ಕವಿತೆ ಬರೆಯೋದು ಬಹಳ ಸುಲಭ ಅಂತ ಬಹಳಷ್ಟು ಕವಿಗಳು ನಂಬಿಕೊಂಡಂತಿದೆ. ಹಾಗಾಗಿಯೇ ಅವರು ಯಾವ ವಿಷಯ, ವಸ್ತು, ಘಟನೆ, ಕಂಡ ತಕ್ಷಣಕ್ಕೆ ಕಂಡಂತೆಯೇ ಅದನ್ನು ಕವಿತೆಯ ರೂಪಕ್ಕಿಳಿಸಿ ಸಂತೋಷ ಪಡುತ್ತಾರೆ. ಹಾಗೆ ಸಂತೋಷ ಪಡುವುದನ್ನು ನಾನೆಂದೂ ತಪ್ಪೆಂದು ಭಾವಿಸಿಲ್ಲ. ಆದರೆ ಹಾಗೆ ಬರೆದ ಕವಿತೆಗಳನ್ನು ಕವಿತೆ ಅಂತ ಭ್ರಮಿಸುವುದು ಮತ್ತು ಅದನ್ನು ಪ್ರಕಟಿಸಿ ಕಾವ್ಯಕ್ಕೆ ತಾನು ಅಮೂಲ್ಯ ಕೊಡುಗೆ ಕೊಟ್ಟಿರುವೆ ಎಂದು ತನ್ನ ಬಗ್ಗೆ ತಾನೇ ಹೆಮ್ಮೆ ಪಟ್ಟುಕೊಳ್ಳುತ್ತಾ ಅದನ್ನೆ ಮತ್ತೆ ಬರೆಬರೆದು ತನ್ನ ಸಂತೋಷಕ್ಕೆ ಓದುಗರನ್ನಾ ಕಾವ್ಯದಿಂದಲೇ ವಿಮುಖರಾಗುವಷ್ಟು ಮಟ್ಟಿಗೆ ಗುರಿಪಡಿಸುವುದು ಸರಿಯಲ್ಲವಷ್ಟೇ.
ಕೃಷ್ಣ ದೇವಾಂಗಮಠ ಅಂಕಣ

 

ಹಿಂದಿನಂತೆಯೇ, ಸದ್ಯ ಕವಿತೆ ಬರೆಯುವ ಎಲ್ಲರೂ ಮತ್ತೆ ಮತ್ತೆ ಮುಖಾಮುಖಿಯಾಗುವ ಸದ್ದುಗಳಲ್ಲಿ ಇದು ಮುಖ್ಯವಾದುದು ಮತ್ತು ಅಷ್ಟೇ ನಿಶ್ಯಕ್ತ ಹೇಳಿಕೆ ಕೂಡಾ ಹೌದು. ಕವಿತಾ ಸಂಕಲನಗಳಿಗಿದು ಕಾಲವಲ್ಲಾ ಅನ್ನುತ್ತಲೇ ಎಂದೂ ಇಲ್ಲದಷ್ಟು ಸಂಕಲನಗಳು ಪ್ರಕಟಗೊಳ್ಳುತ್ತಲೇ ಇವೆ. ಒಂದು ಸಶಕ್ತ ಪದ್ಯವು ಕವಿ – ಓದುಗ – ವಿಮರ್ಶಕ ಈ ಮೂವರನ್ನೂ ನೇರವಾಗಿ ಪ್ರಭಾವಿಸುತ್ತದೆ. ಇದಕ್ಕೆ ಕಾರಣ ಕವಿತೆಯು ಶ್ರೇಷ್ಠವಾದ ಭಾಷೆಯ ಉತ್ಕೃಷ್ಟ ರೂಪ ಅನ್ನುವುದು. ಯಾವ ಗಂಭೀರ ಓದುಗನನ್ನು ಕೇಳಿದರೂ ಆತ ಕವಿತೆಯ ಬಗ್ಗೆ ತನಗಿರುವ ಅತೀವ ಪ್ರೀತಿಯನ್ನೇ ಮೊದಲಾಗಿ ಹೇಳುತ್ತಾನೆ. ಪ್ರಾಮಾಣಿಕ ಓದುಗನೇ ವಿಮರ್ಶಕ ಅನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.

ಇನ್ನು ಕವಿ ಸದಾ ಅದರ ರಿಂಗಣದಲ್ಲೇ ಜಗತ್ತನ್ನು, ತನ್ನನ್ನು ಎಚ್ಚರದ ಸ್ಥಿತಿಯಲ್ಲಿ ಧ್ಯೇನಿಸುತ್ತಲೇ ಇರುತ್ತಾನೆ. ಈ ಕಾಲದ ತುರ್ತು ಮಾತ್ರವೇ ಅನ್ನುವ ಮಟ್ಟಿಗೆ ಕವಿತೆಯನ್ನು ಅಟ್ಟಕ್ಕೇರಿಸಿ ಕೂರಿಸಲಾಗುತ್ತಿರುವ ಈ ದಿನಮಾನಗಳಲ್ಲಿ ಕವಿತೆ ಎಲ್ಲ ಕಾಲದ ತುರ್ತು ಆಗಿತ್ತು ಮತ್ತು ಅದು ಈಗ ಇರುವುದಕ್ಕಿಂತಲೂ ಸಹಜವಾಗಿತ್ತು ಎನ್ನುವುದು ಸತ್ಯ.

ಪಂಪನಿಂದ ಹಿಡಿದು ಇಂದು ಬರೆಯುತ್ತಿರುವವರವರೆಗೂ ಭಾಷೆ ಅರ್ಥವಾಗದು ಅನ್ನುವ ದೊಡ್ಡ ಭ್ರಮೆಯೊಂದನ್ನು ಎಲ್ಲರೊಳಗೂ ಬಿತ್ತಲಾಗಿದೆ. ಪಂಪನ ಕುರಿತು ಕೇಳಿದರೆ, ಹಳೆಗನ್ನಡ ಅರ್ಥವಾಗದು ಅನ್ನುತ್ತಾರೆ. ಈಗೀಗ ಬರೆಯುವ ಗಟ್ಟಿ ಕಾವ್ಯದ ಕುರಿತಾದರೆ ರೂಪಕದ ಭಾಷೆ ಬಿಡಿಸೋದೆ ಕಷ್ಟ ಅಂತಾರೆ. ನಾಲಿಗೆಯ ರುಚಿಗಾಗಿ ಮೀನಿನ ಮುಳ್ಳು ಚುಚ್ಚಿಸಿಕೊಳ್ಳಲು ತಯಾರಿರುವ ನಾವು, ಜನಪದದ ಒಗಟುಗಳನ್ನಾ ಬಿಡಿಸಿ ಭಾಷೆಯ ವಿರಾಟ ರೂಪವನ್ನು ದಕ್ಕಿಸಿಕೊಂಡ ನಾವು, ಅರ್ಥವಾಗದಿರುವುದಕ್ಕೆ ತಲೆ ಕೊಟ್ಟು ಅರ್ಥದ ದಾಸ್ಯಕ್ಕೆ ಬೀಳುವ ನಾವು, ಅದು ಅರ್ಥವಾಗದು ಇದು ಅರ್ಥವಾಗದು ಎಂಬ ಅರ್ಥವಿಲ್ಲದ ಮಾತುಗಳಲ್ಲೇ ಕಾವ್ಯದ ಸವಿ ಕಳೆದುಕೊಂಡು ಬಾಲ್ಯದ ಅನುಭವವೇ ಇಲ್ಲದಂತೆ ಬದುಕಿನ ಮಗ್ಗಲು ಬದಲಿಸುತ್ತಿದ್ದೇವೆ. ಸುಲಿದ ಬಾಳೆ ಹಣ್ಣು ಎಷ್ಟರವರೆಗೆ ಸುಖ ಕೊಡಬಲ್ಲದು. ಕದ್ದು ತಿಂದ ಹಣ್ಣಿನ ಮಜ ಹಾಗೆ ನಮ್ಮಲ್ಲಿ ಉಳಿದುಹೋಗುತ್ತದೆ. ಪುಸ್ತಕ ಕೊಂಡು ಓದಲಾಗದವರು ಕದ್ದು ಓದಿ ಅಂತ ನಮ್ಮ ಹಿರಿತಲೆಮಾರು ಕದಿಯಲು ಪ್ರೇರೆಪಿಸಿಲ್ಲ. ಅದರ ಜಾಡಿಗೆ ಬಿದ್ದು ಸಿಕ್ಕಿಕೊಂಡು ಒದ್ದಾಡಿ, ದಣಿದು ವಿಶ್ರಾಂತವಾಗುವ ನಿಜದ ಸುಖದ ಕುರಿತೇ ಹಾಗೇ ಹೇಳಿರುವುದು.

ಒಂದು ದಿನದ ಹಬ್ಬಕ್ಕಾಗಿ ವಾರದ ಮುಂಚೆಯೇ ಆಫೀಸ್ ರಜೆ ಪಡೆವುದು, ಹೊಸ ಬಟ್ಟೆ ಕೊಳ್ಳುವುದು, ಹಾಗೆ ಕೊಂಡ ಬಟ್ಟೆಗೆ ಇಸ್ತ್ರೀ ಮಾಡಿಸೋದು, ಮನೆಗೆ ಬಣ್ಣ, ಹಾಗೆ ಹೊಳೆವ ಮನೆಗೆ ಸಂಬಂಧಿಕರ ಬರುವಿಕೆಯ ಖಾತರಿ ಹೀಗೆ ಎಷ್ಟೆಲ್ಲಾ ಸಿದ್ಧರಾಗುವ ನಾವೆಲ್ಲರೂ ಪ್ರಾಮಾಣಿಕವಾಗಿ ಹಳೆಗನ್ನಡವನ್ನೋ, ನವ್ಯ ಕಾವ್ಯವನ್ನೋ ಸಿದ್ಧತೆಗಳೊಂದಿಗೆ ಓದಿರುವುದಿದೆಯಾ ನಾನಂತು ಹೀಗೆ ಪ್ರಶ್ನಿಸಿಕೊಳ್ಳುತ್ತಲೇ ಇರುತ್ತೇನೆ. ಕಾವ್ಯವನ್ನು ಬದುಕಬೇಕು ಅನ್ನುವ ನೀವೆ ಹೀಗೆ ಹೇಳುತ್ತೀರಲ್ಲಾ ಅಂತನ್ನುವುದಾದರೆ ಒಂದೇ ದಿನ ಬಂದು ಹೋಗುವ ಅತಿಥಿಗಳ ಜೊತೆ ಏನೇನು ಮಾತನಾಡಬೇಕು ಅನ್ನುವ ಮೂಲ ಸಿದ್ಧತೆಯೇ ನಮ್ಮಲ್ಲಿ ಇರುವುದಿಲ್ಲ. ಅದೂ ಅಲ್ಲದೆ ಅವರು ಬಂದದ್ದೇ ತಡ ನಾಲ್ಕೇ ನಾಲ್ಕು ಮಾತು. ಅಲ್ಲೂ ಫೋನಿನಲ್ಲೇ ಮಾತನಾಡಬಹುದಾದ ಆಫೀಸು, ಹಣಕಾಸು, ಮನೆ ಇಷ್ಟರಲ್ಲೇ ಮುಗಿದುಹೋಗುತ್ತದೆ. ಇದರ ಜೊತೆ ನಾಳೆ ಆಫೀಸಿನಲ್ಲಿ ಬಾಸ್ ಗೆ ಒಪ್ಪಿಸಬೇಕಿರುವ ವರದಿ ಕುರಿತೋ, ಬ್ಯಾಂಕಿನ ಲೋನ್ ತೀರಿಸುವ ಕುರಿತೋ ಅವರನ್ನು ಎದುರಿಗಿಟ್ಟುಕೊಂಡೇ ಯೋಚಿಸುತ್ತಿರುತ್ತೇವೆ. ಎಲ್ಲೋ ಅಪರೂಪದವರನ್ನು ಬಿಟ್ಟರೆ ನಮ್ಮೆದುರಿಗಿರುವವರ ಸ್ಥಿತಿಯೂ ಇದರ ಹೊರತಾಗೇನೂ ಇರುವುದಿಲ್ಲ ಬಿಡಿ. ನಾನು ಹೇಳಲು ಪ್ರಯತ್ನಿಸುತ್ತಿರೋದು ನಾವು ಈಗ ಏನು ಮಾಡಬೇಕು ಅನ್ನುವುದನ್ನು ಬಿಟ್ಟು ಬೇರೆಲ್ಲವನ್ನೂ ಮೈಮೇಲೆ ಎಳೆದುಕೊಂಡು ನಮಗರಿವಿಲ್ಲದಂತೇಯೇ ವಾಸ್ತವ ಬಿಟ್ಟು ಭೂತಾರಾಧಕರೋ, ಇಲ್ಲಾ ಭವಿಷ್ಯದ ಕನಸುಗಾರರೋ ಆಗಿಬಿಟ್ಟಿರುತ್ತೇವೆ.

ಬೇಂದ್ರೆ ಅವರ ಒಂದು ಮಾತಿದೆ, ಅವರು ಹೀಗೆ ಹೇಳುತ್ತಾರೆ.
“ಯಾರಿಗೆ ನೀರು ಕುಡಿದರೆ ಆನಂದ ಆಗುವುದಿಲ್ಲವೋ
ಆತನಿಗೇನು ಗೊತ್ತಾಗ್ತದೆ ಕಾವ್ಯದ ರುಚಿ “

ಸಣ್ಣ ಸಣ್ಣ ಖುಷಿಗಳನ್ನಾ ಅನುಭವಿಸಬಲ್ಲವನೇ ನಿಜದ ಸ್ವರ್ಗ ಕಾಣಬಲ್ಲ ಅಂತ. ಕಾವ್ಯದ ಆತ್ಮವನ್ನು ಆತನೂ, ಆತನನ್ನ ಆತ್ಮವೂ ಒಂದಕ್ಕೊಂದು ತಾಕಬಲ್ಲವು. ಈ ತಾಕುವಿಕೆಯೇ ಕಾವ್ಯದ ಜೊತೆಗಿನ ನಮ್ಮ ಒಡನಾಟವನ್ನು ಬೆಸೆಯುತ್ತಾ ಕೊನೆಕಾಲದವರೆಗೂ ನಮ್ಮಲ್ಲೊಂದಾಗಿ ಉಳಿದುಕೊಂಡುಬಿಡುತ್ತದೆ. ಹೀಗೆ ಉಳಿದುಹೋಗುವುದೇ ಆತ್ಮ ಪರಮಾತ್ಮ ಒಂದಾಗುವ ಬಗೆ ಇದ್ದರೂ ಇರಬಹುದು. ಪ್ರತೀ ವರ್ಷ ಪುಸ್ತಕಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗುತ್ತಲೇ ಇದೆ. ನಾವು ಗೆಳೆಯರು ಹೊಸ ಸಂಕಲನಗಳಿಂದ, ಹೆಸರೆ ಕಣ್ಮರೆಯಾದ ಕವಿಗಳ ಸಂಕಲನಗಳ ಕುರಿತೂ ಚರ್ಚಿಸುತ್ತೇವೆ. ಕವಿತೆ ಬರೆಯುವ ಎಲ್ಲರೂ ಪೂರ್ವಸೂರಿಗಳನ್ನು ಓದದಿದ್ದರೂ ತಮ್ಮ ತಲೆಮಾರನ್ನು ತಪ್ಪದೇ ಓದುತ್ತಾರೆ . ಬಹಳ ಗಂಭೀರವಾಗಿ ಅಲ್ಲದಿದ್ದರೂ ಟ್ರೆಂಡ್ ತಿಳಿಯುವ ಬಯಕೆಗಾದರೂ ಓದೇ ಓದುತ್ತಾರೆ. ಪುಸ್ತಕ ಮೇಳಗಳಲ್ಲಿ ಇಷ್ಟದ ಕವಿಯ ಸಂಕಲನ ಹುಡುಕಿಕೊಂಡು ಹೋಗಿ ಕೊಳ್ಳುತ್ತಾರೆ. ಗುಣಮಟ್ಟದ ವಿಚಾರ ಇಲ್ಲಿ ನಾನು ಚರ್ಚಿಸಲಾರೆ. ಅದು ಓದುಗರ ಆಯ್ಕೆಗೆ ಬಿಟ್ಟದ್ದು ಮತ್ತು ನಿಜದ ನೆಲೆಯಲ್ಲಿ ಅದರ ಮೌಲ್ಯಮಾಪಕರು ಅವರೇ ಆಗಿದ್ದಾರೆ.

ಕವಿತೆ ಬರೆಯೋದು ಬಹಳ ಸುಲಭ ಅಂತ ಬಹಳಷ್ಟು ಕವಿಗಳು ನಂಬಿಕೊಂಡಂತಿದೆ. ಹಾಗಾಗಿಯೇ ಅವರು ಯಾವ ವಿಷಯ, ವಸ್ತು, ಘಟನೆ, ಕಂಡ ತಕ್ಷಣಕ್ಕೆ ಕಂಡಂತೆಯೇ ಅದನ್ನು ಕವಿತೆಯ ರೂಪಕ್ಕಿಳಿಸಿ ಸಂತೋಷ ಪಡುತ್ತಾರೆ. ಹಾಗೆ ಸಂತೋಷ ಪಡುವುದನ್ನು ನಾನೆಂದೂ ತಪ್ಪೆಂದು ಭಾವಿಸಿಲ್ಲ. ಆದರೆ ಹಾಗೆ ಬರೆದ ಕವಿತೆಗಳನ್ನು ಕವಿತೆ ಅಂತ ಭ್ರಮಿಸುವುದು ಮತ್ತು ಅದನ್ನು ಪ್ರಕಟಿಸಿ ಕಾವ್ಯಕ್ಕೆ ತಾನು ಅಮೂಲ್ಯ ಕೊಡುಗೆ ಕೊಟ್ಟಿರುವೆ ಎಂದು ತನ್ನ ಬಗ್ಗೆ ತಾನೇ ಹೆಮ್ಮೆ ಪಟ್ಟುಕೊಳ್ಳುತ್ತಾ ಅದನ್ನೆ ಮತ್ತೆ ಬರೆಬರೆದು ತನ್ನ ಸಂತೋಷಕ್ಕೆ ಓದುಗರನ್ನಾ ಕಾವ್ಯದಿಂದಲೇ ವಿಮುಖರಾಗುವಷ್ಟು ಮಟ್ಟಿಗೆ ಗುರಿಪಡಿಸುವುದು ಸರಿಯಲ್ಲವಷ್ಟೇ. ಇದು ನಮಗೂ ಅರಿವಿಲ್ಲದಂತೆ ನಡೆಯುವ ಸರಪಳಿ. ಸಾಧ್ಯವಾದರೆ ಒಂದು ಕವಿತೆ ಒಬ್ಬ ಓದುಗನನ್ನೋ ಬರಹಗಾರನನ್ನೋ ಸೃಷ್ಟಿಸಬೇಕು. ಬದುಕಿಗೆ ಒಂದು ಸ್ಪೂರ್ತಿಯನ್ನಾದರೂ ಸರಿ ಇಲ್ಲವೇ ಅಪರಿಮಿತ ಆನಂದವಾದರೂ ಸರಿ ನೀಡಬೇಕು. ಒಟ್ಟಿನಲ್ಲಿ ಏನನ್ನಾದರೂ ನೀಡಬೇಕೆ ಹೊರತು ಕಿತ್ತುಕೊಳ್ಳಬಾರದು.

ಒಂದು ದಿನದ ಹಬ್ಬಕ್ಕಾಗಿ ವಾರದ ಮುಂಚೆಯೇ ಆಫೀಸ್ ರಜೆ ಪಡೆವುದು, ಹೊಸ ಬಟ್ಟೆ ಕೊಳ್ಳುವುದು, ಹಾಗೆ ಕೊಂಡ ಬಟ್ಟೆಗೆ ಇಸ್ತ್ರೀ ಮಾಡಿಸೋದು, ಮನೆಗೆ ಬಣ್ಣ, ಹಾಗೆ ಹೊಳೆವ ಮನೆಗೆ ಸಂಬಂಧಿಕರ ಬರುವಿಕೆಯ ಖಾತರಿ ಹೀಗೆ ಎಷ್ಟೆಲ್ಲಾ ಸಿದ್ಧರಾಗುವ ನಾವೆಲ್ಲರೂ ಪ್ರಾಮಾಣಿಕವಾಗಿ ಹಳೆಗನ್ನಡವನ್ನೋ, ನವ್ಯ ಕಾವ್ಯವನ್ನೋ ಸಿದ್ಧತೆಗಳೊಂದಿಗೆ ಓದಿರುವುದಿದೆಯಾ ನಾನಂತು ಹೀಗೆ ಪ್ರಶ್ನಿಸಿಕೊಳ್ಳುತ್ತಲೇ ಇರುತ್ತೇನೆ.

ಉದಾಹರಣೆಗೆ ಅವರ ಸಮಾಧಾನ, ಶಾಂತಿ ಇತ್ಯಾದಿ. ಕವಿತೆ ಬರೆಯಲು ಕಡಿಮೆ ಸಮಯ ಸಾಕು ಹಾಗಾಗಿ ಅದು ಸರಳ ಅನ್ನುವುದೇ ಬಹಳ ಜನರ ವಾದ. ಅದರ ಸಂಕೀರ್ಣತೆ ಅವರ ಗಮನಕ್ಕೆ ಬರುವುದೇ ಇಲ್ಲ. ಗದ್ಯ ಉದ್ದಗೆ, ಸಪೂರ ಬರೆಯಬೇಕಿರುವುದರಿಂದ ಅದು ಎಲ್ಲರಿಗೂ ಕಷ್ಟ ಅಂತ ಮೇಲು ನೋಟಕ್ಕೆ ಅನ್ನಿಸುತ್ತೆ. ಆದರೆ ಸರಳವೂ ಅಲ್ಲ. ಎರಡಕ್ಕೂ ಒಂದು ಹದವಾದ ಸ್ಥಿತಿ ಮತ್ತು ವಿಷಯದ ಬಗ್ಗೆ ಖಚಿತತೆ ತುಂಬಾ ಅವಶ್ಯ. ಗದ್ಯವಾದರೆ ವಿಷಯ ಸಿಕ್ಕರೆ ಅದು ತಂತಾನೇ ಬರೆಸಿಕೊಂಡು ಹೋಗುವುದು ಸಾಧ್ಯವಿದೆ. ಆದರೆ ಒಂದು ಕವಿತೆ ಒಳಗೆ ತಯಾರಾಗಲು ಬಹಳ ದಿನ ತೆಗೆದುಕೊಂಡು ಒಂದು ದಿನ ಸ್ಪೋಟವಾಗುತ್ತದೆ. ಅದರ ತೀವ್ರತೆ ಕವಿತೆಗೂ ಕವಿಗೂ ಓದುಗರಿಗೂ ತಾಗುವಷ್ಟು ಬೆಚ್ಚಗಿರಬೇಕು. ಹಾಗಿದ್ದಾಗಲೇ ಅದು ಕೆಲ ಕಾಲವಾದರೂ ಉಸಿರಾಡಲು ಸಮರ್ಥ. ಅದರ ಸಾರ್ವಕಾಲಿಕತೆ ಅದರ ಎಲ್ಲಾ ಆಯಾಮಗಳಿಂದಲೂ ಅದೇ ಗಳಿಸಿಕೊಳ್ಳುತ್ತಾ ಹೋಗುತ್ತದೆ.

ಕೆಲವು ಕಡೆ ಕವಿತೆಯ ವಿಚಾರವಾಗಿ ಕೆಲ ಮಾತುಗಳನ್ನು ಹೇಳಿದ್ದು ನೆನಪಿದೆ. ಅದನ್ನು ಎಲ್ಲರೊಂದಿಗೂ ಹಂಚಿಕೊಳ್ಳಬೇಕೆಂದೆನಿಸಿ ಹೇಳುತ್ತಿರುವೆ. ಬರೆದದ್ದೆಲ್ಲಾ ಕವಿತೆಯೇ? ಒಬ್ಬರ ಪ್ರಶ್ನೆ. ಇದಕ್ಕೆ ನೇರವಾದ ಉತ್ತರ ಆಗಿರಬಹುದು ಅಥವಾ ಆಗಿರಲಿಕ್ಕಿಲ್ಲಾ ಅಷ್ಟೇ.

ಬರೀ ವಾಚ್ಯದ ಮಾರ್ಗದಲ್ಲೇ ಬರೆದದ್ದನ್ನ ಕವಿತೆ ಅಂತ ಹೇಗೆ ಕರೆಯುವುದು ಸಾಧ್ಯ. ಇದರಿಂದಲೇ, ಇರುವ ಎಲ್ಲವೂ ಕವಿತೆಯೇ ಆಗುವುದು ಸಾಧ್ಯ. ಹಾಗಾದರೆ ಇರುವುದನ್ನು ಇದ್ದಂತೆಯೇ ಬರೆದು ಮತ್ತೆ ಅದನ್ನು ಇನ್ನಷ್ಟು ವಾಚ್ಯಕ್ಕೆ ಒಳಗಾಗಿಸುವುದು ಯಾಕೆ. ಹಾಗಂತ ಕವಿತೆಗೆ ವಾಚ್ಯವೇ ಬೇಕಿಲ್ಲ ಎಂಬುದು ನನ್ನ ಮಾತಿನ ಅರ್ಥವಲ್ಲ. ಸೂಚ್ಯವಾಗಿ ಬರೆದದ್ದು ಎಲ್ಲಿ ಇನ್ನಷ್ಟು ಸಲೀಸಾಗಿ ಅರ್ಥವಾಗಿಸಬೇಕು ಎನ್ನಿಸುತ್ತದೋ ಅಲ್ಲಿ ವಾಚ್ಯವೂ ಕಾವ್ಯವಾಗಿ ಧ್ವನಿಸುತ್ತದೆ.

ರೂಪಕ, ಸಂಕೇತ, ಪ್ರತಿಮೆಗಳಿಲ್ಲದೇ ಬರೆಯಬಹುದು ಸರಿ. ಆದರೆ ಹಾಗೆ ಬರೆದದ್ದನ್ನು ಸರಳವಾಗಿ ಕಾವ್ಯ ಅಂತ ಕರೆಯುವುದನ್ನು ನಾನು ಎಂದಿಗೂ ಒಪ್ಪುವುದಿಲ್ಲ. ಅದನ್ನು ನೀವು ಗದ್ಯ ಅಂತ ಕರೆದುಕೊಳ್ಳುವುದಾದರೆ ಯಾರೂ ಬೇಡ ಅನ್ನಲಾರರೇನೋ. ನಾವು ಗದ್ಯದಲ್ಲಿ ರೂಪಕ ಭಾಷೆಯನ್ನು ಕೆಲವು ಕಡೆ ಬಳಸುವುದರಿಂದ ಇವರು ಗದ್ಯವನ್ನೂ ಕವಿತೆಯಂತೆಯೇ ಬರೆದಿದ್ದಾರೆ ಎಂದು ಉದ್ಗಾರ ತೆಗೆಯುತ್ತೇವೆ. ಆದರೆ ಅದೇ ಪದ್ಯದಲ್ಲಿ ಬರೀಯ ಕತ್ತರಿಸಿಟ್ಟ ಗದ್ಯದ ಸಾಲುಗಳಿದ್ದರೆ ಇದು ಪದ್ಯವಾಗಿಲ್ಲ ಎಂದು ಹೇಳಲು ಯಾಕೆ ಹಿಂಜರಿಕೆ?

ಪ್ರತೀ ದಿನ ಫೇಸ್ ಬುಕ್ ವಾಟ್ಸಪ್ ಗಳಲ್ಲಿ ಸಾವಿರಾರು ಕವಿತೆಗಳು ಅಂದೇ ಹುಟ್ಟಿ ಅಂದೇ ಅಲ್ಲೇ ಕೊಳೆಯುತ್ತ ಸಾಯುವುದನ್ನು ನಾವು ಕಾಣುತ್ತೇವೆ. ಇದು ಬರಹದ ಪ್ರ್ಯಾಕ್ಟೀಸ್ ಆದರೆ ತುಂಬಾ ಸಂತೋಷ. ಈ ರೀತಿಯ ಕ್ರಿಯೆಯಿಂದಾಗಿ ಒಂದೊಳ್ಳೆ ಕವಿತೆ ಹುಟ್ಟುವುದಾದರೆ ಸರಿ. ಅಲ್ಲಿ ದಿನನಿತ್ಯ ಇಂತಹ ಸಾಲುಗಳನ್ನು ಓದುವ ನಾವು ಎಷ್ಟು ಜನ ಚೆನ್ನಾಗಿಲ್ಲ ಅಂತ ಹೇಳುವ ಮನಸ್ಸು ಮಾಡುತ್ತೇವೆ. ಅದು ಯಾವ ರೀತಿಯ ಬರಹವಾದರೂ ಸರಿ ಚೆನ್ನಾಗಿರಲಿ ಅಥವಾ ಇಲ್ಲದಿರಲಿ ನಾವು ಮಾತ್ರ ಸೂಪರ್ ಅಂತಲೇ ಪ್ರತಿಕ್ರಿಯಿಸುವುದು. ಹಾಗಾದರೆ ನಾವು ಸುಳ್ಳುಬುರುಕರೇ ಅಂದರೆ ಅಲ್ಲಾ. ನಮಗೆ ಗೆಳೆಯರನ್ನು ಶಹಬ್ಬಾಷಗಿರಿ ನೀಡಿ ಉಳಿಸಿಕೊಳ್ಳುವ ಮತ್ತು ನಮ್ಮ ಕವಿತೆಗೆ ಅವನ ಶಹಬ್ಬಾಷಗಿರಿ ಪಡೆದು ಬದುಕುವ ಮುಲಾಜಿಗೆ ನಾವು ಬಿದ್ದಿದ್ದೇವೆ. ನಮಗೆ ಸತ್ಯವನ್ನು ಅರಗಿಸಿಕೊಳ್ಳುವುದೂ ಕಷ್ಟವಾಗಿದೆ, ಹಾಗೇ ನುಡಿಯುವುದೂ ಸಹ. ಸತ್ಯ ನಮ್ಮ ಗೆಳೆತನ ಸಂಬಂಧಗಳಿಗೆ ತೊಡಕಾಗುತ್ತಿದೆಯೇ? ಗೊತ್ತಿಲ್ಲಾ.

ಕವಿತೆಗೆ ಯಾವಾಗ ಸುಳ್ಳು ನುಸುಳಲು ಪ್ರಾರಂಭಿಸುತ್ತದೋ ಕವಿತೆ ನಿಧಾನಕ್ಕೆ ಜಾಳಾಗುತ್ತಾ ಸಾಗುತ್ತದೆ. ಕೆಲವೇ ದಿನಗಳಲ್ಲಿ ಕವಿ – ಕವಿತ್ವ ಕಳೆದುಕೊಂಡು ಬಿಡುತ್ತಾನೆ. ನಂತರ ಬರೆದದ್ದು ಕವಿತೆಯ ಹಾಗಿರುವ ನಕಲಿ ಕವಿತೆ. ನಾವು ಕಾವ್ಯ ನಂಬಿದವರಾಗಿ ಕಾವ್ಯಕ್ಕೆ ಮೋಸ ಮಾಡುವುದಲ್ಲದೇ ನಮಗೆ ನಾವೇ ಮೋಸ ಮಾಡಿಕೊಳ್ಳುವುದಕ್ಕೆ ಏನಂತ ಕರೆಯಬಹುದು. ನನಗೂ ತೋಚುತ್ತಿಲ್ಲ. ಹೀಗಿರುವಾಗ ಕವಿತೆಯಿಂದ- ಕವಿತೆಗೆ, ಸಂಕಲನದಿಂದ – ಸಂಕಲನಕ್ಕೆ ಕವಿ ಬೆಳೆಯುತ್ತಾ ಹೋಗಬೇಕೆನ್ನುವ ಓದುಗರ ಆಸೆ ಹೇಗೆ ಈಡೆರಲು ಸಾಧ್ಯವಿದೆ?

ನಿಜವಾದ ಕವಿ ಕೊನೆಯವರೆಗೂ ತಾನು ಬರೆಯಬೇಕೆಂದುಕೊಂಡ ಆ ಒಂದು ಕವಿತೆಯನ್ನು ಬರೆಯದೇ ಹೋಗಿಬಿಡುತ್ತಾನೆ. ಹಾಗೆ ಪ್ರತಿ ಕವಿತೆಯೂ ಹೀಗೇ ಇರಬೇಕು ಎಂದುಕೊಂಡರೂ ಅದು ತಾನೇ ಮಗುವನ್ನು ತಾಯಿ ಬೆರಳ ತುದಿಯಿಂದ ನಡೆಸಿದಂತೆ ತನ್ನೊಟ್ಟಿಗೆ ಕರೆದುಕೊಂಡು ಹೋಗುತ್ತದೆ. ಕವಿ, ಕವಿತೆಯ ಹಿಂಬಾಲಕನೂ ಹೌದು. ಇವುಗಳ ಮಧ್ಯೆ ಕವಿಗೋಷ್ಠಿಗಳೂ ಹೆಚ್ಚಾಗಿವೆ ನಾವು ಕವಿಗಳು ಅನ್ನಿಸಿಕೊಂಡವರೂ ಹೆಚ್ಚಾಗಿದ್ದೇವೆ. ಕವಿ ಅನ್ನಿಸಿಕೊಳ್ಳಬೇಕು ಅಂದುಕೊಂಡು ಬರಹ ಮಾಡುತ್ತಿರುವವರ ಸಂಖ್ಯೆಯೂ ಏರಿಕೆಯಾಗುತ್ತಲೇ ಇದೆ. ಅಲ್ಲಿ ಎಷ್ಟು ಜನ ಕವಿತೆ ಓದುತ್ತಾರೆ ಮತ್ತು ಎಷ್ಟು ಜನ ಏನೇನೋ ಓದಿ ಹೋಗುತ್ತಾರೆ ಅನ್ನುವುದು ಬೇರೆ ವಿಷಯ. ಅಲ್ಲೇ ಕೇಳಿ ಅಲ್ಲೇ ಒಬ್ಬರು ಅಭಿಪ್ರಾಯವನ್ನೂ ದಾಖಲಿಸುತ್ತಾರೆ. ಅದೆಷ್ಟು ಸರಿಯೋ ತಪ್ಪೋ ತಿಳಿಯದಾದರೂ, ಒಂದೇ ಕೇಳುವಿಕೆಗೆ ಕವಿತೆ ದಕ್ಕಿಸಿಕೊಂಡಂತೆ ಎಲ್ಲ ಕೇಳುಗರೂ ಅಲ್ಲಿ ಹೊಗಳಿಕೆಗೆ ಒಳಪಟ್ಟ ಕವಿಯ ಹಿಂದೆ ನಿಮ್ಮ ಕವಿತೆ ಚೆನ್ನಾಗಿತ್ತು ಎನ್ನುತ್ತಲೇ ತಮ್ಮ ಕವಿತೆಗಳನ್ನ ಅವರಿಗೆ ಮತ್ತು ಅಭಿಪ್ರಾಯ ಕೊಟ್ಟವರಿಗೆ ಬೆನ್ನತ್ತಿ ಹೇಳಹೊರಡುತ್ತಾರೆ. ಕವಿ ಆಗ ಬಯಸುವವನಿಗೆ ಅದನ್ನು ರವಾನಿಸುವ ಒತ್ತಡ ಇರುತ್ತದಾದರೂ ಅದಕ್ಕೊಂದು ಕ್ರಮ ಬೇಡವೆ. ಎಲ್ಲಾ ಸರಿ ಗೋಷ್ಠಿ ಕೇಳಿದ ಒಬ್ಬರಿಬ್ಬರಾದರೂ ಒಂದು ಕವಿತೆಯನ್ನಾ ತಮ್ಮೊಳಗೆ ತೆಗೆದುಕೊಂಡು ಆ ಕುರಿತು ಒಂದಷ್ಟು ಅಸಮಾಧಾನ , ಕೆಲ ಸಾಲುಗಳ ಕುರಿತ ತನ್ಮಯತೆ, ಒಂದಷ್ಟು ಮೌನ ಹೊತ್ತು ನಡೆದರೆ ಕವಿಗೋಷ್ಠಿಗಳು ಯಶಸ್ವಿಯಾದಂತೆ ಅಂತಲೇ ನನಗೆ ಅನ್ನಿಸುತ್ತದೆ.

ಕವಿತೆಯನ್ನ ಕೇಂದ್ರವಾಗಿಟ್ಟುಕೊಂಡು ಹೇಳುವುದು ಬಹಳ ಇದೆ. ಈಗ ಹೇಳಿ ನಿರಾಳ ಆಗಬೇಕು ಅನ್ನಿಸಿದ ಕೆಲವು ಮಾತುಗಳನ್ನಷ್ಟೇ ಇಲ್ಲಿ ಹಂಚಿಕೊಂಡಿದ್ದೇನೆ. ಕಾವ್ಯ ಬರೆಯುವುದರಿಂದ ಜೊತೆಗಿದ್ದವರು ಬದಲಾಗುತ್ತಾರೋ ಬಿಡುತ್ತಾರೋ ಬರೆದ ನಾವಾದರೂ ಅಂತೆಯೇ ಬದುಕಲು ಸಾಧ್ಯವಾದರೆ ಕವಿಯಾಗಿ ಕವಿತೆಗೆ ಪ್ರಾಮಾಣಿಕವಾಗಿದ್ದಂತೆ ಆಗುತ್ತದೆ. ಕವಿ ಬರಹವನ್ನು ಗೆಲ್ಲಿಸಿ ತಾನು ಅನಾಮಿಕನಾಗಿರುವುದೇ ಹೆಚ್ಚು ಹರ್ಷ ನೀಡುವಂಥದ್ದು. ಮುಂದೆಂದೋ ಕವಿತೆಯೇ ಕವಿಯ ನಾಮಿಕತೆಯನ್ನು ಬರಹದ ಶೈಲಿ ಮಾತ್ರದಿಂದಲೇ ಎಲ್ಲರೊಳಗೂ ಒಡಮೂಡಿಸುತ್ತದೆ. ಕವಿತೆ ಕವಿಯ ಅಹಂನ ಆಚೆಗೆ ಬದುಕುವಂಥದ್ದು ಹಾಗಾಗಿಯೇ ಅದು ಎಂದಿಗೂ ಸರ್ವಸ್ವತಂತ್ರಿ.