ಸದ್ಯ ಬಹಳ ದಿನಗಳಿಂದ ನನ್ನ ಅಂತರಂಗಕ್ಕೆ ಸುರಿದುಕೊಂಡ ಕವಿತಾ ಅವರ ಕವಿತೆಗಳು ಕೊಟ್ಟ ಸಂವೇದನೆಗಳಿಗೆ ಇಲ್ಲಿ ಶಬ್ದ ರೂಪ ಕೊಡಲು ಕೂತಿದ್ದೇನೆ. ಕಳೆದ ಮೂವತ್ತು ವರ್ಷಗಳಿಂದ ಕೇವಲ ಕವಿತೆಗಳನ್ನೆ ನಚ್ಚಿಕೊಂಡು ಕೂತ ನನಗೆ ಚೆನ್ನಾಗಿ ಬರೆವ ಹೊಸಬರ ಪದ್ಯಗಳು ಅವು ಪಠ್ಯವಾಗೇ ಕಾಣಿಸುತ್ತದೆ. ಗೋಚರಿಸದ ಲೋಕವೊಂದು ನನಗೆ ನೀಡಬಹುದಾದ ಅಸೀಮ ಅನುಭವಗಳಿಗೆ ಕಾಯುತ್ತಲೇ ಓದುತ್ತೇನೆ. ಕವಿತಾ ಹೆಗಡೆ ಅವರ ಇಲ್ಲಿನ ರಚನೆಗಳು ನನಗೆ ಹೊಸ ಪಠ್ಯವಾಗೇ ಅನುಭವಕ್ಕೆ ಬಂದವು.
ಕವಿತಾ ಹೆಗಡೆ ಅಭಯಂ ಅವರ “ಮಂಜಿನ ಮನೆ ಹೊಕ್ಕ ಮನ” ಕವನ ಸಂಕಲನಕ್ಕೆ ವಾಸುದೇವ ನಾಡಿಗ್‌ ಬರೆದ ಮುನ್ನುಡಿ

‘ಅಹಂಕಾರವಿಲ್ಲ ಅಲಂಕಾರವಿಲ್ಲ ನಿಜಾಕಾರ ನನ್ನ ಕವಿತೆ
ನನ್ನಾಸೆಗಣ್ಣ ಬಂದರಿಗೆ ಬಂದ ಶರನ್ನೌಕೆ ಈ ಕವಿತೆ’
– ಕೆ ಎಸ್ ನರಸಿಂಹ ಸ್ವಾಮಿ

ಹೀಗೆ ಫೇಸ್ ಬುಕ್ ನ ಅದಾವುದೋ ಪೋಸ್ಟ್ ಮೂಲಕ ಪರಿಚಿತವಾವರು ಕವಿತಾ ಹೆಗಡೆ. ಇದು ಹೀಗೆ ಆಕಸ್ಮಿಕಗಳ ಕಡಲು. ಹೋಗಿ ಬರುವ ಅಲೆಗಳು ಅನಂತ. ಆದರೆ ಕೆಲವು ಅಲೆಗಳು ತಮ್ಮದೇ ಆದ ಬಂದರನ್ನೇ ಎದೆಯೊಳಗೆ ಸೃಷ್ಟಿ ಮಾಡಿ ಬಿಡುತ್ತವೆ. ಗುರುತೊಂದನ್ನು ಉಳಿಸಿಬಿಡುವ ಅಲೆಯ ಚಲಿತದ ತರಹ. ಕವಿತಾ ಅವರು ಹೀಗೆ ತಮ್ಮ ಕ್ರಿಯಾಶೀಲ ಮತ್ತು ನಿರಂತರ ಓದು ಬರಹದ ಮೂಲಕ ಗುರುತು ಉಳಿಸಲು ಸದಾ ಉತ್ಸುಕರಾಗೇ ಇರುತ್ತಾರೆ.

(ಕವಿತಾ ಹೆಗಡೆ ಅಭಯಂ)

ಅದು ಅವರದ್ದೇ ಆದ್ಯತೆಯ ಓದು, ಅವರದೇ ಆದ್ಯತೆಯ ಬರಹ, ವಸ್ತುವಿನ ಆಯ್ಕೆ ಅವರದ್ದೇ ಅಭಿರುಚಿಯ ಗಾಢ ಸಜ್ಜನಿಕೆಗಳ ಮೂಲಕ ಉಳಿದುಬಿಡುತ್ತವೆ. ಅವರ ಅಪಾರ ಓದಿನ ಸಾತತ್ಯವೇ ಅವರ ಬರಹದ ಮೂಲ ಸೆಲೆಯೂ ಆಗಿದೆ. ತಮ್ಮನ್ನು ತಾವು ವ್ಯಕ್ತಿತ್ವ ವಿಕಸನ ಮತ್ತು ಮನೋವಿಕಾಸದ ಶೋಧದಲ್ಲಿ ತೊಡಗಿಸಿಕೊಂಡ ಹಾಗೆ ಕಾಣುವ ಕವಿತಾ ಅವರ ಮೂಲ ಅಕ್ಕರೆ ಕವಿತೆಗಳ ಕುರಿತೇ ಅನಿಸುತ್ತದೆ. ಅವರ ಅಂಕಣ ಬರಹ ಮತ್ತು ಫೇಸ್ ಬುಕ್ಕಿನ ಟಿಪ್ಪಣಿಗಳು ಅವರನ್ನು ಗದ್ಯದಲ್ಲಿ ಕಂಡರಿಸುವಂತೆ ಕಂಡರೆ ಒಳ ಮನದಾಳದಲ್ಲಿ ಪದ್ಯದ ತೊರೆಯೊಂದು ಹರಿಯುತ್ತಲೇ ಇರುತ್ತದೆ. ತಾವು ಓದಿದ ಕೃತಿಗಳ ಕುರಿತು ಬರೆವ ಟಿಪ್ಪಣಿಗಳ ಅವರ ಭಾಷೆಯನ್ನು ಗಮನಿಸಿದಾಗ ಅವರ ಭಾಷೆಯ ಪದ್ಯತನದ ದಟ್ಟ ಛಾಯೆ ಅನುಭವಕ್ಕೆ ಬರುತ್ತದೆ.

ಸದ್ಯ ಬಹಳ ದಿನಗಳಿಂದ ನನ್ನ ಅಂತರಂಗಕ್ಕೆ ಸುರಿದುಕೊಂಡ ಕವಿತಾ ಅವರ ಕವಿತೆಗಳು ಕೊಟ್ಟ ಸಂವೇದನೆಗಳಿಗೆ ಇಲ್ಲಿ ಶಬ್ದ ರೂಪ ಕೊಡಲು ಕೂತಿದ್ದೇನೆ. ಕಳೆದ ಮೂವತ್ತು ವರ್ಷಗಳಿಂದ ಕೇವಲ ಕವಿತೆಗಳನ್ನೆ ನಚ್ಚಿಕೊಂಡು ಕೂತ ನನಗೆ ಚೆನ್ನಾಗಿ ಬರೆವ ಹೊಸಬರ ಪದ್ಯಗಳು ಅವು ಪಠ್ಯವಾಗೇ ಕಾಣಿಸುತ್ತದೆ. ಗೋಚರಿಸದ ಲೋಕವೊಂದು ನನಗೆ ನೀಡಬಹುದಾದ ಅಸೀಮ ಅನುಭವಗಳಿಗೆ ಕಾಯುತ್ತಲೇ ಓದುತ್ತೇನೆ. ಕವಿತಾ ಹೆಗಡೆ ಅವರ ಇಲ್ಲಿನ ರಚನೆಗಳು ನನಗೆ ಹೊಸ ಪಠ್ಯವಾಗೇ ಅನುಭವಕ್ಕೆ ಬಂದವು. ಈಗಾಗಲೇ ರಾಶಿಬಿದ್ದ ಕಾವ್ಯ ಲೋಕದ ಶಬ್ದರೂಪೀ ಸಂವೇದನೆಗಳ ನಡುವೆಯೇ ಇವರು ಎಲ್ಲಿ ಹೇಗೆ ಭಿನ್ನರಾಗಿ ನಿಲ್ಲಬಲ್ಲರು ಎಂಬ ಕುತೂಹಲ ನನ್ನದು.

“ಉಪ್ಪು ನೀರಲ್ಲಿ ಹಾಕಿದ
ಮಾವಿನ ಮಿಡಿ ಹೃದಯ
ಮಾಯದು ಗಾಯ
ಗಾಯವಾಗದು ಮಾಯ”
ಎಂಬ ಸಾಲುಗಳಲ್ಲಿ ಕಾಣಿಸುವ ಹೊಸತನ ಕವಿತಾ ಅವರ ಚಿಂತನಾ ಕ್ರಮದ ನಿತ್ಯ ನೂತನತೆಯನ್ನು ಹಿಡಿದು ಕೊಡಬಲ್ಲದು. ನಿಜವಾದ ಕವಿತೆಗಳಿಗೆ ಪದಗಳ ಹಂಗು ಭಾರ ಖಂಡಿತ ಬೇಡ. ಶಬ್ದಾಡಂಬರ ಇರದೆಯೂ ಅದು ಚಿಮ್ಮಿಸುವ ಅರ್ಥದ ಆಯಾಮವೇ ಮುಖ್ಯ. ಚಿರಪರಿಚಿತ ಅಡುಗೆ ಮನೆಯ ಒಂದು ಖಾದ್ಯದ ಮೂಲಕವೇ ವಿಸ್ತರಿಸಿಕೊಳ್ಳುವ ಕಾವ್ಯದ ಗುಣ ಇಲ್ಲಿ ಚರ್ಚಾರ್ಹ. ಉಪ್ಪು ನೀರಿನ ಬಂಧವು ಅದು ಮುಕ್ತಿಯ ರೂಪಕವಾಗಿಯೂ ನಿಭಾಯಿಸಬಲ್ಲದು ಎಂಬ ಹೊಸ ಮಾತು ಈ ಪದ್ಯದಲ್ಲಿ ಇದೆ.

ಹುಲಿಚರ್ಮವನ್ನು ಹಾಸಿಕೊಂಡು ಕೂತ ಸನ್ಯಾಸಿ ಕುರಿತ ಜಿಜ್ಞಾಸೆಯಂತೆ ಇಲ್ಲಿನ ಅನೇಕ ಕವಿತೆಗಳು ಮೈದಾಳಿವೆ. ಅವ ಕೂತ ಚರ್ಮದಲಿ ಜೀವ ತುಂಬಿದರೆ ಎನ್ನುವ ಪ್ರಶ್ನೆಗಳೆ ಇಡೀ ಸಂಕಲನವನ್ನು ರೂಪಿಸಿವೆ. ಕವಿಗೆ ಇದು ಅಗತ್ಯ ಕೂಡಾ. ಪ್ರಶ್ನೆಗಳನ್ನು ಕೇಳುವ ಕವಿತೆಗಳು ಯಾವತ್ತೂ ಗೆದ್ದಿವೆ.

ಕವಿತೆಗಳು ಒಣ ವಿವರಗಳ ಭಾಷಣಗಳಾಗಬಾರದೆಂಬ ಎಚ್ಚರ ಕವಿತಾ ಅವರಿಗೆ ಇದೆ. ಈ ಕಾರಣಕ್ಕೆ ಅವರು ಆಯ್ದುಕೊಳ್ಳುವ ವಸ್ತು ಮತ್ತು ಸನ್ನಿವೇಶಗಳು ಹೊಸತನದ ಹುಡುಕಾಟದ ಹಾಗೆ ಗೋಚರಿಸುತ್ತವೆ. ಮಹಾ ಸಂಗಮದಂತಹ ಕವಿತೆಗಳ ವಿಸ್ತಾರಕ್ಕೂ ಈ ಹುಡುಕಾಟವೇ ಕಾರಣವಾಗಿದೆ. ಅವಳಲ್ಲಿ ಒಂದಾಗುವ ಮತ್ತು ಅವಳೇ ತಾನಾಗುವ ಈ ಕ್ರಿಯೆಯಲ್ಲಿ ಯಃಕಶ್ಚಿತ್ ಮನುಷ್ಯನ ಇರುವಿಕೆಯನ್ನು ಪ್ರಶ್ನಿಸಲಾಗಿದೆ. ಅವಳು ಎಂಬುದು ಇಲ್ಲಿ ವ್ಯೋಮವೋ ಭೂಮವೋ ಏನೇ ಇರಲಿ, ಅದು ವ್ಯಕ್ತಿತ್ವದ ಅಹಮಿಕೆಯನ್ನು ಕೆಣಕುತ್ತದೆ ಮತ್ತು ನಿರಸನಗೊಳಿಸುತ್ತದೆ. ಈ ಕಾರಣದಿಂದಲೇ ಕವಿತಾ ಹೆಗಡೆ ಅವರು ನಿಸರ್ಗದ ಧಾತುಗಳನ್ನು ಮೂಲವಾಗಿಟ್ಟುಕೊಂಡು ಮುನ್ನಡೆಯುವುದು. ಅವು ರವಿ, ಮುಂಗಾರಮ್ಮ, ಬೆಳಗು, ಗುಪ್ತಗಾಮಿನಿ, ಮರುಭೂಮಿಯ ಮಲ್ಲಿಗೆ ಇಲ್ಲೆಲ್ಲ ವೇದ್ಯ.

“ಮಾತಿನರಮನೆಯಲಿ ಅರಗಿಣಿ ನಾನು
ಮೂಕಳಾಗಲೋ ಮಲ್ಲಿಗೆಯಾಗಲೋ

ಅತಿ ವೈರುಧ್ಯವೂ ಅನಾಕರ್ಷಕವೆ?
ಅತಿ ಸಮರ್ಪಣೆಯೂ ನಿರಾಕರಣೆಯೇ?”

ಎಂಬಿತ್ಯಾದಿ ಅನೇಕ ನಮೂದಿಸಬಹುದಾದ ಸಾಲುಗಳಲ್ಲಿ ಕವಿತಾ ಅವರ ಕಾವ್ಯ ತತ್ವ ಸ್ಪಷ್ಟ ವಾಗುತ್ತದೆ. ಅದು ತಾವು ನಂಬಿಕೊಂಡ ಜೀವನ ಮೌಲ್ಯಗಳನ್ನು ಕವಿತೆಗಳ ಮೂಲಕ ಅಭಿವ್ಯಕ್ತಿಸುವುದು ಮತ್ತು ಸಮಾಜದ ಗತಿಶೀಲತೆಯ ಬಗೆಗಿನ ಎಚ್ಚರ ಇವರ ಮೂಲ ಆಶಯ.

ನಿಜವಾದ ಕವಿತೆಗಳಿಗೆ ಪದಗಳ ಹಂಗು ಭಾರ ಖಂಡಿತ ಬೇಡ. ಶಬ್ದಾಡಂಬರ ಇರದೆಯೂ ಅದು ಚಿಮ್ಮಿಸುವ ಅರ್ಥದ ಆಯಾಮವೇ ಮುಖ್ಯ. ಚಿರಪರಿಚಿತ ಅಡುಗೆ ಮನೆಯ ಒಂದು ಖಾದ್ಯದ ಮೂಲಕವೇ ವಿಸ್ತರಿಸಿಕೊಳ್ಳುವ ಕಾವ್ಯದ ಗುಣ ಇಲ್ಲಿ ಚರ್ಚಾರ್ಹ. ಉಪ್ಪು ನೀರಿನ ಬಂಧವು ಅದು ಮುಕ್ತಿಯ ರೂಪಕವಾಗಿಯೂ ನಿಭಾಯಿಸಬಲ್ಲದು ಎಂಬ ಹೊಸ ಮಾತು ಈ ಪದ್ಯದಲ್ಲಿ ಇದೆ.

ಹಾಗಾಗಿಯೇ ಕವಿತಾ ಅವರು ಖಾಸಗಿತನ ಮತ್ತು ಲೋಕದ ಕುರಿತು ಒಟ್ಟಿಗೆ ಯೋಚಿಸುತ್ತಾರೆ. ವಸ್ತು ಅದು ವೈಯಕ್ತಿಕ ನೆಲೆಯಲ್ಲಿ ಮೂಡಿದರೂ ಅದರ ಅಭಿವ್ಯಕ್ತಿಯ ಚಲನೆ ಲೋಕದ ಕತೆಯ ಕಡೆಗೆ. ಕಟ್ಟು, ಬೆಳಕಿಲ್ಲದೂರಿನಿಂದ ಬಂದವರು, ಮತದಾನದ ದಿನ, ಕಂದೀಲು ನಾ, ಚಾಕು ಚೂರಿಯ ಸಹವಾಸ, ಮರ್ಯಾದೆ ಬಿಟ್ಟವರು, ಬುದ್ಧನಾಗಬೇಕಂತೆ ನಾ, ಧೀಶಕ್ತಿ, ನಾರಿಯೆಂದರೆ, ಮೀಸಲು ಇತ್ಯಾದಿ ಈ ಬಗೆಯ ಸಂವೇದನೆಗಳು. ಸಣ್ಣವರಾಗುವುದೆಂದರೆ, ಆ ಹಡಗು, ಆ ಅಲೆಗಳು, ಒಂದೇ ಅಥವಾ? ಒಂದು ಬೆಕ್ಕು, ಬುದ್ಧನಾಗಬೇಕಂತೆ ನಾ, ಎರಡು ಭಾವಗಳು, ಇನ್ನು ಕೆಲವು ಕವನಗಳು ಈ ಸಂಕಲನದ ಮೌಲ್ಯವನ್ನು ಹೆಚ್ಚಿಸಿವೆ. ಇಲ್ಲೆಲ್ಲ ಕವಿಯ ಭಾವದ ಸ್ಪುಟತ್ವ ಮತ್ತು ಅಭಿವ್ಯಕ್ತಿಯ ನೇರ ಮಾತುಗಾರಿಕೆ ಸಹಜವಾಗೇ ಮೂಡಿದೆ. ಕವಿತಾ ಹೆಗಡೆ ಅವರ ಕವನಗಳ ಅಂತಃಶಕ್ತಿಯೇ ಇದು. ಯಾವುದನ್ನೂ ಕೂಡಾ ಸಂಕೀರ್ಣಗೊಳಿಸದೆ ಅದು ಅನುಭವ ಮತ್ತು ನಂಬಿಕೆಗಳನ್ನು ದಾಟಿಸಬಲ್ಲರು. ‘ಐದು ವರ್ಷದ ಹಿಂದೆ ಬಂದವ’ ಎಂಬ ಕವಿತೆ ಅದು ಕುಟಿಲತೆ ಮತ್ತು ಲಾಭಕೋರತನದ ರೂಪಕವಾಗಿ ಬಂದರೂ ಕೂಡಾ ಅದರಾಚೆ ಇನ್ನೂ ಅನೇಕ ಅರ್ಥಗಳನ್ನು ಮೂಡಿಸಬಲ್ಲದು. ಸರಳವಾಗಿ ಹೇಳುತ್ತಲೂ ಅರ್ಥದ ಸಾಧ್ಯತೆಗಳನ್ನು ವಿಸ್ತರಿಸುವ ಈ ಗುಣವೇ ಸಂಕಲನವನ್ನು ಓದಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

“ಸಣ್ಣವರಾಗುವುದು ಎಂದರೆ
ಸುಲಭವಲ್ಲ
ಬೇಕು ಅಸಾಮಾನ್ಯ ಭಂಡತನ
ಕುಳಿತಲ್ಲಿಂದ ಕೆಳಗಿಳಿಯಲು
ಎಲ್ಲ ಪೂರ್ವ ಸಿದ್ದತೆ”
ಇಂತಹ ಸಾಲುಗಳು ಏಳಿಸಬಲ್ಲ ಆಲೋಚನಾ ತರಂಗಗಳ ಮಾತೇ ಭಿನ್ನ. ನನ್ನ ದೃಷ್ಟಿಯಲಿ ಕವಿತೆ ಎಂದರೆ ಕಾಡುವ ಅರ್ಥಪೂರ್ಣ ಕ್ರಿಯೆ.

‘ಬಲು ಮೆಲ್ಲಗೆ ಅದೇ ಬರುವಿಕೆ
ಅದೇ ಸ್ಪರ್ಷ, ಅದೇ ನಾದ
ಅದೇ ತೆರಳುವಿಕೆ
ಅದೇ ಅದೇ ಅದೇ ಲಯ’ ( ಅಲೆಗಳು)
ಎಂಬಿತ್ಯಾದಿ ಸಾಲುಗಳು ಮಾಡುವ ಸಂಚಲನ ಇದೇನೆ. ಜೋಕಾಲಿ ನಿಲ್ಲುವುದೆಲ್ಲಿ? ಸೆಳೆತ ಯಾವುದಕೆ? ಬೇಕಿತ್ತೆ ಈ ಪ್ರಯತ್ನ? ಒಂದೇ ಅಥವಾ? ಇಂತಹ ಪ್ರಶ್ನಾರ್ಥಕ ಶೀರ್ಷಿಕೆಗಳ ಮೂಲಕವೇ ಮೂಡಿದ ಕವಿತೆಗಳಲ್ಲಿ ಅನೇಕ ಉತ್ತರದ ಶೋಧವಿದೆ. ಪ್ರಶ್ನೆಗಳ ಮೂಲಕ ಹುಟ್ಟುವ ಕವಿತೆ ಯಾವತ್ತೂ ವಿರಮಿಸದು, ಅದ್ದರಿಂದಲೇ ಕವಿತಾ ಹೆಗಡೆ ಅವರ ಪದ್ಯಗಳ ಓಘ ನಿಲ್ಲದು. ಪದ್ಯಗಳ ಚಾಚುವಿಕೆ ಇದು ಇದೆಲ್ಲದರ ಆಚೆಗಿನ ಬಾಳು ಯಾವತ್ತೂ ಒಗಟೇ. ಅಂತಹ ಒಗಟನ್ನು ಬಗೆಯಲಿಕ್ಕೆ ಕವಿತೆಗಳನ್ನು ಹಾಸುವುದು ಸೃಜನಶೀಲತೆಯ ಮೂಲಗುಣವೇ. ಅಂತಹ ದಟ್ಟವಾದ ಅನುಭವ ವಿಸ್ತಾರಕ್ಕೆ ಕವಿತಾ ಹೆಗಡೆ ಅವರು ಕವಿತೆಗಳನ್ನು ನೆಚ್ಚಿಕೊಂಡಿದ್ದಾರೆ. ಇಂತಹ ಪ್ರಾಮಾಣಿಕ ಪ್ರಯತ್ನ ಮತ್ತು ಪ್ರಯೋಗಗಳೂ ಈ ಸಂಕಲದಲ್ಲಿ ಕಾಣಿಸುತ್ತವೆ. ರೂಪಕಗಳ ಮೂಲಕ ಮಾತನಾಡುವ ಹಂಬಲ ಮತ್ತು ಹೊಸಪರಿಭಾಷೆಯ ಮೂಲಕ ಅನುಭವವನ್ನೂ ಕೂಡಾ ಹೊಸದಾಗಿ ಕಂಡರಿಸುವ ವಾಂಛೆ ಉದ್ದಕೂ ಕಾಣಿಸುತ್ತದೆ. ಇದು ನಿರಂತರವಾಗಿ ಇರಬೇಕು, ಉಳಿಸಿಕೊಳ್ಳಬೇಕಷ್ಟೆ.

(ವಾಸುದೇವ ನಾಡಿಗ್‌)

ಕವಿತಾ ಹೆಗಡೆ ಅವರು ಮೂಲತಃ ಇಂಗ್ಲೀಷ್ ಅಧ್ಯಾಪಕಿ, ಆದ್ದರಿಂದ ಅವರ ಕಾವ್ಯದ ವಿಸ್ತಾರಕ್ಕೆ ಆ ಭಾಷೆಯ ಅಪರೂಪದ ರೂಪಕ ನುಡಿಚಿತ್ರಗಳು ಇಂಬು ಕೊಡಬಲ್ಲವು. ಇದು ಅವರ ಪೊಯಟಿಕ್ ಜರ್ನಿಯ ಪ್ಲಸ್ ಪಾಯಿಂಟ್ ಕೂಡಾ ಆಗಬಲ್ಲದು. ಬಿ ಎಂ ಶ್ರೀ ಅವರು ಹಾಡಿದಂತೆ ನೋಡಿದಂತೆ ಅವಳ ಉಡುಗೆ ಇವಳಿಗಿಟ್ಟು, ಇವಳ ತೊಡುಗೆ ಅವಳಿಗಿಟ್ಟು ಕಾಣುವ ಅವಕಾಶಗಳು ಅವರಿಗೆ ವಿಪುಲ. ಅದನ್ನು ಇನ್ನಷ್ಟೂ ಸಾಧ್ಯವಾಗಿಸಿದಾಗ ಕನ್ನಡದ ಕಾವ್ಯ ಲೋಕಕ್ಕೆ ಹೊಸ ಮಿಂಚನ್ನು ಅಂಟಿಸಬಹುದು. ಅವರ ಆ ನಿಟ್ಟಿನ ಓದು ಮತ್ತು ಪಕ್ವವಾದ ಅನುಭವ ದಟ್ಟವಾದ ರೂಪಕಗಳಲ್ಲಿ ಮಾತಾಡುವಂತೆ ಮಾಡಬಲ್ಲದು. ಈ ಹೊತ್ತಿನ ಬಹುಶ್ರುತತ್ವದ ಕಾಲಮಾನದಲ್ಲಿ ಕವಿತೆ ತನ್ನ ಸಾಂಪ್ರದಾಯಿಕ ಜಡತ್ವವನ್ನು ಜಾಡಿಸಿಕೊಂಡು ಎದ್ದು ಕಂಗೊಳಿಸಿ, ಮುಂದಿನ ಹೊಸ ತಲೆಮಾರಿನವರಿಗೆ ಓದಲು ಹಚ್ಚಬೇಕು.

ಇನ್ನು, ದ್ವಿತೀಯ ಪಿ ಯು ಸಿ ಓದುತ್ತಿರುವ ಕವಿತಾ ಹೆಗಡೆ ಅವರ ಮಗಳು ಸಾನಿಕಾ ಹೆಗಡೆಯ ಮಾತೇ ಭಿನ್ನ. Abandoned Friend ಎಂಬ ಅಚ್ಚರಿ ಹುಟ್ಟಿಸುವ ಇಂಗ್ಲೀಷ್ ಕವನ ಸಂಕಲನ ಪ್ರಕಟಿಸಿದ ಪ್ರತಿಭಾನ್ವಿತೆ. ಇಂತಹ ಅಚ್ಚರಿಯೊಂದರ ತಾಯಿ ಕವಿತಾ ಹೆಗಡೆ ತಮ್ಮ ಮುಂದಿನ ಬರಹಗಳ ಮೂಲಕ ಅಚ್ಚರಿಗಳ ತೊರೆಗಳನ್ನೇ ಹರಿಸಲಿ ಎಂಬ ಆಶಯದಿಂದ, ಅವರವರ ಕವಿತೆ ಎಂಬ ಶರನ್ನೌಕೆ ಎಲ್ಲರನ್ನೂ ಒಳಗೊಳ್ಳಲಿ.

“ನೀಲಾಕಾಶದಲಿ ಮಿನುಗುವ ತಾರೆ ನಾನು
ನೋಡುವ ದೃಷ್ಟಿ ನಿನಗಿಲ್ಲದಿರೆ ನನ್ನ ತಪ್ಪೇನು”

ಅಂತಹ ನೋಟದ ಒಂದು ಸ್ಪಂದನ ಈ ಮಾತುಗಳು.