇಲೆ ಹಲ್ಲಿ ಬಿದ್ದ ಬೇರೆಯವರು, ಕಂಚಿಗೆ ಹೋಗಿ ಬಂದವರಿಗೆ ನಮಸ್ಕಾರ ಮಾಡಿದರೂ ಹಲ್ಲಿ ಬಿದ್ದ ದೋಷ ಪರಿಹಾರವಾಗುವುದಂತೆ. ಯಾವುದಾದರೂ ಮಾತು ನಡೆಯುತ್ತಿರುವಾಗ ಹಲ್ಲಿ ಲೊಚಗುಟ್ಟಿದರೆ ಸಾಕು, ‘ಹ್ಞಾಂ, ನೋಡಿದಿರಾ? ನಾನು ಹೇಳಿದ್ದು ಖರೇ. ಹಲ್ಲಿ ಕೂಗ್ತು’ ಎನ್ನುತ್ತಾರೆ. ಬಹಳ ಸಂಖ್ಯೆಯಲ್ಲಿರುವ ಹಲ್ಲಿಗಳು ಒಂದಕ್ಕೊಂದು ಕಚ್ಚಾಡುತ್ತಾ ಮೇಲಿಂದ ಕೆಳಗೆ ಬೀಳುವುದು, ಲೊಚಪಚ ಸದ್ದು ಮಾಡುವುದು ಸಾಮಾನ್ಯ. ಆದರೆ ಅದು ಹೊರಡಿಸುವ ಶಬ್ದ-ಅದೂ ನಿರ್ದಿಷ್ಟವಾಗಿ ಮೂರು ಬಾರಿ, ಮತ್ತು ಅದರ ಚಲನೆಗಳು ಏನೇನಕ್ಕೆಲ್ಲ ಶಕುನ ಅಪಶಕುನದ ಸೂಚಕಗಳಾಗಿಬಿಟ್ಟಿವೆ.
ಹಲ್ಲಿಯ ಬಗೆಗೆ ಮತ್ತೊಂದು ಮಿಥ್ಯೆ ಚಾಲ್ತಿಯಲ್ಲಿದೆ. ಮೈಮೇಲೆ ಬಿಳಿಕಲೆ ಕಂಡರೆ ಅದು ‘ಹಲ್ಲಿ ಉಚ್ಚೆ ಹೊಯ್ದು ಆದದ್ದು’ ಎನ್ನುತ್ತಾರೆ. ಅಸಲಿಗೆ ಹಲ್ಲಿ ‘ಉಚ್ಚೆ’ ಹೊಯ್ಯುವುದೇ ಇಲ್ಲ! ತನ್ನ ದೇಹದ ಜೀವದ್ರವಕ್ಕಿಂತ ಹೆಚ್ಚು ಸಾಂದ್ರವಾದ ಮೂತ್ರ ತಯಾರಿಸಲು ಹಲ್ಲಿ ವಿಫಲ. ಹಲ್ಲಿಯ ವಿಸರ್ಜಿತವಾದ ಮಲದ ಜೊತೆಗೆ ಒಂದು ಬಿಳಿಯ ಮಣಿ ಇರುತ್ತದಲ್ಲ, ಅದುವೇ ಅದರ ‘ಮೂತ್ರ’! ಎಂದರೆ ನೈಟ್ರೋಜನ್ ಕಲ್ಮಶಗಳನ್ನೆಲ್ಲ ಅದು ಘನ ರೂಪದಲ್ಲೇ ಹೊರಹಾಕುವುದಂದ ಹಲ್ಲಿಗಳ ಕಿಡ್ನಿಗೆ ಬೇರೆಯಾಗಿ ಮೂತ್ರ ತಯಾರಿಸುವ ಕೆಲಸವಿಲ್ಲ. ನೀರಿನ ವಿಸರ್ಜನೆ ಆಗಾಗ ಆಗಬಹುದು. ಅದಕ್ಕೇ ಹಲ್ಲಿಗೆ ಬಾಯಾರಿಕೆಯೂ ಇಲ್ಲವೆಂಬಷ್ಟು ಕಡಿಮೆ! ಆದರೆ ಯಾರಾದರೂ ನೀರು ಕೇಳಿದಾಗ ಕೊಡದಿದ್ದರೆ ‘ಮುಂದಿನ ಜನ್ಮದಲ್ಲಿ ಹಲ್ಲಿಯಾಗಿ ಹುಟ್ಟುತ್ತೀ’ ಎಂದು ಹೆದರಿಸುತ್ತಾರೆ.
ನೈರುತ್ಯ ಅಮೆರಿಕಾ ಹಾಗೂ ಮೆಕ್ಸಿಕೋದಲ್ಲಿ ವಾಸವಿರುವ ‘ಗೀಲಾ ಮಾನ್‌ಸ್ಟರ್’ ಎಂಬ ಹಲ್ಲಿಜಾತಿಯ ಎರಡು ಪ್ರಬೇಧಗಳನ್ನು ಹೊರತುಪಡಿಸಿ ಸರಿಸುಮಾರು ಮೂರು ಸಾವಿರ ಪ್ರಬೇಧಗಳಿರುವ ಹಲ್ಲಿಗಳು ವಿಷಜಂತುಗಳಲ್ಲ. ಹಲ್ಲಿ, ಹಾವು, ಹರಣೆಗಳನ್ನೆಲ್ಲ ಮಂಚೂರಿ, ಉಪ್ಪಿನಕಾಯಿ, ಫ್ರೈ ಮಾಡಿಕೊಂಡು ತಿನ್ನುವ ಚೀನೀ ಜನರು ನೂರಿಪ್ಪತ್ತು ಕೋಟಿ ಇರುವಾಗ, ಹಲ್ಲಿ ತಿಂದವರು ಸಾಯುವುದು ಹೇಗೆ? ಅಸಲಿಗೆ ಹಲ್ಲಿಯ ಯಾವ ಭಾಗವೂ ವಿಷಪೂರಿತವಲ್ಲ. |
ಹಲ್ಲಿಯ ಜಾತಿಗೇ ಸೇರಿದ ಗೋಸುಂಬೆ ಎಂಬ ಅತಿ ಸಂಕೋಚದ ಪ್ರಾಣಿಯ ಬಗೆಗೂ ಇಂಥದೇ ಅಭಿಪ್ರಾಯಗಳಿವೆ. ಅದರ ವಿಷದಿಂದ ‘ಮದ್ದು ಹಾಕುತ್ತಾರೆ’ನ್ನುವ ಭ್ರಮೆ. ಇದಂತೂ ಅನಾದಿ ಕಾಲದಿಂದ ಚಾಲ್ತಿಯಲ್ಲಿದೆ. ಅದನ್ನು ತಲೆಕೆಳಗಾಗಿ ನೇತುಹಾಕಿದಾಗ ಅದರ ಬಾಯಿಂದ ವಿಷದಂತಹ ಎಂತದೋ ದ್ರವ ಸ್ರವಿಸುತ್ತದೆಯೆಂದೂ, ಅದನ್ನು ಆಹಾರದಲ್ಲಿ ಮಿಶ್ರಣ ಮಾಡಿ ಕೊಟ್ಟರೆ ತಿಂದ ಪದಾರ್ಥ ವರ್ಷಾನುಗಟ್ಟಲೆ ಜೀರ್ಣವಾಗದೇ ಹಾಗೇ ಹೊಟ್ಟೆಯಲ್ಲಿ ಉಳಿದು, ಅದರ ಮೇಲೆ ಕೂದಲು ಇತ್ಯಾದಿ ಬೆಳೆದು, ಆ ವ್ಯಕ್ತಿಗೆ ಹಸಿವೆ ಕಡಿಮೆಯಾಗಿ, ಬರಬರುತ್ತಾ ತೂಕ ಕಡಿಮೆಯಾಗಿ, ಸೊರಗಿಹೋಗುತ್ತಾನೆಂಬುದಾಗಿಯೂ ಪ್ರತೀತಿ. ಕೆಲವು ಮನೆಗಳಲ್ಲಿ ‘ಮದ್ದು ಹಾಕುವ’ ಚಾಳಿಯ ಜನರಿದ್ದೇ ಇರುತ್ತಾರಂತೆ. ಅವರಿಗೆ ಯಾರಿಗಾದರೂ ಮದ್ದು ಹಾಕದಿದ್ದರೆ ಬದುಕಲಿಕ್ಕೇ ಸಾಧ್ಯವಿಲ್ಲವಂತೆ, ಅವರು ಕೊನೆಗೆ ಯಾರೂ ಸಿಗದಿದ್ದರೆ ಮನೆಜನರಿಗೇ ಮದ್ದು ಹಾಕುತ್ತಾರಂತೆ – ಹೀಗೇ ಏನೇನೋ ಪ್ರತೀತಿಗಳು. ಕತೆಕಾದಂಬರಿಗಳಲ್ಲಿ ಹಲವು ಕಡೆ ಇದರ ಪ್ರಸ್ತಾಪ ಬರುತ್ತದೆ.
ಹಾಗೆ ನೋಡಿದರೆ ನಾವು ತೆಗೆದುಕೊಂಡ ಆಹಾರವು ಜಠರದಿಂದ ನಾಲ್ಕಾರು ತಾಸುಗಳಲ್ಲಿ ಮುಂದೆ ಚಲಿಸಿಬಿಡುತ್ತದೆ. ಎಲ್ಲೋ ಒಮ್ಮೊಮ್ಮೆ ಅಜೀರ್ಣವಾದಾಗ, ಅಥವಾ ಮತ್ತಾವುದೋ ಜೀರ್ಣಸಂಬಂಧಿ ಕಾಯಿಲೆಯುಂಟಾದಾಗ, ತೆಗೆದುಕೊಂಡ ಆಹಾರದಲ್ಲಿ ಕೊಬ್ಬಿನಂಶ ಹೆಚ್ಚಾದಾಗ ಜಠರದ ಚಲನೆ ಸ್ವಲ್ಪ ನಿಧಾನವಾಗಬಹುದು. ಅಷ್ಟು ಬಿಟ್ಟರೆ ತಿಂಗಳಾನುಗಟ್ಟಲೆ, ವರ್ಷಾನುಗಟ್ಟಲೆ ತಿಂದದ್ದು ಜಠರದಲ್ಲಿ ಹಾಗೇ ಉಳಿಯುವುದು ಸಾಧ್ಯವೇ ಇಲ್ಲ. ಬಹುಪಾಲು ರೋಗಿಗಳಲ್ಲಿ ತನಗೆ ಏನೋ ವಿಷಪ್ರಾಶನ ಮಾಡಿಬಿಟ್ಟಿದ್ದಾರೆ ಎಂಬ ಭಾವವೇ ಅವರನ್ನು ಅಧೀರರನ್ನಾಗಿಸಿಬಿಡುತ್ತದೆ. ‘ಮದ್ದು ಬಿದ್ದಿದೆ’ ಎಂಬುದೊಂದು ಭ್ರಮೆಯ ರೋಗವಲ್ಲದೇ ಮತ್ತೇನಲ್ಲ. ಆ ಭ್ರಮೆಯೇ ಇಲ್ಲದ ರೋಗಲಕ್ಷಣಗಳನ್ನು, ತೊಂದರೆಗಳನ್ನು ಹುಟ್ಟುಹಾಕಿ ವರ್ಷಗಟ್ಟಲೇ ಮಾನಸಿಕವಾಗಿ ಗಟ್ಟಿಮುಟ್ಟಾಗಿರುವ ವ್ಯಕ್ತಿಯೊಬ್ಬ ನರಳುವಂತೆ ಮಾಡುತ್ತದೆ. ಅದಕ್ಕೆ ಸರಿಯಾಗಿ ಅವರ ಅನಿಸಿಕೆಗಳನ್ನು ಪುಷ್ಟೀಕರಿಸುವಂತೆ ಹೇಳುವ ಮದ್ದು ತೆಗೆಯುವ ನಾಟೀ ವೈದ್ಯರು! ಕಣ್ಕಟ್ಟಿನ ರೀತಿಯಲ್ಲಿ ವ್ಯಕ್ತಿಗೆ ವಾಂತಿ ಬರಿಸುವ ಔಷಧಿ ಕೊಟ್ಟು, ವಾಂತಿಯಲ್ಲಿ ಎಷ್ಟೋ ವರ್ಷದ ಕೆಳಗಿನ ಅನ್ನದ ಅಗುಳು, ಕೂದಲು, ರೋಮ ಹುಟ್ಟಿಹೋದ ಮತ್ತೇನೋ ಪದಾರ್ಥ ಕಾಣಿಸಿ, ‘ಇದೇ ನೋಡಿ ಮದ್ದು ಹಾಕಿದ್ದು’ ಎನ್ನಿಸಿಬಿಡುತ್ತಾರೆ.
ಅಂತೂ, ಮನುಷ್ಯನಿಗಿಂತ ಲಕ್ಷಾಂತರ ವರ್ಷಗಳ ಮೊದಲೇ ಈ ಭೂಮಿಯ ಮೇಲೆ ಉಗಮವಾದ ಸರೀಸೃಪ ಜಾತಿಯ ಹಲ್ಲಿ-ಗೋಸುಂಬೆಗಳಿಗೆ ಶಾಪ ವಿಮೋಚನೆ ಯಾವಾಗಲೋ…
13. ಕವಲಕ್ಕಿ ಡಾಕ್ಟರಮ್ಮನ ಡೈರಿ – ಹಾವು ಕಡಿತದ ಕಥೆಗಳು
ಬೆಳಗಾತ ಎದ್ದು, ಬೆಟ್ಟಕ್ಕೆ ಸೊಪ್ಪು ಕಡಿಯಲು ಹೋಗಿದ್ದ ಮಾದೇವ ಕೊನೆಯ ಕಂತು ಸೊಪ್ಪು ಕಡಿದು ಮರದಿಂದ ಕೆಳಗಿಳಿಯುತ್ತಿದ್ದ. ಇನ್ನೇನು ಅವನು ಹೊರೆಕಟ್ಟಿ ಸೊಪ್ಪು ಹೊತ್ತು ಮನೆಗೆ ಹೊರಡುವ ಹೊತ್ತು. ಬಳ್ಳಿ ಎಳೆದು ಗಂಟು ಬಿಗಿ ಮಾಡುತ್ತಾ ಇದ್ದವನ ಕೈಗೆ ಏನೋ ಕಟಂ ಎಂದು ಕುಟ್ಟಿದಾಗಲೇ ಗೊತ್ತಾದದ್ದು ಏನೋ ಕಡಿದಿರಬೇಕು ಎಂದು. ನೋಡಲೆಂದು ಸೊಪ್ಪು ಅತ್ತಿತ್ತ ಸರಿಸುತ್ತಾನೆ, ಎದುರಿಗೆ ಬುಸುಗುಡುತ್ತ ಎದ್ದು ಹೆಡೆಯಾಡಿಸಿತೊಂದು ಕಪ್ಪುಹಾವು! ‘ಅಯ್ಯೋ ಹಿರೇಹಾವು’ ಎಂಬೊಂದು ಉದ್ಗಾರ ಅವನ ಬಾಯಿಂದ ಹೊರಟಿತು. ಅಂತಿಂಥ ಹಾವಲ್ಲ ಅದು. ಅದನ್ನು ನೋಡಿದರೇ ಹೆದರಿ ನಮಸ್ಕರಿಸಿ ಓಡಬೇಕು, ಅಂಥಾ ಹತ್ತಡಿ ಉದ್ದದ ಕಾಳಿಂಗ ಸರ್ಪ. ದಟ್ಟ ಮಳೆಕಾಡಿನ ಅತಿ ವಿಷಪೂರಿತ ಹಾವು. ಕಡಿದು ರಾಶಿ ಹಾಕಿದ್ದ ಸೊಪ್ಪಿನಲ್ಲಿ ಅದು ಹೇಗೋ ಸೇರಿ ಹಗ್ಗದ ಬಿಗಿ ತಾಗಿದಾಗ ಅವನನ್ನು ಕಚ್ಚಿತ್ತು. ಅವನಾಗಲೇ ಮನೆಯಿಂದ ಮೂರು ಮೈಲು ದೂರ ಬಂದು ಬಿಟ್ಟಿದ್ದ. ಅವನ ಜೊತೆಗೇ ಬೆಟ್ಟಕ್ಕೆ ಸೊಪ್ಪಿಗೆ ಬಂದಿದ್ದ ಗೆಳೆಯನನ್ನು ಒಂದು ‘ಕೂ ಹೊಯ್’’ ಕೂಗಿನಲ್ಲಿ ಕರೆದ. ಗೆಳೆಯ ವಿಷಯ ತಿಳಿದು ದಂಗಾಗಿ, ಕತ್ತಿಯಿಂದ ಗಾಯ ದೊಡ್ಡ ಮಾಡಿ, ಹತ್ತಿರವಿದ್ದ ಮರಾಠಿಕೊಪ್ಪವೊಂದಕ್ಕೆ ನುಗ್ಗಿದ. ಅಲ್ಲಿನ ಹಿರಿಯ ತನ್ನ ಕೋಳಿಗೂಡಿನಿಂದ ಕೊಟ್ಟ ಎರಡು ಎಳೇ ಮರಿಯ ಕುಂಡೆಯನ್ನು ಗಾಯದ ಮೇಲೆ ಒತ್ತಿ ಹಿಡಿದ. ಮಾದೇವನಿಗೆ ‘ನಿದ್ದೆಮಾಡಬೇಡ, ಕಣ್ಣು ಮಾತ್ರ ಮುಚ್ಚಬೇಡ’ ಎಂದು ಪದೇಪದೇ ಎಚ್ಚರಿಸುತ್ತಾ, ಹತ್ತಿರವಿದ್ದ ಒಂದು ಲಡಕಾಸಿ ಮೋಟರುಸೈಕಲ್ಲಿನ ಮೇಲೆ ಕೂರಿಸಿಕೊಂಡು ಅವನನ್ನು ಆಸ್ಪತ್ರೆಗೆ ಕರೆತಂದ. ಇಷ್ಟೆಲ್ಲ ಆಗಿ ಅವರು ಆಸ್ಪತ್ರೆಗೆ ಬಂದಾಗ ಗಂಟೆ ಇನ್ನೂ ಬೆಳಗಿನ ಏಳು!
ನಾನು ನೋಡುವ ಹೊತ್ತಿಗಾಗಲೇ, `ಮುಚ್ಚಬೇಡ’ ಎಂದು ಹೇಳುತ್ತಿದ್ದರೂ ಅವನ ಕಣ್ಣು ಎಳೆದೆಳೆದು ಹೋಗುತ್ತಿತ್ತು. ಮೈಯೆಲ್ಲ ನೀಲಿಗಟ್ಟಿ ಮೇಲುಶ್ವಾಸ ಬಿಡುತ್ತಿದ್ದ. ಬಾಯಲ್ಲಿ ಬುರುಬುರು ನೊರೆ ಹೊರಬರಲು ಹವಣಿಸುತ್ತಿತ್ತು. ಮೈ ತಣ್ಣಗಾಗುತ್ತಾ ಸಾಗಿತ್ತು. ಹಾವು ಕಚ್ಚಿದ ಕೈಗೆ ಎಂಥ ಬಿಗಿ ಕಟ್ಟು ಹಾಕಿದ್ದರೆಂದರೆ ಕೈ ಸೆಟಗೊಂಡು ಹೋಗಿತ್ತು. ನಾನು ಕೇಳಿದ ಯಾವ ಪ್ರಶ್ನೆಗೂ ಅವನು ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ. ಅವನನ್ನು ನೋಡಿ ಸರಸರ ಎಎಸ್‌ವಿ ಹಾಕಲು ತಯಾರಿ ಮಾಡಿದೆವು. ಆಂಬುಲೆನ್ಸ್ ಬರುವುದರಲ್ಲಿ ನಮ್ಮ ಬಳಿ ಇದ್ದ ಎಎಸ್‌ವಿ ಸ್ಟಾಕ್ ತೀರಿತು. ಪಟ್ಟಣ ಮುಟ್ಟುವುದರೊಳಗೆ ಅವನು ಪೂರ್ತಿ ನೀಲಿಯಾಗಿ ತಣ್ಣಗಾಗಿಬಿಟ್ಟ. ಇನ್ನೂ ಮದುವೆಯಾಗದ ಕಟ್ಟುಮಸ್ತಾದ ಮಾದೇವನ ಇಂತಹ ಸಾವು ಹಲವಾರು ದಿನ ಎಲ್ಲರ ಬಾಯ ವಿಷಾದವಾಗಿ ಸುಳಿದಾಡಿ, ನಾಗನಿಗೆ ಏನೋ ಕೋಪ ಬಂದಿದೆ ಎಂದು ಶಮನಗೊಳಿಸುವ ಹಲವು ವಿಧಿವಿಧಾನಗಳು ನಡೆದವು.
ಜನತಾಮನೆಯ ಶಿವಮ್ಮ ತಾಯಿತಂದೆಯರಿಲ್ಲದ, ಅಜ್ಜಿಯ ಮನೆಯಲ್ಲಿ ಬೆಳೆಯುತ್ತಿದ್ದ ಏಳನೇ ತರಗತಿಯ ಹುಡುಗಿ. ಮಾವನ ಹೆಂಡತಿಯ ಕಟಿಪಿಟಿ ತಡೆಯಲಾರದೇ ಅಂದು ಶಾಲೆ ಮುಗಿಸಿ ಮನೆಗೆ ಬಂದವಳು ಒಂದು ಕಲ್ಲಿ ದರಕು(ಒಣ ಎಲೆ) ಗುಡಿಸಿ ತರಲು ಗೇರು ಹಾಡಿಗೆ ಹೋದಳು. ಏನೋ ಕಚ್ಚಿದಂತಾಯಿತು. ಆದರೂ ಬೇಗಬೇಗ ಕೆಲಸ ಮುಗಿಸಿ ಪರೀಕ್ಷೆಗಾಗಿ ಓದಿಕೊಳ್ಳುವ ಆತುರದಲ್ಲಿ, ಕಚ್ಚಿದ್ದು ಏನೆಂದು ಸರಿಯಾಗಿ ನೋಡದೇ ದರಕು ಗುಡಿಸಿ ತಂದು ಒಟ್ಟಿದಳು. ಕೈ ಬಾತು ನೋವು ಏರುತ್ತಲೇ ಹೋಯಿತು. ಅತ್ತೆಯ ಬಳಿ ಹೇಳಲು ಮನಸ್ಸಿಲ್ಲ. ಅಜ್ಜಿ ಒಡೆಯರ ಮನೆಯ ಕೆಲಸ ಮುಗಿಸಿ ಬರುವ ಹೊತ್ತಿಗೆ ಕೈಯೆಲ್ಲ ಬಾತು ನೋವು ತಡೆಯಲಾಗದೇ ಮುಚ್ಚಿ ಹಾಕಿಕೊಂಡು ಮಲಗಿಬಿಟ್ಟಿದ್ದಳು. ಮೊಮ್ಮಗಳಿಗೆ ಏನೋ ಕಚ್ಚಿದ ವಿಷಯ ತಿಳಿದಿದ್ದೇ ಹೌಹಾರಿದ ಅಜ್ಜಿ, ಶಿವಮ್ಮನ ಕೂಗಾಟವನ್ನೂ ಲೆಕ್ಕಿಸದೇ ಕಚ್ಚಿದ ಗಾಯವನ್ನು ಕೊಯ್ದು ದೊಡ್ಡ ಮಾಡಿದಳು. ತಾಸೆರೆಡು ತಾಸು ಕಳೆಯುವುದರಲ್ಲಿ ಆ ದೊಡ್ಡ ಗಾಯದಿಂದ ಒಂದೇ ಸಮ ರಕ್ತ ಸೋರತೊಡಗಿತು. ಗಾಬರಿ ಬಿದ್ದು ಆಗ ಆಸ್ಪತ್ರೆಗೆ ಕರೆತಂದಳು.
ಅಂಥ ನೋವಿನಲ್ಲೂ ಮೌನವಾಗಿ ಕಣ್ಣೀರು ಸುರಿಸುತ್ತಿದ್ದ ಶಿವಮ್ಮನ ಕೈ ಪೂರಿಯಂತೆ ಉಬ್ಬಿತ್ತು. ಕಚ್ಚಿದ ಗಾಯದ ಸುತ್ತ ರಕ್ತ ಹೆಪ್ಪುಗಟ್ಟಿತ್ತು. ಅನುಮಾನವಾಗಿ ಹಲ್ಲು ತೋರಿಸು ಎಂದರೆ ವಸಡಿನ ಸಂದುಗಳಿಂದ ಕಂಡೂಕಾಣದಂತೆ ಒಸರುತ್ತಿರುವ ರಕ್ತ. ಅವಳಿಗೆ ಧೂಳುಹಪ್ಪಡಿ ಎಂದು ಕರೆಯಲಾಗುವ ಒಂದು – ಒಂದೂವರೆ ಅಡಿ ಉದ್ದದ ಹಾವು ಕಚ್ಚಿದ್ದಿರಬೇಕು. ಕಚ್ಚಿದ ಸಣ್ಣ ಗಾಯದಿಂದಲ್ಲದೆ ವಸಡು, ಮೂತ್ರದಲ್ಲಿ, ಮೂಗು, ಗಂಟಲಿನಿಂದೆಲ್ಲ ರಕ್ತ ಒಸರಲು ಪ್ರಾರಂಭಿಸಿತ್ತು. ಆ ಹಾವಿನ ವಿಷಕ್ಕೆ ರಕ್ತ ಹೆಪ್ಪುಗಟ್ಟುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಚಿಕಿತ್ಸೆಯಿಲ್ಲದೇ ಹಾಗೇ ಬಿಟ್ಟರೆ ಆಂತರಿಕ ರಕ್ತಸ್ರಾವವಾಗೇ ಸಾವನ್ನಪ್ಪುವ ಸಾಧ್ಯತೆಯಿರುತ್ತದೆ.
ಅವಳನ್ನು ಕೂಡಲೇ ಅಡ್ಮಿಟ್ ಮಾಡಿದೆವು. ಆ ಪುಟ್ಟ ಹುಡುಗಿಯ ಕೈಬೆರಳನ್ನು ಆ ಹಾವು ಅದೇನೆಂದು ತಿಳಿದು ಕಚ್ಚಿತೋ, ಅದೆಷ್ಟು ವಿಷ ಒಳ ಹಾಕಿತ್ತೋ?! ರಾತ್ರಿ ಕಳೆದು ಬೆಳಗಾಗುವುದರೊಳಗೆ ಒಂಭತ್ತು ವಯಲ್ ಎಎಸ್‌ವಿ ಇಂಜೆಕ್ಷನ್ ಕೊಡುವಂತಾಯಿತು. ಒಂದು ಇಂಜೆಕ್ಷನ್‌ಗೆ ಆರುನೂರು ರೂಗಳು. ಜೊತೆಗೆ ನೋವಿಗೆ, ರಿಯಾಕ್ಷನ್ ಆಗದ ಹಾಗೆ, ನಂಜು ಆಗದ ಹಾಗೆ ಆಂಟಿಬಯಾಟಿಕ್ ಹಾಗೂ ಬೇರೆಬೇರೆ ಔಷಧಗಳು. ಅವಳ ಅಜ್ಜಿ ವರ್ಷವಿಡೀ ದರಕು ಹೊತ್ತರೂ ದುಡಿಯಲಾಗದಷ್ಟು ಸಾವಿರಾರು ರೂಗಳ ಬಿಲ್ ಒಂದು ರಾತ್ರಿ ಕಳೆದು ಬೆಳಗಾಗುವುದರಲ್ಲಿ ಆಯಿತು! ಬಿಲ್ ಬಂತೋ ಇಲ್ಲವೋ, ತಾಯ್ತಂದೆಯರಿಲ್ಲದ ಹುಡುಗಿಯ ಜೀವ ಉಳಿಸಿದ ತೃಪ್ತಿ…. ಅಂತೂ ಅಂದು ಆ ವಿಪತ್ತಿನಿಂದ ಪಾರಾದ ಅವಳೀಗ ಮಂಡಲ ಕೇಂದ್ರ ಗ್ರಂಥಾಲಯದಲ್ಲಿ ಕೆಲಸ ಮಾಡುತ್ತಾ ನೆಮ್ಮದಿಯಾಗಿ ಅಜ್ಜಿಯ ಜೊತೆಗಿದ್ದಾಳೆ.
******
ಹಾವು ಎಂಬ ಪದವೇ ಬಹಳ ಜನರಲ್ಲಿ ಭಯ ಹುಟ್ಟಿಸುತ್ತದೆ. ಕೈಕಾಲು, ಕಿವಿ, ಕಿವಿತಮಟೆ, ಕಣ್ಣರೆಪ್ಪೆ ಇಲ್ಲದ, ವರ್ಷಕ್ಕೆ ಎರಡು ಮೂರು ಬಾರಿ ಗುಪ್ತಜಾಗಕ್ಕೆ ಹೋಗಿ ಪೊರೆ ಕಳಚುವ ಹಾವಿನ ವಿಲಕ್ಷಣ ಗುಣಗಳು; ವಿಷದ ಹಾವಿನ ಕಡಿತಕ್ಕೆ ಬಂದೆರಗುವ ತತ್‌ಕ್ಷಣದ ಸಾವು; ಸಾವು ತರುವುದರಿಂದಲೇ ಹುಟ್ಟಿಕೊಂಡಿರಬಹುದಾದ ಹಾವಿನ ಮೇಲಿನ ಭಕ್ತಿ, ಸೇಡಿನ ಕತೆಗಳು, ಶಕ್ತಿಯ ಬಗೆಗಿನ ಪುರಾಣಕತೆಗಳು- ಇವೆಲ್ಲ ಸೇರಿ ಹಾವು ಬಹುಪಾಲು ಜನರಿಗೆ ಬರೀ ಪ್ರಾಣಿಯಾಗಿ ಕಾಣದೇ ಅಲೌಕಿಕ ಭಯಹುಟ್ಟಿಸುವ ದೇವರಾಗಿ ತೋರುತ್ತದೆ. ರೆಪ್ಪೆಯಿಲ್ಲದ್ದಕ್ಕೆ ಹಾವು ಬಿರುನೋಟವುಳ್ಳ ಕಣ್ಣು ಹೊಂದಿರುವ ಶೀಘ್ರಕೋಪಿಯಾಗಿ ಕಾಣುತ್ತದೆ. ಕಿವುಡು ಹಾವು ಪುಂಗಿಯ ಚಲನೆಗೆ ಅನುಗುಣವಾಗಿ ಹೆಡೆಯಾಡಿಸುವುದನ್ನು ನರ್ತನವೆಂದು ಭಾವಿಸುತ್ತೇವೆ. ಹಾವು ಕಚ್ಚಿದವರಿಗೆಲ್ಲ ವಿಷವೇರುವುದಿಲ್ಲ, ಹಾವು ಕಚ್ಚಿದವರಿಗೆಲ್ಲ ಸಾವು ಬರುವುದಿಲ್ಲ. ಆದರೆ ಹಾವಿನ ಬಗೆಗಿನ ತಿಳುವಳಿಕೆಗಿಂತ ಭಯಭೀತಿಯೇ ಹೆಚ್ಚಿರುವ ನಮಗೆ, ಹಾವು ಕಚ್ಚಿತೆಂದರೆ ವಿಷದಿಂದ ಆಗುವ ಆಘಾತಕ್ಕಿಂತ ಹತ್ತುಪಟ್ಟು ಭಯದ ಆಘಾತವಾಗುತ್ತದೆ.
ಶಕ್ತಿ, ಯುಕ್ತಿ ಎರಡೂ ಅಷ್ಟಿಲ್ಲದ ಹಾವು ತನ್ನ ಅಸ್ತಿತ್ವಕ್ಕಾಗಿನ ಹೋರಾಟದಲ್ಲಿ ಎದುರಾಳಿಯೆದುರು ರಾಸಾಯನಿಕ ಸಮರ ನಡೆಸಲು ವಿಷವನ್ನು ಸ್ರವಿಸುತ್ತದೆ. ಇದಕ್ಕಾಗಿ ವಿಶೇಷ ಗ್ರಂಥಿಗಳನ್ನೂ ಹೊಂದಿದೆ. ಸಾಧಾರಣವಾಗಿ ವಿಷಗ್ರಂಥಿಗಳಿರುವ ಜೀವಿಗಳು ಕ್ರೂರವಾಗಿ ವರ್ತಿಸುವುದಿಲ್ಲ. ದ್ವೇಷ-ರೋಷದ ಕತೆಗಳೆಲ್ಲ ಕಟ್ಟುಕತೆಗಳೆನ್ನದೇ ವಿಧಿಯಿಲ್ಲ. ಅವು ತಮ್ಮ ಆತ್ಮರಕ್ಷಣೆಗಾಗಿ ಹಾಗೂ ಕೆಲವುಬಾರಿ ಆಹಾರಕ್ಕಾಗಿ ಮಾತ್ರ ವಿಷವನ್ನು ಬಳಸುತ್ತವೆ.
ಮಳೆಗಾಲದಲ್ಲಿ ಕೃಷಿ ಸಂಬಂಧಿ ಕೆಲಸ ಮಾಡುತ್ತಾ ಹಾವಿನ ಕಡಿತಕ್ಕೆ ಒಳಗಾಗಿ ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚು. ಬಹುಪಾಲು ಹಳ್ಳಿಯ ಜನ ಏನೇ ಕಚ್ಚಲಿ, ಸಾಧ್ಯವಾದಷ್ಟೂ ಕಚ್ಚಿದ ಪ್ರಾಣಿಯನ್ನು ಹುಡುಕಿ ಕೊಂದು, ಒಂದು ಪ್ಲಾಸ್ಟಿಕ್ ಚೀಲಕ್ಕೆ ಹಾಕಿ ತರುವುದರಿಂದ ತರಹೇವಾರಿ ಹಾವುಹರಣೆಗಳು, ಜೇಡಗಳು, ಹುಳುಕೀಟಗಳನ್ನು ನೋಡಲು ನಮಗೆ ಸಾಧ್ಯವಾಗಿದೆ. ಆದರೆ ನಾಗರ ಹಾವು ಕಚ್ಚಿದರೆ ಹೊಡೆಯುವ ಮಾತು ಹಾಗಿರಲಿ, ಅದರ ಹೆಸರನ್ನು ಗಟ್ಟಿಯಾಗಿ ಬಾಯಲ್ಲಿ ಹೇಳುವುದೂ ಇಲ್ಲ! ಅದಕ್ಕೆ ಹಿರೇಹಾವು ಎಂಬ ಹೆಸರು. ಅದು ಕಣ್ಣಿಗೆ ಕಂಡರೆ ಸಾಕು, ಮರೆತ ಪೂಜೆ ನೆನಪು ಮಾಡಲೇ ಕಾಣಿಸಿಕೊಂಡಿದೆ ಎಂದು ಭಾವಿಸಿ, ಸುಬ್ರಹ್ಮಣ್ಯ ದೇವರಿಗೆ ಒಂದು ಹರಕೆ ಹೊತ್ತು ಬಾಳೆಗೊನೆ ಕೊಟ್ಟು, ಕಾಪಾಡಪ್ಪಾ ಅಂತ ಅಡ್ಡಬಿದ್ದು, ಭಯಭಕ್ತಿ ಪ್ರದರ್ಶಿಸುತ್ತಾರೆ. ಪ್ರತಿ ಮನೆಯಲ್ಲೂ ಒಬ್ಬನಾದರೂ ಹಿರೇಹಾವಿನ ಹೆಸರು ಹೊತ್ತವ ಇರಲೇಬೇಕು. ಅಪರೂಪಕ್ಕೆ ಎಲ್ಲಾದರೂ ಸತ್ತುಬಿದ್ದ ನಾಗರ ಹಾವು ಕಂಡರಂತೂ ನಾಮುಂದು ತಾಮುಂದು ಎಂದು ಓಡಿಹೋಗಿ ತಂದು, ಶಾಸ್ತ್ರೋಕ್ತ ಶವಸಂಸ್ಕಾರ ಮಾಡುತ್ತಾರೆ. ಹಾವಿಗಿರುವ ಭಾಗ್ಯ ಎಷ್ಟೋ ಮನುಷ್ಯರಿಗಿಲ್ಲದಿರುವ ಕಾಲದಲ್ಲಿ, ಮಣ್ಣಿನಲ್ಲಿ ಹಾವಿನ ಮೂರ್ತಿ ಮಾಡಿ, ಶವಸಂಸ್ಕಾರ ಮಾಡಿ, ಪುತ್ರಸಂತಾನಕ್ಕಾಗಿ ಪ್ರಾರ್ಥಿಸುತ್ತಾರೆ.
ನಮ್ಮ ದೇಶದಲ್ಲಿ ಕೇವಲ ನಾಲ್ಕು ಜಾತಿಯ ಹಾವುಗಳು ಮಾತ್ರ ವಿಷಪೂರಿತವಾದವು. ಅವೇ – ನಾಗರ ಜಾತಿಯ ಹಾವುಗಳು (ನಾಗರ ಹಾವು ಹಾಗೂ ಕಾಳಿಂಗ ಸರ್ಪ), ಹಾಗೂ ಮಂಡಲ ಜಾತಿಯ ಹಾವುಗಳು (ವೈಪರ್ ಹಾಗೂ ಕ್ರೇಟ್-ಧೂಳು ಹಪ್ಪಡಿ, ಕಂಚಪ್ಪಡಿ, ಬಳಗಂಡ, ಕೊಳಕು ಮಂಡಲ ಇತ್ಯಾದಿ). ಉಳಿದ ಕೇರೆಹಾವು, ಹಸಿರುಹಾವು, ಎಲೆಹಾವು, ಕುಂಕುಮ ಹಾವು, ಹೆಬ್ಬಾವು, ಕುದ್ರಬಾಳ ಮತ್ತಿತರೆ ಹಾವುಗಳು ವಿಷಕಾರಕವಲ್ಲ. ಕೆಲವು ಹಾವುಗಳ ಮೇಲೆ ವಿಷಯುಕ್ತ ಗುಣವನ್ನು ಆರೋಪಿಸಲಾಗಿದೆ. ಮತ್ತೆ ಕೆಲವು ಹಾವುಗಳನ್ನು ಅವು ಕೋಳಿ ಹಿಡಿಯುತ್ತವೆಂದೋ, ಬೆಳೆಗಳ ಮೇಲೆ ವಿಷ ಉಗಿಯುತ್ತವೆಂದೋ ಆರೋಪಿಸಿ ಕೊಲ್ಲಲಾಗುತ್ತದೆ. ಹಾವನ್ನು ಕೊಂದರೆ ಸಾವನ್ನೇ ಕೊಂದು ಅಟ್ಟಿದ ತೃಪ್ತಿ ಕೆಲವರಿಗೆ!
ವಿಷದ ಹಾವಿಗೆ ದೇಹದ ಕೆಳಭಾಗದಲ್ಲಿ ದೊಡ್ಡ ಹುರುಪೆಗಳಿದ್ದು ಎರಡೇ ವಿಷದ ಹಲ್ಲುಗಳಿರುತ್ತವೆ. ಹಾವು ಕಚ್ಚಿದಾಗ ವಿಷವು ಸೆಕೆಂಡಿಗೆ ಮೂರು ಮೀಟರ್ ವೇಗದಲ್ಲಿ ಹರಡಬಲ್ಲದು. ಕಡಲ ಹಾವುಗಳು ಬಹುತೇಕ ವಿಷಕಾರಕ ಹಾಗೂ ನೆಲದ ಹಾವುಗಳಿಗಿಂತ ತೀಕ್ಷ್ಣ ವಿಷ ಹೊಂದಿರುತ್ತವೆ. ನೆಲದ ಜಾತಿಯ ಹಾವುಗಳಲ್ಲಿ ನಾಗರಜಾತಿಯ ವಿಷ ಪ್ರಬಲವಾಗಿದ್ದು ಕೂಡಲೇ ಪರಿಣಾಮ ತೋರಿಸುತ್ತದೆ. ಅದು ನರಮಂಡಲ ಹಾಗೂ ಮಾಂಸಖಂಡಗಳ ಮೇಲೆ ಪರಿಣಾಮ ಬೀರಿ ನಿಶ್ಚೇಷ್ಟಿತಗೊಳಿಸುತ್ತದೆ. ಮಾತು ತಡವರಿಸುತ್ತಾ, ಕೈಕಾಲು ಶಕ್ತಿಹೀನವಾಗಿ, ತಲೆ ಒಂದು ಬದಿಗೆ ಜೋತುಬೀಳುವುದು. ವಾಕರಿಕೆಯಾಗಿ ವಾಂತಿಯಾಗುವುದು. ಉಸಿರಾಟ ಕಷ್ಟವಾಗುವುದು ಆಗುತ್ತಾ ಬಂದು ಕೊನೆಗೆ ನಿಂತೇ ಹೋಗುತ್ತದೆ.
ಮಂಡಲ ಹಾವುಗಳದ್ದು ಅದಕ್ಕಿಂತ ನಿಧಾನವಿಷ ಎನ್ನಬಹುದು. ಕೆಲವು ಬಾರಿ ಇಪ್ಪತ್ನಾಲ್ಕು ಗಂಟೆಗಳ ತರುವಾಯ ಅದರ ವಿಷ ಪರಿಣಾಮ ತೋರುತ್ತದೆ. ರಕ್ತದ ಹೆಪ್ಪುಗಟ್ಟುವ ಸಾಮರ್ಥ್ಯ ಕುಗ್ಗಿಸುವುದು ಈ ವಿಷದ ಗುಣ. ಕಚ್ಚಿದ ಜಾಗ ವಿಪರೀತ ಬಾತು ತೀವ್ರ ನೋವುಂಟುಮಾಡುತ್ತದೆ. ವಿಷ ಹೆಚ್ಚು ಪ್ರಮಾಣದಲ್ಲಿ ದೇಹದ ಒಳಸೇರಿದ್ದರೆ ಕಚ್ಚಿದ ಗಾಯದಿಂದ, ಒಸಡಿನಿಂದ, ಹಳೆಯ ಗಾಯಗಳಿಂದ, ಮೂತ್ರದಲ್ಲಿ, ಗಂಟಲಿನಿಂದ ರಕ್ತ ಒಸರಲು ಶುರುವಾಗುತ್ತದೆ. ಕೆಲವು ಬಾರಿ ಇಂಜೆಕ್ಷನ್ ಚುಚ್ಚಿದ ಜಾಗದಿಂದಲೂ ರಕ್ತ ಒಸರಲು ಶುರುವಾಗುತ್ತದೆ. ಕಣ್ಣು ಮಂಜಾಗುತ್ತಾ ರೋಗಿ ಬಿಳಿಚಿಕೊಳ್ಳುತ್ತಾ ಹೋಗುತ್ತಾನೆ. ಸರಿಯಾದ ಚಿಕಿತ್ಸೆ ಲಭಿಸದೇ ಹೋದರೆ ಬಹುಅಂಗಾಂಗಗಳ -ಅದರಲ್ಲೂ ಕಿಡ್ನಿಯ- ವೈಫಲ್ಯಕ್ಕೊಳಗಾಗಿ ಸಾವನ್ನಪ್ಪುತ್ತಾನೆ. ಕೆಲವು ಬಾರಿ ಇಷ್ಟು ತೀವ್ರತೆಯಿಲ್ಲದೇ ಹೋದರೂ ವಿಷವು ಕಚ್ಚಿದ ಜಾಗದಲ್ಲಿ ಹಾಗೇ ಉಳಿದು ವಾರಗಳ ನಂತರ ಆ ಭಾಗ ಕೊಳೆಯಲು ಶುರುವಾಗಬಹುದು. ಕೊಳೆತ ಭಾಗವನ್ನು ಕತ್ತರಿಸುವುದು ಅನಿವಾರ್ಯವಾಗಲೂಬಹುದು.
ವೈದ್ಯಕೀಯವಾಗಿ ಹಾವು ಕಚ್ಚಿದವರಿಗೆ ಎಎಸ್‌ವಿ (ಆಂಟಿ ಸ್ನೇಕ್ ವೆನಮ್) ಇಂಜೆಕ್ಷನ್ ನೀಡಲಾಗುತ್ತದೆ. ನಮ್ಮಲ್ಲಿ ಹಾವುಕಡಿತಕ್ಕೆ ಕಾರಣವಾಗಿರುವ ಕೆಲಜಾತಿ ಹಾವುಗಳ ವಿಷವನ್ನು ಹೊರತೆಗೆದು ಅದನ್ನು ಕುದುರೆಗೆ ಸ್ವಲ್ಪಸ್ವಲ್ಪವೇ ಚುಚ್ಚುಮದ್ದಿನ ರೂಪದಲ್ಲಿ ನೀಡಲಾಗುತ್ತದೆ. ಕುದುರೆಯು ಸಾಯಬಾರದಷ್ಟು ಕಡಿಮೆ, ಆದರೆ ಆಂಟಿಬಾಡಿ ತಯಾರಿಸಲು ಅಗತ್ಯವಾದಷ್ಟು ಪ್ರಮಾಣದಲ್ಲಿ ವಿಷವನ್ನು ನೀಡಲಾಗಿರುತ್ತದೆ. ಕುದುರೆಯ ರಕ್ತದಲ್ಲಿ ಹಾವಿನ ವಿಷವೆಂಬ ಆಂಟಿಜೆನ್‌ಗಳಿಗೆ ಪ್ರತಿಯಾಗಿ ಆಂಟಿಬಾಡಿ(ನಿರೋಧಕ ಕಣ)ಗಳು ಉತ್ಪತ್ತಿಯಾಗುತ್ತದೆ. ನಂತರ ಕುದುರೆಯ ರಕ್ತ ತೆಗೆದು, ಅದರಲ್ಲಿರುವ ಬೇರೆಯ ಅಂಶಗಳನ್ನೆಲ್ಲ (ಕೆಂಪುರಕ್ತಕಣ, ಬಿಳಿಯರಕ್ತಕಣ, ಪ್ಲೇಟ್‌ಲೆಟ್ ಇತ್ಯಾದಿ) ಬೇರ್ಪಡಿಸಿ, ಉಳಿದ ದ್ರವವನ್ನು ಶುಚಿಗೊಳಿಸಿ, ಘನೀಕರಿಸಿ, ಪೌಡರ್ ರೂಪದಲ್ಲಿ ಇಡಲಾಗುತ್ತದೆ. ಹೀಗೆ ತುಂಬಿಡಲಾದ ಘನೀಕರಿಸಿದ ಪೌಡರನ್ನು ದ್ರವವನ್ನಾಗಿಸಿ ಇಂಜೆಕ್ಷನ್ ರೂಪದಲ್ಲಿ ಅಗತ್ಯವಿದ್ದವರಿಗೆ ನೀಡಲಾಗುತ್ತದೆ. ಒಂದು ಎಎಸ್‌ವಿ ತಯಾರಾಗಲು ಕುದುರೆ ಎಷ್ಟು ರಕ್ತದಾನ ಮಾಡಬೇಕೋ! ಹೀಗೇ ರಕ್ತ ಕೊಟ್ಟುಕೊಟ್ಟೇ ಕೊನೆಗೆ ಕುದುರೆ ಪ್ರಾಣವನ್ನೂ ಕೊಡುತ್ತದೆ.
ಪ್ರಾಣಿದಯಾ ಸಂಘದವರು ಇದರ ಬಗ್ಗೆ ತಕರಾರೆತ್ತಿ ಕೋರ್ಟಿನಲ್ಲಿ ಮೊಕದ್ದಮೆ ಹಾಕಿದ್ದರ ಕಾರಣ, ಹಲವು ದಿನ ಎಎಸ್‌ವಿಯ ಪೂರೈಕೆ ನಿಂತು ಅದು ಬಹು ತುಟ್ಟಿಯಾಗಿತ್ತು. ಬೇರೆಬೇರೆ ವಿಧಾನದಲ್ಲಿ (ಬಯೋಟೆಕ್ನಾಲಜಿ) ಎಎಸ್‌ವಿ ತಯಾರಾಗುತ್ತಿರುವ ಈ ಕಾಲದಲ್ಲೂ ಅದರ ಬೆಲೆ ಏನೂ ಕಮ್ಮಿಯಾಗಿಲ್ಲ. ಒಂದು ಇಂಜೆಕ್ಷನ್ ವಯಲಿಗೆ ರೂ.೫೫೦ರ ಮೇಲೆಯೇ! ಸರಕಾರೀ ಆಸ್ಪತ್ರೆಗಳಲ್ಲಿಯೂ ಇತ್ತೀಚೆಗೆ ಈ ಇಂಜೆಕ್ಷನ್ ದಾಸ್ತಾನು ಉತ್ತಮವಾಗಿದೆಯೆಂಬುದೇ ಸಮಾಧಾನದ ಸಂಗತಿ.
ನೆನಪಿಡಿ:
೧. ಹಾವು ಕಚ್ಚಿತೆಂದು ಗಾಬರಿಯಾಗಬೇಡಿ ಎಷ್ಟೋ ಬಾರಿ ಗಾಬರಿಯಿಂದಲೇ ರೋಗಿ ಸಾವನ್ನಪ್ಪಿರುತ್ತಾನೆ! ಆತಂಕವು ವಿಷ ಹರಡಲು ಸಹಾಯ ಮಾಡುತ್ತದೆ. ಹಾವು ಕಚ್ಚಿತೆನ್ನುವುದೇನೂ ಸಂಭ್ರಮಾಚರಣೆಯ ವಿಷಯವಲ್ಲ ಹೌದು, ಆದರೂ ಕಳವಳಗೊಳ್ಳದೇ ಮುಂದೇನು ಮಾಡಬೇಕೆಂಬ ಬಗ್ಗೆ ಕ್ಷಿಪ್ರವಾಗಿ ಚಿಂತಿಸಿ.
೨. ಕಚ್ಚಿದ ಭಾಗವನ್ನು ಅಲ್ಲಾಡದ ಹಾಗೆ ಇಟ್ಟುಕೊಳ್ಳಿ. ಕಾಲಿಗೆ ಕಚ್ಚಿದ್ದರೆ ವೇಗವಾಗಿ ಓಡುವುದು ಅಥವಾ ಜಾಸ್ತಿ ನಡೆಯುವುದು ಬೇಡ.
೩. ಕಚ್ಚಿದ ಭಾಗವನ್ನು ಕೊಯ್ದು ಮತ್ತೂ ದೊಡ್ಡ ಮಾಡುವುದು, ರಕ್ತ ಹೀರುವುದು, ತೀರ ಬಲವಾಗಿ ಕಟ್ಟು ಹಾಕುವುದು, ಐಸ್ ಇಡುವುದು – ಇದ್ಯಾವುದೂ ಮಾಡದಿರಿ. ಪ್ರಥಮ ಚಿಕಿತ್ಸೆ ಕೆಲಬಾರಿ ಅವಿವೇಕದ ಕ್ರಿಯೆಯಾಗಿ ಆತ್ಮಹತ್ಯಾತ್ಮಕವಾಗಿ ಮಾರ್ಪಡುತ್ತದೆ.
೪. ಕೂಡಲೇ ಸಮೀಪವಿರುವ ವೈದ್ಯರನ್ನು ಸಂಪರ್ಕಿಸಿ.
ಉತ್ತರಕನ್ನಡ ಜಿಲ್ಲೆ ಹೊನ್ನಾವರದ ಬಳಿಯ ಕವಲಕ್ಕಿಯಲ್ಲಿ ವೈದ್ಯರಾಗಿದ್ಡಾರೆ. ಕವಿತೆ. ವೈಚಾರಿಕ ಚಿಂತನೆ ಮತ್ತು ವೈದ್ಯಕೀಯ ಬರಹಗಳು ಇವರ ವಿಶೇಷ.